ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ಸ್ನೇಹಿತರೊಂದಿಗೆ ಸೇರಿ ಎಲ್ಲವನ್ನೂ ಮರೆತು ಕುಡಿ, ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ, ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ, 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.
'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. ಖ ಅಂದರೆ ಇಂದ್ರಿಯ, ಸು-ಖ- ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ-ಖ- ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕುಣಿದರೆ/ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
ಮನಸ್ಸಿನ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೇವೆ, ಅಲ್ಲವೇ? ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ವಿವಿಧ ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಮಾಡಬೇಕಾದ ಅಂತಹ ಕೆಲಸಗಳಿಗೆ ನಾಚಿಕೊಳ್ಳಬೇಕಿಲ್ಲ, ಆದರೆ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
ಮನಸ್ಸಿನ ನಿಯಂತ್ರಣದ ಕುರಿತು ಎಲ್ಲರೂ ಮಾತನಾಡುತ್ತೇವೆ, ಅದರ ಅಗತ್ಯವನ್ನೂ ತಿಳಿದಿದ್ದೇವೆ. ಆದರೆ ಅದನ್ನು ಸಾಧಿಸುವುದಾದರೂ ಹೇಗೆ? ಸಹಾಯ ಮಾಡುವವರಾದರೂ ಯಾರು? ಈ ವಿಷಯದಲ್ಲಿ ಸಹಾಯಕ್ಕೆ ಬರುವವರೆಂದರೆ ಯಾರು ಸ್ವತಃ ತಮ್ಮ ಮನಸ್ಸನ್ನು ನಿಯಂತ್ರಿಸಿಕೊಂಡಿರುತ್ತಾರೋ ಅವರು ಮಾತ್ರ! ಮನಸ್ಸಿನ ನಿಯಂತ್ರಣ ಒಂದು ಅಂತರಂಗದ ಆಟ. ಈ ಅಟದಲ್ಲಿ ನಾವು ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ, ಕೆಲವೊಮ್ಮೆ ಎಡವುತ್ತೇವೆ. ಈ ಆಟ ಆಡಲು ಚತುರತೆ, ಎಚ್ಚರಿಕೆ, ಹೃದಯದ ಶ್ರೀಮಂತಿಕೆ, ಯೋಜಿಸುವ ಸಾಮರ್ಥ್ಯ, ತಾಳ್ಮೆ, ಸಹನೆ, ಇತ್ಯಾದಿಗಳೆಲ್ಲವೂ ಇರಬೇಕಾಗುತ್ತದೆ. ಗೆದ್ದಾಗ ಮೈಮರೆಯದೆ, ಸೋತಾಗ ಕುಗ್ಗದೆ ಇರುವ ಮನೋಭಾವವಿರಬೇಕಾಗುತ್ತದೆ.
ವಿಷಯಲೋಲುಪತೆ ವಿಷಕಿಂತ ಘೋರ
ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?|
ಅಂತರಂಗದ ದನಿಯು ಹೊರದನಿಯು ತಾನಾಗೆ
ಹೊರಬರುವ ದಾರಿ ತೋರುವುದು ಮೂಢ||
ಭಗವದ್ಗೀತೆಯಲ್ಲಿನ ಕರ್ಮಯೋಗದಲ್ಲಿನ ಅರ್ಜುನ ಶ್ರೀಕೃಷ್ಣನಿಗೆ ಕೇಳುವ ಈ ಪ್ರಶ್ನೆ ನಮ್ಮಂತಹ ಸಾಮಾನ್ಯರ ಪ್ರಶ್ನೆಯೂ ಆಗಿದೆ: ಅಥಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷಃ | ಅನಿಚ್ಛನ್ನಪಿ ವಾರ್ಷ್ಣೇಯ ಬಲಾರ್ದಿವ ನಿಯೋಜಿತಃ || (೩.೩೬) - 'ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮಾಡಲ್ಪಡುವವನಂತೆ ಮನುಷ್ಯನು ಪಾಪವನ್ನು ಮಾಡಲು ಇರುವ ಪ್ರೇರಣೆಯಾದರೂ ಎಂತಹುದು?' ಎಂಬ ಅರ್ಜುನನ ಈ ಪ್ರಶ್ನೆ ಮಹತ್ವದ್ದಾಗಿದೆ. 'ಕುಡಿಯುವುದು ಕೆಟ್ಟದ್ದು ಎಂದು ಸ್ವತಃ ಕುಡುಕನಿಗೇ ಗೊತ್ತಿದ್ದರೂ ಆತ ಏಕೆ ಕುಡಿಯುತ್ತಾನೆ?' ಎಂದು ಕೇಳಿದಂತೆ ಈ ಪ್ರಶ್ನೆ ಇದೆ. ಶ್ರೀಕೃಷ್ಣ ಈ ಪ್ರಶ್ನೆಗೆ ಕೊಟ್ಟ ಉತ್ತರ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಆತ ಹೇಳುತ್ತಾನೆ, "ಕಾಮ, ಕ್ರೋಧಗಳು ರಜೋಗುಣದಿಂದ ಹುಟ್ಟಿದ್ದು ಇವುಗಳನ್ನು ತೃಪ್ತಿಗೊಳಿಸಲಾಗದು. ಹೊಗೆಯಿಂದ ಬೆಂಕಿ, ಧೂಳಿನಿಂದ ಕನ್ನಡಿ ಮುಚ್ಚಿ ಹೋಗುವಂತೆ ಈ ಪ್ರಪಂಚ ಕಾಮ-ಕ್ರೋಧಗಳಿಂದ ಮುಚ್ಚಿಹೋಗಿದೆ. ಇಂದ್ರಿಯಗಳು, ಬುದ್ಧಿ, ಮನಸ್ಸು ಇವುಗಳು ಕಾಮದ ನೆಲೆವೀಡುಗಳು. ಆದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಿ, ಜ್ಞಾನ-ವಿಜ್ಞಾನಗಳನ್ನು ನಾಶ ಮಾಡುವ ಕಾಮವನ್ನು ಹತ್ತಿಕ್ಕಬೇಕು." ಮುಂದುವರೆದು ಹೇಳುತ್ತಾನೆ: ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ | ಮನಸಸ್ತು ಪರಾ ಬುದ್ಧರ್ಯೋ ಬುದ್ಧೇಃ ಪರತಸ್ತು ಸಃ || (೩.೪೨) - 'ವಿಷಯಗಳಿಗಿಂತ ಇಂದ್ರಿಯಗಳು ಹೆಚ್ಚಿನವು, ಇಂದ್ರಿಯಗಳಿಗಿಂತ ಮನಸ್ಸು ಹೆಚ್ಚಿನದು, ಬುದ್ಧಿಯು ಮನಸ್ಸಿಗಿಂತ ಹೆಚ್ಚಿನದು. ಈ ಬುದ್ಧಿಗಿಂತಲೂ ಆತ್ಮ ಶ್ರೇಷ್ಠವಾದುದು.' ಆತ್ಮ ಜ್ಞಾನವನ್ನು ಅರಿಯುವ ಅಂತರಂಗದ ಆಟ ಆಡಲು ತೊಡಗಿದಾಗ, ಆ ಆಟದಲ್ಲಿ ತನ್ಮಯತೆಯಿಂದ ತೊಡಗಿಕೊಂಡಾಗ ಇದರ ಸತ್ಯಾಸತ್ಯತೆ ಅರಿವು ಗೊತ್ತಾಗುತ್ತಾ ಹೋಗುತ್ತದೆ. ಈ ಅಟದಲ್ಲಿ ಗೆಲ್ಲಬೇಕೆಂದರೆ ಮೊದಲು ಮನಸ್ಸನ್ನು ನಿಯಂತ್ರಿಸಬೇಕೆಂಬ ಧೃಡವಾದ ಸಂಕಲ್ಪ ಹೊಂದಬೇಕು, ಮನಸ್ಸಿನ ಸ್ವಭಾವವನ್ನು ಅರಿಯಬೇಕು ಮತ್ತು ಅದಕ್ಕಾಗಿ ನಮ್ಮದೇ ಆದ ತಂತ್ರಗಳು, ರೀತಿ-ನೀತಿಗಳನ್ನು ರೂಪಿಸಿಕೊಂಡು ಅವುಗಳನ್ನು ಬುದ್ದಿವಂತಿಕೆಯಿಂದ, ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು. 'ಚಪಳೆ ಸೊಡರ ಕುಡಿಯಂ ಪೋಲ್ವಳ್' ಎಂದು ಲಕ್ಷ್ಮಿ(ಸಂಪತ್ತು)ಯನ್ನು ಕುರಿತು ಕವಿ ವರ್ಣಿಸುತ್ತಾನೆ. ಆದರೆ, ನಮ್ಮ ಮನಸ್ಸು ಅನ್ನುವುದಿದೆಯಲ್ಲಾ, ಅದರ ಚಂಚಲತೆಯನ್ನು ಮೀರಿಸುವ ಮತ್ತೊಂದು ಸಂಗತಿ ಜಗತ್ತಿನಲ್ಲಿ ಇದೆಯೇ? ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ.
-ಕ.ವೆಂ.ನಾಗರಾಜ್.
**************
12.5.2014ರ ಜನಮಿತ್ರದಲ್ಲಿ ಪ್ರಕಟಿತ 'ಚಿಂತನ':
lpitnal
ಪ್ರತ್ಯುತ್ತರಅಳಿಸಿಕವಿನಾಗರಾಜ್ ಸರ್ ಗೆ ನಮಸ್ಕಾರ ಸರ್. ಲೇಖನ ಗಹನ ವಿಚಾರಪ್ರಚೋದಿತ. ಇಷ್ಟವಾಯಿತು ಎಂದು ಬೇರೆ ಹೇಳಬೇಕೇ? ನಮ್ಮನ್ನು ಸುಸಂಸ್ಕೃತಿಯತ್ತ ಕರೆದೊಯ್ಯುವ ಲೇಖನ ಮಾಲೆಗಳಿವು. '' ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ'' ಹೌದು ಇದೇ ತೀರ್ಪು ಸರಿ. ವಂದನೆಗಳು ಸರ್.
kavinagaraj
ಧನ್ಯವಾದಗಳು, ಲಕ್ಷ್ಮೀಕಾಂತ ಇಟ್ನಾಳರೇ. ಹಾಸನದ ಜಿಲ್ಲಾ ಪತ್ರಿಕೆ 'ಜನಮಿತ್ರ'ದಲ್ಲಿ ಪ್ರತಿ ಸೋಮವಾರ ಪ್ರಕಟವಾಗುವ ನನ್ನ ಅಂಕಣ 'ಚಿಂತನ'ದಲ್ಲಿ ಪ್ರಕಟವಾಗುತ್ತಿರುವ ಲೇಖನಗಳಿವು.
H A Patil
ಅಳಿಸಿಕವಿ ನಾಗರಾಜ ರವರಿಗೆ ವಂದನೆಗಳು
ಅಂತರಂಗದ ಅಟ ನಮ್ಮ ಮನೋ ಲಹರಿಯ ಕುರಿತು ಸೂಕ್ಷ್ಮ ಒಳ ನೋಟಗಳನ್ನು ಬೀರುವ ಲೇಖನ. ಲೌಕಿಕ ಮನಸು ಐಹಿಕ ಸುಖ ಭೋಗಗಳ ಕಡೆಗೆ ವಾಲಿದರೆ ಪಾರಮಾರ್ಥಿಕ ಮನಸು ಲೌಕಿನ ಬದುಕಿನ ಆಚೆಗೆ ನಮ್ಮನ್ನು ಕರೆದೊಯ್ದು ಆಲೋಚನೆಗೆ ಹಚ್ಚುತ್ತದೆ. ಇಲ್ಲಿ ಮನುಷ್ಯನಮನೋ ನಿಗ್ರಹದ ಉಪಯುಕ್ತತೆ ಕುರಿತಂತೆ ಸೂಕ್ಷ್ಮ ಗ್ರಹಿಕೆಗಳಿವೆ ಅವು ಸತ್ಯವಾಗಿವೆ ಕೂಡ. ಉತ್ತಮ ಲೇಖನ ಧನ್ಯವಾದಗಳು.
kavinagaraj
ಧನ್ಯವಾದ ಪಾಟೀಲರೇ. ಈ ಕಳ್ಳ ಮನಸ್ಸಿನ ಆಟ ನಮ್ಮನ್ನು ಬುಗುರಿಯಂತೆ ತಿರುಗಿಸುತ್ತದೆ. ತಿರುಗಿ ಸುಸ್ತಾದಾಗಲೇ ನಮಗೆ ಅರಿವು ಮೂಡುವುದು!!
naveengkn
ಅಳಿಸಿಕವಿಗಳೇ,,,,, ಸಾಗರಕ್ಕೆ ಹನಿ ನೀರು ಚಿಮುಕಿಸಿದಂತಾಗಬಹುದೇನೊ ನನ್ನ ಪ್ರತಿಕ್ರಿಯೆ,,,,,, ಲೆಖನಕ್ಕೊಂದು ಮೌನ ನಮನ,,,,,, ಧನ್ಯವಾದಗಳೊಂದಿಗೆ ಜೀ ಕೇ ನ
kavinagaraj
ಧನ್ಯವಾದ, ನವೀನರೇ. ಹನಿ ನೀರೂ ಸಹ ಅತ್ಯಮೂಲ್ಯವೇ!