ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜುಲೈ 30, 2014

ವೇದಾಸಕ್ತರಿಗೆ ಅಪೂರ್ವ ಅವಕಾಶ

     ಹಾಸನದಲ್ಲಿ 16.8.2014 ಮತ್ತು 17.8.2014ರಂದು ಎರಡು ದಿನಗಳು ವೇದಭಾರತಿಯ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೇದಾಸಕ್ತರಿಗೆ ಎರಡು ದಿನಗಳ ಕಾರ್ಯಾಗಾರವಲ್ಲದೆ, ಸಾರ್ವಜನಿಕರಿಗೂ ವಿಶೇಷ ಮನರಂಜನಾ ಮತ್ತು ಸಾಮಯಿಕ ಮಹತ್ವದ ವಿಚಾರದ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಎಲ್ಲರಿಗೂ ಆದರದ, ಆತ್ಮೀಯ ಸ್ವಾಗತವಿದೆ. ದಿ. 20.8.2014ರಿಂದ 24.8.2014ರವರೆಗೆ ಗೀತಾಜ್ಞಾನ ಯಜ್ಞವಿರುತ್ತದೆ.
ಸಾರ್ವಜನಿಕರಿಗಾಗಿ:
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಭವನ, ಹಾಸನ
16.8.2014: ಬೆ. 9.00ಕ್ಕೆ: 
ಉದ್ಘಾಟನೆ: ಶ್ರೀ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ, ಹಾಸನ ಶಾಖೆ.
ಮುಖ್ಯ ಅತಿಥಿಗಳು: ಶ್ರೀ ಸು. ರಾಮಣ್ಣ, ಹಿರಿಯ ಪ್ರಚಾರಕರು, ರಾ.ಸ್ವ.ಸಂ., ಅಖಿಲ ಭಾರತ ಪ್ರಮುಖರು, ಕುಟುಂಬ ಪ್ರಬೋಧನ್
                          ಶ್ರೀ ಸುಧಾಕರ ಶರ್ಮ, ವೇದಚಿಂತಕರು
                          ಶ್ರೀ ಶಂಕರಪ್ಪ, ರಾಜ್ಯಾಧ್ಯಕ್ಷರು, ಮಾದಿಗ ದಂಡೋರ ಸಮಿತಿ
                          ಶ್ರೀ ಸಿ.ಎಸ್. ಕೃಷ್ಣಸ್ವಾಮಿ, ಪ್ರಾಂಶುಪಾಲರು, ರಾ.ಕೃ.ವಿದ್ಯಾಲಯ
16.8.2014: ಸಾ. 5.30ಕ್ಕೆ:
ಭರತ ನಾಟ್ಯ - ಕು. ಅಕ್ಷತಾರಾಮಕೃಷ್ಣರಿಂದ
ಉಪನ್ಯಾಸ: ಜಗದ್ಗುರು ಭಾರತ - 1 - ಶ್ರೀ ಸು. ರಾಮಣ್ಣರವರಿಂದ.
17.8.2014: ಸಾ. 5.00ಕ್ಕೆ:
ವೀಣಾವಾದನ: ಕು. ಸಹನಾ ಆರ್.ಪಿ.ರವರಿಂದ
ಉಪನ್ಯಾಸ: ಜಗದ್ಗುರು ಭಾರತ - 2 - ಶ್ರೀ ಸು. ರಾಮಣ್ಣರವರಿಂದ.
20.8.2014ರಿಂದ 24.8.2014ರವರೆಗೆ: ಸಾ. 6.00ರಿಂದ 7.30ರವರೆಗೆ:
ಸ್ಥಳ: ಶ್ರೀ ಆದಿಚುಂಚನಗಿರಿ ಮಠ, ಹಾಸನದ ಯಾಗಮಂಟಪದಲ್ಲಿ.
ಗೀತಾಜ್ಞಾನಯಜ್ಞ -  ಭಗವದ್ಗೀತಾ ಸಾರವನ್ನು ಉಣಬಡಿಸಲಿದ್ದಾರೆ:
ಪೂಜ್ಯ ಶ್ರೀ ಶ್ರೀ ಚಿದ್ರೂಪಾನಂದ ಸರಸ್ವತೀ, ಆರ್ಷ ವಿದ್ಯಾಪೀಠ, ಹುಬ್ಬಳ್ಳಿ
-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-0-

ವೇದಾಸಕ್ತರಿಗೆ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸುವವರಿಗಾಗಿ:
ಪ್ರತಿದಿನ ಬೆ. 9.00 ರಿಂದ ಸಾಯಂಕಾಲದವರೆಗೆ:
ವಿಷಯಗಳು:
16.8.2014:
1. ಸಾಮಾಜಿಕ ಸಾಮರಸ್ಯಕ್ಕಾಗಿ ವೇದ -  ಮಾರ್ಗದರ್ಶನ: ಶ್ರೀ ಶ್ರುತಿಪ್ರಿಯ, ಸಂಪಾದಕರು, ವೇದತರಂಗ, ಬೆಂಗಳೂರು. 
2. ಸಮಾಜ ಮತ್ತು ನಾನು: ಮಾರ್ಗದರ್ಶನ: ಶ್ರೀ ಸು. ರಾಮಣ್ಣ
3. ಮಹಿಳೆ ಮತ್ತು ವೇದ: ಮಾರ್ಗದರ್ಶನ: ಶ್ರೀಮತಿ ಅಮೃತವರ್ಷಿಣಿ ಉಮೇಶ್.
4. ಸತ್ಸಂಗ: ಮಾರ್ಗದರ್ಶನ: ಶ್ರೀ ವಿಶ್ವನಾಥ ಶರ್ಮ
17.8.2014
5. ನಮ್ಮ ಮನೆ: ಮಾರ್ಗದರ್ಶನ: ಶ್ರೀ ಸು. ರಾಮಣ್ಣ
6. ರಕ್ಷಾ ಬಂಧನ ಮತ್ತು ಮುಂದಿನ ಕಾರ್ಯಗಳ ಯೋಜನೆ
7. ಸಂಪ್ರದಾಯಗಳು: ಮಾರ್ಗದರ್ಶನ: ಶ್ರೀ ಸುಧಾಕರ ಶರ್ಮ
8. ಗಣ್ಯರೊಡನೆ ಸಂವಾದ.
ಆಹ್ವಾನ ಪತ್ರಿಕೆ ಮತ್ತು ಕಾರ್ಯಾಗಾರದ ವಿವರ ಹೀಗಿದೆ:




ಬುಧವಾರ, ಜುಲೈ 23, 2014

ಲೋಭಕ್ಕೆ ಮದ್ದುಂಟೆ?

ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತಕೋಕಯಾತುಮ್ | 
ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರ ಮೃಣ ರಕ್ಷ ಇಂದ್ರ || (ಋಕ್.೭.೧೦೪.೨೨)
     ರಕ್ಷಸ್ ಎಂದರೆ ದುರ್ಭಾವನೆ. ಯಾರು ದುರ್ಭಾವನೆಗಳನ್ನು ಹೊಂದಿರುತ್ತಾರೋ ಅವರೇ ರಾಕ್ಷಸರು. ರಾಕ್ಷಸರು ಎಂದರೆ ಅವರು ಬೇರೆ ಯಾವುದೋ ಜೀವಿಗಳಲ್ಲ, ಮಾನವರೂಪಿಗಳಾಗೇ ಇದ್ದು ದುರ್ಭಾವನೆಗಳನ್ನು ಹೊಂದಿದವರು. ಈ ವೇದಮಂತ್ರದಲ್ಲಿ ಮಾನವನಲ್ಲಿ ಕಂಡು ಬರುವ ದುರ್ಭಾವನೆಗಳಾದ ಮೋಹವನ್ನು ಗೂಬೆಯ ನಡೆಗೂ, ಕ್ರೋಧವನ್ನು ತೋಳದ ಸ್ವಭಾವಕ್ಕೂ, ಮತ್ಸರವನ್ನು ನಾಯಿಯ ಗುಣಕ್ಕೂ, ಕೋಕ ಪಕ್ಷಿಯನ್ನು (ಚಕ್ರವಾಕ/ಜಕ್ಕವಕ್ಕಿ) ಕಾಮದ ಸಂಕೇತವಾಗಿಯೂ, ತಾನೇ ಮೇಲೆಂಬ ಗರ್ವ(ಮದ)ಕ್ಕೆ ಗರುಡ ಪಕ್ಷಿಯನ್ನೂ, ಹದ್ದನ್ನು ಲೋಭಕ್ಕೆ ಸಂಕೇತಿಸಿದ್ದು, ಈ ಗುಣಗಳನ್ನು ತೀಡಿ ಹಾಕು, ನಿರ್ಮೂಲ ಮಾಡು ಎಂದು ಜೀವಾತ್ಮರಿಗೆ ಕರೆ ಕೊಡಲಾಗಿದೆ. ಮಾನವನ ಶತ್ರುಗಳಾದ ಈ ಆರು ಗುಣಗಳು ಅವನನ್ನು ರಾಕ್ಷಸನನ್ನಾಗಿ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಕಾಮ, ಕ್ರೋಧ, ಮದ, ಮತ್ಸರ, ಮೋಹಗಳ ಕುರಿತು ಪ್ರತ್ಯೇಕ ಲೇಖನಗಳಲ್ಲಿ ಚರ್ಚಿಸಿದ್ದು, ಲೋಭದ ಕುರಿತು ಇಲ್ಲಿ ವಿಚಾರವನ್ನು ಹಂಚಿಕೊಳ್ಳೋಣ.
     ಲೋಭ ಎಂಬ ಪದಕ್ಕೆ ಸಂಪತ್ತು, ಲಾಭ, ಆಹಾರ, ಪಾನೀಯ, ಹೆಸರು/ಕೀರ್ತಿ, ಇತ್ಯಾದಿಗಳ ಬಗ್ಗೆ ದುರಾಸೆ, ಅತಿಯಾದ ಆಸೆ ಹೊಂದಿರುವುದು, ಕೃಪಣತೆ, ಜಿಪುಣತನ, ಇತ್ಯಾದಿ ಅರ್ಥಗಳು ಹೊರಹೊಮ್ಮುತ್ತವೆ. ಮೇಲಿನ ಮಂತ್ರ 'ಉತ ಗೃಧ್ರಯಾತುಂ ಜಹಿ' ಅಂದರೆ, 'ಮತ್ತು ಹದ್ದಿನ ನಡೆಯನ್ನು ಹೊಡೆದು ಹಾಕು' ಎನ್ನುತ್ತದೆ. ಹದ್ದಿನ ನೋಟ ವಕ್ರವಾಗಿರುತ್ತದೆ. ಅದರ ಧ್ವನಿಯೂ ವಕ್ರವಾಗಿದ್ದು ಎಲ್ಲವೂ ತನಗೇ ಇರಲಿ ಎಂಬ ಆಸೆ ಅದರ ಗುಣಸ್ವಭಾವವಾಗಿದೆ. ಲೋಭಿಯಾದವನ ಗುಣವೂ ಅಷ್ಟೆ, ವಕ್ರವಾಗಿರುತ್ತದೆ. ಎಲ್ಲವೂ ತನಗೇ ಬೇಕೆಂಬ ಹಪಾಹಪಿತನದ ವ್ಯಕ್ತಿ ತಾನೂ ಹಾಳಾಗುತ್ತಾನೆ, ಸಮಾಜಕ್ಕೂ ಹಾನಿ ತರುತ್ತಾನೆ. ಪರಮ ಸ್ವಾರ್ಥವನ್ನು ಇಲ್ಲಿ ಕಾಣಬಹುದಾಗಿದೆ. 
ಬರುವುದೆಲ್ಲದಕು ಹಿಡಿಯುವುದು ಗ್ರಹಣ
ಕೂಡಿಡುವ ಬಚ್ಚಿಡುವ ನಿಪುಣ ತಾ ಕೃಪಣ |
ಕೈಯೆತ್ತಿ ಕೊಡಲಾರ ಬಂದದ್ದು ಬಿಡಲಾರ
ಲೋಭಿಯಾ ಲೋಭಕೆ ಮದ್ದುಂಟೆ ಮೂಢ || 
     ಲೋಭಿಗಳಿಗೆ ಯಾವುದೇ ನೀತಿ, ನಿಯಮಗಳು, ಸಿದ್ಧಾಂತಗಳು ಪಥ್ಯವಾಗುವುದಿಲ್ಲ. ಅವರ ಒಂದೇ ಗುರಿ ಎಲ್ಲವೂ ತಮಗಿರಲಿ ಎಂಬುದಷ್ಟೇ. ಇದರಿಂದಾಗಿ ಆಸ್ತಿಕತೆ, ಧಾರ್ಮಿಕತೆ, ಒಳ್ಳೆಯ ವಿಚಾರಗಳು, ನಡೆಗಳು, ಒಟ್ಟಾರೆಯಾಗಿ ಸತ್ಪ್ರವೃತ್ತಿಗಳು ಮರೆಯಾಗುತ್ತವೆ. ಕ್ರೂರ ಪಶುಗಳಿಗೂ ಅವರಿಗೂ ವ್ಯತ್ಯಾಸ ಇರದೆ, ಸಮಾಜ ದುಸ್ಥಿತಿಗೆ ಜಾರುತ್ತದೆ. ಲೋಭಿಗಳಲ್ಲಿ ಸಂಪತ್ತು ಕ್ರೋಢೀಕೃತವಾದರೆ, ಉಳಿದವರು ಸಹಜವಾಗಿ ಸಿಡಿಯುತ್ತಾರೆ ಮತ್ತು ಅವರಲ್ಲಿನ ದುರ್ಭಾವನೆಗಳೂ ಜಾಗೃತವಾಗುತ್ತವೆ. ಹೀಗಾಗಿ ಲೋಭಿ ತಾನು ಕೆಡುವುದಲ್ಲದೆ, ಸಮಾಜವನ್ನೂ ಕೆಡಿಸುತ್ತಾನೆ. ಲೋಭಿಯಾದವರು ಯಾವ ಮಾರ್ಗದಲ್ಲೇ ಆಗಲಿ, ತನಗೆ ಹಣ ಬಂದರಾಯಿತು ಎಂಬ ಮನೋಭಾವದವನಾಗಿದ್ದು, ಈ ಕಾರಣದಿಂದಲೇ ಕಪ್ಪು ಹಣ, ಭ್ರಷ್ಠಾಚಾರ, ಕಾಳಸಂತೆ, ಜೂಜು, ಬೆಟ್ಟಿಂಗ್ ವ್ಯವಹಾರ, ಅಕ್ರಮ ಶೇಖರಣೆ, ಕಲಬೆರಕೆ, ಮಾದಕ ದ್ರವ್ಯಗಳ ವ್ಯಾಪಾರ. ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ, ದೇಶದ್ರೋಹದ ಚಟುವಟಿಕೆಗಳು, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಮುಂತಾದವುಗಳು ವಿಜೃಂಭಿಸುತ್ತವೆ ಎಂಬುದು ನಿಧಾನವಾಗಿ ಆಲೋಚಿಸಿದರೆ ಅರ್ಥವಾಗುತ್ತದೆ. 
ದೃಷ್ಟಿಭೋಗಕ್ಕುಂಟು ವಿನಿಯೋಗಕಿಲ್ಲ
ಅಪಹಾಸ್ಯ ನಿಂದೆಗಳಿಗಂಜುವುದೆ ಇಲ್ಲ |
ಪ್ರಾಣವನೆ ಬಿಟ್ಟಾನು ಕೈಯೆತ್ತಿ ಕೊಡನು
ಲೋಭಿಯಾ ಲೋಭಕೆ ಮದ್ದುಂಟೆ ಮೂಢ ||
     ಲೋಭಕ್ಕೆ ಮಿತಿಯೆಂಬುದೇ ಇಲ್ಲ. ಎಷ್ಟಿದ್ದರೂ ಬೇಕು, ಏನಿದ್ದರೂ ಬೇಕು. ಮಹಾಭಾರತದ ಆದಿ ಪರ್ವದ ಒಂದು ಶ್ಲೋಕದಲ್ಲಿ, 'ಪ್ರಪಂಚದಲ್ಲಿ ಎಷ್ಟು ಆಹಾರ ಪದಾರ್ಥಗಳಿವೆಯೋ, ಎಷ್ಟು ಚಿನ್ನವಿದೆಯೋ, ಎಷ್ಟು ಪಶು ಸಂಪತ್ತಿದೆಯೋ, ಎಷ್ಟು ಸ್ತ್ರೀಯರಿದ್ದಾರೋ, ಎಲ್ಲವೂ ಒಬ್ಬನಿಗೇ ಸಿಕ್ಕಿದರೂ ಸಾಲದೆನ್ನಿಸುತ್ತದೆ. ಆದ್ದರಿಂದ ಲೋಭವನ್ನು ಬಿಟ್ಟುಬಿಡಬೇಕು' ಎಂದು ವ್ಯಾಸ ಮಹರ್ಷಿ ಬರೆಯುತ್ತಾರೆ. ಲೋಭಿಗಳಿಗೆ ಇಂತಹ ವಿಚಾರಗಳು ಪಥ್ಯವಾಗುವುದೇ ಇಲ್ಲ. ನೂರಾರು ಜನರಿಗೆ ನೋವು ಕೊಟ್ಟು ಅಕ್ರಮವಾಗಿ ಗಳಿಸಿದ ಸಂಪತ್ತು ಹಿತ ತರುವುದಿಲ್ಲ. ಅವರುಗಳನ್ನು ಉಪವಾಸ ಮಾಡಲು ಬಿಟ್ಟು ಮೃಷ್ಟಾನ್ನ ಭೋಜನ ಉಂಡು ಸುಖವಾಗಿರುತ್ತೇವೆ ಎಂಬುದು ಭ್ರಮೆಯಷ್ಟೆ. ಸಮಾಜದ ಶಾಪ ಲೋಭಿಗಳಿಗೆ ತಟ್ಟದೇ ಇರದು. 'ಇಷ್ಟೆಲ್ಲಾ ಮಾಡಿದ್ದು ಮಕ್ಕಳ ಹಿತಕ್ಕಾಗಿ, ಸುಖಕ್ಕಾಗಿ' ಎಂಬ ಮಾತು ಕೇಳಿ ಬರುತ್ತದೆ. ಮಕ್ಕಳಿಗೆ ಕೊಡಬೇಕಾದದ್ದು ಆಸ್ತಿಯಲ್ಲ, ಸಂಪತ್ತಲ್ಲ, ಯೋಗ್ಯವಾದ ವಿದ್ಯೆ, ಸತ್ಪ್ರಜೆಗಳನ್ನಾಗಿಸುವ ಶಿಕ್ಷಣ. ಅಪ್ಪ ಮಾಡಿಟ್ಟ, ಕೂಡಿಟ್ಟ ಆಸ್ತಿಯಿಂದ ಮಕ್ಕಳು ವಿಲಾಸಿಗಳಾಗಿ, ಸೋಮಾರಿಗಳಾಗಿ ಸಮಾಜಕಂಟಕರಾಗಿ ಬಾಳುವುದನ್ನು ಕಾಣುತ್ತಿರುತ್ತೇವೆ. ಹಣ ಮನುಷ್ಯರನ್ನು ಬದಲಾಯಿಸುವುದಿಲ್ಲ, ಅವರಲ್ಲಿನ ಮುಖವಾಡಗಳನ್ನು ಕಳಚುತ್ತದೆ. ಐಷಾರಾಮಿ ಕಾರುಗಳಲ್ಲಿ ಸ್ನೇಹಿತರೊಡಗೂಡಿ ಪಾನಮತ್ತರಾಗಿ ಹೋಟೆಲುಗಳಲ್ಲಿ, ಬಾರುಗಳಲ್ಲಿ ದಾಂಧಲೆ ಮಾಡುವ, ಬೆಂಕಿ ಹಚ್ಚುವ ಯುವಕರುಗಳನ್ನು ಕಂಡು ಮನಸ್ಸು ಮರುಗುತ್ತದೆ. ಕಾನೂನು, ಸುವ್ಯವಸ್ಥೆ ಪಾಲನೆ ಹೊಣೆ ಹೊತ್ತ ಪೋಲಿಸರ ಮೇಲೆ ಕೈಮಾಡಿಯೂ ಪಾರಾಗಬಲ್ಲೆವೆಂಬ ಪರಿಸ್ಥಿತಿ ಸಮಾಜ ಅಧೋಗತಿಗೆ ಜಾರುತ್ತಿರುವುದನ್ನು ತೋರಿಸುತ್ತಿದೆ. ಅಕ್ರಮ ಸಂಪತ್ತು ಅಧರ್ಮವನ್ನೇ ಪೋಷಿಸುತ್ತದೆ, ಜನರಲ್ಲಿ ಅಶಾಂತಿಯನ್ನೇ ಉಂಟು ಮಾಡುತ್ತದೆ. ಯಾರು ಶಾಸಕಾಂಗದ ಪ್ರಮುಖರೆನಿಸಿರುವರೋ ಅವರುಗಳೇ ಕೋಟಿ ಕೋಟಿ ಹಣ ಪಡೆದು ತಮ್ಮನ್ನು ತಾವು ಮಾರಿಕೊಳ್ಳುತ್ತಿರುವುದು ಇಂದು ಅಸಹಜ ಸಂಗತಿಯಾಗಿ ಉಳಿದಿಲ್ಲವೆಂಬುದು ಮತ್ತು ಅದನ್ನು ಅವರುಗಳು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುತ್ತಿರುವುದು ಲೋಭಿತನದ ಪರಾಕಾಷ್ಠೆಯಾಗಿದೆ. 
     ನಿಜವಾದ ಬಡವನೆಂದರೆ ಲೋಭಿಯೇ! ಏಕೆಂದರೆ ಬಡವನಾದರೋ ಉಣ್ಣಲು, ಉಡಲು ಸಿಕ್ಕರೆ ಸಂತುಷ್ಟನಾಗುತ್ತಾನೆ. ಲೋಭಿಗೆ ಆ ತೃಪ್ತಿ ಇರುವುದೇ ಇಲ್ಲ. ಕಡುಬಡವರಂತೆ ಜೀವಿಸಿ ಸತ್ತಾಗ ಅಪಾರ ಹಣ, ಸಂಪತ್ತು ಬಿಟ್ಟು ಹೋದ ಮಹನೀಯರುಗಳು ಇದ್ದಾರೆ. ಅವರಲ್ಲಿದ್ದ ಸಂಪತ್ತು ಸಮಾಜಕ್ಕಿರಲಿ, ಸ್ವತಃ ಅವರಿಗೇ ಉಪಯೋಗಕ್ಕೆ ಬಂದಿರಲಿಲ್ಲ. ಜಗತ್ತಿಗೇ ಶ್ರೇಷ್ಠ ಎನಿಸಿದ್ದ ಚಕ್ರವರ್ತಿಗಳು, ರಾಜ ಮಹಾರಾಜರುಗಳು ಸಾಯುವಾಗ ಒಂದು ಕವಡೆ ಕಾಸನ್ನೂ ತಮ್ಮೊಡನೆ ಒಯ್ಯಲಾಗಲಿಲ್ಲ. ಸಮುದ್ರಕ್ಕೇ ಸೇತುವೆ ಕಟ್ಟಿದ್ದ ಶ್ರೀರಾಮಚಂದ್ರ, ಮಹಾಭಾರತ ಯುದ್ಧದಲ್ಲಿ ಜಯಗಳಿಸಿದ ಧರ್ಮರಾಯ, ಇಂತಹ ಅನೇಕ ಶೂರ, ಮಹಾಶೂರರು ಆಳಿದ ಈ ಭೂಮಿ ಈಗಲೂ ಇಲ್ಲೇ ಇದೆ, ಅವರೊಡನೆ ಹೋಗಲಿಲ್ಲ. ಕೋಟಿ, ಕೋಟಿ ಅಕ್ರಮ ಸಂಪತ್ತು ಕೂಡಿಸಿ, ವಿಧವಿಧವಾದ ಆಸ್ತಿ ಪಾಸ್ತಿಗಳನ್ನು ಮಾಡಿಕೊಂಡಿರುವ, ಮಾಡಿಕೊಳ್ಳುತ್ತಿರುವ ನಮ್ಮ ನಾಯಕರುಗಳ ಜೊತೆಗೆ ಸಹ ಆ ಸಂಪತ್ತು ಹೋಗುವುದೇ ಇಲ್ಲ. ಆದರೂ ಈ ಲೋಭ ಹೋಗುವುದೇ ಇಲ್ಲವೆಂದಾದರೆ, ಈ ರಕ್ಷಸ್ಸು, ದುರ್ಭಾವನೆ, ರಾಕ್ಷಸತ್ವ ಎಷ್ಟು ಪ್ರಬಲವಾಗಿದೆ ಎಂಬುದು ವೇದ್ಯವಾಗುತ್ತದೆ. ನಮ್ಮನ್ನು ದುರಾಸೆಯ ಜನರು ಆಳುತ್ತಿದ್ದಾರೆಂಬುದು ಅರಿವಾದಾಗ ನಮಗೆ ಅತೀವ ನೋವಾಗುತ್ತದೆ. ಈ ಭೀಕರ ಕ್ಯಾನ್ಸರಿನಿಂದ ವಿಮುಕ್ತಿ ಸಿಗಬೇಕೆಂದರೆ ಜನರು ಜಾಗೃತರಾಗಬೇಕಾಗುತ್ತದೆ. ಅದೊಂದೇ ಮಾರ್ಗ. ಸುವಿಚಾರಿಗಳು ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ.
     ನೂರಾರು ಜನರನ್ನು ನೋಯಿಸಿ ಗಳಿಸಿದ ಸಂಪತ್ತು ಒಂದು ಸಂಪತ್ತೇ? ಭರ್ತೃಹರಿಯ ನೀತಿಶತಕದ ಈ ಶ್ಲೋಕ ನೋಡಿ:
"ಸ ತು ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ ಮನಸಿ ಚ ಪರಿತುಷ್ಟೇ ಕೋರ್ಥವಾನ್ ಕೋ ದರಿದ್ರಃ |"
ಯಾರ ಆಸೆಗೆ ಮಿತಿಯಿಲ್ಲವೋ, ಇನ್ನೂ ಬೇಕು, ಬೇಕು ಎಂದು ಹಪಹಪಿಸುತ್ತಾನೋ ಅವನು ಕೋಟ್ಯಾಧೀಶನಾದರೂ ದರಿದ್ರನಿಗಿಂತ ಕಡೆಯಾಗಿರುತ್ತಾನೆ. ಸಾಕೆನ್ನುವವನೇ ಶ್ರೀಮಂತ, ಬೇಕೆನ್ನುವವನೇ ಬಡವ! ಯಾರು ತೃಪ್ತರೋ ಅವರೇ ಶ್ರೀಮಂತರು; ಅತೃಪ್ತರೇ ದರಿದ್ರರು. ವೇದದ ಕರೆಯಂತೆ ಹದ್ದಿನ ವಕ್ರ ನಡೆಯನ್ನು, ಅರ್ಥಾತ್ ಲೋಭವನ್ನು ನಿರ್ದಾಕ್ಷಿಣ್ಯವಾಗಿ ಹೊಡೆದಟ್ಟದೆ ರಾಕ್ಷಸತ್ವ ಕಳೆಯಲಾರದು, ಮಾನವತ್ವ ಸಿಗಲಾರದು. ಲೋಭಕ್ಕೆ ಮದ್ದುಂಟೆ? ಅದನ್ನು ಹೊಡೆದೋಡಿಸುವ ಆಯುಧವಿದೆಯೇ? ಇದೆ, ಆತ್ಮಾವಲೋಕನವೇ ಮದ್ದು ಮತ್ತು  ಆಯುಧವೂ ಅದೇ! ಮಾನವತೆಯನ್ನು ಬೋಧಿಸುವ ವೈದಿಕ ಭಜನೆಯ ಈ ಸಾಲುಗಳು ನಮ್ಮನ್ನು ಪ್ರೇರಿಸಲಿ:
ದೀನರ್ಗೆ ನೋವನಿತ್ತು ಸಂಪತ್ತ ಗಳಿಸದಂತೆ |
ನೀ ನೀಡು ಶುದ್ಧ ಮತಿಯ ಪರಹಿಂಸೆಗೆಳಸದಂತೆ ||
-ಕ.ವೆಂ. ನಾಗರಾಜ್.
*****************
21.7.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಜುಲೈ 17, 2014

ವೇದಸುಧೆ : ನಿತ್ಯವೂ ವೇದವನ್ನು ಕಲಿಯುತ್ತಿರುವ ವೇದಭಾರತಿಯ ಸದಸ್ಯೆಯರಿಂದ ಹಳ್ಳಿಯಲ್ಲಿ ಅಗ್ನಿಹೋತ್ರ

ವೇದಸುಧೆ : ನಿತ್ಯವೂ ವೇದವನ್ನು ಕಲಿಯುತ್ತಿರುವ ವೇದಭಾರತಿಯ ಸದಸ್ಯೆಯರಿಂದ ಹಳ್ಳಿಯಲ್ಲಿ ಅಗ್ನಿಹೋತ್ರ

ಮೋಸಗಾರ ಮತ್ಸರ

     ತಿಮ್ಮಣ್ಣ ಮತ್ತು ಬೊಮ್ಮಣ್ಣ ಇಬ್ಬರೂ ಆತ್ಮೀಯ ಸ್ನೇಹಿತರು. ಕ್ರಮೇಣ ತಿಮ್ಮಣ್ಣನಿಗೆ ಬೊಮ್ಮಣ್ಣ ತನಗಿಂತ ಹೆಚ್ಚು ಮುಂದೆ ಬರುತ್ತಿದ್ದಾನೆ ಎಂಬ ಭಾವನೆ ಬಂದು ಒಂದು ರೀತಿಯ ಅಸಹನೆಯಾಗುತ್ತಿತ್ತು. ಬೊಮ್ಮಣ್ಣನಿಗೂ ಒಮ್ಮೊಮ್ಮೆ ತಿಮ್ಮಣ್ಣನಿಗೆ ಹೆಚ್ಚು ಪ್ರ್ರಾಧಾನ್ಯತೆ ಸಿಗುತ್ತಿದೆಯೆಂದು ಅನ್ನಿಸಿ ಕಿರಿಕಿರಿಯಾಗುತ್ತಿತ್ತು. ಇಬ್ಬರೂ ಪ್ರತ್ಯೇಕವಾಗಿ ದೇವರಲ್ಲಿ ಪ್ರಾರ್ಥಿಸಿದರು. ದೇವರು ಇವರ ಭಕ್ತಿಗೆ ಮೆಚ್ಚಿ ಅವರ ಇಷ್ಟಾರ್ಥದ ಬಗ್ಗೆ ವಿಚಾರಿಸಿದ. ತಿಮ್ಮಣ್ಣ ತಾನು ದೊಡ್ಡ ಶ್ರೀಮಂತ ವ್ಯಕ್ತಿಯಾಗಬೇಕು ಎಂದು ಕೇಳಿಕೊಂಡ. ದೇವರು ತಥಾಸ್ತು ಎಂದು ಬೊಮ್ಮಣ್ಣನನ್ನು ವಿಚಾರಿಸಲು ಹೋದ. ಬೊಮ್ಮಣ್ಣ ತಿಮ್ಮಣ್ಣನಿಗೆ ಏನು ವರ ಕೊಟ್ಟಿದ್ದರೂ ಅದರ ಎರಡರಷ್ಟು ನನಗೆ ಸಿಗುವಂತೆ ವರ ಕೊಡು ಎಂದು ಕೇಳಿಕೊಂಡ. ದೇವರು ಆಗಲೂ ತಥಾಸ್ತು ಎಂದ. ತಿಮ್ಮಣ್ಣ ದೊಡ್ಡ ಬಂಗಲೆ ಬಂದರೆ ಬೊಮ್ಮಣ್ಣನಿಗೆ ಅಂತಹುದೇ ಎರಡು ಬಂಗಲೆಗಳು ಬಂದವು. ಅವನಿಗೆ ಒಂದು ಐಷಾರಾಮಿ ಕಾರು ಇದ್ದರೆ ಇವನಿಗೆ ಎರಡು ಕಾರುಗಳು ಬಂದವು. ತಾನು ಏನು ಬಯಸಿದರೂ ಅದರ ಎರಡರಷ್ಟು ಬೊಮ್ಮಣ್ಣನಿಗೆ ಸಿಗುತ್ತಿರುವುದು ಕಂಡು ತಿಮ್ಮಣ್ಣನ ಮತ್ಸರ ಹೆಚ್ಚಾಯಿತು. ಯೋಚಿಸಿ 'ತನ್ನ ಒಂದು ಕಣ್ಣು ಹೋಗಲಿ' ಎಂದು ಕೇಳಿಕೊಂಡ. ತನ್ನ ಒಂದು ಕಣ್ಣು ಹೋದರೆ, ಬೊಮ್ಮಣ್ಣನ ಎರಡು ಕಣ್ಣುಗಳೂ ಹೋದವು. ತನ್ನ ಒಂದು ಕಾಲು ಹೋಗಲಿ ಎಂದು ಕೇಳಿಕೊಂಡಾಗ ತನ್ನ ಒಂದು ಕಾಲು ಹೋದರೂ ಬೊಮ್ಮಣ್ಣನ ಎರಡು ಕಾಲುಗಳೂ ಹೋದದ್ದನ್ನು ಕಂಡು ಖುಷಿಪಟ್ಟ. ಇದು ಕೇವಲ ಕಲ್ಪನೆಯ ಕಥೆಯಾದರೂ ಇದರ ಹಿಂದಿನ ವಿಚಾರ ಮನುಷ್ಯನ ಸ್ವಭಾವದ ಕೈಗನ್ನಡಿಯಾಗಿದೆ. ತನ್ನ ಒಂದು ಕಣ್ಣು ಹೋದರೂ ಪ್ರತಿಸ್ಪರ್ಧಿಯ ಎರಡು ಕಣ್ಣುಗಳೂ ಹೋಗಬೇಕೆಂಬ ಮನೋಭಾವವೇ ಮತ್ಸರದ ವಿಕೃತ ರೂಪ. ಮನುಷ್ಯನ ಆರು ಶತ್ರುಗಳಲ್ಲಿ ಒಂದೆಂದು ಪರಿಗಣಿತವಾದ ಈ ಮತ್ಸರ ಅವನನ್ನು ಮೂರ್ಖನನ್ನಾಗಿಸಿ ಕೆಳಗೆ ಬೀಳಿಸುತ್ತದೆ, ಆತ್ಮೀಯರಿಗೇ ದ್ರೋಹ ಬಗೆಯುವಂತೆ ಮಾಡುತ್ತದೆ. ಯಾವುದೇ ರೀತಿಯಲ್ಲಿ ಒಳಿತು ಮಾಡದ, ಕೆಡುಕನ್ನೇ ತರುವ ಮನುಷ್ಯನ ಗುಣ ಯಾವುದಾದರೂ ಇದ್ದರೆ ಅದು ಮತ್ಸರವೇ.
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ|| 
     ಮತ್ಸರ ಅನ್ನುವುದು ಮಾನವ ಸಂಬಂಧಗಳಲ್ಲಿ ಋಣಾತ್ಮಕ ಚಿಂತನೆಗಳಿಂದ, ಅಭದ್ರತೆಯ ಭಾವನೆಯಿಂದ, ಮುಂದೆ ತಮಗೆ ಹಿನ್ನಡೆಯಾಗಬಹುದು ಎಂಬ ಅನಿಸಿಕೆ, ಇತ್ಯಾದಿಗಳಿಂದ ಉಂಟಾಗುವ ಒಂದು ಮನೋಸ್ಥಿತಿ ಎನ್ನಬಹುದು. ಸುಮಾರು ಐದು ತಿಂಗಳ ಮಗುವಿನ ಹಂತದಿಂದಲೂ ಈ ಮತ್ಸರ ಇರುವುದನ್ನು ಗಮನಿಸಬಹುದು. ಒಂದು ಮಗು ತನ್ನ ಕೈಯಲ್ಲಿನ ಆಟಿಕೆಗಿಂತ ಇನ್ನೊಂದು ಮಗುವಿನ ಕೈಯಲ್ಲಿನ ಆಟಿಕೆಯ ಬಗೆಗೇ ಆಸಕ್ತಿ ವಹಿಸುತ್ತದೆ ಮತ್ತು ಅದೇ ಬೇಕೆಂದು ಹಟ ಮಾಡುತ್ತದೆ. ಈ ಮತ್ಸರದ ಉತ್ಪನ್ನಗಳೇ ಕೋಪ, ಹತಾಶೆ, ಅಸಹಾಯಕತೆ, ಜಿಗುಪ್ಸೆ, ಇತ್ಯಾದಿಗಳು. ಮತ್ಸರಕ್ಕೆ ಹಲವು ಕಾರಣಗಳನ್ನು ಕೊಡುತ್ತಾರೆ. ತನ್ನ ದೊಡ್ಡಸ್ತಿಕೆಯನ್ನು ಸಾಧಿಸಲು ಪ್ರತಿಸ್ಪರ್ಧಿ ಎಂದು ಭಾವಿಸುವವನನ್ನು ಹೀಗಳೆಯುವುದು, ಅವನನ್ನು ಕುಬ್ಜಗೊಳಿಸುವ ಕುತಂತ್ರಗಳನ್ನು ಮಾಡುವುದು, ಅವನ ಪ್ರಗತಿಗೆ ಅಡ್ಡಗಾಲು ಹಾಕುವುದು, ಮುಂತಾದ ಕ್ರಮಗಳು ಮತ್ಸರದ ಪರಿಣಾಮವೇ ಆಗಿದೆ. ವೃತ್ತಿ, ಪ್ರೇಮ, ಮತ, ಧರ್ಮ, ಸಂಸ್ಕೃತಿ, ರೂಪ, ಐಶ್ವರ್ಯ, ದಾರ್ಢ್ಯತೆ, ಇತ್ಯಾದಿಗಳಲ್ಲಿ ಮತ್ಸರ ತನ್ನ ಕರಿನೆರಳು ಚಾಚುತ್ತದೆ.
     ಇಬ್ಬರ ನಡುವೆ ಮೂರನೆಯ ವ್ಯಕ್ತಿಯ ಪ್ರವೇಶ ಪ್ರೇಮ ಮತ್ಸರಕ್ಕೆ ಕಾರಣವಾಗುತ್ತದೆ. ಮೂರನೆಯ ವ್ಯಕ್ತಿಯಿಂದ ತನ್ನ ಪ್ರಾಮುಖ್ಯತೆಗೆ ಧಕ್ಕೆಯಾಗುವ, ನಂಬಿಕೆ ದ್ರೋಹವಾಗುವ ಕಲ್ಪನೆಯೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಅತ್ತೆ, ಸೊಸೆಯರ ನಡುವೆ ವೈಮನಸ್ಯಕ್ಕೆ, ತಮ್ಮನೋ, ತಂಗಿಯೋ ಜನಿಸಿದಾಗ ಮೊದಲ ಮಗುವಿಗೆ ಅದರ ಮೇಲಿನ ಮುನಿಸಿಗೆ, ಗಂಡ-ಹೆಂಡತಿ ಅಥವ ಪ್ರೇಮಿಗಳ ನಡುವಣ ಕಲಹಗಳಿಗೆ ಮತ್ಸರ ಕಾರಣ. ಮತ್ಸರ ಒಮ್ಮೆ ಆವರಿಸಿತೆಂದರೆ ಸದ್ಗುಣಗಳಿಗೆ ಗ್ರಹಣ ಹಿಡಿಯುತ್ತದೆ, ಎಲ್ಲವೂ ತಪ್ಪಾಗಿ ಕಾಣುತ್ತದೆ, ಇನ್ನೊಬ್ಬರನ್ನು ಕೀಳಾಗಿ ಕಾಣುವಂತೆ ಮಾಡುತ್ತದೆ. ನೋಡುವ ನೋಟಗಳು ಬದಲಾಗುತ್ತವೆ. ಪರಸ್ಪರರಲ್ಲಿ ದ್ವೇಷ ಭುಗಿಲೇಳುತ್ತದೆ. ಕಾಳ ಮತ್ಸರದ ಚೇಳು ಕುಟುಕಿಬಿಟ್ಟರೆ ವಿಷ ಬ್ರಹ್ಮರಂಧ್ರದವರೆಗೂ ಏರಿಬಿಡುತ್ತದೆ. 
     ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಮತ್ಸರ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿಬಿಟ್ಟಿತ್ತು. ನಿಜಜೀವನದಲ್ಲೂ ಇಂತಹ ರಾಮಾಯಣ, ಮಹಾಭಾರತಗಳು, ಇತಿಹಾಸದ ನೆರಳುಗಳು ನೋಡಸಿಗುತ್ತವೆ. ಈಗ ಬಹುತೇಕ ಟಿವಿ ಧಾರಾವಾಹಿಗಳಲ್ಲಿ ಮತ್ಸರವೇ ಪ್ರಧಾನ ವಿಷಯ. ಆಸ್ತಿಗಾಗಿ, ಅಂತಸ್ತಿಗಾಗಿ, ಅಧಿಕಾರಕ್ಕಾಗಿ ಯಾರು ಯಾರನ್ನು ಬೇಕಾದರೂ ಕೊಲ್ಲಲು ಮಸಲತ್ತು ಮಾಡಬಹುದು ಎಂಬ ಸಂದೇಶಗಳನ್ನು ಪುಂಖಾನುಪುಂಖವಾಗಿ ತೋರಿಸಲಾಗುತ್ತಿದೆ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ತಂದೆ-ತಾಯಿಯರನ್ನು, ಮಕ್ಕಳನ್ನು, ಕೊನೆಗೆ ಏನೂ ಅರಿಯದ ಹಸು ಕಂದಮ್ಮಗಳನ್ನು ಕೊಲ್ಲಲು ಮಾಡುವ ಮಸಲತ್ತುಗಳನ್ನು, ಸಂಚುಗಳನ್ನು ತೋರಿಸುವ ರೀತಿ ಮತ್ಸರವನ್ನು ವೈಭವಿಸುವುದಲ್ಲದೇ ಮತ್ತೇನು? ಇಂತಹ ಋಣಾತ್ಮಕ ಸಂದೇಶಗಳು ಜನಮಾನಸದಲ್ಲಿ ಕುಭಾವನೆಗಳನ್ನು ಮೂಡಿಸುವುದಲ್ಲದೆ, ಜನರು ಹೀಗೆಯೇ ಇರುತ್ತಾರೆ ಎಂದು ಭಾವಿಸುವಂತೆ ಮಾಡಿ ಸಮಾಜದ ಅಧಃಪತನಕ್ಕೆ ಅಪರೋಕ್ಷವಾಗಿ ಕಾರಣರಾಗುತ್ತಿವೆ.      
ಭುಕ್ತಾಹಾರ ಜೀರ್ಣಿಸುವ ವೈಶ್ವಾನರ
ಕಂಡವರನು ಸುಡುವನು ಅಸೂಯಾಪರ|
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡೆ ಸಲ್ಲಾಪ ಮೂಢ|| 
[ಟಿಪ್ಪಣಿ: ವೈಶ್ವಾನರ ಎಂದರೆ ಉದರದಲ್ಲಿರುವ, ತಿಂದ ಆಹಾರವನ್ನು ಜೀರ್ಣಿಸಲು ಸಹಕಾರಿಯಾಗುವ ಅಗ್ನಿ.]
     ಮೊದಲೇ ಹೇಳಿರುವಂತೆ ಕೋಪಿಷ್ಠರೊಡನೆ ಏಗಬಹುದು, ಮೂರ್ಖರೊಡನೆ ಸ್ನೇಹ ಮಾಡಬಹುದು, ಸಂಕೋಚ ಸ್ವಭಾವದವರೊಡನೆ ಮೌನವಾಗಿರಬಹುದು, ಆದರೆ ಮತ್ಸರಿಸುವವರ ಜೊತೆ ಬಾಂಧವ್ಯ ಹೊಂದಿರುವುದು, ಸರಸ ಸಂಭಾಷಣೆಗಳನ್ನು ಮಾಡುವುದೂ ಸಹ ಅಪಾಯಕಾರಿಯೇ ಎಂಬುದು ಅನುಭವಿಗಳ ಮಾತು. ಏಕೆಂದರೆ ಮೇಲೆ ಕಾಣುವಂತೆ, ತೋರಿಸಿಕೊಳ್ಳುವಂತೆ ಅವರು ಇರುವುದೇ ಇಲ್ಲ. ಒಳಗಿರುವ ವಿಷಸರ್ಪ ಯಾವಾಗ ಕಚ್ಚಲಿ ಎಂದು ಒಳಗೊಳಗೇ ಬುಸುಗುಡುತ್ತಿರುತ್ತದೆ. ಮತ್ಸರದಲ್ಲಿ ಪ್ರೀತಿ ಇರುತ್ತದೆ, ಆದರೆ ಅದು ಅವರಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರೀತಿ ನಿಜವಾಗಿ ಕುರುಡಲ್ಲ, ಮತ್ಸರ ಕುರುಡಾಗಿರುತ್ತದೆ. ಅದು ವಾಸ್ತವತೆಯನ್ನು ಕಾಣಲು, ಅರಿಯಲು ಇಚ್ಚಿಸುವುದೇ ಇಲ್ಲ. ಇತರರ ಕೆಡುಕಿಗಾಗಿ ಹಂಬಲಿಸುವ ಅದು ಮುಂದೊಮ್ಮೆ ತಿರುಗುಬಾಣವಾಗಿ ಬರುತ್ತದೆಂಬ ಅರಿವು ಅದಕ್ಕಿರುವುದಿಲ್ಲ. ಮತ್ಸರವೆಂದರೆ ಮತ್ತೇನೂ ಅಲ್ಲ, ನಗುವ ಶತ್ರುಗಳ ನಡುವೆ ಏಕಾಂಗಿಯಾಗಿರುವಂತೆ ಭಾಸವಾಗುವುದೇ ಮತ್ಸರ.
     ಆಳವಾಗಿ ಚಿಂತಿಸಿದರೆ ಅರ್ಥವಾಗುತ್ತದೆ. ಮತ್ಸರ ಕೀಳರಿಮೆಯಿಂದ ನರಳುವವರ ಕಾಯಿಲೆಯೇ ಸರಿ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಅರಸುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ನಮ್ಮನ್ನು ನಾವೇ ಇಷ್ಟಪಡದಿದ್ದರೆ ಬೇರೆಯವರು ಇಷ್ಟಪಡಬೇಕೆಂದು ಹೇಗೆ ಬಯಸುವುದು? ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಇತರರ ಮೇಲೆ ಪರಿಶೋಧನೆಯ ದೃಷ್ಟಿ ಬೀರುವುದನ್ನು ನಿಲ್ಲಿಸಿ ನಮ್ಮೊಳಗೆ ನಾವು ಕಣ್ಣು ಹಾಯಿಸಿಕೊಳ್ಳಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು, ಕಳೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಬೆಳವಣಿಗೆ, ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಮತ್ಸರ ನಮ್ಮ ಬೆಳವಣಿಗೆಯನ್ನು ತಿನ್ನುತ್ತಿತ್ತೆಂಬ ಅರಿವು ಬರುವುದು ಆಗಲೇ. ಒಂದು ಮಾತನ್ನು ನೆನಪಿಡಬೇಕು, ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ. ಎತ್ತರವಾಗಿರುವ ಮರವನ್ನು, ಪರ್ವತಗಳನ್ನು ಬಿರುಗಾಳಿ ಬಾಧಿಸುತ್ತದೆ ಅಲ್ಲವೇ? 
     ಒಟ್ಟಾರೆಯಾಗಿ ಹೇಳಬೇಕೆಂದರೆ ಮತ್ಸರವೆಂಬುದು ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ. ವೇದದ ಈ ಕರೆ ನಮ್ಮನ್ನು ಎಚ್ಚರಿಸಲಿ:
ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್.೯.೬೩.೪)
ಅರ್ಥ: "ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ."
-ಕ.ವೆಂ.ನಾಗರಾಜ್.
**************
14.7.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.





ಭಾನುವಾರ, ಜುಲೈ 13, 2014

ಅಂತ್ಯ ಸಂಸ್ಕಾರ : ಮಹಿಳೆಯರು ಮಾಡಬಹುದೇ?


     ಅಂತ್ಯ್ಠೇಷ್ಠಿ - ಮಾನವ ಜೀವನದ ೧೬ ಸಂಸ್ಕಾರಗಳಲ್ಲಿ ಕೊನೆಯದಾದ ಇದು ಹೆಸರೇ ಹೇಳುವಂತೆ ಅಂತಿಮ ಅಥವ ಅಂತ್ಯ ಸಂಸ್ಕಾರವಾಗಿದೆ. ಸ್ತ್ರೀ ತಾರತಮ್ಯವನ್ನು ಬಹುತೇಕ ಎಲ್ಲಾ ಧರ್ಮ, ಮತಗಳಲ್ಲಿ ಕಾಣುತ್ತಿದ್ದೇವೆ. ಪ್ರಮಾಣ ಹೆಚ್ಚು, ಕಡಿಮೆಯಿರಬಹುದು ಮತ್ತು ಇದಕ್ಕೆ ಕಾರಣಗಳೂ ಇರಬಹುದು. ಒಂದು ಮತದಲ್ಲಂತೂ ಸ್ತ್ರೀಯನ್ನು ಅತಿ ನಿಕೃಷ್ಟವಾಗಿ ಸಂಪ್ರದಾಯದ ಹೆಸರಿನಲ್ಲಿ ಬಂಧಿಸಲಾಗಿದೆಯೆನ್ನಬಹುದು. ಸ್ತ್ರೀಯರ ವಿರುದ್ಧದ ಅನೇಕ ಕಟ್ಟುಪಾಡುಗಳು, ಸಂಪ್ರದಾಯಗಳು ಅವರನ್ನು ಹಲವು ರಂಗಗಳಲ್ಲಿ ಹಿಂದುಳಿಯುವಂತೆ ಮಾಡಿವೆ. ಹಿಂದೂ ಧರ್ಮದಲ್ಲಂತೂ ಅನೇಕ ರೀತಿಯ ಸಂಪ್ರದಾಯಗಳಿದ್ದು ಸಮಾಜವು ಕಾಲಕಾಲಕ್ಕೆ ತಕ್ಕಂತೆ ಹಲವು ಸಂಪ್ರದಾಯಗಳನ್ನು ಕೈಬಿಟ್ಟಿದೆ, ಕೆಲವು ಹೊಸ ಹೊಸ ಸಂಪ್ರದಾಯಗಳನ್ನು ರೂಢಿಸಿಕೊಳ್ಳುತ್ತಿದೆ. ಕಟ್ಟರ್ ಸಂಪ್ರದಾಯವಾದಿಗಳು ಇರುವಂತೆಯೇ ಕಾಲಕಾಲಕ್ಕೆ ಹೊಂದಿಕೊಂಡು ನಡೆಯುವ ಸುಧಾರಣಾವಾದಿಗಳು, ವಿರೋಧಿಗಳು, ನಾಸ್ತಿಕರು, ಹೀಗೆ ಹಲವು ವಿಚಾರಗಳನ್ನು ಹೊಂದಿದವರು ಇದ್ದು ಎಲ್ಲರನ್ನೂ ಹೊಂದಿಕೊಂಡು, ಒಪ್ಪಿಕೊಂಡು (ಕೆಲವೊಂದು ಸಂದರ್ಭಗಳ ಅಪವಾದಗಳನ್ನು ಹೊರತುಪಡಿಸಿ) ಸಾಗುತ್ತಿರುವ ಧರ್ಮ ಬಹುಷಃ ಇದೊಂದೇ ಇರಬೇಕು. ಮುಕ್ತ ವೈಚಾರಿಕತೆಗೆ, ವಿಮರ್ಶೆಗೆ ತೆರೆದುಕೊಂಡಿರುವ ಇದು ಮನನ, ಮಥನಗಳಿಂದ ಬದಲಾಗುತ್ತಾ ಹೋಗುತ್ತಿರುವ ಜೀವಂತಿಕೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀಯರಿಗೆ ಅಂತ್ಯ ಸಂಸ್ಕಾರ ಮಾಡಲು ಅವಕಾಶವಿದೆಯೇ ಎಂಬುದರ ಜಿಜ್ಞಾಸೆ ನಡೆಸುವುದು ಈ ಲೇಖನದ ಉದ್ದೇಶವಾಗಿದೆ.
    ಪ್ರಾರಂಭದಲ್ಲಿ ಒಂದೆರಡು ಘಟನೆಗಳನ್ನು ನೋಡೋಣ. ಉತ್ತರಪ್ರದೇಶದ ಲಕ್ನೌ ಸಮೀಪದ ಭಾಗಲ್ಪುರ ಗ್ರಾಮದ ಮೂವರು ಸೋದರಿಯರು - ರಿಂಕು, ರೀಮಾ ಮತ್ತು ಅಂಜು - ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ತಮ್ಮ ಅಜ್ಜ ವೀರ ಬಹಾದುರನ ಅಂತ್ಯ ಸಂಸ್ಕಾರಗಳನ್ನು ನೆರವೇರಿಸಿದರು. ಸುಮಾರು ಐದು ವರ್ಷದ ಹಿಂದೆ ನಡೆದ ಈ ಘಟನೆ ಕುರಿತು ಗ್ರಾಮದ ಹಿರಿಯರು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾದ ಕಾರ್ಯ ಮಾಡಬಾರದು ಎಂದು ಎಚ್ಚರಿಸಿದರೂ ಲೆಕ್ಕಿಸದ ಈ ಸೋದರಿಯರು ವೈದಿಕ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಿಬಿಟ್ಟರು. ಮೃತ ಬಹಾದುರನ ಇಬ್ಬರು ತಮ್ಮಂದಿರು ಸಮೀಪದ ಗ್ರಾಮದಲ್ಲಿದ್ದರೂ ವೈಯಕ್ತಿಕ ಕಾರಣಗಳಿಗಾಗಿ ಸತ್ತಾಗಲೂ ಸ್ಥಳಕ್ಕೆ ಬಂದಿರಲಿಲ್ಲ. ಕುಟುಂಬದಲ್ಲಿ ಗಂಡು ಮಕ್ಕಳಿಲ್ಲದಿದ್ದುದರಿಂದ ಇವರು ತಮ್ಮ ತಾಯಿ ಮತ್ತು ಅಜ್ಜಿಯ ಒಪ್ಪಿಗೆ ಪಡೆದು ಈ ಕೆಲಸ ಮಾಡಿದ್ದರು. ಈ ಘಟನೆ ನಡೆದ ಒಂದು ತಿಂಗಳ ನಂತರದ ಘಟನೆ ಇದಕ್ಕೆ ವಿರುದ್ಧವಾಗಿದೆ. ಇದೂ ಸಹ ಲಕ್ನೌ ಸಮೀಪದ ಗ್ರಾಮ ಭಾಗವತಪುರದಲ್ಲಿ ನಡೆದದ್ದು. ಬಡಕುಟುಂಬದ ೫೫ ವರ್ಷದ ಮಹಿಳೆ ಮಾಂಗ್ರಿ ತನ್ನ ಗಂಡ ೬೨ ವರ್ಷದ ನನ್ಹೆ ಸತ್ತಾಗ ತಾನೇ ಅಂತ್ಯ ಸಂಸ್ಕಾರ ಮಾಡಲು ಇಚ್ಛಿಸಿದಾಗ ಗ್ರ್ರಾಮಸ್ಥರು ಮೊದಲು ಅವಾಕ್ಕಾದರು. ಕೆಲವು ಹಿರಿಯರು ವಿರೋಧಿಸಿದರು. ಕೊನೆಯಲ್ಲಿ ಅವರಿಗೆ ಗಂಡು ಮಕ್ಕಳಿಲ್ಲದ್ದರಿಂದ ಅವಳಿಗೆ ಅಂತ್ಯ ಸಂಸ್ಕಾರ ಮಾಡಲು ಸಹಕರಿಸಲು ನಿರ್ಧರಿಸಿದರು. ಆಕೆ ಬಡವಳಾದ್ದರಿಂದ ಗ್ರಾಮಸ್ಥರೇ ಹಣ ಹೊಂದಿಸಿಕೊಟ್ಟರು. ಸಾವಿರ ಸಂಖ್ಯೆಯಲ್ಲಿ ಸೇರಿದ ಜನರು ಅದನ್ನು ಬೆಂಬಲಿಸಿದ್ದಲ್ಲದೆ ವೈದಿಕ ಸಂಪ್ರದಾಯದ ಅನುಸಾರ ಗಂಡಕಿ ನದಿ ತೀರದಲ್ಲಿ ಚಿತೆಗೆ ಮಾಂಗ್ರಿ ಅಗ್ನಿಸ್ಪರ್ಶ ಮಾಡಿದಾಗಲೂ ಹಾಜರಿದ್ದು ಮಾನವೀಯತೆ ಮೆರೆದರು.
     ಎರಡು ವರ್ಷದ ಹಿಂದಿನ ಸಂಗತಿಯಿದು. ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಸಮೀಪದ ದರಿಯಾ ಗ್ರಾಮದ ಒಬ್ಬ ಬಡಬ್ರಾಹ್ಮಣ ಸ್ತ್ರೀಯ ವ್ಯಥೆಯ ಕಥೆಯಿದು. ಆಕೆಯ ಗಂಡ ಒಬ್ಬ ಪೂಜಾರಿ ಮತ್ತು ಬಡರೈತನಾಗಿದ್ದ. ಬಿಸಿಲಿನ ಝಳದಿಂದ ಕಿರಿ ವಯಸ್ಸಿನಲ್ಲಿ ಸತ್ತಾಗ ಅವನ ಅಂತ್ಯ ಸಂಸ್ಕಾರ ಮಾಡಲು ಪತ್ನಿ ಬಸಂತಿ ಮಿಶ್ರಾ ನಿರ್ಧರಿಸಿದಳು. ಅವರಿಗೆ ಗಂಡು ಮಕ್ಕಳಿರಲಿಲ್ಲ. ಇದ್ದವಳು ಒಬ್ಬ ಐದು ವರ್ಷದ ಹೆಣ್ಣು ಮಗಳಷ್ಟೆ. ಯಥಾಪ್ರಕಾರ ವಿರೋಧ ವ್ಯಕ್ತವಾಯಿತು. ಗಂಡು ಮಕ್ಕಳಿಲ್ಲದ ಕಾರಣ ತಾನು ಅಂತ್ಯ ಸಂಸ್ಕಾರ ಮಾಡಬಹುದೆಂಬ ಅವಳ ವಾದವನ್ನು ಸಂಪ್ರದಾಯದ ಹೆಸರಿನಲ್ಲಿ ಜನ ಒಪ್ಪಲಿಲ್ಲ. ಆದರೆ ತನ್ನ ನಿಲುವಿಗೆ ಬದ್ಧಳಾದ ಅವಳು ಅಂದು ಮಧ್ಯಾಹ್ನ ಗಂಡನ ಚಿತೆ ಸಿದ್ಧಪಡಿಸಿ ಅಗ್ನಿಸ್ಪರ್ಶ ಮಾಡಿದಳು. ಅಂತ್ಯ ಸಂಸ್ಕಾರ ಮಾಡುವವರು ಕೇಶಮುಂಡನ ಮಾಡಿಸಿಕೊಳ್ಳಬೇಕು, ಬಸಂತಿ ಮಾಡಿಸಿಕೊಂಡಿರಲಿಲ್ಲವಾಗಿ ಆಕೆ ದಶಾಕರ್ಮದ ದಿನ ಮುಂಡನ ಮಾಡಿಸಿಕೊಳ್ಳಲೇಬೇಕೆಂದು ಅವಳನ್ನು ಒತ್ತಾಯಿಸಲಾತು. ವಿಧಿಯಿಲ್ಲದೆ ಮುಂಡನ ಮಾಡಿಸಿಕೊಂಡ ಆಕೆ ಹೇಳಿದ್ದು: "ನಾನು ಅವರು ಹೇಳಿದಂತೆ ಮಾಡಿದೆ. ವಿರೋಧಿಸಿ ನಾನು ಎಲ್ಲಿಗೆ ಹೋಗಲಿ? ನನ್ನ ಗಂಡ ಹೋಗಿಬಿಟ್ಟ ಮತ್ತು ನಾನು ಈ ಸಮಾಜದಲ್ಲೇ ಬದುಕಬೇಕಲ್ಲಾ!" ಗ್ರಾಮದ ಇತರ ಹೆಣ್ಣುಮಕ್ಕಳಿಗೆ ಸಿಟ್ಟು ಉಕ್ಕಿ ಬರುತ್ತಿದ್ದರೂ ಅವರಿಗೆ ಮಾತನಾಡಲು ಧೈರ್ಯವಿರಲಿಲ್ಲ.
     ನಮ್ಮ ಕರ್ನಾಟಕದ್ದೇ ಈ ಉದಾಹರಣೆ ನೋಡೋಣ. ಚೀಫ್ ಅಕೌಂಟೆಂಟ್ ಬಿ.ಜಿ.ಇಂದಿರಮ್ಮ ಒಬ್ಬ ಕೆ.ಎ.ಎಸ್. ಅಧಿಕಾರಿ. ಕೆಲವು ವರ್ಷಗಳ ಹಿಂದೆ ಅವರ ತಂದೆ ಬೆಳಗೊಳ ಗ್ರಾಮದ ಗೋವಿಂದೇಗೌಡ ಮೃತರಾದಾಗ ಅವರ ನಾಲ್ಕನೆಯ ಮಗಳಾದ ಈಕೆ ಬಲಮುರಿಯಲ್ಲಿ ತಂದೆಯ ಅಂತ್ಯ ಸಂಸ್ಕಾರ ಮಾಡಿದ್ದಲ್ಲದೆ ೧೧ನೆಯ ದಿನ ಸಂಪ್ರದಾಯದಂತೆ ಕೇಶಮುಂಡನವನ್ನೂ ಮಾಡಿಸಿಕೊಂಡರು. ತಾಯಿ ಸತ್ತಾಗ ಚಿತಾಭಸ್ಮವನ್ನು ವಾರಣಾಸಿಗೆ ಕೊಂಡೊಯ್ದು ಗಂಗೆಯಲ್ಲಿ ವಿಸರ್ಜಿಸಿದ್ದ ಇವರು, ತಂದೆಯ ಚಿತಾಭಸ್ಮವನ್ನು ಕಾವೇರಿಯಲ್ಲಿ ವಿಸರ್ಜಿಸಿದರು. "ನಮ್ಮ ತಂದೆ-ತಾಯಿಗೆ ನಾವು ಐವರು ಹೆಣ್ಣು ಮಕ್ಕಳು. ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಅದರಲ್ಲಿ ತಪ್ಪೇನಿದೆ?" ಎಂಬುದು ಇಂದಿರಮ್ಮನವರ ಪ್ರಶ್ನೆ. ಇಂದಿರಮ್ಮನವರು ಸ್ವತಃ ವಿವಾಹಿತರಾಗಿದ್ದೂ ಕೇಶಮುಂಡನ ಮಾಡಿಸಿಕೊಂಡಿದ್ದು ಸರಿಯಲ್ಲವೆಂದು ಕೆಲವರು ಬಂಧುಗಳು ಆಕ್ಷೇಪಿಸಿದ್ದರೆ, ಕೆಲವರು ಬಂಧುಗಳು ಬೆಂಬಲಿಸಿದ್ದರು. 
     ನನ್ನ ಸ್ನೇಹಿತರೊಬ್ಬರು ಹೇಳಿದ ಈ ಸಂಗತಿ ಮನಕಲಕುತ್ತದೆ. ಒಂದು ಕುಟುಂಬದಲ್ಲಿ ತಾಯಿ ಮತ್ತು ಮಗಳು ಇಬ್ಬರೇ ಇದ್ದರು.  ತಾಯಿ ಸತ್ತ ಸಂದರ್ಭದಲ್ಲಿ ಮಗಳು ತನ್ನ ತಾಯಿಯ ಅಂತ್ಯಕ್ರಿಯೆಗಳನ್ನು ದೂರದ ಸಂಬಂಧಿ ಮಾಡುತ್ತಿದ್ದಾಗ ವೇದನೆಯಿಂದ ಉದ್ಗರಿಸಿದ್ದು: 'ಓ ದೇವರೇ, ನಾನು ಮಗನಾಗಿದ್ದಿದ್ದರೆ ಹೀಗೆ ಪರಕೀಯತೆಯ ಭಾವನೆ ಬರುತ್ತಿರಲಿಲ್ಲ!'.  ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಬಿಜೆಪಿಯ ಕೇಂದ್ರ ಸಚಿವ ಶ್ರೀ ಗೋಪಿನಾಥ ಮುಂಡೆಯವರ ಅಂತ್ಯ ಸಂಸ್ಕಾರವನ್ನು ಅವರ ಮಗಳು ಮಹಾರಾಷ್ಟ್ರದ ವಿಧಾನಸಭೆ ಸದಸ್ಯೆಯಾಗಿರುವ ಪಂಕಜಾರವರೇ ನೆರವೇರಿಸಿದ್ದನ್ನು ನಾವು ಕಂಡಿದ್ದೇವೆ.
     ಸ್ತ್ರೀಯರು ಅಂತ್ಯ ಸಂಸ್ಕಾರ ಮಾಡಬಾರದು ಎಂಬ ವಾದದ/ಸಂಪ್ರದಾಯದ ಹಿನ್ನೆಲೆ ಏನಿರಬಹುದೆಂಬ ಬಗ್ಗೆ ನೋಡೋಣ. ಈ ಕುರಿತ ಸಂಪ್ರದಾಯದಲ್ಲಿನ ಕೆಲವು ನಿರ್ಬಂಧಗಳಲ್ಲಿ ಅರ್ಥವಿರಲೂಬಹುದು ಮತ್ತು ಕೆಲವುದರಲ್ಲಿ ಮುಖ್ಯ ಕಾರ್ಯಗಳಲ್ಲಿ ಮಹಿಳೆಯರನ್ನು ಹಿಂದೆ ಸರಿಸುವ ಉದ್ದೇಶವೂ ಇರಬಹುದು. ಗಂಡು ಮಕ್ಕಳೇ ಅಂತ್ಯ ಸಂಸ್ಕಾರ ಮಾಡಬೇಕೆಂಬ ಸಂಪ್ರದಾಯ ಶತಮಾನಗಳಿಂದ ವಿವಾದಗ್ರಸ್ತ ವಿಷಯವಾಗಿ ಮುಂದುವರೆದಿದೆ. ದಂಪತಿಗಳಿಗೆ ಹೆಣ್ಣು ಮಗು ಮಾತ್ರ ಇದ್ದ ಸಂದರ್ಭದಲ್ಲಿ ಕುಟುಂಬದ ಹತ್ತಿರದ ಗಂಡು ಸಂಬಂಧಿ ಅಂತ್ಯ ಸಂಸ್ಕಾರ ಮಾಡಬೇಕೆನ್ನುತ್ತಾರೆ. ಇದು ಹೆಣ್ಣು ಮಕ್ಕಳಿಗೆ ಹಿಂದೆ ಪಿತ್ರಾರ್ಜಿತ ಸ್ವತ್ತಿನಿಂದ ವಂಚಿತರಾಗಲು ಕಾರಣವಾಗುತ್ತಿತ್ತು. ಅಂತ್ಯ ಸಂಸ್ಕಾರ ನಡೆಸಿದ ಕಾರಣದಿಂದ ಆಸ್ತಿ ಹಕ್ಕು ಸ್ಥಾಪಿಸುವುದು ಹಿಂದಿನಿಂದಲೂ ಇರುವುದೇ ಆಗಿದೆ. ಈಗ ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಕೊಡುವ ಕಾನೂನು ಬಂದಿರುವುದು ಒಂದು ಕ್ರಾಂತಿಕಾರಿ ಬೆಳವಣಿಗೆಯೆನ್ನಬೇಕು. ಹೆಣ್ಣು ಮಕ್ಕಳು ಮೃದು ಹೃದಯಿಗಳಾಗಿದ್ದು ಭಾವನಾತ್ಮಕವಾಗಿ ಧಿಡೀರ್ ಸ್ಪಂದನಶೀಲರಾಗಿದ್ದು ಅಂತ್ಯ ಸಂಸ್ಕಾರದ ವೇಳೆ ಮಿತಿಮೀರಿದ ದುಃಖಾವೇಶದಿಂದ ಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಷ್ಟವೆಂಬ ಭಾವನಾತ್ಮಕ ಕಾರಣವನ್ನೂ ಮುಂದೊಡ್ಡಲಾಗುತ್ತದೆ. ಅಲ್ಲದೆ ಗರ್ಭಿಣಿಯಾಗಿರುವುದು, ಮಾಸಿಕ ಋತುಚಕ್ರಕ್ಕೊಳಪಡುವುದು ಸಹ ಅಂತ್ಯ ಸಂಸ್ಕಾರ ಕ್ರಿಯೆಗೆ ಅಡ್ಡಿಯಾಗುವ ಕಾರಣಗಳೆನ್ನುತ್ತಾರೆ. ಇಂತಹುದನ್ನೆಲ್ಲಾ ಗಮನಿಸಿ ಸ್ತ್ರೀಯರನ್ನು ಅಂತ್ಯ ಸಂಸ್ಕಾರ ಮಾಡುವ ಕೆಲಸದಿಂದ ವಿನಾಯಿತಿಗೊಳಿಸಲಾಗಿದೆಯೆನ್ನುತ್ತಾರೆ. ಆರೋಗ್ಯದ ಕಾರಣ ಹೊರತುಪಡಿಸಿ ಉಳಿದ ಕಾರಣಗಳು ಸಮರ್ಥನೀಯವೆಂದು ಹೇಳಲಾಗದು. ಈಗೀಗ ಮಹಿಳೆಯರೂ ತಮ್ಮ ಹಕ್ಕನ್ನು ಸ್ಥಾಪಿಸುವತ್ತ ದಿಟ್ಟ ಹೆಜ್ಜೆಗಳನ್ನಿಡುತ್ತಿದ್ದಾರೆ. ಅದಕ್ಕೆ ಉದಾಹರಣೆಗಳೇ ಮೇಲೆ ಉಲ್ಲೇಖಿಸಿರುವ ಘಟನೆಗಳು. ಇನ್ನೊಂದು ಕಾರಣವೆಂದರೆ ಸ್ತ್ರೀ ವಿವಾಹದ ನಂತರ ಗಂಡನ ಕುಟುಂಬಕ್ಕೆ ಸೇರಿದವಳಾಗುತ್ತಾಳೆ ಹಾಗಾಗಿ ವಿವಾಹವಾದ ಸ್ತ್ರೀ ತನ್ನ ತಂದೆ-ತಾಯಿಯರ ಅಂತ್ಯ ಸಂಸ್ಕಾರ ಮಾಡಬರುವುದಿಲ್ಲ. ಆದರೆ ಮದುವೆಯಾಗದ ಹೆಣ್ಣು ಮಗಳು ಈ ಕ್ರಿಯೆಗಳನ್ನು ನಡೆಸಲು ಅಡ್ಡಿಯಿಲ್ಲವೆಂಬ ವಾದವೂ ಇದೆ. 
     ಗರುಡ ಪುರಾಣದ ೧೬ ಅಧ್ಯಾಯಗಳಲ್ಲಿ ನರಕದ ದರ್ಶನ, ಪಾಪಿಗಳಿಗೆ ಸಲ್ಲುವ ಶಿಕ್ಷೆ ಇತ್ಯಾದಿಗಳ ವರ್ಣನೆ ಅಲ್ಲದೆ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನೂ ವಿವರಿಸಲಾಗಿದೆ. ೧೧ನೆಯ ಅಧ್ಯಾಯದ ೧೨-೧೭ರ ಶ್ಲೋಕದಲ್ಲಿ ಮೃತನ ಅಂತ್ಯ ಸಂಸ್ಕಾರವನ್ನು ಮಗ ಮಾಡಬೇಕು, ಮಗ ಇಲ್ಲದಿದ್ದಲ್ಲಿ ಹೆಂಡತಿ, ಹೆಂಡತಿ ಇಲ್ಲದಿದ್ದಲ್ಲಿ ಸೋದರ ಅಥವ ಒಬ್ಬ ಬ್ರಾಹ್ಮಣ ಅಥವ ಅರ್ಹ ಸಂಬಂಧಿ ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದೆ. ಮಗಳ ಕುರಿತು ಇಲ್ಲಿ ಉಲ್ಲೇಖಿಸಿಲ್ಲ. ೧೮ನೆಯ ಶ್ಲೋಕದಲ್ಲಿ ಒಬ್ಬ ಪುರುಷ ಅಥವ ಸ್ತ್ರೀ ಅಂತ್ಯ ಸಂಸ್ಕಾರ ನಡೆಸಿದರೆ ಸಿಗುವ ಫಲದ ಬಗ್ಗೆ ಹೇಳಿದೆ. ಇದರ ಅರ್ಥ ಸ್ಪಷ್ಟ - ಸ್ತ್ರೀ ಸಹ ಅಂತ್ಯ ಸಂಸ್ಕಾರ ಮಾಡಲು ಅರ್ಹಳು ಎಂದೇ! ಹೀಗಿರುವಾಗ ಅಂತ್ಯ ಸಂಸ್ಕಾರ ಮಾಡಲಿಚ್ಛಿಸುವ ಸ್ತ್ರೀಯರಿಗೆ ಸಂಪ್ರದಾಯದ ಹೆಸರಿನಲ್ಲಿ ಅಡ್ಡಿಪಡಿಸುವುದು ಸೂಕ್ತವಾಗಲಾರದು. ಅಂತ್ಯ ಸಂಸ್ಕಾರದ ಕ್ರಿಯೆಗಳ ವಿಧಿ-ವಿಧಾನಗಳ ನೈಜ ಅರ್ಥ ಮತ್ತು ಅನುಷ್ಠಾನಗಳನ್ನು ತಿಳಿಯದೆ ಕ್ರಿಯೆ ಮಾಡಿಸುವವರು ಅಥವ ತಿಳಿದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವವರು ಹಾಗೂ ಸಂಪ್ರದಾಯಗಳ ನೈಜ ಹಿನ್ನೆಲೆಗಳನ್ನು ತಿಳಿಯಲು ಪ್ರಯತ್ನಿಸದೆ ಧಿಡೀರ್ ತೀರ್ಮಾನ ಕೊಡುವ ವಿಚಾರವಾದಿಗಳೆನಿಸಿಕೊಂಡವರು ಇಂತಹ ವಿಷಯಗಳಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆಂದರೆ ತಪ್ಪಾಗಲಾರದು. 
     ಹಿಂದೂಗಳಿಗೆ ವೇದಗಳೇ ಪರಮ ಪ್ರಮಾಣ. ವಿಶೇಷವೆಂದರೆ ವೇದಗಳಲ್ಲಿ ಸಂಪ್ರದಾಯಗಳ ಬಗ್ಗೆ ಏನೂ ಹೇಳಿಲ್ಲ. ಸಂಪ್ರದಾಯಗಳನ್ನು ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಸಮಾಜದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದು, ಅವುಗಳಲ್ಲಿ ತುರ್ತು ಸನ್ನಿವೇಶಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಕೆಲವು ವಿನಾಯಿತಿಗಳಿಗೂ ಅವಕಾಶವಿತ್ತು. ಆದರೆ ಸಂದಿಗ್ಧ ಸಂದರ್ಭಗಳಲ್ಲಿ ನಿರ್ಧಾರಗಳನ್ನು ವೇದಗಳನ್ನು ಆಧರಿಸಿಯೇ ಮಾಡಬೇಕು. ವೇದಗಳ ಉದಾತ್ತತೆ ಎಷ್ಟೆಂದರೆ ಅವು ಎಲ್ಲಿಯೂ ಹೀಗೆ ಮಾಡು, ಹಾಗೆ ಮಾಡಬೇಡ ಎಂದು ಹೇಳುವುದಿಲ್ಲ. ಅವು ಸರಿಯಾದ ಮಾರ್ಗ ಯಾವುದೆಂದು ಮಾತ್ರ ತೋರಿಸುತ್ತದೆ ಮತ್ತು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವುದನ್ನು ನಮಗೇ ಬಿಡುತ್ತದೆ. ವೇದವು "ಭಸ್ಮಾಂತಂ ಶರೀರಮ್"(ಯಜು.೪೦.೧೫) ಎಂದು ಹೇಳುತ್ತದೆ. ಇದರ ಅರ್ಥ ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ ಎಂದು. ಮೃತರಾದ ನಂತರ ಶರೀರವನ್ನು ಅಗ್ನಿಗೆ ಅರ್ಪಿಸಬೇಕು ಎಂದು ಇದರ ಅರ್ಥ. ಆದರೆ ಮೃತ ಶರೀರವನ್ನು ಅಗ್ನಿಗೆ ಅರ್ಪಿಸಿದ ನಂತರ ಮಾಡಬೇಕಾದ ಕ್ರಿಯೆಗಳ ಬಗ್ಗೆ ವೇದಮಂತ್ರಗಳಲ್ಲಿ ಯಾವುದೇ ಉಲ್ಲೇಖಗಳಿಲ್ಲ. "ಶ್ರಾದ್ಧ - ಏಕೆ ಮತ್ತು ಹೇಗೆ?" ಎಂಬ ನನ್ನ ಇನ್ನೊಂದು ಲೇಖನದಲ್ಲಿ ಈ ವಿಚಾರದಲ್ಲಿ ವಿಸ್ತೃತವಾಗಿ ಚರ್ಚಿಸಿರುವೆ. ಆದ್ದರಿಂದ ಈ ಕುರಿತು ಇಲ್ಲಿ ಮತ್ತೆ ವಿವರಿಸಲು ಹೋಗುವುದಿಲ್ಲ. ರೂಢಿಗತವಾದ ಸಂಪ್ರದಾಯಗಳು ಸಮಾಜದ ಹಿತದ ಸಲುವಾಗಿ ಹೊರತು ಮತ್ತೇನಲ್ಲ. ಹೀಗಾಗಿ ಅವುಗಳನ್ನು ಸದಾಕಾಲಕ್ಕೆ ಕುರುಡಾಗಿ ಅನುಸರಿಸುವುದಕ್ಕಿಂತ ಒಟ್ಟು ಹಿತ ಮತ್ತು ಅಗತ್ಯ ಅನುಸರಿಸಿ, ಈಗಾಗಲೇ ಹಲವಾರು ಸಂಪ್ರದಾಯಗಳಲ್ಲಿ ಮಾಡಿಕೊಂಡಿರುವಂತೆ ಕಾಲಕ್ಕೆ ಅನುಗುಣವಾದ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ಸಾಂದರ್ಭಿಕವಾಗಿ ಅಗತ್ಯವೆಂದು ಕಂಡುಬಂದಿದ್ದ ಮತ್ತು ಅನುಸರಿಸಲಾಗುತ್ತಿದ್ದ ಬಾಲ್ಯವಿವಾಹ, ಸತಿಪದ್ಧತಿ, ರಜಪೂತ ಸ್ತ್ರೀಯರು ಸಾಮೂಹಿಕವಾಗಿ ತಮ್ಮ ಶೀಲ ಉಳಿಸಿಕೊಳ್ಳಲು ಜೀವ ತ್ಯಜಿಸುತ್ತಿದ್ದ 'ಜೌಹರ್' ಪದ್ಧತಿ, ವಿಧವೆಯರ ಕೇಶಮುಂಡನ, ಮುಸ್ಲಿಮ್ ಆಳ್ವಿಕೆಯಲ್ಲಿ ಮುಸ್ಲಿಮೇತರ ಹಿಂದೂ ಸ್ತ್ರೀಯರೂ ಹಾಕಿಕೊಳ್ಳಬೇಕಾಗಿದ್ದ ಮುಖಮುಸುಕು, ದೇವದಾಸಿ ಪದ್ಧತಿ ಮುಂತಾದುವುಗಳು ಇಂದು ಮರೆಯಾಗಿವೆ. ಚಿಂತಕರ, ಸುಧಾರಕರ ಪ್ರಯತ್ನಗಳೂ ಇದರ ಹಿಂದಿದೆ. ವೇದಕಾಲದಲ್ಲಿ ಸ್ತ್ರೀಯರೂ ಉಪವೀತಧಾರಣೆ ಮಾಡಿಕೊಂಡು ವೇದಾಧ್ಯಯನ ಮಾಡುತ್ತಿದ್ದರು. ಕ್ರಮೇಣ ಯಾವುದೋ ಕಾರಣಕ್ಕೆ ಸುದೂರ ಹಿಂದಿನ ಕಾಲಘಟ್ಟದಲ್ಲಿ ಸ್ತ್ರೀಯರನ್ನು ಇದರಿಂದ ದೂರವಿಡಲಾಯಿತು. ಇದು ಸತ್ಸಂಪ್ರದಾಯವೊಂದರ ಕಣ್ಮರೆಗೆ ಕಾರಣವಾಯಿತು. ವೇದಾಧ್ಯಯನದಿಂದ ಸ್ತ್ರೀಯರು ವಂಚಿತರಾಗಬಾರದು. ವೇದಪಂಡಿತರಾದ ಮೈತ್ರಿ, ಗಾರ್ಗೇಯಿ ಮುಂತಾದ ಅನೇಕ ಋಷಿಕೆಯರ ಉದಾಹರಣೆಗಳಿವೆ. ಇದನ್ನೆಲ್ಲಾ ಏಕೆ ಉದಾಹರಿಸಿದ್ದೆಂದರೆ ಅಂತ್ಯಸಂಸ್ಕಾರದ ವಿಷಯದಲ್ಲೂ ಅಷ್ಟೆ, ಇಂದಿಗೆ ಅಗತ್ಯವಾದ ಕ್ರಮವನ್ನು ಅನುಸರಿಸಿದರೆ ತಪ್ಪೇನಿಲ್ಲ.
     ಕೊನೆಯದಾಗಿ ಹೇಳಬೇಕೆಂದರೆ ಅಂತ್ಯಸಂಸ್ಕಾರ ಮಾಡುವುದು ಕರ್ತವ್ಯವೇ ಹೊರತು ಸವಲತ್ತು ಅಲ್ಲ. ಇದನ್ನು ಸವಲತ್ತು ಎಂದುಕೊಂಡರೆ ಮಾತ್ರ ವಿವಾದ ಸೃಷ್ಟಿಯಾಗುತ್ತದೆ. ವೇದವು ಯಾವುದೇ ರೀತಿಯ ಅಸಮಾನತೆಗೆ ವಿರೋಧವಾಗಿದೆ. ಯಾವುದೇ ಕ್ರಿಯೆಗಳ ಅರ್ಥ ತಿಳಿದು ಮಾಡುವುದರಿಂದ ಮಾನಸಿಕ ತೃಪ್ತಿ, ಸಾರ್ಥಕತೆ ಇರುತ್ತದೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರನ್ನು ಕೆಲವು ಕ್ರಿಯೆಗಳಿಂದ ದೂರವಿಡುವ ವಿಚಾರದಲ್ಲಿ ಮಹಿಳೆಯರ ಪಾಲೂ ಇದೆ. ಏಕೆಂದರೆ ಸಂಪ್ರದಾಯಗಳ ಪಾಲನೆ, ಬೆಳವಣಿಗೆಗಳಲ್ಲಿ ಅವರ ಪಾತ್ರವೇ ಮಹತ್ವದ್ದಾಗಿದೆ. ವೈಚಾರಿಕತೆ ಬೆಳೆಸಿಕೊಳ್ಳೋಣವೆಂಬ ವೇದದ ಈ ಕರೆ ನಮಗೆ ಕೇಳಿಸಲಿ:
ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯)
ಅರ್ಥ: ಸತ್ಯವನ್ನೇ ಶಕ್ತಿಯಾಗಿ ಹೊಂದಿರುವವರೇ, ನೀವು ನಿಮ್ಮ ಸ್ವಂತ ವಿವೇಚನೆಯಿಂದಲೇ ಸತ್ಯವನ್ನು ಆವಿಷ್ಕರಿಸಿರಿ, ತಿಳಿಯಿರಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿಹಾಕಿರಿ (ಕಿತ್ತೆಸೆಯಿರಿ).
ವೈಚಾರಿಕತೆಗೆ ಇಷ್ಟು ಮುಕ್ತ ಅವಕಾಶ ಕೊಟ್ಟಿರುವ ವೇದಗಳು ನಮ್ಮ ಹಲವಾರು ಸಂದಿಗ್ಧತೆಗಳ ನಿವಾರಣೆಗೆ ಮಾರ್ಗದರ್ಶಿಯಾಗಿವೆ. ದಾರಿ ಹೀಗಿದೆ, ಹೇಗೆ ಸಾಗಬೇಕು ಅನ್ನುವುದು ಸಾಗುವವರಿಗೆ ಬಿಟ್ಟದ್ದು.
-ಕ.ವೆಂ.ನಾಗರಾಜ್.
**************
7.7.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ:

10.7.2014ರ ಜನಹಿತ ಪತ್ರಿಕೆಯಲ್ಲೂ ಪ್ರಕಟಿತ:



ಗುರುವಾರ, ಜುಲೈ 10, 2014

ಮೋಹಪಾಶ

"ನಿನಗೆ ಅತ್ಯಂತ ಇಷ್ಟವಾದ ವ್ಯಕ್ತಿ ಯಾರು?"
     ಈ ಪ್ರಶ್ನೆಗೆ ಉತ್ತರವಾಗಿ ಯಾರೋ ಒಬ್ಬ ಸುಪ್ರಸಿದ್ಧ ಜನನಾಯಕನ, ಗುರು, ನಟ, ತಂದೆ-ತಾಯಿ, ಬಂಧು, ಗಂಡ/ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಪ್ರಿಯಕರ/ಪ್ರೇಯಸಿ, ಇತ್ಯಾದಿಗಳ ಪೈಕಿಯೋ ಅಥವ ಇನ್ನು ಯಾರದಾದರೋ ಹೆಸರು ಹೇಳಿಯಾರು. ಮುಂದೆ ಈ ಪ್ರಶ್ನೆ ಕೇಳಿ:
"ನೀನು ಅಥವ ನಿನಗೆ ಇಷ್ಟವಾದವರು ಇಬ್ಬರಲ್ಲಿ ಒಬ್ಬರನ್ನು ಮಾತ್ರ ಆರಿಸಿಕೊಳ್ಳಬೇಕು. ಯಾರನ್ನು ಆರಿಸಿಕೊಳ್ಳುವೆ?"
     ಇದಕ್ಕೆ ತಕ್ಷಣ ಉತ್ತರಿಸದಿದ್ದರೂ, ಆಲೋಚಿಸಿ ತಡೆದು ಬರುವ ಉತ್ತರ ಸಹಜವಾಗಿ 'ನನ್ನನ್ನೇ' ಎಂಬುದೇ.
"ದೇವರು ದೊಡ್ಡವನೋ? ನೀನು ದೊಡ್ಡವನೋ?"
"ದೇವರೇ ದೊಡ್ಡವನು."
"ದೇವರು ಅಥವ ನೀನು - ಹೇಳು, ಇಬ್ಬರಲ್ಲಿ ನಿನಗೆ ಯಾರು ಬೇಕು?"
     ಗೊಂದಲಕ್ಕೆ ಒಳಗಾದರೂ ಅಂತಿಮವಾಗಿ ಬರುವ ಉತ್ತರ 'ನಾನೇ' ಎಂಬುದೇ ಆಗಿರುತ್ತದೆ. 'ನಾನು' ಇದ್ದರೆ ತಾನೇ, ನನಗೆ ಇಷ್ಟವಾದವರು, ದೇವರು, ಗೀವರುಗಳೆಲ್ಲಾ ಇರುವುದು! ನಾನೇ ಇಲ್ಲದಿದ್ದರೆ ಅವು ಯಾವುದಕ್ಕೂ ಅರ್ಥವೇ ಇರುವುದಿಲ್ಲ. 'ನಾನು' ಮಹತ್ವದವನಾಗಿರದಿರಲಿ, ಶ್ರೇಷ್ಠನಾಗಿರದಿರಲಿ, ಹೇಗೇ ಇರಲಿ, ಪ್ರಪಂಚದಲ್ಲಿ 'ನಾನು' ಎಲ್ಲರಿಗಿಂತ ಹೆಚ್ಚಾಗಿ ಇಷ್ಟಪಡುವುದು 'ನನ್ನನ್ನೇ'. 'ನನ್ನ' ನಂತರದಲ್ಲಿ ಬೇರೆಯವರು ಬರುತ್ತಾರೆ! ಅರಿಷಡ್ವರ್ಗದಲ್ಲಿ ಒಂದೆನಿಸಿದ ಮೋಹದ ಬೀಜರೂಪ ಇಲ್ಲಿದೆ. ಎಲ್ಲರಿಗಿಂತ ಇಷ್ಟಪಡುವ ವ್ಯಕ್ತಿ 'ನಾನೇ' ಎಂಬುದರಲ್ಲಿ ಒಳ್ಳೆಯ ಆಯ್ಕೆಯಿದೆ. ಏಕೆಂದರೆ ಇಷ್ಟಪಡುವ ಇತರರು ಮುಂದೊಮ್ಮೆ ಯಾವುದೋ ಕಾರಣಗಳಿಗಾಗಿ ಇಷ್ಟವಾಗದೇ ಹೋಗಬಹುದು. ಅಥವ ಅವರುಗಳಿಗೇ ನಾವು ಇಷ್ಟವಾಗದೇ ಹೋಗಬಹುದು. ಪ್ರೀತಿಸಿದ ಹುಡುಗ/ಹುಡುಗಿ ಕೈಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಲ್ಲಾ, ಅದು ತಮಗಿಂತ ಬೇರೆಯವರನ್ನು ಹೆಚ್ಚು ಪ್ರೀತಿಸುವುದನ್ನು ತೋರಿಸುವುದಲ್ಲವೇ ಎಂದು ಕೇಳಬಹುದು. ಇದಕ್ಕೆ ಉತ್ತರ 'ಖಂಡಿತಾ ಅಲ್ಲ' ಎನ್ನಬೇಕಾಗುತ್ತದೆ. ಪ್ರೀತಿಸಿದ ಹುಡುಗ/ಹುಡುಗಿ ಸಿಗದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವವರು ತಮ್ಮನ್ನು ತಾವು ಹೆಚ್ಚು ಇಷ್ಟಪಡುವುದನ್ನು ತೋರಿಸುತ್ತದೆ. ನಿಧಾನವಾಗಿ ಯೋಚಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. 

ನನದು ನನ್ನವರೆಂಬ ಭಾವವದು ಮೋಹ
ಪರದಾಟ ತೊಳಲಾಟ ಸಂಕಟಕೆ ಮೂಲ|
ಹೆಣ್ಣು ಜೇಡಕೆ ತುತ್ತು ಗಂಡು ಸಂಗಮದಿ 
ಜೀವಿಯ ಮೋಹಕೆ ಜೀವವೆ ಬಲಿ ಮೂಢ|| 
     ಮನುಷ್ಯನ ಆರು ಶತ್ರುಗಳಲ್ಲಿ ಒಂದಾದ ಈ ಮೋಹ ಅನ್ನುವುದು ಕೆಟ್ಟದ್ದೇ? ಈ ಪ್ರಶ್ನೆ ಹರಿತವಾದ ಚಾಕು ಒಳ್ಳೆಯದೋ, ಕೆಟ್ಟದೋ ಎಂದು ಕೇಳುವುದಕ್ಕೆ ಸಮನಾಗಿದೆ. ಚಾಕುವನ್ನು ಹಣ್ಣು, ತರಕಾರಿ ಹೆಚ್ಚಲೂ ಬಳಸಬಹುದು, ಯಾರನ್ನೋ ಕೊಲೆ ಮಾಡಲೂ ಬಳಸಬಹುದು. ಇದು ಚಾಕುವಿನ ತಪ್ಪೇ? ಖಂಡಿತಾ ಅಲ್ಲ. ಬಳಸುವವರ ಬಳಸುವ ರೀತಿಯಲ್ಲಿನ ತಪ್ಪಲ್ಲವೇ? ಅದೇ ರೀತಿ ಮೋಹವಶನಾದ ವ್ಯಕ್ತಿ ಮೋಹವನ್ನು ಯಾವ ರೀತಿಯಲ್ಲಿ ತೋರ್ಪಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅದು ಒಳ್ಳೆಯದೋ, ಕೆಟ್ಟದೋ ಆಗುತ್ತದೆ. ಈ ಮೋಹವನ್ನು ಆತ್ಮೋದ್ಧಾರಕ್ಕೂ ಬಳಸಬಹುದು, ಕೇವಲ ತನ್ನೊಬ್ಬನ ಉದ್ಧಾರಕ್ಕಾಗಿ ಇತರರನ್ನು ಹಾಳು ಮಾಡಲೂ ಬಳಸಬಹುದು. 'ತಾನು' ಮತ್ತು 'ತನ್ನೊಬ್ಬನಲ್ಲಿ' ಮೋಹವಿರುವವನು ಪರಮಸ್ವಾರ್ಥಿಯಾಗಿರುತ್ತಾನೆ. ಇಂತಹವನು ತನ್ನೊಬ್ಬನ ಹಿತಕ್ಕಾಗಿ ಯಾರಿಗಾದರೂ ಕೇಡು ಬಗೆಯಲು ಹಿಂದೆಗೆಯಲಾರ. ಈ ಭಾವ ಉನ್ಮಾದ ಸ್ಥಿತಿ ತಲುಪಿದಾಗ ಆಸ್ತಿಗಾಗಿ, ಹಣಕ್ಕಾಗಿ ಸ್ವಂತ ತಂದೆ/ತಾಯಿ/ಬಂಧು/ಬಳಗ ಯಾರನ್ನಾದರೂ ಕರುಣೆಯಿಲ್ಲದೆ ಹತ್ಯೆಗೈಯುವುವರನ್ನು ಕಾಣುತ್ತೇವೆ. ಪತ್ನಿಯನ್ನೇ ವೇಶ್ಯಾವಾಟಿಕೆಗೆ ಮಾರುವ ಕಟುಕರೂ ಕಾಣಸಿಗುತ್ತಾರೆ. ಇತಿಹಾಸದ ಪುಟಗಳಲ್ಲಿ ಇದಕ್ಕೆ ಹೇರಳವಾದ ಉದಾಹರಣೆಗಳು ಸಿಗುತ್ತವೆ. ಅಧಿಕಾರಕ್ಕಾಗಿ ಸ್ವಂತ ತಂದೆ ಷಹಜಹಾನನನ್ನೇ ಸೆರೆಯಲ್ಲಿರಿಸಿದ, ಸೋದರರ ವಿರುದ್ಧವೇ ಯುದ್ಧ ನಡೆಸಿದ, ಸ್ವಂತ ಸೋದರರಾದ ದಾರಾ ಶಿಕೋ ಮತ್ತು ಮುರಾದ ಬಕ್ಷರನ್ನೇ ಇಸ್ಲಾಮ್ ವಿರೋಧಿಗಳೆಂಬ ಹಣೆಪಟ್ಟಿ ಹಚ್ಚಿ ಸಾಯಿಸಿದ ಔರಂಗಜೇಬನ ಉದಾಹರಣೆಯನ್ನೂ ಕೊಡಬಹುದು.

ಮೋಹಪಾಶದ ಬಲೆಯಲ್ಲಿ ಸಿಲುಕಿಹರು ನರರು
ಮಡದಿ ಮಕ್ಕಳ ಮೋಹ ಪರಿಜನರ ಮೋಹ|
ಜಾತಿ-ಧರ್ಮದ ಮೋಹ ಮಾಯಾವಿ ಮೋಹವೇ
ಜಗದ ದುಸ್ಥಿತಿಗೆ ಮೂಲವೋ ಮೂಢ|| 
     ಮೋಹವೆಂಬ ಮಾಯಾಮೋಹಿನಿಯ ಸೆಳೆತಕ್ಕೆ ಒಳಗಾಗದವರು ಯಾರು? ಮೋಹ ಹೆಚ್ಚಾದಷ್ಟೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಹೆಚ್ಚಾಗುತ್ತಾ ಹೋಗುತ್ತದೆ. ಕೇವಲ ತನ್ನೊಬ್ಬನ ಮೇಲಿನ ಮೋಹದ ನಂತರದ ಬೆಳವಣಿಗೆ ತನ್ನ ಕುಟುಂಬದವರ, ಪರಿವಾರದ ಜನರ ಮೇಲಿನ ಮೋಹ. ಇದು ತನ್ನೊಬ್ಬನ ಮೇಲಿನ ಮೋಹಕ್ಕಿಂತ ಸ್ವಲ್ಪ ಉತ್ತಮ. ಏಕೆಂದರೆ ಇದರಲ್ಲಿ ಕುಟುಂಬದ ಜನರೂ 'ತನ್ನೊಡನೆ' ಸೇರಿರುತ್ತಾರೆ. ಈ ಕುಟುಂಬದ ಮೋಹ ಸಹ ಹಾನಿಕರವೇ. ಧೃತರಾಷ್ಟ್ರನ ಮಕ್ಕಳ ಮೇಲಿನ ಮೋಹ 'ಮಹಾಭಾರತ'ಕ್ಕೆ ಕಾರಣವಾಯಿತು. ಮೋಹಾಂಧನಾದ ಧೃತರಾಷ್ಟ್ರನ ಪುತ್ರ ವ್ಯಾಮೋಹ ನ್ಯಾಯ, ನೀತಿ, ಧರ್ಮವನ್ನೇ ತಿಂದದ್ದಲ್ಲದೆ ಕೊನೆಗೆ ಅವನ ಮಕ್ಕಳನ್ನೇ ನುಂಗಿ ನೀರು ಕುಡಿಯಿತು. ನಮ್ಮ ಜನನಾಯಕರುಗಳ ಕುಟುಂಬದ ಮೋಹ ದೇಶ, ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸಲ್ಲಬೇಕಾಗಿದ್ದ ಹಣದ ದೊಡ್ಡ ಭಾಗವನ್ನು ಕಮಿಷನ್, ಪರ್ಸೆಂಟೇಜು, ಕಾಣಿಕೆಗಳ ರೂಪದಲ್ಲಿ ನುಂಗಿ ಹಾಕುತ್ತಿದೆ. ಮೊದಲು ಏನೇನೂ ಅಲ್ಲದಿದ್ದವರು ಇಂದು ಎಷ್ಟು ಕೋಟಿಗಳ ಒಡೆಯರೋ ಯಾರಿಗೂ ಲೆಕ್ಕ ಗೊತ್ತಿಲ್ಲ. ಜನಸೇವೆ, ದೀನ-ದಲಿತೋದ್ಧಾರ, ಜಾತ್ಯಾತೀತತೆ, ಮುಂತಾದ ಮರುಳು ಮಾಡುವ ಮುಖವಾಡಗಳೊಂದಿಗೆ ಜನರ ತಲೆಯ ಮೇಲೆ ಟೋಪಿಯಿಟ್ಟು ತಾವು ಕಿರೀಟ ಧರಿಸುತ್ತಾರೆ.
     ಸ್ವಂತದ್ದಾಯಿತು, ಕುಟುಂಬದ್ದಾಯಿತು, ಇನ್ನು ಜಾತಿ, ಮತ, ಧರ್ಮ, ಸಮುದಾಯ ಇತ್ಯಾದಿಗಳ ಮೇಲಿನ ಮೋಹ ಸಹ ಅಪಾಯಕಾರಿಯೇ. ಸ್ವಂತದ ಜಾತಿ, ಮತಗಳನ್ನು ಪ್ರೀತಿಸಲಿ ಪರವಾಗಿಲ್ಲ. ಆದರೆ, ಇದು ಇತರರ ಮೇಲಿನ ದ್ವೇಷವಾಗಿ ರೂಪುಗೊಂಡರೆ ಸಮಾಜದಲ್ಲಿ ಶಾಂತಿಗೆ ಎಡೆಯೆಲ್ಲಿ? ಅಧಿಕಾರಸ್ಥ ರಾಜಕಾರಣಿಗಳು ಮಾಡುತ್ತಿರುವ ಮೊದಲ ಕೆಲಸವೆಂದರೆ ತಮ್ಮ ಸಿಬ್ಬಂದಿಗಳು, ಸಹಕಾರಿಗಳು, ಹಿತೈಷಿಗಳು, ಸಲಹೆ ಕೊಡುವವರು ಮುಂತಾದವರು ತಮ್ಮ ಜಾತಿಯವರೇ ಆಗಿರುವಂತೆ ನೋಡಿಕೊಳ್ಳುವುದು. ಇವರೇ 'ಜಾತ್ಯಾತೀತತೆ'ಯ ತುತ್ತೂರಿ ಊದುವವರು. ಈಗಂತೂ ಮತ/ಧರ್ಮದ ಹೆಸರಿನಲ್ಲಿ ಘೋರ ರಕ್ತಪಾತಗಳೇ ಆಗುತ್ತಿವೆ. ಇದು ಸಮುದಾಯ ಮೋಹದ ಪರಾಕಾಷ್ಠೆ. ಭಯೋತ್ಪಾದಕರ, ಉಗ್ರಗಾಮಿಗಳ ಉಪಟಳ ಇಂದು ಕೇವಲ ಒಂದು ದೇಶದ್ದಲ್ಲ, ಇಡೀ ಪ್ರಪಂಚದ ಸಮಸ್ಯೆಯಾಗಿಬಿಟ್ಟಿದೆ. ಇದನ್ನು ತಡೆಯಲು ಎಲ್ಲಾ ರಾಷ್ಟ್ರಗಳೂ ಕೈಜೋಡಿಸಲೇ ಬೇಕಾದ ಸನ್ನಿವೇಶ ದೂರವೇನಿಲ್ಲ. ಹೀಗೆ ಮಾಯಾವಿ ಮೋಹಿನಿ ರಮಣೀಯ ಮೋಹದ ಬಲೆ ಬೀಸಿ ಜಗತ್ತನ್ನೇ ಕುಣಿಸುತ್ತಿದ್ದಾಳೆ. ಈ ಮಾಯೆಗೆ ಮರುಳಾಗಿ ಗೊತ್ತಿದ್ದೂ ತಪ್ಪು ಮಾಡುವವರ ಅಂತರಂಗಗಳು ಈ ಮೋಹಕ್ಕೆ ಸೆರೆಯಾಳಾಗಿವೆ.
     ಈ ಜಗತ್ತು ಅದ್ಭುತ ವೈಚಿತ್ರ್ಯಗಳಿಂದ ಕೂಡಿದೆ. ಇಡೀ ಜೀವರಾಶಿಯನ್ನು ಪ್ರೀತಿಸುವ, ಸಕಲರ ಸುಖವನ್ನೂ ಬಯಸುವ ಸಾಧು-ಸಂತರುಗಳು, ದಾರ್ಶನಿಕರನ್ನೂ ಈ ಜಗತ್ತು ಹೊಂದಿದೆ. ಇವರ ಈ ಸುಮೋಹ ಜನರನ್ನು ಸರಿದಾರಿಯೆಡೆಗೆ ನಡೆಯಲು ಸಹಕಾರಿಯಾಗಿದೆ. ಇಂತಹವರನ್ನು ಗುರುತಿಸಿ, ಆದರಿಸಿ ಇವರುಗಳು ತೋರುವ ದಾರಿಯಲ್ಲಿ ಮುನ್ನಡೆದರೆ ಅದು ಶತ್ರುವಾದ ಮೋಹವನ್ನು ನಮ್ಮ ಸ್ನೇಹಿತನನ್ನಾಗಿ ಮಾಡಿಕೊಂಡಂತೆ. 'ವಸುಧೈವ ಕುಟುಂಬಕಮ್' - ಇಡೀ ಪ್ರಪಂಚವೇ ಒಂದು ಕುಟುಂಬದಂತೆ ಅನ್ನುವುದು ಸನಾತನ ಧರ್ಮದ ತಿರುಳು. ಒಂದು ಕುಟುಂಬದಲ್ಲಿ ಹಲವಾರು ವಿಭಿನ್ನ ಗುಣಗಳುಳ್ಳ ಅಣ್ಣ-ತಮ್ಮಂದಿರು ಇರುವಂತೆ ಪ್ರಪಂಚದಲ್ಲೂ ವಿಭಿನ್ನ ಆಚರಣೆಗಳು, ಸಂಪ್ರದಾಯಗಳನ್ನು ಅನುಸರಿಸುವ ಜನರಿದ್ದಾರೆ. ಇಡೀ ಪ್ರಪಂಚವೇ ಒಂದು ರಾಷ್ಟ್ರವಾಗಬೇಕು, ನಮ್ಮ ದೇವರನ್ನೇ ನಾವು ಹೇಳಿದ ರೀತಿಯಲ್ಲೇ ಪೂಜಿಸಬೇಕು, ಹೀಗೆ ಮಾಡದಿದ್ದವರನ್ನು ಬಲವಂತದಿಂದ ಮತಾಂತರಿಸಬೇಕು, ಒಪ್ಪದಿದ್ದವರನ್ನು ಸಂಹರಿಸಬೇಕು ಎಂಬ ಮನೋಭಾವದಿಂದ ಜಗತ್ತನ್ನು ಒಟ್ಟುಗೂಡಿಸಲು ಆ ದೇವರಿಂದಲೂ ಅಸಾಧ್ಯ. ಆದರೂ ಈ ಉದ್ದೇಶದಿಂದ ಭಯೋತ್ಪಾದಕ ಚಟುವಟಿಕೆಗಳು, ರಕ್ತಪಾತಗಳು, ಅತ್ಯಾಚಾರಗಳು, ಯುದ್ಧಗಳು ನಡೆಯುತ್ತಿರುವುದು ದುರ್ದೈವ. ಇಡೀ ಪ್ರಪಂಚವೇ ಒಂದು ಕುಟುಂಬದಂತೆ ಆಗಲು, ಒಂದು ರಾಷ್ಟ್ರವೆನಿಸಲು ಸಾಧ್ಯವಿದೆ. ಈ ಜಗತ್ತು ಹೀಗಿರಲಿ ಎಂದು ಬದಲಾಯಿಸಲು ಹೋಗದೆ, ಹೇಗಿದೆಯೋ ಹಾಗೆಯೇ ಇರಲಿ ಎಂದು ಸುಮ್ಮನಿದ್ದರೆ, ಕಿತ್ತುಕೊಳ್ಳುವುದಕ್ಕಿಂತ ಕೊಡಲು ಮನಸ್ಸು ಮಾಡಿದರೆ, ಯಾರನ್ನೂ ಪ್ರತ್ಯೇಕಿಸದೆ ಸಮನಾಗಿ ಕಂಡು, ಎಲ್ಲರನ್ನೂ ಸೇರಿಸಿಕೊಂಡರೆ, ಎಲ್ಲಾ ಧರ್ಮಗ್ರಂಥಗಳೂ, ವೇದಗಳು, ಕುರಾನ್, ಬೈಬಲ್ ಇತ್ಯಾದಿ, ನಮ್ಮವೇ ಅಂದುಕೊಂಡು ಅದರಲ್ಲಿನ ನಮಗೆ ಹಿತವಾಗುವ ಎಲ್ಲಾ ಸಂಗತಿಗಳನ್ನು ಅಳವಡಿಸಿಕೊಂಡರೆ ಮಾತ್ರ ಜಗತ್ತು ಒಂದು ಕುಟುಂಬವೆನಿಸೀತು. ಇತರರು ಅನುಸರಿಸಲಿ, ನಮ್ಮದು ಒಣ ಉಪದೇಶ ಮಾತ್ರ ಅನ್ನುವಂತಹ ಮುಖವಾಡ ಧರಿಸಿದ ಜನನಾಯಕರ, ವಿಚಾರವಾದಿಗಳ ನಿಜಬಣ್ಣ ಬಯಲಾಗಬೇಕು. ಈಗ ಅಗತ್ಯವಿರುವುದು ಮಾನವರು ಸಹಮಾನವರನ್ನು ಪ್ರೀತಿಸುವ, ಗೌರವಿಸುವ ಅರ್ಥಪೂರ್ಣ ಧರ್ಮವೇ ಹೊರತು ಮತ್ತೊಂದಲ್ಲ. ಇಲ್ಲದಿದ್ದರೆ ದಾಯಾದಿಕಲಹಗಳಿಂದ ವಿನಾಶವೇ ಕಟ್ಟಿಟ್ಟ ಬುತ್ತಿ. ವಿಶ್ವಮಾನವತೆಯನ್ನು ಎತ್ತಿ ಹಿಡಿಯಲು ಎಲ್ಲ ಜನರನ್ನೂ ಅವರುಗಳು ಹೇಗಿರುವರೋ ಹಾಗೆ ಒಪ್ಪಿಕೊಳ್ಳುವ, ಪರಸ್ಪರರ ಭಾವನೆಗಳನ್ನು ಗೌರವಿಸುವ ವಿಶ್ವವ್ಯಾಮೋಹ ಬಂದರೆ ವಿಶ್ವ ಬದುಕುಳಿದೀತು. 
ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಾಪ್ನುಯಾತ್ |
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಶ್ಚಾನ್ಯಾನ್ ವಿಮೋಚಯೇತ್ ||
     ಇದರ ಅರ್ಥ: "ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ಸಿಗಲಿ, ಶಾಂತರು ಬಂಧನಗಳಿಂದ ವಿಮೋಚಿತರಾಗಲಿ, ಆ ವಿಮುಕ್ತರು ಇತರರನ್ನೂ ಸಹ ಬಂಧನದಿಂದ ಬಿಡಿಸಲಿ."
-ಕ.ವೆಂ.ನಾಗರಾಜ್.
**************
30.6.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ:



ಭಾನುವಾರ, ಜುಲೈ 6, 2014

ದೇವರೇ ಗತಿ!


      ಈ ಚಿತ್ರಗಳನ್ನು ನೋಡಿ. ಒಂದೊಮ್ಮೆ ಮನೆಯಲ್ಲಿ ಧೂಪ, ದೀಪ, ಆರತಿ ಬೆಳಗಿಸಿಕೊಂಡು ಪೂಜೆ, ಪುನಸ್ಕಾರಗಳನ್ನು ಮಾಡಿಸಿಕೊಳ್ಳುತ್ತಿದ್ದ ಈ ದೇವರುಗಳ ಫೋಟೋಗಳು ಈಗ ಮರದ ಬುಡದಲ್ಲಿ ಅನಾಥವಾಗಿ ಬಿದ್ದಿವೆ. ಮನೆಗೆ ಬೇಡವೆನಿಸುವ ದೇವರ ಫೋಟೋಗಳು ಮೊದಮೊದಲು ದೇವಸ್ಥಾನಕ್ಕೆ ಸೇರಿಸಲ್ಪಡುತ್ತಿದ್ದವು, ಹಿರಿಯರನ್ನು ನೋಡಿಕೊಳ್ಳಲಾಗದೆ ವೃದ್ಧಾಶ್ರಮದಲ್ಲಿ ಸೇರಿಸುವಂತೆ! ಈಗ ದೇವಸ್ಥಾನಗಳಲ್ಲಿ ಅಂತಹ ಫೋಟೋಗಳನ್ನು ಇಟ್ಟುಕೊಳ್ಳಬಯಸುತ್ತಿಲ್ಲ. ಹೀಗಾಗಿ ದೇವಸ್ಥಾನದ ಬಾಗಿಲ ಪಕ್ಕದಲ್ಲಿ, ಅರಳಿಮರದ ಬುಡಗಳಲ್ಲಿ, ಪಾರ್ಕುಗಳಲ್ಲಿನ ಮರಗಳ ಬುಡದಲ್ಲಿ, ಹುತ್ತಗಳ ಪಕ್ಕದಲ್ಲಿ ಹಾಳಾದ, ಹಳೆಯದಾದ, ಬೇಡವೆನಿಸುವ ದೇವರ ಫೋಟೋಗಳು ತಮ್ಮ ಸ್ಥಾನ ಕಂಡುಕೊಳ್ಳುತ್ತಿವೆ ಅರ್ಥಾತ್ ಮನೆಯಿಂದ ಹೊರದಬ್ಬಲ್ಪಟ್ಟಿರುತ್ತವೆ. ಬಾಡಿಗೆ ಮನೆ ಖಾಲಿ ಮಾಡಿ ಬೇರೆ ಮನೆಗೆ ಹೋಗುವಾಗ ಹಳೆಯ ಮನೆಯಲ್ಲಿ ಉಳಿಸಿ ಹೋಗುವುದು ಉಪಯೋಗಕ್ಕೆ ಬಾರದ ಹಳೆಯ ವಸ್ತುಗಳು, ಕಸ ಮತ್ತು ಕೆಲವು ಹಳೆಯ ದೇವರ ಫೋಟೋಗಳು! ಮನೆ ಪೂರ್ತಿ ಖಾಲಿ ಮಾಡಬಾರದು, ಕಸ ಗುಡಿಸಿಹೋಗಬಾರದು ಎಂಬ ಅನುಕೂಲಸಿಂಧು ಶಾಸ್ತ್ರ ಹೇಳಿಬಿಟ್ಟರೆ ಆಯಿತು. ಒಟ್ಟಿನಲ್ಲಿ ಹೇಳಬೇಕೆಂದರೆ, ಈ ದೇವರುಗಳ ಸ್ಥಿತಿ ದೇವರೇ ಗತಿ ಅನ್ನುವಂತಾಗಿದೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕಿದೆ. 
     ಭಿನ್ನವಾದ ವಿಗ್ರಹಗಳನ್ನು ಪೂಜಿಸಬಾರದು ಎಂಬುದು ಸಂಪ್ರದಾಯವಾಗಿ ಬೆಳೆದುಕೊಂಡು ಬಂದ ಪದ್ಧತಿ. ವಿಗ್ರಹಪೂಜೆ ಸರಿಯೋ, ತಪ್ಪೋ ಅನ್ನುವ ಜಿಜ್ಞಾಸೆ ಮಾಡುವುದು ಈ ಲೇಖನದ ಉದ್ದೇಶವಾಗಿಲ್ಲ. 'ಶಾಸ್ತ್ರಾದ್ರೂಢಿರ್ಬಲೀಯಸೀ' ಎಂಬಂತೆ ಸರಿಯೋ, ತಪ್ಪೋ ಎಂದು ವಿವೇಚಿಸಹೋಗದೆ ರೂಢಿಗತವಾಗಿ, ಪರಂಪರಾಗತವಾಗಿ ಬೆಳೆದುಬಂದ ಪದ್ಧತಿಗಳನ್ನು ಪಾಲಿಸಿಕೊಂಡು ಬರುತ್ತಿರುವವರ ಸಂಖ್ಯೆಯೇ ಜಾಸ್ತಿ. ವಿವೇಕ, ವಿಚಾರಗಳನ್ನು ಬದಿಗಿರಿಸಿ ಕಾಟಾಚಾರಕ್ಕೆ ಸಂಪ್ರದಾಯ ಪಾಲಿಸುವ ಬದಲಿಗೆ ಮಾಡುವ ಕೆಲಸಗಳು, ಆಚಾರಗಳಿಗೆ ಅರ್ಥ ತಿಳಿದು ಮಾಡುವುದಾದರೆ ಮಾಡುವ ಕಾರ್ಯಗಳಿಗೆ ಬೆಲೆ, ಅರ್ಥ ಬರುತ್ತದೆ. ವಿಗ್ರಹಗಳು, ಫೋಟೋಗಳು ಯಾವ ಯಾವುದೋ ಕಾರಣಗಳಿಗಾಗಿ ಭಿನ್ನವಾದಾಗ, ವಿರೂಪವಾದಾಗ ಹೊಸ ವಿಗ್ರಹಗಳು, ಫೋಟೋಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಹಳೆಯ ವಿಗ್ರಹಗಳು, ಫೋಟೋಗಳು ತಮ್ಮ ಮೊದಲಿನ ಪ್ರಾಶಸ್ತ್ಯವನ್ನು ಕಳೆದುಕೊಂಡುಬಿಡುತ್ತಿವೆ. ಹಾಳಾದ, ಬೇಡವಾದ ದೇವರ ಫೋಟೋಗಳಿಗೆ ಬರುತ್ತಿರುವ ದಯನೀಯ ಸ್ಥಿತಿಯನ್ನು ಕಂಡಾದರೂ ಭಿನ್ನವಾದ ವಿಗ್ರಹಗಳು, ಫೋಟೋಗಳು, ಇತ್ಯಾದಿಗಳ ವಿಲೇವಾರಿಯ ವಿಚಾರದಲ್ಲಿ ವಿಗ್ರಹಾರಾಧಕರು ಅನುಸರಿಸಬೇಕಾದ ಕ್ರಮಗಳ ಕುರಿತು ಸಂಬಂಧಿಸಿದ ಪ್ರಾಜ್ಞರು ಗಮನ ಹರಿಸಿ ಸಾಮಾನ್ಯರಿಗೆ ತಿಳುವಳಿಕೆ ಕೊಡುವ ಕೆಲಸ ಜರೂರಾಗಿ ಮಾಡಬೇಕು.  ಇದರ ಬಗ್ಗೆ ಗಮನ ಸೆಳೆಯುವುದು ಈ ಲೇಖನದ ಉದ್ದೇಶ. 

   ರಾಮಕೃಷ್ಣ ಪರಮಹಂಸರು ದೇವರ ಕುರಿತ ಯಾವುದೇ ಅಭಿಪ್ರಾಯಗಳನ್ನು ತಿರಸ್ಕರಿಸುತ್ತಿರಲಿಲ್ಲ. ಸರ್ವಶಕ್ತನಾದ, ಸರ್ವಾಂತರ್ಯಾಮಿಯಾದ ಪರಮಾತ್ಮನನ್ನು ಅರಿಯುವುದು ಹುಲುಮನುಜರಿಗೆ ಅವರ ಇತಿಮಿತಿಗಳಲ್ಲಿ ಕಷ್ಟಸಾಧ್ಯವೇ ಸರಿ. ಅವರು ಹೇಳುತ್ತಿದ್ದಂತೆ ಹಿಂದೂಗಳು ಆರಾಧಿಸುತ್ತಿರುವ ಅಸಂಖ್ಯ ದೇವರುಗಳು ಸರ್ವಶಕ್ತನನ್ನು ಕೇವಲ ಸೀಮಿತ ರೂಪಗಳಲ್ಲಿ ಕಾಣುವ ಪ್ರಯತ್ನಗಳಷ್ಟೆ. ಅನಂತನನ್ನು ಸೀಮಿತ ಬುದ್ಧಿಶಕ್ತಿಯ ಮನುಷ್ಯ ಗ್ರಹಿಸುವುದು ಹೇಗೆ ಸಾಧ್ಯ? ಈ ಸಾಂಕೇತಿಕ ರಚನೆಗಳು ಮನುಷ್ಯನ ಇಚ್ಛಾನುಸಾರ ಮೋಕ್ಷ ಪಡೆಯುವ ಸಾಧನಗಳಷ್ಟೆ.  ಈ ಎಲ್ಲಾ ದೇವರುಗಳು ಆ ಒಬ್ಬ ದೇವನ ಎಲ್ಲಾ ಬೆಳಕಿನ, ಎಲ್ಲಾ ಬುದ್ಧಿಮತ್ತೆಯ, ಎಲ್ಲಾ ವಿದ್ವತ್ತಿನ ಮೂಲ ತಲುಪುವ ಮಧ್ಯವರ್ತಿಗಳಷ್ಟೆ. ರಾಮಕೃಷ್ಣ ಪರಮಹಂಸರ ಈ ವಿಚಾರ ಆದರಣೀಯವಾಗಿದೆ. ವಿಗ್ರಹಗಳು ದೇವರಲ್ಲ, ದೇವರನ್ನು ಆ ಮೂಲಕ ಅರಿಯುವ ಪ್ರಯತ್ನವೆಂಬುದನ್ನು ಅವರು ಒತ್ತಿ ಹೇಳುತ್ತಿದ್ದರು. ವಿಗ್ರಹಪೂಜೆಯನ್ನು ವಿರೋಧಿಸುವ ವಿಚಾರವಾದಿಗಳೆನಿಸಿಕೊಂಡವರು ಅದನ್ನು ಅವಹೇಳನಕರವಾಗಿ ಖಂಡಿಸಬೇಕಿಲ್ಲ. ಹಾಗೆ ಖಂಡಿಸುವುದು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ. ವಿಚಾರಗಳನ್ನು ಹೇಳುವ, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರೆ ಅದನ್ನು ಒಪ್ಪಬಹುದು. ತಲೆತಲಾಂತರಗಳಿಂದ, ಬಹುಸಂಖ್ಯಾತರಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಆಚರಣೆಗಳನ್ನು ಅವರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಹೇಳಲು ಸಾಧ್ಯವಿರುವಾಗ ಅದನ್ನು ಬಿಟ್ಟು ಅವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡುವುದರಿಂದ ಆಗುವುದು ಜಾಗೃತಿಯಲ್ಲ, ಬದಲಾಗಿ ಪರಸ್ಪರರಲ್ಲಿ ವೈಷಮ್ಯ, ಇದು ಪರೋಕ್ಷವಾಗಿ ವೈಚಾರಿಕ ಚರ್ಚೆಗೆ ದೊಡ್ಡ ಹಿನ್ನಡೆಯಾಗುತ್ತದೆ. 
     ರಾಮಕೃಷ್ಣ ಪರಮಹಂಸರು ಒಬ್ಬನೇ ದೇವರು ಎಂಬುದನ್ನು ನಂಬಿದರೂ, ಜನರು ಅವನನ್ನು ಯಾವುದೇ ರೀತಿಯಲ್ಲಿ ನಂಬಿದರೂ, ಅಲ್ಲಾಹು, ಕಾಳಿ ಅಥವ ಕ್ರಿಸ್ತ, ಇತ್ಯಾದಿ, ಆ ನಂಬಿಕೆಯಲ್ಲಿ ದೇವರು ಇರುತ್ತಾನೆಂದು ಹೇಳುತ್ತಿದ್ದವರು. ದೇವರು ಆಕಾರ ಮತ್ತು ನಿರಾಕಾರ ರೂಪದಲ್ಲಿ ಇರಬಹುದೆಂದು ಹೇಳುತ್ತಿದ್ದ ಅವರಿಗೆ ಒಬ್ಬ ಶಿಷ್ಯ ಪ್ರಶ್ನಿಸಿದ್ದ, "ವಿಗ್ರಹವನ್ನು ಪೂಜಿಸುವವರಿಗೆ ಅವರು ವಿಗ್ರಹವನ್ನು ಪೂಜಿಸುತ್ತಿಲ್ಲ, ದೇವರನ್ನು ಪೂಜಿಸುತ್ತಿದ್ದೇವೆ ಎಂದು ತಿಳುವಳಿಕೆ ಹೇಳಬೇಕು. ಅವರು ವಿಗ್ರಹಕ್ಕೆ ತಲೆಬಾಗುತ್ತಿಲ್ಲವೆಂದು ತಿಳಿಯಬೇಕಲ್ಲವೆ?" ರಾಮಕೃಷ್ಣರ ಉತ್ತರ ಮಾರ್ಮಿಕವಾಗಿತ್ತು: "ಇತರರಿಗೆ ಬುದ್ಧಿ ಹೇಳಲು ನೀವು ಯಾರು? ಆ ವಿಶ್ವನಿಯಾಮಕ ದೇವರು ಜನರಿಗೆ ಕಲಿಸುತ್ತಾನೆ. ನಾವು ಏನಾದರೂ ಕಲಿಯುವುದಿದ್ದರೆ ಅವನು ಕಲಿಸುತ್ತಾನೆ. ನಮ್ಮ ಒಳಗಿನ ಭಾವನೆಗಳು ಅವನಿಗೆ ಗೊತ್ತಿದೆ. ದೇವರನ್ನು ವಿಗ್ರಹದಲ್ಲಿ ಪೂಜಿಸುವುದು ಒಂದು ವೇಳೆ ತಪ್ಪಾಗಿದ್ದರೂ ಅವನಿಗೆ ನಾವು ಅವನನ್ನೇ ಪೂಜಿಸುತ್ತಿದ್ದೇವೆಂದು ತಿಳಿಯುವುದಿಲ್ಲವೇ? ಆ ವಿಷಯದಲ್ಲಿ ನೀವು ಏಕೆ ತಲೆನೋವು ಮಾಡಿಕೊಳ್ಳುತ್ತೀರಿ?" ನಿಜವಾದ ದೇವರ ಭಕ್ತನಿಗೆ ದೇವರ ಮೇಲಿನ ಭಕ್ತಿ ಪ್ರಧಾನವಾಗುತ್ತದೆಯೇ ಹೊರತು ಆಕಾರ, ನಿರಾಕಾರಗಳಲ್ಲ. 
     ಮೂಲ ವಿಷಯವಾದ ಭಿನ್ನ ವಿಗ್ರಹಗಳ ವಿಚಾರಕ್ಕೆ ಮರಳೋಣ. ಈ ವಿಷಯದಲ್ಲೂ ರಾಮಕೃಷ್ಣರ ವಿಚಾರ ಅನನ್ಯವೆನಿಸುತ್ತದೆ. ಧಾರ್ಮಿಕ ಗ್ರಂಥಗಳು ಜೀವಂತ ಸಂದೇಶಗಳನ್ನು ಕೊಟ್ಟರೆ ದೇವರ ವಿಗ್ರಹಗಳು ಜೀವಂತ ಪಾಠ ಹೇಳುತ್ತವೆ. ಅವು ಕೇವಲ ಮರ, ಶಿಲೆ ಅಥವ ಮಣ್ಣು ಮಾತ್ರವಲ್ಲ. ರಾಮಕೃಷ್ಣರು ಮುರಿದ ವಿಗ್ರಹಗಳನ್ನು ದೂರೀಕರಿಸುವುದು ತರವಲ್ಲವೆನ್ನುತ್ತಿದ್ದರು. ಅವುಗಳನ್ನು ದುರಸ್ತಿ ಮಾಡಿ ಪೂಜಿಸಬಹುದೆಂದು ಹೇಳುತ್ತಿದ್ದರು. ಈ ವಿಚಾರದಲ್ಲಿ ಒಮ್ಮೆ ವಾಗ್ವಾದವಾದಾಗ ಅವರು ರಾಣಿ ರಾಸಮಣಿಯವರಿಗೆ ಕೇಳಿದ್ದರು, "ನಿಮ್ಮ ಅಳಿಯ ಮಥುರಾಬಾಬು ಒಂದು ವೇಳೆ ಕಾಲು ಮುರಿದುಕೊಂಡರೆ, ನೀವು ಅವನನ್ನು ಬಿಟ್ಟುಬಿಡುತ್ತೀರಾ? ಅವನನ್ನು ಉಪಚರಿಸಿ ಸರಿಪಡಿಸುವುದಿಲ್ಲವೇ?" ಭಿನ್ನ ವಿಗ್ರಹಗಳು ಪೂಜಾರ್ಹವಲ್ಲವೆನ್ನುವವರು ಈ ಕುರಿತು ಚಿಂತಿಸಬೇಕಲ್ಲವೇ? ಹಿಂದಿನ ರಾಜಮಹಾರಾಜರುಗಳ ಕಾಲದಲ್ಲಿ ಕಟ್ಟಿದ ಹಲವಾರು ದೇಗುಲಗಳು ಶಿಲ್ಪಕಲೆಗೆ ಹೆಸರಾಗಿವೆ. ಅಲ್ಲಿನ ವಿಗ್ರಹಗಳು ಪರಕೀಯರ ದಾಳಿಗಳೂ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಶಿಥಿಲವಾಗಿವೆ, ಭಿನ್ನಗೊಂಡಿವೆ, ಕಣ್ಮರೆಯೂ ಆಗಿವೆ. ಹೀಗಾಗಿ ಒಂದೊಮ್ಮೆ ಪೂಜೆಗೊಳ್ಳುತ್ತಿದ್ದ ವಿಗ್ರಹಗಳು ಇಂದು ಅನಾಥವಾಗಿವೆ. ಭಿನ್ನಗೊಂಡ ಕಾರಣದಿಂದ ಪೂಜೆಗಳು ನಿಲ್ಲಿಸಲ್ಪಟ್ಟಿವೆ. ಆ ದೇಗುಲಗಳು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಗೆ ಸೇರಿದವೆಂದರೆ ಮುಗಿದೇಹೋಯಿತು. ವಿಗ್ರಹಗಳನ್ನು ದುರಸ್ತಿ ಮಾಡುವ, ಅದರ ಬದಲಿಗೆ ಬೇರೆ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಕೆಲಸವೂ ಕಷ್ಟವೇ. ಇದರಿಂದ ಯಾವ ಉದ್ದೇಶದಿಂದ ಆ ದೇಗುಲಗಳು ಸ್ಥಾಪಿತಗೊಂಡವೋ ಆ ಉದ್ದೇಶ ವಿಫಲವಾದಂತಾಯಿತು. ಇದಕ್ಕೆ ಧಾರ್ಮಿಕ ಪಂಡಿತರು, ಸರ್ಕಾರ ಸೂಕ್ತವಾಗಿ ಚಿಂತಿಸಿ ಮುಂದುವರೆಯಬೇಕಾದುದು ಅಗತ್ಯವಿದೆ. ಇಲ್ಲದಿದ್ದರೆ ಸ್ಮಾರಕಗಳೆನಿಸಿರುವ ಇಂತಹ ಪುರಾತನ ದೇಗುಲಗಳು ಮುಂದೊಮ್ಮೆ ಕಣ್ಮರೆಯಾದರೂ ಆಶ್ಚರ್ಯವಿಲ್ಲ.
     ವಿಗ್ರಹಗಳನ್ನು ಮೂರು ಭಾಗಗಳಲ್ಲಿ ಗುರುತಿಸುತ್ತಾರೆ - ಅಂಗ, ಪ್ರತ್ಯಾಂಗ ಮತ್ತು ಉಪಾಂಗ. ಪ್ರತ್ಯಾಂಗ ಮತ್ತು ಉಪಾಂಗಗಳಲ್ಲಿ ಏನಾದರೂ ದೋಷ ಅಥವ ಭಿನ್ನತೆ ಇದ್ದರೆ ಅದನ್ನು ಸರಿಪಡಿಸಬಹುದಂತೆ. ಮುಖ್ಯ ಅಂಗದಲ್ಲೇನಾದರೂ ಭಿನ್ನತೆ ಕಂಡರೆ ವಿಗ್ರಹ ತನ್ನ ಪ್ರಾಮುಖ್ಯ ಕಳೆದುಕೊಳ್ಳುತ್ತದಂತೆ. ಇಂತಹ ವಿಗ್ರಹವನ್ನು, ಒಂದೊಮ್ಮೆ ಭಕ್ತಿಪೂರ್ವಕವಾಗಿ ಪೂಜಿಸಿಕೊಳ್ಳುತ್ತಿದ್ದ ವಿಗ್ರಹವನ್ನು, ನಂತರ ಏನು ಮಾಡಬೇಕು? ಕಲ್ಲಿನ ವಿಗ್ರಹವಾದರೆ, ಇದನ್ನು ಸಂರಕ್ಷಿಸಿ ಸಂಗ್ರಹಾಲಯದಲ್ಲಿ ಇಡಬಹುದು. ಮರದ ಅಥವ ನಾಶ ಹೊಂದಬಹುದಾದ ವಸ್ತುಗಳಿಂದ ತಯಾರಾದುದಾದರೆ ಅದನ್ನು ಯೋಗ್ಯ ರೀತಿಯಲ್ಲಿ ಸಂಸ್ಕಾರಕ್ರಮ ಅನುಸರಿಸಿ ಅಗ್ನಿಗೆ ಅರ್ಪಿಸುವುದೋ, ಮತ್ತೇನನ್ನೋ ಮಾಡುವುದರ ಮೂಲಕ ವಿಸರ್ಜನೆ ಮಾಡುವುದು ಸಮಂಜಸವಾಗುತ್ತದೆ. ಗಣೇಶನ ಪೂಜಾ ಸಂದರ್ಭದಲ್ಲಿ ಪೂಜಾನಂತರ ವಿಗ್ರಹವನ್ನು ವಿಸರ್ಜಿಸುವ ರೀತಿಯನ್ನು ಒಂದು ಮಾದರಿಯಾಗಿ ತೆಗೆದುಕೊಳ್ಳಬಹುದು. ಕಾಂಪೌಂಡ್ ಬದಿಯಲ್ಲಿ ಮೂತ್ರ ಮಾಡಬಾರದೆಂದು ಕಾಂಪೌಂಡಿನ ಹೊರಭಾಗದಲ್ಲಿ ಕಾವಲುಗಾರರ ರೀತಿಯಲ್ಲಿ ದೇವರ ಫೋಟೋಗಳು, ಮೂರ್ತಿಗಳನ್ನು ಹಾಕುವುದನ್ನೂ ಕಾಣುತ್ತಿದ್ದೇವೆ. ದೇವರ ಫೋಟೋಗಳು, ಚಿತ್ರಗಳನ್ನು ಇಂದು ಬೇಕಾಬಿಟ್ಟಿಯಾಗಿ ಮುದ್ರಿಸುವ ಕೆಲಸಕ್ಕೆ ಕಡಿವಾಣ ಬಿದ್ದರೆ ಉತ್ತಮ. ಆಹ್ವಾನ ಪತ್ರಗಳು, ಕರಪತ್ರಗಳು ಮುಂತಾದವುಗಳಲ್ಲಿ ದೇವರ ಚಿತ್ರಗಳನ್ನು ಮುದ್ರಿಸದಿದ್ದರೆ ಒಳಿತು. ಏಕೆಂದರೆ, ಅವುಗಳು ಮುಂದೊಮ್ಮೆ ತ್ಯಾಜ್ಯವಸ್ತುವಾಗಿ ಕಸದ ತೊಟ್ಟಿ ಸೇರುತ್ತವೆ. ಇದು ಹಿತವೆನಿಸುವುದೇ? ದೇವರ ಚಿತ್ರಗಳನ್ನು ಒಳ ಉಡುಪುಗಳಲ್ಲಿ, ಪಾದರಕ್ಷೆಗಳಲ್ಲಿ ಮುದ್ರಿಸಿ, ಅಶ್ಲೀಲವಾಗಿ ಚಿತ್ರಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಸಹ ಆಗುತ್ತಿರುವುದನ್ನು ಕಾಣುತ್ತಿರುವ ದೌರ್ಭಾಗ್ಯ ನಮ್ಮದಾಗಿದೆ. ಇದಕ್ಕೆ ದೇವರ ಚಿತ್ರಗಳನ್ನು ಬೇಕಾಬಿಟ್ಟಿಯಾಗಿ ಆಹ್ವಾನಪತ್ರಗಳು, ಕರಪತ್ರಗಳು, ಮುಂತಾದವುಗಳಲ್ಲಿ ಮುದ್ರಿಸುವ ಪರಿಪಾಠ ಮತ್ತು ಅವಕಾಶ ಇರುವುದೂ ಒಂದು ಕಾರಣವಾಗಿದೆ. ಧಾರ್ಮಿಕ ಪಂಡಿತರೆನಿಸಿಕೊಂಡವರು ಮತ್ತು ಧಾರ್ಮಿಕ ಸಂಘಟನೆಗಳು ಈ ವಿಚಾರದಲ್ಲಿ ಜನರಿಗೆ ತಿಳುವಳಿಕೆ ಕೊಡುವ ಕೆಲಸ ಮಾಡಬೇಕು.
-ಕ.ವೆಂ.ನಾಗರಾಜ್.
**************
16.6.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.




ಶನಿವಾರ, ಜುಲೈ 5, 2014

ವೇದಸುಧೆ : ವಿಶ್ವ ಹಿಂದು ಪರಿಷತ್ತಿನ ಪ್ರಾಂತೀಯ ಸಭೆ

ವೇದಸುಧೆ : ವಿಶ್ವ ಹಿಂದು ಪರಿಷತ್ತಿನ ಪ್ರಾಂತೀಯ ಸಭೆ: ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣ. ವೇದಭಾರತಿಯ ಎರಡು ವರ್ಷಗಳ ನಿರಂತರ ಸತ್ಸಂಗದ ಅದ್ಭುತ ಪರಿಚಯದ ಅಪೂರ್ವ ಅವಕಾಶ. ನಿನ್ನೆ ಹಾಸನದಲ್ಲಿ . ಅದರ ಆರಂಭವೇ ವೇದಭಾರತಿಯ ...

ಗುರುವಾರ, ಜುಲೈ 3, 2014

ಮದದ ವಿಕಟನರ್ತನ

ಮದಸೊಕ್ಕಿ ಮೆರೆದವರೊಡನಾಡಬಹುದೆ?
ನಯ ವಿನಯ ಸನ್ನಡತೆಗವಕಾಶ ಕೊಡದೆ |
ವಿಕಟನರ್ತನಗೈವ ಮದವದವನತಿ ತರದೆ?
ನರಾರಿ ಮದದೀಪರಿಯನರಿ ಮೂಢ ||
     ಅಪರಿಚಿತರಾದರೂ ಕೆಲವು ವ್ಯಕ್ತಿಗಳನ್ನು ಕಂಡಾಗ ಸ್ನೇಹ ಭಾವನೆ ಮೂಡುತ್ತದೆ, ಇನ್ನು ಕೆಲವರನ್ನು ಕಂಡಾಗ ಅವರು ನಮಗೆ ಏನೂ ಮಾಡಿರದಿದ್ದರೂ ಅವರ ಬಗ್ಗೆ ಸದಭಿಪ್ರಾಯ ಬರುವುದಿಲ್ಲ. ಇದಕ್ಕೆ ಕಾರಣ ಅವರ 'ಬಾಡಿ ಲಾಂಗ್ವೇಜ್' ಅರ್ಥಾತ್ ಅವರ ನಡವಳಿಕೆಯ ಹೊರರೂಪ! ಮುಖವು ಮನಸ್ಸಿನ ಕನ್ನಡಿ ಎನ್ನುತ್ತಾರಲ್ಲಾ, ಹಾಗೆ ಅವರ ಮುಖಭಾವದಲ್ಲಿ ಅವರ ವ್ಯಕ್ತಿತ್ವ ಹೊರಸೂಸಿ ನಮ್ಮಲ್ಲಿ ಆ ಭಾವ ಬರುವಂತೆ ಮಾಡಬಹುದು. ಮದ ಸೊಕ್ಕಿ ಮೆರೆಯುವವರು, ದರ್ಪಿಷ್ಟರು ಸಹಜವಾಗಿ ಇತರರಿಗೆ ಸಹನೀಯವೆನಿಸಲಾರರು. ಸಾಮಾನ್ಯವಾಗಿ ಗಮನಕ್ಕೆ ಬರುವ ಈ ಉದಾಹರಣೆಯನ್ನು ನೋಡೋಣ. ಬಸ್ಸಿನಲ್ಲಿ, ರೈಲಿನಲ್ಲಿ ಅಕ್ಕಪಕ್ಕ ಕುಳಿತವರಲ್ಲಿ ಯಾರಾದರೊಬ್ಬರ ಕಾಲು ಇನ್ನೊಬ್ಬರಿಗೆ ಸೋಕಿದಾಗ ತಕ್ಷಣ ಕಾಲನ್ನು ಹಿಂದಕ್ಕೆಳೆದುಕೊಂಡು ಅವರನ್ನು ಕಣ್ಣಿಗೆ ಒತ್ತಿಕೊಂಡು 'ಸಾರಿ' ಅಥವ ಕ್ಷಮಿಸಿ ಎನ್ನುತ್ತೇವೆ. ಇನ್ನು ಕೆಲವರು ಇರುತ್ತಾರೆ. ಅವರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುತ್ತಾರೆ. ಅವರ ಕಾಲು ಇನ್ನೇನು ಪಕ್ಕದವರ ಅಥವ ಮುಂದೆ ಕುಳಿತಿರುವವರನ್ನು ಸೋಕುವಂತಿರುತ್ತದೆ. ಕಾಲು ಸೋಕಬಾರದೆಂದು ಪಕ್ಕದವರೇ ಮುಜುಗರ ಪಟ್ಟುಕೊಂಡು ಸರಿಸಿ ಕುಳಿತಿರುತ್ತಾರೆ. ಅದರ ಅರಿವಿದ್ದೂ ಅರಿವಿಲ್ಲದಂತೆ ಪಾದ ಕುಣಿಸುವವರನ್ನು ಏನೆನ್ನಬೇಕು? ಅಕಸ್ಮಾತ್ ಕಾಲು ತಗುಲಿದರೂ ತಗುಲಿಸಿದವರು ಯಾವ ಭಾವವನ್ನೂ ವ್ಯಕ್ತಪಡಿಸದಿದ್ದರೆ? ಅವರ ಕಾಲನ್ನು ಕುಣಿಸುತ್ತಿರುವುದು ಅವರಲ್ಲ, ಅವರಲ್ಲಿರುವ ಮದ! ಅರಿಷಡ್ವರ್ಗಗಳಲ್ಲಿ ಒಂದಾದ ಈ ಮದ ಮದೋನ್ಮತ್ತರನ್ನು ಅವನತಿಯೆಡೆಗೆ ಜಾರಿಸುತ್ತಿರುತ್ತದೆ. ಇದು ಅರಿವಿಗೆ ಬರುವ ವೇಳೆಗೆ ಕಾಲ ಮಿಂಚಿರುತ್ತದೆ.
     ಮದಕ್ಕೆ ನಾನಾ ರೂಪಗಳಿವೆ- ಸಂಪತ್ತಿನ ಮದ, ಅಧಿಕಾರ ಮದ, ರೂಪ ಮದ, ಯೌವನದ ಮದ, ತಿಳಿದವನೆಂಬ ಮದ, ಇತ್ಯಾದಿ, ಇತ್ಯಾದಿ. ಮನೆಯಲ್ಲಿ, ಸುತ್ತಮುತ್ತಲಿನಲ್ಲಿ ಸಿಗಬೇಕಾದ ಸಂಸ್ಕಾರ ಸಿಗದಿದ್ದಾಗ ಮದದ ಠೇಂಕಾರಕ್ಕೆ ಮಿತಿ ಇರುವುದಿಲ್ಲ. ಮನೆಗೆ ಯಾವುದೋ ಕಾರ್ಯಾರ್ಥವಾಗಿ ಹಿರಿಯರು ಅಥವ ಅತಿಥಿಗಳು ಬಂದಾಗ ಅವರನ್ನು ಸ್ವಾಗತಿಸುವ ಸೌಜನ್ಯ ಇಲ್ಲದಿದ್ದಾಗ ಬಂದವರಿಗೆ ಅಲ್ಲಿಗೆ ಏಕಾದರೂ ಹೋದೆವೋ ಅನ್ನಿಸದಿರದು. ಹಿರಿಯರು ಇದ್ದಾಗ ಕಿರಿಯರು ಅವರ ಎದುರಿಗೆ ಕಾಲು ಚಾಚಿ ಕೂಡುವುದು, ಅವರನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಂತೆ ಅವರಿಗೆ ಘಾಸಿಯಾಗುವಂತೆ ಮಾತನಾಡುವುದು, ಇತ್ಯಾದಿಗಳೂ ಮದದ ಕಾಯಿಲೆಯಿಂದ ನರಳುತ್ತಿರುವರು ಮಾಡುವ ಕೆಲಸವೇ. ಇಂತಹವರಿಂದ ದೂರವಿರುವುದೇ ಕ್ಷೇಮ. ನನ್ನದೇ ಒಂದು ಉದಾಹರಣೆ ಹೇಳಬೇಕೆನ್ನಿಸುತ್ತಿದೆ. ಉಪವಿಭಾಗದ ಕೇಂದ್ರವೂ ಆಗಿದ್ದ ಒಂದು ತಾಲ್ಲೂಕಿನಲ್ಲಿ ತಹಸೀಲ್ದಾರನಾಗಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಒಂದು ತುರ್ತು ವಿಷಯಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಯವರೊಡನೆ ಚರ್ಚಿಸಬೇಕಿತ್ತು. ಕಛೇರಿ ಸಮಯವಲ್ಲವಾದುದರಿಂದ ಅವರನ್ನು ಕಾಣಲು ಅವರ ಮನೆಗೇ ಹೋದೆ. ನನ್ನನ್ನು ಕಂಡ ಆಳು (ಅವನು ಅವರ ಕಛೇರಿಯ ಜವಾನನಾಗಿದ್ದು ಮನೆಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದರು) ಯಾರೇ ಬಂದರೂ ಒಳಕ್ಕೆ ಬಿಡದಂತೆ ಉಪವಿಭಾಗಾಧಿಕಾರಿ ಆತನಿಗೆ ನೀಡಿದ್ದ ಸೂಚನೆಯಂತೆ, ನನ್ನನ್ನು ನಿಲ್ಲಲು ಹೇಳಿ ನಾನು ಬಂದ ವಿಷಯವನ್ನು ಉಪವಿಭಾಗಾಧಿಕಾರಿಗೆ ತಿಳಿಸಿದ. ಆ ಅಧಿಕಾರಿ ಸೌಜನ್ಯಕ್ಕಾದರೂ ನನ್ನನ್ನು ಒಳಕ್ಕೆ ಬರಹೇಳದೆ, ಗೇಟಿನ ಬಾಗಿಲನ್ನೂ ತೆರೆಯದೆ ಅಲ್ಲೇ ನಿಂತು ನನ್ನೊಡನೆ 'ಏನು ವಿಷಯ?' ಎಂದು ಕೇಳಿದರು. ಅವರ ವರ್ತನೆಯಿಂದ ನನಗೆ ಬೇಸರವಾಗಿ ಚರ್ಚಿಸಬೇಕಿದ್ದ ವಿಷಯ ಚರ್ಚಿಸದೆ ಬಂದಿದ್ದಕ್ಕೆ ಏನೋ ನೆಪ ಹೇಳಿ ವಾಪಸು ಬಂದಿದ್ದೆ. ನಂತರದಲ್ಲಿ ನನ್ನದೇ ಸ್ವಂತ ನಿರ್ಧಾರದಿಂದ ಮುಂದುವರೆದಿದ್ದೆ. ವಿಷಯ ತಿಳಿಸದೇ ಇದ್ದುದಕ್ಕೆ ಅವರು ನಂತರದಲ್ಲಿ ಅಕ್ಷೇಪಿಸಿದ್ದರು. ಅವರ ಆಕ್ಷೇಪಕ್ಕೆ ನನ್ನ ಮೌನವೇ ಉತ್ತರವಾಗಿತ್ತು. ಇಂತಹ ಅಧಿಕಾರದ ಮದ ತಲೆಗೆ ಏರಿದ ಅವರು ನನ್ನೊಡನೆ ಮಾತ್ರವಲ್ಲದೆ ಇತರರೊಂದಿಗೂ ಹಾಗೆಯೇ ವರ್ತಿಸುತ್ತಿದ್ದರು. ಹೀಗಾಗಿ ಅವರ ಮತ್ತು ಇತರ ಅಧಿಕಾರಿಗಳ ನಡುವೆ ಎಷ್ಟು ಬೇಕೋ ಅಷ್ಟು ಕನಿಷ್ಟ ಮಟ್ಟದ ಸಂಬಂಧಗಳು ಮಾತ್ರ ಉಳಿದಿದ್ದು, ಇದು ಆಡಳಿತದ ಮೇಲೂ ಪರಿಣಾಮ ಬೀರುತ್ತಿತ್ತು.

ಕಣ್ಣೆತ್ತಿ ನೋಡರು ಪರರ ನುಡಿಗಳಾಲಿಸರು
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು |
ಮೂಲೋಕದೊಡೆಯರೇ ತಾವೆಂದು ಭಾವಿಸುತ
ಮದೋನ್ಮತ್ತರೋಲಾಡುವರು ಮೂಢ || 
     ಮೇಲೆ ಉದಾಹರಿಸಿದ ಉಪವಿಭಾಗಾಧಿಕಾರಿಯವರು ನಂತರದಲ್ಲಿ ಜಿಲ್ಲಾಧಿಕಾರಿಯವರಾಗಿ ಬಡ್ತಿ ಹೊಂದಿ ಪ್ರತಿಷ್ಠಿತ ಜಿಲ್ಲೆಗೆ ನೇಮಕವಾದಾಗಲೂ ಅವರ ಈ ಪ್ರವೃತ್ತಿ ಮುಂದುವರೆದಿತ್ತು. ಅವರ ಕುಟುಂಬದವರು ಒಂದು ಅಮ್ಯೂಸ್ ಮೆಂಟ್ ಪಾರ್ಕಿನ ಖಾಯಂ ಸದಸ್ಯರಾಗಿದ್ದು, ಬಿಲ್ಲಿನ ಮೊತ್ತ ರೂ. ೫ ಲಕ್ಷ ದಾಟಿದಾಗ ಪಾರ್ಕಿನ ಮಾಲೀಕರು ಬಿಲ್ಲಿನ ಪಾವತಿಗೆ ಒತ್ತಾಯಿಸಿದರು. ಇದರ ಪರಿಣಾಮ ಏನಾಯಿತು ಗೊತ್ತೇ? ಆ ಜಿಲ್ಲಾಧಿಕಾರಿ ಸರ್ಕಾರಿ ಭೂಮಿಯನ್ನು ಪಾರ್ಕಿನ ಮಾಲಿಕರು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ಕೆ.ಎ.ಟಿ.ಯಿಂದ ತಡೆಯಾಜ್ಞೆ ಇದ್ದರೂ ಲೆಕ್ಕಿಸದೆ ತೆರವು ಕಾರ್ಯಾಚರಣೆ ನಡೆಸಿದ್ದರು. ಪಾರ್ಕಿನ ಮಾಲೀಕರು ಜಿಲ್ಲಾಧಿಕಾರಿಯವರ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ 'ಉಂಡೂ ಹೋದ, ಕೊಂಡೂ ಹೋದ' ಎಂಬ ಶೀರ್ಷಿಕೆಯಲ್ಲಿ ರಂಜಿತ ಸುದಿಯಾಗಿ ಪ್ರಕಟವಾಗಿತ್ತು. ಇದರೊಂದಿಗೇ ಹಿಂದಿ ಚಲನ ಚಿತ್ರ ನೋಡಲು ಹೋದಾಗ ಥಿಯೇಟರ್ ಮಾಲಿಕ ಹಣ ಕೇಳಿದ್ದಕ್ಕಾಗಿ ಅವರಿಗೆ ನೋಟೀಸು ಕೊಟ್ಟದ್ದು ಮತ್ತು ಯಾವುದೇ ವಾಣಿಜ್ಯ ಮಳಿಗೆಗೆ ಹೋಗಿ ಖರೀದಿ ಮಾಡಿದಾಗ ಹಣ ಕೊಡದೆ ಬರುತ್ತಿದ್ದುದರ ಬಗ್ಗೆಯೂ ಪ್ರಕಟವಾಗಿತ್ತು. (ವಿವರಕ್ಕಾಗಿ ೨೯-೦೬-೨೦೧೧ರ ವಿಜಯ ಕರ್ನಾಟಕ ಪತ್ರಿಕೆ ನೋಡಬಹುದು.) ಈಗ ಈ ಅಧಿಕಾರಿ ರಾಜ್ಯಮಟ್ಟದ ಅಧಿಕಾರಿಯಾಗಿದ್ದಾರೆ. ಇಂತಹವರು ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವರೇ? ಅಧಿಕಾರ ಮದದಿಂದ ಮನಸೋ ಇಚ್ಛೆ ಆಡಳಿತ ನಡೆಸಿದ ಐತಿಹಾಸಿಕ ಪಕ್ಷವನ್ನು ಈಚೆಗೆ ನೆಲಕಚ್ಚಿಸಿದ ಜನತೆ ಇಂತಹ ಅಧಿಕಾರಿಗಳಿಗೂ ಪಾಠ ಕಲಿಸಬೇಕಿದೆ.      
     ಮದಸೊಕ್ಕಿ ಮೆರೆದವರು ಒಮ್ಮೆ ತಮ್ಮ ಮದಕ್ಕೆ ಕಾರಣವಾದ ಸಂಗತಿಯಿಂದ ವಂಚಿತರಾದರೆ ಅವರ ಸ್ಥಿತಿ ಅಧೋಗತಿ. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತಹ ಸ್ಥಿತಿ ಅವರದಾಗುತ್ತದೆ. ಕೆಲವು ಬರಹಗಾರರಲ್ಲೂ ಈ ಮದ ತಾವೇ ತಿಳಿದವರು, ಇತರರಿಗಿಂತ ಮೇಲಿನವರು, ತಮ್ಮ ಮಾತನ್ನು ಇತರ ಎಲ್ಲರೂ ಗೌರವಿಸಬೇಕು ಎಂದು ಅಪೇಕ್ಷಿಸುವಂತೆ ಮಾಡುತ್ತದೆ. ತುಂಬಿದ ಕೊಡ ತುಳುಕದು ಎಂಬಂತಿರುವ ಸಾಹಿತಿಗಳು ಎಲ್ಲರ ಗೌರವಕ್ಕೆ ಭಾಜನರಾಗುತ್ತಾರೆ. ವಿಪರ್ಯಾಸವೆಂದರೆ ಉತ್ತಮ ಸಾಹಿತ್ಯಕ್ಕಾಗಿ ಕೊಡಮಾಡುವ ಪ್ರಶಸ್ತಿಗಳು ಇತ್ತೀಚೆಗೆ ಲಾಬಿ ಮಾಡುವವರಿಗೆ ಲಭಿಸುವಂತಾಗಿ ಪ್ರಶಸ್ತಿಯ ಮೌಲ್ಯವೇ ನಶಿಸುತ್ತಿದೆಯೇನೋ ಎಂದು ಅನ್ನಿಸುತ್ತದೆ. ಸಾಹಿತಿಯ ರಾಜಕೀಯ ಒಲವು, ನಿಲುವುಗಳನ್ನು ಅವಲಂಬಿಸಿ ಸಹ ಪ್ರಶಸ್ತಿ ನಿರ್ಧರಿಸಲಾಗುತ್ತಿದೆ ಎಂಬ ಭಾವನೆ ಜನರಲ್ಲಿದೆ. ಇರಲಿ ಬಿಡಿ, ಒಟ್ಟಿನಲ್ಲಿ ಹೇಳಬೇಕೆಂದರೆ ಮದದಿಂದ ಸೊಕ್ಕಿ ನಡೆಯುವವರು ಮೇಲರಿಮೆಯಿಂದ ನರಳುತ್ತಿರುತ್ತಾರೆ. ಪ್ರತಿಭೆ ಅನ್ನುವುದು ದೇವರ ಕೊಡುಗೆ. ಗೌರವ ಜನರು ಕೊಡುವುದು. ಗೌರವಿಸಿದರೆ  ಜನರಿಗೆ ಕೃತಜ್ಞರಾಗಿರಬೇಕು, ಇಲ್ಲದಿದ್ದರೆ ತೆಪ್ಪಗಿರಬೇಕು. ಹೆಮ್ಮೆ, ಒಣ ಪ್ರತಿಷ್ಠೆ ಅನ್ನುವುದು ಮದಭರಿತರು ತಮಗೆ ತಾವೇ ಕೊಟ್ಟುಕೊಳ್ಳುವುದು! ಒಣಪ್ರತಿಷ್ಠೆಯಿಂದ ಆಡಿದ ಅಪ್ರಬುದ್ಧ ಮಾತುಗಳಿಂದಾಗಿ ಹಿರಿಯ ಸಾಹಿತಿಯೊಬ್ಬರು ಅವಮಾನ ಮತ್ತು ಮಾತುಗಳ ಕೂರಂಬುಗಳ ಮಹಾಪೂರವನ್ನೇ ಎದುರಿಸಬೇಕಾಗಿ ಬಂದದ್ದನ್ನು ಕಂಡಿದ್ದೇವಲ್ಲವೇ? ಮದ ಮನುಷ್ಯನನ್ನು ಹಾಳು ಮಾಡುತ್ತದೆ. ಸೌಜನ್ಯದ ನಡವಳಿಕೆಗಳು ಗೌರವ ತರುತ್ತವೆ. 
     'ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯ ರಾತ್ರಿಯಲ್ಲಿ ಕೊಡೆ ಹಿಡಿದರಂತೆ' ಎಂಬಂತೆ ಮದ ತಾವೇ ಇಂದ್ರ, ಚಂದ್ರ, ದೇವೇಂದ್ರ ಎಂಬಂತೆ ಮನುಷ್ಯರಲ್ಲಿ ಭ್ರಮೆ ಮೂಡಿಸುತ್ತದೆ. ಜಂಭದಲ್ಲಿ ಎರಡು ವಿಧ ಇರುತ್ತದೆ- ಕೆಟ್ಟದ್ದು ಮತ್ತು ಒಳ್ಳೆಯದು. ಒಳ್ಳೆಯ ಜಂಭ ನಮ್ಮ ಗೌರವ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯುವಂತಹದು. ಕೆಟ್ಟ ಜಂಭವೆಂದರೆ ಮೇಲರಿಮೆಯಿಂದ ಒಡಮೂಡುವ ಅಹಂಕಾರ, ಒಣ ಪ್ರತಿಷ್ಠೆಗಳು ಮತ್ತು ಇತರರ ಕುರಿತ ಅಸಹನೆ - ಇದೇ ಮದ. ತಮ್ಮನ್ನು ಬಿಟ್ಟರಿಲ್ಲ ಎಂಬಂತೆ ಆಡುತ್ತಿದ್ದ ಚಕ್ರವರ್ತಿಗಳು, ಸಾಮ್ರಾಟರು, ಬಾದಶಹರು, ರಾಜ-ಮಹಾರಾಜರು ಇಂದು ಎಲ್ಲಿದ್ದಾರೆ? ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಅವರಲ್ಲಿ ಎಷ್ಟೋ ಜನರ ನೆನಪೂ ನಮಗಿಲ್ಲ. ಹೀಗಿರುವಾಗ ಇರುವ ಅಲ್ಪ ಅವಧಿಯ ಜೀವನ ಮುಗಿಸಿ ಹೋಗುವ ಮುನ್ನ ಕೆಲವರಾದರೂ 'ಇಂತಹವರೊಬ್ಬರಿದ್ದರು' ಎಂದು ನೆನೆಸಿಕೊಳ್ಳುವಂತೆ ಬಾಳುವುದು ಶ್ರೇಷ್ಠ. ಆದರೆ, ವಿಕಟನರ್ತನಗೈಯುವ ಮದ ಇದಕ್ಕೆ ಅವಕಾಶ ಕೊಟ್ಟೀತೇ? 

ಬಾರರದು ಜನವು ಧನವು ಕಾಯದು
ಕರೆ ಬಂದಾಗ ಅಡೆತಡೆಯು ನಡೆಯದು |
ಇರುವ ಮೂರು ದಿನ ಜನಕೆ ಬೇಕಾಗಿ
ಜಗಕೆ ಬೆಳಕಾಗಿ ಬಾಳೆಲೋ ಮೂಢ ||
-ಕ.ವೆಂ.ನಾಗರಾಜ್.
**************
9.6.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ.