ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಅಕ್ಟೋಬರ್ 28, 2010

ಮೊರೆ


ಸರಿಸಿಬಿಡು ಮೂಢಮನ ಆವರಿತ ಪೊರೆಯಾ|
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು||
ರೂಢಿರಾಡಿಯಲಿ ಸಿಲುಕಿ ತೊಳಲಾಡುತಿಹೆ ನಾನು|
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಸರ್ವರೊಳ್ಳಿತ ಬಯಸಿ ಸ್ವಂತಹಿತ ಕಡೆಗಿಟ್ಟೆ|
ಸರ್ವದೂಷಿತನಾಗಿ ನೆಲೆಗಾಣದಿದೆ ಮನವು||
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ|
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||


ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ|
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ||
ಹುಲುಮನುಜ ನಾನಾಗಿ ಭಾವಬಂಧಿಯು ನಾನು|
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||
**********************
-ಕವಿನಾಗರಾಜ್.

ಬುಧವಾರ, ಅಕ್ಟೋಬರ್ 27, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -6

ಋಗ್ವೇದದಲ್ಲಿ:-

ಯೇ ತ್ರಿಂಶತಿ ತ್ರಯಸ್ಪರೋ ದೇವಾಸೋ ಬರ್ಹಿರಾಸದನ್|
ವಿದನ್ನಹ ದ್ವಿತಾಸನನ್|| (ಋಕ್. 8.28.1)

     [ಯೇ] ಯಾವ, [ತ್ರಿಂಶತಿ ತ್ರಯಃ ಪರಃ ದೇವಾಸಃ] ಮೂವತ್ತಮೂರು ದೇವತೆಗಳು, [ಬರ್ಹಿ ಆಸದನ್] ಆಸನಾರೂಢರಾಗಿದ್ದಾರೋ [ದ್ವಿತಾಸನನ್] ಜಡರೂಪದಲ್ಲಿಯೂ ದಾನ ನೀಡುತ್ತಾ [ನಃ ವಿದನ್] ನಮಗೆ ಪ್ರಾಪ್ತರಾಗಲಿ; - ಎಂದು ಓದುತ್ತೇವೆ. ಅಥರ್ವವೇದದಲ್ಲಿ:-

ತ್ರಯಂಸ್ತ್ರಿಂಶತ್ತ್ರಿಶತಾಃ ಷಟ್ ಸಹಸ್ರಾಃ ಸರ್ವಾಂತ್ಸ ದೇವಾಂಸ್ತಪಸಾ ಪಿಪರ್ತಿ|| (ಅಥರ್ವ.11.5.2.)

ಆ ತಪಸ್ವಿಯು 6333 ದೇವತೆಗಳನ್ನು ತನ್ನ ತಪಸ್ಸಿನಿಂದ ತೃಪ್ತಿಗೊಳಿಸುತ್ತಾನೆ- 
ಎಂದು ಹೇಳಿದೆ. ಯಜುರ್ವೇದದಲ್ಲಿ:-

ಅಗ್ನಿರ್ದೇವತಾ ವಾತೋ ದೇವತಾ ಸೂರ್ಯೋ ದೇವತಾ ಚಂದ್ರಮಾ ದೇವತಾ| ವಸವೋ ದೇವತಾ ರುದ್ರಾ ದೇವತಾssದಿತ್ಯಾ ದೇವತಾ ಮರುತೋ ದೇವತಾ ವಿಶ್ವೇ ದೇವಾ ದೇವತಾ ಬೃಹಸ್ಪತಿರ್ದೇವತೇಂದ್ರೋ ದೇವತಾ ವರುಣೋ ದೇವತಾ|| (ಯಜು. 14.20) ಎಂಬ ಮಂತ್ರದಲ್ಲಿ ಅಗ್ನಿ, ವಾಯು, ಸೂರ್ಯ, ಚಂದ್ರ, ವಸುಗಳು, ಬೃಹಸ್ಪತಿ, ಇಂದ್ರ, ವರುಣ ಅವರೆಲ್ಲಾ ದೇವತೆಗಳು ಎಂದು ಹೇಳಿದೆ. ಆದರೆ ವೇದಗಳಲ್ಲೆಲ್ಲಿಯೂ ಈ ದೇವತೆಗಳೇ ಪರಮಾತ್ಮ ಎಂದು ಹೇಳಿಲ್ಲ. ಉಪಾಸನೆಯ ಪ್ರಕರಣದಲ್ಲಿ ಈ ದೇವತೆಗಳು ಉಪಾಸ್ಯರು ಎಂದು ಅಂಗೀಕರಿಸಿಲ್ಲ. ಈ ವಿದ್ವಾಂಸರಿಗೆ ಭ್ರಾಂತಿಯುಂಟಾಗಲು, ಈ ದೇವತೆಗಳ ಹೆಸರಿನಿಂದಲೇ ಪರಮಾತ್ಮನನ್ನು ನಿರ್ದೇಶಿಸಿರುವುದೂ ಒಂದು ಕಾರಣವಾಗಿದೆ. ಆದರೂ ವೇದಗಳು ಅತಿ ಸ್ಪಷ್ಟವಾಗಿ, ನಾನಾ ಹೆಸರುಗಳಿದ್ದರೂ ಪರಮಾತ್ಮನಿರುವುದೇನೋ ಒಬ್ಬನೇ ಎಂದು ಸ್ಪಷ್ಟವಾಗಿ ಸಾರಿವೆ. ಉದಾಹರಣೆಗೆ:

ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್| ಏಕಂ ಸದ್ ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ|| (ಋಕ್. 1.164.46)

     [ಅಗ್ನಿಂ] ತೇಜೋಮಯ ಪ್ರಭುವನ್ನು [ಇಂದ್ರಂ, ಮಿತ್ರಂ, ವರುಣಮ್] ಇಂದ್ರ, ಮಿತ್ರ, ವರುಣ ಎಂದು [ಅಹುಃ] ಕರೆಯುತ್ತಾರೆ. [ಅಥೋ] ಹಾಗೆಯೇ [ಸಃ] ಆ ಪ್ರಭುವು [ದಿವ್ಯಃ] ದಿವ್ಯನೂ [ಸುಪರ್ಣಃ} ಸುಪರ್ಣನೂ [ಗರುತ್ಮಾನ್] ಗರುತ್ಮಂತನೂ ಅಹುದು. [ಸತ್ ಏಕಮ್] ಸತ್ತತ್ವ ಇರುವುದೇನೋ ಒಂದೇ. [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು [ಬಹುಧಾ ವದಂತಿ] ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ. [ಅಗ್ನಿಂ] ಅದೇ ತೇಜೋರೂಪವನ್ನು [ಯಮಂ ಮಾತರಿಶ್ವಾನಂ ಅಹುಃ]ಯಮ, ಮಾತರಿಶ್ವಾ - ಎನ್ನುತ್ತಾರೆ.

     ಇನ್ನು ಭ್ರಾಂತಿಗವಕಾಶವೆಲ್ಲಿ? ಇದೇ ಹೆಸರುಗಳಿಂದ ಬೇರೆ ದೇವತೆಗಳನ್ನು ನಿರ್ದೇಶಿಸಿದ ಮಾತ್ರಕ್ಕೆ ಅಥವಾ ಪರಮಾತ್ಮನನ್ನು ಬೇರೆ ಬೇರೆ ಹೆಸರುಗಳಿಂದ ಕರೆದ ಮಾತ್ರಕ್ಕೆ ಒಬ್ಬ ಪರಮಾತ್ಮ ನೂರಾರು ಪರಮಾತ್ಮರುಗಳಾಗಿ ಹೋಗುವುದಿಲ್ಲ. ಇದೊಂದು ಮಂತ್ರದ ಕಡೆ ದೃಷ್ಟಿ ಹರಿಸೋಣ:-

ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|
ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ|| (ಯಜು.10.82.3)

     [ಯಃ] ಯಾವನು [ನಃ ಪಿತಾ] ನಮ್ಮ ತಂದೆಯೋ [ಜನಿತಾ] ಉತ್ಪಾದಕನೋ [ಯಃ] ಯಾವನು [ವಿಧಾತಾ] ನಿಯಾಮಕನೋ [ವಿಶ್ವಾ ಧಾಮಾನಿ ಭುವನಾನಿ ವೇದ] ಸಮಸ್ತ ನೆಲೆಗಳನ್ನೂ, ಲೋಕಗಳನ್ನೂ ಬಲ್ಲನೋ [ಯಃ] ಯಾವನು [ಏಕ ಏವ] ಒಬ್ಬನೇ ಒಬ್ಬನು [ದೇವಾನಾಂ ನಾಮಧಾ] ದೇವತೆಗಳ ಹೆಸರನ್ನೆಲ್ಲಾ ಧರಿಸುವವನಾಗಿದ್ದಾನೋ [ತಂ ಸಂಪ್ರಶ್ನಂ] ಆ ಮಹಾಜಿಜ್ಞಾಸುವಾದ ಪ್ರಭುವನ್ನು [ಅನ್ಯಾ ಭುವನಾ ಯಂತಿ] ಬೇರೆಲ್ಲಾ ಲೋಕಗಳನ್ನು ಪಡೆದುಕೊಳ್ಳುತ್ತವೆ.

ಒಬ್ಬನೇ ಒಬ್ಬ ಎಲ್ಲಾ ಎಲ್ಲಾ ದೇವತೆಗಳ ಹೆಸರನ್ನೂ ಧರಿಸುತ್ತಾನೆ - ಎಂದು ವೇದವೇ ಘೋಷಿಸುತ್ತಿರುವಾಗ, ವೇದಗಳಲ್ಲಿ ಅನೇಕೇಶ್ವರವಾದವಿದೆ ಎನ್ನುವುದಕ್ಕೆ ಅವಕಾಶವಾದರೂ ಎಲ್ಲಿದೆ? ಈ ವಾದಕ್ಕೆ ಪೂರ್ಣವಿರಾಮ ಹಾಕುವ ಈ ಕೆಳಗಿನ ಮಂತ್ರವನ್ನು ನೋಡಿರಿ:-

ನ ದ್ವಿತೀಯೋ ನ ತೃತೀಯಶ್ಚತುರ್ಥೋ ನಾಪ್ಯುಚ್ಚತೇ|
ನ ಪಂಚಮೋ ನ ಷಷ್ಠಃ ಸಪ್ತಮೋ ನಾಪ್ಯುಚ್ಚತೇ|
ನಾಷ್ಟಮೋ ನಾ ನವಮೋ ದಶಮೋ ನಾಪ್ಯುಚ್ಚತೇ|
ತಮಿದಂ ನಿಗತಂ ಸಹಃ ಸ ಏಷ ಏಕ ಏಕವೃದೇಕ ಏವ|| (ಅಥರ್ವ.13.4.16-18,20)

[ನ ದ್ವಿತೀಯಃ] ಎರಡನೆಯ ಪರಮಾತ್ಮನಿಲ್ಲ. [ನ ತೃತೀಯಃ] ಮೂರನೆಯವನೂ ಇಲ್ಲ. [ಚತುರ್ಥಃ ಅಪಿ ನ ಉಚ್ಯತೇ] ನಾಲ್ಜನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಪಂಚಮಃ] ಐದನೆಯವನಿಲ್ಲ. [ನ ಷಷ್ಠಃ] ಆರನೆಯವನಿಲ್ಲ. [ಸಪ್ತಮಃ ಅಪಿ ನ ಉಚ್ಯತೇ] ಏಳನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಅಷ್ಟಮಃ] ಎಂಟನೆಯವನಿಲ್ಲ. [ನ ನವಮಃ] ಒಂಬತ್ತನೆಯವನಿಲ್ಲ. [ದಶಮಃ ಅಪಿ ನ ಉಚ್ಯತೇ] ಹತ್ತನೆಯವನ ನಿರ್ದೇಶನವೂ ಇಲ್ಲ. [ಇದಂ ಸಹಃ] ಈ ಶಕ್ತಿ [ತಂ ನಿಗತಮ್] ಅವನಲ್ಲಿಯೇ ಅಡಕವಾಗಿದೆ. [ಸಃ ಏಷಃ] ಆ, ಈ ಪ್ರಭುವು [ಏಕಃ] ಒಬ್ಬನೇ ಆಗಿದ್ದಾನೆ. [ಏಕವೃತ್] ಒಬ್ಬನೇ ವ್ಯಾಪಕನಾಗಿದ್ದಾನೆ. [ಏಕ ಏವ] ಇರುವುದು ಒಬ್ಬನೇ ಒಬ್ಬನು.

ಈ ರೀತಿ ಎಲ್ಲಾ ಸಂದೇಹಗಳು ಅಡಗಿಹೋಗುತ್ತವೆ. ಭಗವಂತನಿರುವುದು ಒಬ್ಬನೇ. ಅವನು ನಿರಾಕಾರ-ನಿರ್ವಿಕಾರನು, ಸರ್ವಜ್ಞ-ಸರ್ವವ್ಯಾಪಕ-ಸರ್ವದ್ರಷ್ಟನು. ಅವನು ಸದಾ ಅಶರೀರನೇ. ಅವನು ಶಕ್ತಿರೂಪನು; ವ್ಯಕ್ತಿರೂಪನಲ್ಲ. ಅವನು ಮೇಲಿಂದ ಕೆಳಗಿಳಿದು ಬರುವನು, ಅವತಾರವೆತ್ತುವನು - ಎನ್ನುವುದು ಕೇವಲ ಭ್ರಾಂತಿ ಮಾತ್ರ. ಅವನೇ ಸೃಷ್ಟಿಕರ್ತನು.

ಬುಧವಾರ, ಅಕ್ಟೋಬರ್ 20, 2010

ಮೂಢ ಉವಾಚ -20

ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವರಾರೋ ಮೂಢ||


ಭುಕ್ತಾಹಾರ ಜೀರ್ಣಿಸುವ ವೈಶ್ವಾನರ*
ಕಂಡವರನು ಸುಡುವನೆ ಅಸೂಯಾಪರ|
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡನೆ ಸಲ್ಲಾಪ ಮೂಢ||


ಸದ್ಗುಣಕಮಲಗಳು ಕಮರಿ ಕಪ್ಪಡರುವುವು
ಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು|
ಅರಿವು ಬರುವ ಮುನ್ನಾವರಿಸಿ ಬರುವ ಮತ್ಸರವು
ನರರ ಕುಬ್ಜರಾಗಿಸುವುದು ಮೂಢ||
[* ವೈಶ್ವಾನರ ಎಂಬುದು ಹೊಟ್ಟೆಯೊಳಗೆ ಇರುವ ಕಿಚ್ಚು. ತಾಯಿಯ ಗರ್ಭದಲ್ಲಿರುವಾಗಲೇ ಹುಟ್ಟುವ ಈ ಕಿಚ್ಚು ತಿಂದ ಆಹಾರವನ್ನು ಜೀರ್ಣಿಸುತ್ತದೆ.]
********************
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 18, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ - 5

ಋಗ್ವೇದ ಒಂದು ಕಡೆ ಹೇಳುತ್ತಲಿದೆ:

ಯ ಏಕ ಇತ್ ತಮು ಷ್ಟುಹಿ ಕೃಷ್ಟೀನಾಂ ವಿಚರ್ಷಣಿಃ| ಪತಿರ್ಜಜ್ಞೇ ವೃಷಕ್ರತುಃ||  (ಋಕ್. 6.45.16)

     [ಯಃ] ಯಾವ, [ಕೃಷ್ಟೀನಾಮ್] ಪ್ರಜಾಮಾತ್ರರ, [ವಿಚರ್ಷಣಿಃ] ನಿರೀಕ್ಷಕನಾಗಿ, [ಏಕ ಇತ್] ಒಬ್ಬನೇ ಇದ್ದಾನೋ, [ತಂ ಉ ಸ್ತುಹಿ] ಅವನನ್ನು ಮಾತ್ರ ಸ್ತುತಿಸು. [ವೃಷಕ್ರತುಃ] ಪ್ರಬಲ ಜ್ಞಾತಿಯು, ಅದ್ಭುತ ಕರ್ತೃವೂ, [ಪತಿ] ಎಲ್ಲರ ಸ್ವಾಮಿಯೂ, ಪಾಲಕನೂ ಆಗಿ [ಜಜ್ಞೇ] ಅವನು ಪ್ರಸಿದ್ಧನಾಗಿದ್ದಾನೆ.

     ಇಂತಹ ಸ್ಫುಟವಾದ ಪ್ರಮಾಣಗಳಿದ್ದರೂ ಕೂಡ, ಅನೇಕ ಪಾಶ್ಚಾತ್ಯ ವಿದ್ವಾಂಸರೂ, "ಗೌರಾಂಗ ಪ್ರಭುಗಳು ಹೇಳಿರುವುದೇ ಸತ್ಯ" ಎಂದು ನಂಬುವ ಕೆಲವು ಭಾರತೀಯ ವಿದ್ವಾಂಸರೂ ಸಹ "ವೇದಗಳಲ್ಲಿ ಅನೇಕೇಶ್ವರವಾದವಿದೆ, ಆರ್ಯರು ಇಂದ್ರ, ಅಗ್ನಿ, ವರುಣ ಮೊದಲಾದ ಅದೆಷ್ಟೋ ದೇವರನ್ನು ಪೂಜಿಸುತ್ತಿದ್ದರು. 'ದೇವರೊಬ್ಬನೇ' ಎಂಬ ಸಿದ್ಧಾಂತ ಇತ್ತೀಚಿನದು. ಅದು ವೈದಿಕ ಋಷಿಮುನಿಗಳಿಗೆ ಗೊತ್ತಿರಲಿಲ್ಲ" ಎಂದು ವಾದಿಸುತ್ತಾರೆ. ವೇದಗಳಲ್ಲಿ ಒಬ್ಬನೇ ಭಗವಂತನನ್ನು ನಾನಾ ಹೆಸರುಗಳಿಂದ ಸಂಬೋಧಿಸಿರುವುದನ್ನು ಕಂಡು ಅವರು ಮುಗ್ಗರಿಸಿದ್ದಾರೆ. ವೇದಗಳಲ್ಲಿ ಅನೇಕ ದೇವತಾವಾದವಿದೆ ಎಂಬುದನ್ನಂತೂ ಯಾರೂ ತಿರಸ್ಕರಿಸಲಾರರು. ಪದಾರ್ಥ ಜಡವಾಗಲಿ, ಚೇತನವಾಗಲಿ, ಯಾವುದಾದರೊಂದು ದಿವ್ಯಶಕ್ತಿ ಅದರಲ್ಲಿದ್ದರೆ, ವೇದಗಳು ಅದನ್ನು 'ದೇವತೆ' ಅಥವಾ 'ದೇವ' ಎಂದು ನಿರ್ದೇಶಿಸುತ್ತವೆ.
                                                                                                                   -ಪಂ ಸುಧಾಕರ ಚತುರ್ವೇದಿ.

ಭಾನುವಾರ, ಅಕ್ಟೋಬರ್ 3, 2010

ಮೂಢ ಉವಾಚ -19

ಮದಭರಿತ ಮನುಜನ ಪರಿಯೆಂತು ನೋಡು
ನಡೆಯುವಾ ಗತ್ತು ನುಡಿಯುವಾ ಗಮ್ಮತ್ತು|
ಮೇಲರಿಮೆಯಾ ಭೂತ ಅಡರಿಕೊಂಡಿಹುದು
ಭೂತಕಾಟವೇ ಬೇಡ ದೂರವಿರು ಮೂಢ||


ಕಣ್ಣೆತ್ತಿ ನೋಡರು ಪರರ ನುಡಿಗಳನಾಲಿಸರು
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು|
ಮೂಲೋಕದೊಡೆಯರೇ ತಾವೆಂದು ಭಾವಿಸುತ
ಮದೋನ್ಮತ್ತರೋಲಾಡುವರು ಮೂಢ||


ಮದೋನ್ಮತ್ತನಾ ಮಹಿಮೆಯನೆಂತು ಬಣ್ಣಿಸಲಿ?
ಉದ್ಧಟತನವೆ ಮೈವೆತ್ತು ದರ್ಪದಿಂ ದಿಟ್ಟಿಸುವ|
ಎದುರು ಬಂದವರ ಕಡೆಗಣಿಸಿ ತುಳಿಯುವ
ಮದಾಂಧನದೆಂತ ಠೇಂಕಾರ ನೋಡು ಮೂಢ||


ಮದಸೊಕ್ಕಿ ಮೆರೆದವರೊಡನಾಡಬಹುದೆ?
ನಯ ವಿನಯ ಸನ್ನಡತೆಗವಕಾಶ ಕೊಡದೆ|
ವಿಕಟನರ್ತನಗೈವ ಮದವದವನತಿ ತರದೆ?|
ನರಾರಿ ಮದದೀಪರಿಯ ನೀನರಿ ಮೂಢ||
**************
-ಕವಿನಾಗರಾಜ್.

ಶನಿವಾರ, ಅಕ್ಟೋಬರ್ 2, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ - 4

ಋಗ್ವೇದ ಸಾರುತ್ತಲಿದೆ:-
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್|
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ||  (ಋಕ್.10.81.3.)

     [ವಿಶ್ವತಃ ಚಕ್ಷುಃ] ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಸರ್ವದ್ರಷ್ಟನಾದ [ಉತ] ಮತ್ತು [ವಿಶ್ವತಃ ಮುಖಃ] ಎಲ್ಲೆಡೆಯಲ್ಲಿಯೂ ಮುಖವನ್ನುಳ್ಳ, ಎಲ್ಲೆಡೆಯೂ ತಿರುಗುವ, [ವಿಶ್ವತಃ ಬಾಹುಃ] ಎಲ್ಲೆಡೆಯಲ್ಲೂ ಬಾಹುಗಳನ್ನುಳ್ಳ, ಸರ್ವಕರ್ತೃವಾದ, [ಉತ] ಅದೇ ರೀತಿ [ವಿಶ್ವತಃ ಪಾತ್] ಎಲ್ಲೆಡೆಯಲ್ಲೂ ಪಾದಗಳನ್ನುಳ್ಳ, ಸರ್ವಗತನಾದ, [ಏಕದೇವಃ] ಒಬ್ಬ ದೇವನು [ದ್ಯಾವಾ ಭೂಮಿ ಜನಯನ್] ದ್ಯುಲೋಕ, ಪೃಥಿವೀ ಲೋಕಗಳನ್ನು ರಚಿಸುತ್ತಾ [ಬಾಹುಭ್ಯಾಂ ಸಮ್] ತನ್ನ ಸೃಜನ, ಪೋಷಣ ಸಾಮರ್ಥ್ಯಗಳಿಂದಲೂ [ಪತತ್ರೈ ಸಮ್] ಗತಿಶೀಲ ಚೇತನರಾದ ಜೀವಾತ್ಮರುಗಳ ಮೂಲಕವೂ [ಧಮತಿ] ಪ್ರಾಣವನ್ನು ಊದುತ್ತಿದ್ದಾನೆ.
     ಎಂತಹ ಸೊಗಸಾಗಿದೆ, ಈ ವರ್ಣನೆ! ಕಣ್ಣು, ಮುಖ, ಬಾಹು, ಪಾದ ಮೊದಲಾದ ಶಬ್ದಗಳನ್ನು ಕಂಡು ಭಗವಂತ ಸಾಕಾರನೋ ಎಂಬ ಭ್ರಾಂತಿಗೆ ಬಲಿಬೀಳುವುದು ಬೇಡ. ಭಗವಂತ ಸರ್ವವ್ಯಾಪಕನಾದ ಕಾರಣ, ಸರ್ವಥಾ ನಿರಾಕಾರ ಎಂದು ಮೊದಲೇ ಓದಿದ್ದೇವೆ. ಕಣ್ಣು, ಮುಖ, ಕೈಕಾಲು ಇಲ್ಲದಿದ್ದರೂ, ಭಗವಂತ ಅಂಗೋಪಾಂಗಗಳು ಮಾಡಬಹುದಾದ ಕೆಲಸವನ್ನೆಲ್ಲಾ ಅಶರೀರನಾಗಿಯೇ ಮಾಡುತ್ತಿದ್ದಾನೆ ಎನ್ನುವುದೇ ಈ ಮಂತ್ರದ ಭಾವನೆ. ಶಬ್ದಾರ್ಥವನ್ನೇ ಹಿಡಿದು ಹೊರಟರೆ ಎಲ್ಲೆಡೆಯೂ ಕಣ್ಣು, ಎಲ್ಲೆಡೆಯೂ ಮುಖ, ಎಲ್ಲೆಡೆಯೂ ಕೈ, ಎಲ್ಲೆಡೆಯೂ ಕಾಲು ಇರುವ ಎದೆ, ಬೆನ್ನು, ಹೊಟ್ಟೆ ಹಾಗೂ ಕಿವಿಯೇ ಇಲ್ಲದ, ಜಗತ್ತಿನ ಯಾವ ದೇವಸ್ಥಾನದಲ್ಲಿಯೂ, ಯಾವ ಕಲಾಮಂದಿರದಲ್ಲಿಯೂ ಕಾಣಿಸದ ವಿಚಿತ್ರ ಮೂರ್ತಿಯೊಂದನ್ನು ಊಹಿಸಿಕೊಳ್ಳಬೇಕಾದೀತು. ಆದರೆ ವೇದಗಳ ಭಾಷಾಶೈಲಿಯನ್ನು ಬಲ್ಲ ಯಾರೂ ಮೋಸ ಹೋಗಲಾರರು. ಸರ್ವತ್ರ ವ್ಯಾಪಕನಾದ, ಸರ್ವಕರ್ತೃ, ಸರ್ವಪಾತ್ರವಾದ ಭಗವಂತನಿರುವುದು ಒಬ್ಬನೇ. ಈ ಮಂತ್ರದಲ್ಲಿಯೂ "ಏಕ ದೇವಃ" ಎಂಬ ಶಬ್ದಗಳಿವೆ. ಮೊದಲು ಉದ್ಗರಿಸಿದ ಯಜುರ್ವೇದ ಮಂತ್ರವೊಂದರಲ್ಲಿಯೂ ನಾವು "ಏಕಮ್" ಎಂಬ ಶಬ್ದವನ್ನು ಕಾಣುತ್ತೇವೆ.
-ಪಂ. ಸುಧಾಕರ ಚತುರ್ವೇದಿ.

ಆಹಾ, ನಾವ್ ಆಳುವವರು!

ಆಹಾ, ನಾವ್ ಆಳುವವರು
ಓಹೋ ನಾವ್ ಅಳಿಸುವವರು ||ಪ||


ಕುರ್ಚಿಯ ಕಾಲ್ಗಳನೊತ್ತುವೆವು
ತಡೆದರೆ ಕೈಯನೆ ಕಡಿಯುವೆವು|

ದೇಶವ ಪೊರೆಯುವ ಹಿರಿಗಣರು
ಖಜಾನೆ ಕೊರೆಯುವ ಹೆಗ್ಗಣರು|


ಜಾತ್ಯಾತೀತರು ಎನ್ನುವೆವು
ಜಾತೀಯತೆಯ ಬೆಳೆಸುವೆವು|


ಗಾಂಧಿಯ ನಾಮ ಜಪಿಸುವೆವು
ಬ್ರಾಂದಿಯ ಕುಡಿದು ಮಲಗುವೆವು|


ಬಿದ್ದರೆ ಪಾದವ ಹಿಡಿಯುವೆವು
ಎದ್ದರೆ ಎದೆಗೆ ಒದೆಯುವೆವು|


ಪಾದಯಾತ್ರೆಯನು ಮಾಡುವೆವು
ಕುರ್ಚಿಯ ಕನಸನು ಕಾಣುವೆವು|


ಗೆದ್ದವರನೆ ನಾವ್ ಕೊಳ್ಳುವೆವು
ಸ್ವಂತದ ಸೇವೆಯ ಮಾಡುವೆವು|

ಸಮಾಜ ಸೇವಕರೆನ್ನುವೆವು
ದೇಶವ ಹರಿದು ತಿನ್ನುವೆವು|
*********
-ಕವಿನಾಗರಾಜ್.