ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಮೇ 31, 2013

ವೇದೋಕ್ತ ಜೀವನ ಪಥ: ವೇದೋಕ್ತ ರಾಜನೀತಿ - ೩

     ಈ ಮಂತ್ರವನ್ನು ನೋಡಿರಿ:-
ಸಭಾ ಚ ಮಾ ಸಮಿತಿಶ್ಚಾವತಾಂ ಪ್ರಜಾಪತೇರ್ದುಹಿತರೌ ಸಂವಿದಾನೇ |
ಯೇನಾ ಸಂಗಚ್ಛಾ ಉಪ ಮಾ ಸ ಶಿಕ್ಷಾಚ್ಚಾರು ವದಾನಿ ವಿತರಃ ಸಂಗತೇಷು || (ಅಥರ್ವ.೭.೧೨.೧.)
     [ಸಭಾ] ಸಭೆಯೂ, [ಚ] ಮತ್ತು [ಸಮಿತಿಃ] ಸಮಿತಿಯೂ, [ಮಾ ಅವತಾಮ್] ನನ್ನನ್ನು ರಕ್ಷಿಸಲಿ. ಅವೆರಡೂ [ಪ್ರಜಾಪತೇಃ] ರಾಷ್ಟ್ರಪತಿಯ [ಸಂವಿದಾನೇ ದುವಿತರೌ] ಜ್ಞಾನಸಂಪನ್ನರಾದ ಪುತ್ರಿಯರ ಹಾಗಿವೆ. [ಯೇನ ಸಂಗಚ್ಛೇ] ನಾನು ಯಾವನನ್ನು ಸಂಧಿಸುತ್ತೇನೋ, [ಸ ಮಾ ಉಪ ಶಿಕ್ಷಾತ್] ಅವನು ನನಗೆ ಸರಿಯಾದ ತಿಳುವಳಿಕೆ ಕೊಡಲಿ. [ಪಿತರಃ] ಪ್ರಜಾಪಾಲಕರೇ [ಸಂಗತೇಷು] ಕೂಟಗಳಲ್ಲಿ [ಚಾರು ವದಾನಿ] ನಾನು ಒಳಿತನ್ನೇ ಆಡುವೆನು.
     ಈ ಮಾತುಗಳನ್ನು ಅಥರ್ವವೇದ, ಸಾಧಾರಣ ಪ್ರಜೆಯ ಬಾಯಿಂದ ಹೇಳಿಸುತ್ತಿದೆ. ಸಭೆ ಮತ್ತು ಸಮಿತಿ ತನ್ನನ್ನು ರಕ್ಷಿಸಲಿ -  ಎಂಬ ಅಭಿಲಾಷೆಯನ್ನು ಸಾಧಾರಣ ಪ್ರಜೆ ತೋರಿಸಿಕೊಳ್ಳುತ್ತಿದ್ದಾನೆ. ಪ್ರಶಾಸನದ ಅಧಿಕಾರಿಗಳನ್ನು ಇಲ್ಲಿ 'ಪಿತರ' ಎಂದು ಕರೆದಿದೆ. ಈ ರೀತಿ ವೇದಗಳು, ಪ್ರಜೆಗಳಿಂದ ತಮ್ಮ ಪ್ರತಿನಿಧಿಗಳನ್ನು ಆರಿಸುವಿಕೆ, ಆ ಪ್ರತಿನಿಧಿಗಳು ಪ್ರಧಾನ ಶಾಸಕನನ್ನು ಆರಿಸುವಿಕೆ, ಪ್ರಧಾನ ಶಾಸಕನು ಸಭಾ ಪ್ರತಿನಿಧಿಗಳಿಂದಲೇ ತನ್ನ 'ಮಂತ್ರಿಮಂಡಲ', ಎಂದರೆ 'ಸಮಿತಿ'ಯನ್ನು ರಚಿಕೊಳ್ಳುವಿಕೆ ಮೊದಲಾಧ ಮೂಲಭೂತ ಸಂವಿಧಾನವನ್ನು ವರ್ಣಿಸುತ್ತವೆ. ಪ್ರಜಾಪ್ರತಿನಿಧಿಗಳು, ಮಂತ್ರಿಗಳು, ಪ್ರಧಾನಶಾಸಕ ಇವರು ಹೇಗಿರಬೇಕೆಂಬುದನ್ನು ಕೆಳಗಿನ ಮಂತ್ರ ಸೂಚಿಸುತ್ತಿದೆ:-
ಅಪಾಂ ರಸಮುದ್ವಯಸಂ ಸೂರ್ಯೇ ಸಮತಂ ಸಮಾಹಿತಮ್ |
ಅಪಾಂ ಅಸಸ್ಯ ಯೋ ರಸಸ್ತಂ ವೋ ಗೃಹ್ಣಾಮ್ಯುತ್ತಮಮ್ || (ಯಜು.೯.೩.)
     [ಅಪಾಂ ರಸಮ್] ಪ್ರಜೆಗಳಾದ ನಿಮ್ಮ ರಸದಂತಿರುವ [ಸೂರ್ಯೇ ಸಂತಮ್] ಜಗತ್ಸಂಚಾಲಕನಾದ ಪ್ರಭುವಿನಲ್ಲಿರುವ [ಸಮಾಹಿತಮ್] ಸ್ಥಿರಚಿತ್ತದ ಪುರುಷನನ್ನು, [ಗೃಹ್ಣಾಮಿ] ಪ್ರತಿನಿಧಿಯಾಗಿ ಗ್ರಹಿಸುತ್ತೇನೆ. ಮತ್ತು ಸಭಾಸದರೇ! [ಅಪಾಂ ಅಸಸ್ಯ ಯೋ ರಸಃ] ಪ್ರಜೆಗಳಾದ ನಿಮ್ಮ ರಸವಾದ ಪ್ರತಿನಿಧಿಗಳ ಸಮೂಹದ ರಸದಂತಿರುವ, [ಉತ್ತಮಃ] ಉತ್ತಮನಾದ ಪುರುಷನನ್ನು, [ಗೃಹ್ಣಾಮಿ] ರಾಷ್ಟ್ರಪತಿಯಾಗಿ ಸ್ವೀಕರಿಸುತ್ತೇನೆ. ರಾಷ್ಟ್ರಪತಿಯಂತೆಯೇ 'ಸಮಿತಿ'ಯ ಸದಸ್ಯ ಮಂಡಲವೂ ಕೂಡ, 'ರಸದ ರಸ'ವೇ ಸರಿ.
     ವೈದಿಕ ರಾಜನೀತಿಯ ಉದ್ದೇಶ್ಯ ಆದರ್ಶವಾದ 'ಕಲ್ಯಾಣರಾಜ್ಯ'ದ ನಿರ್ಮಾಣವೇ ಆಗಿರುತ್ತದೆ. ಆ ಕಲ್ಯಾಣ ರಾಜ್ಯದ ಸ್ವರೂಪವೇನು? ಪ್ರಾರ್ಥನಾ ರೂಪದಲ್ಲಿ ಯಜುರ್ವೇದ ಅದನ್ನು ಈ ರೀತಿ ವರ್ಣಿಸುತ್ತದೆ:-
ಆ ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾ ರಾಷ್ಟ್ರೇ ರಾಜನ್ಯಃ ಶೂರ
ಇಷವ್ಯೋsತಿವ್ಯಾಧೀ ಮಹಾರಥೋ ಜಾಯತಾಂ ದೋಗ್ಧ್ರೀ ಧೇನುರ್ವೋಧಾನಡ್ವಾನಾಶುಃ
ಸಪ್ತಿಃ ಪುರಂಧಿರ್ಯೋಷಾ ಜಿಷ್ಣೂ ರಥೇಷ್ಠಾಃ ಸಭೇಯೋ ಯುವಾಸ್ಯ ಯಜಮಾನಸ್ಯ
ವೀರೋ ಜಾಯತಾಂ ನಿಕಾಮೇ ನಿಕಾಮೇ ನಃ ಪರ್ಜನ್ಯೋ ವರ್ಷತು ಫಲವತ್ಯೋ ನ
ಓಷಧಯಃ ಪಚ್ಯಂತಾಂ ಯೋಗಕ್ಷೇಮೋ ನಃ ಕಲ್ಪತಾಮ್ || (ಯಜು.೨೨.೨೨.)
     [ಬ್ರಹ್ಮನ್] ಓ ಪರಮಾತ್ಮನ್! [ರಾಷ್ಟ್ರೇ] ನಮ್ಮ ರಾಷ್ಟ್ರದಲ್ಲಿ [ಬ್ರಹ್ಮವರ್ಚಸೀ ಬ್ರಾಹ್ಮಣಃ] ಬ್ರಹ್ಮವರ್ಚಸ್ಸಿನಿಂದ ಕೂಡಿದ ಬ್ರಾಹ್ಮಣನು, [ಆ ಜಾಯತಾಮ್] ಹುಟ್ಟಿ ಬರುತ್ತಿರಲಿ. [ರಾಜನ್ಯಃ] ಕ್ಷತ್ರಿಯನು [ಶೂರಃ] ಶೂರನೂ [ಇಷವ್ಯಃ] ಶಸ್ತ್ರಾಸ್ತ್ರ ಪ್ರಯೋಗ ನಿಪುಣನೂ [ಅತಿವ್ಯಾಧೀ] ರೋಗರುಜಿನಗಳಿಲ್ಲದವನೂ [ಮಹಾರಥಃ] ಮಹಾರಥನೂ [ಅಜಾಯತಾಮ್] ಆಗಿ ಜನ್ಮವೆತ್ತಿ ಬರುತ್ತಿರಲಿ. [ಧೇನುಃ] ಗೋವು, [ದೋಗ್ಧ್ರೀ] ಪುಷ್ಕಳವಾಗಿ ಹಾಲು ಕೊಡುತ್ತಿರಲಿ. [ಅನಡ್ವಾನ್] ಎತ್ತು [ವೋಢಾ] ಹೊರೆ ಹೊರಲು ಸಮರ್ಥವಾಗಿರಲಿ. [ಸಪ್ತಿಃ] ಕುದುರೆ [ಆಶುಃ] ವೇಗಶಾಲಿಯಾಗಿರಲಿ. [ಯೋಷಾ] ನಾರಿಯು [ಪುರಂಧಿಃ] ಉತ್ತರದಾಯಿತ್ವ ಹೊರುವವಳಾಗಿರಲಿ. [ಅಸ್ಯ ಯಜಮಾನಸ್ಯ] ಈ ಶುಭಕರ್ಮಕರ್ತನ [ವೀರಃ] ಪುತ್ರನು [ಜಿಷ್ಣುಃ] ಜಯಶಾಲಿಯೂ, [ರಥೇಶಷ್ಠಾಃ] ಉತ್ತಮ ರಥಿಕನೂ, [ಸಭೇಯಃ] ಸಭೆಯಲ್ಲಿ ಕುಳಿತುಕೊಳ್ಳಲು ಅರ್ಹನೂ, [ಯುವಾ] ಉತ್ಸಾಹಶಾಲಿಯೂ, [ಜಾಯತಾಮ್] ಆಗಿರಲಿ. [ನಃ] ನಮಗಾಗಿ [ಓಷಧಯಃ] ಓಷಧಿಗಳು, [ಫಲವತ್ವಃ] ಫಲಭರಿತವಾಗಿ [ಪಚ್ಯಂತಾಮ್] ಪಕ್ವವಾಗಲಿ. [ನಃ] ನಮಗೆ [ಯೋಗಕ್ಷೇಮಃ] ಯೋಗಕ್ಷೇಮವು [ಕಲ್ಪತಾಮ್] ಸಿದ್ಧಿಸಲಿ.
     ಈ ಪ್ರಾರ್ಥನೆಗೆ ಮೂರ್ತರೂಪ ಸಿಕ್ಕಿದರೆ, ಅತ್ಯಂತ ಭವ್ಯವಾದ ಕಲ್ಯಾಣರಾಜ್ಯ (Welfare State) ಸ್ಥಾಪಿತವಾಗುವುದರಲ್ಲಿ ಸಂದೇಹವಿಲ್ಲ. ಇಂತಹ ರಾಜ್ಯದಲ್ಲಿ ಜನಸಾಮಾನ್ಯರು ಸುಖದಿಂದ ಬಾಳಬಲ್ಲರು.
-ಪಂ. ಸುಧಾಕರ ಚತುರ್ವೇದಿ.

ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2013/05/blog-post_21.html

ಮಂಗಳವಾರ, ಮೇ 21, 2013

ವೇದೋಕ್ತ ಜೀವನ ಪಥ: ವೇದೋಕ್ತ ರಾಜನೀತಿ - ೨


     ಆ ಸಂಸತ್ತಿಗೆ ಆರಿಸಿ ಬರುವ ಸದಸ್ಯರು ಹೇಗಿರಬೇಕು? ಯಜುರ್ವೇದ ಹೇಳುತ್ತಲಿದೆ:-
ಯೇ ದೇವಾ ಅಗ್ನಿನೇತ್ರಾಃ ಪುರಃ ಸದಸ್ತೇಭ್ಯಃ ಸ್ವಾಹಾ|
ಯೇ ದೇವಾ ಯಮನೇತ್ರಾಃ ದಕ್ಷಿಣಾ ಸದಸ್ತೇಭ್ಯಃ ಸ್ವಾಹಾ|
ಯೇ ದೇವಾ ವಿಶ್ವದೇವನೇತ್ರಾಃ ಪಶ್ಚಾತ್ಸದಸ್ತೇಭ್ಯಃ ಸ್ವಾಹಾ|
ಯೇ ದೇವಾ ಮಿತ್ರಾವರುಣನೇತ್ರಾ ವಾ ಮರುನ್ನೇತ್ರಾ ವೋತ್ತರಾಸದಸ್ತೇಭ್ಯಃ ಸ್ವಾಹಾ|
ಯೇ ದೇವಾಃ ಸೋಮನೇತ್ರಾ ಉಪರಿಸದೋ ದುವಸ್ವಂತಸ್ತೇಭ್ಯಃ ಸ್ವಾಹಾ|| (ಯಜು.೯.೩೬.)
     [ಯೇ ದೇವಾಃ] ಯಾವ ಉನ್ನತ ಗುಣವಂತರಾದ ವಿದ್ವಾಂಸರು, [ಅಗ್ನಿನೇತ್ರಾಃ] ರಾಷ್ಟ್ರೋತ್ಥಾನಕವಾದ ರಾಜನೀತಿ ನಿಪುಣರೋ, ಮತ್ತು [ಪುರಃ ಸದಃ] ಶಾಸಕನ ಮುಂದೆ ಕುಳಿತುಕೊಳ್ಳುವವರಾಗಿರುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ಉದಾರಾತ್ಮರಾದ ವಿದ್ವಾಂಸರು, [ಯಮನೇತ್ರಾಃ] ನ್ಯಾಯಶಾಸ್ತ್ರನಿಪುಣರೋ, ಮತ್ತು [ದಕ್ಷಿಣಾಸದಃ] ಸರ್ವೋಚ್ಚ ಶಾಸಕನ ಬಲಗಡೆ ಕುಳಿತುಕೊಳ್ಳುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ಶ್ರೇಷ್ಠ ಗುಣಿಗಳಾದ ವಿದ್ವಾಂಸರು, [ವಿಶ್ವದೇವನೇತ್ರಾಃ] ಸಮಸ್ತ ಭೌತಿಕ ವಿಜ್ಞಾನದಲ್ಲಿ ನಿಪುಣರೋ, ಮತ್ತು, [ಪಶ್ಚಾತ್ಸದಃ] ಸರ್ವೋಚ್ಚ ಶಾಸಕನ ಹಿಂದೆ ಕುಳಿತುಕೊಳ್ಳುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ಉದಾರ ಚರಿತರಾದ ವಿದ್ವಾಂಸರು, [ಮಿತ್ರಾವರುಣನೇತ್ರಾಃ] ಮಿತ್ರರನ್ನೂ ಮತ್ತು ನಿವಾರಿಸಲರ್ಹರಾದ ಶತ್ರುಗಳನ್ನು ಗುರುತಿಸುವುದರಲ್ಲಿ ನಿಪುಣರೋ, [ವಾ ವಾ] ಅಥವಾ [ಮರುನ್ನೇತ್ರಾಃ] ಆತ್ಮ ಬಲಿದಾನಕ್ಕೂ ಸಿದ್ಧರಾಗುವ ಯುದ್ಧಕಲಾನಿಪುಣರೋ, ಮತ್ತು, [ಉತ್ತರಾಸದಃ] ರಾಷ್ಟ್ರಪತಿಯ ಎಡಗಡೆಗೆ ಕುಳಿತುಕೊಳ್ಳುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ದಿವ್ಯಗುಣಸಂಪನ್ನರಾದ ವಿದ್ವಾಂಸರು, [ಸೋಮನೇತ್ರಾಃ] ಆಧ್ಯಾತ್ಮವಿದ್ಯಾನಿಪುಣರೋ, [ಉಪರಿಸದಃ] ಉಚ್ಚಾಸನಗಳಲ್ಲಿ ಕುಳಿತುಕೊಳ್ಳುತ್ತಾರೋ, ಮತ್ತು, [ದುವಸ್ವಂತಃ] ಪ್ರಭೂಪಸನಾನಿರತರಾಗಿರುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ.
     ಈ ಉದ್ಧರಣದಲ್ಲಿ ಮೊದಲು ಗಮನಿಸಬೇಕಾದ ಅಂಶವೇನೆಂದರೆ ಸಂಸತ್ತಿನ ಎಲ್ಲಾ ಸದಸ್ಯರೂ ಪ್ರಥಮತಃ 'ದೇವಜನರು' ಎಂದರೆ, ಶ್ರೇಷ್ಠತರದ ಜೀವನ ನಡೆಸುವ ಸತ್ಯಸಂಧರಾದ, ಉದಾರಾತ್ಮರಾದ ಪುರುಷರಾಗಿರಬೇಕು. ಅಂತಹ ಐದು ಬಗೆಯ ದೇವಜನರು, ಅಂದರೆ, ರಾಜನೀತಿ ನಿಪುಣರು, ನ್ಯಾಯಶಾಸ್ತ್ರ ನಿಪುಣರು, ಭೌತಿಕ ವಿಜ್ಞಾನ ನಿಪುಣರು, ಮಿತ್ರ-ಶತ್ರುಗಳನ್ನು ಗುರುತಿಸಬಲ್ಲ, ಆತ್ಮತ್ಯಾಗಕ್ಕೂ ಸಿದ್ಧರಾದ ಯುದ್ಧಕಲಾನಿಪುಣರು ಮತ್ತು ಭಗವದುಪಾಸಕರಾದ ಆಧ್ಯಾತ್ಮ ವಿದ್ಯಾ ನಿಪುಣರೂ ಸಂಸತ್ತಿನ ಸದಸ್ಯರಾಗಬೇಕು. ಈ ಸಂಸತ್ತಿನ ಸದಸ್ಯರೇ ತಮ್ಮಲ್ಲಿ ಒಬ್ಬನನ್ನು ರಾಷ್ಟ್ರದ ಉಚ್ಚತಮ ಶಾಸಕನನ್ನಾಗಿ ಆರಿಸಬೇಕು. ರಾಜನೀತಿ ನಿಪುಣರು ರಾಷ್ಟ್ರಪತಿಯ ಮುಂದೆ, ನ್ಯಾಯಶಾಸ್ತ್ರ ನಿಪುಣರು ಬಲಕ್ಕೆ, ಭೌತಿಕ ವಿಜ್ಞಾನ ನಿಪುಣರು ಹಿಂದೆ, ಯುದ್ಧಕಲಾ ನಿಪುಣರು ಎಡಕ್ಕೆ ಮತ್ತು ಆಧ್ಯಾತ್ಮವಿದ್ಯಾ ನಿಪುಣರು ಇವರೆಲ್ಲರಿಗಿಂತ ಉನ್ನತಾಸನದಲ್ಲಿ ಕುಳಿತುಕೊಳ್ಳಬೇಕು. ಇಂತಹ ವಿಶೇಷಜ್ಞರಾದ ವಿದ್ವಾಂಸರನ್ನು ಬಿಟ್ಟು, ನಿರಕ್ಷರಕುಕ್ಷಿಗಳೂ, ಸ್ವಾರ್ಥಪರರೂ ಆದವರನ್ನು ಸಂಸತ್ತಿಗೆ ಆರಿಸುವಂತಿಲ್ಲ. 
     ಈ ಸಂಸತ್ಸದಸ್ಯರನ್ನು ಆರಿಸುವವರಾರು? ವೇದಗಳು ನಿರ್ವಾಚಕರಿಗೂ ಸಹ ಕೆಲವು ಯೋಗ್ಯತೆಗಳನ್ನು ವಿಧಿಸುತ್ತವೆ. ಇಲ್ಲಿ ಕೇಳಿರಿ:-
ಅರ್ಥೇತಃ ಓಜಸ್ವತೀಃ ಆಪಃ ಪರಿವಾಹಿಣೀಃ ಸ್ಥ ರಾಷ್ಟ್ರದಾ ರಾಷ್ಟ್ರಂ ಮೇ ದತ್ತ || (ಯಜು.೧೦.೩.)
     [ಅರ್ಥೇತಃ] ಸಂಪತ್ತನ್ನು ಸಂಪಾದಿಸುವವರು, [ಓಜಸ್ವತೀಃ] ಓಜಸ್ಸಿನಿಂದ ಪ್ರಕಾಶಿಸುವವರಾಗಿದ್ದೀರಿ. [ಆಪಃ ಪರಿವಾಹಿಣೀಃ] ಇತರರನ್ನೂ ಮುಂದಕ್ಕೆ ತರುವ ಆಪ್ತರಾಗಿದ್ದೀರಿ. [ರಾಷ್ಟ್ರದಾಃ] ನೀವೆಲ್ಲರೂ ರಾಷ್ಟ್ರವನ್ನು, ಶಾಸನಾಧಿಕಾರವನ್ನು ಕೊಡುವವರಾಗಿದ್ದೀರಿ. [ರಾಷ್ಟ್ರಂ ಮೇ ದತ್ತಾ] ಶಾಸನಾಧಿಕಾರವನ್ನು ಕೊಡಿರಿ.
     ಇವು ಸಂಸತ್ತಿನ ಸದಸ್ಯತ್ವಕ್ಕೆ ಅಭ್ಯರ್ಥಿಯಾಗಿ ನಿಂತವನು ಜನಸಾಮಾನ್ಯರಿಗೆ ಹೇಳುವ ಮಾತುಗಳು. ಒಂದಿಲ್ಲೊಂದು ವೈಶಿಷ್ಟ್ಯ ಪಡೆದಿರುವವರೇ ಮತದಾನ ಮಾಡಲು ಅರ್ಹರು. ಅಂತಹ ಪ್ರಜೆಗಳನ್ನು 'ರಾಷ್ಟ್ರದಾಃ' ಎಂದು ಕರೆದಿರುವುದು ಗಮನಾರ್ಹವಾದ ವಿಷಯ. ವಸ್ತುತಃ ಪ್ರಜೆಗಳೇ ಶಾಸನಾದಿಕಾರವನ್ನು ಕೊಡುವವರು. ಇಂತಹವರು ಚುನಾಯಿಸಿದ ಪ್ರತಿನಿಧಿಗಳಿಂದ ಕೂಡಿದ ಸಂಸತ್ತನ್ನು ವೇದಗಳು 'ಸಭೆ' ಎಂದು ಕರೆಯುತ್ತವೆ. ಈ ಸಭೆ ಪ್ರಧಾನಶಾಸಕನನ್ನು ಹಿಂದೆ ಹೇಳಿದಂತೆ ಆರಿಸುತ್ತದೆ. ಆ ಪ್ರಧಾನ ಶಾಸಕನು, ಸಭೆಯ ಸದಸ್ಯರಿಂದಲೇ ಆವಶ್ಯಕವಾದ ಸಂಖ್ಯೆಯಲ್ಲಿ ಜನರನ್ನು ಆರಿಸಿಕೊಂಡು, ಶಾಸನಕಾರ್ಯ ನಿರ್ವಹಿಸಲು 'ಮಂತ್ರಿಮಂಡಲ'ವನ್ನು ರಚಿಸಿಕೊಳ್ಳುತ್ತಾನೆ. ಈ ಮಂತ್ರಿಮಂಡಲ, ವೇದಗಳ ಭಾಷೆಯಲ್ಲಿ 'ಸಮಿತಿ' ಎನಿಸಿಕೊಳ್ಳುತ್ತದೆ.
-ಪಂ. ಸುಧಾಕರ ಚತುರ್ವೇದಿ.

ಮಂಗಳವಾರ, ಮೇ 14, 2013

ಸಾಧನಾಪಂಚಕ




     ಆದಿ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವಿದಾಗಿದೆ. 

ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನ್ಠುಯತಾಂ
ತೇನೇಶಸ್ಯ ವಿಧೀಯತಾಂ ಅಪಚಿತಿಃ ಕಾಮ್ಯೇ ಮತಿಸ್ತ್ಯಜತಾಮ್ |
ಪಾಪೌಘಃ ಪರುಧೂಯತಾಂ ಭವಸುಖೇ ದೋಷೋsನುಸಂಧೀಯತಾಂ
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್ || ೧ ||

     ಪ್ರತಿನಿತ್ಯ ವೇದಾಧ್ಯಯನ ಮಾಡು; ವೇದ ವಿಧಿತ ಕರ್ಮಗಳನ್ನು ಶ್ರದ್ಧೆಯಿಂದ ನಿರ್ವಹಿಸು; ಮಾಡುವ ಎಲ್ಲಾ ಕೆಲಸಗಳನ್ನು ಭಗವದಾರಾಧನೆಯೆಂದು ಸಮರ್ಪಿಸು; ಕಾಮ್ಯ ಕರ್ಮಗಳನ್ನು (ಮನಸ್ಸಿನ ಸ್ವಾಧೀನ ತಪ್ಪಿಸುವ ಕಾಮನೆಗಳು) ತ್ಯಜಿಸು; ಅಂತರಂಗದಲ್ಲಿ ತುಂಬಿರುವ ಪಾಪರಾಶಿಯನ್ನು ತೊಳೆದುಹಾಕು; ಇಂದ್ರಿಯ ಸುಖಭೋಗಗಳು ದೋಷಪೂರಿತವೆಂದು ಗುರುತಿಸು; ಸ್ವಸ್ವರೂಪವನ್ನು ಅರಿಯಲು ಪ್ರಯತ್ನಿಸು; ಶರೀರ ಮೋಹದ ಸಂಕೋಲೆಯಿಂದ ಬಿಡಿಸಿಕೊಂಡು ಸಾಧನಾಪಥದಲ್ಲಿ ಸಾಗು.

ಸಂಗಃಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾsಧೀಯತಾಂ 
ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್ |
ಅದ್ವಿದ್ವಾಬುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || ೨ ||

     ಜ್ಞಾನಿಗಳ ಸಹವಾಸದಲ್ಲಿರು; ಭಗವಂತನಲ್ಲಿ ದೃಢ ಭಕ್ತಿಯಿರಿಸು; ಪ್ರಶಾಂತತೆ ಮುಂತಾದ ಗುಣಗಳನ್ನು ಬೆಳೆಸಿಕೋ; ಸ್ವಾರ್ಥಪರ ಕಾಮಕರ್ಮಗಳಲ್ಲಿ ಆಸಕ್ತಿ ತ್ಯಜಿಸು; ಸದ್ವಿದ್ವಾಂಸರ (ಗುರುಗಳ) ಆಶ್ರಯ ಪಡೆ; ಪ್ರತಿದಿನ ಸದ್ಗುರು ಪಾದಸೇವೆ ಮಾಡು; ಬ್ರಹ್ಮನನ್ನು ಸೂಚಿಸುವ ಏಕಾಕ್ಷರ 'ಓಂ'ಕಾರ ತಿಳಿಯಲು ಪ್ರಯತ್ನಿಸು; ಉಪನಿಷದ್ ವಾಕ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳು.

ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃ ಪಕ್ಷಃ ಸಮಾಶ್ರೀಯತಾಂ
ದುಸ್ತರ್ಕಾತ್ ಸುವಿರಮ್ಯತಾಂ ಶ್ರುತಿಮತಸ್ತರ್ಕೋsನುಸಂಧೀಯತಾಮ್ |
ಬ್ರಹ್ಮಾಸ್ಮೀತಿ ವಿಭಾವ್ಯತಾಂ ಅಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇsಹಂ ಮತಿರುಝ್ಯುತಾಂ ಬುಧಜನೈರ್ವಾದಃ ಪರಿತ್ಯಜ್ಯತಾಮ್ || ೩ ||

     ಉಪನಿಷತ್ತಿನ ವಾಕ್ಯಗಳ ಅರ್ಥ ಕುರಿತು ಚಿಂತಿಸು; ಉಪನಿಷತ್ತಿನ ನಿಜಜ್ಞಾನವನ್ನು ಆಶ್ರಯಿಸು; ವಿತಂಡವಾದದಿಂದ ದೂರವಿರು; ಉಪನಿಷತ್ತಿಗೆ ಪೂರಕವಾದ ತರ್ಕದೊಂದಿಗೆ ಇರು; ಬ್ರಹ್ಮಾನುಭವದಲ್ಲಿ ಒಂದಾಗು; ಎಂದಿಗೂ ಗರ್ವಪಡದಿರು; ಶರೀರದೊಂದಿಗೆ ನಿನ್ನನ್ನು ಪರಿಭಾವಿಸಿಕೊಳ್ಳದಿರು ; ವಿದ್ವಾಂಸರೊಡನೆ ವಾದ ಮಾಡುವ ಪ್ರವೃತ್ತಿ ತೊರೆದುಬಿಡು.

ಕ್ಷುದ್ ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ಯನ್ನಂ ನ ತು ಯಾಚ್ಯತಾಂ ವಿಧಿವಶಾತ್ ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಂ
ಔದಾಸೀನ್ಯಮಭೀಷ್ಟತಾಂ ಜನಕೃಪಾನೈಷ್ಠುರ್ಯಮುತ್ ಸೃಜ್ಯತಾಮ್ || ೪ ||

     ಹಸಿವಿದ್ದರೆ, ಅಸ್ವಸ್ಥತೆಯಿದ್ದರೆ ಪರಿಹರಿಸಿಕೋ; ಪ್ರತಿದಿನ ಭಿಕ್ಷೆಯನ್ನು (ಆಹಾರ) ಔಷಧಿಯಂತೆ ಸೇವಿಸು; ರುಚಿಕರವಾದ ಆಹಾರಕ್ಕೆ ಹಂಬಲಿಸದಿರು; ತಾನಾಗಿ ಒದಗಿ ಬಂದುದರಲ್ಲಿ ತೃಪ್ತಿಪಡು; ಶೀತ-ಉಷ್ಣ ಮುಂತಾದುವುಗಳನ್ನು ಸಹಿಸು; ಅನುಚಿತ ಮಾತುಗಳನ್ನು ಆಡದಿರು; ನಿರ್ಲಿಪ್ತಭಾವವನ್ನು ಹೊಂದು; ಜನರ ಕೃಪೆ ಮತ್ತು ನಿಷ್ಠುರಗಳನ್ನು ಗಮನಿಸದಿರು.  

ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷತಾಂ ಜಗದಿದಂ ತದ್ಭಾದಿತಂ ದೃಶ್ಯತಾಮ್ |
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಂ ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ || ೫ ||

     ಏಕಾಂತದಲ್ಲಿ ಸುಖವನ್ನು ಅರಸು; ಪರಮಾತ್ಮನಲ್ಲಿ ಚಿತ್ತವನ್ನು ಲೀನಗೊಳಿಸು (ಸಮಾಧಿ); ಸರ್ವವ್ಯಾಪಿ ಪೂರ್ಣಾತ್ಮನನ್ನು ಎಲ್ಲೆಡೆಯಲ್ಲೂ 'ದರ್ಶಿಸು'; ಕಾಣುವ ದೃಶ್ಯಗಳು, ಅನುಭವಗಳು ಮನಸ್ಸಿನ ಭ್ರಮೆಯೆಂಬುದನ್ನು ಮನಗಾಣು; ಹಿಂದಿನ ಕರ್ಮಗಳ ಫಲವನ್ನು ಅನುಭವಿಸು; ಮುಂದೊದಗಬಹುದಾದ ಫಲಗಳಿಂದ ಧೃತಿಗೆಡದಿರು; ಪ್ರಾರಬ್ಧದ ಕರ್ಮಫಲಗಳನ್ನು ಅನುಭವಿಸಿ ಕಳೆದುಕೋ; ಬ್ರಹ್ಮಾನುಭವದಲ್ಲಿ  ಸ್ಥಿತನಾಗಿರು. 

-ಕ.ವೆಂ.ನಾಗರಾಜ್.

ಗುರುವಾರ, ಮೇ 9, 2013

ವೇದೋಕ್ತ ಜೀವನ ಪಥ: ವೇದೋಕ್ತ ರಾಜನೀತಿ - ೧


     ಚತುರ್ವೇದಗಳ ಪರಿಪೂರ್ಣ ಜ್ಞಾನವಿಲ್ಲದ ವಿದ್ವಾಂಸರು - ಪ್ರಾಚೀನ ಕಾಲದ ಆರ್ಯರಿಗೆ ರಾಷ್ಟ್ರದ ಕಲ್ಪನೆಯಿರಲಿಲ್ಲ - ಎಂದು ಮುಂತಾಗಿ ಹೇಳುವುದುಂಟು. ಆದರೆ, ಸಂಪೂರ್ಣ ವೇದಗಳನ್ನು ಬಲ್ಲವರಿಗೆ ವೇದಗಳಲ್ಲಿ ಸಮಸ್ತ ವಿದ್ಯೆಗಳೂ ಇವೆ, ಮಾನವನ ಸಾಮೂಹಿಕ ಜೀವನಕ್ಕೆ ಪ್ರಬಲ ಆಧಾರವಾದ ರಾಜನೀತಿಯೂ ತುಂಬಿದೆ -  ಎಂಬ ತಥ್ಯ ಚೆನ್ನಾಗಿ ಗೊತ್ತು. ಇಂದಿನ ಕಲ್ಪನೆಯ ಸಾಮ್ರಾಜ್ಯವಾದ, ಬಂಡವಾಳಶಾಹಿವಾದ, ಸಾಮ್ಯವಾದ, ಸಮಾಜವಾದ, ಅಧಿನಾಯಕವಾದ ಮೊದಲಾದ ಆಧುನಿಕ ವಾದಗಳನ್ನು ವೇದಗಳಲ್ಲಿ ಹುಡುಕುವುದು ತಪ್ಪಾದೀತು. ಆಧುನಿಕ ವಾದಗಳಲ್ಲಿ ಯಾವುದಾದರೂ, ವೈದಿಕ ರಾಜನೀತಿಗೆ ಹತ್ತಿರವಿದ್ದಲ್ಲಿ ಅದು ಪ್ರಜಾತಂತ್ರವೇ ಎಂದು ನಿಸ್ಸಂದೇಹವಾಗಿ ಹೇಳಬಹುದು. ಅಥರ್ವವೇದದ ಈ ಮಂತ್ರವನ್ನು ಓದಿರಿ:-
ತ್ವಾಂ ವಿಶೋ ವೃಣತಾಂ ರಾಜ್ಯಾಯ ತ್ವಾಮಿಮಾಃ ಪ್ರದಿಶಃ ಪಂಚ ದೇವೀಃ |
ವರ್ಷನ್ರಾಷ್ಟ್ರಸ್ಯ ಕಕುದಿ ಶ್ರಯಸ್ಯ ತತೋ ನ ಉಗ್ರೋ ವಿ ಭಜಾ ವಸೂನಿ || (ಅಥರ್ವ.೩.೪.೨.)
     [ವರ್ಷನ್] ಓ ಸರ್ವಸುಖದಾಯಕನಾದ ಶಾಸಕನೇ! [ವಿಶಃ] ಪ್ರಜೆಗಳು, [ರಾಜ್ಯಾಯ] ರಾಜಕಾರ್ಯಕ್ಕಾಗಿ, [ತ್ವಾ ವೃಣತಾಮ್] ನಿನ್ನನ್ನು ಆರಿಸಲಿ. [ಇಮಾಃ ಪಂಚದೇವೀಃ ಪ್ರದಿಶಃ] ಈ ಸಂಸತ್ತಿನ ಐದು ದಿಕ್ಕಿನಲ್ಲಿಯೂ ಮಂಡಿಸಿರುವ, ಜ್ಞಾನತೇಜಸ್ಸಿನಿಂದ ಬೆಳಗುವ ಸದಸ್ಯರು, [ತ್ವಾ] ನಿನ್ನನ್ನು ಆರಿಸಲಿ. [ರಾಷ್ಟ್ರಸ್ಯ ಕಕುದಿ] ರಾಷ್ಟ್ರದ ಉನ್ನತಸ್ಥಾನದಲ್ಲಿ, [ಶ್ರಯಸ್ವ] ವಿರಾಜಿಸು. [ತತಃ] ಅಧಿಕಾರ ಗ್ರಹಣಾನಂತರ, [ಉಗ್ರಃ] ಶಕ್ತಿಸಂಪನ್ನನಾಗಿ, [ನಃ] ಪ್ರಜೆಗಳಾದ ನಮಗೆ, [ವಸೂನಿ ವಿ ಭಜ] ಐಶ್ವರ್ಯವನ್ನು, ಆಜೀವಿಕಾ ಸಾಧನಗಳನ್ನು ಹಂಚಿಕೊಡು. 
     ಈ ಮಂತ್ರದಲ್ಲಿ ಬಂದಿರುವ 'ವೃಣತಾಮ್' ಎಂಬ, ಆರಿಸಲಿ ಎಂಬರ್ಥದ ಶಬ್ದವನ್ನು ಪಾಠಕರು ಗ್ರಹಿಸಬೇಕು. ರಾಷ್ಟ್ರದ ಸರ್ವೋಚ್ಚ ಸ್ಥಾನದಲ್ಲಿ ಕುಳಿತುಕೊಳ್ಳುವ ಶಾಸಕನನ್ನು ಪ್ರಜೆಗಳೇ ಆರಿಸಬೇಕು. ಇದರ ಹಿಂದಿನ ಮಂತ್ರದಲ್ಲೂ, ಸರ್ವಸ್ತ್ವಾ ರಾಜನ್ ಪ್ರದಿಶೋ ಹ್ವಯಂತು || (ಅಥರ್ವ.೩.೪.೧.) - ಓ ಪ್ರಕಾಶಮಯ ಶಾಸಕ! ನಿನ್ನನ್ನು ಐದು ದಿಕ್ಕುಗಳಲ್ಲಿನ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯಭಾಗದ ಜನರೂ ಅಧಿಕಾರಕ್ಕಾಗಿ ಕರೆಯಲಿ - ಎಂಬ ಆದೇಶವನ್ನೇ ಕಾಣುತ್ತೇವೆ. ಯಜುರ್ವೇದದಲ್ಲಿಯೂ ಪ್ರಜಾತಂತ್ರದ ಸ್ಪಷ್ಟ ಉಲ್ಲೇಖ ಕಂಡುಬರುತ್ತದೆ. ನೋಡಿರಿ:-
ಇಮಂ ದೇವಾ ಅಸಪತ್ನಂ ಸುವಧ್ವಂ ಮಹತೇ ಕ್ಷತಾಯ ಮಹತೇ ಜಾನರಾಜ್ಯಾಯೇಂದ್ರಸ್ಯೇಂದ್ರಿಯಾಯ| ಇಮಮಮುಷ್ಯ ಪುತ್ರಮಮುಷ್ಯೈ ಪುತ್ರಮಸ್ಯೈ ವಿಶ ಏಷ ವೋsರಾಜಾ ಸೋಮೋಸ್ಮಾಕಂ ಬ್ರಾಹ್ಮಣಾನಾಂ ರಾಜಾ || (ಯಜು.೯.೪೦.)
     [ದೇವಾಃ] ನಿತ್ಯ ಜಾಗರೂಕರಾದ, ಸತ್ಯಾಚಾರ-ವಿಚಾರವಂತರಾದ, ಉದಾರಾತ್ಮರಾದ ವಿದ್ವಾಂಸರೇ! [ಅಸಪತ್ನಂ ಇಮಮ್] ಶತ್ರುರಹಿತನಾದ ಇವನನ್ನು, [ಅಮುಷ್ಯಪುತ್ರಮ್] ಇಂತಹವನ ಮಗನಾದ, [ಅಮುಷ್ಯೈ ಪುತ್ರಮ್] ಇಂತಹವಳ ಮಗನಾದ, [ಇಮಮ್] ಇವನನ್ನು [ಅಸ್ಮೇ ವಿಶೇ] ಈ ಪ್ರಜಾವೃಂದಕ್ಕಾಗಿ, [ಮಹತಾ ಕ್ಷತ್ರಾಯ] ಮಹಚ್ಛಕ್ತಿಗಾಗಿ, [ಮಹತೇ ಜಾನಜ್ಯೈಷ್ಠಾಯ] ಮಹಾನ್ ಔನ್ನತ್ಯಕ್ಕಾಗಿ, [ಮಹತೇ ಜಾನರಾಜ್ಯಾಯ] ಮಹಾನ್ ಜನತಂತ್ರಕ್ಕಾಗಿ, [ಇಂದ್ರಸ್ಯ ಇಂದ್ರಿಯಾಯ] ಪರಮೈಶ್ವರ್ಯವಾನ್ ಪ್ರಭುವಿನ ಆನಂದದ ಪ್ರಾಪ್ತಿಗಾಗಿ, [ಸುವದ್ವಮ್] ಅಭಿಕ್ತನನ್ನಾಗಿ ಮಾಡಿರಿ. [ಏಷಃ ಸೋಮಃ] ಈ ಪ್ರಜಾವತ್ಸಲನಾದ, ಪ್ರಶಾಂತ ಪುರುಷನು, [ವಃ ರಾಜಾ] ನಿಮ್ಮ ರಾಜನು. [ಅಸ್ಮಾಕಂ ಬ್ರಾಹ್ಮಣಾನಾಂ ರಾಜಾ] ಬ್ರಹ್ಮಜ್ಞರಾದ ನಮ್ಮ ರಾಜನು.
     ಮಂತ್ರವನ್ನು ಗಮನವಿಟ್ಟು ಓದಿದರೆ, ಆಚಾರ್ಯ ಪುರುಷರು, ಪ್ರಜೆಗಳಿಂದ ಸಂಸತ್ತಿಗಾಗಿ ಆರಿಸಲ್ಪಟ್ಟ ವಿದ್ವಾಂಸರನ್ನು ಸಂಬೋಧಿಸಿ, ಸರ್ವೋಚ್ಚ ಶಾಸಕನನ್ನು ಆರಿಸಿ, ಅವನಿಗೆ ಅಭಿಷೇಕ ಮಾಡಬೇಕೆಂದು ಆದೇಶ ನೀಡುತ್ತಿರುವುದು ಗೊತ್ತಾಗುತ್ತದೆ. ಆ ಸರ್ವೋಚ್ಚ ಶಾಸಕನು ಶತ್ರುರಹಿತನಾಗಿರಬೇಕು. ಬೃಹತ್ತಾದ ಕ್ಷಾತ್ರ ಶಕ್ತಿಯನ್ನೂ, ಮಹಾನ್ ಜ್ಯೇಷ್ಠತ್ವವನ್ನೂ, ಪ್ರಜಾಸತ್ತೆಯನ್ನೂ, ಕೊನೆಗೆ ಜನಮನದ ಮನದಲ್ಲಿಯೂ ಮಿತ್ರಭಾವನೆಗಳನ್ನೂ ಜಾಗರಿಸಿ, ಅವರಿಗೆ ಭಗವದಾನಂದವನ್ನೂ ಒದಗಿಸಲು ಸಮರ್ಥನಾಗಿರಬೇಕು. ಅವನು 'ಸೋಮ' ಎಂದರೆ, ಜನರೆಲ್ಲರ ಸಾರರೂಪನಾಗಿರಬೇಕು. ಇಂತಹ ಸರ್ವೋನ್ನತ ಶಾಸಕನನ್ನು ಆರಿಸುವವರು, ಪ್ರಜೆಗಳಿಂದ ಆರಿಸಲ್ಪಟ್ಟ ಸಂಸತ್ತಿನ ಸದಸ್ಯರು. 
-ಪಂ. ಸುಧಾಕರ ಚತುರ್ವೇದಿ.