ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಡಿಸೆಂಬರ್ 21, 2011

ಹುಟ್ಟಿದರು ಎನಲವರು ಸತ್ತಿರಲೇ ಇಲ್ಲ!

ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟು ಸಾವುಗಳೆರಡು ಮಾಯೆ ಮೂಢ ||
     "ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ ಕುಟುಂಬದವರಿಗೆ ಇನ್ನು ಹೇಗಾಗಿರಬೇಕು? ಅವರ ಕುಟುಂಬದವರೆಲ್ಲರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದಯಾಮಯನಾದ ಭಗವಂತ ಕೊಡಲಿ ಎಂದು ಪ್ರಾರ್ಥಿಸೋಣ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ನಾವೆಲ್ಲರೂ ಎದ್ದುನಿಂತು ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸೋಣ" - ಗಣ್ಯರೊಬ್ಬರ ನಿಧನದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ವೇದಿಕೆಯಲ್ಲಿದ್ದವರೊಬ್ಬರು ಈ ರೀತಿಯಲ್ಲಿ ಕರೆ ಕೊಡುತ್ತಿದ್ದರು. ಮೃತ ಗಣ್ಯರ ಅಂತ್ಯಸಂಸ್ಕಾರ ಅದಾಗಲೇ ಆಗಿಹೋಗಿತ್ತು. ಅಗ್ನಿಯಲ್ಲಿ ಅರ್ಪಿತವಾಗಿ ಶರೀರ ಪಂಚಭೂತಗಳಲ್ಲಿ ಲೀನವಾಗಿತ್ತು. ಹಾಗಾದರೆ ಆ ಶರೀರದೊಂದಿಗೆ ಗುರುತಿಸಿಕೊಂಡಿದ್ದ ಆತ್ಮ ಇನ್ನೂ ಇತ್ತೇ? ಶರೀರ ಹೋದರೂ ಆತ್ಮ ಇರುತ್ತದೆಯೇ? ಸದ್ಗತಿ ಸಿಗುವುದು ಅಂದರೆ ಏನು? . . ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದವು. ಶರೀರಕ್ಕೆ ಹೊರತಾದ ಆತ್ಮ ಒಂದು ಇದೆ ಅನ್ನುವುದನ್ನು ಒಪ್ಪಿ ಮಾಡುವ ಕ್ರಿಯೆಯೇ ಉತ್ತರಕ್ರಿಯಾದಿ ಸಂಸ್ಕಾರಗಳು. ಶರೀರವನ್ನು ಹೂಳುವುದಿರಬಹುದು, ಸುಡುವುದಿರಬಹುದು, ಪಾರ್ಸಿಗಳು ಮಾಡುವಂತೆ ರಣಹದ್ದುಗಳಿಗೆ ದೇಹವನ್ನು ಆಹಾರವಾಗಿ ಉಣಿಸುವುದಿರಬಹುದು, ಏನಾದರೂ ಇರಬಹುದು. ಇಂತಹ ಕ್ರಿಯೆಗಳಿಂದ ಮೃತಶರೀರ ಪಂಚಭೂತಗಳಲ್ಲಿ ವಿಲೀನವಾಗಲು ಸಹಕಾರಿಯಾಗುತ್ತದೆ.
    'ಜೀವಾತ್ಮ ಅನ್ನುವ ವಸ್ತು ಇರುವುದಿಲ್ಲ. ಅದು ಶರೀರದೊಂದಿಗೆ ಸಹಜವಾಗಿ ಉಂಟಾಗುವ ಚೈತನ್ಯವಿಶೇಷ. ಶರೀರ ನಷ್ಟವಾದೊಡನೆ ಅದೂ ನಾಶವಾಗುತ್ತದೆ' ಎಂಬ ವಾದವೂ ಇದೆ. ವಿಚಾರ ಮಾಡೋಣ. ಈ ಶರೀರ ಅನ್ನುವುದು ಜಡವಸ್ತುಗಳಿಂದ ಕೂಡಿದ ಒಂದು ಸುಂದರ ನಿರ್ಮಾಣ. ಅದಕ್ಕೆ ಚೈತನ್ಯ ಬಂದಿರುವುದು ಅದರೊಳಗಿರುವ ಪ್ರಾಣ/ಚೈತನ್ಯ/ಜೀವಾತ್ಮ/ಯಾವುದೋ ಶಕ್ತಿಯಿಂದ ಎಂದು ಒಪ್ಪಬಹುದಲ್ಲವೇ? ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಯಾವುದೇ ಮೂಲವಸ್ತುವಿಗೆ ನಾಶವಿರುವುದಿಲ್ಲ. ಅದು ರೂಪಾಂತರ ಹೊಂದಿದರೂ ಒಂದಲ್ಲಾ ಒಂದು ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆ. ಮೃತ ಶರೀರವನ್ನು ಸುಟ್ಟಾಗ/ಯಾವುದೇ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದಾಗ ಅದು ಬೂದಿಯಾಗಿಯೋ, ಆವಿಯಾಗಿಯೋ, ಮಣ್ಣಾಗಿಯೋ, ನೀರಾಗಿಯೋ ರೂಪಾಂತರ ಹೊಂದುತ್ತದೆ. ಆ ಶರೀರದೊಳಗಿದ್ದ ಜೀವ ಚೈತನ್ಯ ಏನಾಗುತ್ತದೆ? ನಾಶವಾಗುತ್ತದೆ ಎಂದರೆ ಅದು ಇನ್ನೂ ಯಾವುದೋ ರೀತಿಯಲ್ಲಿ ಇರಲೇಬೇಕಲ್ಲವೇ? ಮೊದಲು ಅದು ಯಾವ ರೂಪದಲ್ಲಿತ್ತು? ಅಂತ್ಯ ಸಂಸ್ಕಾರದ ನಂತರ ಯಾವ ರೂಪ ಹೊಂದುತ್ತದೆ ಎಂಬುದು ಯಾರಿಗೆ ಗೊತ್ತಿದೆ? ಶರೀರದೊಂದಿಗೆ ಸಹಜವಾಗಿ ಉಂಟಾಗುವ ಜೀವ ಚೈತನ್ಯವೆಂದರೆ ಅದನ್ನು ಸೃಷ್ಟಿಸಿದವರು ಯಾರು? ಜಡವಸ್ತು ತನ್ನಿಂದ ತಾನೇ ಏನಾದರೂ ಸೃಷ್ಟಿಸಲು ಸಾಧ್ಯವಿದೆಯೇ? ಇಲ್ಲ ಅನ್ನುತ್ತದೆ ವಿಜ್ಞಾನ. ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲಾರದು. ಒಂದು ವೇಳೆ ಜಡವಸ್ತು ಏನಾದರೂ ಸೃಷ್ಟಿಸಲು ಸಾಧ್ಯ ಎಂದು ವಾದಕ್ಕೋಸ್ಕರವಾಗಿ ಒಪ್ಪಿಕೊಂಡರೂ ಅದರಿಂದ ಮತ್ತೊಂದು ಜಡವಸ್ತು ನಿರ್ಮಾಣ ಸಾಧ್ಯವೇ ಹೊರತು ಚೈತನ್ಯದಿಂದ ಕೂಡಿದ ವಸ್ತು ನಿರ್ಮಾಣ ಆಗಲಾರದು. ಇರುವ ವಸ್ತುಗಳಿಂದ ಇಲ್ಲದ ವಸ್ತುವಿನ ಸೃಷ್ಟಿ ಹೇಗೆ ಸಾಧ್ಯ? ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಶರೀರದೊಳಗೆ ಜೀವ ಚೈತನ್ಯ ಸೇರಿದೆಯೇ ಹೊರತು, ಶರೀರದಿಂದ ಚೈತನ್ಯ ಉಂಟಾಗಿಲ್ಲ ಅನ್ನುವುದು ಹೆಚ್ಚು ತಾರ್ಕಿಕ. ಹೀಗೆಯೇ ಮುಂದುವರೆಸೋಣ. ಆ ಚೈತನ್ಯ ಮೊದಲು ಶರೀರದೊಳಗಿದ್ದಾಗ ವ್ಯಕ್ತಿ ಜೀವಂತನಾಗಿದ್ದ, ಇಲ್ಲದಾದಾಗ ಮೃತನಾದ ಅನ್ನಬಹುದು. ಹೊರಗಿನಿಂದ ವ್ಯಕ್ತಿಯ ಶರೀರದೊಳಗೆ ಬಂದು ಸೇರಿದ್ದ ಆ ಚೈತನ್ಯ ವ್ಯಕ್ತಿಯ ಮರಣಾನಂತರ ಶರೀರದ ಹೊರಗೆ ಇರುತ್ತದೆ. ಬದುಕಿದ್ದಾಗ ಒಂದು ರೂಪದಲ್ಲಿ, ಸತ್ತಾಗ ಇನ್ನೊಂದು ರೂಪದಲ್ಲಿ ಇರುತ್ತದೆ ಎಂದಾದರೆ ಯಾವ ರೂಪದಲ್ಲಿ ಇದ್ದೀತು ಅನ್ನುವುದು ಯಾರಿಗೆ ತಿಳಿದಿದೆ? ಇಂತಹ ವಿಶಿಷ್ಟ ಚೈತನ್ಯವನ್ನೇ ಜ್ಞಾನಿಗಳು ಜೀವಾತ್ಮ ಎನ್ನುತ್ತಾರೆ. ಜೀವಾತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ ಅನ್ನುವುದು ಈ ಅರ್ಥದಲ್ಲೇ ಇರಬೇಕು. 
'ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ 'ಶ್ರೀ ಶಂಕರಾಚಾರ್ಯರ ಈ ಉಕ್ತಿ ಪುನರ್ಜನ್ಮವನ್ನು ಸಮರ್ಥಿಸುವುದರೊಂದಿಗೆ ಜೀವಚೈತನ್ಯದ ಅಮರತ್ವವನ್ನೂ ಸಾರುತ್ತಿದೆ. ಪುನರ್ಜನ್ಮವಿದ್ದಲ್ಲಿ ಹಳೆಯ ಶರೀರ ನಷ್ಟವಾದ ಮೇಲೆ, ಅದು ಪಂಚಭೂತಗಳಲ್ಲಿ ಸೇರಿಹೋದಮೇಲೆ ಆ ಜೀವಚೈತನ್ಯ ಬೇರೆ ಶರೀರದ ಮೂಲಕವೇ ಪ್ರಕಟಗೊಳ್ಳಬೇಕು/ಪುನರ್ಜನ್ಮ ಹೊಂದಬೇಕು.
     ಸಕಲ ಜೀವಿಗಳನ್ನು ಸೃಷ್ಟಿಸಿದವನು ಭಗವಂತ ಎಂದೂ ಸಹ ವಾದವಿದೆ. ಯಾವುದರಿಂದ ಸೃಷ್ಟಿಸಿದ? ಶೂನ್ಯದಿಂದಂತೂ ಆಗಿರಲಾರದು. ಶೂನ್ಯದಿಂದ ಸೃಷ್ಟಿ ಅನ್ನುವುದನ್ನು ವಿಜ್ಞಾನ ಸಹ ಒಪ್ಪುವುದಿಲ್ಲ. ಎಲ್ಲಾ ಜೀವಿಗಳೂ ಪರಮಾತ್ಮನ ಅಂಶಗಳೇ ಅಂದರೆ, ಇಷ್ಟೊಂದು ಜೀವಜಂತುಗಳು ಇರುವಾಗ ಅವೆಲ್ಲವನ್ನೂ ಪರಮಾತ್ಮ ತನ್ನ ಅಂಶದಿಂದಲೇ ಸೃಷ್ಟಿಸಿದ ಅಂದರೆ, ಸೃಷ್ಟಿಯ ನಂತರ ಅವನು  ಪರಿಪೂರ್ಣ ಎಂದೆನಿಸಿಕೊಳ್ಳಲಾರನು. ಭಗವಂತ ಸೃಷ್ಟಿಸಿದ ಅಂದರೆ ಏಕೆ ಸೃಷ್ಟಿಸಿದ ಎಂಬ ಪ್ರಶ್ನೆ ಬರುತ್ತದೆ. ಅವನಿಗೆ ಬೇಕಾಗಿತ್ತು, ಸೃಷ್ಟಿಸಿದ ಅಂದರೆ ಬೇಕು ಅನ್ನುವ ಭಾವನೆ ಬಂದ ತಕ್ಷಣ ಪರಮಾತ್ಮನಿಗೆ ಏನೂ ಬೇಕಿಲ್ಲದಾಗ, ಯಾವುದರ ಅಗತ್ಯವೂ ಇಲ್ಲದಿರುವಾಗ, ಇಂತಹ ಸೃಷ್ಟಿಗೆ ಅರ್ಥವೇ ಉಳಿಯುವುದಿಲ್ಲ, ಅಲ್ಲದೆ ಪರಮಾತ್ಮ ಪರಿಪೂರ್ಣ ಎಂಬ ಗುಣವಿಶೇಷತೆಗೆ ಧಕ್ಕೆ ಬರುತ್ತದೆ. ಸೂಕ್ತವಾದ ವಾದವೆಂದರೆ ಎಷ್ಟು ಜೀವಜಂತುಗಳಿವೆಯೋ ಅಷ್ಟು ಜೀವಾತ್ಮಗಳಿವೆ ಅನ್ನುವುದು. ಆ ಜೀವಾತ್ಮಗಳೂ ಪರಮಾತ್ಮನಂತೆ ಹುಟ್ಟು-ಸಾವುಗಳಿಲ್ಲದವು, ಪರಮಾತ್ಮನ ಪ್ರಜೆಗಳು ಅನ್ನುವುದು! ಶರೀರದೊಡನೆ ಇದ್ದಾಗ ಆತ್ಮಗಳು ಮಾಡುವ ಕರ್ಮವನ್ನನುಸರಿಸಿ ಹೊಸ ಜನ್ಮ ಪಡೆಯುವುವು. ಆ ಜನ್ಮ ಮಾನವಜನ್ಮವೇ ಆಗಬೇಕೆಂದಿಲ್ಲ, ಇಂತಹ ಲಿಂಗವೇ ಆಗಬೇಕೆಂದಿಲ್ಲ. 
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ || (ಅಥರ್ವ: ೧೦.೮.೨೭)
     ಇದರ ಅರ್ಥ ಜೀವಾತ್ಮನೇ, ನೀನು ಸ್ತ್ರೀ, ನೀನು ಪುರುಷ, ನೀನು ಕುಮಾರ ಮತ್ತು ನೀನು ಕುಮಾರಿ. ವೃದ್ಧನಾಗಿ, ನಂತರ ಮತ್ತೆ ಜನಿಸಿ ಎಲ್ಲೆಡೆಯೂ ಮುಖ ಮಾಡುವೆ. ಭಗವಂತನಂತೆ ಜೀವಾತ್ಮನೂ ಲಿಂಗರಹಿತನಾಗಿದ್ದು ಧರಿಸಿದ ಶರೀರವನ್ನು ಅವಲಂಬಿಸಿ ಹೆಣ್ಣು, ಗಂಡು ಅನ್ನಿಸಿಕೊಳ್ಳುವುದು.
     ಮೃತ ಶರೀರವನ್ನು 'ವ್ಯಕ್ತಿಯ ಹೆಣ', 'ವ್ಯಕ್ತಿಯ ದೇಹ(ಬಾಡಿ)' ಅನ್ನುತ್ತೇವೆಯೇ ಹೊರತು ವ್ಯಕ್ತಿ ಅನ್ನುವುದಿಲ್ಲ. ಅಂದರೆ ಕೇವಲ ಶರೀರ ವ್ಯಕ್ತಿಯೆನಿಸುವುದಿಲ್ಲ. ಶರೀರದೊಳಗೆ ಜೀವಾತ್ಮನಿದ್ದಾಗ ಅದು ನಾಗರಾಜ, ಶ್ರೀಧರ, ಅಬ್ದುಲ್, ಡಿಸೋಜಾ, ಊರ್ಮಿಳಾ, ಇತ್ಯಾದಿಗಳಿಂದ ಗುರುತಿಸಲ್ಪಡುತ್ತದೆ. ಎಂತಹ ಚೋದ್ಯ! ಶರೀರಕ್ಕೆ ಸಾವಿದೆ, ಚೈತನ್ಯಕ್ಕಿಲ್ಲ. ಮಾಯೆಯೆಂದರೆ, ಶರೀರದೊಳಗಿನ ಚೈತನ್ಯವೂ ತನ್ನನ್ನು ಶರೀರದೊಂದಿಗೇ ಗುರುತಿಸಿಕೊಳ್ಳುತ್ತದೆ, ತಾನೇ ವ್ಯಕ್ತಿಯೆಂದು ಭಾವಿಸುತ್ತದೆ, ಚಿಂತನ-ಮಂಥನ ಮಾಡುತ್ತದೆ, ಸಕಲ ಸುಖವೂ ತನಗೇ ಬೇಕೆನ್ನುತ್ತದೆ, ಶರೀರ ಸಾಯುವವರೆಗೂ ಆ ಶರೀರ ನಾಶವಾಗುವುದನ್ನು ಬಯಸುವುದೇ ಇಲ್ಲ! ಆ ಶರೀರ ಮನುಷ್ಯನದಾಗಿರಬಹುದು, ಮನುಷ್ಯ ತಿಂದು ತೇಗುವ ಕೋಳಿ, ಹಂದಿಯದಾಗಿರಬಹುದು, ಯಾವುದೇ ಜೀವಜಂತುವಾಗಿರಬಹುದು! ಇದೆಂತಹ ಸೃಷ್ಟಿ ರಹಸ್ಯ!
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ|| 

ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ|
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ|| 

ಕಾಣದದು ನಯನ ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? || 

ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||

-ಕ.ವೆಂ.ನಾಗರಾಜ್.


ಲೋಕ ಕಲ್ಯಾಣಾರ್ಥ?

     ನಾನು ಮತ್ತು ನನ್ನ ಪತ್ನಿ ಇತ್ತೀಚೆಗೆ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೋಗಿದ್ದಾಗ ಕಂಡ ದೃಷ್ಯದ ಒಂದು ತುಣುಕು ಸೆರೆ ಹಿಡಿದು ಇಲ್ಲಿ ಹಾಕಿರುವೆ. ದೇವಸ್ಥಾನದ ಪ್ರಾಂಗಣದ ಸುತ್ತಲೂ ಹರಳು ಉಪ್ಪನ್ನು ಹರಡಲಾಗಿತ್ತು, ಅದರ ಮೇಲೆ ವ್ಯಕ್ತಿಯೊಬ್ಬರು ಹೊರಳುತ್ತಾ ಪ್ರದಕ್ಷಿಣೆ ಮಾಡುತ್ತಿದ್ದರು. ಹರಳು ಉಪ್ಪಾಗಿದ್ದರಿಂದ ಶರೀರಕ್ಕೆ ಚುಚ್ಚಿ ಅವರಿಗೆ ನೋವಾಗುತ್ತಿದ್ದುದು ಕಣ್ಣಿಗೆ ತಿಳಿಯುತ್ತಿತ್ತು. 'ಉರಿಯುವ ಗಾಯದ ಮೇಲೆ ಉಪ್ಪು ಸವರಿದಂತೆ' ಎಂಬ ಗಾದೆಯ ನೆನಪಾಯಿತು. ನೋವು ಅನುಭವಿಸಿ ಉರುಳುಸೇವೆ ಮಾಡುತ್ತಿದ್ದ ಅವರು ಉರುಳಲಾಗದೆ ಕೆಲವೊಮ್ಮೆ 5-10 ನಿಮಿಷಗಳು ಕಣ್ಣು ಮುಚ್ಚಿ ಅಲ್ಲೇ ಮಲಗಿರುತ್ತಿದ್ದರು. ಅವರನ್ನು ಅನುಸರಿಸಿ ಬರುತ್ತಿದ್ದ ಜೊತೆಯವರು ಭಜನೆ ಮಾಡುತ್ತಾ ಬರುತ್ತಿದ್ದರು. ಲೋಕ ಕಲ್ಯಾಣಾರ್ಥ ಅವರು ಹೀಗೆ ಉರುಳುಸೇವೆ ಮಾಡುತ್ತಿದ್ದರಂತೆ. ಇದರಿಂದ ಲೋಕಕಲ್ಯಾಣ ಹೇಗೆ ಆದೀತು ಎಂದು ನನಗಂತೂ ಅರ್ಥವಾಗಲಿಲ್ಲ. ಸುಮಾರು 50-60 ಮೂಟೆ ಉಪ್ಪು ಅಲ್ಲಿ ಸುರಿಯಲಾಗಿದ್ದು, ಅದು ನಂತರದಲ್ಲಿ ಉಪಯೋಗಕ್ಕೂ ಬರಲಾರದು. ಇದರಿಂದ ಲೋಕಕಲ್ಯಾಣ ಹೇಗೆ ಆಗುತ್ತದೆ ಎಂದು ನಿಮಗೆ ಯಾರಾದರೂ ಗೊತ್ತಿದ್ದರೆ ತಿಳಿಸುವಿರಾ?

ಗುರುವಾರ, ಡಿಸೆಂಬರ್ 15, 2011

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೪


     ಋಗ್ವೇದ ಹೇಳುತ್ತಲಿದೆ: 
ನಾನಾನಂ ವಾ ನೋ ಧಿಯೋ ವಿ ವ್ರತಾನಿ ಜನಾನಾಮ್| (ಋಕ್.೯.೧೧೨.೧)
     [ನಃ ಜನಾನಾಮ್] ಮಾನವರಾದ ನಮ್ಮ [ಧಿಯಃ] ಬುದ್ಧಿಗಳು [ನಾನಾನಮ್] ನಾನಾ ಬಗೆಯವು. [ವಾ ಉ] ಮತ್ತು ಅದೇ ರೀತಿ, [ವ್ರತಾನಿ] ಸಂಕಲ್ಪಗಳೂ ಕೂಡ, [ವಿ] ವಿವಿಧವಾದವು. ಈ ಮೌಲಿಕ ಸತ್ಯವನ್ನು ಗುರುತಿಸಿ, ಪ್ರತಿಯೊಬ್ಬನೂ ತನ್ನದೇ ಆದ ಮಾರ್ಗ ಹಿಡಿದು, ಮಾನವಸಮಾಜಕ್ಕೂ ಸೇವೆ ಸಲ್ಲಿಸುತ್ತಾ, ತನ್ನ ವೈಯಕ್ತಿಕ ಅಭಿವೃದ್ಧಿಯನ್ನೂ ಸಾಧಿಸಿಕೊಳ್ಳುವುದಕ್ಕಾಗಿ ಸೌಲಭ್ಯ ನೀಡುವ ಉದ್ದೇಶದಿಂದ, ವೇದಗಳು ಪರಮ ವೈಜ್ಞಾನಿಕವಾದ ವರ್ಣವ್ಯವಸ್ಥೆಯ ನಿರೂಪಣವನ್ನು ಮಾಡುತ್ತವೆ. ಪಾಠಕರು ಒಂದು ಅಂಶವನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿ ಅಂಕಿತಗೊಳಿಸಿಕೊಳ್ಳಬೇಕು. ಹುಟ್ಟಿನಿಂದ ಬರುವುದೆಂದು ಭಾವಿಸಲ್ಪಡುವ, ಯಾವುದೋ ಸುದೂರ ಅತೀತದಲ್ಲಿ ವರ್ಣವ್ಯವಸ್ಥೆಗೆ ಕುರೂಪವನ್ನಿತ್ತು ಸ್ವಾರ್ಥವನ್ನೇ ಸರ್ವಸ್ವವೆಂದು ಭಾವಿಸಿ, ಪ್ರತಿಯೊಬ್ಬ ವ್ಯಕ್ತಿಯ ಘನತೆ ಗಾಂಭೀರ್ಯಗಳಿಗೆ ಗಮನ ನೀಡದೆ, ಮೇಲು-ಕೀಳೆಂಬ ಹೊಲಸು ಭಾವನೆಗೆ ಆಶ್ರಯವಿತ್ತು ಆಚರಿಸಲ್ಪಡುವ ಇಂದಿನ ಜಾತಿಪದ್ಧತಿಗೂ, ಪರಮ ವೈಜ್ಞಾನಿಕವೂ, ಸರ್ವಥಾ ಬುದ್ಧಿಸಂಗತವೂ, ಸರ್ವೋತ್ಕರ್ಷಸಾಧಕವೂ ಆದ ಪವಿತ್ರ ವರ್ಣವ್ಯವಸ್ಥೆಗೂ ಯಾವ ಸಂಬಂಧವೂ ಇಲ್ಲ. 
***********************
ಪಂ. ಸುಧಾಕರ ಚತುರ್ವೇದಿ.

ಬುಧವಾರ, ಡಿಸೆಂಬರ್ 14, 2011

ಜೀವನ ದರ್ಶನ - ಶ್ರೀ ಸೂರ್ಯಪ್ರಕಾಶ ಪಂಡಿತರ ಪ್ರವಚನದ ಆಯ್ದ ಭಾಗಗಳು

     ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಿರುವ ಅನೇಕ ಸಂಗತಿಗಳ ಬಗ್ಗೆ ಅವನಿಗೆ ಸರಿಯಾದ ಅರಿವೇ ಇರುವುದಿಲ್ಲ. ಯಾವುದು ಸರಿ? ಯಾವುದು ತಪ್ಪು? ಎನ್ನುವ ವಿವೇಚನಾ ಶಕ್ತಿಯೂ ಅವನಿಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವನಿಗೆ ನೆರವಾಗುವುದು ನಮ್ಮ ದಾರ್ಶನಿಕರ ಮಾತುಗಳು.  ದಾರ್ಶನಿಕರಲ್ಲಿ ಶ್ರೇಷ್ಠ ರಾದ ಶ್ರೀಶಂಕರಾಚಾರ್ಯರ ಕೃತಿಗಳನ್ನು ಅಧ್ಯಯನ ಮಾಡಿ ಶ್ರೀ ಶಂಕರರ ವಿಚಾರಧಾರೆಯನ್ನು ಅತ್ಯಂತ ಸರಳವಾಗಿ ನಮ್ಮಂತ ಸಾಮಾನ್ಯರಿಗೆ ಉಣಬಡಿಸುವ ಮಹಾನ್ ಕೆಲಸವನ್ನು ಬೆಂಗಳೂರಿನ ಚಿಂತಕರಾದ ಶ್ರೀ ಸೂರ್ಯ ಪ್ರಕಾಶ ಪಂಡಿತರು ನಿರಂತರವಾಗಿ ಮಾಡುತ್ತಿದ್ದಾರೆ. ಶ್ರೀಯುತರು ಹಾಸನದ ಶ್ರೀ ಶಂಕರ ಮಠದಲ್ಲಿ ಮಾಡಿದ ಪ್ರವಚನದಲ್ಲಿನ ಆಯ್ದ ಭಾಗಗಳು ಇಲ್ಲಿವೆ.



ನರಕ ಎಂದರೇನು?



ಸತ್ಯದ ಪರಿಕಲ್ಪನೆ ಏನು?



ಮೋಕ್ಷ ಎಂದರೇನು?


ಕಾಲದ ಮಹಿಮೆ?



ಚಾರ್ವಾಕ ನೀತಿ


ನಿಜವಾದ ಬಡವನಾರು? ನಿಜ ಶ್ರೀಮಂತ ಯಾರು?


******************
-ಹರಿಹರಪುರ ಶ್ರೀಧರ್.

ಸೋಮವಾರ, ಡಿಸೆಂಬರ್ 12, 2011

ಸ್ವಾಮಿ ಕೃತಾತ್ಮಾನಂದರಿಂದ ಸಂದೇಹ ಪರಿಹಾರ

     18-11-2011ರಂದು ಹರಿಹರಪುರ ಶ್ರೀಧರರ ಮನೆಯಲ್ಲಿ ನಡೆದ ಸತ್ಸಂಗದ ಸಂದರ್ಭದಲ್ಲಿ  ಬಂದವರು ಕೇಳಿದ ಪ್ರಶ್ನೆಗಳಿಗೆ ಪೂಜ್ಯ ಕೃತಾತ್ಮಾನಂದರು ನೀಡಿದ ಉತ್ತರ ಇಲ್ಲಿದೆ.




ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಬಗ್ಗೆ 


ಅಧ್ಯಾತ್ಮ ಮತ್ತು ವಿಜ್ಞಾನದ ಬಗ್ಗೆ



ಪ್ರೇತಾತ್ಮ  ಮೈ ಮೇಲೆ ಬರುತ್ತದೆ, ಅಂತಾರಲ್ಲಾ?


ಸತ್ಸಂಗ ನಡೆಸಲು ಸ್ಥಳ ಹೇಗಿರಬೇಕು?


***********

-ಹರಿಹರಪುರ ಶ್ರೀಧರ್.

ಭಾನುವಾರ, ಡಿಸೆಂಬರ್ 11, 2011

ಸಮತ್ವ

     ಬೆಂಗಳೂರು ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರು ಬಲು ಸರಳ ಯತಿಗಳು. ಜೀವನ ಮೌಲ್ಯಗಳ ಬಗ್ಗೆ  ಬಲು ಸರಳವಾಗಿ ಸಾಮಾನ್ಯ ಜನರಿಗೂ ಮನವರಿಕೆಯಾಗುವಂತೆ ಮಾತನಾಡುತ್ತಾರೆ. "ಸಮತ್ವ" ದ ಬಗ್ಗೆ ಅವರ ಪ್ರವಚನ ಇಲ್ಲಿದೆ.




-ಹರಿಹರಪುರ ಶ್ರೀಧರ್

ವಿನಯ




     ಇತ್ತೀಚಿಗೆ ಹಾಸನದ ಶ್ರೀ ಶಂಕರ ಮಠ ದಲ್ಲಿ ಬೆಂಗಳೂರು ಚಿನ್ಮಯ ಮಿಷನ್ನಿನ ಸ್ವಾಮೀಜಿ ಪೂಜ್ಯ ಕೃತಾತ್ಮಾ ನಂದ ರಿಂದ ಪ್ರವಚನವನ್ನು ಏರ್ಪಡಿಸಲಾಗಿತ್ತು.ಪೂಜ್ಯರು ಮಾನವೀಯ ಮೌಲ್ಯಗಳ ಬಗೆಗೆ ಪ್ರವಚನಗಳನ್ನು ನೀಡಿದರು. ವಿನಯ ಎಂಬ ವಿಷಯದಲ್ಲಿ ಪೂಜ್ಯರು ಮಾಡಿದ ಪ್ರವಚನ ಇಲ್ಲಿದೆ.


-ಹರಿಹರಪುರ ಶ್ರೀಧರ್

ಗುರುವಾರ, ಡಿಸೆಂಬರ್ 8, 2011

ಆಕಾಶ ಮತ್ತು ದೇವರು


                                      (ಚಿತ್ರ ಕೃಪೆ: ಅಂತರ್ಜಾಲ)
     ನನ್ನ ಮನೆಯ ಮೇಲ್ಭಾಗದ ತಾರಸಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಶುಭ್ರ ಆಗಸವನ್ನು ನೋಡುತ್ತಾ ಕುಳಿತಿದ್ದೆ. ನೋಡುತ್ತಾ ನೋಡುತ್ತಾ ಹೋದಂತೆ ಆಕಾಶ ಮಂದಹಾಸ ಬೀರುತ್ತಾ ತೆರೆದುಕೊಳ್ಳುತ್ತಾ ಹೋಯಿತು. ಹೊರಗಣ್ಣು, ಒಳಗಣ್ಣುಗಳನ್ನು ಅಗಲಿಸಿ ವಿಸ್ಮಯದಿಂದ ನೋಡುತ್ತಿದ್ದ ನಾನು ಒಂದು ರೀತಿಯ ಅನಿರ್ವಚನೀಯ ಭಾವಪರವಶತೆಗೆ ಒಳಗಾಗಿದ್ದೆ. ಮನದೊಳಗೆ ಅರಿವಿಲ್ಲದಂತೆ ಮಂಥನ ಆರಂಭಗೊಂಡಿತ್ತು. ಆಕಾಶ ಎಂದಾಕ್ಷಣ ಅಚಾನಕವಾಗಿ ಮೇಲೆ ನೋಡುತ್ತೇವೆ. ಹಾಗಾದರೆ ಆಕಾಶ ಮೇಲೆ ಇದೆಯೇ? ಮೇಲೆ ಇದ್ದರೆ ಎಷ್ಟು ಮೇಲೆ ಇದೆ? ನಾವು ಅದನ್ನು ಕಾಣಲು ಎಷ್ಟು ಮೇಲೆ ಹೋದರೂ ಅದು ಅಷ್ಟೂ ಅಷ್ಟೂ ಮೇಲೆಯೇ ಹೋಗುತ್ತದಲ್ಲಾ! ಹಾಗಾದರೆ ಅದು ಮರೀಚಿಕೆಯೇ? ಹಾಗಾದರೆ ನಾವು ಕಾಣುವ ಆಕಾಶ ಅನ್ನುವುದಾದರೂ ಏನು? ಅದು ನಿಜಕ್ಕೂ ಇದೆಯೇ? ಇಲ್ಲ ಎನ್ನಲಾಗುವುದಿಲ್ಲ, ಆಕಾಶ ಇದೆ. ಆದರೆ ಅದು ಹೇಗಿದೆ? ಕಂಡೂ ಕಾಣದ ಆಕಾಶ ನಿಜಕ್ಕೂ ಒಂದು ಅದ್ಭುತ. ಆಕಾಶವನ್ನು ವೈಜ್ಞಾನಿಕವಾಗಿ ವಿವರಿಸಲು ಮಾನವನಿಗೆ ಶಕ್ಯವೆಂದು ನನಗೆ ಅನ್ನಿಸುತ್ತಿಲ್ಲ. ವೈಜ್ಞಾನಿಕವಾಗಿ ವಿವರಿಸಲು ಬರುವುದಿಲ್ಲವೆಂದು ಆಕಾಶವನ್ನು ಇಲ್ಲವೆಂದು ಹೇಳಲಾಗುವುದೆ? ಕಣ್ಣಿಗೆ ಕಾಣುವುವದನ್ನು ವಿಸ್ತರಿಸಿ ಏನು ಹೇಳಬಹುದೆಂದರೆ ಇಡೀ ಬ್ರಹ್ಮಾಂಡದ ವ್ಯಾಪ್ತಿ ಎಷ್ಟು ವಿಶಾಲವೋ, ವಿಸ್ತಾರವೋ ಅಷ್ಟೂ ವಿಸ್ತಾರದಲ್ಲಿ ಆಕಾಶ ಆವರಿಸಿದೆಯೆಂದು ಮಾತ್ರ ಹೇಳಬಹುದು. 
     ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಚಂದ್ರನ ಮೇಲೆ ನಿಂತವರಿಗೆ ಭೂಮಿ ಆಕಾಶದಲ್ಲಿರುವಂತೆ ಕಾಣುತ್ತದೆ. ಈರೀತಿ ಯೋಚಿಸಿದಾಗ ಗೊತ್ತಾಗುತ್ತದೆ, ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ - ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ -ಗಳಿಂದ ಆಗಿರುವುದೆಂಬುದು ಅಂಗೀಕೃತವಾದ ವಿಚಾರ. ಅಂದರೆ ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ ಎಂದು ಅನ್ನಿಸಿದಾಗ ನಾನು ಒಂದು ರೀತಿಯ ಆನಂದಾನುಭೂತಿ ಅನುಭವಿಸಿದೆ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ?  ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ;
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹುತಃ || (ಯಜು. ೪೦.೫.)
     ಇದರ ಅರ್ಥ, ಅದು ವಿಶ್ವಕ್ಕೆ ಗತಿ ನೀಡುತ್ತದೆ, ಅದು ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿದೆ, ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ, ಇದೆಲ್ಲದರ ಹೊರಗೂ ಇದೆ. 
     ಈ ಎಲ್ಲಾ ಗುಣಗಳು ಆಕಾಶಕ್ಕೆ ಇರುವುದರಿಂದ ಆಕಾಶವನ್ನು 'ಕಣ್ಣಿಲ್ಲದೇ ಕಾಣಬಲ್ಲ ದೇವರ ಕಣ್ಣು' ಎಂದು ಭಾವಿಸಬಹುದೆಂದು ಅನ್ನಿಸಿದಾಗ ನನಗೆ ಏನೋ ಬೆಳಕು ಹೊಳೆದಂತಾಯಿತು. ಸ್ವಾಮಿ ವಿವೇಕಾನಂದರು ತಾವು ಭೇಟಿಯಾದ ಎಲ್ಲಾ ಸಾಧು-ಸಂತ-ಸನ್ಯಾಸಿಗಳನ್ನು ಒಂದು ಪ್ರಶ್ನೆ ಕೇಳುತ್ತಿದ್ದರು - "ಸ್ವಾಮಿ, ತಾವು ದೇವರನ್ನು ಕಂಡಿದ್ದೀರಾ?" ಇದೇ ಪ್ರಶ್ನೆಗೆ ಶ್ರೀ ರಾಮಕೃಷ್ಣ ಪರಮಹಂಸರು ನೀಡಿದ್ದ ಉತ್ತರವೆಂದರೆ -"ಹೌದು, ನಾನು ಕಂಡಿದ್ದೇನೆ. ದೇವರೊಂದಿಗೆ ಮಾತನ್ನೂ ಆಡಿದ್ದೇನೆ". ಈ ಪ್ರಸಂಗದ ಕುರಿತು ಚರ್ಚೆ ಇಲ್ಲಿ ಅಪ್ರಸ್ತುತವೆನಿಸೀತು. ನಾನಂತೂ ಪರಮಾತ್ಮನನ್ನು ಕಂಡಿಲ್ಲ, ಆದರೆ ಪರಮಾತ್ಮ ನನ್ನನ್ನು ಕಂಡಿದ್ದಾನೆ, ಕಾಣುತ್ತಿದ್ದಾನೆಂದು ನನಗೆ ಖಾತ್ರಿಯಾಗಿದೆ. ನನ್ನ ಅರಿವಿನ ಪರಿಮಿತಿಯಲ್ಲಿ ಪರಮಾತ್ಮನ ಇರುವಿಕೆಯ ರೀತಿಯನ್ನು ಅರ್ಥೈಸಿಕೊಂಡಿದ್ದೇನೆಂದು ಭಾವಿಸಿದ್ದೇನೆ. (ಬುದ್ಧನಿಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಇವನಿಗೂ ಮನೆಯ ತಾರಸಿ ಮೇಲೆ ಕುಳಿತು ಆಕಾಶ ನೋಡುತ್ತಾ ಜ್ಞಾನೋದಯವಾಗಿರಬೇಕು ಎಂದು ತಮಾಷೆ ಮಾಡುವುದಾದರೆ ಅಥವ ಇವನಿಗೆ ಬುದ್ಧಿಭ್ರಮಣೆಯಾಗಿರಬಹುದೆಂದು ಯಾರಾದರೂ ಅಂದುಕೊಂಡರೆ ನನ್ನ ಅಭ್ಯಂತರವಿಲ್ಲ). 
     ಆಕಾಶ ಇಂತಹ ಸ್ಥಳದಲ್ಲಿ ಇದೆ, ಇಂತಹ ಸ್ಥಳದಲ್ಲಿ ಇರುವುದಿಲ್ಲವೆಂದು ಹೇಳಲಾಗುವುದಿಲ್ಲ. ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದಿದೆ, ಧಗಧಗಿಸುವ ಅಗ್ನಿಯ ಜೊತೆಗೂ ಇದೆ, ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು, ನೀರು ತೋಯಿಸಲಾರದು, ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜೊತೆಗೂ ಅದು ಇರುತ್ತದೆ, ಪ್ರಳಯ, ವಿನಾಶ ಕಾಲದಲ್ಲೂ ಅದು ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ, ಕೊನೆಯಿಲ್ಲ, ಅರ್ಥಾತ್ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪರಮಾತ್ಮನನ್ನೂ ಹೀಗೆಯೇ ಇದ್ದಾನೆ ಅನ್ನುತ್ತೇವಲ್ಲವೇ? ಹಾಗಾದರೆ ದೇವರು ಆಕಾಶರೂಪದಲ್ಲಿ ಪ್ರಕಟನಾಗಿದ್ದಾನೆ ಅನ್ನಬಹುದಲ್ಲವೇ? ದೇವರ ವಿಶ್ವರೂಪ ದರ್ಶನವೆಂದರೆ ಇದೇ ಅಲ್ಲವೇ? ಒಳಗಣ್ಣಿದ್ದು ತೆರೆದು ನೋಡಬಲ್ಲವರು ಈ ವಿಶ್ವರೂಪವನ್ನು ಅವರ ಶಕ್ತ್ಯಾನುಸಾರ ಕಂಡಾರು. ನಿಜವಾಗಿ ದೇವರ ಪ್ರತಿನಿಧಿ ಎಂದು ಆಕಾಶವನ್ನು ಹೆಸರಿಸಬಹುದೇ ಹೊರತು, ಯಾವುದೇ ವ್ಯಕ್ತಿ ಅಥವ ಜೀವಿಯನ್ನು, ವಸ್ತುವನ್ನು ಇಂತಹ ಅಗಾಧ ಶಕ್ತಿಯ ಪ್ರತಿನಿಧಿ ಎಂದು ಹೇಳುವುದು, ದೇವರ ಮಗ ಅನ್ನುವುದು, ದೇವರ ರೂಪದಲ್ಲಿ ಕಾಣುವುದು ಸಮಂಜಸವೆನಿಸುವುದಿಲ್ಲ. ಎಲ್ಲರಲ್ಲೂ ಅವನ ಅಂಶವಿರುವುದರಿಂದ ಆ ವಿಶಾಲಾರ್ಥದಲ್ಲಿ ತೆಗೆದುಕೊಳ್ಳಬಹುದೇ ಹೊರತು, ಯಾರನ್ನೇ ಆಗಲಿ ದೇವರಂತೆ ಭಾವಿಸುವುದು ಸೂಕ್ತವಲ್ಲ. ನಾಶವಿರದ ಭಗವಂತನನ್ನು ನಾಶವಾಗಬಹುದಾದ ಸಂಗತಿಗಳಲ್ಲಿ ಗುರುತಿಸುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಬೇಕಾದರೆ ದೇವಮಾನವರು, ಮಹಿಮಾವಂತರು, ವಿಶೇಷ ಶಕ್ತಿಯುಳ್ಳವರು, ಹೀಗೆ ಭಾವಿಸಬಹುದು. 
     ಆಕಾಶದ ಗುಣ ಹೇಗಿದೆ? ಅದಕ್ಕೆ ಗುಣವೇ ಇಲ್ಲ, ನಿರ್ಗುಣ. ಅದಕ್ಕೆ ಮಮಕಾರವೂ ಇಲ್ಲ, ಅಹಂಕಾರವೂ ಇಲ್ಲ. ಭೇದ-ಭಾವ ಮಾಡುವುದೇ ಇಲ್ಲ. ಜಾತಿ, ಮತ, ಪಂಥಗಳ ಕಟ್ಟಿಲ್ಲ. ಆ ದೇಶ, ಈ ದೇಶ ಅನ್ನುವುದು ಇಲ್ಲ. ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ, ಮುಂದೆಯೂ ಹೀಗೆಯೇ ಇರುತ್ತದೆ. ಇದು ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮಿಕ ಸತ್ಯ. ಕೆಟ್ಟವರು, ಒಳ್ಳೆಯವರು, ಜೀವಿ, ನಿರ್ಜೀವಿ ಎಂದು ಎಣಿಸುವುದೇ ಇಲ್ಲ. ಯಾರು ಏನೇ ಮಾಡಿದರೂ ಅಡ್ಡಿಪಡಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಎಲ್ಲಾ ಆಗು-ಹೋಗುಗಳಿಗೆ, ಕ್ರಿಯೆಗಳಿಗೆ ಅದು ಕೇವಲ ಸಾಕ್ಷಿಯಾಗಿರುತ್ತದೆ. ಖಾಲಿ ಆಕಾಶವನ್ನು ಯಾವುದರಿಂದಲಾದರೂ ತುಂಬಿ ಭರ್ತಿ ಮಾಡಲು ಸಾಧ್ಯವಿದೆಯೇ? ಇಲ್ಲ, ಎಷ್ಟು ತುಂಬಿದರೂ, ಏನನ್ನು ತುಂಬಿದರೂ ಅದು ಭರ್ತಿಯಾಗುವುದೇ ಇಲ್ಲ. ಹಾಗೆಯೇ ನಾವು ಆಕಾಶವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಹೊರಟರೂ ಅದು ಆಕಾಶವಾಗಿಯೇ, ಗೂಢವಾಗಿಯೇ ಉಳಿಯುತ್ತದೆ. ಆಕಾಶ ನಮ್ಮನ್ನು ಅರಗಿಸಿಕೊಳ್ಳುತ್ತದೆ. ನಾವು ಆಕಾಶವನ್ನಲ್ಲ. ಆಕಾಶ ನಮ್ಮ ಅಹಂ, ಮನಸ್ಸು, ಯೋಚನೆಗಳು, ಚಿಂತನೆಗಳು, ಜ್ಞಾನ, ಅಜ್ಞಾನ, ಎಲ್ಲವನ್ನೂ, ಎಲ್ಲಾ ಅಂದರೆ ಎಲ್ಲವನ್ನೂ, ನುಂಗಿ ನೀರು ಕುಡಿಯಬಲ್ಲುದು, ಅರ್ಥಾತ್ ಅರಗಿಸಿಕೊಳ್ಳಬಲ್ಲದು. ಪರಮಾತ್ಮ 'ನಿರ್ಮಮೋ ನಿರಹಂಕಾರಃ' ಎಂಬುದನ್ನು ತೋರ್ಪಡಿಸಿಕೊಂಡಿರುವುದು ಆಕಾಶದಿಂದಲೇ. ಆಕಾಶವನ್ನು ತೃಪ್ತಿ ಪಡಿಸಲು ಯಾವ ಪೂಜೆ ಮಾಡಬೇಕು? ಯಾವ ಪ್ರಾಣಿಯ ಬಲಿ ಕೊಡಬೇಕು? ಯಾವ ನೈವೇದ್ಯ ಇಡಬೇಕು? ಏನೂ ಮಾಡಬೇಕಿಲ್ಲ. 'ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟದ್ದಕ್ಕೆ ಕೆಟ್ಟದ್ದು' ಎಂಬುದು ಜ್ಞಾನಿಗಳು, ಸಾಧಕರು ಹೇಳುವ ಮಾತು. ಪುನರ್ಜನ್ಮವನ್ನು ನಂಬದವರೂ ಸಹ ದೇವರು ಒಂದು 'ನಿರ್ಣಾಯಕ ದಿನ'ದಂದು ಎಲ್ಲಾ ಜೀವಿಗಳಿಗೆ ಅವರ ಕರ್ಮಕ್ಕನುಸಾರವಾಗಿ ಫಲ ಕೊಡುತ್ತಾನೆಂದು ನಂಬುತ್ತಾರೆ. ಪುನರ್ಜನ್ಮವನ್ನು ನಂಬುವವರಿಗೆ ಪೂರ್ವಾರ್ಜಿತ ಕರ್ಮದ ಅನುಸಾರ ಮುಂದಿನ ಜನ್ಮವೆಂದು ಹೇಳುತ್ತಾರೆ. ಒಟ್ಟಿನಲ್ಲಿ ನಾವು ಒಳ್ಳೆಯ ರೀತಿ ಬಾಳಬೇಕೆಂಬುದು ನೀತಿ. ಹಾಗೆ ಮಾಡಲು ಏನು ಅಡ್ಡಿ? ಆಕಾಶವನ್ನು ಕೃತಕ ಭಯ,ಭಕ್ತಿಗಳಿಂದ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ದೇವರನ್ನೂ ಭಯ-ಭಕ್ತಿಗಳಿಂದ ತೃಪ್ತಿಪಡಿಸಿ ನಮ್ಮ ಇಚ್ಛೆ ಈಡೇರಿಸಿಕೊಳ್ಳುವೆವೆಂಬುದು ಭ್ರಮೆ ಎಂದು ಆಕಾಶ ಸಾರುತ್ತಿದೆ. ನಮ್ಮ ಕಷ್ಟ-ನಷ್ಟಗಳಿಗೆ, ಒಳಿತು-ಕೆಡಕುಗಳಿಗೆ ದೇವರು ಕಾರಣನಲ್ಲ, ನಾವೇ ಎಂಬುದು ಆಕಾಶ ತನ್ನ ಇರುವಿಕೆಯ ರೀತಿಯಿಂದ ಹೇಳುತ್ತಿದೆಯೆಂದು ಅನ್ನಿಸುವುದಿಲ್ಲವೇ? 
     ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಗಳನ್ನು ಮೇಲೆತ್ತಿ 'ದೇವರೇ ಕಾಪಾಡಪ್ಪಾ' ಅನ್ನುತ್ತೇವೆ. ಅಂದರೆ ದೇವರು ಮೇಲೆ ಇದ್ದಾನೆ ಎಂದು ಅಂದುಕೊಳ್ಳುತ್ತೇವೆ, ಆಕಾಶವನ್ನೂ ಮೇಲೆ ಇದೆ ಎಂದು ಭಾವಿಸಿದಂತೆ. ಆಕಾಶವನ್ನು ಬೆಟ್ಟ-ಗುಡ್ಡಗಳ ಮೇಲೆ, ರಾತ್ರಿಯಲ್ಲಿ ಮಿನುಗುವ ಚಂದ್ರ-ತಾರೆಗಳ ಹಿನ್ನೆಲೆಯಲ್ಲಿ ಕಾಣುವ ಸುಂದರ ದೃಷ್ಯಗಳ ರೀತಿಯಲ್ಲಿ ಕಾಣುವ ನಾವು ದೇವರೂ ವೈಕುಂಠ, ಕೈಲಾಸ, ಇತ್ಯಾದಿ ಬೇರೆಯೇ ಲೋಕಗಳಲ್ಲಿದ್ದಾನೆಂದು ಭಾವಿಸುತ್ತೇವೆ. ಕಾಶಿ, ಬದರಿ, ಕನ್ಯಾಕುಮಾರಿ, ಮೆಕ್ಕಾ, ಜೆರುಸಲೇಮ್, ಇತ್ಯಾದಿ ಸ್ಥಳಗಳು ದೇವರು ಇರುವ ವಿಶೇಷ ಸ್ಥಳಗಳೆಂದುಕೊಳ್ಳುತ್ತೇವೆ. ಆಕಾಶವನ್ನು ಮೇಲೆ ಮಾತ್ರ ಇದೆ ಎಂದು ಅಂದುಕೊಳ್ಳುವ ನಾವು ಅದು ನಮ್ಮೊಡನೆಯೇ ಇದೆ ಎಷ್ಟು ಜನ ಭಾವಿಸುತ್ತೇವೆ? ಕೈಗೆ ಸಿಗಲಾರದ ವಸ್ತುವನ್ನು ಗಗನಕುಸುಮವೆಂದು ವರ್ಣಿಸುತ್ತೇವೆ. ಆದರೆ, ಸದಾ ನಮ್ಮನ್ನು ಹೊಂದಿಕೊಂಡೇ ಇರುವ, ಆವರಿಸಿರುವ ಆಕಾಶವನ್ನು ಗಮನಿಸದ ನಾವುಗಳೇ ನಿಜವಾದ ಗಗನಕುಸುಮಗಳು. ಅಶನ, ವಸನ, ವಸತಿಗಳನ್ನು ಕರಣಿಸುವ ಭೂಮಿ ನಮ್ಮ ತಾಯಿಯಾದರೆ, ಸದಾ ನಮ್ಮೊಡನಿದ್ದು ನಮ್ಮನ್ನು ಗಮನಿಸುವ ಆಕಾಶ ನಮ್ಮ ತಂದೆ! ನಮ್ಮೊಂದಿಗಿದ್ದರೂ ತನ್ನ ಇರುವನ್ನು ಪ್ರಕಟಿಸದ, ನಮ್ಮ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸದ, ಜಗತ್ತನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿರುವ ಆಗಸಕ್ಕಿಂತ ಹೆಚ್ಚು ವಾತ್ಸಲ್ಯಮಯಿ ತಂದೆ ಬೇರೆ ಯಾರಾದರೂ ಇರಲು ಸಾಧ್ಯವೇ? 
     ನಾಟಕದಲ್ಲಿ ವಿವಿಧ ಪಾತ್ರಧಾರಿಗಳು ನಾಟಕ ಆಡುವಾಗ ಪಾತ್ರಗಳೇ ಆಗಿ ಅನುಭವಿಸಿ ಆಡಿದರೂ ನಾಟಕ ಮುಗಿದ ನಂತರ ವಾಸ್ತವ ವ್ಯಕ್ತಿಗಳಾಗುತ್ತಾರೆ. ಆದರೆ ನಿಜ ಜೀವನ ನಾಟಕದಲ್ಲಿ? 'ಜಗದೀಶನಾಡುವಾ ಜಗವೇ ನಾಟಕರಂಗ' ಎಂಬ ಹಾಡು ಕೇಳಿದ್ದೇವೆಲ್ಲವೇ? ಈ ನಾಟಕರಂಗದ ಅದ್ಭುತ ಪರದೆ ಆಕಾಶ! ಈ ಪರದೆಯ ಮುಂದೆ ನಾವು-ನೀವೆಲ್ಲರೂ ಪಾತ್ರಧಾರಿಗಳೇ. ನಮ್ಮ ಪಾತ್ರಗಳನ್ನು ನಾವು ಎಷ್ಟು ತನ್ಮಯರಾಗಿ ನಿರ್ವಹಿಸುತ್ತೇವೆಂದರೆ ನಾವು ಆ ಪಾತ್ರಗಳೇ ಆಗಿಬಿಡುತ್ತೇವೆ. ನಾವು ನಿಜವಾಗಿ ಯಾರು ಎಂದು ತಲೆಕೆಡಿಸಿಕೊಳ್ಳುವುದೇ ಇಲ್ಲ, ಮತ್ತು ಪಾತ್ರವಲ್ಲದೆ ನಾವು ಬೇರೆ ಎಂದು ಅಂದುಕೊಳ್ಳುವುದೇ ಇಲ್ಲ.  ಈ ಜೀವನ ನಾಟಕದಲ್ಲಿ ನಮ್ಮದು ಕೆಲ ಸೀಮಿತ ಅವಧಿಗೆ ಬಂದು ಹೋಗುವ ಪಾತ್ರವಾಗಿದ್ದರೂ ನಾವು ಶಾಶ್ವತರೆಂದು ಅಂದುಕೊಂಡು, ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸಲು, ನಮ್ಮತನವನ್ನು ಅಚ್ಚೊತ್ತಲು ಜೀವನ ಪೂರ್ತಿ ತೊಡಗಿಕೊಳ್ಳುತ್ತೇವೆ!
     ಒಂದು ಮೂಲವಸ್ತು ಯಾವ ಕಾಲಕ್ಕೂ ನಾಶವಾಗುವುದಿಲ್ಲವೆಂದು ರೂಪಾಂತರ ಮಾತ್ರ ಹೊಂದುವುದೆಂದು ವಿಜ್ಞಾನ ಹೇಳುತ್ತದೆ. ನಮ್ಮ ದೇಹ ಪಂಚಭೂತಗಳಿಂದ ಆಗಿದ್ದು ಆ ದೇಹಕ್ಕೆ ಅರ್ಥ ಕೊಡುವ ಒಂದು ಶಕ್ತಿ ಜೀವಾತ್ಮ. ಸತ್ತ ನಂತರದಲ್ಲಿ ದೇಹ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ಜೀವಾತ್ಮ? ಅದಕ್ಕೆ ನಾಶವಿಲ್ಲ. ನಂತರದಲ್ಲಿ ಅದು ಹೊಸ ಶರೀರವನ್ನು ಕಂಡುಕೊಳ್ಳುತ್ತದೆ ಎಂದು ತಿಳಿದವರು ಹೇಳುತ್ತಾರೆ. ವೈಜ್ಞಾನಿಕವಾಗಿ ಚಿಂತಿಸಿದರೂ ಪಂಚಭೂತಗಳಿಗೆ ಸೇರದ ಜೀವಾತ್ಮ ಯಾವುದಾದರೂ ರೂಪದಲ್ಲಿ ಇರಲೇಬೇಕಲ್ಲವೆ? ಈ ಎಲ್ಲಾ ಕ್ರಿಯೆಗಳಿಗೆ ಸಾಕ್ಷಿಯಾಗುವುದು ಆಕಾಶವೊಂದೇ! ಇದ್ದದ್ದು ಆಕಾಶದಲ್ಲಿ, ಹೋದದ್ದು ಆಕಾಶದಲ್ಲಿ, ಬರುವುದೂ ಆಕಾಶದಲ್ಲಿ! ಇದನ್ನು ವೈಜ್ಞಾನಿಕ ಆಸ್ತಿಕವಾದವೆನ್ನಬಹುದು. 
-ಕ.ವೆಂ.ನಾಗರಾಜ್.
***********

ಬುಧವಾರ, ಡಿಸೆಂಬರ್ 7, 2011

ಸಾವು

     ಮೊನ್ನೆ ನಮ್ಮ ಕಾಲೇಜಿನ ವಿಧ್ಯಾರ್ಥಿ ಸತ್ತನೆಂಬ ಸುದ್ದಿ ಬಂತು. 2 ನೆ ವರ್ಷದ ಎಂಜಿನೀರಿಂಗ್ ವ್ಯಾಸಂಗ ಮಾಡುತ್ತಿದ್ದ ಈ ಹುಡುಗ ತನ್ನ ಗೆಳೆಯ ಗೆಳತಿಯರ ಜೊತೆಯಲ್ಲಿ ನಿಸರ್ಗ ಧಾಮಕ್ಕೆ ಪ್ರಕೃತಿ ಸೌಂದರ್ಯ ಸವಿದು ಭಾನುವಾರವನ್ನು ಸಾರ್ಥಕ ಪ್ರವಾಸವನ್ನಾಗಿ ಮಾಡಿ ಬರಲೆಂದು ಹೋಗಿದ್ದ. ನಿಸರ್ಗವನ್ನು ಸವಿಯುವಾಗ ನೀರಿನಲ್ಲಿ ಅಕಸ್ಮಾತ್ತಾಗಿ ಬಿದ್ದು ಹೃದಯಾಘಾತದಿಂದ ಅಸು ನೀಗಿದ. 19 -20 ರ ನಡುವಿನ ಪ್ರಾಯದ ಹುಡುಗ ಅನಿರೀಕ್ಷಿತವಾಗಿ ಎಲ್ಲರಿಂದ ಕಾಣದ ಲೋಕಕ್ಕೆ ಪ್ರಯಾಣ ಬೆಳೆಸಿದ ಎಂದರೆ ಯಾರಿಗೆ ಆದರು ಆಘಾತವೇ! ಚುರುಕು ಬುದ್ದಿಯ, ಬುದ್ದಿವಂತ,ಸ್ನೇಹಮಯಿಯಾಗಿದ್ದನೆಂದು ಅವನನ್ನು ಸಮೀಪದಿಂದ ಬಲ್ಲ ಅವನ ಸ್ನೇಹಿತ ಹೇಳಿಕೊಂಡು ದುಃಖಪಡುತ್ತಿದ್ದ. ಈ ಹುಡುಗನ ಸ್ನೇಹಿತನಿಗೆ ಇಷ್ಟೊಂದು ದುಃಖ ಆಗಿರಬೇಕಾದರೆ ಈ ಹುಡುಗನ ಹೆತ್ತವರ ದುಃಖ ಊಹಿಸಲು ಅಸಾಧ್ಯ.
     ಇಂತಹ ಒಂದು ಸಂದರ್ಭದಲ್ಲಿ ಅಲ್ಲಿ ನೆರೆದವರ ಮಾತು ಬೇರೆಯಾಗಿಯೇ ಸಾಗಿತ್ತು. " ದೇವರು ಅದೆಂತ ಕಟುಕ ರೀ, ಇಷ್ಟು ಚೆಂದದ ಹುಡುಗನೇ ಬೇಕಿತ್ತಾ? ಅದೆಷ್ಟು ಜನ ಸಾಯಲು ಹಾತೊರೆಯುತ್ತಿರುವಾಗ ಆ ಕಾಯಿಲೆಯವರನ್ನು, ಮುದುಕರನ್ನು ಬಿಟ್ಟು ಈ ಮುದ್ದಾದ ಹುಡುಗನನ್ನು ಕರೆದುಕೊಂಡು ಬಿಟ್ಟನಲ್ಲ?" ಎಂದು ಸಂತಾಪ ವ್ಯಕ್ತ ಮಾಡಿದರೆ, ಮತ್ತೊಬ್ಬರು " ಈ ಹುಡುಗರಿಗೆ ಬುದ್ದಿ ಇದೆಯೇ? ಅಲ್ಲಾರಿ, ನೀರಿನ ಹತ್ತಿರ ಯಾಕೆ ಹೋಗಬೇಕಾಗಿತ್ತು? ಹುಡುಗಾಟದ ವಯಸ್ಸು ನೋಡಿ ಹೀಗೆಲ್ಲ ಆಡಿಸುತ್ತೆ." "ಇವರು ಟೂರ್ ಹೋಗಲಿಲ್ಲಂತ ಯಾರು ಅಳುತ್ತಿದ್ರು ಹೇಳಿ, ಮಕ್ಕಳು ಏನೋ ಮಾಡಿಕೊಂಡು ಬಿಡ್ತಾರೆ. ಆದರೆ, ಅನುಭವಿಸೋರಿಗೆ ತಾನೇ ತಿಳಿಯೋದು" ಎಂದರು ಮಗದೊಬ್ಬರು. " ಅದೆಷ್ಟು ಕಷ್ಟ ಬಿದ್ದು ಓದಿಸ್ತಾ ಇದ್ರು, ನೋಡಿ ಹೀಗೆ ಆಗೋಯ್ತು". ಎಂದರು ಇನ್ನೊಬ್ಬರು. ಹೀಗೆ ಸಾಗಿತ್ತು ಮಾತಿನ ಲಹರಿ.
ಜನರ ಮಾತಿಗೆ ಕೊನೆ ಮೊದಲಿಲ್ಲದೆ ಹಿಡಿತವಿರದೆ ಸಾಗಿತ್ತು. ಇದನ್ನೆಲ್ಲಾ ದೂರದಲ್ಲಿ ನಿಂತು ಗಮನಿಸುವಾಗ ನನ್ನ ವಿಚಾರ ಲಹರಿ ಓಡಿದ್ದೆ ಬೇರೆ ದಿಕ್ಕಿನಲ್ಲಿ. ಸಾವು ಯಾರನ್ನು ಹೇಳಿ ಕೇಳಿ ಬರುತ್ತೆ? ಯಾವಾಗ ಬರುತ್ತೆ ಎಂಬುದು ಯಾರಿಗೆ ತಾನೆ ಗೊತ್ತು? ಹುಟ್ಟು ಎಂಬುದು ಬಂದ ಕೂಡಲೇ ಸಾವು ನಮ್ಮ ಹಿಂದೆಯೇ ಇರುತ್ತದೆ. ನಾವು ಹುಟ್ಟುವ ಮೊದಲು ಒಂದು unconditional agreement ಮಾಡಿಕೊಂಡೆ ಬಂದಿರುತ್ತೇವೆ. ಯಾವಾಗ ಕರೆದರೂ ಯಾವ ಸಬೂಬು ಹೇಳದೆ ಸುಮ್ಮನೆ ಹೊರಡುತ್ತೇವೆ ಎಂದು. ಸಾವು ಯಾವ ಕ್ಷಣದಲ್ಲಿ ಎಂದು ಯಾರಿಗೂ ಗೊತ್ತಾಗದ ಹಾಗೆ ಯಮ ಕರೆಸುತ್ತಾನೆ. ಸಾವಿಗೊಂದು ಕಾರಣ ಮಾತ್ರ ನೀಡೆ ಕರೆದುಕೊಂಡು ಹೋಗುತ್ತಾನೆ. ಹುಟ್ಟಿನಷ್ಟೇ ಸಾವು ಕೂಡ ನಿಗೂಡ. ಕೆಲವರು ಮುಂದೆ ಹೋಗುತ್ತಾರೆ ಮತ್ತೆ ಕೆಲವರು ಹಿಂದೆ, ಆದರೆ ಎಲ್ಲರು ಹೋಗಲೇ ಬೇಕಾದ ಜಾಗ ಇದು. ಪ್ರತಿ ಸಾವು ಕೂಡ ನಮಗೊಂದು ಎಚ್ಚರಿಕೆ ನೀಡುತ್ತಿರುತ್ತದೆ. "ನೀನು ಸಾವಿನ ಸಾಲಿನಲ್ಲಿ ನಿಂತಿದ್ದಿಯ".
     ಉಳಿದಷ್ಟು ದಿನದಲ್ಲಿ ನನ್ನ ಬದುಕನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬಹುದು? ಇರುವಷ್ಟು ಸಮಯದಲ್ಲಿ ನಾವೇನು ಒಳ್ಳೆಯದು ಮಾಡಬಹುದು? ಮತ್ತೊಬ್ಬರಿಗೆ ಸಾಧ್ಯವಾದಷ್ಟು ಮಟ್ಟಿಗೆ ತೊಂದರೆ ಕೊಡದೆ ಹೇಗೆ ಬದುಕಬಹುದು? ನಮ್ಮ ನಮ್ಮ ಕರ್ತವ್ಯವನ್ನ ಎಷ್ಟು ಪ್ರಾಮಾಣಿಕರಾಗಿ ಮಾಡಬಹುದು? ನಾವೆಷ್ಟು ಹೃದಯವನ್ತರಾಗಿ ಬಾಳಬಹುದು? ಹೇಗೆ ಉತ್ಸಾಹದಿಂದ ಜಗತ್ತನ್ನು ನೋಡಬಹುದು? ಪ್ರೀತಿ ಪ್ರೇಮದಿಂದ ಎಷ್ಟು ಕಾಲ ಸ್ವತಂತ್ರರಾಗಿ ಬಾಳುವೆ ನಡೆಸಬಹುದು? ಇತ್ಯಾದಿಗಳನ್ನು ಸಕಾರಾತ್ಮಕವಾಗಿ ಚಿಂತನೆ ನಡೆಸಿ,ಅದರಂತೆ ಬಾಳುವೆ ನಡೆಸಿದರೆ ಸಾವಿನಲ್ಲೂ ಧನ್ಯತೆ ಸಿಗಬಹುದೇನೋ ಎಂದೆನಿಸುತ್ತದೆ.
ಇದಕ್ಕೆ ನಿಮ್ಮ ಚಿಂತನೆ ಏನು?
-ಹೆಚ್.ಏನ್.ಪ್ರಕಾಶ್ 

ಮಂಗಳವಾರ, ಡಿಸೆಂಬರ್ 6, 2011

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೩

     ಎಷ್ಟಾದರೂ ವೇದ ಭ್ರಾಂತಿಪೂರ್ಣವಾದ ಪೌರುಷೇಯ ಕೃತಿಯಲ್ಲ. ಅದು ಸರ್ವಜ್ಞ ಭಗವದುಕ್ತ. ಆದುದರಿಂದ, ಪರಮ ವೈಜ್ಞಾನಿಕ. ಮಾನವರೆಲ್ಲರನ್ನೂ ಸಮಾನ ದೃಷ್ಟಿಯಿಂದಲೇ ನೋಡಬೇಕೆಂಬುದು ಸತ್ಯ ಸಿದ್ಧಾಂತ. ಆದರೆ ಮಾನವರು ಯಾಂತ್ರೀಕೃತರಲ್ಲ, ಎಲ್ಲಾ ವಿಷಯಗಳಲ್ಲಿಯೂ ಸರ್ವಥಾ ಸಮಾನವಾಗಿರುವುದಕ್ಕೆ. ಒಂದು ಯಂತ್ರಾಗಾರದಿಂದ ಒಂದೇ ರೂಪದ, ಒಂದೇ ತೂಕದ, ಒಂದೇ ಬಣ್ಣದ, ಒಂದೇ ಶಕ್ತಿಯ ಸಹಸ್ರಾರು ಮೋಟಾರುಗಳನ್ನು ನಿರ್ಮಿಸಬಹುದು. ಆದರೆ ಅತ್ಯಂತ ಸಮರ್ಥನಾದ ಆಚಾರ್ಯನೂ ಕೂಡ ಒಂದೇ ಶಕ್ತಿಯ, ಒಂದೇ ಅಭಿರುಚಿಯ, ಒಂದೇ ಭಾವನೆಯ ಸಾವಿರ, ಏಕೆ, ನೂರು ಶಿಷ್ಯರನ್ನೂ ತಯಾರು ಮಾಡಲಾರನು. ಅದಕ್ಕೆ ಕಾರಣವೂ ಇದೆ. ಪ್ರತಿಯೊಬ್ಬ ಜೀವಾತ್ಮನೂ ತನ್ನದೇ ಆದ ಸಂಸ್ಕಾರಗಳನ್ನು ಹೊತ್ತು, ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಬರುತ್ತಾನೆ. ಪರಿಚ್ಛಿನ್ನ ಚೇತನ ಎಂಬ ಅಧ್ಯಾಯದಲ್ಲಿ ಪಾಠಕರು ಈ ವಿಷಯವನ್ನು ಓದಿದ್ದಾರೆ. ಋಗ್ವೇದ ಹೇಳುತ್ತಲಿದೆ:-
ಆದಹ ಸ್ವಧಾಮನು ಪುನರ್ಗರ್ಭತ್ವಮೇರಿರೇ | ದಧಾನಾ ನಾಮ ಯಜ್ಞಿಯಮ್ || (ಋಕ್. ೧.೬.೪.)
    ಈ ಜೀವಾತ್ಮನು [ಯಜ್ಞಿಯಮ್ ನಾಮ ದಧಾನಾಃ] ಆದರ ಯೋಗ್ಯ ಪದವನ್ನು ಪಡೆಯುತ್ತಾ [ಆತ್ ಅಹ] ನಿರಂತರ ಕ್ರಮದಲ್ಲಿ [ಸ್ವಧಾಂ ಅನು] ತಮ್ಮ ಧಾರಣಶಕ್ತಿಗಳಿಗೆ ಅಂದರೆ ಸಂಸ್ಕಾರಗಳ ದೃಷ್ಟಿಯಿಂದ ಯೋಗ್ಯತೆಗೆ ಅನುಸಾರವಾಗಿ [ಪುನಃ ಗರ್ಭತ್ವಂ ಏರಿರೇ] ಮರಳಿ ಗರ್ಭತ್ವವನ್ನು - ಮಾತೃಯೋನಿಯಲ್ಲಿನ ಇರುವಿಕೆಯನ್ನು ಪಡೆಯುತ್ತಾರೆ. ಮಾನವಯೋನಿ ಏನೋ ಒಂದೇ, ಮಾನವತ್ವ ಸಾಮಾನ್ಯ ಧರ್ಮವೂ ಅಹುದು. ಈ ದೃಷ್ಟಿಯಿಂದ ಮಾನವರೆಲ್ಲಾ ಸಮಾನರೇ ಸರಿ. ಆದರೆ ಸಂಸ್ಕಾರಜನಿತವಾದ ಸಾಮರ್ಥ್ಯಗಳಲ್ಲಿ ಮತ್ತು ಒಲವುಗಳಲ್ಲಿ ಸಹಜವಾದ ಭೇದವಿರುತ್ತದೆ. ಅದನ್ನು ಗಮನಿಸಿ, ಪ್ರತಿಯೊಬ್ಬನಿಗೂ ತನ್ನದೇ ಆದ ರೀತಿಯಲ್ಲಿ ಏಳಿಗೆ ಸಾಧಿಸುವ ಅನುಕೂಲವನ್ನು ಕಲ್ಪಿಸಿಕೊಡುವುದೇ ಮನೋವಿಜ್ಞಾನಕ್ಕನುಗುಣವಾದ ಕ್ರಮ.
*************************
-ಪಂ.ಸುಧಾಕರ ಚತುರ್ವೇದಿ.

ಶನಿವಾರ, ಡಿಸೆಂಬರ್ 3, 2011

ಬೆಳಕು ಮೂಡುತಿದೆ!


'ಹೊಸಬೆಳಕು' ದಾರಾವಾಹಿಯಲ್ಲಿ ಈ ಬಗ್ಗೆ ಶ್ರೀ ಸುಧಾಕರ ಶರ್ಮರ ಮಾತು ಕೇಳಿ. ಅದ್ಭುತ ವಾಗಿದೆ.


ಈ ಜಗತ್ತೇ ಒಂದು ಸಣ್ಣ ಗೂಡು


ಬಹುಪತ್ನಿತ್ವ ವೇದ ಸಮ್ಮತವೇ?



ಸ್ತ್ರೀಯರು ಮತ್ತು ಶೂದ್ರರು ವೇದವನ್ನು ಓದಬಾರದೆಂಬುದು ಮತಾಚಾರ್ಯರ ಅಭಿಪ್ರಾಯ! ಅಂತಾರಲ್ಲಾ , ಇದು ಸರಿಯೇ?



ಭಗವದ್ಗೀತೆಯನ್ನು  ಪಂಚಮ ವೇದ ಅಂತಾರಲ್ಲಾ?



ವೇದದಲ್ಲಿ ಶೂದ್ರರಿಗೆ ಸ್ಥಾನ?



ಸ್ತ್ರೀಯರು ವೇದಮಂತ್ರವನ್ನು ಓದಿದರೆ ಗರ್ಭಕೋಶಕ್ಕೆ ತೊಂದರೆ ಆಗುತ್ತದಂತೆ?



ವಿಧವಾ ವಿವಾಹದ ಬಗ್ಗೆ ವೇದವು ಏನು ಹೇಳುತ್ತದೆ?



-ಹರಿಹರಪುರ ಶ್ರೀಧರ್.

ಗುರುವಾರ, ನವೆಂಬರ್ 24, 2011

ವೇದಾಂತವನ್ನು ಅಭ್ಯಸಿಸುವ ಮುನ್ನ

ಶ್ರೀ ಸೂರ್ಯ ಪ್ರಕಾಶ್ ಪಂಡಿತರು ಇಲ್ಲಿ ಆಡಿರುವ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಬಹುದು.






-ಹರಿಹರಪುರ ಶ್ರೀಧರ್.

ಮಂಗಳವಾರ, ನವೆಂಬರ್ 22, 2011

'ಹೊಸಬೆಳಕು' ಮೂಡುತ್ತಿದೆ! -2

     ದಿನಾಂಕ 20-11-2011ರಂದು ಚಂದನ ದೂರದರ್ಶನದಲ್ಲಿ ಬೆ.9-30ಕ್ಕೆ  ಪ್ರಸಾರವಾದ 'ಹೊಸಬೆಳಕು' ಕಾರ್ಯಕ್ರಮವನ್ನು ಮಿತ್ರ ಹರಿಹರಪುರ ಶ್ರೀಧರರು ದ್ವನಿಮುದ್ರಿಸಿದ್ದು, ಅದನ್ನು ತಮ್ಮ ಶ್ರವಣಕ್ಕಾಗಿ ಇಲ್ಲಿ ಪ್ರಕಟಿಸಿದೆ.
ಅಭಿಪ್ರಾಯಗಳಿಗೆ ಸ್ವಾಗತ!
ಧ್ವನಿ: ಶ್ರೀ ಸುಧಾಕರ ಶರ್ಮ ಮತ್ತು ಶ್ರೀಮತಿ ವಿನಯಾಪ್ರಸಾದ್.

ಶುಕ್ರವಾರ, ನವೆಂಬರ್ 18, 2011

ಸಜ್ಜನರು ಯಾರು? - ಶ್ರೀ ಸೂರ್ಯಪ್ರಕಾಶ ಪಂಡಿತರ ಮಾತು

ಸಜ್ಜನರಾರು?  ಎಂಬ ಬಗ್ಗೆ ಬೆಂಗಳೂರಿನ ಚಿಂತಕ ಶ್ರೀ ಸೂರ್ಯ ಪ್ರಕಾಶ ಪಂಡಿತರ   ಮಾತುಗಳು ಇಲ್ಲಿವೆ.





******************
- ಹರಿಹರಪುರ ಶ್ರೀಧರ್.

ಗುರುವಾರ, ನವೆಂಬರ್ 17, 2011

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೨

       ಅಥರ್ವ ವೇದವಂತೂ ಉಚ್ಛ-ನೀಚಭಾವದ ಬುಡಕ್ಕೇ ಕೊಡಲಿ ಪೆಟ್ಟು ಹಾಕುತ್ತಾ ಹೇಳುತ್ತದೆ: 
 ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ವ್ರತಂ ಸಹ ಚಿತ್ತಮೇಷಾಮ್ |
 ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || (ಅಥರ್ವ.೬.೬೪.೨.)
      ಈ ಮಾನವರೆಲ್ಲರ [ಮಂತ್ರಃ ಸಮಾನಃ] ಮಂತ್ರ ಸಮಾನವಾಗಿರಲಿ. [ಸಮಿತಿಃ ಸಮಾನೀ] ಸಮಿತಿ ಸಮಾನವಾಗಿರಲಿ. [ವ್ರತಂ ಸಮಾನಮ್] ವ್ರತವೂ ಸಮಾನವಾಗಿರಲಿ. [ಏಷಾ ಚಿತ್ತಂ ಸಹ] ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ. [ವಃ] ನಿಮ್ಮೆಲ್ಲರಿಗೂ, [ಸಮಾನೇನ ಹವಿಷಾ] ಸಮಾನವಾದ ಖಾದ್ಯ, ಪೇಯಗಳನ್ನೇ [ಜುಹೋಮಿ] ದಾನ ಮಾಡುತ್ತೇನೆ. [ಸಮಾನಂ ಚೇತಃ] ಸಮಾನವಾದ ಚೈತನ್ಯದಲ್ಲಿಯೇ [ಅಭಿ ಸಂ ವಿಶಧ್ವಮ್] ಎಲ್ಲೆಡೆಯಿಂದಲೂ ಪ್ರವೇಶಿಸಿರಿ.  
     ಭಗವಂತ ಇಷ್ಟು ಸ್ಪಷ್ಟವಾಗಿ ಸಮಾನತೆಯ ಸಂದೇಶವನ್ನು ಸಾರುತ್ತಿದ್ದಾನೆ. ಅಥರ್ವವೇದದಲ್ಲಿ ಇನ್ನೊಂದೆಡೆ ಸಮಾನೀ ಪ್ರಪಾ ವೋsನ್ನಭಾಗಃ|| (ಅಥರ್ವ.೩.೩೦.೬.) [ಪ್ರಪಾ ಸಮಾನೀ] ನಿಮ್ಮೆಲ್ಲರ ಜಲಾಶಯಗಳೂ ಒಂದಾಗಿರಲಿ. [ವ ಅನ್ನಭಾಗಃ] ನಿಮ್ಮ ಆಹಾರಭಾಗಗಳೂ ಒಂದಿಗೇ ಇರಲಿ ಎನ್ನುತ್ತಿದೆ. ಇಂತಹ ಅದೆಷ್ಟೋ ಮಂತ್ರಗಳನ್ನುದ್ಧರಿಸಬಹುದು. ಅದರೆ ಇಷ್ಟರಿಂದಲೇ ಪಾಠಕರು ವೇದಗಳ ಭಾವನೆಯನ್ನು ತಿಳಿದುಕೊಳ್ಳಬಲ್ಲರು.
 ************** 
ಪಂ. ಸುಧಾಕರ ಚತುರ್ವೇದಿ.

ಶುಕ್ರವಾರ, ನವೆಂಬರ್ 11, 2011

'ಹೊಸಬೆಳಕು' ಮೂಡಲಿದೆ!


ವೇದಗಳ ಬಗ್ಗೆ 'ಹೊಸಬೆಳಕು' ಮೂಡಲಿದೆ!
     ಪುರಾತನವಾದ ವೇದದ ಕುರಿತು ಸಾಕಷ್ಟು ಆರೋಪ, ಅಪವಾದಗಳಿವೆ. ಅಪದ್ಧವಾಗಿ ಮಾತನಾಡುವ ಕೆಲವರು ವಿದ್ವಾಂಸರೆನಿಸಿಕೊಂಡವರು, ಕೆಲವರು ಕಾವಿಧಾರಿಗಳಿಂದಲೇ ವೇದಕ್ಕೆ ಕೆಟ್ಟ ಹೆಸರು ಬಂದಿದೆಯೆಂದರೆ ತಪ್ಪಾಗುವುದಿಲ್ಲ. ರೂಢಿಗತ ಕಲ್ಪನೆಗಳಿಗೆ ಹೊರತಾದ, ವೇದದ ನಿಜಮುಖವನ್ನು ಪರಿಚಯಿಸುವ ಒಂದು ವಿನೂತನ ಕಾರ್ಯಕ್ರಮ ದೂರದರ್ಶನದ ಚಂದನವಾಹಿನಿಯಲ್ಲಿ ಮೂಡಿಬರಲಿದೆ. ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರು ಮತ್ತು ವೇದಗಳ ಬಗ್ಗೆ ಸಾಕಷ್ಟು ಓದಿಕೊಂಡಿರುವ ಶ್ರೀಮತಿ ವಿನಯಾಪ್ರಸಾದ್ ರವರು ನಡೆಸಿಕೊಡಲಿರುವ ಈ ಕಾರ್ಯಕ್ರಮ ಸೋದರ-ಸೋದರಿಯರ ಸಂವಾದರೂಪದಲ್ಲಿದ್ದು ಇದೇ ದಿನಾಂಕ ೧೩-೧೧-೨೦೧೧ರಿಂದ ಪ್ರತಿ ಭಾನುವಾರ ಬೆಳಿಗ್ಗೆ ೯-೩೦ರಿಂದ ೧೦-೦೦ರವರೆಗೆ ೧೩ ಕಂತುಗಳಲ್ಲಿ ಮೂಡಿಬರಲಿದೆ. ಮೊದಲ ಕಂತಿನಲ್ಲಿ ವೇದವಿಜ್ಞಾನ ಮತ್ತು ಷೋಡಶೋಪಚಾರಗಳ ಕುರಿತು ಮಾಹಿತಿ ಕೊಡಲಿದ್ದಾರೆ. ಬ್ರೋಂಜ್ ಕಮ್ಯೂನಿಕೇಷನ್ಸ್ ಎಂಬ ಜಾಹಿರಾತು ಸಂಬಂಧಿ ಸಂಸ್ಥೆ ನಡೆಸುತ್ತಿರುವ ಶ್ರೀಯುತ ರಮೇಶ್ ಮತ್ತು ಸುರೇಶ್ ನಿರ್ಮಾಪಕರಾಗಿರುವ ಈ ಕಾರ್ಯಕ್ರಮಕ್ಕೆ ಯಾವುದೇ ಪ್ರಾಯೋಜಕತ್ವ ಇಲ್ಲ. ವೇದಗಳ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಬೇಕು, ವಿಶೇಷವಾಗಿ ಯುವ ಪೀಳಿಗೆಗೆ ಸರಳವಾಗಿ ವೇದಗಳ ಮಹತ್ವ ತಿಳಿಸಿಕೊಡಬೇಕು ಎಂಬುದಷ್ಟೇ ಅವರ ಆಶಯವಾಗಿದೆ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಹಲವಾರು ಉಪನ್ಯಾಸಗಳನ್ನು ಕೇಳಿರುವ ನಾನು ಅವರಿಂದ ಪ್ರಭಾವಿತನಾದವರಲ್ಲಿ ಒಬ್ಬನಾಗಿದ್ದೇನೆ. ಈ ಕಾರ್ಯಕ್ರಮ ವಿನೂತನ ಹಾಗೂ ಚಿಂತನೀಯವಾಗಿರುವುದರಲ್ಲಿ ನನಗೆ ಅನುಮಾನವಿಲ್ಲ. ತಾವು ಈ ಕಾರ್ಯಕ್ರಮ ವೀಕ್ಷಿಸಬಹುದು. ಸಂದೇಹಗಳು, ಪ್ರಶ್ನೆಗಳು ಇದ್ದಲ್ಲಿ ಶ್ರೀ ಸುಧಾಕರಶರ್ಮರವರು ಉತ್ತರಿಸಲು ಸಿದ್ಧರಾಗಿದ್ದಾರೆ.



ಸೋಮವಾರ, ಅಕ್ಟೋಬರ್ 17, 2011

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೧

     ಮಾನವಸಮತಾ ಭಾವನೆಯನ್ನು ವೇದಗಳಿಗಿಂತ ಚೆನ್ನಾಗಿ ಪ್ರತಿಪಾದಿಸುವ ಶಾಸ್ತ್ರ ಜಗತ್ತಿನಲ್ಲಿ ಬೇರಾವುದೂ ಇಲ್ಲ. ವಿಷಯ ಪ್ರವೇಶದಲ್ಲೇ ವೇದಗಳು ಮಾನವ ಮಾತ್ರರನ್ನು ದೇವಪುತ್ರರು, ಋಷಿಗಳು, ಅಮೃತನಾದ ಪ್ರಭುವಿನ ಮಕ್ಕಳು ಎಂದು ಕರೆದಿರುವುದನ್ನು ಪಾಠಕರು ನೋಡಿದ್ದಾರೆ. ಸಮಾನತೆ ವೇದೋಪದೇಶದ ಒಂದು ಆಧಾರ ಶಿಲೆ. ಈ ಕೆಳಗಿನ ಮಂತ್ರವನ್ನೇ ನೋಡಿರಿ:-
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ |
ಯುವಾ ವಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || (ಋಕ್.೫.೬೦.೫.)
     [ಏತೇ] ಈ ಮಾನವರು, [ಅಜ್ಯೇಷ್ಠಾಸಃ] ಯಾರೂ ದೊಡ್ಡವರಲ್ಲ. [ಅಕನಿಷ್ಠಾಃ] ಇವರು ಯಾರೂ ಚಿಕ್ಕವರೂ ಅಲ್ಲ. [ಸಂ ಭ್ರಾತರಃ] ಇವರು ಪರಸ್ಪರ ಸಹೋದರರು. [ಸೌಭಗಾಯ] ಸೌಭಾಗ್ಯಪ್ರಾಪ್ತಿಗಾಗಿ [ವಾವೃಧುಃ] ಮುಂದುವರೆಯುತ್ತಾರೆ. [ಯುವಾ ಸೃಪಾ ರುದ್ರಃ] ಅಜರನೂ, ಆತ್ಮರಕ್ಷಕನೂ, ದುಷ್ಟರಿಗೆ ದಂಡ ನೀಡುವವನೂ ಆದ ಪ್ರಭುವು, [ಏಷಾಂ ಪಿತಾ] ಇವರೆಲ್ಲರ ತಂದೆ. [ಪೃಶ್ನಿಃ] ಭೂಮಾತೆ, [ಮರುದ್ಭ್ಯಃ] ಈ ಮರ್ತ್ಯರಿಗೆಲ್ಲಾ [ಸುದುಘಾ] ಉತ್ತಮ ಶಕ್ತಿಯನ್ನೆರೆಯುವವಳೂ [ಸುದಿನಾ] ಉತ್ತಮ ದಿನಗಳನ್ನು ತೋರಿಸುವವಳೂ ಆಗಿದ್ದಾಳೆ.
     ಇನ್ನೊಂದೆಡೆ ಅದೇ ವೇದ, ಇದೇ ಸಮಾನತೆಯ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರಿ, ಕೊನೆಗೆ - ಸುಜಾತಾಸೋ ಜನುಷಾ ಪೃಶ್ನಿಮಾತರೋ ದಿವೋ ಮರ್ಯಾಃ|| (ಋಕ್. ೫.೫೯.೬.) ಅಂದರೆ ಇವರೆಲ್ಲಾ [ಪೃಶ್ನಿಮಾತರಃ] ಭೂಮಿಯನ್ನೇ ತಾಯಿಯಾಗಿ ಹೊಂದಿರುವವರೂ, [ದಿವಃ ಮರ್ಯಾಃ] ಜ್ಯೋತಿರ್ಮಯ ಪ್ರಭುವಿನ ಮಕ್ಕಳಾದ ಮಾನವರೂ ಆದಕಾರಣ [ಜನುಷಾ ಸುಜಾತಾಸಃ] ಜನ್ಮದಿಂದ ಉತ್ತಮ ಕುಲೀನರೇ ಆಗಿದ್ದಾರೆ ಎನ್ನುತ್ತದೆ.
**************

ಶುಕ್ರವಾರ, ಅಕ್ಟೋಬರ್ 7, 2011

ಕಲಿಯುತ್ತಾ ಕಲಿಸೋಣ - ಮಾತಾಜಿ ವಿವೇಕಮಯೀ





     ಕಳೆದ ವರ್ಷ ಹಾಸನಜಿಲ್ಲೆಯ ಚನ್ನರಾಯಪಟ್ಟಣದಲ್ಲಿ "ಗುರು ಚಿಂತನ " ಎಂಬ ಒಂದು ವಿನೂತನ ಕಾರ್ಯಕ್ರಮ. ಬೆಂಗಳೂರಿನ ಸಪ್ತಮಿ ಟ್ರಸ್ಟ್ ನವರು ಭವತಾರಿಣಿ ಆಶ್ರಮದ ಪೂಜ್ಯ ಮಾತಾಜಿ ವಿವೇಕಮಯೀ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಹಲವೆಡೆ ನಡೆಸುವ ಈ ಕಾರ್ಯಕ್ರಮದಲ್ಲಿ ಒಂದೆರಡು ಭಾರಿ ನಾನು ಭಾಗವಹಿಸಿರುವೆ. ಶಾಲಾ ಶಿಕ್ಷಕರ ಚೈತನ್ಯವನ್ನು ಜಾಗೃತಮಾಡುವ ಈ ಕಾರ್ಯಕ್ರಮಗಳು ಶಿಕ್ಷಕ ಸಮುದಾಯದ ಮೆಚ್ಚುಗೆ ಪಡೆದಿವೆ. ಶಿಕ್ಷಕರುಗಳಿಗಾಗಿ ನಡೆದಿರುವ ಈ ಕಾರ್ಯಕ್ರಮದಲ್ಲಿ ಮಾತಾಜಿ ವಿವೇಕಮಯಿಯವರು  ಆಡಿರುವ ಮಾತುಗಳು ನಮಗೂ ಪ್ರೇರಣಾದಾಯಕವೇ ಆಗಿವೆ. 
-ಹರಿಹರಪುರ ಶ್ರೀಧರ್.

 

ಮಂಗಳವಾರ, ಅಕ್ಟೋಬರ್ 4, 2011

ಪುರೋಹಿತರ ಮನ ಕರಗಲೇ ಇಲ್ಲ!

     ನಮ್ಮ ಸೋದರತ್ತೆ ಗೌರಮ್ಮ ನವರು ತಮ್ಮ ಹತ್ತನೆಯ ವರ್ಷದಲ್ಲೇ ಬಾಲ್ಯವಿವಾಹವಾಗಿ ಹನ್ನೆರಡನೆಯ ವಯಸ್ಸಿಗೆ ಪತಿಯನ್ನು ಕಳೆದುಕೊಂಡು, ವಿಧವೆ ಪಟ್ಟ ಕಟ್ಟಿಕೊಂಡು ನಮ್ಮ ಮನೆಯಲ್ಲೇ ತಮ್ಮ ಉಳಿದ ದೀರ್ಘ ಜೀವನವನ್ನು ಅವರ ತಮ್ಮನ ಮಕ್ಕಳಾದ ನಮ್ಮನ್ನೇ ಮಕ್ಕಳೆಂದು ತಿಳಿದು ನಮ್ಮ ಹೆತ್ತ ತಾಯಿ ಗಿಂತಲೂ ಹೆಚ್ಚು ಪ್ರೀತಿಯಿಂದ ನಮ್ಮನ್ನೆಲ್ಲಾ ಬೆಳೆಸುವುದರಲ್ಲೇ ಅವರ ಜೀವನದ ಸಾರ್ಥಕತೆ ಕಂಡುಕೊಂಡ ಮಹಾನ್ ವ್ಯಕ್ತಿ. ೭೫ ನೆಯ ವಯಸ್ಸಿನಲ್ಲಿ ಅವರು ನಮ್ಮ ಮನೆಯಲ್ಲೇ ಕೊನೆಯುಸಿರೆಳೆದರು. ಈ ಘಟನೆ ನಡೆದು ಇಪ್ಪತ್ತೈದು ವರ್ಷಗಳು ಕಳೆದುಹೋಯ್ತು. ಆ ಸಂದರ್ಬದಲ್ಲಿ ನಡೆದ ಒಂದು ಘಟನೆಯನ್ನು ತಮ್ಮ ಗಮನಕ್ಕೆ ತರಬೇಕೆನಿಸುತ್ತಿದೆ.

     ಈಗಾಗಲೇ ತಿಳಿಸಿದಂತೆ ನಮ್ಮತ್ತೆ ಗೌರಮ್ಮ ನವರಿಗೆ ಸ್ವಂತ ಮಕ್ಕಳಿಲ್ಲ. ಅವರ ಶ್ರಾದ್ಧ ಕರ್ಮಗಳನ್ನು ಮಾಡುವವರಾರು? ನಮ್ಮ ತಂದೆಗೂ ವಯಸ್ಸಾಗಿದೆ. ಶರೀರದಲ್ಲಿ ತ್ರಾಣವಿಲ್ಲ. ನಾವು ಮಾಡಬೇಕೆಂದರೆ ಅಪ್ಪ-ಅಮ್ಮ ಬದುಕಿರುವಾಗ ನೀವು ಮಾಡಕೂಡದೆಂದು ಹಿರಿಯರು ನಮ್ಮನ್ನು ಕಟ್ಟಿ ಹಾಕಿದರು. ಆಗ ಯಾವ ಶಾಸ್ತ್ರದಲ್ಲಿತ್ತೋ ಗೊತ್ತಿಲ್ಲ ಒಬ್ಬ ಕರ್ತೃವನ್ನು ನೇಮಿಸಿಕೊಂಡಿದ್ದಾಯ್ತು. ಅವರಾರೋ ಮೂರನೆಯ ಸಂಬಂಧವಿಲ್ಲದ ವ್ಯಕ್ತಿ. ಅವರು ಕರ್ತೃವಿನ ಜಾಗದಲ್ಲಿದ್ದು ಶ್ರಾದ್ಧಕರ್ಮಗಳು ನಮ್ಮತ್ತೆ ಮರಣಹೊಂದಿದ ಐದನೆಯ ದಿನ ಶುರುವಾಯ್ತು. ಎರಡು ದಿನಗಳಷ್ಟೇ ಕಳೆದಿದೆ. ಕರ್ತೃ ನಾಪತ್ತೆ ಯಾಗಿಬಿಟ್ಟರು. ಕರ್ಮ ನಡೆಯುವಂತಿಲ್ಲ. ಎಲ್ಲರಿಗೂ ಗಾಭರಿ! ಇದನ್ನೆಲ್ಲಾ ಅತಿಯಾಗಿ ನಂಬಿದ್ದ ನನಗೆ ಆತಂಕ. ಏನಾಗಿ ಬಿಡುತ್ತೋ ಏನೋ!! ಸರಿ, ಕರ್ತೃವನ್ನು ಹೇಗಾದರೂ ಕರೆತರಲು ನನ್ನ ಪ್ರಯತ್ನ ಶುರುವಾಯ್ತು. ನಮ್ಮ ಹುಟ್ಟೂರು ಹರಿಹರಪುರವೆಂಬ ಹಳ್ಳಿ. ಅಲ್ಲಿಗೆ ಸುಮಾರು ಎಂಟು ಮೈಲು ದೂರದ ಹೊಳೆನರಸೀಪುರದಲ್ಲಿ ಕರ್ತೃವಿನ ಮನೆ. ಹೊಳೆನರಸೀಪುರಕ್ಕೆ ಅವರ ಮನೆಗೆ ಹೋದೆ. ಅಲ್ಲಿಲ್ಲ. ಒಬ್ಬ ಪುರೋಹಿತರ ಮನೆಯಲ್ಲಿರುವುದಾಗಿ ತಿಳಿದು ಅಲ್ಲಿ ಹೋದೆ. ಆತ ಆ ಪುರೋಹಿತರೊಡನೆ ಒಂದು ದೇವಸ್ಥಾನಕ್ಕೆ ಹೋಗಿದ್ದಾನೆ. ಅಲ್ಲಿ ಹೋಗಿ ವಿಚಾರಿಸಲಾಗಿ ಪಕ್ಕದಲ್ಲಿದ್ದ ಪುರೋಹಿತರೆಡೆಗೆ ಅವರ ದೃಷ್ಟಿ ಹೋಯ್ತು.
" ಏನು ಗುರುಗಳೇ, ಮೊನ್ನೆಯಿಂದ ನಮ್ಮತ್ತೆ ಕರ್ಮಾದಿಗಳನ್ನು ಕರ್ತೃವಾಗಿ ಮಾಡುತ್ತಿರುವ ಇವರು ಇಂದು ಬಾರದೆ ದಿಕ್ಕೇ ತೋಚದಾಗಿದೆ. ದಯವಿಟ್ಟು ಕಳಿಸಿಕೊಡಿ."-- ನನ್ನ ಕಣ್ಣು ಅದಾಗಲೇ ತೇವವಾಗಿತ್ತು.
ಆ ಪುರೋಹಿತರು ಹೇಳಿದರು" ಅದ್ಯಾವನೋ ಮಾಡಿಸ್ತಾ ಇದಾನಲ್ಲಾ! ಅವನನ್ನೇ ಕೇಳು, ಹೇಗಾದರೂ ಮಾಡಿಕೊಳ್ಳಲಿ, ಇವನನ್ನು ಕಳಿಸುಲ್ಲ."
     ನಾನಂತೂ ಧರೆಗೆ ಇಳಿದುಹೋದೆ. ದೇವಸ್ಥಾನದ ಮುಂದೆ ರಸ್ತೆಯಲ್ಲೇ ಆ ಪುರೋಹಿತರ ಪಾದಕ್ಕೆ  ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಕಣ್ಣೀರಿಟ್ಟೆ. ಪುರೋಹಿತರ ಮನ ಕರಗಲೇ ಇಲ್ಲ. ಕೊನೆಗೆ ನಮ್ಮ ಸಂಬಂಧಿಕರೊಬ್ಬರ ಸಹಕಾರದಿಂದ ಬೇರೆ ದಾರಿಯಾಯ್ತು. ಅದು ಬೇರೆ ವಿಚಾರ. ಆದರೆ ಅಂದು ನನಗಾದ ಮಾನಸಿಕ ನೋವು ಈ ಪುರೋಹಿತ ವ್ಯವಸ್ಥೆಯ ಮೇಲೆ ಕಿಡಿ ಕಾರುವಂತಾಗಿದೆ. ಆದರೂ ಉತ್ತಮ ಮನೋಧರ್ಮದ ಪುರೋಹಿತರುಗಳನ್ನೂ ಕಂಡಿದ್ದೇನೆ. ಹಾಗಾಗಿ ನಾನು ಬಂಡೆದ್ದಿಲ್ಲ!! ಅಂದು ಆ ಪುರೋಹಿತರು ಹಾಗೆ ವರ್ತಿಸಿದ್ದೇಕೆ ಎಂಬುದು ನಿಮಗೆ ತಿಳಿಯಿತಲ್ಲವೇ?
ನೀವೇನು ಹೇಳ್ತೀರಿ?

-ಹರಿಹರಪುರ ಶ್ರೀಧರ್
--------------------------------------------------------------
ಯಾರು ಏನು ಹೇಳಿದರು?
ಸಾಗರದಾಚೆಯ ಇಂಚರ:

ನಿಜಕ್ಕೂ ಕೆಲವೊಮ್ಮೆ ಪುರೋಹಿತರ ಮೇಲೆ ನಂಗೂ ಕೋಪ ಬಂದಿದೆ. ದಿನಕ್ಕೆ ಒಂದೇ ಪೂಜೆ ಯಿದ್ದರೆ ೩ ತಾಸು ಬೇಕು, ಅದೇ ಪೂಜೆ ದಿನಕ್ಕೆ ೧೦ ಇದ್ದರೆ, ೩೦ ನಿಮಿಷ ಸಾಕು. ನಿಮ್ಮ ಘಟನೆ ಮನ ತಟ್ಟುವಂತಿದೆ
--------------------------------------------------------------

ವಿ.ಆರ್.ಭಟ್ :

This Habbit of Purohits are bad, they must understand atleast now! nice article
-------------------------------------------------------------

ವಿಶಾಲ್:
This is a clear example of fear within us.Purohit's arrogance was because of the position he has which he doesn't deserve.Who gave him that position, its we.Why did we give,because of Ignorance and fear. Lets hope that the society realizes this soon and get out of that dogma. 
---------------------------------------------------------


Venkatakrishna.K.K.

ಅಪ್ಪ ಪುರೊಹಿತ, ಆದಕಾರಣ ಮಗ ಪುರೊಹಿತ. ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ. ವಿಚಾರವಿಲ್ಲದ ಆಚಾರ.ಅನಾಚಾರದ ವಿಚಾರ.ಗೊಡ್ಡು ಸಂಪ್ರದಾಯ ಗೊತ್ತಿದೆ,ಶಾಸ್ತ್ರವಿಚಾರ ಗೊತ್ತಿಲ್ಲ. ಇದು ಇಂದಿನ ನೂರಾರು ಪುರೊಹಿತರ ಕತೆ.



ಸೋಮವಾರ, ಅಕ್ಟೋಬರ್ 3, 2011

ನಮ್ಮ ಆಚರಣೆಗಳು ಮತ್ತು ಸತ್ಯದ ಸಮನ್ವಯ: ಶ್ರೀ ಸುಧಾಕರ ಶರ್ಮರೊಡನೆ ಪ್ರಶ್ನೋತ್ತರ

     ದಿನಾಂಕ  ೨೯.೫.೨೦೧೦ ಶನಿವಾರ ಶ್ರೀ ಸುಧಾಕರ ಶರ್ಮರು ಹಾಸನಕ್ಕೆಬಂದಾಗ ವೇದಸುಧೆಬಳಗವು ಅವರೊಡನೆ ಮುಕ್ತಮಾತುಕತೆ ನಡೆಸಿತು. ಮಾತುಕತೆಯಲ್ಲಿ ಹಾಸನದ ಶ್ರೀರಾಮಸ್ವಾಮಿ,ಶ್ರೀನಟರಾಜ್ ಪಂಡಿತ್, ಶ್ರೀ ಕವಿ ನಾಗರಾಜ್ ಮತ್ತು ಶ್ರೀ ಶ್ರೀಧರ್ ಹಾಗೂ ಬೆಂಗಳೂರಿನ ಡಾ|| ವಿವೇಕ್ ಮತ್ತು ಶ್ರೀ ಕೃಷ್ಣಮೂರ್ತಿ ಇದ್ದರು. ಶ್ರೀ ಶರ್ಮರ ನಿಷ್ಠುರ ನುಡಿಗಳಿಗೆ ನಮ್ಮ ನಿಷ್ಠುರ ಪ್ರಶ್ನೆಗಳು. ಆದರೆ ಯಾರಿಗೂ ಮನಸ್ಸಿಗೆ ನೋವಾಗದಂತೆ ಮಾತುಕತೆ ಮುಕ್ತಾಯ. ಅದರ ಫಲಶೃತಿಯೇ ಈ ಧ್ವನಿ ಸುರುಳಿ. ಧ್ವನಿಯನ್ನೇ ನೀವು ನೇರವಾಗಿ ಕೇಳುವಾಗ ಅದರ ವಿವರ ಅನಗತ್ಯ. ಆದರೆ ಮುಕ್ತ ಮಾತುಕತೆ ಕೇಳಿದ ನಿಮ್ಮಿಂದ ಫೀಡ್ ಬ್ಯಾಕ್ ಬೇಕು. ಆಗ ಮಾತ್ರ ಈ ಪ್ರಯತ್ನ ಸಾರ್ಥಕವಾದೀತು.


---------------------------------------------------------------
ಡಾ||ಜ್ಞಾನದೇವ್ ಅಭಿಪ್ರಾಯ ಕೇಳಿ
---------------------------------------------------------------
     ಸು೦ದರ ಅಪರೂಪದ
 ಆಕರ್ಶಕ ಅಸಕ್ತಿಕರ ಮಾತುಕತೆಯನ್ನು ಬಹು ಕುತೂಹಲದಿ೦ದ ಆಲಿಸಿದೆ. ನಿಜಕ್ಕೂಮನಸ್ಸನ್ನು ವಿಸ್ತಾರಗೊಳಿಸುವ ವಿವಸ್ತ್ರಗೊಳಿಸುವ ಮಾತುಕತೆಯೂ ಹೌದು. ಶರ್ಮಾರವರ ಉತ್ತರಗಳು ಉತ್ತಮವಾಗಿದ್ದರೂ ಎಲ್ಲೋ ಒ೦ದು ಕಡೆ ತುಸು ಉದ್ಧಟನದ ಛಾಯೆ ಕ೦ಡುಬರುತ್ತದೆಯೇನೋ ಎ೦ದು ನನಗೆ ಭಾಸವಗುತ್ತದೆ. ನಿಮ್ಮ ಪ್ರಶ್ನೆಗಳು, ನಿಮ್ಮ ಮಾತಿನ ಶೈಲಿ ಶಬ್ದಗಳ ಗಾ೦ಭೀರ್ಯ ನಿಮ್ಮ ಪ್ರಾಮಾಣಿಕತೆ, ನಿಮ್ಮ ಆಳವಾದ ಧ್ವನಿ ಎಲ್ಲವೂ ನನಗೆ ಬಹು ಮೆಚ್ಚುಗೆಯಾದ ಅ೦ಶಗಳು. ಕೆಲವೆಡೆ ಶರ್ಮಾರವರ ಉತ್ತರಗಳು ಸಮ೦ಜಸವಾಗಿದ್ದರೂ ಇನ್ನು ಕೆಲವೆಡೆ ಹಾರಿಕೆ ಉತ್ತರಗಳೇನೋ ಎನಿಸುತ್ತವೆ. ಒಟ್ಟಾರೆ ಒ೦ದು ಎನ್ಲೈಟನಿ೦ಗ್ ಹರಟೆ ಅದು. ಸತ್ಯವನ್ನು ಅ೦ತಿಮವಾಗಿ ಮನುಷ್ಯನೇ ಕ೦ಡುಕೊಳ್ಳಬೇಕಾದರೂ ಆ ನಿಟ್ಟಿನಲ್ಲಿಅವನಿಗೆ ಬೆಳಕಿನ ಅಗತ್ಯವಿದೆ ಎ೦ಬುದನ್ನು ಯಾರೂ ಅಲ್ಲಗಳೆಯಲಾರರು. ಅ ಬೆಳಕು ವೇದದಿ೦ದಲಾಗಲೀ ಇತರಧರ್ಮಗ್ರ೦ಥಗಳಿ೦ದಾಗಲೀ ಅಥವಾ ಬದುಕಿನ ಅನನ್ಯ ಅನುಭವಗಳಿಂದಲೂ ವ್ಯಕ್ತಿಗಳ ವೈಯುಕ್ತಿಕ ಪ್ರಭಾವಗಳಿ೦ದಲೂಬರಬಹುದು. ಏನೇ ಆಗಲೀ ಒಬ್ಬ ಹೇಳಿದ ಮಾತ್ರಕ್ಕೇ ಅದು ನಮ್ಮ ಪಾಲಿಗೆ ಸತ್ಯವಾಗಲಾರದು. ಅದು ನಮ್ಮ ಬದುಕಿನ ಅನುಭವದ ಮೂಸೆಯಲ್ಲಿ ಬೆ೦ದು ಹೊರಬ೦ದಾಗ ಮಾತ್ರ ಅ೦ಥ ಸತ್ಯಕ್ಕೆ ಬೆಲೆ ಅರ್ಥ. ಇದು ನನ್ನ ಭಾವನೆ. ನಿಮ್ಮ ನ೦ಬಿಕೆಗಳಿಗೆ ಶ್ರದ್ಧೆಗಳಿಗೆನನ್ನ ಅಪಾರ ಗೌರವವಿದೆ
ನಿಮ್ಮ ಈ ಸಚ್ಚಿ೦ತನ ಸತ್ ಪ್ರಯತ್ನಗಳು ನಿಜಕ್ಕೂ ಅನುಕರಣೀಯ ಶ್ಲಾಘನೀಯ ಶ್ರೀಧರ್.
ವ೦ದನೆಗಳೊ೦ದಿಗೆ
ನಿಮ್ಮ ಆತ್ಮೀಯ
ಡಾ||ಜ್ಞಾನದೇವ್

----------------------------------------------------
ಶ್ರೀ ವಿಶಾಲ್ ತಮ್ಮ ಅಭಿಪ್ರಾಯವನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಅವರ ಮಾತನ್ನು ನೋಡಿ. ನಿಮ್ಮ ಅಭಿಪ್ರಾಯವನ್ನೂ ತಿಳಿಸಿ
--------------------------------------------------
Sir,
Pardon me for writing this comment in English.
First of all the conversation was really interesting,it brought out so many questions and answers we all are searching for.
But at the same time I feel that we aren't going deep enough to understand what all sharmaji says.Our previous belief, faith & fear are the biggest roadblocks to understand the ultimate truth.So we were misguided by people who are greedy and dumb,all in the name of God.
As sharmaji rightly says(ofcourse from vedas), a person can
be misguided easily if
1.He is Ignorant
2.He has got fear
3.He has lots of desires.
We all have certain amount of these things which is acting againstus to accept the ultimate truth.
 Its really sad that people think a lot about what other people think about them rather than understanding self.The fear what we have is always temporary if its seen in broader sense.
Life is all about the options we get and the choices we make.We have the option now,choosing the right thing is upto the individual.
Regards,
Vishal
********************
-ಹರಿಹರಪುರ ಶ್ರೀಧರ್.

ಗುರುವಾರ, ಸೆಪ್ಟೆಂಬರ್ 29, 2011

ಮಕ್ಕಳನ್ನು ಬೆಳೆಸುವುದು ಹೇಗೆ? - ಮಾತಾಜಿ ವಿವೇಕಮಯೀ ಅವರ ಉಪನ್ಯಾಸ

ಹಾಸನದಲ್ಲಿ ದಿನಾಂಕ ೩೦.೧೧.೨೦೦೮ ರಂದು ಬೆಂಗಳೂರಿನ ಭವತಾರಣಿ ಆಶ್ರಮದ ಮಾತಾಜಿ ವಿವೇಕ ಮಯೀ ಅವರು ಮಾಡಿದ ಉಪನ್ಯಾಸ



















[ಹಾಸನದ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಶ್ರೀಮತಿ ಉಷಾಲತಾ, ಮಾತಾಜಿ ವಿವೇಕಮಯೀ ಮತ್ತು ಮಾತಾಜಿ ತ್ಯಾಗಮಯೀ- ಉಭಯಕುಶಲೋಪರಿಯಲ್ಲಿ] 
ಇಂದಿನ ಸಮಾಜದಲ್ಲಿ ನಾವು ಚಿಂತಿಸುವ ರೀತಿಯಾದರೂ ಹೇಗಿರುತ್ತೆ?              
     ನಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು, ಏಕೆಂದರೆ ಮುಂದೆ ಒಳ್ಳೆಯ ಕಾಲೇಜಿಗೆ ಸೇರಿಸ ಬೇಕು, ಒಳ್ಳೆಯ ಕಾಲೇಜಾದರೂ ಏಕೆಂದರೆ ನಮ್ಮ ಮಕ್ಕಳು ಒಳ್ಳೆಯ ಕೆಲಸಕ್ಕೆ ಸೇರಿ ತುಂಬಾ ಸಂಪಾದಿಸಬೇಕು, ಸುಖವಾದ ಜೀವನ ಮಾಡಬೇಕು, ಅಂತೂ ತುಂಬಾ ಹಣ ಸಂಪಾದಿಸಿದರೆ ನಮ್ಮ ಮಕ್ಕಳ ಜೀವನ ಸುಖವಾಗಿರುತ್ತದೆ, ಎಂಬ ಕಲ್ಪನೆ.
ಹಣಕ್ಕಿಂತಲೂ ಹೆಚ್ಚಿನದು ಬೇರೆ ಏನೋ ಇದೆ:
     ಒಬ್ಬ ವಿದ್ಯಾರ್ಥಿಯು ತನ್ನ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸುತ್ತಾನೆ. ಅವನ ತಾಯಿಗೆ ವಿಷಯ ತಿಳಿಸಲು ಹೋಗುತ್ತಾನೆ. ಅವರ ಅಮ್ಮನಿಗೆ ತುಂಬಾ ಆನಂದವಾಗುತ್ತೆ ಎಂದು ಸಹಜವಾಗಿ ಬಯಸಿದ್ದ ವಿದ್ಯಾರ್ಥಿಗೆ ಅವನ ತಾಯಿ 
ಸಂತೋಷ ಎಂದಷ್ಟೇ ಹೇಳಿ ಮೌನವಾಗಿಬಿಡುತ್ತಾಳೆ. ವಿದ್ಯಾರ್ಥಿಗೆ ಸಹಜವಾಗಿ ಬೇಜಾರಾಗಿಬಿಡುತ್ತೆ. ಅವನು ಅಮ್ಮನನ್ನು ಕೇಳುತ್ತಾನೆ. ಅಮ್ಮ,ನಾನು ಅತ್ಯಂತ ಉನ್ನತ ಶ್ರೇಣಿಯಲ್ಲಿ ನಮ್ಮ ಯೂನಿವರ್ಸಿಟಿಗೆ ಪ್ರಥಮನಾಗಿ ತೇರ್ಗಡೆ ಹೊಂದಿರುವುದು ನಿನಗೆ ಸಂತೋಷದ ವಿಷಯ ವಲ್ಲವೇ? ಅದಕ್ಕೆ ಅವನ ತಾಯಿ ಹೇಳುತ್ತಾಳೆ ನೋಡು ನೀನು ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದು, ಮುಂದೆ ಒಳ್ಳೆಯ ಕೆಲಸಕ್ಕೆ ಸೇರುವುದು, ಯಾವುದೂ ನನಗೆ ದೊಡ್ದ ವಿಷಯವಲ್ಲ, ನೀನು ಎಷ್ಟು ಸಂಪತ್ತು ಸಂಪಾದಿಸುತ್ತೀಯ ಎಂಬುದು ಮುಖ್ಯವಲ್ಲ,ಆದರೆ ನಿನ್ನ ಬದುಕನ್ನು ಹೇಗೆ ರೂಪಿಸುತ್ತೀಯ ಎಂಬುದು ಮುಖ್ಯ. ಕೂಲಿ ಕೆಲಸ ಮಾಡಿದರೂ ಚಿಂತೆಯಿಲ್ಲ ನನ್ನ ಮಗ ಪ್ರಾಮಾಣಿಕನಾಗಿ ಜೀವನ ಮಾಡುತ್ತಾನಾ? ಜೀವನದಲ್ಲಿ ಆದರ್ಶವಾಗಿ ಬದುಕಿ ತೋರಿಸುತ್ತಾನಾ? ಅದು ಮುಖ್ಯ! ವಿದ್ಯಾರ್ಥಿ ಜೀವನದಲ್ಲಿ ಅಂತಹ ಒಬ್ಬ ತಾಯಿಯ ಆದರ್ಶದಿಂದ ಇಂದು ಸಮಾಜದಲ್ಲಿ ಸುರೇಶ್ ಕುಲಕರ್ಣಿಯವರಂತಹ ಪ್ರಾಮಾಣಿಕ ಚಿಂತಕರನ್ನು ಕಾಣ ಬಹುದಾಗಿದೆ. ಅಂದು ಆರು- ಏಳು ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗೆ ಅವನ ತಾಯಿ ಒಂದು ಒಳ್ಳೆಯ ಕೆಲಸಕ್ಕೆ ಸೇರಿ ಚೆನ್ನಾಗಿ ಹಣ ಸಂಪಾದಿಸು  ಎಂದಷ್ಟೇ ಹೇಳಿದ್ದರೆ ಸಮಾಜಕ್ಕೆ ಇಂತಹ ಮಹನೀಯರು ಸಿಗುತ್ತಿರಲಿಲ್ಲ- ಅಲ್ಲವೇ  ಅಂದು ಸುರೇಶ್ ಕುಲಕರ್ಣಿಯವರಿಗೆ ಗೋಚರವಾಯ್ತು, ಪದವಿಯಲ್ಲಿ ಪಡೆದ ಚಿನ್ನದ ಪದಕಕ್ಕಿಂತಲೂ ಹೆಚ್ಚಿನದು ಹಣ ಗಳಿಸುವುದಕ್ಕಿಂತ ಹೆಚ್ಚಿನದು ಜೀವನದಲ್ಲಿ ಬೇರೆ ಯೇನೋ ಇದೆ ಎಂದು. ಹೌದು, ಜೀವನದಲ್ಲಿ ನಾವು ಗಳಿಸುವ ಹಣಕ್ಕಿಂತಲೂ ಹೆಚ್ಚಿನದು ಬೇರೆ ಏನೋ ಇದೆ, ಆದರೆ ನಾವು ಅದಕ್ಕೆ ಅಂತಹ ಸ್ಥಾನವನ್ನು ಕೊಡಬೇಕಷ್ಟೆ.ನಾವು ಜೀವನದಲ್ಲಿ ಮೌಲ್ಯಗಳಿಗೆ ಸ್ಥಾನ ಕೊಡಬೇಕು. ನಿಧಾನವಾಗಿ ನಮ್ಮ ಸಹಜ ಜೀವನ ಹೇಗೆ ಬದಲಾಗುತ್ತಿದೆ! ನಮ್ಮ ಪರಂಪರಾಗತ ಜೀವನದ ಆದರ್ಶಗಳು ಪಾಶ್ಚಿಮಾತ್ಯ ಪ್ರಭಾವಕ್ಕೊಳಗಾಗಿ ಜೀವನದ ಸುಖಭೋಗಗಳಿಗೆ ಹೆಚ್ಚು ಹೆಚ್ಚು ಪ್ರಾಶಸ್ತ್ಯ ಕೊಡುತ್ತಾ, ನಮ್ಮ ಆದರ್ಶಗಳು ಹೇಗೆ  ಮರೆಯಾಗುತ್ತಿವೆ! ನಮ್ಮ ಜೀವನದ ಅಗತ್ಯಗಳು ಹೆಚ್ಚುತ್ತಾ ಹೆಚ್ಚುತ್ತಾ,  ಸುಖಭೋಗಗಳು ಹೆಚ್ಚಿನ ಪ್ರಾಶಸ್ತ್ಯ ಗಳಿಸುತ್ತಾ ಮನುಷ್ಯಜೀವನದ ಎಲ್ಲಾ ಶಕ್ತಿ  ಸಾಮರ್ಥ್ಯಗಳೂ ಆ ಒಂದೇ ನಿಟ್ಟಿನಲ್ಲಿ ಒಂದು ಚಿಕ್ಕ ಉದ್ದೇಶಕ್ಕಾಗಿ  ವ್ಯಯವಾಗುತ್ತಿದೆಯಲ್ಲಾ! ವಿವೇಕಾನಂದರು ಹೇಳುತ್ತಾರೆ- ಸೃಷ್ಟಿಯಲ್ಲಿ ಅತ್ಯದ್ಭುತವಾದದ್ದೆಂದರೆ ಮನುಷ್ಯ ಜನ್ಮ. ಯಾಕೆಂದರೆ ಒಬ್ಬ ಮನುಷ್ಯನೇ  ಬುದ್ಧನಾದದ್ದು, ರಾಮನಾದದ್ದು, ಕೃಷ್ಣನಾದದ್ದು. ಸಾವಿರಾರು ವರ್ಷಗಳು ಕಳೆದರೂ ಜನರು ಅವರನ್ನು ಸ್ಮರಿಸುತ್ತಾರೆಂದರೆ ಅವರು ಆರೀತಿ ಬದುಕಿ ತೋರಿಸಿದರು.  ಅವರ ಫೋಟೊಗಳಿಗೆ ನಾವು ನಮಸ್ಕರಿಸುವುದಾದರೂ ಏಕೆ? ಅದಕ್ಕೆ ಉತ್ತರವನ್ನುವಿವೇಕಾನಂದರು ಕೊಡುತ್ತಾರೆ- ಪ್ರತಿಯೊಬ್ಬ ಮನುಷ್ಯನೂ ಹುಟ್ಟುವಾಗ  ಚೈತನ್ಯವನ್ನು ಇಟ್ಟುಕೊಂಡೇ ಹುಟ್ಟಿದ್ದಾನೆ. ಆದರೆ ಸಾಮಾನ್ಯ ಜನರು ಇದನ್ನು  ತಿಳಿಯದೆ ಅತ್ಯಂತ ಸಣ್ಣ ಉದ್ದೇಶಕ್ಕಾಗಿ ಜೀವನವನ್ನು ಸೆವೆಸಿ ಬಿಡುತ್ತಾರೆ.ಅತ್ಯಂತ ನಿಕೃಷ್ಟ ಬದುಕು ಸವೆಸಿ ಬಿಡುತ್ತಾರೆ. ಆ ಬದುಕು ಸಾರ್ಥಕತೆ ಪಡೆಯುವುದಿಲ್ಲ.  ಬದುಕಿಗೊಂದು ಉದಾತ್ತ ಧ್ಯೇಯ ವಿರಬೇಕು, ಮಕ್ಕಳ ಮುಂದೆ ಇಂತಹ ಉದಾತ್ತ ಗುರಿಗಳ ಬಗ್ಗೆ ಮಾತನಾಡಬೇಕು. ಓದಿನಲ್ಲಿ ಹೆಚ್ಚು ಅಂಕ ಗಳಿಸಬೇಕು ಎಂಬುದು ಮುಖ್ಯ ಹೌದು, ಆದರೆ ಅದಕ್ಕಿಂತಲೂ ಮುಖ್ಯ ಜೀವನದಲ್ಲಿ ಉದಾತ್ತವಾಗಿ  ಬಾಳುವುದು. ಉನ್ನತ ಆದರ್ಶಗಳಿಗಾಗಿ ಬದುಕುವುದನ್ನು ಮಕ್ಕಳಿಗೆ ಕಲಿಸಬೇಕು.
ಚಿಕ್ಕಂದಿನಲ್ಲಿ ಮಕ್ಕಳಿಗೆ ನಾವು ಏನು ಕೊಡುತ್ತೇವೋ ಮಕ್ಕಳು ಅದೇ ಆಗುತ್ತಾರೆ:
 ಪುರಾಣದಲ್ಲಿ ಒಂದು ಕಥೆ ಇದೆ. ಮದಾಲಸೆ ಎಂಬ ರಾಣಿ ಇದ್ದಳು. ಅವಳು ಎಂತಹಾ ಮಹಾನ್ ಜ್ಞಾನಿಯಾಗಿದ್ದಳೆಂದರೆ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ  ತೂಗುವಾಗ ಜೋಗುಳ ಹಾಡುತ್ತಿದುದಾದರೂ ಏನು- ಮಗು ನೀನು ಆತ್ಮ ಸ್ವರೂಪಿ, ಮಗೂ ನೀನು ದುರ್ಬಲನಲ್ಲ.ಮಗೂ ನಿನ್ನ ಜೀವನ ಸಾರ್ಥಕ ವಾಗಬೇಕು, ನೀನು ಏನಾದರೂ ಸಾಧಿಸಬೇಕು, ನೀನು ದುರ್ಬಲನಾಗಿ ಅಳುತ್ತಾ ಅಳುತ್ತಾ ಜೀವನ   ಕಳೆಯಬೇಡ.ನೀನು ಧೈರ್ಯಶಾಲಿಯಾಗು,ನೀನು ಶಕ್ತಿಶಾಲಿಯಾಗು,ನಿನ್ನ ನಿಜ  ಸ್ವರೂಪವನ್ನು ನೀನು ಕಂಡುಕೋ, ಹೀಗೆ ತೊಟ್ಟಿಲು ತೂಗುತ್ತಾ ತೂಗುತ್ತಾ ಬೆಳಸಿದ ನಾಲ್ಕು ಮಕ್ಕಳು ದೊಡ್ದವರಾದಾಗ ಯೋಗಿಗಳಾಗಿ ಬಿಡುತ್ತಾರೆ. ಇನ್ನು ಹೀಗೆಯೇ ಆಗಿ ಬಿಟ್ಟರೆ ರಾಜನ ವಂಶ ಬೆಳೆಯುವುದಾದರೂ ಹೇಗೆಂದು ಮತ್ತೊಬ್ಬ ಮಗನನ್ನು ರಾಜನು ಇವಳಿಂದ ಬೇರೆಯೇ ಬೆಳೆಸುತ್ತಾನೆ. ಈಕಥೆಯ ನೀತಿಯಾದರೂ ಏನು? ನಮ್ಮ ಮಕ್ಕಳೆಲ್ಲಾ ಯೋಗಿಳಾಗಬೇಕಿಲ್ಲ. ಆದರೆ ಆ ಮಹಾತಾಯಿ ಚಿಕ್ಕಂದಿನಲ್ಲಿ   ಮಕ್ಕಳ ಕಿವಿಯಲ್ಲಿ ಶ್ರೇಷ್ಟ ವಿಚಾರಗಳನ್ನೇ ತಿಳಿಸಿದ್ದರಿಂದ ಮಕ್ಕಳು ಶ್ರೇಷ್ಟವಾದ ಆದರ್ಶವನ್ನು ಕಣ್ಮುಂದೆ ಇಟ್ಟುಕೊಂಡು ಬೆಳೆದರು. ಅಂದರೆ ಚಿಕ್ಕಂದಿನಲ್ಲಿ ಮಕ್ಕಳಿಗೆ ನಾವು ಏನು ಕೊಡುತ್ತೇವೋ ಮಕ್ಕಳು ಅದೇ ಆಗುತ್ತಾರೆ.ಆದ್ದರಿಂದ ನಾವು ಪ್ರತಿನಿತ್ಯ ನಮ್ಮ ಮಕ್ಕಳಿಗೆ ಯಾವ ವಿಚಾರವನ್ನು ಹೇಳುತ್ತೇವೆ, ನಮ್ಮ ದೇಶದಲ್ಲಿ ಆಗಿಹೋದ ಮಹಾಪುರುಷರ ಜೀವನದ ಸ್ಪೂರ್ತಿದಾಯಕ ಘಟನೆಗಳನ್ನು ತಿಳಿಸುತ್ತೀವಾ? ಮಕ್ಕಳು ಯಾರಂತೆ ಬೆಳೆಯಬೇಕೆಂದು ಅವರಿಗೆ ಮನಮುಟ್ಟುವಂತೆ   ಹೇಳುತ್ತೇವಾ? ರಾಮಕೃಷ್ಣಪರಮಹಂಸರ ತಂದೆಯವರ ಒಂದು ಉದಾಹರಣೆ - ಕಲ್ಕತ್ತಾ ಸಮೀಪ ದೇರಾ ಎಂಬ ಎಂಬ ಒಂದು ಹಳ್ಳಿ ಅಲ್ಲಿ ಕ್ಷುದೀರಾಮ   ಚಟ್ಟೋಪಾಧ್ಯಾಯ ಎಂಬ ಬ್ರಾಹ್ಮಣ ನೆಲಸಿರುತ್ತಾರೆ. ಬಹಳ ಪ್ರಾಮಾಣಿಕವಾದ ಜೀವನ.ಶ್ರೇಷ್ಠವಾದ ಆದರ್ಶಗಳಿಂದ ಊರಿನಲ್ಲಿ ಜನಪ್ರಿಯರು.ಬಡತನವಿದ್ದರೂ   ಸತ್ಯವಾದಿ. ಆದಿನಗಳಲ್ಲಿ ಇವರ ಸನ್ನಡತೆಯಿಂದ ಊರಿನ ಎಲ್ಲರ ಗೌರವಕ್ಕೆ   ಪಾತ್ರರು. ಅದೇ ಊರಿನಲ್ಲಿ ಒಬ್ಬ ಜಮೀನ್ದಾರ. ಮಹಾ ವಂಚಕ. ಊರಿನಲ್ಲಿರುವ  ಎಲ್ಲರ ಆಸ್ತಿಯ ಮೇಲೆ ಇವನ ಕಣ್ಣು. ಆಸ್ತಿಯ ವ್ಯಾಜ್ಯ ಒಂದಕ್ಕೆ ಇವನಿಗೆ ಸುಳ್ಳು   ಸಾಕ್ಷಿ ಹೇಳುವವರು ಬೇಕಾಗುತ್ತಾರೆ. ಚಟ್ಟೋಪಾಧ್ಯರು ಸಾಕ್ಷಿ ಹೇಳಿಬಿಟ್ಟರೆ   ಕೇಸಿನಲ್ಲಿ ಇವನ ಗೆಲವು ಗ್ಯಾರಂಟಿ ಎಂದು ತಿಳಿದು ಜಮೀನ್ದಾರನು ಇವರಲ್ಲಿಗೆ   ಬರುತ್ತಾನೆ. ಚಟ್ಟೋಪಾಧ್ಯಾಯರಿಗೆ ಬೆದರಿಕೆ ಒಡ್ಡುತ್ತಾನೆ. ನೀವು ನನ್ನ ಪರವಾಗಿ ಸಾಕ್ಷಿ ಹೇಳಲೇ ಬೇಕು, ಇಲ್ಲದಿದ್ದರೆ ನೀವು ಈ ಊರಿನಲ್ಲಿರಲಾರಿರಿ, ನನ್ನ ಪರವಾಗಿ ಸಾಕ್ಷಿ ಹೇಳಿದರೆ ನಿಮಗೆ ಬೇಕಾದ್ದು ಕೊಡುತ್ತೇನೆ ಚಟ್ಟೋಪಾಧ್ಯಾಯರು   ಜಮೀನ್ದಾರನ ಆಸೆಗೂ ಬಲಿಯಾಗಲಿಲ್ಲ, ಬೆದರಿಕೆಗೂ ಬಗ್ಗಲಿಲ್ಲ.ಕಡೆಗೆ ರಾಮಕೃಷ್ಣಪರಮಹಂಸರ ತಂದೆಯವರು ಆ ಹಳ್ಳಿಯನ್ನು ತೊರೆಯ ಬೇಕಾಗುತ್ತದೆ. ರಾಮಕೃಷ್ಣ ಪರಮಹಂಸರು ಅಷ್ಟು ದೊಡ್ಡ ವ್ಯಕ್ತಿಯಾಗಿ ಬೆಳೆಯಲು ತಂದೆಯ ಸತ್ಯನಿಷ್ಟ   ಜೀವನ, ಆದರ್ಶದ ಬದುಕು ಕಾರಣ ವಾಗುತ್ತದೆ. ಆದ್ದರಿಂದ ಮಕ್ಕಳು ಒಂದು   ಉತ್ತಮವಾದ ದಾರಿಯಲ್ಲಿ ಬೆಳೆಯಬೇಕೆಂದರೆ ನಾವು ಉತ್ತಮ ಹಾದಿಯಲ್ಲಿ   ನಡೆಯುತ್ತಿದ್ದೀವಾ? ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮ ಪ್ರತಿಯೊಂದು ನಡೆಯನ್ನೂ ಮಕ್ಕಳು ಗಮನಿಸುತ್ತಿರುತ್ತಾರೆಂಬುದು ನಮಗೆ ತಿಳಿದಿರಬೇಕ.
ಸತ್ಯಕ್ಕೆ ಅಪಚಾರ ವಾಗುವುದನ್ನು ಎಂದೂ ಸಹಿಸಬೇಡ:           
     ವಿವೇಕಾನಂದರ ಬಾಲ್ಯದ ಒಂದು ಘಟನೆ. ನರೇಂದ್ರನನ್ನು ಶಾಲೆಯಲ್ಲಿ ಮೇಸ್ಟ್ರು ಯಾವುದೋ ಒಂದು ಪ್ರಶ್ನೆ ಕೇಳುತ್ತಾರೆ. ನರೇಂದ್ರ ಬುದ್ದಿವಂತ. ಸರಿಯಾದ ಉತ್ತರ ಕೊಟ್ಟಿರುತ್ತಾನೆ. ಮೇಸ್ಟ್ರು ಅದನ್ನು ಒಪ್ಪದೆ ತಪ್ಪು ಎಂದು ಹೇಳುತ್ತಾರೆ. ನರೆಂದ್ರನಿಗೆ ಅದು ಸರಿ ಎಂದು ನೂರಕ್ಕೆ ಇನ್ನೂರರಷ್ಟು ಗೊತ್ತು. ಆದರೂ ಮೇಸ್ಟ್ರು ಸರಿಯಿಲ್ಲವೆಂದು ಹೇಳುತ್ತಾರೆ. ಇವನು ಮತ್ತೊಮ್ಮೆ ಹೇಳುತ್ತಾನೆ. ನನ್ನ ಉತ್ತರ ಸರಿಯಿದೆ ಎಂದು. ಮೇಸ್ಟ್ರಿಗೆ ಸಿಟ್ಟು ಬರುತ್ತೆ. ಬಲವಾಗಿ ಹೊಡೆಯುತ್ತಾರೆ. ಅಳುತ್ತಾ ಬಾಲಕ ನರೇಂದ್ರ ಮನೆಗೆ ಬರುತ್ತಾನೆ. ಅಮ್ಮ ಭುವನೇಶ್ವರಿ ಎಲ್ಲಾ ಕೇಳಿ ತಿಳಿದುಕೊಳ್ಳುತ್ತಾಳೆ. ಮಗುವಿಗೆ ಹೇಳುತ್ತಾಳೆ ಮಗು ನೀನು ಸರಿಯಾಗಿಯೇ ಹೇಳಿದ್ದೀಯ ನೀನು ಯಾವಾಗಲೂ ಸುಳ್ಳನ್ನು ಒಪ್ಪಿಕೊಳ್ಳಬೇಡ. ಸುಳ್ಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಡ.ಪ್ರಾಣ ಹೋದರೂ ಚಿಂತೆಯಿಲ್ಲ. ಸುಳ್ಳಿಗೆ ಶರಣಾಗ ಬೇಡ. ನರೆಂದ್ರನ ಕೈಯ ಮೇಲಿನ ಬಾಸುಂಡೆ ನೋಡಿದ ತಾಯಿ ಮಗು ನೀನು ಒಂದು ಸತ್ಯದ ಮಾತಿಗಾಗಿ ಏಟು ತಿನ್ನುವ ಬದಲು ಮೇಸ್ಟ್ರು ಹೇಳಿದ್ದನ್ನೇ ಒಪ್ಪಿ ಕೊಂಡು ಏಟು ತಪ್ಪಿಸಿಕೊಳ್ಳಬಹುದಿತ್ತು- ಎಂದು ಹೇಳಬಹುದಿತ್ತು, ಆದರೆ ಆ ಮಹಾತಾಯಿ ಹಾಗೆ ಮಾಡಲಿಲ್ಲ. ಸತ್ಯಕ್ಕೆ ಅಪಚಾರ ವಾಗುವುದನ್ನು ಎಂದೂ ಸಹಿಸಬೇಡವೆಂದು ಬಾಲ್ಯದಲ್ಲಿಯೇ ತಾಯಿಯು ಕಲಿಸಿದ್ದರಿಂದ ಒಬ್ಬ ಸತ್ಯವಾದಿ ವಿವೇಕಾನಂದನಾಗಿ ನರೇಂದ್ರನು ಬೆಳೆಯುತ್ತಾನೆ. ಕಷ್ಟವನ್ನು ತಪ್ಪಿಸಿಕೊಳ್ಳುವುದಕ್ಕೆ ದಾರಿಯನ್ನು ಸ್ವಲ್ಪ ಬದಲಿಸಿ ಸುಗುಮಗೊಳಿಸಲು ಆ ತಾಯಿ ಹೇಳಿಕೊಡಲಿಲ್ಲ.ನೇರವಾದ ದಾರಿಯಲ್ಲಿ ಕಲ್ಲುಮುಳ್ಳು ಇರುತ್ತೆ ಎಂದು ಸ್ವಲ್ಪ ಸುಗುಮವಾದ ದಾರಿ ಹಿಡಿಯೋಣವೆಂದು ಆ ತಾಯಿ ಹೇಳಿಕೊಡಲಿಲ್ಲ.ಮುಂದೆ ವಿವೇಕಾನಂದರು ಹೇಳಿಕೊಳ್ಳುತ್ತಾರೆ ಇವತ್ತು ನಾನು ಏನಾಗಿದ್ದರೂ ಅದಕ್ಕೆ ನನ್ನ ತಾಯಿ ಕಾರಣ ವೆಂದು.
ಇತಿಹಾಸ ನಿರ್ಮಾಣ ಮಾಡುವವರು ನಾವೇ ಏಕಾಗಬಾರದು?: 
     ಸ್ವಾತಂತ್ರ್ಯ ಪೂರ್ವದಲ್ಲಿ ಇಪ್ಪತ್ತು ದಾಟಿರದ ಯುವಕರು ನಗುನಗುತ್ತಾ   ನೇಣುಗಂಬವನ್ನು ಏರಿದ್ದು ಇತಿಹಾಸ ವಾದರೆ ಇಂದಿನ ನಮ್ಮ ಮಕ್ಕಳ ಕಥೆ ಏನು? ಪರೀಕ್ಷೆಯಲ್ಲಿ ಮೊದಲ ಖಂಓಏ ಬದಲು ನಾಲ್ಕನೇ ಖಂಓಏ ಬಂದರೆ ಮಕ್ಕಳು ಆತ್ಮಹತ್ಯೆಗೆ ಶರಣಾಗುವುದನ್ನು ನಾವು ಕಾಣುತ್ತೇವೆ? ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವೇ ಇಲ್ಲ. ಮಕ್ಕಳ ಆತ್ಮ ಶಕ್ತಿಯನ್ನು ಜಾಗೃತ ಗೊಳಿಸಬೇಡವೇ? ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ನಾವು ಎಡವಿದ್ದೆಲ್ಲಿ? ಪ್ರಶ್ನೆ ಹಾಕಿಕೊಳ್ಳ   ಬೇಡವೇ? ನಾವು ಈಗಲಾದರೂ ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದಾರಿ  ಕಂಡುಕೊಳ್ಳಬೇಡವೇ? ಎಲ್ಲರೂ ಯಾವುದೋ ದಾರಿಯಲ್ಲಿ ಹೋಗುತ್ತಿದ್ದಾರೆಂದರೆ ನಾವೂ ಅದೇ ದಾರಿಯಲ್ಲಿ ಹೋಗಬೇಕೆ? ನಾವು ಕುರಿಮಂದೆಯಲ್ಲಾ! ಅಲ್ಲವೇ? ನಾವು ಜೀವನವನ್ನು ಹೇಗೆಂದರೆ ಹಾಗೆ ತೆಗೆದುಕೊಳ್ಳ ಬಾರದು.ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲವೂ ಹಳ್ಳಕ್ಕೆ ಬೀಳುತ್ತವೆ. ಕುರಿಗೂ ನಮಗೂ ವ್ಯತ್ಯಾಸ ಬೇಡವೇ? ಯಾವುದೋ ಭ್ರಮೆಯಲ್ಲಿ ನಾವು ಬದುಕುತ್ತಿದ್ದೇವೆ. ನಮಗೆ   ವಿದ್ಯಾಭ್ಯಾಸ ಇರಬಹುದು ಆದರೆ ಸ್ವತಂತ್ರವಾದ ಆಲೋಚನೆಯನ್ನು   ಕಳೆದುಕೊಂಡುಬಿಟ್ಟಿದ್ದೇವೆ. ನಮಗೆ ಪ್ರತಿಕ್ರಿಯಿಸುವ ಶಕ್ತಿಯೇ ಇಲ್ಲವಾಗಿದೆ. ಸಮಾಜದಲ್ಲಿರುವ ದೀನ ದರಿದ್ರರ ಸ್ಥಿತಿಗತಿ ನಮಗೆ ಅರ್ಥವಾಗುವುದೇ ಇಲ್ಲ. ನಮ್ಮ ಈ ಸಂಪತ್ತಿಗೆ, ನಮ್ಮ ವಿದ್ಯೆಗೆ ಸಮಾಜದ ಎಷ್ಟು ಜನರ ಕೊಡುಗೆ ಇದೆ ಎಂಬ ಅರಿವು ನಮಗಿದೆಯೇ? ಹಳ್ಳಿಯ ರೈತ ಬೆಳೆಯದಿದ್ದರೆ ನಗರದಲ್ಲಿರುವವರು ಹಣ ಇಟ್ಟುಕೊಂಡು ಏನು ಮಾಡಲು ಸಾಧ್ಯ? ಮನೆಯ ಮುಂದಿನ ಕಸವನ್ನು ಜಾಡಮಾಲಿ ಬಂದು ಗುಡಿಸದಿದ್ದರೆ ನಮ್ಮ ನಗರ ಕೊಳೆತು ನಾರುವುದಿಲ್ಲವೇ? ಹಾಗಾದರೆ ಯಾರಿಗೆ ಮಹತ್ವ ಕೊಡಬೇಕು? ನಾವು ಕೊಡುತ್ತಿದ್ದೇವೆಯೇ?   ಎಲ್ಲರಂತಾಗುವುದರಲ್ಲೇನೂ ಅತಿಶಯವಿಲ್ಲ. ಬೇರೆಯದಾಗಿಯೇ ಚಿಂತನೆ ನಡೆಸಿ.ವಿವೇಕಾನಂದರು ಹೇಳುತ್ತಾರೆ. ಇತಿಹಾಸ ನಿರ್ಮಾಣ ಮಾಡುವವರು ಯಾರೋ ಕೆಲವರೇ ಹೌದು, ಆ ಕೆಲವರು ನಾವೇ ಏಕಾಗಬಾರದು? ಆ ಕೆಲವರು ನಮ್ಮ   ಮಕ್ಕಳೇ ಏಕಾಗಬಾರದು? ಎಂಬ ಪ್ರಶ್ನೆ ಮಾಡಿಕೊಳ್ಳಬೇಕು.
ಮಕ್ಕಳಿಗೆ ಕಷ್ಟ ದು:ಖಗಳ ಅರಿವು ಮೂಡಿಸಿ :
     ನಮ್ಮ ಮಕ್ಕಳು ಹಾಗೆ ವಿಶೇಷ ವ್ಯಕ್ತಿತ್ವ ಉಳ್ಳ ಪ್ರಜೆಗಳಾಗಿ ಬೆಳೆಯಬೇಕಾದರೆ ಅವರನ್ನು ಹೇಗೆ ಬೆಳೆಸಬೇಕು? ಅದರಲ್ಲಿ ನಮ್ಮ ಹೊಣೆ ಏನು? ನಾವು ಚಿಂತಿಸಬೇಕಾಗುತ್ತದೆ. ನಮ್ಮ ಮಕ್ಕಳು ವಿಶೇಷವಾಗಿ ಬೆಳೆಯ ಬೇಕಾದರೆ ಆ ನಿಟ್ಟಿನಲ್ಲಿ ನಾವು ಅವರನ್ನು ಬೆಳೆಸಬೇಕಾಗುತ್ತದೆ.ಈಗಿನ ಮಕ್ಕಳನ್ನು ಗಮನಿಸಿದಾಗ ಅವರಲ್ಲಿ ಮನೋಸ್ಥೈರ್ಯ ಕಡಿಮೆ ಇರುವುದನ್ನು ನಾವು ಕಾಣುತ್ತೇವೆ. ಮಕ್ಕಳ ಮನೋದೌರ್ಬಲ್ಯಕ್ಕೆ ಕಾರಣ ಕಂಡುಕೊಂಡಿದ್ದೀವಾ? ನಿಜವಾಗಿ ಮಕ್ಕಳಿಗೆ ಕಷ್ಟದ ಪರಿಕಲ್ಪನೆಯೇ ಇಲ್ಲ. ಅವರಿಗೆ ಕಷ್ಟವೆಂದರೇನು- ಅದರ ಅರಿವಿಲ್ಲ. ಅವರಿಗೆ ಕಷ್ಟದ ಅರಿವಾಗದಂತೆ ಸುಖದಲ್ಲಿ ಬೆಳೆಸಿದ್ದೇವೆ. ನಮ್ಮ ಚಿಂತನೆ ಹೇಗಿದೆ ಎಂದರೆ ಮಕ್ಕಳು ಬಯಸಿದ್ದನ್ನೆಲ್ಲಾ ನಾವು ಅವರಿಗೆ ಒದಗಿಸಿ ಕೊಟ್ಟರೆ ನಮ್ಮ ಮಕ್ಕಳು ಚೆನ್ನಾಗಿ ಓದುತ್ತಾರೆ, ಅದಕ್ಕಾಗಿ ನಾವು ಶಾಲೆಯನ್ನು ಹುಡುಕುತ್ತೇವೆ, ಯಾವ ಶಾಲೆಯಲ್ಲಿ ಸೌಕರ್ಯಗಳು ಹೆಚ್ಚಿದೆ,ಯಾವ ಶಾಲೆಯಲ್ಲಿ ಕಟ್ಟಡ ಚೆನ್ನಾಗಿದೆ,ಯಾವ ಶಾಲೆಗಳಿಗೆ ಶ್ರೀಮಂತ ಮಕ್ಕಳೇ ಹೋಗುತ್ತಾರೆ,ಯಾವ ಶಾಲೆಯಲ್ಲಿ ಅತಿ ಹೆಚ್ಚು ಫೀಸು ವಸೂಲು ಮಾಡುತ್ತಾರೋ ಅಂತಹ ಶಾಲೆಯನ್ನು ಹುಡುಕಿ ಸೇರಿಸುತ್ತೇವೆ. ನಾವಂತೂ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟಿದ್ದಾಯ್ತು, ಯಾವ ಅನುಕೂಲಗಳಿಲ್ಲದೆ ಬೆಳೆದಿದ್ದಾಯ್ತು ನಮ್ಮ ಮಕ್ಕಳಾದರೂ ಸುಖವಾಗಿರಲೆಂದು   ನಮ್ಮ ಮಕ್ಕಳಿಗೆ ಕಷ್ಟದ ಸೋಂಕೂ ಬಾರದಂತೆ ಬೆಳೆಸುತ್ತೇವೆ, ಪರಿಣಾಮ ಏನಾಗುತ್ತದೆಂದರೆ ದೊಡ್ಡವನಾದಾಗ ಅವನಿಗೆ ಒಂದು ಚಿಕ್ಕ ಕಷ್ಟ ಬಂದರೂ ತತ್ತರಿಸಿ ಹೋಗುತ್ತಾನೆ. ಅವನಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಆತ್ಮಸ್ಥೈರ್ಯವಿಲ್ಲ. ಹಾಗಾದರೆ ಮಕ್ಕಳನ್ನು ಹೇಗೆ ಬೆಳೆಸಬೇಕು?
ಪೋಷಕರು ಕೆಲವು ಕಟ್ಟುಪಾಡುಗಳನ್ನು ಹಾಕಿಕೊಳ್ಳಬೇಕು, 
     ನಿಮ್ಮಲ್ಲಿ ಈಗ ಸಾಕಷ್ಟು ಸಾಮರ್ಥ್ಯವಿರಬಹುದು, ನಿಮ್ಮ ಸಂಪತ್ತಿನಿಂದ ಮಕ್ಕಳಿಗೆ ನೀವು ಏನು ಬೇಕಾದರೂ ಪೂರೈಸಬಹುದು, ಆದರೂ ಮಕ್ಕಳಿಗೆ ನೀವು ಹೆಚ್ಚು ಹೆಚ್ಚು ಸೌಕರ್ಯಗಳನ್ನು ಒದಗಿಸಿದಾಗಲೂ ನೀವು ಅವರನ್ನು ಹೆಚ್ಚು ಹೆಚ್ಚು ದುರ್ಬಲರನ್ನಾಗಿ ಮಾಡುತ್ತಿದ್ದೀರೆಂಬುದನ್ನು ನೀವು ಮರೆಯಬಾರದು, ಅವರು ಮಕ್ಕಳಾಗಿದ್ದಾಗ ನೀವೇನೋ ಎಲ್ಲವನ್ನೂ ಪೂರೈಸಿ ಬಿಡುವಿರಿ, ಆದರೆ ಅವನು ದೊಡ್ದವನಾದಾಗ ಯಾವ ಕಷ್ಟಗಳೂ ಎದುರಾಗಬಹುದು,ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ  ಸುಖ- ದು:ಖಗಳೆಂಬುದು ಬಂದು ಹೋಗುವಂತಹ ಸಾಮಾನ್ಯ ಸಂಗತಿಗಳೆಂಬುದು ನಮಗೆ ತಿಳಿದಿರಬೇಕು.ಅದನ್ನು ಮಕ್ಕಳಿಗೆ ಕಲಿಸಿ ಕೊಡಬೇಡವೇ? ಬಾಲ್ಯದಲ್ಲಿ ಕಷ್ಟವನ್ನೇ ಅರಿಯದವನು ಮುಂದೆ ಬೆಳೆದು ದೊಡ್ದವನಾದಾಗ ಒಂದು ಚಿಕ್ಕ ಕಷ್ಟ ಎದುರಾದರೂ ಕುಸಿದು ಹೋಗುತ್ತಾನೆ.ಆದ್ದರಿಂದ ಚಿಕ್ಕಂದಿನಿಂದಲೇ ಮನಸ್ಸನ್ನು ಗಟ್ಟಿಗೊಳಿಸಬೇಕಿದೆ. ನಿಮ್ಮಲ್ಲಿ ಕೊಡುವ ಶಕ್ತಿ ಇದ್ದರೂ ಕೂಡ ಸ್ವಲ್ಪ ಮಟ್ಟಿಗೆ ನಿರಾಕರಿಸಿ, ನಾವು ಬಯಸಿದ್ದೆಲ್ಲಾ ಎಲ್ಲಾ ಕಾಲಕ್ಕೂ ಸಿಗುವುದಿಲ್ಲವೆಂಬ ನಿಜದ ಅರಿವನ್ನು ನಿಮ್ಮ ಮಕ್ಕಳಿಗೆ ಮಾಡಿ. ಸಮಾಜದಲ್ಲಿ ಸ್ಥಿತಿವಂತರು ಮಾತ್ರವೇ ಇಲ್ಲ, ದೀನ-ದರಿದ್ರರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿದೆ. ಅವರ ಕಷ್ಟದ ಜೀವನದ ದೃಶ್ಯವನ್ನು ನಿಮ್ಮ ಮಕ್ಕಳಿಗೆ ಪರಿಚಯಿಸಿ.ದುರ್ಬಲರ ಬಗ್ಗೆ ಪ್ರೀತಿ, ಕರುಣೆ, ಸಹಾಯ ಹಸ್ತ ನೀಡುವುದನ್ನು ಕಲಿಸಿ, ಮುಖ್ಯವಾಗಿ ಸರಳ ಬದುಕನ್ನು ಕಲಿಸಿ.
ಮನಸ್ಸನ್ನು ಗಟ್ಟಿಗೊಳಿಸಿ:
    ಬೆಳವಣಿಗೆಯ ಮುಖ್ಯ ಅಂಶವೆಂದರೆ ಮನಸ್ಸನ್ನು ಗಟ್ಟಿಗೊಳಿಸುವುದು. ಸಾಮಾನ್ಯವಾಗಿ ನಾವೆಲ್ಲಾ ಶರೀರಕ್ಕೆ ಗಮನ ಕೊಡುತ್ತೇವೆ. ಶರೀರ ಗಟ್ಟಿಯಾಗಲು ಅಗತ್ಯವಾದ ಒಳ್ಳೆಯ ಆಹಾರ, ವಿಟಮಿನ್ ಗಳನ್ನು ಮಕ್ಕಳಿಗೆ ಕೊಡುತ್ತೇವೆ. ಆದರೆ ಮನಸ್ಸು ಗಟ್ಟಿಯಾಗಲು ಏನು ಕೊಡುತ್ತೇವೆ? ಹಿಂದಿನ ನಮ್ಮ ಪರಂಪರೆಯಲ್ಲಿ ಮಕ್ಕಳ ಮನಸ್ಸನ್ನು ಗಟ್ಟಿ ಮಾಡಲು ತುಂಬಾ ಗಮನ ಕೊಡುತ್ತಿದ್ದರು. ರಾಜನೂ ಕೂಡ ತನ್ನ ಮಕ್ಕಳನ್ನು ಕಾಡಿನಲ್ಲಿದ್ದ ಗುರುಕುಲಕ್ಕೆಕಳಿಸುತ್ತಿದ್ದ. ಗುರುಕುಲದಲ್ಲಿ ಅತ್ಯಂತ ದೈಹಿಕ ಶ್ರಮದ ಕೆಲಸವನ್ನು ಮಾಡಬೇಕಿತ್ತು, ಹಸುಗಳ ಮೈ ತೊಳೆಯಬೇಕಿತ್ತು, ಕಾಡಿನಲ್ಲಿ ಅಲೆದು ಸಮಿತ್ತು ತರಬೇಕಿತ್ತು, ಅವನು ಯುವರಾಜನಾದರೂ ಕೂಡ ಗುರುವಿನ ಸೇವೆ ಮಾಡಲೇ ಬೇಕಿತ್ತು,ಇತರ ಮಕ್ಕಳೊಂದಿಗೆ ಸರಿಸಮಾನವಾಗಿ ಬದುಕ ಬೇಕಿತ್ತು,ಮಕ್ಕಳೆಲ್ಲಾ ಕೃಷಿಯ ಕೆಲಸ ಮಾಡಬೇಕಿತ್ತು, ಹೀಗೆ ಎಲ್ಲಾ ಬಗೆಯ ಕೆಲಸಗಳನ್ನು ಎಲ್ಲಾ ಮಕ್ಕಳೂ ಮಾಡುತ್ತಾ ಮಾಡುತ್ತಾ, ಕಷ್ಟ ಸುಖಗಳನ್ನು ಒಟ್ಟಾಗಿ ಎದುರಿಸುತ್ತಾ ಎದುರಿಸುತ್ತಾ ಗಟ್ಟಿಯಾಗುತ್ತಿದ್ದರು. ತನ್ಮೂಲಕ ಅವರು ದೊಡ್ದವರಾಗಿ ಬೆಳೆದಾಗ ಕಷ್ಟ ಬರಲಿ ಸುಖವಿರಲಿ ಒಂದೇ ರೀತಿಯಲ್ಲಿ ಎದುರಿಸಲು ಸಮರ್ಥರಾಗುತ್ತಿದ್ದರು.ಜೀವನದಲ್ಲಿ ಕಷ್ಟ ಬಂದೇ ಬರುತ್ತದೆ, ಆದರೆ ಕಷ್ಟ ಬಂದಾಗ ಧೈರ್ಯ ಗುಂದದೆ ಎದುರಿಸುತ್ತಿದ್ದರು.ಕಷ್ಟ ಬಂದಾಗ,ದು:ಖ ಬಂದಾಗ ಅದಕ್ಕೆ ಹೆದರದೆ ಧೈರ್ಯ ಗುಂದದೆ ಎದುರಿಸಿ ನಿಂತಾಗ ಅದು ತಾನೇ ತಾನಾಗಿ ಪಲಾಯನ ಮಾಡುತ್ತದೆ.
ಹೆದರಿ ಪಲಾಯನ ಮಾಡಬೇಡ, ಎದುರಿಸು:
     ವಿವೇಕಾನಂದರ ಜೀವನದಲ್ಲಿನ ಒಂದು ಘಟನೆ. ಕಾಶಿಯಲ್ಲಿ ರಸ್ತೆಯಲ್ಲಿ ನಡೆದು ಹೋಗುವಾಗ ಒಂದು ಕೋತಿಗಳ ಹಿಂಡು ವಿವೇಕಾನಂದರನ್ನು ಅಟ್ಟಿಸಿಕೊಂಡು ಬರುತ್ತವೆ, ವಿವೇಕಾನಂದರು ರಸ್ತೆಯಲ್ಲಿ ಓಡಿ ಹೋಗುತ್ತಿರುತ್ತಾರೆ, ಕೋತಿಗಳು   ಅಟ್ಟಿಸಿಕೊಂಡು ಬರುತ್ತಲೇ ಇವೆ. ಒಬ್ಬ ಸನ್ಯಾಸಿ ಎದುರಾಗುತ್ತಾನೆ.ಕೇಳುತ್ತಾನೆ ಏಕೆ ಓಡುತ್ತಿರುವೆ? ವಿವೇಕಾನಂದರು ಹೇಳುತ್ತಾರೆ- ನೋಡಿ ಅಲ್ಲಿ, ಕೋತಿಗಳ  ಹಿಂಡು ಅಟ್ಟಿಸಿಕೊಂಡು ಬರುತ್ತಿವೆ. ಸನ್ಯಾಸಿ ಹೇಳುತ್ತಾನೆ- ನಿಲ್ಲು, ಹೆದರಿ   ಪಲಾಯನ ಮಾಡಬೇಡ, ಎದುರಿಸು. ವಿವೇಕಾನಂದರು ಕೋತಿಯ ಹಿಂಡಿನ ಎದುರು ನಿಲ್ಲುತ್ತಾರೆ. ಅವರ ಧೀರ-ಗಂಭೀರ ನಿಲುವನ್ನು ಕಂಡ ಕೋತಿಗಳು ಹಿಂದಿರುಗಿ ಓಡುತ್ತವೆ. ಈ ಘಟನೆಯನ್ನು ವಿವೇಕಾನಂದರು ತಮ್ಮ ಶಿಷ್ಯರಿಗೆ   ಹೇಳುತ್ತಿರುತ್ತಾರೆ. ಜೀವನದಲ್ಲಿ ಕಷ್ಟಗಳು ಬಂದಾಗ, ದು:ಖ ಬಂದಾಗ ಹೆದರಿ ಪಲಾಯನ ಮಾಡದಿರಿ, ಎದುರಿಸಿ ಮೆಟ್ಟಿನಿಲ್ಲಿ, ಕಷ್ಟಗಳು ನಿಮಗರಿವಿಲ್ಲದಂತೆ ಕರಗಿ ಹೋಗುತ್ತವೆ. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮೊಳಗಿದೆ ಎಂಬುದನ್ನು ನಾವು ತಿಳಿಯ ಬೇಕು,ಕಷ್ಟಗಳು ಬರಲೇ ಬಾರದೆನ್ನಬೇಡಿ, ಸರ್ವಶಕ್ತನಾದ ಪರಮೇಶ್ವರನು ನನ್ನೊಳಗೆ ಇರುವಾಗ ಬಂದ ಕಷ್ಟಗಳನ್ನು ನನ್ನ ಆತ್ಮ ಶಕ್ತಿಯಿಂದ ಎದುರಿಸುತ್ತೇನೆಂಬ ವಿಶ್ವಾಸ ತಾಳಿ, ಮಕ್ಕಳಿಗೂ ಅದನ್ನೇ ಕಲಿಸಿ. ಮಕ್ಕಳಿಗೆ ಸೋಲಿನ ಅನುಭವವನ್ನೂ ಕೂಡ ಕಲಿಸಿ.
ಸೋಲಿನ ಅನುಭವ:
     ಒಂದು ಚಿಕ್ಕ ಘಟನೆ- ಒಬ್ಬ ವಿದ್ಯಾರ್ಥಿ ಶಾಲೆಯಲ್ಲಿ ಎಲ್ಲಾ ಪರೀಕ್ಷೆಗಳಲ್ಲೂ ಮೊದಲ ಸ್ಥಾನ ಪಡೆಯುತ್ತಾ ಬಂದಿರುತ್ತಾನೆ. ಒಮ್ಮೆ ಅವನಿಗೆ ನಾಲ್ಕನೆಯ ಸ್ಥಾನ ಬಂದುಬಿಡುತ್ತೆ.ಅವನ ತಾಯಿ ನನ್ನೊಡನೆ ಹೇಳುತ್ತಾಳೆ ಮಾತಾಜಿ ನನಗೆ ತುಂಬಾ ಸಂತೋಷವಾಯ್ತು. ನನ್ನ ಮಗನಿಗೆ ಎಲ್ಲರೀತಿಯ ಅನುಭವವೂ ಆಗಬೇಕು, ಜೀವನ ಒಂದೇ ರೀತಿ ಇರುವುದಿಲ್ಲವೆಂದು ಅವನಿಗೆ ಅರಿವಾಗಬೇಕು. ಮಕ್ಕಳಿಗೆ ಜೀವನದಲ್ಲಿ ನಂಬಿಕೆ,ಶ್ರದ್ಧೆ, ಸಹನೆಗಳನ್ನು ಕಲಿಸಿಕೊಡಿ. ಮಗುವಿಗೆ ತಿಳಿಸಿ ನೀನು ಸಾಮಾನ್ಯನಲ್ಲ,ನೀನು ಅಸಾಮಾನ್ಯ, ನಮ್ಮ ದೇಶದಲ್ಲಿ ಆಗಿಹೋದ ಅನೇಕ ಮಹಾಪುರುಷರ ಜೀವನ ಚರಿತ್ರೆಯನ್ನು ಅವರಿಗೆ ತಿಳಿಸಿಕೊಟ್ಟು ನಿಮ್ಮ ಮಗುವಿಗೆ ಹೇಳಿ ನೀನು ಮಹಾಪುರುಷನಾಗಬೇಕು, ಅದಕ್ಕಾಗಿಯೇ ನಿನ್ನ ಜನ್ಮವಾಗಿದೆ ಜೀವನದಲ್ಲಿನ ಶ್ರೇಷ್ಟ ವಿಚಾರಗಳನ್ನು ಮಕ್ಕಳ ಕಿವಿಯಮೇಲೆ ನಿರಂತರ ಬೀಳುವಂತೆ ಮಾಡಿ.
ನಿಮ್ಮ ಆತ್ಮ ಪರೀಕ್ಷೆ ಮಾಡಿಕೊಳ್ಳಿ : 
     ಮಕ್ಕಳಿಗೆ ಸಂಯಮದ ಪಾಠವನ್ನು ಹೇಳುವ ಮೊದಲು ನೀವು ಸಂಯಮವನ್ನು  ಅಭ್ಯಾಸ ಮಾಡಿಕೊಳ್ಳಿ. ಮಕ್ಕಳು ಟಿವಿ ನೋಡಬಾರದೆಂದಾರೆ ನೀವು ಟಿವಿ ನೋಡುವದನ್ನು ನಿಲ್ಲಿಸಿ. ನೀವು ಟಿವಿ ನೋಡುತ್ತಾ ಮಕ್ಕಳನ್ನು ನೀನು ರೂಮಿನಲ್ಲಿ ಓದು ಎಂದು ಹೇಳಿದರೆ ಅದು ಯಾವ ನ್ಯಾಯ? ಮೊದಲು ನೀವು ಸಂಯಮ ಕಲಿತುಕೊಳ್ಳಿ.ನೀವು ಟಿವಿ ನೋಡುವುದನ್ನು ಬಿಟ್ಟರೆ ಮಕ್ಕಳೂ ಸಂತೋಷದಿಂದಲೇಬಿಡುತ್ತಾರೆ. ಒಳ್ಳೆಯ ಕಾರ್ಯಕ್ರಮ ಒಂದನ್ನು ನೀವು ಟಿವಿಯಲ್ಲಿ ನೋಡಬೇಕೆಂದರೆ ಮಕ್ಕಳನ್ನೂ ಕೂರಿಸಿಕೊಂಡು ಒಟ್ಟಿಗೇ ನೋಡಿ.ಉತ್ತಮ ಕಾರ್ಯಕ್ರಮಗಳನ್ನೇ ನೋಡಿ. ಮಕ್ಕಳಿಗೆ ಆದರ್ಶಗಳನ್ನು ಹೇಳುವ ಮುಂಚೆ ನಾವು ಜೀವನದಲ್ಲಿ ಅದನ್ನು ಅಳವಡಿಸಿ ಕೊಂಡಿದ್ದೀವಾ? ಯೋಚಿಸಿ. ಸಹನೆಯ ಮಾತನ್ನು ಮಕ್ಕಳಿಗೆ   ಹೇಳುವಾಗ ನಾವು ತಂದೆತಾಯಿ ಹೇಗಿದ್ದೇವೆಂದು ಆತ್ಮ ಪರೀಕ್ಷೆ ಮಾಡಿಕೊಳ್ಳಿ. ಮೊದಲು ಆಚರಣೆಗೆ ತಂದು ನಂತರ ಮಕ್ಕಳಿಗೆ ಹೇಳಿದಾಗ ನೀವು ಅದ್ಭುತ ಪರಿಣಾಮವನ್ನು ಕಾಣಬಲ್ಲಿರಿ ಅಪ್ಪ- ಅಮ್ಮ ಪರಸ್ಪರ ಹೇಗಿರುತ್ತಾರೆ, ಸಿಟ್ಟು   ಮಾಡುತ್ತಾರಾ? ಕೆಟ್ಟ ಮಾತನ್ನಾಡುತ್ತಾರಾ? ಮಕ್ಕಳು ನಿಮ್ಮನ್ನು ಸದಾಕಾಲ ನೋಡುತ್ತಲೇ ಇರುತ್ತಾರೆ. ಮಕ್ಕಳು ಹೇಳಿದ್ದನ್ನು ಕಲಿಯುವುದಿಲ್ಲ,ಬದಲಿಗೆ ನೋಡಿದ್ದನ್ನು ಕಲಿಯುತ್ತಾರೆ.ಅಪ್ಪ- ಅಮ್ಮ ಹೇಗೆ ಬದುಕುತ್ತಾರೆ, ಅದರಂತೆ ಮಕ್ಕಳು ಬೆಳೆಯುತ್ತಾರೆ.ನೀವು ಮನೆಯಲ್ಲಿ ಎಷ್ಟು ಪವಿತ್ರವಾತಾವರಣವನ್ನುನಿರ್ಮಿಸುತ್ತೀರಿ, ಎಷ್ಟು ಶಾಂತತೆ ಕಾಪಾಡುತ್ತೀರಿ, ಎಷ್ಟು ಆನಂದದ ವಾತಾವರಣ ನಿರ್ಮಿಸುತ್ತೀರಿ, ಅಷ್ಟು ಸುರಕ್ಷಿತವಾಗಿ ನಿಮ್ಮ ಮಕ್ಕಳು ಬೆಳೆಯುತ್ತಾರೆ. ಶಾಂತ ಸ್ವಭಾವದ ತಾಯಿ + ಪ್ರಬುದ್ಧ ತಂದೆ = ಶ್ರೇಷ್ಠ ಮಕ್ಕಳು. ಹಳ್ಳಿಗಳಲ್ಲಿ ಅನೇಕ ಮನೆಗಳಲ್ಲಿ ನಾವು  ಗಮನಿಸುತ್ತೇವೆ.ಮನೆ ತುಂಬಾಜನ. ತಾಯಿಯಾದವಳು ಹೆಚ್ಚೇನೂ ಓದಿರುವುದಿಲ್ಲ.ಶಾಂತವಾಗಿ ಎಲ್ಲರಿಗೂ ಅಡಿಗೆ ಮಾಡಿ ಪ್ರೀತಿಯಿಂದ ಉಣ ಬಡಿಸಿ, ಎಲ್ಲರಿಗೂ   ಪ್ರೀತಿಯಿಂದ ಸೇವೆ ಮಾಡುತ್ತಾ ನಂತರ ಕಟ್ಟಕಡೆಗೆ ತಾನು ಉಳಿದಿದ್ದರೆ ಊಟ ಮಾಡುತ್ತಾಳೆ.ಅಂತಹ ಶಾಂತ ವಾತಾವರಣದಲ್ಲಿ ಬೆಳೆದ ಮಕ್ಕಳು ಅದ್ಭುತ ವ್ಯಕ್ತಿತ್ವ ಪಡೆಯುತ್ತಾ ಬೆಳೆಯುತ್ತಾರೆ. ಶಾಂತ ಸ್ವಭಾವದ ತಾಯಿ, ಪ್ರಬುದ್ಧ ತಂದೆ,ಇಂತಹ ಮನೆಯಲ್ಲಿ ಬೆಳೆಯುವ ಮಕ್ಕಳು ಸಹಜವಾಗಿ ಶ್ರೇಷ್ಟರಾಗಿ ಬೆಳೆಯುತ್ತಾರೆ.ಮಕ್ಕಳು ಗಮನಿಸುತ್ತಿರುತ್ತಾರೆ. ತಂದೆತಾಯಿ ಮನೆಯಲ್ಲಿ ಮಾತನಾಡುವಾಗ ಏನು  ಮಾತಾಡ್ತಾರೆ,ದೇವರ ಕುರಿತು ಮಾತಾಡ್ತಾರಾ,ಸಮಾಜದ ಕುರಿತು ಮಾತಾಡ್ತಾರಾದೇಶದ ಕುರಿತು ಮಾತಾಡ್ತಾರಾ! ಮಕ್ಕಳ ಬೆಳವಣಿಗೆ ಬಹಳ ಸುಲಭ, ಅವರಿಗೆ  ನಾವು ಏನೂ ಹೇಳಬೇಕಾಗಿಲ್ಲ, ಅವರು ಮನೆಯಲ್ಲಿ- ಸುತ್ತಮುತ್ತ ಏನು   ನೋಡುತ್ತಾರೋ, ಏನು ಗಮನಿಸುತ್ತಾರೋ, ಅದನ್ನು ಕಲಿಯುತ್ತಾರೆ.
ಮುದ್ದಿನಜೊತೆಗೆ ಗುದ್ದು: 
     ಒಬ್ಬ ತಾಯಿ ಸ್ವಾಮೀಜಿ ಪುರುಷೋತ್ತಮಾನಂದರ ಬಳಿ ಬಂದು ಸ್ವಾಮೀಜಿಯವರನ್ನು ಕೇಳುತ್ತಾಳೆ ಸ್ವಾಮೀಜಿ ನನ್ನ ಮಗ ನನ್ನ ಮಾತನ್ನು ಕೇಳುವುದೇ ಇಲ್ಲವಲ್ಲಾ, ಏನು ಮಾಡಲಿ? ಸ್ವಾಮೀಜಿ ಹೇಳುತ್ತಾರೆ.- ಚಿಕ್ಕಂದಿನಲ್ಲಿ ನೀನು ಮಗುವನ್ನು   ಮುದ್ದುಮಾಡುವುದರ ಜೊತೆಗೆ ಗುದ್ದನ್ನೂ ಕೊಟ್ಟಿದ್ದರೆ ಇಂದು ನಿನ್ನ ಮಗ ನಿನ್ನ ಮಾತು ಕೇಳ್ತಾ ಇದ್ದ. ಆದರೆ ಒಂದು ಮಾತು ನಾವು ತಿಳಿದು ಕೊಳ್ಳ ಬೇಕು-ಸ್ವಾಮೀಜಿ ಹೇಳಿದ್ದು ಮುದ್ದಿನ ಜೊತೆಗೆ ಗುದ್ದು ಅಂದರೆ ಕೇವಲ ಮುದ್ದು ಮಾಡಿದರೂ ಸಾಲದು, ಕೇವಲ ಗುದ್ದು ಕೊಟ್ಟರೂ ಸಾಲದು. ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಹೃದಯಪೂರ್ವಕವಾಗಿ ತಾಯಿಯ ಪ್ರೀತಿ ಇದ್ದಾಗ ಮಾತ್ರ ಗುದ್ದು ಮಕ್ಕಳಲ್ಲಿ ಪರಿಣಾಮ ಉಂಟು ಮಾಡುತ್ತೆ.
ಮಕ್ಕಳನ್ನು ಬೆಳೆಸುವುದು ಒಂದು ಕಲೆಯೂ ಹೌದು, ಸವಾಲೂ ಹೌದು:
      ನಿಮ್ಮ ಮಕ್ಕಳು ಹೀಗೆ ಬೆಳೆಯ ಬೇಕು ಎಂದು ನೀವು ನಿರೀಕ್ಷಿಸುವ ಮೊದಲು ನೀವುಹಾಗಾಗಿರಬೇಕು.ಮಕ್ಕಳು ಸತ್ಯ ಹೇಳಬೇಕೆಂದರೆ ಮೊದಲು ನೀವು ಸತ್ಯವಂತರಾಗಿ,ಯಾವ ಸದ್ಗುಣಗಳನ್ನು ನೀವು ನಿಮ್ಮ ಮಕ್ಕಳಲ್ಲಿ ಅಪೇಕ್ಷಿಸುತ್ತೀರೋ ಅವುಗಳನ್ನು ಮೊದಲು ನೀವು ರೂಢಿಸಿಕೊಳ್ಳಿ. ಅತಿಯಾಗಿ ಸಿಹಿತಿನ್ನುತ್ತಿದ್ದ ಒಂದು ಮಗುವಿಗೆ ನೀನು ಅತಿಯಾಗಿ ಸಿಹಿ ತಿನ್ನ ಬೇಡ ಎಂದು ಹೇಳಲು ಶ್ರೀ ರಾಮಕೃಷ್ಣ ಪರಮಹಂಸರು ತಾವು ಮೊದಲು ಸಿಹಿ ತಿನ್ನುವುದನ್ನು ನಿಲ್ಲಿಸಿ ತಾವು ಸಿಹಿಯ ಆಸೆ ತ್ಯಜಿಸಿದ  ಮೇಲೆ ಮಗುವಿಗೆ ಮಗು, ನೀನು ಸಿಹಿ ತಿನ್ನ ಬೇಡ ಎಂದು ಹೇಳಿದ ಕಥೆ ನಮಗೆ  ಗೊತ್ತಿರ ಬೇಕು.
ಮಕ್ಕಳಲ್ಲಿ ಹೆದರಿಕೆ ಉಂಟು ಮಾಡಬೇಡಿ: 
      ಮಕ್ಕಳಲ್ಲಿ ಭಯವನ್ನು ಉಂಟು ಮಾಡಲೇ ಬೇಡಿ ಕತ್ತಲಿಗೆ ಹೋಗ ಬೇಡ,ಗುಮ್ಮ  ಹಿಡಿದುಕೊಂಡು ಬಿಡುತ್ತೆ, ಹೀಗೆ ಮಕ್ಕಳಲ್ಲಿ ಸಲ್ಲದ ಭಯವನ್ನು ಉಂಟು ಮಾಡುವ ತಾಯಂದಿರಿದ್ದಾರೆ. ಇದರಿಂದ ಮುಂದೆ ಮಕ್ಕಳು ಕಾಣದ ಜಾಗಕ್ಕೆ ಹೋಗುವಾಗ  ಭಯ ಭೀತರಾಗುತ್ತಾರೆ. ಅಪರಿಚಿತ ಜಾಗಕ್ಕೆ ಹೋಗುವ ಸಾಹಸವನ್ನೇ  ಮಾಡುವುದಿಲ್ಲ. ಬದಲಿಗೆ ಮಕ್ಕಳಿಗೆ ಹೇಳಿ ಕತ್ತಲಲ್ಲಿ ಹೋಗು,ಏನಿದೆ, ಪರೀಕ್ಷೆ ಮಾಡಿನೋಡು? ಏನೂ ಆಗುವುದಿಲ್ಲ ಹೀಗೆ ಧೈರ್ಯ ತುಂಬಿ. ಅದರಿಂದ ಮುಂದೆ ನಿಮ್ಮ ಮಗ ಸಾಹಸಿಯಾಗಿ ಬೆಳೆಯುತ್ತಾನೆ.
ಮಕ್ಕಳನ್ನು ಎಡವಲು ಬಿಡಿ: 
      ಮಕ್ಕಳು ತಪ್ಪು ಮಾಡಿದರೂ ಚಿಂತೆಯಿಲ್ಲ, ಅವರಿಗೆ ಮಾಡಲು ಬಿಡಿ. ನಡೆಯುವ ಕಾಲು ಎಡುವದಿರದು- ಎಂಬ ಮಾತಿನಂತೆ ಎಡವಿದರೂ ಪರವಾಗಿಲ್ಲ ಮುಂದೆ ನಡೆಯುವುದನ್ನು ಅವನು ಕಲಿಯುತ್ತಾನೆ ಆದ್ದರಿಂದ ಎಡವಲು ಬಿಡಿ.ಮಕ್ಕಳನ್ನು   ಸ್ವತಂತ್ರವಾಗಿ ಬೆಳೆಯಲು ಬಿಡಿ.ಮುಂದೆ ಜೀವನದಲ್ಲಿ ಎಷ್ಟು ಎಡರು ತೊಡರುಗಳು ಬರುತ್ತದೋ ಯಾರಿಗೆ ಗೊತ್ತು, ಮುಂದೆ ಅವುಗಳನ್ನೆಲ್ಲಾ ಎದುರಿಸುವಂತಾಗಲು ಈಗ ಎಡವಲು ಬಿಡಿ, ತಿದ್ದಿಕೊಂಡು ನಡೆಯುವುದನ್ನು ಕಲಿಯುತ್ತಾನೆ.
ಮಗುವಿನ ಬೆನ್ನಿನ ಮೇಲೊಂದು ಲಗ್ಗೇಜು: 
      ಸ್ವಾಮೀಜಿಯೊಬ್ಬರು ಯೂರೋಪ್ ಪ್ರವಾಸ ಮಾಡುವಾಗ ವಿಮಾನ ನಿಲ್ದಾಣದಲ್ಲಿ ತಾಯಿಯೊಬ್ಬಳು ಮಗುವಿನೊಡನೆ ಬರುತ್ತಿರುವುದನ್ನು ನೋಡುತ್ತಾರೆ. ತಾಯಿಯ ಹತ್ತಿರ ಒಂದು ಲಗ್ಗೇಜ್ ಇದೆ, ಐದು ವರ್ಷದ ಮಗುವಿನ ಬೆನ್ನಿನ ಮೇಲೂ ಒಂದು  ಪುಟ್ಟ ಬ್ಯಾಗ್ ಇದೆ. ಆ ಬ್ಯಾಗಿನಲ್ಲಿ ಆ ಮಗುವಿನ ಬಟ್ಟೆಗಳು. ತಂದೆ ಬರುತ್ತಾನೆ. ಮಗುವನ್ನು ಮುದ್ದಾಡುತ್ತಾನೆ- ಅಯ್ಯೋ ಮಗುವಿನ ಬೆನ್ನಿನಮೇಲೆ ಹೊರೆಯಿದೆಯಲ್ಲಾ!! ಎಂದು ಸಂಕಟ ಪಟ್ಟು ಬ್ಯಾಗನ್ನು ತಾನು ಪಡೆಯುವುದಿಲ್ಲ ಬದಲಿಗೆ ಅದಕ್ಕೇ ಹೊರಲು ಬಿಡುತ್ತಾನೆ. ತನ್ನ ಜೀವನದ ಜವಾಬ್ದಾರಿ ತಾನೇ ಕಲಿಯಲೆಂಬ ಉದ್ದೇಶ ಅದರ ಹಿಂದೆ ಇರುವುದನ್ನು ಆ ತಂದೆ ತಿಳಿಸುತ್ತಾನೆ. ಮಗುವಿಗೆ ಯಾವಾಗಲೂ  ನಿನಗೆ ಆಗುವುದಿಲ್ಲ, ನೀನಿನ್ನೂ ಚಿಕ್ಕವನು ಮಾಡಬೇಡ, ಹೀಗೆ ನಕಾರಾತ್ಮಕ  ಮಾತುಗಳನ್ನು ಹೇಳಲೇಬೇಡಿ.ಅದು ತಪ್ಪು ಮಾಡಿದರೂ ಚಿಂತೆಯಿಲ್ಲ ಮಾಡಲು  ಬಿಡಿ. ಹತ್ತು ಸಲ ತಪ್ಪು ಮಾಡಿದರೂ ಚಿಂತೆಯಿಲ್ಲ. ಹನ್ನೊಂದನೆಯ  ಬಾರಿಯೂ ಮಾಡಲು ಬಿಡಿ, ಉತ್ತೇಜನ ಕೊಡಿ, ಆಗ ಸರಿ ಮಾಡುತ್ತಾನೆ.
ಅಮ್ಮ ಹೇಳಿದ್ದೆಲ್ಲಾ ಸತ್ಯ: 
      ಮಕ್ಕಳು ಹೇಗೆ ಭಾವಿಸುತ್ತಾರೆಂದರೆ ಒಂದು ಸತ್ಯ ಘಟನೆಯನ್ನು ಗಮನಿಸಬೇಕು.ಆಕಾಶದಲ್ಲಿ ಮೋಡಕವಿದ ವಾತಾವರಣವಿರುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ ಮಳೆ ಬರುತ್ತೆ,ಹೊರಗೆ ಹರವಿರುವ ಬಟ್ಟೆಯನ್ನುತೆಗೆದುಕೊಂಡು ಬಾ ಎಂದು. ಬಟ್ಟೆ ತಂದ ಸ್ವಲ್ಪ ಸಮಯದಲ್ಲಿಯೇ ಮಳೆ ಬಂದು ಬಿಡುತ್ತೆ.ಮಗುವಿಗೆ ಅನ್ನಿಸುತ್ತೆ-ತನ್ನ ತಾಯಿ ಹೇಳಿದಂತೆ ಆಗುತ್ತೆ. ಇನ್ನೊಂದು ದಿನ ಅಪ್ಪ ಕಛೇರಿಯಿಂದ ಫೋನ್ ಮಾಡುವುದಾಗಿ ಮನೆಯಲ್ಲಿ ಹೇಳಿ ಹೋಗಿರುತ್ತಾನೆ.ಫೋನ್ ರಿಂಗಣಿಸುತ್ತದೆ,  ತಾಯಿ ಮಗುವಿಗೆ ಹೇಳುತ್ತಾಳೆ ಅಪ್ಪ ಫೋನ್ ಮಾಡಿರಬಹುದು ಫೋನ್  ತೆಗೆದುಕೋ ಮಗು ಫೋನ್ ತೆಗೆದುಕೊಳ್ಳುತ್ತೆ. ಹೌದು ಅಪ್ಪನೇ ಫೋನ್  ಮಾಡಿರುವುದು. ಈಗಲೂ ಮಗುವಿಗೆ ಅನ್ನಿಸುತ್ತೆ ನಮ್ಮ ಅಮ್ಮ ಹೇಳೋದೆಲ್ಲಾ ನಿಜ.ಕಾಲಿಂಗ್ ಬೆಲ್ ಆಗುತ್ತೆ.ಬೆಲ್ ಶಬ್ಧ ತಾಯಿಗೆ ಮಾತ್ರ ಕೇಳಿಸಿರುತ್ತೆ, ತಾಯಿ  ಮಗುವಿಗೆ ಹೇಳುತ್ತಾಳೆ ಹೋಗಿ ಬಾಗಿಲು ತೆಗೆ, ಯಾರೋ ಬಂದಿದ್ದಾರೆ. ಮಗು  ಬಾಗಿಲು ತೆಗೆಯುತ್ತೆ. ಹೌದು ಯಾರೋ ಬಂದಿದ್ದಾರೆ. ಮಗುವಿಗೆ ಒಂದು ಸಂಗತಿ ಗ್ಯಾರಂಟಿಯಾಯ್ತು.ಅಮ್ಮ ಹೇಳೋದೆಲ್ಲಾ ನಿಜವಾಗುತ್ತೆ. ಮಗು ಸ್ವಲ್ಪ  ದೊಡ್ಡದಾಯ್ತು, ಶಾಲೆಗೆ ಹೋಗುವಾಗ ತಂಟೆ ಮಾಡುತ್ತಾನೆ, ಆಗ ತಾಯಿ  ಹೇಳಿದಳು ನೀನು ಮೂರ್ಖ, ಶಾಲೆಗೆ ಹೋಗಬೇಡ, ದನಾ ಕಾಯಲು ಹೋಗು ಅಮ್ಮ ಹೇಳಿದ್ದೆಲ್ಲಾ ನಿಜವಾಗುತ್ತದೆಂಬುದು ಈಗಾಗಲೇ ಮಗುವಿನ ಮನಸ್ಸಿನಲ್ಲಿ ಇದೆ, ಆ ಮಗು ತಾನು ಮೂರ್ಖನೇ ಇರಬೇಕು, ಅಂತಾ ಅಂದು ಕೊಂಡ.ಬರಬರುತ್ತಾ   ದಡ್ದನೇ ಆಗಿಬಿಟ್ಟ.ಮನ:ಶಾಸ್ತ್ರದಲ್ಲಿ ಸಂಶೋಧನೆ ಮಾಡಿರುವ ಘಟನೆ ಇದು.   ಮನೆಯಲ್ಲಿ ನಕಾರಾತ್ಮಕ ಮಾತುಗಳನ್ನು ಆಡಲೇ ಬೇಡಿ.
ಮಕ್ಕಳಿಗೆ ಹಂಚಿಕೊಂಡು ತಿನ್ನುವುದನ್ನು ಕಲಿಸಿ: 
      ಮಕ್ಕಳು ಮನೆಯಲ್ಲಿ ಏನೋ ತಿಂಡಿ ತಿನ್ನುತ್ತಾ ಇರುತ್ತಾರೆ ಯಾರೋ ಬೇರೆ ಮಕ್ಕಳು ಮನೆಗೆ ಬರುವುದು ಗೊತ್ತಾಗುತ್ತೆ, ಆಗ ನಾವು ಸಾಮಾನ್ಯವಾಗಿ ಏನು ಮಾಡ್ತೇವೆ? ಹೋಗು ಒಳಗೆ ಹೋಗಿ ತಿನ್ನು,ಅಂತಾ ಮಕ್ಕಳಿಗೆ ಹೇಳುತ್ತೇವೆ.ಅದರ ಬದಲು ಆ ಮಗುವಿಗೂ ಸ್ವಲ್ಪ ಕೊಡು, ಆಮಗುವೂ ನಿನ್ನಂತ ಮಗುವೇ ಅಲ್ಲವೇ?  ಎನ್ನುವ ಒಳ್ಳೆಯ ಮಾತನ್ನು ನಾವು ಹೇಳಿಕೊಡುತ್ತೇವೆಯೇ?
ತಾಯಿಯ ಮಾತು ವೇದ ವಾಕ್ಯ:
     ಕೊನೆಯದಾಗಿ ಒಂದು ಘಟನೆ.ಒಂದು ಹಳ್ಳಿಯಲ್ಲಿ ಒಬ್ಬ ವಿಧವೆ.ಅತೀ ಬಡತನದಿಂದ ಮಗನನ್ನು ಪಟ್ಟಣದಲ್ಲಿ ಓದಿಸಿ ದೊಡ್ದವನನ್ನಾಗಿ ಮಾಡುತ್ತಾಳೆ. ಒಂದು ಸರಕಾರಿ  ಕೆಲಸ ಸಿಗುತ್ತದೆ. ಅಲ್ಲಿಯವರಗಿದ್ದ ಬಡತನವೆಲ್ಲಾ ದೂರವಾಗುತ್ತದೆಂದು ಹಳ್ಳಿಯ ಜನರೆಲ್ಲಾ ಮಾತನಾಡಿಕೊಳ್ಳುತ್ತಾರೆ.ಸಂಬಳದ ಜೊತೆಗೆ ಲಂಚವೂ ಸಿಗುವಂತ  ಕೆಲಸವೆಂದು ಜನರಾಡುವ ಮಾತು ಈ ತಾಯಿಯ ಕಿವಿಗೆ ಬೀಳುತ್ತದೆ. ಅಮ್ಮನಿಗೆ ವಿಷಯವನ್ನು ತಿಳಿಸಲು ಮಗ ಹಳ್ಳಿಗೆ ಬಂದು ನಮಸ್ಕರಿಸುತ್ತಾನೆ, ಆಗ ತಾಯಿಯು ನೀನು ನನ್ನ ಎದೆಹಾಲು ಕುಡಿದು ಬೆಳೆದ ಮಗನೇ ಆಗಿದ್ದಲ್ಲಿ ಸಂಬಳದ ಹೊರತಾಗಿ ಒಂದು ಬಿಡಿಗಾಸನ್ನೂ ಲಂಚವಾಗಿ ಪಡೆಯ ಕೂಡದು, ನನ್ನ ಬಡತನ ಹೀಗೆಯೇ  ಇದ್ದರೂ ಚಿಂತೆಯಿಲ್ಲ, ನೀನು ಮಾತ್ರ ಪ್ರಾಮಾಣಿಕನಾಗಿ ಜನರ ಸೇವೆ ಮಾಡಬೇಕುಎಂದು ಹರಸುತ್ತಾಳೆ.ಮಗ ಅಮ್ಮನ ಮಾತನ್ನು ಶಿರಸಾ ಪಾಲಿಸುತ್ತಾನೆ.ದೊಡ್ಡ  ಅಧಿಕಾರಿಯಾಗಿ ಪ್ರಾಮಾಣಿಕನಾಗಿ ಸೇವೆ ಸಲ್ಲಿಸಿ ಹೆಸರು ಗಳಿಸುತ್ತಾನೆ.ಅಮ್ಮನಿಗೆ ಆನಂದ ವಾಗುತ್ತದೆ. ಸಮಾಜದಲ್ಲಿ ಇಂತಾ ಉದಾಹರಣೆಗಳು ಸಾಕಷ್ಟಿವೆ. ನೀವುಗಳೂ ಕೂಡ ಒಳ್ಳೆಯ ತಂದೆ- ತಾಯಿಯಾಗಿ ಆದರ್ಶ ವಾಗಿ ಬಾಳುತ್ತಾ   ನೀವೂ ಬೆಳೆಯಿರಿ ಮಕ್ಕಳನ್ನೂ ಉತ್ತಮರನ್ನಾಗಿ ಬೆಳೆಸಿ.
*********************
-ಹರಿಹರಪುರ ಶ್ರೀಧರ್.