ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಆಗಸ್ಟ್ 6, 2016

ರಾಕ್ಷಸತ್ವ


     ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪ, ಡೊಳ್ಳು ಹೊಟ್ಟೆ, ಹೊರಚಾಚಿರುವ ಕೋರೆ ಹಲ್ಲುಗಳು, ತಲೆಯ ಮೇಲೆ ಕೊಂಬುಗಳು, ಕೈಯಲ್ಲಿ ಅಪಾಯಕಾರಿ ಆಯುಧಗಳು, ಬೇಕಾದ ರೂಪ ಧರಿಸುವ ಶಕ್ತಿ ಇರುವನು, ರಕ್ತಪಿಪಾಸು ಎಂಬಂತೆ. ಪುರಾಣಗಳಲ್ಲಿ, ಜಾನಪದ ಕಥೆಗಳಲ್ಲಿ ಬರುವ ರಾಕ್ಷಸರ ಚಿತ್ರಣವೂ ಹೀಗೆಯೇ ಇರುತ್ತದೆ. ಅವರು ಹೇಗಾದರೂ ಇರಲಿ, ರಾಕ್ಷಸರು ಎಂದಾಕ್ಷಣ ಅವರು ಕೆಟ್ಟವರು ಎಂಬ ಭಾವವಂತೂ ಮೂಡಿಬಿಡುತ್ತದೆ. ರಾಕ್ಷಸರು ನಿಜವಾಗಿ ಹೀಗಿರುತ್ತಾರೆಯೇ?
     ರಕ್ಷಃ ಅಥವ ರಕ್ಷಸ್ ಅಂದರೆ ಶತ್ರುಗಳು, ದುರ್ಭಾವನೆ, ದುರ್ವಿಚಾರ ಎಂದರ್ಥ. ಯಾರು ರಕ್ಷಸ್ಸುಗಳನ್ನು, ಅಂದರೆ ದುರ್ಭಾವನೆಗಳನ್ನು, ದುರ್ವಿಚಾರಗಳನ್ನು ಹೊಂದಿರುತ್ತಾರೋ, ದುಷ್ಕಾರ್ಯಗಳನ್ನು ಮಾಡುತ್ತಾರೋ ಅವರೇ ರಾಕ್ಷಸರು. ರಾಕ್ಷಸತ್ವಕ್ಕೆ ಯಾವುದೇ ಜಾತಿಯ ಕಟ್ಟಿಲ್ಲ. ರಾಕ್ಷಸನೂ ಒಬ್ಬ ಮಾನವ ಜೀವಿಯೇ ಹೊರತು ಬೇರೆಯಲ್ಲ. ಒಬ್ಬ ರಾಕ್ಷಸನಾಗುವುದು ಅಥವ ಮಾನವನಾಗುವುದು ನಡವಳಿಕೆಯಿಂದ ಅಷ್ಟೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳೇ ರಕ್ಷಸ್ಸುಗಳು. ಅದಕ್ಕೆ ಬಲಿಯಾಗಿ ಕುಕೃತ್ಯಗಳನ್ನು ಎಸಗುವವರೇ ರಾಕ್ಷಸರು.
     ಧೃತರಾಷ್ಟ್ರನ ಪುತ್ರಮೋಹ ಅವನ ನೂರು ಮಕ್ಕಳನ್ನೂ ಅವನು ಬದುಕಿದ್ದಾಗಲೇ ಬಲಿ ತೆಗೆದುಕೊಂಡಿತು. ದೃಷ್ಟಿಹೀನನಾಗಿದ್ದ ಆತ ದುರ್ಯೋಧನನ ಮೇಲಿನ ಅತಿಯಾದ ಮೋಹದಿಂದ ನ್ಯಾಯ, ನೀತಿ, ಧರ್ಮಗಳ ವಿಷಯದಲ್ಲೂ ಸಹ ಕುರುಡನಾಗಿದ್ದ. ಮತಾಂಧರು ಸಹಮಾನವರನ್ನೇ ಕಿಂಚಿತ್ತೂ ಕರುಣೆಯಿಲ್ಲದೆ ಹಿಂಸಾತ್ಮಕವಾಗಿ ಬಲಿ ತೆಗೆದುಕೊಳ್ಳುತ್ತಿರುವುದನ್ನೂ ಕಾಣುತ್ತಿದ್ದೇವೆ. ಅಜ್ಞಾನದ ಪರಮಾವಧಿಯೆನ್ನಬಹುದಾದ ಈ ಮೋಹ ಮಾನವನನ್ನು ದಾನವನನ್ನಾಗಿ ಮಾಡುತ್ತದೆ.
     ಕೋಪದಿಂದಾಗಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ವಿವೇಚಿಸುವ ಶಕ್ತಿಯನ್ನು ಹೊಸಕಿಹಾಕಿ ಪಶುವಿನಂತೆ ವರ್ತಿಸುವ ವ್ಯಕ್ತಿಗೆ ಸ್ನೇಹಿತ-ವೈರಿ, ತನ್ನವರು-ಬೇರೆಯವರು, ಸೋದರ-ಸೋದರಿ, ಹಿರಿಯರು-ಕಿರಿಯರು ಮುಂತಾದ ಯಾವ ವ್ಯತ್ಯಾಸವೂ ಗೊತ್ತಾಗದು. ಗೊತ್ತಾಗುವಷ್ಟರಲ್ಲೇ ಅನಾಹುತ ಜರುಗಿಬಿಟ್ಟಿರುತ್ತದೆ. ಸಭ್ಯತೆ, ಸಂಸ್ಕೃತಿ, ಸ್ಥಾನ-ಮಾನಗಳ ಪರಿವೆಯೂ ಕ್ರೋಪಿಷ್ಠನಿಗೆ ಇರುವುದಿಲ್ಲ. ಕೋಪವೆಂಬ ರಕ್ಕಸನಿಂದ ಎಲ್ಲೆಲ್ಲೂ ಅಪಕಾರ, ಎಲ್ಲೆಲ್ಲೂ ಹಾಹಾಕಾರ!
     ಮತ್ಸರದ ಕುರಿತು ಹೇಳಲೇಬೇಕಿಲ್ಲ. ಪೃಥ್ವೀರಾಜನ ಏಳಿಗೆ ಸಹಿಸದ ಜಯಚಂದ್ರನ ಮತ್ಸರ ಭಾರತವನ್ನು ಶತಮಾನಗಳ ಕಾಲ ದಾಸ್ಯಕ್ಕೆ ದೂಡಿತು. ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಮತ್ಸರ ಅನ್ನುವುದು ನಮ್ಮ ಒಳಗಿನ ಕಲ್ಮಶ, ನಿವಾರಿಸಿಕೊಂಡರೆ ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ.
     ಇನ್ನು ಕಾಮದ ವಿಷಯ ಹೇಳುವುದೇ ಬೇಡ. ರಾವಣನ ವಧೆಯಾದ ಸಂದರ್ಭದಲ್ಲಿ ಮಂಡೋದರಿ ಶೋಕಿಸಿದ ಪರಿ ಇದು: 'ನೀನು ಮೊದಲು ಇಂದ್ರಿಯಗಳನ್ನು ಜಯಿಸಿ ಮೂಲೋಕಗಳಿಗೆ ಒಡೆಯನಾದೆ. ಆ ಇಂದ್ರಿಯಗಳು ಅದನ್ನು ನೆನಪಿನಲ್ಲಿಟ್ಟುಕೊಂಡಿದ್ದವೋ ಎಂಬಂತೆ ನಿನ್ನ ಮೇಲೆ ದ್ವೇಷ ಸಾಧಿಸಿ ನಿನ್ನನ್ನು ಗೆದ್ದವು.' ಜೀವನಕ್ಕೆ ಬೇಕಾದ ಅಮೂಲ್ಯ ಪಾಠ ಈ ಮಾತಿನಲ್ಲ್ಲಿದೆ. ಕಾಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರು, ಜನನಾಯಕರು, ಸಮಾಜದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿದವರು ಕ್ಷಣಿಕ ದೌರ್ಬಲ್ಯದ ಸುಳಿಗೆ ಸಿಕ್ಕಿ ಅಧಃಪತನ ಹೊಂದಿದ, ಮತ್ತೆ ಮೇಲಕ್ಕೇರಲು ಸಾಧ್ಯವೆನಿಸದ ಸ್ಥಿತಿಯಲ್ಲಿರುವ ಅನೇಕರನ್ನು ನಾವು ಕಂಡಿದ್ದೇವೆ, ಕಾಣುತ್ತಿದ್ದೇವೆ. ಈ ಸುಳಿಗೆ ಸಿಕ್ಕಿದವರ ಸಂಸಾರಗಳು ಹಾಳಾಗಿರುವ, ನೆಮ್ಮದಿ ಕಳೆದುಕೊಂಡಿರುವ, ಪ್ರಾಣ ಕಳೆದಿರುವ ಮತ್ತು ಕಳೆದುಕೊಂಡಿರುವವರ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಕ್ಷಣಿಕ ಆನಂದದ ಉನ್ಮಾದ ಜೀವನದ ದಿಕ್ಕನ್ನೇ ತಿರುಗಿಸಬಲ್ಲದು ಎಂಬುದರ ಅರಿವು ಮೂಡುವಷ್ಟರಲ್ಲಿ ಪ್ರಮಾದ ಘಟಿಸಿಬಿಟ್ಟಿರುತ್ತದೆ.
     ಮದ ಸೊಕ್ಕಿ ಮೆರೆಯುವವರನ್ನು ಯಾರು ಇಷ್ಟಪಡುತ್ತಾರೆ? ಮದಕ್ಕೆ ಹಲವು ರೂಪಗಳಿವೆ- ಸಂಪತ್ತಿನ ಮದ, ಅಧಿಕಾರ ಮದ, ರೂಪ ಮದ, ಯೌವನದ ಮದ, ತಿಳಿದವನೆಂಬ ಮದ, ಇತ್ಯಾದಿ. ಸಿಗಬೇಕಾದ ಸಂಸ್ಕಾರ ಸಿಗದಿದ್ದಾಗ ಮದದ ಠೇಂಕಾರಕ್ಕೆ ಮಿತಿ ಇರುವುದಿಲ್ಲ. ಮದದ ಕಾಯಿಲೆಯಿಂದ ನರಳುತ್ತಿರುವವರಿಂದ ದೂರವಿರುವುದೇ ಕ್ಷೇಮ.
     ಲೋಭಿಗಳಿಗೆ ಯಾವುದೇ ನೀತಿ, ನಿಯಮಗಳು, ಸಿದ್ಧಾಂತಗಳು ಪಥ್ಯವಾಗುವುದಿಲ್ಲ. ಅವರ ಒಂದೇ ಗುರಿ ಎಲ್ಲವೂ ತಮಗಿರಲಿ ಎಂಬುದಷ್ಟೇ. ಇದರಿಂದಾಗಿ ಆಸ್ತಿಕತೆ, ಧಾರ್ಮಿಕತೆ, ಒಳ್ಳೆಯ ವಿಚಾರಗಳು, ನಡೆಗಳು, ಒಟ್ಟಾರೆಯಾಗಿ ಸತ್ಪ್ರವೃತ್ತಿಗಳು ಮರೆಯಾಗುತ್ತವೆ. ಕ್ರೂರ ಪಶುಗಳಿಗೂ ಅವರಿಗೂ ವ್ಯತ್ಯಾಸ ಇರದೆ, ಸಮಾಜ ದುಸ್ಥಿತಿಗೆ ಜಾರುತ್ತದೆ. ಲೋಭಿ ತಾನು ಕೆಡುವುದಲ್ಲದೆ, ಸಮಾಜವನ್ನೂ ಕೆಡಿಸುತ್ತಾನೆ. ಲೋಭಿಯಾದವರು ಯಾವ ಮಾರ್ಗದಲ್ಲೇ ಆಗಲಿ, ತನಗೆ ಹಣ ಬಂದರಾಯಿತು ಎಂಬ ಮನೋಭಾವದವನಾಗಿದ್ದು, ಈ ಕಾರಣದಿಂದಲೇ ಕಪ್ಪು ಹಣ, ಭ್ರಷ್ಠಾಚಾರ, ಕಾಳಸಂತೆ, ಜೂಜು, ಬೆಟ್ಟಿಂಗ್, ಕಲಬೆರಕೆ, ಮಾದಕ ದ್ರವ್ಯಗಳ ವ್ಯಾಪಾರ. ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ, ದೇಶದ್ರೋಹದ ಚಟುವಟಿಕೆಗಳು, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಮುಂತಾದವುಗಳು ವಿಜೃಂಭಿಸುತ್ತವೆ.
     ರಾಕ್ಷಸರು ಹೊರಗೆ ಎಲ್ಲೋ ಇಲ್ಲ. ನಮ್ಮೊಳಗೇ ಇದ್ದಾರೆ. ಅವರನ್ನು ಹತ್ತಿಕ್ಕಬೇಕಾದವರು ನಾವೇ! ಅವಿವೇಕದ ರಕ್ಕಸನನ್ನು ಹತ್ತಿಕ್ಕಲು ವಿವೇಕದ ಪರಮಾತ್ಮನೇ ಬರಬೇಕು. ವಿವೇಚಿಸಿ ನಡೆಯುವುದು, ಸತ್ಸಂಗ, ಸಜ್ಜನ ಸಹವಾಸ, ಸಾತ್ವಿಕ ಆಹಾರ, ಸಂಸ್ಕಾರಯುತ ಮನೆ, ಉತ್ತಮ ಮಾರ್ಗದರ್ಶನ, ನೈತಿಕ ಮೌಲ್ಯ ಬೋಧಿಸುವ ಶಿಕ್ಷಣ- ಇವು ಒಳಗಿನ ರಾಕ್ಷಸರನ್ನು ಹತ್ತಿಕ್ಕಲು ಇರುವ ಪರಿಣಾಮಕಾರಿ ಆಯುಧಗಳಾದರೆ, ಹೊರಗಿನ ರಾಕ್ಷಸರನ್ನು ನಿಯಂತ್ರಿಸಲು ಉಪಯೋಗಿಸಬಹುದಾದ ಆಯುಧಗಳೆಂದರೆ ಸಾಮ, ದಾನ, ಭೇದ ಮತ್ತು ದಂಡ. ಒಬ್ಬ ದುರ್ಜನನನ್ನು ಮನ ಪರಿವರ್ತಿಸಿ, ಯೋಗ್ಯ ತಿಳುವಳಿಕೆ ನೀಡಿ ಸಜ್ಜನನನ್ನಾಗಿಸಿದರೆ, ಒಬ್ಬ ರಾಕ್ಷಸ ಕಡಿಮೆಯಾಗುವುದರ ಜೊತೆಗೆ ಒಬ್ಬ ಸಜ್ಜನನ ಸಂಖ್ಯೆ ಹೆಚ್ಚಾಗುತ್ತದೆ. ಮನ ಪರಿವರ್ತನೆ ಸಾಧ್ಯವೇ ಇಲ್ಲ, ಅವನಿಂದ ಸಮಾಜಕ್ಕೆ ಹಾನಿ ತಪ್ಪಿದ್ದಲ್ಲ ಅನ್ನಿಸಿದರೆ, ಸಾಮ, ದಾನ, ಭೇದದ ಪ್ರಯೋಗಗಳು ಉಪಯೋಗಕ್ಕೆ ಬರದಿದ್ದರೆ ದಂಡಪ್ರಯೋಗ ಸಮಾಜದ ದೃಷ್ಟಿಯಿಂದ ಅನಿವಾರ್ಯವಾಗುತ್ತದೆ. ಮೌಲ್ಯಯುತ ಆಡಳಿತ ಬಂದರೆ ಇದೂ ಸಹ ಸಾಧ್ಯ.
-ಕ.ವೆಂ.ನಾಗರಾಜ್.
****************
ದಿನಾಂಕ 11.05.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಆಗಸ್ಟ್ 1, 2016

ಚಿಂತೆಯ ಸಂತೆಯಲ್ಲಿ!


     ಅನುಗಾಲವೂ ಚಿಂತೆ ಜೀವಕೆ ಎಂದು ದಾಸರು ಹೇಳಿರುವುದು ಸತ್ಯಸ್ಯ ಸತ್ಯವಾಗಿದೆ. ಪುಣ್ಯಕೋಟಿ ಗೋವಿನ ಹಾಡನ್ನು ಹೀಗೆ ಹಾಡಬಹುದೇನೋ - ಚಿಂತೆಯೇ ನಮ್ಮ ತಾಯಿ ತಂದೆ, ಚಿಂತೆಯೇ ನಮ್ಮ ಬಂಧು ಬಳಗ, ಚಿಂತೆಯಿಲ್ಲದ ಮನುಜನಿದ್ದೊಡೆ, ಅವನೆ ನಿಜ ಪರಮಾತ್ಮನು! ಈ ಚಿಂತೆ ಅನ್ನುವುದು ಮನಸ್ಸಿನಲ್ಲಿ ಮುಂಬರಲಿರುವ ಅಪಾಯಗಳು, ಅಹಿತಕರ ಸನ್ನಿವೇಶಗಳನ್ನು ಎದುರಿಸುವ ಉಪಾಯಗಳ ಕುರಿತು ನಡೆಯುವ ತಾಕಲಾಟಗಳು. ಆ ಸಮಸ್ಯೆಗಳು ಆರೋಗ್ಯದ್ದಾಗಿರಬಹುದು, ವೃತ್ತಿಗೆ ಸಂಬಂಧಿಸಿದ್ದಿರಬಹುದು, ಆರ್ಥಿಕ, ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳಿರಬಹುದು, ಇಂತಹ ಮತ್ತಾವುದೋ ಆಗಿರಬಹುದು. ನೈಜ ಸಮಸ್ಯೆಗಿಂತ ಕಾಲ್ಪನಿಕ ಸಮಸ್ಯೆ ಮನುಷ್ಯನನ್ನು ಹಿಂಡಿಬಿಡುತ್ತದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚಿಂತೆ ಸಮಸ್ಯೆಯನ್ನು ಎದುರಿಸಿ ಗೆಲ್ಲಲು ಸಹಾಯಕವಾಗಬಹುದು. ಆದರೆ, ಹೀಗಾದರೆ ಏನು?, ಹಾಗಾದರೆ ಏನು?, ಸಮಸ್ಯೆಗೆ ಪರಿಹಾರವೇ ಇಲ್ಲದಿದ್ದರೆ ಏನು ಮಾಡುವುದು? ಇತ್ಯಾದಿ ತಾಕಲಾಟಗಳು ಅಪಾಯಕಾರಿ. ಅವು ಜೀವನದಲ್ಲಿನ ಆಸಕ್ತಿಯನ್ನು ಕಳೆದುಬಿಡುತ್ತವೆ, ಆತಂಕ, ದುಗುಡ, ಉದ್ವೇಗಗಳು ಶಕ್ತಿಯನ್ನು ಬಸಿದುಬಿಡುತ್ತವೆ, ದಿನನಿತ್ಯದ ಚಟುವಟಿಕೆಗಳು ಏರುಪೇರಾಗುವಂತೆ ಮಾಡುತ್ತವೆ, ನಿದ್ದೆ ಬರುವದಿಲ್ಲ, ಖಿನ್ನತೆ ಕಾಡುತ್ತದೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ರಚನಾತ್ಮಕ ಶಕ್ತಿ ಕುಂದುತ್ತದೆ. ಸಮಸ್ಯೆಯನ್ನು ಆಪ್ತರೊಡನೆ ಹಂಚಿಕೊಂಡರೆ ಪರಿಹಾರ ಹುಡುಕಲು ಸುಲsವಾಗಬಹುದು. ಒಳ್ಳೆಯ ಸಹವಾಸಗಳು, ಒಳ್ಳೆಯ ಆಹಾರ, ಒಳ್ಳೆಯ ನಿದ್ದೆ ಚಿಂತೆಯನ್ನು ಹಗುರಗೊಳಿಸಬಲ್ಲವು. ಆದರೆ, ಈ ಚಿಂತೆ ಇದಕ್ಕೆ ಅವಕಾಶ ಕೊಟ್ಟೀತೇ ಅನ್ನುವುದೂ ಪ್ರಶ್ನೆಯಾಗುತ್ತದೆ.
     ಸತತ ಚಿಂತೆಯಿಂದ ನರಳುವವರು ಚಿಂತೆಯ ಬಗ್ಗೆ ಧನಾತ್ಮಕವಾದ ಮತ್ತು ಋಣಾತ್ಮಕವಾದ ನಂಬಿಕೆಗಳನ್ನು ಹೊಂದಿರುತ್ತಾರೆ. ಸತತವಾಗಿ ಚಿಂತಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಅದು ನಿರಂತರವಾಗಿರುತ್ತದೆ ಎಂಬುದು ಋಣಾತ್ಮಕ ನಂಬಿಕೆಯಾಗಿದೆ. ಚಿಂತಿಸುವುದರಿಂದ ಕೆಟ್ಟ ಸಂಗತಿಗಳನ್ನು ನಿವಾರಿಸಿಕೊಳ್ಳಬಹುದು, ಸಮಸ್ಯೆಗಳನ್ನು ಪರಿಹರಿಸುತ್ತದೆ, ಅತಿ ಕೆಟ್ಟ ಸನ್ನಿವೇಶಗಳಲ್ಲೂ ಸಿದ್ಧರಿರುವಂತೆ ಮಾಡುತ್ತದೆ, ಸಮಸ್ಯೆಗೆ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಧನಾತ್ಮಕ ನಂಬಿಕೆಯೆನಿಸುತ್ತದೆ. ಈ ಎರಡೂ ಒಳ್ಳೆಯವಲ್ಲ. ಋಣಾತ್ಮಕ ನಂಬಿಕೆ ಆತಂಕವನ್ನು ಹೆಚ್ಚಿಸುತ್ತದೆ, ಚಿಂತೆ ಮುಂದುವರೆಯುವಂತೆ ಮಾಡುತ್ತದೆ. ಧನಾತ್ಮಕ ನಂಬಿಕೆ ಸಹ ಅಷ್ಟೇ ಹಾನಿ ತರಬಲ್ಲದು. ಚಿಂತೆ ಮಾಡುವುದರಿಂದ ಸಮಸ್ಯೆ ಪರಿಹಾರಕ್ಕೆ ಸಹಾಯವಾಗುತ್ತದೆ ಎಂಬ ಭಾವನೆ ಚಿಂತಿಸುವ ಸ್ವಭಾವವನ್ನು ಉತ್ತೇಜಿಸುತ್ತದೆ. ಮನಸ್ಸಿನ ಮೇಲೆ ಹತೋಟಿ ಸಾಧಿಸಬೇಕೆಂದರೆ ಚಿಂತೆ ಅನ್ನುವುದು ಒಂದು ಸಮಸ್ಯೆ, ಪರಿಹಾರವಲ್ಲ ಎಂಬುದನ್ನು ಅರಿಯಬೇಕಿದೆ.
     ಸತತ ಚಿಂತೆಯಿಂದ ಪಾರಾಗುವುದು ಸುಲಭವಲ್ಲವೆಂದು ಅರಿವಿಗೆ ಬಂದಾಗ ನಿರಾಶೆ ಮೂಡುತ್ತದೆ. ಚಿಂತೆಯನ್ನು ಮರೆಯುವ ಪ್ರಯತ್ನ ಅಷ್ಟು ಸುಲಭವಲ್ಲ. ಮರೆಯಬೇಕೆಂದಷ್ಟೂ ಚಿಂತೆಯ ಸುತ್ತಲೇ ಮನಸ್ಸು ಸುಳಿದಾಡುತ್ತಿರುತ್ತದೆ. ಆದ್ದರಿಂದ ಚಿಂತೆಯನ್ನು ಮರೆಯಲು ಪ್ರಯತ್ನಿಸುವ ಬದಲು ಅದನ್ನು ನಿಯಂತ್ರಿಸಲು ಬೇರೆ ಮಾರ್ಗವನ್ನೇ ಹುಡುಕಬೇಕಿದೆ. ಚಿಂತೆ ಮಾಡಲು ದಿನದ ಒಂದು ನಿರ್ದಿಷ್ಟ ಅವಧಿಯನ್ನು, ಉದಾಹರಣೆಗೆ ಸಂಜೆಯ ೫ ಗಂಟೆಯಿಂದ ೬ ಗಂಟೆಯವರೆಗೆ ಅಥವ ರಾತ್ರಿಯ ೯ ಗಂಟೆಯಿಂದ ೧೦ ಗಂಟೆಯವರೆಗೆ, ಹೀಗೆ ನಿಗದಿಪಡಿಸಿಕೊಂಡರೆ ಮನಸ್ಸು ಸ್ವಲ್ಪ ಮಟ್ಟಿಗೆ ಚಿಂತೆಯನ್ನು ಬದಿಗಿಟ್ಟು ಮುಂದೂಡಲು ಸಹಾಯವಾಗುತ್ತದೆ. ಚಿಂತೆಗಾಗಿ ಸಮಯವಿರುವುದರಿಂದ ಇತರ ಸಂಗತಿಗಳಿಗೆ ಗಮನ ಕೊಡೋಣ ಎಂದು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಹೀಗೆ ಮುಂದೂಡುವ ಶಕ್ತಿ ರೂಢಿಸಿಕೊಂಡರೆ ಚಿಂತೆಯನ್ನು ನಿಯಂತ್ರಿಸುವ ಶಕ್ತಿ ಇದೆಯೆಂಬ ಅರಿವು ಮೂಡಿ ಹುರುಪು ಬರುತ್ತದೆ.
     ಮುಂದಿನ ಹಂತವಾಗಿ ಸಮಸ್ಯೆಯ ಅಂತರಾಳಕ್ಕಿಳಿದು ಪರಿಸ್ಥಿತಿಯ ಅವಲೋಕನ ಮಾಡಿ, ಏನು ಮಾಡಬಹುದೆಂಬ ಬಗ್ಗೆ ಯೋಚಿಸಬೇಕು ಮತ್ತು ಅದನ್ನು ಕ್ರಿಯಾರೂಪಕ್ಕೆ ತರುವ ಮಾರ್ಗಗಳನ್ನು ಹುಡುಕಬೇಕು. ಈ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕು.
***ಸಮಸ್ಯೆ ಕೇವಲ ಊಹಾತ್ಮಕ ಮತ್ತು ಕಲ್ಪನೆಯದೇ?
*** ಕಲ್ಪನೆಯ ಸಮಸ್ಯೆಯಾದರೆ, ಅದು ನಿಜಕ್ಕೂ ಸಂಭವಿಸಬಹುದೇ?
*** ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬಹುದೇ ಅಥವ ಅದನ್ನು ಎದುರಿಸಲು ಸಿದ್ಧರಾಗಿದ್ದೇವೆಯೇ? ಅಥವ ಅದು ನಮ್ಮ ನಿಯಂತ್ರಣಕ್ಕೆ ಹೊರತಾದುದೇ?
ಪರಿಹರಿಸಬಹುದಾದ ಸಮಸ್ಯೆಯಾದರೆ ಏನು ಮಾಡಬಹುದೆಂಬ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಜನೆಗಳನ್ನು ರೂಪಿಸಬೇಕು. ಅದರ ಬಗ್ಗೆಯೇ, ಪರಿಪೂರ್ಣ ಪರಿಹಾರದ ಬಗ್ಗೆಯೇ, ತಲೆ ಕೆಡಿಸಿಕೊಳ್ಳದೆ, ನಮ್ಮ ನಿಯಂತ್ರಣಕ್ಕೆ ಹೊರತಾದ ಸಂಗತಿಗಳನ್ನು ಬಿಟ್ಟು ಉಳಿದಂತೆ ಏನು ಬದಲಾವಂಣೆ ತರಬಹುದೋ ಅಂತಹುದರ ಬಗ್ಗೆ ಕೇಂದ್ರೀಕರಿಸಿ ಪ್ರಯತ್ನಿಸಬೇಕು. ಒಮ್ಮೆ ಕಾರ್ಯಯೋಜನೆ ಸಿದ್ಧಪಡಿಸಿಕೊಂಡು ಪ್ರವೃತ್ತರಾದೆವೆಂದರೆ ಅರ್ಧ ಚಿಂತೆಯಿಂದ ಮುಕ್ತರಾದಂತೆಯೇ ಸರಿ.
     ಪರಿಹರಿಸಲಾಗದ ಸಮಸ್ಯೆಗಳಿದ್ದರೆ ಏನು ಮಾಡುವುದು? ಇಂತಹ ಸಂದರ್ಭಗಳಲ್ಲಿ, ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದು ಅವಶ್ಯಕ. ಚಿಂತೆ ಸಮಸ್ಯೆ ಪರಿಹರಿಸಲಾಗದಿದ್ದರೂ ಭಾವನೆಗಳನ್ನು ನಿಯಂತ್ರಿಸಲು ಸಹಕಾರಿ. ಆದರೆ ಅದು ಅಹಿತಕರ ಭಾವನೆಗಳನ್ನು ಹೋಗಲಾಡಿಸಲಾರದು. ಈ ವಿಷವೃತ್ತದಿಂದ ಹೊರಬರಬೇಕೆಂದರೆ ಅಹಿತಕರ ಭಾವನೆಗಳನ್ನು ಅವು ಇರುವಂತೆ ಒಪ್ಪಿಕೊಳ್ಳಬೇಕಷ್ಟೆ. ಈ ಭಾವನೆಗಳು ಜೀವನದಂತೆಯೇ ಗೋಜಲು ಗೋಜಲಾಗಿರುತ್ತವೆ ಎಂಬ ಸತ್ಯ ಮನಗಾಣಬೇಕು. ಭಾವನೆಗಳು ಯಾವಾಗಲೂ ಅರ್ಥವತ್ತಾಗಿರಲಾರದು, ಹಿತವಾಗಿರಲಾರದು. ಅವು ಮಾನವಸಹಜವೆಂದು ತಿಳಿದು ಅವುಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದರ ಬಗ್ಗೆ ಗಮನಿಸಬೇಕು.
     ಸತತ ಚಿಂತೆಯಿಂದ ಬಳಲುತ್ತಿರುವವರ ಮೂಲ ಸಮಸ್ಯೆಯೆಂದರೆ ಅವರು ಅನಿಶ್ಚಿತತೆಯನ್ನು ತಾಳಿಕೊಳ್ಳಲಾರರು. ಮುಂದೆ ಏನಾಗಬಹುದು ಎಂಬ ಕುರಿತು ಅವರು ಶೇಕಡ ನೂರರಷ್ಟು ಖಚಿತಪಡಿಸಿಕೊಳ್ಳಬಯಸುವವರು. ಅದನ್ನು ತಿಳಿಯುವ ಸಲುವಾಗಿಯೇ ಮತ್ತು ಅಂತಹ ಅಹಿತಕರ ಸನ್ನಿವೇಶಗಳನ್ನು ತಡೆಯುವುದು ಹೇಗೆ ಎಂಬ ಕುರಿತಾಗಿಯೇ ಚಿಂತೆಯಿಂದ ಬಳಲುತ್ತಾರೆ. ಆದರೆ ಸಮಸ್ಯೆಯೆಂದರೆ ಅಂತಹ ಚಿಂತೆ ಉಪಯೋಗಕ್ಕೆ ಬರುವುದಿಲ್ಲ. ಮುಂದೆ ಆಗಬಹುದಾದ ಸಂಗತಿಗಳ ಬಗ್ಗೆ ಚಿಂತಿಸುವುದರಿಂದ ಭವಿಷ್ಯ ತಿಳಿಯಲಾಗದು. ಹಾಗೆ ಚಿಂತಿಸುವುದರಿಂದ ಒಳ್ಳೆಯ ಸ್ಥಿತಿ ಬಂದೀತೆಂದು ಭಾವಿಸುವುದಾದರೂ, ಅದು ಕೇವಲ ಭ್ರಮೆಯಾಗಿರುತ್ತದೆ. ಕೆಟ್ಟ ಸಂಭವನೀಯ ಸಂಗತಿಗಳ ಬಗ್ಗೆ ಚಿಂತಿಸುವುದರಿಂದ ಅದನ್ನು ನಡೆಯುವುದನ್ನು ನಿಲ್ಲಿಸಲಾಗದು. ಅಂತಹ ಚಿಂತೆ ನಮ್ಮ ಈಗಿನ ಸುಖ-ಸಂತೋಷಗಳನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಈಗ ಏನು ಮಾಡಬಹುದೆಂಬ ಬಗ್ಗೆ ಮಾತ್ರ ಯೋಚಿಸಿ, ಕ್ರಮೇಣ ನಿಶ್ಚಿತ ಮತ್ತು ಉಪಯುಕ್ತ ಕ್ರಮಗಳ ಬಗ್ಗೆ ಮುಂದುವರೆಯುವುದು ಸೂಕ್ತ.
     ಸತತ ಚಿಂತೆಯಿಂದ ಬಳಲುವವರಿಗೆ ಸಮಸ್ಯೆ ವಾಸ್ತವಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ತೋರುತ್ತದೆ. ಸಮಸ್ಯೆಯನ್ನು ನಿಭಾಯಿಸುವುದು ದುಸ್ತರವಾಗಿ ತೋರುತ್ತದೆ. ಸಮಸ್ಯೆಯ ಅಪಾಯಗಳ ಕುರಿತು ಯಾವ ಸಂಗತಿ ಭಯಕ್ಕೆ ಕಾರಣವಾಗಿದೆಯೋ ಅದನ್ನು ವಸ್ತುಸ್ಥಿತಿಯೆಂದು ಭಾವಿಸದೆ, ಅದರ ಕುರಿತು ಸಾಧಕ-ಬಾಧಕಗಳ ಕುರಿತು ಪರಿಶೀಲಿಸಿದರೆ ಸಮತೋಲಿತವಾಗಿ ಯೋಚಿಸಲು ಸಾಧ್ಯವಾಗಬಹುದು. ಈ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ:
*** ಚಿಂತೆಗೆ ಕಾರಣವಾದ ಸಂಗತಿ ಎಷ್ಟರಮಟ್ಟಿಗೆ ಸತ್ಯ? ಎಷ್ಟು ಅಸತ್ಯ?
*** ಈಗಿನ ಪರಿಹಾರಕ್ಕಿಂತ ಬೇರೆ ರೀತಿಯ ಪರಿಹಾರಕ್ಕೆ ಅವಕಾಶವಿದೆಯೇ?
*** ಭಯಕ್ಕೆ ಕಾರಣವಾದ ಸಂಗತಿ ನಡೆಯುವ ಸಾಧ್ಯತೆ ಎಷ್ಟು?
*** ಅಂತಹ ಸಾಧ್ಯತೆ ಕಡಿಮೆಯಿದ್ದರೆ, ಇತರ ಪರಿಣಾಮಗಳಾದರೂ ಎಂತಹವು?
*** ಚಿಂತಿಸುವುದು ಸಹಕಾರಿಯೇ? ಚಿಂತೆ ಮಾಡುವುದರಿಂದ ಎಷ್ಟರ ಮಟ್ಟಿಗೆ ಅನುಕೂಲ/ತೊಂದರೆ?
*** ಇಂತಹುದೇ ಸಮಸ್ಯೆ ನನ್ನ ಸ್ನೇಹಿತನಿಗೆ ಇದ್ದರೆ ನಾನು ಏನು ಸಲಹೆ ಕೊಡುತ್ತಿದ್ದೆ?
     ಸಮಸ್ಯೆ ಉಂಟುಮಾಡುವವರಿಂದ ಹಿತಕರವಾದ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಸಮಸ್ಯೆ ಉಲ್ಬಣವಾಗದಂತೆ ಅಂತಹವರೊಂದಿಗೆ ಜಾಗ್ರತೆಯಿಂದ ವ್ಯವಹರಿಸಬೇಕಾಗುತ್ತದೆ. ಆಪ್ತರು, ಸ್ನೇಹಿತರು, ಹಿತಚಿಂತಕರುಗಳನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ಚಿಂತೆಗೆ ಭವಿಷ್ಯದಲ್ಲಿ ಏನಾಗಬಹುದು ಮತ್ತು ಅದಕ್ಕೆ ನಾವು ಏನು ಮಾಡಬೇಕು ಎಂಬುದೇ ಮುಖ್ಯ ಕಾರಣವಾಗಿದೆ. ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಮತ್ತು ಅದಕ್ಕೆ ತರಬೇತಿ ನೀಡಿದರೆ ಸಮಸ್ಯೆ ಹಗುರವಾದೀತು. ಮನಸ್ಸಿನ ಆತಂಕಗಳು, ಉದ್ವೇಗಗಳನ್ನು ಉಪೇಕ್ಷಿಸದೆ, ಹತ್ತಿಕ್ಕದೆ ಅವುಗಳನ್ನು ಹೊರಗಿನ ವ್ಯಕ್ತಿಯ ದೃಷ್ಟಿಯಿಂದ ನೋಡುವ ಅಭ್ಯಾಸ ಬೆಳೆಸಿಕೊಂಡರೆ ಒಳಿತಾದೀತು. ಇಂತಹ ಅಭ್ಯಾಸ ಬೆಳೆಸಿಕೊಂಡರೆ ಸಮಸ್ಯೆಗಳು ಮೋಡ ಆಕಾಶದಲ್ಲಿ ಸರಿದುಹೋದಂತೆ ಸರಿದು ಹೋಗಬಹುದು. ಚಿಂತೆ ಭವಿಷ್ಯದ ದುಃಖಗಳನ್ನು ನಿವಾರಿಸುತ್ತದೋ ಇಲ್ಲವೋ ತಿಳಿಯದು, ಆದರೆ ಇಂದಿನ ಸಂತೋಷವನ್ನು ಮಾತ್ರ ಹಾಳು ಮಾಡುತ್ತದೆ. ಮುಂದಿನ ಸಂಗತಿಗಳಿಗಿಂತ ಇಂದಿನ ಪರಿಸ್ಥಿತಿಯ ಬಗ್ಗೆ ಗಮನ ನೀಡಿದರೆ ಮುಂದಿನದೂ ಸರಾಗವಾಗಿ ಸಾಗಬಹುದು. ಹಳೆಯ ಚಿಂತೆಗಳಿಗೆ ಮನಸ್ಸು ಮರಳಿದರೂ, ವಿಚಲಿತರಾಗದೆ ಪ್ರಯತ್ನ ಮುಂದುವರೆಸಿದರೆ ಚಿಂತೆಯಿಂದ ಮುಕ್ತವಾಗುವ ದಾರಿ ಸಿಕ್ಕೀತು. ಚಿಂತೆಯದೇ ಚಿಂತೆಯಾಗಿರುವಾಗ ಪ್ರಯತ್ನಪಟ್ಟು ಚಿಂತಿಸದಿರೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 04.05.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: