ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಜೂನ್ 29, 2014

ಯಶಸ್ಸಿನ ಪಥದಲ್ಲಿ ಸಾಗುತ್ತಿರುವ ವೇದಭಾರತಿ

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || 
ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
"ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ."
     ಹಾಸನದ ವೇದಭಾರತಿ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವೇದ ಅರ್ಥಾತ್ ಜ್ಞಾನ ಸಮಾಜದ ಎಲ್ಲ ಆಸಕ್ತರಿಗೂ ತಲುಪಲಿ ಎಂಬ ಸದಾಶಯದಿಂದ 'ಎಲ್ಲರಿಗಾಗಿ ವೇದ' ಎಂಬ ಘೋಷ ವಾಕ್ಯದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯನ್ನು ಪ್ರಾರಂಭದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ಪೋಷಿಸಿ ಬೆಳೆಸಿದವರು ಹರಿಹರಪುರ ಶ್ರೀಧರ್ ಮತ್ತು ಕವಿನಾಗರಾಜರು. ನಂತರದಲ್ಲಿ ಹಲವಾರು ಸಮಾನಮನಸ್ಕರ ಬೆಂಬಲ, ಪ್ರೋತ್ಸಾಹಗಳೂ ಸಿಕ್ಕಿ ಇಂದು ಒಂದು ಗುರುತಿಸಲ್ಪಡುವ ಸಂಘಟನೆಯಾಗಿದೆ. ಶ್ರೀ ಸುಧಾಕರ ಶರ್ಮರವರು ವೇದದ ಬೆಳಕಿನಲ್ಲಿ ನೀಡಿದ ಹಲವು ಉಪನ್ಯಾಸಗಳಿಂದ ಪ್ರಭಾವಿತರಾಗಿ 'ವೇದಸುಧೆ' ಹೆಸರಿನಲ್ಲಿ ಒಂದು ಅಂತರ್ಜಾಲ ಬ್ಲಾಗ್ ಅನ್ನು ಅಕ್ಟೋಬರ್, ೨೦೧೦ರಲ್ಲಿ ಪ್ರಾರಂಭಿಸಲಾಯಿತು. ಈ ಬ್ಲಾಗ್ ಎಷ್ಟು ಜನಪ್ರಿಯವಾತೆಂದರೆ ಇದರಲ್ಲಿ ವೇದದ ಹಿನ್ನೆಲೆಯಲ್ಲಿನ ಹಲವಾರು ಬರಹಗಳಿಗೆ, ಚರ್ಚೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದ್ದವು. ಆರೋಗ್ಯಕರ ಚರ್ಚೆಗಳು ಜ್ಞಾನದ ಹರವನ್ನು ಹೆಚ್ಚಿಸಲು ಸಹಕಾರಿಯಾದವು. ಇದುವರೆಗೆ ೧೨೨೦ ಬರಹಗಳು ಈ ಬ್ಲಾಗಿನಲ್ಲಿ ಪ್ರಕಟವಾಗಿ ಇದುವರೆವಿಗೆ ಸುಮಾರು ೧,೨೫,೦೦೦ ಪುಟವೀಕ್ಷಣೆಗಳಾಗಿವೆ. ಬ್ಲಾಗ್ ಪ್ರಾರಂಭವಾದ ನಂತರದಲ್ಲಿ ಒಂದು ವರ್ಷ ಪೂರ್ಣವಾದ ಸಂದರ್ಭದಲ್ಲಿ ವಾರ್ಷಿಕೋತ್ಸವ ಮಾಡಿ ಆ ಸಂದರ್ಭದಲ್ಲಿ ವಿದ್ವಾಂಸರುಗಳಿಂದ ವಿಚಾರಗೋಷ್ಠಿ , ಅಗ್ನಿಹೋತ್ರದ ಪ್ರಾತ್ಯಕ್ಷಿಕೆ, ವೇದದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಉಪನ್ಯಾಸ ಏರ್ಪಡಿಸಲಾಗಿತ್ತು. ೨೦೧೧ರಲ್ಲಿ ವೇದಸುಧೆ ಹೆಸರಿನಲ್ಲಿ ಒಂದು ವೆಬ್ ಸೈಟ್ ಅನ್ನು ಪ್ರಾರಂಭಿಸಲಾಯಿತು. ಈ ವೆಬ್ ಸೈಟಿನಲ್ಲಿ ಅನೇಕ ಪ್ರಬುದ್ಧ ವೈಚಾರಿಕ ಬರಹಗಳು, ಮಾಹಿತಿಗಳು, ವಿಡಿಯೋ, ಆಡಿಯೋಗಳು ಸಾರ್ವಜನಿಕರ ಅವಗಾಹನೆಗೆ ಲಭ್ಯವಿದೆ. ಬ್ಲಾಗ್ ಮತ್ತು ವೆಬ್ ಸೈಟಿನ ವಿಳಾಸ: 

     ನಂತರದ ದಿನಗಳಲ್ಲಿ ಏರ್ಪಡಿಸಿದ್ದ ಶ್ರೀ ಸುಧಾಕರ ಶರ್ಮರಿಂದ ಒಂದು ವಾರದ ಕಾಲ ಉಪನ್ಯಾಸ ಮಾಲೆ, ಸಾರ್ವಜನಿಕರೊಡನೆ ಮುಕ್ತ ಸಂವಾದ ಜನಮನವನ್ನು ಸೆಳೆಯುವಲ್ಲಿ, ವೈಚಾರಿಕ ಚಿಂತನೆ ಉದ್ದೀಪಿಸುವಲ್ಲಿ ಯಶಸ್ವಿಯಾದವು. ಕಳೆದ ವರ್ಷ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ' ನಡೆಸಿದ್ದು ಆ ಶಿಬಿರದಲ್ಲಿ ಹಾಸನ ಜಿಲ್ಲೆಯ ೩೦ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ೪೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೂರದ ಪೂನಾದಿಂದಲೂ ಒಬ್ಬರು ಭಾಗವಹಿಸಿದ್ದರು. ಪ್ರತಿದಿನ ಸಾಯಂಕಾಲ ಸಾರ್ವಜನಿಕರಿಗೆ ಉಪನ್ಯಾಸ ಏರ್ಪಡಿಸಿತ್ತು. ಕೊನೆಯ ದಿನದಂದು ನಾಲ್ವರು ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದು ಯಜ್ಞೋಪವೀತ ಧಾರಣೆ ಮಾಡಿಸಿಕೊಂಡಿದ್ದು ಉಲ್ಲೇಖನೀಯ. ಇದು ಟಿವಿಯ ವಿವಿಧ ಚಾನೆಲ್ಲುಗಳ ಮೂಲಕ ಬಿತ್ತರವಾಗಿ ಗಮನ ಸೆಳೆದಿತ್ತು. ಸ್ವಾಮಿ ಚಿದ್ರೂಪಾನಂದಜಿಯವರಿಂದ ಒಂದು ವಾರದ ಕಾಲ 'ಗೀತಾಜ್ಞಾನಯಜ್ಞ' ನಡೆಸಲಾಯಿತು. ಕಳೆದ ವರ್ಷದಿಂದ ಮಕ್ಕಳಲ್ಲೂ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಬಾಲಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಈಗಲೂ ವೇದಮಂತ್ರಗಳನ್ನು ಹೇಳುತ್ತಿರುವುದು, ಕಲಿಕೆ ಮುಂದುವರೆಸುತ್ತಿರುವುದು ಮುದ ನೀಡುವ ಸಂಗತಿಯಾಗಿದೆ.
     ವೇದ ಎಂದರೆ ಕೇವಲ ಪೂಜಾ ಮಂತ್ರಪಾಠಗಳಲ್ಲ, ಒಂದು ವರ್ಗಕ್ಕೆ ಮೀಸಲಲ್ಲ. ಈ ಜ್ಞಾನ ಸಂಪತ್ತು ಸಮಸ್ತ ಮಾನವಕುಲದ ಆಸ್ತಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಲು ಅರ್ಹರು. ವೇದಗಳಲ್ಲಿ ಎಲ್ಲೂ ಅಸಮಾನತೆಯ ಸೋಂಕಿಲ್ಲ, ಬದಲಾಗಿ ಸಮಸ್ತ ಜೀವರಾಶಿಯ ಶ್ರೇಯೋಭಿವೃದ್ಧಿ ಬಯಸುವ ಸಂದೇಶಗಳಿವೆ. ವೇದಗಳನ್ನು ಪುರಾಣಗಳು ಮತ್ತು ಕಟ್ಟುಕಥೆಗಳೊಂದಿಗೆ ಸೇರಿಸಿ ಅಥವ ಸಮೀಕರಿಸಿ ವಿಶ್ಲೇಷಿಸುವುದು ವೇದಕ್ಕೆ ಬಗೆಯುವ ಅಪಚಾರವಾಗುತ್ತದೆ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ.  ಈ ನಿಟ್ಟಿನಲ್ಲಿ ಜನಜಾಗೃತಿ ಮಾಡಲು ವೇದಭಾರತಿ ಎರಡು ವರ್ಷಗಳ ಹಿಂದೆ ಯಾವುದೇ ಜಾತಿ, ಮತ, ಪಂಗಡ, ಲಿಂಗ, ವಯಸ್ಸಿನ ತಾರತಮ್ಯವಿಲ್ಲದೆ ಆಸಕ್ತ ಎಲ್ಲರಿಗೂ ವೇದಮಂತ್ರಗಳನ್ನು ಅಭ್ಯಸಿಸುವ ಅವಕಾಶ ಕಲ್ಪಿಸಿ ಸಾಪ್ತಾಹಿಕ ವೇದಾಭ್ಯಾಸ ತರಗತಿ ಪ್ರಾರಂಭಿಸಿತು. ಒಂದೆರಡು ತಿಂಗಳ ನಂತರ ಇದು ಪ್ರತಿನಿತ್ಯದ ತರಗತಿಯಾಗಿ ಮಾರ್ಪಟ್ಟಿದೆ.  ಕಳೆದ ಏಳೆಂಟು ತಿಂಗಳುಗಳಿಂದ ನಿತ್ಯ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ಮಾಡಲಾಗುತ್ತಿದೆ. ಅಗ್ನಿಹೋತ್ರದ ಮಹತ್ವ, ಮಂತ್ರಗಳ ಅರ್ಥವನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು, ಹಂಪಾಪುರ, ಅರಸಿಕೆರೆ ಮುಂತಾದೆಡೆಯಲ್ಲೂ ಈ ಪರಿಚಯ ಕಾರ್ಯ, ಜಾಗೃತಿ ಮೂಡಿಸುವ ಕೆಲಸಗಳಾಗಿವೆ. 
     ಪ್ರತಿನಿತ್ಯ ಹಾಸನದ ಹೊಯ್ಸಳನಗರದ 'ಈಶಾವಾಸ್ಯಮ್'ನಲ್ಲಿ ಸಾಯಂಕಾಲ ೬ರಿಂದ೭ರವರೆಗೆ ನಡೆಯುವ ವೇದಾಭ್ಯಾಸ ಸತ್ಸಂಗದ ಸ್ವರೂಪ ಪಡೆದುಕೊಂಡಿದೆ. ಪರಮಾತ್ಮಸ್ತುತಿ, ಅಗ್ನಿಹೋತ್ರ, ನಂತರ ವೇದಮಂತ್ರಗಳ ಸಾರವೆಂಬಂತಿರುವ ಎರಡು ಭಜನೆಗಳು, ವೇದಮಂತ್ರಗಳ ಅಭ್ಯಾಸ ನಡೆಯುತ್ತದೆ. ವೇದಮಂತ್ರಗಳ ಅರ್ಥ ತಿಳಿಸುವುದರೊಂದಿಗೆ ಆರೋಗ್ಯಕರ ಚರ್ಚೆಗೂ ಅವಕಾಶವಿರುತ್ತದೆ. ಆಗಾಗ್ಯೆ ಸಾಧು-ಸಂತರ, ಜ್ಞಾನವೃದ್ಧರ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತದೆ. ಪ್ರತಿನಿತ್ಯ ಸುಮಾರು ೨೦ರಿಂದ೩೦ ಆಸಕ್ತರು ಪಾಲುಗೊಳ್ಳುತ್ತಿದ್ದಾರೆ. ಆಸಕ್ತಿ ಇರುವ ಯಾರಿಗೇ ಆಗಲಿ, ಇಲ್ಲಿ ಮುಕ್ತ ಪ್ರವೇಶವಿದೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೇವಲ ಸ್ವಂತದ ಅಭಿವೃದ್ಧಿಗಾಗಿ ಬಯಸುವುದಲ್ಲ, ಸಮಾಜಮುಖಿಯಾಗಿ ನಮ್ಮ ನಡವಳಿಕೆಗಳು, ಮನೋಭಾವ ವೃದ್ಧಿಸಲಿ ಎಂಬ ಸದುದ್ದೇಶದ ಚಟುವಟಿಕೆಗಳನ್ನು ನಡೆಸುವುದು, ಸಜ್ಜನ ಶಕ್ತಿಯ ಜಾಗರಣೆಗೆ ತನ್ನದೇ ಆದ ರೀತಿಯಲ್ಲಿ ಮುಂದುವರೆಯುವುದು ವೇದಭಾರತಿಯ ಧ್ಯೇಯವಾಗಿದೆ. ವೇದದ ಈ ಕರೆಯನ್ನು ಸಾಕಾರಗೊಳಿಸುವತ್ತ ಸಜ್ಜನರು ಕೈಗೂಡಿಸಲಿ ಎಂದು ಆಶಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
"ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ."
-ಕ.ವೆಂ.ನಾಗರಾಜ್.

ಜನಮಿತ್ರದಲ್ಲಿ: ದಿ. 8.6.2014ರಂದು ಪ್ರಕಟಿತ.

ಜನಹಿತದಲ್ಲಿ 9.6.2014ರಂದು ಪ್ರಕಟಿತ:




5 ಕಾಮೆಂಟ್‌ಗಳು:

  1. ಸಾರ್ವಕಾಲಿಕವಾದ, ಜ್ನಾನಾತ್ಮಕವಾದ, ಮೊಕ್ಷಪ್ರದವಾದ ವೈದಿಕ ಚಿಂತನೆಗಳನ್ನು ಇಷ್ಟು ಶ್ರದ್ಧಾಪೂರ್ವಕವಾಗಿ ಪ್ರಸಾರ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಅದೂ, ವೇದಗಳನ್ನು ನಿಂದಿಸುವುದೇ ಜೀವನಕಾರ್ಯವೆಂದುಕೊಂಡಿರುವ ಜನರೇ ತುಂಬಿಕೊಂಡಿರುವಾಗ ಇಂತಹ ಪ್ರಯತ್ನಗಳು ಸ್ತುತ್ಯಾರ್ಹ.
    ನಿಮ್ಮ ಕಾರ್ಯಗಳಿಂದ ಸಚ್ಚಿಂತನೆಗಳು ಸರ್ವದಾ ಹೊರಬರುತ್ತಿರಲಿ..!!



    [ ಪುರಾಣಗಳನ್ನು ಸಮೀಕರಿಸಿದರೆ ವೇದಕ್ಕೆ ಅಪಮಾನ ಮಾಡಿದಂತೆ ಎಂದಿದ್ದೀರಿ. ಅದಕ್ಕೆ ಎಂದಿನಂತೆ ನನ್ನ ತಕರಾರಿದೆ. ಪುರಾಣಗಳಲ್ಲಿನ ಕಥೆಗಳನ್ನು ಪಕ್ಕಕ್ಕಿಟ್ಟರೂ, ಪುರಾಣಗಳಲ್ಲಿ ವೇದಗಳ, ಉಪನಿಷತ್ತುಗಳ ಅರ್ಥವನ್ನೇ ಅನೇಕ ಕಡೆ ನೇರವಾಗಿ ಹೇಳಿದೆ. ಪುರಾಣಗಳಲ್ಲಿ ಪ್ರತಿಪಾದಿಸಿದ ಅರ್ಥಗಳೆಲ್ಲಾ ತಪ್ಪು ಎಂದಾದಲ್ಲಿ, ಆರ್ಯಸಮಾಜ ಹೇಳುವ ಅರ್ಥಗಳೇ ಸರಿ ಎನ್ನುವುದಕ್ಕೆ ಪ್ರಮಾಣಗಲೇನು ಎಂಬ ಪ್ರಶ್ನೆ ಮೂಡುವುದಿಲ್ಲವೇ.? ]

    ಪ್ರತ್ಯುತ್ತರಅಳಿಸಿ
  2. ವಂದನೆಗಳು, ಭೀಮಸೇನರೇ. ಪುರಾಣಗಳನ್ನು ನಾನು ನಿಂದಿಸುತ್ತಿಲ್ಲ. ಅವುಗಳ ನೀತಿಕಥೆಗಳು ಪ್ರೇರಣಾದಾಯಿಗಳೇ. ಆದರೆ ಅವನ್ನು ವೇದಗಳೊಂದಿಗೆ ಸಮೀಕರಿಸಿ ವಿಶ್ಲೇಷಿಸುವ ಕೆಲಸ ಸರಿಯಲ್ಲವೆಂಬುದು ನನ್ನ ಅನಿಸಿಕೆ.

    ಪ್ರತ್ಯುತ್ತರಅಳಿಸಿ
  3. nageshamysore
    ಬೀಜವಿದ್ದಂತೆ ವೃಕ್ಷ, ಬೇರಿದ್ದಷ್ಟೇ ಬಲ :-)

    kavinagaraj
    ಅದಕ್ಕೆ ನೀರೆರೆಯುವ ಕೆಲಸವೂ ಪ್ರಮುಖ. :) ಧನ್ಯವಾದ, ನಾಗೇಶರೇ.

    ಪ್ರತ್ಯುತ್ತರಅಳಿಸಿ
  4. ನಮಸ್ತೆ. ಕವಿಗಳೇ,
    ನಾನು ಕಥೆಗಳ ಬಗ್ಗೆಯೂ ಹೇಳುತ್ತಿಲ್ಲ. ಕಥೆಗಳನ್ನು ಅವುಗಳ ಪಾಡಿಗೆ ಬಿಡಿ.
    ಆದರೆ, ಪುರಾಣಗಳೇ ವೆದವಾಕ್ಯಗಳ ಅರ್ಥಗಳನ್ನು ಹೇಗೆ ಮಾಡಬೇಕೆಂದು ವಿವರಿಸುತ್ತವೆ.

    ಉದಾ : ಈಶಾವಾಸ್ಯೋಪನಿಷತ್ತಿನ ಮೊದಲನೇ ಶ್ಲೋಕಕ್ಕೆ ವಿವರಣೆ,

    "ಸ್ವತಃ ಪ್ರವೃತ್ತ್ಯಶಕ್ಯತ್ವಾತ್ "ಈಶಾವಾಸ್ಯಮಿದಂ ಜಗತ್" |
    ಪ್ರವೃತ್ತಯೇ ಪ್ರಕೃತಿಗಂ ಯಸ್ಮಾತ್ಸ ಪ್ರಕೃತೀಶ್ವರಃ ||
    ತದಧೀನಪ್ರವೃತ್ತಿತ್ವಾತ್ ತದೀಯಂ ಸರ್ವಮೆವ ಯತ್ |
    ತದ್ದತ್ತೆನೈವ "ಭುಂಜೀಥಾಃ" ಅತೋ ನಾನ್ಯಂ ಪ್ರಯಾಚಯೇತ್ ||"
    -- ಬ್ರಹ್ಮಾಂಡ ಪುರಾಣ

    ಈ ಪುರಾಣದ ಶ್ಲೋಕಗಳು, ಆ ವೇದವಾಕ್ಯದ ಅರ್ಥವನ್ನು ಹೇಳಿದೆ. ಮತ್ತು, ವೇದದಲ್ಲಿ ಬರುವ ಪದಗಳನ್ನೇ ಬಳಸಿಕೊಂಡು, ಅದರ ಸರಿಯಾದ ಕ್ರಮವನ್ನು ಹೇಳಿವೆ.

    ಇನ್ನು ಕಠೋಪನಿಷತ್ತಿನಲ್ಲಿ ಬರುವ "ಹಂಸಶ್ಶುಚಿಷತ್ ವಸುರಂತರಿಕ್ಷಸದ್ಧೋತಾ" ಎಂಬ ಮಂತ್ರಕ್ಕೆ,

    ನಿತ್ಯಂ ಹೀನೋಖಿಲಿರ್ದೋಷೈಃ ಸಾರರೂಪೋ ಯತೋ ಹರಿಃ |
    "ಹಂಸ" ಇತ್ಯುಚ್ಯತೆ ತಸ್ಮಾತ್ ವಾಯುಸ್ಥಃ "ಶುಚಿಷತ್" ಸ್ಮೃತಃ ||
    ವರಸುಃ "ವಸು"ರಿತ್ಯುಕ್ತಃ ಸ ಏವಾ"ಪ್ಯಂತರಿಕ್ಷ"ಗಃ||
    -- ವರಾಹ ಪುರಾಣ.

    ಇಲ್ಲಿಯೂ ಗಮನಿಸಿದರೆ, ಸಾಕ್ಷಾತ್ ವೇದದಲ್ಲಿ ಉಲ್ಲೇಖಿಸಿದ ಪದಗಳನ್ನೇ ತೆಗೆದುಕೊಂಡು, ಅದರ ಅರ್ಥಗಳು ಹೇಳಲ್ಪಟ್ಟಿವೆ.. ಇದು ಕೇವಲ ಉದಾಹರಣೆ, ಹೀಗೆ ಪ್ರತಿ ಶ್ಲೋಕಕ್ಕೂ, ಪುರಾಣದ ಬೇರೆ ಬೇರೆ ಭಾಗಗಳಲ್ಲಿ, ಅವೇ ವೆದವಾಕ್ಯಗಳನ್ನು ಉಲ್ಲೇಖಿಸಿ ಅದರ ಅರ್ಥಗಳನ್ನು ಹೇಳಲಾಗಿದೆ.

    ಹೀಗಿರುವಾಗ ಸಂಪೂರ್ಣ ಪುರಾಣಗಳನ್ನೇ ಅಲ್ಲಗಳೆದರೆ, ವೇದಕ್ಕೆ ಅರ್ಥವನ್ನು ಯಾವ ಆಧಾರದಲ್ಲಿ ಹೇಳುತ್ತೀರಿ ?, ಮೇಲಿನಂತೆ ವೇದಗಳಿಗೆ ಪುರಾಣಗಳು ಹೇಳುವ ಅರ್ಥವೂ ಸರಿಯಲ್ಲ ಅಂದರೆ, ಬೇರೆಯವರು ಹೇಳುವ ಅರ್ಥ ಸರಿ ಎಂದು ಹೇಗೆ ನಿರ್ಣಯಿಸುತ್ತೀರಿ.? ಮೇಲೆ ಹೇಳಿದ ಅರ್ಥಗಳು ಸರಿ ಇದ್ದಲ್ಲಿ ಪುರಾಣಗಳು ಅಪ್ರಾಮಾಣ ಹೇಗಾಗುತ್ತವೆ.?

    ಪ್ರತ್ಯುತ್ತರಅಳಿಸಿ
  5. ವಂದನೆಗಳು ಭೀಮಸೇನರೇ. ನಿಮ್ಮ ವಿಚಾರ ಸರಿಯಾಗಿದೆ. ನಾನು ಪುರಾಣಗಳನ್ನು ಅವು ಸಾರುವ ನೀತಿಯನ್ನು ಒಪ್ಪುವವನೇ. ಆದರೆ ವೈಚಾರಿಕತೆ ಬೆಳೆಸಿಕೊಳ್ಳದ ಸಾಮಾನ್ಯರು ತಿರುಳನ್ನು ಗ್ರಹಿಸದೆ ಸಿಪ್ಪೆಯನ್ನೇ ಗಟ್ಟಿಯಾಗಿ ಹಿಡಿದುಕೊಳ್ಳುತ್ತಿರುವುದನ್ನೂ ನಾವು, ನೀವು ಕಾಣುತ್ತಿದ್ದೇವೆ. ತಿರುಳನ್ನು ಸಾರುವ, ಪ್ರಚಾರ ಮಾಡುವ ಕೆಲಸ ಇಂದಿನ ಅಗತ್ಯ. ನೀವು ಗ್ರಹಿಸಿರಬಹುದಾದಂತೆ ನಾನು ಆರ್ಯಸಮಾಜಿಯಲ್ಲ. ಅಲ್ಲಿನ ವಿಚಾರಗಳು ಹಲವಲ್ಲಿ ನನಗೆ ಒಪ್ಪಿತವಾಗಿವೆ. ಅದೇ ರೀತಿ ನಾನೀಗ ಕುರಾನ್ ಅನ್ನೂ ಓದುತ್ತಿರುವೆ. ವಿಚಾರಕ್ಕಿಂತ ಆಚಾರಗಳೇ ಪ್ರಾಧಾನ್ಯತೆ ಪಡೆಯಬಾರದು ಎಂದು ನಾನು ಬಯಸುವವನು. ಭೀಮಸೇನರಲ್ಲಿ ಮತ್ತು ನಾಗರಾಜರಲ್ಲಿ ಅಭಿಪ್ರಾಯಭೇದಗಳು ಬಂದರೆ ಪರವಾಗಿಲ್ಲ. ಅವರುಗಳು ಯಾರು ಏನೇ ಹೇಳಿದರೂ ಮನನ, ಮಥನಗಳಿಂದ ಸ್ವಂತದ ತೀರ್ಮಾನಕ್ಕೆ ಬರುತ್ತಾರೆ. ವೈಚಾರಿಕತೆಯನ್ನೇ ಮಾಡಬಯಸದವರು, ವಿಚಾರ ಮಾಡಲು ಅಶಕ್ತರುಗಳ ವಿಷಯ ಹಾಗಲ್ಲ. ಅವರು ಅವರಿವರು ಹೇಳಿದ್ದನ್ನು ಕೇಳುತ್ತಾ, ಸಂಪ್ರದಾಯಗಳನ್ನು ಕುರುಡಾಗಿ ಪಾಲಿಸುತ್ತಾ ಹೋಗುತ್ತಾರೆ. ಆ ಬಗ್ಗೆ ನೀವು, ನಾವು ಗಮನಿಸಬೇಕು ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಧನ್ಯವಾದಗಳು, ಭೀಮಸೇನರೇ.

    ಪ್ರತ್ಯುತ್ತರಅಳಿಸಿ