ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಫೆಬ್ರವರಿ 17, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೬

     ವೇದಗಳು, ಪ್ರತಿಯೊಂದು ವರ್ಣದ ಕರ್ತವ್ಯಗಳನ್ನೂ ಸ್ಫುಟವಾಗಿ ವರ್ಣಿಸುತ್ತವೆ.
ಬ್ರಾಹ್ಮಣಾಸಃ ಸೋಮಿನೋ ವಾಚಮಕೃತ ಬ್ರಹ್ಮ ಕೃಣ್ವಂತಃ ಪರಿವತ್ಸರೀಣಮ್ |
ಅಧ್ವರ್ಯವೋ ಘರ್ಮಿಣಃ ಸಿಷ್ವಿದಾನಾಃ ಆವಿರ್ಭವಂತಿ ಗುಹ್ಯಾ ನ ಕೇ ಚಿತ್ || (ಋಕ್.೭.೧೦೩.೮.)
     [ಸೀಮಿನಃ] ಬ್ರಹ್ಮಾನಂದದ ಸವಿಯನ್ನು ಕಾಣುವವರೂ, [ಅದ್ವರ್ಯವಃ] ಅಹಿಂಸಕರೂ, [ಘರ್ಮಿಣಃ] ತಪಸ್ವಿಗಳೂ [ಸಿಷ್ವಿದಾನಾಃ] ಪರಿಶ್ರಮದಿಂದ ಬೆವರುವವರೂ, [ಬ್ರಾಹ್ಮಣಾಸಃ] ಬ್ರಾಹ್ಮಣರು. ಅವರು, [ಪರಿವತ್ಸರೀಣಂ ಬ್ರಹ್ಮಂ ಕೃಣ್ವಂತಃ]  ಸಮಸ್ತ ವಿಶ್ವದಲ್ಲಿಯೂ ವೇದಜ್ಞಾನವನ್ನು ಪಸರಿಸುತ್ತಾ, [ಕೇಚಿತ್ ಗುಹ್ಯಾಃ ನ] ಕೆಲವರು ಗುಪ್ತವಾಗಿದ್ದವರಂತೆ, [ಆವಿರ್ಭವಂತಿ] ಬೆಳಕಿಗೆ ಬರುತ್ತಾರೆ. 
     ಭಗವದುಪಾಸನೆಯಿಂದ ಆನಂದಪ್ರಾಪ್ತಿ, ಅಹಿಂಸಾತತ್ವ, ತಪಸ್ಸಿನ -  ಆಧ್ಯಾತ್ಮಿಕ ಸಾಧನೆಗಳ - ಅನುಷ್ಠಾನ ಮತ್ತು ಕಷ್ಟ ಸಹಿಷ್ಣುತೆ - ಇವು ಬ್ರಾಹ್ಮಣರ ಲಕ್ಷಣಗಳು. ಅವರು ಸದಾ ಹರಟುತ್ತಾ ತಿರುಗುವುದಿಲ್ಲ. ಗುಪ್ತ ಸಾಧನೆಗೂ ಗಮನವಿತ್ತು, ಆತ್ಮಶಕ್ತಿ ಬೆಲೆಸಿಕೊಂಡು ಸಂಪೂರ್ಣ ವಿಶ್ವದಲ್ಲೇ ಬ್ರಹ್ಮಜ್ಞಾನವನ್ನು ಪ್ರಸರಿಸುತ್ತಾರೆ. 
ಧೃತವ್ರತಾಃ ಕ್ಷತ್ರಿಯಾ ಯಜ್ಞನಿಷ್ಕೃತೋ ಬೃಹದ್ದಿವಾ ಅಧ್ವರಾಣಾಮಭಶ್ರಿಯಃ |
ಅಗ್ನಿಹೋತಾರ ಋತಸಾಪೋ ಅದ್ರುಹೋSಪೋ ಅಸೃಜನ್ನನು ವೃತ್ರತೂರ್ಯೇ || (ಋಕ್.೧೦.೬೬.೮.)  
     [ಧೃತವ್ರತಾಃ] ಸತ್ಯಾಹಿಂಸಾದಿ ವ್ರತಗಳನ್ನು ಧರಿಸುವವರೂ, [ಯಜ್ಞನಿಷ್ಕೃತಃ] ಶುಭಕರ್ಮಗಳಿಂದ ಪವಿತ್ರರಾದವರೂ, [ಬೃಹದ್ದಿವಾಃ] ಮಹಾತೇಜಸ್ವಿಗಳೂ, [ಅಧ್ವರಾನಾಂ ಅಭಿಪ್ರಿಯಃ] ಹಿಂಸಾರಹಿತ ಕರ್ಮಗಳ ಸೌಂದರ್ಯವರ್ಧಕರೂ, [ಅಗ್ನಿಹೋತಾರಃ] ಅಗ್ನಿಹೋತ್ರ ಮಾಡುವವರೂ, [ಋತಸಾಪಃ] ಧರ್ಮವನ್ನು ಕ್ರಿಯಾತ್ಮಕವಾಗಿ ಸ್ತುತಿಸುವವರೂ, [ಅದ್ರುಹಃ] ದ್ರೋಹ ಮಾಡದವರೂ, [ಕ್ಷತ್ರಿಯಾಃ] ಕ್ಷತ್ರಿಯರಾಗಿರುತ್ತಾರೆ. ಅವರು, [ವೃತ್ರತೂರ್ಯೇ] ಮೇಲೆ ಆವರಿಸಿ ಬರುವ ಶತ್ರುಗಳನ್ನು ಭಿನ್ನ ಭಿನ್ನ ಮಾಡುವ ಸಂಗ್ರಾಮದಲ್ಲಿ, [ಅಪಃ ಅಸೃಜನ್] ಸಾಹಸಕರ್ಮಗಳನ್ನು ಮಾಡುತ್ತಾರೆ, ಪ್ರಜಾಪಾಲನೆ ಮಾಡುತ್ತಾರೆ. ಕ್ಷತ್ರಿಯರ ಲಕ್ಷಣ ಅತಿ ಸ್ಫುಟವಾಗಿ ಹೇಳಲ್ಪಟ್ಟಿದೆ. 
ಇಂದ್ರಮಹಂ ವಣಿಜಂ ಚೋದಯಾಮಿ ಸ ನ ಐತು ಪುರಏತಾ ಸೋ ಅಸ್ತು |
ನುದನ್ನರಾತಿಂ ಪರಿಪಂಥಿನಂ ಮೃಗಂ ಸ ಈಶಾನೋ ಧನದಾ ಅಸ್ತು ಮಹ್ಯಮ್ || (ಅಥರ್ವ.೩.೧೫.೧.) 
     [ಅಹಮ್] ನಾನು, [ಇಂದ್ರಂ ವಣಿಜಮ್] ಐಶ್ವರ್ಯಶಾಲಿಯಾದ ವೈಶ್ಯನನ್ನು, [ಚೋದಯಾಮಿ] ಸತ್ಕರ್ಮಕ್ಕೆ ಪ್ರೇರಿಸುತ್ತೇನೆ. [ಸಃ ನಃ ಆ ಏತು] ಅವನು ನಮಗೆ ಪ್ರಾಪ್ತನಾಗಲಿ. [ನಃ ಪುರಃ ಏತಾ ಅಸ್ತು] ನಮ್ಮೆಲ್ಲರನ್ನೂ ಆರ್ಥಿಕದೃಷ್ಟಿಯಿಂದ ಸಮೃದ್ಧಿಯೆಡೆಗೆ ನಡೆಯಿಸಲಿ. [ಅರಾತಿಮ್] ಸ್ವಾರ್ಥಭಾವನೆಯನ್ನೂ, [ಪರಿಪಂಥಿನಂ ಮೃಗಮ್] ದಾರಿಗೆ ಅಡ್ಡ ಬರುವ ಚೌರ್ಯವೃತ್ತಿಯನ್ನೂ, [ನುದನ್] ದೂರ ತಳ್ಳುತ್ತಾ, [ನಃ ಈಶಾನಃ] ಆ ಸಂಪದ್ವಂತನು, [ಮಹ್ಯಮ್] ನನಗೆ [ಧನದಾ ಅಸ್ತು] ಧನದಾನ ಮಾಡುವವನಾಗಲಿ.
     ವೇದ, ಈ ಮಾತುಗಳನ್ನು ಆಚಾರ್ಯನ ಬಾಯಿಯಿಂದ ಹೊರಡಿಸಿದೆ. ಸಂಪದ್ವರ್ಧನ, ಸ್ವಾರ್ಥತ್ಯಾಗ, ಕಳ್ಳತನದ ಬಹಿಷ್ಕಾರ, ಉದಾರ ದಾನಭಾವನೆ - ಇವು ವೈಶ್ಯನ ಲಕ್ಷಣಗಳು.
ತೃದಿಲಾ ಅತೃದಿಲಾಸೋ ಅದ್ರಯೋಶ್ರಮಣಾ ಅಶೃಥಿತಾ ಅಮೃತ್ಯವಃ |
ಅನಾತುರಾ ಅಜರಾಃ ಸ್ಥಾಮವಿಷ್ಣವಃ ಸುಪೀವಸೋ ಅತೃಷಿತಾ ಅತೃಷ್ಣಜಃ || (ಋಕ್.೧೦.೯೪.೧೧.)
     [ತೃದಿಲಾಃ] ಮೋಹಬಂಧರಹಿತರೂ [ಅತೃದಿಲಾಸಃ] ಆದರೂ ಜಗತ್ತಿನಿಂದ ದೂರ ಸರಿಯದವರೂ, [ಆದ್ರಯಃ] ಆದರಣೀಯರೂ, [ಆಶ್ರಮಣಾಃ] ಶ್ರಮಕ್ಕೆ ಹಿಂಜರಿಯದವರೂ [ಅಶೃಥಿತಾಃ] ಸಡಿಲವಾಗದವರೂ, [ಅಮೃತ್ಯವಃ] ಸಾವಿಗೆ ಮಣಿಯದವರೂ [ಅನಾತುರಾಃ] ರೋಗರಹಿತರೂ [ಅಜರಾಃ] ಮುಪ್ಪಿಗೆ ಸೋಲದವರೂ, [ಅಮವಿಷ್ಣವಃ] ರಕ್ಷಣೆಯನ್ನು ಅಪೇಕ್ಷಿಸುವವರೂ, [ಸುಪೀವಸಃ] ಧೃಢಕಾಯರೂ, [ಅತೃಷಿತಾಃ] ಲೋಭರಹಿತರೂ, [ಅತೃಷ್ಣಜಃ] ತಮ್ಮ ನಿರ್ಲೋಭಿತ್ವಕ್ಕೆ ಪ್ರಸಿದ್ಧರೂ ಆದವರು, [ಸ್ಥಃ] ಪರಿಶ್ರಮಿಗಳೂ - ಶೂದ್ರರೂ ಆಗಿರುತ್ತಾರೆ.
     ಸಂಪೂರ್ಣ ಮಂತ್ರದಲ್ಲಿ ಎಲ್ಲಿಯೂ ಅಪಮಾನಕರವಾದ ಶಬ್ದವಿಲ್ಲ. ಶೂದ್ರರು ತುಚ್ಛರು, ಕೀಳು ಎಂಬ ಭಾವನೆ ಬರುವುದಿಲ್ಲ. ಆದರೆ, ಆದ್ರಯಃ ಎಂದರೆ ಆದರಣೀಯರು ಎಂಬ ಉತ್ಕೃಷ್ಟ ಅಭಿವ್ಯಕ್ತಿ ಕೊಡಲ್ಪಟ್ಟಿದೆ. 
     ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಲ್ಲರಿಗೂ ಮಾನವತ್ವ, ಅದೇ ಕಾರಣದಿಂದ ಸಮ್ಮಾನ ಸಾಮಾನ್ಯವಾಗಿದೆ. ವರ್ಣ, ವ್ಯಕ್ತಿ, ವ್ಯಕ್ತಿಯ ಶಕ್ತಿಯ ಮಾತು, ಜಾತಿ, ಕುಲ ಯಾವುದಕ್ಕೂ ಗೌರವವಿಲ್ಲ. ಒಂದೇ ಮನೆಯಲ್ಲಿ ಲಾಯರುಗಳು, ಡಾಕ್ಟರುಗಳು, ಸೈನ್ಯಾಧಿಕಾರಿಗಳು, ಕಾರ್ಖಾನೆಯಲ್ಲಿ ದುಡಿಯುವವರು, ಅಧ್ಯಾಪಕರುಗಳು ಇರಲು ಸಾಧ್ಯವಿರುವಂತೆ. ವರ್ಣಗಳನ್ನು ಹಿಡಿದು ಉಚ್ಛ-ನೀಚ ಭಾವನೆಗಳನ್ನು ಪ್ರಸರಿಸುವುದು ಮಾನವದ್ರೋಹ. ಕರ್ತವ್ಯಕ್ಷೇತ್ರಗಳು ಬೇರೆ ಬೇರೆ ಇರಬಹುದು, ಸೇವಾಪ್ರಣಾಳಿಯೂ ಬೇರೆ ಇರಬಹುದು, ಆದರೆ ಸರ್ವ ವರ್ಣೀಯರೂ ಮಾನವರೇ ಎಂಬ ಮೂಲಭೂತ ಸಿದ್ಧಾಂತವನ್ನು ನಾವಾರೂ ಅರೆಕ್ಷಣಕ್ಕೂ ಮರೆಯುವಂತಿಲ್ಲ.
***************
ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು:5ಕ್ಕೆ ಲಿಂಕ್:  http://vedajeevana.blogspot.in/2012/02/blog-post.html

ಶನಿವಾರ, ಫೆಬ್ರವರಿ 11, 2012

ವೇದ ಯಾರಿಗಾಗಿ?

ವೇದ ತರಂಗ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಶ್ರುತಿಪ್ರಿಯರ ಸಂದರ್ಶನ. ಸಂದರ್ಶಿಸಿದವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮ
-ಹರಿಹರಪುರ ಶ್ರೀಧರ್.

ಸೋಮವಾರ, ಫೆಬ್ರವರಿ 6, 2012

ನೀನು ಮಗನೋ? ಅತಿಥಿಯೋ?


     ಧಾರವಾಡದ ಚಿಂತಕ ಹಾಗೂ ನಿವೃತ್ತ ಶಿಕ್ಷಕ ಶ್ರೀ ಸುರೇಶ ಕುಲಕರ್ಣಿಯವರ ವಿದ್ಯಾರ್ಥಿ ಜೀವನದ ಒಂದು ಘಟನೆ. ರಾತ್ರಿ  ಬಹಳ ಹೊತ್ತು ನಿದ್ರೆಗೆಟ್ಟು ಕೆಲವು ಪೈಂಟಿಂಗ್ ಗಳನ್ನು ಮಾಡಿದ್ದರು. ಬೆಳಗಾಗೆದ್ದಾಗ    ಅಮ್ಮನ ಹತ್ತಿರ ಹೋಗಿ ಅರ್ಧ ಲೋಟ ಚಹಾ ಕೇಳಿದರು. ಅಮ್ಮ ಹೇಳಿದರು. "ಇಲ್ಲ, ಸಕ್ಕರೆ ಖಾಲಿಯಾಗಿದೆ." ಸ್ವಲ್ಪ ಸಮಯ ಕಳೆಯಿತು. ಮನೆಗೆ ಯಾರೋ ಮೂರು ಜನ ಅತಿಥಿಗಳು ಬಂದರು. ಅಮ್ಮ ಅವರನ್ನು ಆದರದಿಂದ ಬರಮಾಡಿಕೊಂಡು ಚಹಾ ಕೊಟ್ಟಿದ್ದೆ ಅಲ್ಲದೆ  ಮಧ್ಯಾಹ್ನ ಊಟ ಮುಗಿಸಿಯೇ ಹೋಗಬೇಕೆಂದು ತಾಕೀತು ಮಾಡಿದ್ದರು. ಇದನ್ನು ಕಂಡ ಸುರೇಶ ಕುಲಕರ್ಣಿಯವರಿಗೆ ಅಮ್ಮನ ಮೇಲೆ ಸಿಟ್ಟು ಬಂದಿತ್ತು. ತಾನು ಕೇಳಿದರೆ ಅಮ್ಮ  ಸಕ್ಕರೆ ಇಲ್ಲವೆಂದು ಚಹಾ ಕೊಡಲಿಲ್ಲ, ಆದರೆ  ಮನೆಗೆ ಬಂದ ಅತಿಥಿಗಳಿಗೆ ಸಂತೋಷ ದಿಂದಲೇ ಚಹಾ ಮಾಡಿಕೊಟ್ಟಳಲ್ಲಾ!! ಅಷ್ಟೇ ಅಲ್ಲ ಮಧ್ಯಾಹ್ನ ಊಟಕ್ಕೂ ಕೀರು ಮಾಡಿ ಬಡಿಸಿದ್ದಳು. ಕುಲಕರ್ಣಿಯವರಿಗೆ ಸಿಟ್ಟು ಇನ್ನೂ ಹೆಚ್ಚಾಯ್ತು. ಅಮ್ಮನ ಮೇಲೆ ಸಿಟ್ಟಾಗಿಯೇ   ಇದ್ದರು. ಅದನ್ನು ಗಮನಿಸಿದ ಅಮ್ಮ  ಒಂದು ಕಪ್ ಚಹಾ ಮಾಡಿಕೊಂಡು ಮಗನಿಗೆ ಕೊಡಲು ಹೋದರು. ಮಗ ಸಿಟ್ಟಾಗಿ "ನನಗೆ ನಿನ್ನ ಚಹಾ ಬೇಡ, ಅದನ್ನು ಮೋರಿಗೆ ಚೆಲ್ಲು!" ಎಂದು ಸಿಟ್ಟಾಗಿ ಹೇಳಿದಾಗ ಅಮ್ಮ ಹಾಗೆಯೇ ಮಾಡಿದರು. ಕಪ್ ತೊಳೆದು ಅದರ ಸ್ಥಾನದಲ್ಲಿರಿಸಿ ಮೌನವಾದರು. 
     ಬಂದ ಅತಿಥಿಗಳು ಮನೆಯಿಂದ ತೆರಳಿದರೂ ಮಗನ ಸಿಟ್ಟು ಇಳಿದಿರಲಿಲ್ಲ. ಮಗನ ಹತ್ತಿರ ಹೋದ ತಾಯಿ ಮಗನನ್ನು ಅಡಿಗೆ ಮನೆಗೆ ಕರೆದು "ಇಲ್ಲಿ ನೋಡೋ,  ಈ ಡಬ್ಬದ ಸಾಲುಗಳಲ್ಲಿ ಮೇಲಿನ ಸಾಲು ಇದೆಯಲ್ಲಾ, ಅದು ಅತಿಥಿಗಳಿಗಾಗಿ ಮೀಸಲಿಟ್ಟ ಡಬ್ಬಗಳು! ನೋಡು ಇವುಗಳಲ್ಲಿ  ಚಹಪುಡಿ, ಸಕ್ಕರೆ, ಬೇಳೆ....ಇತ್ಯಾದಿ  ಅಡಿಗೆಗೆ ಬೇಕಾಗುವ ಎಲ್ಲಾ ಸಾಮಾನುಗಳೂ ಇವೆ. ಪ್ರತಿ ತಿಂಗಳು ಅಂಗಡಿಯಿಂದ ಸಾಮಾನು ಕೊಂಡು ತಂದಾಗ ಎಲ್ಲದರಲ್ಲೂ ಒಂದು ಹಿಡಿಯನ್ನು  ಈ ಡಬ್ಬಗಳಿಗೆ ಮೊದಲು ಹಾಕುವೆ. ನಂತರ ನಮ್ಮ ಮನೆಬಳಕೆಗೆ ಇರುವ ಡಬ್ಬಗಳನ್ನು ತುಂಬಿಸುವೆ. ಯಾವುದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಯಾರೇ ಅತಿಥಿಗಳು ಬಂದರೂ ಅವರ ಆತಿಥ್ಯಕ್ಕೆ ಕಷ್ಟವಾಗಬಾರದು . ಆದರೆ ಇವತ್ತು ಮನೆಬಳಕೆಯ ವಸ್ತುಗಳಲ್ಲಿ ಸಕ್ಕರೆ ಮುಗಿದುಹೋಗಿದೆ. ಅತಿಥಿಗಳಿಗಾಗಿ ಇಟ್ಟಿರುವುದರಲ್ಲಿ ನಿನಗೆ ಚಹಾ ಮಾಡಿಕೊಟ್ಟರೆ ನೀನು ನಮ್ಮ ಮನೆಯ ಅತಿಥಿಯಾಗುತ್ತೀಯೇ. ನೀನು ನಮ್ಮ ಮನೆಯ ಮಗನಾಗಿರಬೇಕೋ ಅಥವಾ  ಅತಿಥಿಯಾಗಬೇಕೋ ? ನೀನೇ ಹೇಳು. ಅದಕ್ಕಾಗಿಯೇ ನೀನು ಚಹಾ ಮೋರಿಗೆ ಚೆಲ್ಲು ಎಂದೊಡನೆಯೇ  ನಾನು ಚೆಲ್ಲಿದೆ. ನನ್ನ ಮಗ ನನಗೆ ಮಗನಾಗಿಯೇ ಇರಬೇಕೆಂಬುದು ನನ್ನಿಚ್ಚೆ!!"

    ಇದಕ್ಕೆ ವಿವರಣೆ ಬೇಕಾ? ನಮ್ಮ ಭಾರತೀಯ ಗೃಹಿಣಿ ಹೇಗಿರಬೇಕೆಂಬುದಕ್ಕೆ ಕುಲಕರ್ಣಿಯವರ ತಾಯಿ ಆದರ್ಶವಲ್ಲವೇ?
-ಹರಿಹರಪುರ ಶ್ರೀಧರ್.               

ಭಾನುವಾರ, ಫೆಬ್ರವರಿ 5, 2012

ಗುಟ್ಟಾಗಿ ಮಾಡಿದ ಪಾಪ

ಶ್ರೀ ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕಾ ಗ್ರಂಥದ ಆಯ್ದ ಭಾಗಗಳು
-ಧ್ವನಿ: ಶ್ರೀ ಸೂರ್ಯ ಪ್ರಕಾಶ್ ಪಂಡಿತ್



ಪಾಪವನ್ನು ಗುಟ್ಟಾಗಿ ಮಾಡಿದಾಗ!!


ಕುರುಡನಾರು? ಮೂಕನಾರು? ಕಿವುಡನಾರು?



-ಹರಿಹರಪುರ ಶ್ರೀಧರ್

ಶನಿವಾರ, ಫೆಬ್ರವರಿ 4, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೫

     ಯಜುರ್ವೇದಲ್ಲಿ ತತೋ ವಿರಾಡಾಜಾಯತ || (ಯಜು.೩೧.೫.) - ಅನಂತರ ವಿರಾಟ್ ಉದ್ಭವಿಸಿತು - ಎಂದು ಹೇಳಿದೆ. ಈ ವಿರಾಟ್ ಒಂದು ಪುರುಷನ ರೂಪದಲ್ಲಿ ಊಹಿಸಲ್ಪಟ್ಟಿದೆ. ಆಮೇಲೆ ಪ್ರಶ್ನೆ ಎತ್ತಲ್ಪಟ್ಟಿದೆ.
     ಮುಖಂ ಕಿಮಸ್ಯಾಸೀತ್ ಕಿಂ ಬಾಹೂ ಕಿಮೂರೂ ಪಾದಾ ಉಚ್ಯೇತೇ || (ಯಜು.೩೧.೧೦.)  
     [ಅಸ್ಯ] ಈ ವಿರಾಟ್ ಪುರುಷನ [ಮುಖಂ ಕಿಂ ಆಸೀತ್] ಮುಖ ಯಾವುದಾಯಿತು? [ಬಾಹೂ ಕಿಂ] ಬಾಹುಗಳು ಯಾವುವು? [ಊರೂ ಪಾದೌ ಕಿಂ ಉಚ್ಯೇತೇ] ಯಾವುದು ತೊಡೆಗಳು, ಪಾದಗಳು ಎಂದು ಹೇಳಲ್ಪಟ್ಟಿತು? 
     ಈ ಪ್ರಶ್ನೆಗಳಿಗೆ ಉತ್ತರವಾಗಿ ಕೆಳಗಿನ ಮಂತ್ರವಿದೆ:-
      ಬ್ರಾಹ್ಮಣೋsಸ್ಯ ಮುಖಮಾಸೀದ್ಬಾಹೂ ರಾಜನ್ಯ ಕೃತಃ | ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ || (ಯಜು.೩೧.೧೧.)
     [ಬ್ರಾಹ್ಮಣಃ] ಬ್ರಾಹ್ಮಣನು [ಅಸ್ಯ ಮುಖಂ ಆಸೀತ್] ಈ ವಿರಾಟ್ ಪುರುಷನ ಮುಖವಾದನು. [ರಾಜನ್ಯಃ] ಕ್ಷತ್ರಿಯನು [ಬಾಹೂ ಕೃತಃ] ತೋಳುಗಳಾಗಿ ಮಾಡಲ್ಪಟ್ಟನು. [ಯತ್ ವೈಶ್ಯಃ] ವೈಶ್ಯನು ಯಾವನಿದ್ದಾನೋ [ತತ್ ಅಸ್ಯ ಊರೂ] ಅವನು ಇವನ ತೊಡೆಗಳು. [ಪದ್ಬ್ಯಾಂ] ಪಾದಗಳಿಗಾಗಿ [ಶೂದ್ರಃ ಅಜಾಯತ] ಶೂದ್ರನು ಉದ್ಭವಿಸಿದನು.
     ವಿರಾಟ್ ಪುರುಷನ ಬೇರೆ ಬೇರೆ ಅಂಗಗಳ ರೂಪದಲ್ಲಿ ವರ್ಣಗಳು ವರ್ಣಿತವಾಗಿವೆ. ರೂಪಕ ಅತ್ಯಂತ ಸಾರಗರ್ಭಿತವಾಗಿದೆ. ಮುಖದಲ್ಲಿಯೇ ಪಂಚ ಜ್ಞಾನೇಂದ್ರಿಯಗಳೂ, ವಾಗಿಂದ್ರಿಯವೂ ಅಡಗಿದೆ. ಇವು ವ್ಯಷ್ಟಿ ಶರೀರದಲ್ಲಿ ಮಾಡುವುದು ಜ್ಞಾನಸಂಬಂಧದ ಕಾರ್ಯಗಳನ್ನು. ವಾಗಿಂದ್ರಿಯ ಪರರಿಗೆ ತನ್ನ ಭಾವನೆಗಳನ್ನು ಸೂಚಿಸುವ ಸಾಧನ. ಈ ಜ್ಞಾನಕ್ಕೆ ಸಂಬಂಧಿಸಿದ ಮತ್ತು ಜ್ಞಾನ ಪ್ರಸಾರದ ಕಾರ್ಯವನ್ನು ಸಮಾಜದಲ್ಲಿ ಮಾಡುವವನೇ ಬ್ರಾಹ್ಮಣ.
     ವ್ಯಷ್ಟಿ ಶರೀರದಲ್ಲಿ ಬಾಹುಗಳ ಮುಖ್ಯ ಕಾರ್ಯ ರಕ್ಷಣೆ. ಈ ರಕ್ಷಣಾ ಕಾರ್ಯವನ್ನು ಸಮಾಜದಲ್ಲಿ ನಿರ್ವಹಿಸುವವನೇ ಕ್ಷತ್ರಿಯ.
     ತೊಡೆಗಳು ಎಂಬ ಶಬ್ದಕ್ಕೆ ಬದಲು ಅಥರ್ವವೇದದಲ್ಲಿ ಮಧ್ಯಂ ತದಸ್ಯ ಯದ್ವೈಶ್ಯಃ|| (ಅಥರ್ವ. ೧೯.೬.೬.) - ವೈಶ್ಯನು ವಿರಾಟ್ ಪರುಷನ ಮಧ್ಯಭಾಗ - ಎಂದು ಹೇಳಿ ಭಾವನೆಯನ್ನು ಸ್ಪಷ್ಟಪಡಿಸಿದೆ. ವ್ಯಷ್ಟಿಶರೀರದ ಮಧ್ಯಭಾಗ ಎಂದರೆ ಮುಂಡದಲ್ಲಿಯೇ ಜೀವನವನ್ನು ನಿರ್ವಹಿಸಲು ಆವಶ್ಯಕವಾದ ಹೃದಯ, ಶ್ವಾಸಕೋಶಗಳು, ಜಠರ, ಆಹಾರ ಜೀರ್ಣಾಂಗಗಳು, ಮಲ-ಮೂತ್ರ ವಿಸರ್ಜನಾಂಗಗಳು, ಪ್ರಜನನೇಂದ್ರಿಯ ಎಲ್ಲವೂ ಇವೆ. ಇವೆಲ್ಲಾ ಮಾಡುವ ಕಾರ್ಯಗಳು ವಿವಿಧವಾದರೂ, ಆಹಾರ ಪಚನ, ಸರ್ವೇಂದ್ರಿಯಗಳಿಗೂ ರಕ್ತದಾನ ಇವೇ ಅತಿ ಮುಖ್ಯವೆನ್ನಬಹುದು. ಸಮಾಜದಲ್ಲಿ ಇದೇ ರೀತಿ ಸಂಪದರ್ಜನ ಮತ್ತು ವಿಭಜನ ಮಾಡುವವನು ವೈಶ್ಯನು.
     ವ್ಯಷ್ಟಿಶರೀರದಲ್ಲಿ ಪಾದಗಳ ಸ್ಥಾನ ಕೀಳುದರ್ಜೆಯದಲ್ಲ. ಸಂಪೂರ್ಣ ಶರೀರ ನಿಂತಿರುವುದೇ ಪಾದಗಳ ಮೇಲೆ. ಉದ್ದಿಷ್ಟ ಸ್ಥಾನಕ್ಕೆ ದೇಹವನ್ನು ಒಯ್ಯುವುದೂ ಪಾದಗಳೇ! ಸಮಾಜದಲ್ಲಿ ಇದೇ ರೀತಿ ಶಾರೀರಿಕ ಶ್ರಮ ಮಾಡುವವನೇ ಶೂದ್ರ. 
     ರೂಪಕ ಅತಿ ಭವ್ಯ. ದೇಹಕ್ಕೆ ಯಾವ ಅಂಗ ಬೇಕು, ಯಾವ ಅಂಗ ಬೇಡ? ಎಲ್ಲವೂ ತಮ್ಮ ತಮ್ಮ ಸ್ಥಾನದಲ್ಲಿ ಪ್ರಧಾನವೇ! ಯಾವುದಿಲ್ಲದಿದ್ದರೂ ಶರೀರ ಅಪೂರ್ಣವೇ. ತಲೆ ಮೇಲು, ಕಾಲು ಕೀಳು - ಎಂದು ಭಾವಿಸುವುದು ಮಹಾನ್ ಭ್ರಮೆ. ಕಾಲಿಗೆ ಮುಳ್ಳು ಚುಚ್ಚಿದರೆ ಮೊದಲು 'ಹಾ' ಎನ್ನುವುದು ಬಾಯಿ-ಬ್ರಾಹ್ಮಣ; ಆ ಮುಳ್ಳನ್ನು ಕಿತ್ತೆಸೆಯುವುದು ಬಾಹು-ಕ್ಷತ್ರಿಯ. ಪ್ರತಿಯೊಂದು ಅಂಗ ಪರಸ್ಪರಾಶ್ರಿತ. ಇದೇ ರೀತಿ ಸಮಾಜದಲ್ಲಿ ಬ್ರಾಹ್ಮಣರು. ಕ್ಷತ್ರಿಯರು, ವೈಶ್ಯರು, ಶೂದ್ರರು ಪರಸ್ಪರ ವೈರಿಗಳಲ್ಲ, ಪರಸ್ಪರ ಆಶ್ರಿತರು.
     ಬೌದ್ಧಿಕ ಪರಿಶ್ರಮ, ಬಾಹುಬಲ ಸಂಯೋಜನ, ವ್ಯಾಪಾರೋದ್ಯಮ, ಕೃಷಿಸಾಧನ ಹಾಗೂ ಶಾರೀರಿಕ ಪರಿಶ್ರಮ -  ಈ ನಾಲ್ಕು ಸೇವಾಸಾಧನಗಳಿವೆ. ಇವನ್ನು ವರ್ಣಗಳು ಎನ್ನುತ್ತಾರೆ. ವರ್ಣ ಎಂಬ ಶಬ್ದದ ಅರ್ಥ 'ಆರಿಸಿಕೊಳ್ಳುವ ತತ್ತ್ವ' ಎಂದು. ವರ್ಣ, ಜಾತಿಯಂತೆ ಹುಟ್ಟಿ ಬರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗುಣ-ಕರ್ಮ-ಸ್ವಭಾವಕ್ಕನುಸಾರ, ತನ್ನ ವರ್ಣವನ್ನು ಆರಿಸಿಕೊಳ್ಳುತ್ತಾನೆ. ಹುಟ್ಟಿದ ಕುಲ, ಈ ಬಗೆ ಆರಿಸುವಿಕೆಗೆ ನೆರವಾಗಬಹುದು. ಅಂದರೆ, ಬ್ರಾಹ್ಮಣನ ಮಗ ಬ್ರಾಹ್ಮಣನಾಗಬಹುದು, ಆಗದೆಯೂ ಇರಬಹುದು. ವರ್ಣದಲ್ಲಿ ವ್ಯಕ್ತಿಗತ ಸಾಮರ್ಥ್ಯಾಭಿರುಚಿಗಳಿಗೆ ಪ್ರಾಧಾನ್ಯವೇ ಹೊರತು ಕುಲ ಅಥವಾ ಪರಂಪರೆಗಲ್ಲ. ಕೆಲವರಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಶಬ್ದಗಳು ರುಚಿಸದಿರಬಹುದು. ಆದರೆ, ರಾಷ್ಟ್ರ ಆಸ್ತಿಕವೇ ಆಗಿರಲಿ, ನಾಸ್ತಿಕವೇ ಆಗಿರಲಿ, ಬುದ್ಧಿಜೀವಿ, ಶಕ್ತಿಜೀವಿ, ವ್ಯಾಪಾರೋದ್ಯಮಜೀವಿ, ಶ್ರಮಜೀವಿ ಇದ್ದೇ ಇರುತ್ತಾರೆ. ಈ ನೈಸರ್ಗಿಕ ವಿಭಾಗಗಳಿಗೆ ಸೊನ್ನೆ ಸುತ್ತಿ, ಎಲ್ಲರ ತಲೆಗೂ ಒಂದೇ ವೃತ್ತಿಯನ್ನು ಸುತ್ತುವ ಪ್ರಯತ್ನ ಎಂದಿಗೂ ಸಫಲವಾಗದು.
***************
ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೪ ಕ್ಕೆ ಲಿಂಕ್:  http://vedajeevana.blogspot.in/2011/12/blog-post_15.html