ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಜುಲೈ 29, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -11

ದೃಷ್ಟ್ವಾ ರೂಪೇ ವ್ಯಾಕರೋತ್ ಸತ್ಯಾನೃತೇ ಪ್ರಜಾಪತಿಃ|
ಅಶ್ರದ್ಧಾಮನೃತೇsದಧಾಚ್ಛ,ದ್ಧಾಂ ಸತ್ಯೇ ಪ್ರಜಾಪತಿಃ|| (ಯಜು.19.77)
     [ಪ್ರಜಾಪತಿಃ] ಜೀವರೆಲ್ಲರ ಪಾಲಕನಾದ ಭಗವಂತನು [ರೂಪೇ ದೃಷ್ಟ್ವಾ] ಸತ್ಯಾಸತ್ಯಗಳ ರೂಪಗಳನ್ನು ನೋಡಿ [ಸತ್ಯಾನೃತೇ ವ್ಯಾಕರೋತ್] ಸತ್ಯವನ್ನೂ ಅಸತ್ಯವನ್ನೂ ಬೇರ್ಪಡಿಸಿದನು. [ಅನೃತೇ] ಅಸತ್ಯದಲ್ಲಿ [ಅಶ್ರದ್ಧಾಂ ಅದಧಾತ್] ಅಶ್ರದ್ಧೆಯನ್ನು ನೆಲೆಗೊಳಿಸಿದನು. [ಪ್ರಜಾಪತಿಃ] ಜೀವಮಾತ್ರರ ಸ್ವಾಮಿಯಾಧ ಭಗವಂತನು [ಸತ್ಯೇ] ಸತ್ಯದಲ್ಲಿ [ಶ್ರದ್ಧಾಂ ಅದಧಾತ್]ಶ್ರದ್ಧೆಯನ್ನು ನಿರೂಪಿಸಿದನು. ಸತ್ಯದಲ್ಲಿ ಶ್ರದ್ಧೆಯಿಡಬೇಕು.

ಬುಧವಾರ, ಜುಲೈ 28, 2010

ಸ್ವಾರ್ಥ         
ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು

ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ

ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ
ನಗುವು ಬಂದೀತೆಂದು ಹಲ್ಲು ಮುರಿದಿತ್ತು

ಓಡಿ ಹೋದಾರೆಂದು ಕಾಲ ತುಂಡರಿಸಿತ್ತು
ಬೇಡವೆಂದವರ ಕೈಯ ಕಡಿದಿತ್ತು

ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನು ಸೀಳಿ ಗಹಗಹಿಸಿ ನಕ್ಕಿತ್ತು

ನೊಂದು ಬೆಂದ ಅತೃಪ್ತ ಆತ್ಮಗಳು
ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು
                             -ಕ.ವೆಂ.ನಾಗರಾಜ್

[ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.]

ವೇದೋಕ್ತ ಜೀವನ ಪಥ - ಜೀವನ ಬುನಾದಿ -10

ಅಥರ್ವ ವೇದ ಭಕ್ತನ ಬಾಯಿಯಿಂದ ಪ್ರಭುವಿನ ಮುಂದೆ ಈ ಬೇಡಿಕೆಯನ್ನು ಮೂಡಿಸುತ್ತದೆ:

ಮೇಧಾಂ ಸಾಯಂ ಮೇಧಾಂ ಪ್ರಾತ್ರರ್ಮೇಧಾಂ ಮಧ್ಯಂದಿನಂ ಪರಿ|
ಮೇಧಾಂ ಸೂರ್ಯಸ್ಯ ರಶ್ಮಿಭರ್ವಚಸಾ ವೇಶಯಾಮಹೇ|| ಅಥರ್ವ.6.108.5)

     [ಸಾಯಂ] ಸಂಜೆ, [ಮೇಧಾಂ] ಬುದ್ಧಿಯನ್ನು [ಆವೇಶಯಾಮಹೇ] ಜೀವನಗಳಿಗೆ ಇಳಿಸಿಕೊಳ್ಳುತ್ತೇವೆ. [ಪ್ರಾತಃ] ಬೆಳಿಗ್ಗೆ [ಮೇಧಾಂ] ಬುದ್ಧಿಯನ್ನು ಜೀವನಗತಮಾಡಿಕೊಳ್ಳುತ್ತೇವೆ. [ಮಧ್ಯಂದಿನಂ ಪರಿ] ಮಧ್ಯಾಹ್ನದಲ್ಲಿಯೂ [ಮೇಧಾಂ] ಬುದ್ಧಿಶಕ್ತಿಯನ್ನೇ ತುಂಬಿಕೊಳ್ಳುತ್ತೇವೆ. [ಸೂರ್ಯಸ್ಯ ರಶ್ಮಿ ಭಿಃ] ಸೂರ್ಯನ ಕಿರಣಗಳೊಂದಿಗೆ [ವಚಸಾ] ವಿದ್ವಜ್ಜನರ ಉಪದೇಶ ವಚನಗಳಿಂದ [ಮೇಧಾಂ ಆವೇಶಯಾಮಹೇ] ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇವೆ. ಬೇರೆ ಮತ-ಮತಾಂತರಗಳ ಶಾಸ್ತ್ರಗಳಿಗೂ, ಭಗವದ್ದತ್ತವಾದ ವೈಜ್ಞಾನಿಕ ಶಾಸ್ತ್ರಗಳಾದ ವೇದಗಳಿಗೂ ಇರುವ ವ್ಯತ್ಯಾಸವಿದೇ. ಭಕ್ತನು ಭಗವಂತನಲ್ಲಿ ಸ ಮೇ ಶ್ರದ್ಧಾಂ ಚ ಮೇಧಾಂ ಚ ಜಾತವೇದಾ| ಪ್ರ ಯಚ್ಛತು|| (ಅಥರ್ವ.19.64.1) [ಸ ಜಾತವೇದಾ] ಆ ಸರ್ವವ್ಯಾಪಕ ಸರ್ವಜ್ಞನಾದ ಭಗವಂತನು [ಮೇ] ನನಗೆ [ಶ್ರದ್ಧಾಂ ಚ ಮೇಧಾಂ ಚ ಪ್ರಯಚ್ಛತು] ಶ್ರದ್ಧೆಯನ್ನೂ ಬುದ್ಧಿಯನ್ನೂ ಕರುಣಿಸಲಿ - ಎಂದೇ ಬಿನ್ನಹ ಮಾಡಿಸುತ್ತದೆ. ಬುದ್ಧಿಸಂಗತವಾದ ವೇದಗಳು ಎಷ್ಟು ಸೊಗಸಾಗಿ ಶ್ರದ್ಧೆಗೆ ಸಲ್ಲಬೇಕಾದ ಸ್ಥಳವನ್ನು ನಿರೂಪಿಸುತ್ತದೆ ನೋಡಿರಿ.

ಭಾನುವಾರ, ಜುಲೈ 25, 2010

ಏನಂತೆ? ? . . .! !

ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ!
ಗೆಲುವಿನ ದಾರಿಯದು ಕಂಡಿತಂತೆ!!

ಏನಂತೆ? ಬಿದ್ದರೇನಂತೆ?
ನೋವೆಂಬುದೇನೆಂದು ತಿಳಿಯಿತಂತೆ!
ನೋಡಿ ನಡೆಯಲು ಕಲಿತೆನಂತೆ!!

ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ!
ಹಳಸಿದ ಅನ್ನವೂ ರುಚಿಯಂತೆ!!

ಏನಂತೆ? ದುಃಖವಾದರೇನಂತೆ?
ಸಂತೋಷದ ದಾರಿ ಸಿಕ್ಕಿತಂತೆ!
ಸುಖವೆಂಬುದೊಳಗೇ ಇದೆಯಂತೆ!!

ಏನಂತೆ? ತಪ್ಪಾದರೇನಂತೆ?
ನಡೆ ತಿದ್ದಿ ಸಾಗುವ ಮನಸಂತೆ!
ತಲೆ ಎತ್ತಿ ನಡೆಯುವ ಕನಸಂತೆ!

ಏನಂತೆ? ನಿಂದಿಸಿದರೇನಂತೆ?
ನಿಂದಕರ ಬಾಯಿ ಹೊಲಸಂತೆ!
ನಾನಾರೆಂದು ನನಗೆ ತಿಳಿಯಿತಂತೆ!!

ಏನಂತೆ? ಸೂರಿಲ್ಲದಿರೇನಂತೆ?
ಲೋಕವೆ ನನ್ನ ಮನೆಯಂತೆ!
ಬಹು ದೊಡ್ಡ ಮನೆಯೇ ನನ್ನದಂತೆ!!

ಏನಂತೆ? ದಿಕ್ಕಿಲ್ಲದಿರೇನಂತೆ?
ಜನರೆಲ್ಲ ನನ್ನ ಬಂಧುಗಳಂತೆ!
ಬಲು ದೊಡ್ಡ ಸಂಸಾರ ನನ್ನದಂತೆ!!

? ? ! !

ವೇದೋಕ್ತ ಜೀವನ ಪಥ - ಜೀವನ ಬುನಾದಿ -9

     ವೈಜ್ಞಾನಿಕ ಪರಿಪಾಟಿಯ ಪ್ರಬಲ ಪೋಷಕಗಳಾದ ವೇದಗಳು ಅಂಧವಿಶ್ವಾಸಕ್ಕೆ, ಕಣ್ಣುಮುಚ್ಚಿ ನಡೆಯುವ ಅಂಧಪರಂಪರೆಗೆ ಘೋರವಿರೋಧಿಗಳಾಗಿವೆ. ಶ್ರದ್ಧೆಯ ಶತ್ರು ವೇದಗಳಲ್ಲ. ವೇದಾನುಯಾಯಿಗಳ ಹೃದಯಾಂತರಾಳದಿಂದ ವೇದಗಳು ಈ ಪ್ರಾರ್ಥನೆಯನ್ನು ಹೊರಡಿಸುತ್ತವೆ:
ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯಂದಿನಂ ಪರಿ |
ಶ್ರದ್ಧಾಂ ಸೂರ್ಯಸ್ಯ ನಿಮೃಚಿ ಶ್ರದ್ಧೇ ಶ್ರದ್ಧಾಪಯೇಹ ನಃ ||
(ಋಕ್.10.151.5)

     [ಪ್ರಾತಃ] ಬೆಳಗಿನ ಹೊತ್ತು {ಶ್ರದ್ಧಾಂ ಹವಾಮಹೇ] ಶ್ರದ್ಧೆಯನ್ನು ಆಹ್ವಾನಿಸುತ್ತೇವೆ. [ಮಧ್ಯಂದಿನಂ ಪರಿ] ನಡುಹಗಲಿನಲ್ಲಿಯೂ [ಶ್ರದ್ಧಾಂ] ಶ್ರದ್ಧೆಯನ್ನು ಆಹ್ವಾನಿಸುತ್ತೇವೆ. [ಸೂರ್ಯಸ್ಯ ನಿಮೃಚಿ] ಸೂರ್ಯನ ಅಸ್ತಕಾಲದಲ್ಲಿಯೂ [ಶ್ರದ್ಧಾಂ] ಶ್ರದ್ದೆಯನ್ನೇ ಆವಾಹನೆ ಮಾಡುತ್ತೇವೆ. [ಶ್ರದ್ಧೇ] ಓ ಶ್ರದ್ಧೇ! [ಇಹ] ಈ ಜಗತ್ತಿನಲ್ಲಿ [ನ ಶ್ರದ್ಧಾಪಯ] ನಮ್ಮನ್ನು ಶ್ರದ್ಧಾನ್ವಿತರನ್ನಾಗಿ ಮಾಡು. 
     ಶ್ರದ್ಧೆ ಬೇಕು. ಆದರೆ ವೈಜ್ಞಾನಿಕವಾದ ದೃಷ್ಟಿಯನ್ನೇ ಬೆಳೆಸಿಕೊಳ್ಳಬೇಕೆಂದು ಬೋಧಿಸುವ ವೇದಗಳು, ಬುದ್ಧಿಯ, ಮೇಧಾಶಕ್ತಿಯ ಬೆಂಬಲವಿಲ್ಲದಿದ್ದರೆ ಆ ಶ್ರದ್ಧೆ ಅಂಧವಿಶ್ವಾಸವಾಗಿ ಮಾರ್ಪಡುವುದರಲ್ಲಿ ವಿಳಂಬವಾಗದೆಂಬುದನ್ನು ಬಲ್ಲವು.

ಶುಕ್ರವಾರ, ಜುಲೈ 23, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -8

ವೇದ ಮತ್ತೆ ಮತ್ತೆ ಸಾರುತ್ತಲಿದೆ:
ಗೂಹತಾ ಗುಹ್ಯಂ ತಮೋ ವಿ ಯಾತ ವಿಶ್ವಮತ್ರಿಣಮ್| ಜ್ಯೋತಿಷ್ಕರ್ತಾ ಯದುಶ್ಮಸಿ|| (ಋಕ್.1.86.10)
     
[ಗುಹ್ಯಂ ತಮಮ್] ಗೂಢವಾದ ಅಂತರಿಕ ತಮಸ್ಸನ್ನು, ಅಜ್ಞಾನಾಂಧಕಾರವನ್ನು, [ಗೂಹತ] ಅದುಮಿ ಹಾಕಿರಿ. [ಅತ್ರಿಣಂ ವಿಶ್ವಮ್] ಆತ್ಮನನ್ನು ನುಂಗಿ ಹಾಕುವ ಸಮಸ್ತ ದುರ್ಗುಣಗಳನ್ನು [ವಿಯಾತ] ದೂರಕ್ಕಟ್ಟಿರಿ. [ಯತ್ ಉಶ್ಮಸಿ] ಯಾವುದನ್ನು ಅಪೇಕ್ಷಿಸುತ್ತೇವೋ, [ಜ್ಯೋತಿಃ ಕರ್ತಃ] ಆ ಜ್ಞಾನಜ್ಯೋತಿಯನ್ನು ಬೆಳಗಿರಿ. ವೇದಗಳ ಜೀವ ಜೀವಾಳ ಇದೇ ಜ್ಯೋತಿ. ಇದೇ ಜ್ಞಾನಜ್ಯೋತಿ. ವೇದಗಳು ಎಷ್ಟು ಉದಾರವೋ ಅಷ್ಟೇ ಅಂಧಕಾರ ವಿದೂರ. ಅವು ಭಗವದ್ಭಕ್ತನ ಬಾಯಿನಿಂದ ಬಿನ್ನಹ ರೂಪದಲ್ಲಿ ಹೊರಡಿಸುವುದಾದರೂ, "ಮಾ ನೋ ದೀರ್ಘಾ ಅಭ ಸಹಸ್ತಮಿಸ್ರಾಃ" (ಋಕ್.2.27.14) -ಪ್ರಭೋ, ದೀರ್ಘವಾದ ಅಂಧಕಾರಗಳು ನಮ್ಮನ್ನು ಆವರಿಸದಿರಲಿ- ಎಂದೇ. ಭಕ್ತನ ಭಾವನಾಭರಿತ ಹೃದಯದ ಮೇಲೆ ಅಂಕಿತಗೊಳಿಸುವುದಾದರೂ - "ಜ್ಯೋತಿರ್ವೃಣೀತ ತಮಸೋ ವಿಜಾಸನ್" (ಋಕ್.3.39.7) - ಅಂಧಕಾರದಿಂದ ದೂರಸರಿದು ಜ್ಯೋತಿಯನ್ನು ತುಂಬಿಕೊಳ್ಳಬೇಕು- ಎಂಬ ಪುನೀತ ಭಾವನೆಯನ್ನೇ. ಹೆಚ್ಚೇನು? ಆರ್ಯರ - ಶ್ರೇಷ್ಠರ ಸ್ಫುಟ ಚಿತ್ರವನ್ನು ಚಿತ್ರಿಸುವುದಾದರೂ "ಆರ್ಯಾ ಜ್ಯೋತಿಷಗ್ರಾಃ" (ಋಕ್.7.33.7)- ಜ್ಯೋತಿಯನ್ನು ಮುಂದಿಟ್ಟುಕೊಂಡು ಮುನ್ನಡೆಯುವವರೇ ಆರ್ಯರು- ಎಂಬ ಶಬ್ದಗಳಿಂದಲೇ. ವೇದಗಳ ಈ ಜ್ಯೋತಿ ಬೆಂಕಿಯಲ್ಲ, ಸೂರ್ಯನೂ ಅಲ್ಲ, ನಿಷ್ಕಲ್ಮಶವಾದ, ಪರಮ ಪರಿಷ್ಕೃತವಾದ ದಿವ್ಯಜ್ಞಾನ.
-ಪಂ. ಸುಧಾಕರ ಚತುರ್ವೇದಿ.

ಮಂಗಳವಾರ, ಜುಲೈ 20, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ - 7

     ಶಾಸ್ತ್ರೀಯ ಔದಾರ್ಯ ಇದಕ್ಕಿಂತ ಮುಂದೆ ಹೋಗಲಾರದು. ವೇದಗಳು ಜ್ಞಾನಮಯ ತಾನೇ? ಜ್ಞಾನಮಾರ್ಗದಲ್ಲಿ ಅಂಧವಿಶ್ವಾಸಕ್ಕೆ, ಕುರುಡು ನಂಬಿಕೆಗೆ ಎಡೆಯೆಲ್ಲಿ? ಸತ್ಯವೇ ನಿಮ್ಮ ಶಕ್ತಿ, ಅದರ ನೆರವಿಂದಲೇ ಸತ್ಯಾನ್ವೇಷಣಕ್ಕೆ ಮುಂದಣ ಹೆಜ್ಜೆಯಿಡಿರಿ ಎಂದು ಕರೆ ಕೊಡುತ್ತದೆ ಋಗ್ವೇದ:
ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ| ವಿಧ್ಯತಾ ವಿದ್ಯುತಾ ರಕ್ಷಃ|| (ಋಕ್.1.86.9)
     [ಸತ್ಯಶವಸಃ] ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ! ಸತ್ಯವಾದ ಶಕ್ತಿಯಿಂದಲೇ ವಿರಾಜಿಸುವ ಧನ್ಯ ಜೀವರೇ! [ಯೂಯಂ] ನೀವು, [ಮಹಿತ್ವನಾ] ನಿಮ್ಮ ಸ್ವಂತ ಮಹಿಮೆಯಿಂದಲೇ [ತತ್ ಆವಿಷ್ಕರ್ತ] ಆ ಸತ್ಯವನ್ನು ಆವಿಷ್ಕರಿಸಿರಿ, ಬೆಳಕಿಗೆ ತನ್ನಿರಿ. [ರಕ್ಷಃ] ದುಷ್ಕಾಮನೆಯನ್ನು [ವಿದ್ಯುತಾ] ನಿಮ್ಮ ಜ್ಞಾನಜ್ಯೋತಿಯಿಂದ [ವಿಧ್ಯತ] ಸೀಳಿಹಾಕಿರಿ.
     ಒಂದೊಂದು ಮಾತಿನಲ್ಲಿಯೂ ಸ್ಫೂರ್ತಿ ಉಕ್ಕಿ ಬರುತ್ತದೆ. ಹೌದು, ಅಜ್ಞಾನದ ಅಂಧಕಾರ ಕವಿದಿರುವವರೆಗೆ ಆತ್ಮವನ್ನು ಕುಕ್ಕಿ ತಿನ್ನುವ ರಾಕ್ಷಸೀ ಭಾವನೆ ದೂರವಾಗಲಾರದು.

ಸೋಮವಾರ, ಜುಲೈ 5, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ - 6


     ವಸ್ತುತಃ ವೇದಗಳು ಪ್ರತಿಯೊಬ್ಬ ಮಾನವನ ಪರಿಪೂರ್ಣ ವಿಕಾಸಕ್ಕೆ ಪಥಪ್ರದರ್ಶನ ಮಾಡುವ, ಸರ್ವೋನ್ನತಿಯ, ಸನ್ಮಾರ್ಗದ ಜ್ಯೋತಿಸ್ತಂಭಗಳಾಗಿ ವಿರಾಜಿಸುವ, ಸರ್ವಥಾ ಭ್ರಾಂತಿರಹಿತವಾದ, ಸಮಸ್ತ ಸತ್ಯ ವಿದ್ಯೆಗಳಿಂದ ಪರಿಪ್ಲುತವಾದ ಸಾರ್ವಕಾಲಿಕ-ಸಾರ್ವಭೌಮ ಪವಿತ್ರ ಶಾಸ್ತ್ರಗಳಾಗಿವೆ. ದೇಶ-ವಿದೇಶಗಳ ಗೌರ-ಶ್ಯಾಮಗಳ, ನರ-ನಾರಿಯರ, ಜನಾಂಗ-ಜಾತಿಗಳ ಭೂತ-ವರ್ತಮಾನ-ಭವಿಷ್ಯತ್ತುಗಳ ಭೇದ-ಸೋಂಕು ವೇದಗಳಿಗಿಲ್ಲ. "ವೇದ" ಎಂಬ ಶಬ್ದದ ಯೌಗಿಕಾರ್ಥವೇ "ನಿಷ್ಕಳ ಜ್ಞಾನ" ಎಂದು. ಜ್ಞಾನ ಯಾರಿಗೆ ಬೇಕು? ಯಾರಿಗೆ ಬೇಡ? ಅನ್ಯ ಮತೀಯ ಗ್ರಂಥಗಳಂತೆ ವೇದಗಳಲ್ಲಿ ಪಕ್ಷಪಾತಗಳಿಗೆ, ರಾಗ-ದ್ವೇಷಗಳಿಗೆ, ಸ್ವ-ಪರ ಅಥವಾ ಸ್ತ್ರೀ-ಪುರುಷರೆಂಬ ಮೇಲು-ಕೀಳೆಂಬ ಬೇಧಗಳಿಗೆ ವಿಜ್ಞಾನಕ್ಕೆ ಬೆನ್ನು ತಿರುಗಿಸಿ ನಡೆ ಎಂಬ ಅಜ್ಞಾನಾಂಧ ವಿಶ್ವಾಸಗಳಿಗೆ ಸೂಜಿಯ ಮೊನೆಯಷ್ಟೂ ಎಡೆಯಿಲ್ಲ. ಎಲ್ಲವನ್ನೂ ತನ್ನವರೇ ಎಂದು ಬಗೆದ ಹೃದಯ ವೈಶಾಲ್ಯಕ್ಕೆ ಪಾರಮಾರ್ಥಿಕ ಸಾಂಸಾರಿಕ ಸತ್ಯಜ್ಞಾನ ಪ್ರಾಬಲ್ಯಕ್ಕೆ ತವರುಮನೆ ಈ ಭಗವದ್ವಾಣಿ ವೇದ ಚತುಷ್ಟಯ. "ಸತ್ಯವನ್ನು, ತಥ್ಯವನ್ನು ಆತ್ಮಬಲದಿಂದ ಗುರುತಿಸು. ಹೊಸದು-ಹಳೆಯದು ಎಂದು ನೋಡಬೇಡ. ಸತ್ಯ ಸ್ವೀಕಾರಕ್ಕೆ ಜ್ಞಾನಂಗಿಕಾರಕ್ಕೆ ನಿನ್ನ ಆತ್ಮ ಸದಾ ಸಿದ್ದವಾಗಿರಲಿ; ಸದಾ ಚರಮ ಲಕ್ಷ್ಯವನ್ನು ಅಂತಿಮ ಧ್ಯೇಯವನ್ನು ಸ್ಪರ್ಷಿಸಲು ನಿನ್ನ ಮನಸ್ಸಿನ ಗವಾಕ್ಷ ತೆರೆದಿಟ್ಟಿರಲ್ಪಡಲಿ" ಎಂದು ಆದೇಶಿಸುತ್ತಲಿದೆ ವೇದ.
ಆಲಿಸಿರಿ:
ಯತ್ ಪೂರ್ವ್ಯಂ ಮಕುತೋ ಯಚ್ಚ ನೂತನಂ ಯದುದ್ಯತೇ ವಸವೋ ಯಚ್ಚ ಶಸ್ಯತೇ |
ವಿಶ್ವಸ್ಯ ತಸ್ಯ ಭವಥಾ ನವೇದಸಃ ಶುಭಂ ಯಾತಾಮನು ಕಥಾ ಅವೃತ್ಸತ || (ಋಕ್.೫.೫೫.೮)
     [ಮರುತಃ} ಮರಣ ಧರ್ಮೀಯರಾದ ಸತ್ಯಕ್ಕಾಗಿ ಪ್ರಾಣವನ್ನಾದರೂ ಬಲಿ ನೀಡಬಲ್ಲ ಧೀರರೇ, [ವಸವಃ] ದೇಹ ನಿವಾಸಿಗಳಾದ ದೈವೀ ಸಮಪತ್ಸಮೃದ್ಧರಾದ ಮಾನವರೇ, [ಸವೇದಸಃ] ನೀವು ವಿದ್ಯಾ ರಹಿತರಾಗಿದ್ದೀರಿ, ಅಪ್ರಜ್ಞರಾಗಿದ್ದೀರಿ. [ಯತ್ ಪೂರ್ವ್ಯಂ] ಯಾವುದು ಪ್ರಾಚೀನವೋ [ಚ] ಮತ್ತು [ಯತ್ ನೂತನಃ] ಯಾವುದು ನವೀನವೋ [ಯತ್ ಉದ್ಯತೇ] ಯಾವುದು ನಿಮ್ಮ ಅಂತಃಕರಣದಿಂದ ಉದ್ಭವಿಸುತ್ತದೋ [ಚ] ಮತ್ತು [ಯತ್ ಶಸ್ಯತೇ] ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ [ತಸ್ಯ ವಿಶ್ವಸ್ಯ ಭವಥ] ಆ ಎಲ್ಲದಕ್ಕೂ ಕಿವಿಗೊಡುವವರಾಗಿರಿ. [ಶುಭಂ ಯಾತಾಂ ಅನು] ಕಲ್ಯಾಣ ಮಾರ್ಗದಲ್ಲಿ ನಡೆಯುವವರ ಹಿಂದೆ, [ರಥಾ ಅವೃತ್ಸತ] ನಿಮ್ಮ ಜೀವನ ರಥಗಳು ತೆರಳಲಿ.
-ಪಂ. ಸುಧಾಕರ ಚತುರ್ವೇದಿ.
,