ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಏಪ್ರಿಲ್ 2, 2018

ಒಡೆಯುವುದು ಸುಲಭ! - [Easy to divide!]


     'ಈಗ ಏನಾಗುತ್ತಿದೆ?' ಎಂದು ಎಲ್ಲರೂ ಕೇಳುವಂತಹ ಸ್ಥಿತಿ ಬಂದೊದಗಿದೆ. ಉತ್ತರಿಸಬೇಕಾದವರೇ ಪ್ರಶ್ನೆ ಕೇಳಲು ಕಾರಣರಾಗಿದ್ದಾರೆ. ಸಮಸ್ಯೆ ಪರಿಹರಿಸಬೇಕಾದವರೇ ಸಮಸ್ಯೆಗಳನ್ನು ಸೃಜಿಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕಧರ್ಮ, ಅದು ಹಿಂದೂಧರ್ಮಕ್ಕೆ ಹೊರತಾದುದು, ಅದಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡಬೇಕು ಎನ್ನುವ ವಿಚಾರದಲ್ಲಿ ಸರ್ಕಾರದ ನಿಲುವು ರಾಜ್ಯ ಚುನಾವಣೆಯ ಹೊಸ್ತಿಲಿನಲ್ಲಿ ಇರುವಾಗ ದೊಡ್ಡ ಸಂಘರ್ಷ ಉಂಟುಮಾಡಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತದೋ ಯಾರಿಗೆ ಗೊತ್ತು? ಆತುರ ಆತುರದಲ್ಲಿ ಒಂದು ಸಮಿತಿ ರಚಿಸಿ, ಆ ಸಮಿತಿಯಲ್ಲಿ ಧಾರ್ಮಿಕತಜ್ಞರಿಗೆ ಮಹತ್ವವಿರದೆ ಕಮ್ಯುನಿಸ್ಟ್ ವೈಚಾರಿಕತೆಯ ಒಲವಿರುವವರು, ಲಿಂಗಾಯತ-ವೀರಶೈವರಲ್ಲದವರು ಮತ್ತು ಪ್ರತ್ಯೇಕಧರ್ಮಘೋಷಣೆಯ ಪರವಿರುವವರಿಗೆ ಸ್ಥಾನ ನೀಡಿ, ಬೇಕಾದರೀತಿಯಲ್ಲಿ ವರದಿ ತರಿಸಿಕೊಂಡು ಸಂಪುಟ ಸಭೆಯಲ್ಲೂ ವರದಿ ಒಪ್ಪಿದ ಬಗ್ಗೆ ನಿರ್ಣಯವಾಗಿದೆ. ಇದು ಚುನಾವಣೆಯಲ್ಲಿ ಮತಗಳಿಕೆಯ ದೃಷ್ಟಿಯಿಂದ ಮಾಡಲಾದುದು ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ. ಸಮಿತಿಯ ಅಧ್ಯಕ್ಷ ಜಸ್ಟಿಸ್ ನಾಗಮೋಹನದಾಸ್ ಒಕ್ಕಲಿಗರು. ಮುಜಾಫರ್ ಅಸಾದಿ ಮುಸ್ಲಿಮ್, ರಾಮಕೃಷ್ಣ ಮರಾಠೆ ಪಕ್ಕಾ ಎಡಪಂಥೀಯರು. ಪುರುಷೋತ್ತಮ ಬಿಳಿಮಲೆ ಲಿಂಗಾಯತರಲ್ಲ. ಎಸ್.ಜಿ.ಸಿದ್ದರಾಮಯ್ಯ ಕುರುಬರು. ಪತ್ರಕರ್ತ ಸರಜೂ ಕಾಟ್ಕರ್ ಸಹ ಲಿಂಗಾಯತರಲ್ಲ. ವಿಶೇಷವೆಂದರೆ ಎಲ್ಲರೂ ಬಹುತೇಕ ಎಡವಿಚಾರದವರು ಮತ್ತು ಹಿಂದೂ ವಿರೋಧಿ ಮನೋಭಾವದವರು. 

     ಮಹತ್ವದ ಸಂಗತಿಯೆಂದರೆ ನಮ್ಮ ಸಂವಿಧಾನ ಹೊಸ ಧರ್ಮ ರಚನೆಯ ವಿಚಾರದಲ್ಲಿ ಏನನ್ನೂ ಹೇಳಿಲ್ಲ. ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಸಂತೋಷ ಹೆಗ್ಡೆಯವರ ಅಭಿಪ್ರಾಯದಂತೆ 'ಸಂವಿಧಾನದಲ್ಲಿ ಇರುವ ಧರ್ಮವನ್ನು ವಿಭಜಿಸಿ ಹೊಸ ಧರ್ಮ ರಚಿಸಲು ಅವಕಾಶವೇ ಇಲ್ಲ. ಧರ್ಮ ಅಥವ ಧರ್ಮದ ರಚನೆ ಕುರಿತು ಸಂವಿಧಾನದಲ್ಲಿ ಯಾವುದೇ ವಿವರಣೆಗಳನ್ನು ಕೊಟ್ಟಿಲ್ಲ'. ಹಿಂದಿನ ಅಡ್ವೋಕೇಟ್ ಜನರಲ್ ಮತ್ತು ಹಿರಿಯ ಕಾನೂನು ತಜ್ಞರಾದ ಬಿ.ವಿ. ಆಚಾರ್ಯರವರ ಪ್ರಕಾರ, 'ಇದೊಂದು ಅನಗತ್ಯವಾದ ಚರ್ಚೆಯ ವಿಚಾರ. ಒಂದು ಸಂಸ್ಥೆಯನ್ನೋ, ಸಂಘವನ್ನೋ ರಚಿಸಿದಂತೆ ರಾತ್ರೋರಾತ್ರಿ ಒಂದು ಹೊಸ ಧರ್ಮ ರಚಿಸಲು ಬರುವುದಿಲ್ಲ. ಐತಿಹಾಸಿಕವಾದ ಭಿನ್ನತೆಯೋ, ವಿವಾದವೋ ಇದ್ದರೆ ಅದನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬಹುದು. ಹೊಸ ಧರ್ಮ ಸ್ಥಾಪನೆಗೆ ರಾಜ್ಯ ಸರ್ಕಾರ ಶಿಫಾರಸು ಮಾಡಲು ಕಾನೂನಿನ ಸಮರ್ಥನೆಯಿಲ್ಲ. ಇದೊಂದು ರಾಜಕೀಯ ಗಿಮಿಕ್ ಅಷ್ಟೆ'. ಹಿಂದಿನ ಅಡ್ವ್ವೊಕೇಟ್ ಜನರಲ್ ಪ್ರೊ. ರವಿವರ್ಮಕುಮಾರರ ಪ್ರಕಾರ, 'ಹೊಸ ಧರ್ಮ ರಚನೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ 1992ರ ಅಲ್ಪ ಸಂಖ್ಯಾತ ಆಯೋಗದ ರಚನೆಗೆ ಸಂಬಂಧಿಸಿದ ಕಾಯದೆಯ ಸೆ. 2ರ ಪ್ರಕಾರ ಒಂದು ಸಮುದಾಯವನ್ನು ಅಲ್ಪ ಸಂಖ್ಯಾತ ಸಮುದಾಯವೆಂದು ಘೋಷಿಸಲು ಅವಕಾಶವಿದೆ'. ಇಂತಹ ವಿವಾದ ಹಿಂದೆ ಬಂದಿರದಿದ್ದ ಕಾರಣ ಸಂವಿಧಾನದಲ್ಲಿ ಪ್ರಸ್ತಾಪ ಇಲ್ಲ. ಇದು ಪ್ರಸ್ತಾಪಕ್ಕೆ ಬರಬಾರದೆಂದೇನೂ ಇಲ್ಲ. ಆದರೆ ಇಂತಹ ಧರ್ಮಸೂಕ್ಷ್ಮದ ವಿಚಾರಗಳನ್ನು ಒರಟೊರಟಾಗಿ ನಿಭಾಯಿಸದೆ ಸೂಕ್ತವಾದ ರೀತಿಯಲ್ಲಿ ಸಂಬಂಧಿಸಿದ ಧಾರ್ಮಿಕ ಮುಖಂಡರ ಮತ್ತು ತಜ್ಞರ ಸಭೆಯಲ್ಲಿ ವಿವರವಾಗಿ ಚರ್ಚಿಸಿ ಮುಂದುವರೆಯುವುದು ಸೂಕ್ತವಾದ ವಿಧಾನ. ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದಾಕ್ಷಣ ಇತ್ಯರ್ಥವಾಗಿಬಿಡುವುದಿಲ್ಲ. ಈಗ ಉದ್ಭವವಾಗಿರುವ ಪರ-ವಿರೋಧಗಳ ನಡುವೆ ಸಮಸ್ಯೆ ಬಗೆಹರಿಯಲು ಅನೇಕ ವರ್ಷಗಳೇ ಹಿಡಿಯುತ್ತವೆ ಎಂಬುದನ್ನು ಹೇಳಲು ತಜ್ಞರೇ ಆಗಬೇಕಿಲ್ಲ. ಆದರೆ ಕಾಂಗ್ರೆಸ್ ರಾಜ್ಯ ಸರ್ಕಾರಕ್ಕೆ ಬೇಕಾಗಿರುವುದೇನೆಂದರೆ ಈ ಎಳೆಯನ್ನು ಹಿಡಿದುಕೊಂಡು ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದಷ್ಟೆ. ಹಿಂದೂಧರ್ಮದಿಂದ ಲಿಂಗಾಯತರನ್ನು ಪ್ರತ್ಯೇಕಿಸಿದರೆ ಅವರ ರಾಜಕೀಯ ಬೆಂಬಲ ತಮಗೆ ದೊರಕುವುದಲ್ಲದೆ, ಹಿಂದೂಗಳು ಮತ್ತಷ್ಟು ದುರ್ಬಲಗೊಳ್ಳುವುದರಿಂದ ಅವರನ್ನು ಒಡೆದು ಆಳುವುದು ಸುಲಭವೆಂಬುದು ಅವರ ಲೆಕ್ಕಾಚಾರವಿರುವಂತೆ ತೋರುತ್ತದೆ.
     ಇನ್ನೊಂದು ಸಂಗತಿಯನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಯನ್ನು 2013ರಲ್ಲಿ ಆಗಿನ ಕಾಂಗ್ರೆಸ್ ನಾಯಕತ್ವದ ಕೇಂದ್ರ ಸರ್ಕಾರವೇ ತಿರಸ್ಕರಿಸಿತ್ತು. ಅದಕ್ಕೆ ಅವರು ನೀಡಿದ್ದ ಕಾರಣವೆಂದರೆ, ಹಾಗೆ ಮಾಡುವುದರಿಂದ ವೀರಶೈವ-ಲಿಂಗಾಯತ ಧರ್ಮ ಅನುಸರಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳವರಿಗೆ ತೊಂದರೆಯಾಗುತ್ತದೆ ಎಂಬುದಾಗಿತ್ತು. 14.11.2013ರಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್‌ರವರು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವೀರಶೈವ-ಲಿಂಗಾಯತರು ಹಿಂದೂಗಳ ಒಂದು ಪಂಗಡವೆಂದು ತಿಳಿಸಿದ್ದರು.
     ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಮೊದಲು ಕೇಳಿಬಂದಿದ್ದು 1940ರಲ್ಲಿ. ಇದರ ಹಿಂದಿದ್ದವರು ಚನ್ನಪ್ಪ ಉತ್ತಂಗಿ ಎಂಬ ಕ್ರಿಶ್ಚಿಯನ್ ಮತಾಂತರಿತ ಬುದ್ಧಿಜೀವಿ ಮತ್ತು ಬಾಸೆಲ್ ಮಿಷನ್. ಚನ್ನಪ್ಪ ಉತ್ತಂಗಿ ಬರೆದಿದ್ದ ಪುಸ್ತಕ 'ಬೆತ್ಕೆಹೆಮ್ಸ್ ಅಪೀಲ್ ಟು ಬನಾರಸ್'. ಬನಾರಸ್ ಹಿಂದೂಗಳು ಜೀಸಸ್ ಅನ್ನು ಏಕೆ ಒಪ್ಪಿಕೊಳ್ಳಬೇಕು ಮತ್ತು ಅದರ ಅನಿವಾರ್ಯತೆ ಬಗ್ಗೆ ಬರೆದಿದ್ದ ಅವನ ಮತ್ತು ಬಾಸೆಲ್ ಮಿಷನ್ನಿನ ನೇತೃತ್ವದಲ್ಲಿ ಆಗ ಹೋರಾಟ ನಡೆದಿತ್ತು. ಇವರ ಮೇಲ್ಪಂಕ್ತಿ ಅನುಸರಿಸಿಕೊಂಡು ಬಂದವರು ಹಿರೇಮಲ್ಲೂರು ಈಶ್ವರಣ್ಣ ಮತ್ತು ಹತ್ಯೆಯಾದ ಪ್ರೊ. ಎಂ.ಎಂ. ಕಲಬುರ್ಗಿ. ಇವರುಗಳು ಬಹಳ ಶ್ರಮಪಟ್ಟು ಪ್ರತ್ಯೇಕ ಧರ್ಮದ ಗೀಳನ್ನು ಇಂದಿನವರಿಗೂ ಹತ್ತಿಸಿದರು. ಪ್ರತ್ಯೇಕತೆಗಾಗಿ ಪ್ರಬಂಧಗಳ ಮಂಡನೆ ಮಾಡಿದ ಇಂತಹ ಇತರ ಹಲವು ಮಹನೀಯರುಗಳಿಗೂ ಚರ್ಚುಗಳಿಗೂ ಇರುವ ಸಂಬಂಧದ ಬಗ್ಗೆ ತನಿಖೆ ನಡೆದರೆ ಜನರಿಗೆ ಈ ಕೂಗಿನ ಹಿಂದಿರುವ ಕರಾಳ ಹಸ್ತದ ದರ್ಶನವಾಗುತ್ತದೆ. ಲಿಂಗಾಯತರನ್ನು ವೀರಶೈವರಿಂದ ಮತ್ತು ಹಿಂದೂಧರ್ಮದಿಂದ ಬೇರ್ಪಡಿಸುವ ಹುನ್ನಾರದ ಲಾಭವನ್ನು ಚುನಾವಣೆಯ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. "ನಾನೇನು ಸಮಾಜ ಒಡೆಯುತ್ತಿಲ್ಲ, ಅವರೇ ಕೇಳುತ್ತಿದ್ದಾರೆ, ಒಪ್ಪಿದ್ದೇನೆ ಅಷ್ಟೆ" ಎಂಬ ಮುಖ್ಯಮಂತ್ರಿಯವರ ಮಾತಿನಲ್ಲಿ ಸತ್ಯವೂ ಇದೆ, ಸುಳ್ಳೂ ಇದೆ. ಅಲ್ಪ ಸಂಖ್ಯಾತರೆಂಬ ಘೋಷಣೆಯ ಲಾಭ ಆ ಸಮುದಾಯದ ಸಾಮಾನ್ಯರಿಗೆ ತಲುಪುವ ಬಗ್ಗೆಯೂ ಅನುಮಾನವಿದೆ. ಲಿಂಗಾಯತ ಅಲ್ಪಸಂಖ್ಯಾತ ಸಮುದಾಯಕ್ಕೆ ಮುಸ್ಲಿಮ್ ಮತ್ತು ಕ್ರಿಶ್ಚಿಯನರಿಗೆ ಸಿಗುತ್ತಿರುವ ಸೌಲಭ್ಯಗಳು ಸಿಗಲಾರದೆಂಬ ಸುಳಿವನ್ನೂ ನೀಡಿದ್ದಾರೆ. ಲಿಂಗಾಯತ ಸ್ವಾಮೀಜಿಗಳ ಮತ್ತು ನಾಯಕರುಗಳ ಒಡೆತನದ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗಬಹುದು. ಅಂತಹ ಕೆಲವರ ಹಿತ ಮತ್ತು ಲಾಭದ ಸಲುವಾಗಿ ಇಡೀ ಸಮುದಾಯದ ಹಿತವನ್ನು ಕಡೆಗಣಿಸುವುದು ಸರಿಯಾಗಲಾರದು. ಲಿಂಗಾಯತರು ಅಲ್ಪಸಂಖ್ಯಾತರ ಹೆಸರಿನಲ್ಲಿ ಪ್ರತ್ಯೇಕರಾದರೆ ಅದರಿಂದ ಮುಂದಿನ ದಿನಗಳಲ್ಲಿ ಹೊಂಚು ಹಾಕುತ್ತಿರುವ ಕ್ರಿಶ್ಚಿಯನ್ ಮಿಷನರಿಗಳು ಮತ್ತು ಮುಸ್ಲಿಮ್ ಧುರೀಣರುಗಳಿಗೆ ಲಾಭವಾಗಲಿದೆ ಎಂಬ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ. 
     ಲಿಂಗಾಯತರು ಮತ್ತು ವೀರಶೈವರು ಇಬ್ಬರೂ ಒಂದೇ ಸಮುದಾಯ ಎಂಬ ಕೂಗೂ ಬಲವಾಗಿದೆ. ಲಿಂಗಾಯತರು ಮತ್ತು ವೀರಶೈವರ ನಡುವೆ ವೈವಾಹಿಕ ಸಂಬಂಧಗಳೂ ಆಗಿವೆ. ಲಿಂಗಾಯತ-ವೀರಶೈವೇತರರ ದೃಷ್ಟಿಯಲ್ಲಿ ಅವರನ್ನು ಬೇರೆ ಬೇರೆ ಎಂದು ಗುರುತಿಸುವವರ ಸಂಖ್ಯೆ ಬಹಳ ಕಡಿಮೆ. ಈಗ ವಿವಾದ ಪ್ರಾರಂಭವಾಗಿರುವುದರಿಂದ ಲಿಂಗಾಯತರು ಮತ್ತು ವೀರಶೈವರು ಹೇಗೆ ಬೇರೆ ಬೇರೆ ಎಂಬ ಬಗ್ಗೆ ವಾದಗಳನ್ನು ಮಂಡಿಸಲಾಗುತ್ತಿದೆ. ವೀರಶೈವ-ಲಿಂಗಾಯತರು ಬಹಳ ಹಿಂದಿನಿಂದಲೂ ಹಿಂದೂ ಧರ್ಮಕ್ಕೆ ಸೇರಿದವರೆಂದೇ ಗುರುತಿಸಲಾಗುತ್ತಿದೆ. ಅನೇಕ ಹಿಂದೂ ಸಂಘಟನೆಗಳಲ್ಲಿ ಈ ಸಮುದಾಯದ ಸಾವಿರಾರು ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ನಾಯಕರುಗಳಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಾನು ಹಿಂದೂ-ವೀರಶೈವ-ಲಿಂಗಾಯತ ಎಂದು ಘೋಷಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಗಣನೀಯವಾಗಿದೆ. ಸೀಮಿತ ಅಂಕಣ ಲೇಖನವಾದುದರಿಂದ ಮತ್ತು ಈ ವಿಷಯ ಇಲ್ಲಿಗೇ ನಿಲ್ಲುವಂತಹದಲ್ಲವಾದುದರಿಂದ ಪೂರಕವಾದ ಅನೇಕ ವಾದ-ವಿವಾದಗಳು ಮುಂದೆಯೂ ನಿರೀಕ್ಷಿತವಾದುದರಿಂದ ಇದನ್ನು ಸಮಾಪ್ತಗೊಳಿಸುವ ಮುನ್ನ ಒಂದು ಮಾತು: "ಬಸವಣ್ಣನವರು ಹೊಸ ಧರ್ಮವನ್ನು ಆರಂಭಿಸಿದವರಲ್ಲ. ಅವರೊಬ್ಬ ಸಮಾಜ ಸುಧಾರಕರು. ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ತರವಲ್ಲ. ಎಲ್ಲರನ್ನೂ ಒಗ್ಗೂಡಿಸಲು ಶ್ರಮಿಸಿದ ಮಹನೀಯನ ಹೆಸರಿನಲ್ಲೇ ಸಮುದಾಯವನ್ನು ಸಂಕುಚಿತಗೊಳಿಸುವ ಪ್ರಯತ್ನ ಸಮಾಜದ ದೃಷ್ಟಿಯಿಂದ ಒಳಿತಾದುದಲ್ಲ. ಸಮಾಜವನ್ನು ಕಟ್ಟುವುದು ಕಷ್ಟ, ಒಡೆಯುವುದು ಸುಲಭ." 
ಓಂ ನಮ: ಶಂಭವಾಯ ಚ ಮಯೋಭವಾಯ ಚ ನಮ: ಶಂಕರಾಯ ಚ  ಮಯಸ್ಕರಾಯ ಚ | 
ನಮ: ಶಿವಾಯ ಚ ಶಿವತರಾಯ ಚ ||  
[ಯಜು.೧೬.೪೧]
-ಕ.ವೆಂ.ನಾಗರಾಜ್.