ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಫೆಬ್ರವರಿ 11, 2011

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -4 ಮತ್ತು 5

ಭಗವಂತನ ಪ್ರೇರಣೆಯಂತೆಯೇ ಜೀವಾತ್ಮರು ಬೇರೆ ಬೇರೆ ಶರೀರಗಳಲ್ಲಿ ಜನ್ಮವೆತ್ತುತ್ತಾರೆ. ಕೇಳಿರಿ:-
ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್ |
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ || (ಋಕ್. ೧.೧೬೪.೩೦.)
     [ತುರಗಾತು] ವೇಗಶಾಲಿಯೂ [ಧೃವಮ್] ಧೃಢವೂ ಆದ ಪರಮಾತ್ಮ ತತ್ವವು, [ಅನತ್] ಎಲ್ಲರಿಗೂ ಜೀವದಾನ ಮಾಡುತ್ತಿದೆ. [ಶಯೇ] ಅಂತಃಸ್ಥಿತವಾಗಿದೆ. [ಜೀವಮ್] ಜೀವಾತ್ಮನನ್ನು [ಆಪಸ್ತ್ಯಾನಾಂ ಮಧ್ಯೇ] ಲೋಕಲೋಕಾಂತರಗಳ ನಡುವೆ [ಏಜತ್] ಪ್ರವೇಶಗೊಳಿಸುತ್ತದೆ. [ಮೃತಸ್ಯ ಜೀವಃ] ಮೃತನಾದವನ ಜೀವಾತ್ಮವು [ಅಮರ್ತ್ಯಃ] ಸ್ವತಃ ಅಮರವಾಗಿದ್ದು [ಮರ್ತ್ಯೇನಾ ಸಂಯೋನಿಃ] ಮೃತ್ಯುವಿಗೀಡಾಗುವ ಶರೀರದೊಂದಿಗೆ ಸಹಜೀವಿಯಾಗಿ [ಸ್ವಧಾಭಿಃ] ತನಗೆ ಪ್ರಾರಬ್ಧ ರೂಪದಲ್ಲಿ ಲಭಿಸಿದ ಅನ್ನ-ಜಲಗಳೊಂದಿಗೆ, [ಚರತಿ] ಸಂಚರಿಸುತ್ತದೆ.
     ಇದು ವೇದೋಕ್ತವಾದ ಸತ್ಯ. ಇದೆಂದಿಗೂ ಸುಳ್ಳಾಗಲಾರದು. ಈ ರೀತಿ ಜನ್ಮವೆತ್ತಿ ಅದೆಷ್ಟು ಸಾರಿ ಜಗತ್ತಿಗೆ ಬರುತ್ತಾರೋ, ಅಮರರಾದ ಜೀವಾತ್ಮರು. ಋಗ್ವೇದದ ಈ ಮಂತ್ರವೂ ಮನನೀಯವೇ ಆಗಿದೆ.
ಅಪಶ್ಯಂ ಗೋಪಾಮನಿಪದ್ಯಮಾನಮಾ ಚ ಪರಾ ಪಥಿಭಿಶ್ಚರಂತಮ್ |
ಸ ಸಧ್ರೀಚೀಃ ಸ ವಿಷೂಚೀರ್ವಸಾನ ಆ ವರೀವರ್ತಿ ಭುವನೇಷ್ವಂತಃ || (ಋಕ್. ೧.೧೬೪.೩೧.)
     [ಆ ಚ ಪರಾ ಚ ಪಥಿಭಿಃ ಚರಂತಮ್] ಆ ಮಾರ್ಗ ಈ ಮಾರ್ಗಗಳಿಂದ ಸಂಚರಿಸುವ [ಆನಿಪದ್ಯಮಾನಮ್] ಅವಿನಾಶಿಯಾದ [ಗೋಪಾಮ್] ಇಂದ್ರಿಯಗಳ ಪಾಲಕನಾದ ಜೀವಾತ್ಮನನ್ನು [ಆಪಶ್ಯಮ್] ನಾನು ನೋಡುತ್ತಿದ್ದೇನೆ. [ಸಃ] ಅವನು [ಸಧ್ರೀಚೀಃ] ನೇರವಾಗಿ ನಿಂತು ನಡೆಯುವ ಶರೀರಗಳನ್ನೂ [ಸಃ[ ಅವನೇ [ವಿಷೂಚೀಃ] ತೆವಳಿಕೊಂಡು ಹೋಗುವ ಶರೀರಗಳನ್ನೂ [ವಸಾನಃ] ನೆಲೆಗೊಳಿಸುತ್ತಾ [ಭುವನೇಷು ಅಂತಃ] ಲೋಕಗಳ ಒಳಕ್ಕೆ [ಆ ಪರೀವರ್ತಿ] ಬಂದು ಹೋಗಿ ಮಾಡುತ್ತಿರುತ್ತಾನೆ.
     ಇದೀಗ ಸ್ಪಷ್ಟ ತತ್ತ್ವ ದರ್ಶನ. ಅಥರ್ವವೇದದ ಇನ್ನೆರಡು ಮಂತ್ರಗಳನ್ನು ಉದ್ಧರಿಸಿದರೆ ಜೀವಾತ್ಮನ ನಿಜವಾದ ಸ್ವರೂಪ ಪಾಠಕರ ಚಿತ್ತಭಿತ್ತಿಗಳ ಮೇಲೆ ಸ್ಫುಟವಾಗಿ ಅಂಕಿತವಾಗುತ್ತದೆ.
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ || (ಅಥರ್ವ.೧೦.೮.೨೭)
     ಓ ಜೀವಾತ್ಮನ್! [ತ್ವಂ ಸ್ತ್ರೀ] ನೀನು ಸ್ತ್ರೀಯಾಗಿದ್ದೀಯೆ. [ತ್ವಂ ಪುಮಾನ್ ಅಸಿ] ನೀನು ಪುರುಷನಾಗಿದ್ದೀಯೆ. [ತ್ವಂ ಕುಮಾರಃ] ನೀನು ಕುಮಾರನಾಗಿದ್ದೀಯೆ. [ಉತ ವಾ] ಮತ್ತು [ಕುಮಾರೀ] ಕುಮಾರಿಯಾಗಿದ್ದೀಯೆ. [ತ್ಮ್] ನೀನು [ಜೀರ್ಣಃ] ವೃದ್ಧನಾಗಿ [ದಂಡೇನ ವಂಚಸಿ] ಕೋಲನ್ನೂರಿ ತಡವರಿಸುತ್ತಾ ನಡೆಯುತ್ತೀಯೆ. [ತ್ವಮ್] ನೀನು [ಜಾತಃ] ಜನ್ಮವೆತ್ತಿ [ವಿಶ್ವತೋಮುಖಃ ಅಸಿ] ಎಲ್ಲೆಡೆಯೂ ಮುಖ ಮಾಡುತ್ತೀಯೆ.
     ಪರಮಾತ್ಮನೆಂತೋ ಜೀವಾತ್ಮನೂ ಅಂತೆಯೇ ಲಿಂಗರಹಿತನು. ಆದರೆ ಧರಿಸಿದ ಶರೀರದ ದೃಷ್ಟಿಯಿಂದ ಸ್ತ್ರೀ ಅಥವಾ ಪುರುಷ, ಕುಮಾರ ಅಥವಾ ಕುಮಾರೀ ಎನ್ನಿಸಿಕೊಳ್ಳುತ್ತಾನೆ.
ಉತೈಷಾಂ ವಿತೋತ ವಾ ಪುತ್ರ ಏಷಾಮುತೈಷಾಂ ಜ್ಯೇಷ್ಠ ಉತ ವಾ ಕನಿಷ್ಠಃ |
ಏಕೋ ಹ ದೇವೋ ಮನಸಿ ಪ್ರವಿಷ್ಟಃ ಪ್ರಥಮೋ ಜಾತಃ ಸ ಉ ಗರ್ಭೇ ಅಂತಃ || (ಅಥರ್ವ.೧೦.೮.೨೮)
     [ಉತ] ಮತ್ತು [ಏಷಾಂ ಪಿತಾ] ಇವರ ತಂದೆ [ಉತ ವಾ] ಅಥವಾ [ಏಷಾಂ ಪುತ್ರಃ] ಇವರ ಮಗ [ಉತ] ಅಥವಾ [ಏಷಾಂ ಜ್ಯೇಷ್ಠಃ] ಇವರ ಅಣ್ಣ [ಉತ ವಾ] ಅಥವಾ [ಕನಿಷ್ಠಃ] ತಮ್ಮ [ಹ] ನಿಜವಾಗಿ [ಏಕ ದೇವಃ] ಒಬ್ಬನೇ ಜ್ಞಾನವಂತ ಚೇತನನು [ಮನಸಿ ಪ್ರವಿಷ್ಟಃ] ಮನಃಕಾಮನೆಯ ಒಳಹೊಕ್ಕಿದ್ದಾನೆ. [ಪ್ರಥಮಃ] ಆ ಶ್ರೇಷ್ಠ ಆತ್ಮನು [ಜಾತಃ] ಜನ್ಮವೆತ್ತಿದನು. [ಸ ಉ] ಅವನೇ ಮತ್ತೆ [ಗರ್ಭೇ ಅಂತಃ] ಗರ್ಭದಲ್ಲಿ ಪ್ರವೇಶ ಮಾಡಿದ್ದಾನೆ.
     ಪಾಠಕರಿಗೆ ಈಗ ಜೀವಾತ್ಮನ ವಿಷಯದಲ್ಲಿ ಒಂದು ಸ್ಪಷ್ಟ ಕಲ್ಪನೆ ಬಂದಿರಬಹುದು. ಹೀಗೆಯೇ ಜನ್ಮವೆತ್ತುತ್ತಾ, ಎತ್ತುತ್ತಾ ಕ್ರಮಕ್ರಮವಾಗಿ ವಿಕಾಸ ಹೊಂದಿ, ಪರಿಶುದ್ಧ ಧರ್ಮದ ಆಚರಣೆಯಿಂದ ವಿಶುದ್ಧ ಜ್ಞಾನ ಗಳಿಸಿ, ನಿಜವಾದ ಭಗವದುಪಾಸನೆ ಮಾಡಿ, ಸತ್ಕರ್ಮನಿಷ್ಠನಾಗಿ, ಪೂರ್ಣ ಪವಿತ್ರತೆಯನ್ನು ಗಳಿಸಿ, ಕೊನೆಗೆ ಮೋಕ್ಷ ಪಡೆಯುತ್ತಾನೆ. ಮೋಕ್ಷದ ಸ್ವರೂಪವೇನೆಂಬುದನ್ನು ಪಾಠಕರು ಮುಂದೆ ಓದುವರು. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯಾಂಶವಿದೆ. ಆ ದೇವಪುತ್ರನನ್ನು ನಂಬು, ಈ ದೇವದೂತನಿಗೆ ಶರಣಾಗು, ಈಮತಹ ಸಾಧು-ಸಂತರ ಸೇವೆ ಮಾಡು, ಅವರ ದಯೆಯಿಂದ, ಅವರ ಮಧ್ಯಸ್ತಿಕೆಯಿಂದ ದೇವರು ನಿನಗೆ ಮೋಕ್ಷ ನೀಡುವನು - ಈ ಮೊದಲಾದ ಅರ್ಥರಹಿತವಾದ, ಪಾಮರಕೋಟಿಯ ಕಣ್ಣಿಗೆ ಮಣ್ಣೆರಚುವ, ಆತ್ಮಘಾತುಕವಾದ ಟೊಳ್ಳು ಸಿದ್ಧಾಂತಗಳನ್ನು ವೇದಗಳು ಒಪ್ಪುವುದಿಲ್ಲ.
     ಭಗವಂತನು ನಮ್ಮೆಲ್ಲರ ತಂದೆ, ನಮ್ಮೆಲ್ಲರ ತಾಯಿಯೂ ಹೌದು. ಋಗ್ವೇದ ಹೇಳುತ್ತದೆ:
ತ್ವಂ ಹಿ ನಃ ಪಿತಾ ವಸೋ ತತ್ವಂ ಮಾತಾ ಶತಕ್ರತೋ ಬಭೂವಿಥ|
ಅಧಾ ತೇ ಸುಮ್ನಮೀಮಹೇ|| (ಋಕ್. ೮.೯೮.೧೧.)
     [ವಸೋ] ಸರ್ವಾಶ್ರಯನೇ! [ಶತಕ್ರತೋ] ನೂರಾರು ರಚನೆ ಮಾಡುವವನೇ! [ತ್ವಂ ಹಿ] ನೀನೇ [ನಃ ಪಿತಾ] ನಮ್ಮ ತಂದೆ, [ತ್ವಂ ಮಾತಾ] ನೀನೇ ತಾಯಿ, [ಬಭೂವಿಥ] ಆಗಿದ್ದೀಯೆ. [ಅಧಾ] ಈ ಅಧಿಕಾರದಿಂದ [ತೇ ಸುಮ್ನಮ್] ನಿನ್ನ ಸುಖ-ಶಾಂತಿಗಳನ್ನು [ಈಮಹೇ] ಕೋರುತ್ತೇವೆ.
ಇಷ್ಟು ಮಾತ್ರವಲ್ಲ, ಅದೇ ಪ್ರಭುವಿನಲ್ಲಿ ಈ ರೀತಿ ಬೇಡಿಕೆಯನ್ನೂ ಮಂಡಿಸುತ್ತೇವೆ:
ಸ ನಃ ವಿತೇವ ಸೂನವೇsssಗ್ನೇ ಸೂಪಾಯನೊ ಭವ|
ಸಚಸ್ವಾ ನಃ ಸ್ವಸ್ತಯೇ|| (ಋಕ್. ೧.೧.೯.)
     [ಅಗ್ನೇ] ಓ ತೇಜಸ್ವಿ ಪ್ರಭೋ, [ಸಃ] ಆ ನೀನು [ಪಿತಾ ಸೂನವೇ ಇವ] ತಂದೆಯು ತನ್ನ ಮಗನಿಗೆ ಸುಲಭವಾಗಿ ಸಿಕ್ಕುವಂತೆ [ನಃ] ನಮಗೆ [ಸು ಉಪಾಯನಃ ಭವ] ಸುಲಭವಾಗಿ ಲಭಿಸುವವನಾಗು. [ನಃ ಸ್ವಸ್ತಯೇ] ನಮ್ಮ ಆತ್ಮಕಲ್ಯಾಣಕ್ಕಾಗಿ [ಸಚಸ್ವ] ಪ್ರಾಪ್ತನಾಗು.
ನಮ್ಮ ತಂದೆಯಾದ, ಮಾತ್ರವಲ್ಲ, ತಾಯಿಯೂ ಆದ ಭಗವಂತನ ನಡುವೆ ನಿಲ್ಲುವುದಕ್ಕೆ ಯಾವ ಕಲ್ಪಿತ ಪ್ರಭುವಿನ ಏಕಮಾತ್ರ ಔರಸಪುತ್ರನಿಗೂ, ಯಾವ ದೇವಪ್ರೇಷಿತ ಸಂದೇಶವಾಹಕನಿಗೂ ಅಧಿಕಾರವಿಲ್ಲ, ಯಾವ ಧರ್ಮದ ಗುತ್ತಿಗೆದಾರನಿಗೂ ಇಲ್ಲ.
     ವೇದಗಳು ನೀಡುವ ಸಂದೇಶವೇ ಬೇರೆ, ಅದರ ವೈಭವವೇ ಒಂದು ಬಗೆ. ವೇದಗಳು ಬೇರೆಯವರ ಬೆನ್ನೇರಿ ಮೋಕ್ಷಕ್ಕೆ ಹೋಗುವ ಅಪಸಿದ್ಧಾಂತಕ್ಕೂ ಬೆಲೆ ಕೊಡುವುದಿಲ್ಲ. ಯಾವನೋ ಒಬ್ಬ ಎಲ್ಲರ ಪಾಪವನ್ನೂ ತಾನು ಹೊತ್ತು ಎಲ್ಲರಿಗೂ ಮುಕ್ತಿಗೆ ದಾರಿ ಮಾಡಿಕೊಡುತ್ತಾನೆ ಎಂಬ ಅರ್ಥರಹಿತವಾದ, ಬುಡವಿಲ್ಲದ ಕುರುಡುನಂಬಿಕೆಗೂ, ವೇದದ ಬೌದ್ಧಿಕ ಹಾಗೂ ವೈಜ್ಞಾನಿಕ ಸತ್ಯಸಿದ್ಧಾಂತಕ್ಕೂ ಏನೇನೂ ಸಂಬಂಧವಿಲ್ಲ. ವೇದಗಳು ಕಲಿಸುವುದು ಆತ್ಮಾವಲಂಬನೆಯ ಭವ್ಯಪಾಠವನ್ನು. ಪ್ತಿಯೊಬ್ಬ ಜೀವಾತ್ಮನೂ ತನ್ನ ಪತನ ಅಥವಾ ಉತ್ಥಾನಕ್ಕೆ ತಾನೇ ಕಾರಣ. ಕೇಳಿರಿ;-
ಸ್ವಯಂ ವಾಜಿಸ್ವನ್ವಂ ಕಲ್ಪಯಸ್ವ ಸ್ವಯಂ ಯಜಸ್ವ|
ಸ್ವಯಂ ಜುಷಸ್ವ ಮಹಿಮಾ ತೇsನ್ಯೇನ ನ ಸನ್ನಶೇ|| (ಯಜು. ೨೩.೧೫.)
     [ವಾಜಿನ್] ಓ ಬಲಶಾಲಿ, ಅನ್ನವಾನ್, ಜ್ಞಾನವಾನ್ ಜೀವಾತ್ಮ! [ಸ್ವಯಂ ತನ್ವಂ ಕಲ್ಪಯಸ್ವ] ಸ್ವತಃ ಶರೀರಧಾರ್ಢ್ಯವನ್ನು ಸಾಧಿಸಿಕೋ. [ಸ್ವಯಂ ಯಜಸ್ವ] ಸ್ವತಃ ಸತ್ಕರ್ಮ ಮಾಡು. [ಸ್ವಯಂ ಜುಷಸ್ವ] ಸ್ವತಃ ಸಂತೋಷಪಡು. [ತೇ ಮಹಿಮಾ] ನಿನ್ನ ಮಾಹಾತ್ಮ್ಯ [ಅನ್ಯೇನ ನ ಸನ್ನಶೇ] ಬೇರೆಯವರಿಂದ ಸಿದ್ಧಿಸದು.
ಸತ್ಯವಾದ ಮಾತು. ಬೇರೆಯವರ ಪುಣ್ಯವನ್ನು ದೋಚಿಕೊಂಡು ತಾನು ಸ್ವರ್ಗ ಅಥವಾ ಮೋಕ್ಷಕ್ಕೆ ಹೋಗಲು ಮೂರು ಕಾಲಕ್ಕೂ ಸಾಧ್ಯವಿಲ್ಲ. ಎಲ್ಲರೂ ಪ್ರತಿಯೊಂದು ಕ್ಷಣದಲ್ಲಿಯೂ ನೆನಪಿಡಲೇಬೇಕಾದ ಅಂಶವೆಂದರೆ ಪ್ರತಿಯೊಬ್ಬ ಜೀವಾತ್ಮನೂ ತನ್ನ ಕರ್ಮಕ್ಕೆ -ಅದು ಪುಣ್ಯವಾಗಿರಲಿ, ಪಾಪವಾಗಿರಲಿ- ತಾನೇ ಹೊಣೆಗಾರ. ಉಚ್ಛೃಂಖಲ ಹಾಗೂ ಹಿಂಸಾಮಯ ಜೀವನ ಸಾಗಿಸುತ್ತಾ. ನಾನು ಈ ದಿವ್ಯ ಪುರುಷನನ್ನು ನಂಬಿದ್ದೇನೆ, ಆದುದರಿಂದ ಮುಕ್ತಿ ನನಗೆ ಕಟ್ಟಿಟ್ಟ ಬುತ್ತಿ ಎಂದು ಯಾರೂ ಹೇಳುವಂತಿಲ್ಲ.
-ಪಂ. ಸುಧಾಕರ ಚತುರ್ವೇದಿ.