ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಮಾರ್ಚ್ 30, 2012

ಅನುಪಮ ಕರ್ಮಯೋಗಿ, ಪ್ರಖರ ಸತ್ಯವಾದಿ ಪಂ. ಸುಧಾಕರ ಚತುರ್ವೇದಿಯವರಿಗೆ 116ನೆಯ ವರ್ಷದ ಜನ್ಮದಿನದ ಶುಭಾಶಯಗಳು


      ಶ್ರೀರಾಮನವಮಿಯ ದಿನವಾದ ೦೧-೦೪-೨೦೧೨ರಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ೧೧೫ ವಸಂತಗಳನ್ನು ಕಂಡು ೧೧೬ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಇವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ನರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ ೧೮೯೭ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು.     ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನ, ವೇದಾಭ್ಯಾಸ ಅಧ್ಯಯನ ಮಾಡಿದವರು. ಅವರು ಮಹರ್ಷಿ ದಯಾನಂದ ಸರಸ್ವತಿಯವರಿಂದ ಪ್ರಭಾವಿತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ’ಚತುರ್ವೇದಿ’ಯಾಗಿ, ಚತುರ್ವೇದಿ ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ಸಾವಿರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ೧೩ ವರ್ಷಗಳ ಕಾಲ ಸೆರೆವಾಸ ಕಂಡವರು. ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಜೀವಂತ ಇತಿಹಾಸದ ನೈಜ ಪ್ರತಿನಿಧಿ.
     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. ವೇದೋಕ್ತ ಜೀವನ ಪಥವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿ ಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. ನೀವೂ ಈ ಅಪರೂಪದ ಸಾಧಕರನ್ನು ಒಮ್ಮೆಯಾದರೂ ಭೇಟಿ ಮಾಡಬೇಕು ಮತ್ತು ಅವರ ಮಾತುಗಳನ್ನು ಆಲಿಸಬೇಕು ಎಂಬುದು ನನ್ನ ಆಶಯ. ಈ ಕರ್ಮಯೋಗಿ ಸಾಧಕರಿಗೆ ಮತ್ತೊಮ್ಮೆ ನನ್ನ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.
***************************
ಪಂ. ಸುಧಾಕರ ಚತುರ್ವೇದಿಯವರ ವಿಚಾರದ ತುಣುಕುಗಳಿಗಾಗಿ ಇಲ್ಲಿ ನೋಡಿ:
1. ವಿಚಾರ ಮಾಡೋಣ: http://vedajeevana.blogspot.in/2011/03/blog-post.html
2. ಕೆಲವು ಮಾಹಿತಿಗಳು: http://vedajeevana.blogspot.in/2011/04/blog-post.html
3. ಬಾಳಿಗೆ ಬೆಳಕು: http://vedajeevana.blogspot.in/2011/06/blog-post_22.html
4. ವಿಚಾರ ಲಹರಿ - 1 http://vedajeevana.blogspot.in/2011/09/blog-post_14.html
5. ವಿಚಾರ ಲಹರಿ - 2 http://vedajeevana.blogspot.in/2011/09/2.html
6. ಸಂದರ್ಶನ - http://vedajeevana.blogspot.in/2011/09/blog-post_30.html
7. ಮರ್ಯಾದಾ ಪುರುಷೋತ್ತಮ ಶ್ರೀರಾಮನ ನೆನೆಯೋಣ: 
           http://vedajeevana.blogspot.in/2012/03/blog-post_23.html   
8. ವೇದೋಕ್ತ ಜೀವನ ಪಥ -ಮಾಲಿಕೆ:     
http://vedajeevana.blogspot.in/search/label/%E0%B2%B5%E0%B3%87%E0%B2%A6%E0%B3%8B%E0%B2%95%E0%B3%8D%E0%B2%A4%20%E0%B2%9C%E0%B3%80%E0%B2%B5%E0%B2%A8%20%E0%B2%AA%E0%B2%A5         

ಗುರುವಾರ, ಮಾರ್ಚ್ 29, 2012

ಭೂತ, ಪ್ರೇತ, ಪಿಶಾಚಿಗಳು ಕಾಡುವುದೇಕೆ?

     ಭೂತ, ಪ್ರೇತ, ಪಿಶಾಚಿಗಳು ಕಾಡುವುದೇಕೆ? ಈ ಪದಗಳ ನಿಜವಾದ ಅರ್ಥವೇನು? ಕೇಳೋಣ ಬನ್ನಿ, ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ದ್ವನಿಯಲ್ಲಿ:

-.ಕ.ವೆಂ.ನಾಗರಾಜ್.

ಸೋಮವಾರ, ಮಾರ್ಚ್ 26, 2012

ರಾಗ-ದ್ವೇಷಗಳು ಇರಬೇಕು!!


     ರಾಗ-ದ್ವೇಷಗಳು ಇರಬೇಕು! ಹೌದು ಇರಬೇಕು! ಆಶ್ಚರ್ಯವೆನಿಸಿತೇ? ಸತ್ಕಾರ್ಯದಲ್ಲಿ ರಾಗ, ದುಷ್ಕಾರ್ಯದಲ್ಲಿ ದ್ವೇಷ ಇರಬೇಕು ಎನ್ನುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ವಿಚಾರ ಕೇಳಿ:
-ಕ.ವೆಂ.ನಾಗರಾಜ್.



ಶುಕ್ರವಾರ, ಮಾರ್ಚ್ 23, 2012

ಮರ್ಯಾದಾ ಪುರುಷೋತ್ತಮ ಶ್ರೀರಾಮನ ನೆನೆಯೋಣ


     ನೂತನ ನಂದನ ಸಂವತ್ಸರ ಕಾಲಿರಿಸಿದೆ. ಎಲ್ಲಾ ಓದುಗರಿಗೂ ನೂತನ ವರ್ಷ ಮಂಗಳಕರವಾಗಿರಲಿ ಎಂದು ಹಾರೈಸುತ್ತಾ, ಯುಗಾದಿಯ ಹಾಗೂ ಬರಲಿರುವ ಶ್ರೀರಾಮನವಮಿಯ ಶುಭಾಶಯಗಳನ್ನು ಕೋರುತ್ತೇನೆ. 
     ಇತ್ತೀಚೆಗೆ  ವೇದಸುಧೆ ಅಂತರ್ಜಾಲ ತಾಣದಲ್ಲಿ ಮತ್ತು ಫೇಸ್ ಬುಕ್ಕಿನ ಸುಮನಸ ಗುಂಪಿನಲ್ಲಿ 'ಯಜ್ಞದಲ್ಲಿ ಪ್ರಾಣಿಬಲಿ' ಎಂಬ ವಿಷಯ ಕುರಿತು ವ್ಯಾಪಕವಾದ ಚರ್ಚೆಯಾಯಿತು. ಚರ್ಚೆಯ ಫಲಾಫಲಗಳು ಏನೇ ಇರಲಿ, ಭಾಗವಹಿಸಿದವರು ಮನಃಪೂರ್ವಕವಾಗಿ ಚರ್ಚೆಯಲ್ಲಿ ತೊಡಗಿಸಿಕೊಂಡದ್ದು ವಿಶೇಷ. ಚರ್ಚೆಯಲ್ಲಿ ಇನ್ನಿತರ ತಜ್ಞರೂ, ವಿದ್ವಾಂಸರೂ, ವೇದಗಳನ್ನು ಅರಿತವರೂ ಭಾಗವಹಿಸಿದ್ದರೆ ಚೆನ್ನಾಗಿರುತ್ತಿತ್ತು. ಚರ್ಚೆಯಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲೂ ಪ್ರಾಣಿಬಲಿ ನೀಡಿರುವುದಕ್ಕೆ ಸಮರ್ಥನೆಯಿದೆ ಎಂಬ ಅಂಶವೂ ಪ್ರಸ್ತಾಪವಾಗಿತ್ತು. ಇದನ್ನು ಅಲ್ಲಗಳೆಯಲು ನನ್ನಂತಹ ಅಲ್ಪಮತಿಗಳಿಗೆ ಕಷ್ಟವಾಗಿತ್ತು. ಏಕೆಂದರೆ ಸಂಸ್ಕೃತದ ಆ ರಾಮಾಯಣವನ್ನು ಪೂರ್ಣವಾಗಿ ಓದಿರುವವರ ಸಂಖ್ಯೆ ಕಡಿಮೆಯೆಂದರೆ ತಪ್ಪಲ್ಲ. ನಾನೂ ಅವರಲ್ಲಿ ಒಬ್ಬನಾಗಿದ್ದೇನೆ. ಆದರೆ ರಾಮೋತ್ಸವದ ಸಂದರ್ಭದಲ್ಲಿ ರಾಮಾಯಣ ಕುರಿತು ಪ್ರವಚನಗಳು, ಹರಿಕಥೆಗಳನ್ನು ಚಿಕ್ಕಂದಿನಿಂದಲೂ ಕೇಳುತ್ತಾ ಬಂದು ಶ್ರೀರಾಮನ ಗುಣಗಳಿಂದ ಪ್ರಭಾವಿತನಾಗಿರುವುದು ಮಾತ್ರ ಸತ್ಯ. ರಾಮಾಯಣದಲ್ಲಿ ಪ್ರಾಣಿಬಲಿಗೆ ಸಮರ್ಥನೆಯಿದೆಯಂಬುದನ್ನು ಕೇಳಿ ಮನಸ್ಸಿಗೆ ಕಸಿವಿಸಿಯಾಗಿದ್ದ ಸಂದರ್ಭದಲ್ಲಿ ಪಂ. ಸುಧಾಕರ ಚತುರ್ವೇದಿಯವರು ರಚಿಸಿದ ಒಂದು ಪುಸ್ತಕ 'ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮಚಂದ್ರ' ನನ್ನ ಕೈಗೆ ಸಿಕ್ಕಿತು. ಅದನ್ನು ಓದಿದಾಗ ಹಿತವೆನಿಸಿತು. ೧೯೬೪ರಲ್ಲಿ 'ವಾಲ್ಮೀಕಿ ಕಂಡ ಶ್ರೀರಾಮ' ಎಂಬ ಹೆಸರಿನಲ್ಲಿ ಪ್ರಥಮವಾಗಿ ಮುದ್ರಿತವಾದ ಈ ಪುಸ್ತಕ ಈಗಾಗಲೇ ಐದು ಮುದ್ರಣಗಳನ್ನು ಕಂಡಿದೆ. ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿ ಆಗಿರುವ ಅನೇಕ ಪ್ರಕ್ಷೇಪಣೆಗಳ ಕುರಿತು ಲೇಖಕರು ಈ ಪುಸ್ತಕದಲ್ಲಿ ಸೋದಾಹರಣವಾಗಿ ಪ್ರಸ್ತಾಪಿಸಿದ್ದಾರೆ. ೧೧೬ ವರ್ಷಗಳ ಪಂ. ಸುಧಾಕರ ಚತುರ್ವೇದಿಯವರು ನಾಲ್ಕು ವೇದಗಳನ್ನು ಅಧ್ಯಯನ ಮಾಡಿದವರಾಗಿದ್ದು, ಈ ಕಾರಣದಿಂದಲೇ ಅವರಿಗೆ ಚತುರ್ವೇದಿ ಎಂಬ ಹೆಸರು ಬಂದಿದ್ದಾಗಿದೆ. ಇಂದಿಗೂ ಅವರು ವೇದಮಂತ್ರಗಳ ಅರ್ಥ, ವಿಮರ್ಶೆಗಳನ್ನು ಆಸಕ್ತರಿಗೆ ಮಾಡಿಕೊಡುತ್ತಿದ್ದಾರೆ. ಪ್ರತಿ ಶನಿವಾರ ಬೆಂಗಳೂರಿನ ಅವರ ನಿವಾಸದಲ್ಲಿ ನಡೆಯುವ ಸತ್ಸಂಗದಲ್ಲಿ ಅವರ ಪ್ರಖರ ವಿಚಾರಧಾರೆ ಸವಿಯಬಹುದಾಗಿದೆ. ಇಂತಹ ವಯೋವೃದ್ಧ, ಜ್ಞಾನವೃದ್ಧ, ಸತ್ಯನಿಷ್ಠ ಲೇಖಕರ ಈ ಪುಸ್ತಕವನ್ನು ಜಿಜ್ಞಾಸುಗಳು ಓದಲೇಬೇಕು. ಈ ಪುಸ್ತಕದ ಮುನ್ನುಡಿಯನ್ನು ಮಾತ್ರ ಯಥಾವತ್ತಾಗಿ ಇಲ್ಲಿ ಓದುಗರ ಗಮನಕ್ಕಾಗಿ ಕೊಟ್ಟಿರುವೆ. ಇದನ್ನು ಪಂಡಿತರು ೧೯೬೪ರಲ್ಲಿ ಬರೆದದ್ದಾದರೂ ಇಂದಿಗೂ ಪ್ರಸ್ತುತವಿದೆ, ಅರ್ಥವಿದೆ. [ಪುಸ್ತಕ ದೊರೆಯುವ ಸ್ಥಳ: ಆರ್ಯಸಮಾಜ,  ಶ್ರದ್ಧಾನಂದ ಭವನ, ವಿಶ್ವೇಶ್ವಪುರಂ, ಬೆಂಗಳೂರು.] ಮುನ್ನುಡಿಯಲ್ಲೇ ವ್ಯಾಪಕ ವಿಷಯಗಳಿದ್ದು, ಪುಸ್ತಕದಲ್ಲಿ ಮತ್ತೂ ಹೆಚ್ಚಿನ ಮನನೀಯ ವಿಚಾರಗಳಿವೆ. ಚರ್ಚೆಯನ್ನು ಪುನಃ ಪ್ರಾರಂಭಿಸುವ ಪ್ರಯತ್ನ ಇದಲ್ಲವೆಂಬುದನ್ನು ನಮ್ರಪೂರ್ವಕ ತಿಳಿಸಬಯಸುತ್ತೇನೆ. ಈಗ ಚಂದನ ದೂರದರ್ಶನದಲ್ಲಿ ಹೊಸಬೆಳಕು ಶೀರ್ಷಿಕೆಯಲ್ಲಿ ವೇದಗಳ ಕುರಿತು ಚಿಂತನಾ ಕಾರ್ಯಕ್ರಮ ನಡೆಸಿಕೊಡುತ್ತಿರುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು ಪಂ. ಸುಧಾಕರ ಚತುರ್ವೇದಿಯವರ ಶಿಷ್ಯರಾಗಿದ್ದಾರೆ. ನನಗೆ ತಿಳಿದ ಸಂಗತಿಯನ್ನು ತಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನ ಮಾತ್ರವಿದು.  ವಾಚಕರೂ ಸಹ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಾಗೂ ಹೊಸ ವಿಷಯಗಳಿದ್ದಲ್ಲಿ ತಿಳಿಸಬಹುದಾಗಿದೆ. ಪ್ರಾಸಂಗಿಕವಾಗಿ ಒಂದು ಉವಾಚ:
ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
-ಕ.ವೆಂ.ನಾಗರಾಜ್.
*************************************
                                      ಪಂ. ಸುಧಾಕರ ಚತುರ್ವೇದಿಗಳೊಂದಿಗೆ
**********
ಪಂಡಿತ ಸುಧಾಕರ ಚತುರ್ವೇದಿಯವರ . . . .  
. . . . ಕಾಮನೆ
     ಜಗದೀಶ್ವರ ಜೀವಮಾತ್ರರಿಗೆ ಅಸಂಖ್ಯ ವರದಾನ ಮಾಡಿದ್ದಾನೆ. ಮಾನವನಿಗೆ ಆ ದಯಾಮಯನಿಂದ ಬೇರಾವ ಜೀವರಿಗೂ ಸಿಕ್ಕದಿರುವ ಒಂದು ಅನುಪಮ ಹಾಗೂ ಅದ್ಭುತ ವರ ಸಿಕ್ಕಿದೆ. ಸತ್ಯವನ್ನು ಅಸತ್ಯದಿಂದ ಬೇರೆ ಮಾಡಬಲ್ಲ ವಿವೇಕಯುಕ್ತವಾದ ಮಸ್ತಿಷ್ಕವೇ ಆ ಅನುಪಮವಾದ, ಅದ್ಭುತವಾದ ಭಗವದ್ದತ್ತ ವರ. ಈ ಅಸದೃಶ ವರವನ್ನು ಪಡೆದೂ ಸಹ, 'ಶಾಸ್ತ್ರಾದ್ರೂಢಿರ್ಬಲೀಯಸೀ' - ಎಂಬ ಸಂಪ್ರದಾಯ ಶರಣರ ಮನೋಭಾವಕ್ಕೆ ಬಲಿಬಿದ್ದು, ಸತ್ಯಾಸತ್ಯವಿವೇಚನೆ ಮಾಡದೆ, ಈ ಅಮೂಲ್ಯವಾದ ನರಜನ್ಮವನ್ನು ವ್ಯರ್ಥಪಡಿಸಿಕೊಳ್ಳುವುದು ಮಹಾಪಾತಕವೇ ಎಂದೆನ್ನಬಹುದು. ಏಕೆಂದರೆ, ಸತ್ಯಾಸತ್ಯವಿವೇಚನೆ ಮಾಡದೆ, ಸತ್ಯದರ್ಶನವಾಗದು; ಸತ್ಯದರ್ಶನವಾಗದೆ, ಸತ್ಯಸ್ವರೂಪನಾದ ಭಗವಂತನ ಸಾಕ್ಷಾತ್ಕಾರವೂ ಆಗದು. ಭಗವತ್ಸಾಕ್ಷಾತ್ಕಾರಕ್ಕೊದಗದ ಜನ್ಮ, ಮಾನವಜನ್ಮವಾದರೇನು? ದಾನವಜನ್ಮವಾದರೇನು?
     ಅನೇಕ ದಶಕಗಳಿಂದ ಶ್ರೀಮದ್ವಾಲ್ಮೀಕಿ ರಾಮಾಯಣವನ್ನು ವಿವೇಚನಾತ್ಮಕ ದೃಷ್ಟಿಯಿಂದ ಅದೆಷ್ಟೋ ಸಾರಿ ಓದುತ್ತಾ ಬಂದಿದ್ದೇನೆ. ಮೊದಮೊದಲು ಪರಂಪರಾಗತ ನಂಬಿಕೆಯಂತೆ ಶ್ರೀರಾಮನು ದೇವರು ಎಂದರಿತೇ ಓದಿದೆ. ಆ ನಂಬಿಕೆಯಿದ್ದಾಗಲೂ ಒಂದಾದಮೇಲೊಂದರಂತೆ ನಾನಾ ಸಂದೇಹಗಳು ಏಳುತ್ತಲೇ ಇದ್ದವು. ನಾನು ಇಪ್ಪತ್ತು ವರ್ಷದವನಾದಾಗ ಗುರುಮುಖವಾಗಿ ವೇದಾಂತದರ್ಶನ ಓದಿದೆ. ಆನಂದಮಯೋsಭ್ಯಾಸಾತ್ - ಪರಬ್ರಹ್ಮ, ಶಾಸ್ತ್ರಗಳಲ್ಲಿ ಬಾರಿ ಬಾರಿ ಆನಂದಮಯವೆಂದು ಹೇಳಲ್ಪಟ್ಟಿದೆ - ಎಂಬ ಸೂತ್ರದೊಂದಿಗೆ, ಸೀತಾಪಹರಣವಾದಾಗ ರಾಮನಿಗುಂಟಾದ ಶೋಚನೀಯಾವಸ್ಥೆಯನ್ನು ಮೇಳವಿಸಿ ನೋಡಿದೆ. ರಾಮ ಆನಂದಮಯನಾದ ಭಗವಂತನಂತೂ ಆಗಿರಲಾರ ಎನಿಸಿತು. ಶ್ರೀರಾಮ ಲೀಲಾಮಾನುಷ ವಿಗ್ರಹ; ಮಾನವರಂತೆಯೇ ಎಲ್ಲ ನಾಟಕಗಳನ್ನೂ ಆಡಿದ್ದಾನೆ -  ಸ್ವತಃ ಭಗವಂತನಾಗಿದ್ದರೂ - ಎಂಬ ಸಮಾಧಾನವಾಕ್ಯ ನನ್ನ ಅಂತಃಕರಣಕ್ಕೆ ಶಾಂತಿ ಕೊಡಲಿಲ್ಲ. ಭಗವಂತ ನಾಟಕೀಯ ಪುರುಷ ಎಂದು ನನ್ನ ಹೃದಯ ಒಪ್ಪಿಕೊಳ್ಳಲಿಲ್ಲ. ೨೦ನೆಯ ವರ್ಷದಿಂದಲೇ ಆರಂಭಿಸಿ ನಿರಂತರವಾಗಿ ವೇದಗಳನ್ನೂ, ಪ್ರಾಮಾಣಿಕ ಉಪನಿಷತ್ತುಗಳನ್ನೂ, ಷಡ್ದರ್ಶನಗಳನ್ನೂ ಮಹಾವಿದ್ವಾಂಸರಾದ ಗುರುಜನರ ಚರಣಾರವಿಂದಗಳಲ್ಲಿ ಕುಳಿತು ಅಧ್ಯಯನ ಮಾಡಿದ ಮೇಲೆ, ಭಗವದವತಾರವಾದ ಕೇವಲ ಟೊಳ್ಳು ಕಲ್ಪನೆ; ಶ್ರೀರಾಮ, ಶ್ರೀಕೃಷ್ಣ ಮೊದಲಾದವರೆಲ್ಲಾ ಮಹಾಮಾನವರೇ ಹೊರತು ದೇವರ ಅವತಾರಗಳಲ್ಲ -  ಎಂಬಂಶ ನನ್ನ ಹೃದಯವನ್ನು ಸ್ಪರ್ಷಿಸಿತು. 
     ವಿವೇವನಾತ್ಮಕ ದೃಷ್ಟಿಯಿಂದ ಶ್ರೀಮದ್ವಾಲ್ಮೀಕಿರಾಮಾಯಣವನ್ನು ಅವಲೋಕಿಸಿದಲ್ಲಿ, ಈ ತಥ್ಯ ಯಾರಿಗಾದರೂ ಅತಿ ಸ್ಪಷ್ಟವಾಗಿಯೇ ಗೊತ್ತಾಗುವುದು. ಈ ಪುಸ್ತಕದಲ್ಲಿ ಶ್ರೀರಾಮನೊಬ್ಬ ಮರ್ಯಾದಾ ಪುರುಷೋತ್ತಮ; ಮಹಾಮಾನವ ಎಂಬುದನ್ನು ಸಪ್ರಮಾಣವಾಗಿ ಪ್ರತಿಪಾದಿಸಲು ಯತ್ನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ, ಇಂದು ಸಂಸ್ಕೃತದಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣವೆಂದು ಪ್ರಸಿದ್ಧವಾಗಿರುವ ಗ್ರಂಥವೂ ಕೂಡ ಶ್ರೀಮದ್ವಾಲ್ಮೀಕಿಗಳು ಎಷ್ಟು ರಚಿಸಿದ್ದರೋ, ಅಷ್ಟೇ ಇಲ್ಲ; ಹೇಗೆ ರಚಿಸಿದ್ದರೋ ಹಾಗೆಯೇ ಇಲ್ಲ. ಅದರಲ್ಲಿ ಕಾಲಕಾಲಕ್ಕೆ ಅದೆಷ್ಟೋ ಪ್ರಕ್ಷೇಪಗಳಾಗುತ್ತಾ ಬಂದಿದೆ - ಎಂಬಂಶವನ್ನು ಪಾಠಕರ ಗಮನಕ್ಕೆ ತರುವುದು ಅವಶ್ಯಕವೆಂದು ತೋರುತ್ತದೆ. ಬೌದ್ಧಯುಗದಲ್ಲಿಯಂತೂ ಮೂಲ ರಾಮಾಯಣದ ಕಾಯಕಲ್ಪವೇ ಆಗಿಹೋದಂತೆ ಕಾಣುತ್ತದೆ. ರಾಮಾಯಣದಲ್ಲಿನ - ಯಥಾ ಹಿ ಚೋರಃ ಸ ತಥಾ ಹಿ ಬುದ್ಧಸ್ತಥಾಗತಂ ನಾಸ್ತಕಮತ್ರ ವಿದ್ಧಿ| ತಸ್ಮಾದ್ಧಿ ಯಃ ಶಂಕೃತಮಃ ಪ್ರಜಾನಾಂ ನ ನಾಸ್ತಿಕೇನಾಭಿಮುಖೋ ಬುಧಃ ಸ್ಯಾತ್|| (ಅಯೋಧ್ಯಾ.೧೦೯.೩೪.) ಚೋರನು ಹೇಗೋ ಹಾಗೆಯೇ ತಥಾಗತನನ್ನು ಈ ಲೋಕದಲ್ಲಿ ನಾಸ್ತಿಕನೆಂದೇ ತಿಳಿ. ಜನರಿಗೆ ಅತ್ಯಂತ ಸಂದೇಹಾಸ್ಪದನು ನಾಸ್ತಿಕ. ಎಂದಿಗೂ ವಿದ್ವಾಂಸನು ನಾಸ್ತಿಕನಿಗೆ ಎದುರಾಗಬಾರದು - ಎಂಬ ಶ್ಲೋಕವನ್ನೋದಿದ ಮೇಲೆ, ಬೌದ್ಧಮತದ ಆಕ್ರಮಣದಿಂದ ವೈದಿಕರನ್ನು ರಕ್ಷಿಸುವ ಸಲುವಾಗಿ, ರಾಮಾಯಣದಲ್ಲಿ ಬೌದ್ಧಮತಖಂಡನದ ಶ್ಲೋಕಗಳು ಸೇರಿಸಲ್ಪಟ್ಟಿದೆಯೆಂಬುದರಲ್ಲಿ ಯಾರಿಗೂ ಸಂದೇಹ ಉಳಿಯಲಾರದು. ಅನ್ಯಥಾ, ರಾಮನ ಯುಗವಾವುದು?! ವಾಲ್ಮೀಕಿಗಳ ಕಾಲವಾವುದು?! ಬುದ್ಧನ ಕಾಲವಾವುದು?!
     ವಸ್ತುತಃ ಸುಪ್ರಸಿದ್ಧ ಸುಧಾರಕನಾದ ಗೌತಮಬುದ್ಧನು ಸ್ವತಃ ದೇವರಾಗಿ ಕುಳಿತು, ಬೌದ್ಧ ದೇಗುಲಗಳಲ್ಲಿ ಷೋಡಶೋಪಚಾರಸಹಿತ ವಿಜೃಂಭಣೆಯ ಪೂಜೆ ಪಡೆಯಲಾರಂಭಿಸಿ ಜನಸಾಧಾರಣರನ್ನು ತನ್ನ ಕಡೆ ಆಕರ್ಷಿಸಹತ್ತಿದಾಗ, ಶ್ರೀರಾಮ, ಶ್ರೀಕೃಷ್ಣಾದಿಗಳನ್ನೂ ದೇವರ ಮಟ್ಟಕ್ಕೋ, ಪಟ್ಟಕ್ಕೋ ಏರಿಸಿ ದೇವಾಲಯಗಳನ್ನು ಸ್ಥಾಪಿಸಿ, ಅತ್ತ ಸರಿಯುವವರನ್ನು ಇತ್ತಲೇ ಒತ್ತಿ ಹಿಡಿಯುವ ಪ್ರಯತ್ನಗಳು ನಡೆದವು. ಶ್ರೀರಾಮ, ವಿಷ್ಣುವಿನ ಅರ್ಧಾಂಶಸಂಭೂತ, ದೇವದಾನವ ಗಂಧರ್ವಾದಿಗಳಿಂದ ಸಾಯದಿದ್ದ ರಾವಣನನ್ನು ಬಲಿಹಾಕಲು ವಿಷ್ಣುವೇ ಮಾನವರೂಪದಲ್ಲಿ ದರೆಗಿಳಿದು ಬಂದ ಎಂಬ ಕೇವಲ ಕಲ್ಪನೆಗಳಿಂದ ಕೂಡಿದ ಶ್ಲೋಕಗಳನ್ನು ಅಲ್ಲಲ್ಲಿ ತೂರಿಸಲಾಯಿತು. ಬೇರಾವುದೋ ಲೋಕದಲ್ಲಿ ಸೇರಿದ ದೇವತೆಗಳ ಸಭೆ, ನಾರಾಯಣನಿಗೆ ಶರಣಾಗತರಾಗುವುದು, ರಾವಣನಿಗೆ ಬ್ರಹ್ಮನಿಂದ ವರಪ್ರಾಪ್ತಿ -  ಇತ್ಯಾದಿ ಬುದ್ಧಿವಿರುದ್ದವಾದ, ವೇದವಿರುದ್ಧವಾದ ಅಪಸಿದ್ಧಾಂತಗಳನ್ನು ಗ್ರಂಥದಲ್ಲಿ ತುಂಬಲಾಯಿತು. ಬಾಲಕಾಂಡದ ಪ್ರಥಮಸರ್ಗದಲ್ಲಿನ ಕಥಾಸಂಕ್ಷೇಪವೇ ತೃತೀಯ ಅರ್ಗದಲ್ಲಿ ಬೇರೆ ಶಬ್ದಗಳಲ್ಲಿ ಪುನರುಕ್ತವಾಗಿರುವುದು, ಕಾವ್ಯದಲ್ಲಿ ಏನೇನೋ ಸೇರಿಕೆಗಳಾಗಿವೆ ಎಂಬುದನ್ನು ಸೂಚಿಸುತ್ತಲಿದೆ. ಬೌದ್ಧಮತದ ಅಹಿಂಸಾ ಪ್ರಚಾರದಿಂದ ಮಾಂಸಾಹಾರಿಗಳಾದ ಜನರಲ್ಲಿ ಒಂದು ರೀತಿಯ ಕಳವಳ ತೋರಿಬಂತು. ಮಾಂಸಾಹಾರದಲ್ಲಿ ಏನೇನೂ ದೋಷವಿಲ್ಲ, ಶ್ರೀರಾಮಾದಿಗಳೂ ಮಾಂಸಾಹಾರ ಮಾಡುತ್ತಿದ್ದರು -  ಎಂದು ಸಾಧಿಸಲನುಕೂಲಿಸುವಂತೆ:
ತೌ ತತ್ರ ಹತ್ವಾ ಚತುರೋ ಮಹಾಮೃಗಾನ್
ವರಾಹಮೃಶ್ಯಂ ಪ್ರಷತಂ ಮಹಾರುರುಮ್|
ಆದಾಯ ಮೇಧ್ಯಂ ತ್ವರಿತಂ ಬುಭುಕ್ಷಿತೌ
ವಾಸಾಯ ಕಾಲೇ ಯಯತುರ್ವನಸ್ಪತಿಮ್|| (ಅಯೋಧ್ಯಾ.೫೨.೧೦೨.)
     ಆ ಹಸಿದ ರಾಮಲಕ್ಷ್ಮಣರು ನಾಲ್ಕು ಮಹಾಮೃಗಗಳನ್ನಲ್ಲಿ ಕೊಂದು ತಿನ್ನಲರ್ಹವಾದ ಮಾಂಸವನ್ನುಂಡು, ವಾಸ ಮಾಡಲು ಮರದಡಿಗೆ ನಡೆದರು - ಈ ಬಗೆಯ ಶ್ಲೋಕಗಳನ್ನೂ ತೂರಿಸಿದರು. ಹಾಗೆಯೇ, ವೇದವಿರುದ್ಧವಾದರೂ ವೇದಗಳ ಹೆಸರಿನಲ್ಲಿಯೇ ಪ್ರಚಲಿತವಾಗಿದ್ದು, ಬೌದ್ಧ, ಜೈನಮತೀಯರಿಂದ ಖಂಡಿಸಲ್ಪಡುತ್ತಿದ್ದ ಪಶುಹಿಂಸಾಮಯವಾದ ಯಜ್ಞಗಳನ್ನೂ, ಧರ್ಮಾನುಕೂಲ ಎಂದು ಸಾಧಿಸಲು ದಶರಥನ ಅಶ್ವಮೇಧ ಯಾಗದಲ್ಲಿಯೂ ಕುದುರೆ ಕೊಲ್ಲಲ್ಪಟ್ಟಿತು - ಎಂಬರ್ಥ ಬರುವ ಶ್ಲೋಕಗಳನ್ನು ರಚಿಸಿ ಸೇರಿಸಿದರು. (ನೋಡಿರಿ. ಬಾಲಕಾಂಡ. ೧೪.೩೬.೩೮.)
ಪತತ್ರಿಣಸ್ತಸ್ಯ ವಪಾಮುದ್ಧೃತ್ಯ ನಿಯತೇಂದ್ರಿಯಃ|
ಋತ್ವಿಕ್ ಪರಮಸಂಪನ್ನಃ ಶ್ರಪಯಾಮಾಸ ಶಾಸ್ತ್ರತಃ ||೩೬||
ಹಯಸ್ಯ ಯಾನಿ ಚಾಂಗಾನಿ ತಾನಿ ಸರ್ವಾಣಿ ಭೂಸುರಾಃ||
ಅಗ್ನೌ ಪ್ರಾಸ್ಯಂತಿ ವಿಧಿವತ್ ಸಮಸ್ತಾಃ ಷೋಡಷರ್ತ್ವಿಜಃ ||೩೮||
     ಚಾರ್ವಾಕರೂ, ಬೌದ್ಧರೂ ಖಂಡಿಸುತ್ತಿದ್ದ ಮೃತಕಶ್ರಾದ್ಧ ಪದ್ಧತಿಯನ್ನು ಸರಿ ಎಂದು ಸಾಧಿಸಲು, ಶ್ರೀರಾಮನ ಬಾಯಿನಿಂದ ಜಾಬಾಲಿಯಾಡಿದ ನಾಸ್ತಿಕ್ಯ ಸೂಚಕ ವಾಕ್ಯಗಳನ್ನು ಖಂಡನೆ ಮಾಡಿಸಿದರು. (ನೋಡಿ, ಅಯೋಧ್ಯಾ.೧೦೮, ೧೦೯ನೆಯ ಸರ್ಗಗಳು). ಬೌದ್ಧರು ಜಾತಿ-ಕುಲ ನೋಡದೆ ಇಚ್ಛುಕರಾದವರಿಗೆಲ್ಲಾ ಭಿಕ್ಷುದೀಕ್ಷೆ ಕೊಡುತ್ತಿದ್ದರು. ಪರಿಣಾಮತಃ ವೈದಿಕರೆನಿಸಿಕೊಂಡವರಿಂದ ಅವಜ್ಞೆಗೆ ಗುರಿಯಾಗಿದ್ದ ಶೂದ್ರರನೇಕರು ಭಿಕ್ಷುಗಳಾಗಹತ್ತಿದರು. ಜನಸಾಧಾರಣರಲ್ಲಿ ಇಂತಹ ಶೂದ್ರಯತಿಗಳಿಗೆ ಗೌರವ ಸಿಕ್ಕದಿರಲಿ ಎಂಬ ಭಾವನೆಯನ್ನಿಟ್ಟುಕೊಂಡು, ಶಂಬೂಕನೆಂಬ ಶೂದ್ರ ತಪಸ್ಸು ಮಾಡುತ್ತಿದ್ದ, ಆ ತಪ್ಪಿಗಾಗಿ ಶ್ರೀರಾಮ ಅವನನ್ನು ಬಲಿಹಾಕಿದ,
ಭಾಷತಸ್ತಸ್ಯ ಶೂದ್ರಸ್ಯ ಖಡ್ಗಂ ಸುರುಚಿರಪ್ರಭಮ್ |
ನಿಷ್ಕೃಷ್ಯ ಕೋಶಾದ್ವಮಲಂ ಶಿರಶ್ಚಿಚ್ಛೇದ ರಾಘವಃ || (ಉತ್ತರ.೭೬.೪.)
-ಎಂದು ಒಂದು ಕಲ್ಪಿತ ಘಟನೆಯನ್ನು ಸೇರಿಸಿಬಿಟ್ಟರು. ರಾಮಾಯಣದ ಕರ್ತೃಗಳಾದ ವಾಲ್ಮೀಕಿಗಳೂ ಬೇಡರೇ ತಾನೇ? ಆದರೂ ತಮ್ಮ ತಪೋಬಲದಿಂದ ಮಹತ್ವಗಳಿಸಿದ ಆ ವಾಲ್ಮೀಕಿಗಳನ್ನು ಗೌರವಿಸುತ್ತಿದ್ದ ಶ್ರೀರಾಮ, ಶಂಬೂಕನನ್ನು ಕೊಲ್ಲಲು ಸಾಧ್ಯವಿತ್ತೇ?
     ಸಂಪೂರ್ಣ ಉತ್ತರಕಾಂಡವೇ ಪ್ರಕ್ಷಿಪ್ತ. ಅದು ವಾಲ್ಮೀಕಿಕೃತವೇ ಅಲ್ಲ. ಆರನೆಯ ಕಾಂಡವಾದ ಯುದ್ಧಕಾಂಡದ ಕೊನೆಯ ಸರ್ಗದಲ್ಲಿ ಶ್ರೀರಾಮನ ಪಟ್ಟಾಭಿಷೇಕ ಮತ್ತು ರಾಮರಾಜ್ಯದ ವರ್ಣನೆಯಾದ ನಂತರ ಈ ಶ್ಲೋಕ ಕಂಡುಬರುತ್ತದೆ:
ಧನ್ಯಂ ಯಶಸ್ಯಮಾಯುಷ್ಯಂ ರಾಜ್ಞಾಂ ಚ ವಿಜಯಾವಹಮ್ |
ಆದಿಕಾವ್ಯಮಿದಂ ತ್ವಾರ್ಷಂ ಪುರಾ ವಾಲ್ಮೀಕಿನಾ ಕೃತಮ್ || (ಯುದ್ಧ.೧೩೧.೧೦೭.)
     ಇದು ಹಿಂದೆ ವಾಲ್ಮೀಕಿಗಳಿಂದ ರಚಿತವಾದ, ಧನಪ್ರದವೂ, ಯಶಃಪ್ರದವೂ, ಆಯುಃಪ್ರದವೂ, ರಾಜರಿಗೆ ವಿಜಯಪ್ರದವೂ, ಆರ್ಷವೂ ಆದ ಆದಿಕಾವ್ಯ. ಈ ಶ್ಲೋಕದವರೆಗೆ ವಾಲ್ಮೀಕಿಕೃತಿ - ಎಂಬುದು ಸ್ಪಷ್ಟವೇ ಆಗಿದೆ. ಬಾಲಕಾಂಡದ ನಾಲ್ಕನೆಯ ಸರ್ಗದಲ್ಲಿ ಷಟ್ಕಾಂಡಾನಿ ತಥೋತ್ತರಮ್| (೪.೨) ಆರು ಕಾಂಡಗಳನ್ನೂ, ಉತ್ತರಕಾಂಡವನ್ನೂ ವಾಲ್ಮೀಕಿಗಳು ಹೇಳಿದರು - ಎನ್ನಲಾಗುತ್ತಿರಲಿಲ್ಲವೇ? ಅದರ ಮುಂದಿನ ಶ್ಲೋಕದಲ್ಲೂ ಸಹೋತ್ತರಂ - ಉತ್ತರಕಾಂಡಸಮೇತ ಎಂದು ಕಥನವಿದೆ, ಮತ್ತು ವಾಲ್ಮೀಕಿಗಳು ಹೇಳಿದರು -  ಎಂದಿರುವುದರಿಂದ, ಈ ಶ್ಲೋಕ ಬೇರಾರದೋ - ಎಂಬುದು ಸ್ಪಷ್ಟವೇ. ಮತ್ತೆ ಉತ್ತರಕಾಂಡದಲ್ಲಿ:
ಏತಾವದೇತದಾಖ್ಯಾನಂ ಸೋತ್ತರಂ ಬ್ರಹ್ಮಪೂಜಿತಮ್ |
ರಾಮಾಯಣಮಿತಿ ಖ್ಯಾತಂ ಮುಖ್ಯಂ ವಾಲ್ಮೀಕಿನಾ ಕೃತಮ್ || (ಉತ್ತರ.೧೧೧.೧.)
     ಇಲ್ಲಿಯವರೆಗಿನದು, ಬ್ರಹ್ಮಪೂಜಿತವಾದ, ಉತ್ತರಕಾಂಡ ಸಹಿತವಾದ, ರಾಮಾಯಣವೆಂದು ಪ್ರಸಿದ್ದವಾದ ಆಖ್ಯಾನ. ಮುಖ್ಯವಾದುದು ವಾಲ್ಮೀಕಿ ರಚಿತ ಎಂಬ ಶ್ಲೋಕ ಕಂಡುಬರುತ್ತದೆ. ಉತ್ತರಕಾಂಡ ಸಹಿತವಾದ ಮತ್ತು ಮುಖ್ಯವಾದುದು ಈ ಉಕ್ತಿಗಳು. ಉತ್ತರಕಾಂಡ, ಆದಿ ರಾಮಾಯಣದ ಅಭಿನ್ನಾಂಗವಲ್ಲ; ಮೊದಲನೆಯ ಆರು ಕಾಂಡಗಳು ಮಾತ್ರ ಮುಖ್ಯ - ವಾಲ್ಮೀಕಿಕೃತ - ಎಂಬ ನಿರ್ಣಯಕ್ಕೇ ಬೆಂಬಲ ಕೊಡುತ್ತಿದೆ. ನಾನೊಂದು ೨೦ ಅಧ್ಯಾಯಗಳ ಗ್ರಂಥ ರಚಿಸಿದ್ದೇನೆ - ಎಂದಿಟ್ಟುಕೊಳ್ಳೋಣ. ಆಗ ೨೦ ಅದ್ಯಾಯಗಳ ಗ್ರಂಥ ಈ ಲೇಖಕರ ರಚನೆ - ಎನ್ನಬೇಕೋ, ೨೦ನೇ ಅಧ್ಯಾಯಸಮೇತವಾದ, ೧೯ ಅಧ್ಯಾಯಗಳ ಗ್ರಂಥ ಈ ಲೇಖಕರ ರಚನೆ ಎನ್ನಬೇಕೋ? ಎರಡನೆಯ ಹೇಳಿಕೆ - ೨೦ ಅಧ್ಯಾಯಗಳ ಕೃತಿಯಲ್ಲಿ, ೧೯ ಅಧ್ಯಾಯ ನನ್ನದು, ಕೊನೆಯದನ್ನು ಬೇರಾರೋ ಸೇರಿಸಿ, ನನ್ನ ತಲೆಗೆ ಸುತ್ತುತ್ತಿದ್ದಾರೆ - ಎಂಬ ಸಂಶಯಕ್ಕೆಡೆ ಕೊಡುವುದಿಲ್ಲವೇ? ವಸ್ತುತಃ ಮೊದಲ ಆರು ಕಾಂಡಗಳ ಭಾಷಾ ವೈಖರಿಯ ಮುಂದೆ ಉತ್ತರಕಾಂಡದ ಭಾಷೆ ಅತಿ ಸಪ್ಪೆಯಾಗಿದೆ. ಉತ್ತರಕಾಂಡ ಮತ್ತು ಅದರಲ್ಲಿ ಹೇಳಿರುವ ವಿಷಯಗಳು ವಾಲ್ಮೀಕಿ ಪ್ರೋಕ್ತವಂತೂ ಅಲ್ಲವೆಂಬುದು ನಿಶ್ಚಯ.
     ನಾನು ಇಷ್ಟೆಲ್ಲಾ ಹೇಳಿರುವುದರ ಉದ್ದೇಶ್ಯವಿಷ್ಟೆ. ಯಾರ ಧಾರ್ಮಿಕ ಭಾವನೆಗೂ ಧಕ್ಕೆ ತರುವುದು, ಯಾರ ಮನಸ್ಸನ್ನಾದರೂ ನೋಯಿಸುವುದು ನನ್ನ ಗುರಿಯಲ್ಲ. ಶ್ರೀರಾಮನ ಬಗೆಗೆ ನನ್ನ ಹೃದಯದಲ್ಲಿರುವ ಗೌರವಭಾವನೆ, ಯಾವ ರಾಮಭಕ್ತನ ಹೃದಯದಲ್ಲಿರುವ ಭಾವನೆಗಿಂತಲೂ ಎಳ್ಳಿನ ಕೋಟ್ಯಂಶದಷ್ಟೂ ಕಡಿಮೆಯಲ್ಲ. ರಾಮ ಎಂಬ ಎರಡಕ್ಷರ ಕಿವಿಯ ಮೇಲೆ ಬಿದ್ದೊಡನೆಯೇ ಇಂದೂ ನನ್ನ ತಲೆ ಶ್ರದ್ಧೆಯಿಂದ ಬಾಗಿಹೋಗುತ್ತದೆ. ಆದರೆ ಶ್ರೀರಾಮನನ್ನು ದೇವರೆಂದು ಕರೆದು, ಅತ್ತ ಸರ್ವಶ್ರೇಷ್ಠ-ಸರ್ವಜ್ಯೇಷ್ಠ ಪ್ರಭುವಿನ ನಿಜಸ್ವರೂಪವನ್ನೂ ಮರೆತು, ಅತ್ತ ಆಧ್ಯಾತ್ಮಿಕ ಉತ್ಕರ್ಷ, ಇತ್ತ ಲೌಕಿಕ ಅಭ್ಯುದಯ ಎರಡಕ್ಕೂ ಸೊನ್ನೆ ಸುತ್ತಿಕೊಳ್ಳಲು ಮಾತ್ರ ನಾನು ಸಿದ್ಧನಾಗಿಲ್ಲ. ಸಮಸ್ತ ಪರಂಪರಾಗತ ಪಕ್ಷಪಾತಕ್ಕೂ ಅಂಧವಿಶ್ವಾಸಕ್ಕೂ, ತಿಲಾಂಜಲಿಯಿತ್ತು, ದೇವರ ಜೀವನಚರಿತ್ರೆಯೆಂದಲ್ಲ; ಧರ್ಮಶಾಸ್ತ್ರವೆಂದೂ ಅಲ್ಲ; ಒಬ್ಬ ಮಹಾಪ್ರಗಲ್ಭ, ಕಾವ್ಯಶಾಸ್ತ್ರ ವಿಶಾರದ, ಕವಿಸಾಮ್ರಾಟ್ ಮಹರ್ಷಿ ಪ್ರವರನಿಂದ ರಚಿತವಾದ, ಒಬ್ಬ ಮಹಾಮಾನವ ಆದರ್ಶಮಯ ಜೀವನೇತಿಹಾಸ - ಎಂಬ ಭಾವನೆಯಿಂದ ಎಲ್ಲರೂ ಶ್ರೀಮದ್ರಾಮಾಯಣವನ್ನು ಓದುವಂತಾಗಬೇಕು. ಅದಕ್ಕೆ ಸ್ವಲ್ಪವಾದರೂ ಪ್ರೇರಣೆ ಸಿಕ್ಕಬೇಕು; ಎಲ್ಲರ ಬಾಳಿಗೂ ಬೆಳಕು ಸಿಕ್ಕಬೇಕು ಎನ್ನುವುದೊಂದೇ ಈ ಪುಸ್ತಕ ರಚನೆಯಲ್ಲಿರುವ ನನ್ನ ಉದ್ದೇಶ್ಯ. ಪ್ರಕ್ಷಿಪ್ತ ಭಾಗಗಳನ್ನು ಬಿಟ್ಟರೆ, ಇಂದೂ ಶ್ರೀಮದ್ರಾಮಾಯಣ ಕೇವಲ ಭಾರತೀಯರಿಗಲ್ಲ; ಸಂಪೂರ್ಣ ಮಾನವಜಾತಿಗೆ ಬಾಳಿನ ಕೈಗನ್ನಡಿಯಾಗಿ, ನಡೆನುಡಿಯ ಕೆಡುಕಿಲ್ಲದ ಪಡಿಯಚ್ಚಾಗಿ ಉತ್ಥಾನಪಥದ ಉಜ್ವಲ ಪ್ರದೀಪವಾಗಿ ಸಹಾಯಕವಾಗಬಲ್ಲದು, ಅದು ಹೇಗೆಂಬುದರ ಕಿರುನೋಟವನ್ನೀ ಕೃತಿಯಲ್ಲಿ ಪಾಠಕರು ಕಾಣಬಲ್ಲರು.
     ಸಂಪೂರ್ಣ ವಿಶ್ವವಂತಿರಲಿ; ಇಂದು ನೆತ್ತಿಯ ಮೇಲೆ ಚೀಣದಿಂದ, ಅಕ್ಕಪಕ್ಕಗಳಿಂದ ಪಾಕಿಸ್ತಾನದಿಂದ, ಕೆನ್ನೆಯ ಮೆಲೆ ಕಾಶ್ಮೀರದ ಒಬ್ಬ ಪಥಭ್ರಷ್ಟ ನಾಯಕನಿಂದ ಪೆಟ್ಟು ತಿನ್ನುತ್ತಿರುವ, ಅಂಗಾಲುಗಳ ಮೇಲೆ ಇಂಡೋನೇಷಿಯದಿಂದ ಮುಳ್ಳು ಚುಚ್ಚಿಸಿಕೊಳ್ಳುತ್ತಿರುವ, ವಿದೇಶಗಳಿಂದ ಬರುವ ದ್ರವ್ಯವನ್ನು ನೀರಿನಂತೆ ಸುರಿದು ಹಸಿದವರ ಮನ ಒಲಿಸಿಕೊಂಡು ದೇಶದ ಜನರ ಧರ್ಮಕ್ಕೇ ಸಂಚಕಾರ ತರುತ್ತಿರುವ ಪಾದರಿಗಳಿಂದ ಕೊಳ್ಳೆ ಹೊಡೆಸಿಕೊಳ್ಳುತ್ತಿರುವ, ಹಾಸಿಗೆಯಲ್ಲೇ ಸೇರಿಕೊಂಡು ರಕ್ತ ಹೀರುವ ತಿಗಣೆಗಳಂತೆ, ದೇಶದಲ್ಲೇ ಸೇರಿಕೊಂಡು ದೇಶದ ಸತ್ವವನ್ನೇ ಹೀರುತ್ತಿರುವ, ಸದಾ ಮತಭ್ರಾಂತರಾಗಿಯೇ ವರ್ತಿಸುತ್ತಿರುವ ವಿಶೇಷ ಕೃಪಾಪಾತ್ರ ಅಲ್ಪಸಂಖ್ಯಾತರಿಂದ ಜರ್ಜರೀಭೂತವಾಗುತ್ತಿರುವ, ನ್ಯಾಯವಾಗಿ ಸಿಕ್ಕಬೇಕಾದ ಸಾಮಾಜಿಕ ಅಧಿಕಾರಿಗಳು ಸಿಕ್ಕದೆ, ಇನ್ನೂ ಚೀತ್ಕರಿಸುತ್ತಿರುವ ಹಿಂದುಳಿದವರ ಶಾಪದ ಕಾರಣದಿಂದ ತತ್ತರಿಸುತ್ತಿರುವ, ಸ್ವಸುಖಸಾಧನ ಸಂಪತ್ತಿನ ಸುಖನಿದ್ರೆಯಲ್ಲಿ ಗೊರಕೆ ಹೊಡೆಯುತ್ತಿರುವ ರಾಷ್ಟ್ರಭಕ್ತರ ಕರುಣೆಯಿಂದ ಕಂಗೆಡುತ್ತಿರುವ, ದಾರಿದ್ರ್ಯ-ರೋಗ-ಅಜ್ಞಾನ-ಭಯಗಳಿಂದ ಹಾಹಾಕಾರ ಮಾಡುತ್ತಿರುವ ಜನರಿಂದ ಕೂಡಿರುವ ಈ ನಮ್ಮ ಮಾತೃಭೂಮಿಯಾದರೂ ಶ್ರೀರಾಮನತ್ತ ತಿರುಗಿ ನೋಡಿದರೆ, ಈಗಲೂ ಆಶಾಸಂಚಾರವಾದೀತು.
     ನಾನು ಇದೇ ಪವಿತ್ರ ಭಾವನೆಯಿಂದ ಪ್ರೇರಿತನಾಗಿ, ಈ ಪುಸ್ತಕವನ್ನು ಬರೆದಿದ್ದೇನೆ. ನಮ್ಮೆಲ್ಲರ ಪರಮಶಾಸ್ತ್ರವಾದ ವೇದ ಹೇಳುತ್ತಲಿದೆ:
ಸುಜ್ಞಾನಂ ಚಿಕಿತುಷೇ ಜನಾಯ ಸಚ್ಚಾಸಚ್ಚ ವಚಸೀ ಪಸ್ಪೃಧಾತೇ |
ತಯೋರ್ಯತ್ ಸತ್ಯಂ ಯತರದೃಜೀಯಸ್ತದಿತ್ ಸೋಮೋsವತಿ ಹಂತ್ಯಾಸತ್|| (ಋಕ್.೭.೧೦೪.೧೨.)
    [ಚಿಕಿತುಷೇ ಜನಾಯ] ತಿಳಿಯಬಯಸುವ ಮಾನವನಿಗೆ [ಸುವಿಜ್ಞಾನಮ್] ಒಳ್ಳೆಯ ವಿಜ್ಞಾನವಿದೆ. [ಸತ್ ಚ ಅಸತ್ ಚ] ಸತ್ಯವಾದ ಮತ್ತು ಅಸತ್ಯವಾದ [ವಚಸೀ] ಮಾತುಗಳು [ಪಸ್ಪೃಧಾತೇ] ಪರಸ್ಪರ ಹೋರಾಡುತ್ತಲೇ ಇರುತ್ತವೆ. [ತಯೋಃ] ಅವೆರಡರಲ್ಲಿ [ಯತ್ ಸತ್ಯಮ್] ಯಾವುದು ಸತ್ಯವೋ, ಅದನ್ನು [ಯತರತ್ ಋಜೀಯಃ] ಯಾವುದು ನೇರವಾಗಿದೆಯೋ [ತತ್ ಇತ್] ಅದನ್ನೇ [ಸೋಮಃ] ಉದ್ವೇಗರಹಿತನಾದ, ಶಾಂತಿಗುಣಯುಕ್ತನಾದ ವಿವೇಚಕನು [ಅವತಿ] ಪಾಲಿಸುತ್ತಾನೆ. [ಅಸತ್] ಅಸತ್ಯವನ್ನು [ಅಹಂತಿ] ನಿರಂತರ ಸದೆಬಡಿಯುತ್ತಾನೆ. ಈ ಸತ್ಯ ತತ್ತ್ವಗಳನ್ನು ಅರಿತು, ನಮ್ಮ ಬಾಳನ್ನು ಹಸನಾಗಿ ಮಾಡೋಣ.
     ದೇವಾಸುರ ಸಂಗ್ರಾಮ ಎಂದೋ, ಯಾವುದೋ ಎರಡು ಗುಂಪುಗಳ ನಡುವೆ ನಡೆದು ಅಡಗಿಹೋಯಿತೆಂದು ತಿಳಿದರೆ ತಪ್ಪಾದೀತು. ಸತ್ಯಂ ವೈ ದೇವಾಃ| ಸತ್ಯವೇ ದೇವಜನ; ಅನೃತತಮಸುರಾಃ| -  ಅಸತ್ಯವೇ ಅಸುರಗುಣ. ಈ ಸತ್ಯಾಸತ್ಯಗಳ ಸಂಘರ್ಷ ಮಾನವ ಜಾತಿಯ ಉದ್ಭವವಾದ ಕ್ಷಣದಲ್ಲೇ ಆರಂಭವಾಯಿತು. ಇಂದೂ ನಡೆಯುತ್ತಿದೆ; ಮಾನವಜಾತಿ ಇರುವವರೆಗೂ ನಡೆಯುತ್ತಲೇ ಹೋಗುತ್ತದೆ. ಹೊರಗೆ ಸಮಾಜದಲ್ಲೆಂತೋ ಒಳಗೆ ವ್ಯಕ್ತಿ ವ್ಯಕ್ತಿಯ ಹೃದಯದಲ್ಲಿಯೂ ಅಂತೆಯೇ ಈ ಸತ್ಯಾಸತ್ಯಗಳ ತಿಕ್ಕಾಟ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಮತ್ತು ಮಾನವನ ಸರ್ವಶ್ರೇಷ್ಠರೂಪ ಅವನ ಸೋಮರೂಪವೇ. ಸೋಮಃ ಸುನೋತೇಃ| ಸಾರ ಹಿಂಡಿ ತೆಗೆಯುವವನೇ ಸೋಮ - ಎಂದರೆ, ವಿವೇಚಕನೇ, ವಿಚಾರಶೀಲನೇ ಸೋಮ. ಸೋಮ - ಎಂಬ ಶಬ್ದಕ್ಕೆ ಶಾಂತ, ಉದ್ರೇಕ ರಹಿತ, ಅನುದ್ವೇಗ ಎಂಬರ್ಥವೂ ಇದೆ. ಈ ರೀತಿ ಉರಿದು ಬೀಳದೆ, ತನಗೆ ಪ್ರತಿಕೂಲವಾದುದು ಕಿವಿಗೆ ಬಿದ್ದಾಗ ಉದ್ರೇಕಗೊಳ್ಳದೆ, ಪಕ್ಷಪಾತಕೆ, ದುರಾಗ್ರಹಕ್ಕೆ ಸಿಲುಕದೆ, ಶಾಂತಿಯಿಂದ ವಿವೇಚನೆ ಮಾಡಿ ಸತ್ಯವನ್ನು ರಕ್ಷಿಸಿ, ಅಸತ್ಯವನ್ನು ಬಲಿ ಹಾಕುವ ಮಾನವನೇ ಸೋಮ. ದೇವಾಸುರ ಸಂಗ್ರಾಮದಲ್ಲಿ, ಸದಸತ್ಸಂಘರ್ಷದಲ್ಲಿ, ದೇವಪಕ್ಷ ವಹಿಸಿ, ಸತ್ಪಕ್ಷಕ್ಕೆ ಸೇರಿ, ಸತ್ಯ ರಕ್ಷಣೆಗಾಗಿ ಹೋರಾಡುವ ಸೋಮರಾಗಬೇಕು. ನಮ್ಮವರೆಲ್ಲಾ ಇದೇ ನಿರೀಕ್ಷಣೆಯಿಂದ ಈ ಪಂಕ್ತಿಗಳನ್ನು ಬರೆದಿದ್ದೇನೆ. ಬನ್ನಿರಿ, ಪಾಠಕ ಬಂಧುಗಳೇ! ನಾವೆಲ್ಲಾ ಈ ಅದ್ಭುತ ದೇವಸೇನೆಯನ್ನು ಸೇರೋಣ:
ಇಂದ್ರ ಏಷಾಂ ನೇತಾ ಬ್ರಹ್ಮಸ್ಪತಿರ್ದಕ್ಷಿಣಾ
ಯಜ್ಞಃ ಪುರ ಏತು ಸೋಮಃ|
ದೇವಸೇನಾನಾಮ್ ಅಭಿಭಂಜತೀನಾಂ
ಜಯಂತೀನಾಂ ಮರುತೋ ಯಂತು ಮಧ್ಯೇ|| (ಅಥರ್ವ.೧೯.೧೩.೯.)
     [ಏಷಾಂ ನೇತಾ] ಈ ಮಾನವರ ನಾಯಕನು, [ಬ್ರಹಸ್ಪತಿಃ] ವಿಶ್ವಬ್ರಹ್ಮಾಂಡದ ಪತಿಯೂ, ಸರ್ವಜ್ಞನೂ ಆದ, [ಇಂದ್ರ] ಸರ್ವಶಕ್ತಿಮಾನ್ ಪ್ರಭು, [ದಕ್ಷಿಣಾ} ಇವರಿಗೆ ಸಿಕ್ಕುವ ದಕ್ಷಿಣೆ [ಯಜ್ಞಃ] ತ್ಯಾಗ, [ಸೋಮಃ] ಶಾಂತ ವಿವೇಚಕನು, [ಪುರಃ ಏತು] ಮುಂದೆ ನಡೆಯಲಿ. [ಮರುತಃ] ಸಂಯಮಿಗಳಾದ ಮಾನವರು [ಅಭಿಭಂಜತೀನಾಮ್] ಅಸತ್ಯವನ್ನು ತುಂಡರಿಸಿ ಚೆಲ್ಲುತ್ತಾ [ಜಯಂತೀನಾಮ್] ಜಯಗಳಿಸುತ್ತಾ ಸಾಗುತ್ತಿರುವ [ದೇವಸೇನಾನಾಂ ಮಧ್ಯೇ] ದೇವಸೇನೆಗಳ ನಡುವೆ, [ಯಂತು] ನಡೆಯಲಿ. 
     ಸತ್ಯಾಸತ್ಯ ವಿವೇಚನೆ ಇಂದು ವ್ಯಕ್ತಿ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಗೆ ಎಷ್ಟು ಆವಶ್ಯಕವೋ, ಸಾಮಾಜಿಕ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಲ್ಯಾಣಕ್ಕೂ ಅಷ್ಟೇ ಆವಶ್ಯಕ. ಸತ್ಯರಕ್ಷಣೆಗಾಗಿ ನಾವೆಲ್ಲಾ ಉದಾರಮನಸ್ಕರಾಗಿ, ಪಕ್ಷಪಾತರಹಿತರಾಗಿ, ಸ್ವತಃ ದೇವಜನರಾಗಿ ದೇವ ಸೈನ್ಯದ ಸೈನಿಕರಾಗೋಣ. ಕೇಳಿರಿ:
ಇಂದ್ರಸ್ಯ ವೃಷ್ಣೋ ವರುಣಸ್ಯ ರಾಜ್ಞ ಆದಿತ್ಯಾನಾಂ ಮರುತಾಂ ಶರ್ಧ ಉಗ್ರಮ್|
ಮಹಾಮನಸಾಂ ಭುವನಚ್ಯವಾನಾಂ ಘೋಷೋ ದೇವಾನಾಂ ಜಯತಾಮುದಸ್ಥಾತ್|| (ಅಥರ್ವ.೧೯.೧೩.೧೦.)
     [ವೃಷ್ಣಃ] ಸುಖವರ್ಷಕನೂ, ಧರ್ಮರೂಪನೂ [ವರುಣಸ್ಯ] ದುಃಖನಿವಾರಕನೂ, ವರಣೀಯನೂ [ರಾಜ್ಯಃ] ಜಗತ್ಸಾಮ್ರಾಟನೂ ಆದ, [ಇಂದ್ರಸ್ಯ] ಸರ್ವಶಕ್ತಿಮಾನ್ ಪ್ರಭುವಿನ [ಆದಿತ್ಯಾನಾಮ್] ಅಖಂಡ ಚಾರಿತ್ರರಾದ, ಪ್ರಾಮಾಣಿಕರಾದ [ಮರುತಾಮ್] ಸಂಯಮೀ ಮನವರ [ಶರ್ಧಃ] ಪ್ರತಿರಕ್ಷಣಾಸಾಮರ್ಥ್ಯ [ಉಗ್ರಮ್] ಉಗ್ರವಾಗಿರುತ್ತದೆ. [ಮಹಾಮನಸಾಮ್] ಮಹಾಮನಸ್ಕರಾದ [ಭುವನಚ್ಯವಾನಾಮ್] ಮಹಾನ್ ಕ್ರಾಂತಿಕಾರರಾದ [ಜಯತಾಮ್] ಗೆಲ್ಲುತ್ತಲೇ ಸಾಗುವ [ದೇವಾನಮ್] ದೇವಜನರ [ಘೋಷಃ] ಜಯಘೋಷವು [ಉತ ಅಸ್ಥಾತ್] ಆಗಸಕ್ಕೇರುತ್ತದೆ.
     ಸ್ವತಃ ದೇವಜನರಾಗಿ, ದೇವ ಸೈನ್ಯದ ಸೈನಿಕರಾದ ಮಾನವರು ಎಂತಹ ಮಹಿಮಾ ಸಂಪನ್ನರಾಗುವರೆಂಬುದನ್ನು ಸ್ವಯಂ ಋಗ್ವೇದ ಸ್ಪಷ್ಟವಾದ ಮಾತಿನಲ್ಲಿ ಹೇಳುತ್ತಿದೆ:
ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ|
ವಿದ್ವಾನ್ ತ್ಸ ವಿಶ್ವಾ ಭುವನಾಭಿ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಆವ್ರತಾನ್|| (ಋಕ್.೯.೭೩.೮.)
     [ಋತಸ್ಯ ಗೋಪಾ] ಋತದ, ಈಶ್ವರೀಯ ವಿಧಾನದ ಧರ್ಮದ ರಕ್ಷಕನು [ನ ದಭಾಯ] ಎಂದಿಗೂ ತುಳಿಯಲ್ಪಡಲಿಕ್ಕಿಲ್ಲ. [ಸ ಸುಕ್ರತುಃ] ಆ ಉತ್ತಮ ವಿಚಾರಶೀಲನೂ, ಆಚರಣವಂತನೂ ಆದ ಮಾನವನು [ಹೃದಿ ಅಂತಃ] ತನ್ನ ಹೃದಯದಲ್ಲಿ [ಸ್ತ್ರೀ ಪವಿತ್ರಾ] ಮೂರು ಪವಿತ್ರ ತತ್ತ್ವಗಳನ್ನು ಜ್ಞಾನ-ಕರ್ಮ-ಉಪಾಸನೆಗಳನ್ನು [ಆದಧೇ] ಸದಾ ಧರಿಸಿರುತ್ತಾನೆ. [ಸ ವಿದ್ವಾನ್] ಆ ಜ್ಞಾನಿಯಾದ ಮಾನವನು [ವಿಶ್ವಾಭುವನಾ ಅಭಿಪಶ್ಯತಿ] ಸಮಸ್ತ ಲೋಕಗಳನ್ನೂ ಎಲ್ಲಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. [ಅಜುಷ್ಟಾನ್ ಅವ್ರತಾನ್] ಅಪ್ರಿಯರಾದ ವ್ರತರಹಿತರನ್ನು [ಕರ್ತೇ ಅವ ವಿಧ್ಯತಿ] ಪತನಕೂಪದಲ್ಲಿ ಕೆಳಗೆ ಬಿದ್ದವರನ್ನು ಕೂಡ ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ. 
     ಶ್ರೀರಾಮನ ಮುಂದಿದ್ದ ಆದರ್ಶವಿದೇ. ಆ ಮಹಾಮಾನವ ಭಗವಂತನನ್ನೇ ನಾಯಕನನ್ನಾಗಿ ಆರಿಸಿಕೊಂಡು, ಮಹಾಮನಸ್ಕನಾಗಿ, ಅದ್ಭುತ ಕ್ರಾಂತಿಕಾರಿಯಾಗಿ, ಅಸಚ್ಛಕ್ತಿಗಳೊಂದಿಗೆ ನಿರಂತರ ಹೋರಾಡಿದನು. ಕೊನೆಗೆ ಜಯಗಳಿಸಿದನು. ಆ ಪುರುಷನ ದಿವ್ಯ ಜೀವನದ ವೈಖರಿಯನ್ನು ಈ ಸಣ್ಣ ಪುಸ್ತಕದಲ್ಲಿ ವಿವರಿಸಲು ಯತ್ನಿಸಿದ್ದೇನೆ. ವಿಶ್ಲೇಷಣಾತ್ಮಕವೂ, ವಿಚಾರಪ್ರಚೋದಕವೂ ಆದ ಈ ರಚನೆ ಕೇವಲ ಸತ್ಯಾಸತ್ಯವಿವೇಚನೆಗಾಗಿ ಪಾಠಕರ ಕರಕಮಲಗಳಲ್ಲಿ ಸಮರ್ಪಿಸಲ್ಪಟ್ಟಿದೆ. ಪರಂಪರಾಗತ ನಂಬಿಕೆಗಳನ್ನೂ, ಸಾಂಪ್ರದಾಯಿಕ ಮನೋಭಾವವನ್ನೂ ಬದಿಗೊತ್ತುವುದು ಅಷ್ಟು ಸುಲಭವಲ್ಲ; ಅದಕ್ಕೆ ಉಕ್ಕಿನಂತಹ ಆತ್ಮಬಲ ಬೇಕು -  ಎಂಬುದನ್ನು ನಾನು ಬಲ್ಲೆ. ಈ ಹಾಳೆಗಳನ್ನು ತಿರುವಿಹಕುವುದರಿಂದ ಪಾಠಕರ ಮನಸ್ಸಿನಲ್ಲಿ ಈವರೆಗೆ ಉದಿಸದಿದ್ದ ಪ್ರಶ್ನೆಗಳು ಉದ್ಭವಿಸತೊಡಗಿದರೆ, ನನ್ನ ಈ ಪರಿಶ್ರಮ ಸಾರ್ಥಕವಾಯಿತೆಂದೇ ನಾನು ತಿಳಿಯುತ್ತೇನೆ.
     ದಯಾಮಯನಾದ ದೇವದೇವನು ತನ್ನ ಒಬ್ಬ ನೆಚ್ಚಿನ ಮಗ ಮಹಾಮಾನವ ಶ್ರೀರಾಮನ ಪದ ಚಿಹ್ನೆಯಲ್ಲಿ ನಡೆಯಲು ಬೇಕಾದ ಮನೋಬಲವನ್ನು ನಮ್ಮೆಲ್ಲರಿಗೂ ಕರುಣಿಸಲಿ.
                                                ಶ್ರೀರಾಮನ ಒಬ್ಬ ಅನುಯಾಯಿ
                                                  -ಸುಧಾಕರ ಚತುರ್ವೇದಿ.
************************

ಮಂಗಳವಾರ, ಮಾರ್ಚ್ 20, 2012

ತಲೆ ಮಾತ್ರ ಬಾಗದಿರಲಿ, ಅನ್ಯಾಯದೆದುರು ಧಾತಾ!

     ಪ್ರತಿ ಶನಿವಾರದಂದು ಸಾಯಂಕಾಲ 5-30ಕ್ಕೆ ಸರಿಯಾಗಿ ಬೆಂಗಳೂರಿನ ಪಂ. ಸುಧಾಕರ ಚತುರ್ವೇದಿಯವರ ನಿವಾಸದಲ್ಲಿ ಸತ್ಸಂಗವಿರುತ್ತದೆ. ಆ ಸಂದರ್ಭದಲ್ಲಿ ಅಗ್ನಿಹೋತ್ರ, ಭಜನೆ ಮತ್ತು ಪಂಡಿತರಿಂದ ಸುಮಾರು 45 ನಿಮಿಷಗಳ ಕಾಲ ಉಪನ್ಯಾಸವಿರುತ್ತದೆ. ಆಸಕ್ತರು ಭಾಗವಹಿಸಬಹುದು. ಅಲ್ಲಿ ಹಾಡಲಾದ ಒಂದು ಭಜನೆಯನ್ನು ಚಿತ್ರೀಕರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಭಜನೆಯ ಸಾಹಿತ್ಯವನ್ನೂ ಇಲ್ಲಿ ಕೊಟ್ಟಿರುವೆ. ನಿಮಗೆ ಇಷ್ಟವೆನಿಸಿದರೆ ಸಂತೋಷ.
-ಕ.ವೆಂ.ನಾಗರಾಜ್.
ಜ್ಯೋತೀಸ್ವರೂಪ ಭಗವನ್| ಆ ದಿವ್ಯಜ್ಯೋತಿ ನೀಡು|
ಈ ತಿಮಿರ ರಾಶಿ ಹರಿದು| ಮನವಾಗೆ ಬೆಳಕ ಬೀಡು || ೧ ||

ಪ್ರಾಸಾದ ಕುಟಿಗಳಲ್ಲಿ| ಧನಿ ದೀನರಲ್ಲಿ ದೇವ|
ವೈಶಮ್ಯ ದ್ವಂದ್ವದಲ್ಲಿ| ನೀಡೆಮಗೆ ಸಾಮ್ಯಭಾವ || ೨ ||

ನರರೆಲ್ಲ ಸರಿಸಮಾನ| ಎಂಬೀ ಪ್ರಬುದ್ಧ ಭಾವ|
ಉರದಲ್ಲಿ ಮೂಡುವಂತೆ| ಧೃತಿ ನೀಡು ಸತ್ಪ್ರಭಾವ || ೩ ||

ದೀನರ್ಗೆ ನೋವನಿತ್ತು| ಸಂಪತ್ತ ಗಳಿಸದಂತೆ|
ನೀ ನೀಡು ಶುದ್ಧಮತಿಯಾ| ಪರಹಿಂಸೆಗೆಳೆಸದಂತೆ || ೪ ||

ಮನದಲ್ಲಿ ಮಾತಿನಲ್ಲಿ| ಮೈಯಲ್ಲಿ ಸತ್ಯ ಮಾತ್ರ|
ಮೊನೆವಂತೆ ಆತ್ಮಬಲವ| ನೀಡೈ ಜಗದ್ವಿಧಾತ್ರ || ೫ ||

ಸಲೆ ಕಷ್ಟಕೋಟಿ ಬರಲಿ| ನಮಗಾದರಾತ್ಮಧಾತಾ|
ತಲೆ ಮಾತ್ರ ಬಾಗದಿರಲಿ| ಅನ್ಯಾಯದೆದುರು ಧಾತಾ || ೬ ||

ಪಾಪಾಚರಣ ವಿರಕ್ತಿ| ಜೀವಾತ್ಮರಲನುರಕ್ತಿ|
ತಾಪಾಪಹಾರ ಶಕ್ತಿ| ನೀಡೆಮಗೆ ನಿನ್ನ ಭಕ್ತಿ || ೭ ||

ಬಾಧಾ ಕಠೋರ ಕ್ಲೇಶ| ಪ್ರತಿನಿತ್ಯ ಸಹಿಪೆವಾವು|
ವೇದೋಕ್ತ ಧರ್ಮ ಮಾತ್ರ| ಬಿಡೆವಡಸಿದೊಡೆಯೆ ಸಾವು || ೮ ||

ಸೋಮವಾರ, ಮಾರ್ಚ್ 19, 2012

ಬದುಕಿಗೆ ಹೆದರಿ ಓಡಿಹೋಗಬೇಡ - ವೇದಸುಧೆ » Vedasudhe

ಬದುಕು ಕದನವೆಂದಂಜಿ ಬಿಟ್ಟೋಡುವವನು
ವಿಧಿಯ ಬಾಯಿಗೆ ಕವಳವಾಗದುಳಿಯುವನೆ?
ಎದೆಯನುಕ್ಕಾಗಿಸುತ ಮತಿಗದೆಯ ಪಿಡಿದು
ನೀ ನೆದುರು ನಿಲೆ ಬಿದಿಯೊಲಿವ ಮಂಕು ತಿಮ್ಮ|| 598||
     ಮನುಷ್ಯ ಹುಟ್ಟಿದಮೇಲೆ ಬದುಕು ನಡೆಸಲೇ ಬೇಕು. ಬೇರೆ ಗತಿಯಿಲ್ಲ. ಬದುಕನ್ನು ನಡೆಸಲಾರೆನೆಂದು ಅದಕ್ಕೆ ಅಂಜಿ ಓಡಿಹೋಗುತ್ತೇನೆಂದರೆ ವಿಧಿ ಬಿಟ್ಟೀತೇ? ಬದಲಿಗೆ ಬಂದ ಕಷ್ಟಕಾರ್ಪಣ್ಯಗಳಿಗೆ ಎದೆಯನ್ನು ಉಕ್ಕಿನಂತೆ ಗಟ್ಟಿಮಾಡಿಕೊಂಡು ತನ್ನ ಬುದ್ಧಿಎಂಬ ಗದೆಯನ್ನು ಹಿಡಿದುಕೊಂಡು ಆ ವಿಧಿಗೆ ಎದುರು ನಿಂತರೆ ಆ ವಿಧಿಯೂ ಕೂಡ ತಂತಾನೆ ಒಲಿಯುವುದು, ಆದ್ದರಿಂದ ಪಲಾಯನ ವಾದವನ್ನು ಎಂದಿಗೂ ಮಾಡಬೇಡ.
ಡಾ.ಗುರುರಾಜ ಕರ್ಜಗೆಯವರ ಧ್ವನಿಯಲ್ಲಿ ಈ ಪದ್ಯದ ವಿವರಣೆಯನ್ನು ಕೇಳಿ.
ಕೃಪೆ: ಕನ್ನಡ ಆಡಿಯೋ ಡಾಟ್ ಕಾಮ್
ಇಲ್ಲಿ ಕ್ಲಿಕ್ಕಿಸಿ:
ಬದುಕಿಗೆ ಹೆದರಿ ಓಡಿಹೋಗಬೇಡ - ವೇದಸುಧೆ » Vedasudhe

ಭಾನುವಾರ, ಮಾರ್ಚ್ 18, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೭

     ಗುಣ-ಕರ್ಮ-ಸ್ವಭಾವಗಳಿಂದ ನಾವು ಯಾವುದೇ ವರ್ಣಕ್ಕೆ ಸೇರಿರಲೊಲ್ಲವೇಕೆ? ಆ ಜ್ಯೋತಿರ್ಮಯ ಪ್ರಭುವಿನಲ್ಲಿ ಈ ಕೆಳಗಿನ ಪ್ರಾರ್ಥನೆಯನ್ನು ಹೃತ್ಪೂರ್ವಕವಾಗಿ ಸಲ್ಲಿಸುವ ಮನೋಭಾವ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇರಬೇಕು:
ರುಚಂ ನೋ ಧೇಹಿ ಬ್ರಾಹ್ಮಣೇಷು ರುಚಂ ರಾಜಸು ನಸ್ಕೃಧಿ|
ರುಚಂ ವಿಶ್ಯೇಷು ಶೂದ್ರೇಷು ಮಯಿ ಧೇಹಿ ರುಚಾ ರುಚಮ್|| [ಯಜು.೧೮.೪೮.]
     ಪ್ರಭೋ! [ನಃ ಬ್ರಾಹ್ಮಣೇಶು] ನಮ್ಮ ಬ್ರಾಹ್ಮಣರಲ್ಲಿ [ರುಚಂ ಧೇಹಿ] ಪ್ರೇಮವನ್ನು ತುಂಬಿಸು. [ನಃ ರಾಜಸು] ನಮ್ಮ ಕ್ಷತ್ರಿಯರಲ್ಲಿ [ರುಚಂ ಕೃಧಿ] ಪ್ರೇಮವನ್ನುಂಟುಮಾಡು. [ವಿಶ್ಯೇಷು ಶೂದ್ರೇಷು] ವೈಶ್ಯರಲ್ಲಿ, ಶೂದ್ರರಲ್ಲಿ [ರುಚಮ್] ಪ್ರೇಮವನ್ನು ತುಂಬಿಸು. ಇದೇ ಪ್ರಾರ್ಥನೆಯನ್ನು ಹೀಗೂ ಸಲ್ಲಿಸೋಣ. [ನಃ] ನಮಗೆ [ಬ್ರಾಹ್ಮಣೇಶಷು ರುಚಂ ಧೇಹಿ] ಬ್ರಾಹ್ಮಣರ ಬಗೆಗೆ ಪ್ರೇಮವನ್ನು ಹುಟ್ಟಿಸು. [ನಃ] ನಮಗೆ [ರಾಜಸು ರುಚಂ ಕೃಧಿ] ಕ್ಷತ್ರಿಯರ ಬಗೆಗೆ ಪ್ರೇಮವನ್ನುಂಟುಮಾಡು. [ವಿಶ್ಯೇಷು ಶೂದ್ರೇಷು] ವೈಶ್ಯರ, ಶೂದ್ರರ ಬಗೆಗೂ [ರುಚಮ್] ಪ್ರೇಮವನ್ನೇ ಬೆಳೆಯಿಸು. [ರುಚಾ] ನಿನ್ನ ದಿವ್ಯಪ್ರೇಮದಿಂದ [ಮಯಿ] ನನ್ನ ಬಗೆಗೂ [ರುಚಂ ಧೇಹಿ] ಎಲ್ಲರಿಗೂ ಪ್ರೇಮವನ್ನುಂಟುಮಾಡು.
     ವಸ್ತುತಃ ಸರ್ವಮಾನವೋದ್ಧಾರಕ್ಕೆ ಸರ್ವೋತ್ಕೃಷ್ಟ ಸಾಧನವಾದ ಈ ವರ್ಣವ್ಯವಸ್ಥೆ, ತನ್ನ ನಿಜರೂಪದಲ್ಲಿ ಪ್ರಕಟವಾದರೆ ಸಮಾಜ ಸ್ವರ್ಗವಾದೀತು. ಆದರೆ, ಗುಣ-ಕರ್ಮಕ್ಕನುಸಾರ ವಿಭಾಗಿಸಲ್ಪಟ್ಟ ಈ ವರ್ಣವ್ಯವಸ್ಥೆ, ಜಾತಿವಾದದಲ್ಲಿ ಇಳಿದು ಬಂದು ಮಾನವ ಸಮಾಜವನ್ನು ನರಕಸದೃಶವನ್ನಾಗಿ ಮಾಡಿತು. ನಮ್ಮ ಕರ್ತವ್ಯಗಳು ಬೇರೆ ಬೇರೆಯಾದರೂ, ನಾವೆಲ್ಲರೂ ಒಂದೇ ಎಂಬ ಭಾವನಾತ್ಮಕ ಏಕತೆಯನ್ನು ಗುರುತಿಸೋಣ.
-ಪಂ.ಸುಧಾಕರ ಚತುರ್ವೇದಿ.
***************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/02/blog-post_17.html
ನನ್ನ ಮಾತು:
     ಹುಟ್ಟಿನಿಂದ ಬರುವ ಜಾತಿ ಆಧರಿಸಿ ಜನರನ್ನು ಗುರುತಿಸುವ ವ್ಯವಸ್ಥೆ ಇರುವವರೆಗೆ, ರಾಜಕೀಯ ಲಾಭಕ್ಕಾಗಿ ಜಾತಿ ಆಧಾರಿತ ಮೀಸಲಾತಿ, ತುಷ್ಟೀಕರಣ ನೀತಿಗಳು ಹೋಗದೆ ಇರುವವರೆಗೆ ಬದಲಾವಣೆ ನಿರೀಕ್ಷೆ ಇಟ್ಟುಕೊಳ್ಳುವುದು ಮರುಭೂಮಿಯ ಮರೀಚಿಕೆಯಂತೆ ಅನ್ನಿಸುತ್ತದೆ. ಆದರೂ ಸಮಾನಮನಸ್ಕರು ಬದಲಾವಣೆಗಾಗಿ ಪ್ರಯತ್ನ ಮುಂದುವರೆಸಲಿ, ಆ ಪ್ರಯತ್ನ ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಆಶಿಸಬಹುದಲ್ಲವೇ?
-ಕ.ವೆಂ.ನಾಗರಾಜ್.
**************

ಶನಿವಾರ, ಮಾರ್ಚ್ 17, 2012

ಗುಂಡಿಯಲ್ಲಿ ಬಿದ್ದ ನಾಯಿಮರಿ


     ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ವಾಕಿಂಗಿಗೆ [ವಾಯುಸೇವನೆಗೆ ಅನ್ನವುದಕ್ಕಿಂತ ವಾಕಿಂಗ್ ಅನ್ನುವುದು ಜನಪ್ರಿಯ ಬಳಕೆಯ ಪದ] ಹೊರಟು ಸ್ಟೇಡಿಯಮ್ ತಲುಪಿದೆ. ಒಂದು ಸುತ್ತು ಹಾಕಿರಬಹುದು. ಪಕ್ಕದಲ್ಲಿದ್ದ ಗುಂಡಿಯೊಂದರಿಂದ ನಾಯಿಮರಿಯ ಕುಂಯ್ ಕುಂಯ್ ಆರ್ತ ಸ್ವರ ಕೇಳಿಸಿತು. ಸುಮಾರು ೪ಅಡಿ ಆಳದ ಗುಂಡಿಯಲ್ಲಿ ಬಗ್ಗಿ ನೋಡಿದರೆ ಅಲ್ಲಿ ಪುಟಾಣಿ ನಾಯಿಮರಿಯೊಂದು ಮೇಲೆ ಹತ್ತಲು ಪರದಾಡುತ್ತಿತ್ತು. ಆಟವಾಡುತ್ತಾ ಅಲ್ಲಿ ಬಿದ್ದಿರಬೇಕು. ಅದಕ್ಕೆ ಮೇಲೆ ಹತ್ತಲಾಗುತ್ತಿರಲಿಲ್ಲ. ಅದರ ಜೊತೆಯ ಇನ್ನೊಂದು ಪುಟಾಣಿ ಮರಿ ಗುಂಡಿಯ ಮೇಲ್ಭಾಗದಲ್ಲಿ ನಿಂತು ಗಮನಿಸುತ್ತಾ ಸುತ್ತಲೂ ಪರದಾಡುತ್ತಿತ್ತು. ಅಲ್ಲಿ ಓಡಾಡುತ್ತಿದ್ದವರನ್ನು ನೋಡುತ್ತಾ ಇದ್ದ ಆ ಇನ್ನೊಂದು ಮರಿಯ ನೋಟ ಯಾರಾದರೂ ಸಹಾಯ ಮಾಡಿ ಎಂದು ಕೇಳುವಂತಿತ್ತು. ಯಾಂತ್ರಿಕವಾಗಿ ವಾಕಿಂಗ್ ಮುಂದುವರೆಸಿದ್ದ ನಾನು ಅದಾಗಲೇ ಆ ಗುಂಡಿ ದಾಟಿ ಮುಂದೆ ಹೋಗಿಬಿಟ್ಟಿದ್ದೆ. ಅದನ್ನು ಮೇಲೆತ್ತಬೇಕಾಗಿತ್ತು ಎಂದು ಮನಸ್ಸು ಹೇಳುತ್ತಿತ್ತು. ಇನ್ನೊಂದು ಸುತ್ತು ಬರುವಾಗ ನೋಡಿದರೆ ಆ ಮರಿ ಅಲ್ಲೇ ಇತ್ತು. ಅದನ್ನು ಮೇಲೆತ್ತಲು ಹೋದಾಗ ಅದು ಮುಂಗಾಲುಗಳನ್ನು ಮುಂದೆ ಚಾಚಿ ನೋಡಿದ 'ಮೇಲಕ್ಕೆ ಎತ್ತು' ಎಂದು ಕೋರುವ ನೋಟ ನನ್ನನ್ನು ಕರಗಿಸಿತು. ಅದರ ಕಾಲು ಹಿಡಿದು ಮೇಲಕ್ಕೆತ್ತಿ ಬಿಟ್ಟು ವಾಕಿಂಗ್ ಮುಂದುವರೆಸಿದರೆ ಆ ಮರಿ ಮತ್ತು ಅದರ ಜೊತೆಯ ಮರಿಗಳೆರಡೂ ಕೃತಜ್ಞತೆ ತೋರಿಸುವಂತೆ ಕುಣಿದು ಕುಪ್ಪಳಿಸಿ ನನ್ನ ಕಾಲುಗಳಿಗೆ ತೊಡರಿಕೊಂಡು ಬರತೊಡಗಿದವು. ಅವನ್ನು ತಪ್ಪಿಸಿಕೊಂಡು ವಾಕಿಂಗ್ ಮುಂದುವರೆಸಿದೆ. ಮುಂದಿನ ಸುತ್ತಿನಲ್ಲಿ ಬರುವಾಗ ಆ ಮರಿಗಳು ತಾಯಿಯ ಜೊತೆ ಚಿನ್ನಾಟವಾಡುತ್ತಾ, ಹಾಲು ಕುಡಿಯುತ್ತಾ ಇದ್ದ ದೃಷ್ಯ ಕಂಡು ಮನಸ್ಸು ಹಗುರವಾಯಿತು.
     ವಾಕಿಂಗ್ ಮುಂದುವರೆದು ವಾಪಸು ಮನೆ ತಲುಪುವವರೆಗೂ ನನ್ನ ಮನಸ್ಸು ಆ ವಿಚಾರದಲ್ಲೇ ಮುಳುಗಿತ್ತು. ನಾವೂ ಸಹ ಆ ನಾಯಿಮರಿಯಂತೆ ಗುಂಡಿಯಲ್ಲಿ ಬಿದ್ದು ಮೇಲೆ ಹತ್ತಲಾರದೇ ಪರದಾಡುತ್ತಿದ್ದೇವಲ್ಲವೇ ಅನ್ನಿಸಿತು. ನಮ್ಮನ್ನು ಆವರಿಸಿದ ಮಾಯೆ/ಭ್ರಮೆ ನಾವು ಗುಂಡಿಯಲ್ಲಿರುವ ವಾಸ್ತವತೆ ಮರೆಮಾಚಿ, ಗುಂಡಿಯಲ್ಲೇ ಇರುವಂತೆ ಮಾಡುತ್ತಿರಬೇಕು. ಸ್ವಾಭಿಮಾನ, ದುರಭಿಮಾನಗಳಿಂದ ನಾವೇ ತೋಡಿಕೊಂಡ ಗುಂಡಿಗೆ ನಾವೇ ಆಟವಾಡುತ್ತಾ ಬಿದ್ದುಬಿಟ್ಟಿರಬೇಕು. ಮೇಲೆ ಹತ್ತಲು ಮಾಡುವ ಪ್ರಯತ್ನಗಳಿಗೆ ರಾಗ, ದ್ವೇಷಗಳು ಅಡ್ಡಿಯಾಗಿ ಪುನಃ ಕೆಳಗೆ ಜಾರಿಸುತ್ತಿರಬೇಕು. ಒಂದೊಮ್ಮೆ ಗುಂಡಿಯಲ್ಲಿ ಬಿದ್ದ ಅರಿವಾದರೂ, ಮೋಹ, ಮಮಕಾರಗಳು ಮೇಲೆ ಹತ್ತದಂತೆ ಮಾಡುತ್ತಿರಬೇಕು. ಹೀಗೆಲ್ಲಾ ಯೋಚಿಸುತ್ತಿದ್ದ ಮನಸ್ಸು ಇಷ್ಟಕ್ಕೆಲ್ಲಾ ಹೊಣೆ ಯಾರು, ಅದರಲ್ಲಿ ನಿನ್ನ ಪಾಲೆಷ್ಟು, ಇತರರ ಪಾಲೆಷ್ಟು ಎಂದು ಕೆಣಕುತ್ತಿತ್ತು. ಗುಂಡಿಯಿಂದ ಮೇಲೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಮಾಡುತ್ತಲೇ ಇದ್ದರೆ, ಮೇಲೆ ಹತ್ತಲು ಸಹಾಯ ಮಾಡಲು ದೇವರು ಯಾರನ್ನಾದರೂ ಕಳಿಸಿಯೇ ಕಳಿಸುತ್ತಾನೆ. ಆರೀತಿ ಸಹಾಯ ಮಾಡುವ ಯಾರೋ ಒಬ್ಬರೇ ನಮ್ಮ ಪಾಲಿಗೆ ಮಾರ್ಗದರ್ಶಕರಾಗುತ್ತಾರೆ ಎಂದು ಅನ್ನಿಸುವ ಹೊತ್ತಿಗೆ ಮನೆಗೆ ಬಂದು ತಲುಪಿದ್ದೆ. ನಾಯಿಮರಿ ಕುಂಯ್‌ಗುಡದೇ ಇದ್ದಿದ್ದರೆ ನಾನು ಅದನ್ನು ಮೇಲೆತ್ತುತ್ತಿರಲಿಲ್ಲ. ಹಾಗೆಯೇ ನಾವು ಮೇಲೇರಲು ಮೊರೆಯಿಡದಿದ್ದರೆ ನಮಗೆ ಸಹಾಯ ಸಿಗದೇ ಹೋಗಬಹುದು!
-ಕ.ವೆಂ.ನಾಗರಾಜ್.

ಸೋಮವಾರ, ಮಾರ್ಚ್ 12, 2012

ಅಗ್ನಿಹೋತ್ರ: 'ಇದಂ ನ ಮಮ'-ಇದು ನನಗಾಗಿ ಅಲ್ಲ!

     ಅಗ್ನಿಹೋತ್ರ - ಇದು ಸ್ವಹಿತ ಮತ್ತು ಸಮಾಜಹಿತದ ಸಲುವಾಗಿ ಮಾಡಬಹುದಾದ ಒಂದು ಕ್ರಿಯೆ. ಅಗ್ನಿಹೋತ್ರವನ್ನು ಆಚರಿಸಲು ಪ್ರತಿದಿನ ಸೂರ್ಯೋದಯ ಮತ್ತು ಸಾರ್ಯಾಸ್ತ ಕಾಲ ಸೂಕ್ತವಾಗಿದ್ದು ಇದರ ಅರ್ಥಪೂರ್ಣ ಆಚರಣೆಯಿಂದ ಅಂತರಂಗ ಮತ್ತು ಬಹಿರಂಗದ ಶುದ್ಧಿ ಸಾಧ್ಯವೆಂಬುದು ಬಲ್ಲವರ ನುಡಿ. ಹೇಳುವ ಮಂತ್ರಗಳ ಅರ್ಥ ತಿಳಿದು ಉಚ್ಛರಿಸುವುದರಿಂದ ಮತ್ತು ಸೂಕ್ತ ಸಮಿತ್ತುಗಳನ್ನು ಉಪಯೋಗಿಸುವುದರಿಂದ ಒಳ್ಳೆಯದಾಗುವುದು. ಈ ವಿಧಿಯ ಆಚರಣೆಯ ಕ್ರಮಗಳು ಹೀಗಿವೆ:
೧. ಪ್ರಾರಂಭದಲ್ಲಿ ಈಶ್ವರಸ್ತುತಿಪ್ರಾರ್ಥನೆ,
೨. ಆಚಮನ ಮಂತ್ರಗಳು,
೩. ಅಂಗಸ್ಪರ್ಶ ಮಂತ್ರಗಳು,
೪. ಅಗ್ನ್ಯಾಧಾನ ಮಂತ್ರಗಳು,
೫. ಆಗ್ನ್ಯುದ್ದೀಪನ ಮಂತ್ರ,
೬. ಸಮಿದಾಧಾನ ಮಂತ್ರಗಳು,
೭. ಪಂಚ ಘೃತಾಹುತಿ ಮಂತ್ರ,
೮. ಜಲಸೇಚನ ಮಂತ್ರ,
೯. ಆಘಾರಾವಾಜ್ಯ ಭಾಗಾಹುತಿ ಮಂತ್ರಗಳು,
೧೦. ಪ್ರಾತಃಕಾಲದ/ಸಾಯಂಕಾಲದ ಮಂತ್ರಗಳು,
೧೧. ಉಭಯಕಾಲದ ಮಂತ್ರಗಳು,
೧೨. ಪೂರ್ಣಾಹುತಿ ಮಂತ್ರ,
೧೩. ಶಾಂತಿ ಮಂತ್ರ
ಪೌರ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ವಿಶೇಷಾಹುತಿ ಸಂದರ್ಭಗಳಲ್ಲಿ ಹೇಳುವ ಮಂತ್ರ.
      ಇದರಲ್ಲಿ ತಾನಾಗಿಯೇ ಒಣಗಿ ಬಿದ್ದಿರುವ ಸಮಿತ್ತುಗಳು ಮತ್ತು ಔಷಧಯುಕ್ತ ವನಸ್ಪತಿಗಳನ್ನು ಬಳಸುವುದು ಸೂಕ್ತ. ಬೆಂಗಳೂರಿನಲ್ಲಿರುವ ಪಂ. ಸುಧಾಕರ ಚತುರ್ವೇದಿಯವರ ನಿವಾಸದಲ್ಲಿ ಪ್ರತಿ ಶನಿವಾರ ಸಾಯಂಕಾಲ ೫.೩೦ಕ್ಕೆ ಸರಿಯಾಗಿ ನಡೆಯುವ ಸತ್ಸಂಗದ ಪ್ರಾರಂಭದಲ್ಲಿ ಅಗ್ನಿಹೋತ್ರ ನಡೆಯುತ್ತದೆ. ಸ್ತ್ರೀಯರು ವೇದಮಂತ್ರಗಳನ್ನು ಹೇಳಬಾರದು ಎಂಬ ತಪ್ಪು ಕಲ್ಪನೆ ಪ್ರಚಲಿತವಿರುವಾಗ ಅದು ಸರಿಯಲ್ಲವೆಂದು ಹೇಳುವ ಬದಲು ಕೃತಿಯಲ್ಲಿ ಆಚರಿಸಿ ತೋರಿಸಲೋ ಎಂಬಂತೆ ಇಲ್ಲಿ ಮಹಿಳೆಯರೇ ಅಗ್ನಿಹೋತ್ರ ನಡೆಸುತ್ತಾರೆ. ಅದನ್ನು ವಿಡಿಯೋದಲ್ಲಿ ಚಿತ್ರೀಕರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಆಸಕ್ತ ಕೆಲವರಿಗಾದರೂ ಪ್ರೇರಿಸಲು ಈ ಪ್ರಯತ್ನ. 
-ಕ.ವೆಂ.ನಾಗರಾಜ್.


*************

ಸಂಭವಿಸು ಬಾ, ಪರಮಾತ್ಮ!

     "ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಈಗ ಕಾಲ ತುಂಬಾ ಕೆಟ್ಟು ಹೋಗಿದೆ. ಗುರು-ಹಿರಿಯರೆಂದರೆ ಗೌರವವೇ ಇಲ್ಲ" -  ಈ ಮಾತು ಕೇಳುವುದು ಈಗ ಸಾಮಾನ್ಯವಾಗಿ ಹೋಗಿದೆ. ವಾಸ್ತವವೆಂದರೆ ಈ ಮಾತು ಹೇಳುವವರು ಚಿಕ್ಕವರಾಗಿದ್ದಾಗ ಅವರ ಹಿರಿಯರುಗಳೂ ಹೇಳುತ್ತಿದ್ದದೂ ಇದನ್ನೇ. "ಈ ಟಿವಿ ಬಂದಿದ್ದೇ ಬಂದಿದ್ದು, ನಮ್ಮ ಸಂಸ್ಕೃತಿಯೇ ಹಾಳಾಗಿ ಹೋಯಿತು" ಅನ್ನುತ್ತಾರೆ. ಟಿವಿ ತನ್ನಷ್ಟಕ್ಕೆ ತಾನೇ ಯಾರನ್ನಾದರೂ ಹಾಳು ಮಾಡುತ್ತದೆಯೇ? ಅದನ್ನು ಉಪಯೋಗಿಸಿ ಹಾಳಾದರೆ ಅದರ ಹೊಣೆಯನ್ನು ಟಿವಿಯ ಮೇಲೆ ಏಕೆ ಹಾಕಬೇಕು? ಅದೇ ರೀತಿ ಚಾಕುವನ್ನು ತರಕಾರಿ ಕತ್ತರಿಸಲೂ ಉಪಯೋಗಿಸಬಹುದು, ಇನ್ನೊಬ್ಬರನ್ನು ಕೊಲ್ಲಲೂ ಬಳಸಬಹುದು. ತನ್ನನ್ನು ಹೀಗೆಯೇ ಉಪಯೋಗಿಸಬೇಕು ಎಂದು ಚಾಕು ಹೇಳುತ್ತದೆಯೇ? ಚಾಕುವಿನಿಂದ ಏನಾದರೂ ತೊಂದರೆಯಾದರೆ ಅದು ಚಾಕುವಿನ ತಪ್ಪಂತೂ ಅಲ್ಲ. ನಾನು ಏನು ಹೇಳಹೊರಟಿರುವೆನೆಂದು ಈಗಾಗಲೇ ಅರ್ಥವಾಗಿರಬೇಕು. ಕೆಟ್ಟು ಹೋಗಲು ಕಾಲವಾಗಲೀ, ಯಾವುದೇ ವಸ್ತುವಾಗಲೀ ಕಾರಣವಲ್ಲ. ಅದನ್ನು ಬಳಸುವ ರೀತಿಯಿಂದ ಒಳಿತು/ಕೆಡಕು ಆಗುತ್ತದೆ. ಕಾಲ ಕೆಟ್ಟಿದೆಯೆಂದರೆ ವಾಸ್ತವಿಕವಾಗಿ ನಾವು ಕೆಟ್ಟುಹೋಗಿದ್ದೇವೆ ಎಂದೇ ಅರ್ಥ. ನೈತಿಕವಾಗಿ ಕೆಟ್ಟದ್ದು ಎಂದು ಭಾವಿಸುವ, ಭ್ರಷ್ಟತೆಯಿಂದ ಕೂಡಿದ, ಇತರರಿಗೆ ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಕೇಡು ಮಾಡುವ, ಒಳ್ಳೆಯದಕ್ಕೆ ವಿರುದ್ಧ ಎಂದು ಭಾವಿಸುವ ಯೋಚನೆಗಳು, ಕೃತಿಗಳನ್ನು ಕೆಟ್ಟದ್ದು ಅನ್ನಬಹುದು.
      ಕೆಟ್ಟ ಸಂಗತಿಗಳು, ಕೃತಿಗಳನ್ನು ಮಾಡಲು ನಾವು ಕೆಲವು ಜನಪ್ರಿಯ ಮಾತುಗಳನ್ನು ಸಮರ್ಥನೆಗಾಗಿ ಬಳಸಿಕೊಳ್ಳುತ್ತೇವೆ. 'ಯುದ್ಧದಲ್ಲಿ, ಪ್ರೀತಿಯಲ್ಲಿ ಗೆಲ್ಲಲು ಏನು ಬೇಕಾದರೂ ಮಾಡಬಹುದು', 'ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು', 'ವ್ಯಾಪಾರಮ್ ದ್ರೋಹ ಚಿಂತನಮ್', ಇತ್ಯಾದಿಗಳ ಸಾಲಿಗೆ ಈಗ 'ಅಧಿಕಾರಕ್ಕಾಗಿ, ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಏನು ಮಾಡಿದರೂ ತಪ್ಪಿಲ್ಲ' ಎಂಬುದೂ ಸೇರ್ಪಡೆಯಾಗಿದೆ. ಪರಂಪರೆಯಿಂದ ಬಂದ ಕುರುಡು  ಸಂಪ್ರದಾಯದ ಹೆಸರಿನಲ್ಲೂ ಇನ್ನೊಬ್ಬರನ್ನು ನೋಯಿಸಲು ಹಿಂದೆ ಮುಂದೆ ನೋಡದ ಪ್ರಸಂಗಗಳೂ ಇವೆ. ಅಗತ್ಯ, ಅನಿವಾರ್ಯ ಎಂಬ ಹೆಸರಿನಲ್ಲಿ ಕೇಡು ಮಾಡುವುದು ಸರ್ವಥಾ ಸರಿಯಲ್ಲ. ಕೆಟ್ಟ ಮಾರ್ಗಗಳಿಂದ ಒಳ್ಳೆಯದಾಗಬಹುದು ಎಂಬ ನಿರೀಕ್ಷೆ ಮರುಭೂಮಿಯ ಮರೀಚಿಕೆಯಿದ್ದಂತೆ. ಜನಸೇವೆಗೆ ಅವಕಾಶ ಕೊಡಿ ಎಂದು ಕೇಳುವ ಸಮಾಜಸೇವಕರು(?) ಕೆಟ್ಟ ಮಾರ್ಗಗಳಿಂದ ಅಧಿಕಾರಕ್ಕೆ ಬಂದು ಜನರನ್ನು ಉದ್ಧಾರ ಮಾಡುವರೆಂಬುದು ಹಗಲುಕನಸೇ ಸರಿ. ಕೆಟ್ಟ ಜನರು ವಿಜೃಂಭಿಸಲು ಮುಖ್ಯ ಕಾರಣವೆಂದರೆ ಒಳ್ಳೆಯ ಜನರೆನಿಸಿಕೊಂಡವರು ಸುಮ್ಮನಿರುವುದು. ಜಗತ್ತಿನ ಅತ್ಯಂತ ಕೆಡುಕಿನ ಸಂಗತಿಯೆಂದರೆ ಒಳ್ಳೆಯವರು ಗೊಣಗಾಡುವುದನ್ನು ಬಿಟ್ಟು ಏನೂ ಮಾಡದಿರುವುದೇ ಆಗಿದೆ. ಈ ಜಗತ್ತು ಕ್ರೂರವಾಗಿ ತೋರುವುದರ ಮೂಲ ಕೆಟ್ಟ ಸಂಗತಿಗಳಲ್ಲ, ಆ ಕೆಟ್ಟ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ, ಏನೂ ಮಾಡದಿರುವುದೇ ಆಗಿದೆ. ಒಳ್ಳೆಯತನದೊಂದಿಗೆ ಬುದ್ಧಿವಂತಿಕೆ ಸಹ ಇರಬೇಕು, ಬುದ್ಧಿವಂತಿಕೆ ಇಲ್ಲದ ಒಳ್ಳೆಯತನ ಕೆಡುಕಿಗೆ ಸಹಕಾರಿ. ಒಳ್ಳೆಯದನ್ನು ಮಾಡಬೇಕೋ, ಕೆಟ್ಟದನ್ನು ಮಾಡಬೇಕೋ ಎಂದು ನಿಶ್ಚಯ ಮಾಡಲಾರದವರಿಂದಲೇ ಕೆಡುಕು ಜಾಸ್ತಿ. ಡಂಭಾಚಾರ, ನಿಜಮುಖವನ್ನು ಮರೆಮಾಚುವ ಮುಖವಾಡಗಳು ಎಲ್ಲಾ ಕೆಟ್ಟ ಸಂಗತಿಗಳ, ಕ್ರೂರತೆಯ ಮೂಲವಾಗಿದೆ. ಆದರೆ ಒಂದಂತೂ ಸತ್ಯ. ಶಸ್ತ್ರರಹಿತ ಸತ್ಯ ಮತ್ತು ಪ್ರೀತಿಗಳದೇ ಕೊನೆಯ ಮಾತು. ಸತ್ಯಕ್ಕೆ ತಾತ್ಕಾಲಿಕ ಸೋಲಾದರೂ ಸಹ ಕೊನೆಯಲ್ಲಿ ವಿಜೃಂಭಿತ ಕೆಡುಕಿಗಿಂತ ಅದೇ ಬಲಶಾಲಿಯಾಗಿ ಹೊರಹೊಮ್ಮುವುದು! 
     ಕೆಟ್ಟದ್ದನ್ನು ಏಕೆ ಮಾಡುತ್ತಾರೆ? ತಮಾಷೆಯೆಂದರೆ, ಸಂತೋಷ, ಲಾಭ ಸಿಗುತ್ತದೆಯೆಂಬ ಭ್ರಮೆಯಿಂದ ಇನ್ನೊಬ್ಬರಿಗೆ ಕೇಡು ಮಾಡುತ್ತಾರೆಯೇ ಹೊರತು, ಆ ಭ್ರಮೆಯಿರದಿದ್ದಲ್ಲಿ ಯಾರೂ ಆ ತಪ್ಪು ಮಾಡುತ್ತಿರಲಿಲ್ಲ. ಪೌರಾಣಿಕ ಕಥೆಯಲ್ಲಿ ಕೇಳಿರಬಹುದು, ಹಿಂದೊಮ್ಮೆ ದೇವತೆಗಳು ಒಂದು ಕಡೆ, ಅಸುರರು ಒಂದು ಕಡೆ ಸೇರಿ ಸಮುದ್ರ ಮಥನ ಮಾಡಿದರು, ಆ ಮಥನದಿಂದ ಅನೇಕ ಒಳ್ಳೆಯ ಸಂಗತಿಗಳು, ವಜ್ರ, ವೈಢೂರ್ಯ, ಮುತ್ತು ರತ್ನಗಳು, ಲಕ್ಷ್ಮಿ, ಅಮೃತ, ಇತ್ಯಾದಿಗಳಂತೆ, ಹಾಲಾಹಲ ವಿಷ, ಕೆಡುಕು ತರುವ ವಸ್ತುಗಳೂ ಹೊರಬಂದವು, ಅಮೃತವನ್ನು ಪಡೆದು ಚಿರಂಜೀವಿಗಳಾಗಲು ಇಬ್ಬರೂ ಹೊಡೆದಾಡಿದರು, ವಿಷ್ಣು ಮೋಹಿನಿ ಅವತಾರ ತಾಳಿ, ಎಲ್ಲರನ್ನೂ ಮರುಳುಗೊಳಿಸಿ ಅಮೃತ ದೇವತೆಗಳಿಗೇ ದೊರೆಯುವಂತೆ ಮಾಡಿದ, ಇತ್ಯಾದಿ, ಇತ್ಯಾದಿ. ಈ ರೂಪಕ ಸುಂದರವಾಗಿದೆ. ನಿಜವಾಗಿ ಸಮುದ್ರವೆಂದರೆ ಮಾನವನ ಮನಸ್ಸೇ. ಅದರಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟ ಸಂಗತಿಗಳೂ ಇವೆ. ಒಳ್ಳೆಯದು, ಕೆಟ್ಟದರ ನಡುವಣ ಸಂಘರ್ಷವೇ ಮಥನ. ಆ ಮಥನದಲ್ಲಿ ನಾವು ಏನನ್ನು ಆರಿಸಿಕೊಳ್ಳುತ್ತೇವೆ ಎಂಬುದರಿಂದ ನಾವು ಒಳ್ಳೆಯವರೋ, ಕೆಟ್ಟವರೋ ಆಗುವೆವು. ನಾವು ಏನು ಆರಿಸಿಕೊಳ್ಳುವೆವು ಎಂಬುದನ್ನು ನಮ್ಮನ್ನು ಆವರಿಸಿರುವ ಮಾಯೆ/ಭ್ರಮೆ ನಿರ್ಧರಿಸುತ್ತದೆ. 
     ನಮ್ಮೊಳಗೇ ರಾಮನೂ ಇದ್ದಾನೆ, ರಾವಣನೂ ಇದ್ದಾನೆ. ರಾಮನಾಗಬೇಕೋ, ರಾವಣನಾಗಬೇಕೋ ಎಂಬ ದ್ವಂದ್ವದಲ್ಲಿ ಇಂದಿನ ಪ್ರಪಂಚದಲ್ಲಿ ರಾಮನಂತಿದ್ದರೆ ಬದುಕಿಗೆ ಮಣ್ಣೇ ಸರಿ ಎಂದು ಮಾಯೆ ಉಪದೇಶಿಸುತ್ತದೆ. ಸಾವಿಲ್ಲದ ಜೀವಜಗತ್ತು ಇದೆಯೇ? ಹಾಗಿರುವಾಗ ಇನ್ನೊಬ್ಬರಿಗೆ ಕೇಡು ಬಗೆದು ನಾನು ಉದ್ಧಾರವಾಗಬೇಕೆಂಬ ಬಯಕೆ ಎಷ್ಟು ಸರಿ? ಪ್ರತಿಯಾಗಿ ನನಗೂ ಕೇಡು ಬಗೆಯದಿರುವರೇ? ಸಾವು ಅಂತಿಮ ಸತ್ಯವೆಂದಾದಾಗ ಆತ್ಮವಂಚನೆ ಮಾಡಿಕೊಂಡು ಹಲವಾರು ಸಲ ಸಾಯುವ ಬದಲು, ಕಷ್ಟವಾದರೂ ಒಳ್ಳೆಯ ದಾರಿಯಲ್ಲಿ ನಡೆದು ಒಂದು ಸಲ ಸಾಯುವುದು ಒಳ್ಳೆಯದು ಎಂದು ಮಾಯೆಯ ಮುಸುಕು ಸರಿಸಿದವನು ಯೋಚಿಸುತ್ತಾನೆ. ಜಗತ್ತಿನಲ್ಲಿ ಮರಗಳನ್ನು ಅದು ಕೊಡುವ ಫಲಗಳಿಂದ ಗುರುತಿಸುವಂತೆ ಜನರನ್ನು ಅವರು ಮಾಡುವ ಕಾರ್ಯಗಳಿಂದ ಗುರುತಿಸುತ್ತಾರೆ. ಒಳ್ಳೆಯ ಮತ್ತು ಶ್ರೇಷ್ಠ ಕಾರ್ಯಗಳು ಇದ್ದಕ್ಕಿದ್ದಂತೆ ಆಗುವುದಿಲ್ಲ. ಮೊದಲು ಮನುಷ್ಯನ ಮನಸ್ಸಿನಲ್ಲಿ ಅದರ ಮೊಳಕೆ ಚಿಗುರುತ್ತದೆ, ಅವನ ಸಂಕಲ್ಪದಿಂದ ಬೆಳೆಯುತ್ತದೆ, ಧೃಢತೆಯಿಂದ ಮುಂದುವರೆದಾಗ ಅಸಾಧ್ಯವೆನಿಸಿದ್ದು ಸಾಧ್ಯವಾಗುತ್ತದೆ. ಜನರನ್ನು ಅವರು ಮಾಡುವ ಕೆಲಸಗಳಿಂದ ಗುರುತಿಸುತ್ತಾರೆಯೇ ಹೊರತು ಅವನಲ್ಲಿ ಇರುವ ಸಂಪತ್ತು, ಜಾತಿ, ಅಧಿಕಾರ, ಇತ್ಯಾದಿಗಳಿಂದಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಮಾಯೆಯ ಮುಸುಕು ಸರಿಸಲು ಸಾಧ್ಯವಾದೀತು. 
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ
ಬುದ್ಧನೂ ಬೇರಲ್ಲ ಹಿಟ್ಲರನು ಬೇರಿಲ್ಲ|
ಕೆಡುಕದು ಬೇರಲ್ಲ ಒಳಿತದು ಬೇರಿಲ್ಲ
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ||
     ಅದೆಲ್ಲಾ ಸರಿ, ಹೆಚ್ಚಿನವರು ಕೆಟ್ಟವರಾಗಿರುವಾಗ ನನ್ನೊಬ್ಬನ ಒಳ್ಳೆಯತನದಿಂದ ಏನು ಪ್ರಯೋಜನ? ಅದರಿಂದ ನನಗೇ ಕಷ್ಟ. 'ಯಾರಂತೆ ಅಂದರೆ ಊರಂತೆ' ಇರುವುದು ಜಾಣರ ಲಕ್ಷಣ ಎಂದು ಸಾಮಾನ್ಯನಾದವನು ಯೋಚಿಸುವುದು ಸಹಜ. ಕೆಟ್ಟು ಹೋಗಿರುವ ಕಾಲ, ಸಂಸ್ಕೃತಿ, ಸಭ್ಯತೆಗಳನ್ನು ಸರಿಯಾಗಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಸರಿಪಡಿಸುವವರು ಯಾರು? ಬೇರೆಯವರು ಮಾಡಲಿ, ನಾವು ಬೆಂಬಲಿಸೋಣ; ಅಣ್ಣಾ ಹಜಾರೆ ಹೋರಾಟ ಮಾಡಲಿ, ನಾವು ಹಿಂದೆ ನಿಂತು ಜೈ ಅನ್ನೋಣ ಅನ್ನುವವರ ಸಂಖ್ಯೆಯೇ ಜಾಸ್ತಿ. ಇಂತಹ ಮನೋಭಾವವಿದ್ದಾಗ ಹೇಗೆ ಆಗುತ್ತದೆ ಅನ್ನುವುದಕ್ಕೆ ಅಣ್ಣಾಹಜಾರೆಯವರ ಹೋರಾಟದ ಕಾವು ಕ್ರಮೇಣ ಕಡಿಮೆಯಾಗುತ್ತಿರುವುದೇ ಸಾಕ್ಷಿ. ಪಕ್ಕದ ಮನೆಯ ಹುಡುಗ ಭಗತ್ ಸಿಂಗ್ ಆಗಲಿ, ನಮ್ಮ ಮನೆಯ ಹುಡುಗ ಮಾತ್ರ ಆಗುವುದು ಬೇಡ ಎಂದು ಭಾವಿಸುವವರು ಇರುವವರೆಗೆ, ಕುಟುಂಬದ ಸದಸ್ಯರಲ್ಲೇ ಒಬ್ಬರು ಸರಿಹಾದಿಯಲ್ಲಿ ನಡೆಯಲು ನಿರ್ಧರಿಸಿದರೆ ಅವನನ್ನು ಭಂಗಿಸುವ, ಹಂಗಿಸುವ, ಕುಗ್ಗಿಸುವ ಕುಟುಂಬದ ಇತರ ಸದಸ್ಯರುಗಳು ಇರುವವರೆಗೆ ಕಾಲ ಕೆಟ್ಟೇ ಇರುತ್ತದೆ. ಜಗತ್ತಿನಲ್ಲಿ ಏನಾದರೂ ಬದಲಾವಣೆ ಬಯಸುವುದಾದರೆ ಆ ಬದಲಾವಣೆಯನ್ನು ಮೊದಲು ನಾವು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಹೆಚ್ಚಿನವರು ಈರೀತಿ ಯೋಚಿಸಿ ಪ್ರವೃತ್ತರಾದರೆ ಬದಲಾವಣೆ ಖಂಡಿತಾ ಆಗುತ್ತದೆ. ಆದರೆ ನಮ್ಮ ಒಳಗೇ ಇರುವ 'ಬೆಕ್ಕಿಗೆ' ಗಂಟೆ ಕಟ್ಟುವವರು ಯಾರು?  
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ಮೊದಲಾಗು ನೀನು |
ಬದಲಾಗು ನೀ ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
     'ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ ಧರ್ಮ ಸಂಸ್ಥಾನಾಪನಾರ್ಥಾಯ ಸಂಭವಾಮಿ ಯುಗೇ ಯುಗೇ' ಎಂಬುದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉವಾಚ. ಈಗ ಅನ್ಯಾಯ ಮಿತಿ ಮೀರಿದೆ. ದೌರ್ಜನ್ಯಗಳು ಹೆಚ್ಚಿವೆ, ಭ್ರಷ್ಟಾಚಾರಕ್ಕೆ ಕಡಿವಾಣವೇ ಇಲ್ಲ, ಬಡವರ ಗೋಳು ಕೇಳುವವರೇ ದಿಕ್ಕಿಲ್ಲ. ಈಗ ಉದ್ಧಾರ ಮಾಡಲು ಪರಮಾತ್ಮ ಬಾರದಿದ್ದರೆ ಇನ್ನು ಯಾವಾಗ ಬರಬೇಕು ಅನ್ನುವ ಅಗತ್ಯವೇ ಇಲ್ಲ. ಪರಮಾತ್ಮ ಬರುತ್ತಾನೆ, ಖಂಡಿತಾ ಬರುತ್ತಾನೆ. ಆ ಪರಮಾತ್ಮ ಎಲ್ಲೋ ಗಂಗಾತಟದಲ್ಲೋ, ಶ್ರೀರಂಗಪಟ್ಟಣದ ಹತ್ತಿರದ ಹಳ್ಳಿಯಲ್ಲೋ, ಯಾರೋ ಕಟ್ಟಾ ಸಂಪ್ರದಾಯಸ್ಥರ ಮನೆಯಲ್ಲೋ, ಮೆಕ್ಕಾ ಮದೀನಾದಲ್ಲೋ, ವ್ಯಾಟಿಕನ್ ದೇಶದಲ್ಲೋ ಹುಟ್ಟಿ ಬರುವುದಿಲ್ಲ. ಅವನಾಗಲೇ ಇದ್ದಾನೆ. ಅನಾದಿ, ಅನಂತನಾದ ಅವನು ಹೊಸದಾಗಿ ಹುಟ್ಟುವ ಅಗತ್ಯವೇ ಇಲ್ಲ. ಅವನು ನಮ್ಮ ನಿಮ್ಮೆಲ್ಲರ ಹೃದಯದಲ್ಲೇ ಇದ್ದಾನೆ. ಅವನನ್ನು ಅಲ್ಲೇ ಬಂಧಿಸಿಡದೆ ಹೊರಬಿಡಿ, ಆಗ ನೋಡಿ, ಅವನು ಮಾಡುವ ಪವಾಡವನ್ನು! ಜಗತ್ತಿನಲ್ಲಿ ಒಳ್ಳೆಯದು ಎಂದು ನಾವು ಭಾವಿಸುವ ಸಂಗತಿಗಳೆಲ್ಲವನ್ನೂ ಮಾಡಿರುವುದು, ಮಾಡುತ್ತಿರುವುದು ಮತ್ತು ಮಾಡುವುದು ಆ ನಮ್ಮೊಳಗಿರುವ ಪರಮಾತ್ಮನೇ. 'ಸಂಭವಿಸು ಬಾ, ಪರಮಾತ್ಮ' ಎಂದು  ಆ ಕರುಣಾಳು ದೇವನನ್ನು ಸ್ವಾಗತಿಸುವ ಸಮಯ ಇದೇ ಅಲ್ಲವೇ? ಯಜುರ್ವೇದದ ಒಂದು ಮಂತ್ರದೊಂದಿಗೆ ಮುಕ್ತಾಯಗೊಳಿಸುವೆ: ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಃ | ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಮಗ್ನಿನಾ || (ಯಜು. ೨೦.೨೫). ಎಲ್ಲಿ ಬ್ರಾಹ್ಮೀ ಶಕ್ತಿ (ಜಾತಿಯಲ್ಲ) ಮತ್ತು ಕ್ಷಾತ್ರ ಶಕ್ತಿ (ಜಾತಿಯಲ್ಲ) ಒಂದಕ್ಕೊಂದು ಆಶ್ರಯವಾಗಿ ಒಟ್ಟಿಗೆ ಪ್ರವೃತ್ತವಾಗುತ್ತವೋ ಮತ್ತು ಎಲ್ಲಿ ಪವಿತ್ರ, ಚಾರಿತ್ರ್ಯವಂತರಾದ ವಿದ್ವಜ್ಜನರು ರಾಷ್ಟ್ರನಾಯಕರೊಡನೆ ಸಹಕರಿಸಿ ನಡೆಯುತ್ತಾರೋ ಅಂತಹ ಲೋಕವನ್ನು ಪುಣ್ಯಶಾಲಿ ಎನ್ನುತ್ತೇನೆ ಎಂಬುದು ಇದರ ಅರ್ಥ. ಪುಣ್ಯಶಾಲಿ ದೇಶದ ಪುಣ್ಯವಂತ ಪ್ರಜೆಗಳು ನಾವಾಗಬೇಕಾದರೆ ನಾವು ಮೊದಲು ಚಾರಿತ್ರ್ಯವಂತರಾಗಬೇಕಲ್ಲವೇ?
-ಕ.ವೆಂ.ನಾಗರಾಜ್.

ಶನಿವಾರ, ಮಾರ್ಚ್ 10, 2012

ಭಗವಂತನಿಗೆ ನೈವೇದ್ಯ ಸಮರ್ಪಿಸುವುದೆಂದರೆ . . .

     ಒಂದು ಉಪನ್ಯಾಸದ ಸಂದರ್ಭದಲ್ಲಿ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ಹಾಸ್ಯವಾಗಿ ಹೇಳಿದ್ದ ಉದಾಹರಣೆಯಿದು: "ಅಕ್ಕ ಪಕ್ಕ ವಾಸಿಸುವ ಇಬ್ಬರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಎಂದು ಇಟ್ಟುಕೊಳ್ಳೋಣ. ಒಬ್ಬ ದೇವರನ್ನು ಪ್ರಾರ್ಥಿಸುತ್ತಾನೆ - ಓ, ದೇವರೇ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ. ಅವನ ಎರಡು ಕಣ್ಣುಗಳೂ ಹೋಗಲಿ. ಇನ್ನೊಬ್ಬನೂ ಹಾಗೆಯೇ ಪ್ರಾರ್ಥಿಸುತ್ತಾನೆ. ದೇವರು ಯಾರ ಮಾತನ್ನು ಕೇಳಬೇಕು? ಅವನ ಮಾತು ಕೇಳಿದರೆ ಇವನಿಗೆ ಕೋಪ, ಇವನ ಮಾತು ಕೇಳಿದರೆ ಅವನಿಗೆ ಕೋಪ." ದೇವರಿಗೆ ಯಾರ ಮೇಲೂ ಕೋಪವೂ ಇಲ್ಲ, ವಿಶೇಷ ಪ್ರೀತಿಯೂ ಇಲ್ಲ. ದೇವರು ಆಸ್ತಿಕರಿಗೆ ವಿಶೇಷ ಅನುಗ್ರಹ ತೋರುತ್ತಾನೆ ಎಂದೇನೂ ಇಲ್ಲ, ನಾಸ್ತಿಕರಿಗೆ ಕೇಡು ಮಾಡುತ್ತಾನೆ ಅನ್ನುವುದೂ ಸುಳ್ಳು. ದೇವರು ಎಲ್ಲಾ ಜೀವಿಗಳನ್ನೂ ನೋಡುವುದು ಒಂದೇ ರೀತಿಯಲ್ಲಿ. ದೇವರನ್ನು ನಾವು ಪೂಜಿಸುತ್ತೇವೆ, ಸ್ತುತಿಸುತ್ತೇವೆ, ಪ್ರಾರ್ಥಿಸುತ್ತೇವೆ. ಏಕೆ ಹಾಗೆ ಮಾಡುತ್ತೇವೆ? ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಉದ್ದೇಶ ನಮ್ಮನ್ನು ಚೆನ್ನಾಗಿಟ್ಟಿರು, ನಮಗೆ ಒಳ್ಳೆಯದು ಮಾಡು, ನಮಗೆ ಬಂದಿರುವ ಕಷ್ಟಗಳಿಂದ ಪಾರು ಮಾಡು ಎಂದು ಕೇಳುವುದೇ ಆಗಿದೆ. ನಮಗೆ ಉಪಯೋಗಿಸಿಕೊಳ್ಳಲು ಇಡೀ ಸೃಷ್ಟಿಯನ್ನು ಕೊಟ್ಟ ಭಗವಂತನನ್ನು ಆ ಉಪಕಾರಕ್ಕಾಗಿ ಕೃತಜ್ಞರಾಗಿ ಸ್ಮರಿಸಿಕೊಳ್ಳುವುದೇ ನಿಜವಾದ ಪೂಜೆ. ಅವನ ಸೃಷ್ಟಿಗೆ ಹಾನಿಯಾಗದಂತೆ ಉಪಯೋಗಿಸಿಕೊಳ್ಳುವುದು ನಿಜವಾದ ಅನುಷ್ಟಾನ. ಏನೂ ಅಗತ್ಯವಿಲ್ಲದ ಕರುಣಾಮಯಿ ದೇವರಿಗೆ ನಾವು ಏನನ್ನು ತಾನೇ ನೈವೇದ್ಯವಾಗಿ ಅರ್ಪಿಸಬಲ್ಲೆವು? ಪಂ. ಸುಧಾಕರ ಚತುರ್ವೇದಿಯವರ ಶಿಷ್ಯ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಕಳೆದ ವಾರ ಬೆಂಗಳೂರಿನ ಅವರ ನಿವಾಸಕ್ಕೆ ಹೋಗಿದ್ದಾಗ ಅವರ ವಿಚಾರದ ತುಣುಕನ್ನು ವಿಡಿಯೋ ಚಿತ್ರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಈಗ ಚರ್ಚಿತವಾಗುತ್ತಿರುವ ವಿಷಯಕ್ಕೆ ಈ ವಿಚಾರವೂ ಪೂರಕವಾಗಿದೆಯೆಂದು ಭಾವಿಸುವೆ. 
-ಕ.ವೆಂ.ನಾಗರಾಜ್.

ಶುಕ್ರವಾರ, ಮಾರ್ಚ್ 9, 2012

ಹೀಗೊಂದು ವೇದೋಕ್ತ ವಿವಾಹ


ಓದುಗರ ಮಾಹಿತಿಗೆ:
     ಈಗ ಪುನರ್ ಪ್ರಕಟಣೆ ಮಾಡಿರುವ ಈ ಲೇಖನ ಈ ತಾಣದಲ್ಲಿ ಅಲ್ಲದೆ 'ವೇದಸುಧೆ' , 'ಸಂಪದ' ಮತ್ತು 'ನಿಲುಮೆ' ತಾಣಗಳಲ್ಲೂ ಪ್ರಕಟವಾಗಿ, ಹೆಚ್ಚಿನ ವೀಕ್ಷಣೆ ಕಂಡ ಜನಪ್ರಿಯ ಬರಹವಾಗಿದೆ. ಇದು ಈಗ 'ಗಲ್ಫ್ ಕನ್ನಡಿಗ' ಪತ್ರಿಕೆಯಲ್ಲೂ ಪ್ರಕಟವಾಗಿದೆ. ಅಲ್ಲಿ ಪ್ರಕಟಗೊಳ್ಳಲು ಗಲ್ಫ್ ಕನ್ನಡಿಗ ಶ್ರೀ ಪಿ. ರಾಮಚಂದ್ರ ಮತ್ತು ವರದಿಗಾರರಾದ ಶ್ರೀಮತಿ ಅಶ್ವಿನಿ ಕಾರಣರು. ಅವರಿಗೂ ಎಲ್ಲಾ ಓದುಗರಿಗೂ ಹೃತ್ಪೂರ್ವಕ ವಂದನೆಗಳು. 'ಗಲ್ಫ್ ಕನ್ನಡಿಗ' ಪತ್ರಿಕೆಯ ವರದಿಗೆ ಲಿಂಕ್ ಇದು:  http://www.gulfkannadiga.com/news-61774.html
-ಕ.ವೆಂ.ನಾಗರಾಜ್.
-0-0-0-0-0-0-0-0-0-0-0-

     ಸುಮಾರು ಒಂದು ವರ್ಷದ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು, ಮಾತುಕಥೆಗಳಾದವು, ಪ್ರೇಮಾಂಕುರವಾಯಿತು. ಮದುವೆಯಾಗಲು ನಿರ್ಧರಿಸಿದರು. ಜಾತಿ ಬೇರೆಯಾದ್ದರಿಂದ ಎರಡೂ ಮನೆಯವರು ಪ್ರಾರಂಭದಲ್ಲಿ ಒಪ್ಪದಿದ್ದರೂ ಅವರ ಧೃಢ ನಿರ್ಧಾರದಿಂದಾಗಿ ಒಪ್ಪಿಗೆ ಸಿಕ್ಕಿತು. ಸುನಿಲನ ಇಚ್ಛೆಯಂತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಲಿವಿಯ ಸಮ್ಮತಿಸಿದಳು.




     ವೇದೋಕ್ತ ರೀತಿಯಲ್ಲಿ ಮದುವೆಯಾಗಲು ನಿರ್ಧರಿಸಿ ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಭೇಟಿಯಾದರು. ಅವರು ಒಲಿವಿಯಳನ್ನು ಆಕೆ ಇನ್ನುಮುಂದೆ ಸುನಿಲನಂತೆ ಸಸ್ಯಾಹಾರಿಯಾಗಿರಲು ಸಾಧ್ಯವೇ ಎಂದು ವಿಚಾರಿಸಿದರು. ಆಕೆಗೆ ತಕ್ಷಣಕ್ಕೆ ಉತ್ತರಿಸಲಾಗಲಿಲ್ಲ. ಶರ್ಮರು ಹೇಳಿದರು -"ಆಹಾರ ಪದ್ಧತಿ ಬದಲಾಯಿಸಲು ನನ್ನ ಒತ್ತಾಯವಿಲ್ಲ. ಆದರೆ ಸಸ್ಯಾಹಾರಿಯಾಗಲು ನಿರ್ಧರಿಸಿದರೆ ಮಾತ್ರ ನಾನು ಮದುವೆ ಮಾಡಿಸುವೆ. ಇಲ್ಲದಿದ್ದರೆ ಬೇರೆಯವರ ಮಾರ್ಗದರ್ಶನದಲ್ಲಿ ಮದುವೆಯಾಗಬಹುದು. ನಿರ್ಧಾರವನ್ನು ಈ ಕೂಡಲೇ ತೆಗೆದುಕೊಳ್ಳಬೇಕಿಲ್ಲ. ನಿಧಾನವಾಗಿ ಯೋಚಿಸಿದ ನಂತರದಲ್ಲಿ ತಿಳಿಸಿ". ನಂತರ ತಿಳಿಸುವುದಾಗಿ ಹೋದ ಅವರು ಕೆಲವು ದಿನಗಳ ನಂತರ ಮತ್ತೆ ಬಂದು ಶರ್ಮರನ್ನು ಭೇಟಿ ಮಾಡಿದರು. ಒಲಿವಿಯ ಇನ್ನುಮುಂದೆ ಸಸ್ಯಾಹಾರಿಯಾಗಿರಲು ನಿರ್ಧರಿಸಿದ್ದಳು.



     ಹಾಸನದ ಸುವರ್ಣ ರೀಜೆನ್ಸಿ ಹೋಟೆಲಿನ ಪಾರ್ಟಿಹಾಲಿನಲ್ಲಿ ವೇದೋಕ್ತ ರೀತಿಯಲ್ಲಿ ಮದುವೆಗೆ ವೇದಿಕೆ ಸಜ್ಜಾಯಿತು. ಸಭಾಭವನ ಬಂಧು-ಮಿತ್ರರೊಂದಿಗೆ ತುಂಬಿತ್ತು. ನನಗೆ ಅವರ ಪರಿಚಯವಿಲ್ಲದಿದ್ದರೂ ಶ್ರೀ ಸುಧಾಕರ ಶರ್ಮರವರಿಂದ ವಿಷಯ ತಿಳಿದ ನಾನು ಅಂತರ್ಜಾತೀಯ ಹಾಗೂ ವೇದೋಕ್ತ ರೀತಿಯ ವಿವಾಹ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲದಿಂದ ಆ ವಿವಾಹಕ್ಕೆ ನಾನೂ ಸಾಕ್ಷಿಯಾದೆ. ಮದುವೆ ಗಂಡು ಸುನಿಲ ಪಂಚೆ-ಶಲ್ಯ ಹೊದ್ದು ಸಿದ್ಧನಾಗಿದ್ದ. ಬಾಬ್ ಕಟ್ಟಿನ ಹುಡುಗಿ ಒಲಿವಿಯ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಳು. ಅವರ ಜೋಡಿ ಹೇಳಿ ಮಾಡಿಸಿದಂತಿತ್ತು.


     ಪ್ರಾರಂಭದಲ್ಲಿ ಶ್ರೀ ಶರ್ಮರು ದೇವರು ಮತ್ತು ಜಾತಿ ಕುರಿತು ನೀಡಿದ ವಿವರಣೆ ಮನ ಮುಟ್ಟುವಂತಿತ್ತು. ದೇವರು ಎಲ್ಲಾ ಜೀವಿಗಳಿಗೂ ಒಬ್ಬನೇ, ಬೇರೆ ಬೇರೆ ಜಾತಿಗಳವರಿಗೆ ಬೇರೆ ಬೇರೆ ದೇವರಿಲ್ಲ, ಅಲ್ಲದೆ ಮನುಷ್ಯರಿಗೆ, ಪ್ರಾಣಿಗಳಿಗೆ, ಗಿಡ-ಮರಗಳಿಗೆ ಪ್ರತ್ಯೇಕ ದೇವರುಗಳಿಲ್ಲವೆಂದ ಅವರು ಜಾತಿಗಳ ಸೃಷ್ಟಿ ಮನುಷ್ಯರು ಮಾಡಿಕೊಂಡದ್ದು ಎಂದರು. ಮದುವೆಯ ನಿಜವಾದ ಅರ್ಥವನ್ನು ವಿವರಿಸಿದ ಅವರು ಮದುವೆ ಅನ್ನುವುದು ಸುಖದಾಂಪತ್ಯ ನಡೆಸಲು ಬೇಕಾದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಂಸ್ಕಾರ, ಮಾರ್ಗದರ್ಶನ ನೀಡುವ ಸರಳ ಸಮಾರಂಭ ಎಂದರು. ವೇದೋಕ್ತ ರೀತಿಯ ವಿವಾಹ ವಿಧಿಯಲ್ಲಿ ಭಗವಂತನ ಪ್ರಾರ್ಥನೆ, ಪಾಣಿಗ್ರಹಣ, ಯಜ್ಞ, ಪ್ರತಿಜ್ಞಾಮಂತ್ರ ಪಠಣ, ಲಾಜಾಹೋಮ. ಸಪ್ತಪದಿ ಮತ್ತು ಆಶೀರ್ವಾದಗಳು ಒಳಗೊಂಡಿರುತ್ತವೆ ಎಂದರು. ಬೆಂಗಳೂರಿನ ಕೃಷ್ಣಮೂರ್ತಿಯವರು ಪುರೋಹಿತರಾಗಿ ಕಾರ್ಯ ನಿರ್ವಹಿಸಿದರು. ಆ ಪುರೋಹಿತರು ಇತರ ಪುರೋಹಿತರಂತೆ ಇರದೆ, ಪಂಚೆ, ಜುಬ್ಬಾ ಮತ್ತು ಹೆಗಲ ಮೇಲೆ ಒಂದು ವಸ್ತ್ರ ಹಾಕಿಕೊಂಡಿದ್ದರು. ನಾವು ಸಾಮಾನ್ಯವಾಗಿ ನೋಡುವ ಮದುವೆಗಳಲ್ಲಿ ಪುರೋಹಿತರು ಅವರ ಪಾಡಿಗೆ ಅವರು ಮಂತ್ರಗಳನ್ನು ಹೇಳುತ್ತಿದ್ದರೆ ಅದನ್ನು ಬೇರೆಯವರು ಇರಲಿ, ಮದುವೆಯಾಗುವ ಗಂಡೂ-ಹೆಣ್ಣೂ ಸಹ ಅದನ್ನು ಕೇಳುವುದಿಲ್ಲ, ಮಂತ್ರದ ಅರ್ಥವೂ ಅವರಿಗೆ ಗೊತ್ತಿರುವುದಿಲ್ಲ, ಹೇಳುವ ಪುರೋಹಿತರಿಗೂ ತಿಳಿದಿರುತ್ತೋ ಇಲ್ಲವೋ!


    

     ಪುರೋಹಿತರು ಮಂತ್ರಗಳನ್ನು ಹೇಳುತ್ತಿದ್ದರೆ ಅದರ ಅರ್ಥವನ್ನು ಕನ್ನಡದಲ್ಲಿ ಶರ್ಮರವರು ವಿವರಿಸಿ ಹೇಳುತ್ತಿದ್ದರು. ಮದುವೆಯ ವಿಧಿ-ವಿಧಾನಗಳ ನಿಜವಾದ ಪರಿಚಯ ಎಲ್ಲರಿಗೂ ಆದದ್ದು ವಿಶೇಷ. ಒಲಿವಿಯ ಸಸ್ಯಾಹಾರಿಯಾಗಿರಲು ನಿರ್ಧರಿಸಿದ ವಿಷಯ ಘೋಷಿಸಲಾಯಿತು. ವಧೂವರರು ಪೂರ್ಣ ಆಸಕ್ತಿಯಿಂದ ಕಲಾಪದಲ್ಲಿ ಭಾಗಿಯಾದರು, ನಾವೂ ಅಂತಹ ವಿಶೇಷವನ್ನು ಕಂಡು ಸಂತೋಷಿಸಿದೆವು. ವರನಿಂದ "ಜ್ಞಾನಪೂರ್ವಕವಾಗಿ ನಾನು ನಿನ್ನ ಕೈ ಹಿಡಿಯುತ್ತಿದ್ದೇನೆ, ನೀನೂ ಅಷ್ಟೆ. ನಾವಿಬ್ಬರೂ ಪ್ರಸನ್ನರಾಗಿ ಬಾಳೋಣ, ಉತ್ತಮ ಸಂತತಿಯನ್ನು ಪಡೆಯೋಣ. ಮುಪ್ಪಿನ ಕಾಲದವರೆಗೂ ಜೊತೆಯಾಗಿರೋಣ, ಪರಸ್ಪರ ಸುಪ್ರಸನ್ನರೂ, ಪರಸ್ಪರರಲ್ಲೇ ಆಸಕ್ತರೂ ಆಗಿ, ನೂರು ವರ್ಷಗಳ ಕಾಲ ಪ್ರೇಮದಿಂದ, ಆನಂದದಿಂದ, ಪ್ರಿಯವಚನಗಳನ್ನೇ ಆಡುತ್ತಾ ಬಾಳೋಣ" ಎಂಬ ಪ್ರತಿಜ್ಞಾ ವಚನ ಘೋಷಣೆ ಮಾಡಿಸಲಾಯಿತು. ಪ್ರತಿಯಾಗಿ ವಧುವೂ ಉತ್ತರವಾಗಿ ತನ್ನ ಬದ್ಧತೆಯನ್ನು ಘೋಷಿಸಿದಳು.


      ಸಪ್ತಪದಿಯ ಮಹತ್ವ ತಿಳಿಸಿ ನೆರವೇರಿಸಲಾಯಿತು. ಅನ್ನಾಹಾರಗಳ, ಇಚ್ಛಾಶಕ್ತಿಗಳ ಸಲುವಾಗಿ ಮೊದಲ ಜೋಡಿಹೆಜ್ಜೆ, ಬಲ, ಆರೋಗ್ಯಗಳ ಸಲುವಾಗಿ ಎರಡನೆಯ ಜೋಡಿಹೆಜ್ಜೆ, ಸಾಧನ-ಸಂಪತ್ತಿನ ಸಲುವಾಗಿ ಮೂರನೆಯ ಜೋಡಿಹೆಜ್ಜೆ, ಸುಖ-ಆನಂದಗಳಿಗಾಗಿ ನಾಲ್ಕನೆಯ ಜೋಡಿಹೆಜ್ಜೆ, ಉತ್ತಮ ಸಂತಾನಕ್ಕಾಗಿ ಐದನೆಯ ಜೋಡಿಹೆಜ್ಜೆ, ನಿಯಮಿತ ಜೀವನಕ್ಕಾಗಿ ಆರನೆಯ ಜೋಡಿಹೆಜ್ಜೆ ಮತ್ತು ಸ್ನೇಹಕ್ಕಾಗಿ ಏಳನೆಯ ಜೋಡಿಹೆಜ್ಜೆಗಳನ್ನಿರಿಸಿದ ನಂತರ ವಧೂವರರು ದಂಪತಿಗಳೆನಿಸಿದರು. ಬಂದವರು ಮನಃಪೂರ್ವಕವಾಗಿ ದಂಪತಿಗಳಿಗೆ ಶುಭ ಹಾರೈಸಿದರು. ಈ ಸಮಾರಂಭ ವೀಕ್ಷಿಸಿದ ನನಗೆ ಎಲ್ಲರೂ ಈರೀತಿ ಅರ್ಥಪೂರ್ಣ ಸಂಸ್ಕಾರ ಪಡೆಯುವ ವಿವಾಹಗಳನ್ನು ನಡೆಸಿದರೆ ಎಷ್ಟು ಚೆನ್ನ ಎಂದು ಅನ್ನಿಸಿತು. ಆ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ನೋಡುತ್ತಿದ್ದಾಗ ನೆನಪು ಮರುಕಳಿಸಿತು, ಈ ಲೇಖನವಾಗಿ ಹೊರಬಂದಿತು.
*************************
-ಕ.ವೆಂ.ನಾಗರಾಜ್.

ಬುಧವಾರ, ಮಾರ್ಚ್ 7, 2012

ಮಾನಸಿಕಬಲ ನೀಡು ಪ್ರಭುವೆ

     ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಪಾಲುಗೊಂಡು ಅಲ್ಲಿ ನಡೆದ ಅಗ್ನಿಹೋತ್ರ, ಭಜನೆಗಳು, ಪಂಡಿತಜಿಯವರ ವಿಚಾರಧಾರೆಗಳನ್ನು ಕಣ್ಮನಗಳಲ್ಲಿ ತುಂಬಿಕೊಂಡ ಸೌಭಾಗ್ಯ ನನ್ನದಾಯಿತು. ಆ ಸಂದರ್ಭದಲ್ಲಿ ನಡೆದ ಎಲ್ಲಾ ಕಾರ್ಯಕ್ರಮದ ವಿಡಿಯೋ ಚಿತ್ರಣ ಮಾಡಿಕೊಂಡಿದ್ದೇನೆ. ಅಗ್ನಿಹೋತ್ರ ನಡೆದ ನಂತರದಲ್ಲಿ ಹೇಳಿದ ಭಜನೆಯ ವಿಡಿಯೋ ಚಿತ್ರಣವನ್ನು ನಿಮಗಾಗಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಅಗ್ನಿಹೋತ್ರ, ಯಜ್ಞಗಳ ಹಿರಿಮೆ ಸಾರುವ ಈ ಭಜನೆ ಮನನೀಯವಾಗಿದೆ, ಅರ್ಥಪೂರ್ಣವಾಗಿದೆ.

https://www.youtube.com/watch?v=7CcoJXZXxRo

     ಪದಶಃ ಅಲ್ಲದಿದ್ದರೂ ಮೂಲ ಭಾವಾರ್ಥ ಮೂಡಿಸುವ ಭಜನೆಯ ಕನ್ನಡ ಅನುವಾದ ಮಾಡಿದ್ದೇನೆ. ಆಸಕ್ತರು ಇದನ್ನು ಹಾಡಿ ಧ್ವನಿಮುದ್ರಿಸಿ ಪ್ರಕಟಿಸಲು ವಿನಂತಿಸುವೆ.
-.ಕವೆಂ.ನಾಗರಾಜ್.

ಮಾನಸಿಕಬಲ ನೀಡು ಪ್ರಭುವೆ

ಪೂಜನೀಯ ಪ್ರಭುವೆ ನಮ್ಮಯ ಭಾವ ಉಜ್ವಲ ಮಾಡಿರಿ |
ದೂರಗೊಳಿಸಿ ಛಲ ಕಪಟಗಳ ಮಾನಸಿಕ ಬಲ ನೀಡಿರಿ || ೧ ||

ವೇದ ತೋರಿದ ಮಾರ್ಗ ತಿಳಿಸಿ ಸತ್ಯ ಧಾರಣೆ ಮಾಡಿಸಿ |
ಹರ್ಷದಿಂದಲಿ ಸಕಲಜನರು ಶೋಕಸಾಗರ ದಾಟಲಿ || ೨ ||

ವಾಸನಾತೀತರಾಗುವ ಯಜ್ಞಕಾರ್ಯವ ಮಾಡುವಾ |
ಧರ್ಮಪಥದಲಿ ಸಾಗಿ ನಾವು ಲೋಕ ಹಿತವನೆ ಸಾರುವಾ || ೩ ||

ನಿತ್ಯ ಶ್ರದ್ಧಾ ಭಕ್ತಿಯಲಿ ಯಜ್ಞಾದಿಗಳ ನಾವ್ ಮಾಡುವಾ |
ರೋಗ ಪೀಡಿತ ಲೋಕದಿರುವ ಸಕಲ ಸಂಕಟ ಕಳೆಯವಾ || ೪ ||

ಪಾಪ ಅತ್ಯಾಚಾರ ಭಾವ ಮನದ ಮೂಲದೆ ಅಳಿಯಲಿ |
ಯಜ್ಞದಿಂದಲಿ ನರರು ಸಕಲರ ಆಸೆಗಳು ಈಡೇರಲಿ || ೫ ||

ಸಕಲಜೀವಿಗೆ ಶುಭವ ತರಲಿ ಹವನ ಸುಖಕರವೆನಿಸಲಿ |
ವಾಯುಜಲ ಶುಭಗಂಧ ಕೂಡಿ ಲೋಕದೆಲ್ಲೆಡೆ ಹರಡಲಿ || ೬ ||

ಸ್ವಾರ್ಥಭಾವವು ಅಳಿದು ಹೋಗಿ ಪ್ರೇಮಪಥದಲಿ ಸಾಗುವಾ |
ನನಗಲ್ಲವಿದೆಂದೆಂಬ ಭಾವದಿ ಸಾರ್ಥಕತೆ ನಾವ್ ಕಾಣುವಾ || ೭ ||

ಪ್ರೇಮರಸದಲಿ ತೃಪ್ತರಾಗಿ ನಾವು ವಂದನೆ ಸಲಿಪೆವು |
ಕರುಣಾನಿಧಿಯೇ ನಿಮ್ಮ ಕರುಣೆ ಸಿಗಲು ಎಲ್ಲರು ಧನ್ಯರು || ೮ ||

ಸೋಮವಾರ, ಮಾರ್ಚ್ 5, 2012

ಬಲಿವೈಶ್ವದೇವಯಜ್ಞ


      ಯಜ್ಞದಲ್ಲಿ ಪ್ರಾಣಿಬಲಿಯನ್ನು ಸಮರ್ಥಿಸಿಕೊಳ್ಳಲು ಬಲಿವೈಶ್ವದೇವಯಜ್ಞವನ್ನು ಕೆಲವರು ಉಲ್ಲೇಖಿಸುತ್ತಿದ್ದು,, ಈ ಬಲಿವೈಶ್ವದೇವಯಜ್ಞವೆಂದರೆ ಏನು ಎಂಬುದನ್ನು ತಿಳಿಯಪಡಿಸುವುದೇ ಈ ಬರಹದ ಉದ್ದೇಶ. ವೈಶ್ವದೇವಯಜ್ಞಕ್ಕೂ ಪ್ರಾಣಿಬಲಿಗೂ ಸಂಬಂಧವೇ ಇಲ್ಲದಿರುವುದನ್ನು ವಾಚಕರು ಗಮನಿಸಬಹುದು.
-ಕ.ವೆಂ.ನಾಗರಾಜ್.

     ಬಲಿವೈಶ್ವದೇವಯಜ್ಞದಲ್ಲಿ ಈ ಕೆಳಗಿನ ೧೦ ಮಂತ್ರಗಳನ್ನು ಉಚ್ಛರಿಸಲಾಗುತ್ತದೆ. ಭೋಜನಕ್ಕಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಲ್ಲಿ ಹುಳಿ, ಉಪ್ಪು, ಖಾರ, ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಆಹಾರದಲ್ಲಿ ಭಾಗವನ್ನು ಅಗ್ನಿಗೆ ಆಹುತಿ ನೀಡುತ್ತಾರೆ. ಮನೆಯ ಯಜಮಾನ ಅಥವ ಆತನ ಅನುಪಸ್ಥಿತಿಯಲ್ಲಿ ಆತನ ಪತ್ನಿ ಅಥವ ಸ್ತ್ರೀಯರೇ ಈ ಆಹುತಿಯನ್ನು ಅರ್ಪಿಸಬಹುದಾಗಿದೆ.
ಓಂ ಅಗ್ನಯೇ ಸ್ವಾಹಾ || ೧ ||
ಓಂ ಸೋಮಾಯ ಸ್ವಾಹಾ || ೨ ||
ಓಂ ಅಗ್ನಿ ಸೋಮಾಭ್ಯಾಂ ಸ್ವಾಹಾ || ೩ ||
ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ || ೪ ||
ಓಂ ಧನ್ವಂತರಯೇ ಸ್ವಾಹಾ || ೫ ||
ಓಂ ಕುಹ್ವೈ ಸ್ವಾಹಾ || ೬ ||
ಓಂ ಅನುಮತ್ಯೈ ಸ್ವಾಹಾ || ೭ ||
ಓಂ ಪ್ರಜಾಪತಯೇ ಸ್ವಾಹಾ || ೮ ||
ಓಂ ಸಹ ದ್ವಾವಾ ಪೃಥಿವೀಭ್ಯಾಂ ಸ್ವಾಹಾ || ೯ ||
ಓಂ ಸ್ವಿಷ್ಟಕೃತೇ ಸ್ವಾಹಾ || ೧೦ ||
     ಈ ಮಂತ್ರಗಳ ಅರ್ಥ ಅನುಕ್ರಮವಾಗಿ:
೧. ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ ಈ ಆಹುತಿ,
೨. ಪರಮಾತ್ಮನ ಹಾಗೂ ಶಾಂತಿ, ಇತ್ಯಾದಿ ಸದ್ಗುಣಗಳ ಧಾರಣೆಗಾಗಿ ಈ ಆಹುತಿ,
೩. ಪ್ರಕಾಶಸ್ವರೂಪ, ಶಾಂತಿಯ ಆಗರ ಪರಮಾತ್ಮನ ಸಾಕ್ಷಾತ್ಕಾರ ಹಾಗೂ ಪ್ರಾಣಾಪಾನ ಪುಷ್ಟಿಗಾಗಿ ಈ ಆಹುತಿ,
೪. ಪರಮಾತ್ಮನ ವಿವಿಧ ಶಕ್ತಿಗಳ ಸಲುವಾಗಿ ಮತ್ತು ಸಮಸ್ತ ವಿದ್ವಜ್ಜನರ ಪ್ರಸನ್ನತೆಯ ಸಲುವಾಗಿ ಈ ಆಹುತಿ,
೫. ಭವರೋಗಹರ ಪರಮೇಶ್ವರನ, ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯನ ಹಾಗೂ ರೋಗನಿರೋಧಕ ಶಕ್ತಿಯ ಪ್ರಾಪ್ತಿಗಾಗಿ ಈ ಆಹುತಿ,
೬. ದೇವನ ವಿಸ್ಮಯಕರ ಸೃಷ್ಟಿಯ ಅರಿವಿಗೆ ಹಾಗೂ ಶರೀರಧಾರ್ಢ್ಯ, ಪ್ರಸನ್ನತೆಗಳಿಗಾಗಿ ಈ ಆಹುತಿ,
೭. ಜೀವಕರ್ಮಾನುಕೂಲ ಜ್ಞಾನ, ಅಧ್ಯಯನಾನುಕೂಲ ಬುದ್ಧಿಯುಳ್ಳ ಪರಮಾತ್ಮನ ಹಾಗೂ ವಿದ್ವಾಂಸರ ಪ್ರಸನ್ನತೆಗಾಗಿ ಈ ಆಹುತಿ,
೮. ಸಮಸ್ತ ಪ್ರಜೆಗಳ ಸ್ವಾಮಿ ಪರಮಾತ್ಮ ಹಾಗೂ ಸತ್ಸಂತಾನ ನಿರ್ಮಾತೃ ಪಿತೃಗಳಿಗಾಗಿ ಈ ಆಹುತಿ,
೯. ಪ್ರಕಾಶವನ್ನೂ, ಬ್ರಹ್ಮಾಂಡವನ್ನೂ ವಿಸ್ತಿರಿಸಿರುವ ಜಗದೀಶ್ವರನ ಹಾಗೂ ತೇಜಸ್ವಿ, ಜ್ಞಾನವಾನ್ ವಿದ್ವಾಂಸರ ಸಲುವಾಗಿ ಈ ಅಹುತಿ, ಮತ್ತು
೧೦. ಇಷ್ಟಾರ್ಥ ನೀಡುವ ಪರಮಾತ್ಮ ಹಾಗೂ ಸಹಾಯಕಾರೀ ಮಿತ್ರರ ಸಲುವಾಗಿ ಈ ಅಹುತಿ. 
     ಇದಾದ ನಂತರ ಒಂದು ಎಲೆಯಲ್ಲಿ ಉಪ್ಪು ಹಾಕಲ್ಪಟ್ಟ ಸಾರು, ಅನ್ನ, ಇತರ ಖಾದ್ಯ ಪದಾರ್ಥಗಳನ್ನು ಏಳು ಭಾಗಗಳಾಗಿ ಮಾಡಿ ಇಡಬೇಕು. ಇವನ್ನು"ಶ್ವಭ್ಯೋ ನಮಃ|, ಪತಿತೇಭ್ಯೋ ನಮಃ| ಶ್ವಪಗ್ಭೋ ನಮಃ|, ಪಾಪ ರೋಗಿಭ್ಯೋ ನಮಃ| ವಾಯುಸೇಭ್ಯೋ ನಮಃ\, ಕೃಮಿಭ್ಯೋ ನಮಃ|" ಎಂದು ಹೇಳಿ ದೀನ, ದುಃಖಿತ, ಹಸಿದ ಮಾನವರಿಗೂ, ನಾಯಿ, ಗೋವು, ಕಾಗೆ, ಇತ್ಯಾದಿಗಳಿಗೂ, ಕ್ರಿಮಿಕೀಟಗಳಿಗೂ ಹಂಚಬೇಕು. ಮೂಲ ಉದ್ದೇಶವೆಂದರೆ ಇರುವುದನ್ನು ತಾವು ತಿನ್ನುವ ಮುನ್ನ ಅಗತ್ಯವಿರುವವರಿಗೆ ಉಣಬಡಿಸಿ ತಿನ್ನಬೇಕು ಎನ್ನವುದೇ ಆಗಿದೆ. ಇಂತಹ ಸ್ವಾರ್ಥತ್ಯಾಗ, ಪರಹಿತ ಚಿಂತನೆಗೆ ಪ್ರೇರಿಸುವ ಕ್ರಿಯೆಯನ್ನು ಪ್ರಾಣಿಬಲಿಗೆ ಸಮರ್ಥಿಸಲು ಕೆಲವರು ಉಪಯೋಗಿಸಿಕೊಂಡಿರುವುದು ಮನಸ್ಸಿಗೆ ನೋವು ಕೊಡುವಂತಹುದು ಎನ್ನದೇ ವಿಧಿಯಿಲ್ಲ. 
[ಆಧಾರ: ಪಂ.ಸುಧಾಕರ ಚತುರ್ವೇದಿಯವರ ಲೇಖನ].