ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜೂನ್ 30, 2014

ವೇದಸುಧೆ : ವೇದಭಾರತಿಯ ವಾರ್ಷಿಕೋತ್ಸವ

ವೇದಸುಧೆ : ವೇದಭಾರತಿಯ ವಾರ್ಷಿಕೋತ್ಸವ:          ಕಳೆದ  ಎರಡು ವರ್ಷಗಳಿಂದ "ವೇದಭಾರತಿಯ" ಹೆಸರಲ್ಲಿ "ಎಲ್ಲರಿಗಾಗಿ ವೇದ" ಧ್ಯೇಯದೊಡನೆಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಗಿಸಿ ಎರ...

ಭಾನುವಾರ, ಜೂನ್ 29, 2014

ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ವೇದಭಾರತಿ

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || 
ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
"ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ."
     ಹಾಸನದ ವೇದಭಾರತಿ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವೇದ ಅರ್ಥಾತ್ ಜ್ಞಾನ ಸಮಾಜದ ಎಲ್ಲ ಆಸಕ್ತರಿಗೂ ತಲುಪಲಿ ಎಂಬ ಸದಾಶಯದಿಂದ 'ಎಲ್ಲರಿಗಾಗಿ ವೇದ' ಎಂಬ ಘೋಷ ವಾಕ್ಯದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯನ್ನು ಪ್ರಾರಂಭದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ಪೋಷಿಸಿ ಬೆಳೆಸಿದವರು ಹರಿಹರಪುರ ಶ್ರೀಧರ್ ಮತ್ತು ಕವಿನಾಗರಾಜರು. ನಂತರದಲ್ಲಿ ಹಲವಾರು ಸಮಾನಮನಸ್ಕರ ಬೆಂಬಲ, ಪ್ರೋತ್ಸಾಹಗಳೂ ಸಿಕ್ಕಿ ಇಂದು ಒಂದು ಗುರುತಿಸಲ್ಪಡುವ ಸಂಘಟನೆಯಾಗಿದೆ. ಶ್ರೀ ಸುಧಾಕರ ಶರ್ಮರವರು ವೇದದ ಬೆಳಕಿನಲ್ಲಿ ನೀಡಿದ ಹಲವು ಉಪನ್ಯಾಸಗಳಿಂದ ಪ್ರಭಾವಿತರಾಗಿ 'ವೇದಸುಧೆ' ಹೆಸರಿನಲ್ಲಿ ಒಂದು ಅಂತರ್ಜಾಲ ಬ್ಲಾಗ್ ಅನ್ನು ಅಕ್ಟೋಬರ್, ೨೦೧೦ರಲ್ಲಿ ಪ್ರಾರಂಭಿಸಲಾಯಿತು. ಈ ಬ್ಲಾಗ್ ಎಷ್ಟು ಜನಪ್ರಿಯವಾತೆಂದರೆ ಇದರಲ್ಲಿ ವೇದದ ಹಿನ್ನೆಲೆಯಲ್ಲಿನ ಹಲವಾರು ಬರಹಗಳಿಗೆ, ಚರ್ಚೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದ್ದವು. ಆರೋಗ್ಯಕರ ಚರ್ಚೆಗಳು ಜ್ಞಾನದ ಹರವನ್ನು ಹೆಚ್ಚಿಸಲು ಸಹಕಾರಿಯಾದವು. ಇದುವರೆಗೆ ೧೨೨೦ ಬರಹಗಳು ಈ ಬ್ಲಾಗಿನಲ್ಲಿ ಪ್ರಕಟವಾಗಿ ಇದುವರೆವಿಗೆ ಸುಮಾರು ೧,೨೫,೦೦೦ ಪುಟವೀಕ್ಷಣೆಗಳಾಗಿವೆ. ಬ್ಲಾಗ್ ಪ್ರಾರಂಭವಾದ ನಂತರದಲ್ಲಿ ಒಂದು ವರ್ಷ ಪೂರ್ಣವಾದ ಸಂದರ್ಭದಲ್ಲಿ ವಾರ್ಷಿಕೋತ್ಸವ ಮಾಡಿ ಆ ಸಂದರ್ಭದಲ್ಲಿ ವಿದ್ವಾಂಸರುಗಳಿಂದ ವಿಚಾರಗೋಷ್ಠಿ , ಅಗ್ನಿಹೋತ್ರದ ಪ್ರಾತ್ಯಕ್ಷಿಕೆ, ವೇದದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಉಪನ್ಯಾಸ ಏರ್ಪಡಿಸಲಾಗಿತ್ತು. ೨೦೧೧ರಲ್ಲಿ ವೇದಸುಧೆ ಹೆಸರಿನಲ್ಲಿ ಒಂದು ವೆಬ್ ಸೈಟ್ ಅನ್ನು ಪ್ರಾರಂಭಿಸಲಾಯಿತು. ಈ ವೆಬ್ ಸೈಟಿನಲ್ಲಿ ಅನೇಕ ಪ್ರಬುದ್ಧ ವೈಚಾರಿಕ ಬರಹಗಳು, ಮಾಹಿತಿಗಳು, ವಿಡಿಯೋ, ಆಡಿಯೋಗಳು ಸಾರ್ವಜನಿಕರ ಅವಗಾಹನೆಗೆ ಲಭ್ಯವಿದೆ. ಬ್ಲಾಗ್ ಮತ್ತು ವೆಬ್ ಸೈಟಿನ ವಿಳಾಸ: 

     ನಂತರದ ದಿನಗಳಲ್ಲಿ ಏರ್ಪಡಿಸಿದ್ದ ಶ್ರೀ ಸುಧಾಕರ ಶರ್ಮರಿಂದ ಒಂದು ವಾರದ ಕಾಲ ಉಪನ್ಯಾಸ ಮಾಲೆ, ಸಾರ್ವಜನಿಕರೊಡನೆ ಮುಕ್ತ ಸಂವಾದ ಜನಮನವನ್ನು ಸೆಳೆಯುವಲ್ಲಿ, ವೈಚಾರಿಕ ಚಿಂತನೆ ಉದ್ದೀಪಿಸುವಲ್ಲಿ ಯಶಸ್ವಿಯಾದವು. ಕಳೆದ ವರ್ಷ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ' ನಡೆಸಿದ್ದು ಆ ಶಿಬಿರದಲ್ಲಿ ಹಾಸನ ಜಿಲ್ಲೆಯ ೩೦ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ೪೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೂರದ ಪೂನಾದಿಂದಲೂ ಒಬ್ಬರು ಭಾಗವಹಿಸಿದ್ದರು. ಪ್ರತಿದಿನ ಸಾಯಂಕಾಲ ಸಾರ್ವಜನಿಕರಿಗೆ ಉಪನ್ಯಾಸ ಏರ್ಪಡಿಸಿತ್ತು. ಕೊನೆಯ ದಿನದಂದು ನಾಲ್ವರು ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದು ಯಜ್ಞೋಪವೀತ ಧಾರಣೆ ಮಾಡಿಸಿಕೊಂಡಿದ್ದು ಉಲ್ಲೇಖನೀಯ. ಇದು ಟಿವಿಯ ವಿವಿಧ ಚಾನೆಲ್ಲುಗಳ ಮೂಲಕ ಬಿತ್ತರವಾಗಿ ಗಮನ ಸೆಳೆದಿತ್ತು. ಸ್ವಾಮಿ ಚಿದ್ರೂಪಾನಂದಜಿಯವರಿಂದ ಒಂದು ವಾರದ ಕಾಲ 'ಗೀತಾಜ್ಞಾನಯಜ್ಞ' ನಡೆಸಲಾಯಿತು. ಕಳೆದ ವರ್ಷದಿಂದ ಮಕ್ಕಳಲ್ಲೂ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಬಾಲಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಈಗಲೂ ವೇದಮಂತ್ರಗಳನ್ನು ಹೇಳುತ್ತಿರುವುದು, ಕಲಿಕೆ ಮುಂದುವರೆಸುತ್ತಿರುವುದು ಮುದ ನೀಡುವ ಸಂಗತಿಯಾಗಿದೆ.
     ವೇದ ಎಂದರೆ ಕೇವಲ ಪೂಜಾ ಮಂತ್ರಪಾಠಗಳಲ್ಲ, ಒಂದು ವರ್ಗಕ್ಕೆ ಮೀಸಲಲ್ಲ. ಈ ಜ್ಞಾನ ಸಂಪತ್ತು ಸಮಸ್ತ ಮಾನವಕುಲದ ಆಸ್ತಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಲು ಅರ್ಹರು. ವೇದಗಳಲ್ಲಿ ಎಲ್ಲೂ ಅಸಮಾನತೆಯ ಸೋಂಕಿಲ್ಲ, ಬದಲಾಗಿ ಸಮಸ್ತ ಜೀವರಾಶಿಯ ಶ್ರೇಯೋಭಿವೃದ್ಧಿ ಬಯಸುವ ಸಂದೇಶಗಳಿವೆ. ವೇದಗಳನ್ನು ಪುರಾಣಗಳು ಮತ್ತು ಕಟ್ಟುಕಥೆಗಳೊಂದಿಗೆ ಸೇರಿಸಿ ಅಥವ ಸಮೀಕರಿಸಿ ವಿಶ್ಲೇಷಿಸುವುದು ವೇದಕ್ಕೆ ಬಗೆಯುವ ಅಪಚಾರವಾಗುತ್ತದೆ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ.  ಈ ನಿಟ್ಟಿನಲ್ಲಿ ಜನಜಾಗೃತಿ ಮಾಡಲು ವೇದಭಾರತಿ ಎರಡು ವರ್ಷಗಳ ಹಿಂದೆ ಯಾವುದೇ ಜಾತಿ, ಮತ, ಪಂಗಡ, ಲಿಂಗ, ವಯಸ್ಸಿನ ತಾರತಮ್ಯವಿಲ್ಲದೆ ಆಸಕ್ತ ಎಲ್ಲರಿಗೂ ವೇದಮಂತ್ರಗಳನ್ನು ಅಭ್ಯಸಿಸುವ ಅವಕಾಶ ಕಲ್ಪಿಸಿ ಸಾಪ್ತಾಹಿಕ ವೇದಾಭ್ಯಾಸ ತರಗತಿ ಪ್ರಾರಂಭಿಸಿತು. ಒಂದೆರಡು ತಿಂಗಳ ನಂತರ ಇದು ಪ್ರತಿನಿತ್ಯದ ತರಗತಿಯಾಗಿ ಮಾರ್ಪಟ್ಟಿದೆ.  ಕಳೆದ ಏಳೆಂಟು ತಿಂಗಳುಗಳಿಂದ ನಿತ್ಯ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ಮಾಡಲಾಗುತ್ತಿದೆ. ಅಗ್ನಿಹೋತ್ರದ ಮಹತ್ವ, ಮಂತ್ರಗಳ ಅರ್ಥವನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು, ಹಂಪಾಪುರ, ಅರಸಿಕೆರೆ ಮುಂತಾದೆಡೆಯಲ್ಲೂ ಈ ಪರಿಚಯ ಕಾರ್ಯ, ಜಾಗೃತಿ ಮೂಡಿಸುವ ಕೆಲಸಗಳಾಗಿವೆ. 
     ಪ್ರತಿನಿತ್ಯ ಹಾಸನದ ಹೊಯ್ಸಳನಗರದ 'ಈಶಾವಾಸ್ಯಮ್'ನಲ್ಲಿ ಸಾಯಂಕಾಲ ೬ರಿಂದ೭ರವರೆಗೆ ನಡೆಯುವ ವೇದಾಭ್ಯಾಸ ಸತ್ಸಂಗದ ಸ್ವರೂಪ ಪಡೆದುಕೊಂಡಿದೆ. ಪರಮಾತ್ಮಸ್ತುತಿ, ಅಗ್ನಿಹೋತ್ರ, ನಂತರ ವೇದಮಂತ್ರಗಳ ಸಾರವೆಂಬಂತಿರುವ ಎರಡು ಭಜನೆಗಳು, ವೇದಮಂತ್ರಗಳ ಅಭ್ಯಾಸ ನಡೆಯುತ್ತದೆ. ವೇದಮಂತ್ರಗಳ ಅರ್ಥ ತಿಳಿಸುವುದರೊಂದಿಗೆ ಆರೋಗ್ಯಕರ ಚರ್ಚೆಗೂ ಅವಕಾಶವಿರುತ್ತದೆ. ಆಗಾಗ್ಯೆ ಸಾಧು-ಸಂತರ, ಜ್ಞಾನವೃದ್ಧರ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತದೆ. ಪ್ರತಿನಿತ್ಯ ಸುಮಾರು ೨೦ರಿಂದ೩೦ ಆಸಕ್ತರು ಪಾಲುಗೊಳ್ಳುತ್ತಿದ್ದಾರೆ. ಆಸಕ್ತಿ ಇರುವ ಯಾರಿಗೇ ಆಗಲಿ, ಇಲ್ಲಿ ಮುಕ್ತ ಪ್ರವೇಶವಿದೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೇವಲ ಸ್ವಂತದ ಅಭಿವೃದ್ಧಿಗಾಗಿ ಬಯಸುವುದಲ್ಲ, ಸಮಾಜಮುಖಿಯಾಗಿ ನಮ್ಮ ನಡವಳಿಕೆಗಳು, ಮನೋಭಾವ ವೃದ್ಧಿಸಲಿ ಎಂಬ ಸದುದ್ದೇಶದ ಚಟುವಟಿಕೆಗಳನ್ನು ನಡೆಸುವುದು, ಸಜ್ಜನ ಶಕ್ತಿಯ ಜಾಗರಣೆಗೆ ತನ್ನದೇ ಆದ ರೀತಿಯಲ್ಲಿ ಮುಂದುವರೆಯುವುದು ವೇದಭಾರತಿಯ ಧ್ಯೇಯವಾಗಿದೆ. ವೇದದ ಈ ಕರೆಯನ್ನು ಸಾಕಾರಗೊಳಿಸುವತ್ತ ಸಜ್ಜನರು ಕೈಗೂಡಿಸಲಿ ಎಂದು ಆಶಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
"ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ."
-ಕ.ವೆಂ.ನಾಗರಾಜ್.

ಜನಮಿತ್ರದಲ್ಲಿ: ದಿ. 8.6.2014ರಂದು ಪ್ರಕಟಿತ.

ಜನಹಿತದಲ್ಲಿ 9.6.2014ರಂದು ಪ್ರಕಟಿತ:
ಭಾನುವಾರ, ಜೂನ್ 22, 2014

ಕೋಪ - ತಾಪ

ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ
ಕೋಪದಿಂದಲೆ ನಾಶ ಕೋಪದಿಂದಲೆ ಭಯವು |
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ
ಕೋಪಿಷ್ಠರವರು ಪಾಪಿಷ್ಠರೋ ಮೂಢ || 
     ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯಿದು. ಗಂಡ-ಹೆಂಡತಿ ಇಬ್ಬರೂ ಸಾಫ್ಟ್‌ವೇರ್ ಇಂಜನಿಯರರು. ಮದುವೆಯಾಗಿ ಕೆಲವು ವರ್ಷಗಳಷ್ಟೇ ಆಗಿತ್ತು. ಅನುರೂಪ ದಾಂಪತ್ಯ. 'ಹೇಳಿ ಮಾಡಿಸಿದ ಜೋಡಿ' ಎಂದು ನೋಡಿದವರು, ಅಕ್ಕ-ಪಕ್ಕದವರು ಹೇಳುತ್ತಿದ್ದರು. ಒಮ್ಮೆ ಯಾವುದೋ ವಿಷಯಕ್ಕೆ ಒಬ್ಬರಿಗೊಬ್ಬರಿಗೆ ಮಾತಿನ ಚಕಮಕಿ ನಡೆಯಿತು. ಗಂಡ ಸಿಟ್ಟಿನ ಭರದಲ್ಲಿ ಹೆಂಡತಿಯ ಕೆನ್ನೆಗೆ ಬಾರಿಸಿಬಿಟ್ಟ. ಸೂಕ್ಷ್ಮ ಸ್ಥಳಕ್ಕೆ ಪೆಟ್ಟು ಬಿದ್ದು ಆಕೆ ಅಲ್ಲೇ ಕುಸಿದು ಬಿದ್ದಳು. ದಿಗ್ಭ್ರಮೆಗೊಂಡ ಗಂಡ ಇನ್ನಿಲ್ಲದಂತೆ ಉಪಚರಿಸಿ, ಆಸ್ಪತ್ರೆಗೆ ತುರ್ತಾಗಿ ಕರೆದೊಯ್ದರೆ ಆಕೆ ಸತ್ತಿದ್ದನ್ನು ಅಲ್ಲಿ ಧೃಡಪಡಿಸಿದ್ದರಷ್ಟೆ. ಕ್ಷಣಿಕ ಸಿಟ್ಟು ಒಂದು ಪ್ರಾಣವನ್ನೇ ಬಲಿ ಪಡೆದಿತ್ತು. ಕ್ಷಣಿಕ ಸಿಟ್ಟಿನ ಆವೇಶ ಕೊಲೆ ಮಾಡಿಸುತ್ತದೆ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ, ಆಡಬಾರದ್ದನ್ನು ಆಡಿಸುತ್ತದೆ, ಮಾಡಬಾರದ್ದನ್ನು ಮಾಡಿಸುತ್ತದೆ. ಅರಿಷಡ್ವರ್ಗಗಳಲ್ಲಿ ಒಂದಾದ ಕೋಪದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.
     "ಸಿಟ್ಟು ಬಂದಾಗ ಮಾತನಾಡಿದರೆ ನೀವು ಅತ್ಯುತ್ತಮವಾಗಿ ಮಾತನಾಡುತ್ತೀರಿ, ಎಷ್ಟೆಂದರೆ ಅದಕ್ಕಾಗಿ ನೀವು ಎಂದೆಂದಿಗೂ ವಿಷಾದಿಸುವಷ್ಟು!" ಎಂಬ ಡಾ. ಲಾರೆನ್ಸ್ ಜೆ.ಪೀಟರ್ ಹೇಳಿದ ಮಾತನ್ನು ಎಲ್ಲರೂ, ವಿಶೇಷವಾಗಿ ಗಣ್ಯರು ಎನಿಸಿಕೊಂಡವರು ಸದಾ ನೆನಪಿನಲ್ಲಿಡಬೇಕು. ಸಾಹಿತಿ ಅನಂತಮೂರ್ತಿಯವರು, "ಮೋದಿ ಪ್ರಧಾನ ಮಂತ್ರಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಸಿಟ್ಟಿನ ಕ್ಷಣದಲ್ಲಿ ಹೇಳಿದ್ದಷ್ಟೆ, ನಾನು ದೇಶ ಬಿಟ್ಟು ಹೋಗುವುದಿಲ್ಲ" ಎಂದು ಎಷ್ಟು ಸಲ ವಿವರಣೆ ಕೊಡಬೇಕಾಗಿ ಬಂದಿತು! ಅಲ್ಲದೆ ಅವರಿಗೆ ಪೋಲಿಸ್ ರಕ್ಷಣೆ ಸಹ ಬೇಕಾಯಿತು! ಮೋದಿಯವರನ್ನು 'ನರಹಂತಕ' ಎಂದದ್ದಕ್ಕಾಗಿ ನಮ್ಮ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ವಿವರಣೆ ಕೊಡಬೇಕಾಯಿತು ಮತ್ತು ಈಗ ಮೋದಿಯವರ ಭಾವಚಿತ್ರವನ್ನು ತಮ್ಮ ಕೊಠಡಿಯಲ್ಲಿ ಹಾಕಿಕೊಳ್ಳಬೇಕಾದ ಮುಜುಗರದ ಸನ್ನಿವೇಶ ಎದುರಾಗಿದೆ. ಅಸಹನೆಯಿಂದ ಒಡಮೂಡಿದ ಸಿಟ್ಟಿನಲ್ಲಿ ಇಂತಹುದೇ ಮಾತುಗಳನ್ನಾಡಿದ ಇತರ ಗಣ್ಯರುಗಳೂ ತಮ್ಮ ಮಾತುಗಳನ್ನು ತಾವೇ  ನುಂಗಿಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದನ್ನೂ ಕಂಡಿದ್ದೇವೆ. ಸಿಟ್ಟು ವಿವೇಕವನ್ನು ಹಾಳುಗೆಡವುತ್ತದೆ ಎಂಬುದಕ್ಕೆ ಇವು ಉದಾಹರಣೆಯಾಗುತ್ತವೆ.
ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ || 
     ಕೋಪ ಅನ್ನುವುದು ಸುಮ್ಮ ಸುಮ್ಮನೆ ಕಾರಣವಿಲ್ಲದೆ ಬರುವುದಿಲ್ಲ ಮತ್ತು ಆ ಕಾರಣ ಒಳ್ಳೆಯದಂತೂ ಆಗಿರುವುದಿಲ್ಲ. ಪ್ರೆಷರ್ ಕುಕ್ಕರಿನಂತೆ ಒಂದು ಹಂತದವರೆಗೆ ಮಾತ್ರ ಕೋಪವನ್ನು ಅದುಮಿಡಬಹುದು. ಒತ್ತಡ ಹೆಚ್ಚಾದರೆ ಸಿಡಿದುಬಿಡುತ್ತದೆ. ಸಹಿಸಿಕೊಳ್ಳಬಹುದಾದ ಮಿತಿಯನ್ನು ಮೀರಿ ಇತರರು ವರ್ತಿಸಿದಾಗ, ಆತ್ಮಾಭಿಮಾನಕ್ಕೆ ಧಕ್ಕೆ ಬಂದಾಗ ಅದನ್ನು ರಕ್ಷಿಸಿಕೊಳ್ಳುವ ಸಲುವಾಗಿ ಪ್ರತಿಕ್ರಿಯೆಯಾಗಿ ಉದಯಿಸುವುದೇ ಈ ಕೋಪ. ಕೋಪ ಬಂದಾಗ ಭೌತಿಕ ಬದಲಾವಣೆಗಳೂ ಆಗುತ್ತವೆ. ಉಸಿರಾಟ ತೀವ್ರವಾಗುತ್ತದೆ, ಹೃದಯದ ಬಡಿತ ಹೆಚ್ಚುತ್ತದೆ, ಕೈಕಾಲುಗಳು ಕಂಪಿಸುತ್ತವೆ, ಅವಡುಗಚ್ಚುತ್ತಾರೆ, ಹಾವಭಾವಗಳು ವಿಚಿತ್ರವಾಗುತ್ತವೆ, ಎತ್ತರದ ಧ್ವನಿಯಲ್ಲಿ ಅರಚುತ್ತಾರೆ, ಕಣ್ಣು ಕೆಂಪಗಾಗುತ್ತದೆ, ವಿವೇಚಿಸುವ ಶಕ್ತಿ ಕುಂದುತ್ತದೆ. ಈ ಹಂತದಲ್ಲಿ ಆಗುವ ಪರಿಣಾಮಗಳು ಹಾನಿಕಾರಕವಾಗಿರುತ್ತದೆ ಮತ್ತು ಹಲವು ಕಾಲದವರೆಗೆ ನೆಮ್ಮದಿಯನ್ನು ಹಾಳುಗೆಡವುತ್ತದೆ. ಬಸ್ಸಿನಲ್ಲಿ ಸೀಟಿಗಾಗಿ ಜಗಳ, ಕಂಡಕ್ಟರನೊಡನೆ ಚಿಲ್ಲರೆಗಾಗಿ ಮಾತುಕತೆ, ಆಕಸ್ಮಿಕವಾಗಿ ಬಾಯಿತಪ್ಪಿ ಆಡುವ ಯಾವುದೋ ಮಾತು, ಇತ್ಯಾದಿಗಳೂ ಇಂತಹ ಸಂದರ್ಭವನ್ನು ಸೃಷ್ಟಿಸಿಬಿಡಬಹುದು. ಮನಃಶಾಸ್ತ್ರಜ್ಞರು ಕೋಪ ಅನ್ನುವುದು ಸಹಜವಾದ ಮೂಲಭೂತ ಗುಣವೆನ್ನುತ್ತಾರೆ. ಇದನ್ನು ತಮಗಾದ ಲೋಪ, ಅನ್ಯಾಯವನ್ನು ಸರಿಪಡಿಸಲು ಉಪಯುಕ್ತವಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಬಹುದೆನ್ನುತ್ತಾರೆ. ಆದರೆ ಅನಿಯಂತ್ರಿತ ಕೋಪ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒಂದಂತೂ ನಿಜ, "ಕೋಪಗೊಳ್ಳಲಾಗದವನು ಮೂರ್ಖ; ಕೋಪ ಮಾಡಿಕೊಳ್ಳದಿರುವವನು ಬುದ್ಧಿವಂತ".
     ಕೋಪವನ್ನು ಮೂರು ವಿಧವಾಗಿ ವಿಂಗಡಿಸಬಹುದೆನ್ನಿಸುತ್ತದೆ - ಆತುರದ ಧಿಡೀರ್ ಕೋಪ, ವ್ಯವಸ್ಥಿತವಾದ ಮತ್ತು ನೆಲೆನಿಂತ ಕೋಪ ಮತ್ತು ಮನೋಪ್ರವೃತ್ತಿಯ ಕೋಪ. ಮೊದಲನೆಯ ಪ್ರಕಾರದಲ್ಲಿ ಸ್ವಂತಿಕೆಯ ಉಳಿಕೆ ಅಥವ ಪ್ರದರ್ಶನಕ್ಕಾಗಿ ಸಣ್ಣ ಸಣ್ಣ ಸಂಗತಿಗೂ ಸಿಟ್ಟಿಗೇಳುವುದನ್ನು ಉದಾಹರಿಸಬಹುದು. ಎರಡನೆಯ ಪ್ರಕಾರದ ಕೋಪ ಅಪಾಯಕಾರಿಯಾದದ್ದು. ನಿರಂತರವಾದ ಅನ್ಯಾಯ, ದಬ್ಬಾಳಿಕೆ, ಶೋಷಣೆಗಳಿಂದ ಉಂಟಾದ ಈ ಕೋಪ ಪ್ರತಿಯಾಗಿ ಮತ್ತು ವ್ಯವಸ್ಥಿತವಾಗಿ ಪ್ರತೀಕಾರ ಮಾಡುವುದು, ದಬ್ಬಾಳಿಕೆ ನಡೆಸುವುದು, ಘಾಸಿಯುಂಟುಮಾಡುವುದರ ಬಗ್ಗೆ ಗುರಿಯಿರಿಸಿರುತ್ತದೆ. ಇನ್ನು ಮನೋಪ್ರವೃತ್ತಿಯ ಕೋಪವೆಂದರೆ ತಾವೇ ತಿಳಿದವರೆಂಬ ಭ್ರಮೆಯವರು ಮತ್ತು ಸಿನಿಕತನ ಬೆಳೆಸಿಕೊಂಡಿರುವವರಾಗಿದ್ದು ಪ್ರತಿಯೊಂದರಲ್ಲೂ ಕೊಂಕು ತೆಗೆಯುವುದು, ಹುಳುಕು ಹುಡುಕುವುದು, ಇತ್ಯಾದಿಗಳನ್ನು ಮಾಡುತ್ತಾ ಇತರರನ್ನು ಘಾಸಿಸುತ್ತಾ ಒಂದು ರೀತಿಯ ವಿಕೃತಾನಂದ ಪಡೆಯುವವರೆನ್ನಬಹುದು. ತಾವೂ ಕಿರಿಕಿರಿಪಡುತ್ತಾ ಇತರರನ್ನೂ ಕಿರಿಕಿರಿಗೊಳಪಡಿಸುವವರಿವರು. ಇವರು ಪೂರ್ವಾಗ್ರಹ ಪೀಡಿತ ವಿಚಾರಿಗಳಾಗಿದ್ದು, ತಮ್ಮ ವಿಚಾರ ತಪ್ಪೆಂದು ಮನದಟ್ಟಾದರೂ ಒಪ್ಪಿಕೊಳ್ಳದವರು ಮತ್ತು ತಾವು ಹೇಳುವುದೇ, ನಂಬಿದ್ದೇ ಸತ್ಯವೆಂದು ವಾದಿಸುವವರು ಈ ಪ್ರಕಾರಕ್ಕೆ ಸೇರುತ್ತಾರೆ.
     ಕೋಪವನ್ನು ವ್ಯಕ್ತಪಡಿಸುವಲ್ಲಿ ಎರಡು ರೀತಿಗಳನ್ನು ಗುರುತಿಸಬಹುದು - ಒಂದು ತಡೆಹಿಡಿದ ಕೋಪ ಮತ್ತು ಎದುರು ಬೀಳುವ ರೀತಿಯ ಕೋಪ. ತಡೆಹಿಡಿದ ಕೋಪವನ್ನು ವ್ಯಕ್ತಪಡಿಸುವ ರೀತಿಯೂ ಕುತೂಹಲಕಾರಿಯಾಗಿರುತ್ತದೆ. ಕೃತಕ ನಗು, ಸಂಬಂಧವಿಲ್ಲದಂತೆ ಇರುವುದು, ಮಾತುಗಳಿಗೆ ತಣ್ಣನೆಯ ಪ್ರತಿಕ್ರಿಯೆ ಕೊಡುವುದು, ಅತಿಯಾಗಿ ಪ್ರತಿಕ್ರಿಯಿಸುವುದು ಅಥವ ಪ್ರತಿಕ್ರಿಯಿಸದೆ ಇರುವುದು, ಅಗತ್ಯವಿದ್ದ ಸಂದರ್ಭದಲ್ಲಿ ಸಹಕರಿಸದೆ ಇರುವುದು, ಸಂಘರ್ಷ ಬಯಸದಿರುವುದು, ಬೆನ್ನ ಹಿಂದೆ ಮಾತನಾಡುವುದು, ಹತಾಶ ಮನೋಭಾವ ತೋರಿಸುವುದು, ಪ್ರತಿಯೊಂದರಲ್ಲೂ ಅತಿರೇಕದ ಪ್ರವೃತ್ತಿ ತೋರಿಸುವುದು, ಇತರರನ್ನು ಮುನ್ನುಗ್ಗಲು ಪ್ರಚೋದಿಸಿ ತಾವು ಹಿಂದೆ ಉಳಿಯುವುದು, ಅನಾರೋಗ್ಯದ ನೆಪ ಹೇಳುವುದು, ಸಂಬಂಧಗಳನ್ನು ಹಾಳು ಮಾಡುವುದು, ಕಣ್ಣಿಗೆ ಕಣ್ಣು ಸೇರಿಸಿ ಮಾತನಾಡದಿರುವುದು, ಅನಾಮಧೇಯ ದೂರುಗಳು ಬರುವಂತೆ ಮಾಡುವುದು, ಇತ್ಯಾದಿಗಳನ್ನು ಇದರಲ್ಲಿ ಹೆಸರಿಸಬಹುದು. ಯಾರದೇ ಹೆಸರುಗಳನ್ನು ಹೇಳಹೋಗದೆ, ಇತ್ತೀಚಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಂದೇ ರಾಜಕೀಯ ಪಕ್ಷಕ್ಕೆ ಸೇರಿದ, ಒಬ್ಬರನ್ನು ಕಂಡರೆ ಒಬ್ಬರಿಗಾಗದ ನಾಯಕರುಗಳು ಪರಸ್ಪರ ವರ್ತಿಸಿದ ರೀತಿ ಈ ರೀತಿಯ ಕೋಪದ ಅಭಿವ್ಯಕ್ತಿಗೆ ಉತ್ತಮ ಉದಾಹರಣೆಗಳಾಗುತ್ತವೆ.
      ಇನ್ನು ಎದುರು ಬೀಳುವ ರೀತಿಯ ಕೋಪದ ಅಭಿವ್ಯಕ್ತಿ ಹೇಗಿರುತ್ತದೆಂದರೆ, ನೇರವಾಗಿ ವೈಯಕ್ತಿಕ ಮಟ್ಟದ ಟೀಕೆಗಳನ್ನು ಮಾಡುವುದು, ಕಿರುಚುವುದು, ತಳ್ಳಾಡುವುದು, ವ್ಯಕ್ತಿಗಳ ದೌರ್ಬಲ್ಯಗಳನ್ನು ಎತ್ತಿ ಆಡುವುದು, ಗೂಂಡಾಗಿರಿ ಮಾಡುವುದು, ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದು, ಇತರರ ಭಾವನೆಗಳಿಗೆ ಬೆಲೆ ಕೊಡದೆ ಅವಮಾನಿಸುವುದು, ತೀರಾ ಕೆಳಮಟ್ಟದಲ್ಲಿ ನಡೆದುಕೊಳ್ಳುವುದು, ಲೈಂಗಿಕ ದಬ್ಬಾಳಿಕೆ ನಡೆಸುವುದು, ಅಶ್ಲೀಲ ಪದಗಳನ್ನು ಬಳಸಿ ಬೈಯುವುದು, ಇತರರನ್ನು ಲೆಕ್ಕಿಸದೆ ತಾವೇ ಪ್ರಥಮ ಆದ್ಯತೆ ಪಡೆದುಕೊಳ್ಳುವ ಸ್ವಾರ್ಥತೆ, ಬೆದರಿಕೆ ಹಾಕುವುದು, ಹೆದರಿಸುವುದು, ತಮ್ಮದೇ ತಪ್ಪಿದ್ದರೂ ಅದಕ್ಕೆ ಇತರರನ್ನು ದೂಷಿಸುವುದು, ದ್ವೇಷ ಸಾಧಿಸುವುದು, ಇತ್ಯಾದಿಗಳನ್ನು ಇಲ್ಲಿ ಪಟ್ಟಿ ಮಾಡಬಹುದು. ಇದಕ್ಕೂ ಅನೇಕ ಉದಾಹರಣೆಗಳು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಲವರು ನಡೆದುಕೊಂಡ ರೀತಿಯಿಂದ ಸಿಗುತ್ತವೆ. ಯಾರದೇ ಹೆಸರುಗಳನ್ನು ಹೇಳದೆ ಇದನ್ನೂ ಓದುಗರ ಊಹೆಗೇ ಬಿಡುತ್ತೇನೆ. 
ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತು
ಹದವರಿತ ಬೆಂಕಿಯದು ಅಟ್ಟುಣಬಡಿಸೀತು |
ಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ
ಹದವರಿತ ಕೋಪವದು ಹಿತಕಾರಿ ಮೂಢ || 
      ದೈಹಿಕ ದೌರ್ಬಲ್ಯ, ಅಸಹಾಯಕತೆ, ಕೀಳರಿಮೆ, ಅಭಿಮಾನಕ್ಕೆ ಆಗುವ ಆಘಾತ, ಇತ್ಯಾದಿಗಳೂ ಸಿಟ್ಟಿಗೆ ಕಾರಣವಾಗುವ ಅಂಶಗಳಾಗಿವೆ. ಇವುಗಳನ್ನು ಮೆಟ್ಟಿನಿಲ್ಲಬೇಕೆಂದರೆ ವ್ಯಕ್ತಿಗತವಾಗಿ ದೈಹಿಕ ಧೃಡತೆ ಬೆಳೆಸಿಕೊಳ್ಳುವ, ಸ್ವಪ್ರಯತ್ನ, ಛಲಗಳಿಂದ ಮೇಲೆ ಬರುವ ಕೆಲಸ ಸಂಬಂಧಿಸಿದವರೇ ಮಾಡಬೇಕು. ಇತರರನ್ನು ದೂಷಿಸಿ, ಹೀಯಾಳಿಸುವುದರಿಂದ ತಾವು ಮೇಲೆ ಬರಲಾರೆವೆಂಬುದನ್ನು ಅರಿಯಬೇಕು. ವ್ಯಕ್ತಿಗತವಾಗಿ ಕೋಪ ಸ್ವಂತದ ಅಭಿವೃದ್ಧಿಗೆ ಮಾರಕವಾಗುತ್ತದೆ. ಸಾಂಸಾರಿಕವಾಗಿ ನೋಡಿದರೆ ಕೋಪದ ಫಲವಾಗಿ ಮನೆಯಲ್ಲಿ ಸರಸ-ಸಂತಸಗಳಿರುವುದಿಲ್ಲ, ಮಾತುಕತೆಗಳಿರುವುದಿಲ್ಲ, ನಗುವಿರುವುದಿಲ್ಲ, ಸಾರವಾಗಿ ಹೇಳಬೇಕೆಂದರೆ ಕೋಪಿಷ್ಠರ ಮನೆ ಸೂತಕದ ಮನೆಯಂತಿರುತ್ತದೆ. ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ನೋಡಬೇಕೆಂದರೆ, ಮತೀಯ ಅಸಹನೆಗಳು, ಜಾತಿ ವೈಷಮ್ಯಗಳು, ವಿವಿಧ ವರ್ಗಗಳ ನಡುವಣ ಕಂದರಗಳು ಜಗತ್ತಿನ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿವೆ. ರಾಷ್ಟ್ರ-ರಾಷ್ಟ್ರಗಳ ನಡುವೆ, ರಾಜ್ಯ-ರಾಜ್ಯಗಳ ನಡುವೆ, ಗ್ರಾಮ-ಗ್ರಾಮಗಳ ನಡುವೆ, ಮನುಷ್ಯ-ಮನುಷ್ಯರ ನಡುವೆ ಧಗಧಗಿಸುವ ಕ್ರೋಧಾಗ್ನಿ ಜ್ವಲಿಸುತ್ತಿದೆ. ಬುದ್ಧಿಜೀವಿಗಳು, ವಿಚಾರವಾದಿಗಳು ಎನಿಸಿಕೊಂಡವರು ಇಂತಹ ಸಮಸ್ಯೆಗಳಿಗೆ ಪರಿಹಾರದ ಮಾರ್ಗಗಳನ್ನು ಸೂಚಿಸುವ ಬದಲಿಗೆ ತಾವೇ ಒಂದೊಂದು ಬಣದ ಪರವಾಗಿ ನಿಂತು ವೈಷಮ್ಯದ ದಳ್ಳುರಿಗೆ ತೈಲ ಎರೆಯುತ್ತಿರುವುದು ವಿಪರ್ಯಾಸವೇ ಸರಿ. ಇಂದಿನ ಅಗತ್ಯವೆಂದರೆ ಯಾವುದೋ ಒಂದು ಬಣದ, ಒಂದು ಗುಂಪಿನ ಪರವಾಗಿ ಅಥವ ವಿರೋಧವಾಗಿ ನಿಲ್ಲುವುದಲ್ಲ. ಸಾಮರಸ್ಯದ, ಸೌಹಾರ್ದತೆಯ ಮಾತುಗಳನ್ನು ತೋರಿಕೆಗಾಗಿ ಆಡದೆ ನೈಜ ಅನುಷ್ಠಾನ ಹೇಗೆ ಮಾಡಬೇಕೆಂದು ಆಲೋಚಿಸುವ ಮತ್ತು ಕಾರ್ಯಪ್ರವೃತ್ತರಾಗುವ ಕಾಲ ಬಂದುಬಿಟ್ಟಿದೆ. ಇತರರ ಧಾರ್ಮಿಕ ಆಚರಣೆಗಳ ಕುರಿತು ಅಸಹನೆಯ ಮನೋಭಾವ ತ್ಯಜಿಸದೆ, ತಮ್ಮ ನಂಬಿಕೆಯನ್ನೇ ಇತರರ ಮೇಲೆ ಹೇರಬಯಸಿ ಮತಾಂತರ, ಭಯೋತ್ಪಾದನೆ, ಇತ್ಯಾದಿಗಳಲ್ಲಿ ತೊಡಗದೆ ಇರುವವರೆಗೆ ಶಾಂತಿ, ನೆಮ್ಮದಿ ಇರಲಾರದು. ಇಂತಹ ಪರಿಸ್ಥಿತಿ ಬಂದೊದಗಿರುವುದಕ್ಕೆ ಸಮಾಜದ, ದೇಶದ ಹಿತ ಬಯಸುವವರಿಗೆ ಸಾತ್ವಿಕ ಕ್ರೋಧ ಬರದೇ ಇರದು. ಅನ್ಯಾಯದ ವಿರುದ್ಧದ ಸಮರಕ್ಕೆ ಕೋಪವೂ ಒಂದು ಅಸ್ತ್ರವಾಗಿದೆ. ಆದರೆ, ಅಂತಹ ಕೋಪ ನಿಯಂತ್ರಿತವಾದುದಾಗಿ, ಅನ್ಯಾಯದ ವಿರುದ್ಧದ ಮಾತ್ರವಾಗಿದ್ದು ವ್ಯಕ್ತಿ ವಿರುದ್ಧವಾಗಿರದಿದ್ದರೆ ಸಮಾಜ ಒಪ್ಪುತ್ತದೆ.
ದುಷ್ಟ ಶಿಕ್ಷಣಕಾಗಿ ಶಿಷ್ಟ ರಕ್ಷಣಕಾಗಿ
ಸಮಾಜಹಿತಕಾಗಿ ಧರ್ಮ ರಕ್ಷಣೆಗಾಗಿ |
ರಾಷ್ಟ್ತ ಭದ್ರತೆಗಾಗಿ ಆತ್ಮಸಮ್ಮಾನಕಾಗಿ
ಕೋಪವದುಕ್ಕುಕ್ಕಿ ಬರಲಿ ಮೂಢ ||
     "ಭೂತಕಾಲವನ್ನು ಕೋಪದಿಂದ ಹಿಂತಿರುಗಿ ನೋಡದಿರೋಣ, ಭವಿಷ್ಯದೆಡೆಗೆ ಭಯದಿಂದ ಮುನ್ನಡೆಯದಿರೋಣ, ವರ್ತಮಾನದಲ್ಲಿ ಜಾಗೃತರಾಗಿರೋಣ." 
-ಕ.ವೆಂ.ನಾಗರಾಜ್.
**************
2.06.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ.

ಮಂಗಳವಾರ, ಜೂನ್ 3, 2014

ಬಹುರೂಪಿ ಕಾಮ

ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು
ಕಾಮವೆಂಬುದು ಪಾಶ ಕಾಮದಿಂದಲೆ ನಾಶ |
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ
ಕಾಮದಿಂದಲೆ ಸಕಲ ಸಂಪದವು ಮೂಢ ||
     ಮನುಷ್ಯನನ್ನು ಅಧಃಪಾತಾಳಕ್ಕೆ ತಳ್ಳುವ ಆರು ಪ್ರಧಾನ ಸಂಗತಿಗಳಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಕಾಮ. ಅದೇ ಮನುಷ್ಯನನ್ನು ಮುಕ್ತಿಯೆಡೆಗೆ ಸಾಗಿಸುವ ನಾಲ್ಕು ಪುರುಷಾರ್ಥಗಳಲ್ಲಿ ಸಹ ಪ್ರಧಾನವಾಗಿರುವುದು ಇದೇ ಕಾಮ. ಒಂದು ರೀತಿಯಲ್ಲಿ ಮನುಷ್ಯನನ್ನು ಅಧಃಪತನಗೊಳಿಸುವುದು ಮತ್ತು ಉದ್ಧಾರಗೊಳಿಸುವುದು ಎರಡೂ ಸಾಧ್ಯವಿರುವುದು ಎರಡು ಅಲಗಿನ ಚೂಪಾದ ಖಡ್ಗದಂತಿರುವ ಈ ಕಾಮಕ್ಕೇ! ಕಾಮ ಎಂದಾಕ್ಷಣ ನಮಗೆ ನೆನಪಾಗುವುದೇನೆಂದರೆ ಅದು ಸ್ತ್ರೀ-ಪುರುಷರ ಲೈಂಗಿಕತೆಗೆ ಸಂಬಂಧಿಸಿದ್ದೆಂದು ಅನ್ನಿಸುವುದಲ್ಲವೇ? ಆದರೆ ಕಾಮವೆಂದರೆ ಇಷ್ಟೇ ಅಲ್ಲ, ಕಾಮವೆಂದರೆ ಈ ಅರ್ಥವೂ ಸೇರಿದಂತೆ ಇಚ್ಛೆ, ಬಯಕೆ, ಆಸೆ, ಅಭಿಲಾಷೆ, ಇತ್ಯಾದಿ ಅರ್ಥಗಳೂ ಇವೆ. ಈ ಇಚ್ಛೆ, ಬಯಕೆ, ಆಸೆಗಳು ಎರಡು ರೀತಿಯಲ್ಲೂ ಇರಬಹುದು. ಉನ್ನತಿ ಬಯಸುವ ಆಸೆಗಳು ಸಮಾಜಕ್ಕೂ, ಸ್ವಂತಕ್ಕೂ ಹಿತಕಾರಿಯಾಗಿರುತ್ತವೆ. ತಾನೂ ಹಾಳಾಗಿ ಪರರರನ್ನೂ ತೊಂದರೆಗೀಡುಮಾಡುವ ಕಾಮನೆಗಳೂ ಇರುತ್ತವೆ. ಆದರೆ ಕಾಮರಾಹಿತ್ಯ ಅಥವ ನಿಷ್ಕಾಮ ಸ್ಥಿತಿ ಎಂಬುದು ಇರಲಾರದು. ಏಕೆಂದರೆ ಉನ್ನತ ಸ್ಥಿತಿಗೆ ಏರಬೇಕು, ನೆಮ್ಮದಿ, ಶಾಂತಿ ಬೇಕು, ಆತ್ಮ/ಪರಮಾತ್ಮನನ್ನು ಅರಿಯಬೇಕು, ಇತ್ಯಾದಿ ಕಾಮನೆಗಳಾದರೂ ಇದ್ದೇ ಇರುತ್ತವೆ. ಮನುಷ್ಯನನ್ನು ನೀಚನನ್ನಾಗಿಸುವ, ಪಾತಾಳಕ್ಕೆ ತಳ್ಳುವ ಕಾಮನೆಗಳು ಮಾನವನ ಶತ್ರುವಾಗುತ್ತದೆ. ಮಾನವಜೀವನದ ಉದ್ದೇಶ ಸಾಧನೆಗೆ ಪೂರಕವಾಗುವ ಪುರುಷಾರ್ಥ ಕಾಮ ಅವನನ್ನು ನಿಜಮಾನವನನ್ನಾಗಿಸುತ್ತದೆ.

ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲ

ಮದಕೆ ಮೆದುಳಿಲ್ಲ ಮೋಹದ ಕಿವಿಮಂದ |
ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟ
ಅಂಗವಿಕಲನಾಗದಿರೆಲೋ ಮೂಢ || 
     ಕಾಮ ನಮ್ಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ನಾವು ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರು, ಜನನಾಯಕರೆನಿಸಿಕೊಂಡವರು, ಸಮಾಜದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿದವರು ಹಲವರು ಕ್ಷಣಿಕ ದೌರ್ಬಲ್ಯದ ಸುಳಿಗೆ ಸಿಕ್ಕಿ ಅಧಃಪತನ ಹೊಂದಿದ, ಮತ್ತೆ ಮೇಲಕ್ಕೇರಲು ಸಾಧ್ಯವೆನಿಸದ ಸ್ಥಿತಿಯಲ್ಲಿರುವ ಅನೇಕರನ್ನು ನಾವು ಕಂಡಿದ್ದೇವೆ, ಕಾಣುತ್ತಿದ್ದೇವೆ. ಈ ಸುಳಿಗೆ ಸಿಕ್ಕಿದವರ ಸಂಸಾರಗಳು ಹಾಳಾಗಿರುವ, ನೆಮ್ಮದಿ ಕಳೆದುಕೊಂಡಿರುವ, ಪ್ರಾಣ ಕಳೆದಿರುವ ಮತ್ತು ಕಳೆದುಕೊಂಡಿರುವವರ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಅಪಕ್ವ ಮತ್ತು ದುರ್ಬಲ ಮನಸ್ಕರು ಕಾಮದ ಈ ಮುಖದ ಬಲಿಪಶುಗಳಾಗುತ್ತಾರೆ. ಇಂತಹ ಕಾಮಿಗಳ ಬುದ್ಧಿಗೆ ಮಂಕು ಕವಿದಿರುತ್ತದೆ, ಲಜ್ಜೆ, ಮಾನ-ಅಪಮಾನಗಳ ಅರಿವು ಇರುವುದಿಲ್ಲ. 'ಕಾಮಾತುರಾಣಾಂ ನ ಭಯಂ ನ ಲಜ್ಜಾ' ಎಂಬ ನುಡಿಯಂತೆ ಕೆಲವು ಅವಿವೇಕಿಗಳು ತಮ್ಮ ಮಕ್ಕಳು, ಸಂಬಂಧಿಕರು, ಆಶ್ರಿತರು, ಮುಂತಾದವರ ದುರ್ಬಲತೆಯ ದುರ್ಲಾಭ ಪಡೆದು ಅವರನ್ನೂ ಬಲಿಪಶುಗಳನ್ನಾಗಿಸಿರುವ ಪ್ರಸಂಗಗಳ ಬಗ್ಗೆ ತಿಳಿದಾಗ ಹೇಸಿಗೆಯೆನ್ನಿಸುತ್ತದೆ. ಕ್ಷಣಿಕ ಆನಂದದ ಉನ್ಮಾದ ಜೀವನದ ದಿಕ್ಕನ್ನೇ ತಿರುಗಿಸಬಲ್ಲದು ಎಂಬುದರ ಅರಿವು ಮೂಡುವಷ್ಟರಲ್ಲಿ ಪ್ರಮಾದ ಘಟಿಸಿಬಿಟ್ಟಿರುತ್ತದೆ.

ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?

ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು |
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ ||
     ದಾನಗಳಲ್ಲಿ ಅನ್ನದಾನ ಶ್ರೇಷ್ಠವೆಂದು ಹೇಳುತ್ತಾರೆ. ಏಕೆಂದರೆ 'ಸಾಕು' ಎನ್ನಿಸಲು ಸಾಧ್ಯವಿರುವುದು ಅದರಲ್ಲಿ ಮಾತ್ರ. ಹೊಟ್ಟೆ ತುಂಬಿದ ಮೇಲೆ ಎಂತಹ ಸ್ವಾದಿಷ್ಟ ಖಾದ್ಯ ಕೊಟ್ಟರೂ ತಿನ್ನಲಾಗದೆ 'ಸಾಕು, ಸಾಕು' ಎನ್ನಲೇಬೇಕು. ಆದರೆ ಇತರ ಬಯಕೆಗಳ ವಿಷಯದಲ್ಲಿ ಹೀಗೆ ಹೇಳಲಾಗುವುದಿಲ್ಲ. ಎಷ್ಟಿದ್ದರೂ ಸಾಲದು! ಬೇಕುಗಳಿಗೆ 'ಬ್ರೇಕು' ಇರುವುದೇ ಇಲ್ಲ. ತನು, ಮನಗಳ ತೀರದ ದಾಹಗಳೇ ಕಾಮ. ಈ ದಾಹವನ್ನು ತೀರಿಸಲು ಮಾಡುವುದೇ ಕರ್ಮ. ದೇವರ ಆಟವನ್ನು ಬಲ್ಲವರು ಯಾರು? ದಾಹ ತಣಿಯುವುದಿಲ್ಲ, ಕರ್ಮ ನಿಲ್ಲುವುದಿಲ್ಲ. ಈ ಕಾಮವನ್ನು ತಣಿಸಿ ಶಮನಗೊಳಿಸಲು ಕಷ್ಟವೇ ಸರಿ. ತಾತ್ಕಾಲಿಕ ಶಮನವಾದರೂ, ನಂತರದಲ್ಲಿ ಮತ್ತೆ ಆಸೆ ಉದಿಸುತ್ತದೆ. ಇಹ-ಪರಗಳೆರಡರಲ್ಲೂ ನೆಮ್ಮದಿ, ಶಾಂತಿ ಸಿಗಬೇಕಾದರೆ ಕಾಮವನ್ನು ನಮ್ಮ ಉದ್ದೇಶಕ್ಕೆ ತಕ್ಕಂತೆ ಚಾಕಚಕ್ಯತೆಯಿಂದ ಬಳಸಿದರೆ ಮಾತ್ರ ಸಾಧ್ಯ. ಇನ್ನುಳಿದ ಪುರುಷಾರ್ಥಗಳಾದ ಧರ್ಮ. ಅರ್ಥ ಮತ್ತು ಮೋಕ್ಷಗಳ ಸಾಧನೆಗೆ ಈ ಕಾಮವೇ ಪ್ರೇರಕ ಮತ್ತು ಪೂರಕ. ಕಾಮ ಪುರುಷಾರ್ಥ ಸಾಧನೆಯೆಂದರೆ ಆಸೆ, ಬಯಕೆ, ಇಚ್ಛೆಗಳನ್ನು ಯಾರಿಗೂ ನೋವಾಗದಂತೆ, ಹಿಂಸೆಯಾಗದಂತೆ, ಭಾವನೆಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಿಕೊಳ್ಳುವುದು. ಕಾಮನೆಗಳನ್ನು ಹತ್ತಿಕ್ಕುವುದು ಒಳ್ಳೆಯದಲ್ಲ. ಬಲವಂತವಾಗಿ ಹತ್ತಿಕ್ಕಲ್ಪಟ್ಟ ಆ ಶಕ್ತಿ ಅರಿವಿಲ್ಲದಂತೆ ಇದ್ದಕ್ಕಿದ್ದಂತೆ ಪುಟಿದೆದ್ದರೆ ಅನಪೇಕ್ಷಿತ ಪರಿಣಾಮಗಳುಂಟಾಗುತ್ತವೆ. ಕಾಮವನ್ನು ಹತ್ತಿಕ್ಕುವುದಕಿಂತ ಗೆಲ್ಲುವುದು ಹಿತಕಾರಿ. 

ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು

ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು |
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ
ದಿವ್ಯ ಕಾಮ ರಮ್ಯ ಕಾಮ ನಿನದಲ್ತೆ ಮೂಢ || 
    ಉನ್ನತಿಗೆ ಕಾರಣವಾಗುವ ಕಾಮ ಮನುಷ್ಯನಿಗೆ ಅಗತ್ಯವಾದ ಪುರುಷಾರ್ಥವೆನಿಸುತ್ತದೆ. ಇದನ್ನು ಸಾಧಿಸಲು ಮನೋನಿಗ್ರಹವಿರಬೇಕು, ಸಮಾಜದ ಸ್ವಾಸ್ಥ್ಯದ ಕಡೆಗೆ ಗಮನವಿರಬೇಕು. ಅಥರ್ವವೇದದ ಈ ಮಂತ್ರವನ್ನೊಮ್ಮೆ ನೋಡೋಣ:-
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
     "ಓ ಕಾಮವೇ, ಯಾವ ನಿನ್ನ ವಿಸ್ತಾರಗಳು ಅಥವಾ ರೂಪಗಳು ಮಂಗಳಕರವೂ, ಕಲ್ಯಾಣಕಾರಿಯೂ ಆಗಿವೆಯೋ, ಯಾವುದನ್ನು ನೀನು ಬಯಸುತ್ತೀಯೋ, ಯಾವ ಸತ್ಯದ ದರ್ಶನ ನಿನ್ನ ಕಾರಣದಿಂದ ಲಭಿಸುತ್ತದೆಯೋ, ಆ ರೂಪಗಳೊಂದಿಗೆ ನಮ್ಮಲ್ಲಿ ಪ್ರವೇಶ ಮಾಡು. ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು ಬೇರೆಕಡೆಗೆ ಅಟ್ಟಿಬಿಡು" ಎಂದು ಹೇಳುವ ಈ ಮಂತ್ರ ಸಾಧಕರಿಗೆ ಮಾರ್ಗದರ್ಶಿಯಾಗಿದೆ. ಜಗತ್ತು ನಡೆದಿರುವುದೇ ಕಾಮದಿಂದ. ಅದಿಲ್ಲದಿದ್ದರೆ ಜಗತ್ತು ನಿಶ್ಚಲವಾಗಿರುತ್ತಿತ್ತು. ಯಾವುದೇ ಬಯಕೆಗಳು, ಆಕಾಂಕ್ಷೆಗಳಿಲ್ಲದ ಬದುಕು ಬದುಕಾಗಲಾರದು. ಆದರೆ, ಈ ಅಕಾಂಕ್ಷೆಗಳು ಧರ್ಮ ಮಾರ್ಗದಲ್ಲಿರಬೇಕು, ಸಂಪಾದಿಸುವ ಅರ್ಥವನ್ನು ಆತ್ಮಕ್ಕೆ ಸಮ್ಮತವಾದ ರೀತಿಯಲ್ಲಿ, ಇತರರಿಗೆ ನೋವು, ಕಷ್ಟ ನೀಡದಂತೆ ಸರ್ವರ ಹಿತ ಗಮನದಲ್ಲಿರಿಸಿಕೊಂಡು ಕಾಮನೆಗಳ ಈಡೇರಿಕೆಗೆ ಬಳಸಬೇಕು. ಈರೀತಿ ಮಾಡಿದಲ್ಲಿ ಚತುರ್ಥ ಪುರುಷಾರ್ಥ ಮೋಕ್ಷಕ್ಕೆ ಹಾದಿ ಸುಗಮವಾಗುತ್ತದೆ. ಗೃಹಸ್ಥಾಶ್ರಮದಲ್ಲಿ ತಿಳಿಸಿದ ಸ್ತ್ರೀ-ಪುರುಷರ ಲೈಂಗಿಕ ಸಂಬಂಧಗಳೂ ಶಾಸ್ತ್ರೀಯವಾಧ ಮರ್ಯಾದೆಗೆ ಅನುಸಾರವಾಗಿದ್ದಲ್ಲಿ ಅದು ಇಹ-ಪರಗಳ ಸಾಧನೆಗೆ ಅಡ್ಡಿಯಾಗುವುದಿಲ್ಲ. ಈ ವೇದಮಂತ್ರದ ಭಾವ ಸುಸ್ಪಷ್ಟವಾಗಿದ್ದು, ಜೀವನ ಸರಸ ಸುಂದರವಾಗಲು, ಸುಖ, ಶಾಂತಿ, ನೆಮ್ಮದಿಗಳಿಂದ ಕೂಡಿರಲು -ಇಹದಲ್ಲಷ್ಟೇ ಅಲ್ಲ, ಪರದಲ್ಲೂ- ನಿಯಂತ್ರಿತ, ಧರ್ಮಮಾರ್ಗಿ, ಸರ್ವಹಿತದ ಕಾಮನೆಗಳು ಇರಬೇಕು. ಕೀಳು ಕಾಮನೆಗಳಿಂದ ಸ್ವಂತದ ಬದುಕಿನೊಂದಿಗೆ ಸಮಾಜದ ಆರೋಗ್ಯವೂ ಹಾಳಾಗುತ್ತದೆ.   
-ಕ.ವೆಂ.ನಾಗರಾಜ್.
**************
26-5-2014ರ 'ಜನಮಿತ್ರ'ದಲ್ಲಿ ಪ್ರಕಟಿತ ಚಿಂತನ.