ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಮಾರ್ಚ್ 5, 2018

ನಿಗೂಢ ಜೀವ - (Mysterious Jeevatma)


     ತಿಳಿದವರು ಹೇಳುತ್ತಲೇ ಇರುತ್ತಾರೆ, 'ಅಯ್ಯೋ ಮೂಢ, ನೀನು ಯಾರು ಎಂದು ನಿನಗೆ ಗೊತ್ತೆ? ನೀನು ಅಂದರೆ ನಿನ್ನ ಶರೀರ ಅಲ್ಲ'. ಅರ್ಥವಾಗದಿದ್ದರೂ ತಲೆಯಾಡಿಸಿ ನಾವುಗಳೂ ಕೇಳುತ್ತಲೇ ಇರುತ್ತೇವೆ. ಆದರೆ ನಾವು ಯಾರು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅದು ಸುಲಭವಾಗಿ ಅರ್ಥವಾಗುವ ವಿಷಯವೂ ಅಲ್ಲ. ಕೆಲವೊಮ್ಮೆ ಅರ್ಥವಾದರೂ ಅದಕ್ಕೆ ಮಹತ್ವ ಕೊಡುವುದೇ ಇಲ್ಲ. ಜೀವ ಎಷ್ಟು ನಿಗೂಢವೋ ಅಷ್ಟೇ ನಿಗೂಢ ನಾವೂ ಸಹ! ಜೀವ ಅಂದರೆ ಏನೆಂದು ಅರ್ಥ ಮಾಡಿಕೊಳ್ಳುವುದು, ವಿವರಿಸುವುದು ಕಷ್ಟ. ನಮ್ಮ ದೈನಂದಿನ ಚಟುವಟಿಕೆಗಳನ್ನು ಜೀವ ಎಂದರೆ ತಪ್ಪುಗ್ರಹಿಕೆಯಾಗುತ್ತದೆ. ಆದರೆ, ಆ ಜೀವವಿಲ್ಲದಿದ್ದರೆ ಯಾವುದೇ ಚಟುವಟಿಕೆ ಸಾಧ್ಯವಿಲ್ಲ. ನಮ್ಮ ಕಣ್ಣುಗಳು ನೋಡುತ್ತವೆ, ಆದರೆ ಏನು ನೋಡಬೇಕು ಎಂದು ನಿರ್ಧರಿಸುವುದು ಕಣ್ಣುಗಳಲ್ಲ. ಕೈಕಾಲುಗಳು ಓಡಾಡುತ್ತವೆ, ಕೆಲಸ ಮಾಡುತ್ತವೆ, ತಾವಾಗಿ ಮಾಡುತ್ತವೆಯೇ? ನಾವು ನಿದ್ದೆ ಮಾಡಿದ್ದಾಗಲೂ, ಪ್ರಜ್ಞೆ ಇಲ್ಲದಿದ್ದಾಗಲೂ ಉಸಿರಾಡುತ್ತಿರುತ್ತೇವೆ. ಹಾಗಾದರೆ ಉಸಿರಾಡಿಸುತ್ತಿರುವವರು ಯಾರು? ಅದೇ ಜೀವ ಅಥವ ಪ್ರಾಣ!
     ನಮ್ಮ ಚಟುವಟಿಕೆಗಳನ್ನು ನಮ್ಮ ಮನಸ್ಸು ನಿಯಂತ್ರಿಸುತ್ತದೆ. 'ಹೀಗೆ ಮಾಡು, ಹಾಗೆ ಮಾಡು' ಎಂದೆಲ್ಲಾ ಹೇಳಿ ಮಾಡಿಸುವುದು ಮನಸ್ಸೇ ಆಗಿದೆ. ಹಾಗಾದರೆ, ನಾನು ಅಂದರೆ ನನ್ನ ಮನಸ್ಸೇ? ವ್ಯಾವಹಾರಿಕ ದೃಷ್ಟಿಯಿಂದ ನಾನು ಅಂದರೆ ನಮ್ಮ ಮನಸ್ಸೇ ಆಗಿರುತ್ತದೆ. ಈ ಪ್ರಪಂಚದಲ್ಲಿ ನಾವು ಏನು ಸಾಧಿಸುತ್ತೇವೆಯೋ ಅದೆಲ್ಲದಕ್ಕೂ ಮನಸ್ಸೇ ಕಾರಣವಾಗಿದೆ, ಏಕೆಂದರೆ ಪ್ರಪಂಚವೆಂದರೆ ನಮ್ಮ ಅನುಭವಕ್ಕೆ ಏನು ಬರುತ್ತದೆಯೋ ಅದೇ ಆಗಿದೆ. ನಮ್ಮ ಜೀವನದಲ್ಲಿ ಗಳಿಸುವ ಅನುಭವಗಳೆಲ್ಲವೂ ನಮ್ಮ ಕ್ರಿಯೆಗಳ ಕಾರಣಗಳಿಂದಲೇ ಬಂದಿದೆ ಮತ್ತು ಆ ಕ್ರಿಯೆಗಳ ಹಿಂದೆ ಅವನ್ನು ಮಾಡಿಸಿದ ಮನಸ್ಸು ಕೆಲಸ ಮಾಡಿದೆ. ಆದ್ದರಿಂದ ನಮ್ಮ ಅನುಭವಗಳು, ಎಲ್ಲಾ ಕಾರ್ಯಗಳು ನಿಯಂತ್ರಿಸಲ್ಪಟ್ಟಿರುವುದು ಮನಸ್ಸಿನಿಂದಲೇ ಆಗಿದೆ. ಆದರೆ ನಿಧಾನವಾಗಿ ತರ್ಕಿಸುತ್ತಾ ಹೋದರೆ ಮನಸ್ಸು ಎಂದರೆ ನಾನು ಅಲ್ಲ ಎಂದು ಅರ್ಥವಾಗುತ್ತಾ ಹೋಗುತ್ತದೆ. ಒಂದು ರೀತಿಯಲ್ಲಿ ಅದು ಕನ್ನಡಿಯಲ್ಲಿ ಪ್ರತಿಫಲಿಸುವ ಪ್ರತಿಬಿಂಬದಂತೆ ಆತ್ಮವನ್ನು ಪ್ರತಿಬಿಂಬಿಸುತ್ತಿದೆ ಎನ್ನಬಹುದು. ನಾನು ಅಂದರೆ ಮನಸ್ಸು ಎಂದು ಅಂದುಕೊಂಡರೆ ನಾವು ಮನಸ್ಸಿನ ಯಜಮಾನರಾಗಿರಬೇಕು. ಆದರೆ ಹಾಗೆ ಇದೆಯೇ? ಮನಸ್ಸು ವಿವಿಧ ದಿಕ್ಕುಗಳಲ್ಲಿ ಹೊಯ್ದಾಡುತ್ತಲೇ ಇರುತ್ತದೆ. ಮನಸೆಂಬ ಗಾಳಿ ಬೀಸಿದೆಡೆಗೆ ನಾವು ಹೋಗುತ್ತಿರುತ್ತೇವೆ. ಮನಸ್ಸು ನಮ್ಮ ಯಜಮಾನನಂತೆ ವರ್ತಿಸುತ್ತದೆ. ಆದ್ದರಿಂದ ಮನಸ್ಸು ಅನ್ನುವುದು ನಾನು ಹೇಳಿದಂತೆ ಕೇಳದಿದ್ದಾಗ, ಮನಸ್ಸು ಅನ್ನುವುದು ನಮ್ಮ ನಿಜವಾದ ನಾನು ಅಥವ ಆತ್ಮ ಆಗಲಾರದು. ನಿದ್ದೆ ಮಾಡುವಾಗ ಮನಸ್ಸು ಎಲ್ಲಿರುತ್ತದೆ? ಆದರೆ ಎಚ್ಚರವಿರುವಾಗ ಆಗಲೀ, ಇಲ್ಲದಾಗ ಆಗಲೀ ನಮ್ಮನ್ನು ನಿಯಂತ್ರಿಸುವ ಆ ಶಕ್ತಿಯೇ ಜೀವ! 
     'ಅವರು ನಮ್ಮ ತಂದೆ', 'ಇವರು ನಮ್ಮ ತಾಯಿ', 'ಇವನು ನನ್ನ ಅಣ್ಣ/ತಮ್ಮ'. 'ಇವಳು ನನ್ನ ಅಕ್ಕ/ತಂಗಿ' ಎಂದೆಲ್ಲಾ ಹೇಳುತ್ತೇವಲ್ಲಾ ಹೀಗಂದರೆ ಏನು? ಅವರುಗಳ ಶರೀರವನ್ನು ನಾವು ತಂದೆ, ತಾಯಿ, ಅಣ್ಣ, ತಮ್ಮ, ಇತ್ಯಾದಿ ಭಾವಿಸುತ್ತೇವೆಯೇ? ಅವರುಗಳಲ್ಲಿ ಇರುವ ಏನೋ ಒಂದನ್ನು ನಾವು ತಂದೆ, ತಾಯಿ, ಇತ್ಯಾದಿಯಾಗಿ ಕಾಣುತ್ತೇವೆ. ನಾವು ಯಾರು ಎಂಬುದನ್ನು ನಮಗೇ ಹೇಳುವುದು ಕಷ್ಟ, ಇನ್ನು ಇತರರ ಮಾತೇನು? ಹಾಗಾಗಿ ಉಪನಿಷತ್ತು ಹೇಳುತ್ತದೆ: 'ಪ್ರಾಣವೇ ತಂದೆ, ಪ್ರಾಣವೇ ತಾಯಿ, ಪ್ರಾಣವೇ ಸೋದರ, ಪ್ರಾಣವೇ ಉಸಿರು, ಪ್ರಾಣವೇ ಗುರು, ಪ್ರಾಣವೇ ಬ್ರಹ್ಮ'! ಒಂದು ಚಕ್ರದ ಕೀಲುಗಳು ಹೇಗೆ ಅದರ ಮಧ್ಯಭಾಗದಲ್ಲಿ ಜೋಡಿಸಲ್ಪಟ್ಟಿವೆಯೋ, ಹಾಗೆ ಪ್ರತಿಯೊಂದು ಸಂಗತಿಯೂ ಸಹ ಜೀವತತ್ತ್ವಕ್ಕೆ ಪೋಣಿಸಲ್ಪಟ್ಟಿವೆ. ಈ ಪ್ರಪಂಚದಲ್ಲಿ ಯಾವುದೇ ಮೌಲ್ಯವಿರುವ, ಅರ್ಥವಿರುವ ಸಂಗತಿ ಅನ್ನುವುದು ಏನಾದರೂ ಇದ್ದರೆ ಅದು ಪ್ರಾಣ ಹೊರತುಪಡಿಸಿ ಮತ್ತಾವುದೂ ಅಲ್ಲ. ಪ್ರಾಣವಿರದಿದ್ದರೆ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ನಮ್ಮ ಪ್ರಾಮುಖ್ಯತೆ ನಾವು ಬದುಕಿರುವವರೆಗೆ ಮಾತ್ರ. ಬದುಕಿರುವವರೆಗೆ ಮಾತ್ರ ನಮಗೆ ಬೆಲೆ. ನಮ್ಮಲ್ಲಿ ಪ್ರಾಣವಿರದಾಗ ನಾವು ಯಾರು? ನಾವು ಏನೂ ಅಲ್ಲ. ನಾವು ಬದುಕಿದ್ದಾಗ ನಾವು ನಮ್ಮ ಶರೀರವನ್ನು ನಾವು ಎಂದು ಅಂದುಕೊಂಡಿರುತ್ತೇವಲ್ಲಾ ಅದು ವಾಸ್ತವವಾಗಿ ನಾವು ಆಗಿರುವುದಿಲ್ಲ. ಆ ನಾವು ಅನ್ನುವುದು ವಾಸ್ತವವಾಗಿ ಪ್ರಾಣವೇ ಆಗಿದೆ.
     ಹಿರಿಯರಿಗೇ ಆಗಲಿ, ಜ್ಞಾನಿಗಳಿಗೇ ಅಗಲಿ ನಾವು ಗೌರವ ಕೊಡುತ್ತೇವೆ ಅಲ್ಲವೇ? ನಾವು ಗೌರವ ಕೊಡುವುದು ಅವರ ಶರೀರಗಳಿಗೋ, ಅವರ ಶರೀರದಲ್ಲಿರುವ ಪ್ರಾಣತತ್ತ್ವಕ್ಕೋ? ಯಾರನ್ನೂ ನೋಯಿಸಬಾರದು ಎನ್ನುತ್ತೇವೆ. ಯಾರನ್ನೂ ಅಂದರೆ ಯಾರು? ನೋಯಿಸುವುದು ಎಂದರೆ ಏನು? ಯಾರನ್ನೂ ಅಂದರೆ ಆ ಯಾರೂ ದೇಹಗಳಂತೂ ಅಲ್ಲ. ನೋಯಿಸುವುದು ಎಂದರೆ ಶರೀರಗಳಿಗೆ ನೋವಾಗಿದೆ ಎಂದಲ್ಲ, ಶರೀರದಲ್ಲಿರುವ ಪ್ರಾಣತತ್ತ್ವಕ್ಕೆ ನೋವಾಗಿದೆ ಎಂದೇ ಅರ್ಥ. ನನಗೆ ಬೇಜಾರಾಗಿದೆ ಎನ್ನುತ್ತೇವೆ. ಬೇಜಾರಾಗಿರುವುದು ಶರೀರಕ್ಕಂತೂ ಅಲ್ಲ. ಇದೇ ಪ್ರಾಣ ಅಥವ ಜೀವದ ಮಹಿಮೆ. ಶರೀರಗಳಲ್ಲಿರುವ ಆ ಪ್ರಾಣತತ್ವ ಹೊರಟುಹೋದಾಗ ಏನಾಗುತ್ತದೆ? ಎಲ್ಲವೂ ಬದಲಾಗಿಬಿಡುತ್ತದೆ. ತಂದೆ ಎಂದು ಗೌರವಿಸಲ್ಪಡುತ್ತಿದ್ದ ವ್ಯಕ್ತಿ ಸತ್ತರೆ ಅವನ ಮಗ ತಂದೆಯ ದೇಹವನ್ನು ಚಿತೆಯಲ್ಲಿರಿಸಿ ಸುಡುತ್ತಾನೆ ಅಥವ ತನ್ನ ಸಂಪ್ರದಾಯದಂತೆ ಹೂಳುವುದೋ ಮತ್ತೇನನ್ನೋ ಮಾಡುತ್ತಾನೆ. ಆಗ ಯಾರಾದರೂ, ಅವನು ತಂದೆಯನ್ನೇ ಸುಡುತ್ತಿದ್ದಾನೆ/ಹೂಳುತ್ತಿದ್ದಾನೆ ಎಂದು ಆಕ್ಷೇಪಿಸುತ್ತಾರೇನು? ಕೆಲವೇ ಘಂಟೆಗಳ ಹಿಂದೆ ಬದುಕಿದ್ದಾಗ ಇದ್ದ ಮಹತ್ವ ಸತ್ತ ಕೂಡಲೇ ಇಲ್ಲವಾಗುತ್ತದೆ. ಅದು ನಮ್ಮ ಪ್ರೀತಿಪಾತ್ರರಾದ ಯಾರೇ ಆಗಬಹುದು, ಗುರು ಆಗಬಹುದು, ಸಾಮಾಜಿಕ ನಾಯಕನಾಗಿರಬಹುದು, ಚಕ್ರವರ್ತಿಯೇ ಇರಬಹುದು. ಅದರಲ್ಲಿ ಏನೂ ವ್ಯತ್ಯಾಸವಾಗದು. ಅವರನ್ನು ಸುಡುವುದೋ, ಹೂಳುವುದೋ, ಮತ್ತೊಂದೇನನ್ನೋ ಮಾಡುತ್ತೇವೆ. ಜನ ಏನೆನ್ನುತ್ತಾರೆ? ಉತ್ತಮ ರೀತಿಯಲ್ಲಿ ಸಂಸ್ಕಾರ ಮಾಡಿ ಒಳ್ಳೆಯ ಕೆಲಸ ಮಾಡಿದೆ ಅನ್ನುತ್ತಾರೆ! ಬದುಕಿದ್ದಾಗ ಹೀಗೆ ಮಾಡಿದರೆ? ಕೊಲೆ ಅನ್ನುತ್ತಾರೆ, ಹೀನಕೃತ್ಯ ಅನ್ನುತ್ತಾರೆ! ವ್ಯತ್ಯಾಸ ಗೊತ್ತಾಯಿತಲ್ಲವೇ? ನಾವು ಗೌರವಿಸುವುದು, ಗೌರವಿಸಬೇಕಿರುವುದು ಶರೀರಗಳನ್ನಲ್ಲ, ಶರೀರದೊಳಗಿನ ಪ್ರಾಣತತ್ವಗಳನ್ನು! 
     ಇಡೀ ಜೀವನವೆನ್ನುವುದು ಈ ರಹಸ್ಯಮಯ ಪ್ರಾಣವೇ ಆಗಿದ್ದು, ಅದು ಹಲವು ಹೆಸರುಗಳಲ್ಲಿ, ಹಲವು ಪ್ರಾಕಾರಗಳಲ್ಲಿ ಗೋಚರವಾಗುತ್ತದೆ. ನಾವು ಈ ಹಲವು ವಿಧಗಳನ್ನು ನಮ್ಮ ಕಣ್ಣುಗಳು ಕಾಣುವ ರೀತಿಯಲ್ಲೇ ಭಾವಿಸಿ ಮೋಸ ಹೋಗುತ್ತೇವೆ. ಜೀವಚೈತನ್ಯವಿರುವ ಎಲ್ಲದರಲ್ಲೂ ಈ ಶ್ರೇಷ್ಠ ಪ್ರಾಣತತ್ವವನ್ನು ಕಾಣಬಹುದು. ಸಸ್ಯಗಳಲ್ಲಿ ಕೆಲವು ಪ್ರಮಾಣದಲ್ಲಿ, ಪ್ರಾಣಿಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ಮತ್ತು ಮನುಷ್ಯರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಾಣತತ್ವ ಕಂಡುಬರುತ್ತದೆ. ಈ ಹೆಚ್ಚಿನದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದು ಇನ್ನೂ ಮೇಲ್ಪಟ್ಟವರಲ್ಲಿ ಕಂಡುಬರಲೇಬೇಕು. ಕಣ್ಣಿಗೆ ಕಾಣಿಸದ, ಕಿವಿಗೆ ಕೇಳಿಸದ, ಕೈ ಮುಟ್ಟಲಾಗದ, ಮನಸ್ಸಿಗೆ ಅರ್ಥವಾಗದ, ಬಣ್ಣಿಸಲಾಗದ, ಹೀಗೆಯೇ ಎಂದು ಹೇಳಲಾಗದ ಅವ್ಯಕ್ತ ಆತ್ಮದ ಅರಿವು ಸುಲಭವಂತೂ ಅಲ್ಲ. ಈ ವೇದಮಂತ್ರ ಹೇಳುತ್ತದೆ: 
ಕೋ ದದರ್ಶ ಪ್ರಥಮಂ ಜಾಯಮಾನಮಸ್ಥನ್ವಂತಂ ಯದನಸ್ಥಾ ಬಿಭರ್ತಿ| ಭೂಮ್ಯಾ ಅಸುರಸೃಗಾತ್ಮಾ ಕ್ವ ಸ್ವಿತ್ ಕೋ ವಿದ್ವಾಂಸಮುಪಗಾತ್ ಪ್ರಷ್ಟುಮೇತತ್|| (ಋಕ್. ೧.೧೬೪.೪).      
ಅರ್ಥ: ಮೂಳೆಗಳಿಲ್ಲದ ಯಾವ ಚೇತನನು ಮೂಳೆಗಳಿಂದ ಕೂಡಿದ ದೇಹವನ್ನು ಧರಿಸುತ್ತಾನೋ, ಜನ್ಮವೆತ್ತುವ ಆ ಶ್ರೇಷ್ಠ ಅಸ್ತಿತ್ವವನ್ನು ಯಾವನು ನೋಡುತ್ತಾನೆ? ಭೌತಿಕ ಜಗತ್ತಿನಿಂದ ಪ್ರಾಣ-ರಕ್ತ-ಮಾಂಸಗಳೇನೋ ಹುಟ್ಟುತ್ತವೆ. ಆತ್ಮನು ಎಲ್ಲಿಂದ ಬರುತ್ತಾನೆ? ಇದನ್ನು ಕೇಳಲು ಯಾವನು ವಿದ್ವಾಂಸನ ಬಳಿಗೆ ಹೋಗುತ್ತಾನೆ?
ಜೀವ ತಾ ಧರಿಸಿರಲು ಮೂಳೆ ಮಾಂಸದ ತಡಿಕೆ
ಬಗೆ ಬಗೆಯಲಾಡಿಹುದು ಪಂಚಭೂತದ ಗೊಂಬೆ |
ಕಾಣುವವನಾಟಕೆ ಕಾಣದವ ಕಾರಣನೆ
ಒಗಟಿಗುತ್ತರಿಪ ಗುರುವೆಲ್ಲಿಹನೊ ಮೂಢ ||
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ