ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಜನವರಿ 17, 2012

ಆಯುರ್ಧಾರಾ - ೫: ಹೀಗಿರಬೇಕು ನಮ್ಮ ಆಹಾರ

ಆಯುರ್ಧಾರಾ - ೫

    ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಜನಪ್ರಿಯ ಗಾದೆ. ಇದರ ಅರ್ಥ - ಯಾರು ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇವಿಸಬಲ್ಲರೋ ಅವರು ಆರೋಗ್ಯವಂತರಾಗುವರು ಎಂದು. ನಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ಆಯುರ್ವೇದ ಬಹು ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾಗಿ ನಿರೂಪಿಸುತ್ತದೆ.
    ಪ್ರಪ್ರಥಮವಾಗಿ ನಮ್ಮ ಆಹಾರ ಷಡ್ರಸೋಪೇತವಾಗಿರಬೇಕು. ಅಂದರೆ ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು - ಈ ಆರೂ ರಸಗಳು ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಇರಬೇಕು. ಇದರಿಂದ ಮನುಷ್ಯನ ಬಲವು ವೃದ್ಧಿಯಾಗುತ್ತದೆ. ಕೇವಲ ಒಂದೇ ತರಹದ ಅಥವಾ ಒಂದೆರಡು ತರಹದ ರಸಗಳನ್ನೇ ಬಳಸುವುದರಿಂದ ದೌರ್ಬಲ್ಯವುಂಟಾಗುತ್ತದೆ. ಷಡ್ರಸಭರಿತ ಆಹಾರ ಸೇವನೆ ಆರೋಗ್ಯದ ಪ್ರಥಮ ಮೂಲ.
ಆಹಾರದ ಪ್ರಮಾಣ: ಆಹಾರದ ಪ್ರಮಾಣದ ನಿಗದಿ ಕಷ್ಟಸಾಧ್ಯ. ಪ್ರತಿಯೊಬ್ಬರಿಗೂ ಇಷ್ಟೇ ಆಹಾರ ಎಂದು ನಿಗದಿಪಡಿಸಲು ಸಾಧ್ಯವಿಲ್ಲ. ಅದರ ಪ್ರಮಾಣ ಅವರವರ ಅಗ್ನಿಬಲ ಅಂದರೆ ಪಚನಶಕ್ತಿಯನ್ನು ಅವಲಂಬಿಸಿರುತ್ತದೆ. ಆಹಾರವನ್ನು ಲಘು ಮತ್ತು ಗುರು ಎಂದು ವಿಂಗಡಿಸಬಹುದು. ಲಘು ಆಹಾರವು ಅಗ್ನಿ, ವಾಯು ಮಹಾಭೂತ ಪ್ರಧಾನವಾಗಿದ್ದು ಸುಲಭವಾಗಿ ಪಚನಗೊಳ್ಳುತ್ತದೆ. ಗುರು ಆಹಾರವು ಪೃಥ್ವಿ, ಜಲ ಮಹಾಭೂತ ಪ್ರಧಾನವಾಗಿದ್ದು ಪಚನಕ್ಕೆ ಕಷ್ಟಕರವಾಗಿರುತ್ತದೆ. ಅಕ್ಕಿ, ಹೆಸರು ಬೇಳೆ, ಜೇನುತುಪ್ಪ, ಮೃಗಮಾಂಸ, ಮೊಲದ ಮಾಂಸ ಮುಂತಾದವು ಲಘು ಆಹಾರಕ್ಕೆ ಉದಾಹರಣೆ. ಹಿಟ್ಟಿನ ಪದಾರ್ಥಗಳು, ಕ್ಷೀರ ವಿಕೃತಿ (ಹಾಲು, ಮೊಸರು, ಬೆಣ್ಣೆ, ತುಪ್ಪ ಮುಂತಾದವು), ಇಕ್ಷು ವಿಕೃತಿ (ಸಕ್ಕರೆ, ಬೆಲ್ಲ ಮುಂತಾದವು), ಉದ್ದು, ಎಳ್ಳು ಮುಂತಾದ ಪದಾರ್ಥಗಳು ಗುರು ಆಹಾರಕ್ಕೆ ಉದಾಹರಣೆ. ಗುರು ಆಹಾರವನ್ನು ಅರ್ಧ ತೃಪ್ತಿಯವರೆಗೆ ಮಾತ್ರ ತಿನ್ನಬೇಕು. ಹಾಗೆಂದು ಲಘು ಆಹಾರವನ್ನು ಅತಿ ಹೆಚ್ಚು ತಿನ್ನಬಹುದೆಂದು ಭಾವಿಸಬಾರದು. ತಿನ್ನುವಾಗ ಹೊಟ್ಟೆಯ ಅರ್ಧ ಭಾಗದಲ್ಲಿ ಘನ ಆಹಾರ, ಕಾಲುಭಾಗದಲ್ಲಿ ದ್ರವ, ಉಳಿದ ಕಾಲು ಭಾಗ ದೋಷ ಸಂಚಾರಕ್ಕೆ ಅನುಕೂಲವಾಗುವಂತಹ ಕ್ರಮದಲ್ಲಿ ತಿನ್ನಬೇಕು.
ನಿತ್ಯ ಬಳಸಬಹುದಾದ ಪದಾರ್ಥಗಳು: ಅಕ್ಕಿ, ಹೆಸರು ಬೇಳೆ, ಸೈಂಧವ ಲವಣ, ಬೆಟ್ಟದ ನೆಲ್ಲಿ,  ಅಂತರೀಕ್ಷ ಜಲ (ಮಳೆ ನೀರು), ತುಪ್ಪ, ಜಾಂಗಲ ಪಶು ಮಾಂಸ (ಮಾಂಸಾಹಾರಿಯಾಗಿದ್ದಲ್ಲಿ), ಜೇನುತುಪ್ಪ ಮುಂತಾದವು.
ನಿತ್ಯ ಬಳಸಬಾರದ ಪದಾರ್ಥಗಳು: ಮೊಸರು, ಉದ್ದು, ಮೀನು, ಹಂದಿ, ಹಸು, ಎಮ್ಮೆ ಮಾಂಸ, ಶುಷ್ಕ ಶಾಕ (ಒಣಗಿದ ಸೊಪ್ಪು ತರಕಾರಿ), ಒಣಗಿಸಿದ ಮಾಂಸ ಮುಂತಾದವು. ವಿಶೇಷವಾಗಿ ಕ್ಷಾರ, ಉಪ್ಪು, ಹಿಪ್ಪಲಿ ಇವನ್ನು ಹೆಚ್ಚು ಬಳಸಬಾರದು.
     ವಿಶೇಷ ಆಹಾರವಿಧಿಗಳ ಬಗ್ಗೆ ಮುಂದಿನ ಆಯುರ್ಧಾರಾ ಸಂಚಿಕೆಯಲ್ಲಿ ತಿಳಿಸಲಾಗುವುದು.

ಮಂಗಳವಾರ, ಜನವರಿ 3, 2012

ಆಯುರ್ಧಾರಾ - ೪

SUSHRUTHA
               ಈ ಹಿಂದಿನ ಧಾರೆಗಳಲ್ಲಿ ಆಯುರ್ವೇದವು ೮ ಅಂಗಗಳನ್ನು ಹೊಂದಿದೆ ಎಂದು ತಿಳಿಸಲಾಗಿತ್ತು.ಈಗ ಅವುಗಳ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳೋಣ .
೧. ಕಾಯಚಿಕಿತ್ಸಾ  ಕಾಯಚಿಕಿತ್ಸಾ ನಾಮ ಸರ್ವಾಂಗ    ಸಂಶ್ರಿತಾನಾಂ ವ್ಯಾಧೀನಾಂ ಜ್ವರ ರಕ್ತಪಿತ್ತ ಶೋಷ ಉನ್ಮಾದ ಅಪಸ್ಮಾರ ಕುಷ್ಠ ಮೇಹಾತಿಸಾರಾದೀನಾಂ ಉಪಶಮನಾರ್ಥಂ;
||ಸು.ಸಂ.ಸೂ.೧/೮ ||  
         ಕಾಯ ಚಿಕಿತ್ಸೆಯೆಂದರೆ ಸಕಲ ಶರೀರವನ್ನೂ ಆಶ್ರಯಿಸಿ ಹುಟ್ಟಿರುವ ಜ್ವರ, ರಕ್ತಪಿತ್ತ, ಶೋಷ, ಉನ್ಮಾದ, ಅಪಸ್ಮಾರ, ಕುಷ್ಠ, ಪ್ರಮೇಹ, ಅತಿಸಾರ ಮೊದಲಾದ ರೋಗಗಳನ್ನು ನಿವಾರಿಸುವ ಕ್ರಮಗಳನ್ನು ಬೋಧಿಸುವ ಆಯುರ್ವೇದ ಭಾಗವು.
ಇದು ಆಧುನಿಕ ಚಿಕಿತ್ಸಾಕ್ರಮದ  "General medicine" ನನ್ನು ಒಳಗೊಂಡಿದೆ. 
೨. ಕೌಮಾರ ಭೃತ್ಯ : 
ಕೌಮಾರ ಭೃತ್ಯಂ ನಾಮ ಕುಮಾರ ಭರಣ ಧಾತ್ರೀಕ್ಷೀರದೋಷಸಂಶೋಧನಾರ್ಥಂ ದುಷ್ಟಸ್ತನ್ಯಗ್ರಹಸಮುತ್ಥಾನಾಂ ಚ ವ್ಯಾಧೀನಾಂ ಉಪಶಮನಾರ್ಥಂ;
||ಸು.ಸಂ.ಸೂ.೧/೮ ||  
     ಕೌಮಾರ ಭೃತ್ಯವೆಂದರೆ ಆಗ ತಾನೇ ಜನಿಸಿದ ಮತ್ತು ಜನನವಾದನಂತರ ಕ್ಷೀರಪಾನದಿಂದ ಹಿಡಿದು ಅನ್ನವನ್ನು ತಿನ್ನುವವರೆಗೂ ಬೆಳೆದಿರುವ ಮಕ್ಕಳನ್ನು ಕ್ರಮವರಿತು ಪೋಷಿಸುವುದು, ಧಾತ್ರಿಯ (ಹಾಲನ್ನುಣಿಸುವಾಕೆ) ಹಾಲಿನ ದೋಷಗಳನ್ನು ಶೋಧಿಸಿ ಉತ್ತಮಗೊಳಿಸುವುದು, ದುಷ್ಟ ಸ್ತನ್ಯಪಾನದಿಂದುಂಟಾಗುವ ಮಕ್ಕಳ ಶಾರೀರಿಕ ವ್ಯಾಧಿಗಳನ್ನು ಬಾಲಕರಿಗೆ ಗ್ರಹಾದ್ಯಾವೇಶದಿಂದುಂಟಾಗುವ (ಗ್ರಹಗಳ ಪ್ರಭಾವದಿಂದ) ಮಾನಸಿಕ ಮತ್ತು ಶಾರೀರಿಕ ವ್ಯಾಧಿಗಳನ್ನು ಪರಿಹಾರ ಮಾಡತಕ್ಕ ವಿಧಾನಗಳನ್ನು ಬೋಧಿಸುವ ಆಯುರ್ವೇದ ಭಾಗವು.
ಇದು ಆಧುನಿಕ ಚಿಕಿತ್ಸಾಕ್ರಮದ  "Pediatrics" ನನ್ನು ಒಳಗೊಂಡಿದೆ.
೩.  ಭೂತ ವಿದ್ಯಾ :
ಭೂತವಿದ್ಯಾ ನಾಮ ದೇವಾಸುರಗಂಧರ್ವ ಯಕ್ಷರಕ್ಷಃಪಿತೃ ಪಿಶಾಚನಾಗಗ್ರಹಾದ್ಯುಪಸೃಷ್ಟಚೆತಸಾಂ ಶಾಂತಿಕರ್ಮಬಲಿಹರಣಾದಿ ಗ್ರಹೋಪಶಮನಾರ್ಥಂ: ||ಸು.ಸಂ.ಸೂ.೧/೮ ||
     ಭೂತ ವಿದ್ಯೆಯೆಂದರೆ ದೇವತೆ, ಅಸುರ, ಗಂಧರ್ವ, ಯಕ್ಷ, ರಾಕ್ಷಸ, ಪಿತೃ, ಪಿಶಾಚ, ನಾಗ ಮೊದಲಾಗ ಗ್ರಹಗಳಿಂದ ಪೀಡಿತರಾದ ಜನರ ವಿಕಾರಗಳನ್ನು ಶಾಂತಿಕರ್ಮ, ಬಲಿದಾನ ಮುಂತಾದ ಕ್ರಮಗಳಿಂದ ಗ್ರಹಪೀಡೆಯನ್ನು ನಿವಾರಿಸಿ ಸುಖವನ್ನುಂಟು ಮಾಡುವ ವಿಧಾನಗಳನ್ನು ಬೋಧಿಸುವ ಆಯುರ್ವೇದ ಭಾಗವು.
ಆಯುರ್ವೇದವು ಆಸ್ತಿಕ ದರ್ಶನವಾಗಿರುವುದರಿಂದ ಈ ವಿಭಾಗಕ್ಕೆ ಮಾನ್ಯತೆ ಕೊಟ್ಟಿದೆ.  ಆಧುನಿಕ ಚಿಕಿತ್ಸಾಕ್ರಮದವರಿಗೆ ಇದರ ಬಗೆಗಿನ ಜ್ಞಾನ ಇಲ್ಲ.
೪. ಶಾಲಾಕ್ಯ ತಂತ್ರ :
ಶಾಲಾಕ್ಯಂನಾಮೋರ್ಧ್ವಜತ್ರುಗತಾನಾಂ ಶ್ರವಣ ನಯನ ವದನ ಘ್ರಾಣಾದಿ ಸಂಶ್ರಿತಾನಾಂ ವ್ಯಾಧೀನಾಂ ಉಪಶಮನಾರ್ಥಂ, ಶಲಾಕಾ ಯಂತ್ರ ಪ್ರಣಿಧಾನಾರ್ಥಂ ಚ: ||ಸು.ಸಂ.ಸೂ.೧/೮ ||
     ಕತ್ತಿನ ಬುಡದ ಮೇಲೆ ಇರುವ ಕಿವಿ, ಕಣ್ಣು, ಬಾಯಿ, ಮೂಗು ಮೊದಲಾದ ಅವಯವಗಳಲ್ಲಿ ಉಂಟಾಗುವ ರೋಗಗಳನ್ನು ನಿವಾರಿಸುವ ಮತ್ತು ಶಲಾಕೆಯೆಂಬ ಯಂತ್ರಗಳನ್ನು ಪ್ರಯೋಗ ಮಾಡುವ ವಿಧಾನಗಳನ್ನು ತಿಳಿಸುವ ಆಯುರ್ವೇದ ಭಾಗವೇ ಶಾಲಾಕ್ಯ ತಂತ್ರವು.
ಇದು ಆಧುನಿಕ ಚಿಕಿತ್ಸಾಕ್ರಮದ "E.N.T" ಹಾಗೂ "Opthalmology" ಯನ್ನು ಒಳಗೊಂಡಿದೆ. 
೫. ಶಲ್ಯ ತಂತ್ರ :
ಶಲ್ಯಂ ನಾಮ ವಿವಿಧತೃಣಕಾಷ್ಠಪಾಷಾಣಪಾಂಶುಲೋಹಲೋಷ್ಟಾಸ್ಥಿ
ಬಾಲನಖಪೂಯಾಸ್ರಾವದುಷ್ಟವ್ರಣಾಂತರ್ಗರ್ಭಶಲ್ಯೋದ್ಧರಣಾರ್ಥಂ,
ಯಂತ್ರಶಸ್ತ್ರಕ್ಷಾರಾಗ್ನಿಪ್ರಣಿಧಾನವ್ರಣವಿನಿಶ್ಚಯಾರ್ಥಂ ಚ:  ||ಸು.ಸಂ.ಸೂ.೧/೮ ||
  ಶಲ್ಯತಂತ್ರವೆಂದರೆ ಅನೇಕ ವಿಧಗಳಾದ ಹುಲ್ಲು, ಕಡ್ಡಿ, ಕಲ್ಲು, ಧೂಳುಮಣ್ಣು, ಲೋಹದ ಚೂರು, ಮಣ್ಣಿನಹೆಂಟೆ, ಮೂಳೆಯ ಚೂರು, ಕೂದಲು, ಉಗುರು, ಕೀವು ಸೇರುವುದು, ದುಷ್ಟ ವ್ರಣವನ್ನು, ಮೂಢಗರ್ಭವನ್ನು ಅಥವಾ ಬದುಕಿರುವ ಶಿಶುವನ್ನೇ ಜೀವಸಹಿತವಾಗಿ ಮೃತ ಗರ್ಭಿಣಿಯ ಉದರದಿಂದ ಹೊರಕ್ಕೆ ತೆಗೆಯ ಬೇಕಾಗುವಾಗ ಉಪಯೋಗಿಸತಕ್ಕ ಯಂತ್ರ, ಶಸ್ತ್ರ, ಕ್ಷಾರ, ಅಗ್ನಿ ಇವುಗಳ ಪ್ರಯೋಗವನ್ನೂ ಮತ್ತು ಇವುಗಳಿಂದ ವ್ರಣವನ್ನು ನಿರ್ಧರಿಸಿ ತಿಳಿಯುವ ವಿಧಾನಗಳನ್ನೂ ತಿಳಿಸುವ ಭಾಗ.
ಇದು ಆಧುನಿಕ ಚಿಕಿತ್ಸಾಕ್ರಮದ  "Surgery" ಯನ್ನು ಒಳಗೊಂಡಿದೆ.
೬. ಅಗದ ತಂತ್ರ :
 ಅಗದ ತಂತ್ರಂ ನಾಮ ಸರ್ಪಕೀಟಲೂತಾ ಮೂಷಕಾದಿ ದಷ್ಟವಿಷವ್ಯಂಜನಾರ್ಥಂ ವಿವಿಧ  ವಿಷಸಂಯೋಗೋಪಶಮನಾರ್ಥಂ ಚ: ||ಸು.ಸಂ.ಸೂ.೧/೮ ||
     ಅಗದ ತಂತ್ರವೆಂದರೆ ಹಾವು, ಕೀಟ, ಜೇಡ, ಇಲಿ ಮೊದಲಾದ ಪ್ರಾಣಿಗಳ ಕಡಿತದಿಂದ ದೇಹದಲ್ಲಿ ಕಾಣಬರುವ ವಿಷಲಕ್ಷಣಗಳನ್ನು ನಿರ್ಧರಿಸತಕ್ಕ ವಿಧಾನಗಳನ್ನೂ, ಸ್ಥಾವರ-ಜಂಗಮಾದಿ ವಿವಿಧ ವಿಷಯಗಳ ಸಂಯೋಗದಿಂದುಂಟಾಗುವ ವಿಷಬಾಧೆಗಳನ್ನೂ ಮತ್ತು ಅವನ್ನು ನಿವಾರಿಸುವ ವಿಧಾನಗಳನ್ನೂ ಬೋಧಿಸುವ ಆಯುರ್ವೇದ ಭಾಗವು.
 ಇದು ಆಧುನಿಕ ಚಿಕಿತ್ಸಾಕ್ರಮದ  "Toxicology" ನನ್ನು ಒಳಗೊಂಡಿದೆ.
೭. ರಸಾಯನ ತಂತ್ರ :
ರಸಾಯನ ತಂತ್ರಂ ನಾಮ ವಯಃಸ್ಥಾಪನಮಾಯುರ್ಮೇಧಾ ಬಲಕರಂ ರೋಗಾಪಹರಣ ಸಮರ್ಥಂ ಚ: ||ಸು.ಸಂ.ಸೂ.೧/೮ ||
     ರಸಾಯನ ತಂತ್ರವೆಂದರೆ ದೀರ್ಘ ಕಾಲ ಬದುಕುವಂತೆಯೂ, ಬುದ್ಧಿಶಕ್ತಿ, ಬಲಗಳನ್ನೂ ಹೆಚ್ಚಿಸಿ ರೋಗನಿವಾರಣಾ ಶಕ್ತಿಯನ್ನು ವೃದ್ಧಿಸಿ, ಮುದಿತನವನ್ನು ನಿವಾರಿಸಿ ಬಹುಕಾಲ ತಾರುಣ್ಯಾವಸ್ಥೆಯಲ್ಲೇ ಇರುವಂತೆ ಮಾಡುವ ಉಪಾಯವನ್ನು ತಿಳಿಸುವ ಆಯುರ್ವೇದ ಭಾಗವು.
     ಆಯುರ್ವೇದದಲ್ಲಿ ಈ ತಂತ್ರದ ಬಗ್ಗೆ ಸವಿಸ್ತಾರವಾದ ವಿವರಣೆ ಇದೆ. ಆದರೆ  ಆಧುನಿಕ ಚಿಕಿತ್ಸಾಕ್ರಮದಲ್ಲಿ ಇದು ಇನ್ನೂ ಅಂಬೆಗಾಲಿಡುತ್ತಿರುವ ಕೂಸು ಎಂದೇ ಹೇಳಬಹುದು.
೮. ವಾಜೀಕರಣ ತಂತ್ರ :
ವಾಜೀಕರಣ ತಂತ್ರಂ ನಾಮಾಲ್ಪದುಷ್ಟಕ್ಷೀಣವಿಶುಷ್ಕರೇತಸಾಂ ಆಪ್ಯಾಯನ ಪ್ರಸಾದೋಪಚಯಜನನನಿಮಿತ್ತಂ ಪ್ರಹರ್ಷಜನನಾರ್ಥಂ ಚ|||ಸು.ಸಂ.ಸೂ.೧/೮ ||   
     ವಾಜೀಕರಣ ತಂತ್ರವೆಂದರೆ ಅಲ್ಪಪ್ರಮಾಣದ, ದೋಷದೂಷಿತವಾದ, ರೋಗಾದಿಗಳಿಂದ ಕ್ಷೀಣಿಸಿದ ಮತ್ತು ಬತ್ತಿಹೋದ ಶುಕ್ರಧಾತುವನ್ನುಳ್ಳ ಜನರಿಗೆ ಕ್ರಮವಾಗಿ ಅಲ್ಪಶುಕ್ರವುಳ್ಳವರಿಗೆ ಅತಿಯಾಗಿ ಹೆಚ್ಚುವಂತೆಯೂ, ವಾತಾದಿ ದೋಷ-ದೂಷಿತ ರೇತಸ್ಸುಳ್ಳವರಿಗೆ ಶುದ್ಧಿಮಾಡತಕ್ಕ ವಿಧಾನಗಳನ್ನು ಪ್ರಯೋಗಿಸುವಂತೆಯೂ, ಪ್ರಮಾಣದಿಂದ ಕ್ಷೀಣವಾಗಿರುವ ಶುಕ್ರವುಳ್ಳವರಿಗೆ ವೃದ್ಧಿಯಾಗುವಂತೆಯೂ, ಅತ್ಯಂತ ಕ್ಷೀಣವಾಗಿರುವವರಿಗೆ ಹೆಚ್ಚಾಗಿ ಉತ್ಪತ್ತಿಯಾಗುವಂತೆಯೂ ಮಾಡುವ ವಿಧಾನಗಳನ್ನು ಬೋಧಿಸುವ ಆಯುರ್ವೇದ ಭಾಗವು. ಇದು ಆಧುನಿಕ ಚಿಕಿತ್ಸಾಕ್ರಮದ  "Reproductive Medicine" ನನ್ನು ಒಳಗೊಂಡಿದೆ.