ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಮೇ 21, 2014

ಪುನರ್ಜನ್ಮ

     ಕೆಲವು ದಶಕಗಳ ಹಿಂದೆ ದೇವಮಾನವ ಶಿರಡಿ ಸಾಯಿಬಾಬರ ನಿಜವಾದ ಪುನರವತಾರ ತಾವೆಂದು ಹೇಳಿಕೊಳ್ಳುತ್ತಿದ್ದ ಹಲವರನ್ನು ನಾವು ಕಂಡಿದ್ದೆವು. ಅವರುಗಳು ಕ್ರಮೇಣ ಜನಮಾನಸದಿಂದ ದೂರವಾದರು. ನಂತರ ಅವರುಗಳು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ, ಏನಾಗಿದ್ದಾರೋ ಗೊತ್ತಿಲ್ಲ. ಇರಲಿ ಬಿಡಿ. ಪುನರ್ಜನ್ಮದ ಕುರಿತು ಹಲವಾರು ರೀತಿಯ ಸಂಶೋಧನೆಗಳು, ಜಿಜ್ಞಾಸೆಗಳು, ತರ್ಕ-ಕುತರ್ಕಗಳು ನಡೆದಿವೆ, ನಡೆಯುತ್ತಿವೆ, ನಡೆಯುತ್ತಲೇ ಇರುತ್ತವೆ. ಅದರ ಜೊತೆಗೆ ನನ್ನದೂ ಒಂದೆರಡು ಸಾಲುಗಳನ್ನು ಸೇರಿಸುವ ಸಲುವಾಗಿ ಈ ಪೀಠಿಕೆ ಅಷ್ಟೆ. ಹಿಂದೂ ಧರ್ಮದಲ್ಲಿ ಪುನರ್ಜನ್ಮವನ್ನು ನಂಬಲಾಗುತ್ತದೆ. ಪರಮಾತ್ಮನೂ ದುಷ್ಟ ಶಿಕ್ಷಣ-ಶಿಷ್ಟ ರಕ್ಷಣೆಯ ಸಲುವಾಗಿ ಹತ್ತು ಅವತಾರಗಳನ್ನು ಎತ್ತಿದ್ದನೆಂದು ಹೇಳುತ್ತಾರೆ. ದೇವರು ಪುನರವತಾರಗಳನ್ನು ಎತ್ತಿದ್ದನೋ, ಇಲ್ಲವೋ ಎಂಬ ಬಗ್ಗೆ ಚರ್ಚಿಸುತ್ತಾ ವಿಷಯಾಂತರ ಮಾಡದೆ ಪುನರ್ಜನ್ಮದ ಬಗ್ಗೆ ಮಾತನಾಡೋಣ.
     ಪುನರ್ಜನ್ಮದ ಕುರಿತು ಮಾತನಾಡಬೇಕಾದರೆ ಜನ್ಮದ ಕುರಿತ ವಿಚಾರದಿಂದಲೇ ಪ್ರಾರಂಭವಾಗಬೇಕು. ಈ ಜಗತ್ತಿನಲ್ಲಿ ಎಷ್ಟೊಂದು ಬಗೆಯ ಜೀವ ವೈವಿಧ್ಯಗಳಿವೆ. ಅಷ್ಟೊಂದು ಜೀವರಾಶಿಗಳು ಏಕೆ ಇದ್ದಾವೆ ಮತ್ತು ಏಕೆ ಇರಬೇಕು ಎಂಬುದಕ್ಕೆ ಉತ್ತರ 'ಅವನೇ' ಬಲ್ಲ. ನಮಗೆ ತಿಳಿದಿರುವಂತೆ ಲಕ್ಷಾಂತರ ಜೀವರಾಶಿಗಳ ಪೈಕಿ ಮಾನವಜೀವಿ ಎದ್ದು ಕಾಣುವಂತಹ ಮತ್ತು ಇತರ ಜೀವಿಗಳಿಗಿಂತ ಭಿನ್ನವಾದ ವೈಚಾರಿಕ ಶಕ್ತಿ ಮತ್ತು ವಿವೇಚನಾ ಶಕ್ತಿ ಇರುವ ಜೀವಿ. ಈ ಜೀವಸಂಕುಲವನ್ನು ಸ್ಟೃಸಿದ್ದಾದರೂ ಯಾರು? ದೇವರು ಸೃಷ್ಟಿಸಿದನೆಂದರೆ ಏಕೆ ಸೃಷ್ಟಿಸಿದ? ದೇವರಿಗೆ ಬೇಕಿತ್ತು, ಸೃಷ್ಟಿಸಿದ ಎಂದರೆ ಏನಾದರೂ ಬೇಕು ಅನ್ನಿಸಿದರೆ ಅವನು ದೇವರು ಎನಿಸಿಕೊಳ್ಳಲಾರ. ಹಾಗಾಗಿ ಇದು ಸರಿಯೆನಿಸುವುದಿಲ್ಲ. ಇರಲಿ ಬಿಡಿ, ಇದನ್ನು ಮುಂದುವರೆಸದೆ ಮಾನವ ಜೀವಿಗಳ ಬಗ್ಗೆ ಮಾತನಾಡೋಣ. ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರಾಗಿ ಹುಟ್ಟುತ್ತಾರೆ, ಕೆಲವರು ದಡ್ಡರಿರುತ್ತಾರೆ, ಕೆಲವರು ಬುದ್ಧಿವಂತರಿರುತ್ತಾರೆ, ಕೆಲವರು ಸುಂದರರಾಗಿರುತ್ತಾರೆ, ಕೆಲವರು ಕುರೂಪಿಗಳಾಗಿರುತ್ತಾರೆ, ಕೆಲವರು ಅಂಗವಿಕಲರಾಗಿರುತ್ತಾರೆ. ಏಕೆ? ನಾವು ಹುಟ್ಟಿದ್ದೇವೆ, ಇದ್ದೇವೆ ಎಂಬ ಸತ್ಯ ನಮಗೆ ಅರ್ಥವಾಗುತ್ತದೆ. ಆದರೆ ನಮ್ಮ ತಂದೆ-ತಾಯಿಗಳು ಇಂಥವರೇ ಆಗಿರಬೇಕು ಎಂಬ ಆಯ್ಕೆ ನಮ್ಮ ಕೈಯಲ್ಲಿದೆಯೇ? ನಾವು ಹೀಗೆಯೇ ಹುಟ್ಟಬೇಕು, ಇಂತಹ ಜಾತಿಯಲ್ಲೇ ಹುಟ್ಟಬೇಕು ಎಂದು ಬಯಸಲು ಸಾಧ್ಯವಿದೆಯೇ? ಇಲ್ಲ. ಏಕೆ? ನಮ್ಮ ಯಾವುದೇ ತಪ್ಪಿಲ್ಲದೆ ಹೀನ, ದೀನ ಸ್ಥಿತಿಯಲ್ಲಿ ಹುಟ್ಟುವುದಾದರೆ ಅದನ್ನು ದೇವರು ಮಾಡಿದ ಪಕ್ಷಪಾತ ಎನ್ನಲೇಬೇಕಾಗುತ್ತದೆ. ದೇವರು ಪಕ್ಷಪಾತ ಮಾಡುತ್ತಾನೆ ಎಂದರೆ ಯಾರು ನಂಬುತ್ತಾರೆ? ಹೆಚ್ಚಿನವರು ನಂಬುವುದಿಲ್ಲ. ದೇವರು ಪಕ್ಷಪಾತಿಯಲ್ಲ ಅನ್ನುವುದಾದರೆ ಈ ರೀತಿ ಹುಟ್ಟುವುದಕ್ಕೆ ಬೇರೆ ಏನೋ ಕಾರಣವಿರಲೇಬೇಕು. ಅದು ಏನು?
     ಪುನರ್ಜನ್ಮವನ್ನು ನಂಬುವುದಾದರೆ ಶರೀರ ಬೇರೆ ಮತ್ತು ಶರೀರದ ಚೈತನ್ಯಕ್ಕೆ ಕಾರಣವೆನಿಸಿದ ಜೀವಾತ್ಮ ಬೇರೆ ಅನ್ನುವುದನ್ನು ಒಪ್ಪಲೇಬೇಕಾಗುತ್ತದೆ. ಸತ್ತ ನಂತರ ಶರೀರ ಅಂತ್ಯ ಸಂಸ್ಕಾರದ ಮೂಲಕ ಪಂಚಭೂತಗಳಲ್ಲಿ ವಿಲೀನವಾಗುತ್ತದೆ. ಜೀವಾತ್ಮ ಜೀರ್ಣವಾದ ಬಟ್ಟೆಯನ್ನು ಎಸೆದು ಹೊಸ ಬಟ್ಟೆಯನ್ನು ತೊಡುವಂತೆ ಹೊಸ ಶರೀರದಲ್ಲಿ ಚೈತನ್ಯಶಾಲಿಯಾಗುತ್ತದೆ. ಇದನ್ನು ಒಪ್ಪುವುದಿಲ್ಲವೆಂದರೆ ಅಂತ್ಯ ಸಂಸ್ಕಾರದ ಜೊತೆಗೆ ಆತ್ಮವೂ ನಾಶವಾಗುತ್ತದೆ ಎನ್ನಬೇಕಾಗುತ್ತದೆ. ಯಾವುದು ಸರಿಯಿರಬಹುದು? ಪುನರ್ಜನ್ಮವಿಲ್ಲವೆಂದಾದರೆ ಹುಟ್ಟುವಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಡವ, ಶ್ರೀಮಂತ, ಹೀನ-ದೀನ, ಅಂಗವಿಕಲ, ಇತ್ಯಾದಿಯಾಗಿ ತಮ್ಮ ಯಾವುದೇ ತಪ್ಪಿಲ್ಲದೆ ಹುಟ್ಟುವುದಕ್ಕೆ ಸಮಂಜಸ ಕಾರಣ ಕೊಡುವುದು ಕಷ್ಟವಾಗುತ್ತದೆ. ಜೀವಾತ್ಮ ಅವಿನಾಶಿ, ಆದಿ-ಅಂತ್ಯಗಳಿಲ್ಲದುದು ಎಂದು ವೇದ ಹೇಳುತ್ತದೆ. ಮಾಡಿದ ಕರ್ಮಕ್ಕನುಸಾರವಾಗಿ ಜನ್ಮಗಳು ಪ್ರಾಪ್ತವಾಗುತ್ತದೆ ಎಂದು ವೇದ ಸಾರುತ್ತದೆ. ಕರ್ಮಫಲಭೋಗ ಅನಿವಾರ್ಯ ಎಂದು ಗೀತೆ ಘೋಷಿಸುತ್ತದೆ. ಅಥರ್ವ ವೇದದ ಈ ಮಂತ್ರ ನೋಡಿ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ ಸಹಾಯದಿಂದ ಮೋಕ್ಷ ಸಿಗುತ್ತದೆ ಎಂಬುದೂ ಕೂಡ ಇಲ್ಲ ಮತ್ತು ಇದಕ್ಕೆ ಆಧಾರವೂ ಇಲ್ಲ. ನಮ್ಮ ಈ ಒಡಕಿಲ್ಲದ, ಗೂಢವಾಗಿ ಇಡಲ್ಪಟ್ಟಿರುವ ಅಂತಃಕರಣದ ಪಾತ್ರೆಯಲ್ಲಿ  ಬೇಯಿಸಿದ ಅನ್ನವು (ಕರ್ಮಫಲವಿಪಾಕ) ಅದನ್ನು ಬೇಯಿಸಿದವನನ್ನು ಪುನಃ ಮರಳಿ ಸೇರಿಯೇ ತೀರುತ್ತದೆ ಎಂಬುದು ಈ ಮಂತ್ರ ಅರ್ಥ. ಮಾಡಿದ್ದುಣ್ಣೋ ಮಹರಾಯ! ಜೀವಿತ ಕಾಲದಲ್ಲಿ ಮಾಡಿದ ಒಳ್ಳೆಯ, ಕೆಟ್ಟ ಕಾರ್ಯಗಳಿಗೆ ಅಂತರ್ನಿಹಿತವಾದ ಮಾಪಕವಿದ್ದು, ಅದರಲ್ಲಿ ಎಲ್ಲವೂ ದಾಖಲಾಗುತ್ತದೆ. ಅದಕ್ಕೆ ತಕ್ಕಂತೆ ಮುಂದಿನ ಜನ್ಮ ನಿರ್ಧರಿಸಲ್ಪಡುತ್ತದೆ. ಇದನ್ನು ಒಪ್ಪುವುದಾದರೆ, ಹುಟ್ಟುವಾಗಲೇ ಮೇಲೆ ಹೇಳಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನಿಸುವುದಕ್ಕೆ ಕಾರಣ ಸಿಗುತ್ತದೆ. ಇದಲ್ಲದೆ ಬೇರೆ ಕಾರಣಗಳು ಅಷ್ಟೊಂದು ಸಮಂಜಸವಾಗಿ ತೋರಲಾರವು.
     ತಮ್ಮ ಯಾವುದೇ ತಪ್ಪಿಲ್ಲದೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನಿಸುವುದೇ ಪುನರ್ಜನ್ಮವನ್ನು ಸಮರ್ಥಿಸಬಹುದಾದ ಒಂದು ಪ್ರಬಲ ಕಾರಣವೆನಿಸುತ್ತದೆ. ಇದಕ್ಕೆ ಪೂರಕವಾಗಿ ಒಬ್ಬರೇ ತಂದೆ-ತಾಯಿಗಳಿಗೆ ಜನಿಸಿದ ಎಲ್ಲಾ ಮಕ್ಕಳೂ ಒಂದೇ ರೀತಿಯ ಗುಣ-ಸ್ವಭಾವದವರಾಗಿರುವುದಿಲ್ಲ. ಪುನರ್ಜನ್ಮವಿಲ್ಲವೆಂದಾದರೆ ಒಬ್ಬ ತಂದೆ-ತಾಯಿಗಳಿಗೆ ಹುಟ್ಟಿದ, ಒಂದೇ ರೀತಿಯ ಪರಿಸರದಲ್ಲಿ ಬೆಳೆದ ಮಕ್ಕಳೆಲ್ಲರೂ ಒಂದೇ ರೀತಿಯ ಗುಣ-ಸ್ವಭಾವದವರಾಗಬೇಕಿತ್ತು. ಹೀಗೆ ಇರುವ ಸಂಭವ ಅತಿ ಕಡಿಮೆಯೆಂದೇ ಹೇಳಬೇಕು. ಜೀವಿಯು ತನ್ನ ಜೀವಿತ ಕಾಲದಲ್ಲಿ ಮಾಡುವ ಪಾಪ/ಪುಣ್ಯ ಕಾರ್ಯಗಳಿಗನುಸಾರವಾಗಿ ಮುಂದಿನ ಜನ್ಮದಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಅಥವ ಹೀನ-ದೀನ ಸ್ಥಿತಿಯಲ್ಲಿ ಜನಿಸುತ್ತಾನೆ ಎಂದರೆ ಒಪ್ಪಬಹುದು. ಒಪ್ಪದಿದ್ದರೆ, ಅಂತಹ ಸ್ಥಿತಿಯಲ್ಲಿ ಹುಟ್ಟಲು ದೇವರೊಬ್ಬನೇ ಕಾರಣ ಎನ್ನುವುದಾದರೆ ಜೀವಿಯು ಮುಂದೆ ತಾನು ಮಾಡುವ ಒಳ್ಳೆಯ/ಕೆಟ್ಟ ಕಾರ್ಯಗಳಿಗೆ ದೇವರೇ ಹೊಣೆಗಾರ ಎನ್ನಬೇಕಾಗುತ್ತದೆಯೇ ಹೊರತು ಜೀವಿಯನ್ನು ಹೊಣೆ ಮಾಡಲಾಗದು ಅಲ್ಲವೇ? ಅರ್ಥಾತ್ ಒಬ್ಬ ಕೊಲೆ ಮಾಡಿದರೂ ಅದಕ್ಕೆ ಅಂತಹ ಬುದ್ಧಿ ಕೊಟ್ಟ ದೇವರನ್ನೇ ಹೊಣೆ ಮಾಡಬೇಕಾಗುತ್ತದೆ. ಇದು ತರ್ಕಕ್ಕಾಗಲೀ, ವೈಜ್ಞಾನಿಕವಾಗಲೀ, ಧಾರ್ಮಿಕವಾಗಲೀ ಅಥವ ಇನ್ನಾವುದೇ ವಾದಕ್ಕಾಗಲೀ ಸಮಂಜಸವಾಗಿ ಕಾಣುವುದಿಲ್ಲ. ಅದೂ ಅಲ್ಲದೆ, ಧರ್ಮ, ಮೋಕ್ಷ, ಸನ್ನಡತೆ, ದುರ್ನಡತೆ, ಇತ್ಯಾದಿಗಳಿಗೆ ಅರ್ಥವೇ ಇರುವುದಿಲ್ಲ.
     ಪುನರ್ಜನ್ಮವಿದೆ ಅನ್ನುವುದಾದರೆ ಹಿಂದಿನ ಜನ್ಮಗಳ ನೆನಪು ಏಕೆ ಇರುವುದಿಲ್ಲ ಎಂಬ ವಾದವೂ ಮುಂದೆ ಬರುತ್ತದೆ. ಒಂದು ವೇಳೆ ನೆನಪು ಇದ್ದಿದ್ದರೆ ಏನಾಗಬಹುದಿತ್ತು? ಹಿಂದಿನ ಜನ್ಮದಲ್ಲಿ ಹೆಂಡತಿಯಾಗಿದ್ದವಳು ನಂತರದಲ್ಲಿ ಅಕ್ಕನೋ, ತಂಗಿಯೋ ಅಥವ ಮಗಳೋ ಆಗಿ ಹುಟ್ಟಿದ್ದರೆ ಮತ್ತು ಅದರ ಅರಿವು ಜೀವಿಗೆ ಇದ್ದರೆ ಆಗುವ ಮನೋವೇದನೆಗಳು/ಭಾವಗಳು ತರ್ಕಕ್ಕೆ ನಿಲುಕದು. ಹಿಂದೊಮ್ಮೆ ಆಗರ್ಭ ಶ್ರೀಮಂತನಾಗಿದ್ದು, ಈಗ ಬಡವನ ಮನೆಯಲ್ಲಿ ಜನಿಸಿದ್ದರೆ ಮತ್ತು ಅದರ ಅರಿವಿದ್ದರೆ ಏನಾಗುತ್ತಿತ್ತು? ತಾನು ಹಿಂದಿದ್ದ ಮನೆಗೆ ಹೋಗಿ ಅವರಿಂದ ಪಾಲು ಪಡೆಯಲು ಹೋದರೆ ಏನಾಗಬಹುದು? ಕೇವಲ ಉದಾಹರಣೆಗಾಗಿ ಇವನ್ನು ಹೇಳಿದ್ದಷ್ಟೇ. ಇಂತಹ ಅನೂಹ್ಯ ಪ್ರಸಂಗಗಳು ಎದುರಾಗಿ ಬದುಕು ದುರ್ಭರವೆನಿಸುವ ಸಾಧ್ಯತೆಗಳೇ ಜಾಸ್ತಿ. ಆದ್ದರಿಂದ ಹಿಂದಿನ ಜನ್ಮದ ನೆನಪು ಇಲ್ಲದಿರುವುದೇ ಒಂದು ರೀತಿಯಲ್ಲಿ ದೇವರ ಕರುಣೆಯೆನ್ನಬೇಕು. ಹಿಂದಿನ ಜನ್ಮದ ಸಂಸ್ಕಾರ/ಪ್ರಭಾವ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪು ಇರುವ ಹಲವಾರು ಪ್ರಕರಣಗಳನ್ನೂ ನಾವು ಕಾಣುತ್ತಿರುತ್ತೇವಲ್ಲವೆ?
     ಋಗ್ವೇದದ ಈ ಮಂತ್ರ ನೋಡಿ:
ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್|
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ||  (ಋಕ್. ೧.೧೬೪.೩೦.)
     ಅಂತಃಸ್ಥಿತವಾದ ಪರಮಾತ್ಮ ತತ್ವ ಅತ್ಯಂತ ಚೈತನ್ಯಯುತವಾಗಿದ್ದು, ಜೀವದಾನ ಮಾಡುವಲ್ಲಿ, ಲೋಕ ಲೋಕಾಂತರಗಳಲ್ಲಿ ಸಂಚರಿಸುವಲ್ಲಿ ಪ್ರಧಾನವಾಗಿದೆ. ಮೃತರಾದವರ ಜೀವಾತ್ಮಕ್ಕೆ ಸಾವಿಲ್ಲದೆ ಇದ್ದು, ನಂತರದಲ್ಲಿ ಅದು ಸಾವು ಇರುವ ಶರೀರದಲ್ಲಿ ಪ್ರವೇಶಿಸಿ, ತನಗೆ ಪ್ರಾರಬ್ಧ ರೀತಿಯಲ್ಲಿ (ಕರ್ಮ ಫಲಾನುಸಾರವಾಗಿ) ಸಿಕ್ಕಿದ ಪರಿಸರದಲ್ಲಿ ಸಂಚರಿಸುತ್ತಿರುತ್ತದೆ ಎಂಬುದು ಈ ಮಂತ್ರದ ಅರ್ಥ. ಈ ರೀತಿಯಲ್ಲಿ ಪ್ರತಿ ಜೀವಿಯೂ ಹಿಂದೆ ಎಷ್ಟು ಜನ್ಮಗಳನ್ನು ಹಾದು ಬಂದಿದೆಯೋ, ಮುಂದೆ ಎಷ್ಟು ಜನ್ಮಗಳನ್ನು ಎತ್ತಬೇಕಿದೆಯೋ ಯಾರಿಗೆ ಗೊತ್ತು? ಶಂಕರಾಚಾರ್ಯರ 'ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ' ಎಂಬ ಉಕ್ತಿ ಹೇಳುವುದೂ ಇದನ್ನೇ!
     ಪುರುಷರು ಪುರುಷರಾಗಿಯೇ ಜನಿಸುತ್ತಾರೆಯೇ? ಸ್ತ್ರೀ ಸ್ತ್ರೀಯಾಗಿಯೇ ಜನಿಸುತ್ತಾಳೆಯೇ? ಇಲ್ಲ, ವೇದದ ಪ್ರಕಾರ ಜೀವಾತ್ಮಕ್ಕೆ ಲಿಂಗ ಭೇದವಿಲ್ಲ, ಜೀವಭೇದವೂ ಇಲ್ಲ. ಗಳಿಸಿದ ಕರ್ಮಫಲಾನುಸಾರವಾಗಿ ಯಾವ ಜೀವಿಯಾಗಿಯಾದರೂ ಜನಿಸಬಹುದಾಗಿರುತ್ತದೆ. ಈ ಮಂತ್ರ ನೋಡಿ:
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ|
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ|| (ಅಥರ್ವ.೧೦.೮.೨೭)
     ಜೀವಾತ್ಮವು ಸ್ತ್ರೀಯೂ ಆಗಿದೆ, ಪುರುಷನೂ ಆಗಿದೆ, ಕುಮಾರನೂ ಆಗಿದೆ, ಕುಮಾರಿಯೂ ಆಗಿದೆ. ವೃದ್ಧಾಪ್ಯದ ನಂತರದಲ್ಲಿ ಮೃತನಾದ ಮೇಲೆ ಮತ್ತೆ ಜನ್ಮವೆತ್ತಿ ಎಲ್ಲೆಡೆಯೂ ಪ್ರವೇಶಿಸುವುದಾಗಿದೆ ಎಂದು ಈ ಮಂತ್ರ ಹೇಳುತ್ತದೆ. ಲಿಂಗರಹಿತವಾದ ಜೀವಾತ್ಮವು ತಾನು ಹೊಂದಿದ ಶರೀರಕ್ಕೆ ಅನುಗುಣವಾಗಿ ಸ್ತ್ರೀ, ಪುರುಷ, ಕುಮಾರ ಅಥವ ಕುಮಾರಿ ಎಂದು ಕರೆಸಿಕೊಳ್ಳುತ್ತದೆ. ಜೀವಾತ್ಮವು ಅನೇಕ ಜನ್ಮಗಳನ್ನೆತ್ತುತ್ತಾ ವಿಕಾಸವಾಗುತ್ತಾ ಹೋಗಿ, ಜ್ಞಾನ, ಕರ್ಮ, ಉಪಾಸನೆಗಳ ಫಲವಾಗಿ ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಾ ಸತ್ಕರ್ಮದ ಫಲವಾಗಿ ಮೋಕ್ಷ ಸ್ಥಿತಿ ತಲುಪುತ್ತದೆ ಎಂದು ವೇದ ಸಾರುತ್ತದೆ.
     ಒಂದಂತೂ ನಮಗೆ ಅರ್ಥವಾಗುತ್ತದೆ, ಅದೇನೆಂದರೆ ನಾವು ಇಂದು ಇರುವ ಸ್ಥಿತಿಗೆ ನಮ್ಮ ಹಿಂದಿನ ಕರ್ಮಗಳು ಕಾರಣೀಭೂತವಾಗಿವೆ ಎನ್ನುವುದಾದರೆ, ಮುಂದೆ ಏನಾಗಬೇಕು ಎಂದು ನಾವು ಬಯಸುತ್ತೇವೆಯೋ ಅದಕ್ಕೆ ನಮ್ಮ ಇಂದಿನ ಕರ್ಮಗಳು ನೆರವಾಗುತ್ತವೆ ಅಲ್ಲವೇ? ಜನ್ಮ ಜನ್ಮಾಂತರಗಳ ಒಂದು ಸ್ವಾರಸ್ಯಕರ ಸಂಗತಿಯನ್ನು ಪ್ರಸ್ತಾಪಿಸಿ ಲೇಖನ ಮುಗಿಸುವೆ. ಜೀವಾತ್ಮ ಅವಿನಾಶಿ ಎಂದರೆ ನಾವು ಎಂದೆಂದೂ ಇದ್ದೆವು, ಮುಂದೆಯೂ ಇರುತ್ತೇವೆ ಅಲ್ಲವೇ? ಅಂದರೆ, ನಾವು ಈಗ ದೇವರೆಂದು ಪೂಜಿಸುವ ರಾಮ, ಕೃಷ್ಣ, ಶಿವರ ಕಾಲದಲ್ಲಿಯೂ ಇದ್ದೆವು. ನಾವು ಆಗ ರಾಮನೇ ಆಗಿದ್ದಿರಬಹುದು, ರಾವಣನೇ ಆಗಿರಬಹುದು, ವಾಲಿ, ಸುಗ್ರೀವರಾಗಿದ್ದಿರಬಹುದು ಅಥವ ಇನ್ನು ಯಾರೋ ಆಗಿದ್ದಿರಬಹುದು. ಬುದ್ಧ, ಮಹಾವೀರ, ಬಸವಣ್ಣ, ಏಸುಕ್ರಿಸ್ತರವರಂತವರುಗಳ ಕಾಲದಲ್ಲಿಯೂ ನಾವು ಯಾವುದೋ ರೀತಿಯಲ್ಲಿ ಇದ್ದೆವು ಅಲ್ಲವೇ? ರಾಮ ಒಳಿತಿನ ಸಂಕೇತ ಮತ್ತು ರಾವಣ ಕೆಡುಕಿನ ಸಂಕೇತವೆಂದು ಇಟ್ಟುಕೊಂಡರೆ, ರಾವಣತ್ವ ಕಳೆದುಕೊಂಡರೆ ರಾವಣನೂ ರಾಮ ಆಗುತ್ತಾನಲ್ಲವೇ? ರಾಮನಾಗುವುದೋ ಅಥವ ರಾವಣನಾಗುವುದೋ ಅಥವ  ಬಯಸಿದಂತೆ ಮತ್ತೇನೋ ಆಗುವುದೋ ಎಂಬುದು ಜೀವಿಯ ಕೈಯಲ್ಲಿಯೇ ಇದೆ.
-ಕ.ವೆಂ.ನಾಗರಾಜ್.    
*********************
19.05.2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ.


ಮಂಗಳವಾರ, ಮೇ 13, 2014

ಅಂತರಂಗದ ಆಟ

ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
     ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ಸ್ನೇಹಿತರೊಂದಿಗೆ ಸೇರಿ ಎಲ್ಲವನ್ನೂ ಮರೆತು ಕುಡಿ, ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ,  ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ, 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.
     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. ಖ ಅಂದರೆ ಇಂದ್ರಿಯ, ಸು-ಖ-  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ-ಖ- ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕುಣಿದರೆ/ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
     ಮನಸ್ಸಿನ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೇವೆ, ಅಲ್ಲವೇ? ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ವಿವಿಧ ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಮಾಡಬೇಕಾದ ಅಂತಹ ಕೆಲಸಗಳಿಗೆ ನಾಚಿಕೊಳ್ಳಬೇಕಿಲ್ಲ, ಆದರೆ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
     ಮನಸ್ಸಿನ ನಿಯಂತ್ರಣದ ಕುರಿತು ಎಲ್ಲರೂ ಮಾತನಾಡುತ್ತೇವೆ, ಅದರ ಅಗತ್ಯವನ್ನೂ ತಿಳಿದಿದ್ದೇವೆ. ಆದರೆ ಅದನ್ನು ಸಾಧಿಸುವುದಾದರೂ ಹೇಗೆ? ಸಹಾಯ ಮಾಡುವವರಾದರೂ ಯಾರು? ಈ ವಿಷಯದಲ್ಲಿ ಸಹಾಯಕ್ಕೆ ಬರುವವರೆಂದರೆ ಯಾರು ಸ್ವತಃ ತಮ್ಮ ಮನಸ್ಸನ್ನು ನಿಯಂತ್ರಿಸಿಕೊಂಡಿರುತ್ತಾರೋ ಅವರು ಮಾತ್ರ! ಮನಸ್ಸಿನ ನಿಯಂತ್ರಣ ಒಂದು ಅಂತರಂಗದ ಆಟ. ಈ ಅಟದಲ್ಲಿ ನಾವು ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ, ಕೆಲವೊಮ್ಮೆ ಎಡವುತ್ತೇವೆ. ಈ ಆಟ ಆಡಲು ಚತುರತೆ, ಎಚ್ಚರಿಕೆ, ಹೃದಯದ ಶ್ರೀಮಂತಿಕೆ, ಯೋಜಿಸುವ ಸಾಮರ್ಥ್ಯ, ತಾಳ್ಮೆ, ಸಹನೆ, ಇತ್ಯಾದಿಗಳೆಲ್ಲವೂ ಇರಬೇಕಾಗುತ್ತದೆ. ಗೆದ್ದಾಗ ಮೈಮರೆಯದೆ, ಸೋತಾಗ ಕುಗ್ಗದೆ ಇರುವ ಮನೋಭಾವವಿರಬೇಕಾಗುತ್ತದೆ. 
ವಿಷಯಲೋಲುಪತೆ ವಿಷಕಿಂತ ಘೋರ
ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?|
ಅಂತರಂಗದ ದನಿಯು ಹೊರದನಿಯು ತಾನಾಗೆ
ಹೊರಬರುವ ದಾರಿ ತೋರುವುದು ಮೂಢ|| 
     ಭಗವದ್ಗೀತೆಯಲ್ಲಿನ ಕರ್ಮಯೋಗದಲ್ಲಿನ ಅರ್ಜುನ ಶ್ರೀಕೃಷ್ಣನಿಗೆ ಕೇಳುವ ಈ ಪ್ರಶ್ನೆ ನಮ್ಮಂತಹ ಸಾಮಾನ್ಯರ ಪ್ರಶ್ನೆಯೂ ಆಗಿದೆ: ಅಥಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷಃ | ಅನಿಚ್ಛನ್ನಪಿ ವಾರ್ಷ್ಣೇಯ ಬಲಾರ್ದಿವ ನಿಯೋಜಿತಃ || (೩.೩೬) - 'ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮಾಡಲ್ಪಡುವವನಂತೆ ಮನುಷ್ಯನು ಪಾಪವನ್ನು ಮಾಡಲು ಇರುವ ಪ್ರೇರಣೆಯಾದರೂ ಎಂತಹುದು?' ಎಂಬ ಅರ್ಜುನನ ಈ ಪ್ರಶ್ನೆ ಮಹತ್ವದ್ದಾಗಿದೆ. 'ಕುಡಿಯುವುದು ಕೆಟ್ಟದ್ದು ಎಂದು ಸ್ವತಃ ಕುಡುಕನಿಗೇ ಗೊತ್ತಿದ್ದರೂ ಆತ ಏಕೆ ಕುಡಿಯುತ್ತಾನೆ?' ಎಂದು ಕೇಳಿದಂತೆ ಈ ಪ್ರಶ್ನೆ ಇದೆ. ಶ್ರೀಕೃಷ್ಣ ಈ ಪ್ರಶ್ನೆಗೆ ಕೊಟ್ಟ ಉತ್ತರ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಆತ ಹೇಳುತ್ತಾನೆ, "ಕಾಮ, ಕ್ರೋಧಗಳು ರಜೋಗುಣದಿಂದ ಹುಟ್ಟಿದ್ದು ಇವುಗಳನ್ನು ತೃಪ್ತಿಗೊಳಿಸಲಾಗದು. ಹೊಗೆಯಿಂದ ಬೆಂಕಿ, ಧೂಳಿನಿಂದ ಕನ್ನಡಿ ಮುಚ್ಚಿ ಹೋಗುವಂತೆ ಈ ಪ್ರಪಂಚ ಕಾಮ-ಕ್ರೋಧಗಳಿಂದ ಮುಚ್ಚಿಹೋಗಿದೆ. ಇಂದ್ರಿಯಗಳು, ಬುದ್ಧಿ, ಮನಸ್ಸು ಇವುಗಳು ಕಾಮದ ನೆಲೆವೀಡುಗಳು. ಆದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಿ, ಜ್ಞಾನ-ವಿಜ್ಞಾನಗಳನ್ನು ನಾಶ ಮಾಡುವ ಕಾಮವನ್ನು ಹತ್ತಿಕ್ಕಬೇಕು." ಮುಂದುವರೆದು ಹೇಳುತ್ತಾನೆ: ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ | ಮನಸಸ್ತು ಪರಾ ಬುದ್ಧರ್ಯೋ ಬುದ್ಧೇಃ ಪರತಸ್ತು ಸಃ || (೩.೪೨) - 'ವಿಷಯಗಳಿಗಿಂತ ಇಂದ್ರಿಯಗಳು ಹೆಚ್ಚಿನವು, ಇಂದ್ರಿಯಗಳಿಗಿಂತ ಮನಸ್ಸು ಹೆಚ್ಚಿನದು, ಬುದ್ಧಿಯು ಮನಸ್ಸಿಗಿಂತ ಹೆಚ್ಚಿನದು. ಈ ಬುದ್ಧಿಗಿಂತಲೂ ಆತ್ಮ ಶ್ರೇಷ್ಠವಾದುದು.' ಆತ್ಮ ಜ್ಞಾನವನ್ನು ಅರಿಯುವ ಅಂತರಂಗದ ಆಟ ಆಡಲು ತೊಡಗಿದಾಗ, ಆ ಆಟದಲ್ಲಿ ತನ್ಮಯತೆಯಿಂದ ತೊಡಗಿಕೊಂಡಾಗ ಇದರ ಸತ್ಯಾಸತ್ಯತೆ ಅರಿವು ಗೊತ್ತಾಗುತ್ತಾ ಹೋಗುತ್ತದೆ. ಈ ಅಟದಲ್ಲಿ ಗೆಲ್ಲಬೇಕೆಂದರೆ ಮೊದಲು ಮನಸ್ಸನ್ನು ನಿಯಂತ್ರಿಸಬೇಕೆಂಬ ಧೃಡವಾದ ಸಂಕಲ್ಪ ಹೊಂದಬೇಕು, ಮನಸ್ಸಿನ ಸ್ವಭಾವವನ್ನು ಅರಿಯಬೇಕು ಮತ್ತು ಅದಕ್ಕಾಗಿ ನಮ್ಮದೇ ಆದ ತಂತ್ರಗಳು, ರೀತಿ-ನೀತಿಗಳನ್ನು ರೂಪಿಸಿಕೊಂಡು ಅವುಗಳನ್ನು ಬುದ್ದಿವಂತಿಕೆಯಿಂದ, ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು. 'ಚಪಳೆ ಸೊಡರ ಕುಡಿಯಂ ಪೋಲ್ವಳ್' ಎಂದು ಲಕ್ಷ್ಮಿ(ಸಂಪತ್ತು)ಯನ್ನು ಕುರಿತು ಕವಿ ವರ್ಣಿಸುತ್ತಾನೆ. ಆದರೆ, ನಮ್ಮ ಮನಸ್ಸು ಅನ್ನುವುದಿದೆಯಲ್ಲಾ, ಅದರ ಚಂಚಲತೆಯನ್ನು ಮೀರಿಸುವ ಮತ್ತೊಂದು ಸಂಗತಿ ಜಗತ್ತಿನಲ್ಲಿ ಇದೆಯೇ? ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ. 
-ಕ.ವೆಂ.ನಾಗರಾಜ್.
**************
12.5.2014ರ ಜನಮಿತ್ರದಲ್ಲಿ ಪ್ರಕಟಿತ 'ಚಿಂತನ':

ಬುಧವಾರ, ಮೇ 7, 2014

ನಕಾರಾತ್ಮಕ ಶಕ್ತಿ ವಿಜೃಂಭಿಸುವುದೇಕೆ?

     ಬಸ್ಸಿನಲ್ಲಿ ನಿಂತಿದ್ದ ವೃದ್ಧರೊಬ್ಬರ ಕಾಲು ತುಳಿದುಕೊಂಡೇ ಹೋದವನನ್ನು ಕುರಿತು, 'ಏಯ್, ಕಣ್ಣು ಕಾಣಿಸುವುದಿಲ್ಲವಾ? ನೋಡಿಕೊಂಡು ಹೋಗಬಾರದಾ?' ಎಂದು ಆ ವೃದ್ಧರು ನೋವಿನಿಂದ ನರಳುತ್ತ ಕಿರುಚಿದರು. ತಿರುಗಿ ನಿಂತ ಆ ಧಡಿಯ ಕೆಂಗಣ್ಣು ಬಿಡುತ್ತಾ ಆ ವೃದ್ಧರ ಕೆನ್ನೆಗೆ ಬಾರಿಸಿದ. ಅವರು ಅನಿರೀಕ್ಷಿತವಾದ ಈ ಪೆಟ್ಟಿನಿಂದ ತಲ್ಲಣಿಸಿ ಕೈಲಿದ್ದ ಚೀಲವನ್ನೂ ಬೀಳಿಸಿಕೊಂಡು ಕುಸಿದು ಕುಳಿತಿದ್ದರು. ಬಸ್ಸಿನಲ್ಲಿ ಜನ ತುಂಬಿದ್ದರೂ ಒಬ್ಬರೂ ಆ ಧಡಿಯನ ವಿರುದ್ಧ ದ್ವನಿ ಎತ್ತಲಿಲ್ಲ. ತಮಗೆ ಸಂಬಂಧವಿಲ್ಲವೆಂಬಂತೆ ಎತ್ತಲೋ ನೋಡುತ್ತಾ ಇದ್ದುಬಿಟ್ಟರು. ಆ ಧಡಿಯನಷ್ಟೇ ಬಲಶಾಲಿಗಳಾಗಿ ತೋರುತ್ತಿದ್ದ ಒಬ್ಬಿಬ್ಬರು ಬಸ್ಸಿನಲ್ಲಿ ಇದ್ದರೂ ಅವರೂ ಸುಮ್ಮನಿದ್ದರು. ಏಕೆ ಹೀಗೆ? ಹಿಂದೊಮ್ಮೆ ಕೊಲೆ ಮೊಕದ್ದಮೆ ಎದುರಿಸುತ್ತಿದ್ದ ರೌಡಿಯೊಬ್ಬ ನಗರಸಭೆಗೆ ಚುನಾವಣೆ ನಡೆದಾಗ ಮಚ್ಚು ಹಿಡಿದುಕೊಂಡು ಹಿಂದಿನ ದಿನ ಎಲ್ಲಾ ಮತದಾರರ ಮನೆಗಳಿಗೆ ಹೋಗಿ ಮತ ಕೇಳಿದ್ದ. ಆತ ಚುನಾವಣೆಯಲ್ಲಿ ಗೆದ್ದಿದ್ದೂ ಅಲ್ಲದೆ ಮುಂದೆ ನಗರಸಭೆಯ ಅಧ್ಯಕ್ಷನೂ ಆಗಿ ಆಯ್ಕೆಯಾದ! ಆಯ್ಕೆಯಾದ ಅನ್ನುವುದಕ್ಕಿಂತ ಆಯ್ಕೆ ಮಾಡಬೇಕಾಯಿತು ಅನ್ನುವುದು ಹೆಚ್ಚು ಸೂಕ್ತ. ಕಾಲಾನಂತರದಲ್ಲಿ ಕೊಲೆಯಾಗುವ ಮೂಲಕ ಅಂತ್ಯ ಕಂಡಿದ್ದ ಅನ್ನಿ. ಇಂತಹ ಘಟನೆಗಳು ಬಿಂಬಿಸುವುದಾದರೂ ಏನು? ದುಷ್ಟ ಶಕ್ತಿಗಳಿಗೆ ಪ್ರತಿರೋಧ ತೋರುವ ಮನೋಭಾವದ ಕೊರತೆ, ದುಷ್ಟತನವನ್ನು ಒಪ್ಪದ ಸಜ್ಜನರೆನಿಸಿಕೊಂಡವರು ಬಹಳ ಸಂಖ್ಯೆಯಲ್ಲಿದ್ದರೂ ಅವರು ಸಂಘಟಿತರಾಗದಿರುವುದು ಮತ್ತು ನಮಗೇಕೆ ಎಂಬ ಮನೋಭಾವ ದುಷ್ಟತನದ ಗೆಲುವಿಗೆ ಕಾರಣವಾಗುತ್ತಿದೆ.
     ಈ ಪ್ರಪಂಚ ನಕಾರಾತ್ಮಕ ಮತ್ತು ಸಕಾರಾತ್ಮಕ ಗುಣಗಳ ಮಿಶ್ರಣವಾಗಿದೆ. ಒಂದು ಇನ್ನೊಂದರ ಮೇಲೆ ಸವಾರಿ ಮಾಡಲು ಪ್ರಯತ್ನ ಮಾಡುತ್ತಲೇ ಇರುತ್ತದೆ ಮತ್ತು ಗೆಲ್ಲಲು ಏನೆಲ್ಲವನ್ನೂ ಮಾಡುತ್ತವೆ. ವಿಶೇಷವೆಂದರೆ ಯಾವುದೇ ಒಂದು ಪೂರ್ಣ ಗೆಲುವನ್ನು ಪಡೆಯಲಾರದು; ಗೆದ್ದರೂ ಅದು ತಾತ್ಕಾಲಿಕ ಗೆಲುವಾಗಿರುತ್ತದೆ. ಯಾವುದು ಸಮಾಜಕ್ಕೆ, ಪರಿಸರಕ್ಕೆ, ಇತರ ಜೀವಿಗಳಿಗೆ ಹಿತಕರವಾಗಿರುತ್ತದೋ ಅದನ್ನು ಸಕಾರಾತ್ಮಕ ಗುಣವೆನ್ನಬಹುದಾದರೆ, ಇದಕ್ಕೆ ತದ್ವಿರುದ್ಧವಾದುದು ನಕಾರಾತ್ಮಕ ಗುಣ. ಮನುಷ್ಯನಿಗೂ ಮತ್ತು ಇತರ ಪ್ರಾಣಿಗಳಿಗೂ, ಕ್ರಿಮಿ-ಕೀಟಗಳಿಗೂ, ಒಟ್ಟಾರೆ ಇತರ ಜೀವಿಗಳಿಗೂ ಇರುವ ವಿಶೇಷ ವ್ಯತ್ಯಾಸವೆಂದು ಗುರುತಿಸಬಹುದಾದುದೆಂದರೆ, ಅದು ಮನುಷ್ಯನಿಗೆ ಇರುವ ವಿವೇಚನೆ ಮಾಡುವ ಶಕ್ತಿ. ಆತ ತನ್ನ ವಿವೇಕದಿಂದ ಸಕಾರಾತ್ಮಕವಾದುದು ಯಾವುದು, ನಕಾರಾತ್ಮಕವಾದುದು ಯಾವುದು ಎಂದು ಗುರುತಿಸಬಲ್ಲ. ಆತನ ಇಚ್ಛಾಶಕ್ತಿ ಅನುಸರಿಸಿ ಆತ ಸಕಾರಾತ್ಮಕವಾಗಿರುತ್ತಾನೋ ಅಥವ ಅದಕ್ಕೆ ವಿರುದ್ಧವಾಗಿ ನಡೆಯುತ್ತಾನೋ ಎಂಬುದು ಅವಲಂಬಿಸಿರುತ್ತದೆ. ಒಬ್ಬ ಮನುಷ್ಯ ಸಕಾರಾತ್ಮಕವಾಗಿ ಯೋಚಿಸುವವನಾದರೆ ಸಕಾರಾತ್ಮಕ ಶಕ್ತಿ ಅವನನ್ನು ಬೆಂಬಲಿಸುತ್ತದೆ ಮತ್ತು ನಕಾರಾತ್ಮಕವಾಗಿ ಯೋಚಿಸಿದರೆ ಅವನ ಬೆಂಬಲಕ್ಕೆ ನಕಾರಾತ್ಮಕ ಶಕ್ತಿ ಇರುತ್ತದೆ. ಎಷ್ಟು ಜನರು ಇದನ್ನು ಬೆಂಬಲಿಸುತ್ತಾರೆ ಎಂಬುದರ ಮೇಲೆ ಇವುಗಳ ಗೆಲುವು ನಿರ್ಧರಿತವಾಗುತ್ತದೆ. ಕೆಲವೇ ದುಷ್ಟರು ಇದ್ದರೂ ಅವರು ಬಹಳಷ್ಟು ಸಜ್ಜನರ ಮೇಲೆ ಸವಾರಿ ಮಾಡುವುದು ಹೇಗೆ ಸಾಧ್ಯವಾಗುತ್ತದೆಂದರೆ, ಸಜ್ಜನರು ಒಟ್ಟಾಗಿ ಸಕಾರಾತ್ಮಕವಾಗಿ ಸ್ಪಂದಿಸದಿರುವುದೇ ಇದಕ್ಕೆ ಕಾರಣ. ತಮ್ಮ ಮಾತೇ ನಡೆಯಬೇಕು, ತಮ್ಮ ಮಾತಿಗೆ ಬೆಲೆ ಬರಬೇಕು ಎಂಬ ಕಾರಣಕ್ಕಾಗಿಯೇ ಇಂದು ಕ್ರಿಶ್ಚಿಯನರು ಮತ್ತು ಮುಸ್ಲಿಮರು ಮತಾಂತರದ ಮೂಲಕ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದರ ಮೂಲ ಕಾರಣ. ಒಟ್ಟಾರೆಯಾಗಿ ಸಮಾನ ವಿಚಾರಗಳು, ಭಾವನೆಗಳ ಜನಸಮೂಹ ಇಚ್ಛಿತ ಗುರಿಯನ್ನು ತಲುಪಬಲ್ಲದು.
     ಈ ಪ್ರಪಂಚದಲ್ಲಿನ ಬಹುತೇಕ ಸಮಸ್ಯೆಗಳಿಗೆ ಕಾರಣ ನಕಾರಾತ್ಮಕ ಶಕ್ತಿ ಮತ್ತು ನಕಾರಾತ್ಮಕ ವಿಚಾರಗಳೇ ಆಗಿವೆ. ನಕಾರಾತ್ಮಕ ಕಾರಣಗಳಿಂದಾಗಿ ಸಮಾಜದಲ್ಲಿ, ಸಂಸಾರಗಳಲ್ಲಿ ಸಮಸ್ಯೆಗಳು ಉದ್ಭವವಾಗುತ್ತವೆ. ನಕಾರಾತ್ಮಕವಾಗಿ ಯೋಚಿಸುವವರು ತಮ್ಮ ವಿವೇಚನಾಶಕ್ತಿಯನ್ನು ಸರಿಯಾಗಿ ಬಳಸುವುದಿಲ್ಲ. ಯಾವುದೇ ಸಂಗತಿಯನ್ನು ಒಪ್ಪುವುದಕ್ಕೆ ಮುನ್ನ ಅದರ ಕುರಿತು ಚಿಂತಿಸಿ, ಅರ್ಥ ಮಾಡಿಕೊಂಡು, ಚರ್ಚಿಸಿದ ನಂತರ ಅಂತರಂಗಕ್ಕೆ ಒಪ್ಪಿತವಾಗಬೇಕು ಎಂದು ವಿವೇಕ ಹೇಳುತ್ತದೆ. ಅದು ಸರಿಯಿರಲಿ, ಬಿಡಲಿ, ನಮ್ಮ ಧರ್ಮದಲ್ಲಿ ಈರೀತಿ ಇದೆ, ನಮ್ಮ ಪುರಾಣದಲ್ಲಿ ಹಾಗೆ ಹೇಳಿದೆ, ಹೀಗೆ ಹೇಳಿದೆ, ಅದನ್ನು ಕಣ್ಣು ಮುಚ್ಚಿ ಅನುಸರಿಸಬೇಕು ಎಂದು ಹೇಳುವುದಾದರೆ ವೈಚಾರಿಕತೆಗೆ ಅಡ್ಡಿಪಡಿಸಿದಂತಾಗುತ್ತದೆ. ಅದು ವೇದವಿರಲಿ, ಉಪನಿಷತ್ತಿರಲಿ, ಬೈಬಲ್ ಇರಲಿ, ಕುರಾನ್ ಇರಲಿ, ಇಂತಹ ಏನೇ ಇರಲಿ, ಅವುಗಳಲ್ಲಿನ ವಿಚಾರಗಳು ಮುಕ್ತ ವಿಮರ್ಶೆಗೆ ಒಳಪಡಬೇಕು. ಆಗ ಮಾತ್ರ ಅವು ಪುಟವಿಟ್ಟ ಚಿನ್ನದಂತೆ ಬೆಳಗುವುವು. ಸತ್ಯ ವಿಚಾರಗಳು ಎಲ್ಲಿಂದಲಾದರೂ ಬರಲಿ ಅವನ್ನು ಮುಕ್ತವಾಗಿ ಸ್ವಾಗತಿಸಬೇಕು ಅನ್ನುವುದು ಸಕಾರಾತ್ಮಕ ಗುಣವಾಗುತ್ತದೆ. ಸರಿಯೋ, ತಪ್ಪೋ ಅದನ್ನು ಪ್ರಶ್ನಿಸಬಾರದು, ಕಣ್ಣು ಮುಚ್ಚಿ ಒಪ್ಪಬೇಕು ಅನ್ನುವುದು ಸಕಾರಾತ್ಮಕ ಧೋರಣೆ ಎನಿಸದು. ಋಗ್ವೇದದ ಈ ಸಾಲು ಮನುಕುಲಕ್ಕೆ ಮಾರ್ಗದರ್ಶಿಯಾಗಿದೆ:
ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯.)
     ಇದರ ಅರ್ಥ ಹೀಗಿದೆ: 'ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ, ನೀವು ನಿಮ್ಮ ಸ್ವಂತ ಶಕ್ತಿಯಿಂದ ಸತ್ಯವನ್ನು ಆವಿಷ್ಕರಿಸಿರಿ, ಹೊರತನ್ನಿರಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನದ ಬಲದಿಂದ, ನಿಮ್ಮ ವೈಚಾರಿಕ ಶಕ್ತಿಯಿಂದ ದಮನ ಮಾಡಿರಿ.' ನಮ್ಮಲ್ಲಿ ಅಜ್ಞಾನವಿರುವವರೆಗೆ ನಮ್ಮಲ್ಲಿನ ಕೆಟ್ಟ ಗುಣಗಳು ನಾಶವಾಗಲಾರವು. ಮುಂದಿನ ಮಂತ್ರದಲ್ಲಿ ಈ ವಿಚಾರ ಮತ್ತಷ್ಟು ಸ್ಪಷ್ಟಪಡಿಸಲಾಗಿದೆ:
ಗೂಹತಾ ಗುಹ್ಯಂ ತಮೋ ವಿ ಯಾತ ವಿಶ್ವಮತ್ರಿಣಮ್ | ಜ್ಯೋತಿಷ್ಕರ್ತಾ ಯದುಶ್ಮಸಿ || (ಋಕ್.೧.೮೬.೧೦.)
     'ನಮ್ಮಲ್ಲಿರುವ ಆಂತರಿಕ ಕತ್ತಲೆಯನ್ನು, ಅಂದರೆ ಅಜ್ಞಾನವನ್ನು ಹೋಗಲಾಡಿಸಬೇಕು. ನಮ್ಮನ್ನು ನಾಶ ಮಾಡುವ ಎಲ್ಲಾ ದುರ್ಗುಣಗಳನ್ನು ದೂರೀಕರಿಸಬೇಕು. ಯಾವ ನೈಜ ಜ್ಞಾನವನ್ನು ಬಯಸುತ್ತೇವೆಯೋ ಆ ಜ್ಞಾನಜ್ಯೋತಿಯನ್ನು ಬೆಳಗಿಸಬೇಕು' ಎನ್ನುವ ಈ ಕರೆ ಅದೆಷ್ಟು ಆಪ್ಯಾಯಮಾನವಾಗಿದೆ! ಕಣ್ಣು ಮುಚ್ಚಿ ಅಂಧ ಮತ್ತು ಆರ್ಥರಹಿತ ಸಂಪ್ರದಾಯಗಳನ್ನು ಆಚರಿಸುವ ಬದಲು, ಹೃದಯಾಂತರಾಳದಿಂದ ವಿಚಾರ ಮಾಡಿ ಮನುಕುಲಕ್ಕೆ ಹಿತವಾದ ಒಳ್ಳೆಯ ಗುಣಗಳನ್ನು ಪ್ರಚೋದಿಸುವ ಕಾರ್ಯಗಳನ್ನು ಮಾಡಬೇಕೆಂಬ ಮನಸ್ಸನ್ನು ವೈಚಾರಿಕರು ಮಾಡಬೇಕಿದೆ.
     ಇಂದು ವಿಶ್ವವನ್ನು ಕಾಡುತ್ತಿರುವ ಮತೀಯ ಭಯೋತ್ಪಾದನೆಗಳು ನಕಾರಾತ್ಮಕ ವಿಚಾರಧಾರೆಯ ಫಲವಾಗಿದೆ. ಬಾಂಬುಗಳನ್ನು ಹಾಕಿ ಅಮಾಯಕರನ್ನು ಕೊಲ್ಲುವುದು, ಇತರ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವುದು, ಹಿಂಸಿಸುವುದು, ಅತ್ಯಾಚಾರವೆಸಗುವುದರಿಂದ ತಾವು ನಂಬಿದ ಧರ್ಮ/ಮತ/ವಿಚಾರಕ್ಕೆ ಪುಷ್ಟಿ ಸಿಗುತ್ತದೆ ಎಂದು ನಂಬುವ ಅವರ ಮನೋಭಾವ ಸರಿಯಾದುದೆಂದು ವೈಚಾರಿಕ ಪ್ರಜ್ಞೆಯುಳ್ಳ, ಪೂರ್ವಾಗ್ರಹಪೀಡಿತರಲ್ಲದ ಯಾರೇ ತಿಳಿದವರು ಹೇಳಲಾರರು. ಇಂತಹ ಹುಚ್ಚಾಟಗಳು ನಿಲ್ಲದೆ ವಿಶ್ವದಲ್ಲಿ ಮನುಷ್ಯ ಶಾಂತಿಯಿಂದ ಬಾಳಲಾರ. ಅವರನ್ನು ಸರಿದಾರಿಗೆ ತರಬೇಕೆಂದರೆ ಸದ್ವಿಚಾರಗಳನ್ನು ಸದ್ದಿಲ್ಲದೆ ತಮ್ಮ ತಮ್ಮೊಳಗೆ ಅಡಗಿಸಿಕೊಂಡಿರದೆ ಹೊರಬರಲು ಅವಕಾಶ ಕೊಡುವ ಮತ್ತು ಅಂತಹ ಕಿಡಿಗೇಡಿಗಳನ್ನು ಹದ್ದುಬಸ್ತಿನಲ್ಲಿಡುವ ಸಜ್ಜನಶಕ್ತಿ ಜಾಗೃತವಾಗುವ ಅವಶ್ಯಕತೆ ಇಂದು ಬಹಳವಾಗಿದೆ. ಎಲ್ಲಾ ಧರ್ಮಗಳ/ಮತಗಳ ಹಿರಿಯರೆನಿಸಿಕೊಂಡವರು ಈ ಸಜ್ಜನಶಕ್ತಿಯ ಜಾಗರಣದಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು. ಹೆಚ್ಚಿನವರು ಶಾಂತಿಪ್ರಿಯರು.  ಆದರೆ ಅವರಲ್ಲಿನ ಸಜ್ಜನಿಕೆ ಪ್ರಕಟವಾಗಬೇಕಷ್ಟೆ! ಆಗ ಮಾತ್ರ ಇಂತಹ ಕುಕೃತ್ಯಗಳು ನಿಲ್ಲುವುವು. 
     ಲೇಖನದ ಪ್ರಾರಂಭದಲ್ಲಿ ಹೇಳಿದ ಘಟನೆಗೆ ಈಗ ಮತ್ತೆ ಹಿಂತಿರುಗೋಣ. ವೃದ್ಧರಿಗೆ ಹೊಡೆದ ಆ ಧಡಿಯನ ವಿರುದ್ಧ ಯಾರಾದರೂ ತಿರುಗಿಬಿದ್ದು, ಅವರ ಬೆಂಬಲಕ್ಕೆ ಇತರರೂ ನಿಂತು ಆ ಧಡಿಯನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರು ಮತ್ತು ವೃದ್ಧರನ್ನು ಸಂತೈಸಿದರು ಎಂದಿಟ್ಟುಕೊಳ್ಳೋಣ. ಆಗ ಪರಿಣಾಮವೇನಾಗುತ್ತದೆ? ವೃದ್ಧರಿಗೆ ಸಮಾಧಾನವಾಗುತ್ತದೆ. ಆ ಧಡಿಯನಿಗೆ ಮತ್ತೊಮ್ಮೆ ಆ ರೀತಿ ವರ್ತಿಸುವ ಧೈರ್ಯ ಬರುವುದಿಲ್ಲ, ಅಲ್ಲವೇ? ಸಮಾಜದ ಹಿತಕ್ಕೆ ಧಕ್ಕೆ ತರುವಂತಹ ನಕಾರಾತ್ಮಕ ವಿಚಾರಗಳನ್ನು ನಿಯಂತ್ರಿಸಿ, ಸಕಾರಾತ್ಮಕ ವಿಚಾರಗಳಿಗೆ ಪ್ರೋತ್ಸಾಹ ಸಿಗಬೇಕೆಂದರೆ ಸಕಾರಾತ್ಮಕ ಗುಣ ಬೆಳೆಸುವಂತಹ ಅಂಶಗಳಿಗೆ ನೀರೆರೆಯಬೇಕು. ಅಂತಹ ಅಂಶಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದೆನಿಸುತ್ತದೆ:
೧. ಸುಯೋಗ್ಯ ಸಂಸ್ಕಾರ ನೀಡುವಂತಹ ಶಿಕ್ಷಣ ಪದ್ಧತಿ,
೨. ಉತ್ತಮ ವಿಚಾರಗಳಿಗೆ ಪ್ರೋತ್ಸಾಹ, ಮನನ, ಮಂಥನ,
೩. ಸತ್ಸಂಗಗಳಲ್ಲಿ ಪಾಲುಗೊಳ್ಳುವಿಕೆ,
೪. ದುರ್ಜನರಿಂದ, ದುಷ್ಟ ವಿಚಾರಗಳಿಂದ ದೂರವಿರುವುದು,
೫. ಅಸತ್ಯ, ಅನ್ಯಾಯಗಳಿಗೆ ತಲೆಬಾಗದಿರುವುದು, ಅವುಗಳ ವಿರುದ್ಧ ದ್ವನಿ ಎತ್ತುವುದು ಮತ್ತು ಹಾಗೆ ಮಾಡುವವರನ್ನು ಬೆಂಬಲಿಸುವುದು,
೬. ಭ್ರಷ್ಠಾಚಾರ, ಸ್ವಜನಪಕ್ಷಪಾತ, ಭಯೋತ್ಪಾದನೆ, ಮುಂತಾದ ಅನಿಷ್ಟಗಳ ವಿರುದ್ಧ ಜಾಗೃತರಾಗುವುದು ಮತ್ತು ಅಂತಹ ಪಿಡುಗುಗಳ ವಿರುದ್ಧದ ಹೋರಾಟಗಳಲ್ಲಿ ಸಕಿಯರಾಗಿ ಪಾಲುಗೊಳ್ಳುವುದು,
೭. ಯಾವುದೇ ಕೆಲಸ ಮಾಡುವ ಮುನ್ನ ಅದು ಸರಿಯಾಗಿದೆಯೇ ಎಂದು ಯೋಚಿಸಿ ನಂತರ ಆ ಕೆಲಸ ಮಾಡುವುದು,
೮. ಮಾಧ್ಯಮಗಳಲ್ಲಿ ನಕಾರಾತ್ಮಕ ವಿಷಯಗಳಿಗೆ ಈಗ ಸಿಗುತ್ತಿರುವ ಪ್ರೋತ್ಸಾಹವನ್ನು ನಿಯಂತ್ರಿಸುವುದು, ಇತ್ಯಾದಿ. 
     ಈ ಪಟ್ಟಿಯನ್ನು ನಮ್ಮ ನಮ್ಮ ವಿವೇಚನಾನುಸಾರ ಬೆಳೆಸುತ್ತಾ ಹೋಗಬಹುದು.
     ಒಂದಂತೂ ಸಮಾಧಾನಕರ ವಿಷಯವಿದೆ. ಅದೇನೆಂದರೆ ಯಾವೊಬ್ಬ ಮನುಷ್ಯನೂ ಪೂರ್ತಿ ಕೆಟ್ಟವನೂ ಅಲ್ಲ, ಒಳ್ಳೆಯವನೂ ಅಲ್ಲ. ಒಳ್ಳೆಯವರಾಗಲು, ಬದಲಾಗಲು ಎಲ್ಲರಿಗೂ ಅವಕಾಶವಿದೆ. ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಸಜ್ಜನಶಕ್ತಿ ಬೆಳೆಸುವುದು ಕಷ್ಟವೇನಲ್ಲ. ಸಕಾರಾತ್ಮಕ ಶಕ್ತಿ ಬೆಳೆದಷ್ಟೂ, ನಕಾರಾತ್ಮಕ ಶಕ್ತಿಯ ಬಲ ಕುಸಿಯುತ್ತದೆ. ಕಪ್ಪು ಮೋಡಗಳು ಚದುರಿದಾಗ ಸೂರ್ಯನ ಬೆಳಕು ತಾನಾಗಿ ಹೊಮ್ಮುವಂತೆ ಸಮಾಜದಲ್ಲಿ ನೆಮ್ಮದಿಯ ವಾತಾವರಣ ಮೂಡುತ್ತದೆ. ನಕಾರಾತ್ಮಕ ವಿಚಾರಧಾರೆ ಜೀವನ ಎಷ್ಟು ಕೆಟ್ಟದಾಗಿದೆಯೆಂದು ಬಿಂಬಿಸುತ್ತದೆ. ಸಕಾರಾತ್ಮಕ ವಿಚಾರಧಾರೆ ಕೆಟ್ಟಿರುವ ಜೀವನವನ್ನು ಹೇಗೆ ಸರಿಪಡಿಸಬೇಕೆಂದು ಚಿಂತಿಸುತ್ತದೆ. ಭವಿಷ್ಯವೆನ್ನುವುದು ನಾವು ಯಾವ ರೀತಿ ಚಿಂತಿಸುತ್ತೇವೆ, ನಿರ್ಧರಿಸುತ್ತೇವೆ ಮತ್ತು ಕಾರ್ಯಪ್ರವೃತ್ತರಾಗುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಧನಾತ್ಮಕ ಚಿಂತನೆ ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತದೆ. ಅಜ್ಞಾತ ಕವಿಯ ಈ ಕರೆಗೆ ಮನುಕುಲ ಓಗೊಟ್ಟರೆ ಬಹಳಷ್ಟು ಸಮಸ್ಯೆಗಳು ಹೇಳಹೆಸರಿಲ್ಲದಂತೆ ಓಡುತ್ತವೆ:
ನರರೆಲ್ಲ ಸರಿಸಮಾನ | ಎಂಬೀ ಪ್ರಬುದ್ಧ ಭಾವ |
ಉರದಲ್ಲಿ ಮೂಡುವಂತೆ | ಧೃತಿ ನೀಡು ಸತ್ಪ್ರಭಾವ ||
-ಕ.ವೆಂ.ನಾಗರಾಜ್.
**************
5.07.2014ರ 'ಜನಮಿತ್ರ'ದಲ್ಲಿ ಪ್ರಕಟಿತವಾಗಿದೆ.

ಭಾನುವಾರ, ಮೇ 4, 2014

ಸಾಕೆಂದರೆ ಅದುವೆ ಸಿರಿ!

ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ
ನಾನೆಂಬುದು ಅಜ್ಞಾನ ನನದೇನೆನಲು ಜ್ಞಾನ |
ದಾಸನಾದರೆ ಹಾಳು ಒಡೆಯನಾದರೆ ಬಾಳು
ಮನದೊಡೆಯನಾದವನೆ  ಮಾನ್ಯ ಮೂಢ ||
     ಮನಸ್ಸಿನಲ್ಲಿ ಏನೋ ಒಂದು ಆಸೆ ಇರುತ್ತದೆ. ಅದು ಈಡೇರಿದಾಗ ಸಂತೋಷವಾಗುತ್ತದೆ. ಆದರೆ ಅಲ್ಲಿಗೆ ಮುಗಿಯುತ್ತದೆಯೇ? ಇಲ್ಲ, ಇನ್ನೂ ಮುಂದಿನದನ್ನು ಪಡೆಯುವ ಆಸೆ ಹುಟ್ಟುತ್ತದೆ. ಅತೃಪ್ತಿ ಸಂತೋಷದ ಜಾಗವನ್ನು ಕಬಳಿಸಿಬಿಡುತ್ತದೆ. ನಾವು ಪುನಃ ಹೆಚ್ಚಿನದಕ್ಕಾಗಿ ಕಷ್ಟಪಡತೊಡುತ್ತೇವೆ. ಇದು ಮುಗಿಯುವುದೆಂದು? ಎಲ್ಲಿಯವರೆಗೆ ನಮಗೆ ಸಾಕು ಅನ್ನಿಸುವುದಿಲ್ಲವೋ ಅಲ್ಲಿಯವರೆಗೆ ಇದು ಇದ್ದೇ ಇರುತ್ತದೆ. ಸಾಕು ಅನ್ನಿಸಿದಾಗ ತೃಪ್ತಿ ನೆಲೆಸುತ್ತದೆ. ಇಂದಿನ ಆಧುನಿಕ ಪ್ರಪಂಚದಲ್ಲಿ ಸಂತೋಷ, ತೃಪ್ತಿ, ಆಂತರಿಕ ಶಾಂತಿ ಮತ್ತು ಜೀವನದ ಆನಂದಗಳನ್ನು ಅನುಭವಿಸುವುದು ದುಸ್ತರವೇನೋ ಅನ್ನಿಸುವ ಸ್ಥಿತಿ ಇದೆ. ಆಂತರಿಕ ಶಾಂತಿ, ಸಂತೋಷಗಳನ್ನು ಹುಡುಕುವುದೇ ಮಾನವರು ಎಂದಿನಿಂದಲೂ ಮಾಡಿಕೊಂಡು ಬರುತ್ತಿರುವ ಕೆಲಸವಾಗಿದ್ದು, ಸುಯೋಗ್ಯವಾದ ದಾರಿಯಲ್ಲಿ ಸಾಗಿ ಸಫಲರಾಗುವವರು ಕೆಲವರು ಮಾತ್ರ.
     ಸಾಕು ಅನ್ನಿಸಿದರೆ ತೃಪ್ತಿಯ ಹಂತ ತಲುಪಿದಂತೆ ಅನ್ನುವುದು ಸರಿ. ಈ ಸಾಕು ಅನ್ನುವ ಭಾವನೆ ಬೆಳೆಸಿಕೊಳ್ಳಲು ಅನುಸರಿಸಬೇಕಾದ ಒಂದು ನೈತಿಕ ಗುಣ ಮತ್ತು ಆಂತರಿಕ ಕಟ್ಟುಪಾಡು ಎಂದರೆ ಅದೇ  'ಅಪರಿಗ್ರಹ'. ಅಪರಿಗ್ರಹವೆಂದರೆ ಅಸಂಗ್ರಹ, ತನ್ನದೆಂಬ ಭಾವರಾಹಿತ್ಯ ಮತ್ತು ನಿರ್ಲಿಪ್ತತೆ ಎಂಬ ಆರ್ಥಗಳಿವೆ. ಇವುಗಳ ಅರ್ಥವೈಶಾಲ್ಯ ಎಷ್ಟಿದೆಯೆಂದರೆ ಗಂಟೆಗಟ್ಟಲೆ ಚರ್ಚೆ ಮಾಡುತ್ತಲೇ ಹೋಗಬಹುದಾಗಿದೆ. ಹಾಗಾದರೆ ನಾವು ಏನನ್ನೂ ಕೂಡಿಡಲೇಬಾರದೆ? ನಿರಾಸಕ್ತರಾಗಿ ಚಿಂದಿ ಬಟ್ಟೆ ತೊಟ್ಟು ಬೀದಿಯಲ್ಲಿ ಅಲೆದಾಡಬೇಕೆ? ಅಪರಿಗ್ರಹವೆಂದರೆ ಹೀಗೂ ಅಲ್ಲ. ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ಜನರನ್ನು ಮತ್ತು ಅವರ ಸ್ವಭಾವಗಳನ್ನು ಗಮನಿಸುತ್ತೇವಲ್ಲವೆ? ತಮೋಗುಣದವರು ಆಲಸಿಕರಾಗಿದ್ದರೆ, ರಜೋಗುಣದವರು ಮುನ್ನುಗ್ಗುವ, ರೋಷಾವೇಶದ ಸ್ವಭಾವದವರಾಗಿರುತ್ತಾರೆ. ಆದರೆ ಸಾತ್ವಿಕ ಗುಣದವರು ಮಾದರಿಯಾಗಿದ್ದು, ಅವರಲ್ಲಿ ತಮಸ್ ಮತ್ತು ರಜಸ್ ಗುಣಗಳ ಹಿತವಾದ ಸಾಂಗತ್ಯವಿರುತ್ತದೆ. ಭೌತಿಕ ಸಂಪತ್ತಿನ ಬಗ್ಗೆ ವೈರಾಗ್ಯ ತಳೆದು ವಾಸದ ಮನೆಯನ್ನೂ ತೊರೆದು, ದೇಹವನ್ನು ಬೆಚ್ಚಗಿಡುವ ಬಟ್ಟೆಗಳನ್ನೂ ವರ್ಜಿಸುವವರು ಅತಿರೇಕದ ಒಂದು ಕೊನೆಯಲ್ಲಿದ್ದರೆ, ಬಂದದ್ದೆಲ್ಲವನ್ನೂ ಕೂಡಿಡುತ್ತಾ, ಹೊರಗೆ ಹೋಗಲು ಬಿಡದ, ಅಗತ್ಯಕ್ಕಿಂತಲೂ ಹೆಚ್ಚು ಸಂಪತ್ತನ್ನು ಸಂಗ್ರಹಿಸುತ್ತಲೇ ಹೋಗುವವರು ಅತಿರೇಕದ ಮತ್ತೊಂದು ಕೊನೆಯಲ್ಲಿರುತ್ತಾರೆ. ಸಾತ್ವಿಕ ಗುಣದವರು ತಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಹೊಂದಿ ತೃಪ್ತರಾಗುತ್ತಾರೆ. ಇದು ಅಪರಿಗ್ರಹದ ಆದರ್ಶ ಸ್ಥಿತಿ, ಬದುಕಲು ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ಬಯಸುವುದು ಮತ್ತು ಪಡೆಯುವುದು.
     ನಮಗೆ ಜೀವಿಸಲು ಎಷ್ಟು ಅಗತ್ಯ ಮತ್ತು ಏನು ಅಗತ್ಯ? ನಮಗೆ ಅನುಕೂಲಕರವಾಗಿರಲು, ರಕ್ಷಣೆಯಿರಲು, ಆರೋಗ್ಯದಿಂದ ಇರಲು, ಉತ್ತಮ ಶಿಕ್ಷಣ ಹೊಂದಲು, ಇತ್ಯಾದಿ ಮೂಲಭೂತ ಅಗತ್ಯವಿರುವ ಸಂಗತಿಗಳು ಇರಬೇಕು. ಈ ಅಗತ್ಯ ಅನ್ನುವುದು ವಿಚಿತ್ರವಾಗಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಗತ್ಯವಾಗುತ್ತದೆ. ಆಡಳಿತಗಾರರಿಗೆ, ಅಧಿಕಾರಿಗಳಿಗೆ, ಸಾಮಾನ್ಯರಿಗೆ ಅವರ ಅಗತ್ಯಗಳು ಬೇರೆಯದೇ ಆಗಿರುತ್ತವೆ. ನನ್ನದೇ ಅನುಭವ ಇಲ್ಲಿ ಉಲ್ಲೇಖಿಸಬಹುದೆನಿಸುತ್ತಿದೆ. ನಾನು ಉಪತಹಸೀಲ್ದಾರನಾಗಿದ್ದಾಗ ನಾನು ಒಂದು ಮೊಪೆಡ್ ಹೊಂದಿದ್ದೆ. ನನ್ನ ಅಗತ್ಯಗಳಿಗೆ ಅದು ಸಾಕಿತ್ತು. ಅಲ್ಲದೆ ಹಾಸಿಗೆ ಇದ್ದಷ್ಟು ಕಾಲುಚಾಚುವ ಸ್ವಭಾವದವನಾದ ನನಗೆ ಆ ಸಂದರ್ಭದಲ್ಲಿ ಅದಕ್ಕಿಂತ ಹೆಚ್ಚಿನ ಬೆಲೆಯ ವಾಹನ ಹೊಂದುವುದು ಆಗಿರಲಿಲ್ಲ. 'ಟರ್..ರ್..ರ್..' ಎಂದು ಶಬ್ದ ಮಾಡುತ್ತಿದ್ದ ನನ್ನ ಮೊಪೆಡ್ಡಿನ ಪಕ್ಕದಲ್ಲಿಯೇ ನನ್ನ ಅಧೀನ ನೌಕರರಾದ ರೆವಿನ್ಯೂ ಇನ್ಸ್‌ಪೆಕ್ಟರ್, ಗ್ರಾಮಲೆಕ್ಕಿಗರುಗಳು 'ಗುಡು .ಗುಡು . .' ಶಬ್ದ ಮಾಡುತ್ತಾ ಬರುತ್ತಿದ್ದ ತಮ್ಮ ಬುಲೆಟ್, ಯೆಜ್ಡಿ ಮುಂತಾದ ಬೈಕುಗಳನ್ನು ನನ್ನ ಮೊಪೆಡ್ಡಿನ ಪಕ್ಕದಲ್ಲಿಯೇ ನಿಲ್ಲಿಸುತ್ತಿದ್ದರು. ಆನೆಗಳ ಮಧ್ಯದಲ್ಲಿ ಇದ್ದ ಕುರಿಯಂತೆ ನನ್ನ ಮೊಪೆಡ್ ಕಾಣಿಸುತ್ತಿತ್ತು. ನನ್ನ 'ಡಿಗ್ನಿಟಿ'ಗೆ ಬೈಕು ತೆಗೆದುಕೊಳ್ಳಲು ಹಲವರು ಸೂಚಿಸುತ್ತಲೂ ಇದ್ದರು. ೫-೬ ವರ್ಷಗಳು ಈ ಮೊಪೆಡ್ ಓಡಿಸುತ್ತಿದ್ದವನು ನಂತರ ಒಂದು ಸುಜುಕಿ ಸಮುರಾಯ್ ತೆಗೆದುಕೊಂಡು ನನ್ನ 'ಡಿಗ್ನಿಟಿ' ಹೆಚ್ಚಿಸಿಕೊಂಡಿದ್ದೆ! ತಹಸೀಲ್ದಾರನಾದ ಮೇಲೆ ಸರ್ಕಾರಿ ವಾಹನವೇ ಇತ್ತಾದ್ದರಿಂದ 'ಡಿಗ್ನಿಟಿ'ಗೆ ಧಕ್ಕೆಯಾಗಿರಲಿಲ್ಲ. ಈಗ ನಾನು ನಿವೃತ್ತನಾಗಿದ್ದೇನೆ. ಸುಜುಕಿ ಬೈಕು ಮಾರಿ ಒಂದು ಸ್ಕೂಟರ್ ಇಟ್ಟುಕೊಂಡಿದ್ದೇನೆ. ಇದು ನನ್ನ ಅಗತ್ಯಕ್ಕೆ ಸಾಕು. ಈ 'ಅಗತ್ಯ' ಅನ್ನುವುದು ವಿಚಿತ್ರ ಎಂದು ಈ ಕಾರಣಕ್ಕಾಗಿಯೇ ಹೇಳಿದ್ದು. ನಿಜ, ಒಬ್ಬ ಪ್ರಧಾನ ಮಂತ್ರಿಗೆ, ಒಂದು ದೊಡ್ಡ ಕಂಪೆನಿಯ ಮಾಲಿಕನಿಗೆ, ಗಣ್ಯರು ಮತ್ತು ಉನ್ನತ ಸ್ಥಾನಗಳಲ್ಲಿರುವವರಿಗೆ ಕೆಲವು ಹೆಚ್ಚಿನ ಅಗತ್ಯಗಳು ಅವರ ಸ್ಥಾನಮಾನಗಳಿಗೆ ತಕ್ಕಂತೆ ಇರಬೇಕಾಗುತ್ತದೆ, ಅವರುಗಳು ಇಷ್ಟಪಡಲಿ, ಇಷ್ಟಪಡದಿರಲಿ.
     ಅಪರಿಗ್ರಹದ ವಿಚಾರ ಚರ್ಚಿಸುವಾಗ ಅಪಾರಗ್ರಹಣದ ಅನಾನುಕೂಲಗಳನ್ನೂ ಗಮನಿಸೋಣ. ಹೆಚ್ಚಿನ ಹಣ, ಸಂಪತ್ತು, ಆಸ್ತಿ ಇತ್ಯಾದಿಗಳನ್ನು ಹೊಂದಿದವರಿಗೆ ಅವುಗಳ ರಕ್ಷಣೆ ಮತ್ತು ಉಳಿಸಿಕೊಳ್ಳುವ ಬಗ್ಗೆ ಗಮನವಿರಬೇಕಾಗುತ್ತದೆ, ಅವು ಎಲ್ಲಿ ಹಾಳಾಗುವುವೋ, ನಷ್ಟ ಹೊಂದುವವೋ ಎಂಬ ಆತಂಕ ಸಹ ಇರುತ್ತದೆ. ಹೊಸದಾಗಿ ಕೊಂಡ ಕಾರಿನ ಮೇಲೆ ಯಾರಾದರೂ ಗೀಚಿದರೆ ಅಥವ ಏನಾದರೂ ತಗುಲಿ ಗೆರೆಗಳು ಮೂಡಿದರೆ ನಮ್ಮ ಹಣೆಯ ಮೇಲೂ ಗೆರೆಗಳು ಮೂಡುತ್ತವೆ. ಹೊಂದಿದ ಸಂಪತ್ತಿನ ರಕ್ಷಣೆಯ ಒತ್ತಡದಿಂದ ಅಥವ ಸಂಪತ್ತಿನ ನಷ್ಟದಿಂದ ಬದುಕು ಸಂತೋಷವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಅಪರಿಗ್ರಹ ಇಂತಹ ಸಂಗತಿಗಳ ಬಗ್ಗೆ ಹೆಚ್ಚು ಕೇಂದ್ರೀಕೃತವಾಗದಿರಲು ಹೇಳುತ್ತದೆ. ಅಪಾರಗ್ರಹಣದ ಭೀಕರ ಫಲವನ್ನು ನಮ್ಮ ದೇಶ ಇಂದು ಎದುರಿಸುತ್ತಿದೆ. ಅಕ್ರಮ ಮಾರ್ಗದಿಂದ ಈ ಹಿಂದೆ ಸಾಮಾನ್ಯರಂತಿದ್ದ ಹಲವಾರು ರಾಜಕಾರಣಿಗಳು ಇಂದು ಲೆಕ್ಕವಿಲ್ಲದಷ್ಟು ಕೋಟಿ ಕೋಟಿ ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದು ಕೊಬ್ಬಿದ್ದಾರೆ ಮತ್ತು ಅದರ ಬಲದಿಂದಲೇ ಅಧಿಕಾರ ಉಳಿಸಿಕೊಳ್ಳುತ್ತಿದ್ದಾರೆ ಅಥವ ಉಳಿಸಿಕೊಳ್ಳಲು ಎಂತಹ ಹೇಯ ಮಾರ್ಗವನ್ನೂ ಅನುಸರಿಸುವ ಮಟ್ಟಕ್ಕೆ ಇಳಿದಿದ್ದಾರೆ, ಅದರಲ್ಲಿ ಸಫಲರೂ ಆಗುತ್ತಿದ್ದಾರೆ. ಇವರುಗಳ ಕಪಿಮುಷ್ಟಿಯಿಂದ ಪಾರಾಗುವುದು ಸಾಮಾನ್ಯ ಜನತೆಗೆ ಸಾಧ್ಯವಿಲ್ಲದೆ ದೇಶ ಅಧೋಗತಿಗೆ ಜಾರುತ್ತಿದೆ.
     ಅಪರಿಗ್ರಹದ ಪ್ರಬಲ ಬೆಂಬಲಿಗ ಗಾಂಧೀಜಿಯವರ ಅನಿಸಿಕೆ ಕೇಳಿ: "ನನ್ನ ಹೆಗಲ ಮೇಲೆ ಬಿದ್ದ ಹೊರೆಯಿಂದಾಗಿ ನಾನು ಆರಾಮವಾಗಿ ನಡೆಯಲಾಗುತ್ತಿಲ್ಲ ಮತ್ತು ನನ್ನ ಸಹಜನರ ಸೇವೆಯನ್ನು ಸುಸೂತ್ರವಾಗಿ ಮತ್ತು ಹೆಚ್ಚಿನ ಸಂತೋಷದಿಂದ ಮಾಡಲಾಗುತ್ತಿಲ್ಲವೆಂದು ನನಗೆ ಭಾಸವಾಗುತ್ತಿತ್ತು. ಯಾವುದನ್ನೇ ಆಗಲಿ ಹೊಂದುವುದು ತ್ರಾಸದಾಯಕ ಮತ್ತು ಹೊರೆ ಅನ್ನಿಸಿತು. ಅದರ ಮೂಲವನ್ನು ಹುಡುಕಿದಾಗ ನನಗೆ ಕಂಡದ್ದೇನೆಂದರೆ, ಯಾವುದನ್ನಾದರೂ ನನ್ನ ಸ್ವಂತದ್ದೆಂದು ಇಟ್ಟುಕೊಂಡರೆ, ಅದನ್ನು ಇಡೀ ಪ್ರಪಂಚದ ವಿರುದ್ಧ ರಕ್ಷಿಸಬೇಕಿತ್ತು. . .ನನಗೆ ನಾನೇ ಹೇಳಿಕೊಂಡೆ: ಯಾರಾದರೂ ಅದನ್ನು ಬಯಸಿದರೆ, ಅದು ಅವರು ಕೆಟ್ಟ ಉದ್ದೇಶದಿಂದ ಮಾಡಿರಲಾರರು; ಆದರೆ ಅವರಿಗೆ ನನಗಿಂತ ಹೆಚ್ಚಿನ ಅವಶ್ಯಕತೆ ಇದ್ದೀತು. ಹೊಂದುವುದು ನನಗೆ ಅಪರಾಧದಂತೆ ತೋರುತ್ತದೆ. ಇತರರು ಹೊಂದಲು ಸಾಧ್ಯವಿರುವಂತಹ ವಸ್ತುಗಳನ್ನಷ್ಟೇ ನಾನೂ ಹೊಂದಬಹುದು. ಅದು ಅಸಾಧ್ಯವೇ ಸರಿ.  ಆದ್ದರಿಂದ ಎಲ್ಲರೂ ಹೊಂದಬಹುದಾದ ಒಂದೇ ವಸ್ತುವೆಂದರೆ 'ಏನನ್ನೂ ಹೊಂದದಿರುವುದು' ಅಥವ ಇಚ್ಛಾಪೂರ್ವಕ ಸಮರ್ಪಣ . . " ಸರಳತೆಗೆ ಹೆಸರಾಗಿದ್ದ ದಿ. ಲಾಲಬಹಾದುರ ಶಾಸ್ತ್ರಿಯವರು ತಮ್ಮ ಪತ್ನಿ ಮನೆ ಖರ್ಚು ಕಳೆದು ಹತ್ತು ರೂ. ಉಳಿಸಿದ್ದು ತಿಳಿದಾಗ ತಮ್ಮ ಸಂಬಳದಲ್ಲಿ ಹತ್ತು ರೂ. ಕಡಿಮೆ ಮಾಡಲು ತಮ್ಮ ಕಾರ್ಯದರ್ಶಿಗೆ ತಿಳಿಸಿದ್ದರಂತೆ. ಇನ್ನೊಬ್ಬ ಪ್ರಧಾನಿ ದಿ. ಗುಲ್ಜಾರಿಲಾಲ್ ನಂದಾರವರು ತಮ್ಮ ಅಂತ್ಯಕಾಲವನ್ನು ಒಂದು ಗುಡಿಸಲಿನಲ್ಲಿ ಸರಳವಾಗಿ ಕಳೆದಿದ್ದರು. ಇಂತಹವರು ಅಪರಿಗ್ರಹದ ಮಹತ್ವ ತಿಳಿದಿದ್ದವರು. ಇಂತಹ ವ್ಯಕ್ತಿತ್ವದವರು ಇಂದಿಗೂ ನಮ್ಮ ನಡುವೆ ಕಂಡುಬರುತ್ತಾರೆ. ಭೌತಿಕ ಸಂಪತ್ತು, ಸ್ವಂತ ಜೀವನವನ್ನು ಬದಿಗೊತ್ತಿ ದೇಶಕಾರ್ಯದ ಸಲುವಾಗಿ, ಸಮಾಜದ ಉನ್ನತಿಗಾಗಿ, ಸರ್ವರ ಒಳಿತಿಗಾಗಿ ಜೀವನವನ್ನೇ ಮೀಸಲಿರಿಸಿರುವ ಸಾವಿರಾರು ಜೀವಗಳಿವೆ. ನಮಗೆ ನೋಡುವ ಕಣ್ಣುಗಳಿರಬೇಕು ಅಷ್ಟೆ. 'ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ' ಅನ್ನುವ ಧ್ಯೇಯವಾಕ್ಯ ಇಂತಹವರನ್ನು ಕುರಿತೇ ಇರಬೇಕು! ಮಾಧ್ಯಮಗಳು ಋಣಾತ್ಮಕ ಸಂಗತಿಗಳಿಗೆ ಪ್ರಾಧಾನ್ಯತೆ ನೀಡಿ ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಕಡೆಗೆ, ತಮ್ಮ ಆದಾಯ ಹೆಚ್ಚಿಸಿಕೊಳ್ಳುವ ಕಡೆಗೆ ಚಿಂತಿಸಿ ಸಮಾಜವನ್ನು ಹಾಳುಗೆಡವುವ ಬದಲಿಗೆ ಅಥವ ಜೊತೆಜೊತೆಗಾದರೂ ಇಂತಹ ಉತ್ತಮ ವ್ಯಕ್ತಿತ್ವಗಳ ದರ್ಶನ ಮಾಡಿಸುವ ಕಡೆಗೂ ದೃಷ್ಟಿ ಹರಿಸಬೇಕಾದುದು ಇಂದಿನ ಅಗತ್ಯವಾಗಿದೆ.
     ಪುರಂದರದಾಸರ 'ಬಡತನಕೆ ಉಂಬುವ ಚಿಂತೆ| ಉಂಬುವುದಾದರೆ ಉಡುವ ಚಿಂತೆ| ಉಡುವುದಾದರೆ ಮದುವೆಯ ಚಿಂತೆ| ಮದುವೆಯಾದರೆ ಮಕ್ಕಳ ಚಿಂತೆ|' ಎಂಬ ಹಾಡು ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿಯಾಗಿದೆ. ಹೀಗೆ 'ಅನುಗಾಲವೂ ಚಿಂತೆ ಜೀವಕೆ' ಎಂದು ಹಾಡಿದ ಪುರಂದರದಾಸರ ವೈಯಕ್ತಿಕ ಜೀವನವೇ ಅಪರಿಗ್ರಹದ ಔನ್ನತ್ಯಕ್ಕೆ ಮಾದರಿಯಾಗಿದೆ. ಅಂದಿನ ಕಾಲಕ್ಕೆ ಅತ್ಯುನ್ನತ ಶ್ರೀಮಂತರೆನಿಸಿ 'ನವಕೋಟಿ ನಾರಾಯಣ'ರೆಂಬ ಹೆಸರಿದ್ದ ಅವರು ಕಡುಲೋಭಿಯಾಗಿದ್ದು ತಾವೂ ನೆಮ್ಮದಿಯಾಗಿರದೆ ತಮ್ಮ ಕುಟುಂಬದವರನ್ನೂ ನೆಮ್ಮದಿಯಾಗಿ ಇರಲು ಬಿಡದಿದ್ದವರು. ಇಂತಹವರು ದೈವಪ್ರೇರಣೆಯಿಂದ ಪತ್ನಿಯ ಮೂಲಕವಾಗಿ ಭೌತಿಕ ಸಂಪತ್ತಿನ ಮೂಲಕ ಸುಖವಾಗಿರಲಾರೆನೆಂಬುದನ್ನು ಮನಗಂಡು, ಅಕ್ಷರಶಃ ತಮ್ಮ ಸಂಪತ್ತೆಲ್ಲವನ್ನೂ ತ್ಯಜಿಸಿ ಹೊರಬಂದು ಬರಿಗೈಯಲ್ಲಿ ತಂಬೂರಿ, ತಾಳ ಹಿಡಿದು ಸಂತಸಪಟ್ಟವರು. 'ಕಳೆದುಕೊಳ್ಳಲು ಏನೂ ಇರದಾಗ ಮುಂದೆ ಎಲ್ಲಾ ಗಳಿಸುವುದೇ ಆಗಿರುತ್ತದೆ' ಎಂದು ಸಾರಿದವರು. 
     ಸಾರಾಂಶ ರೂಪವಾಗಿ ಹೇಳಬೇಕೆಂದರೆ, ಅಪರಿಗ್ರಹವು ಕಳೆದುಹೋಗಬಹುದಾದ, ನಷ್ಟವಾಗಬಹುದಾದ ಸಂಗತಿಗಳ ಬಗ್ಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸದೆ, ಕಳೆಯಲಾಗದ ಸಂಗತಿಗಳ ಬಗ್ಗೆ ಕೇಂದ್ರೀಕರಿಸಲು ಸೂಚಿಸುತ್ತದೆ. ಕಳೆದುಹೋಗದ, ನಷ್ಟವಾಗದ ಆ ಸಂಗತಿಗಳಾದರೂ ಯಾವುವು? ನಿಷ್ಕಲ್ಮಶ ಪ್ರೀತಿ, ಸುತ್ತಲಿನ ಜೀವಜಗತ್ತು, ಪ್ರಕೃತಿಯ ಕುರಿತು ಕಾಳಜಿ, ಸುಮನಸ್ಸಿನಿಂದ, ಸದುದ್ದೇಶದಿಂದ ಮಾಡುವ ಒಳ್ಳೆಯ ಕೆಲಸಗಳು, ಇತರರಿಗೆ ಹಿತವೆನಿಸುವ ನಡವಳಿಕೆಗಳು, ಮನಸ್ಸನ್ನು ಶಾಂತಗೊಳಿಸುವ ಪ್ರಯತ್ನಗಳು, ಆತ್ಮನನ್ನು ಅರಿಯುವ, ಅಂತರಂಗದ ಕರೆಗೆ ಓಗೊಡುವ ಮನಸ್ಥಿತಿಗಳು ಕಳೆದುಹೋಗುವ ಸಂಗತಿಗಳಲ್ಲ. ಅತ್ಯಂತ ಬಡವನೆನಿಸಿಕೊಂಡವನೂ ಸಹ ಇತರರಿಗೆ ಒಳ್ಳೆಯ ಮಾತನಾಡಬಲ್ಲ, ಸಹಾಯ ಮಾಡಬಲ್ಲ! ಅಂತರಂಗದ ಶುದ್ಧತೆಗೆ ಅಪರಿಗ್ರಹ ಅತ್ಯುತ್ತಮ ಸಾಧನವಾಗಿದೆ.
-ಕ.ವೆಂ.ನಾಗರಾಜ್.
**************