ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಮಾರ್ಚ್ 13, 2018

ಆತ್ಮೋನ್ನತಿ


     'ನಾನು ಅಂದರೆ ನನ್ನ ಶರೀರವಲ್ಲ, ಶರೀರದೊಳಗೆ ಇರುವ ಪ್ರಾಣ ಅಥವ ಜೀವಾತ್ಮ' ಎಂಬ ವಿಚಾರದಲ್ಲಿ ಹಿಂದೆ ಚರ್ಚಿಸಿದ್ದೆವು. ಸನಾತನ ಧರ್ಮದ ಪ್ರಕಾರ ಜೀವಾತ್ಮಕ್ಕೆ ಸಾವಿಲ್ಲ, ಆದಿಯಿಲ್ಲ, ಅಂತ್ಯವೂ ಇಲ್ಲ. ಆದರೆ ಅಂತಹ ಅನಾದಿ, ಅನಂತವಾದ ಆತ್ಮ ಆದಿ ಮತ್ತು ಅಂತ್ಯವಿರುವ ಶರೀರದ ಆಶ್ರಯ ಏಕೆ ಪಡೆಯಬೇಕು? ಕರ್ಮ ಸಿದ್ಧಾಂತ, ಪುನರ್ಜನ್ಮ ಸಿದ್ಧಾಂತ, ಹುಟ್ಟು-ಸಾವುಗಳ ಚಕ್ರ, ವಿವಿಧ ಜೀವರಾಶಿಗಳು, ಇತ್ಯಾದಿಗಳ ಕುರಿತು ಸೀಮಿತ ಜ್ಞಾನಶಕ್ತಿಯ ಮನುಷ್ಯ ಹಲವಾರು ರೀತಿಯ ಚಿಂತನೆ, ಸಿದ್ಧಾಂತಗಳನ್ನು ಮುಂದಿಡುತ್ತಲೇ ಇದ್ದಾನೆ, ಚರ್ಚಿಸುತ್ತಲೇ ಇರುತ್ತಾನೆ. ಹಲವಾರು ಧರ್ಮಗ್ರಂಥಗಳು ಹಲವು ರೀತಿಯ ವಿಚಾರಗಳನ್ನು ಹೇಳುತ್ತವೆ. ಯಾವ ವಿಚಾರ ಸರಿ, ಯಾವುದು ತಪ್ಪು ಎಂಬುದನ್ನು ವಿಮರ್ಶೆ ಮಾಡುವವರು, ನಿರ್ಧರಿಸುವವರು ಯಾರು? ಅತ್ಯಂತ ಪ್ರಾಚೀನವಾದ ವೇದಮಂತ್ರಗಳು ಈ ಕುರಿತು ಏನು ಹೇಳಿವೆ? ಒಂದು ಮಂತ್ರ ಹೇಳುತ್ತದೆ: 
ಅಯಂ ಹೋತಾ ಪ್ರಥಮಃ ಪಶ್ಯತೇಮಮಿದಂ ಜ್ಯೋತಿರಮೃತಂ ಮರ್ತ್ಯೇಷು|
ಅಯಂ ಸ ಜಜ್ಞೇ ಧ್ರುವ ಆ ನಿಷತ್ತೋ ಮರ್ತ್ಯಸ್ತನ್ವಾ  ವರ್ಧಮಾನಃ|| (ಋಕ್. ೬.೯.೪)
     ಅರ್ಥ: ಈ ಜೀವಾತ್ಮನು ಮೊದಲನೆಯ ಆದಾನ-ಪ್ರದಾನಕರ್ತನು. ಇವನನ್ನು ನೋಡಿರಿ. ಮೃತ್ಯುವಿಗೀಡಾಗುವ ಭೌತಿಕ ಶರೀರಗಳಲ್ಲಿ ಇದು ಅಮರ ಜ್ಯೋತಿಯಾಗಿದೆ. ಇವನು ಆ ಶಾಶ್ವತನಾದ ಆತ್ಮನು. ಅಮರನಾದ ಆ ಆತ್ಮನು ಜಗತ್ತಿನಲ್ಲಿ ಕುಳಿತು ದೇಹದಿಂದ ವೃದ್ಧಿ ಹೊಂದುತ್ತಾ ಪ್ರಕಟನಾಗುತ್ತಾನೆ.
     ಈ ಮಂತ್ರದ ಪ್ರಕಾರ ನಾಶವಾಗುವ ಭೌತಿಕ ಶರೀರದ ಚಟುವಟಿಕೆಗಳಿಗೆ ಕಾರಣವಾದ ಜೀವಾತ್ಮ ಸ್ವತಃ ನಾಶ ಹೊಂದದೇ ಇರುವಂತಹುದಾಗಿದ್ದು, ಶರೀರದ ಬೆಳವಣಿಗೆಯೊಂದಿಗೆ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುತ್ತದೆ. ಇಲ್ಲಿ ಎರಡು ಅಂಶಗಳು ಧ್ವನಿಸುತ್ತವೆ. ಮೊದಲನೆಯದು, ಜೀವಾತ್ಮ ತನ್ನ ಇರುವನ್ನು ತನ್ನಷ್ಟಕ್ಕೆ ತಾನೇ ತೋರಿಸಿಕೊಳ್ಳಲು ಆಗದು. ಇನ್ನೊಂದು, ಅಸ್ತಿತ್ವವನ್ನು ತೋರಿಸಿಕೊಳ್ಳಲು ಶರೀರವೆಂಬ ಮಾಧ್ಯಮ ಅದಕ್ಕೆ ಅಗತ್ಯವಿದೆ. ಶರೀರದಲ್ಲಿ ಜೀವಾತ್ಮವಿಲ್ಲದಿದ್ದರೆ ಶರೀರಕ್ಕೆ ಅರ್ಥವೇ ಇಲ್ಲ, ಅದೊಂದು ಕೇವಲ ಜಡವಸ್ತುವಾಗುತ್ತದೆ. ಅದೇ ರೀತಿ ಶರೀರವಿರದಿದ್ದರೆ ಜೀವಾತ್ಮ ತನ್ನ ಇರುವನ್ನು ತೋರಿಸಿಕೊಳ್ಳಲಾಗುವುದಿಲ್ಲ, ಅರ್ಥಾತ್ ಚಟುವಟಿಕೆಗಳನ್ನು ಮಾಡಲು ಸಮರ್ಥವಿರುವುದಿಲ್ಲ. ಶರೀರವೆಂಬ ಮಾಧ್ಯಮದ ಮೂಲಕ ಮಾಡುವ ಚಟುವಟಿಕೆಗಳ ಮೂಲಕ ಮಾತ್ರ ಮೋಕ್ಷದೆಡೆಗೆ, ಆತ್ಮೋನ್ನತಿಯ ಕಡೆಗೆ ಹೋಗಬಲ್ಲದು. 
ಕಮರಿ ಹೋಗುವ ತನುವ ಕಸುವು ತಾನಾಗಿಹನು
ಜೀವಜ್ಯೋತಿಯೆ ಅವನು ಅಮರ ಶಕ್ತಿಯೆ ಅವನು |
ದೇಹದೊಂದಿಗೆ ಬೆಳೆದು ತನ್ನಿರುವ ತೋರುವನು
ಅವನಿಲ್ಲದಿರುವಲ್ಲಿ ಬೆಳಕೆಲ್ಲಿ ಮೂಢ ||
     ಶರೀರದ ಅಗತ್ಯವಿರುವ ಜೀವಾತ್ಮ ಶರೀರದಲ್ಲಿದ್ದುಕೊಂಡು ನಡೆಸುವ ಚಟುವಟಿಕೆಯಾದರೂ ಎಂತಹದು? ಈ ಮಂತ್ರ ಹೇಳುತ್ತದೆ:
ದಂಡಾ ಇವೇದ್ ಗೋ ಅಜನಾಸ ಆಸನ್ ಪರಿಚ್ಛಿನ್ನಾ ಭರತಾ ಅರ್ಭಕಾಸಃ| 
ಅಭವಚ್ಛ ಪುರ ಏತಾ ವಸಿಷ್ಠ ಆದಿತ್ ತೃತ್ಸೂನಾಂ ವಿಶೋ ಅಪ್ರಥಂತ|| (ಋಕ್. ೭.೩೩.೬)
     ಅರ್ಥ: ಪರಿಚ್ಛಿನ್ನ, ಶರೀರಧಾರಿಗಳೂ, ಅಣುಪ್ರಮಾಣರೂ ಆದ ಜೀವಾತ್ಮರು, ಗೋವುಗಳನ್ನು ಮುನ್ನಡೆಸುವ ದಂಡಗಳಂತೆ ಇಂದ್ರಿಯಗಳು ಮತ್ತು ವಾಣಿಯನ್ನು ಸಂಚಾಲನಗೊಳಿಸುವವರಾಗಿದ್ದಾರೆ. ಸರ್ವಶ್ರೇಷ್ಠ ಆಶ್ರಯದಾತೃವಾದ ಭಗವಂತ ಇವರ ನಾಯಕನಾಗಿದ್ದಾನೆ. ಅನಂತರವೇ ತೃಪ್ತಿಯನ್ನರಸುವ, ತೃಷಿತರಾದ ಜೀವಾತ್ಮರ ಮಕ್ಕಳು ವಿಕಸಿತರಾಗುತ್ತಾರೆ.
     ಶರೀರವನ್ನು ಆಶ್ರಯಿಸಿರುವ ಜೀವಾತ್ಮ ಶರೀರದ ಇಂದ್ರಿಯಗಳನ್ನು ಮತ್ತು ಆಡುವ ಮಾತುಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಎಲ್ಲಾ ರೀತಿಯ ಚಟುವಟಿಕೆಗಳಿಗೆ ಆಶ್ರಯದಾತನಾದ ಪರಮಾತ್ಮ ಜೀವಾತ್ಮರಿಗೂ ನಾಯಕ. ಜೀವಿಗಳು ಜೀವಾತ್ಮರ ಕಾರಣದಿಂದ ಮುಂದೆ ಬರುತ್ತಾರೆ. ಇಲ್ಲಿ ಕೊಟ್ಟಿರುವ ಒಂದು ಉಪಮೆ, ಗೋವುಗಳನ್ನು ನಿಯಂತ್ರಿಸುವ ದಂಡದ ರೀತಿಯಲ್ಲಿ ಜೀವಾತ್ಮ ಇಂದ್ರಿಯಗಳು ಮತ್ತು ವಾಣಿಯನ್ನು (ಮಾತುಗಳು) ನಿಯಂತ್ರಿಸುತ್ತದೆ ಎಂಬುದನ್ನು ಗಮನಿಸಬೇಕು. ಕೆಲವು ತುಂಟ ದನಕರುಗಳು ದಂಡದ ಭಯವನ್ನೂ ಮೀರಿ ಅತ್ತಿತ್ತ ಹಾರುವಂತೆ, ಒಳಗಿನ ಕರೆಯನ್ನು ಮೀರಿ ಅಪಮಾರ್ಗದಲ್ಲಿ ಹೋಗುವವರೂ ಇರುತ್ತಾರೆ. ಮನಸ್ಸು ಆತ್ಮವನ್ನು ಪ್ರತಿಫಲಿಸುವ ಕನ್ನಡಿಯಂತೆ ಹೊರತು ಅದೇ ಆತ್ಮವಲ್ಲ ಎಂದು ತಿಳಿದವರು ಹೇಳುತ್ತಾರೆ. ಅದೇನೇ ಇರಲಿ, ಒಂದಂತೂ ನಮ್ಮ ಅನುಭವಕ್ಕೆ ಬಂದಿರಲು ಸಾಧ್ಯವಿದೆ. ಅದೇನೆಂದರೆ, ಯಾವುದಾದರೂ ಕೆಲಸ ಮಾಡುವಾಗ, ಅದು ಸರಿಯಲ್ಲ ಎಂದು ಒಳಮನಸ್ಸು ಹೇಳುತ್ತಿದ್ದರೆ, ಅಂತಹ ಕೆಲಸ ಮಾಡುವಾಗ ಯೋಚಿಸುವುದು ಒಳಿತು. ಸರಿಯಲ್ಲ  ಎಂದು ಗೊತ್ತಿದ್ದರೂ, ಮಾಡು, ಪರವಾಗಿಲ್ಲ ಎಂದು ಪ್ರಚೋದಿಸುವುದೂ ಮನಸ್ಸೇ ಎಂಬುದು ವಿಚಿತ್ರ. ಮಾಡಿದ ಮೇಲೆ, ಮಾಡಬಾರದಿತ್ತು ಎಂದು ಚುಚ್ಚುವುದೂ ಅದೇ ಮನಸ್ಸೇ! ಎಂತಹ ಚಂಚಲತೆ! ಆತ್ಮೋನ್ನತಿ ಸಾಧಿಸಬೇಕೆಂದರೆ ಚಂಚಲ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಮಾರ್ಗ. ಹಾಗಾದರೆ, ಮನಸ್ಸನ್ನು ನಿಯಂತ್ರಿಸುವ ಆ ಶಕ್ತಿ ಯಾವುದು? ಅದೇ ಜೀವಾತ್ಮ. ಯಾರಾದರೂ ಏನಾದರೂ ಹೇಳಿದಾಗ, ಮಾಡಿದಾಗ ಅದು ಸರಿಯೇ ಎಂದು ಪ್ರಶ್ನಿಸುವಾಗ ಸಾಮಾನ್ಯವಾಗಿ ಬಳಸುವ ಮಾತೆಂದರೆ, ಇದಕ್ಕೆ ನಿನ್ನ ಅಂತರಾತ್ಮ ಒಪ್ಪುತ್ತಾ? ಅಥವ, ನಿನ್ನನ್ನು ನೀನೇ ಕೇಳಿಕೋ, ನೀನು ಮಾಡಿದ್ದು ಸರಿಯಾ? ಅಂತರಾತ್ಮದ ಕರೆಗೆ ಓಗೊಟ್ಟರೆ, ಆತ್ಮ ಉನ್ನತಿಯೆಡೆಗೆ ಸಾಗುತ್ತದೆ, ಇಲ್ಲದಿದ್ದರೆ ಕೆಳಗೆ ಜಾರುತ್ತದೆ, ಕ್ರಮಿಸಬೇಕಾದ ಹಾದಿ ಮತ್ತಷ್ಟು ದೂರವಾಗುತ್ತದೆ. 
ಮನೋವಾಗಿಂದ್ರಿಯಗಳನಂಕಿಸುವುದೊಲವಿನಲಿ
ದನಕರುಗಳನಂಕಿಸುವ ದಂಡಗಳ ತೆರದಿ |
ದೇಹದಲಿ ನೆಲೆಸಿಹುದು ಅಣುರೂಪಿ ಚೇತನ
ಇಂತಪ್ಪ ಚೇತನರ ಒಡೆಯನಾರೋ ಮೂಢ ||
     ಶರೀರ ಮಾಧ್ಯಮದ ಮೂಲಕ ಆತ್ಮೋನ್ನತಿ ಅಥವ ಮೋಕ್ಷದೆಡೆಗೆ ಸಾಗುವ ಜೀವಾತ್ಮ ಶರೀರದ ಮೂಲಕ ನಡೆಸುವ ಕರ್ಮಗಳ ಅನುಸಾರವಾಗಿ ಮುಂದಕ್ಕೋ ಅಥವ ಹಿಂದಕ್ಕೋ ಸಾಗುತ್ತಿರುತ್ತದೆ. ಸರ್ವರ ಹಿತ ಬಯಸುವ ಕರ್ಮಗಳು ಮುಂದಕ್ಕೆ ಕರೆದೊಯ್ಯುತ್ತವೆ. ಇತರರ ನೆಮ್ಮದಿ, ಶಾಂತಿ ಕದಡಿದರೆ ಕೆಳಕ್ಕೆ ಜಾರುತ್ತದೆ. ಜೀವಾತ್ಮ ಜೀರ್ಣವಾದ ಹಳೆಯ ಶರೀರ ತ್ಯಜಿಸುವ ಕ್ರಿಯೆ ಸಾವು ಮತ್ತು ಹೊಸ ಶರೀರ ಧರಿಸಿಬರುವ ಕ್ರಿಯೆ ಜನ್ಮ ಎನಿಸಿಕೊಳ್ಳುತ್ತದೆ. ಹುಟ್ಟು-ಸಾವು, ಪುನರ್ಜನ್ಮ, ಇತ್ಯಾದಿಗಳ ಬಗ್ಗೆ ಪ್ರಸ್ತಾಪಿಸಿದರೆ ಲೇಖನ ದೀರ್ಘವಾಗುವುದರಿಂದ, ಈ ವಿಷಯಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸೋಣ. ಜೀವಾತ್ಮ ಧರಿಸುವ ಹೊಸ ಶರೀರ ಹಿಂದಿನ ಶರೀರದಲ್ಲಿದ್ದಾಗ ನಡೆಸಿದ ಕರ್ಮಫಲಗಳ ಅನುಸಾರವಾಗಿ ಅದಕ್ಕೆ ತಕ್ಕಂತೆ ಇರುತ್ತದೆ ಎಂಬುದು ಸನಾತನ ಧರ್ಮದ ತಿರುಳು. ಜೀವಾತ್ಮದ ಪಯಣ ಹೇಗೆ ಸಾಗುತ್ತದೆ ಎಂದು ಈ ಮಂತ್ರ ವಿವರಿಸಿದೆ:
ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್| 
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ||  (ಋಕ್. ೧.೧೬೪.೩೦.)
     ಅರ್ಥ: ವೇಗಶಾಲಿಯೂ, ಧೃಢವೂ ಆದ ಪರಮಾತ್ಮ ತತ್ತ್ವ ಎಲ್ಲರಿಗೂ ಜೀವದಾನ ಮಾಡುತ್ತಿದೆ. ಅಂತಃಸ್ಥಿತವಾಗಿದ್ದು, ಜೀವಾತ್ಮನನ್ನು ಲೋಕ ಲೋಕಾಂತರಗಳ ನಡುವೆ ಪ್ರವೇಶಗೊಳಿಸುತ್ತದೆ. ಮೃತನಾದವನ ಜೀವಾತ್ಮವು ಸ್ವತಃ ಅಮರವಾಗಿದ್ದು ಮೃತ್ಯುವಿಗೀಡಾಗುವ ಶರೀರದೊಂದಿಗೆ ಸಹಜೀವಿಯಾಗಿ ತನಗೆ ಪ್ರಾರಬ್ಧ ರೂಪದಲ್ಲಿ ಲಭಿಸಿದ ಅನ್ನ-ಜಲಗಳೊಂದಿಗೆ, ಸಂಚರಿಸುತ್ತದೆ.
     ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬ ಪರಮಾತ್ಮನ ಪೂರ್ವನಿಶ್ಚಿತ ನ್ಯಾಯವಿಧಾನದ ಧೃಢತತ್ತ್ವಕ್ಕೆ ಅನುಗುಣವಾಗಿ ಜೀವಾತ್ಮನ ಹುಟ್ಟು-ಸಾವಿನ ಪಯಣ ಸಾಗುತ್ತಿರುತ್ತದೆ. ಹಿಂದಿನ ಕರ್ಮಫಲ ಸ್ವರೂಪವಾಗಿ ಅದಕ್ಕೆ ಅನುಗುಣವಾದ ಶರೀರದೊಂದಿಗೆ ಪಯಣ ಮುಂದುವರೆಯುತ್ತದೆ ಎಂದು ಸಾರುವ ಈ ಮಂತ್ರ ಕರ್ಮದ ಮಹತ್ವವನ್ನು ಸಾರುತ್ತಿದೆ. ವೇದಮಂತ್ರಗಳ ವಿಶೇಷವೆಂದರೆ ಅವು ಹೀಗೆಯೇ ಮಾಡಿ, ಹಾಗೆಯೇ ಮಾಡಿ ಎಂದು ಸೂಚಿಸುವುದಿಲ್ಲ. ಹೇಗಿರಬೇಕು, ಹೇಗೆ ನಡೆಯಬೇಕು ಎಂಬುದು ವಿವೇಚನಾಶಕ್ತಿ ಇರುವವರು ಸ್ವತಃ ನಿರ್ಧರಿಸಿಕೊಳ್ಳಬೇಕಾದುದು ಎಂಬ ಸಂದೇಶ ಸಾರುತ್ತಿವೆ.
ಸತ್ತವನ ಜೀವಕ್ಕೆ ಸಾವಿಲ್ಲ ನೋಡಾ
ಸಾಯಲಿಹ ಮತ್ತೊಂದು ದೇಹವನೆ ಸೇರುವುದು |
ಕರ್ಮವನೆ ಅನುಸರಿಸಿ ಅನ್ನ-ಜಲ ಕಾಣವುದು
ಜೀವದಾನಿಯ ಮರ್ಮವೆಂತಿಹುದೊ ಮೂಢ ||
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ