ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಮಾರ್ಚ್ 25, 2018

ಇಂದು ಪಂ. ಸುಧಾಕರ ಚತುರ್ವೇದಿಯವರ 121ನೆಯ ವರ್ಷದ ಜನ್ಮದಿನ

     

     ಇಂದು ಪಂ. ಸುಧಾಕರ ಚತುರ್ವೇದಿಯವರ 121ನೆಯ ವರ್ಷದ ಜನ್ಮದಿನ. ರಾಮನವಮಿಯಂದೇ ಜನಿಸಿದ ಈ ಪ್ರಖರ ಸತ್ಯವಾದಿಯ ಮಾರ್ಗದರ್ಶನ ನಮಗೆ ಸದಾ ಮುಂದುವರೆಯತ್ತಿರಲಿ. ಅವರ ಕುರಿತ ಕೆಲವು ಮಾಹಿತಿಗಳ ಸ್ಮರಣೆ ಮಾಡೋಣ.
13ನೆಯ ವಯಸ್ಸಿನಲ್ಲಿಯೇ ಹರಿದ್ವಾರದ ಸಮೀಪದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು.
ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾದವರು, ಸ್ವಾಮಿ  ಶ್ರದ್ಧಾನಂದರ ಶಿಷ್ಯರು.
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಕೊಂಡು 15 ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸ ಕಂಡಿದ್ದವರು. ಮಹಾತ್ಮ ಗಾಂಧಿಯವರ ಒಡನಾಡಿ. 
ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದವರು. ಹತ್ಯೆಗೊಳಗಾದವರ ಸಾಮೂಹಿಕ ಅಂತ್ಯ ಸಂಸ್ಕಾರ ಕಾರ್ಯಕ್ಕೆ ಗಾಂಧೀಜಿಯವರ ಸೂಚನೆಯಂತೆ ಕೈಜೋಡಿಸಿದವರು.
ನಾಲ್ಕೂ ವೇದಗಳಲ್ಲಿ ಪಾರಂಗತರಾಗಿ ಚತುರ್ವೇದಿ ಎಂಬ ಹೆಸರು ಪಡೆದವರು.
* ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದ್ದವರು.
* ಸಾವಿರಾರು ಮತಾಂತರಿತರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಿದ್ದವರು.
* ನಾಲ್ಕೂ ವೇದಗಳಿಗೆ ಮಹರ್ಷಿ ದಯಾನಂದ ಸರಸ್ವತಿಯವರು ಬರೆದ ಭಾಷ್ಯವನ್ನು ಕನ್ನಡದಲ್ಲಿ 20 ಸಂಪುಟದಲ್ಲಿ ಹೊರತಂದ ಕಾರ್ಯದ ಪ್ರಧಾನ ಸಂಪಾದಕರು. ಇದು ಜ್ಞಾನ ಸಂಪತ್ತಿಗೆ ಅಮೂಲ್ಯ ಕಾಣಿಕೆಯಾಗಿದೆ.
* ಅನೇಕ ಪುಸ್ತಕಗಳ ಮೂಲಕ ವೇದದ ಮಹತ್ವವನ್ನು ಸಾರುವ ಕೆಲಸವನ್ನು ಅವಿರತವಾಗಿ ಮಾಡಿದವರು. ವೈಚಾರಿಕತೆಗೆ ಪ್ರಾಧಾನ್ಯ ನೀಡಲು ಉತ್ತೇಜಿಸಿದವರು.
* ಇಂದಿಗೂ ಸಂದೇಹಗಳಿಗೆ ಪರಿಹಾರ ಅರಸಿ ಬರುವವರಿಗೆ ಮಾರ್ಗದರ್ಶನ ನೀಡುತ್ತಿರುವವರು. ಸಾಪ್ತಾಹಿಕ ಸತ್ಸಂಗದಲ್ಲಿ ಅಮೂಲ್ಯ ಉಪದೇಶ ನೀಡುತ್ತಿರುವವರು.
     ವಯಸ್ಸಿನ ಕುರಿತು ಅಧಿಕೃತ ದಾಖಲೆ ಇಲ್ಲವೆಂಬ ಕಾರಣಕ್ಕೆ ಈ ದೀರ್ಘಾಯಸ್ಸಿನ ಶತಾಯುಷಿ ದಾಖಲೆಗಳ ಕಡತಕ್ಕೆ ಸೇರಿಲ್ಲದಿರುವುದು ವಿಷಾದದ ಸಂಗತಿ. ಇವರಿಗೆ ಈ ಕುರಿತು ಆಸಕ್ತಿಯೂ ಇಲ್ಲ. ನನ್ನ ಪಾಲಿಗೆ ಇವರು ನನ್ನ ಮಾನಸಿಕ ಗುರುಗಳು. ಗುರುಗಳಿಗೆ ನಮಿಸುತ್ತಾ ಅವರು ನಮ್ಮೆಲ್ಲರಿಗೂ ಇದೇ ರೀತಿ ಮಾರ್ಗದರ್ಶನ ಮಾಡುತ್ತಾ ಚಿರಕಾಲ ಬಾಳಲಿ ಎಂದು ಪ್ರಾರ್ಥಿಸುವೆ.
-ಕ.ವೆಂ.ನಾಗರಾಜ್. 

ಮಂಗಳವಾರ, ಮಾರ್ಚ್ 13, 2018

ಆತ್ಮೋನ್ನತಿ


     'ನಾನು ಅಂದರೆ ನನ್ನ ಶರೀರವಲ್ಲ, ಶರೀರದೊಳಗೆ ಇರುವ ಪ್ರಾಣ ಅಥವ ಜೀವಾತ್ಮ' ಎಂಬ ವಿಚಾರದಲ್ಲಿ ಹಿಂದೆ ಚರ್ಚಿಸಿದ್ದೆವು. ಸನಾತನ ಧರ್ಮದ ಪ್ರಕಾರ ಜೀವಾತ್ಮಕ್ಕೆ ಸಾವಿಲ್ಲ, ಆದಿಯಿಲ್ಲ, ಅಂತ್ಯವೂ ಇಲ್ಲ. ಆದರೆ ಅಂತಹ ಅನಾದಿ, ಅನಂತವಾದ ಆತ್ಮ ಆದಿ ಮತ್ತು ಅಂತ್ಯವಿರುವ ಶರೀರದ ಆಶ್ರಯ ಏಕೆ ಪಡೆಯಬೇಕು? ಕರ್ಮ ಸಿದ್ಧಾಂತ, ಪುನರ್ಜನ್ಮ ಸಿದ್ಧಾಂತ, ಹುಟ್ಟು-ಸಾವುಗಳ ಚಕ್ರ, ವಿವಿಧ ಜೀವರಾಶಿಗಳು, ಇತ್ಯಾದಿಗಳ ಕುರಿತು ಸೀಮಿತ ಜ್ಞಾನಶಕ್ತಿಯ ಮನುಷ್ಯ ಹಲವಾರು ರೀತಿಯ ಚಿಂತನೆ, ಸಿದ್ಧಾಂತಗಳನ್ನು ಮುಂದಿಡುತ್ತಲೇ ಇದ್ದಾನೆ, ಚರ್ಚಿಸುತ್ತಲೇ ಇರುತ್ತಾನೆ. ಹಲವಾರು ಧರ್ಮಗ್ರಂಥಗಳು ಹಲವು ರೀತಿಯ ವಿಚಾರಗಳನ್ನು ಹೇಳುತ್ತವೆ. ಯಾವ ವಿಚಾರ ಸರಿ, ಯಾವುದು ತಪ್ಪು ಎಂಬುದನ್ನು ವಿಮರ್ಶೆ ಮಾಡುವವರು, ನಿರ್ಧರಿಸುವವರು ಯಾರು? ಅತ್ಯಂತ ಪ್ರಾಚೀನವಾದ ವೇದಮಂತ್ರಗಳು ಈ ಕುರಿತು ಏನು ಹೇಳಿವೆ? ಒಂದು ಮಂತ್ರ ಹೇಳುತ್ತದೆ: 
ಅಯಂ ಹೋತಾ ಪ್ರಥಮಃ ಪಶ್ಯತೇಮಮಿದಂ ಜ್ಯೋತಿರಮೃತಂ ಮರ್ತ್ಯೇಷು|
ಅಯಂ ಸ ಜಜ್ಞೇ ಧ್ರುವ ಆ ನಿಷತ್ತೋ ಮರ್ತ್ಯಸ್ತನ್ವಾ  ವರ್ಧಮಾನಃ|| (ಋಕ್. ೬.೯.೪)
     ಅರ್ಥ: ಈ ಜೀವಾತ್ಮನು ಮೊದಲನೆಯ ಆದಾನ-ಪ್ರದಾನಕರ್ತನು. ಇವನನ್ನು ನೋಡಿರಿ. ಮೃತ್ಯುವಿಗೀಡಾಗುವ ಭೌತಿಕ ಶರೀರಗಳಲ್ಲಿ ಇದು ಅಮರ ಜ್ಯೋತಿಯಾಗಿದೆ. ಇವನು ಆ ಶಾಶ್ವತನಾದ ಆತ್ಮನು. ಅಮರನಾದ ಆ ಆತ್ಮನು ಜಗತ್ತಿನಲ್ಲಿ ಕುಳಿತು ದೇಹದಿಂದ ವೃದ್ಧಿ ಹೊಂದುತ್ತಾ ಪ್ರಕಟನಾಗುತ್ತಾನೆ.
     ಈ ಮಂತ್ರದ ಪ್ರಕಾರ ನಾಶವಾಗುವ ಭೌತಿಕ ಶರೀರದ ಚಟುವಟಿಕೆಗಳಿಗೆ ಕಾರಣವಾದ ಜೀವಾತ್ಮ ಸ್ವತಃ ನಾಶ ಹೊಂದದೇ ಇರುವಂತಹುದಾಗಿದ್ದು, ಶರೀರದ ಬೆಳವಣಿಗೆಯೊಂದಿಗೆ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುತ್ತದೆ. ಇಲ್ಲಿ ಎರಡು ಅಂಶಗಳು ಧ್ವನಿಸುತ್ತವೆ. ಮೊದಲನೆಯದು, ಜೀವಾತ್ಮ ತನ್ನ ಇರುವನ್ನು ತನ್ನಷ್ಟಕ್ಕೆ ತಾನೇ ತೋರಿಸಿಕೊಳ್ಳಲು ಆಗದು. ಇನ್ನೊಂದು, ಅಸ್ತಿತ್ವವನ್ನು ತೋರಿಸಿಕೊಳ್ಳಲು ಶರೀರವೆಂಬ ಮಾಧ್ಯಮ ಅದಕ್ಕೆ ಅಗತ್ಯವಿದೆ. ಶರೀರದಲ್ಲಿ ಜೀವಾತ್ಮವಿಲ್ಲದಿದ್ದರೆ ಶರೀರಕ್ಕೆ ಅರ್ಥವೇ ಇಲ್ಲ, ಅದೊಂದು ಕೇವಲ ಜಡವಸ್ತುವಾಗುತ್ತದೆ. ಅದೇ ರೀತಿ ಶರೀರವಿರದಿದ್ದರೆ ಜೀವಾತ್ಮ ತನ್ನ ಇರುವನ್ನು ತೋರಿಸಿಕೊಳ್ಳಲಾಗುವುದಿಲ್ಲ, ಅರ್ಥಾತ್ ಚಟುವಟಿಕೆಗಳನ್ನು ಮಾಡಲು ಸಮರ್ಥವಿರುವುದಿಲ್ಲ. ಶರೀರವೆಂಬ ಮಾಧ್ಯಮದ ಮೂಲಕ ಮಾಡುವ ಚಟುವಟಿಕೆಗಳ ಮೂಲಕ ಮಾತ್ರ ಮೋಕ್ಷದೆಡೆಗೆ, ಆತ್ಮೋನ್ನತಿಯ ಕಡೆಗೆ ಹೋಗಬಲ್ಲದು. 
ಕಮರಿ ಹೋಗುವ ತನುವ ಕಸುವು ತಾನಾಗಿಹನು
ಜೀವಜ್ಯೋತಿಯೆ ಅವನು ಅಮರ ಶಕ್ತಿಯೆ ಅವನು |
ದೇಹದೊಂದಿಗೆ ಬೆಳೆದು ತನ್ನಿರುವ ತೋರುವನು
ಅವನಿಲ್ಲದಿರುವಲ್ಲಿ ಬೆಳಕೆಲ್ಲಿ ಮೂಢ ||
     ಶರೀರದ ಅಗತ್ಯವಿರುವ ಜೀವಾತ್ಮ ಶರೀರದಲ್ಲಿದ್ದುಕೊಂಡು ನಡೆಸುವ ಚಟುವಟಿಕೆಯಾದರೂ ಎಂತಹದು? ಈ ಮಂತ್ರ ಹೇಳುತ್ತದೆ:
ದಂಡಾ ಇವೇದ್ ಗೋ ಅಜನಾಸ ಆಸನ್ ಪರಿಚ್ಛಿನ್ನಾ ಭರತಾ ಅರ್ಭಕಾಸಃ| 
ಅಭವಚ್ಛ ಪುರ ಏತಾ ವಸಿಷ್ಠ ಆದಿತ್ ತೃತ್ಸೂನಾಂ ವಿಶೋ ಅಪ್ರಥಂತ|| (ಋಕ್. ೭.೩೩.೬)
     ಅರ್ಥ: ಪರಿಚ್ಛಿನ್ನ, ಶರೀರಧಾರಿಗಳೂ, ಅಣುಪ್ರಮಾಣರೂ ಆದ ಜೀವಾತ್ಮರು, ಗೋವುಗಳನ್ನು ಮುನ್ನಡೆಸುವ ದಂಡಗಳಂತೆ ಇಂದ್ರಿಯಗಳು ಮತ್ತು ವಾಣಿಯನ್ನು ಸಂಚಾಲನಗೊಳಿಸುವವರಾಗಿದ್ದಾರೆ. ಸರ್ವಶ್ರೇಷ್ಠ ಆಶ್ರಯದಾತೃವಾದ ಭಗವಂತ ಇವರ ನಾಯಕನಾಗಿದ್ದಾನೆ. ಅನಂತರವೇ ತೃಪ್ತಿಯನ್ನರಸುವ, ತೃಷಿತರಾದ ಜೀವಾತ್ಮರ ಮಕ್ಕಳು ವಿಕಸಿತರಾಗುತ್ತಾರೆ.
     ಶರೀರವನ್ನು ಆಶ್ರಯಿಸಿರುವ ಜೀವಾತ್ಮ ಶರೀರದ ಇಂದ್ರಿಯಗಳನ್ನು ಮತ್ತು ಆಡುವ ಮಾತುಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಎಲ್ಲಾ ರೀತಿಯ ಚಟುವಟಿಕೆಗಳಿಗೆ ಆಶ್ರಯದಾತನಾದ ಪರಮಾತ್ಮ ಜೀವಾತ್ಮರಿಗೂ ನಾಯಕ. ಜೀವಿಗಳು ಜೀವಾತ್ಮರ ಕಾರಣದಿಂದ ಮುಂದೆ ಬರುತ್ತಾರೆ. ಇಲ್ಲಿ ಕೊಟ್ಟಿರುವ ಒಂದು ಉಪಮೆ, ಗೋವುಗಳನ್ನು ನಿಯಂತ್ರಿಸುವ ದಂಡದ ರೀತಿಯಲ್ಲಿ ಜೀವಾತ್ಮ ಇಂದ್ರಿಯಗಳು ಮತ್ತು ವಾಣಿಯನ್ನು (ಮಾತುಗಳು) ನಿಯಂತ್ರಿಸುತ್ತದೆ ಎಂಬುದನ್ನು ಗಮನಿಸಬೇಕು. ಕೆಲವು ತುಂಟ ದನಕರುಗಳು ದಂಡದ ಭಯವನ್ನೂ ಮೀರಿ ಅತ್ತಿತ್ತ ಹಾರುವಂತೆ, ಒಳಗಿನ ಕರೆಯನ್ನು ಮೀರಿ ಅಪಮಾರ್ಗದಲ್ಲಿ ಹೋಗುವವರೂ ಇರುತ್ತಾರೆ. ಮನಸ್ಸು ಆತ್ಮವನ್ನು ಪ್ರತಿಫಲಿಸುವ ಕನ್ನಡಿಯಂತೆ ಹೊರತು ಅದೇ ಆತ್ಮವಲ್ಲ ಎಂದು ತಿಳಿದವರು ಹೇಳುತ್ತಾರೆ. ಅದೇನೇ ಇರಲಿ, ಒಂದಂತೂ ನಮ್ಮ ಅನುಭವಕ್ಕೆ ಬಂದಿರಲು ಸಾಧ್ಯವಿದೆ. ಅದೇನೆಂದರೆ, ಯಾವುದಾದರೂ ಕೆಲಸ ಮಾಡುವಾಗ, ಅದು ಸರಿಯಲ್ಲ ಎಂದು ಒಳಮನಸ್ಸು ಹೇಳುತ್ತಿದ್ದರೆ, ಅಂತಹ ಕೆಲಸ ಮಾಡುವಾಗ ಯೋಚಿಸುವುದು ಒಳಿತು. ಸರಿಯಲ್ಲ  ಎಂದು ಗೊತ್ತಿದ್ದರೂ, ಮಾಡು, ಪರವಾಗಿಲ್ಲ ಎಂದು ಪ್ರಚೋದಿಸುವುದೂ ಮನಸ್ಸೇ ಎಂಬುದು ವಿಚಿತ್ರ. ಮಾಡಿದ ಮೇಲೆ, ಮಾಡಬಾರದಿತ್ತು ಎಂದು ಚುಚ್ಚುವುದೂ ಅದೇ ಮನಸ್ಸೇ! ಎಂತಹ ಚಂಚಲತೆ! ಆತ್ಮೋನ್ನತಿ ಸಾಧಿಸಬೇಕೆಂದರೆ ಚಂಚಲ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಮಾರ್ಗ. ಹಾಗಾದರೆ, ಮನಸ್ಸನ್ನು ನಿಯಂತ್ರಿಸುವ ಆ ಶಕ್ತಿ ಯಾವುದು? ಅದೇ ಜೀವಾತ್ಮ. ಯಾರಾದರೂ ಏನಾದರೂ ಹೇಳಿದಾಗ, ಮಾಡಿದಾಗ ಅದು ಸರಿಯೇ ಎಂದು ಪ್ರಶ್ನಿಸುವಾಗ ಸಾಮಾನ್ಯವಾಗಿ ಬಳಸುವ ಮಾತೆಂದರೆ, ಇದಕ್ಕೆ ನಿನ್ನ ಅಂತರಾತ್ಮ ಒಪ್ಪುತ್ತಾ? ಅಥವ, ನಿನ್ನನ್ನು ನೀನೇ ಕೇಳಿಕೋ, ನೀನು ಮಾಡಿದ್ದು ಸರಿಯಾ? ಅಂತರಾತ್ಮದ ಕರೆಗೆ ಓಗೊಟ್ಟರೆ, ಆತ್ಮ ಉನ್ನತಿಯೆಡೆಗೆ ಸಾಗುತ್ತದೆ, ಇಲ್ಲದಿದ್ದರೆ ಕೆಳಗೆ ಜಾರುತ್ತದೆ, ಕ್ರಮಿಸಬೇಕಾದ ಹಾದಿ ಮತ್ತಷ್ಟು ದೂರವಾಗುತ್ತದೆ. 
ಮನೋವಾಗಿಂದ್ರಿಯಗಳನಂಕಿಸುವುದೊಲವಿನಲಿ
ದನಕರುಗಳನಂಕಿಸುವ ದಂಡಗಳ ತೆರದಿ |
ದೇಹದಲಿ ನೆಲೆಸಿಹುದು ಅಣುರೂಪಿ ಚೇತನ
ಇಂತಪ್ಪ ಚೇತನರ ಒಡೆಯನಾರೋ ಮೂಢ ||
     ಶರೀರ ಮಾಧ್ಯಮದ ಮೂಲಕ ಆತ್ಮೋನ್ನತಿ ಅಥವ ಮೋಕ್ಷದೆಡೆಗೆ ಸಾಗುವ ಜೀವಾತ್ಮ ಶರೀರದ ಮೂಲಕ ನಡೆಸುವ ಕರ್ಮಗಳ ಅನುಸಾರವಾಗಿ ಮುಂದಕ್ಕೋ ಅಥವ ಹಿಂದಕ್ಕೋ ಸಾಗುತ್ತಿರುತ್ತದೆ. ಸರ್ವರ ಹಿತ ಬಯಸುವ ಕರ್ಮಗಳು ಮುಂದಕ್ಕೆ ಕರೆದೊಯ್ಯುತ್ತವೆ. ಇತರರ ನೆಮ್ಮದಿ, ಶಾಂತಿ ಕದಡಿದರೆ ಕೆಳಕ್ಕೆ ಜಾರುತ್ತದೆ. ಜೀವಾತ್ಮ ಜೀರ್ಣವಾದ ಹಳೆಯ ಶರೀರ ತ್ಯಜಿಸುವ ಕ್ರಿಯೆ ಸಾವು ಮತ್ತು ಹೊಸ ಶರೀರ ಧರಿಸಿಬರುವ ಕ್ರಿಯೆ ಜನ್ಮ ಎನಿಸಿಕೊಳ್ಳುತ್ತದೆ. ಹುಟ್ಟು-ಸಾವು, ಪುನರ್ಜನ್ಮ, ಇತ್ಯಾದಿಗಳ ಬಗ್ಗೆ ಪ್ರಸ್ತಾಪಿಸಿದರೆ ಲೇಖನ ದೀರ್ಘವಾಗುವುದರಿಂದ, ಈ ವಿಷಯಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸೋಣ. ಜೀವಾತ್ಮ ಧರಿಸುವ ಹೊಸ ಶರೀರ ಹಿಂದಿನ ಶರೀರದಲ್ಲಿದ್ದಾಗ ನಡೆಸಿದ ಕರ್ಮಫಲಗಳ ಅನುಸಾರವಾಗಿ ಅದಕ್ಕೆ ತಕ್ಕಂತೆ ಇರುತ್ತದೆ ಎಂಬುದು ಸನಾತನ ಧರ್ಮದ ತಿರುಳು. ಜೀವಾತ್ಮದ ಪಯಣ ಹೇಗೆ ಸಾಗುತ್ತದೆ ಎಂದು ಈ ಮಂತ್ರ ವಿವರಿಸಿದೆ:
ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್| 
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ||  (ಋಕ್. ೧.೧೬೪.೩೦.)
     ಅರ್ಥ: ವೇಗಶಾಲಿಯೂ, ಧೃಢವೂ ಆದ ಪರಮಾತ್ಮ ತತ್ತ್ವ ಎಲ್ಲರಿಗೂ ಜೀವದಾನ ಮಾಡುತ್ತಿದೆ. ಅಂತಃಸ್ಥಿತವಾಗಿದ್ದು, ಜೀವಾತ್ಮನನ್ನು ಲೋಕ ಲೋಕಾಂತರಗಳ ನಡುವೆ ಪ್ರವೇಶಗೊಳಿಸುತ್ತದೆ. ಮೃತನಾದವನ ಜೀವಾತ್ಮವು ಸ್ವತಃ ಅಮರವಾಗಿದ್ದು ಮೃತ್ಯುವಿಗೀಡಾಗುವ ಶರೀರದೊಂದಿಗೆ ಸಹಜೀವಿಯಾಗಿ ತನಗೆ ಪ್ರಾರಬ್ಧ ರೂಪದಲ್ಲಿ ಲಭಿಸಿದ ಅನ್ನ-ಜಲಗಳೊಂದಿಗೆ, ಸಂಚರಿಸುತ್ತದೆ.
     ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬ ಪರಮಾತ್ಮನ ಪೂರ್ವನಿಶ್ಚಿತ ನ್ಯಾಯವಿಧಾನದ ಧೃಢತತ್ತ್ವಕ್ಕೆ ಅನುಗುಣವಾಗಿ ಜೀವಾತ್ಮನ ಹುಟ್ಟು-ಸಾವಿನ ಪಯಣ ಸಾಗುತ್ತಿರುತ್ತದೆ. ಹಿಂದಿನ ಕರ್ಮಫಲ ಸ್ವರೂಪವಾಗಿ ಅದಕ್ಕೆ ಅನುಗುಣವಾದ ಶರೀರದೊಂದಿಗೆ ಪಯಣ ಮುಂದುವರೆಯುತ್ತದೆ ಎಂದು ಸಾರುವ ಈ ಮಂತ್ರ ಕರ್ಮದ ಮಹತ್ವವನ್ನು ಸಾರುತ್ತಿದೆ. ವೇದಮಂತ್ರಗಳ ವಿಶೇಷವೆಂದರೆ ಅವು ಹೀಗೆಯೇ ಮಾಡಿ, ಹಾಗೆಯೇ ಮಾಡಿ ಎಂದು ಸೂಚಿಸುವುದಿಲ್ಲ. ಹೇಗಿರಬೇಕು, ಹೇಗೆ ನಡೆಯಬೇಕು ಎಂಬುದು ವಿವೇಚನಾಶಕ್ತಿ ಇರುವವರು ಸ್ವತಃ ನಿರ್ಧರಿಸಿಕೊಳ್ಳಬೇಕಾದುದು ಎಂಬ ಸಂದೇಶ ಸಾರುತ್ತಿವೆ.
ಸತ್ತವನ ಜೀವಕ್ಕೆ ಸಾವಿಲ್ಲ ನೋಡಾ
ಸಾಯಲಿಹ ಮತ್ತೊಂದು ದೇಹವನೆ ಸೇರುವುದು |
ಕರ್ಮವನೆ ಅನುಸರಿಸಿ ಅನ್ನ-ಜಲ ಕಾಣವುದು
ಜೀವದಾನಿಯ ಮರ್ಮವೆಂತಿಹುದೊ ಮೂಢ ||
-ಕ.ವೆಂ.ನಾಗರಾಜ್.

ಸೋಮವಾರ, ಮಾರ್ಚ್ 5, 2018

ನಿಗೂಢ ಜೀವ - (Mysterious Jeevatma)


     ತಿಳಿದವರು ಹೇಳುತ್ತಲೇ ಇರುತ್ತಾರೆ, 'ಅಯ್ಯೋ ಮೂಢ, ನೀನು ಯಾರು ಎಂದು ನಿನಗೆ ಗೊತ್ತೆ? ನೀನು ಅಂದರೆ ನಿನ್ನ ಶರೀರ ಅಲ್ಲ'. ಅರ್ಥವಾಗದಿದ್ದರೂ ತಲೆಯಾಡಿಸಿ ನಾವುಗಳೂ ಕೇಳುತ್ತಲೇ ಇರುತ್ತೇವೆ. ಆದರೆ ನಾವು ಯಾರು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅದು ಸುಲಭವಾಗಿ ಅರ್ಥವಾಗುವ ವಿಷಯವೂ ಅಲ್ಲ. ಕೆಲವೊಮ್ಮೆ ಅರ್ಥವಾದರೂ ಅದಕ್ಕೆ ಮಹತ್ವ ಕೊಡುವುದೇ ಇಲ್ಲ. ಜೀವ ಎಷ್ಟು ನಿಗೂಢವೋ ಅಷ್ಟೇ ನಿಗೂಢ ನಾವೂ ಸಹ! ಜೀವ ಅಂದರೆ ಏನೆಂದು ಅರ್ಥ ಮಾಡಿಕೊಳ್ಳುವುದು, ವಿವರಿಸುವುದು ಕಷ್ಟ. ನಮ್ಮ ದೈನಂದಿನ ಚಟುವಟಿಕೆಗಳನ್ನು ಜೀವ ಎಂದರೆ ತಪ್ಪುಗ್ರಹಿಕೆಯಾಗುತ್ತದೆ. ಆದರೆ, ಆ ಜೀವವಿಲ್ಲದಿದ್ದರೆ ಯಾವುದೇ ಚಟುವಟಿಕೆ ಸಾಧ್ಯವಿಲ್ಲ. ನಮ್ಮ ಕಣ್ಣುಗಳು ನೋಡುತ್ತವೆ, ಆದರೆ ಏನು ನೋಡಬೇಕು ಎಂದು ನಿರ್ಧರಿಸುವುದು ಕಣ್ಣುಗಳಲ್ಲ. ಕೈಕಾಲುಗಳು ಓಡಾಡುತ್ತವೆ, ಕೆಲಸ ಮಾಡುತ್ತವೆ, ತಾವಾಗಿ ಮಾಡುತ್ತವೆಯೇ? ನಾವು ನಿದ್ದೆ ಮಾಡಿದ್ದಾಗಲೂ, ಪ್ರಜ್ಞೆ ಇಲ್ಲದಿದ್ದಾಗಲೂ ಉಸಿರಾಡುತ್ತಿರುತ್ತೇವೆ. ಹಾಗಾದರೆ ಉಸಿರಾಡಿಸುತ್ತಿರುವವರು ಯಾರು? ಅದೇ ಜೀವ ಅಥವ ಪ್ರಾಣ!
     ನಮ್ಮ ಚಟುವಟಿಕೆಗಳನ್ನು ನಮ್ಮ ಮನಸ್ಸು ನಿಯಂತ್ರಿಸುತ್ತದೆ. 'ಹೀಗೆ ಮಾಡು, ಹಾಗೆ ಮಾಡು' ಎಂದೆಲ್ಲಾ ಹೇಳಿ ಮಾಡಿಸುವುದು ಮನಸ್ಸೇ ಆಗಿದೆ. ಹಾಗಾದರೆ, ನಾನು ಅಂದರೆ ನನ್ನ ಮನಸ್ಸೇ? ವ್ಯಾವಹಾರಿಕ ದೃಷ್ಟಿಯಿಂದ ನಾನು ಅಂದರೆ ನಮ್ಮ ಮನಸ್ಸೇ ಆಗಿರುತ್ತದೆ. ಈ ಪ್ರಪಂಚದಲ್ಲಿ ನಾವು ಏನು ಸಾಧಿಸುತ್ತೇವೆಯೋ ಅದೆಲ್ಲದಕ್ಕೂ ಮನಸ್ಸೇ ಕಾರಣವಾಗಿದೆ, ಏಕೆಂದರೆ ಪ್ರಪಂಚವೆಂದರೆ ನಮ್ಮ ಅನುಭವಕ್ಕೆ ಏನು ಬರುತ್ತದೆಯೋ ಅದೇ ಆಗಿದೆ. ನಮ್ಮ ಜೀವನದಲ್ಲಿ ಗಳಿಸುವ ಅನುಭವಗಳೆಲ್ಲವೂ ನಮ್ಮ ಕ್ರಿಯೆಗಳ ಕಾರಣಗಳಿಂದಲೇ ಬಂದಿದೆ ಮತ್ತು ಆ ಕ್ರಿಯೆಗಳ ಹಿಂದೆ ಅವನ್ನು ಮಾಡಿಸಿದ ಮನಸ್ಸು ಕೆಲಸ ಮಾಡಿದೆ. ಆದ್ದರಿಂದ ನಮ್ಮ ಅನುಭವಗಳು, ಎಲ್ಲಾ ಕಾರ್ಯಗಳು ನಿಯಂತ್ರಿಸಲ್ಪಟ್ಟಿರುವುದು ಮನಸ್ಸಿನಿಂದಲೇ ಆಗಿದೆ. ಆದರೆ ನಿಧಾನವಾಗಿ ತರ್ಕಿಸುತ್ತಾ ಹೋದರೆ ಮನಸ್ಸು ಎಂದರೆ ನಾನು ಅಲ್ಲ ಎಂದು ಅರ್ಥವಾಗುತ್ತಾ ಹೋಗುತ್ತದೆ. ಒಂದು ರೀತಿಯಲ್ಲಿ ಅದು ಕನ್ನಡಿಯಲ್ಲಿ ಪ್ರತಿಫಲಿಸುವ ಪ್ರತಿಬಿಂಬದಂತೆ ಆತ್ಮವನ್ನು ಪ್ರತಿಬಿಂಬಿಸುತ್ತಿದೆ ಎನ್ನಬಹುದು. ನಾನು ಅಂದರೆ ಮನಸ್ಸು ಎಂದು ಅಂದುಕೊಂಡರೆ ನಾವು ಮನಸ್ಸಿನ ಯಜಮಾನರಾಗಿರಬೇಕು. ಆದರೆ ಹಾಗೆ ಇದೆಯೇ? ಮನಸ್ಸು ವಿವಿಧ ದಿಕ್ಕುಗಳಲ್ಲಿ ಹೊಯ್ದಾಡುತ್ತಲೇ ಇರುತ್ತದೆ. ಮನಸೆಂಬ ಗಾಳಿ ಬೀಸಿದೆಡೆಗೆ ನಾವು ಹೋಗುತ್ತಿರುತ್ತೇವೆ. ಮನಸ್ಸು ನಮ್ಮ ಯಜಮಾನನಂತೆ ವರ್ತಿಸುತ್ತದೆ. ಆದ್ದರಿಂದ ಮನಸ್ಸು ಅನ್ನುವುದು ನಾನು ಹೇಳಿದಂತೆ ಕೇಳದಿದ್ದಾಗ, ಮನಸ್ಸು ಅನ್ನುವುದು ನಮ್ಮ ನಿಜವಾದ ನಾನು ಅಥವ ಆತ್ಮ ಆಗಲಾರದು. ನಿದ್ದೆ ಮಾಡುವಾಗ ಮನಸ್ಸು ಎಲ್ಲಿರುತ್ತದೆ? ಆದರೆ ಎಚ್ಚರವಿರುವಾಗ ಆಗಲೀ, ಇಲ್ಲದಾಗ ಆಗಲೀ ನಮ್ಮನ್ನು ನಿಯಂತ್ರಿಸುವ ಆ ಶಕ್ತಿಯೇ ಜೀವ! 
     'ಅವರು ನಮ್ಮ ತಂದೆ', 'ಇವರು ನಮ್ಮ ತಾಯಿ', 'ಇವನು ನನ್ನ ಅಣ್ಣ/ತಮ್ಮ'. 'ಇವಳು ನನ್ನ ಅಕ್ಕ/ತಂಗಿ' ಎಂದೆಲ್ಲಾ ಹೇಳುತ್ತೇವಲ್ಲಾ ಹೀಗಂದರೆ ಏನು? ಅವರುಗಳ ಶರೀರವನ್ನು ನಾವು ತಂದೆ, ತಾಯಿ, ಅಣ್ಣ, ತಮ್ಮ, ಇತ್ಯಾದಿ ಭಾವಿಸುತ್ತೇವೆಯೇ? ಅವರುಗಳಲ್ಲಿ ಇರುವ ಏನೋ ಒಂದನ್ನು ನಾವು ತಂದೆ, ತಾಯಿ, ಇತ್ಯಾದಿಯಾಗಿ ಕಾಣುತ್ತೇವೆ. ನಾವು ಯಾರು ಎಂಬುದನ್ನು ನಮಗೇ ಹೇಳುವುದು ಕಷ್ಟ, ಇನ್ನು ಇತರರ ಮಾತೇನು? ಹಾಗಾಗಿ ಉಪನಿಷತ್ತು ಹೇಳುತ್ತದೆ: 'ಪ್ರಾಣವೇ ತಂದೆ, ಪ್ರಾಣವೇ ತಾಯಿ, ಪ್ರಾಣವೇ ಸೋದರ, ಪ್ರಾಣವೇ ಉಸಿರು, ಪ್ರಾಣವೇ ಗುರು, ಪ್ರಾಣವೇ ಬ್ರಹ್ಮ'! ಒಂದು ಚಕ್ರದ ಕೀಲುಗಳು ಹೇಗೆ ಅದರ ಮಧ್ಯಭಾಗದಲ್ಲಿ ಜೋಡಿಸಲ್ಪಟ್ಟಿವೆಯೋ, ಹಾಗೆ ಪ್ರತಿಯೊಂದು ಸಂಗತಿಯೂ ಸಹ ಜೀವತತ್ತ್ವಕ್ಕೆ ಪೋಣಿಸಲ್ಪಟ್ಟಿವೆ. ಈ ಪ್ರಪಂಚದಲ್ಲಿ ಯಾವುದೇ ಮೌಲ್ಯವಿರುವ, ಅರ್ಥವಿರುವ ಸಂಗತಿ ಅನ್ನುವುದು ಏನಾದರೂ ಇದ್ದರೆ ಅದು ಪ್ರಾಣ ಹೊರತುಪಡಿಸಿ ಮತ್ತಾವುದೂ ಅಲ್ಲ. ಪ್ರಾಣವಿರದಿದ್ದರೆ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ನಮ್ಮ ಪ್ರಾಮುಖ್ಯತೆ ನಾವು ಬದುಕಿರುವವರೆಗೆ ಮಾತ್ರ. ಬದುಕಿರುವವರೆಗೆ ಮಾತ್ರ ನಮಗೆ ಬೆಲೆ. ನಮ್ಮಲ್ಲಿ ಪ್ರಾಣವಿರದಾಗ ನಾವು ಯಾರು? ನಾವು ಏನೂ ಅಲ್ಲ. ನಾವು ಬದುಕಿದ್ದಾಗ ನಾವು ನಮ್ಮ ಶರೀರವನ್ನು ನಾವು ಎಂದು ಅಂದುಕೊಂಡಿರುತ್ತೇವಲ್ಲಾ ಅದು ವಾಸ್ತವವಾಗಿ ನಾವು ಆಗಿರುವುದಿಲ್ಲ. ಆ ನಾವು ಅನ್ನುವುದು ವಾಸ್ತವವಾಗಿ ಪ್ರಾಣವೇ ಆಗಿದೆ.
     ಹಿರಿಯರಿಗೇ ಆಗಲಿ, ಜ್ಞಾನಿಗಳಿಗೇ ಅಗಲಿ ನಾವು ಗೌರವ ಕೊಡುತ್ತೇವೆ ಅಲ್ಲವೇ? ನಾವು ಗೌರವ ಕೊಡುವುದು ಅವರ ಶರೀರಗಳಿಗೋ, ಅವರ ಶರೀರದಲ್ಲಿರುವ ಪ್ರಾಣತತ್ತ್ವಕ್ಕೋ? ಯಾರನ್ನೂ ನೋಯಿಸಬಾರದು ಎನ್ನುತ್ತೇವೆ. ಯಾರನ್ನೂ ಅಂದರೆ ಯಾರು? ನೋಯಿಸುವುದು ಎಂದರೆ ಏನು? ಯಾರನ್ನೂ ಅಂದರೆ ಆ ಯಾರೂ ದೇಹಗಳಂತೂ ಅಲ್ಲ. ನೋಯಿಸುವುದು ಎಂದರೆ ಶರೀರಗಳಿಗೆ ನೋವಾಗಿದೆ ಎಂದಲ್ಲ, ಶರೀರದಲ್ಲಿರುವ ಪ್ರಾಣತತ್ತ್ವಕ್ಕೆ ನೋವಾಗಿದೆ ಎಂದೇ ಅರ್ಥ. ನನಗೆ ಬೇಜಾರಾಗಿದೆ ಎನ್ನುತ್ತೇವೆ. ಬೇಜಾರಾಗಿರುವುದು ಶರೀರಕ್ಕಂತೂ ಅಲ್ಲ. ಇದೇ ಪ್ರಾಣ ಅಥವ ಜೀವದ ಮಹಿಮೆ. ಶರೀರಗಳಲ್ಲಿರುವ ಆ ಪ್ರಾಣತತ್ವ ಹೊರಟುಹೋದಾಗ ಏನಾಗುತ್ತದೆ? ಎಲ್ಲವೂ ಬದಲಾಗಿಬಿಡುತ್ತದೆ. ತಂದೆ ಎಂದು ಗೌರವಿಸಲ್ಪಡುತ್ತಿದ್ದ ವ್ಯಕ್ತಿ ಸತ್ತರೆ ಅವನ ಮಗ ತಂದೆಯ ದೇಹವನ್ನು ಚಿತೆಯಲ್ಲಿರಿಸಿ ಸುಡುತ್ತಾನೆ ಅಥವ ತನ್ನ ಸಂಪ್ರದಾಯದಂತೆ ಹೂಳುವುದೋ ಮತ್ತೇನನ್ನೋ ಮಾಡುತ್ತಾನೆ. ಆಗ ಯಾರಾದರೂ, ಅವನು ತಂದೆಯನ್ನೇ ಸುಡುತ್ತಿದ್ದಾನೆ/ಹೂಳುತ್ತಿದ್ದಾನೆ ಎಂದು ಆಕ್ಷೇಪಿಸುತ್ತಾರೇನು? ಕೆಲವೇ ಘಂಟೆಗಳ ಹಿಂದೆ ಬದುಕಿದ್ದಾಗ ಇದ್ದ ಮಹತ್ವ ಸತ್ತ ಕೂಡಲೇ ಇಲ್ಲವಾಗುತ್ತದೆ. ಅದು ನಮ್ಮ ಪ್ರೀತಿಪಾತ್ರರಾದ ಯಾರೇ ಆಗಬಹುದು, ಗುರು ಆಗಬಹುದು, ಸಾಮಾಜಿಕ ನಾಯಕನಾಗಿರಬಹುದು, ಚಕ್ರವರ್ತಿಯೇ ಇರಬಹುದು. ಅದರಲ್ಲಿ ಏನೂ ವ್ಯತ್ಯಾಸವಾಗದು. ಅವರನ್ನು ಸುಡುವುದೋ, ಹೂಳುವುದೋ, ಮತ್ತೊಂದೇನನ್ನೋ ಮಾಡುತ್ತೇವೆ. ಜನ ಏನೆನ್ನುತ್ತಾರೆ? ಉತ್ತಮ ರೀತಿಯಲ್ಲಿ ಸಂಸ್ಕಾರ ಮಾಡಿ ಒಳ್ಳೆಯ ಕೆಲಸ ಮಾಡಿದೆ ಅನ್ನುತ್ತಾರೆ! ಬದುಕಿದ್ದಾಗ ಹೀಗೆ ಮಾಡಿದರೆ? ಕೊಲೆ ಅನ್ನುತ್ತಾರೆ, ಹೀನಕೃತ್ಯ ಅನ್ನುತ್ತಾರೆ! ವ್ಯತ್ಯಾಸ ಗೊತ್ತಾಯಿತಲ್ಲವೇ? ನಾವು ಗೌರವಿಸುವುದು, ಗೌರವಿಸಬೇಕಿರುವುದು ಶರೀರಗಳನ್ನಲ್ಲ, ಶರೀರದೊಳಗಿನ ಪ್ರಾಣತತ್ವಗಳನ್ನು! 
     ಇಡೀ ಜೀವನವೆನ್ನುವುದು ಈ ರಹಸ್ಯಮಯ ಪ್ರಾಣವೇ ಆಗಿದ್ದು, ಅದು ಹಲವು ಹೆಸರುಗಳಲ್ಲಿ, ಹಲವು ಪ್ರಾಕಾರಗಳಲ್ಲಿ ಗೋಚರವಾಗುತ್ತದೆ. ನಾವು ಈ ಹಲವು ವಿಧಗಳನ್ನು ನಮ್ಮ ಕಣ್ಣುಗಳು ಕಾಣುವ ರೀತಿಯಲ್ಲೇ ಭಾವಿಸಿ ಮೋಸ ಹೋಗುತ್ತೇವೆ. ಜೀವಚೈತನ್ಯವಿರುವ ಎಲ್ಲದರಲ್ಲೂ ಈ ಶ್ರೇಷ್ಠ ಪ್ರಾಣತತ್ವವನ್ನು ಕಾಣಬಹುದು. ಸಸ್ಯಗಳಲ್ಲಿ ಕೆಲವು ಪ್ರಮಾಣದಲ್ಲಿ, ಪ್ರಾಣಿಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ಮತ್ತು ಮನುಷ್ಯರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಾಣತತ್ವ ಕಂಡುಬರುತ್ತದೆ. ಈ ಹೆಚ್ಚಿನದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದು ಇನ್ನೂ ಮೇಲ್ಪಟ್ಟವರಲ್ಲಿ ಕಂಡುಬರಲೇಬೇಕು. ಕಣ್ಣಿಗೆ ಕಾಣಿಸದ, ಕಿವಿಗೆ ಕೇಳಿಸದ, ಕೈ ಮುಟ್ಟಲಾಗದ, ಮನಸ್ಸಿಗೆ ಅರ್ಥವಾಗದ, ಬಣ್ಣಿಸಲಾಗದ, ಹೀಗೆಯೇ ಎಂದು ಹೇಳಲಾಗದ ಅವ್ಯಕ್ತ ಆತ್ಮದ ಅರಿವು ಸುಲಭವಂತೂ ಅಲ್ಲ. ಈ ವೇದಮಂತ್ರ ಹೇಳುತ್ತದೆ: 
ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವಂತಂ ಯದನಸ್ಥಾ ಬಿಭರ್ತಿ| ಭೂಮ್ಯಾ ಅಸುರಸೃಗಾತ್ಮಾ ಕ್ವ ಸ್ವಿತ್ ಕೋ ವಿದ್ವಾಂಸಮುಪಗಾತ್ ಪ್ರಷ್ಟುಮೇತತ್|| (ಋಕ್. ೧.೧೬೪.೪).      
ಅರ್ಥ: ಮೂಳೆಗಳಿಲ್ಲದ ಯಾವ ಚೇತನನು ಮೂಳೆಗಳಿಂದ ಕೂಡಿದ ದೇಹವನ್ನು ಧರಿಸುತ್ತಾನೋ, ಜನ್ಮವೆತ್ತುವ ಆ ಶ್ರೇಷ್ಠ ಅಸ್ತಿತ್ವವನ್ನು ಯಾವನು ನೋಡುತ್ತಾನೆ? ಭೌತಿಕ ಜಗತ್ತಿನಿಂದ ಪ್ರಾಣ-ರಕ್ತ-ಮಾಂಸಗಳೇನೋ ಹುಟ್ಟುತ್ತವೆ. ಆತ್ಮನು ಎಲ್ಲಿಂದ ಬರುತ್ತಾನೆ? ಇದನ್ನು ಕೇಳಲು ಯಾವನು ವಿದ್ವಾಂಸನ ಬಳಿಗೆ ಹೋಗುತ್ತಾನೆ?
ಜೀವ ತಾ ಧರಿಸಿರಲು ಮೂಳೆ ಮಾಂಸದ ತಡಿಕೆ
ಬಗೆ ಬಗೆಯಲಾಡಿಹುದು ಪಂಚಭೂತದ ಗೊಂಬೆ |
ಕಾಣುವವನಾಟಕೆ ಕಾಣದವ ಕಾರಣನೆ
ಒಗಟಿಗುತ್ತರಿಪ ಗುರುವೆಲ್ಲಿಹನೊ ಮೂಢ ||
-ಕ.ವೆಂ.ನಾಗರಾಜ್.