ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಮೇ 30, 2012

ಸಾರಗ್ರಾಹಿಯ ರಸೋದ್ಗಾರಗಳು - 13

   ಪ್ರಖರ ಸತ್ಯವಾದಿಗಳೂ, ಹಿರಿಯ ಮುತ್ಸದ್ದಿಗಳೂ ಆದ 116 ವರ್ಷಗಳ  ಪಂ. ಸುಧಾಕರ  ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು.  ಆದರೆ ಅವರು ಪ್ರಸ್ತುತ ಪಡಿಸುವ ವಿಚಾರಗಳನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲಾಗುವುದಿಲ್ಲ ಅನ್ನುವುದು ವಾಸ್ತವ. ಆಸಕ್ತಿಯುಳ್ಳವರಿಗಾಗಿ ಅವರ ವಿಳಾಸ ಹೀಗಿದೆ: #286/ಸಿ, ಶ್ರೀ ಕೃಷ್ಣ ಸೇವಾಶ್ರಮ ರಸ್ತೆ, ಜಯನಗರ 5ನೆಯ ಬ್ಲಾಕ್, ಬೆಂಗಳೂರು.  ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಯಾರು ಆರ್ಯರು?
     ಆರ್ಯ (gentlemen) ಅಂತ ಹೇಳಿಕೊಳ್ತೀವಿ, ಯಾವನು ಪ್ರಗತಿಶೀಲನೋ, progressive view ಯಾರಿಗೆ ಇರುತ್ತೋ ಅವನನ್ನು ಆರ್ಯ ಅನ್ನಬಹುದು. ನಾವು ಹಾಗಲ್ಲ, ಆರ್ಯ ಅಂತ  ಹೇಳಿಕೊಳ್ತೇವೆ, ನಮ್ಮ ವೃತ್ತಿ ನೋಡಿದರೆ ಎಲ್ಲಾ ಅನಾರ್ಯರ ರೀತಿಯೇ! ಮತ್ತು ಆರ್ಯನಾಗಿರುವವನು ಪ್ರಗತಿಶೀಲನಾಗಿರಬೇಕು, progressive ಆಗಿರಬೇಕು. ಇವತ್ತು ಇರುವುದಕ್ಕಿಂತ ಹೆಚ್ಚು ಒಳ್ಳೆಯವನಾಗುತ್ತಿರಬೇಕು, ಹೆಚ್ಚು ಸತ್ಯವಂತನಾಗಬೇಕು, ಧರ್ಮಾತ್ಮನಾಗಬೇಕು, ಅನ್ನುವ ಮನೋಭಾವ ಇರಬೇಕು. ಅದೇ ಇಲ್ಲದೇ ಹೋದರೆ. . . . .?  
ಪ್ರಯತ್ನವಿಲ್ಲದೆ ಫಲವಿಲ್ಲ
     ಈ ಭೂಮಾತೆಯ ಗರ್ಭದಲ್ಲಿ ಏನೇನು ಅಡಗಿದೆ ಅನ್ನುವುದು ಆ ದೇವರೊಬ್ಬನಿಗೇ ಗೊತ್ತು. ಸಮಸ್ತ ಸಂಪತ್ತು ಅಲ್ಲಿದೆ, ಇದನ್ನು ವಸುಂಧರಾ ಅಂತ ಕರೀತಾರೆ. ವಸು ಅಂದರೆ ಐಶ್ವರ್ಯ. ಐಶ್ವರ್ಯವನ್ನು ಧರಿಸಿರುವ ತಾಯಿ ಅಂತ ಇಟ್ಕೊಳ್ಳಿ, ಈ ಭೂಮಿ ಒಂದು ಸುಂದರವಾದ ವಸುಂಧರಾ, ಇಲ್ಲಿ ಇಲ್ಲದ್ದು ಎಲ್ಲೂ ಇಲ್ಲ, ಎಲ್ಲವೂ ಈ ಭೂಮಿಯ ಒಳಗೇ ಇದೆ. ಮತ್ತೆ ಈ 'ಪರಮಾತ್ಮ,-ಆನಂದ' ಇದೆಯಲ್ಲಾ. ಅದು ಎಲ್ಲಾ ಕಡೆಯೂ ಹರಡಿಕೊಂಡಿದೆ. ಆದರೆ, ನಮ್ಮ ಅನುಭವಕ್ಕೆ ಬರುತ್ತಾ ಇಲ್ಲ, ಕಾರಣ  ಏನು? ಗಂಗೆಯನ್ನು ಎದುರಿಗೆ ಇಟ್ಟುಕೊಂಡು 'ಗಂಗಾ ಮಾತೆ, ನನಗೆ ಬಾಯಾರಿಕೆ ಆಗಿದೆ, ನನ್ನ ಬಾಯಾರಿಕೆ ನೀಗಿಸು'  ಅಂದರೆ ಅವಳು ಬಾಯಾರಿಕೆ ಹೋಗಿಸುವುದಿಲ್ಲ. ನೀವು ಕೈಯಲ್ಲಿ ತೆಗೆದುಕೊಳ್ಳಬೇಕು, ಕುಡಿಯಬೇಕು, ಆಗ ಮಾತ್ರ ನಿಮ್ಮ ಬಾಯಾರಿಕೆ ಹೋಗೋದು. ಹಾಗಿಲ್ಲದೆ ಬರಿಯ ಮಾತಿನಿಂದ ಗಂಗೆ ಬಾಯಾರಿಕೆ ಹೋಗಿಸುವುದಿಲ್ಲ. ಸಾಧ್ಯವೇ ಇಲ್ಲ. ಪರಮಾತ್ಮನ ವಿಷಯದಲ್ಲೂ ಅಷ್ಟೆ, ಬಹಳ ಮಾತಾಡ್ತೀವಿ, ಆನಂದಸ್ವರೂಪ - ಹೌದು, ಅವನು ಆನಂದಸ್ವರೂಪ. ಆದರೆ ಅದು ಯಾಕೆ ನಮ್ಮ ತಲೆಗೆ ಹೋಗುವುದಿಲ್ಲ? ಅನುಭವವಿಲ್ಲ. ಆ ಆನಂದದ ಅನುಭವ ನಮಗಿಲ್ಲ. 
ಸುಖ-ದುಃಖ
     ಸುಖ ಗೊತ್ತು, ದುಃಖ ಗೊತ್ತು. ಇವೆರಡೂ ಕೂಡ ಭೌತಿಕ, ಆಧ್ಯಾತ್ಮಿಕವಲ್ಲ, ಖ ಅಂದರೆ ಇಂದ್ರಿಯ, ಸು-ಖ-  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ-ಖ- ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ನನಗೆ ಚೆನ್ನಾಗಿ ನೆನಪಿದೆ, ಇಷ್ಟು ವರ್ಷವಾದರೂ ಮರೆತಿಲ್ಲ, ಒಬ್ಬ ಶಿಷ್ಯರತ್ನ ನನಗೆ ಸಿಕ್ಕಿದ್ದ. ಅವನಿಗೆ ನಾನು ಹೇಳುವೆ, 'ನೋಡಪ್ಪಾ, ಬ್ರಾಹ್ಮೀ ಮುಹೂರ್ತ ಬೆಳಗಿನ ಜಾವ ೩ ಗಂಟೆಯಿಂದ ೬ ಗಂಟೆಯವರೆಗೆ ಆಗ ಎದ್ದು ಒಂದು ಸಲ ಮಂತ್ರ ಹೇಳಿಕೋ ಸಾಕು, ಅದು ನೆನಪಿನಲ್ಲಿ ಉಳಿಯುತ್ತೆ' ಅಂತ. 'ಆಗಲಿ ಗುರೂಜಿ' ಅನ್ನೋನು, ಬೆಳಿಗ್ಗೆ ಏಳಿಸಲು ಹೋದರೆ, 'ಇನ್ನೊಂದು ಐದು ನಿಮಿಷ ಗುರೂಜಿ' ಅಂತ ಹೇಳೋನು, ಸೂರ್ಯೋದಯ ಆದ ಮೇಲೇ ಏಳೋನು!
ದಶಪ್ರಾಣಗಳು
     'ಯಾವನು ಕಳ್ಳನಲ್ಲದ ನನ್ನನ್ನು ಕಳ್ಳ ಅಂತ ಹೇಳ್ತಾನೋ ಅವನ ಹತ್ತು ಪ್ರಾಣಗಳೂ ನಾಶವಾಗಲಿ' - ಇದು ಒಂದು ಮಂತ್ರದ ಅರ್ಥ. ಪಂಚ ಪ್ರಾಣಗಳು -ಪ್ರಾಣ, ಅಪಾನ, ಉದಾನ, ಸಮಾನ, ವ್ಯಾನ- ಇವು ನಿಮಗೆ ಗೊತ್ತು. ಇನ್ನು, ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯ - ಇವು ೫ ಉಪಪ್ರಾಣಗಳು. ತುಂಬಾ ಜನಕ್ಕೆ ಗೊತ್ತಿಲ್ಲ, ನಾಗ - ಕಾಲಿನ ಹೆಬ್ಬೆಟ್ಟಿನ ಹತ್ತಿರ ಇದೆ, ಕೂರ್ಮ - ಅದರಿಂದ ಸ್ವಲ್ಪ ಮೇಲಕ್ಕೆ, ಹಾಗೇ ಮೇಲಕ್ಕೆ, ಮೇಲಕ್ಕೆ ಹೋಗುತ್ತಾ ಕೃಕಲ, ದೇವದತ್ತ, ಧನಂಜಯ. ಶ್ರೀಕೃಷ್ಣನ ಸಾವು ಹೇಗಾಯ್ತು ಗೊತ್ತಾ? ದ್ವಾರಕಾ ನಗರದಲ್ಲಿ ಯಾದವರು ತಮ್ಮಲ್ಲೇ ಕೊಚ್ಚಾಡಿ ನಾಶವಾದರು. ಕೂತ್ಕೊಂಡಿದ್ದ ಒಂದು ಕಡೆ, ಕೂತ್ಕೊಂಡು ಯೋಚನೆ ಮಾಡ್ತಾ ಇದ್ದ, ನಾನು ಜಗಕ್ಕೆಲ್ಲಾ ಉಪದೇಶ ಮಾಡಿದೀನಿ, ನನ್ನ ಎದುರಿಗೇ ಹೀಗೆಲ್ಲಾ ಆಯ್ತಲ್ಲಾ ಅಂತ ಬಹಳ ದುಃಖದಿಂದ ಕೂತಿದ್ದಾಗ, ನಾಗ ಅನ್ನುವ ಉಪಪ್ರಾಣ ಅವನನ್ನು ಬಿಟ್ಟುಹೋಯಿತು. ಉಪಪ್ರಾಣ ಹೋಯಿತು, ದೊಡ್ಡ ಪ್ರಾಣ ಹೋಗಿರಲಿಲ್ಲ, ಅದೇ ಸಾಕಾಯ್ತು, ಕೃಷ್ಣನ ಸಾವಿಗೆ. ಉಪಪ್ರಾಣಕ್ಕೂ ಕೂಡ ಅಷ್ಟೇ ಶಕ್ತಿ ಇದೆ, ನಿಜವಾದ ದೊಡ್ಡ ಪ್ರಾಣಕ್ಕೆ ಎಷ್ಟು ಇದೆಯೋ ಅಷ್ಟು. ಇದನ್ನು ಯೋಗವಿದ್ಯೆ ಇಲ್ಲದೆ ಅರ್ಥ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಕೃಷ್ಣನನ್ನು ನಾಗರಹಾವು ಕಚ್ಚಿತು, ಅವನು ಸತ್ತು ಹೋದ ಅಂತ ಹೇಳ್ತಾರೆ, ನಾಗರಹಾವಲ್ಲ, ನಾಗ ಅನ್ನುವ ಉಪಪ್ರಾಣ ಅವನ ವಶದಿಂದ ಹೊರಟುಹೋಯಿತು, ಈ ಪ್ರಾಣ ಬಹಳ ಸೂಕ್ಷ್ಮ. ತಲೆಯಲ್ಲೇ ಹೋಗಬೇಕು ಅಂತ ಇಲ್ಲ, ನಿಮ್ಮ ಮೈಮೇಲೆ ಎಷ್ಟು ರೋಮಕೂಪಗಳಿವೆ, ಅಷ್ಟು ರಂಧ್ರಗಳಿವೆ, ಆ ಯಾವ ರಂಧ್ರದಿಂದಲಾದರೂ ಪ್ರಾಣ ಹೊರಟುಹೋಗಬಹುದು. ಗೊತ್ತಾಯ್ತಲ್ಲಾ? ದಶಪ್ರಾಣಗಳು ಅಂತ ಹೇಳಿದೆನಲ್ಲಾ, ಅವು ಈ ಯಾವುದರ ಮುಖಾಂತರವಾಗಿಯೂ ಹೊರಟುಹೋಗಬಹುದು. ಪ್ರಾಣ ಅಂದರೆ ಒಳಕ್ಕೆ ತೆಗೆದುಕೊಳ್ಳುವುದು, ಅಪಾನ ಅಂದರೆ ಹೊರಗೆ ಬಿಡುವುದು. ಇಷ್ಟನ್ನು ನೀವು ಅರ್ಥ ಮಾಡಿಕೊಳ್ತೀರಿ. ಆದರೆ ಅದರಲ್ಲಿ ಮೆಟ್ಟಲು, ಮೆಟ್ಟಲುಗಳಿವೆ, 
     'ಹತ್ತು ಪ್ರಾಣಗಳಿವೆ, ಅದೆಲ್ಲಾ ನಾಶವಾಗಲಿ' ಅಂದರೆ ಅದೆಲ್ಲಾ ನಿನ್ನ ವಶದಲ್ಲಿ ಇಲ್ಲದೇ ಇರಲಿ, ಈ ಪ್ರಾಣ, ಅಪಾನ, ಉದಾನ, ಸಮಾನ, ವ್ಯಾನ, ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯ ಇವೆಲ್ಲಾ ನಿನ್ನ ಕೈತಪ್ಪಿ ಹೋಗಲಿ, ನೀನು ಪ್ರಾಣಸಹಿತನಾಗಿದ್ದರೂ ಕೂಡ ಪ್ರಾಣರಹಿತನಾಗಿ ಇರುತ್ತೀಯ. ತಿದಿ ಇದೆ, ಅದು ಪುಸ್, ಪುಸ್ ಅನ್ನುತ್ತೆ, ಆದರೂ ಕೂಡ ನೀನು ಪ್ರಾಣರಹಿತನಾಗೇ ಇರ್ತೀಯ. ತಿದಿಗೆ ಗೊತ್ತಾ, ನಾನು ಉಸಿರಾಡ್ತಾ ಇದೀನಿ, ಅಂತ? ನಿಜವಾಗಿ ನಿಮ್ಮ ಹೃದಯ, ಶ್ವಾಸಕೋಶ, ಎಲ್ಲಾ ನಿಮ್ಮ ಕೆಲಸಕ್ಕೆ ಬರೋ ಹಾಗೆ ಇರಬೇಕು. ಇದನ್ನು ಅರ್ಥ ಮಾಡಿಕೊಳ್ಳೋದಿಲ್ಲ, ಪರಮಾತ್ಮ ಎರಡು ಕಣ್ಣು ಕೊಟ್ಟ, ಒಂದು ನಾಲಿಗೆ ಕೊಟ್ಟ. ಎರಡು ಕಣ್ಣಿನಿಂದ ಎಷ್ಟು ನೋಡಿದರೂ, ಆಡಲು ಒಂದೇ ನಾಲಿಗೆ. ಅರ್ಧ ಮಾತ್ರ ಹೇಳು ಅಂತ. ಮತ್ತೆ ಎರಡು ಕಿವಿ ಕೊಟ್ಟ, ನಾಲಿಗೆ ಒಂದೇ ಕೊಟ್ಟ. ಕಿವಿಯಿಂದ ಏನೇನೋ ಕೇಳ್ತೀಯ. ಕೇಳಿದ್ದನ್ನೆಲ್ಲಾ ನಿಜ ಅಂದುಕೊಂಡು ಎಲ್ಲಾ ಹೇಳ್ತಾ ಹೋಗಬೇಡ. ನಾಲಿಗೆ ಮೇಲೆ ಹಿಡಿತ ಇರಬೇಕು, ಅಂತ. ನೀನು ಏನು ಕೇಳಿದಿ, ಸರಿಯೋ, ಅಲ್ಲವೋ, ಈರೀತಿ ಆಲೋಚನೆ ಮಾಡಿ ಮಾತನಾಡಬೇಕು. ಪ್ರಾಣಗಳ ಉಪಯೋಗ ಇದೆಯಲ್ಲಾ, ಬದುಕಿದ್ದಾಗ ಇದರ ಬೆಲೆ ಗೊತ್ತಾಗಲ್ಲ, ಹೃದಯದಲ್ಲೋ, ಶ್ವಾಸಕೋಶದಲ್ಲೋ ದೋಷ ಉಂಟಾಗಿ, ಉಸಿರಾಡಕ್ಕೆ ಕಷ್ಟ ಆದರೆ, ಆವಾಗ ಗೊತ್ತಾಗುತ್ತೆ. 
     ಕುರುಡನಿಗೆ, ಹುಟ್ಟು ಕುರುಡನಿಗೆ ಕಣ್ಣಿನಿಂದ ಸುಖವೂ ಇಲ್ಲ, ದುಃಖವೂ ಇಲ್ಲ. ಅತಿ ಸುಂದರವಾಸ ವಸ್ತುವನ್ನು ಅವನ ಎದುರಿಗೆ ಇಡಿ, ಅಥವ ಅತಿ ತುಚ್ಛವಾದ ವಸ್ತುವನ್ನು ಅವನ ಮುಂದಿಡಿ, ಅವುಗಳಿಂದ ಅವನ ಮೇಲೆ ಯಾವ ಪ್ರಭಾವವೂ ಆಗುವುದಿಲ್ಲ. ಮತ್ತೆ, ಇವನ್ನೆಲ್ಲಾ ಗಾಂಧೀಜಿ ಪರೀಕ್ಷೆ ಮಾಡಿ ನೋಡಿದಾರೆ. ತೊನ್ನು ರೋಗ ಅಂತ ಬರುತ್ತೆ, ಶ್ವೇತ ಕುಷ್ಟ. ಚರ್ಮ ಎಲ್ಲಾ ಬಿಳಿ ಆಗುತ್ತೆ. ನಾನು ಒಬ್ಬರನ್ನು ಕೇಳಿದೆ, ಮೊದಲು ಒಂದು ಕಡೆ ಆಗಿತ್ತು, ಆಮೇಲೆ ಮೈಮೇಲೆಲ್ಲಾ ಆಯಿತು. ಬಿಸಿನೀರು, ತಣ್ಣೀರು ಮುಟ್ಟಿದರೆ ಗೊತ್ತಾಗುತ್ತಾ? ತುಂಬಾ ಬಿಸಿ ಆಗಿದ್ದರೆ, ಸುಟ್ಟು ಹೋಗುವ ಹಾಗೆ ಬಿಸಿ ಇದ್ದರೆ ಗೊತ್ತಾಗುತ್ತೆ, ಸಾಧಾರಣ ಬಿಸಿ ನನಗೆ ಗೊತ್ತಾಗುವುದಿಲ್ಲ. ಚರ್ಮ ಇದೆಯಲ್ಲಾ, ಅದರ ಪೊರೆ ಸತ್ತುಹೋಗಿದೆ. ಇದೆಲ್ಲಾ ಯಾವಾಗ ಗೊತ್ತಾಗುತ್ತೆ? ಕಾಲು ಮುರಿದ ಮೇಲೆ ಕುಂಟುತನ ಏನು ಅನ್ನುವುದು ಗೊತ್ತಾಗುತ್ತೆ. ಅದೇನು ಮಹಾ, ಎಷ್ಟು ಜನ ಕುಂಟರು ಇದ್ದಾರೆ, ಬದುಕಿಲ್ವಾ ಅವರು? ಅಂತೆಲ್ಲಾ ಅಂದುಕೊಳ್ಳೋರಿಗೆ, ಅವರಿಗೇ ಆ ಕಷ್ಟ ಬಂದಾಗ ಗೊತ್ತಾಗುತ್ತೆ. 
ಯೋಗ, ಹಠಯೋಗ
     ಮೂಗಿಗೆ ಒಂದು ಕ್ರಿಯೆ ಇದೆ, ಬಸ್ತಿ, ಮೊಸರಿನಿಂದಲಾಗಲೀ, ಜೇನಿನಿಂದಾಗಲೀ ಬತ್ತಿಯನ್ನು ನೆನೆಸಿ ಮೂಗಿನ ಒಂದು ಹೊಳ್ಳೆಯಿಂದ ಇನ್ನೊಂದು ಹೊಳ್ಳೆಯ ಮೂಲಕ ಹಾಯಿಸಿ ಮೂಗನ್ನು ಶುದ್ಧ ಮಾಡಿಕೊಳ್ಳುವುದು. ಸ್ವಲ್ಪ ದಾರಿ ತಪ್ಪಿತೋ, ವಾಸನಾಗ್ರಹಣಶಕ್ತಿಯೇ ಇಲ್ಲ! ನನಗೆ ಗೊತ್ತಿರುವ ಒಬ್ಬ ದೊಡ್ಡ ಯೋಗಾಚಾರ್ಯರು ಹೇಳೋರು, 'ಪಂಡಿತಜಿ, ಅದೇನು ವಾಸನೆ, ವಾಸನೆ ಅಂತೀರಲ್ಲಾ, ನನಗೆ ಏನೂ ವಾಸನೆಯೇ ಬರೋದಿಲ್ಲ'. ಇದಕ್ಕಾ ಬಸ್ತಿ ಕ್ರಿಯೆ ಮಾಡೋದು? ಆಮೇಲೆ ಇನ್ನೊಂದು ಸಲ ಹೇಳಿದರು, 'ನಾನು ಬಸ್ತಿಕ್ರಿಯೆ ಮಾಡಿಕೊಳ್ಳದೇ ಕಕ್ಕಸಕ್ಕೇ ಹೋಗುವುದಿಲ್ಲ'. ಯೋಗ ನಾವು ಮಾಡೋದು, ಪಾಕೃತಿಕ ಕ್ರಿಯೆಗಳಿಗೆ ಸಹಾಯ ಮಾಡೋಕೆ ಹೊರತು ಅದನ್ನು ಕೊಲ್ಲುವುದಕ್ಕೆ ಅಲ್ಲ. ಅದನ್ನು ಕೊಂದರೆ ನಮಗೆ ನಷ್ಟವೇ ಆಯಿತು, ಲಾಭವಿಲ್ಲ. ಈ ಹಠಯೋಗದವರು ಕೆಲವರು ಜನಕ್ಕೆ ಮೋಸ ಮಾಡ್ತಾರೆ. ನನ್ನ ಹತ್ತಿರ ಒಬ್ಬ ಹಠಯೋಗಿ ಬಂದ. ನೀನು ಏನೇನು ಮಾಡ್ತೀಯಪ್ಪಾ? ಹಠಯೋಗಿ ಹೇಳ್ತಾನೆ, 'ನಾನು ಒಂದು ಗುಂಡಿ ತೋಡಿ ಅದರಲ್ಲಿ ನನ್ನ ತಲೆಯಿಟ್ಟು ತಲೆಕೆಳಗಾಗಿ ನನ್ನ ಕಾಲು ಮೇಲೆ ಇಟ್ಟುಕೊಂಡು ನಿಲ್ತೀನಿ'. 'ಎಷ್ಟು ಹೊತ್ತು ನಿಲ್ತೀಯ?' 'ಐದು ನಿಮಿಷ ಇರ್ತೀನಿ'. 'ಆಮೇಲೆ?' 'ಇಲ್ಲ'. ಮತ್ತೆ ನಾನು ಹೇಳಿದೆ 'ಇದು ಯಾತಕ್ಕೆ ಕಷ್ಟ. ಶೀರ್ಷಾಸನ ಮಾಡು. ಎರಡೂ ಕೈಗಳ ಆಧಾರದಲ್ಲಿ ತಲೆ ಕೆಳಗಾಗಿ ಇದ್ದಂತೆಯೆ ನಡೆದುಕೊಂಡು ಹೋಗು'. ಹೀಗೆ ನಾನೂ ಮಾಡ್ತಾ ಇದ್ದೆ. ಕಾಲು ಮುರಿದು ಹೋಯ್ತಲ್ಲಾ, ಆ ನಂತರ ಮಾಡಕ್ಕೆ ಆಗಲಿಲ್ಲ. ಭಾರ ಒಂದು ಸಮ ಇಲ್ಲ. ಅದಕ್ಕೆ ಮೊದಲು ಮಾಡ್ತಾ ಇದ್ದೆ. ಒಂದು ಸಲ ಬಿದ್ದುಬಿಟ್ಟೆ. ಆಗ ಅನ್ನಿಸಿತು. ಎಂಥಾ ಕೆಲಸ ಮಾಡ್ತಾ ಇದೀನಿ ನಾನು? ಕಾಲು ಓಡಾಡಕ್ಕೆ ಭಗವಂತ ಕೊಟ್ಟಿದಾನೆ. ಅದನ್ನು ಬಿಟ್ಟು ಕೈಮೇಲೆ ಓಡಾಡಕ್ಕೆ ಹೋಗ್ತಾ ಇದ್ದೆನಲ್ಲಾ! ತಲೆ ಕೆಳಗಾಗಿ ನಡೆಯುವುದಾಗಿದ್ದರೆ ಭಗವಂತ ತಲೆಯ ಮೇಲೇ ಕಾಲು ಕೊಡ್ತಾ ಇದ್ದ. ಇದೆಲ್ಲಾ ಹಾಸ್ಯಾಸ್ಪದ ವಿಚಾರ ಅಲ್ಲ.
**************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/05/12.html

ಸೋಮವಾರ, ಮೇ 28, 2012

ಸಾರಗ್ರಾಹಿಯ ರಸೋದ್ಗಾರಗಳು - 12


   ಮುಚ್ಚುಮರೆಯಿಲ್ಲದ. ನಿರ್ಭಿಡೆಯ, ನೇರ ನಡೆ-ನುಡಿಯ, ಪ್ರಖರ ಸತ್ಯವಾದಿಗಳೂ, ಹಿರಿಯ ಮುತ್ಸದ್ದಿಗಳೂ ಆದ 116 ವರ್ಷಗಳ  ಪಂ. ಸುಧಾಕರ  ಚತುರ್ವೇದಿಯವರ  ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು.  ಆದರೆ ಅವರು ಪ್ರಸ್ತುತ ಪಡಿಸುವ ವಿಚಾರಗಳನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲಾಗುವುದಿಲ್ಲ ಅನ್ನುವುದು ವಾಸ್ತವ. ಆಸಕ್ತಿಯುಳ್ಳವರಿಗಾಗಿ ಅವರ ವಿಳಾಸ ಹೀಗಿದೆ: #286/ಸಿ, ಶ್ರೀ ಕೃಷ್ಣ ಸೇವಾಶ್ರಮ ರಸ್ತೆ, ಜಯನಗರ 5ನೆಯ ಬ್ಲಾಕ್, ಬೆಂಗಳೂರು.  ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಕಳ್ಳತನ (ಸ್ತೇಯ)
     ಐತ್ತಿರೀಯ ಬ್ರಾಹ್ಮಣದಲ್ಲಿ ಒಂದು ವಾಕ್ಯ ಬರುತ್ತೆ - 'ಕಳ್ಳತನಕ್ಕೆ ಸಮನಾದ ಪಾಪ ಯಾವುದೂ ಇಲ್ಲ'. ಅಹಿಂಸೆ, ಸತ್ಯ, ಅಪರಿಗ್ರಹ, ಬ್ರಹ್ಮಚರ್ಯ ಈ ಎಲ್ಲದರ ಬುಡವನ್ನೂ ಸ್ತೇಯ (ಕಳ್ಳತನ)  ಕತ್ತರಿಸುತ್ತದೆ. ಈ ಕಳ್ಳತನದ ಭಾವನೆ - 'ಯಾರದ್ದೋ .ಐಶ್ವರ್ಯ, ಮನಸ್ಸಿನಲ್ಲಿ ಕದ್ದುಬಿಟ್ಟೆ, ಯಾರಿಗೆ ಗೊತ್ತಾಗುತ್ತೆ? ದೇವರಿಗೆ ಗೊತ್ತಾಗುತ್ತೆ, ಪರವಾಗಿಲ್ಲ, ಅವನೇನು ಹೇಳ್ತಾನಾ? ಆಗಲಿ, ಆ ಸ್ತೇಯದಿಂದ ನನಗೆ ಲಾಭ ಆಗೋದಿದ್ದರೆ ಆಗಲಿ' - ಈ ತರಹದ ಸ್ತೇಯ ಭಾವನೆ ಇದೆಯಲ್ಲಾ ಇದು ಸರಿಯಲ್ಲ. ಒಂದು ವೇದ ಮಂತ್ರದ ಅರ್ಥ ಹೀಗಿದೆ: 'ನಾನು ಕಳ್ಳನಾಗಿದ್ದ ಪಕ್ಷದಲ್ಲಿ ಇವತ್ತೇ ನನಗೆ ಸಾವು ಬರಲಿ, ಕಳ್ಳತನದಿಂದ ಕದ್ದು ಬೇರೆಯವರ ಸಂಪತ್ತನ್ನು ಅನುಭವಿಸುವುದಕ್ಕಿಂತ ಬದಲು ಸಾಯುವುದೇ ಮೇಲು. ಉಪವಾಸ ಮಾಡುವುದೇ ಮೇಲು'. ಈ ಭಾವನೆಯನ್ನೆಲ್ಲಾ ಯಾರೂ ಅರ್ಥ ಮಾಡಿಕೊಳ್ಳುವುದಕ್ಕೆ ಹೋಗುವುದಿಲ್ಲ.
     ಒಬ್ಬರು ದೊಡ್ಡ ಪಂಡಿತರು, . . . . . . . . ಅಂತ, ಅವರು ನನ್ನ ಹಾಗೇನೇ, ಎಲ್ಲಾ ವೇದಗಳನ್ನೂ ಬಾಯಿಪಾಠ ಮಾಡಿಕೊಂಡಿದ್ದರು. ಅವರಿಗೆ ಈ ಮಂತ್ರ ಕೊಟ್ಟು, "ಸ್ವಾಮಿ, ಸ್ವಲ್ಪ ಅರ್ಥ ಹೇಳ್ತೀರಾ?" ಅಂದೆ. "ಅರ್ಥ ಅದರೊಳಗೇ ಇದೆಯಲ್ಲಾ ಸ್ವಾಮಿ" ಅಂದರು. "ಅರ್ಥ ಇದೆ, ಅದರೊಳಗೇ ಇದೆ. ನಿಮ್ಮಂತಹವರಿಗೆ ಗೊತ್ತಾಗುತ್ತೆ, ನನ್ನಂತಹ ಪೆದ್ದರಿಗೆ ಗೊತ್ತಾಗಲ್ಲ, ಸ್ವಲ್ಪ ಬಿಡಿಸಿ ಹೇಳಿ" ಅಂದರೆ ಅವರು, "ಅಯ್ಯೋ ಪಂಡಿತಜಿ, ಮುಚ್ಚುಮರೆ ಏನು, ನಾನು ಗಿಣಿಪಾಠ ಮಾಡಿದೋನು". ಗಿಣಿ ಏನು ಹೇಳಿಕೊಡ್ತಾರೋ ಅದನ್ನು ಹೇಳುತ್ತೆ, ರಾಮ ಅಂದರೆ ರಾಮ ಅನ್ನುತ್ತೆ, ಕೃಷ್ಣ ಅಂದರೆ ಕೃಷ್ಣ ಅನ್ನುತ್ತೆ. ಅದಕ್ಕೆ ರಾಮನೂ ಗೊತ್ತಿಲ್ಲ, ಕೃಷ್ಣನೂ ಗೊತ್ತಿಲ್ಲ. ಅದರ ತಲೆಯೊಳಗೆ ಏನೂ ಇಲ್ಲ. ಅಂತಹ ಗಿಣಿಪಾಠದಿಂದ ಪ್ರಯೋಜನ ಇಲ್ಲ. ಅವರು ಒಪ್ಪಿಕೊಂಡುಬಿಟ್ಟರು. 'ನಾನು ಮಾಡಿರೋದು ಗಿಣಿಪಾಠ ಅಷ್ಟೆ' ಅಂತ. ಅವರೂ ನಾಲ್ಕು ಹುಡುಗರಿಗೆ ಪಾಠ ಹೇಳಿಕೊಟ್ಟಿದ್ದಾರೆ. ಪಾಠ ಮಾಡಿದ ಗುರುಗಳಿಗೆ ಶಿಷ್ಯರು ಅರ್ಥ ಕೇಳಿದರೆ ಅದರಲ್ಲೆ ಇದೆಯಲ್ಲಾ ಅಂತ ಹೇಳುವುದು ಬಹಳ ಸುಲಭ ಅಲ್ವಾ, ಹಾಗೆ ಹೇಳೋದು.
ಜ್ಞಾನವನ್ನು ಮುಚ್ಚಿಡುವುದೂ ಸ್ತೇಯ
     ಜ್ಞಾನವನ್ನು ಮುಚ್ಚಿಡುವುದೂ ಸಹ ಸ್ತೇಯವೇ. ನಮ್ಮ ಆಯುರ್ವೇದ ಶಾಸ್ತ್ರವನ್ನು ನೋಡಿದರೆ, ಆ ಶ್ಲೋಕಗಳನ್ನು ಓದಿದರೆ ವಾಗ್ಭಟ, ಗರ್ಗ, ಭಾನುಪ್ರಕಾಶ, ಚರಕ, ಸುಶ್ರುತ, . .ದೊಡ್ಡ ದೊಡ್ಡ ಜ್ಞಾನಿಗಳೇ ಇದ್ದರು. ಆದರೂ ಯಾಕೆ ಆಯುರ್ವೇದ ಹಾಳಾಗಿ ಹೋಯ್ತು? ಇದೇ ಬಂದದ್ದು ರೋಗ -  'ಸರಿಯಾದ ಶಿಷ್ಯ ಸಿಗಲಿಲ್ಲ. ಸರಿಯಾದ ಶಿಷ್ಯ ಸಿಕ್ಕರೆ ಅವನಿಗೆ ಮಾತ್ರಾ ಹೇಳ್ತೀನಿ'- ಸರಿಯಾದ ಶಿಷ್ಯ ಸಿಗಲಿಲ್ಲ, ಅವರು ಹೇಳಿಕೊಡಲಿಲ್ಲ, ಎಷ್ಟೋ ವಿದ್ಯೆ ನಾಶವಾಗಿ ಹೋಯಿತು. ಒಂದು ವಿದ್ಯೆ ಇತ್ತು, ಅಲ್ಯುಮಿನಿಯಮ್ ಅನ್ನು ಚಿನ್ನ ಮಾಡೋದು, (ರಸವಿದ್ಯೆ). ಆಶ್ಚರ್ಯವಾಗುತ್ತೆ, ಇದು ಸಾಧ್ಯವೇ? ಚಿನ್ನ ಎಲ್ಲಿ, ಅಲ್ಯುಮಿನಿಯಮ್ ಎಲ್ಲಿ? ಅದೂ ಭೂಮಿಯ ತಳದಿಂದಲೇ ಬರುವುದು, ಇದೂ ಭೂಮಿ ತಳದಿಂದಲೇ ಬರುವುದು. ಈ ವಿದ್ಯೆ ಈಗೆಲ್ಲಿ?
     ಇದೆಲ್ಲಾ ಯಾತಕ್ಕೆ ಹೇಳ್ತಾ ಇದೀನಿ ಅಂದರೆ, ಸುಳ್ಳು ಹೇಳಬಾರದು, . . . . . . .- ಈ ಮಂತ್ರದ ಅರ್ಥ 'ಪ್ರತಿ ನಿಂದಕನನ್ನು ಉದ್ಧಾರ ಮಾಡು', ನಾಶ ಮಾಡು ಅಂತ ಅಲ್ಲ, ಅವನು ನನ್ನನ್ನು ಬೈದ, ಆದ್ದರಿಂದ ಅವನನ್ನು ನಾಶ ಮಾಡು, ಉಹುಂ, ಅಲ್ಲ,  ಯಾಕೆ ಅಂತ ಹೇಳಿದರೆ, ಭಗವಂತನ ಮಹಿಮೆ ನಮಗೆ ಗೊತ್ತಾಗಬೇಕಾದರೆ, ಅವನು ಪಾಪಿಗಳನ್ನು ಕೂಡಾ ಉದ್ಧಾರ ಮಾಡ್ತಾನೆ, ಅನ್ನೋದು ನಮಗೆ ಗೊತ್ತಾಗಬೇಕು, ಪರಮಾತ್ಮ ಪ್ರತಿಯೊಬ್ಬ ನಿಂದಕನನ್ನೂ ನೀನು ಉದ್ಧಾರ ಮಾಡು ಎಂದು ಕೇಳುವ ಈ ಉದಾರ ಭಾವನೆ ನಮಗೆ ಬರಬೇಕು. ಬರಬೇಕಾದರೆ, ಆ ಸ್ತೇಯ ಭಾವನೆ ಹೋಗಬೇಕು. ಕದೀಬೇಕು ಅನ್ನುವ ಭಾವನೆ ಇದೆಯಲ್ಲಾ, ಅದು ಹೋಗಬೇಕು, ನಾನು  ಆಗಲೇ ಹೇಳಿದೀನಿ, ಬರೀ ಕಳ್ಳತನ ಮಾಡೋದು, ದುಡ್ಡು ಕಾಸು ಕದಿಯೋದು, ಅದೇ ಕಳ್ಳತನವಲ್ಲ, ಮಾನಸಿಕ ಕಳ್ಳತನವೂ ಕಳ್ಳತನವೇ. ಅಲ್ಲೇ ಎಲ್ಲಾ ಹುಟ್ಟೋದು, ಪುಣ್ಯ ಹುಟ್ಟೋದೂ ಅಲ್ಲೇ, ಪಾಪ ಹುಟ್ಟೋದೂ ಅಲ್ಲೇ. ಪಾಪ, ನನಗೊಬ್ಬರು ಈ ವಿಷಯ ಹೇಳಿದರು. ಒಬ್ಬ ಗುರುಗಳ ಹತ್ತಿರ ಹೋಗಿ, "ಸ್ವಾಮಿ, ನಾನು ಸುಳ್ಳು ಹೇಳೋ ಅಭ್ಯಾಸ ಇಟ್ಟುಕೊಂಡಿದೀನಿ, ಅದು ಬಂದುಬಿಟ್ಟಿದೆ, ನಾನು ಕಳ್ಳನ ಮಗ, ನಾನು ಅವನಿಗೆ ತಕ್ಕ ಮಗ, ಬಂದು ಬಿಟ್ಟಿದೆ. ನನ್ನ ಉದ್ಧಾರ ಆಗಬೇಕು" ಅಂತ ಕೇಳಿದ. ಅವರು ಹೇಳಿದರು, "ನಿನ್ನ ಉದ್ಧಾರ ನಿನ್ನ ಕೈಲೇ ಇದೆಯಪ್ಪಾ, ನಿನ್ನ ತಲೇನಾ ಸರಿಯಾಗಿ ಇಟ್ಟುಕೋ, ನೀನೇ ಉದ್ಧಾರವಾಗುತ್ತೀಯಾ. ನಿನ್ನ ತಲೆಯಲ್ಲಿ ಕೆಟ್ಟ ಯೋಚನೆ ಬರುವುದು ಬಿಟ್ಟರೆ, ಕೆಟ್ಟ ಯೋಚನೆಗೆ ಕ್ರಿಯಾ ರೂಪ ಕೊಡ್ತೀಯಾ, ಪಾಪಿಯಾಗುತ್ತೀಯ".
     ಇಂಥಾ ಪಾಪ ಮಾಡುವುದಕ್ಕಿಂತ ಸಾವು ಬರಲಿ, ಅಂತ ಹೇಳೋದೇ ಶ್ರೇಷ್ಠ, ಕಳ್ಳ ಅಲ್ಲದವನನ್ನು ಕಳ್ಳ ಅಂತ ಕರೆಯೋದೂ ಪಾಪ, ಸ್ವತಃ ಕಳ್ಳನಾಗುವುದೂ ಪಾಪ, ಆ ಕಳ್ಳತನ ಅನ್ನುವ ದೊಡ್ಡ ಪಾಪ ಇದೆಯಲ್ಲಾ, ಅದನ್ನು ವಶದಲ್ಲಿ ಇಟ್ಟುಕೊಳ್ಳಬೇಕು, ಅಹಿಂಸಕ ನಾನು, ಬ್ರಹ್ಮಚಾರಿ ನಾನು, ಅಪರಿಗ್ರಹಿ ನಾನು, ಹೇಳಿಕೊಂಡರೆ ಆಗುವುದಿಲ್ಲ, ಎಲ್ಲದರ ಬುಡದಲ್ಲಿ ಇದಿದೆ, ಮಾನಸಿಕವಾಗಿ ಕದ್ದರಾಯ್ತು. ಪಂಚಮಹಾವ್ರತಗಳು-ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ - ಈ ಐದರಲ್ಲಿ ಒಂದು ಕೆಟ್ಟರೂ ಕೂಡಾ ಹೋಯಿತು, ಐದೂ ಶುದ್ಧವಾಗಿರಬೇಕು ಅಂತಲೇ ಅಲ್ಲ, ಒಂದು ಪಾತ್ರೆಯಲ್ಲಿ ಒಂದು ಕಡೆ ತೂತ ಆಗಿದ್ದರೂ ಅದರಲ್ಲಿ ಇರುವ ಎಲ್ಲಾ ನೀರೂ ಸೋರಿಹೋಗುತ್ತೆ. ಹಾಗೇನೇ ಅಹಿಂಸೆ, ಬ್ರಹ್ಮಚರ್ಯ, ಅಪರಿಗ್ರಹ, ಆಸ್ತೇಯ, ಸತ್ಯ ಎಲ್ಲಾ ಕೊಚ್ಚಿಹೋಗುತ್ತೆ. ಯಾವುದನ್ನೂ ಕೂಡಾ ಸ್ತೇಯ ಅನ್ನೋ ಜಿಜ್ಞಾಸೆ ಇಟ್ಟುಕೊಂಡು (ಜಾಗೃತವಾಗಿರಬೇಕು). ಕಳ್ಳತನ ಯಾವುದು? ನನ್ನದಲ್ಲದ ವಸ್ತುವನ್ನು ನನ್ನದು ಅಂತ ಭಾವಿಸೋದು ಕಳ್ಳತನ. ಅರ್ಥವಾಯಿತಲ್ಲಾ? ನನ್ನದಲ್ಲ ಅದು, ಅದು ನನ್ನದು ಅಂದುಕೊಳ್ಳೋದು ಮಾನಸಿಕ ಆಯಿತು, ಕದ್ದೇಬಿಟ್ಟರೆ ಕ್ರಿಯಾತ್ಮಕ ಆಗಿಹೋಯಿತು.
ಗುರುವೇ ಸರಿಯಿರದಿದ್ದರೆ . . . .! 
     ಕಳ್ಳತನ, ಮಾಡುವುದಕ್ಕಿಂತ ಸಾಯುವುದೇ ವಾಸಿ. ನನಗೆ ಯಾರೂ ಮೋಸ ಮಾಡಬಾರದು ಅಂತಿದ್ದರೆ ನಾನು ಬೇರೆ ಯಾರಿಗೂ ಮೋಸ ಮಾಡಬಾರದು, ಆ ಭಾವನೆ ಬರುವುದೇ ಇಲ್ಲ, ನಾನು ಬೇಕಾದ್ದು ಮಾಡಿಕೊಳ್ತೇನೆ, ನನ್ನ ಶಿಷ್ಯರು, ಭಕ್ತರು ಸತ್ಯವಂತರಾಗಿರಬೇಕು ಅನ್ನೋದು. ಅವರಿಗೆಲ್ಲಿ ಬರುತ್ತೆ ಆ ಬುದ್ದಿ? ಗುರು ಅನ್ನಿಸಿಕೊಂಡೋನೆ ಬುರುಡೆ ಹೊಡಿಯುತ್ತಿದ್ದರೆ ಆ ಶಿಷ್ಯರ ತಲೆಯಲ್ಲಿ ಸತ್ಯ ಅನ್ನುವುದು ಬರುತ್ತಾ? ಯಾವತ್ತೂ ಸಾಧ್ಯವಿಲ್ಲ. ಯಾವನು ಸತ್ಯವಾದಿಯೋ ಅವನೇ ಸತ್ಯ ಪ್ರಚಾರಕನಾಗಬೇಕು. ಸುಳ್ಳು ಹೇಳೋದಾಗಿದ್ದರೆ, ಹರಿಕಥಾದಾಸರು, ಕೀರ್ತನೆಕಾರರಿಗೆ  ಬುರುಡೆ ಹೊಡಿಯುವುದಾಗಿದ್ದರೆ ಏನೂ ಅಧಿಕಾರವವೇ ಇಲ್ಲ. ಧಾರವಾಡದ ಕಡೆಯವರು  . . . . . ಅನ್ನುವವರು, ಮಹಾರಾಷ್ಟ್ರದ ಟೋಪಿ, ಕೆಂಪು ಟೋಪಿ ಹಾಕಿಕೊಂಡು ಕನ್ನಡದಲ್ಲಿ ಹರಿಕಥೆ ಮಾಡೋರು. ಅವರು ಹರಿಕಥೆ ಮಾಡ್ತಾ ಇದ್ದರು, ಸತ್ಯದ ಮೇಲೆ ಚೆನ್ನಾಗಿ ಲೆಕ್ಚರ್ ಕೊಡುತ್ತಿದ್ದರು. ನಾನು ಕೇಳಿದೆ ; "ನೀವು ಸತ್ಯದ ಮೇಲೆ ಇಷ್ಟೊಂದು ಚೆನ್ನಾಗಿ ಮಾತಾಡ್ತೀರಲ್ಲಾ, ನೀವು ಸತ್ಯ ಹೇಳ್ತೀರಾ? " "ನಾನು ಹರಿಕಥೆ ಮಾಡೋದೇ ಬುರುಡೆ, ಸತ್ಯ ನನಗೆ ಗೊತ್ತಿಲ್ಲದಂತೆ ಬಂದು ಬಿಟ್ಟಿದ್ದರೆ ನಾನು ಜವಾಬ್ದಾರನಲ್ಲ. ನಾನು ಹರಿಕಥೆ ಮಾಡೋನು, ಕಾಲಕ್ಷೇಪ ಮಾಡೋನು, ಅಷ್ಟೆ ನನ್ನ ಕೆಲಸ." ಇಂಥವರ ಉಪದೇಶದಿಂದ ಯಾರಿಗೆ ಲಾಭ? ಬೇರೆಯವರಿಗೆ ಕೂಡಾ ಕಷ್ಟ ಕೊಡಬಾರದು. ನನಗೆ ಯಾರೂ ಕಷ್ಟ ಕೊಡದೇ ಇರಲಿ ಎಂದು ಬಯಸುವುದಾದರೆ ಬೇರೆಯವರಿಗೆ ಕಷ್ಟ ಕೊಡಲು ನನಗೇನು ಹಕ್ಕಿದೆ? ಇದನ್ನು ಯಾರೂ ಯೋಚನೆ ಮಾಡುವುದಿಲ್ಲ. ಬೇರೆಯವರಿಗೆ ಬೇಕಾದಷ್ಟು ಕಷ್ಟ ಕೊಡಲಿ, ತನಗೆ ಮಾತ್ರ ಯಾರೂ ಕಷ್ಟ ಕೊಡಬಾರದು. ಈ ಭಾವನೇನೇ ಸರಿಯಿಲ್ಲ. ಇದೂ ಸ್ತೇಯವೇ.
ಪ್ರಾಣ ಬಿಟ್ಟಾರು, ಸುಳ್ಳು ಹೇಳರು
     'ನಾನು ಕಳ್ಳನಾಗಿದ್ದ ಪಕ್ಷದಲ್ಲಿ ನನಗೆ ಇವತ್ತೇ ಸಾವು ಬರಲಿ' - ದೊಡ್ಡ ಮಾತು. ಸಾಯುವುದಕ್ಕೆ ತಯಾರು, ಸುಳ್ಳು ಹೇಳಲು ತಯಾರಿಲ್ಲ, ಕಳ್ಳತನ ಮಾಡುವುದಕ್ಕೆ ತಯಾರಿಲ್ಲ, ಇಂತಹವರು ಎಷ್ಟು ಜನ ಸಿಕ್ತಾರೆ? ಸುಳ್ಳು ಅನ್ನೋ ಮಾತನ್ನು ನಾವು ಕೇಳ್ತೀವಿ, ಅದರ ಸ್ವರೂಪ ಅನ್ನುವುದು ನಮಗೆ ಗೊತ್ತಿಲ್ಲ, ಕಾರಣ ಏನು? ಒಂದೊಂದು ಸಮಯದಲ್ಲಿ ಸುಳ್ಳು ಹೇಳಬೇಕಾಗಿ ಬರುತ್ತೆ, ಉದಾಹರಣೆಗೆ,  ಒಬ್ಬರು ನೋಡಿರುತ್ತಾರೆ, ಒಂದು ಜಿಂಕೆ ಅಲ್ಲಿ ಹೋಗಿದೆ, ಅದನ್ನು ಕೊಲ್ಲುವುದಕ್ಕೆ ಹಿಂಬಾಲಿಸಿ ಒಬ್ಬ ಶಿಕಾರಿ ಬರುತ್ತಾನೆ. ಬಂದವನು ಅಲ್ಲಿ ಕೂತಿರ್ತಾರಲ್ಲ ಅವರನ್ನು ಕೇಳ್ತಾನೆ, 'ಜಿಂಕೆ ಯಾವ ಕಡೆಗೆ ಹೋಯಿತು?' ಅವನು ಹೇಳಿದರೆ ಹಿಂಬಾಲಿಸಿ ಹೋಗಿ ಜಿಂಕೆಯನ್ನು ಕೊಲ್ತಾನೆ. ಇವನು ಉತ್ತರ ಕೊಡದೆ ಮೌನವಾಗಿ ಕೂತಿದ್ದ. ಶಿಕಾರಿ ಅವನಿಗೇ ಗುಂಡು ಹಾಕಿದ. 'ಕಳ್ಳ, ಗೊತ್ತಿದ್ದರೂ ಹೇಳ್ತಾ ಇಲ್ಲ' ಅಂತ. ಪ್ರಾಣ ಬಿಡೋದಕ್ಕೆ ತಯಾರು, ಆತ ಸುಳ್ಳು ಹೇಳೋದಕ್ಕೆ ತಯಾರಿರಲಿಲ್ಲ.
ಯಾರು ಕಳ್ಳರು?
     ನಾವು ಯಾವನು ಕಳ್ಳತನ ಮಾಡ್ತಾನೋ ಬೀಗ ಒಡೆದು, ಬಾಗಿಲು ಮುರಿದು, ಪೆಟ್ಟಿಗೆ ಕೊಚ್ಚಿಹಾಕಿ, ಕಳ್ಳತನ ಮಾಡ್ತಾನೋ ಅವನನ್ನು ಮಾತ್ರ ಕಳ್ಳ ಅಂತ ತಿಳ್ಕೊಳ್ತೀವಿ. ನಾವು ಮನಸ್ಸಿನಲ್ಲಿ ಅಂದುಕೊಳ್ತಾ ಇರ‍್ತೀವಿ, ಅಯ್ಯೋ, ಅವನ ಹತ್ತಿರ ಅಷ್ಟೊಂದು ದುಡ್ಡಿದೆ, ಅದರಲ್ಲಿ ಸ್ವಲ್ಪ ಭಾಗವಾದರೂ ನನ್ನದಾಗಬಾರದಾ? ಕದ್ದಿರಲ್ಲ, ಸ್ವತಃ ಕದಿಯುವುದಕ್ಕೆ ಬರುವುದಿಲ್ಲ, ಮನಸ್ಸಿನಿಂದ ಕದ್ದಿವಿ, ಎಲ್ಲಕ್ಕಿಂತಲೂ ದೊಡ್ಡ ಪಾಪ, ನೀವು ಮನಸ್ಸಿನಲ್ಲಿ ಪಾಪ ಮಾಡುವುದಿದೆಯಲ್ಲಾ, ಅದು ದೊಡ್ಡ ಪಾಪ. ನೀವು ವ್ಯಭಿಚಾರವನ್ನೇ ಮಾಡಬೇಕೆಂದಿಲ್ಲ, ಮನಸ್ಸಿನಲ್ಲಿ ಅಂದುಕೊಂಡರೂ ಸಾಕು, ಸುಳ್ಳೇ ಹೇಳಬೇಕೆಂದಿಲ್ಲ, ಹೇಳಿದರೆ ಚೆನ್ನಾಗಿತ್ತಲ್ಲಾ ಅಂತ ನಿಮ್ಮ ಮನಸ್ಸಿನಲ್ಲಿ ಬಂದರೂ ಕೂಡ ಸಾಕು. ಸುಳ್ಳು ಹೇಳಿದ ಹಾಗೇನೆ ಆಯಿತು. ಇದು ಬಹಳ ಸೂಕ್ಷ್ಮವಾದ ವಿಷಯ.
************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/05/11.html

ಸೋಮವಾರ, ಮೇ 14, 2012

ಸಾರಗ್ರಾಹಿಯ ರಸೋದ್ಗಾರಗಳು - 11


     ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯ,   ಪ್ರಖರ ಸತ್ಯವಾದಿಯಾದ 116 ವರ್ಷಗಳ  ಪಂ. ಸುಧಾಕರ  ಚತುರ್ವೇದಿಯವರ  ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಆಸಕ್ತಿಯುಳ್ಳವರಿಗಾಗಿ ಅವರ ವಿಳಾಸ ಹೀಗಿದೆ: #286/ಸಿ, ಶ್ರೀ ಕೃಷ್ಣ ಸೇವಾಶ್ರಮ ರಸ್ತೆ, ಜಯನಗರ 5ನೆಯ ಬ್ಲಾಕ್, ಬೆಂಗಳೂರು.  ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ವಿಶ್ವಚೇತನ
     ಭಗವಂತ ಸರ್ವಶಕ್ತ, ಸರ್ವವ್ಯಾಪಕ, ನಿರಾಕಾರ. ಯಜುರ್ವೇದದ ಈ ಮಂತ್ರ ಕೇಳಿ:
ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ|
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ|| (ಯಜು.೪೦.೫.)
     [ತತ್ ಏಜತಿ] ಅದು ವಿಶ್ವಕ್ಕೆ ಗತಿ ನೀಡುತ್ತದೆ. [ತತ್ ನ ಏಜತಿ] ಅದು ಸ್ವತಃ ಚಲಿಸುವುದಿಲ್ಲ. [ತತ್ ದೂರೇ] ಅದು ದೂರದಲ್ಲಿದೆ.  [ತತ್ ಉ ಅಂತಿಕೇ] ಅದೇ ಹತ್ತಿರದಲ್ಲಿಯೂ ಇದೆ. [ತತ್ ಅಸ್ಮ ಸರ್ವಸ್ಯ ಅಂತಃ] ಅದು ಇದೆಲ್ಲದರ ಒಳಗೂ ಇದೆ. [ತತ್ ಉ ಅಸ್ಯ ಸರ್ವಸ್ಯ ಬಾಹ್ಯತಃ] ಅದೇ ಇದೆಲ್ಲದರ ಹೊರಗೂ ಇದೆ.  ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂತಿರುವ, ಎಲ್ಲಾಕಡೆ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ನಿಜವಾಗಿ ಅದಿರುವುದು ಹಾಗೆಯೇ.
ಬ್ರಹ್ಮಾಂಡದ ಸೃಷ್ಟಿ
     ದಿಕ್ಕುಗಳು ಎನ್ನುವುದು ಸ್ಥಳ ಗುರುತಿಸುವುದು, ದಿಸೆ ತೋರಿಸುವ ಸಲುವಾಗಿ ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡದ್ದೇ ಹೊರತು ಮತ್ತೇನಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಒಂದು ಅರ್ಥದಲ್ಲಿ ಸರಿಯಿರಬಹುದು. ಆ ಸೂರ್ಯನೂ ಸಹ ತನ್ನ ಚಲನೆಯ ಪಥವನ್ನು ಬದಲಿಸುತ್ತಾನೆ. ಬಳಕೆಯಲ್ಲಿ ನಾವು ಪೂರ್ವ, ಪಶ್ಚಿಮ, ಇತ್ಯಾದಿ ಎಂಟು ದಿಕ್ಕುಗಳನ್ನು ಬಳಸುತ್ತೇವೆ. ನಮಗೆ ಪೂರ್ವವೆನಿಸುವ ಒಂದು ಸ್ಥಳ ಇನ್ನೊಬ್ಬರಿಗೆ ಪಶ್ಚಿಮವಾಗಬಹುದು. ವಾಸ್ತವವಾಗಿ ನಮ್ಮ ಸುತ್ತಲೂ ಇರುವ ೩೬೦ ಡಿಗ್ರಿ ಪ್ರದೇಶದ ಒಂದೊಂದು ಡಿಗ್ರಿಯೂ ಒಂದೊಂದು ದಿಕ್ಕು. ಈಗ ಹೇಳಲಾಗುತ್ತಿರುವ ಜ್ಯೋತಿಷ್ಯ ಎಂಬುದಕ್ಕೆ ಅರ್ಥವಿಲ್ಲ. ಬ್ರಹ್ಮಾಂಡದ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಜನರನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಅವುಗಳೇ ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯೀ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಅವನೇ ಭಗವಂತ. ಈ ವಿಶಾಲ ಬ್ರಹ್ಮಾಂಡವನ್ನು ಆ ಪರಮಾತ್ಮ ಇದ್ದಲ್ಲೇ ಇದ್ದು ನಿಯಂತ್ರಿಸುತ್ತಿದ್ದಾನೆ. ಇದನ್ನು ಅರಿಯದಿದ್ದರೆ ಅವನಿಗೆ ನಷ್ಟವೇನೂ ಇಲ್ಲ. ನಾನು ಎಷ್ಟೋ ವಿದ್ವಾಂಸರನ್ನು ನಕ್ಷತ್ರಗಳು ಎಷ್ಟಿವೆ ಎಂಬುದು ಗೊತ್ತೇ? ಎಂದು ಪ್ರಶ್ನಿಸಿದ್ದೇನೆ. ಯಾರಿಗೂ ಉತ್ತರಿಸಲು ಆಗಿಲ್ಲ. ಸರ್ ಸಿ.ವಿ. ರಾಮನ್‌ರವರನ್ನೂ ಕೇಳಿದ್ದೆ. ಅವರು "ಪೋಯಾ, ಪೋಯಾ! ನಾನು ಸಣ್ಣವನು, ಇಷ್ಟು ದೊಡ್ಡ ಬ್ರಹ್ಮಾಂಡವನ್ನು ಅರಿಯುವ, ಅಳೆಯುವ ಶಕ್ತಿ ನನ್ನಂತಹವರಿಗೆ ಎಲ್ಲಿ ಬರಬೇಕು?" ಎಂದು ಹೇಳಿದ್ದರು. 
ಬ್ರಹ್ಮಚರ್ಯ
     ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವವರು ಎಂದು ಅರ್ಥವಲ್ಲ. ಬ್ರಹ್ಮನಲ್ಲಿ ಸಂಚಾರ ಮಾಡುವ ಶಕ್ತಿಯಿರುವವನು ಎಂದು ಅರ್ಥ. ಈ ಮನುಷ್ಯ ಜನ್ಮ ದೊಡ್ಡದು. ಅದನ್ನು ಭೌತಿಕ ಸುಖಭೋಗಕ್ಕಾಗಿ ಮಾತ್ರ ಎಳಸದೆ ಈ ಜನ್ಮದ ಅರ್ಥ ತಿಳಿದು ಸತ್ಕರ್ಮಕ್ಕಾಗಿ ಬಳಸಬೇಕು. ಹಾಗೆ ಮಾಡದಿದ್ದರೆ ನಂತರದಲ್ಲಿ ಮತ್ತೆ ಇನ್ನು ಯಾವಾಗಲೋ ಮನುಷ್ಯ ಸಿಕ್ಕುವುದು! ಮನುಷ್ಯಜನ್ಮ ಎಷ್ಟೋ ಜನ್ಮಗಳನ್ನು ದಾಟಿಬಂದ ನಂತರ ಸಿಕ್ಕಿದೆ. ಇದನ್ನು ಸಾರ್ಥಕಪಡಿಸಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಬ್ರಹ್ಮಚಾರಿಗಳಾಗಬೇಕಾದುದು ಮನುಷ್ಯಜನ್ಮದ ಉದ್ದೇಶ. ಯಾರೋ ಹೇಳುತ್ತಿದ್ದರು, ಲಕ್ಷಾಂತರ ಜನ್ಮಗಳ ನಂತರ ಮನುಷ್ಯನಾಗಿ ಹುಟ್ಟಿದ್ದೇವೆ, ಪುನಃ ಕೆಳಗೆ ಹೋಗುತ್ತೇವೆಯೇ? ಮೇಲೆ ಹತ್ತಿ ಬಂದಿದ್ದೇವೆ, ಕೆಳಗೆ ಇಳಿಯುತ್ತೇವೆಯೇ? ಸರಿಯಾಗಿ ಮನುಷ್ಯನಂತೆ ನಡೆಯದಿದ್ದರೆ ಮನುಷ್ಯರಾಗೇ ಹುಟ್ಟುತ್ತೇವೆಂದು ಹೇಳಲಾಗುವುದಿಲ್ಲ. ನಾವು ಮಾಡಿದ ಕರ್ಮವನ್ನು ನಾವು ಭೋಗಿಸಲೇಬೇಕು. ಇದು ಭಗವಂತನ ನಿಯಮ. ನಾನು ಬಹಳಷ್ಟು ಸನ್ಯಾಸಿಗಳನ್ನು ನೋಡಿದ್ದೇನೆ - ಕಾವಿ ಬಟ್ಟೆ ಸನ್ಯಾಸಿಗಳು, ಬಿಳಿ ಬಟ್ಟೆ ಸನ್ಯಾಸಿಗಳು, ಹಳದಿ ಬಟ್ಟೆ ಸನ್ಯಾಸಿಗಳು, ಕಪ್ಪು ಬಟ್ಟೆ ಸನ್ಯಾಸಿಗಳು, ಹೀಗೆ. ಸನ್ಯಾಸಿಗಳು ಎಂದರೆ ಎಲ್ಲವನ್ನೂ ಬಿಟ್ಟವರು, ಅವರೇನು ಬಿಟ್ಟಿದ್ದಾರೆ?  ಹಸಿವಾದಾಗ ಭವತಿ ಭಿಕ್ಷಾಂದೇಹಿ ಅನ್ನುತ್ತಾರೆ, ಛಳಿಯಾದಾಗ ಬೆಚ್ಚಗೆ ಹೊದ್ದುಕೊಳ್ಳುತ್ತಾರೆ! ಸನ್ಯಾಸಿಗಳೆಂದರೆ ಭೌತಿಕ ಸುಖ ಭೋಗಗಳನ್ನು ತ್ಯಾಗ ಮಾಡಿದವರು, ಪರಮಾತ್ಮನ ಕುರಿತು ಧ್ಯಾನದಲ್ಲಿ ತೊಡಗಿಕೊಂಡವರು ಎನ್ನುತ್ತಾರೆ. ಅಂತಹ ನಿಜವಾದ ಸನ್ಯಾಸಿಗಳು ಎಷ್ಟು ಜನ ಇದ್ದಾರೆ? 
ನೋಯಿಸದಿರೋಣ
     ನಾಲಿಗೆ ಎರಡು ಅಲಗಿನ ಕತ್ತಿಯಿದ್ದಂತೆ. ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರರನ್ನು ಮಾತ್ರವಲ್ಲದೆ ಆಡಿದವರನ್ನೂ ಘಾತಿಸುತ್ತದೆ. ಪಿಪ್ಪಲಾದ ಎಂಬ ಋಷಿಗೆ ಆ ಹೆಸರು ಬಂದದ್ದು ಆತ ಕೆಳಗೆ ಬಿದ್ದಿದ್ದ ಫಲವನ್ನು ಮಾತ್ರ ತಿನ್ನುತ್ತಿದ್ದರಿಂದ. ಗೌತಮನಿಗೆ ಅಕ್ಷಪಾದ -ಅಂದರೆ ಕಾಲಿನಲ್ಲಿ ಕಣ್ಣಿದ್ದವನು- ಎಂಬ ಹೆಸರೂ ಇತ್ತು. ಆತ ನಡೆದಾಡುವಾಗ ಯಾವುದೇ ಕ್ರಿಮಿ, ಕೀಟಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಅವರುಗಳು ಅಷ್ಟರಮಟ್ಟಿಗೆ ಇತರರನ್ನು ನೋಯಿಸಬಾರದೆಂಬ ಮನೋಭಾವ ಹೊಂದಿದ್ದರು. ಮಾತು ಅನ್ನುವುದು ಬಾಣವಿದ್ದಂತೆ. ಆಡಿದ ಮೇಲೆ ಮುಗಿಯಿತು. ಬಾಣ ತನ್ನ ಗುರಿಯನ್ನು ಛೇದಿಸುವಂತೆ ಪಾಪವನ್ನು ದೂರ ಮಾಡುವಂತಿರಬೇಕು, ಇತರರನ್ನು ಚುಚ್ಚುವಂತಿರಬಾರದು. ಮನಸ್ಸಿಗೆ ಹಿತ, ಸಂತೋಷ ತರಬೇಕು. ನಮಗೆ ಕೆಟ್ಟದಾದಾಗ, ತೊಂದರೆಯಾದಾಗ ಪರಮಾತ್ಮನನ್ನು ದೂಷಿಸುವುದು ಸರಿಯಲ್ಲ. ನಮಗೆ ಕೆಟ್ಟದಾಗಲು ಕಾರಣ ನಮ್ಮ ತಪ್ಪೇ ಹೊರತು ಪರಮಾತ್ಮನದಲ್ಲ ಎಂಬುದನ್ನು ಅರಿಯಬೇಕು. ನಮಗೆ ಕಷ್ಟವನ್ನು ಎದುರಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕೇ ಹೊರತು ಅವನನ್ನು ಬಯ್ಯಬಾರದು. ನಾವು ಹೊಗಳಿದರೂ ಅಷ್ಟೆ, ತೆಗಳಿದರೂ ಅಷ್ಟೆ, ಪರಮಾತ್ಮ ಪರಮಾತ್ಮನೇ. ಅವನು ನಿರ್ಲಿಪ್ತ. ಹೊಗಳುತ್ತಾರೆಂದು ಒಳ್ಳೆಯದು ಮಾಡುತ್ತಾನೆ, ತೆಗಳುತ್ತಾರೆಂದು ಕೆಟ್ಟದು ಮಾಡುತ್ತಾನೆ ಎಂದು ಭಾವಿಸುವುದು ಮೂರ್ಖತನ. ಎಲ್ಲಿ ನ್ಯಾಯ, ಸತ್ಯ, ಧರ್ಮ ಇರುತ್ತದೋ ಅಲ್ಲಿ ಭಗವಂತನಿರುತ್ತಾನೆ. ಇದರ ಅರಿವಾದರೆ ಪಾಪ ಮಾಡಲು ಧೈರ್ಯ ಬರುವುದಿಲ್ಲ. 
ಒಳ್ಳೆಯ ದಾರಿ
      ಪರಮಾತ್ಮ ಎಂದೂ ಸಾಕಾರ ರೂಪಿ ಅಲ್ಲವೇ ಅಲ್ಲ, ಸಾಕಾರನೆಂದಾಕ್ಷಣ ಸರ್ವಶಕ್ತ, ಸರ್ವವ್ಯಾಪಕ ಭಗವಂತನನ್ನು ಮಿತಿಗೊಳಿಸಿದಂತೆ! ಆತ ಅನುಭವಗಮ್ಯನೇ ಹೊರತು ಕಣ್ಣಿನಿಂದ ಕಾಣಲಾಗುವುದಿಲ್ಲ. ಹೃದಯದಲ್ಲಿ ಕಾಣಬೇಕು, ಅನುಭವಿಸಬೇಕು! ಸ್ವರ್ಗ, ನರಕ ಅನ್ನುವುದು ಬೇರೆ ಇಲ್ಲ. ಇಲ್ಲೇ ಇದೆ. ಸ್ವರ್ಗ ಅಂದರೆ ಮೇಲೇರುವುದು, ನರಕ ಅಂದರೆ ಕೆಳಕ್ಕೆ ಇಳಿಯುವುದು. ನಮ್ಮ ನಡವಳಿಕೆಗಳು ಸರಿಯಿದ್ದರೆ, ಸತ್ಕರ್ಮ ಮಾಡಿದರೆ ನಾವು ಸ್ವರ್ಗ ಕಾಣುತ್ತೇವೆ, ಇಲ್ಲದಿದ್ದರೆ ಕೆಳಗೆ ಬೀಳುತ್ತೇವೆ. ನನ್ನನ್ನು ನಾಸ್ತಿಕನೆಂದು ದೂರುವವರೂ ಇದ್ದಾರೆ. ಆಸ್ತಿಕರೆಂದರೆ ಯಾರು? ನಾಸ್ತಿಕರು ಯಾರು? ಅರ್ಥರಹಿತ ಸಂಪ್ರದಾಯಗಳು, ಆಚರಣೆಗಳನ್ನು ಪೋಷಿಸುವ ಆಸ್ತಿಕರೆನಿಸಿಕೊಳ್ಳುವವರಿಗಿಂತ ನಾಸ್ತಿಕರೇ ಮೇಲು! ಜ್ಞಾನಿಗಳಾದವರು ವಿಚಾರ ತಿಳಿದವರಾಗಿದ್ದು ಯಾರು ಏನೇ ಹೇಳಿದರೂ ತಪ್ಪುದಾರಿಗೆ ಎಳೆಯಲ್ಪಡುವುದಿಲ್ಲ. ಆದರೆ ತಿಳುವಳಿಕೆ ಕಡಿಮೆಯಿದ್ದವರನ್ನು ದಾರಿ ತಪ್ಪಿಸುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಕ್ಷಮಿಸಬೇಕು, ನಾನು ಆಡಿದ ಮಾತುಗಳು ಕಟುವಾಗಿ ಕಾಣಬಹುದು, ಆದರೆ ಸತ್ಯ ಸತ್ಯವೇ. ನಾನು ಯಾರನ್ನೂ ನೋಯಿಸಲು ಉದ್ದೇಶಿಸಿಲ್ಲ, ಕೆಟ್ಟ ಭಾವನೆಯಿಂದ ಮಾತನಾಡಿಲ್ಲ, ಪಂಡಿತನೆಂದು ಭಾವಿಸಿ ಆಡಿಲ್ಲ. ಒಳ್ಳೆಯ ವಿಚಾರ ಮಾಡೋಣ, ವಿಮರ್ಶೆ ಮಾಡೋಣ, ಒಳ್ಳೆಯ ದಾರಿಯಲ್ಲಿ ನಡೆಯೋಣ.
*************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/05/10.html

ಶನಿವಾರ, ಮೇ 12, 2012

ಸಾರಗ್ರಾಹಿಯ ರಸೋದ್ಗಾರಗಳು - 10

     ಪಂ. ಸುಧಾಕರ  ಚತುರ್ವೇದಿಯವರು  ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ  ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಆಸಕ್ತಿಯುಳ್ಳವರಿಗಾಗಿ ಅವರ ವಿಳಾಸ ಹೀಗಿದೆ: #286/ಸಿ, ಶ್ರೀ ಕೃಷ್ಣ ಸೇವಾಶ್ರಮ ರಸ್ತೆ, ಜಯನಗರ 5ನೆಯ ಬ್ಲಾಕ್, ಬೆಂಗಳೂರು.  ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಸಮಾಧಿ
     'ಸಮಾಧಿ, ಸುಷುಪ್ತಿ, ಮೋಕ್ಷೇಶು ಬ್ರಹ್ಮರೂಪಪ'- ಸಾಂಖ್ಯ ದರ್ಶನದಲ್ಲಿ ಕಪಿಲಾಚಾರ್ಯರು ಹೇಳುತ್ತಾರೆ. ಕಪಿಲಾಚಾರ್ಯರನ್ನು ಅನೇಕರು ನಾಸ್ತಿಕರು ಎನ್ನುತ್ತಾರೆ. ಅವರು ನಾಸ್ತಿಕರಲ್ಲ, ಅವರನ್ನು ನಾಸ್ತಿಕರು ಅನ್ನುವವರೇ ನಾಸ್ತಿಕರು. ಪರಮಾತ್ಮ ಸರ್ವಜ್ಞ, ಎಲ್ಲವನ್ನೂ ಮಾಡುವವನು, . ಅವನನ್ನು ನಾವು ಈಶ್ವರ ಅಂತ ಬಾವಿಸ್ತೇವೆ. ಭಗವಂತ ಈ ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಪ್ರಕೃತಿ ಇಲ್ಲದಿದ್ದರೆ ಭಗವಂತ ಏನೂ ಮಾಡಲಾಗುತ್ತಿರಲಿಲ್ಲ. ಒಳ್ಳೆಯ ನಿಪುಣ ಟೈಲರ್ ಹತ್ತಿರ ಹೋಗಿ ಬಟ್ಟೆಯನ್ನು ಕೊಡದೆ 'ನನಗೊಂದು ಅಂಗಿ ಹೊಲೆದುಕೊಡು' ಅಂದರೆ ಅವನು ಹೇಗೆ ಹೊಲಿಯುತ್ತಾನೆ? ಹೊಲಿಯಲು ಅವನಿಗೆ ಬಟ್ಟೆ ಕೊಡಬೇಕು. ಹಾಗೆಯೇ ಈ ಪ್ರಕೃತಿ ಇಲ್ಲದಿದ್ದರೆ, ಈ ಜಡ ಪ್ರಕೃತಿ ಇಲ್ಲದಿರುತ್ತಿದ್ದರೆ ಭಗವಂತನಿಗೆ ಈ ಜಗತ್ತನ್ನು ಸ್ಥಾಪನೆ ಮಾಡಲು, ಸೃಷ್ಟಿ ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಇದನ್ನು ಅರಿತುಕೊಂಡು ನಾವು ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ಯಾವಾಗ ನಾವು ಕೆಳಕ್ಕೆ ಬೀಳುತ್ತೇವೆ ಅಂದರೆ ಆ ಪ್ರಕೃತಿಗೆ ವಶವಾದಂತೆ ನಾವು ಪರಮಾತ್ಮನನ್ನು ಮರೆತುಬಿಡ್ತೇವೆ, ಪ್ರಕೃತಿಗೆ ವಾಲುತ್ತೇವೆ, ಪರಮಾತ್ಮ ಇಲ್ಲದಿದ್ದರೆ ಪ್ರಕೃತಿ ತನ್ನಿಂದ ತಾನೇ ಏನೂ ಮಾಡುವಂತಿಲ್ಲ. ವಾಯು ಬೀಸುತ್ತೆ, ತನ್ನಷ್ಟಕ್ಕೆ ತಾನೇ ಬೀಸುತ್ತೇನು? ಸಾಧ್ಯವಿಲ್ಲ. ಆ ಬೀಸುವ ಹಾಗೆ ಮಾಡುವವನು ಪರಮಾತ್ಮ.  ಬೆಂಕಿ ಸುಡುತ್ತೆ, ಅದಕ್ಕೆ ಸುಡುವ ಶಕ್ತಿ ಕೊಟ್ಟವರಾರು? ಪಂಚಭೂತಗಳೂ ಅಷ್ಟೆ. ಹೀಗೆ ಯೋಚನೆ ಮಾಡುತ್ತಾ ಹೋಗಿ. ಎಲ್ಲಕ್ಕೂ ಮೂಲಶಕ್ತಿ ಆ ಭಗವಂತನೇ. ಜಡ ಪ್ರಕೃತಿ ತನ್ನಷ್ಟಕ್ಕೆ ತಾನೇ ಏನೂ ಮಾಡಲಾರದು. ಇದನ್ನೇ ಕಪಿಲ ಮಹರ್ಷಿಗಳೂ ಹೇಳುತ್ತಾರೆ, ಅವರನ್ನು ನಾಸ್ತಿಕರು ಅಂತ ಹೇಗೆ ಹೇಳುವುದು? ಅವರು ಹೇಳುತ್ತಾರೆ: ಸಮಾಧಿ, ಸುಷುಪ್ತಿ, ಮೋಕ್ಷ - ಈ ಮೂರು ಸ್ಥಿತಿಯಲ್ಲಿ ಜೀವಾತ್ಮನಿಗೆ ಬ್ರಹ್ಮ ರೂಪ ಬರುತ್ತೆ ಅಂತ. ಸಮಾಧಿ ಅಂದರೆ ಎಲ್ಲವನ್ನೂ ಮರೆತು ಮನಸ್ಸು ಸ್ಥಿರವಾಗಿ ನಿಂತು ಪರಮಾತ್ಮನನ್ನು ಧ್ಯಾನಿಸಿದಾಗ, ಜೀವಾತ್ಮ ಇದ್ದೂ ಕೂಡ ಇಲ್ಲದ ಹಾಗೆ ಆದಾಗ, ಜೀವಾತ್ಮ ತನ್ನ ಇರವನ್ನು ತಾನೇ ಮರೆತು ಭಗವಂತನಲ್ಲಿ ಮನಸ್ಸನ್ನು ಸ್ಥಿರಗೊಳಿಸಿದಾಗ ಭಗವಂತ ಬಿಟ್ಟು ಬೇರೇನೂ ಕಾಣದಿದ್ದಾಗ ಉಂಟಾಗುವ ಸ್ಥಿತಿ ಇದೆಯಲ್ಲಾ ಅದನ್ನು ಸಮಾಧಿ ಅನ್ನುತ್ತಾರೆ. ಈಗ ಹೇಳುತ್ತಾರಲ್ಲಾ, ಸತ್ತ ಮೇಲೆ ಹೂತು/ಸುಟ್ಟು ಕಟ್ಟುವ ಕಟ್ಟೆ ಇದೆಯಲ್ಲಾ, ಅದು ಸಮಾಧಿ ಅಲ್ಲ. ಒಳ್ಳೆಯ ವಿಚಾರದಲ್ಲಿ ಎಲ್ಲಿ ಮನಸ್ಸು ಮತ್ತು ಆತ್ಮ ಸ್ಥಿರವಾಗಿ ನಿಲ್ಲುತ್ತೋ ಅದು ಸಮಾಧಿ. ಅದು ಒಂದು ಅವಸ್ಥೆ. ಈ ಸ್ಥಿತಿಯಲ್ಲಿ ಜೀವಾತ್ಮ ತಾನು ಅಲ್ಪಜ್ಞ, ಅಲ್ಪಶಕ್ತ  ಎಂಬ ಎಲ್ಲಾ ಭಾವನೆಯನ್ನೂ ಮರೆತುಬಿಡುತ್ತಾನೆ, ಪರಮಾತ್ಮನಲ್ಲಿ ನೆಲೆ ನಿಲ್ಲುತ್ತಾನೆ. 
ಸುಷುಪ್ತಿ
     ಸುಷುಪ್ತಿ - ನಿದ್ದೆ, ಒಳ್ಳೆಯ ನಿದ್ದೆ - ಶ್ರೀಮಂತನೂ ನಿದ್ದೆ ಮಾಡ್ತಾನೆ, ಬಡವನೂ ನಿದ್ದೆ ಮಾಡ್ತಾನೆ. ಶ್ರೀಮಂತನ ನಿದ್ದೆ ಚಂಚಲವಾಗಬಹುದು, ಎಲ್ಲಿ ತನ್ನ ಶ್ರೀಮಂತಿಕೆಯನ್ನು ಯಾರು ಕೊಳ್ಳೆ ಹೊಡೀತಾರೋ ಅಂತ ಯೋಚನೆಯಲ್ಲಿ ಹಣದ ಮೇಲೆ ಮನಸ್ಸು ನಿಂತಿರುತ್ತದೆ. ಬಡವನಿಗೆ ಹಾಗಲ್ಲ, ಚಾಪೆ ಇದ್ದರೆ ಚಾಪೆ, ನೆಲ ಇದ್ದರೆ ನೆಲ, ಮಲಗುತ್ತಾನೆ, ಚೆನ್ನಾಗಿ ನಿದ್ದೆ ಹೋಗುತ್ತಾನೆ. ಕಾರಣವೇನೆಂದರೆ ಕಳೆದುಕೊಳ್ಳುವುದಕ್ಕೆ ಅವನ ಹತ್ತಿರ ಜಾಸ್ತಿ ಇಲ್ಲ. ಯಾವನ ಹತ್ತಿರ ಕಳೆದುಕೊಳ್ಳುವುದಕ್ಕೆ ಬಹಳ ಕಡಿಮೆ ಇರುತ್ತೋ ಅವನೇ ಸುಖಿ. ನನ್ನ ಹತ್ತಿರ ಒಂದು ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಕಳೆದುಹೋಯಿತು. ಪರವಾಗಿಲ್ಲ, ಮತ್ತೆ ಗಳಿಸಬಹುದು. ಅದೇ ಒಂದು ಕೋಟಿ ರೂಪಾಯಿ ಇತ್ತು ಅಂತ ಇಟ್ಕೊಳ್ಳಿ, ಅದು ಕಳೆದುಹೋಯಿತು ಅಂದರೆ ಅಷ್ಟು ಸುಲಭವಾಗಿ ಸಹಿಸಿಕೊಳ್ಳಲು ಆಗುವುದಿಲ್ಲ. ಈ ಮಾತನ್ನು ಒತ್ತಿ ಒತ್ತಿ ಶಂಕರಾಚಾರ್ಯರೂ ಹೇಳ್ತಾರೆ, ಮಧ್ವಾಚಾರ್ಯರೂ ಹೇಳ್ತಾರೆ, ರಾಮಾನುಜಾಚಾರ್ಯರೂ ಹೇಳ್ತಾರೆ, ಭಾಷೆ/ರೀತಿ ಬೇರೆ ಅಷ್ಟೆ. ಶಂಕರಾಚಾರ್ಯರು 'ಜ್ಞಾನವಿಲ್ಲದೆ ಮುಕ್ತಿಯಿಲ್ಲ' ಅಂತ ಹೇಳ್ತಾರೆ, ರಾಮಾನುಜರು 'ಭಗವಂತನಲ್ಲಿ ಸಂಪೂರ್ಣ ಆತ್ಮಸಮರ್ಪಣೆ ಮಾಡಿಕೊಂಡರೆ ಮುಕ್ತಿ ಸಿಗುತ್ತೆ'  ಅಂತಾರೆ, ಮಧ್ವಾಚಾರ್ಯರೂ  'ನಿನ್ನನ್ನು ನೀನು ಮರೆ' ಅಂತ ಹೇಳ್ತಾರೆ. ಪರಮಾತ್ಮನನ್ನು ನಾರಾಯಣ ಅಂತ ಕರೀತಾರೆ. ಅವನನ್ನು ಶಂಕರ ಅಂತಾಲಾದ್ರೂ ಕರೀರಿ, ಶಿವ ಅಂತಲಾದ್ರೂ ಕರೀರಿ, ಯಾವ ಹೆಸರಿನಿಂದಾದರೂ ಕರೀರಿ, ಏನಡ್ಡಿಯಿಲ್ಲ. ನಾವು ಅರ್ಥ ಮಾಡಿಕೊಳ್ಳೋಕೆ ಹೋಗಲ್ಲ. ಪದಗಳನ್ನು ತೆಗೆದುಕೊಂಡು ಬಿಡ್ತೇವೆ, ಅವನಿಗೊಂದು ಜಾಗ ಕಲ್ಪಿಸಬೇಕಲ್ಲಾ, ಸರಿ ವೈಕುಂಠ ಆಯ್ತು.  ನಾವು ದೇವರಿಗೆ ಬೇರೆ ಬೇರೆ ಲೋಕ ಕಟ್ಟಿಸಿಕೊಟ್ಟುಬಿಡುತ್ತೇವೆ. ವೈಕುಂಠದಲ್ಲಿ ನಾರಾಯಣ ಇರ್ತಾನೆ, ಕೈಲಾಸದಲ್ಲಿ ಶಿವ ಇರ್ತಾನೆ, ಹೀಗೆ.  ಇದೆಲ್ಲಾ ನಮ್ಮ ಕಲ್ಪನೆ. ಪೌರಾಣಿಕರ ಪ್ರಕಾರ ದೇವರು ಈ ಲೋಕಕ್ಕೆ ಸಂಬಂಧಿಸಿದವನಲ್ಲ. ಬೇರೆ ಲೋಕದಲ್ಲಿರೋ ಭಗವಂತನಾದರೋ ನಮಗೇಕೆ ಬೇಕು? ಸುಷುಪ್ತಿ - ಅಂದರೆ ಒಳ್ಳೆಯ ಸ್ವಾಭಾವಿಕವಾದ ನಿದ್ದೆ. ಆ ಸ್ಥಿತಿಯಲ್ಲಿ ಕೂಡ ನಾವು ಆನಂದ ಪಡೆಯುತ್ತೇವೆ. ಅಲ್ಲಿ ಬಾಹ್ಯ ಪ್ರಪಂಚ ಇರುವುದಿಲ್ಲ. 
ಮೋಕ್ಷ
     ಮೋಕ್ಷ ಇದ್ದೇ ಇದೆ. ಅಲ್ಲಿ ಪ್ರಕೃತಿಯ ಬಂಧನವೇ ಇಲ್ಲ, ಆ ಭಗವಂತನ ಸಾನ್ನಿಧ್ಯದಲ್ಲಿ ಆನಂದವನ್ನು ನೇರವಾಗೇ ಪಡೆಯುತ್ತೇವೆ. ಬ್ರಹ್ಮರೂಪಪ ಅಂತ ಹೇಳ್ತಾರೆ, ಜ್ಞಾಪಕವಿಟ್ಟುಕೊಳ್ಳಿ. ಮೋಕ್ಷದಲ್ಲಿ ಇವನೇ ಬ್ರಹ್ಮ ಆಗಿಬಿಡ್ತಾನೆ ಅಂತ ಅಲ್ಲ. ಜೀವಾತ್ಮ ಯಾವಾಗಲೂ ಜೀವಾತ್ಮನೇ, ಹಿಂದೆಯೂ ಜೀವಾತ್ಮ, ಮುಂದೆಯೂ ಜೀವಾತ್ಮನೇ, ಅನಂತಕಾಲದವರೆಗೂ ಜೀವಾತ್ಮನೇ. ಅದು ಎಂದೂ ಪರಮಾತ್ಮ ಆಗುವುದಿಲ್ಲ. ನಮ್ಮಲ್ಲಿ ಒಂದು ಕಲ್ಪನೆ ಇದೆ, ಸತ್ತ ಮೇಲೆ ಭಗವಂತನಲ್ಲಿ ಸೇರಿ ಹೋಗಿಬಿಡ್ತಾರೆ ಅಂತ. ಹಾಗೆ ಸೇರುತ್ತಾ ಹೋದರೆ ಪರಮಾತ್ಮ ಬೆಳೆಯುತ್ತಾ ಹೋಗಬೇಕಲ್ಲಾ! ಎಲ್ಲರೂ ಸತ್ತು ಸತ್ತು ಸೇರುತ್ತಾ ಹೋದರೆ ದೊಡ್ಡ ಪರಮಾತ್ಮ ಆಗಬೇಕಲ್ಲಾ! ಇದು ಪರಮಾತ್ಮನ ಭಕ್ತರು ಆಡುವ ಮಾತೇ ಇದು? ಪರಮಾತ್ಮನನ್ನು ಹಾಸ್ಯ ಮಾಡಿದಂತೆ. 
ಒಗ್ಗಟ್ಟೇಕಿಲ್ಲ?
     ಒಂದು ಉದಾಹರಣೆ ತೆಗೆದುಕೊಳ್ಳಿ, ನಮ್ಮಲ್ಲಿ ಒಗ್ಗಟ್ಟು ಏಕೆ ಇಲ್ಲ? ಶಂಕರಾಚಾರ್ಯರು ಒಂದು ಶ್ಲೋಕ ಬರೆದಿದ್ದಾರೆ; 'ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ'  ಅಂದರೆ ಹೇಗೆ ಆಕಾಶದಿಂದ ಬಿದ್ದ ಮಳೆನೀರು ಹೇಗೆ ಸಮುದ್ರ ಸೇರುತ್ತೋ ಹಾಗೆ ಎಲ್ಲಾ ದೇವರಿಗೆ ಮಾಡಿದ ನಮಸ್ಕಾರ ಕೇಶವನಿಗೆ ಸೇರುತ್ತೆ ಅಂತ. ಲಿಂಗಾಯಿತರು ಅದು ಏಕೆ ಸ್ವಾಮಿ, ಕೇಶವನಿಗೇ ಏಕೆ ಸೇರಬೇಕು? 'ಶಂಕರಂ ಪ್ರತಿಗಚ್ಛತಿ' ಅಂತ ಹೇಳಬಾರದಾ? ಅಂತ ಕೇಳಬಹುದು. ಜೈನರು 'ಜಿನನಿಗೇ ಏಕೆ ಸೇರಬಾರದು' ಅಂತ ಕೇಳಬಾರದಾ? ಅಲ್ಲೂ ಕೂಡ ಪ್ರತ್ಯೇಕತೆ! ದೇವರೊಬ್ಬ ಅಂತ ಹೇಳೋದು, ನಾಮ ಹಲವು ಅಂತ ಹೇಳೋದು, ಬೇರೆ ಬೇರೆ ಹೆಸರಿಟ್ಟುಕೊಂಡು ಗುದ್ದಾಡೋದು. ಇದು ಮನುಷ್ಯನ ಅಲ್ಪತ್ವ. ದೇವರು ಎಲ್ಲಿದ್ದಾನೆ? ಅವನು ಎಲ್ಲಾ ಕಡೆ ಇದ್ದಾನೆ. ಅವನನ್ನು ನೋಡಲು ಕಾಶಿಗೆ ಹೋಗಬೇಕಿಲ್ಲ, ರಾಮೇಶ್ವರಕ್ಕೂ ಹೋಗಬೇಕಿಲ್ಲ, ಬದರಿಗೂ ಹೋಗಬೇಕಿಲ್ಲ,  ಕೇದಾರನಾಥಕ್ಕೂ ಹೋಗಬೇಕಿಲ್ಲ, ಅಮರನಾಥಕ್ಕೂ ಹೋಗಬೇಕಿಲ್ಲ.ಇರೋ ಊರೇ ಸಾಕು. ದೇವಸ್ಥಾನಕ್ಕೂ ಹೋಗಬೇಕಿಲ್ಲ, ಈ ಶರೀರ ಇದೆಯಲ್ಲಾ, ಇದರಲ್ಲೂ ಇದ್ದಾನೆ. ಅಲ್ಲಿರುವ ದೇವರು ದೊಡ್ಡವನು, ಇಲ್ಲಿರುವ ದೇವರು ಚಿಕ್ಕವನು ಅಂತ ಏನೂ ಇಲ್ಲ. ಅವನು ಎಲ್ಲೋ ಒಂದು ಕಡೆ ಇರುತ್ತಾನಾ? ಎಲ್ಲಾಕಡೆ ಇರುತ್ತಾನೆ. ಇರೋನು ಒಬ್ಬನೇ ದೇವರು. ೨೫ ದೇವರಿಲ್ಲ. ಕಲ್ಪನೆ ಮಾಡಿಕೊಂಡು ಬೇರೆ ಬೇರೆ ಹೆಸರು ಕೊಡೋದು! ಅಣು-ಅಣುವಿನಲ್ಲೂ ದೇವರಿದ್ದಾನೆ ಅಂತಾರೆ. ಹಾಗಿದ್ದ ಮೇಲೆ ಇವೆಲ್ಲಾ ಯಾಕೆ? 
ಪರಮಾತ್ಮನನ್ನು ಕಾಣುವುದು!
     ಸತ್ತ್ವಗುಣ ಹೆಚ್ಚಾಗಿ, ರಜೋಗುಣ ಕಡಿಮೆಯಾಗಿ, ತಮೋಗುಣ ಶೂನ್ಯವಾದಾಗ ನಮಗೆ ಸ್ವಲ್ಪ ಸ್ವಲ್ಪ ಪರಮಾತ್ಮನ ಅನುಭವವಾಗುವುದಕ್ಕೆ ಪ್ರಾರಂಭವಾಗುತ್ತದೆ. ಇದನ್ನು ಅನುಭವಿಸಿ ತಿಳಿಯಬೇಕೇ ಹೊರತು ಪದಗಳಲ್ಲಿ ವಿವರಿಸುವುದು ಕಷ್ಟ. ಜೀವಾತ್ಮ - ಪರಮಾತ್ಮ ಒಟ್ಟು ಸೇರಿದಾಗ ಆಗುವ ಅನುಭೂತಿ, ಆನಂದ ವರ್ಣಿಸಲಸದಳ. ಸಕ್ಕರೆಯ ರುಚಿಯೇ ಗೊತ್ತಿಲ್ಲದೆ ಇರುವವರಿಗೆ ಸಕ್ಕರೆ ಸಿಹಿ ಎಂದು ಇಪ್ಪತ್ತೈದು ಸಲ ಒತ್ತಿ ಒತ್ತಿ ಹೇಳಿದರೂ ಅರ್ಥವಾಗದೆ ಹೋಗಬಹುದು, ಆದರೆ ಸಕ್ಕರೆಯನ್ನು ಆತ ನಾಲಗೆಯ ಮೇಲಿರಿಸಿಕೊಂಡಾಗ ಅವನಿಗೆ ಅದರ ಸಿಹಿ ಅನುಭವಕ್ಕೆ ಬರುತ್ತದೆ. ಹಾಗೆಯೇ ಪರಮಾತ್ಮನನ್ನು ಅನುಭವಿಸಿಯೇ ತಿಳಿಯಬೇಕು. ಸಾಕ್ಷಾತ್ಕಾರ ಅನ್ನುವುದು ಸುಳ್ಳು. ಪರಮಾತ್ಮನನ್ನು ನಮ್ಮ ಹಣೆಗಣ್ಣಿಂದ ನೋಡಿದೆವು ಅನ್ನುವುದು ಸುಳ್ಳು. ಪರಮಾತ್ಮನನ್ನು ಕಾಣಲು ಬೇಕಾಗಿರುವುದು ಜ್ಞಾನದ ಕಣ್ಣು, ಒಳಗಣ್ಣು, ಅಂತಃಚಕ್ಷು, ಆ ಕಣ್ಣುಗಳಿಂದ ನಾವು ಭಗವಂತನನ್ನು ಕಾಣಬಹುದು. 
     ಸೂರದಾಸರು ಹುಟ್ಟುಕುರುಡರು. ಅವರು ಕೃಷ್ಣನನ್ನು ವರ್ಣಿಸಿದ ರೀತಿ ನೋಡಿದರೆ ಕೃಷ್ಣ, ದೇವಕಿ, ಯಶೋದೆ, ಎಲ್ಲಾ ಎದುರಿಗೆ ಬಂದಂತೆ ಭಾಸವಾಗುತ್ತದೆ. ಹೇಗೆ ಸಾಧ್ಯವಾಯಿತು ಇದು? ಜನ್ಮಾಂತರದ ಸಂಸ್ಕಾರ, ಅಂತಃಚಕ್ಷುವಿನಿಂದ ನೋಡಿದರು. ಈಗಲೂ ಪರೀಕ್ಷೆ ಮಾಡಿ ನೋಡಿ, ದೇವರಿಗೆ ಆಕಾರ ಇಲ್ಲ, ಕಲ್ಪಿಸಿಕೊಳ್ಳಿ, ಯಾವ ಆಕಾರ ಬೇಕಾದರೂ ಕಲ್ಪಿಸಿಕೊಳ್ಳಿ. ನಾರಾಯಣ - ಶಂಖ, ಚಕ್ರ, ಗದಾಪದ್ಮಧಾರಿ, ಕಿರೀಟ ಹಾಕಿಕೊಂಡಿದ್ದಾನೆ, ತುಳಸಿಮಾಲೆ, ಪೀತಾಂಬರ ವಸ್ತ್ರ, ಏನೇನೋ ಕಲ್ಪಿಸಿಕೊಳ್ಳಿ, ಕಾಣಿ, ಆ ಚಿತ್ರ ಮನಸ್ಸಿಗೆ ಬರುತ್ತೆ, ನಿಜವಾಗಿಯೂ ಹಾಗೆ ಇದೆಯಾ? ನಿಜವಾಗಿ ಹಾಗಿಲ್ಲ. ನಿಮ್ಮ ಕಲ್ಪನೆಯಂತೆ ನಿಮಗೆ ಕಾಣುತ್ತೆ, ಅಷ್ಟೆ. ಹಾಗೆಯೇ ಶಿವ! ಪರಮಾತ್ಮನ ವಿಷಯ ಮಾತನಾಡುವಾಗ ಬಹಳ ಗಂಭೀರವಾಗಿ ಆಲೋಚಿಸಬೇಕು. ಪರಮಾತ್ಮ ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಅವನಿಲ್ಲದ ಜಾಗವೇ ಇಲ್ಲ. ಅಗ್ನಿಹೋತ್ರ ಮಾಡುವಾಗ, ಸಂಧ್ಯಾವಂದನೆ ಮಾಡುವಾಗ ಈ ಮಂತ್ರ ಹೇಳ್ತೇವೆ:
ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ |
ನಮಃ ಶಿವಾಯ ಚ ಶಿವತರಾಯ ಚ || (ಯಜು.೧೬.೪೧.)
     ಇದರ ಅರ್ಥ ಶಾಂತಿಸ್ವರೂಪನಿಗೆ ನಮಸ್ಕಾರ ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ ಎಂದು. 
*************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/05/9.html

ಶುಕ್ರವಾರ, ಮೇ 4, 2012

ಸಾರಗ್ರಾಹಿಯ ರಸೋದ್ಗಾರಗಳು - 9


     ಪಂ. ಸುಧಾಕರ  ಚತುರ್ವೇದಿಯವರು  ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ  ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************

ಪ್ರಾಣಿಬಲಿ
     ಯಜ್ಞ ಅಂದಕೂಡಲೆ ಪಶುಬಲಿ ಬೇಕೇಬೇಕು ಅಂತಾರೆ. ಯಾವ ಯಜ್ಞ ಹಿಂಸೆಯಿಂದ ಕೂಡಿರುವುದಿಲ್ಲವೋ -ಅಧ್ವರ - ಹಿಂಸೆಯಿಲ್ಲದ್ದು- ಅದೇ ಯಜ್ಞ ಎಂದು ವೇದದಲ್ಲಿ ಸ್ಪಷ್ಟವಾಗಿದೆ. ಯಜ್ಞಕ್ಕೆ ಬಲಿ ಕೊಡುವ ಪದ್ಧತಿ ಏಕೆ, ಹೇಗೆ ಸೇರಿತೋ ಗೊತ್ತಿಲ್ಲ. ಕೋಣಬಲಿ ಕೊಟ್ಟರೆ ಶ್ರೇಷ್ಠವಂತೆ, ಅದರಿಂದ ಸೂರ್ಯದೇವನಿಗೆ ತೃಪ್ತಿಯಾಗುತ್ತಂತೆ! ಕಾಲಕಾಲಕ್ಕೆ ಮಳೆ, ಬೆಳೆ ಕೊಡುತ್ತಾನಂತೆ! ಅದು ಹೇಗೆ ತೃಪ್ತಿಯಾಗುತ್ತೋ! ಅದಕ್ಕಾಗಿ ಪಾಪ, ಆ ಕೋಣನನ್ನು ಬಲಿಕೊಡಬೇಕೆ? ನಾನು . . . . ಸಮೀಪದ ಒಂದು ಮಠದ ಮುಖ್ಯಸ್ಥ . . .ರನ್ನು ಕೇಳಿದೆ: ಸ್ವಾಮಿ, ನೀವು ಯಾಕೆ ಪ್ರಾಣಿಹಿಂಸೆ ಮಾಡ್ತೀರಿ? ಅವರು ಹೇಳಿದರು: 'ನಾವು ಎಲ್ಲಾ ಪ್ರಾಣಿಗಳನ್ನೂ ಬಲಿ ಕೊಡಲ್ಲ, ಸಸ್ಯಾಹಾರಿ, ಸಾಧು ಪ್ರಾಣಿ ಮಾತ್ರ ಬಲಿ ಕೊಡ್ತೀವಿ, ಅವು ಶುದ್ಧವಾಗಿರುತ್ತವೆ, ಅವನ್ನು ಬಲಿ ಕೊಟ್ಟರೆ ಸೂರ್ಯನಾರಾಯಣನಿಗೆ ತೃಪ್ತಿಯಾಗುತ್ತೆ'. ನಾನು ಹೇಳಿದೆ - 'ನನ್ನ ಜೊತೆಗೆ ಬನ್ನಿ, ಕೆಲವು ತಿಂಗಳು ನಿಮಗೆ ವಡೆ, ಚಕ್ಕುಲಿ, ಏನೂ ಕೊಡಲ್ಲ, ಬರೀ ಹುಲ್ಲೇ ತಿನ್ನಿಸಿ ಆಮೇಲೆ ಯಜ್ಞಕ್ಕೆ ಬಲಿ ಕೊಡುತ್ತೇನೆ, ಸೂರ್ಯದೇವನಿಗೆ ತುಂಬಾ ಸಂತೋಷ ಆಗುತ್ತೆ'. ಅವರು 'ಅಯ್ಯೋ, ನಾನು ಮನುಷ್ಯ' ಅಂದರು. 'ಮನುಷ್ಯ ಎಂದು ಏಕೆ ಹೇಳುತ್ತಿ? ಮನುಷ್ಯ ಜಾತಿಗೆ ಏಕೆ ಅವಮಾನ ಮಾಡುತ್ತಿ? ಆಲೋಚನೆ ಮಾಡಿ ಕೆಲಸ ಮಾಡುವವನು ಮನುಷ್ಯ ಎಂದು ಶಾಸ್ತ್ರ ಹೇಳುತ್ತೆ. ಆಲೋಚನೆ ಮಾಡದೆ ಕೆಲಸ ಮಾಡುವ ನೀನು ಹೇಗೆ ಮನುಷ್ಯ?' ಎಂದು ಹೇಳಿದೆ. ಯಜ್ಞ ಶ್ರೇಷ್ಠವಾದ ಕರ್ಮ, ಅಂತಹ ಯಜ್ಞದ ಹೆಸರಿನಲ್ಲಿ ಇಂತಹ ಪಾಪ ಏಕೆ ಮಾಡಬೇಕು? ಯಾವತ್ತೂ ಮಾಡಬಾರದು. 'ದೇವೋ ದುರ್ಬಲ ಘಾತಕಃ' ಅನ್ನುತ್ತಾರೆ. [ತಮ್ಮ ತಪ್ಪನ್ನು ದೇವರ ಮೇಲೆಯೇ ಹೊರಿಸುತ್ತಾರೆ!] ಜಗತ್ತಿನ ಎಲ್ಲಾ ಜೀವಿಗಳೂ ದೇವರ ಮಕ್ಕಳೇ ಆಗಿರುವಾಗ ಅವನ ಮಕ್ಕಳ ಬಲಿಯನ್ನು ಅವನೇ ಬಯಸುವನೇ? ಪಶುಬಲಿಯಿಂದ ತೃಪ್ತನಾಗುವ ದೇವರು ದೇವರೇ ಅಲ್ಲ.
ಸತ್ಯಂ ಬ್ರೂಯಾತ್. .
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನಬ್ರೂಯಾತ್ ಸತ್ಯಮಪ್ರಿಯಂ'. ಸತ್ಯ ಹೇಳಬೇಕು, ಆದರೆ ಆ ಸತ್ಯವನ್ನು ಹಿತವಾಗಿ ಹೇಳಬೇಕು, ಅಪ್ರಿಯವಾದ ಸತ್ಯ ಹೇಳಬಾರದು ಎಂದು ಇದರ ಅರ್ಥ. ಕುಂಟನನ್ನು ಕುಂಟ ಎಂದರೆ, ಕುರುಡನನ್ನು ಕುರುಡ ಎಂದರೆ ಅದು ಸತ್ಯ ಇದ್ದರೂ ಕೇಳಿಸಿಕೊಂಡವರಿಗೆ ನೋವಾಗುತ್ತದೆ. ನಮ್ಮ ಗುರುಗಳು ಹೇಳುತ್ತಿದ್ದರು, ಕುರುಡನನ್ನು ಪ್ರಜ್ಞಾಚಕ್ಷು ಎನ್ನಬೇಕು ಎಂದು. ಮಹರ್ಷಿ ದಯಾನಂದರ ಗುರು ಸ್ವಾಮಿ ವಿರಜಾನಂದರೂ ಕುರುಡರೇ. ಅವರು ನಿಜಕ್ಕೂ ಪ್ರಜ್ಞಾಚಕ್ಷುಗಳಾಗಿದ್ದರು. (ಪ್ರಾಸಂಗಿಕವಾಗಿ ಒಂದು ಕಥೆ:) ಒಬ್ಬ ಕಳ್ಳ ಒಬ್ಬ ಗುರು ಹತ್ತಿರ ಉಪದೇಶ ಕೇಳಲು ಹೋಗುತ್ತಿದ್ದ. ಸತ್ಯವನ್ನೇ ಹೇಳಬೇಕು ಎಂಬ ಗುರುಗಳ ಮಾತನ್ನು ಕೇಳಿದ ಕಳ್ಳ ನಾನು ನಿಜ ಹೇಳಿದರೆ ನನ್ನ ಜೀವನ ಹೇಗೆ ನಡೆಯಬೇಕು ಸ್ವಾಮಿ ಅಂದಾಗ ಗುರು ಹೇಳಿದರು: ಸತ್ಯದ ಮಾರ್ಗದಲ್ಲಿ ನಡೆಯದಿದ್ದರೂ ಪರವಾಗಿಲ್ಲ, ಯಾರಾದರೂ ಕೇಳಿದರೆ ಸತ್ಯವನ್ನೇ ಹೇಳು. ಅವನು ಒಮ್ಮೆ ದಾರಿಯಲ್ಲಿ ಹೋಗುತ್ತಿರುವಾಗ ಅವನನ್ನು ಒಬ್ಬರು ಕೇಳಿದರು: 'ಯಾವ ಕಡೆಗೆ ಪ್ರಯಾಣ?' ಕಳ್ಳ ಇಂಥವರ ಮನೆಗೆ ಕನ್ನ ಹಾಕಲು ಹೋಗುತ್ತಿದ್ದೇನೆ ಎಂದು ಸತ್ಯ ಹೇಳಿದರೆ ಅವನು ಸೀದಾ ಹೋಗುವುದು ಪೋಲಿಸ್ ಸ್ಟೇಷನ್ನಿಗೆ, ಜೈಲಿಗೆ!
ಕರ್ತವ್ಯ ಮತ್ತು ಮಾನಾಪಮಾನ
     ಪರಮಾತ್ಮ ಕಂಬದಂತೆ ಈ ಪ್ರಪಂಚ ಮತ್ತು ಆಕಾಶದಾಚೆಯಿರುವ ಪ್ರಪಂಚಗಳನ್ನೆಲ್ಲಾ ಆಧರಿಸಿದ್ದಾನೆ. ನಾವು ಸರ್ವಾಧಾರ ಪರಮಾತ್ಮನನ್ನು ಮರೆತುಬಿಡುತ್ತೇವೆ. ನಮಗೆ ಕಷ್ಟ ಬಂದಾಗ ಇನ್ನೇನಪ್ಪಾ ಗತಿ, ನಮ್ಮನ್ಯಾರು ಕಾಪಾಡುತ್ತಾರೆ ಅಂತ ಗೋಳಿಡುತ್ತೇವೆ. ಸರ್ವರಕ್ಷಕ ಅವನಿರುವಾಗ ಹೆದರುವುದು ಏಕೆ? ಹಿಂದೊಮ್ಮೆ ವಿಗ್ರಹಾರಾಧನೆ ವಿಷಯದಲ್ಲಿ ಚರ್ಚೆ ಏರ್ಪಾಡಾಯಿತು. ದಯಾನಂದರು ಒಂದು ಕಡೆ, ಕಾಶಿ ಪಂಡಿತರೆಲ್ಲಾ ಒಂದು ಕಡೆ. ಅಲ್ಲಿ ವಿಗ್ರಹಾರಾಧನೆ ವಿಷಯ ಬರಲೇ ಇಲ್ಲ. ವ್ಯಾಕರಣದ ಬಗ್ಗೆ ಕಿತ್ತಾಡಿದರು, ಆ ಸೂತ್ರ ಸರಿಯೋ ಈ ಸೂತ್ರ ಸರಿಯೋ ಅಂತ. ಎಲ್ಲಾ ಛಲ, ಕಪಟ. ಪ್ರತಿಮೆ ಇಲ್ಲದಿದ್ದರೆ ಮನಸ್ಸು ನಿಲ್ಲುವುದಿಲ್ಲ. ಪ್ರತಿಮಾರಾಧನೆ ಸಮರ್ಥಿಸುವ ವೇದಮಂತ್ರ ಇದು ಎಂದು ಕೈಯಲ್ಲಿ ಬರೆದಿದ್ದ ಯಾವುದೋ ಕಾಗದವನ್ನು ಒಬ್ಬರು ದಯಾನಂದರಿಗೆ ಕೊಟ್ಟರು. ಅವರು ಅದು ಯಾವ ವೇದದ ಮಂತ್ರ ಎಂದು ನೋಡುತ್ತಿರುವಾಗ ಕಾಶಿ ಪಂಡಿತರೆಲ್ಲಾ ದಯಾನಂದರಿಗೆ ಉತ್ತರ ಕೊಡಲಾಗಲಿಲ್ಲ ಎಂದು ಎದ್ದುಬಿಟ್ಟರು. ಸಭೆಯಲ್ಲಿ ಗಲಾಟೆಯಾಯಿತು. ಪುಂಡರೂ ಅಲ್ಲಿ ಸೇರಿದ್ದು ದಯಾನಂದರ ಮೇಲೆ ಕಲ್ಲು, ಇಟ್ಟಿಗೆ ಚೂರುಗಳಿಂದ ಪ್ರಹಾರ ಮಾಡಿದರು. ಆ ಮಹಾತ್ಮ ಸಹಿಸಿಕೊಂಡು ಸ್ವಲ್ಪವೂ ಅಲುಗಾಡದೆ ಶಾಂತವಾಗಿದ್ದರು. ಶಾಸ್ತ್ರಾರ್ಥದ ಗತಿ ಹೀಗಾಯಿತು. ಸುಳ್ಳು ಗೆದ್ದಿತು. ಸತ್ಯ ಗೆಲ್ಲಲಿಲ್ಲ. ವಿಷಯ ತಿಳಿದ ಸಂತ ಈಶ್ವರ ಸಿಂಹ ಎಂಬ ಸಿಖ್ಖರ ಗುರು ಒಬ್ಬರು ದಯಾನಂದರನ್ನು ಕಾಣಲು ಬಂದರು. ದಯಾನಂದರ ಹತ್ತಿರ ಗಂಟೆಗಟ್ಟಲೇ ಮಾತನಾಡಿದರೂ ದಯಾನಂದರು ಗಲಾಟೆಯ ವಿಷಯ ಎತ್ತಲೇ ಇಲ್ಲ. ದಯಾನಂದರು ಹೊದ್ದಿದ್ದ ಶಾಲು ಜಾರಿದಾಗ ಅವರ ಎದೆಯ ಮೇಲೆ ಕಲ್ಲಿನ ಹೊಡೆತದಿಂದಾಗಿದ್ದ ಗಾಯ ಕಂಡಿತು. ಸಿಖ್ ಗುರು (ಮರುಗಿ) ವಿಚಾರಿಸಿ ಬಹಳ ಗಲಾಟೆಯಾಗಿದೆ. ಇಂದು ರಾತ್ರಿ ಕಳೆಯುವವವರೆಗಾದರೂ ಎಲ್ಲಾದರೂ ಅಡಗಿಕೊಂಡಿರುವುದು ಒಳ್ಳೆಯದು ಎಂದು ಸಲಹೆ ಕೊಟ್ಟರು. ದಯಾನಂದರು ಹೇಳಿದರು: ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಮಾನ, ಅವಮಾನಗಳಿಗೆ, ಕಷ್ಟ, ನಷ್ಟಗಳಿಗೆ ಅಂಜಿದರೆ ಸನ್ಯಾಸಿಗಳಿಗೆ ಸೇವೆ ಮಾಡಲಾಗುವುದಿಲ್ಲ. ಇಂದು ಕಲ್ಲು, ಇಟ್ಟಿಗೆಗಳಿಂದ ಹೊಡೆದಿದ್ದಾರೆ. ನಾಳೆ ಪುಷ್ಪವೃಷ್ಠಿ ಮಾಡುತ್ತಾರೆ. ಸುಖ-ದುಃಖಗಳೆರಡೂ ಕೂಡ ಆ ಭಗವಂತ ಕೊಟ್ಟ ವರದಾನ. ನಿಷ್ಠೆಯಿಂದ ಸತ್ಯ ಬಿಡದಿರುವುದೇ ನಮ್ಮ ಧರ್ಮ. ಪ್ರಪಂಚವೆಲ್ಲಾ ಎದುರಾಗಲಿ, ರಕ್ಷಿಸುವ ಪರಮಾತ್ಮ ರಕ್ಷಣೆ ಕೊಟ್ಟೇ ಕೊಡುತ್ತಾನೆ. ಜ್ಞಾಪಕ ಇಟ್ಟುಕೊಳ್ಳಿ, ಸತ್ಯದ ದಾರಿ ಯಾವತ್ತೂ ಸುಲಭವಲ್ಲ.
ದೇವರೆಲ್ಲಿದ್ದಾನೆ?
     ದೇವರು ಎಲ್ಲೆಲ್ಲೂ ಇದ್ದಾನೆ, ಅಣು ಅಣುವಿನಲ್ಲೂ ಇದ್ದಾನೆ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ. ಅವನು ಸರ್ವರಕ್ಷಕ, ಸರ್ವಶಕ್ತ, ಯಾರೂ ಅವನನ್ನು ಬಗ್ಗಿಸಲು ಸಾಧ್ಯವಿಲ್ಲ. ಹಾಗಿದ್ದಾಗ ನನ್ನ ದೇವರು ತಿರುಪತಿಯಲ್ಲಿದ್ದಾನೆ, ನನ್ನ ದೇವರು ರಾಮೇಶ್ವರದಲ್ಲಿದ್ದಾನೆ, ಅಲ್ಲಿದ್ದಾನೆ, ಇಲ್ಲಿದ್ದಾನೆ, ಆ ವಿಗ್ರಹದಲ್ಲಿದ್ದಾನೆ, ಈ ವಿಗ್ರಹದಲ್ಲಿದ್ದಾನೆ ಎನ್ನುವುದು ಎಷ್ಟು ಸರಿ? ಸೋಮೇಶ್ವರ ದೇವಸ್ಥಾನದ ಮೇಲೆ ಘಜನಿ ಮಹಮದ್ ಬಾರಿ ಬಾರಿ ದಾಳಿ ಮಾಡಿದ. ದೇವಸ್ಥಾನ ಧ್ವಂಸ ಮಾಡಿದ. ಸೋಮೇಶ್ವರ ತನ್ನನ್ನು ತಾನೇ ರಕ್ಷಣೆ ಮಾಡಿಕೊಂಡನೆ? ಘಜನಿ ಮಹಮದ್ ಗೆದ್ದ, ಸೋಮೇಶ್ವರ ಸೋತ! ಆ ವಿಗ್ರಹ ನಿಜವಾಗಿ ದೇವರಾಗಿದ್ದರೆ ಎಂದೂ ಆ ಸ್ಥಿತಿ ಬರುತ್ತಿರಲಿಲ್ಲ. ನಾನು ಹೇಳುತ್ತಾ ಇರುತ್ತೇನೆ, ನನಗೆ ಭಗವಂತನ ಭಯ ಇಲ್ಲ, ಅವನ ಭಕ್ತರ ಭಯ! ನಾನು ಹೀಗೆ ಹೇಳಿದರೆ ಅವರಿಗೆ ಕೋಪ ಬರುತ್ತೆ. ನನ್ನನ್ನು ನಾಸ್ತಿಕ ಎನ್ನುತ್ತಾರೆ. ಗೊಂಬೆಯನ್ನು ದೇವರು ಎಂದು ನಂಬದಿದ್ದರೆ ನಾಸ್ತಿಕ ಎನ್ನುವುದಾದರೆ ನಾನು ನಾಸ್ತಿಕನೇ. ದೇವರಿಲ್ಲದಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ. ಆ ಪರಮಾತ್ಮ ಕರ್ತ-ಧರ್ತ-ಸಂಹರ್ತ. ಪ್ರಪಂಚ ಸೃಷ್ಟಿ ಮಾಡುವವನು, ರಕ್ಷಿಸುವವನು ಮತ್ತು ನಾಶ ಮಾಡುವವನು ಅವನೇ. ಆ ದೇವರು ಕಾಣುವುದಿಲ್ಲ, ಅದಕ್ಕೇ ನಂಬುವುದಿಲ್ಲ ಅಂದರೆ ಬಹಳ ಕಷ್ಟ. ಕಣ್ಣಿಗೆ ಕಾಣುವುದಕ್ಕಿಂತ ಕಾಣಿಸದಿರುವುದೇ ಹೆಚ್ಚು. ವಾಯು ಇದೆ, ಕಣ್ಣಿಗೆ ಕಾಣುತ್ತಾ? ಆಕಾಶ ಇದೆ, ಅದನ್ನು ಕಾಣಲು ಎಷ್ಟು ಮೇಲಕ್ಕೆ ಹೋದರೆ ಅದು ಅಷ್ಟೂ ಮೇಲಕ್ಕೆ ಹೋಗುತ್ತೆ. ಏಕೆಂದರೆ ಅಲ್ಲಿ ಏನೂ ಇಲ್ಲ, ಶೂನ್ಯ. ಆ ಶೂನ್ಯಕ್ಕೆ ಹದ್ದು ಕಟ್ಟಲು ಸಾಧ್ಯವೇ? ಇಷ್ಟೇ ಉದ್ದ, ಇಷ್ಟೇ ಅಗಲ, ಇಷ್ಟೇ ಎತ್ತರ ಎಂದು ನಿಗದಿ ಪಡಿಸಲು ಸಾಧ್ಯವೇ? ಆ ಪರಮಾತ್ಮ ಇದ್ದಾನೆ, ಅವನು ಶೂನ್ಯ ಅಲ್ಲ. ಅವನಿರುವುದರಿಂದಲೇ ಈ ಸೂರ್ಯ, ಚಂದ್ರ, ಭೂಮಿ, ಬ್ರಹ್ಮಾಂಡ ಎಲ್ಲಾ! ಆ ಭಗವಂತ ಎಷ್ಟು ಪ್ರಕಾಶಮಯವೆಂದರೆ ಅವನೆದುರಿಗೆ ಈ ಸೂರ್ಯ ಯಾವ ಲೆಕ್ಕಕ್ಕೂ ಇಲ್ಲ. ಆ ಸೂರ್ಯನೇ ಲೆಕ್ಕಕ್ಕಿಲ್ಲವೆಂದರೆ ಚಂದ್ರನ ಪಾಡೇನು? ನಕ್ಷತ್ರಗಳೂ ಅಷ್ಟೆ. ಆ ಪರಮಾತ್ಮನ ಜ್ಯೋತಿಯಿಂದಲೇ ಇವೆಲ್ಲಾ ಬೆಳಗುತ್ತಿವೆ. ಅಂತಹ ಜ್ಯೋತಿರ್ಮಯನಾದ ಪರಮಾತ್ಮನನ್ನು ಬಿಟ್ಟು ಯಾವತ್ತು ಕಲ್ಲು, ಮಣ್ಣು, ಮರಗಳಿಂದ ಮಾಡಿದ ಗೊಂಬೆಗಳನ್ನು ಪೂಜಿಸಲು ಪ್ರಾರಂಭಿಸಿದೆವೋ ಅವತ್ತಿನಿಂದಲೇ ನಮ್ಮ ಪತನ ಆರಂಭವಾಯಿತು. 
ನಾವೇನು ಮಾಡಬೇಕು?
     ಬೇರೆಯವರು ಮುಂದಕ್ಕೆ ಹೋಗುತ್ತಿದ್ದಾರೆ. ಮುಸ್ಲಿಮರಾಗಲಿ, ಕ್ರಿಶ್ಚಿಯನರಾಗಲಿ ಅವರ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ನಮ್ಮದೇ ಯಾಕೆ ಪೀಕಲಾಟ? ಯಾಕೆ? ಅವರು ಬುದ್ಧಿಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ಅನ್ನ ಬೇಕು, ಅನ್ನ ಕೊಡುತ್ತಾರೆ, ಬಟ್ಟೆ ಬೇಕು, ಕೊಡುತ್ತಾರೆ, ಮನೆ ಬೇಕು, ಕಟ್ಟಿಸಿಕೊಡುತ್ತಾರೆ. ಹೀಗೆ ಮಾಡಿ ಮಾಡಿ ಕ್ರಿಶ್ಚಿಯನರು ತಮ್ಮ ಸಂಖ್ಯೆ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ. ನಾವು? ನಮ್ಮವರು ಬಡವರಾ? ಕೋಟ್ಯಾಧೀಶರಿದ್ದಾರೆ. ಪೇಪರಿನಲ್ಲಿ ಓದಿರಬಹುದು. ಆ ತಿರುಪತಿ ದೇವರಿಗೆ ೪೫ ಕೋಟಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿಕೊಡುತ್ತಾರೆ. ಆ ಗೊಂಬೆಗೆ ಏನು ಗೊತ್ತಾಗುತ್ತೆ? ಆ ವಜ್ರದ ಕಿರೀಟ ಇಡಿ, ತೆಗೆದು ಹಾಕಿ, ಮುಳ್ಳಿನ ಕಂತೆ ಇಡಿ, ಏನು ಮಾಡಿದರೂ ಸುಮ್ಮನಿರುತ್ತೆ. ಅದೇ ಹಸಿವಿರುವವರಿಗೆ ಅನ್ನ ಹಾಕುವುದಿಲ್ಲ. ಪೂರ್ಣ ತೃಪ್ತನಿಗೆ ನಾವು ಏನಾದರೂ ಕೊಟ್ಟು ತೃಪ್ತಿ ಕೊಡಲು ಸಾಧ್ಯವೇ? ದೇವರಿಗೆ ನೈವೇದ್ಯ ಅಂತ ಇಡ್ತೀವಿ. ಯಾವುದು ಆ ನೈವೇದ್ಯ? ಎಲ್ಲಿಂದ ಬಂತು? ತೆಂಗಿನಕಾಯಿಯಾಗಲಿ, ಹಣ್ಣು ಹಂಪಲಾಗಲೀ ಎಲ್ಲಿಂದ ಬಂತು? ನಾವು ಮಾಡಿದ್ದಾ? ಅದೂ ಭಗವಂತನದೇ. ಅವನದ್ದನ್ನೇ ಅವನಿಗೆ ಕೊಟ್ಟಂತೆ ಮಾಡಿ, ನಾವು ಹೇಳುತ್ತೇವೆ, ನಾನು ಭಗವದ್ಭಕ್ತ, ಅವನಿಗಾಗಿ ಇಷ್ಟೊಂದು ಖರ್ಚು ಮಾಡಿದ್ದೇನೆ, ಅಂತ.
ದೇವರು ಮೆಚ್ಚುವ ಕೆಲಸ ಮಾಡೋಣ
     ದುಡಿಯಬೇಕು, ತಿನ್ನಬೇಕು, ಅದು ನಿಜವಾದ ಊಟ. ತಿನ್ನುವವರೇ ತುಂಬಾ ಇದ್ದು, ದುಡಿಯುವವರು ಇಲ್ಲದಿದ್ದರೆ! ಅನ್ನ ಎಲ್ಲಿಂದ ಬರಬೇಕು? ತುಂಬಾ ಕಷ್ಟ. ಸರ್ವಾಧಾರ ಪರಮಾತ್ಮ ಎಲ್ಲರಿಗೂ ಆಧಾರ ಹೌದು, ಆದರೆ ಸೋಮಾರಿಗಳ ಬಂಧು ಅಲ್ಲ. ಪರಮಾತ್ಮ ಎಲ್ಲರಿಗೂ ಕೊಡುತ್ತಾನೆ, ಯಾರಿಗೆ ಕೊಡುತ್ತಾನೆ? ದುಡಿಯುವವರಿಗೆ ಕೊಡುತ್ತಾನೆ. ವೇದ ಹೇಳುತ್ತೆ, ಕಷ್ಟ ಪಡು, ದುಡಿ, ಬೇರೆಯವರ ಶ್ರಮದ ಊಟ ನಮಗೆ ಬೇಡ, ನಮ್ಮ ಅನ್ನವನ್ನು ನಾವು ಸಂಪಾದಿಸೋಣ, ವೇದ ಹೀಗೆ ಹೇಳಿದರೆ ಇಂದು ನಾವು ನೋಡುತ್ತಿರುವುದೇನು? ಮನೆಯಲ್ಲಿ ಸಮಾರಂಭ, ಪೂಜೆ ಮಾಡಿ ಹೊಟ್ಟೆ ತುಂಬಿದವರಿಗೇ ಊಟ ಹಾಕುತ್ತೇವೆ, ಹಸಿದ ಭಿಕ್ಷುಕ ಹೊರಗೆ ಬೇಡಿ ಬಂದರೆ 'ಹೋಗಲೇ' ಅಂತ ಗದರಿಸಿ ಕಳಿಸಿಬಿಡುತ್ತೇವೆ. ಇದು ದಾನ ಮಾಡುವ ರೀತಿಯಾ? ಹಸಿದವರಿಗೆ ಅನ್ನ ಹಾಕಿ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡಿ, ಮನೆಯಿಲ್ಲದವರಿಗೆ ಮನೆ ಕಟ್ಟಿಸಿಕೊಡಿ,  ಇದು ಪುಣ್ಯದ ಕೆಲಸ. ಇದು ನಿಮ್ಮ ಕರ್ತವ್ಯ. ಇದು ಬಿಟ್ಟು ಸ್ವಾರ್ಥಿಗಳಾಗಿ ನಿಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡರೆ ಅದು ದೇವರು ಮೆಚ್ಚುವ ಕೆಲಸವಲ್ಲ. ಯಾವತ್ತೂ ಕೂಡ ಸ್ವಾರ್ಥಿಗೆ ತಾನು ಮಾಡುವುದು ತಪ್ಪು ಅಂತ ಅನ್ನಿಸುವುದೇ ಇಲ್ಲ. ನನ್ನ ಅನ್ನ ಸಂಪಾದಿಸಿ ತಿನ್ನುತ್ತೇನೆ, ಆ ಸಂಪಾದನೆ ಹೇಗಾದರೂ ಸರಿ, ಹತ್ತು ಜನರ ತಲೆ ಒಡೆದಾದರೂ ಸರಿ, ಅನ್ನುವುದು ಅವರ ಮಾತು. ಬೇರೆಯವರ ಶ್ರಮದ ಫಲವನ್ನು ಕಿತ್ತುಕೊಂಡು ಅನ್ಯಾಯವಾಗಿ ಹಣ ಸಂಗ್ರಹಿಸುವವರನ್ನು ಇಂದು ಕಾಣುತ್ತಿದ್ದೇವೆ. 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||' - ಈ ಮಂತ್ರದ ಅರ್ಥ, ನೂರು ಕೈಗಳಿಂದ ದುಡಿ, ಸಾವಿರ ಕೈಗಳಿಂದ ದಾನ ಮಾಡು ಅಂತ. ಇದರ ಅರ್ಥ ನಿಮಗಾಗಿ ಮಾತ್ರ, ನಿಮ್ಮ ಕುಟುಂಬಕ್ಕಾಗಿ ಮಾತ್ರ ನೀವು ದುಡಿಯಬಾರದು. ಸಮಾಜದ ಹಿತವನ್ನೂ ಪರಿಗಣಿಸಬೇಕು ಎಂದು. ಈ ಮಾತು ಎಲ್ಲರಿಗೂ ಅನ್ವಯಿಸುತ್ತೆ, ಬ್ರಹ್ಮಚಾರಿ, ಗೃಹಸ್ಥ, ಸನ್ಯಾಸಿ, ಎಲ್ಲರಿಗೂ ಅನ್ವಯಿಸುತ್ತೆ. ಎಲ್ಲರ ಸುಖದಲ್ಲಿ ನಮ್ಮ ಸುಖ ಇದೆ. 'ಸರ್ವೇಜನಾಃ ಸುಖಿನೋ ಭವಂತು'- ಎಲ್ಲರೂ ಅನ್ನುವಲ್ಲಿ ನಾವೂ ಸೇರುತ್ತೇವೆ. ಎಲ್ಲರಿಗೂ ಸಿಕ್ಕಿದರೆ ನಮಗೂ ಸಿಗುತ್ತೆ, ಯಾರಿಗೂ ಸಿಗದಿದ್ದರೆ ನಮಗೂ ಇಲ್ಲ ಅಷ್ಟೆ. ಇದು ಈ ವೇದ ಮಂತ್ರದ ಅರ್ಥ. ಅರ್ಥ ಮಾಡಿಕೊಂಡು ಅನುಸರಿಸಿದರೆ ನಮ್ಮದು ಶ್ರೇಷ್ಠ ಜೀವನವಾಗುತ್ತದೆ. 
. . . .ಮುಂದುವರೆಯುವುದು. . . .
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/05/blog-post.html

ಮಂಗಳವಾರ, ಮೇ 1, 2012

ಸಾರಗ್ರಾಹಿಯ ರಸೋದ್ಗಾರಗಳು - 8    ಪಂ. ಸುಧಾಕರ  ಚತುರ್ವೇದಿಯವರು  ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ  ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಆಚಾರ-ವಿಚಾರ

     ನನ್ನ ತಂದೆಯವರು ಸಂಪ್ರದಾಯಸ್ಥ ಮಾಧ್ವ ಬ್ರಾಹ್ಮಣರು. ಅವರು ಸ್ನಾನ ಮಾಡಿಕೊಂಡು ಬರುವಾಗ ಎದುರಿಗೆ ಶೂದ್ರರು ಬರುವಂತೆಯೇ ಇಲ್ಲ, ಬ್ರಾಹ್ಮಣರಲ್ಲೂ, ಅದರಲ್ಲೂ ಯಾರೋ ಸ್ಮಾರ್ತರು, ಆಚಾರ್ಯರು, ಶಾಸ್ತ್ರಿಗಳು ಬಂದರೆ 'ನಮಸ್ಕಾರ ಆಚಾರ್ರೇ, ದೀಕ್ಷಿತರೇ' ಅಂತ ಹೇಳಿಬಿಡೋರು, ಅವರು ಹೋದ ನಂತರ ಬಚ್ಚಲು ಮನೆಗೆ ಹೋಗಿ ಪುನಃ ಸ್ನಾನ ಮಾಡಿಕೊಂಡು 'ಶುಚಿಯಾದೆ' ಅಂದುಕೊಂಡು ಬರುತ್ತಿದ್ದರು. ನಮ್ಮಪ್ಪಂದೇ ಈ ಗತಿ. ನನ್ನನ್ನು ಕಂಡು 'ಯಾವ ಪಾಪದ ಫಲವಾಗಿ ನೀನು ನಮ್ಮ ಮನೆಯಲ್ಲಿ ಹುಟ್ಟಿದೆಯೋ, ನೀನೊಂದು ಪಾಪದ ಮುದ್ದೆ, ನಮ್ಮ ಮನೆಯಲ್ಲಿ ಏಕೆ ಹುಟ್ಟಿದೆ, ನಮ್ಮ ಮನೆಯ ಹೆಸರು ಕೆಡಿಸುತ್ತೀಯಾ' ಎನ್ನುತ್ತಿದ್ದರು. ಅವರದು ಭಾರೀ ಮಡಿ. ನಾನು ಬೆಳಿಗ್ಗೆ ಏಳುವಾಗ 'ಶಂಭೋ, ಮಹಾದೇವಾ, ಕಾಪಾಡಪ್ಪಾ' ಅಂತಿದ್ದರೆ ಅವರಿಗೆ ಮೈ ಉರಿ, ವೈಶ್ಣವರ ಮನೆಯಲ್ಲಿ ಹುಟ್ಟಿ ಶೈವರ ದೇವರ ಹೆಸರು ಹೇಳುತ್ತಾನಲ್ಲಾ ಅಂತ, ಅವರು ಎರಡು ಹೊತ್ತು ವಿಷ್ಣು ಸಹಸ್ರನಾಮ ಹೇಳಿಕೊಂಡು ಪೂಜೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಹೂವು ಬಿಡುತ್ತಿರಲಿಲ್ಲ, ಪಕ್ಕದ ಮನೆಯಲ್ಲಿ ಬಿಡುತ್ತಿದ್ದ ಹೂವು ಕದ್ದು ಕಿತ್ತು ದೇವರಿಗೆ ಪೂಜೆ ಮಾಡಿದರೆ ಪುಣ್ಯ ಬರುತ್ತದೆಯೇ ಎಂದು ನಾನು ಅಪ್ಪನನ್ನು ಕೇಳುತ್ತಿದ್ದೆ. ಅದರಲ್ಲಿ ಎರಡು ಪಾಪದ ಕೆಲಸ ಆಗುತ್ತದೆ. ಹೂವನ್ನು ಕದ್ದು ಕಿತ್ತಿದ್ದೊಂದು ಪಾಪ, ಇನ್ನೂ ಅರಳದಿರುವ ಹೂವು, ಅಲ್ಲೇ ಇದ್ದಿದ್ದರೆ ಪೂರ್ತಿ ಅರಳಿ ಬೀಳುವವರೆಗೆ ಎಷ್ಟು ಪರಿಮಳ ಬೀರಿ ಮುದ ತರುತಿತ್ತೋ ಆ  ಹೂವನ್ನು ಕಿತ್ತು ಬಾಡಿಸಿದ್ದು ಇನ್ನೊಂದು. ಅದನ್ನು ಕಿತ್ತರೆ ಅದಕ್ಕೆ ನೋವಾಗುತ್ತದೆ, ನಮಗೆ ಗೊತ್ತಾಗುವುದಿಲ್ಲ.  ನಾನು ಹೇಳುವುದು ನಿಮಗೆ ಇಷ್ಟವಾಗದೇ ಹೋಗಬಹುದು, ನಿಮಗೆ ಕೋಪ ಬರಬಹುದು. ಆದರೆ, ಹೀಗೆ ಆಲೋಚನೆ ಮಾಡಿ ಯಾರು ನಡೆದುಕೊಳ್ಳುತ್ತಾರೊ ಅವರನ್ನು ಮನುಷ್ಯ ಅಂತ ಕರೆಯಬಹುದು, ಆಲೋಚನೆ ಮಾಡದಿರುವವರು ಕೇವಲ ಮನುಷ್ಯರ ಆಕಾರ ಹೊಂದಿರುವವರು ಅಷ್ಟೆ. 
ಯಾವ ಶಾಸ್ತ್ರ?
    ನಾವು ಮನಸ್ಸಿನಲ್ಲಿ ಎಲ್ಲರೂ ಸುಖವಾಗಿರಲಿ ಅನ್ನುತ್ತೇವೆ, ಆದರೆ  ನಾವು ಅನ್ನುವುದನ್ನು ಬಿಡುವುದಿಲ್ಲ. ನಮ್ಮ ಸ್ವಾರ್ಥವನ್ನು ನಾವು ಬಿಡುವುದಿಲ್ಲ. 'ಗೋಬ್ರಾಹ್ಮಣೇಭ್ಯಃ ಶುಭಂಭವತು' ಅಂತೀವಿ, ಗೋವು, ಬ್ರಾಹ್ಮಣರಿಗೆ -ಅವರೂ ಒಂದು ತರಹ ಪ್ರಾಣಿಗಳೇ ಅಂದುಕೊಳ್ಳಿ - ಶುಭವಾಗಲಿ ಅಂತ. ಈ ಗೋವು, ಬ್ರಾಹ್ಮಣರು ಈ ಪ್ರಪಂಚದಿಂದ ಹೊರಗಿದ್ದಾರೆಯೇ? 'ಲೋಕಾಸಮಸ್ತಾಃ ಸುಖಿನೋಭವಂತು' ಎಂದು ವೇದ ಹೇಳುತ್ತಿರುವಾಗ ಇವೆರಡನ್ನು ಮಾತ್ರಾ ಎತ್ತಿ ಏಕೆ ತೋರಿಸಬೇಕು? ಹೀಗೆ ನಮ್ಮ ತಂದೆಗೆ ಹೇಳಿದಾಗ ಅವರಿಗೆ ಬಹಳ ಕೋಪ ಬರುತ್ತಿತ್ತು. "ಏನಪ್ಪಾ ನೀನು, ಶಾಸ್ತ್ರಕ್ಕೆ ವಿರುದ್ಧವಾಗಿ ಮಾತನಾಡುತ್ತೀ" ಅನ್ನುತ್ತಿದ್ದರು. ಅದು ಯಾವ ಶಾಸ್ತ್ರ? ಅಂತ ಕೇಳಿದರೆ ಅವರಿಗೆ ಸರಿಯಾಗಿ ಉತ್ತರ ಕೊಡಲಾಗುತ್ತಿರಲಿಲ್ಲ, "ಶಾಸ್ತ್ರ ಶಾಸ್ತ್ರ ಕಣಯ್ಯಾ" ಎಂದು ಸಿಡುಕುತ್ತಿದ್ದರು. ನನ್ನ ತಾಯಿ, "ಅವನ ಮೇಲೆ ಏಕೆ ಸಿಡುಕುತ್ತೀರಿ? ಗೊತ್ತಿದ್ದರೆ ಉತ್ತರ ಹೇಳಿ, ಇಲ್ಲದಿದ್ದರೆ ಸುಮ್ಮನಿರಿ" ಎಂದು ಅನ್ನುತ್ತಿದ್ದರು. ಸಂಸ್ಕೃತದಲ್ಲಿ ಇರುವುದೆಲ್ಲಾ ಶಾಸ್ತ್ರವಾ?  ಇವೆಲ್ಲಾ ಆಲೋಚನೆ ಮಾಡಿದರೆ ಮಾತ್ರ ಗೊತ್ತಾಗುವುದೇ ಹೊರತು, ಇಲ್ಲದಿದ್ದರೆ ಗೊತ್ತಾಗುವುದಿಲ್ಲ.
ಶಾಪ ಕೊಟ್ಟವರೇ ಆಶೀರ್ವದಿಸಿದರು
     ಅಷ್ಟೆಲ್ಲಾ ಸಂಪ್ರದಾಯಸ್ಥರಾಗಿದ್ದ ನನ್ನ ತಂದೆ ಸಾಯುವ ಕಾಲಕ್ಕೆ ಆಸ್ಪತ್ರೆಯಲ್ಲಿದ್ದಾಗ ನಾನು ಹೊರಗೆ ಇದ್ದೆ. ನನ್ನ ತಂದೆ ನರ್ಸ್‌ಗೆ ಹೇಳಿ ನನ್ನನ್ನು ಕರೆಸಿದರು. ನನ್ನ ಕೈಹಿಡಿದು "ಮಗೂ, ನಿನಗೆ ನಾನು ಸಿಕ್ಕಾಪಟ್ಟೆ ಬೈದುಬಿಟ್ಟಿದ್ದೀನಿ. ಮರೆತುಬಿಡು, ನೀನು ದೊಡ್ಡ ಮನುಷ್ಯ ಆಗುತ್ತೀಯ, ನಿನ್ನಿಂದ ನಮ್ಮ ಕುಲಕ್ಕೆ ಒಳ್ಳೆ ಹೆಸರು ಬರಬೇಕು" ಎಂದು ಹೇಳಿದ್ದರು. ಶಾಪ ಕೊಟ್ಟಿದ್ದ ತಂದೆಯಿಂದ ನನಗೆ ಆಶೀರ್ವಾದ ಸಿಕ್ಕಿತು, ನನಗೆ ತೃಪ್ತಿ. ಅವರು ಆಶೀರ್ವಾದ ಕೊಡದೇ ಹೋಗಿದ್ದರೂ ನನ್ನ ತೃಪ್ತಿಯಲ್ಲಿ ಕೊರತೆಯಾಗುತ್ತಿರಲಿಲ್ಲ. ನನ್ನ ತಂದೆ ನನಗೆ ಪೂಜ್ಯರು ಹೌದು, ಆದರೆ ಯಾರಿಗೆ ಗೊತ್ತು, ಎಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾರೋ ಏನೋ, . . . ! ಹಳ್ಳಿಯಲ್ಲಿ ಇದ್ದಾಗ ಪಟೇಲರು, ಶಾನುಭೋಗರು, ಅವರು, ಇವರು ತರಕಾರಿ, ಎಣ್ಣೆ, ತುಪ್ಪ, ಅಕ್ಕಿ, ಬೇಳೆ ತಂದು ಕೊಡುತ್ತಿದ್ದರು. ನಾನು ಕೇಳುತ್ತಿದ್ದೆ, "ಅಪ್ಪಾ, ಇದಕ್ಕೆ ನೀವು ದುಡ್ಡು ಕೊಡುತ್ತೀರಾ?" ಅಂತ. "ಇಲ್ಲ, ಅವರು ಶ್ರದ್ಧೆಯಿಂದ ಕೊಡ್ತಾರೆ " ಅಂತಿದ್ದರು. ನಾನು ಕೇಳುತ್ತಿದ್ದೆ:"ಅವರು ಶ್ರದ್ಧೆಯಿಂದ ಕೊಡ್ತಾರೆ, ನೀವು ಶ್ರದ್ಧೆಯಿಂದ ತೊಗೋತೀರಾ?" ಅದಕ್ಕೆ ಅವರು ಉತ್ತರಿಸುತ್ತಿರಲಿಲ್ಲ.
ಹೇಳುವುದು ಒಂದು . . .
.  ನಾವು ಸತ್ಕರ್ಮಕ್ಕೆ ವಿಮುಖರಾಗದಿರೋಣ, ಐಶ್ವರ್ಯ ಇದ್ದಾಗ ಆಡಂಬರದಿಂದ ಹಬ್ಬ, ನಾಮಕರಣ, ಉಪನಯನ, ಮದುವೆ, ಇತ್ಯಾದಿಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ, ಬಡವ ಏನು ಮಾಡಬೇಕು? ಬಡವ, ಭಾಗ್ಯವಂತ ಎಲ್ಲಾ ನಾವು ಮಾಡಿಕೊಂಡಿರೋದು, ಬೆಂಕಿಯಲ್ಲಿ, ಗಾಳಿಯಲ್ಲಿ, ಭೂಮಿಯಲ್ಲಿ, ಆಕಾಶದಲ್ಲಿ, ನೀರಿನಲ್ಲಿ ಎಲ್ಲಾ ಕಡೆ ಐಶ್ವರ್ಯ ತುಂಬಿಕೊಂಡಿದೆ. ಬುದ್ಧಿಹೀನರಾದ ನಾವು ಆ ಐಶ್ವರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತೇವೆ. ವಾಯುವಿನಲ್ಲಿ ಪ್ರಾಣ ಕೊಡುವ ಶಕ್ತಿ ಇದೆ. ಜನ ಹೋಮ, ಹವನ ಮಾಡಿ ಗಾಳಿಯಲ್ಲಿ ಶುದ್ಧತೆ ಹರಡುವುದಿಲ್ಲ, ಬೀಡಿ, ಸಿಗರೇಟು, ಚುಟ್ಟಾ ಸೇದಿ ಗಾಳಿಯಲ್ಲಿ ಹೊಗೆ ಬಿಟ್ಟು ಅವರೂ ಹಾಳಾಗಿ ನಮ್ಮಂತಹವರನ್ನೂ ಹಾಳು ಮಾಡುತ್ತಾರೆ, ಯಾತಕ್ಕೆ? ಪಂಚಭೂತಗಳನ್ನು ಶುದ್ಧವಾಗಿಡಲು ಕರ್ಮ ಮಾಡಬೇಕು. ಯಜ್ಞ ಮಾಡುವುದಕ್ಕೆ ತುಪ್ಪ ಇಲ್ಲ, ಯಾವುದೋಎಣ್ಣೆ ಹಾಕುವುದು, ಅದೂ ಇಲ್ಲ, ವನಸ್ಪತಿ,  ಹಾಕಬೇಕಾದ ಸಮಿತ್ತು ಇಲ್ಲ, ಯಾವುದೋ ಕಡ್ಡಿ ಹಾಕಿದರಾಯಿತು, ಈ ರೀತಿ ಮಾಡಿದರೆ ಸರಿಯೇ? ಅದರಲ್ಲಿ ಸತ್ವ ಇಲ್ಲ. ಹಾಕಬೇಕಾದ್ದನ್ನು ಹಾಕದೆ ಬಿಟ್ಟು ಯಜ್ಞ ಮಾಡಿದರೇನು, ಬಿಟ್ಟರೇನು! ನನಗೆ ಗೊತ್ತಿರುವ ಒಂದು ಕುಟುಂಬ ಇದೆ -ದೊಡ್ಡ ಆರ್ಯಸಮಾಜಿ ಪರಿವಾರ ಅದು- ಅವರ ಮನೆಯಲ್ಲಿ ಒಮ್ಮೆ ಯಜ್ಞ ಮಾಡುವಾಗ ಮನೆಯ ಯಜಮಾನಿಯಾದ ಅಜ್ಜಿ -ಅವರೂ ಉಪಾಧ್ಯಾಯಿನಿ ಆಗಿದ್ದವರು- ತನ್ನ ಅಳಿಯನಿಗೆ ತುಪ್ಪ ತರಲು ಹೇಳಿದರು, ಅವರು ಅಡಿಗೆ ಮನೆಯಿಂದ ತುಪ್ಪ ತಂದರೆ, "ಅದಲ್ಲಾ, ಅದು ತಿನ್ನುವ ತುಪ್ಪ, ಯಜ್ಞಕ್ಕೆ ಅಂತ ಇಟ್ಟಿರುವ ಬೇರೆ ತುಪ್ಪ ತನ್ನಿ"  ಅಂತ ಹೇಳಿದರು. ಇಂಥ ಯಜ್ಞ ಯಾಕೆ ಮಾಡಬೇಕು? ಮಾಡಲೇಬಾರದು. ಬದಲಿಗೆ ನಾಸ್ತಿಕರಾಗಿ, ನಾನು ಒಪ್ಪುತ್ತೇನೆ. ಆಸ್ತಿಕತೆ ಹೆಸರಿನಲ್ಲಿ ಎಲ್ಲರ ತಲೆ ಬೋಳಿಸುವ ಕೆಲಸ ಇದೆಯಲ್ಲಾ, ಅದು ಮಹಾ ಪಾಪ. ಒಬ್ಬರು ಮಹಾಶಯರು ನನಗೆ ಹೇಳಿದ್ದರು, 'ನೀನು ನಾಸ್ತಿಕ ಕಣಯ್ಯಾ' ಅಂತ. 'ಆಗಲಿ, ನಿಮ್ಮ ಆಶೀರ್ವಾದದಿಂದ ನಾನು ನಾಸ್ತಿಕನಾಗೆ ಇರುತ್ತೇನೆ' ಎಂದು ಉತ್ತರಿಸಿದ್ದೆ.
*********************
[ನಾಗರಾಜನ ಮಾತು: ಬೂಟಾಟಿಕೆಯ ನಡವಳಿಕೆಗಳಿಗೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಮಾರುಕಟ್ಟೆಗಳಲ್ಲಿ, ದೇವಸ್ಥಾನಗಳ ಸಮೀಪದಲ್ಲಿ ದೇವರಿಗೆ ನೈವೇದ್ಯ ಕೊಡುವ ಸಲುವಾಗಿಯೇ ಮಾರಾಟ ಮಾಡುವ ಕಾಯಿ, ಹೂವು, ಹಣ್ಣುಗಳನ್ನು ಗಮನಿಸಿ. ಆ ಬಾಳೆಹಣ್ಣುಗಳು ಹಣ್ಣೇ ಆಗಿರುವುದಿಲ್ಲ, ಕಾಯಿ ಆಗಿರುತ್ತದೆ, ಅಲ್ಲದೆ ಪುಟ್ಟ ಗಾತ್ರದವು. ನಾವೇ ತಿನ್ನುವುದಾದರೆ ಅಂತಹವುಗಳನ್ನು ನಾವು ಕೊಳ್ಳುವುದೇ ಇಲ್ಲ. ಮದುವೆ, ಸಮಾರಂಭಗಳು, ಇತ್ಯಾದಿಗಳಲ್ಲಿ ಉಡುಗೊರೆ ಕೊಡುವ ಸಲುವಾಗಿಯೇ ಕಡಿಮೆ ದರದ, ಕಡಿಮೆ ಅಳತೆಯ ಬಟ್ಟೆಗಳನ್ನು, ಪದಾರ್ಥಗಳನ್ನು ಕೊಳ್ಳುತ್ತೇವೆ. ಉಡುಗೊರೆ ಪಡೆದವರೂ ಅದನ್ನು ಉಪಯೋಗಿಸಲಾರರು. ಅದನ್ನು ಬೇರೊಬ್ಬರಿಗೆ ಉಡುಗೊರೆಯಾಗಿ ದಾಟಿಸಿಬಿಡುತ್ತಾರೆ! ದೇವರಿಗೆ, ಇನ್ನೊಬ್ಬರಿಗೆ ಕೊಡುವುದಾದರೆ ಒಂದು ತರಹ, ನಮಗೇ ಅದರೆ ಮತ್ತೊಂದು ತರಹ! ಕೊಡುವುದಾದರೆ ನಾವು ಉಪಯೋಗಿಸುವಂತಹುದೇ ಕೊಡೋಣ, ಇಲ್ಲದಿದ್ದರೆ ಕೊಡದಿರುವುದೇ ಒಳ್ಳೆಯದಲ್ಲವೇ?]
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/04/7.html