ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಜುಲೈ 13, 2014

ಅಂತ್ಯ ಸಂಸ್ಕಾರ : ಮಹಿಳೆಯರು ಮಾಡಬಹುದೇ?


     ಅಂತ್ಯ್ಠೇಷ್ಠಿ - ಮಾನವ ಜೀವನದ ೧೬ ಸಂಸ್ಕಾರಗಳಲ್ಲಿ ಕೊನೆಯದಾದ ಇದು ಹೆಸರೇ ಹೇಳುವಂತೆ ಅಂತಿಮ ಅಥವ ಅಂತ್ಯ ಸಂಸ್ಕಾರವಾಗಿದೆ. ಸ್ತ್ರೀ ತಾರತಮ್ಯವನ್ನು ಬಹುತೇಕ ಎಲ್ಲಾ ಧರ್ಮ, ಮತಗಳಲ್ಲಿ ಕಾಣುತ್ತಿದ್ದೇವೆ. ಪ್ರಮಾಣ ಹೆಚ್ಚು, ಕಡಿಮೆಯಿರಬಹುದು ಮತ್ತು ಇದಕ್ಕೆ ಕಾರಣಗಳೂ ಇರಬಹುದು. ಒಂದು ಮತದಲ್ಲಂತೂ ಸ್ತ್ರೀಯನ್ನು ಅತಿ ನಿಕೃಷ್ಟವಾಗಿ ಸಂಪ್ರದಾಯದ ಹೆಸರಿನಲ್ಲಿ ಬಂಧಿಸಲಾಗಿದೆಯೆನ್ನಬಹುದು. ಸ್ತ್ರೀಯರ ವಿರುದ್ಧದ ಅನೇಕ ಕಟ್ಟುಪಾಡುಗಳು, ಸಂಪ್ರದಾಯಗಳು ಅವರನ್ನು ಹಲವು ರಂಗಗಳಲ್ಲಿ ಹಿಂದುಳಿಯುವಂತೆ ಮಾಡಿವೆ. ಹಿಂದೂ ಧರ್ಮದಲ್ಲಂತೂ ಅನೇಕ ರೀತಿಯ ಸಂಪ್ರದಾಯಗಳಿದ್ದು ಸಮಾಜವು ಕಾಲಕಾಲಕ್ಕೆ ತಕ್ಕಂತೆ ಹಲವು ಸಂಪ್ರದಾಯಗಳನ್ನು ಕೈಬಿಟ್ಟಿದೆ, ಕೆಲವು ಹೊಸ ಹೊಸ ಸಂಪ್ರದಾಯಗಳನ್ನು ರೂಢಿಸಿಕೊಳ್ಳುತ್ತಿದೆ. ಕಟ್ಟರ್ ಸಂಪ್ರದಾಯವಾದಿಗಳು ಇರುವಂತೆಯೇ ಕಾಲಕಾಲಕ್ಕೆ ಹೊಂದಿಕೊಂಡು ನಡೆಯುವ ಸುಧಾರಣಾವಾದಿಗಳು, ವಿರೋಧಿಗಳು, ನಾಸ್ತಿಕರು, ಹೀಗೆ ಹಲವು ವಿಚಾರಗಳನ್ನು ಹೊಂದಿದವರು ಇದ್ದು ಎಲ್ಲರನ್ನೂ ಹೊಂದಿಕೊಂಡು, ಒಪ್ಪಿಕೊಂಡು (ಕೆಲವೊಂದು ಸಂದರ್ಭಗಳ ಅಪವಾದಗಳನ್ನು ಹೊರತುಪಡಿಸಿ) ಸಾಗುತ್ತಿರುವ ಧರ್ಮ ಬಹುಷಃ ಇದೊಂದೇ ಇರಬೇಕು. ಮುಕ್ತ ವೈಚಾರಿಕತೆಗೆ, ವಿಮರ್ಶೆಗೆ ತೆರೆದುಕೊಂಡಿರುವ ಇದು ಮನನ, ಮಥನಗಳಿಂದ ಬದಲಾಗುತ್ತಾ ಹೋಗುತ್ತಿರುವ ಜೀವಂತಿಕೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀಯರಿಗೆ ಅಂತ್ಯ ಸಂಸ್ಕಾರ ಮಾಡಲು ಅವಕಾಶವಿದೆಯೇ ಎಂಬುದರ ಜಿಜ್ಞಾಸೆ ನಡೆಸುವುದು ಈ ಲೇಖನದ ಉದ್ದೇಶವಾಗಿದೆ.
    ಪ್ರಾರಂಭದಲ್ಲಿ ಒಂದೆರಡು ಘಟನೆಗಳನ್ನು ನೋಡೋಣ. ಉತ್ತರಪ್ರದೇಶದ ಲಕ್ನೌ ಸಮೀಪದ ಭಾಗಲ್ಪುರ ಗ್ರಾಮದ ಮೂವರು ಸೋದರಿಯರು - ರಿಂಕು, ರೀಮಾ ಮತ್ತು ಅಂಜು - ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ತಮ್ಮ ಅಜ್ಜ ವೀರ ಬಹಾದುರನ ಅಂತ್ಯ ಸಂಸ್ಕಾರಗಳನ್ನು ನೆರವೇರಿಸಿದರು. ಸುಮಾರು ಐದು ವರ್ಷದ ಹಿಂದೆ ನಡೆದ ಈ ಘಟನೆ ಕುರಿತು ಗ್ರಾಮದ ಹಿರಿಯರು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾದ ಕಾರ್ಯ ಮಾಡಬಾರದು ಎಂದು ಎಚ್ಚರಿಸಿದರೂ ಲೆಕ್ಕಿಸದ ಈ ಸೋದರಿಯರು ವೈದಿಕ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಿಬಿಟ್ಟರು. ಮೃತ ಬಹಾದುರನ ಇಬ್ಬರು ತಮ್ಮಂದಿರು ಸಮೀಪದ ಗ್ರಾಮದಲ್ಲಿದ್ದರೂ ವೈಯಕ್ತಿಕ ಕಾರಣಗಳಿಗಾಗಿ ಸತ್ತಾಗಲೂ ಸ್ಥಳಕ್ಕೆ ಬಂದಿರಲಿಲ್ಲ. ಕುಟುಂಬದಲ್ಲಿ ಗಂಡು ಮಕ್ಕಳಿಲ್ಲದಿದ್ದುದರಿಂದ ಇವರು ತಮ್ಮ ತಾಯಿ ಮತ್ತು ಅಜ್ಜಿಯ ಒಪ್ಪಿಗೆ ಪಡೆದು ಈ ಕೆಲಸ ಮಾಡಿದ್ದರು. ಈ ಘಟನೆ ನಡೆದ ಒಂದು ತಿಂಗಳ ನಂತರದ ಘಟನೆ ಇದಕ್ಕೆ ವಿರುದ್ಧವಾಗಿದೆ. ಇದೂ ಸಹ ಲಕ್ನೌ ಸಮೀಪದ ಗ್ರಾಮ ಭಾಗವತಪುರದಲ್ಲಿ ನಡೆದದ್ದು. ಬಡಕುಟುಂಬದ ೫೫ ವರ್ಷದ ಮಹಿಳೆ ಮಾಂಗ್ರಿ ತನ್ನ ಗಂಡ ೬೨ ವರ್ಷದ ನನ್ಹೆ ಸತ್ತಾಗ ತಾನೇ ಅಂತ್ಯ ಸಂಸ್ಕಾರ ಮಾಡಲು ಇಚ್ಛಿಸಿದಾಗ ಗ್ರ್ರಾಮಸ್ಥರು ಮೊದಲು ಅವಾಕ್ಕಾದರು. ಕೆಲವು ಹಿರಿಯರು ವಿರೋಧಿಸಿದರು. ಕೊನೆಯಲ್ಲಿ ಅವರಿಗೆ ಗಂಡು ಮಕ್ಕಳಿಲ್ಲದ್ದರಿಂದ ಅವಳಿಗೆ ಅಂತ್ಯ ಸಂಸ್ಕಾರ ಮಾಡಲು ಸಹಕರಿಸಲು ನಿರ್ಧರಿಸಿದರು. ಆಕೆ ಬಡವಳಾದ್ದರಿಂದ ಗ್ರಾಮಸ್ಥರೇ ಹಣ ಹೊಂದಿಸಿಕೊಟ್ಟರು. ಸಾವಿರ ಸಂಖ್ಯೆಯಲ್ಲಿ ಸೇರಿದ ಜನರು ಅದನ್ನು ಬೆಂಬಲಿಸಿದ್ದಲ್ಲದೆ ವೈದಿಕ ಸಂಪ್ರದಾಯದ ಅನುಸಾರ ಗಂಡಕಿ ನದಿ ತೀರದಲ್ಲಿ ಚಿತೆಗೆ ಮಾಂಗ್ರಿ ಅಗ್ನಿಸ್ಪರ್ಶ ಮಾಡಿದಾಗಲೂ ಹಾಜರಿದ್ದು ಮಾನವೀಯತೆ ಮೆರೆದರು.
     ಎರಡು ವರ್ಷದ ಹಿಂದಿನ ಸಂಗತಿಯಿದು. ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಸಮೀಪದ ದರಿಯಾ ಗ್ರಾಮದ ಒಬ್ಬ ಬಡಬ್ರಾಹ್ಮಣ ಸ್ತ್ರೀಯ ವ್ಯಥೆಯ ಕಥೆಯಿದು. ಆಕೆಯ ಗಂಡ ಒಬ್ಬ ಪೂಜಾರಿ ಮತ್ತು ಬಡರೈತನಾಗಿದ್ದ. ಬಿಸಿಲಿನ ಝಳದಿಂದ ಕಿರಿ ವಯಸ್ಸಿನಲ್ಲಿ ಸತ್ತಾಗ ಅವನ ಅಂತ್ಯ ಸಂಸ್ಕಾರ ಮಾಡಲು ಪತ್ನಿ ಬಸಂತಿ ಮಿಶ್ರಾ ನಿರ್ಧರಿಸಿದಳು. ಅವರಿಗೆ ಗಂಡು ಮಕ್ಕಳಿರಲಿಲ್ಲ. ಇದ್ದವಳು ಒಬ್ಬ ಐದು ವರ್ಷದ ಹೆಣ್ಣು ಮಗಳಷ್ಟೆ. ಯಥಾಪ್ರಕಾರ ವಿರೋಧ ವ್ಯಕ್ತವಾಯಿತು. ಗಂಡು ಮಕ್ಕಳಿಲ್ಲದ ಕಾರಣ ತಾನು ಅಂತ್ಯ ಸಂಸ್ಕಾರ ಮಾಡಬಹುದೆಂಬ ಅವಳ ವಾದವನ್ನು ಸಂಪ್ರದಾಯದ ಹೆಸರಿನಲ್ಲಿ ಜನ ಒಪ್ಪಲಿಲ್ಲ. ಆದರೆ ತನ್ನ ನಿಲುವಿಗೆ ಬದ್ಧಳಾದ ಅವಳು ಅಂದು ಮಧ್ಯಾಹ್ನ ಗಂಡನ ಚಿತೆ ಸಿದ್ಧಪಡಿಸಿ ಅಗ್ನಿಸ್ಪರ್ಶ ಮಾಡಿದಳು. ಅಂತ್ಯ ಸಂಸ್ಕಾರ ಮಾಡುವವರು ಕೇಶಮುಂಡನ ಮಾಡಿಸಿಕೊಳ್ಳಬೇಕು, ಬಸಂತಿ ಮಾಡಿಸಿಕೊಂಡಿರಲಿಲ್ಲವಾಗಿ ಆಕೆ ದಶಾಕರ್ಮದ ದಿನ ಮುಂಡನ ಮಾಡಿಸಿಕೊಳ್ಳಲೇಬೇಕೆಂದು ಅವಳನ್ನು ಒತ್ತಾಯಿಸಲಾತು. ವಿಧಿಯಿಲ್ಲದೆ ಮುಂಡನ ಮಾಡಿಸಿಕೊಂಡ ಆಕೆ ಹೇಳಿದ್ದು: "ನಾನು ಅವರು ಹೇಳಿದಂತೆ ಮಾಡಿದೆ. ವಿರೋಧಿಸಿ ನಾನು ಎಲ್ಲಿಗೆ ಹೋಗಲಿ? ನನ್ನ ಗಂಡ ಹೋಗಿಬಿಟ್ಟ ಮತ್ತು ನಾನು ಈ ಸಮಾಜದಲ್ಲೇ ಬದುಕಬೇಕಲ್ಲಾ!" ಗ್ರಾಮದ ಇತರ ಹೆಣ್ಣುಮಕ್ಕಳಿಗೆ ಸಿಟ್ಟು ಉಕ್ಕಿ ಬರುತ್ತಿದ್ದರೂ ಅವರಿಗೆ ಮಾತನಾಡಲು ಧೈರ್ಯವಿರಲಿಲ್ಲ.
     ನಮ್ಮ ಕರ್ನಾಟಕದ್ದೇ ಈ ಉದಾಹರಣೆ ನೋಡೋಣ. ಚೀಫ್ ಅಕೌಂಟೆಂಟ್ ಬಿ.ಜಿ.ಇಂದಿರಮ್ಮ ಒಬ್ಬ ಕೆ.ಎ.ಎಸ್. ಅಧಿಕಾರಿ. ಕೆಲವು ವರ್ಷಗಳ ಹಿಂದೆ ಅವರ ತಂದೆ ಬೆಳಗೊಳ ಗ್ರಾಮದ ಗೋವಿಂದೇಗೌಡ ಮೃತರಾದಾಗ ಅವರ ನಾಲ್ಕನೆಯ ಮಗಳಾದ ಈಕೆ ಬಲಮುರಿಯಲ್ಲಿ ತಂದೆಯ ಅಂತ್ಯ ಸಂಸ್ಕಾರ ಮಾಡಿದ್ದಲ್ಲದೆ ೧೧ನೆಯ ದಿನ ಸಂಪ್ರದಾಯದಂತೆ ಕೇಶಮುಂಡನವನ್ನೂ ಮಾಡಿಸಿಕೊಂಡರು. ತಾಯಿ ಸತ್ತಾಗ ಚಿತಾಭಸ್ಮವನ್ನು ವಾರಣಾಸಿಗೆ ಕೊಂಡೊಯ್ದು ಗಂಗೆಯಲ್ಲಿ ವಿಸರ್ಜಿಸಿದ್ದ ಇವರು, ತಂದೆಯ ಚಿತಾಭಸ್ಮವನ್ನು ಕಾವೇರಿಯಲ್ಲಿ ವಿಸರ್ಜಿಸಿದರು. "ನಮ್ಮ ತಂದೆ-ತಾಯಿಗೆ ನಾವು ಐವರು ಹೆಣ್ಣು ಮಕ್ಕಳು. ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಅದರಲ್ಲಿ ತಪ್ಪೇನಿದೆ?" ಎಂಬುದು ಇಂದಿರಮ್ಮನವರ ಪ್ರಶ್ನೆ. ಇಂದಿರಮ್ಮನವರು ಸ್ವತಃ ವಿವಾಹಿತರಾಗಿದ್ದೂ ಕೇಶಮುಂಡನ ಮಾಡಿಸಿಕೊಂಡಿದ್ದು ಸರಿಯಲ್ಲವೆಂದು ಕೆಲವರು ಬಂಧುಗಳು ಆಕ್ಷೇಪಿಸಿದ್ದರೆ, ಕೆಲವರು ಬಂಧುಗಳು ಬೆಂಬಲಿಸಿದ್ದರು. 
     ನನ್ನ ಸ್ನೇಹಿತರೊಬ್ಬರು ಹೇಳಿದ ಈ ಸಂಗತಿ ಮನಕಲಕುತ್ತದೆ. ಒಂದು ಕುಟುಂಬದಲ್ಲಿ ತಾಯಿ ಮತ್ತು ಮಗಳು ಇಬ್ಬರೇ ಇದ್ದರು.  ತಾಯಿ ಸತ್ತ ಸಂದರ್ಭದಲ್ಲಿ ಮಗಳು ತನ್ನ ತಾಯಿಯ ಅಂತ್ಯಕ್ರಿಯೆಗಳನ್ನು ದೂರದ ಸಂಬಂಧಿ ಮಾಡುತ್ತಿದ್ದಾಗ ವೇದನೆಯಿಂದ ಉದ್ಗರಿಸಿದ್ದು: 'ಓ ದೇವರೇ, ನಾನು ಮಗನಾಗಿದ್ದಿದ್ದರೆ ಹೀಗೆ ಪರಕೀಯತೆಯ ಭಾವನೆ ಬರುತ್ತಿರಲಿಲ್ಲ!'.  ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಬಿಜೆಪಿಯ ಕೇಂದ್ರ ಸಚಿವ ಶ್ರೀ ಗೋಪಿನಾಥ ಮುಂಡೆಯವರ ಅಂತ್ಯ ಸಂಸ್ಕಾರವನ್ನು ಅವರ ಮಗಳು ಮಹಾರಾಷ್ಟ್ರದ ವಿಧಾನಸಭೆ ಸದಸ್ಯೆಯಾಗಿರುವ ಪಂಕಜಾರವರೇ ನೆರವೇರಿಸಿದ್ದನ್ನು ನಾವು ಕಂಡಿದ್ದೇವೆ.
     ಸ್ತ್ರೀಯರು ಅಂತ್ಯ ಸಂಸ್ಕಾರ ಮಾಡಬಾರದು ಎಂಬ ವಾದದ/ಸಂಪ್ರದಾಯದ ಹಿನ್ನೆಲೆ ಏನಿರಬಹುದೆಂಬ ಬಗ್ಗೆ ನೋಡೋಣ. ಈ ಕುರಿತ ಸಂಪ್ರದಾಯದಲ್ಲಿನ ಕೆಲವು ನಿರ್ಬಂಧಗಳಲ್ಲಿ ಅರ್ಥವಿರಲೂಬಹುದು ಮತ್ತು ಕೆಲವುದರಲ್ಲಿ ಮುಖ್ಯ ಕಾರ್ಯಗಳಲ್ಲಿ ಮಹಿಳೆಯರನ್ನು ಹಿಂದೆ ಸರಿಸುವ ಉದ್ದೇಶವೂ ಇರಬಹುದು. ಗಂಡು ಮಕ್ಕಳೇ ಅಂತ್ಯ ಸಂಸ್ಕಾರ ಮಾಡಬೇಕೆಂಬ ಸಂಪ್ರದಾಯ ಶತಮಾನಗಳಿಂದ ವಿವಾದಗ್ರಸ್ತ ವಿಷಯವಾಗಿ ಮುಂದುವರೆದಿದೆ. ದಂಪತಿಗಳಿಗೆ ಹೆಣ್ಣು ಮಗು ಮಾತ್ರ ಇದ್ದ ಸಂದರ್ಭದಲ್ಲಿ ಕುಟುಂಬದ ಹತ್ತಿರದ ಗಂಡು ಸಂಬಂಧಿ ಅಂತ್ಯ ಸಂಸ್ಕಾರ ಮಾಡಬೇಕೆನ್ನುತ್ತಾರೆ. ಇದು ಹೆಣ್ಣು ಮಕ್ಕಳಿಗೆ ಹಿಂದೆ ಪಿತ್ರಾರ್ಜಿತ ಸ್ವತ್ತಿನಿಂದ ವಂಚಿತರಾಗಲು ಕಾರಣವಾಗುತ್ತಿತ್ತು. ಅಂತ್ಯ ಸಂಸ್ಕಾರ ನಡೆಸಿದ ಕಾರಣದಿಂದ ಆಸ್ತಿ ಹಕ್ಕು ಸ್ಥಾಪಿಸುವುದು ಹಿಂದಿನಿಂದಲೂ ಇರುವುದೇ ಆಗಿದೆ. ಈಗ ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಕೊಡುವ ಕಾನೂನು ಬಂದಿರುವುದು ಒಂದು ಕ್ರಾಂತಿಕಾರಿ ಬೆಳವಣಿಗೆಯೆನ್ನಬೇಕು. ಹೆಣ್ಣು ಮಕ್ಕಳು ಮೃದು ಹೃದಯಿಗಳಾಗಿದ್ದು ಭಾವನಾತ್ಮಕವಾಗಿ ಧಿಡೀರ್ ಸ್ಪಂದನಶೀಲರಾಗಿದ್ದು ಅಂತ್ಯ ಸಂಸ್ಕಾರದ ವೇಳೆ ಮಿತಿಮೀರಿದ ದುಃಖಾವೇಶದಿಂದ ಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಷ್ಟವೆಂಬ ಭಾವನಾತ್ಮಕ ಕಾರಣವನ್ನೂ ಮುಂದೊಡ್ಡಲಾಗುತ್ತದೆ. ಅಲ್ಲದೆ ಗರ್ಭಿಣಿಯಾಗಿರುವುದು, ಮಾಸಿಕ ಋತುಚಕ್ರಕ್ಕೊಳಪಡುವುದು ಸಹ ಅಂತ್ಯ ಸಂಸ್ಕಾರ ಕ್ರಿಯೆಗೆ ಅಡ್ಡಿಯಾಗುವ ಕಾರಣಗಳೆನ್ನುತ್ತಾರೆ. ಇಂತಹುದನ್ನೆಲ್ಲಾ ಗಮನಿಸಿ ಸ್ತ್ರೀಯರನ್ನು ಅಂತ್ಯ ಸಂಸ್ಕಾರ ಮಾಡುವ ಕೆಲಸದಿಂದ ವಿನಾಯಿತಿಗೊಳಿಸಲಾಗಿದೆಯೆನ್ನುತ್ತಾರೆ. ಆರೋಗ್ಯದ ಕಾರಣ ಹೊರತುಪಡಿಸಿ ಉಳಿದ ಕಾರಣಗಳು ಸಮರ್ಥನೀಯವೆಂದು ಹೇಳಲಾಗದು. ಈಗೀಗ ಮಹಿಳೆಯರೂ ತಮ್ಮ ಹಕ್ಕನ್ನು ಸ್ಥಾಪಿಸುವತ್ತ ದಿಟ್ಟ ಹೆಜ್ಜೆಗಳನ್ನಿಡುತ್ತಿದ್ದಾರೆ. ಅದಕ್ಕೆ ಉದಾಹರಣೆಗಳೇ ಮೇಲೆ ಉಲ್ಲೇಖಿಸಿರುವ ಘಟನೆಗಳು. ಇನ್ನೊಂದು ಕಾರಣವೆಂದರೆ ಸ್ತ್ರೀ ವಿವಾಹದ ನಂತರ ಗಂಡನ ಕುಟುಂಬಕ್ಕೆ ಸೇರಿದವಳಾಗುತ್ತಾಳೆ ಹಾಗಾಗಿ ವಿವಾಹವಾದ ಸ್ತ್ರೀ ತನ್ನ ತಂದೆ-ತಾಯಿಯರ ಅಂತ್ಯ ಸಂಸ್ಕಾರ ಮಾಡಬರುವುದಿಲ್ಲ. ಆದರೆ ಮದುವೆಯಾಗದ ಹೆಣ್ಣು ಮಗಳು ಈ ಕ್ರಿಯೆಗಳನ್ನು ನಡೆಸಲು ಅಡ್ಡಿಯಿಲ್ಲವೆಂಬ ವಾದವೂ ಇದೆ. 
     ಗರುಡ ಪುರಾಣದ ೧೬ ಅಧ್ಯಾಯಗಳಲ್ಲಿ ನರಕದ ದರ್ಶನ, ಪಾಪಿಗಳಿಗೆ ಸಲ್ಲುವ ಶಿಕ್ಷೆ ಇತ್ಯಾದಿಗಳ ವರ್ಣನೆ ಅಲ್ಲದೆ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನೂ ವಿವರಿಸಲಾಗಿದೆ. ೧೧ನೆಯ ಅಧ್ಯಾಯದ ೧೨-೧೭ರ ಶ್ಲೋಕದಲ್ಲಿ ಮೃತನ ಅಂತ್ಯ ಸಂಸ್ಕಾರವನ್ನು ಮಗ ಮಾಡಬೇಕು, ಮಗ ಇಲ್ಲದಿದ್ದಲ್ಲಿ ಹೆಂಡತಿ, ಹೆಂಡತಿ ಇಲ್ಲದಿದ್ದಲ್ಲಿ ಸೋದರ ಅಥವ ಒಬ್ಬ ಬ್ರಾಹ್ಮಣ ಅಥವ ಅರ್ಹ ಸಂಬಂಧಿ ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದೆ. ಮಗಳ ಕುರಿತು ಇಲ್ಲಿ ಉಲ್ಲೇಖಿಸಿಲ್ಲ. ೧೮ನೆಯ ಶ್ಲೋಕದಲ್ಲಿ ಒಬ್ಬ ಪುರುಷ ಅಥವ ಸ್ತ್ರೀ ಅಂತ್ಯ ಸಂಸ್ಕಾರ ನಡೆಸಿದರೆ ಸಿಗುವ ಫಲದ ಬಗ್ಗೆ ಹೇಳಿದೆ. ಇದರ ಅರ್ಥ ಸ್ಪಷ್ಟ - ಸ್ತ್ರೀ ಸಹ ಅಂತ್ಯ ಸಂಸ್ಕಾರ ಮಾಡಲು ಅರ್ಹಳು ಎಂದೇ! ಹೀಗಿರುವಾಗ ಅಂತ್ಯ ಸಂಸ್ಕಾರ ಮಾಡಲಿಚ್ಛಿಸುವ ಸ್ತ್ರೀಯರಿಗೆ ಸಂಪ್ರದಾಯದ ಹೆಸರಿನಲ್ಲಿ ಅಡ್ಡಿಪಡಿಸುವುದು ಸೂಕ್ತವಾಗಲಾರದು. ಅಂತ್ಯ ಸಂಸ್ಕಾರದ ಕ್ರಿಯೆಗಳ ವಿಧಿ-ವಿಧಾನಗಳ ನೈಜ ಅರ್ಥ ಮತ್ತು ಅನುಷ್ಠಾನಗಳನ್ನು ತಿಳಿಯದೆ ಕ್ರಿಯೆ ಮಾಡಿಸುವವರು ಅಥವ ತಿಳಿದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವವರು ಹಾಗೂ ಸಂಪ್ರದಾಯಗಳ ನೈಜ ಹಿನ್ನೆಲೆಗಳನ್ನು ತಿಳಿಯಲು ಪ್ರಯತ್ನಿಸದೆ ಧಿಡೀರ್ ತೀರ್ಮಾನ ಕೊಡುವ ವಿಚಾರವಾದಿಗಳೆನಿಸಿಕೊಂಡವರು ಇಂತಹ ವಿಷಯಗಳಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆಂದರೆ ತಪ್ಪಾಗಲಾರದು. 
     ಹಿಂದೂಗಳಿಗೆ ವೇದಗಳೇ ಪರಮ ಪ್ರಮಾಣ. ವಿಶೇಷವೆಂದರೆ ವೇದಗಳಲ್ಲಿ ಸಂಪ್ರದಾಯಗಳ ಬಗ್ಗೆ ಏನೂ ಹೇಳಿಲ್ಲ. ಸಂಪ್ರದಾಯಗಳನ್ನು ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಸಮಾಜದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದು, ಅವುಗಳಲ್ಲಿ ತುರ್ತು ಸನ್ನಿವೇಶಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಕೆಲವು ವಿನಾಯಿತಿಗಳಿಗೂ ಅವಕಾಶವಿತ್ತು. ಆದರೆ ಸಂದಿಗ್ಧ ಸಂದರ್ಭಗಳಲ್ಲಿ ನಿರ್ಧಾರಗಳನ್ನು ವೇದಗಳನ್ನು ಆಧರಿಸಿಯೇ ಮಾಡಬೇಕು. ವೇದಗಳ ಉದಾತ್ತತೆ ಎಷ್ಟೆಂದರೆ ಅವು ಎಲ್ಲಿಯೂ ಹೀಗೆ ಮಾಡು, ಹಾಗೆ ಮಾಡಬೇಡ ಎಂದು ಹೇಳುವುದಿಲ್ಲ. ಅವು ಸರಿಯಾದ ಮಾರ್ಗ ಯಾವುದೆಂದು ಮಾತ್ರ ತೋರಿಸುತ್ತದೆ ಮತ್ತು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವುದನ್ನು ನಮಗೇ ಬಿಡುತ್ತದೆ. ವೇದವು "ಭಸ್ಮಾಂತಂ ಶರೀರಮ್"(ಯಜು.೪೦.೧೫) ಎಂದು ಹೇಳುತ್ತದೆ. ಇದರ ಅರ್ಥ ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ ಎಂದು. ಮೃತರಾದ ನಂತರ ಶರೀರವನ್ನು ಅಗ್ನಿಗೆ ಅರ್ಪಿಸಬೇಕು ಎಂದು ಇದರ ಅರ್ಥ. ಆದರೆ ಮೃತ ಶರೀರವನ್ನು ಅಗ್ನಿಗೆ ಅರ್ಪಿಸಿದ ನಂತರ ಮಾಡಬೇಕಾದ ಕ್ರಿಯೆಗಳ ಬಗ್ಗೆ ವೇದಮಂತ್ರಗಳಲ್ಲಿ ಯಾವುದೇ ಉಲ್ಲೇಖಗಳಿಲ್ಲ. "ಶ್ರಾದ್ಧ - ಏಕೆ ಮತ್ತು ಹೇಗೆ?" ಎಂಬ ನನ್ನ ಇನ್ನೊಂದು ಲೇಖನದಲ್ಲಿ ಈ ವಿಚಾರದಲ್ಲಿ ವಿಸ್ತೃತವಾಗಿ ಚರ್ಚಿಸಿರುವೆ. ಆದ್ದರಿಂದ ಈ ಕುರಿತು ಇಲ್ಲಿ ಮತ್ತೆ ವಿವರಿಸಲು ಹೋಗುವುದಿಲ್ಲ. ರೂಢಿಗತವಾದ ಸಂಪ್ರದಾಯಗಳು ಸಮಾಜದ ಹಿತದ ಸಲುವಾಗಿ ಹೊರತು ಮತ್ತೇನಲ್ಲ. ಹೀಗಾಗಿ ಅವುಗಳನ್ನು ಸದಾಕಾಲಕ್ಕೆ ಕುರುಡಾಗಿ ಅನುಸರಿಸುವುದಕ್ಕಿಂತ ಒಟ್ಟು ಹಿತ ಮತ್ತು ಅಗತ್ಯ ಅನುಸರಿಸಿ, ಈಗಾಗಲೇ ಹಲವಾರು ಸಂಪ್ರದಾಯಗಳಲ್ಲಿ ಮಾಡಿಕೊಂಡಿರುವಂತೆ ಕಾಲಕ್ಕೆ ಅನುಗುಣವಾದ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ಸಾಂದರ್ಭಿಕವಾಗಿ ಅಗತ್ಯವೆಂದು ಕಂಡುಬಂದಿದ್ದ ಮತ್ತು ಅನುಸರಿಸಲಾಗುತ್ತಿದ್ದ ಬಾಲ್ಯವಿವಾಹ, ಸತಿಪದ್ಧತಿ, ರಜಪೂತ ಸ್ತ್ರೀಯರು ಸಾಮೂಹಿಕವಾಗಿ ತಮ್ಮ ಶೀಲ ಉಳಿಸಿಕೊಳ್ಳಲು ಜೀವ ತ್ಯಜಿಸುತ್ತಿದ್ದ 'ಜೌಹರ್' ಪದ್ಧತಿ, ವಿಧವೆಯರ ಕೇಶಮುಂಡನ, ಮುಸ್ಲಿಮ್ ಆಳ್ವಿಕೆಯಲ್ಲಿ ಮುಸ್ಲಿಮೇತರ ಹಿಂದೂ ಸ್ತ್ರೀಯರೂ ಹಾಕಿಕೊಳ್ಳಬೇಕಾಗಿದ್ದ ಮುಖಮುಸುಕು, ದೇವದಾಸಿ ಪದ್ಧತಿ ಮುಂತಾದುವುಗಳು ಇಂದು ಮರೆಯಾಗಿವೆ. ಚಿಂತಕರ, ಸುಧಾರಕರ ಪ್ರಯತ್ನಗಳೂ ಇದರ ಹಿಂದಿದೆ. ವೇದಕಾಲದಲ್ಲಿ ಸ್ತ್ರೀಯರೂ ಉಪವೀತಧಾರಣೆ ಮಾಡಿಕೊಂಡು ವೇದಾಧ್ಯಯನ ಮಾಡುತ್ತಿದ್ದರು. ಕ್ರಮೇಣ ಯಾವುದೋ ಕಾರಣಕ್ಕೆ ಸುದೂರ ಹಿಂದಿನ ಕಾಲಘಟ್ಟದಲ್ಲಿ ಸ್ತ್ರೀಯರನ್ನು ಇದರಿಂದ ದೂರವಿಡಲಾಯಿತು. ಇದು ಸತ್ಸಂಪ್ರದಾಯವೊಂದರ ಕಣ್ಮರೆಗೆ ಕಾರಣವಾಯಿತು. ವೇದಾಧ್ಯಯನದಿಂದ ಸ್ತ್ರೀಯರು ವಂಚಿತರಾಗಬಾರದು. ವೇದಪಂಡಿತರಾದ ಮೈತ್ರಿ, ಗಾರ್ಗೇಯಿ ಮುಂತಾದ ಅನೇಕ ಋಷಿಕೆಯರ ಉದಾಹರಣೆಗಳಿವೆ. ಇದನ್ನೆಲ್ಲಾ ಏಕೆ ಉದಾಹರಿಸಿದ್ದೆಂದರೆ ಅಂತ್ಯಸಂಸ್ಕಾರದ ವಿಷಯದಲ್ಲೂ ಅಷ್ಟೆ, ಇಂದಿಗೆ ಅಗತ್ಯವಾದ ಕ್ರಮವನ್ನು ಅನುಸರಿಸಿದರೆ ತಪ್ಪೇನಿಲ್ಲ.
     ಕೊನೆಯದಾಗಿ ಹೇಳಬೇಕೆಂದರೆ ಅಂತ್ಯಸಂಸ್ಕಾರ ಮಾಡುವುದು ಕರ್ತವ್ಯವೇ ಹೊರತು ಸವಲತ್ತು ಅಲ್ಲ. ಇದನ್ನು ಸವಲತ್ತು ಎಂದುಕೊಂಡರೆ ಮಾತ್ರ ವಿವಾದ ಸೃಷ್ಟಿಯಾಗುತ್ತದೆ. ವೇದವು ಯಾವುದೇ ರೀತಿಯ ಅಸಮಾನತೆಗೆ ವಿರೋಧವಾಗಿದೆ. ಯಾವುದೇ ಕ್ರಿಯೆಗಳ ಅರ್ಥ ತಿಳಿದು ಮಾಡುವುದರಿಂದ ಮಾನಸಿಕ ತೃಪ್ತಿ, ಸಾರ್ಥಕತೆ ಇರುತ್ತದೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರನ್ನು ಕೆಲವು ಕ್ರಿಯೆಗಳಿಂದ ದೂರವಿಡುವ ವಿಚಾರದಲ್ಲಿ ಮಹಿಳೆಯರ ಪಾಲೂ ಇದೆ. ಏಕೆಂದರೆ ಸಂಪ್ರದಾಯಗಳ ಪಾಲನೆ, ಬೆಳವಣಿಗೆಗಳಲ್ಲಿ ಅವರ ಪಾತ್ರವೇ ಮಹತ್ವದ್ದಾಗಿದೆ. ವೈಚಾರಿಕತೆ ಬೆಳೆಸಿಕೊಳ್ಳೋಣವೆಂಬ ವೇದದ ಈ ಕರೆ ನಮಗೆ ಕೇಳಿಸಲಿ:
ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯)
ಅರ್ಥ: ಸತ್ಯವನ್ನೇ ಶಕ್ತಿಯಾಗಿ ಹೊಂದಿರುವವರೇ, ನೀವು ನಿಮ್ಮ ಸ್ವಂತ ವಿವೇಚನೆಯಿಂದಲೇ ಸತ್ಯವನ್ನು ಆವಿಷ್ಕರಿಸಿರಿ, ತಿಳಿಯಿರಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನಜ್ಯೋತಿಯಿಂದ ಸೀಳಿಹಾಕಿರಿ (ಕಿತ್ತೆಸೆಯಿರಿ).
ವೈಚಾರಿಕತೆಗೆ ಇಷ್ಟು ಮುಕ್ತ ಅವಕಾಶ ಕೊಟ್ಟಿರುವ ವೇದಗಳು ನಮ್ಮ ಹಲವಾರು ಸಂದಿಗ್ಧತೆಗಳ ನಿವಾರಣೆಗೆ ಮಾರ್ಗದರ್ಶಿಯಾಗಿವೆ. ದಾರಿ ಹೀಗಿದೆ, ಹೇಗೆ ಸಾಗಬೇಕು ಅನ್ನುವುದು ಸಾಗುವವರಿಗೆ ಬಿಟ್ಟದ್ದು.
-ಕ.ವೆಂ.ನಾಗರಾಜ್.
**************
7.7.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ:

10.7.2014ರ ಜನಹಿತ ಪತ್ರಿಕೆಯಲ್ಲೂ ಪ್ರಕಟಿತ:8 ಕಾಮೆಂಟ್‌ಗಳು:

 1. ನಮ್ಮ ಕೂಟ ಮಹಾಜಗತ್ತಿನ ಪುರೋಗಾಮಿ ಪುರೋಹಿತರು ಕರ್ಮಾಂಗಗಳಲ್ಲಿ ಸ್ತ್ರೀಯರ ಅಧಿಕಾರ ಪಾತ್ರವೂ ಇದೆ ಎಂಬ ಮಹತ್ವವನ್ನು ನಿರೂಪಿಸಿದ್ದಾರೆ. “ ಧರ್ಮಸಿಂಧು ” ವಿನ ಪರಿಚ್ಛೇದ-3 ಉತ್ತರಾರ್ಧವನ್ನು ಕೂಲಂಕುಷವಾಗಿ ಓದಿ ಅರ್ಥೈಸಿಕೊಂಡಲ್ಲಿ ಇದು ತಿಳಿದು ಬರುತ್ತೆ. ಪ್ರಚಲಿತ ಪದ್ದತಿಯನ್ನು ದಾಟಿ “ ಪುರೋಹಿತ ” ಶಬ್ದಕ್ಕೆ ( ಸಮಾಜದ ಹಿತವನ್ನು ಬಯಸುವವರು ) ಸರಿಯಾದ ಅರ್ಥವನ್ನು ಕಲ್ಪಿಸಿದ ನಮ್ಮ ಪುರೋಹಿತರಿಗೆ – “ ಹ್ಯಾಟ್ಸ್ ಆಫ್ “
  Our aggressive Purohits of Koota Mahajagath, in Bengaluru ( Sri Anantha Upadhya and Sri Padmanabha Aithal ) have showed to the society that even Females have the RIGHT to perform post rituals of parted souls of their parents. Hats off to our purohits who demonstrate the real meaning of PUROHIT ie, One who cares for the benefit of THE SOCIETY. As I found one may refer “ DHARMASINDHU “ Chapter 3 – uttaraardha and find right answer.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಮಾಹಿತಿಗೆ ವಂದನೆಗಳು, ಹೆಬ್ಬಾರರೇ.

   ಅಳಿಸಿ
  2. Saraswathi Murthy
   Madabaradendenu illa daihikavagi durbalaragiruvudarinda kashtavaguttade endu hage heliddare ashte

   ಅಳಿಸಿ
  3. Roopa Satish
   Print out tegonde maneyalli ammanige odoke. Tx for sharing

   ಅಳಿಸಿ
 2. ಮಾನ್ಯರೇ, ಹಿಂದೂ ಸಂಪ್ರದಾಯದಲ್ಲಿ ಕೆಲವು ಅಲಿಖಿತ ಶಾಸನಗಳಿವೆ. ಅಂತ್ಯ ಸಂಸ್ಕಾರವನ್ನು ಹೆಣ್ಣು ಮಾಡಬೇಕೆ? ಬೇಡವೇ? ಎಂಬ ಬಗ್ಗೆ ನಿಖರವಾಗಿ ಹೇಳಿಲ್ಲವಾದರೆ,ಸಮಾಜದ ವಿರುದ್ದ ಏಕೆ ಹೋಗಬೇಕು. ಮೃತರ ವಂಶವೃಕ್ಷದಲ್ಲಿ ಯಾರಾದರೂ ಒಬ್ಬ ಗಂಡಸು ಇದ್ದೇ ಇರುತ್ತಾನೆ. ಅವನಿಂದ ಅಂತ್ಯ ಸಂಸ್ಕಾರ ಮಾಡಿಸಬಹುದಲ್ಲವೇ?

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರತಿಕ್ರಿಯೆಗೆ ವಂದನೆಗಳು, ನಂಜುಂಡರಾಜುರವರೇ. ಸಮಾಜ ಬದಲಾಗುತ್ತಿದೆ. ಬದಲಾವಣೆಗೆ ತೆರೆದುಕೊಳ್ಳಲು ಇಚ್ಛಿಸುವವರು ಮುಂದೆ ಬಂದರೆ ಸುಧಾರಣೆ ಆದೀತು. ಬದಲಾವಣೆ ಬರುವಾಗ ಪ್ರಾರಂಭದಲ್ಲಿ ಉಪೇಕ್ಷೆ, ನಂತರ ವಿರೋಧ ಬಂದರೂ ಕೊನೆಗೊಮ್ಮೆ ಸತ್ಯಕ್ಕೆ ಜಯವೂ ಸಿಗುತ್ತದೆ. ಆತ್ಮಕ್ಕೆ ಲಿಂಗಬೇಧವಿಲ್ಲದಿರುವಾಗ ಇಂತಹ ಕ್ರಿಯೆಗಳಲ್ಲೂ ಬೇಧ ಹೋದರೆ ಒಳಿತೇ! ಅಷ್ಟಕ್ಕೂ ಸಮಾಜ ಎಂದರೆ ನಾವು, ನೀವುಗಳೇ! ಸಮಾಜಕ್ಕೆ ವಿರುದ್ಧವಾಗಿ ಹೋಗುವುದು, ಬಿಡುವುದು ಸಂಬಂಧಿಸಿದವರು ನಿರ್ಧರಿಸಿಕೊಳ್ಳಲಿ. ಲೇಖನದ ಆಶಯವೂ ಅದೇ ಆಗಿದೆ. ಇದು ಇಂದಿನ ಸಮಸ್ಯೆಯೂ ಅಲ್ಲ. ಶತಮಾನಗಳಿಂದ ವಿವಾದ ಮುಂದುವರೆದೇ ಇದೆ. ಬದಲಾವಣೆಗೆ ಕಾಲ ಬರಬೇಕು, ಬಂದೀತು!

   ಅಳಿಸಿ
  2. nageshamysore
   ಕವಿಗಳೆ ನಮಸ್ಕಾರ. ಅಂತ್ಯ ಸಂಸ್ಕಾರವನ್ನು ಪೂರೈಸುವಲ್ಲಿ ಮಹಿಳೆಯರ ಭೂಮಿಕೆಯನ್ನು ಸಚಿತ್ರವಾಗಿ ವಿವರಿಸಿದ ಸೊಗಸಾದ ಲೇಖನ. ಧನ್ಯವಾದಗಳು.

   gunashekara murthy
   ನೆಚ್ಚಿನ‌ ಸ್ನೇಹಿತರಾದ‌ ಕವಿ ನಾಗರಾಜ್ ರವರೇ, ನಿಮ್ಮ‌ ಬರಹಕ್ಕೆ ಭೇಷ್ ಎನ್ನಲೇಬೇಕಿದೆ ಏಕೆಂದರೇ 5000 ಸಾವಿರ‌ ಇತಿಹಾಸದಲ್ಲಿ ಕೆಲವೇ ಕೆಲ‌ವು ಒಂದಂಕಿಯ‌ ಉದಾಹರಣೆಗಳು ಕೊಟ್ಟಿರುವುದಕ್ಕೆ ಮತ್ತೊಮ್ಮೆ ಭೇಷ್ ಎನ್ನುತ್ತೇನೆ. ವೇದಪಂಡಿತರಾದ ಮೈತ್ರಿ, ಗಾರ್ಗೇಯಿ ಮುಂತಾದ ಅನೇಕ ಋಷಿಕೆಯರ ಉದಾಹರಣೆಗಳಿವೆ.

   kavinagaraj
   ವಂದನೆಗಳು, ನಾಗೇಶರೇ.

   ಅಳಿಸಿ