ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಡಿಸೆಂಬರ್ 24, 2015

ಸಾಧನಾ ಸೋಪಾನ - 15: ಸ್ವಂತ ಅಸ್ತಿತ್ವ


     "ಹಾಂ? ಏನೆಂದಿರಿ? ಆಕಾಶಕ್ಕಿಂತಲೂ ಮಿಗಿಲಾದುದು ಇದೆಯೇ? ಆಕಾಶ ಸರ್ವವ್ಯಾಪಿ. ಅದು ಎಷ್ಟು ವಿಶಾಲವಾದುದು, ಹಿರಿದಾದುದು ಎಂಬುದೇ ತಿಳಿಯದಿರುವಾಗ, ಅದನ್ನು ವಿವರಿಸಲು ಸಾಧ್ಯವೇ ಇಲ್ಲ ಎಂಬಂತಿರುವಾಗ ಅದಕ್ಕಿಂತಲೂ ಮಿಗಿಲಾದುದು ಇದೆಯೇ? ನಿಮಗೆಲ್ಲೋ ತಲೆ ಕೆಟ್ಟಿರಬೇಕು" ಎಂಬ ಪ್ರತಿಕ್ರಿಯೆ ಆಕಾಶಕ್ಕಿಂತಲೂ ಹೆಚ್ಚಿನದು ಇದೆ ಎಂದು ಹೇಳಿದಾಗ ಬರಬಹುದಾದ ಸಾಮಾನ್ಯ ಪ್ರತಿಕ್ರಿಯೆ. ಅದು 'ಸ್ವಂತ ಅಸ್ತಿತ್ವ' ಎಂದು ಹೇಳಿದಾಗ 'ನಿಜಕ್ಕೂ ಇವನಿಗೆ ತಲೆ ಕೆಟ್ಟಿದೆ ಅಥವ ನಮ್ಮ ತಲೆ ಕೆಡಿಸುತ್ತಿದ್ದಾನೆ' ಎಂತಲೂ ಭಾವಿಸಬಹುದು. ಈ ನಮ್ಮ ಅಸ್ತಿತ್ವ ಹೇಗೆ ದೊಡ್ಡದು ಎಂಬ ಬಗ್ಗೆ ವಿಚಾರ ಮಾಡೋಣ.
ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು|
ವಿಚಾರ ಮಥನದ ಫಲವೆ ನಿತ್ಯ ಸತ್ಯ
ವೇದವಿದಿತ ಸತ್ಯ ತತ್ವವಿದು ಮೂಢ||
     ಈ ಆಕಾಶ ದೊಡ್ಡದು ಎಂಬ ಅರಿವು ನಮಗೆ ಬರಬೇಕಾದರೆ ನಮಗೆ ನಮ್ಮ ಅಸ್ತಿತ್ವದ ಬಗ್ಗೆ ಅರಿವು ಇರಬೇಕು. ಅಸ್ತಿತ್ವದ ಅರಿವು ಮೊದಲು ಬರುತ್ತದೆ, ನಂತರ ಹೊರಗಿನ ಆಕಾಶದ ಅರಿವು! ನಾವು ಮೊದಲು ಇದ್ದರೆ ತಾನೇ ಆಕಾಶ ಅನ್ನುವುದು ಇರುವುದು! ಆದ್ದರಿಂದ, ವಿಶಾಲ ಆಕಾಶದ ಕುರಿತು ತಿಳಿಯಬೇಕಾದರೆ ನಮ್ಮ ಅಸ್ತ್ತಿತ್ವದ ಅರಿವು ನಿರ್ಧಾರಕ ಅಂಶವಾಗುತ್ತದೆ. 'ಸ್ಮರ' ಎಂತಲೂ ಹೇಳಲಾಗುವ ಈ ನಮ್ಮ ಅಸ್ತಿತ್ವ ನಮ್ಮ ಅರಿವಿಗೆ, ತಿಳುವಳಿಕೆಗೆ ಸಮನಾಗಿರುತ್ತದೆ. ನೋಡಿ, ನಾವೇ ಇಲ್ಲದಿದ್ದರೆ, ಆಕಾಶ ಇದೆಯೋ ಇಲ್ಲವೋ ಅನ್ನುವ ಪ್ರಶ್ನೆಯೇ ಬರುವುದಿಲ್ಲ. ಯಾರಾದರೂ ತಮ್ಮ ಅಸ್ತಿತ್ವದ ಅರಿವನ್ನು ಕಳೆದುಕೊಂಡರೆ, ಅರ್ಥಾತ್ ತಾವು ಯಾರು ಎಂಬುದರ ಅರಿವೇ ಇಲ್ಲದಿದ್ದರೆ, ಅಂತಹವರಿಗೆ ಆಕಾಶದ ಕುರಿತು ಜಿಜ್ಞಾಸೆಯಾಗಲೀ, ಹೇಳುವುದಾಗಲೀ, ಕೇಳುವುದಾಗಲೀ, ಯೋಚಿಸುವುದಾಗಲೀ ಸಾಧ್ಯವಿರುವುದಿಲ್ಲ ಮತ್ತು ಅರ್ಥ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸ್ವಪ್ರಜ್ಞೆ ಇಲ್ಲದಿದ್ದರೆ ಯಾವುದೇ ಉಪಯುಕ್ತವಾದ ಕ್ರಿಯೆಗಳಾಗಲೀ, ಕೆಲಸಗಳಾಗಲೀ ಅಸಾಧ್ಯವಾಗುತ್ತದೆ. ನಮ್ಮ ಅಸ್ತಿತ್ವದ ಬಗ್ಗೆ ನಮಗೇ ಅರಿವಿಲ್ಲದಿದ್ದರೆ, ಆಕಾಶದ ಬಗ್ಗೆಯಾಗಲೀ ಅಥವ ಇನ್ನು ಯಾವುದರ ಬಗ್ಗೆಯಾಗಲೀ ತಿಳಿಯಬಯಸುವುದರಲ್ಲಿ ಏನು ಪ್ರಯೋಜನವಿದೆ? ಎಲ್ಲೆಲ್ಲಿ ಸ್ವಪ್ರಜ್ಞೆ ಜಾಗೃತವಾಗಿರುತ್ತದೋ, 'ನಮ್ಮತನ' ಅನ್ನುವುದು ಹಾಜರಿರುತ್ತದೆಯೋ ಅಲ್ಲಿ ಎಲ್ಲಾ ವಿಧವಾದ ಜ್ಞಾನ ಲಭಿಸುತ್ತಾ ಹೋಗುತ್ತದೆ. ಅಲ್ಲಿ ಯೋಚಿಸುವ ಪ್ರಕ್ರಿಯೆ ಇರುತ್ತದೆ, ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ, ಕೇಳುವ, ತಿಳಿಯುವ ಕೆಲಸ ಆಗುತ್ತದೆ ಮತ್ತು ಹಲವು ರೀತಿಗಳಲ್ಲಿ ಜ್ಞಾನಾರ್ಜನೆ ಮಾಡುವ ಆಸಕ್ತಿ ಮೂಡುತ್ತದೆ. ಜೀವನದಲ್ಲಿನ ನಮ್ಮ ಎಲ್ಲಾ ಚಟುವಟಿಕೆಗಳು, ಕ್ರಿಯೆಗಳು ನಮ್ಮ ಸ್ವಂತ ಅಸ್ತಿತ್ವದ ಅರಿವಿನ ಫಲಗಳಾಗಿವೆ. ಇದು ಇಲ್ಲದಿದ್ದರೆ ಇಡೀ ಜಗತ್ತೇ ಶೂನ್ಯ!
     ನಾವು ಧ್ಯಾನಿಸುವಾಗ ಯಾವುದು ಅತ್ಯಂತ ದೊಡ್ಡದೋ ಆ ಕುರಿತು ಧ್ಯಾನಿಸುವುದು ಸೂಕ್ತವೆಂದು ಹಿಂದೆಯೇ ತಿಳಿದುಕೊಂಡಿದ್ದೇವೆ. ನಮ್ಮ ತಿಳುವಳಿಕೆಗೆ ಮೀರಿದ ಕಾಲ್ಪನಿಕ ಸಂಗತಿಗಳನ್ನು ಗುರಿಯಾಗಿರಿಸಿ ಮಾಡುವ ಧ್ಯಾನದಿಂದ ಚಂಚಲ ಮನಸ್ಸಿನ ಹತೋಟಿ ಕಷ್ಟವೆಂಬುದೂ ನಮಗೆ ತಿಳಿದಿದೆ. ಆಕಾಶ ಎಲ್ಲಕ್ಕಿಂತ ದೊಡ್ಡದೆಂದುಕೊಂಡರೆ, ಆಕಾಶದ ಅಗಾಧತೆ ಕುರಿತು ಧ್ಯಾನಿಸುವುದು ಮನೋನಿಯಂತ್ರಣಕ್ಕೆ ಸಹಕಾರಿ. ಅದಕ್ಕಿಂತಲೂ ಸ್ವಂತ ಅಸ್ತಿತ್ವದ ಅರಿವು ಹಿರಿದು ಎಂದು ಮನನ ಮಾಡಿಕೊಂಡರೆ ನಮ್ಮ ಮನಸ್ಸನ್ನು ಆ ಕಡೆಗೆ ಹೊರಳಿಸಬೇಕು. ನಾವು ನಿಧಾನವಾಗಿ, ಹಂತ ಹಂತವಾಗಿ ಅರಿವಿನ ಹಂತವನ್ನು ಏರಿಸಿಕೊಳ್ಳುತ್ತಾ ಹೋಗುತ್ತಿದ್ದೇವೆ ಎಂಬುದು ನಮಗೇ ಅರಿವಾಗುತ್ತಾ ಹೋಗುತ್ತದೆ. ನಾವು ಈ ರೀತಿಯಾಗಿ ಏರುತ್ತಾ ಹೋದಂತೆ ಇನ್ನೂ ಎತ್ತರದ ಸಂಗತಿಗಳ ಅರಿವು ನಮಗೆ ಆಗುತ್ತಾ ಹೋಗುತ್ತದೆ. ಸ್ವಂತ ಅಸ್ತಿತ್ವದ ಪ್ರಜ್ಞೆ ಹೊಂದಿರುವ ವ್ಯಕ್ತಿಗೆ ಪ್ರತಿಯೊಂದು ವಸ್ತು ಅಥವ ಸಂಗತಿಯ ಅಥವ ಆಕಾಶದ ಕುರಿತೇ ಆಗಲಿ ಅ ಅರಿವಿನ ಫಲ ಸ್ವಪ್ರಜ್ಞೆಯ ಬಲದಿಂದಲೇ ಲಭಿಸಿದುದು ಎಂದು ತಿಳಿಯುತ್ತದೆ ಮತ್ತು ಅವನು ಅಷ್ಟರ ಮಟ್ಟಿಗೆ ಅವನು ಸ್ವಂತ ಅಸ್ತಿತ್ವದ ಮಹತ್ವ ತಿಳಿದವನಾಗುತ್ತಾನೆ.
ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||
     ಧ್ಯಾನದ ಕ್ರಿಯೆಯಲ್ಲಿ ಸ್ವಂತ ಅಸ್ತಿತ್ವದ ಮಹಿಮೆ ತಿಳಿದುಕೊಳ್ಳುವುದು ಒಂದು ಅದ್ಭುತ ತಿರುವು ಮೂಡಿಸುತ್ತದೆ. ಸಾಮಾನ್ಯವಾಗಿ, ನಾವು ಧ್ಯಾನಿಸುವಾಗ ಹೊರಗಿನ ವಸ್ತುಗಳು, ಸಂಗತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಧ್ಯಾನಿಸುತ್ತೇವೆ, ದಿಗಂತದೆಡೆಗೆ ದೃಷ್ಟಿ ಹಾಯಿಸುತ್ತೇವೆ. ಆದರೆ, ಧ್ಯಾನಿಸುವ ಆ ವಸ್ತುಗಳು, ಸಂಗತಿಗಳು, ಗುರಿಗಳು ನಮ್ಮ ಸ್ವಂತ ಅಸ್ತಿತ್ವದೊಂದಿಗೆ ಥಳಕು ಹಾಕಿಕೊಂಡಿದೆಯೆಂಬುದನ್ನು ಅರಿಯಲು ಮರೆತುಬಿಡುತ್ತೇವೆ. ವಸ್ತು/ಸಂಗತಿಯ ಪ್ರಜ್ಞೆ ಮತ್ತು ಪ್ರಜ್ಞೆಯ ವಸ್ತುವಿನ ಸಂಬಂಧಗಳು ಅರಿವಿನಿಂದ ಮರೆಯಾಗಿ ಅಂತಹ ವಸ್ತುಗಳು, ಸಂಗತಿಗಳು, ಗುರಿಗಳು ಹೊರಗೆ ಇರುತ್ತವೆ, ಸ್ವತಂತ್ರವಾಗಿರುತ್ತವೆ, ನಮ್ಮ ಅಸ್ತಿತ್ವಕ್ಕೂ ಅದು ಹೊರತಾಗಿದೆ ಎಂದುಕೊಂಡುಬಿಡುತ್ತೇವೆ. ಇದು ಸತ್ಯವಾಗಿರಲಾರದು. ನಮ್ಮ ಅಸ್ತಿತ್ವಕ್ಕೂ ಅಂತಹ ಸಂಗತಿಗಳಿಗೂ ಪರಸ್ಪರ ಸಂಬಂಧವಿದ್ದೇ ಇರುತ್ತದೆ. ಸಾಮಾನ್ಯರು ಅಸಾಮಾನ್ಯ ಸಂಗತಿಗಳಿಗೂ ತಮಗೂ ಪ್ರತ್ಯೇಕತೆಯಿದೆಯೆಂದು ಭಾವಿಸುತ್ತಾರೆ. ಅವುಗಳನ್ನು ಅವಲಂಬಿಸುತ್ತಾರೆ ಮತ್ತು ಅವುಗಳ ಸಹಾಯ, ಆಧಾರ ತಮಗೆ ಅಗತ್ಯವೆಂದು ಅದಕ್ಕೆ ಜೋತುಬೀಳುತ್ತಾರೆ. ಅಂತಹ ಅಸಾಮಾನ್ಯ ಸಂಗತಿಗಳಿಗೆ ತಾವೇ ಆಧಾರವಾಗಿರುವುದನ್ನು ಮರೆಯುತ್ತಾರೆ. ನಾವು ಇದ್ದರೆ ದೇವರು ಇರುತ್ತಾನೆ ಅಲ್ಲವೇ? ನಾವೇ ಇಲ್ಲದಿದ್ದರೆ ಏನೂ ಇರುವುದಿಲ್ಲವೆಂಬ ಅರಿವು ಮೂಡಿದರೆ ನಾವು ನಮ್ಮ ಧ್ಯಾನದ ಗುರಿಯನ್ನು ಹೊರಗಿನ ಸಂಗತಿಗಳಿಂದ ಒಳಗಿನ ಕಡೆಗೆ ತಿರುಗಿಸುತ್ತೇವೆ. ಹೀಗೆ ಮಾಡಲು ಸಾಧ್ಯವಾದರೆ ನಿಜಕ್ಕೂ ಇದು ಅದ್ಭುತ ಸಾಧನೆಯೆನಿಸುತ್ತದೆ.
ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾಶಕ್ತಿಗೆದುರುಂಟೆ ಮೂಢ ||
     ಒಂದು ಸಿನೆಮಾ ಹೇಗಿರುತ್ತದೆಯೆಂಬುದನ್ನು  ಅದರ ಟ್ರೈಲರ್ ನೋಡಿ ತಿಳಿಯಬಹುದು. ಹಾಗೆಯೇ ಸ್ವಂತ ಅಸ್ತಿತ್ವದ ಮಹತ್ವವನ್ನು ತಿಳಿಯಲು ಗಾಢನಿದ್ದೆಯಲ್ಲಿ ನಮ್ಮ ಸ್ಥಿತಿ ಹೇಗಿರುತ್ತದೆಯೆಂಬುದನ್ನು ಕಲ್ಪಿಸಿಕೊಂಡರೆ ಸಾಕು. ಗಾಢ ನಿದ್ದೆಯಲ್ಲಿದ್ದಾಗ ನಮಗೆ ನಮ್ಮ ಅರಿವೇ ಇರುವುದಿಲ್ಲ. ಇನ್ನು ದೇವರು, ಜಗತ್ತು, ಆಕಾಶ ಮುಂತಾದವುಗಳು ಸಹ ಇವೆಯೋ, ಇಲ್ಲವೋ ಎಂಬುದರ ಯೋಚನೆ ಸಹ ಬರುವುದಿಲ್ಲ. ಆ ಸಮಯದಲ್ಲಿ ಸುಖ-ದುಃಖ, ಲಾಭ-ನಷ್ಟ, ನೋವು-ನಲಿವುಗಳ ಸುಳಿವೂ ಇರುವುದಿಲ್ಲ. ಯಾವ ಜಂಜಾಟವೂ ಇರುವುದೇ ಇಲ್ಲ. ನಿದ್ದೆಯಿಂದ ಎಚ್ಚರವಾದ ತಕ್ಷಣದಲ್ಲಿ 'ನಾನು' ಎದ್ದುಬಿಡುತ್ತದೆ! ಸುತ್ತಮುತ್ತಲ ಪ್ರಪಂಚವೂ ಎದ್ದುಬಿಡುತ್ತದೆ! 'ನಾನು' ಏಳದಿದ್ದರೆ ಯಾವುದರ ಅಸ್ತಿತ್ವವೂ ಇರುವುದೇ ಇಲ್ಲ. ಇದು ಅಸ್ತಿತ್ವದ ವಿಸ್ಮಯಕಾರಿ ಗುಣ. ನಮ್ಮ ತಡಕಾಟ, ಹುಡುಕಾಟಗಳು ಬಹುತೇಕ ಹೊರಗೆ ಇರುತ್ತವೆ. ಏನು ಹುಡುಕುತ್ತಿದ್ದೇವೆಯೋ ಅದು ಹೊರಗಿಲ್ಲ, ನಮ್ಮೊಳಗೇ ಇದೆ ಎಂಬ ಅರಿವು ಮೂಡತೊಡಗಿದಾಗ ಸ್ವಲ್ಪ ಸ್ವಲ್ಪವಾಗಿ ಬೆಳಕು ಮೂಡತೊಡಗುತ್ತದೆ.
ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು |
ಅಂತರಂಗದ ಕರೆಯನನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನು ಮೂಢ ||
     ಅಂತರಂಗದ ಕರೆಗೆ ಓಗೊಟ್ಟರೆ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ: "ನಾವು ಇದ್ದರೆ ಎಲ್ಲವೂ ಇರುತ್ತದೆ; ನಾವು ಇಲ್ಲದಿದ್ದರೆ ಏನೂ ಇರುವುದಿಲ್ಲ. ಇದು ನಮ್ಮ ಅಸ್ತಿತ್ವದ ಮಹತ್ವ!"
-ಕ.ವೆಂ.ನಾಗರಾಜ್.
*****************
ದಿನಾಂಕ 25.11.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಡಿಸೆಂಬರ್ 16, 2015

ಸಾಧನಾ ಸೋಪಾನ - 14: ಆಕಾಶ - ದೇವರ ವಿಶ್ವರೂಪ!

 
     ಹೀಗೆ ಊಹಿಸಿಕೊಳ್ಳೋಣ, ಒಂದೊಮ್ಮೆ ಭೂಮಿ ನೀರಿನಲ್ಲಿ ಮುಳುಗಿ ಕರಗಿಹೋದರೆ? ನೀರು ಬೆಂಕಿಯಿಂದ ಒಣಗಿ ಆವಿಯಾದರೆ? ಬೆಂಕಿಯನ್ನು ಗಾಳಿ ನಂದಿಸಿದರೆ? ಗಾಳಿ ಆಕಾಶದಲ್ಲಿ ಐಕ್ಯವಾದರೆ? ಕೊನೆಯಲ್ಲಿ ಉಳಿಯುವುದು ಆಕಾಶ ಮಾತ್ರ, ಆಕಾಶ, ಆಕಾಶ, ಎಲ್ಲೆಲ್ಲೂ ಆಕಾಶ, ಅಷ್ಟೆ! ಪ್ರಳಯ ಎಂಬ ಕಲ್ಪನೆ ಸಹ ಇದನ್ನೇ ಹೇಳುತ್ತದೆ. ಅಂತಿಮವಾಗಿ ಉಳಿಯುವ ಆಕಾಶ ಮಾತ್ರ ಕಾಣುವ ಸತ್ಯ, ಅತ್ಯಂತ ಗ್ರಾಹ್ಯ ಸಂಗತಿ. ಅದು ಎಲ್ಲವನ್ನೂ ಒಳಗೊಳ್ಳಬಲ್ಲ, ಸೇರಿಸಿಕೊಳ್ಳಬಲ್ಲ, ಎಲ್ಲೆಲ್ಲೂ ಇರುವಂತಹ ವಿಶಾಲ ಶಕ್ತಿಯಾಗಿರುತ್ತದೆ. ಹೀಗಾಗಿ ಇದು ಸರ್ವವ್ಯಾಪಿ, ಸರ್ವಶಕ್ತ ಪರಮಾತ್ಮನನ್ನು ಹೋಲುತ್ತದೆ.
     ಆಕಾಶದ ಮಹತ್ವ ಅರಿವಾಗುವುದು ಅದು ಇರುವುದರಿಂದಲೇ! ಎಲ್ಲದರ ಅಸ್ತಿತ್ವಕ್ಕೆ ಅವಕಾಶವಾಗಿರುವುದು ಆಕಾಶದಿಂದಲೇ. ಪ್ರತಿಯೊಂದೂ ಪರಿಣಾಮಸ್ವರೂಪವಾಗಿ ಆಕಾಶದಿಂದಲೇ ಬರುತ್ತದೆ. ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಗುಡುಗು, ಸಿಡಿಲು, ಇಂತಹದು ಇದೆ, ಇಂತಹದು ಇಲ್ಲವೆನ್ನುವಂತಿಲ್ಲದೆ ಪ್ರತಿಯೊಂದಕ್ಕೂ ಅವಕಾಶ ಮಾಡಿಕೊಟ್ಟಿರುವುದು ಆಕಾಶವೇ. ಇರಲು ಜಾಗವಿರದಿರುತ್ತಿದ್ದರೆ ನಾವು ಎಲ್ಲಿರುತ್ತಿದ್ದೆವು? ನಮ್ಮ ಸುಖ-ದುಃಖಗಳು ಎಲ್ಲಿರುತ್ತಿದ್ದವು? ಆಕಾಶವಿರದಿದ್ದರೆ ಯಾವುದೇ ವಸ್ತುಗಳು ಇರುತ್ತಿರಲಿಲ್ಲ, ಸುಖ-ದುಃಖಗಳ ಅನುಭವವೂ ನಮಗೆ ಇರುತ್ತಿರಲಿಲ್ಲ. ಜೀವನದಲ್ಲಿ ನಾವು ಅನುಭವಿಸುವ ನವರಸಗಳಿಗೂ, ತೃಪ್ತಿ, ಅತೃಪ್ತಿಗಳಿಗೂ ಆಕಾಶ ಕಾರಣವೆಂದರೆ ಅತಿಶಯೋಕ್ತಿಯಲ್ಲ. ಭೂಮಿಯಲ್ಲಿನ ಗಿಡ-ಮರಗಳು ಬೆಳೆಯಲು ಆಕಾಶವಿರುವುದರಿಂದಲೇ ಸಾಧ್ಯವಾಗಿದೆ. ಆಕಾಶದ ಕುರಿತು ಎಷ್ಟು ಹೆಚ್ಚು ವಿವರಣೆ ನೀಡಿದರೂ ಅದು ಕಡಿಮೆಯೇ ಆಗುತ್ತದೆ, ಏನೋ ಕೊರತೆ ಇದ್ದೇ ಇರುತ್ತದೆ. ಅದನ್ನು ವಿವರಿಸುವುದು ಕಷ್ಟ. ನಮ್ಮ ಮೆದುಳು ಗ್ರಹಿಸಬಹುದಾದ ಅತ್ಯಂತ ಕೊನೆಯ ಸಂಗತಿ ಎಂದರೆ ಆಕಾಶ ಮಾತ್ರ. ಅದರ ಆಚೆಗೆ ಮೆದುಳು ಚಿಂತಿಸಲು ಸಾಧ್ಯವಿದೆಯೇ? ಅದು ಹೀಗೆ ಎಂದು ಹೇಳಲು ಸಾಧ್ಯವಿದೆಯೇ?
ಆಗಸದ ಬಣ್ಣವದು ತೋರುವಂತಿಹುದೇನು
ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |
ಅರಿತವರು ಯಾರಿಹರು ಗಗನದ ನಿಜಬಣ್ಣ
ದೇವನೆಂತಿಹನೆಂದು ಗೊತ್ತಿಹುದೆ ಮೂಢ? ||
     ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂ ಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ -ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ- ಕೂಡಿದ್ದುದಾಗಿದ್ದು, ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ?  ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ: ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ | ತದಂತರಸ್ಯ ಸರ್ವಸ್ಯ ಅದು ಸರ್ವಸ್ಯಾಸ್ಯ ಬಾಹುತಃ || (ಯಜು. ೪೦.೫.) ಅದು ವಿಶ್ವಕ್ಕೆ ಗತಿ ನೀಡುತ್ತದೆ, ಅದು ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿದೆ, ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ, ಇದೆಲ್ಲದರ ಹೊರಗೂ ಇದೆ ಎಂಬುದು ಇದರ ಅರ್ಥ. ಈ ಎಲ್ಲಾ ಗುಣಗಳು ಆಕಾಶಕ್ಕೆ ಇರುವುದರಿಂದ ಆಕಾಶವನ್ನು ಕಣ್ಣಿಲ್ಲದೇ ಕಾಣಬಲ್ಲ 'ದೇವರ ಕಣ್ಣು' ಎನ್ನೋಣವೇ?
     ಆಕಾಶ ಇಂತಹ ಸ್ಥಳದಲ್ಲಿ ಇದೆ, ಇಂತಹ ಸ್ಥಳದಲ್ಲಿ ಇರುವುದಿಲ್ಲವೆಂದು ಹೇಳಲಾಗುವುದಿಲ್ಲ. ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದಿದೆ, ಧಗಧಗಿಸುವ ಅಗ್ನಿಯ ಜೊತೆಗೂ ಇದೆ, ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು, ನೀರು ತೋಯಿಸಲಾರದು, ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜೊತೆಗೂ ಅದು ಇರುತ್ತದೆ, ಪ್ರಳಯ, ವಿನಾಶ ಕಾಲದಲ್ಲೂ ಅದು ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ, ಕೊನೆಯಿಲ್ಲ, ಅರ್ಥಾತ್ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪರಮಾತ್ಮನನ್ನೂ ಹೀಗೆಯೇ ಇದ್ದಾನೆ ಅನ್ನುತ್ತೇವೆ. ದೇವರ ವಿಶ್ವರೂಪ ದರ್ಶನವೆಂದರೆ ಆಕಾಶವೇ ಅಲ್ಲವೇ? ಒಳಗಣ್ಣಿದ್ದು ತೆರೆದು ನೋಡಬಲ್ಲವರು ಈ ವಿಶ್ವರೂಪವನ್ನು ಅವರ ಶಕ್ತ್ಯಾನುಸಾರ ಕಂಡಾರು. ನಿಜವಾಗಿ ದೇವರ ಪ್ರತಿನಿಧಿ ಎಂದು ಆಕಾಶವನ್ನು ಹೆಸರಿಸಬಹುದೇ ಹೊರತು, ಯಾವುದೇ ವ್ಯಕ್ತಿ ಅಥವ ಜೀವಿಯನ್ನು ಇಂತಹ ಅಗಾಧ ಶಕ್ತಿಯ ಪ್ರತಿನಿಧಿ ಎಂದು ಹೇಳುವುದು, ದೇವರ ಮಗ ಅನ್ನುವುದು, ದೇವರ ರೂಪದಲ್ಲಿ ಕಾಣುವುದು ಸಮಂಜಸವೆನಿಸುವುದಿಲ್ಲ. ಎಲ್ಲರಲ್ಲೂ 'ಅವನ' ಅಂಶವಿರುವುದರಿಂದ ಆ ವಿಶಾಲಾರ್ಥದಲ್ಲಿ ತೆಗೆದುಕೊಳ್ಳಬಹುದೇ ಹೊರತು, ಯಾರನ್ನೇ ಆಗಲಿ ದೇವರಂತೆ ಭಾವಿಸುವುದು ಸೂಕ್ತವಲ್ಲ. ನಾಶವಿರದ ಭಗವಂತನನ್ನು ನಾಶವಾಗಬಹುದಾದ ಸಂಗತಿಗಳಲ್ಲಿ ಗುರುತಿಸುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಬೇಕಾದರೆ ದೇವಮಾನವರು, ಮಹಿಮಾವಂತರು, ವಿಶೇಷ ಶಕ್ತಿಯುಳ್ಳವರು, ಹೀಗೆ ಭಾವಿಸಬಹುದು.
ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ |
ಆಗಸದ ನಿಜತತ್ವ ಅರಿತವರು ಯಾರು?
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ ||
     ಆಕಾಶವನ್ನು ಕಾಣಲಾಗುವುದಿಲ್ಲ, ಆದುದರಿಂದ ಅದನ್ನು ನಂಬುವುದಿಲ್ಲ ಎನ್ನಬಹುದೇ? ಆಕಾಶವೇ ಇಲ್ಲವೆಂದರೆ ಅದು ಇಲ್ಲವಾಗುತ್ತದೆಯೇ? ಆಕಾಶದ ಗುಣ ಹೇಗಿದೆ? ಅದಕ್ಕೆ ಗುಣವಿಲ್ಲ, ನಿರ್ಗುಣ. ಅದಕ್ಕೆ ಮಮಕಾರವೂ ಇಲ್ಲ, ಅಹಂಕಾರವೂ ಇಲ್ಲ. ಭೇದ-ಭಾವ ಮಾಡುವುದೇ ಇಲ್ಲ. ಜಾತಿ, ಮತ, ಪಂಥಗಳ ಕಟ್ಟಿಲ್ಲ. ಆ ದೇಶ, ಈ ದೇಶ ಅನ್ನುವುದು ಇಲ್ಲ. ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ, ಮುಂದೆಯೂ ಹೀಗೆಯೇ ಇರುತ್ತದೆ. ಇದು ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮಿಕ ಸತ್ಯ. ಕೆಟ್ಟವರು, ಒಳ್ಳೆಯವರು, ಜೀವಿ, ನಿರ್ಜೀವಿ ಎಂದು ಎಣಿಸುವುದೇ ಇಲ್ಲ. ಯಾರು ಏನೇ ಮಾಡಿದರೂ ಅಡ್ಡಿಪಡಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಎಲ್ಲಾ ಆಗು-ಹೋಗುಗಳಿಗೆ, ಕ್ರಿಯೆಗಳಿಗೆ ಅದು ಕೇವಲ ಸಾಕ್ಷಿಯಾಗಿರುತ್ತದೆ. ಖಾಲಿ ಆಕಾಶವನ್ನು ಯಾವುದರಿಂದಲಾದರೂ ತುಂಬಿ ಭರ್ತಿ ಮಾಡಲು ಸಾಧ್ಯವಿದೆಯೇ? ಇಲ್ಲ, ಎಷ್ಟು ತುಂಬಿದರೂ, ಏನನ್ನು ತುಂಬಿದರೂ ಅದು ಭರ್ತಿಯಾಗುವುದೇ ಇಲ್ಲ. ಹಾಗೆಯೇ ನಾವು ಆಕಾಶವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಹೊರಟರೂ ಅದು ಆಕಾಶವಾಗಿಯೇ, ಗೂಢವಾಗಿಯೇ ಉಳಿಯುತ್ತದೆ. ಆಕಾಶ ನಮ್ಮನ್ನು ಅರಗಿಸಿಕೊಳ್ಳುತ್ತದೆ. ನಾವು ಆಕಾಶವನ್ನಲ್ಲ. ಆಕಾಶ ನಮ್ಮ ಅಹಂ, ಮನಸ್ಸು, ಯೋಚನೆಗಳು, ಚಿಂತನೆಗಳು, ಜ್ಞಾನ, ಅಜ್ಞಾನ, ಎಲ್ಲವನ್ನೂ, ಎಲ್ಲಾ ಅಂದರೆ ಎಲ್ಲವನ್ನೂ, ನುಂಗಿ ನೀರು ಕುಡಿಯಬಲ್ಲದು, ಅರ್ಥಾತ್ ಅರಗಿಸಿಕೊಳ್ಳಬಲ್ಲದು. ಪರಮಾತ್ಮ 'ನಿರ್ಮಮೋ ನಿರಹಂಕಾರಃ' ಎಂಬುದನ್ನು ತೋರ್ಪಡಿಸಿಕೊಂಡಿರುವುದು ಆಕಾಶದಿಂದಲೇ. ಆಕಾಶವನ್ನು ತೃಪ್ತಿ ಪಡಿಸಲು ಯಾವ ಪೂಜೆ ಮಾಡಬೇಕು? ಯಾವ ಪ್ರಾಣಿಯ ಬಲಿ ಕೊಡಬೇಕು? ಯಾವ ನೈವೇದ್ಯ ಇಡಬೇಕು? ಏನೂ ಮಾಡಬೇಕಿಲ್ಲ. 'ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟದ್ದಕ್ಕೆ ಕೆಟ್ಟದ್ದು' ಎಂಬುದು ಜ್ಞಾನಿಗಳು, ಸಾಧಕರು ಹೇಳುವ ಮಾತು. ಪುನರ್ಜನ್ಮವನ್ನು ನಂಬದವರೂ ಸಹ ದೇವರು ಒಂದು 'ನಿರ್ಣಾಯಕ ದಿನ'ದಂದು ಎಲ್ಲಾ ಜೀವಿಗಳಿಗೆ ಅವರ ಕರ್ಮಕ್ಕನುಸಾರವಾಗಿ ಫಲ ಕೊಡುತ್ತಾನೆಂದು ನಂಬುತ್ತಾರೆ. ಪುನರ್ಜನ್ಮವನ್ನು ನಂಬುವವರಿಗೆ ಪೂರ್ವಾರ್ಜಿತ ಕರ್ಮದ ಅನುಸಾರ ಮುಂದಿನ ಜನ್ಮವೆಂದು ಹೇಳುತ್ತಾರೆ. ಒಟ್ಟಿನಲ್ಲಿ ನಾವು 'ಒಳ್ಳೆಯ' ರೀತಿ ಬಾಳಬೇಕೆಂಬುದು ನೀತಿ. ಹಾಗೆ ಮಾಡಲು ಏನು ಅಡ್ಡಿ? ಆಕಾಶವನ್ನು ಕೃತಕ ಭಯ, ಭಕ್ತಿಗಳಿಂದ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ದೇವರನ್ನೂ ಭಯ-ಭಕ್ತಿಗಳಿಂದ ತೃಪ್ತಿಪಡಿಸಿ ನಮ್ಮ ಇಚ್ಛೆ ಈಡೇರಿಸಿಕೊಳ್ಳುವೆವೆಂಬುದು ಭ್ರಮೆ ಎಂದು ಆಕಾಶ ಸಾರುತ್ತಿದೆ. ನಮ್ಮ ಕಷ್ಟ-ನಷ್ಟಗಳಿಗೆ, ಒಳಿತು-ಕೆಡಕುಗಳಿಗೆ ದೇವರು ಕಾರಣನಲ್ಲ, ನಾವೇ ಎಂಬುದನ್ನು 'ಆಕಾಶ' ತನ್ನ ಇರುವಿಕೆಯ ರೀತಿಯಿಂದ ಹೇಳುತ್ತಿದೆ.
     ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಗಳನ್ನು ಮೇಲೆತ್ತಿ 'ದೇವರೇ ಕಾಪಾಡಪ್ಪಾ' ಅನ್ನುತ್ತೇವೆ. ಅಂದರೆ ದೇವರು 'ಮೇಲೆ' ಇದ್ದಾನೆ ಎಂದು ಅಂದುಕೊಳ್ಳುತ್ತೇವೆ, ಆಕಾಶವನ್ನೂ 'ಮೇಲೆ' ಇದೆ ಎಂದು ಭಾವಿಸಿದಂತೆ! ಆಕಾಶವನ್ನು ಬೆಟ್ಟ-ಗುಡ್ಡಗಳ ಮೇಲೆ, ರಾತ್ರಿಯಲ್ಲಿ ಮಿನುಗುವ ಚಂದ್ರ-ತಾರೆಗಳ ಹಿನ್ನೆಲೆಯಲ್ಲಿ ಕಾಣುವ ಸುಂದರ ದೃಷ್ಯಗಳ ರೀತಿಯಲ್ಲಿ ಕಾಣುವ ನಾವು ದೇವರೂ ವೈಕುಂಠ, ಕೈಲಾಸ, ಇತ್ಯಾದಿ ಬೇರೆಯೇ ಲೋಕಗಳಲ್ಲಿದ್ದಾನೆಂದು ಭಾವಿಸುತ್ತೇವೆ. ಕಾಶಿ, ಬದರಿ, ಅಯೋಧ್ಯೆ, ಕನ್ಯಾಕುಮಾರಿ, ಮೆಕ್ಕಾ, ಜೆರುಸಲೇಮ್, ಇತ್ಯಾದಿ ಸ್ಥಳಗಳು ದೇವರು ಇರುವ ವಿಶೇಷ ಸ್ಥಳಗಳೆಂದುಕೊಳ್ಳುತ್ತೇವೆ. ಆಕಾಶವನ್ನು ಮೇಲೆ ಮಾತ್ರ ಇದೆ ಎಂದು ಅಂದುಕೊಳ್ಳುವ ನಾವು ಅದು ನಮ್ಮೊಡನೆಯೇ ಇದೆ ಎಷ್ಟು ಜನ ಭಾವಿಸುತ್ತೇವೆ? ಅಶನ, ವಸನ, ವಸತಿಗಳನ್ನು ಕರಣಿಸುವ ಭೂಮಿ ನಮ್ಮ ತಾಯಿಯಾದರೆ, ಸದಾ ನಮ್ಮೊಡನಿದ್ದು ನಮ್ಮನ್ನು ಗಮನಿಸುವ ಆಕಾಶ ನಮ್ಮ ತಂದೆ! ನಮ್ಮೊಂದಿಗಿದ್ದರೂ ತನ್ನ ಇರುವನ್ನು ಪ್ರಕಟಿಸದ, ನಮ್ಮ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸದ, ಜಗತ್ತನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿರುವ ಆಗಸಕ್ಕಿಂತ ಹೆಚ್ಚು ವಾತ್ಸಲ್ಯಮಯಿ ತಂದೆ ಬೇರೆ ಯಾರಾದರೂ ಇರಲು ಸಾಧ್ಯವೇ?
     ನಾಟಕದಲ್ಲಿ ಪಾತ್ರಧಾರಿಗಳು ನಾಟಕ ಆಡುವಾಗ ಪಾತ್ರಗಳೇ ಆಗಿ ಅನುಭವಿಸಿ ಆಡಿದರೂ ನಾಟಕ ಮುಗಿದ ನಂತರ ವಾಸ್ತವ ವ್ಯಕ್ತಿಗಳಾಗುತ್ತಾರೆ. ಆದರೆ ನಿಜ ಜೀವನನಾಟಕದಲ್ಲಿ? ಈ ನಾಟಕರಂಗದ ಅದ್ಭುತ ಪರದೆ ಆಕಾಶ! ಈ ಪರದೆಯ ಮುಂದೆ ನಾವು-ನೀವೆಲ್ಲರೂ ಪಾತ್ರಧಾರಿಗಳೇ. ನಮ್ಮ ಪಾತ್ರಗಳನ್ನು ನಾವು ಎಷ್ಟು ತನ್ಮಯರಾಗಿ ನಿರ್ವಹಿಸುತ್ತೇವೆಂದರೆ ನಾವು ಆ ಪಾತ್ರಗಳೇ ಆಗಿಬಿಡುತ್ತೇವೆ. ನಾವು ನಿಜವಾಗಿ 'ಯಾರು' ಎಂದು ತಲೆಕೆಡಿಸಿಕೊಳ್ಳುವುದೇ ಇಲ್ಲ, ಮತ್ತು ಪಾತ್ರವಲ್ಲದೆ ನಾವು ಬೇರೆ ಎಂದು ಅಂದುಕೊಳ್ಳುವುದೇ ಇಲ್ಲ.  ಈ ಜೀವನ ನಾಟಕದಲ್ಲಿ ನಮ್ಮದು ಕೆಲ ಸೀಮಿತ ಅವಧಿಗೆ ಬಂದು ಹೋಗುವ ಪಾತ್ರವಾಗಿದ್ದರೂ ನಾವು ಶಾಶ್ವತರೆಂದು ಅಂದುಕೊಂಡು, ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸಲು, ನಮ್ಮತನವನ್ನು ಅಚ್ಚೊತ್ತಲು ಜೀವನ ಪೂರ್ತಿ ತೊಡಗಿಕೊಳ್ಳುತ್ತೇವೆ!
     ಒಂದು ಮೂಲವಸ್ತು ಯಾವ ಕಾಲಕ್ಕೂ ನಾಶವಾಗುವುದಿಲ್ಲ, ರೂಪಾಂತರ ಮಾತ್ರ ಹೊಂದುವುದೆಂದು ವಿಜ್ಞಾನ ಹೇಳುತ್ತದೆ. ನಮ್ಮ ದೇಹ ಪಂಚಭೂತಗಳಿಂದ ಆಗಿದ್ದು ಆ ದೇಹಕ್ಕೆ ಅರ್ಥ ಕೊಡುವ ಒಂದು ಶಕ್ತಿ ಜೀವಾತ್ಮ. ಸತ್ತ ನಂತರದಲ್ಲಿ ದೇಹ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ಜೀವಾತ್ಮ? ಅದಕ್ಕೆ ನಾಶವಿಲ್ಲ. ನಂತರದಲ್ಲಿ ಅದು ಹೊಸ ಶರೀರವನ್ನು ಕಂಡುಕೊಳ್ಳುತ್ತದೆ ಎಂದು ತಿಳಿದವರು ಹೇಳುತ್ತಾರೆ. ವೈಜ್ಞಾನಿಕವಾಗಿ ಚಿಂತಿಸಿದರೂ ಪಂಚಭೂತಗಳಿಗೆ ಸೇರದ ಜೀವಾತ್ಮ ಯಾವುದಾದರೂ ರೂಪದಲ್ಲಿ ಇರಲೇಬೇಕಲ್ಲವೆ? ಈ ಎಲ್ಲಾ ಕ್ರಿಯೆಗಳಿಗೆ ಸಾಕ್ಷಿಯಾಗುವುದು ಆಕಾಶವೊಂದೇ! ಇದ್ದದ್ದು ಆಕಾಶದಲ್ಲಿ, ಹೋದದ್ದು ಆಕಾಶದಲ್ಲಿ, ಬರುವುದೂ ಆಕಾಶದಲ್ಲಿ! ಇದನ್ನು ವೈಜ್ಞಾನಿಕ ಆಸ್ತಿಕವಾದವೆನ್ನಬಹುದು.
-ಕ.ವೆಂ.ನಾಗರಾಜ್.
*****************
ದಿನಾಂಕ 18.11.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಡಿಸೆಂಬರ್ 7, 2015

ಸಾಧನಾ ಸೋಪಾನ - 13: ಪ್ರಾಣಾಧಾರ ವಾಯು     ಜೀವಿಗಳು ಜೀವ ಧರಿಸಲು ಸಾಧ್ಯವಾಗಿರುವುದು ಪಂಚಭೂತಗಳಲ್ಲೊಂದಾದ ವಾಯುವುನಿಂದಾಗಿಯೇ! ಹೀಗಾಗಿ ವಾಯುವು ಭೂಮಿ, ಜಲ, ಅಗ್ನಿಗಳಿಗಿಂತಲೂ ಮೇಲಿನ ಸಂಗತಿಯಾಗಿದೆ. ಸಾಮಾನ್ಯವಾಗಿ ಗಾಳಿ ಎನ್ನುವ ಇದಕ್ಕೆ ವಾತ, ಪವನ, ಪ್ರಾಣ ಇತ್ಯಾದಿ ಹೆಸರುಗಳೂ ಇವೆ. ವಾಯುವಿನ ಪ್ರಾಮುಖ್ಯತೆ ಬಗ್ಗೆ ಒಂದು ಕಥೆಯಿದೆ. ಒಮ್ಮೆ ದೇಹದ ಅಂಗಗಳು, ಇಂದ್ರಿಯಗಳನ್ನು ನಿಯಂತ್ರಿಸುವ ದೇವರುಗಳಲ್ಲಿ ಯಾರು ಹೆಚ್ಚು ಎಂಬ ಬಗ್ಗೆ ಸ್ಪರ್ಧೆ ಉಂಟಾಯಿತಂತೆ. ಒಂದರ ನಂತರ ಒಂದರಂತೆ ಅವರುಗಳು ದೇಹವನ್ನು ಬಿಟ್ಟು ಹೋಗಿ ಪರಿಣಾಮ ವೀಕ್ಷಿಸಿದರಂತೆ. ಒಬ್ಬೊಬ್ಬ ದೇವರು ಹೊರಹೋದಾಗಲೂ ಕಣ್ಣು ಕಾಣಿಸದಿರುವುದು, ಕಿವಿ ಕೇಳಿಸದಿರುವುದು, ಇತ್ಯಾದಿ ಪರಿಣಾಮಗಳಾಗಿ ಏರುಪೇರುಗಳಾಗುತ್ತಿದ್ದವಂತೆ. ಕೊನೆಯಲ್ಲಿ ವಾಯುದೇವ ಬಿಟ್ಟು ಹೊರಡಲು ಅನುವಾಗುತ್ತಿದ್ದಂತೆ ಇತರ ಎಲ್ಲಾ ದೇವರುಗಳಿಗೂ ಬಲವಂತವಾಗಿ ಹೊರದೂಡಲ್ಪಡುವ ಅನುಭವವಾಯಿತಂತೆ. ವಾಯು ಇದ್ದರೆ ಮಾತ್ರ ತಮ್ಮ ಅಸ್ತಿತ್ವ, ಇಲ್ಲದಿದ್ದರೆ ತಮಗೆ ಅಸ್ತಿತ್ವ ಇಲ್ಲ ಎಂಬುದನ್ನು ಮನಗಂಡ ಅವರುಗಳು ವಾಯುವೇ ಪ್ರಧಾನ ಎಂದು ಒಪ್ಪಿಕೊಂಡರಂತೆ. ಇದು ಕಲ್ಪಿತ ಕಥೆಯಾದರೂ ಇದರಲ್ಲಿ ಸತ್ಯವಿದೆ, ಸತ್ವವಿದೆ.
     ಜೀವಿಯ ಹುಟ್ಟು ಮತ್ತು ಸಾವು ಎರಡೂ ಉಸಿರಿನ ಮೇಲೆ ನಿಂತಿದೆ. ಹುಟ್ಟುವ ಕ್ಷಣದಿಂದಲೇ ಆರಂಭವಾಗುವ ಉಸಿರಾಟ ಸಾವಿನವರೆಗೂ ನಿರಂತರವಾಗಿ ಮುಂದುವರೆಯುತ್ತದೆ. ಉಸಿರು ನಿಂತಾಗ ಜೀವವೂ ನಿಲ್ಲುತ್ತದೆ. ಒಬ್ಬ ಮನುಷ್ಯ ಒಂದು ನಿಮಿಷಕ್ಕೆ 30 ಸಲ ಉಸಿರಾಡುತ್ತಾನೆ ಎಂದಿಟ್ಟುಕೊಂಡರೆ ಮತ್ತು 100 ವರ್ಷ ಬದುಕುತ್ತಾನೆ ಎಂದುಕೊಂಡರೆ ಜೀವಿತಾವಧಿಯಲ್ಲಿ ಒಟ್ಟು 30x60x24x365x100 ಸಲ ಉಸಿರಾಡುತ್ತಾನೆ! ಒಂದೊಂದು ಸಲ ಉಸಿರಾಡಿದಾಗಲೂ ಅಷ್ಟರ ಮಟ್ಟಿಗೆ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ. ಈ ಉಸಿರು ಯಾವಾಗ ಪ್ರಾರಂಭವಾಗುತ್ತದೆ, ಯಾವಾಗ ನಿಲ್ಲುತ್ತದೆ, ಯಾರಿಗೆ ಗೊತ್ತು? ಈ ಉಸಿರಿನ ನಿಯಂತ್ರಣ ಯಾರದ್ದು? ನಮ್ಮದಂತೂ ಇರಲಾರದು. ಏಕೆಂದರೆ ನಿದ್ದೆ ಮಾಡುತ್ತಿರುವಾಗಲೂ, ಎಚ್ಚರವಿಲ್ಲದಿರುವಾಗಲೂ ನಾವು ಉಸಿರಾಡುತ್ತಲೇ ಇರುತ್ತೇವೆ! ನಮ್ಮ ನಿಯಂತ್ರಣವಿದ್ದಿದ್ದರೆ ನಾವು ಉಸಿರಾಡುವುದನ್ನು ನಿಲ್ಲಿಸುತ್ತಲೇ ಇರುತ್ತಿರಲಿಲ್ಲ. ಏಕೆಂದರೆ, ಸಾಯುವುದಕ್ಕೆ ಯಾರು ಇಷ್ಟ ಪಡುತ್ತಾರೆ?
     ಉಸಿರು ಜೀವನಾಧಾರವಾಗಿರುವಂತೆಯೇ ನಮ್ಮನ್ನು ಮತ್ತು ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲೂ ಸಹಕಾರಿಯಾಗಿದೆ. ಕೋಪ ಬಂದಾಗ ಭುಸುಗುಡುತ್ತಾ ವೇಗವಾಗಿ ಉಸಿರಾಡುತ್ತೇವೆ. ಶೋಕದಲ್ಲಿದ್ದಾಗ, ಸಂತೋಷದಲ್ಲಿದ್ದಾಗ, ಶಾಂತವಾಗಿದ್ದಾಗ ಉಸಿರಾಡುವ ರೀತಿಗಳೇ ಬೇರೆಯಾಗಿರುತ್ತವೆ. ಶಾಂತವಾಗಿರುವಾಗ ಉಸಿರಾಟ ಬಹಳ ನಿಧಾನವಾಗಿರುತ್ತದೆ. ಆದ್ದರಿಂದ ಕೋಪ ಬಂದಾಗ, ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಸ್ವಲ್ಪ ಹೊತ್ತು ನಿಧಾನವಾಗಿ ಮತ್ತು ದೀರ್ಘವಾಗಿ ಉಸಿರಾಟ ಮಾಡಿದರೆ ಮನಸ್ಸು ತಹಬಂದಿಗೆ ಬರುತ್ತದೆ. ಪ್ರಾಣಾಯಾಮ ಮನಸ್ಸನ್ನು ಶಾಂತಗೊಳಿಸಲು ಸಹಕಾರಿಯಾದ ಕ್ರಮವಾಗಿದೆ. ಪ್ರಾಣಾಯಾಮದಲ್ಲಿ ಉಸಿರನ್ನು ಹೊರಬಿಡುವುದಕ್ಕೆ ರೇಚಕ, ಸಾಧ್ಯವಾದಷ್ಟು ಉಸಿರನ್ನು ಹೊರಗೇ ತಡೆಹಿಡಿದಿಡುವುದಕ್ಕೆ ಬಾಹ್ಯ ಕುಂಭಕ, ಉಸಿರನ್ನು ಒಳಗೆ ತೆಗೆದುಕೊಳ್ಳುವುದಕ್ಕೆ ಪೂರಕ, ಸಾಧ್ಯವಾದಷ್ಟು ಉಸಿರನ್ನು ಒಳಗೇ ತಡೆಹಿಡಿದಿಡುವುದಕ್ಕೆ ಅಭ್ಯಂತರ ಕುಂಭಕ ಎನ್ನುತ್ತಾರೆ. ಈ ನಾಲ್ಕೂ ಸೇರಿದರೆ ಒಂದು ಪ್ರಾಣಾಯಾಮ ಎನ್ನುತ್ತಾರೆ. ವಿವಿಧ ರೀತಿಯ ಪ್ರಾಣಾಯಾಮಗಳಿದ್ದು ಅದರಿಂದ ದೇಹದ ಕಾಯಿಲೆಗಳ ಉಪಶಮನಕ್ಕೆ ಸಹಕಾರಿಯಾಗುವಂತಹವೂ ಇವೆ. ತಿಳಿದವರಿಂದ ಕಲಿತು ಪ್ರಾಣಾಯಾಮದ ಅಭ್ಯಾಸ ಮಾಡುವುದು ಒಳಿತು. ಸರಿಯಾದ ವಿದ್ಯೆ ಕಲಿಸುವವರು ಸಿಗದಿದ್ದರೆ ಅಥವ ಕಲಿಯಲು ಸಾಧ್ಯವಾಗದಿದ್ದರೆ ದೀರ್ಘ ಶ್ವಾಸೋಚ್ಛ್ವಾಸಗಳೇ ಸಾಕಾಗುತ್ತದೆ. ದೀರ್ಘ ಉಸಿರಾಟ ದೀರ್ಘ ಆಯಸ್ಸಿನ ರಹಸ್ಯವೆಂದು ಹೇಳುತ್ತಾರೆ. ದೀರ್ಘಕಾಲ ಬದುಕುವ ಆಮೆ ಬಹಳ ನಿಧಾನವಾಗಿ ಉಸಿರಾಡುತ್ತದೆ. ಪ್ರಾಣಾಯಾಮದ ಮಂತ್ರಗಳಿವು:
ಓಂ ಭೂಃ| ಓಂ ಭುವಃ| ಓಂ ಸ್ವಃ| ಓಂ ಮಹಃ| ಓಂ ಜನಃ| ಓಂ ತಪಃ| ಓಂ ಸತ್ಯಂ|
     ಸರ್ವರಕ್ಷಕ ದೇವ ಸದ್ರೂಪನು, ಸರ್ವವ್ಯಾಪಿ ದೇವ ಚಿದ್ರೂಪನು, ಸರ್ವಪ್ರದ ದೇವ ಆನಂದಸ್ವರೂಪನು, ಸರ್ವಾಚ್ಛಾದಕ ದೇವ ಮಹತ್ತಮನು, ಸರ್ವ ಪ್ರಾಪ್ಯ ದೇವ ಜಗಜ್ಜನಕನು, ಜ್ಞಾನಸ್ವರೂಪ ದೇವ ತಪಃಸ್ವರೂಪನು, ಸಹನಶೀಲನು, ಅನಾದಿ ಅನಂತ ಸತ್ಯಸ್ವರೂಪನು ಎಂಬುದು ಈ ಮಂತ್ರದ ಅರ್ಥವಾಗಿದೆ. ಯಜ್ಞ ಮಾಡುವಾಗ, ಅಗ್ನಿಹೋತ್ರ, ಹೋಮ-ಹವನಗಳನ್ನು ಮಾಡುವಾಗ ಸಾಮಾನ್ಯವಾಗಿ ಈ ಮಂತ್ರವನ್ನೂ ಉಚ್ಛರಿಸಲಾಗುತ್ತದೆ:
ಓಂ ಭೂರ್ಭುವಃ ಸ್ವರಗ್ನಿ ವಾಯ್ವಾದಿತ್ಯೇಭ್ಯಃ ಸ್ವಾಹಾ| ಇದಮಗ್ನಿ ವಾಯ್ವಾದಿತ್ಯೇಭ್ಯಃ ಇದಂ ನ ಮಮ|| (ತೈತ್ತರೀಯ ಅರಣ್ಯಕ.10.3.)
     ಆ ಸಚ್ಚಿದಾನಂದ ಸ್ವರೂಪನಾದ ಪ್ರಭುವಿನ ನಾಯಕತ್ವ, ಪ್ರಾಣಾಧಾರಕತ್ವ, ಅಖಂಡತ್ವಗಳ ಅನುಭೂತಿಗಾಗಿ ಈ ಆತ್ಮನಿವೇದನೆ. ಇದು ಆ ದೇವನ ನೇತೃತ್ವ, ಪ್ರಾಣಪ್ರದತ್ವ ಮತ್ತು ಅಖಂಡತ್ವದ ಸಾಕ್ಷಾತ್ಕಾರಕ್ಕಾಗಿಯೇ ಹೊರತು ನನ್ನ ಸ್ವಾರ್ಥಕ್ಕಲ್ಲ ಎಂಬುದು ಈ ಮಂತ್ರದ ಅರ್ಥ. ಯಜ್ಞದ ಸಂದರ್ಭದಲ್ಲಿ ಅರ್ಪಿಸಲಾಗುವ ಔಷಧೀಯ ಗುಣಗಳುಳ್ಳ ಹವಿಸ್ಸು, ಸಮಿತ್ತುಗಳನ್ನು ಅಗ್ನಿ ಅರಗಿಸಿದರೆ, ವಾಯುವು ಅದನ್ನು ಸರ್ವರಿಗೂ ತಲುಪಿಸುವ ಕೆಲಸ ಮಾಡುತ್ತಾನೆ.
     ವೈಜ್ಞಾನಿಕವಾಗಿಯೂ ಸಹ ವಾತಾವರಣವೆಂದು ಕರೆಯಲಾಗುವ ವಾಯುವಿನ ಮಹತ್ವ ವಿವರಿಸಲಾಗಿದೆ. ವಾಯು ಒಂದು ಮಹತ್ವವಾದ ಶಕ್ತಿಯಾಗಿದ್ದು, ಈ ಜೀವನಾಧಾರ ವಾಯುವಿನ ಬಗ್ಗೆ ನಾವು ಕೃತಜ್ಞರಾಗಿರಬೇಕಿದೆ. ಪ್ರತಿ ಮಾನವ ಮಾನವನೆನಿಸಿಕೊಳ್ಳಬೇಕಾದರೆ ಜೀವಿತಕಾಲದಲ್ಲಿ ಮೂರು ಋಣಗಳನ್ನು ತೀರಿಸಬೇಕಿರುತ್ತದೆ - ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ಪಿತೃಋಣ ಮತ್ತು ಆಚಾರ್ಯಋಣಗಳ ಬಗ್ಗೆ ಚರ್ಚಿಸುವುದು ಇಲ್ಲಿ ಅಪ್ರಸ್ತುತವಾಗುತ್ತದೆ. ಇನ್ನು ದೇವಋಣವನ್ನು ತೀರಿಸುವುದು ಹೇಗೆ? ದೇವರ ಧ್ಯಾನ ಮಾಡುತ್ತಾ ಕೂರುವುದೇ? ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಪೂಜೆ ಸಲ್ಲಿಸುವುದೇ? ಇದಾವುದೂ ಅಲ್ಲ. ನಮ್ಮ ಶರೀರ ಪಂಚಭೂತಗಳಿಂದ ಕೂಡಿದ್ದು ಅಂತ್ಯದಲ್ಲಿ ಸೇರುವುದು ಪಂಚಭೂತಗಳಲ್ಲಿಯೇ! ನಮಗೆ ದೇವರ ಅನುಭವವಾಗಬೇಕೆಂದರೆ ಪಂಚಭೂತಗಳ ಸಹಾಯದಿಂದ ಪಂಚಭೂತಗಳ ರೂಪದಲ್ಲಿಯೇ ಆಗಬೇಕು. ಈ ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶಗಳ ಪ್ರತಿ ನಮಗೆ ಜವಾಬ್ದಾರಿಯಿದೆ. ಅದೆಂದರೆ ಅವುಗಳನ್ನು ಹಾನಿ ಮಾಡದೆ ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗಳೂ 'ಜೀವಿಸಲು' ಅನುಕೂಲ ಮಾಡಿಕೊಡುವುದು! ಇದೇ ದೇವಋಣ ತೀರಿಸುವ ರೀತಿ!
     ವಾಯುವನ್ನು ಶುದ್ಧವಾಗಿಡುವಲ್ಲಿ ನಮ್ಮ ಕರ್ತವ್ಯದ ಬಗ್ಗೆ ಗಮನಿಸೋಣ. ವಾಯುಮಾಲಿನ್ಯದಿಂದ ಜಗತ್ತು ತಲ್ಲಣಿಸುತ್ತಿದೆ. ಇದರಿಂದಾಗಿ ನೂರಾರು ರೀತಿಯ ಕಾಯಿಲೆಗಳು, ಸಾವು ಸಂಭವಿಸುವುದು, ಇತರ ಜೀವ ಜಗತ್ತುಗಳಿಗೂ ಆಪತ್ತು, ತಿನ್ನುವ ಆಹಾರ ಕಲುಷಿತವಾಗುವುದು, ಬೆಳೆಗಳು ರೋಗಗ್ರಸ್ಥವಾಗುವುದು, ಇತ್ಯಾದಿ ಗಂಭೀರ ಸಮಸ್ಯೆಗಳು ಉಂಟಾಗುತ್ತಿವೆ. ಭೋಪಾಲ್ ವಿಷಾನಿಲ ದುರಂತದಿಂದ ಸಾವಿರಾರು ಜನರು ಮೃತರಾದುದು, ಬದುಕಿರುವವರು ಶೇಷ ಜೀವನ ಪೂರ್ತಿ ವಾಸಿಯಾಗದ ಕಾಯಿಲೆಗಳಿಂದ ನರಳುತ್ತಿರುವುದು ನಮ್ಮ ಕಣ್ಣ ಮುಂದಿನ ಜ್ವಲಂತ ಉದಾಹರಣೆಯಾಗಿದೆ. ಫ್ಯಾಕ್ಟರಿಗಳಿಂದ ಹೊರಹೊಮ್ಮುವ ವಿಷಾನಿಲಗಳು, ವಾಹನಗಳ ಹೊಗೆ, ಅಣುವಿಕಿರಣ ಹೊಮ್ಮಿಸುವ ಮಿಲಿಟರಿ ಉಪಕರಣಗಳು, ಅಸಮರ್ಪಕ ತ್ಯಾಜ್ಯ ವಿಲೇವಾರಿ, ರಾಸಾಯನಿಕ ಅಸ್ತ್ರ-ಶಸ್ತ್ರಗಳು ಇತ್ಯಾದಿಗಳು ಮಾನವ ಕಾರಣದಿಂದಾಗಿ ಆಗುವ ಮಾಲಿನ್ಯಗಳಿಗೆ ಉದಾಹರಣೆಯಾಗಿವೆ. ಮನೆಯ ಒಳಗೆ ಸರಿಯಾಗಿ ಗಾಳಿ, ಬೆಳಕು ಚಲಿಸಲು ಅವಕಾಶವಿಲ್ಲದಿದ್ದರೆ ಸಹ ಅಲ್ಲಿ ದೂಷಿತ ವಾತಾವರಣ ಸೃಷ್ಟಿಯಾಗುತ್ತದೆ. ವಾಯುಮಾಲಿನ್ಯದಿಂದ ಹೃದ್ರೋಗಗಳು, ಕ್ಯಾನ್ಸರ್, ಆಸ್ತಮಾ ಮುಂತಾದ ರೋಗಗಳಲ್ಲದೆ ಮಕ್ಕಳು ಹುಟ್ಟುವಾಗಲೇ ಸಾಯುವ ಸಂಭವನೀಯತೆಯೂ ಇರುತ್ತದೆ.
     ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಜನಪರ ಕಾಳಜಿಯುಳ್ಳ ಜನರು ಮತ್ತು ಸಂಘ-ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ತಂದು ಯೋಜಿತ ರೀತಿಯಲ್ಲಿ ನಗರಗಳ ನಿರ್ಮಾಣ, ವಾಹನಗಳ ನಿಯಂತ್ರಣ, ವೈಜ್ಞಾನಿಕ ರೀತಿಯ ತ್ಯಾಜ್ಯ ವಿಲೇವಾರಿ, ವಾಯುಶುದ್ಧೀಕರಣದ ಕುರಿತು ಕ್ರಮಗಳನ್ನು ಅನುಸರಿಸುವಂತೆ ಮಾಡಬೇಕಿದೆ. ಭಾರತದಲ್ಲಿ ದೆಹಲಿ, ಕೊಲ್ಕತ್ತ, ಕಾನ್ಪುರ, ಲಕ್ನೌಗಳು ಅತ್ಯಂತ ಕಲುಷಿತ ನಗರಗಳೆಂದು ಹೆಸರಿಸಲ್ಪಟ್ಟಿವೆ. ಉದ್ಯಾನನಗರಿಯೆಂದು ಒಮ್ಮೆ ಹೆಸರಾಗಿದ್ದ ಬೆಂಗಳೂರನ್ನು ಇಂದು ಕಾಂಕ್ರೀಟ್ ನಗರಿ ಮಾತ್ರವಲ್ಲ ಕೊಳಚೆನಗರಿ ಎಂತಲೂ ಹೆಸರಿಸಬಹುದೇನೋ! ವೈಯಕ್ತಿಕವಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಮಾಲಿನ್ಯ ಉಂಟುಮಾಡುವವರನ್ನು ತಡೆಯುವ ಕೆಲಸವನ್ನೂ ಮಾಡಿದರೆ ಇದು ಖಂಡಿತವಾಗಿ ದೇವಋಣವನ್ನು ತೀರಿಸಿದಂತೆ ಆಗುತ್ತದೆ. ಈ ವೇದಮಂತ್ರ ಹೇಳುತ್ತದೆ:
ಯಸ್ಯ ಸೂರ್ಯಶ್ಚಕ್ಷುಶ್ಚಂದ್ರಮಾಶ್ಚ ಪುನರ್ಣವಃ| ಅಗ್ನಿಂ ಯಶ್ಚಕ್ರ ಅಸ್ಯಂ ತಸ್ಮೈ ಜ್ಯೇಷ್ಠಾಯ ಬ್ರಹ್ಮಣೇ ನಮಃ|| ಯಸ್ಯ ವಾತಃ ಪ್ರಾಣಾಪಾನೌ ಚಕ್ಷುರಂಗಿರಸೋ ಭವನ್| ದಿಶೋ ಯಶ್ಚಕ್ರೇ ಪ್ರಜ್ಞಾನೀಸ್ತಸ್ಯ ಜ್ಯೇಷ್ಠಾಯ ಬ್ರಹ್ಮಣೇ ನಮಃ|| (ಅಥರ್ವ.10.7.32-34)
     ಅರ್ಥ: ಸಕಲ ಜೀವಿಗಳಿಗೆ ಆಶ್ರಯವಾದ ಭೂಮಿ ಯಾರ ಪಾದಗಳಂತಿರುವುದೋ, ವಿಶಾಲ ಅಂತರಿಕ್ಷವು ಯಾರ ಉದರಸಮಾನವಾಗಿರುವುದೋ, ದ್ಯುಲೋಕವು ಯಾರ ಶಿರದಂತೆ ಇರುವುದೋ, ಸೂರ್ಯ-ಚಂದ್ರರು ಯಾರ ಕಣ್ಣುಗಳಂತಿರುವುದೋ, ಉಜ್ವಲವಾದ ಅಗ್ನಿಯು ಯಾರ ಮುಖದಂತಿರುವುದೋ, ಸರ್ವವ್ಯಾಪಿ, ಗತಿಶೀಲ ವಾಯು ಯಾರ ಪ್ರಾಣಾಪಾನಗಳಂತಿರುವುದೋ, ಪ್ರಕಾಶಮಾನ ಕಿರಣಗಳ ಸಮೂಹ ಯಾರ ಕಣ್ಣಿನ ಬೆಳಕಿನಂತಿರುವುದೋ, ಜ್ಞಾನ ಸಾಧಕ ದಿಕ್ಕುಗಳು ಯಾರ ಕರ್ಣಗಳಿಂತಿರುವುದೋ ಆ ಬ್ರಹ್ಮಾಂಡಸ್ವರೂಪಿ ಶರೀರಧಾರಿಯಾದ, ವಸ್ತುತಃ ಅಶರೀರನಾದ ಸರ್ವಶ್ರೇಷ್ಠ ಪರಮಾತ್ಮನಿಗೆ ನಮ್ಮ ಅತ್ಯಂತ ಭಕ್ತ್ಯಾದರಗಳ ನಮನಗಳು. ಪಂಚಭೂತಗಳ ರೂಪದಲ್ಲಿ ಭಗವಂತನನ್ನು ಕಾಣಲು ಈ ಮಂತ್ರ ನಮ್ಮನ್ನು ಪ್ರೇರಿಸುವುದಿಲ್ಲವೇ?
-ಕ.ವೆಂ.ನಾಗರಾಜ್.
***************
ದಿನಾಂಕ 12.11.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಡಿಸೆಂಬರ್ 6, 2015

ಸಾಧನಾ ಸೋಪಾನ - 12: ಅಗ್ನಿ - ಜೀವರು ಮತ್ತು ದೇವರ ನಡುವಣ ಕೊಂಡಿ


     ಸಾಧನಾಪಥದ ಸೋಪಾನಗಳಾದ ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ್ಯಾನ ಏಕೆ ಮತ್ತು ಹೇಗೆ ಎಂಬ ಅರಿವು, ದೈಹಿಕ ಮತ್ತು ಮಾನಸಿಕ ಶಕ್ತಿ, ಆಹಾರ, ನೆಲ ಮತ್ತು ಜಲಗಳಿಗಿಂತ ಅಗ್ನಿತತ್ತ್ವ ಹೇಗೆ ಮೇಲಿನದೆಂಬ ಬಗ್ಗೆ ನೋಡೋಣ. ಸೂಕ್ಷ್ಮ ತತ್ತ್ವಗಳು ಸ್ಥೂಲ ತತ್ತ್ವಗಳಿಗಿಂತ ಹೆಚ್ಚು ವ್ಯಾಪಿಸಬಲ್ಲವಾದುದಾಗಿವೆ. ಅಗ್ನಿತತ್ತ್ವ ಸೃಷ್ಟಿಕಾರಕ, ಸ್ಥಿತಿಕಾರಕ ಮತ್ತು ಲಯಕಾರಕ ಪರಮಾತ್ಮನ ಗುಣಗಳನ್ನು ಹೊಂದಿದೆ. ಸೂರ್ಯ ನಮಗೆ ಬೆಳಕು ಮತ್ತು ಶಾಖ ನೀಡುವವನಾಗಿದ್ದಾನೆ. ಶಾಖ ಹೆಚ್ಚಾದಾಗ ಮಳೆ ಬರುತ್ತದೆ, ನೀರು ಅಗ್ನಿಯ ಕಾರಣದಿಂದ, ಅದರ ನಂತರದಲ್ಲಿ ಬರುತ್ತದೆ. ಮಳೆ ಹೇಗೆ ಬರುತ್ತದೆ ಎಂಬುದು ಸಾಮಾನ್ಯ ಜ್ಞಾನದ ಅರಿವಿರುವವರಿಗೆ ತಿಳಿದೇ ಇರುತ್ತದೆ. ನದಿ, ಕೆರೆ, ಕಟ್ಟೆಗಳು, ಸಾಗರಗಳಲ್ಲಿನ ನೀರು ಶಾಖದಿಂದಾಗಿ ಆವಿಯಾಗಿ ವಾತಾವರಣದಲ್ಲಿ ಸೇರಿ ನೀರಿನ ಸಣ್ಣ ಕಣಗಳಾಗಿ ಸಂಗ್ರಹವಾಗುತ್ತವೆ. ಇವುಗಳು ಮೋಡದ ರೂಪದಲ್ಲಿ ಸಂಗ್ರಹವಾಗುತ್ತವೆ. ಹೆಚ್ಚಿನ ಕಣಗಳ ದಟ್ಟ ಸಂಗ್ರಹವಾದಾಗ ಮೋಡಗಳು ಕಪ್ಪಾಗಿ ಭಾರವಾಗುತ್ತಾ ಹೋಗುತ್ತವೆ. ನೀರಿನ ಸಣ್ಣ ಕಣಗಳು ಪರಸ್ಪರ ಡಿಕ್ಕಿ ಹೊಡೆದಾಗ ಒಟ್ಟುಗೂಡಿ ದೊಡ್ಡ ಕಣಗಳಾಗುತ್ತಾ ಹೋಗುತ್ತವೆ. ಗುಡುಗು, ಸಿಡಿಲುಗಳೂ ಸಹ ಈ ಸಂದರ್ಭದಲ್ಲಿ ಕಾಣಬರುತ್ತವೆ. ಸಾಂದ್ರತೆ ಹೆಚ್ಚಾಗಿ ಗಾಳಿಗಿಂತ ಭಾರವಾದಾಗ ಅದು ಮಳೆಯಾಗಿ ಕೆಳಗೆ ಬೀಳುತ್ತದೆ. ಈ ಚಕ್ರ ನಿರಂತರವಾಗಿ ನಡೆಯುತ್ತಿರುತ್ತದೆ. ಸ್ವಾರ್ಥಕ್ಕಾಗಿ ಜಲಮೂಲಗಳನ್ನು ಮುಚ್ಚುತ್ತಿರುವ, ಕಾಡುಗಳನ್ನು, ಬೆಟ್ಟಗುಡ್ಡಗಳನ್ನು ನಾಶ ಮಾಡುತ್ತಿರುವ ಮಾನವ ಈ ಚಕ್ರ ಸುಗಮವಾಗಿ ತಿರುಗಲು ಅಡ್ಡಿಯಾಗಿದ್ದಾನೆ. ಇದರಿಂದಾಗಿ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದಿರುವುದು ಅಥವ ಅತಿಯಾಗಿ ಮಳೆಯಾಗುವುದು ಮುಂತಾದ ಅತಿರೇಕಗಳನ್ನು ಕಾಣುತ್ತಿದ್ದೇವೆ.
     ಪ್ರಮುಖವಾದ ಶಾಖ ಮತ್ತು ಬೆಳಕಿನ ಮೂಲವಾದ ಸೂರ್ಯ ಸೌರ ಮಂಡಲದ ಪ್ರಧಾನವಾದ ಮತ್ತು ಕೇಂದ್ರದಲ್ಲಿರುವ ಬೃಹತ್ ನಕ್ಷತ್ರವಾಗಿದೆ. ಭೂಮಿಯ ವ್ಯಾಸದ ಸುಮಾರು 109ರಷ್ಟು ದೊಡ್ಡದಾದ ಸೂರ್ಯ, ಭೂಮಿಯ ಸುಮಾರು 330,000ದಷ್ಟು ತೂಕವುಳ್ಳದ್ದಾಗಿದೆ. ಇದು ಸೌರಮಂಡಲದ ಒಟ್ಟು ತೂಕದ ಶೇ.99.86 ರಷ್ಟಿದೆ. ಈಗಿನ ಸೂರ್ಯ ಸುಮಾರು 4.567 ಬಿಲಿಯನ್ ವರ್ಷಗಳ ಹಿಂದೆ ಉಗಮಗೊಂಡವನಾಗಿದ್ದು, ಇನ್ನೂ ಸುಮಾರು 4 ಬಿಲಿಯನ್ ವರ್ಷಗಳವರೆಗೆ ಇರುತ್ತಾನೆನ್ನಲಾಗಿದೆ. ಶೇ.73.46ರಷ್ಟು ಜಲಜನಕ, ಶೇ.24.85ರಷ್ಟು ಹೀಲಿಯಮ್ ಹೊಂದಿರುವ ಸೂರ್ಯ ಉಳಿದ ಶೇ.1.69ರಷ್ಟು ಪ್ರಮಾಣದಲ್ಲಿ ಆಮ್ಲಜನಕ, ಇಂಗಾಲ, ಕಬ್ಬಿಣ, ನಿಯಾನ್, ಸಾರಜನಕ, ಸಿಲಿಕಾನ್, ಮೆಗ್ನೀಷಿಯಮ್ ಮತ್ತು ಗಂಧಕಗಳನ್ನು ಹೊಂದಿದೆ. ಇನ್ನೂ ಹೆಚ್ಚಿನ ಕುತೂಹಲಕಾರಿ ವಿಷಯಗಳನ್ನು  http://en.wikipedia.org/wiki/Sun ಇಲ್ಲಿ ತಿಳಿಯಬಹುದು. ಲೇಖನಕ್ಕೆ ಪೂರಕವಾಗಿ ಕೆಲವು ಮಾಹಿತಿಯನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಿದೆ. ಆಗಸದಲ್ಲಿ ಅತಿ ಪ್ರಕಾಶಮಾನವಾದ ನಕ್ಷತ್ರವೆಂದರೆ ಸೂರ್ಯವೇ ಆಗಿದೆ. ಸೂರ್ಯನನ್ನು ದೇವತೆಯೆಂದು ಆರಾಧಿಸುವುದನ್ನು ಕಾಣಬಹುದು. ಭೂಮಿಯ ಮೇಲೆ ಸೂರ್ಯನ ಪ್ರಭಾವ ಗಣನೀಯವಾಗಿದ್ದು, ಸೂರ್ಯನ ಸುತ್ತ ಒಂದು ಸುತ್ತು ಸುತ್ತಲು ಭೂಮಿ ತೆಗೆದುಕೊಳ್ಳುವ ಕಾಲವನ್ನು ಒಂದು ವರ್ಷವೆನ್ನುತ್ತಾರೆ. ಈ ಕಾಲಗಣನೆಯೇ ಇಂದು ಬಳಕೆಯಲ್ಲಿರುವುದಾಗಿದೆ. ವಾರದ ಮೊದಲ ದಿನವನ್ನು ರವಿವಾರವೆಂದು ಹೆಸರಿಸಲಾಗಿದೆ. ಒಟ್ಟಾರೆಯಾಗಿ ಸೂರ್ಯ ಜೀವಿಗಳಿಗೆ ಶಕ್ತಿ, ಬೆಳಕು, ಜೀವನಾಧಾರ ಸಂಗತಿಯಾಗಿದ್ದಾನೆ.      ಈ ಬೃಹತ್ ಬ್ರಹ್ಮಾಂಡದಲ್ಲಿ ನಮ್ಮ ಭೂಮಿ ಇರುವುದೊಂದೇ ಸೂರ್ಯ ಮಂಡಲ ಅಲ್ಲ. ಇಂತಹ ಅದೆಷ್ಟು ಅಸಂಖ್ಯ ಸೂರ್ಯಗಳು, ಭೂಮಿಗಳು ಇರುವ ಸೂರ್ಯಮಂಡಲವಿದೆಯೋ ಗೊತ್ತಿಲ್ಲ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಈಗಾಗಲೇ ಸುಮಾರು 500 ಸೂರ್ಯಮಂಡಲಗಳಿರುವುದನ್ನು ಖಚಿತಪಡಿಸಿದ್ದಾರೆ, ಇನ್ನೂ ಹೊಸ ಹೊಸ ಸೂರ್ಯಮಂಡಲಗಳು ಪತ್ತೆಯಾಗುತ್ತಿವೆ.
     "ಓಂ ಸೂರ್ಯೋ ಜ್ಯೋತಿರ್ಜ್ಯೋತಿಃ ಸೂರ್ಯಃ ಸ್ವಾಹಾ||" (ಯಜು.3.9.1.) 'ಸೂರ್ಯ ಜ್ಯೋತಿರ್ಯುಕ್ತನಾಗಿದ್ದಾನೆ. ಆದರೆ ಜ್ಯೋತಿರ್ಮಯ ಪ್ರಭುವು ಸೂರ್ಯನಿಗೂ ಸೂರ್ಯನಾಗಿದ್ದಾನೆ. ಇದು ಸತ್ಯ' ಎಂಬುದು ಇದರ ಅರ್ಥ. ವೇದಗಳು ಪರಮಾತ್ಮನನ್ನು ಅಗ್ನಿ ಎಂತಲೂ ಸಂಬೋಧಿಸಿರುವುದನ್ನು ಕಾಣಬಹುದು. ಇಲ್ಲಿ ಅಗ್ನಿ ಎಂದರೆ ಜ್ಯೋತಿರ್ಮಯ ಎಂದರ್ಥ. ಋಗ್ವೇದದ ಮೊದಲ ಮಂತ್ರ ಹೀಗಿದೆ:
ಅಗ್ನಿಮೀಳೇ ಪುರೋಹಿತಂ ಯಜ್ಷಸ್ಯ ದೇವಮೃತ್ವಿಜಮ್ | ಹೋತಾರಂ ರತ್ನಧಾತಮಮ್ || (ಋಕ್.೧.೧.೧.) (ಸರ್ವಹಿತಕಾರಿ, ಪೂಜ್ಯತಮ, ಜ್ಞಾನಸ್ವರೂಪ, ಜ್ಞಾನದಾತ, ಸರ್ವಪ್ರಥಮ, ಸರ್ವೋಪರಿಸ್ಥಿತ ಪರಮಾತ್ಮನನ್ನು ಸ್ತುತಿಸುತ್ತೇನೆ. ಅವನು ಬ್ರಹ್ಮಾಂಡರೂಪಿ ಯಜ್ಞದ ಪ್ರಕಾಶಕ, ಪ್ರವರ್ತಕ, ಸಮಯಾನುಸಾರ ಎಲ್ಲವನ್ನೂ ಪ್ರಾಪ್ತಗೊಳಿಸುವವನು,, ಸೃಷ್ಟಿ, ಸ್ಥಿತಿ, ಲಯಕರ್ತನು, ಪ್ರಸನ್ನತೆಯನ್ನುಂಟುಮಾಡುವ ರತ್ನಾದಿಗಳನ್ನು, ಉತ್ಕೃಷ್ಟ ಅನ್ನ, ಜಲ, ಫಲ ಪುಷ್ಪಾದಿಗಳನ್ನು ಕರುಣಿಸುವವನೂ ಆಗಿದ್ದಾನೆ.) ಪ್ರಾತಃಕಾಲದಲ್ಲಿ ಆಸ್ತಿಕರು ಉಚ್ಛರಿಸುವ ಈ ಮಂತ್ರವನ್ನು ಗಮನಿಸಿ:
ಓಂ ಪ್ರಾತರ್ಜಿತಂ ಭಗಮುಗ್ರಂ ಹುವೇಮ ವಯಂ ಪುತ್ರಮದಿತೇರ್ಯೋ ವಿಧರ್ತಾ |
ಆಧ್ರಶ್ಚಿದ್ ಯಂ ಮನ್ಯಮನಸ್ತುರಶ್ಚಿದ್ ರಾಜಾ ಚಿದ್ ಯಂ ಭಗಂ ಭಕ್ಷೀತ್ಯಾಹಃ || (ಋಕ್.೭.೪೧.೨)
    'ನಿತ್ಯವಿಜಯಿಯೂ, ಅತಿ ತೇಜಸ್ವಿಯೂ, ಸೂರ್ಯಾದಿ ಪ್ರಕಾಶಪುಂಜಗಳ ನಿತ್ಯಧಾರಕನೂ, ಸರ್ವಜ್ಞನೂ, ಪಾತಕಿಗಳನ್ನು ದಂಡಿಸುವವನೂ ಆದ ದೇವದೇವನ ದಿವ್ಯ ಪ್ರಕಾಶವನ್ನು ನಾವು ಪ್ರಾತಃಕಾಲ ಧರಿಸೋಣ' ಎಂಬದು ಇದರ ಅರ್ಥ. ಅಗ್ರಣಿಯಾಗಿರುವುದರಿಂದ, ಸದಾ ಜಾಗೃತವಾಗಿರುವುದರಿಂದ, ಜ್ಞಾನದಾಯಕನಾಗಿರುವುದರಿಂದ ಅಗ್ನಿಯನ್ನು ಆತ್ಮಕ್ಕೂ ಹೋಲಿಸುತ್ತಾರೆ. ಜ್ಞಾನಜ್ಯೋತಿ ಬೆಳಗಲಿ ಎಂಬ ಪದಪ್ರಯೋಗ ಗಮನಿಸಬಹುದು. ಯಜ್ಞದಲ್ಲಿ ಅಗ್ನಿಗೆ ಪ್ರಧಾನ ಪಾತ್ರವಿದೆ. ಇಲ್ಲಿ ಯಜ್ಞವೆಂದರೆ ಕೇವಲ ಹವನ, ಹೋಮಗಳಲ್ಲ. ಯಜ್ಞವೆಂದರೆ ಶ್ರೇಷ್ಠತಮವಾದ ಕರ್ಮಗಳು. ಈ ಅರ್ಥದಲ್ಲಿ ಒಳ್ಳೆಯ ರೀತಿಯಲ್ಲಿ ಸಹಜೀವಿಗಳ ಹಿತ ಗಮನದಲ್ಲಿರಿಸಿ ಬಾಳುವುದೇ ಯಜ್ಞವೆನಿಸುತ್ತದೆ. ಅಗ್ನಿಗೆ ಅರ್ಪಿಸುವ ವಸ್ತುಗಳನ್ನು ಅರಗಿಸಿ, ವಿಭಜಿಸಿ ಅದರ ಗುಣವನ್ನು ಎಲ್ಲೆಡೆಗೆ ಹರಡುವ ಶಕ್ತಿ ಇದೆ. ಆದ್ದರಿಂದ ಯಜ್ಞದಲ್ಲಿ ಅರ್ಪಿಸುವ ಹವಿಸ್ಸುಗಳು ಸುತ್ತಮತ್ತಲಿನ ವಾತಾವರಣವನ್ನು ಶುದ್ಧಗೊಳಿಸುವಂತಹದಾಗಿರಬೇಕು, ಆಹ್ಲಾದಕರ ವಾತಾವರಣ ನಿರ್ಮಿಸುವಂತಿರಬೇಕು. ಹವಿಸ್ಸು, ಸಮಿತ್ತು, ಪದಾರ್ಥಗಳನ್ನು ಅಗ್ನಿಗೆ ಅರ್ಪಿಸುವಾಗ 'ಇದಂ ನ ಮಮ' ಎಂಬ ಮಂತ್ರ ಉಚ್ಛರಿಸಲಾಗುತ್ತದೆ. ಇದರ ಅರ್ಥ, ಈ ಕಾರ್ಯ 'ನನಗಾಗಿ ಅಲ್ಲ', ಸಕಲರ ಹಿತಕ್ಕಾಗಿ ಎಂಬುದು ಸೂಚ್ಯಾರ್ಥವಾಗಿದೆ. ಅಗ್ನಿ ಜೀವರು ಮತ್ತು ದೇವರ ನಡುವಣ ಕೊಂಡಿಯಾಗಿದೆ.
     ಐದು ವಿಧದ ಅಗ್ನಿಯನ್ನು ಗುರುತಿಸುತ್ತಾರೆ - ಕಾಲಾಗ್ನಿ (ಸಮಯ), ಕ್ಷುದ್ಧಾಗ್ನಿ (ಹಸಿವು), ಶೀತಾಗ್ನಿ (ಶೀತಲ), ಕೋಪಾಗ್ನಿ (ಕೋಪ) ಮತ್ತು ಜ್ಞಾನಾಗ್ನಿ(ಜ್ಞಾನ). ನಮ್ಮ ಜೀವನದಲ್ಲಿ ಅನುಭವಕ್ಕೆ ಬರುವ ನವರಸಗಳೂ ಅಗ್ನಿಯ ಪ್ರತಿರೂಪವಾಗಿರುತ್ತವೆ. ಕಾಮಾಗ್ನಿ, ವಿರಹಾಗ್ನಿ, ಮೋಹಾಗ್ನಿ ಮುಂತಾದ ಪದಬಳಕೆಯನ್ನು ಗಮನಿಸಬಹುದು. ಬೆಂಕಿ ಉಗುಳುವ ಮಾತುಗಳು, ಕಣ್ಣಿನಲ್ಲೇ ಸುಡುವ ನೋಟ, ಹೊಟ್ಟೆಯುರಿ (ಮತ್ಸರ) ಮುಂತಾದವುಗಳೂ ಸಹ ಅಗ್ನಿಯ ಜೊತೆಗೂಡಿರುವುದನ್ನು ಕಾಣಬಹುದು. ಅಂದರೆ ಅಗ್ನಿ ನಮ್ಮತನವನ್ನು ಪ್ರತಿನಿಧಿಸುವ ಸಂಗತಿಯಾಗಿದೆ.
     ಅಗ್ನಿ ನೀರಿನಿಂದ ಉದಯಿಸುತ್ತದೆ ಮತ್ತು ನೀರಿನಲ್ಲಿ ವಾಸಿಸುತ್ತದೆ ಎಂದು ಋಗ್ವೇದದಲ್ಲಿ ಉಲ್ಲೇಖ ಬರುತ್ತದೆ. ವಿಷಯದ ಆಳಕ್ಕೆ ಹೋದರೆ ಇದರ ಅರ್ಥ ನಮಗೆ ತಿಳಿಯಬಹುದು. ನೀರು ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾಗಿದೆ. ಜಲಜನಕ ಶೀಘ್ರವಾಗಿ ದಹಿಸುವ ಅನಿಲವಾಗಿದ್ದು, ಆಮ್ಲಜನಕ ದಹನಕ್ಕೆ ಸಹಕಾರಿಯಾಗಿರುತ್ತದೆ ಅಲ್ಲವೇ? ಪ್ರತಿ ಶುಭ, ಅಶುಭ ಕಾರ್ಯಗಳಿಗೆ ಅಗ್ನಿ ಸಾಕ್ಷಿಯಾಗಿರುತ್ತದೆ. ಅಂತ್ಯ ಸಂಸ್ಕಾರದ ಕ್ರಿಯೆಯಲ್ಲಿ ಶವದಹನಕ್ಕೂ ಅಗ್ನಿ ಬೇಕು. ವೈವಾಹಿಕ ಜೀವನಕ್ಕೆ ಕಾಲಿಡುವಾಗಲೂ ಅಗ್ನಿಸಾಕ್ಷಿಯಾಗಿ ಕೈ ಹಿಡಿಯುವುದು ಎನ್ನುವರಲ್ಲವೇ? ಅಗ್ನಿ ಪಾವಿತ್ರ್ಯದ ಸಂಕೇತವೂ ಆಗಿದೆ, ಪರಮಾತ್ಮನಂತೆ ದಾರಿ ತೋರುವ ಗುಣವನ್ನೂ ಹೊಂದಿದೆ. ಈ ವೇದಮಂತ್ರ ಗಮನಿಸೋಣ:
ಓಂ ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ || (ಯಜು.40.16.)
     ಈ ಮಂತ್ರದ ಭಾವಾನುವಾದವನ್ನು ಹೀಗೆ ಮಾಡಬಹುದು:
ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಪ್ರಭು ವಂದನೆ ||
-ಕ.ವೆಂ.ನಾಗರಾಜ್.
***************
ದಿನಾಂಕ 5.11.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಡಿಸೆಂಬರ್ 1, 2015

ಸಾಧನಾ ಸೋಪಾನ - 11: ಜೀವಾಧಾರ ಜಲ     'ನೆಲ'ಕ್ಕಿಂತ ಜಲ ಮೇಲಿನದಾಗಿದೆ. ಘನವಾದ ಯಾವುದೇ ವಸ್ತುವು ಮೂಲತಃ ದ್ರವ ಸ್ಥಿತಿಯಲ್ಲಿದ್ದುದಾಗಿದ್ದು, ಭೂಮಿ ಸಹ ದ್ರವಮೂಲದಿಂದ ಉಗಮವಾದದ್ದಾಗಿದೆ. ಕೇವಲ ಭೂಮಿಯಲ್ಲ, ವಿಶ್ವದ ಯಾವುದೇ ಘನರೂಪದ ಕಾಯವಾಗಲೀ, ವಸ್ತುವಾಗಲೀ ಮೊದಲು ದ್ರವರೂಪದಲ್ಲಿ ಇದ್ದುದಾಗಿದೆ. ಈ ದ್ರವರೂಪದಲ್ಲಿದ್ದ ವಸ್ತು ಅದಕ್ಕೂ ಮೊದಲು ಅನಿಲರೂಪದಲ್ಲಿದ್ದಿತ್ತು. ಹೀಗಾಗಿ 'ಜಲ' ಎಂಬ ಪದದಲ್ಲಿ ಸಂಬೋಧಿಸಬಹುದಾದ ಈ ಸಂಗತಿ ಭೂಮಿಗಿಂತ ಮೇಲಿನದಾಗಿದೆ. ಸೃಷ್ಟಿಯ ರಚನೆಗೆ ಮೂಲ ದ್ರವರೂಪದ ವಸ್ತುವೆಂದು ಹೇಳುತ್ತಾರೆ. 
     ಜಲತತ್ತ್ವವಿಲ್ಲದಿರುತ್ತಿದ್ದರೆ ಜೀವನ ದುಸ್ತರವಾಗುತ್ತಿತ್ತು. ಮಳೆ ಇರದಿದ್ದಿದ್ದರೆ ಬೆಳೆ ಇರುತ್ತಿರಲಿಲ್ಲ. ನೆಲ ಒಣಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿತ್ತು. ಮಳೆ ಇಲ್ಲದಿದ್ದರೆ ನೆಲ ಆಹಾರ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುತ್ತಿತ್ತು. ನೆಲದ ಘನತತ್ತ್ವ ಮತ್ತು ಜಲತತ್ತ್ವಗಳ ಸಂಯೋಗ 'ಅನ್ನತತ್ತ್ವ'ದ ಉಗಮಕ್ಕೆ ಅಗತ್ಯ. ಮಳೆ ಬರದಿದ್ದರೆ ಕ್ಷಾಮ ಆವರಿಸಿ ಎಲ್ಲೆಲ್ಲೂ ಆಹಾರದ ಕೊರತೆಯಿಂದ ಜೀವಜಗತ್ತು ತಲ್ಲಣಿಸುತ್ತದೆ. ಮಳೆ ಬಂದರೆ ಪಶು, ಪಕ್ಷಿಗಳು ಸೇರಿದಂತೆ ಎಲ್ಲಾ ಜೀವಗಳಿಗೂ ತಂಪಾಗುತ್ತದೆ, ಪ್ರಕೃತಿ ಸಂತಸದಿಂದ ನಳನಳಿಸುತ್ತದೆ. 'ಅನ್ನ'ದ ಕುರಿತ ಲೇಖನದಲ್ಲಿ ಹೇಳಿದ ಎಲ್ಲಾ ಸಂಗತಿಗಳೂ ಜಲಕ್ಕೂ ಅನ್ವಯಿಸುತ್ತದೆ. ಪ್ರಪಂಚದ ನಾಗರಿಕತೆಗಳು ಬೆಳೆದದ್ದು, ಉಳಿದದ್ದು ನದಿ ತಟಗಳಲ್ಲಿಯೇ ಎಂಬುದು ಗಮನಾರ್ಹ. ಎಲ್ಲಿ ಜಲದ ಅಭಾವ ಇರುತ್ತದೋ ಅಲ್ಲಿ ಬದುಕು ದುಸ್ತರವಾಗುತ್ತದೆ.
     ಭೂಮಿಯ ಮೇಲ್ಭಾಗದ ಮುಕ್ಕಾಲು ಭಾಗ ನೀರಿನಿಂದ ಕೂಡಿದ್ದು ಕಾಲು ಭಾಗ ಮಾತ್ರ ಭೂಮಿ ಇದೆ. ಹೀಗಿದ್ದರೂ ನೀರಿನ ಅಭಾವ ಅನ್ನುವುದು ಆಶ್ಚರ್ಯ. ಭೂಮಿಯಲ್ಲಿರುವ ನೀರಿನ ಶೇ. 96.5ರಷ್ಟು ಭಾಗ ಸಾಗರಗಳಲ್ಲಿನ ಉಪ್ಪುನೀರಾಗಿದ್ದು ಮಾನವ ಬಳಕೆಗೆ ಬರುವುದಿಲ್ಲ. ಉಳಿದ ಶೇ. 3.5ರಷ್ಟರಲ್ಲಿ ಸಹ ಹೆಚ್ಚಿನ ಭಾಗ ಹೆಪ್ಪುಗಟ್ಟಿದ ನೀರಿನ ರೂಪದಲ್ಲಿ ಅಂದರೆ ಮಂಜುಗಡ್ಡೆಯ ರೂಪದಲ್ಲಿದೆ. ಉಳಿದ ಶೇ. 1 ರಿಂದ 2ರಷ್ಟು ಭಾಗ ಮಾತ್ರ ಮಾನವ ಬಳಕೆಗೆ ಯೋಗ್ಯವಾಗಿ ಲಭ್ಯವಿದೆ. ಮಂಜುಗಡ್ಡೆಯ ರೂಪದಲ್ಲಿರುವ ನೀರೆಲ್ಲಾ ಕರಗಿಸಿದರೆ ಸಮುದ್ರದ ಮಟ್ಟ ಈಗಿನದಕ್ಕಿಂತಲೂ ಸುಮಾರು 3 ಕಿ.ಮೀ. ಎತ್ತರಕ್ಕೆ ಏರುತ್ತದೆ. ಆಗ ಜಲಪ್ರಳಯವೇ ಆಗುತ್ತದೆ. ಒಂದು ದೊಡ್ಡ ಗಾತ್ರದ ಹಿಮದ ಗಡ್ಡೆ ಉರುಳಿ ಸಮುದ್ರಕ್ಕೆ ಜಾರಿದರೂ ದೊಡ್ಡ ಅನಾಹುತವೇ ಆಗುತ್ತದೆ.
     ಜನಸಂಖ್ಯೆ ಹೆಚ್ಚಾದಂತೆ ನೀರಿನ ಬಳಕೆ ಸಹ ಹೆಚ್ಚಾಗುತ್ತಿದೆ. ಆದ್ದರಿಂದ ನೀರಿನ ಬಳಕೆಯನ್ನು ಎಚ್ಚರದಿಂದ, ಜಾಣತನದಿಂದ ಮಾಡಬೇಕಿದೆ. ಆದರೆ, ವಾಸ್ತವವಾಗಿ ನಾವು ಮಾಡುತ್ತಿರುವುದೇನು? ಉಪಯೋಗಿಸಬಹುದಾದ ನೀರಿನ ಜಲಮೂಲಗಳಾದ ಕೆರೆ, ಕಟ್ಟೆಗಳನ್ನು ಮುಚ್ಚುತ್ತಿದ್ದೇವೆ, ಅತಿಕ್ರಮಿಸುತ್ತಿದ್ದೇವೆ, ನಾಶಪಡಿಸುತ್ತಿದ್ದೇವೆ. ಕೊಳವೆ ಬಾವಿಗಳನ್ನು ವಿವೇಚನೆಯಿಲ್ಲದೆ ತೋಡುತ್ತಾ ಅಂತರ್ಜಲದ ಮಟ್ಟವನ್ನು ತಗ್ಗಿಸುತ್ತಿದ್ದೇವೆ. ಹೀಗೇ ಆದರೆ ಮುಂದೊಮ್ಮೆ ಪ್ರಕೃತಿಯ ಸಮತೋಲನ ತಪ್ಪಿ ಅನಾಹುತಗಳಾಗುವುದು ಶತಃಸ್ಸಿದ್ಧ. ಮನುಕುಲದ ಉಳಿವಿಗಾಗಿ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು. ನೀರಿನ ಸದ್ಬಳಕೆ ಮಾಡದಿರುವುದು, ವಿವೇಚನೆಯಿಲ್ಲದ ಕ್ರಮಗಳಿಂದಾಗಿ ಕುಡಿಯುವ ನೀರಿಗೂ ಕಷ್ಟವಾಗಿದೆ, ಬೆಳೆ ಬೆಳೆಯಲು ನೀರು ಸಿಗದಾಗಿದೆ. ಕಾವೇರಿ ವಿವಾದ, ಮಹದಾಯಿ ವಿವಾದ, ಕೃಷ್ಣಾ ವಿವಾದ ಮುಂತಾದ ಸಮಸ್ಯೆಗಳಿಂದಾಗಿ ರಾಜ್ಯಗಳ ನಡುವೆ ಜಲಜಗಳಗಳಾಗುತ್ತಿವೆ, ಕೋರ್ಟು-ಕಛೇರಿಗಳಲ್ಲಿ, ಟ್ರಿಬ್ಯೂನಲ್ಲುಗಳಲ್ಲಿ ದಶಕಗಳಿಂದ ವಿವಾದಗಳು ಇತ್ಯರ್ಥ ಕಾಣದಿವೆ. ಮಾತೆತ್ತಿದರೆ, 'ನಮ್ಮನ್ನು ಆ ದೇವರೇ ಕಾಪಾಡಬೇಕು' ಅಂದುಬಿಡುತ್ತೇವೆ. ವಿವೇಚನೆಯಿಲ್ಲದೆ ಮುಂದುವರೆದರೆ ಮುಂದೊಮ್ಮೆ ನಮ್ಮನ್ನು ಯಾರೂ ಕಾಪಾಡಲು ಸಾಧ್ಯವೇ ಇಲ್ಲದಂತಹ ಸ್ಥಿತಿ ಬರಬಹುದು.
     ಮಳೆ ನೀರು ಕೊಯ್ಲು, ನೀರಿನ ಅಪವ್ಯಯದ ತಡೆಗಟ್ಟುವಿಕೆ, ಜಲಮೂಲಗಳು ಕಲುಷಿತಗೊಳ್ಳುವುದನ್ನು ತಪ್ಪಿಸುವುದು, ಕೆರೆ-ಕಟ್ಟೆಗಳ ಪುನರುಜ್ಜೀವನ, ಒಡ್ಡುಗಳ ನಿರ್ಮಾಣ ಮುಂತಾದ ಕೆಲಸಗಳಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸ ಸರ್ಕಾರಗಳು ಮಾಡಬೇಕು, ಮಾಡುವಂತೆ ಜನರೂ ಮಾಡಬೇಕು. ನೀರಿನ ಮಹತ್ವ ಅರಿತು ಜಲಸಂರಕ್ಷಣಾಕಾರ್ಯಗಳನ್ನು ಕೈಗೊಂಡು ನಾಗರಿಕಪ್ರಜ್ಞೆ ಮೆರೆಯುವ ತುರ್ತು ಅಗತ್ಯ ಇಂದಿದೆ.
ನೀರನ್ನು ಉಳಿಸಿದರೆ ಭವಿಷ್ಯವನ್ನು ಉಳಿಸಿದಂತೆ!
ನೀರನ್ನು ರಕ್ಷಿಸಿದರೆ, ನೀರು ನಮ್ಮನ್ನು ರಕ್ಷಿಸುತ್ತದೆ!
-ಕ.ವೆಂ.ನಾಗರಾಜ್.
***************
ದಿನಾಂಕ  28.10.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: