ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ. ಬುದ್ಧಿಜೀವಿಗಳೆನಿಸಿಕೊಂಡವರು ಸಾಮಾನ್ಯವಾಗಿ ಪುರೋಹಿತಶಾಹಿ ಎಂಬ ಪದವನ್ನು ಒಂದು ವರ್ಗದವರನ್ನು ದೂಷಿಸಲು ಕಾರಣವಾಗಿಯೋ, ಅಕಾರಣವಾಗಿಯೋ ಸುಲಭವಾಗಿ ಬಳಸುವ ಪದವಾಗಿದೆ. ಇಂದು ಅನೇಕ ಪದಗಳು ಮೂಲ ಅರ್ಥದಲ್ಲಿ ಬಳಕೆಯಾಗದೆ ವಿರುದ್ಧಾರ್ಥದಲ್ಲಿ ಬಳಕೆಯಾಗುತ್ತಿರುವುದು ವಿಪರ್ಯಾಸ. ಜಾತಿಯ ಬಲದಲ್ಲೇ ರಾಜಕಾರಣ ಮಾಡುತ್ತಿರುವವರು ಜಾತ್ಯಾತೀತತೆಯ ಮಾತನಾಡುತ್ತಾರೆ. ಯಾವುದಾದರೂ ಒಂದು ಕೋಮನ್ನು ದ್ವೇಷಿಸುವುದೇ ಬಂಡವಾಳವಾಗಿರುವವರು ಕೋಮು ಸೌಹಾರ್ದತೆಯ ಮಾತನಾಡುತ್ತಾರೆ. ಕೋಟ್ಯಾಧೀಶರಾದರೂ, ಅಧಿಕಾರಸ್ಥಾನದಲ್ಲಿದ್ದು ಇತರರನ್ನು ನಿಯಂತ್ರಿಸುವ ಶಕ್ತಿಯಿರುವವರೂ ಹಿಂದುಳಿದವರು, ದಲಿತರು, ಶೋಷಿತರು ಎನಿಸಿಕೊಳ್ಳುವವರಿದ್ದಾರೆ. ಕಡುಬಡವರಾಗಿದ್ದರೂ ಹುಟ್ಟಿನ ಜಾತಿಯ ಕಾರಣ ಮುಂದುವರೆದವರು ಎಂದೆನಿಸಿಕೊಂಡವರಿದ್ದಾರೆ. ಮೂಲ ಅರ್ಥ ಕಳೆದುಕೊಂಡು ಸವಕಲಾಗಿರುವ ಪದಗಳ ಸಾಲಿನಲ್ಲಿ ಸೇರಿರುವ ಈ ಪುರೋಹಿತ ಪದದ ಮೂಲ ಅರ್ಥ ಕುರಿತು ವಿಶ್ಲೇಷಿಸುವುದೇ ಈ ಲೇಖನದ ಉದ್ದೇಶವಾಗಿದೆ.
ಮೂಲ ಸಂಸ್ಕೃತ ಪದವಾದ ಪುರೋಹಿತ ಎಂಬ ಪದದ ಶಬ್ದಾರ್ಥ ಪುರಸ್ ಎಂದರೆ ಮುಂದೆ ಹಿತ ಎಂದರೆ ಇಡಲ್ಪಟ್ಟವನು ಅರ್ಥಾತ್ ಮುಂದೆ ಇರಿಸಲ್ಪಟ್ಟವನು, ಅಗ್ರಣಿ, ಮುಂದಿರುವವನು ಎಂದು. ಒಬ್ಬ ವ್ಯಕ್ತಿ ಪುರೋಹಿತನೆಂದು ಗೌರವಿಸಲ್ಪಡಬೇಕಾದರೆ ಆತನಲ್ಲಿ ವಿಶೇಷವಾದ ಜ್ಞಾನ ಮತ್ತು ಗುಣಗಳು ಇರಬೇಕಾಗುತ್ತದೆ. ಸಂದಿಗ್ಧ ಸಂದರ್ಭಗಳಲ್ಲಿ, ಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ ಅದಕ್ಕೆ ಸೂಕ್ತ ಪರಿಹಾರಗಳನ್ನು, ಸಮಸ್ಯೆಗಳಿಂದ ಹೊರಬರುವ ಮಾರ್ಗೋಪಾಯಗಳನ್ನು ತಿಳಿಸಬಲ್ಲ ಶಕ್ತಿ ಆತನಲ್ಲಿರಬೇಕಾಗುತ್ತದೆ. ಮುಂದಿರುವುದರಿಂದ ಹಿಂದೆ ಇರುವವರಿಗೆ ಆತ ಸಹಜವಾಗಿ ಮಾರ್ಗದರ್ಶಕನಾಗಿರಬೇಕಾಗುತ್ತದೆ. ಇತರರಿಗೆ ಬುದ್ಧಿ ಹೇಳಬೇಕಾದರೆ ಆತ ಸ್ವತಃ ಜ್ಞಾನವಂತ, ಶೀಲವಂತ, ಚಾರಿತ್ರ್ಯವಂತನಾಗಿರಬೇಕಾಗುತ್ತದೆ. ಇಂತಹ ಗುಣಗಳಿರುವವರು ಮಾತ್ರ ನೈಜ ಪುರೋಹಿತರೆನಿಸಿಕೊಳ್ಳಬಲ್ಲರು. ಪಂಡಿತರು ಎಂಬ ಪದ ಸಮಾನಾರ್ಥವನ್ನು ಕೊಡುವುದಾಗಿದೆ. ಗುರುಗಳು, ಸಾಧು-ಸಂತರು, ಸರ್ವರ ಹಿತವನ್ನು ಬಯಸುವವರೆಲ್ಲರೂ ಪುರೋಹಿತರೇ ಆಗುತ್ತಾರೆ. ಇದಕ್ಕೆ ಯಾವುದೇ ಜಾತಿಯ ಕಟ್ಟಾಗಲೀ, ಲೇಪವಾಗಲೀ ಇಲ್ಲವೆಂಬುದಕ್ಕೆ ಇತಿಹಾಸದಲ್ಲಿ ಅಸಂಖ್ಯ ಉದಾಹರಣೆಗಳಿವೆ. ವಿಶ್ವಾಮಿತ್ರ, ವಸಿಷ್ಠ, ವ್ಯಾಸ, ವಾಲ್ಮೀಕಿ ಮುಂತಾದ ಅನೇಕ ಋಷಿಮುನಿಗಳು ಒಂದು ಜಾತಿಯ ಎಲ್ಲೆಗೆ ಸೇರಿದವರಲ್ಲವೆಂಬುದನ್ನು ನೆನಪಿನಲ್ಲಿಡಬೇಕಿದೆ.
ಹೆಮ್ಮೆಯ ವಿಜಯನಗರ ಸಂಸ್ಥಾನದ ರೂವಾರಿ ವಿದ್ಯಾರಣ್ಯರು ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಶಿಷ್ಯ ಮಾಧವನಿಗೂ (ಅರ್ಚಕರ ಮಗನಾಗಿದ್ದ ವಿದ್ಯಾರಣ್ಯರ ಪೂರ್ವಾಶ್ರಮದ ಹೆಸರು) ಕೇಳಿದ್ದರು: ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?
ಮಾಧವ ಉತ್ತರಿಸಿದ್ದ: ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ.
ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದ್ದರು. ಮುಂದಿನದು ಇತಿಹಾಸ. ಹಕ್ಕ-ಬುಕ್ಕರನ್ನು ಮುಂದಿಟ್ಟುಕೊಂಡು ದೇಶ ಮತ್ತು ಧರ್ಮದ ಹಿತ ಕಾಪಾಡುವ ಧ್ಯೇಯದ ವಿಜಯನಗರ ಸಂಸ್ಥಾನ ಸ್ಥಾಪಿಸಿದರು. ವಿದ್ಯಾರಣ್ಯರು ಕೇವಲ ಮಾರ್ಗದರ್ಶಕರಾಗಿ ಉಳಿದರು. ಇದು ಆದರ್ಶ ಪುರೋಹಿತನ ಲಕ್ಷಣ.
ಹಿಂದಿನ ರಾಜ-ಮಹಾರಾಜರುಗಳ ಆಸ್ಥಾನದಲ್ಲಿ ರಾಜಪುರೋಹಿತರುಗಳು ಇರುತ್ತಿದ್ದರು. ಅವರುಗಳು ಧಾರ್ಮಿಕ ಆಚರಣೆಗಳ ಕುರಿತಲ್ಲದೆ, ಸಮಸ್ಯೆಗಳು ಬಂದಾಗ ಅವನ್ನು ಎಲ್ಲಾ ದೃಷ್ಟಿಯಿಂದ ನೋಡಿ ಸೂಕ್ತ ಪರಿಹಾರ ರೂಪಿಸುವಲ್ಲಿ ರಾಜರಿಗೆ ನೆರವಾಗುತ್ತಿದ್ದರು. ಚಾಣಕ್ಯ, ಸಮರ್ಥ ಗುರು ರಾಮದಾಸರು ಮುಂತಾದ ನೂರಾರು ಮಾರ್ಗದರ್ಶಕರ ನೆರವಿನಿಂದ ಸನಾತನ ಸಂಸ್ಕೃತಿ ಜೀವಂತವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡ, ಸಾವಿರಾರು ಜನರಿಗೆ ಪ್ರೇರೇಪಣೆ ನೀಡಿದ ಸಾಧು-ಸಂತರ ಸಂಖ್ಯೆ ಗಣನೀಯವಾಗಿದೆ. ಒಮ್ಮೆ ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯ ಸ್ವಾಮಿ ಶ್ರದ್ಧಾನಂದರ ಆಶ್ರಮಕ್ಕೆ ಬ್ರಿಟಿಷ್ ಪೋಲಿಸರು ನುಗ್ಗಿ ತಪಾಸಣೆ ನಡೆಸಿದ್ದರು. ಅವರಿಗೆ ಅಲ್ಲಿ ಬಾಂಬುಗಳನ್ನು ತಯಾರಿಸಲಾಗುತ್ತಿದೆಯೆಂಬ ಗುಮಾನಿ ಇತ್ತಂತೆ. ಹುಡುಕಿದರೂ ಏನೂ ಸಿಗದೆ ಪೋಲಿಸರು ವಾಪಸಾಗಿದ್ದರು. ನಂತರದಲ್ಲಿ ಶ್ರದ್ಧಾನಂದರು ಅಲ್ಲಿದ್ದ ತಮ್ಮ ಶಿಷ್ಯರನ್ನು ಉದ್ದೇಶಿಸಿ ಕಣ್ಣ ಮುಂದೆಯೇ ಇದ್ದ ಜೀವಂತ ಬಾಂಬುಗಳನ್ನು ಪೋಲಿಸರು ಗುರುತಿಸದೇ ಹೋದರಲ್ಲಾ! ಎಂದು ತಮಾಷೆ ಮಾಡಿದ್ದರು. ಅಲ್ಲಿ ತಯಾರಾಗುತ್ತಿದ್ದುದು ಕೃತಕ ಬಾಂಬುಗಳಲ್ಲ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಬಲ್ಲ ಜೀವಂತ ಶಿಷ್ಯರ ರೂಪದಲ್ಲಿನ ಬಾಂಬುಗಳು! ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರು ನಮ್ಮ ಸಂಸ್ಕೃತಿಯ ಪುರೋಹಿತರು! ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಾರ್ಶನಿಕತೆ, ವಿದ್ವತ್ತುಗಳಿಗೆ ಹೆಸರಾದ ಸರ್ ಎಂ. ವಿಶ್ವೇಶ್ವರಯ್ಯ, ಡಿವಿಜಿ, ಡಾ. ರಾಧಾಕೃಷ್ಣನ್, ಅಬ್ದುಲ್ ಕಲಾಂ ಮುಂತಾದವರು, ನಾಡು-ನುಡಿಗಳಿಗೆ ಜೀವ ಸವೆಸಿದ ಅಸಂಖ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಗ್ರಣಿಗಳಾಗಿದ್ದು ಇತರರಿಗೆ ಮಾರ್ಗದರ್ಶಿಯಾಗಿದ್ದುದನ್ನು ಸ್ಮರಿಸಬೇಕು. ಇಂತಹವರು ನಿಜ ಪುರೋಹಿತರು, ಪುರದ ಹಿತ ಬಯಸುವವರು!
ಪುರೋಹಿತನಾದವನ ಗುರುತರವಾದ ಹೊಣೆಗಾರಿಕೆ ಎಂದರೆ ಎಡವದೆ ನಡೆಯಬೇಕಾಗಿರುವುದು ಮತ್ತು ತಿಳಿದ ಜ್ಞಾನವನ್ನು ಸಮಾಜಕ್ಕೆ ತಿಳಿಸಿಕೊಡುವುದಾಗಿರುತ್ತದೆ. ಅಗ್ರಣಿಯಾದವನೇ ಎಡವಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಲ್ಲದೆ ಪುರೋಹಿತರೆಲ್ಲರೂ ಅಂತಹವರೇ ಎಂಬ ಭಾವನೆ ಮೂಡಲು ಕಾರಣವಾಗುತ್ತದೆ. ಕೆಸರೆರಚಲು ಕಾಯುತ್ತಿರುವ ಜನರು ಮತ್ತು ಮಾಧ್ಯಮಗಳವರು ಇದಕ್ಕೆ ನೀರೆರೆಯುತ್ತಾರೆ. ಕಾವಿ ಧರಿಸಿದವರೆಲ್ಲರೂ ಸಂತರಾಗಲಾರರು ಮತ್ತು ಸಂತರಾಗಲು ಕಾವಿಯನ್ನೇ ಧರಿಸಬೇಕೆಂದಿಲ್ಲ. ತಿಳಿದ ಜ್ಞಾನವನ್ನು ಆಸಕ್ತರಿಗೆ ಹಂಚದಿರುವುದು ಸಹ ಸ್ತೇಯ(ಕಳ್ಳತನ)ವೆನಿಸುತ್ತದೆ. ಸರ್ವೇ ಭವನ್ತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಶಂತು ಮಾ ಕಶ್ಚಿತ್ ದುಃಖಭಾಗ್ಭವೇತ್|| ಎಂದು ಸಾರುವ ನೈಜ ಪುರೋಹಿತರು ನಾವಾಗೋಣ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ