ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಏಪ್ರಿಲ್ 28, 2011

ವೇದಮಂತ್ರಗಳು

ಕೇಳಲು ಇಲ್ಲಿ ಕ್ಲಿಕ್ಕಿಸಿ:
Sacred Chants Of Ancient India

ಭಾವಕಟ್ಟು


     ಅಣೆಕಟ್ಟಿನಲ್ಲಿ ನೀರಿದೆ. ಒಳಹರಿವು ಹೆಚ್ಚಾದಂತೆ ನೀರನ್ನು ಕ್ರೆಸ್ಟ್ ಗೇಟ್ ತೆರೆದು ಹೊರಬಿಡಲಾಗುತ್ತದೆ. ನೀರನ್ನು ಹೊರಬಿಡದೆಹೋದರೆ? ಅಣೆಕಟ್ಟು ತುಂಬಿ ಹೆಚ್ಚಾದ ನೀರು ಹೊರಬರುತ್ತದೆ. ನೀರಿನ ದಬ್ಬುವ ಶಕ್ತಿ ಒಳಹರಿವು ಹೆಚ್ಚಾದಂತೆ ಹೆಚ್ಚುತ್ತಾ ಹೋಗಿ ಅಣೆಕಟ್ಟಿಗೆ ಅಪಾಯವಾಗಬಹುದು. ಭೂಕಂಪ, ಪ್ರಕೃತಿ ವಿಕೋಪ, ಮಾನವ ನಿರ್ಮಿತ ಅನಾಹುತ, ಇತ್ಯಾದಿ ಯಾವುದೇ ಕಾರಣಕ್ಕೆ ಅಣೆಕಟ್ಟು ಒಡೆದರೆ? ಆಗ ಆಗುವ ನಷ್ಡ ಅಗಾಧ. ಮಾನವನ ಮನಸ್ಸನ್ನೂ ಅಣೆಕಟ್ಟು ಇರುವ ಜಲಾಶ್ರಯಕ್ಕೆ ಹೋಲಿಸಬಹುದು. ನೀರಿನ ಬದಲಿಗೆ ಅಲ್ಲಿ ಭಾವನೆಗಳು ಇರುತ್ತದೆ. ಭಾವನೆಗಳು ಮಡುಗಟ್ಟಲು ಬಿಟ್ಟರೆ ಅನಾಹುತ ತಪ್ಪಿದ್ದಲ್ಲ. ಅಣೆಕಟ್ಟಿನಿಂದ ನೀರನ್ನು ಅಗತ್ಯ ಪ್ರಮಾಣದಲ್ಲಿ ಹೊರಬಿಡುತ್ತಾ ಹೋದರೆ ಒಳ್ಳೆಯ ಬೆಳೆ ಬೆಳೆಯಲು ಉಪಯೋಗವಾಗುತ್ತದೆ. ಅದೇ ರೀತಿ ಭಾವನೆಗಳನ್ನು ಸೂಕ್ತ ರೀತಿಯಲ್ಲಿ ಹೊರಹಾಕಿದರೆ ಒಳ್ಳೆಯ ಪರಿಣಾಮ ಕಾಣಬಹುದು. ಅವಮಾನ, ಅಸಹಾಯಕತೆ, ಸಿಟ್ಟು, ಈಡೇರದ ಬಯಕೆ, ಹಗೆತನ, ಹೊಟ್ಟೆಕಿಚ್ಚು, ಇತ್ಯಾದಿ ಕಾರಣಗಳಿಂದ ಉಂಟಾಗುವ ಭಾವನೆಗಳ ಹೊಯ್ದಾಟದ ಭಾರಕ್ಕೆ ಸೋತು ಮನಸ್ಸು ಸ್ಪೋಟಿಸಿದರೆ ಅದರಿಂದ ಹಾನಿ ನಿಶ್ಚಿತ. ಅಂತಹ ಸಂದರ್ಭಗಳಲ್ಲಿ ತಕ್ಷಣಕ್ಕೆ ಪ್ರತಿಕ್ರಿಯಿಸದೆ ಮೌನವಾಗಿದ್ದು, ತನ್ನ ಮಾತಿನಿಂದ ಆಗಬಹುದಾದ ಪರಿಣಾಮಗಳನ್ನು ಕುರಿತು ನಿಧಾನವಾಗಿ ಯೋಚಿಸಿ ಭಾವನೆಗಳನ್ನು ಹೊರಬಿಟ್ಟಲ್ಲಿ ಒಳ್ಳೆಯದಾಗುತ್ತದೆ.

ಮಂಗಳವಾರ, ಏಪ್ರಿಲ್ 26, 2011

ಸಂಪ್ರದಾಯಗಳು ಸಂಕೋಲೆಗಳಾಗದಿರಲಿ


          ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು ಕೈಗೆ ಬಳೆ ಹಾಕಿಕೊಳ್ಳದೆ ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ ಕಾಲವಿತ್ತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವರ ಪಾಡು ಅನುಭವಿಸಿದವರಿಗೇ ಗೊತ್ತು. ಆಕೆಗೆ ಶುಭ ಕಾರ್ಯಗಳಲ್ಲಿ ಆಹ್ವಾನವಿರುತ್ತಿರಲಿಲ್ಲ. ಆಕೆ ಎದುರಿಗೆ ಬಂದರೆ ಅಪಶಕುನವೆಂದು ಭಾವಿಸುವವರಿದ್ದರು. ಹೊಸ ಪೀಳಿಗೆಯವರಿಗೆ ಇಂತಹ ಅನಿಷ್ಟ ಸಂಪ್ರದಾಯದ ಪರಿಚಯ ಇರಲಾರದು. ಪ್ರಾರಂಭದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವುದು ನಿಂತರೂ ಕೈಗೆ ಬಳೆ ಹಾಕಿಕೊಳ್ಳಲು, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ, ಸುಧಾರಣೆಯಾಗಿದೆ. ಕಳೆದ ಎರಡು-ಮೂರು ದಶಕಗಳಿಂದೀಚೆಗೆ ಈ ಸಂಪ್ರದಾಯದ ಆಚರಣೆ ಕಂಡು ಬರುತ್ತಿಲ್ಲ. ಒಂದು ಅನಿಷ್ಟ ಸಂಪ್ರದಾಯದ ಅಂತ್ಯವಾಗಿರುವುದು ಸಮಾಧಾನದ ಸಂಗತಿ.
     ಸಂಪ್ರದಾಯವೆಂದರೆ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುವ ಆಚರಣೆಗಳು, ನಡವಳಿಕೆಗಳು. ಸರಿಯೋ, ತಪ್ಪೋ ವಿಚಾರ ಮಾಡದೆ ಅದನ್ನು ಮುಂದುವರೆಸಿಕೊಂಡು ಬರುವವರನ್ನು ಸಂಪ್ರದಾಯವಾದಿಗಳು ಎನ್ನುತ್ತಾರೆ. ಕೆಲವನ್ನು ಆಚರಿಸಿ ಕೆಲವನ್ನು ಕೈಬಿಡುವ ಅನುಕೂಲ/ಅವಕಾಶವಾದಿಗಳೂ ಇದ್ದಾರೆ. ಅರ್ಥವಿಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಸ್ವತಃ ಸಂಪ್ರದಾಯಗಳನ್ನು ಆಚರಿಸದಿದ್ದರೂ, ಅರ್ಥವಿಲ್ಲವೆಂದು ತಿಳಿದಿದ್ದರೂ, ಇತರರ ಸಲುವಾಗಿ ಅವನ್ನು ಬೆಂಬಲಿಸುವವರ ಸಂಖ್ಯೆ ಸಹ ಗಣನೀಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಎಲ್ಲರನ್ನೂ ಹೊಂದಿಸಿಕೊಂಡು, ಹೊಂದಿಕೊಂಡು ಸಮನ್ವಯ ಮಾಡಿ ಸದ್ವಿಚಾರ ತಿಳಿಸಲು ಹೆಣಗುವವರೂ ಇದ್ದಾರೆ. ಎಲ್ಲಾ ಸಂಪ್ರದಾಯಗಳೂ ಕೆಟ್ಟವಲ್ಲ; ಹಾಗೆಯೇ ಎಲ್ಲವೂ ಒಳ್ಳೆಯವು ಎಂದು ಹೇಳಲಾಗುವುದಿಲ್ಲ. ಯಾವ ಆಚರಣೆಗಳಿಂದ ಯಾರಿಗೂ ತೊಂದರೆಯಿಲ್ಲವೋ, ಯಾವುದರಿಂದ ಮನುಷ್ಯನ ಬೌದ್ಧಿಕ ವಿಕಾಸ, ಅಭಿವೃದ್ಧಿಗೆ ಸಹಕಾರವಾಗುವುದೋ, ಸಂತಸ ಹರಡುವುದೋ, ತಾರತಮ್ಯ ಇಲ್ಲದಿರುವುದೋ ಅಂತಹವುಗಳನ್ನು ಒಳ್ಳೆಯ ಸಂಪ್ರದಾಯಗಳೆನ್ನಬಹುದು. ಇದಕ್ಕೆ ತದ್ವಿರುದ್ಧವಾದ ಸಂಪ್ರದಾಯಗಳನ್ನು ಕೆಟ್ಟವು ಎಂದುಕೊಳ್ಳಬಹುದು. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ, ಈಗಂತೂ ಹೊಸ ಹೊಸ ಸಂಪ್ರದಾಯಗಳು, ಆಚರಣೆಗಳು ಚಾಲ್ತಿಗೆ ಬರುತ್ತಿವೆ, ಹಿಂದಿನ ಅನುಭವಗಳಿಂದ ಹೇಳುವುದಾದರೆ ಕ್ರಮೇಣ ಅವು ಗಟ್ಟಿಗೊಳ್ಳುತ್ತವೆ.
     ಬಾಲ ಗಂಗಾಧರನಾಥ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವ ಸಲುವಾಗಿ ಹುಟ್ಟುಹಾಕಿದ ಸಾರ್ವಜನಿಕ ಗಣೇಶ ಉತ್ಸವಗಳು ಇಂದು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಮೊದಲು ಊರಿಗೆ ಒಂದರಂತೆ ಇದ್ದುದು, ಈಗ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟು ಅಲ್ಲಿ ನಡೆಸುವ ಕಾರ್ಯಕ್ರಮಗಳು, ಪೈಪೋಟಿ, ವಂತಿಕೆ ವಸೂಲಿ, ವಿಸರ್ಜನೆ ಸಮಯದಲ್ಲಿ ಕುಡಿದು ಕುಣಿಯುವ ಯುವಕರು, ಮತೀಯ ಘರ್ಷಣೆಗಳು, ಇತ್ಯಾದಿಗಳನ್ನು ಗಮನಿಸಿದರೆ ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ ಎಂದು ಅನ್ನಿಸದೇ ಇರದು. ಒಳ್ಳೆಯ ರೀತಿಯಲ್ಲಿ ಆಚರಿಸುವವರು ಇದ್ದರೂ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಗಣೇಶೋತ್ಸವಗಳು ಮುಗಿಯುವವರೆಗೂ ಶಾಂತಿ, ಸುವ್ಯವಸ್ಥೆಗಳಿಗಾಗಿ ಸಂಬಂಧಿಸಿದವರು ಹಗಲೂ ರಾತ್ರಿ ಹೆಣಗುವ, ಇಂತಹ ಉತ್ಸವಗಳು (ಗಣೇಶೋತ್ಸವ ಮಾತ್ರ ಅಲ್ಲ, ಎಲ್ಲಾ ಮತೀಯ/ಧಾರ್ಮಿಕ ಉತ್ಸವಗಳು ಸೇರಿ) ಏಕಾದರೂ ಬರುತ್ತವೋ ಎಂದು ಅಂದುಕೊಳ್ಳುವ ಪರಿಸ್ಥಿತಿ ಇಂದು ಇದೆ. ನಾನು ಗಣೇಶೋತ್ಸವವನ್ನಾಗಲೀ, ಇಂತಹ ಇತರ ಉತ್ಸವಗಳನ್ನಾಗಲೀ ವಿರೋಧಿಸುತ್ತಿಲ್ಲ, ಅದನ್ನು ಆಚರಿಸಲಾಗುತ್ತಿರುವ ರೀತಿಯ ಬಗ್ಗೆ ಮಾತ್ರ ಬೆರಳು ತೋರಿಸುತ್ತಿದ್ದೇನೆ.
     ಸಂಕಷ್ಟಹರ ಗಣಪತಿ ಪೂಜೆಯನ್ನು ಇಂದು ಸಾಮೂಹಿಕ ಸನ್ನಿಯಂತೆ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರು ಇದನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ? ಹೆಚ್ಚಿನವರು ಸ್ವಸಹಾಯ ಪದ್ಧತಿಯ ಹೋಟೆಲ್ಲಿನಲ್ಲಿ ಹಣ ಕೊಟ್ಟು ಕಾಫಿ ಕುಡಿದಂತೆ ದೇವಸ್ಥಾನಕ್ಕೆ ಹೋಗಿ ಹಣ ಕೊಟ್ಟು ಚೀಟಿ ಬರೆಸಿ ಹೋಗುತ್ತಾರೆ, ಪ್ರಸಾದ ಕೊಡುವ ಸಮಯಕ್ಕೆ ಬಂದು ಕೈಮುಗಿದು ಪ್ರಸಾದ ಪಡೆದು ಹೋಗುತ್ತಾರೆ. ಪೂಜೆಯ ಸಮಯದಲ್ಲಿ ದೇವಸ್ಥಾನದಲ್ಲಿದ್ದವರೂ ಪರಸ್ಪರ ಮಾತುಕತೆಗಳಲ್ಲಿ ತೊಡಗಿರುತ್ತಾರೆ. ಇಂತಹ ಆಚರಣೆಯಿಂದ ಯಾರಿಗೆ ಪ್ರಯೋಜನ? ಯಾರ ಕಷ್ಟಗಳು ಪರಿಹಾರವಾಗುತ್ತದೆ? ಶ್ರದ್ಧೆಯಿಂದ, ಅರ್ಥ ತಿಳಿದುಕೊಂಡು ಮಾಡುವ ಕ್ರಿಯೆಗಳಿಂದ ಮಾತ್ರ ಫಲ ಸಿಗಲು ಸಾಧ್ಯವಲ್ಲವೇ? ಇಲ್ಲದಿದ್ದರೆ ಅವು ತೋರಿಕೆಗೆ ಮಾಡುವ ಆಚರಣೆಗಳು ಅಷ್ಟೆ. ಇಸ್ಲಾಮ್ ಮತ ಪ್ರಾರಂಭವಾದ ಸಂದರ್ಭದಲ್ಲಿ ಧ್ವನಿವರ್ಧಕವಿರಲಿಲ್ಲ. ಆದರೆ ಇಂದು ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿವರ್ಧಿಸಿ ನಮಾಜು, ಉಪದೇಶಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅದನ್ನು ಕೇಳಲು ಇಚ್ಛಿಸದವರಿಗೂ ಬಲವಂತವಾಗಿ ಕೇಳುವಂತೆ ಮಾಡುತ್ತಿರುವುದು ಒಂದು ರೀತಿಯ ಶಬ್ದಮಾಲಿನ್ಯವಲ್ಲವೇ?
     ಜಾತ್ರೆ, ಪೂಜೆ, ಇತ್ಯಾದಿಗಳ ಹೆಸರಿನಲ್ಲಿ ದೇವರನ್ನು ಸಂತುಷ್ಟಗೊಳಿಸುವ(?) ಕಾರಣದಿಂದ ಪ್ರಾಣಿಬಲಿ ನೀಡುವ ಸಂಪ್ರದಾಯ ಒಳ್ಳೆಯದೆಂದು ಹೇಳಬಹುದೆ? ಇದನ್ನು ಸಮರ್ಥಿಸುವ ಜನರಿಗೆ ಕಡಿಮೆಯೇನಿಲ್ಲ. ಶಿಕಾರಿಪುರದಲ್ಲಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಾತ್ರೆಯ ಸಮಯದಲ್ಲಿ ಕೋಣಬಲಿ ತಡೆಯಲು ಒಂದು ಗ್ರಾಮದಲ್ಲಿ ಪೋಲಿಸರ ನೆರವಿನೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ, ಗ್ರಾಮಸರಿಗೆ ಕಾನೂನಿನಲ್ಲಿ ಇರುವ ನಿಷೇಧ, ಉಲ್ಲಂಘಿಸಿದರೆ ಆಗುವ ಪರಿಣಾಮಗಳು, ಇತ್ಯಾದಿ ತಿಳುವಳಿಕೆ ಹೇಳಲು ಮುಂಚಿತವಾಗಿ ನಡೆಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಪಶುವೈದ್ಯರ ಸಹಾಯದಿಂದ ಸಿರಿಂಜಿನಲ್ಲಿ ಕೋಣನ ರಕ್ತವನ್ನು ತೆಗೆದು ಸಾಂಕೇತಿಕವಾಗಿ ದೇವಿಗೆ ಅರ್ಪಿಸಲು ಗ್ರಾಮದ ಮುಖ್ಯಸರು ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರೂ, ಪೋಲಿಸರ ಕಣ್ಗಾವಲು ಇದ್ದರೂ ಎಲ್ಲರ ಕಣ್ಣುತಪ್ಪಿಸಿ ಕೋಣಬಲಿ ನೀಡಿದ ಪ್ರಸಂಗ ಬೇಸರ, ಮುಜುಗರ ಉಂಟುಮಾಡಿತ್ತು. ಎಲ್ಲಾ ಮಾಧ್ಯಮಗಳಲ್ಲೂ ವಿಷಯ ಅತಿರಂಜಿತವಾಗಿ ಪ್ರಚಾರಗೊಂಡಿತು. ಕೆಲವರ ಮೇಲೆ ಪ್ರಕರಣ ದಾಖಲಿಸಿದರೂ ರಾಜಕೀಯ ನಾಯಕರ ಮಧ್ಯಪ್ರವೇಶ ಪ್ರಕರಣವನ್ನು ದುರ್ಬಲಗೊಳಿಸಿದ್ದು ಸುಳ್ಳಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡುವ ಸಲುವಾಗಿ ಪರವಾಗಿ ಮತ್ತು ವಿರೋಧವಾಗಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಳಸಿಕೊಂಡವು. ಅನಿಷ್ಟ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದವರೂ ಸಾತ್ವಿಕ ಕಾರಣಕ್ಕೆ ವಿರೋಧಿಸದೆ ವಿರೋಧಿಗಳನ್ನು ವಿರೋಧಿಸಲು ಮಾತ್ರ ಬಳಸಿದ್ದು ನೋವಿನ ವಿಷಯ. ಮಾಧ್ಯಮಗಳೂ ಕೆಸರೆರಚಾಟಕ್ಕೆ ಸಾಥ್ ನೀಡಿದವೇ ಹೊರತು, ಅವುಗಳಿಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಶಕ್ತಿಯಿದ್ದರೂ ಮಾಡಲಿಲ್ಲ. ಇಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಅಂಧ ಸಂಪ್ರದಾಯಗಳ ಕುರಿತು ತಿಳಿಸುವ ಸಲುವಾಗಿ ಕೆಲವನ್ನು ಮಾತ್ರ ಸಾಂಕೇತಿಕವಾಗಿ ಉದಾಹರಿಸಿದ್ದೇನೆ.
     ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕು ಅನ್ನುವುದಕ್ಕಿಂತ ಕೆಟ್ಟ ಸಂಪ್ರದಾಯಗಳನ್ನು ಗುರುತಿಸಿ ಅವುಗಳಿಂದ ದೂರ ಉಳಿಯಲು ಮತ್ತು ಸಾಧ್ಯವಾದರೆ ತಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯ. ಮಠ-ಮಂದಿರಗಳು, ಮಸೀದಿಗಳು, ಚರ್ಚುಗಳು, ಇತ್ಯಾದಿಗಳು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಶ್ರದ್ಧಾ ಕೇಂದ್ರಗಳಾಗಿವೆ. ಈ ಕೇಂದ್ರಗಳು ವಾಸ್ತವವಾಗಿ ಸತ್ಕರ್ಮಗಳನ್ನು ಪೋಷಿಸುವ, ಜ್ಞಾನ ಪಸರಿಸುವ ಕೆಲಸ ಮಾಡಬೇಕು. ವಿಷಾದದ ಸಂಗತಿಯೆಂದರೆ ಹೆಚ್ಚಿನವು ಋಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ, ವೈದ್ಯಕೀಯ ಸಂಸ್ಥೆಗಳನ್ನು, ಕಲ್ಯಾಣ ಮಂದಿರಗಳನ್ನು ಕಟ್ಟಿ ಹಣ ಮಾಡುವ ಕೇಂದ್ರಗಳಾಗಿವೆ. ತಿರಳಿಗಿಂತ ಸಿಪ್ಪೆಗೆ ಹೆಚ್ಚು ಮಾನ್ಯತೆ ಕೊಡಲಾಗುತ್ತಿದೆ. ನಿಜ, ತಿರುಳಿನ ರಕ್ಷಣೆಗೆ ಸಿಪ್ಪೆಯಿರಬೇಕು, ಆದರೆ ಸಿಪ್ಪೆಯೇ ತಿರುಳಾಗಬಾರದು. ಆ ಕಾರಣದಿಂದಾಗಿ ಉತ್ತರಾಧಿಕಾರಕ್ಕಾಗಿ ಕಚ್ಚಾಡುವ, ಒಡೆತನ ಸಾಧಿಸಬಯಸುವವರ ಕೂಟ ಅಲ್ಲಿ ಮನೆ ಮಾಡಿವೆ. ಮೂಲ ಉದ್ದೇಶ ಮರೆತು ಭೌತಿಕ ಆಸ್ತಿ, ಸಂಪತ್ತು ಕ್ರೋಢೀಕರಿಸಲು ನೀಡುವ ಮಹತ್ವವೇ ಇದಕ್ಕೆ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ.
     ನನಗೆ ಬಂದಿದ್ದ ಇ-ಮೇಲ್ ಒಂದರಿಂದ ರೂಢಿಗತ ಸಂಪ್ರದಾಯಗಳಿಗೆ ಹೇಗೆ ಮನಸ್ಸು ಒಗ್ಗಿಕೊಳ್ಳುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಸಿಕ್ಕಿತು. ಅದೆಂದರೆ ಬಲಶಾಲಿ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಮರವೊಂದಕ್ಕೆ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಪ್ರಯತ್ನವೇ ಮಾಡುವುದಿಲ್ಲ. ಆನೆ ಎಷ್ಟು ಬಲಶಾಲಿಯೆಂದರೆ ಅದಕ್ಕೆ ಆ ಸರಪಳಿ ಮತ್ತು ಮರ ಲೆಕ್ಕವೇ ಅಲ್ಲ. ಅದು ಮನಸ್ಸು ಮಾಡಿದರೆ ಸರಪಳಿ ತುಂಡರಿಸಬಲ್ಲದು ಮತ್ತು ಮರವನ್ನು ಕಿತ್ತು ಬಿಸಾಡಬಲ್ಲದು. ಆದರೂ ಅದು ಮಾಡುವುದಿಲ್ಲ. ಏಕೆಂದರೆ ಆನೆ ಚಿಕ್ಕದಾಗಿದ್ದಾಗ ಅದನ್ನು ಅದೇ ರೀತಿ ಕಟ್ಟಿ ಹಾಕಲಾಗುತ್ತಿತ್ತು. ಚಿಕ್ಕದಾಗಿದ್ದರಿಂದ ಅದರಿಂದ ಬಿಡಿಸಿಕೊಳ್ಳಲು ಅದು ಎಷ್ಟೇ ಪ್ರಯತ್ನಿಸಿದರೂ ಆಗ ಆಗುತ್ತಿರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗಿ ಮರಕ್ಕೆ ಕಟ್ಟಿ ಹಾಕಿದರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂಬ ಭಾವ ಗಟ್ಟಿಗೊಂಡು ಅದು ದೊಡ್ಡದಾದ ಮೇಲೂ ಹಾಗೆ ಕಟ್ಟಿಹಾಕಿದರೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೇ ಇರಲಿಲ್ಲ. ನಮ್ಮ ಸ್ಥಿತಿ ಸಹ ಅದೇ ರೀತಿ ಇದೆ. ನಮಗೆ ವಿಚಾರ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಕೆಲವು ಸಂಪ್ರದಾಯಗಳು ಅರ್ಥಹೀನವೆಂದು ನಮಗೆ ತಿಳಿಯುತ್ತದೆ, ಮನಸ್ಸು ಮಾಡಿದರೆ ಅದನ್ನು ಧಿಕ್ಕರಿಸುವ, ಮುಂದುವರೆಸದಿರುವ ಶಕ್ತಿ ನಮಗಿದೆ, ಆದರೂ ನಾವು ಹಾಗೆ ಮಾಡುವುದಿಲ್ಲವೆಂಬುದು ವಿಷಾದದ ಸಂಗತಿ. 'ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳಲಾಗುವುದೇ' ಎಂಬ ಪ್ರಚಲಿತ ಗಾದೆ ಮಾತು ತಿಳಿಸುವುದೂ ವಿಚಾರ ಮಾಡಿ ಮುಂದುವರೆಯಿರಿ ಎಂದೇ. ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕಬೇಕಾಗಿಲ್ಲ. ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಹಿತವೆನಿಸುವ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬಹುದು, ಆದರೆ ಅನಿಷ್ಠ ಸಂಪ್ರದಾಯಗಳನ್ನು ನಿಲ್ಲಿಸುವ ಮತ್ತು ಸದ್ಯಕ್ಕೆ ಒಳ್ಳೆಯದೆನಿಸಿದರೂ ಕಾಲಾನುಕಾಲಕ್ಕೆ ಅದರ ಆಚರಣೆಯಿಂದ ಆಗುವ ಪರಿಣಾಮಗಳನ್ನೂ ಗಮನಿಸಿ ಯೋಗ್ಯತಾನುಸಾರ ನಿರ್ಣಯಿಸಿ ಅಂತಹವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸುವುದು ಇಂದಿನ ಅಗತ್ಯವಾಗಿದೆ. ಸಂಪ್ರದಾಯಗಳು ನಮ್ಮನ್ನು ಕಟ್ಟಿಹಾಕುವ ಸರಪಳಿಗಳಾಗದಿರಲಿ; ನಮ್ಮನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸುವ ದಾರಿದೀಪಗಳಾಗಲಿ.
***************
-ಕ.ವೆಂ.ನಾಗರಾಜ್.

ವೇದೋಕ್ತ ಜೀವನ ಪಥ: ಮಾನವಧರ್ಮ - ೧

ಸಹೃದಯರೇ,
     ಮೂರು ಶಾಶ್ವತ ಪದಾರ್ಥಗಳ, ಅನಾದಿ ತತ್ತ್ವಗಳ - ಅಂದರೆ, ಪರಮಾತ್ಮ, ಜೀವಾತ್ಮ ಮತ್ತು ಪ್ರಕೃತಿ - ಪರಿಚಯ ಈಗಾಗಲೇ ಮಾಡಿಕೊಡಲಾಗಿದೆ. ಇನ್ನುಮುಂದೆ ಮಾನವಧರ್ಮದ ಬಗ್ಗೆ ಪಂಡಿತ ಸುಧಾಕರ ಚತುರ್ವೇದಿಯವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ, ಜಿಜ್ಞಾಸೆ ಮುಂದುವರೆಸೋಣ.

ವೇದೋಕ್ತ ಜೀವನ ಪಥ: ಮಾನವಧರ್ಮ - ೧

     ಪರಮಾತ್ಮ ಮತ್ತು ಪ್ರಕೃತಿಯ ನಡುವೆ, ಅಲ್ಪಜ್ಞನೂ, ಅಲ್ಪಶಕ್ತನೂ, ಪರಿಚ್ಛಿನ್ನನೂ ಆದ ಜೀವಾತ್ಮನಿದ್ದಾನೆ. ಪರಮಾತ್ಮ ಸರ್ವಥಾ ನಿರಾಕಾರ, ನಿರ್ವಿಕಾರ, ಅವನು ಪತನ ಹೊಂದುವ ಪರಿಸ್ಥಿತಿ ಮೂರು ಕಾಲಕ್ಕೂ ಇಲ್ಲ. ಪ್ರಕೃತಿ ಜಡವಾದ ಕಾರಣ, ಪೂರ್ಣತಃ ಅನುಭವರಹಿತ. ಅದರ ಉತ್ಥಾನ-ಪತನಗಳಿಗೆ ಏನೂ ಅರ್ಥವಿಲ್ಲ. ಉಳಿದವನು ಜೀವಾತ್ಮ. ಅವನು ಸ್ವರೂಪತಃ ಪರಿಚ್ಛಿನ್ನನಾಗಿರುವುದರಿಂದ ಅವನ ಶಕ್ತಿಗಳಿಗೂ, ಜ್ಞಾನಕ್ಕೂ ಸಹ ಒಂದು ಪರಿಮಿತಿಯಿದೆ. ಈ ಪರಿಮಿತಿಯ ಕಾರಣದಿಂದ ಜೀವಾತ್ಮನು ತನ್ನ ಉದ್ಧಾರಕ್ಕಾಗಿ ಭಗವಂತನಿಂದ ಕೊಡಲ್ಪಟ್ಟ ಮನಸ್ಸು, ಇಂದ್ರಿಯಗಳು, ದೇಹ ಇವುಗಳನ್ನು ತನ್ನ ವಶದಲ್ಲಿಟ್ಟುಕೊಳ್ಳುವುದನ್ನು ಬಿಟ್ಟು, ತಾನೇ ಅವುಗಳಿಗೆ ವಶೀಭೂತನಾಗಿ ಹೋಗುತ್ತಾನೆ. ಈ ದೌರ್ಬಲ್ಯದ ಪರಿಣಾಮವಾಗಿ ಅವನು ಭಗವಂತನ ಸೃಷ್ಟಿಯನ್ನು ಸುಖ-ಶಾಂತಿಗಳ ಬೀಡಾಗಿ ಮಾಡುವ ಬದಲು, ಅದನ್ನು ನಾರಕೀಯ ಸಂಕಟಗಳ ವೇದಿಕೆಯನ್ನಾಗಿ ಮಾಡುತ್ತಾನೆ. ಈ ರೀತಿ, ತನ್ನ ಇಹವನ್ನು ಕೆಡಿಸಿಕೊಳ್ಳುವುದಲ್ಲದೆ, ಇತರರ ಇಹವನ್ನೂ ಹಾಳುಮಾಡುತ್ತಾನೆ. ಇಹವನ್ನೇ ಸುಧಾರಿಸಿಕೊಳ್ಳಲಾರದವನ ಮುಂದೆ ಪರದ ಪ್ರಶ್ನೆ ನಿರರ್ಥಕ. ಏಕೆಂದರೆ, ಪರದ ಆಧಾರ ಇಹವೇ ಆಗಿರುತ್ತದೆ. ಪರವನ್ನು ಗುರಿಯಾಗಿಟ್ಟುಕೊಂಡು ಇಹವನ್ನು ಹದಗೊಳಿಸಿಕೊಳ್ಳುವುದು, ಸುಧಾರಿತವಾದ ಇಹದ ಆಧಾರದ ಮೇಲೆ ಪರವನ್ನು ಸಾಧಿಸುವುದು. ಬೇರೆಯ ರೀತಿಯಲ್ಲಿ ಹೇಳಬೇಕೆಂದರೆ, ಇಹ-ಪರಗಳೆರಡನ್ನೂ ಸಾಧಿಸಿಕೊಳ್ಳುವುದು. ಇದಕ್ಕೆ ಒಂದು ನಿರ್ದಿಷ್ಟ ಮಾರ್ಗವನ್ನು ಅವಲಂಬಿಸಬೇಕಾಗುತ್ತದೆ. ಆ ನಿರ್ದಿಷ್ಟ ಮಾರ್ಗವನ್ನು ಋಗ್ವೇದ ಈ ರೀತಿ ವರ್ಣಿಸುತ್ತದೆ:-
ತೇ ನಸ್ತ್ರಾಧ್ವಂ ತೇsವತ ತ ಉ ನೋ ಅಧಿ ವೋಚತ |
ಮಾ ನಃ ಪಥಃ ಪಿತ್ರ್ಯಾನ್ಮಾನವಾದಧಿ ದೂರಂ ನೈಷ್ಟ ಪರಾವತಃ ||
(ಋಕ್. ೮.೩೦.೩)
     ವಿದ್ವಜ್ಜನರೇ! [ತೇ ನಃ ತ್ರಾಧ್ವಮ್] ಆ ನೀವು ನಮಗೆ ಬಲ ಕೊಡಿರಿ. [ತೇ ಆವತ] ಆ ನೀವು ರಕ್ಷಿಸಿರಿ. [ತ ಉ ನೋ ಅಧಿ ವೋಚತ] ಆ ನೀವೇ ನಮಗೆ ಉಪದೇಶ ಕೊಡಿರಿ. [ನಃ ಪಿತ್ರ್ಯಾತ್ ಮಾನವಾತ್ ಪರಾವತಃ ಪಥಃ ಅಧಿ] ನಮ್ಮನ್ನು ಪಾಲಕನ ಶಕ್ತಿಸಂಪನ್ನವಾದ, ಮಾನವೀಯವಾದ, ಪರಪ್ರಾಪ್ತಿ ಸಾಧಕವಾದ ಮಾರ್ಗದಿಂದ, [ಮಾ ದೂರಂ ನೈಷ್ಟ] ದೂರಕ್ಕೆ ಕರೆದೊಯ್ಯಬೇಡಿ.
     ವೇದಗಳ ಶೈಲಿ ತನ್ನದೇ ಆದ ಅದ್ಭುತ ಶೈಲಿ. ಇಹ-ಪರಗಳೆರಡನ್ನೂ ಶಾಧಿಸುವ ನಿರ್ದಿಷ್ಟ ಮಾರ್ಗವನ್ನು ತಿಳಿಯಲಪೇಕ್ಷಿಸುವ ನಿಜವಾದ ಜಿಜ್ಞಾಸುಗಳು ಜ್ಞಾನಿಗಳಲ್ಲಿ ಬೇಡಿಕೊಳ್ಳುವ ರೀತಿಯದು. ಪ್ರತಿಯೊಬ್ಬ ಧರ್ಮಜಿಜ್ಞಾಸುವಿನ ಹೃದಯಾಂತರಾಳದಲ್ಲಿಯೂ ಅಡಗಿರಬೇಕಾದ ಮೂರು ಅಂಶಗಳು ಈ ಮಂತ್ರದಲ್ಲಿ ಸ್ಪಷ್ಟವಾಗಿ ವರ್ಣಿತವಾಗಿದೆ. ಧರ್ಮದ ಆ ನಿರ್ದಿಷ್ಟವಾದ ಮಾರ್ಗ, ಈ ಲೋಕದಲ್ಲಿ ಪಾಲನೆ-ಪೋಷಣೆ ನೀಡುವ ಶಕ್ತಿ ಹೊಂದಿರಬೇಕು. ಎರಡನೆಯದಾಗಿ, ಅದು ಯಾವುದಾದರೊಂದು ಸಂಪ್ರದಾಯಕ್ಕೆ ಅಥವಾ ಜನಾಂಗಕ್ಕೆ ಅನ್ವಯಿಸುವ ಮಾರ್ಗವಾಗಿರದೆ, ಸಂಪೂರ್ಣ ಮಾನವ ಜಾತಿಗೆ ಅನ್ವಯಿಸುವ ಮಾರ್ಗವಾಗಿರಬೇಕು. ಮೂರನೆಯದಾಗಿ, ಅದು ಆಧ್ಯಾತ್ಮಿಕ ವಿಕಾಸವನ್ನೂ ಸಾಧಿಸಿ, ಪರಲೋಕವನ್ನೂ ಕೂಡ ಗಳಿಸಿಕೊಡುವ ಮಾರ್ಗವಾಗಿರಬೇಕು. ಈ ಮೂರರಲ್ಲಿ ಯಾವುದೇ ಒಂದು ಅಂಶಕ್ಕೆ ಲೋಪ ಬಂದರೂ, ಅದು ಪೂರ್ಣವಾದ ಧರ್ಮಮಾರ್ಗವೆನ್ನಿಸಲಾರದು. ಇಂತಹ ಇಹ-ಪರ ಸಾಧಕವಾದ ಮಾನವ ಪಥವನ್ನೇ 'ಧರ್ಮ' ಎಂದು ಕರೆಯುತ್ತಾರೆ. ಯಾವುದೇ ಒಂದು ಮತ-ಸಂಪ್ರದಾಯದಲ್ಲಿಯೂ, ಧರ್ಮದ ಯಾವುದಾದರೊಂದು ಅಂಶ ಅಡಕವಾಗಿರಬಲ್ಲದೇ ಹೊರತು, ಅದರ ಸಂಕುಚಿತ ಪರಿಧಿಯಲ್ಲಿ ಸಂಪೂರ್ಣ ಧರ್ಮದ ವಿಶಾಲ ತತ್ತ್ವ ಹಿಡಿಸಲಾರದು. ಮತಗಳು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಎಂದು ಹಲವಾರು ಇರಬಲ್ಲವು. ಅವುಗಳ ಹಿಂದೆ ವ್ಯವಚ್ಛೇದಕವಾದ ವಿಶೇಷಣಗಳನ್ನೂ ಉಪಯೋಗಿಸಬಹುದು. ಅದರೆ, ಧರ್ಮ ಸಾರ್ವಭೌಮ ಹಾಗೂ ಸಾರ್ವಕಾಲಿಕವಾದ ಏಕಮಾತ್ರ ತತ್ತ್ವವಾಗಿರುವುದರಿಂದ ಅದರ ಹಿಂದೆ ಇಂತಹ ಯಾವ ವಿಶೇಷಣಗಳನ್ನೂ ಉಪಯೋಗಿಸಲು ಸಾಧ್ಯವಿಲ್ಲ. ವಿಶೇಷಣವಿಡಲೇಬೇಕಾದರೆ ಅದು ಜ್ಞಾನಾಶ್ರಿತವಾದುದರಿಂದ 'ವೈದಿಕ ಧರ್ಮ' ಎನ್ನಬಹುದು. ಸಂಪೂರ್ಣ ಮಾನವ ಸಮಾಜಕ್ಕೆ ಅನ್ವಯಿಸಬಹುದಾದ ಕಾರಣ 'ಮಾನವ ಧರ್ಮ' ಎನ್ನಬಹುದು. ಈ ಧರ್ಮ, ಜೀವಾತ್ಮನು ಪತಿತನಾಗದಂತೆ ಅವನನ್ನು ಎತ್ತಿಹಿಡಿಯುವುದರಿಂದ ಅದನ್ನು ಧರುಣ ಎಂದರೆ ಧಾರಕತತ್ತ್ವ ಎಂದು ವೇದಗಳಲ್ಲಿ ಕರೆದಿದೆ. ಉದಾಹರಣೆಗೆ ಋಗ್ವೇದ - ದಿವೋ ಧರ್ಮನ್ ಧರುಣೀ
(ಋಕ್.೫.೧೫.೨.) - ಧರುಣ ಎಂದರೆ ಧಾರಕವಾದ ಜ್ಯೋತಿಯ ಧರ್ಮದಲ್ಲಿ ಎಂದು ಹೇಳಿರುವುದನ್ನು ನಾವು ನೋಡಬಹುದು. ಧರ್ಮದ ಉದ್ದೇಶ್ಯ, ಕರ್ಮ-ಭೋಗ-ಯೋನಿಯಲ್ಲಿರುವ ಮಾನವನ ಆತ್ಮವನ್ನು ಪತನ ಹೊಂದಲು ಅವಕಾಶ ಕೊಡದೆ, ಆಧ್ಯಾತ್ಮಿಕ ದೃಷ್ಟಿಯಿಂದ ಅವನನ್ನು ಎತ್ತಿ ಹಿಡಿದು, ಇಹ-ಪರಗಳೆರಡನ್ನೂ ಸಾಧಿಸುವ ಸಾಮರ್ಥ್ಯವನ್ನು ಅವನಲ್ಲಿ ತುಂಬಿಕೊಡುವುದೇ ಆಗಿದೆ.
******************************

ಸೋಮವಾರ, ಏಪ್ರಿಲ್ 25, 2011

ಪ್ರೀತಿಯ ಅಂತ್ಯ


                                          ಚಿತ್ರಕೃಪೆ: ಅಂತರ್ಜಾಲ

     ಒಂದು ಸುಂದರವಾದ ದ್ವೀಪವಿತ್ತು. ಅಲ್ಲಿ ಎಲ್ಲಾ ಭಾವನೆಗಳೂ ಸಾಮರಸ್ಯದಿಂದ ಬಾಳುತ್ತಿದ್ದವು. ಒಂದು ದಿನ ದೊಡ್ಡ ಪ್ರವಾಹ ಬಂದು ದ್ವೀಪ ಮುಳುಗುವ ಸ್ಥಿತಿ ಉಂಟಾಯಿತು. ಎಲ್ಲಾ ಭಾವನೆಗಳೂ ಜೀವಭಯದಿಂದ ತತ್ತರಿಸಿದವು. ಜೀವ ಉಳಿಸಿಕೊಳ್ಳಲು ಪರದಾಡಿದವು. ಆಗ ಪ್ರೀತಿ ಒಂದು ದೋಣಿಯನ್ನು ಸಿದ್ಧಪಡಿಸಿತು. ಎಲ್ಲಾ ಭಾವನೆಗಳೂ ಜೀವ ಉಳಿದರೆ ಸಾಕೆಂದುಗಡಿಬಿಡಿಯಲ್ಲಿ ದೋಣಿ ಎರಿದವು. ಒಂದು ಭಾವನೆ ಮಾತ್ರ ದೋಣಿಯಲ್ಲಿ ಕಾಣಲಿಲ್ಲ. ಪ್ರೀತಿ ದೋಣಿ ಇಳಿದು ಬಂದು ನೋಡಿದರೆ ದುರಭಿಮಾನ ಮುಖ ಊದಿಸಿಕೊಂಡು ಒಂದುಕಡೆ ಕುಳಿತಿತ್ತು. ಅದನ್ನು ದೋಣಿ ಹತ್ತಲು ಪ್ರೀತಿ ಒತ್ತಾಯಿಸಿದರೂ ಅದು ಹತ್ತಲಿಲ್ಲ. ಪರಿಪರಿಯಾದ ಓಲೈಕೆಗೂ ಅದು ಜಗ್ಗಲಿಲ್ಲ. ಪ್ರವಾಹ ಏರುತ್ತಲೇ ಇತ್ತು. ಉಳಿದ ಭಾವನೆಗಳು ದುರಭಿಮಾನವನ್ನು ಅಲ್ಲೇ ಬಿಟ್ಟು ದೋಣಿ ಹತ್ತಿ ಜೀವ ಉಳಿಸಿಕೊಳ್ಳಲು ಪ್ರೀತಿಯನ್ನು ಕೇಳಿಕೊಂಡವು. ಪ್ರೀತಿ ದುರಭಿಮಾನವನ್ನು ಪ್ರೀತಿಯಿಂದ ದೋಣಿ ಹತ್ತಲು ಕೇಳಿಕೊಳ್ಳುತ್ತಲೇ ಇತ್ತು. ಪ್ರವಾಹ ಹೆಚ್ಚಾಗಿ ದ್ವೀಪ ಮುಳುಗಿ ದುರಭಿಮಾನದೊಂದಿಗೆ ಪ್ರೀತಿಯೂ ಸತ್ತುಹೋಯಿತು.

ಭಾನುವಾರ, ಏಪ್ರಿಲ್ 24, 2011

ಇಷ್ಟು ದಿನ ನೆಚ್ಚಿ ನಂಬಿ



ಇಷ್ಟು ದಿನ ನೆಚ್ಚಿ ನಂಬಿ
ಕಷ್ಟ ಪಟ್ಟು ಪಟ್ಟು ಹಿಡಿದು
ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು|
ಎಷ್ಟೋ ದಿನ ಗಟ್ಟಿಯಾಗಿ
ಕೆಟ್ಟಮಾತುಗಳನು ಆಡಿ
ಸಿಟ್ಟು ಮಾಡಿ ಕೆಟ್ಟಿದ್ದೆಲ್ಲ ಸಾಕು ಸಾಕು |ಪ|

ಯಾರೇ ಬರಲಿ ಊರೇ ಇರಲಿ
ಹೊಗಳಿ ಹೊಗಳಿ ಅಟ್ಟಕ್ಕೇರಿ
ಪಟ್ಟ ಕಟ್ಟಿ ಮೆರೆದಿದ್ದೆಲ್ಲಾ ಸಾಕು ಸಾಕು|
ಇಷ್ಟು ದಿನ ಮಾಡಿದ್ದೆಲ್ಲಾ
ಇಲ್ಲೇ ಬಿಟ್ಟು ಹೋಗುವಾಗ
ತಂಟೆಮಾಡ್ದೆ ಒಂಟಿಯಾಗಿ ಹೋಗ್ಲೇ ಬೇಕು |೧|

ಬಂದು ಬಳಗ ಬಂದಾರೆಂದು
ಮಂದಿ ಮಾತು ಕಟ್ಟಿಕೊಂಡು
ಕೂಟ ಮಾಡಿ ಕುಣಿದದ್ದೆಲ್ಲಾ ಸಾಕು ಸಾಕು|
ನೊಂದು ಬೆಂದು ಮುಂದೆ ಬಂದು
ಹಿಂದಿಂದೆಲ್ಲಾ ಮರೆತು ಕೊಂಡು
ಎಲ್ಲಾ ನಂದೇ ಎಂದಿದ್ದೆಲ್ಲಾ ಸಾಕು ಸಾಕು |೨|

ಸ್ನಾನ ಸಂಧ್ಯಾ ಜಪವ ತಪವ
ನಿತ್ಯಮಾಡಿದೆನೆಂದು ಬೀಗುತ
ಉತ್ತಮನೆಂದು ಮೆರೆದಿದ್ದೆಲ್ಲಾ ಸಾಕು ಸಾಕು|
ಹೇಳದೆ ಕೇಳದೆ ಅಂತ್ಯವು ಬರಲು
ಕಂತೆಯನೊಗೆಯುವ ಮುಂಚೆಯಾದರೂ
ಆತ್ಮನ ಚಿಂತನೆ ಕಿಂಚಿತ್ತಾದರು ಮಾಡ್ಲೇ ಬೇಕು ||೩||

ಶುಕ್ರವಾರ, ಏಪ್ರಿಲ್ 22, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ - ೩

     ಪ್ರಕೃತಿಯ ವರ್ಣನೆಯನ್ನು ಅಥರ್ವವೇದ ಹೀಗೆ ಮಾಡುತ್ತದೆ:-
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ ||
(ಅಥರ್ವ. ೧೦.೮.೩೦)
     [ಏಷಾ] ಈ ಪ್ರಕೃತಿಯು, [ಸನತ್ನೀ] ಸನಾತನವಾದುದು. [ಸನಮೇವ] ಅನಾದಿ ಕಾಲದಿಂದಲೇ, [ಜಾತಾ] ಪ್ರಸಿದ್ಧವಾದುದು. [ಏಷಾ ಪುರಾಣೀ] ಈ ಅನಾದಿ ಪ್ರಕೃತಿಯು, [ಸರ್ವಂ ಪರಿ ಬಭೂವ] ಎಲ್ಲ ಸ್ಪಷ್ಟ ಪದಾರ್ಥಗಳಿಗಿಂತ ಮೊದಲಿದ್ದಿತು. [ಉಷಸಃ] ಸಂಕಲ್ಪಮಯನಾದ ಪ್ರಭುವಿನ ಇಚ್ಛೆಯಂತೆ, [ವಿಭಾತೀ ಮಹೀ ದೇವೀ] ವಿವಿಧ ರೂಪದಲ್ಲಿ ಪ್ರಕಾಶಕ್ಕೆ ಬರುವ, ಮಹತ್ತತ್ವವಾದ ಈ ಸರ್ವದಾತ್ರೀ ಪ್ರಕೃತಿಯು, [ಸಾ] ತಾನಾಗಿ, [ಏಕೇನ ಏಕೇನ ಮಿಷತಾ] ಕಣ್ಣು ರೆಪ್ಪೆ ಹೊಡೆಯುವ ಪ್ರತಿಯೊಂದು ಪ್ರಾಣಿಯ ಮೂಲಕವೂ, [ವಿಚಷ್ಟೇ] ಕಂಡು ಬರುತ್ತದೆ, ಕೆಲಸ ಮಾಡುತ್ತಿದೆ, ಮಾತನಾಡುತ್ತಿದೆ.
     ಈ ಮಂತ್ರ ಪ್ರಕೃತಿಯ ಅನಾದಿತ್ವವನ್ನು ಎತ್ತಿ ಹಿಡಿಯುತ್ತಿದೆ. ಸ್ವತಃ ಜಡವಾದ ಕಾರಣ, ತಾನೇ ಏನನ್ನೂ ಮಾಡಲಾರದ, ಪ್ರಭುಸಂಕಲ್ಪದಿಮದ ಜಗದ್ರೂಪ ತಾಳಿ, ಬೆಳಕಿಗೆ ಬರುವಂತಹುದು. ಅದು ತತ್ತ್ವವನ್ನು ನೋಡಬಲ್ಲ ವೈಜ್ಞಾನಿಕರೊಂದಿಗೆ - ಮೂಕಭಾಷೆಯಲ್ಲೇ ಇರಲೊಲ್ಲದೇಕೆ - ಮಾತನಾಡುತ್ತದೆ, ಇಣಿಕಿ ನೋಡುತ್ತದೆ.
     ವೇದಗಳಲ್ಲಿ ವಾದಗಳನ್ನು - ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶೂನ್ಯವಾದ, ಸಂದೇಹವಾದ, ಅಜ್ಞೇಯವಾದ ಮೊದಲಾದುವುಗಳನ್ನು - ಕಾಣಲು ಯತ್ನಿಸುವುದು ಕೇವಲ ಬೌದ್ಧಿಕ ವ್ಯಾಯಾಮ ಮಾತ್ರ. ವೇದಗಳಲ್ಲಿರುವುದು ಸತ್ಯದ ಪ್ರಕಾಶನ ಮಾತ್ರ. ಯಾವ ವಾದವೂ ಇಲ್ಲ. ಪರಮಾತ್ಮ, ಜೀವಾತ್ಮ, ಪ್ರಕೃತಿ - ಈ ಮೂರೂ ಅನಾದಿ, ಅನಂತ. ಅದೇ ಕಾರಣದಿಂದ ನಿತ್ಯ, ಶಾಶ್ವತ. ಪರಮಾತ್ಮ ಸದಾ ಏಕರೂಪ, ಜೀವಾತ್ಮ ಸದೇಹ-ವಿದೇಹ ಸ್ಥಿತಿಗಳನ್ನುಳ್ಳವನು. ಪ್ರಕೃತಿ, ಕಾರಣ-ಕಾರ್ಯರೂಪಗಳಲ್ಲಿ ಪರಿಣಾಮ ಹೊಂದುವ ಜಡತತ್ತ್ವ. ಪರಮಾತ್ಮ ಸಚ್ಚಿದಾನಂದಸ್ವರೂಪ, ಜೀವಾತ್ಮ ಸಚ್ಚಿತ್ಸ್ವರೂಪ, ಪ್ರಕೃತಿ ಸತ್ಸ್ವರೂಪಿಣಿ. ಇದೊಂದೇ ಸಾರಿಯಲ್ಲ ಸೃಷ್ಟಿಯಾಗಿರುವುದು. ಅನಾದಿ ಕಾಲದಿಂದಲೂ ಸೃಷ್ಟಿ-ಸ್ಥಿತಿ-ಪ್ರಳಯಗಳು ಆಗುತ್ತಾ ಬಂದಿವೆ.
ಸೂರ್ಯಾಚಂದ್ರಮಸೌ ಧಾತಾ ಯಥಾಪೂರ್ವಮಕಲ್ಪಯತ್ |
ದಿವಂ ಚ ಪೃಥಿವೀಂ ಚಾಂತರಿಕ್ಷಮಥೋ ಸ್ವಃ ||
(ಋಕ್. ೧೦.೧೯೦.೩)
     [ಅಸೌ ಧಾತಾ] ಈ ಸರ್ವಾಧಾರನಾದ ಪರಮಾತ್ಮನು, [ಯಥಾ ಪೂರ್ವಂ] ಮೊದಲಿನಂತೆಯೇ, [ಸೂರ್ಯಾ ಚಂದ್ರಮಸೌ] ಸೂರ್ಯ-ಚಂದ್ರರನ್ನೂ, [ದಿವಂ ಚ] ದ್ಯುಲೋಕವನ್ನೂ, [ಪೃಥಿವೀಂ] ಪೃಥಿವಿಯನ್ನೂ, [ಅಂತರಿಕ್ಷಂ] ಅಂತರಿಕ್ಷವನ್ನೂ, [ಅಥ ಉ] ಹಾಗೆಯೇ [ಸ್ವಃ] ಆನಂದಮಯ ಸ್ಥಿತಿಯನ್ನು, [ಅಕಲ್ಪಯತ್] ರಚಿಸಿದನು.
     ಹಿಂದೆ ಸೃಷ್ಟಿಗಳಾಗಿವೆ. ಮುಂದೆ ಆಗುತ್ತಾ ಹೋಗುತ್ತದೆ. ಸೃಷ್ಟಿಯೂ ಕೂಡ ಪ್ರವಾಹ ರೂಪದಿಂದ ಅನಾದಿ-ಅನಂತ.
     ಮೂರು ಶಾಶ್ವತ ಪದಾರ್ಥಗಳ, ಅನಾದಿ ತತ್ತ್ವಗಳ ಪರಿಚಯ ಪಡೆದುದಾಯಿತು. ಇನ್ನು ಮುಂದುವರೆಯೋಣ. ಧರ್ಮದ ಸ್ವರೂಪವನ್ನು ಅರ್ಥ ಮಾಡಿಕೊಳ್ಳೋಣ.
**************************
-ಪಂ. ಸುಧಾಕರ ಚತುರ್ವೇದಿ.

ಶನಿವಾರ, ಏಪ್ರಿಲ್ 16, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ -2

     ವೇದಗಳು ಸ್ಪಷ್ಟವಾಗಿ ಪರಮಾತ್ಮನು ಜಡವಾದ ಪ್ರಕೃತಿ ತತ್ವದಿಂದ ಜಗದ್ರಚನೆ ಮಾಡಿದನು ಎಂದು ಹೇಳುತ್ತವೆ. ಕೇಳಿರಿ:-
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ ||
(ಋಕ್. ೧೦.೧೨೯.೧)
     [ತದಾನೀಮ್] ಆಗ, ಸೃಷ್ಟಿಯಾಗುವ ಮುನ್ನ [ಅಸತ್ ನ ಆಸೀತ್] ಅಭಾವ ಅಥವಾ ಶೂನ್ಯವಿರಲಿಲ್ಲ. [ಸತ್ ನೋ ಆಸೀತ್] ಈ ವಿಶ್ವದ ಸತ್ತೆ ಅಥವಾ ಭಾವವೂ ಇರಲಿಲ್ಲ. [ರಜಃ ನ ಆಸೀತ್] ಲೋಕವೂ ಇರಲಿಲ್ಲ. [ಯತ್ ಪರಃ] ಯಾವುದು ಮೇಲಿದೆಯೋ, [ವ್ಯೋಮಾ ನೋ] ಆ ಆಕಾಶವೂ ಇರಲಿಲ್ಲ. [ಆವರೀವಃ ಕಿಮ್] ಆವರಿಸುವ ಏನೋ ಒಂದು ತತ್ವವಿತ್ತು. [ಕುಹ] ಎಲ್ಲಿತ್ತು? [ಕಸ್ಯ ಶರ್ಮನ್] ಆನಂದಮಯನಾದ ಪರಮಾತ್ಮನ ಆಶ್ರ್ರಯದಲ್ಲಿತ್ತು. [ಗಹನಂ ಗಭೀರಂ ಅಂಭಃ] ಗಹನವೂ, ಗಂಭೀರವೂ ಆದ ಏನೋ ಒಂದು ತರಳ ಪದಾರ್ಥವು, [ಆಸೀತ್] ಇದ್ದಿತು.
     ಸೃಷ್ಟಿಗೆ ಮುನ್ನ ಸ್ಥೂಲ ಜಗತ್ತಿರಲಿಲ್ಲ. ಆದರೆ ಏನೋ ಒಂದು ಸೂಕ್ಷ್ಮವಾದ ತರಳ ಅಂದರೆ ಹರಿದಾಡುವ ದ್ರವರೂಪವಾದ ವಸ್ತುವಿತ್ತು. ಬೇರಾವ ಅಧಿಷ್ಠಾನ ಅಂದರೆ ಆಶ್ರಯ ಸ್ಥಾನವಿಲ್ಲದುದರಿಂದ, ಅದು ಪರಮಾತ್ಮನ ಆಶ್ರಯದಲ್ಲಿಯೇ ಇತ್ತು. ಅಭಾವ ಅಥವಾ ಶೂನ್ಯವಂತೂ ಇರಲಿಲ್ಲ.
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ ||
(ಋಕ್. ೧೦.೧೨೯.೨)
     [ಮೃತ್ಯುಃ ನ ಆಸೀತ್] ಸಾವು ಇರಲಿಲ್ಲ. [ತರ್ಹಿ] ಅದೇ ಕಾರಣದಿಂದ [ಅಮೃತಃ ನ} ಅಮರತ್ವವೂ ಇರಲಿಲ್ಲ. [ರಾತ್ರ್ಯಾ] ರಾತ್ರಿಯ [ಅಹ್ನಃ] ಹಗಲಿನ [ಪ್ರಕೇತಃ] ಚಿಹ್ನೆಯೇ [ನ ಆಸೀತ್] ಇರಲಿಲ್ಲ. [ತತ್ ಏಕಮ್] ಆ ಒಂದು ತತ್ವ ಮಾತ್ರ [ಸ್ವಧಯಾ] ತನ್ನದೇ ಆದ ಅಸ್ತಿತ್ವದಿಂದ [ಅವಾತಮ್] ವಾಯುರಹಿತವಾಗಿ [ಆಸೀತ್] ಬೇರೆಯವರಿಗೆ ಪ್ರಾಣ ನೀಡಬಲ್ಲದಾಗಿತ್ತು. [ತಸ್ಮಾತ್ ಅನ್ಯತ್] ಅದರಿಂದ ಭಿನ್ನವಾದ [ಕಿಂಚನ ಪರಃ] ಯಾವುದೇ ಬೇರೆ ವಸ್ತುವೂ [ನ ಆಸ] ಇರಲಿಲ್ಲ.
     ಸೃಷ್ಟಿಯಾಗುವ ಮೊದಲೂ ಕೂಡ ಅದೇನೋ ಒಂದು ಅನಾದಿ ಪದಾರ್ಥವು ಇದ್ದೇ ಇತ್ತು. ಆದರೆ ಸೂರ್ಯ, ಪೃಥಿವೀ, ಚಂದ್ರ ಮೊದಲಾದ ಗ್ರಹಗಳ ರಚನೆಯೇ ಆಗಿರಲಿಲ್ಲವಾದ ಕಾರಣ, ಇರುಳು, ಹಗಲು ಎಂದು ವಿಭಾಗ ಮಾಡಿ ಹೇಳಲಾಗುತ್ತಿರಲಿಲ್ಲ. ಆ ಏನೋ ಒಂದು ತತ್ವದ ಲಕ್ಷಣವೇನು? ಆಲಿಸಿರಿ:-
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್||
(ಋಕ್.೧೦.೧೨೯.೩)
     [ಅಗ್ರೇ] ಸೃಷ್ಟಿಗೆ ಮುನ್ನ [ಇದಂ ಸರ್ವಮ್] ಇದೆಲ್ಲವೂ [ಅಪ್ರಕೇತಮ್] ಲಕ್ಷಣರಹಿತವಾಗಿ [ಸಲಿಲಮ್] ದ್ರವರೂಪವಾಗಿ [ತಮಸಾ ಗೂಳ್ಹಮ್] ಅಂಧಕಾರದಿಂದ ಗೂಢವಾಗಿ [ತಮಃ ಆಸೀತ್] ಪ್ರಕೃತಿಯ ರೂಪದಲ್ಲಿತ್ತು. [ಯತ್] ಯಾವುದು ಇದ್ದಿತೋ, ಅದು [ತುಚ್ಛ್ಯೇನ] ತನ್ನ ತುಚ್ಛತ್ವದಿಂದ [ಅಭಿ ಆಪಿಹಿತಮ್] ನಾಲ್ಕೆಡೆಯಿಂದಲೂ ಮುಚ್ಚಲ್ಪಟ್ಟುದಾಗಿ [ಆಸೀತ್] ಇದ್ದಿತು. [ತತ್] ಅದು [ತಪಸಃ ಮಹಿನಾ] ಪರಮ ತೇಜಸ್ವಿಯಾದ ಪ್ರಭುವಿನ ಮಹಿಮೆಯಿಂದ [ಏಕಂ ಅಜಾಯತ] ಒಂದು ಎಂದಾಯಿತು.
      ಡಾರ್ವಿನ್ನನ ಅನುಯಾಯಿಗಳ ಅಭಿಪ್ರಾಯದಂತೆ, ಮಾನವನ ಉತ್ತರೋತ್ತರ ಉತ್ಕ್ರಾಂತಿ, ಅಂದರೆ ವಿಕಾಸ ಒಂದು ಸತ್ಯ ತಾನೇ? ಸ್ವಲ್ಪ ಹೊತ್ತು ಆ ತತ್ವ ಸತ್ಯವೆಂದು ಭಾವಿಸಿದರೆ, ಆದಿಮಾನವ ಅತ್ಯಂತ ಅವಿಕಸಿತ ಬುದ್ಧಿಯವನಾಗಿದ್ದನು. ಆದಿಮಾನವನ ಕಾಲದಲ್ಲೇ ಅವಿರ್ಭವಿಸಿದ ವೇದಗಳಲ್ಲಿ, ೨೦ನೆಯ ಶತಮಾನದ ಭೌತಿಕ ವಿಜ್ಞಾನಿಗಳೂ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವ, ಸೃಷ್ಟಿಯ ಪೂರ್ವಸ್ಥಿತಿಯ ಈ ಪರಮ ವೈಜ್ಞಾನಿಕ ವರ್ಣನೆ ಕಂಡುಬರಬೇಕಾದರೆ ಅದರ ಹಿಂದೆ ಭಗವಂತನ ಕೈವಾಡವಿರಲೇಬೇಕು. ನಾವೇನೂ ಡಾರ್ವಿನ್ನನ ವಿಕಾಸವಾದವನ್ನು ಒಪ್ಪುವುದಿಲ್ಲ. ಮಾನವನ ಬುದ್ಧಿ ಆಗಿಗಿಂತ ಈಗ ಹೆಚ್ಚಿದೆ ಎಂದು ನಾವು ಹೇಳಲಾರೆವು. ಈ ಸಮಯದಂತೆ, ಹಿಂದೆ ಅದೆಷ್ಟು ಸಾರಿ ವಿಜ್ಞಾನ ಬೆಳೆದು ನಾಶವಾಗಿದೆಯೋ? ಆದರೆ, ಇನ್ನೂ ಯಾವ ಶಾಲಾ-ಕಾಲೇಜುಗಳೂ, ಪ್ರಾಧ್ಯಾಪಕ-ಆಚಾರ್ಯರೂ ಕಲಿಸಿಕೊಡಲು ಇಲ್ಲದಿದ್ದಾಗ ಇಂತಹ ಸ್ಥಿತಿ ಚಿತ್ರಣವನ್ನು ಕಾಣಬೇಕಾದರೆ, ವೇದಗಳು ಈಶ್ವರವಾಣಿಯೇ ಆಗಿರಬೇಕೆಂಬುದರಲ್ಲಿ ಸಂದೇಹವೇ ಇಲ್ಲ. ಇಂದಿನ ವೈಜ್ಞಾನಿಕರು ಉಗ್ಗಡಿಸುವ ನೇಬ್ಯುಲಾ ಸಿದ್ಧಾಂತಕ್ಕೂ, ವೇದಗಳ ಈ ಕಥನಕ್ಕೂ ವ್ಯತ್ಯಾಸವೇನಿದೆ?
     ತಾತ್ಪರ್ಯವಿಷ್ಟೆ. ಭಗವಂತ ಅಭಾವದಿಂದ ಸೃಷ್ಟಿಯನ್ನು ರಚಿಸಿಲ್ಲ. ಸೃಷ್ಟಿಗೆ ಉಪಾದಾನ ಕಾರಣವೂ ಇದೆ. ಆ ಉಪಾದಾನ ಕಾರಣ (Material Cause) ಪ್ರಕೃತಿ. ಅದು ಪರಮಾಣುಗಳ ಸಂಘಾತ. ಪ್ರತಿಯೊಂದು ಪರಮಾಣುವೂ, ವಿಶ್ವಚೇತನ (ಪರಮಾತ್ಮ), ಪರಿಚ್ಛಿನ್ನ ಚೇತನ (ಜೀವಾತ್ಮ) ಇವರಂತೆಯೇ ಅನಾದಿ. ಯಾವ ರೀತಿ ಜೀವಾತ್ಮರು ಎಷ್ಟಿದ್ದಾರೆಂದು ಎಣಿಸಲು ಅಲ್ಪಜ್ಞರಾದ ನಮಗೆ ಸಾಧ್ಯವಿಲ್ಲವೋ, ಅದೇ ರೀತಿ ಪರಮಾಣುಗಳೆಷ್ಟಿವೆ ಎಂದು ಎಣಿಸಲೂ ಸಾಧ್ಯವಿಲ್ಲ. ಅರ್ಬುದಾರ್ಬುದಕ್ಕಿಂತ ಅತಿ ಹೆಚ್ಚು ಪರಮಾಣುಗಳಿಂದ ಸೃಜಿತವಾದ ನಕ್ಷತ್ರಗಳೆಷ್ಟಿವೆ ಎಂಬುದನ್ನೇ ಎಣಿಸಲಾಗಿಲ್ಲ. ಒಂದು ಘನ ಅಂಗುಲ ಪ್ರಮಾಣದ ಕಲ್ಲು ಅಥವಾ ಹೆಂಟೆಯಲ್ಲಿ ಎಷ್ಟು ಪರಮಾಣುಗಳಿವೆ ಎಂದು ಎಣಿಸುವುದೂ ದುಸ್ತರವೇ. ಇನ್ನು ಸೃಷ್ಟಿಗಾಗಿ ಉಪಯೋಗಿಸಲ್ಪಟ್ಟ ಪರಮಾಣುಗಳೆಷ್ಟಿವೆ ಎಂದು ನಾವು ಎಣಿಸಬಲ್ಲೆವೇ? ಆದರೆ, ಇಷ್ಟೇನೋ ನಿಜ. ಪರಮಾಣುಗಳು ಯಾವುದೇ ಒಂದು ನಿಶ್ಚಿತ ಪ್ರಮಾಣದಲ್ಲಿವೆ. ಅವು ಒಂದೊಂದು ಸಾರಿ ಕಣರೂಪದಲ್ಲಿ ಇರುತ್ತವೆ, ರೂಪ ಬದಲಾಯಿಸುತ್ತವೆಯೇ ಹೊರತು ನಾಶ ಹೊಂದುವುದಿಲ್ಲ. ಹೊಸ ಪರಮಾಣುಗಳೂ ಹುಟ್ಟುವುದಿಲ್ಲ.
-ಪಂ. ಸುಧಾಕರ ಚತುರ್ವೇದಿ.
. . . .(ಮುಂದಿನ ಕಂತಿನಲ್ಲಿ: ಅಥರ್ವವೇದದಲ್ಲಿ ಪ್ರಕೃತಿಯ ವರ್ಣನೆ)

ಶುಕ್ರವಾರ, ಏಪ್ರಿಲ್ 15, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ - 1

      ಸಹೃದಯರೇ, ಪಂ. ಸುಧಾಕರ ಚತುರ್ವೇದಿಯವರು ಭಗವಂತನ ಸ್ವರೂಪದ ಕುರಿತು ಹಾಗೂ ಜೀವಾತ್ಮದ ಸ್ವರೂಪ ಕುರಿತು ವೇದಗಳು ಏನು ಹೇಳುತ್ತವೆ ಎಂಬ ಬಗ್ಗೆ ತಿಳಿಸಿರುವುದನ್ನು ಓದಿರುವಿರಿ ಹಾಗೂ ಆ ವಿಷಯಗಳಲ್ಲಿ ಅರ್ಥಪೂರ್ಣ ಚರ್ಚೆಗಳನ್ನೂ ಮಾಡಿರುವಿರಿ. ಇನ್ನುಮುಂದೆ ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ ಕುರಿತು ವೇದ ಏನು ಹೇಳುತ್ತದೆ ಎಂಬುದನ್ನು ಪಂಡಿತರ ಮಾತುಗಳಲ್ಲೇ ನೋಡೋಣ.

ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ
     ಸೃಷ್ಟಿಯ ನಿಮಿತ್ತ ಕಾರಣ, ಮಹಾನ್ ವಿಶ್ವಚೇತನ, ಅಂದರೆ ಭಗವಂತನು. ಅವನು ಈ ಸೃಷ್ಟಿಯನ್ನು ರಚಿಸಿರುವುದು ಪರಿಚ್ಛಿನ್ನ ಚೇತನರಾದ ಜೀವಾತ್ಮರ ಸಲುವಾಗಿ. ಈ ವಿಷಯಗಳನ್ನು ವಿಸ್ತಾರವಾಗಿ ಅರಿತುದಾಯಿತು. ಈ ವಿಶ್ವಬ್ರಹ್ಮಾಂಡದ ಕಡೆ ಗಮನವಿತ್ತು ನೋಡಿದಾಗ, ಅಷ್ಟೇ ಸಿಕ್ಕುಗಟ್ಟಿದ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಭಗವಂತನು ಚೇತನ ಜೀವಾತ್ಮರಿಗಾಗಿ ಸೃಷ್ಟಿಯನ್ನು ರಚಿಸಿದ, ಸರಿ. ಅದರೆ ಏತರಿಂದ ಸೃಜಿಸಿದ? ಕೆಲವು ಮತದವರು 'ಭಗವಂತ ಸೃಷ್ಟಿಯಾಗಲಿ ಎಂದ, ಸೃಷ್ಟಿಯಾಗಿ ಹೋಯಿತು' - ಎನ್ನುತ್ತಾರೆ. ಯಾರಿಗೆ ಹೇಳಿದ ಭಗವಂತ ಸೃಷ್ಟಿಯಾಗಿ ಹೋಗಲಿ ಎಂದು? ಶೂನ್ಯಕ್ಕೇನು? ಶೂನ್ಯ ಎಂದರೆ ಅಭಾವ, ಏನೂ ಇಲ್ಲದಿರುವಿಕೆ. ಅಭಾವದಿಂದ ಭಾವೋತ್ಪತ್ತಿ, ಅಸತ್‌ನಿಂದ ಸದುತ್ಪತ್ತಿ ಎಂದಿಗೂ ಆಗಲಾರದು. ಮಣ್ಣಿದ್ದರೆ ಮಡಕೆ, ನೂಲಿದ್ದರೆ ಬಟ್ಟೆ, ಮರದ ಹಲಗೆಗಳಿದ್ದರೆ ಕಾಲುಮಣೆ ಇದು ಸರಿ. ಕಾರಣವಿಲ್ಲದೆ ಕಾರ್ಯ ಉದ್ಭವಿಸಲಾರದು. ಶೂನ್ಯದಿಂದ ಮಡಕೆಯಾಗಲಾರದು, ಶೂನ್ಯದಿಂದ ಬಟ್ಟೆಯಾಗಲಾರದು, ಶೂನ್ಯದಿಂದ ಕಾಲುಮಣೆಯಾಗಲಾರದು. ಹೀಗಿರುವಾಗ ಇಷ್ಟು ದೊಡ್ಡ ಬ್ರಹ್ಮಾಂಡ ಶೂನ್ಯದಿಂದ ಆಗಿಹೋಯಿತೇ? ಕೆಲವರು 'ಭಗವಂತ ಸರ್ವಶಕ್ತ, ಅವನು ಏನು ಬೇಕಾದರೂ ಮಾಡಬಲ್ಲನು' ಎನ್ನುವುದುಂಟು. ಆದರೆ ವೈಜ್ಞಾನಿಕ ವಿಶ್ಲೇಷಣದ ಮುಂದೆ ಈ ವಾದ ಅರೆಕ್ಷಣವೂ ನಿಲ್ಲಲಾರದು. ಅಸಂಭವವಾದುದು ಎಂದಿಗೂ ಸಂಭವವಾಗಲಾರದು. 'ದೇವರು ಸರ್ವಶಕ್ತನಾದುದರಿಂದ ಅವನು ತಾನೇ ಎತ್ತಿ ಹಿಡಿಯಲಾರದ ವಸ್ತುವನ್ನು ರಚಿಸಬಲ್ಲನೇ?' - ಎಂದು ನಾವು ಪ್ರಶ್ನಿಸುತ್ತೇವೆ. 'ಓಹೋ, ರಚಿಸಬಲ್ಲ' ಎಂದು ನೀವು ಹೇಳಿದರೆ, 'ಅವನು ಆ ವಸ್ತುವನ್ನು ಎತ್ತಿ ಹಿಡಿಯಲಾರ, ಹೀಗೆ ಅವನ ಸರ್ವಶಕ್ತಿತ್ವ ಕುಂಠಿತವಾಯಿತು' - ಎಂದು ಒಪ್ಪಬೇಕಾಗುತ್ತದೆ.' ರಚಿಸಲಾರ ' ಎಂದರಂತೂ ಅವನ ಸರ್ವಶಕ್ತಿತ್ವಕ್ಕೆ ಚ್ಯುತಿ ಸ್ಪಷ್ಟ. ಭಗವಂತ ತನ್ನಂತಹ ಇನ್ನೊಬ್ಬ ಭಗವಂತನನ್ನು ಸೃಜಿಸಬಲ್ಲನೇ? ಎಂದು ನಾವು ಪ್ರಶ್ನಿಸಿದರೆ ನೀವು ಇಲ್ಲ ಎನ್ನಲೇಬೇಕಾಗುತ್ತದೆ. ಇದರ ತಾತ್ಪರ್ಯವೇನು? ಎಲ್ಲಾ ಮಾಡಬಲ್ಲ ಶಕ್ತಿಯಲ್ಲ ಸರ್ವಶಕ್ತಿ. ಬೇರೆಯವರ ಸಹಾಯವಿಲ್ಲದೆ ತನ್ನ ಗುಣ-ಕರ್ಮ-ಸ್ವಭಾವಕ್ಕನುಸಾರವಾಗಿ ಸೃಷ್ಟಿ-ಸ್ಥಿತಿ-ಲಯಗಳನ್ನು ಪ್ರವಾಹರೂಪದಲ್ಲಿ ಮಾಡುತ್ತಾ ಹೋಗುವುದೇ ಸರ್ವಶಕ್ತಿ - ಎಂಬುದೇ ಸಾಧುವಾದ, ತರ್ಕಬದ್ಧ ಹಾಗೂ ತಾತ್ವಿಕವಾದ ಪಕ್ಷ. ಭಗವಂತನೂ ಶೂನ್ಯದಿಂದ ಸೃಷ್ಟಿಯನ್ನು ರಚಿಸಲಾರನು.
     ಇನ್ನೊಂದು ಭ್ರಾಮಕ ವಾದವಿದೆ. ಅದನ್ನು 'ಅಭಿನ್ನ ನಿಮಿತ್ತೋಪಾದಾನ ಕಾರಣವಾದ' - ಎಂಬ ಉದ್ದವಾದ ಹೆಸರಿನಿಂದ ಕರೆಯುತ್ತಾರೆ. 'ಭಗವಂತನೇ ಈ ಜಗತ್ತಿಗೆ ನಿಮಿತ್ತ ಕಾರಣ, ಅವನೇ ಉಪಾದಾನ ಕಾರಣ. ಭಗವಂತನೇ ಜಗತ್ತನ್ನು ರಚಿಸುತ್ತಾನೆ, ಅವನೇ ಜಗತ್ತಾಗುತ್ತಾನೆ' - ಎನ್ನುವುದೇ ಆ ವಾದದ ಸಾರ. ಏನರ್ಥ ಇದಕ್ಕೆ? ಬ್ರಹ್ಮವೇ ಜೀವವಾಯಿತು ಅಥವಾ ಬ್ರಹ್ಮದಿಂದಲೇ ಜೀವೋತ್ಪತ್ತಿಯಾಯಿತು - ಎಂಬ ವಾದಕ್ಕೆ ವಿರುದ್ಧವಾಗಿ ನಾವು ಹಿಂದಿನ ಅಧ್ಯಾಯದಲ್ಲಿ ಎತ್ತಿದ್ದ ಆಕ್ಷೇಪಣೆಗಳನ್ನು ಪಾಠಕರು ಜ್ಞಾಪಿಸಿಕೊಳ್ಳಬಹುದು. 'ಬ್ರಹ್ಮ ಪೂರ್ಣತಃ ಜಡವಾಗಿ ಅದರಿಂದ ಜಗತ್ತಾಯಿತು' - ಎಂದರೆ, ಈಗ ಬ್ರಹ್ಮವಿಲ್ಲವೇ ಇಲ್ಲವೇ? - ಎಂಬ ಪ್ರಶ್ನೆ ಹುಟ್ಟುತ್ತದೆ. ಎರಡನೆಯದಾಗಿ, ಸಂಪೂರ್ಣ ಬ್ರಹ್ಮವೇ ಜಡವಾಗಿ ಹೋದ ಮೇಲೆ, ಚೇತನ ಉಳಿಯಲೇ ಇಲ್ಲ, ಆ ಜಡೀಭೂತ ಬ್ರಹ್ಮಕ್ಕೆ ಜಗದಾಕಾರ ಕೊಟ್ಟವರಾರು? ತನ್ನಷ್ಟಕ್ಕೆ ತಾನೇ ನಿಯಮಪೂರ್ವಕವಾಗಿ ಬೇರೆ ಸಾರ್ಥಕರೂಪ ತಾಳೂವುದು ಜಡಕ್ಕೆ ಸಾಧ್ಯವಿಲ್ಲವಷ್ಟೇ?. 'ಹಾಗಲ್ಲ, ಬ್ರಹ್ಮನ ಯಾವುದೋ ಒಂದು ಭಾಗ ಮಾತ್ರ ಜಡವಾಯಿತು, ಉಳಿದ ಚೇತನ ಭಾಗ ಜಗತ್ತಿಗೆ ನಿಮಿತ್ತ ಕಾರಣವಾಯಿತು' - ಎಂದರೆ, ಬ್ರಹ್ಮದ ಅಖಂಡತ್ವದ ಗತಿ ಏನಾಯಿತು? 'ಬ್ರಹ್ಮ ಪ್ರಜ್ಞಾನ, ಬ್ರಹ್ಮ ನಿರ್ವಿಕಾರ' - ಎಂಬ ಹೇಳಿಕೆಗಳಿಗೆ ಅರ್ಥವೇನುಳಿಯಿತು?
     ನಿಜವಾಗಿ ಇಂತಹ ವಾದಗಳೆಲ್ಲಾ ಕೇವಲ ಭ್ರಾಂತಿವಿಲಾಸ ಮಾತ್ರ. ವೇದಗಳು ಸ್ಪಷ್ಟವಾಗಿ ಪರಮಾತ್ಮನು ಜಡವಾದ ಪ್ರಕೃತಿ ತತ್ವದಿಂದ ಜಗದ್ರಚನೆ ಮಾಡಿದನು ಎಂದು ಹೇಳುತ್ತವೆ.

. . . . . . . ಏನು ಹೇಳುತ್ತವೆ? ಮುಂದಿನ ಕಂತಿನಲ್ಲಿ ನೋಡೋಣ.

ಸೋಮವಾರ, ಏಪ್ರಿಲ್ 11, 2011

ಅನುಪಮ ಸಾಧಕ - ಮಾರ್ಗದರ್ಶಿಗೆ ನಮಿಸೋಣ

     ಇಂದು ಶ್ರೀಯುತ ಪಂಡಿತ ಸುಧಾಕರ ಚತುರ್ವೇದಿಯವರು 115ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ನೆನೆಯೋಣ, ಅವರ ವಿಚಾರಗಳನ್ನು ತಿಳಿಯೋಣ, ನಮಿಸೋಣ, ಶುಭ ಹಾರೈಸೋಣ!



ಪಂಡಿತ ಸುಧಾಕರ ಚತುರ್ವೇದಿಯವರ ಕುರಿತು ಕೆಲವು ಮಾಹಿತಿ:
1. 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿದವರು, ಅಪ್ಪಟ ಕನ್ನಡಿಗರು.
2. 11ನೆಯ ವಯಸ್ಸಿಗೆ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿದವರು.
3. ಇವರು ಚತುರ್ವೇದಿ ಮನೆತನದವರಲ್ಲ. ನಾಲ್ಕೂ ವೇದಗಳನ್ನು ಇಪ್ಪತ್ತೈದು ವರ್ಷಗಳ ಕಾಲ ಸತತ ಅಭ್ಯಾಸ ಮಾಡಿದ ನಿಜವಾದ ಪಂಡಿತರು. ಈ ಕಾರಣಕ್ಕಾಗಿ ಸಾರ್ವದೇಶಿಕ ಆರ್ಯ ಪ್ರತಿನಿಧಿ ಸಭೆಯ ನಿರ್ಣಯಾನುಸಾರ 'ಚತುರ್ವೇದಿ' ಎಂಬ ಉಪಾಧಿ ಪಡೆದವರು.
4. ವೈದಿಕ ವಾಗ್ಮಿಗಳು, ಬ್ರಹ್ಮಚರ್ಯವ್ರತಪಾಲಕರು, ಯಾವುದೇ ವೈದಿಕ ವಿಷಯಗಳನ್ನು ಸರಳವಾಗಿ ವಿವರಿಸುವ ನೈಪುಣ್ಯತೆ ಹೊಂದಿದವರು. ಇವರ ಅನೇಕ ಲೇಖನಗಳು, ವಿಚಾರಗಳು ಪುಸ್ತಕರೂಪದಲ್ಲಿ ಪ್ರಕಟಗೊಂಡಿವೆ. ಸತ್ಯಾನ್ವೇಶಿಗಳಿಗೆ ನಿಜವಾಗಿ ಮಾರ್ಗದರ್ಶಿಯಾಗಿವೆ.
5. ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿರದಿಂದ ಕಂಡವರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಸಾಕ್ಷಿಯಾದವರು. ಆ ಕುರಿತು ಅವರ ಮಾತು: "1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೆನಸಿಕೊಂಡರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ. ದೊಡ್ಡದಾದ ತೋಟದಂತಿದ್ದ ಅಲ್ಲಿ ಸುತ್ತಲೂ  3-4 ಅಂತಸ್ತಿನ ಗೋಡೆ, ಒಂದೇ ಬಾಗಿಲು. ನೋಡುತ್ತಿದ್ದಂತೆ ಎಲ್ಲರ ಮೇಲೂ ಗುಂಡಿನ ದಾಳಿ. ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರು. ಆದರೆ ಅಂದಿನ ಬ್ರಿಟಿಷ್ ಸರ್ಕಾರ ಕೇವಲ 670 ಜನ ಮಾತ್ರ ಸತ್ತಿದ್ದಾರೆ ಎಂದು ಹೇಳಿತು. ಮಂತ್ರ ಬರುತ್ತಿದ್ದರಿಂದ ಗಾಂಧೀಜಿಯವರು ನನ್ನ ಬಳಿ ಅಂತ್ಯ ಸಂಸ್ಕಾರ ಮಾಡಲು ಹೇಳಿದರು. ಅವರ ಆಜ್ಞೆಯಂತೆ ನದಿತಟದಲ್ಲಿ ಸಾವಿರಕ್ಕೂ ಹೆಚ್ಚು ಜನರ ಅಂತ್ಯಸಂಸ್ಕಾರ ಮಾಡಿದ್ದೆ."
6. ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಂಡವರು. ಗಾಂಧೀಜಿ ಸೇರಿದಂತೆ ಹಲವಾರು ಸ್ವಾತಂತ್ರ್ಯ ಸೇನಾನಿಗಳ ಒಡನಾಡಿಯಾಗಿದ್ದವರು. 13 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಅವರ ಅಂದಿನ ಸ್ಥಿತಿ ಹೇಗಿತ್ತೆಂದರೆ ಕಿತ್ತು ತಿನ್ನುತ್ತಿದ್ದ ಬಡತನ, ಹೊಟ್ಟೆಗೆ ಏನೂ ಇರುತ್ತಿರಲಿಲ್ಲ, 3-4 ದಿನಗಳು  ಏನೂ ತಿನ್ನಲು ಸಿಗದೆ ನೀರು ಮಾತ್ರ ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದವರು. ಯಾರಾದರೂ ಆಲೂಗೆಡ್ಡೆ ಕೊಟ್ಟರೆ ಬೇಯಿಸಿಕೊಂಡು ತಿನ್ನಲೂ ಸಾಧನಗಳಿರಲಿಲ್ಲ. ಹಸಿವು ಕಚ್ಚಿಕೊಂಡಿದ್ದರೂ ಏನೂ ಮಾಡಲಾಗುತ್ತಿರಲಿಲ್ಲವೆಂದು ನೆನೆಸಿಕೊಳ್ಳುತ್ತಾರೆ.
7. ಲಾಹೋರಿನಲ್ಲಿದ್ದಾಗ ಭಗತ್ ಸಿಂಗ್ ಇವರ ವಿದ್ಯಾರ್ಥಿಯಾಗಿದ್ದ. ಗಣಿತದಲ್ಲಿ ತೇರ್ಗಡೆಯಾಗಲು ಆತನಿಗೆ 15 ಅಂಕಗಳು ಬೇಕಿದ್ದವು. ಇವರ ಹತ್ತಿರ ಅಂಕ ಕೊಡಲು ಭಗತ್ ಕೇಳಿದಾಗ "ಲಕ್ಷಣವಾಗಿ ಫೇಲಾಗು, ನನ್ನಿಂದ ಇಂತಹ ಕೆಲಸ ಅಸಾಧ್ಯ" ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಭಗತ್ ಮತ್ತು ಅವನ ಇತರ ಒಡನಾಡಿಗಳು ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಹುತಾತ್ಮರಾದವರು. ಹೋರಾಟದ ದಾರಿ ಬೇರೆಯಾದರೂ ಗಾಂಧೀಜಿ ಮತ್ತು ಅವರುಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ.
8. ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯದ ಅರ್ಥ ತಿಳಿದುಕೊಳ್ಳುವ, ಅಭಿವೃದ್ಧಿ ಕಡೆಗೆ ಗಮನ ಹರಿಸುವುದರೊಂದಿಗೆ ಕಿರಿಯರಿಗೆ ಸ್ವಾತಂತ್ರ್ಯದ ಮಹತ್ವ ತಿಳಿಸುವ ಅಗತ್ಯ ಹೆಚ್ಚು ಎಂಬುದು ಅವರ ಅಭಿಮತ.
9. ಆಚಾರಕ್ಕಿಂತ ವಿಚಾರಕ್ಕೆ ಹೆಚ್ಚು ಮಹತ್ವ, ಪ್ರಾಧಾನ್ಯತೆ ಕೊಟ್ಟವರು. ನಂಬಿದ ತತ್ವ, ಆದರ್ಶಗಳಿಗೆ ಬದ್ಧರಾದವರು. ಅವರ ಮಾತುಗಳು ಕೆಲವರಿಗೆ ಕಠಿಣವೆನಿಸಿದರೂ ಅದರಲ್ಲಿ ಸತ್ಯವಿದೆ, ತತ್ವವಿದೆ. ಆದರೆ ಪೂರ್ವಾಗ್ರಹ ಪೀಡಿತರಲ್ಲ. ತಾವು ನಂಬಿದ ಯಾವುದೇ ವಿಚಾರ ತಪ್ಪು ಎಂದು ಸಾಧಾರವಾಗಿ ಯಾರೇ ತಿಳಿಸಿಕೊಟ್ಟರೂ ಇದುವರೆಗೂ ನಂಬಿದ ವಿಚಾರ ಬಿಟ್ಟು ಸತ್ಯದ ಹಾದಿ ತುಳಿಯಲು ಸಿದ್ಧವಿರುವವರು.
10. ವೇದ, ಭಗವದ್ಗೀತೆ, ಇತ್ಯಾದಿಗಳನ್ನು ಅರ್ಥವತ್ತಾಗಿ ಸರಳವಾಗಿ ಶ್ರೋತೃಗಳೆದುರಿಗೆ ಬಿಚ್ಚಿಡುವ ಕಲೆ ಇವರಿಗೆ ಒಲಿದಿದೆ. ಅನಿಷ್ಟ ಸಂಪ್ರದಾಯಗಳ ವಿರುದ್ಧದ ಇವರ ಸಮರ, ಇವರ ಸಾಹಿತ್ಯ ಸೇವೆಗಳಿಗಾಗಿ ಇವರು ವಂದನೀಯರು.
11. ಪ್ರಸ್ತುತ ಇವರು ಬೆಂಗಳೂರಿನ ಜಯನಗರ 5ನೆಯ ಬ್ಲಾಕಿನಲ್ಲಿರುವ ಶ್ರೀ ಕೃಷ್ಣ ಸೇವಾಶ್ರಮ ಆಸ್ಪತ್ರೆಯ ಎದುರು ಸಾಲಿನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದಾರೆ.
12. ಎಲ್ಲಾ ಪಕ್ಷಗಳ ನಾಯಕರು, ಪ್ರತಿಷ್ಠಿತರು ಇವರನ್ನು ಕಂಡು ನಮಸ್ಕರಿಸಿ ಆಶೀರ್ವಾದ ಪಡೆದು ಹೋಗುತ್ತಾರೆ. ಆದರೆ ಇವರನ್ನೇ ಮರೆಯುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿಯನ್ನು ನಯವಾಗಿ ತಿರಸ್ಕರಿಸಿದ ಇವರಿಗೆ ಕೇಂದ್ರ ಸರ್ಕಾರದಿಂದಾಗಲೀ, ರಾಜ್ಯ ಸರ್ಕಾರದಿಂದಾಗಲೀ ಯಾವುದೇ ಅಧಿಕೃತ ಗೌರವವಾಗಲೀ, ಸನ್ಮಾನವಾಗಲೀ ದೊರೆತಿಲ್ಲ. ಇದಕ್ಕೆ ಅಡ್ಡಿಯಾಗಿರುವುದು ಸರ್ಕಾರದ ಕಟ್ಟಳೆಗಳು. ಅರ್ಜಿ ಹಾಕಿ ಸನ್ಮಾನ ಪಡೆಯಬೇಕು! ಅಂತಹ ಕೇಳಿ ಪಡೆಯುವ ಗೌರವದ ಅಗತ್ಯ ಈ ಹಿರಿಯ ಜೀವಕ್ಕಿಲ್ಲ!

      ಈ ಮೇರು ವ್ಯಕ್ತಿತ್ವಕ್ಕೆ ನಮಿಸೋಣ! ಅವರ ವಿಚಾರಗಳನ್ನು ತಿಳಿಯೋಣ! ಅವರ ಮಾರ್ಗದರ್ಶನ ಸದಾ ಸಿಗಲಿ ಎಂದು ಬಯಸೋಣ!
*******************
-ಕ.ವೆಂ.ನಾಗರಾಜ್.
ವಿ.ಸೂ.: ಇದು ಎರಡು ವರ್ಷಗಳ ಹಿಂದಿನ ಲೇಖನ. ಈಗ ಚತುರ್ವೇದಿಗಳು 117ನೆಯ ವರ್ಷದಲ್ಲಿದ್ದು ಈಗಲೂ ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿರುವ ಅದ್ಭುತ ಚೇತನವಾಗಿದ್ದಾರೆ. ಅವರಿಗೆ ಸಾಷ್ಟಾಂಗ ಪ್ರಣಾಮಗಳು. ಕಳೆದ ವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅವರನ್ನು ಗೌರವಿಸಿದೆ.
-ಕ.ವೆಂ.ನಾ. (07-06-2013).

ಶನಿವಾರ, ಏಪ್ರಿಲ್ 2, 2011

ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ! - 2

     ನಾನು ವಿಗ್ರಹಾರಾಧನೆಯನ್ನು ಸಮರ್ಥಿಸುವುದಿಲ್ಲವೆಂದ ಮಾತ್ರಕ್ಕೆ ಅದನ್ನು ವಿರೋಧಿಸುವುದಿಲ್ಲ. ಏಕೆಂದರೆ ನಾನು ಯಾವುದೇ ವಿಚಾರ, ತತ್ವಗಳನ್ನು ಪ್ರತಿಪಾದಿಸುವಷ್ಟು, ಸಮರ್ಥಿಸುವಷ್ಟು ಅಥವ ವಿರೋಧಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ. ವಿಗ್ರಹ ಪೂಜೆಯಿಂದ ಶಾಂತಿ, ನೆಮ್ಮದಿ ಪಡೆಯುತ್ತಿರುವ/ಪಡೆಯಬಯಸುವ ಬಹುತೇಕರ ಶ್ರದ್ಧೆ, ನಂಬಿಕೆಗಳು ಸುಳ್ಳೆಂದು ನಾನು ಹೇಗೆ ಹೇಳಲಿ? ಅವರುಗಳ ಪ್ರಾರ್ಥನೆಗೆ ವಿಗ್ರಹಗಳು ಮಾಧ್ಯಮವಾಗಿರಬಹುದು. ವಿಗ್ರಹಗಳು ಅವರ ಮನೋಶಕ್ತಿಯ ಕೇಂದ್ರೀಕರಣಕ್ಕೆ ಸಾಧನ ಹಾಗೂ ಸಹಕಾರಿಯಾಗಿ ಇರಬಹುದು. ವಿಗ್ರಹಗಳನ್ನು ದೇವರೆಂದು ಭಾವಿಸಿ, ನಂಬಿ ಪೂಜಿಸುವವರ ಮಾನಸಿಕ ಚಿಂತನೆಯ ಅಲೆಗಳು ವಿಗ್ರಹಗಳಲ್ಲಿ ಕ್ರೋಢೀಕೃತಗೊಂಡು ಅಲ್ಲಿ ಶಕ್ತಿ ಸಂಚಯನ ಆಗಿರಬಹುದು. ಅಂತಹ ಸ್ಥಳಗಳು ಶಕ್ತಿ ಕೇಂದ್ರಗಳಾಗಿರಬಹುದು. ಇಲ್ಲೂ ಸಹ ವಿಗ್ರಹಗಳಿಗಿಂತ ಅವುಗಳನ್ನು ಪೂಜಿಸುವವರ ಮನೋಶಕ್ತಿಯೇ ನಿರ್ಧಾರಕವೆಂದು ನನ್ನ ವೈಯಕ್ತಿಕ ಅನಿಸಿಕೆ. ದೇವರನ್ನು ವಿಗ್ರಹಗಳಲ್ಲಿ ಅಥವ ವಿಗ್ರಹಗಳ ಮೂಲಕ ಕಾಣುವುದರಲ್ಲಿಯೂ ಅರ್ಥವಿರಬಹುದು, ಇಲ್ಲದಿರಬಹುದು. ಆದರೆ ವಿಗ್ರಹಗಳೇ ದೇವರೆಂದು ಭಾವಿಸುವುದು ತಾರ್ಕಿಕವಾಗಿಯೂ ಸಹ ಕಷ್ಟಕರ ಸಂಗತಿ. ಒಂದು ಹಂತದ ಪರಿಪಕ್ವತೆ ಬಂದ ನಂತರದಲ್ಲಿ ವಿಗ್ರಹ ಪೂಜೆಯ ಅಗತ್ಯ ಬಾರದೇ ಹೋಗಬಹುದು. ಕೆಲವು ದೇವಸ್ಥಾನಗಳಲ್ಲಿ ದೇವರ ಪ್ರಸಾದ ಕೇಳಿ ಬೇಡುತ್ತಾ ಕುಳಿತ ಭಕ್ತರನ್ನು ಗಮನಿಸಿದ್ದೀರಾ? ಬಲಗಡೆ ಹೂವು ಬಿದ್ದರೆ ಒಪ್ಪಿಗೆಯೆಂತಲೂ ಎಡಗಡೆ ಬಿದ್ದರೆ ಅಶುಭವೆಂದು ನಂಬುವ ಅವರು ದೇವರೊಂದಿಗೆ ಮಾತನಾಡುವ ಪರಿಯನ್ನೂ ನೋಡಿದ್ದೇನೆ. ತಮ್ಮ ಕಷ್ಟ ಸುಖ ತೋಡಿಕೊಳ್ಳುತ್ತಾ 'ಯಾಕಪ್ಪಾ ಇಷ್ಟು ಪರೀಕ್ಷೆ ಮಾಡುತ್ತೀಯಾ? ಇನ್ನೂ ಸತಾಯಿಸಬೇಡ, ಒಳ್ಳೆಯದು ಮಾಡಪ್ಪಾ, ಬೇಗ ಪ್ರಸಾದ ಕೊಡು' ಎಂಬಿವೇ ಇತ್ಯಾದಿ ಹಳಹಳಿಸುತ್ತಿರುತ್ತಾರೆ. ಪ್ರಸಾದ ಕೇಳಲು ಬಂದ ಇತರರೂ ಅವರ ಸರದಿಗಾಗಿ ಕಾಯುತ್ತಿರುತ್ತಾರೆ. ಹಲವರಿಗೆ ಅದು ಭ್ರಮೆಯಂತೆ ಕಂಡರೂ ಭಕ್ತರ ತದೇಕ ಚಿತ್ತತೆ, ನಂಬಿಕೆ ಅಲ್ಲಿ ಎದ್ದು ಕಾಣುತ್ತದೆ. ಅಲ್ಲಿಯೂ ಅವರ ಮನೋಶಕ್ತಿಯೇ ಪ್ರಮುಖವೆಂದು, ವಿಗ್ರಹವಲ್ಲವೆಂದು ನನಗೆ ಅನ್ನಿಸುತ್ತದೆ. ವೈದ್ಯರಲ್ಲಿನ ನಂಬಿಕೆ ಅರ್ಧ ಕಾಯಿಲೆ ವಾಸಿ ಮಾಡುವಂತೆ ದೇವರಲ್ಲಿನ ಅವರ ನಂಬಿಕೆ ಅವರಿಗೆ ನೆಮ್ಮದಿ, ಶಾಂತಿ ಕಂಡುಕೊಳ್ಳಲು ನೆರವಾಗಬಹುದು. ಮೊದಲಿನಿಂದ ಪೂರ್ವಜರು ಮತ್ತು ಸುತ್ತಮುತ್ತಲಿನವರು ಇಟ್ಟುಕೊಂಡು ಬಂದ ನಂಬಿಕೆ, ನಡವಳಿಕೆಗಳನ್ನು ಅವರು ಮುಂದುವರೆಸುತ್ತಾರೆ. ಮುಂದೆ ಅವರ ಮಕ್ಕಳೂ ಅದೇ ರೀತಿಯಲ್ಲಿ ಸಾಗಬಹದು.
     ಒಂದು ಪ್ರಸಂಗ ನೆನಪಾಗುತ್ತಿದೆ. ಒಂದು ಪ್ರಾಂತದ ರಾಜನೊಬ್ಬ ಸ್ವಾಮಿ ವಿವೇಕಾನಂದರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭ. ಆ ರಾಜನಿಗೆ ವಿಗ್ರಹಾರಾಧನೆಯಲ್ಲಿ/ಮೂರ್ತಿ ಪೂಜೆಯಲ್ಲಿ ನಂಬಿಕೆಯಿರಲಿಲ್ಲ. ವಿಗ್ರಹಪೂಜೆ ಬಗ್ಗೆ ಆತ ನಿಕೃಷ್ಟವಾಗಿ ಮಾತನಾಡಿದುದನ್ನು ಶಾಂತವಾಗಿ ಆಲಿಸಿದ ವಿವೇಕಾನಂದರು ರಾಜನ ಭಾವಚಿತ್ರವೊಂದನ್ನು ತರಿಸಲು ಹೇಳಿದರು. ಭಾವಚಿತ್ರ ತಂದಾಗ ಅಲ್ಲಿದ್ದ ಸಭಾಸದರೊಬ್ಬರನ್ನು ಕರೆದು ಆ ಭಾವಚಿತ್ರದ ಮೇಲೆ ಉಗುಳಲು ಹೇಳಿದರು. ಆ ವ್ಯಕ್ತಿ ನಡುಗಿಹೋದರು -'ರಾಜರ ಭಾವಚಿತ್ರದ ಮೇಲೆ ಉಗುಳುವುದೇ?'. ವಿವೇಕಾನಂದರು ಹೇಳಿದರು -'ಇದು ರಾಜರ ಭಾವಚಿತ್ರವೇ ಹೊರತು ರಾಜರಲ್ಲ; ಉಗುಳಿದರೆ ರಾಜರಿಗೆ ಏನೂ ಆಗುವುದಿಲ್ಲ'. ಅದಕ್ಕೆ ಅವರು 'ಸ್ವಾಮಿ, ಇದು ಭಾವಚಿತ್ರವಿರಬಹುದು. ಆದರೆ ಇದರಲ್ಲಿ ನಾವು ರಾಜರನ್ನು ಕಾಣುತ್ತಿದ್ದೇವೆ. ಇದರ ಮೇಲೆ ಉಗುಳುವುದು ನಮಗೆ ಕಲ್ಪನೆಯಲ್ಲಿಯೂ ಅಸಾಧ್ಯ'. ಆಗ ವಿವೇಕಾನಂದರು ರಾಜರಿಗೆ 'ದೇವರ ವಿಗ್ರಹಗಳು ದೇವರಲ್ಲ. ಅದರೆ ಜನ ಅಲ್ಲಿ ದೇವರನ್ನು ಕಾಣುತ್ತಾರೆ. ಅವುಗಳನ್ನು ಪೂಜಿಸಿ ನೆಮ್ಮದಿ, ಶಾಂತಿ ಕಂಡುಕೊಳ್ಳುತ್ತಾರೆ. ಆದ್ದರಿಂದ ವಿಗ್ರಹಪೂಜೆಯನ್ನು ವಿರೋಧಿಸುವುದು ಸಲ್ಲ' ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಇಲ್ಲೂ ಒಂದು ವಿಷಯ ಗಮನಿಸಬೇಕು. ರಾಜನಿಗೆ ಆಕಾರವಿದೆ, ನೋಡಬಹುದು, ಹಾಗಾಗಿ ಅವನ ಫೋಟೋ, ವಿಗ್ರಹಗಳನ್ನು ಮಾಡಬಹುದು. ಅದರೆ ದೇವರ ವಿಷಯದಲ್ಲಿ ಹಾಗೆ ಮಾಡಲು ಹೇಗೆ ಸಾಧ್ಯ? ದೇವರು ಹೀಗೆಯೇ ಇದ್ದಾನೆ ಎಂದು ನೋಡಿದವರು, ಕೇಳಿದವರು, ಹೇಳುವವರು, ನಿರ್ಧರಿಸುವವರು ಯಾರು?
     ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಮನುಷ್ಯನ ಒಳ್ಳೆಯ ನಡವಳಿಕೆ ಬಗ್ಗೆ ಒತ್ತು ನೀಡಿವೆ. ಆದರೆ ಅವುಗಳನ್ನು ನಂಬುವ ಜನರ ನಡವಳಿಕೆ ಒಳ್ಳೆಯ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ದೇವರನ್ನು ಹಲವು ಹೆಸರುಗಳಲ್ಲಿ, ಹಲವು ರೂಪಗಳಲ್ಲಿ ಪೂಜಿಸುತ್ತಿರುವ ಮತ್ತು ಹೊಸ ಹೊಸ ದೇವರುಗಳು ಮತ್ತು ಪೂಜಾ ಪದ್ಧತಿಗಳನ್ನು ಹುಟ್ಟು ಹಾಕಲಾಗುತ್ತಿರುವ ಹಿಂದೂ ಸಮಾಜದಲ್ಲಿ ಪರಧರ್ಮ ಸಹಿಷ್ಣುತೆ ಕಾಣಸಿಗುತ್ತದೆ. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಪರಧರ್ಮ ಸಹಿಷ್ಣುತೆಯ ಕೊರತೆ ಕಂಡು ಬರುತ್ತಿರುವುದು ಸುಳ್ಳೇನಲ್ಲ. ಹಾಗೆಂದು ನಾನು ಯಾವುದೇ ಧರ್ಮದ ಪರ ಅಥವಾ ವಿರೋಧಿ ಅಲ್ಲ. ನನಗೆ ಅದರ ಅಗತ್ಯವೂ ಇಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಗೊಂದಲ, ಸಮಸ್ಯೆ, ಸಂಘರ್ಷಗಳ ಬಗ್ಗೆ ಮಾತ್ರ ನನ್ನಲ್ಲಿ ತಳಮಳ ಇದೆ.
     ನನ್ನ ಮನಸ್ಥಿತಿ ಹೇಗಿದೆಯೆಂದರೆ ಯಾವುದಾದರೂ ಉತ್ತಮ ಗ್ರಂಥ ಓದಿದಾಗ ಅದರಲ್ಲಿನ ಒಳ್ಳೆಯ ಅಂಶಗಳಿಗೆ ಮಾರುಹೋಗುತ್ತೇನೆ. ಯಾವುದು ಮನಸ್ಸಿಗೆ ಹಿತ, ಸಂತೋಷ ನೀಡುತ್ತದೆಯೋ ಮತ್ತು ಅದನ್ನು ಅಂತಃಸಾಕ್ಷಿ ಒಪ್ಪುತ್ತದೆಯೋ ಅದು ಒಳ್ಳೆಯದೆಂದೇ ನನ್ನ ಭಾವನೆ. ಚಿಕ್ಕಂದಿನಲ್ಲಿ ಪ್ರತಿದಿನ ಸಾಯಂಕಾಲ ಆಟ ಆಡಿಕೊಂಡು ಬಂದ ನಂತರ ಕೈಕಾಲುಮುಖ ತೊಳೆದುಕೊಂಡು ನಾವು ಐವರು ಮಕ್ಕಳು ನಮ್ಮ ತಾಯಿ ಹೇಳಿಕೊಡುತ್ತಿದ್ದ ಪ್ರಾರ್ಥನೆ, ಭಜನೆಗಳನ್ನು ಒಟ್ಟಿಗೆ ಹೇಳಿ ದೇವರಿಗೆ ನಮಸ್ಕಾರ ಮಾಡಿದ ನಂತರವೇ ಓದಿಕೊಳ್ಳಲು ತೊಡಗುತ್ತಿದ್ದೆವು. ಹಬ್ಬ ಹರಿದಿನಗಳಲ್ಲಿ ತಂದೆಯವರು ಮಾಡುತ್ತಿದ್ದ ದೇವರ ಪೂಜೆ ನಂತರ ಮಂಗಳಾರತಿ, ತೀರ್ಥ, ಪ್ರಸಾದ ಪಡೆದ ಮೇಲಷ್ಟೇ ನಮಗೆ ತಿಂಡಿ ಸಿಗುತ್ತಿತ್ತು. ಆ ದಿನಗಳಲ್ಲಿ ತೋರಣ ಕಟ್ಟುವುದು, ಗಣಪತಿ ಪೂಜೆಗೆ ಮಂಟಪ ಸಿದ್ಧಪಡಿಸುವುದು, ನವರಾತ್ರಿಯಲ್ಲಿ ಗೊಂಬೆಗಳನ್ನು ಅಂದವಾಗಿ ಜೋಡಿಸುವುದು, ಇತ್ಯಾದಿಗಳನ್ನು ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ಮಾಡುತ್ತಿದ್ದೆ. ಸಾಮೂಹಿಕ ರಾಮನವಮಿ, ಗಣೇಶ ಉತ್ಸವಗಳ ಸಂದರ್ಭಗಳಲ್ಲಿ ಏರ್ಪಾಡಾಗುತ್ತಿದ್ದ ಹರಿಕಥೆಗಳು, ಸಂಗೀತ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ತಲ್ಲೀನನಾಗಿ ಕೇಳುತ್ತಿದ್ದೆ. ವಿಶೇಷವಾಗಿ ರಾಮಾಯಣ, ಮಹಾಭಾರತಗಳಿಗೆ ಸಂಬಂಧಿಸಿರುತ್ತಿದ್ದ ಹರಿಕಥೆಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿವೆ. ರಾಮಾಯಣ, ಮಹಾಭಾರತಗಳು ನಿಜವಾಗಿಯೂ ನಡೆದಿದೆಯೋ, ಇಲ್ಲವೋ ಎಂಬಿತ್ಯಾದಿ ವಿವಾದಗಳ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಅವುಗಳಲ್ಲಿ ತುಂಬಿರುವ ನೀತಿಪಾಠಗಳು, ಜೀವನದರ್ಶನ ಅನುಕರಣೀಯ.
    ದೇವರ ಕುರಿತು ಜಿಜ್ಞಾಸೆ, ದೇವರನ್ನು ಪೂಜಿಸುವ ರೀತಿ ಕುರಿತು ವಿವಿಧ ಆಲೋಚನೆಗಳು ಚಿಕ್ಕಂದಿನಿಂದಲೇ ಬಂದಿತ್ತು. ಹಬ್ಬ ಹರಿದಿನಗಳಲ್ಲಿ ತಂದೆಯವರು ಪೂಜೆ ಮಾಡುವ ಸಂದರ್ಭಗಳಲ್ಲಿ ನಾವು ಮಕ್ಕಳಿಗೆ ಸಹಜವಾದ ಆಟ, ಜಗಳಗಳಲ್ಲಿ ತೊಡಗಿ ಕಿರುಚಾಟ, ಅಳು, ಗಲಾಟೆ ಮಾಡುತ್ತಿದ್ದರಿಂದ ತಂದೆಯವರ ಏಕಾಗ್ರತೆಗೆ ಭಂಗ ಬಂದು ಅವರು ಸಿಟ್ಟಿಗೇಳುತ್ತಿದ್ದರು. ಆ ಸಿಟ್ಟಿನಲ್ಲಿ ಮಕ್ಕಳಲ್ಲಿ ದೊಡ್ಡವನಾದ ನನಗೆ ಬೈಗುಳ ಮತ್ತು ಪೆಟ್ಟುಗಳು ಬೀಳುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ನನ್ನ ತಪ್ಪಿಲ್ಲದಿದ್ದರೂ ನಾನು ಬೈಸಿಕೊಳ್ಳಬೇಕಾದಾಗ, ಪೆಟ್ಟು ತಿನ್ನಬೇಕಾಗಿ ಬಂದಾಗ ನನಗೆ ಸರಿಕಾಣುತ್ತಿರಲಿಲ್ಲ. ಆಗೆಲ್ಲಾ ನನ್ನ ಮನಸ್ಸು 'ಹಬ್ಬ ಮಾಡುವುದು ಎಲ್ಲರಿಗೂ ಒಳ್ಳೆಯದಾಗಲಿ, ಸಂತೋಷ ಸಿಗಲಿ ಎಂದು; ಇದರಿಂದ ಮನಸ್ಸಿಗೆ ಬೇಸರವಾಗುವುದಾದರೆ ಅಂತಹ ಹಬ್ಬ ಏಕೆ ಬೇಕು?' ಎಂದು ಯೋಚಿಸುತ್ತಿತ್ತು. ಚಿಕ್ಕಂದಿನಿಂದಲೇ ದೇವರ ಕುರಿತು ತರ್ಕ, ಜಿಜ್ಞಾಸೆಗಳಿಗೆ ಶ್ರೀಕಾರ ಬಿದ್ದಿತ್ತು.
     ಇಂದು ಯಾರನ್ನು ನಮ್ಮ ಕಷ್ಟ, ಕಾರ್ಪಣ್ಯಗಳಿಗಾಗಿ ಮೊರೆಯಿಡುತ್ತೇವೆಯೋ ಆ ದೇವರುಗಳೇ ಸಮಸ್ಯೆಗಳ ಮೂಲವಾಗಿರುವುದು ಯುಗಮಹಿಮೆ. ದೇವರಿಗಾಗಿ ಧರ್ಮಯುದ್ಧಗಳು, ಮಾರಣಹೋಮಗಳು ನಡೆಯುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ತಮ್ಮ ಮತ-ಧರ್ಮದ ವಿಸ್ತಾರದ ಹಿನ್ನೆಲೆಯೇ ದೇಶ-ದೇಶಗಳ ನಡುವೆ ನಡೆಯುವ ಯುದ್ಧಗಳ ನಿಜವಾದ ಕಾರಣವೆಂಬುದು ಸುಸ್ಪಷ್ಟ. ನಾನು ದೇವರು/ದೇವರುಗಳ ವಿರುದ್ಧ ಮಾತನಾಡುತ್ತಿಲ್ಲ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನದ ಬಗ್ಗೆ ಹೇಳುತ್ತಿದ್ದೇನೆ. ದೇವರ ಹೆಸರಿನಲ್ಲಿ ಅನೇಕ ಒಳ್ಳೆಯ ಜೊತೆಗೆ ಕೆಟ್ಟ ಸಂಪ್ರದಾಯಗಳೂ ಆಚರಿಸಲ್ಪಡುತ್ತಿವೆ. ನಿಜವಾಗಿಯೂ ದೇವರು ತನ್ನನ್ನು ಕುರಿತು ಜನರು ಪೂಜಿಸಬೇಕು, ಪ್ರಾರ್ಥಿಸಬೇಕು ಎಂದು ಬಯಸುತ್ತಾನೆ ಎಂದು ನಾನು ನಂಬುವುದಿಲ್ಲ. ದೇವರನ್ನು ಪೂಜಿಸುವುದು, ಪ್ರಾರ್ಥಿಸುವುದು ಜನರಿಗೆ ಬೇಕಾಗಿದೆಯೇ ಹೊರತು ದೇವರಿಗಲ್ಲ. ನೂರೆಂಟು ಪಾಪಕೃತ್ಯಗಳನ್ನು ಮಾಡಿ ಪರಿಹಾರರೂಪವಾಗಿ ದೇವರಿಗೆ ಪೂಜೆ-ಪುನಸ್ಕಾರಗಳನ್ನು ಮಾಡುವುದು, ಹುಂಡಿಗೆ ಹಣ ಹಾಕುವುದು, ಇತ್ಯಾದಿ ಮಾಡಿ ಪಾಪ ಕಳೆದುಕೊಂಡ ಭಾವನೆ ಮೂಡಿಸಿಕೊಳ್ಳುವುದು ಕಾಣುತ್ತೇವೆ. ಪಾಪ ಮಾಡಿದ್ದನ್ನು ಕ್ಷಮಿಸುವಂತಹ ದೇವರಿಗಿಂತ ಪಾಪಕ್ಕೆ ತಕ್ಕ ಶಿಕ್ಷೆ ಕೊಡುವ ದೇವರು ನನಗೆ ಇಷ್ಟ. ಏಕೆಂದರೆ ಹೀಗಿದ್ದರೆ ಕೆಟ್ಟದನ್ನು ಮಾಡಲು ಹಿಂಜರಿಯುವಂತಹ ವಾತಾವರಣ ಬರಬಹುದು. ಆದರೆ ನಮ್ಮ ಇಷ್ಟ, ಕಷ್ಟ ಅನುಸರಿಸಿ ದೇವರು ಇರುತ್ತಾನೋ, ಇಲ್ಲವೋ ಗೊತ್ತಿಲ್ಲ.
     ದೇವರ ಕುರಿತು ಜಿಜ್ಞಾಸೆ, ಗೊಂದಲಗಳು ಬಗೆಹರಿಸಲು ಆ ದೇವರೇ ಬರಬೇಕು! ಬಸವಣ್ಣನವರು ಎಲ್ಲಾ ಜಾತಿಗಳವರನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಆಗಿದ್ದೇನು? ಅಂತಹವರದ್ದೇ ಒಂದು ಜಾತಿ/ಧರ್ಮ ಆಯಿತು. ಮಧ್ಯಪ್ರದೇಶದಲ್ಲೂ ಸಹ ಜಾತಿ ಪದ್ಧತಿ ವಿರೋಧಿಸುವ ಗುಂಪಿದ್ದು, ಅವರನ್ನು ಅಜಾತರು ಎಂಬ ಜಾತಿ ಹೆಸರು ಇಟ್ಟು ಅವರದೇ ಜಾತಿ ಮಾಡಿಬಿಟ್ಟಿದ್ದಾರೆ. ಯಾವುದೇ ಹೊಸ ವಿಚಾರ, ಜ್ಞಾನ ಪಸರಿಸುವವರನ್ನೂ ಸಹ ಪ್ರತ್ಯೇಕಿಸಿ ಹೆಸರಿಟ್ಟುಬಿಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯಾನ್ವೇಶಿಗಳು ಗೊಂದಲ, ತೊಂದರೆಗಳಿಗೆ ಸಿಲುಕುತ್ತಾರೆ.
     ವೇದಗಳ ಕುರಿತು ವೇದಾಧ್ಯಾಯಿ ಸುಧಾಕರ ಶರ್ಮರವರ ಉಪನ್ಯಾಸಗಳು , ಪಂ. ಸುಧಾಕರ ಚತುರ್ವವೇದಿಯವರ ವಿಚಾರಗಳು ಸೇರಿದಂತೆ ಹಲವಾರು ಜ್ಞಾನವೇತ್ತರ ಮಾತುಗಳನ್ನು ಕೇಳಿದ ನಂತರ ಮತ್ತು ಸಂಬಂಧಿಸಿದ ವಿಚಾರಧಾರೆಗಳಿರುವ ಪುಸ್ತಕಗಳನ್ನು ಓದಿದ ನಂತರ ಸಂದೇಹಗಳು ಬಗೆಹರಿದಿಲ್ಲವಾದರೂ ನನ್ನ ವಿಚಾರ ಸರಿಯಾದ ದಾರಿಯಲ್ಲಿದೆಯೆಂಬ ಭಾವ ಮೂಡುತ್ತಿದ್ದು ಒಂದು ರೀತಿಯ ಅಭಿಪ್ರಾಯ ನನ್ನೊಳಗೆ ಸಾಂದ್ರೀಕೃತವಾಗುತ್ತಿದೆ. ಅವೆಂದರೆ:
೧. ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಿಸುವ ಅದ್ಭುತ ಶಕ್ತಿ ಇದೆ. ಅದನ್ನು ದೇವರೆಂದಾದರೂ ಕರೆಯಿರಿ, ಯಾವ ಹೆಸರಿನಲ್ಲಾದರೂ ಕರೆಯಿರಿ. ಆ ಶಕ್ತಿ ಎಲ್ಲರನ್ನೂ -ನಂಬುವವರನ್ನೂ, ನಂಬದವರನ್ನೂ, ಕೆಟ್ಟವರನ್ನೂ, ಒಳ್ಳೆಯವರನ್ನೂ - ಸಮಾನಭಾವದಿಂದ ಕಾಣುತ್ತದೆ. ಆ ಶಕ್ತಿ ಕೇವಲ ಮಾನವ ಜೀವಿಗಳಿಗೆ ಮತ್ತು ನಿರ್ದಿಷ್ಟ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಲ್ಲ.
೨. ನಮಗೆ ಆಗುವ ಎಲ್ಲಾ ಒಳಿತು ಕೆಡಕುಗಳಿಗೆ ನಾವೇ ಕಾರಣರೇ ಹೊರತು ಇತರರಲ್ಲ, ದೇವರಂತೂ ಅಲ್ಲವೇ ಅಲ್ಲ. ದೇವಸ್ಥಾನಕ್ಕೆ ಹೋಗಿ ತಪ್ಪುಕಾಣಿಕೆ ಹಾಕುವುದರಿಂದ ಮತ್ತು ಕ್ಷಮಿಸಲು ಪ್ರಾರ್ಥಿಸುವುದರಿಂದ ಮಾಡಿದ ಪಾಪ ಹೋಗುವುದಿಲ್ಲ. ಮಾಡಿದ ಕರ್ಮಕ್ಕೆ ಅನುಸಾರವಾಗಿ ಫಲ ಕಟ್ಟಿಟ್ಟ ಬುತ್ತಿ.
೩. ಪುನರ್ಜನ್ಮವಿದೆ. ನಾವು ಮಾಡುವ ಒಳ್ಳೆಯ ಕೆಲಸಗಳು ಒಳಿತನ್ನೇ ತರುತ್ತದೆ, ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿ!
೪. ಒಳ್ಳೆಯದು ಮತ್ತು ಸತ್ಯವೆಂದು ಭಾವಿಸುವ ದಾರಿಯಲ್ಲಿ ನಡೆಯುವುದೇ ದೇವರ ಪೂಜೆ.
೫. ಮೊದಲಿನಿಂದ ನಡೆದುಬಂದ ಸಂಪ್ರದಾಯಗಳನ್ನು ವಿಮರ್ಶಿಸಿ ಅದರಲ್ಲಿನ ಅರ್ಥಪೂರ್ಣ ಅಂಶಗಳನ್ನು ಉಳಿಸಿಕೊಂಡು ಪಾಲಿಸುವುದು. ಅರ್ಥವಿಲ್ಲದ ಮತ್ತು ಇತರರರಿಗೆ ನೋವು ಉಂಟುಮಾಡಬಹುದಾದ ಸಂಗತಿಗಳನ್ನು ಬಿಡುವುದು ಅಗತ್ಯ
೬. ಸತ್ಯ ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹವಿಲ್ಲದೆ ಸ್ವೀಕರಿಸುವ ಮತ್ತು ಅಗತ್ಯವೆನಿಸಿದಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಮನೋಭಾವ ಬರಬೇಕು.
     ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ. ಆತ ತನ್ನ ಕೆಲಸ ಮಾಡಿಯೇ ಮಾಡುತ್ತಾನೆ. ನಾವು ನಮ್ಮ ಕೆಲಸ ಮಾಡೋಣ, ಅಂದರೆ ನಾವು ಏಕೆ ಹುಟ್ಟಿದ್ದೇವೆ ಎಂಬುದನ್ನು ಅರಿತು ಸತ್ಯಾನ್ವೇಶಿಗಳಾಗಿ ನಡೆಯೋಣ, ಇರುವಷ್ಟು ಕಾಲ ಯಾರಿಗೂ ಉಪಕಾರ ಮಾಡದಿದ್ದರೂ ಅಪಕಾರವನ್ನಂತೂ ಮಾಡದಿರೋಣ!
*****************
-ಕ.ವೆಂ.ನಾಗರಾಜ್.
ಹಿಂದಿನ ಲೇಖನಕ್ಕೆ ಲಿಂಕ್:   ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ - 1

ದೇವರನ್ನು ದೇವರ ಪಾಡಿಗೆ ಬಿಟ್ಟುಬಿಡೋಣ! - 1

     ಜಗತ್ತಿನ ಚರಾಚರ ಜೀವಿಗಳು, ನಿರ್ಜೀವಿಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತವಾದ ಶಕ್ತಿಯನ್ನು ದೇವರೆಂದು ಇಟ್ಟುಕೊಳ್ಳಬಹುದು. ದೇವರೇ ಇಲ್ಲ ಎಂದು ಹೇಳುವ ಚಾರ್ವಾಕ/ನಾಸ್ತಿಕರಿಂದ ಹಿಡಿದು, ದೇವರಿಗೆ ಹಲವಾರು ಹೆಸರುಗಳನ್ನು ನೀಡಿ ಪೂಜಿಸುವವರು, ನಾವು ಪೂಜಿಸುವ ದೇವರೊಬ್ಬರೇ ದೇವರು, ಆ ದೇವರನ್ನು ಪೂಜಿಸದವರೆಲ್ಲಾ ಪಾಖಂಡಿಗಳು/ಕಾಫಿರರು ಎಂದು ಹೇಳುವವರು, ತಮ್ಮ ನಂಬಿಕೆಯನ್ನು ಇತರರ ಮೇಲೆ ಬಲವಂತವಾಗಿ ಹೇರಬಯಸುವವರು, ತಮ್ಮ ಧರ್ಮ ಪ್ರಚಾರಕ್ಕಾಗಿ ಇತರರ ಬಡತನ, ಅನಾರೋಗ್ಯ, ತಿಳುವಳಿಕೆಯ ಕೊರತೆಯನ್ನು ಬಂಡವಾಳ ಮಾಡಿಕೊಳ್ಳುವವರು, ಅನೇಕ ಆಮಿಷಗಳನ್ನು ಒಡ್ಡಿ ಮತಾಂತರದ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿರುವವರು, ಧರ್ಮಯುದ್ಧದ ಹೆಸರಿನಲ್ಲಿ ನರಮೇಧ ಮಾಡುವವರು, ಇತ್ಯಾದಿ, ಇತ್ಯಾದಿ ಮಾನವರ ಸಮೂಹದಲ್ಲಿ ನಾವು ಬಾಳುತ್ತಿದ್ದೇವೆ. ಜಗತ್ತಿನ ಸೃಷ್ಟಿ ಹೇಗಾಯಿತು ಎಂಬ ಬಗ್ಗೆ ವೈಜ್ಞಾನಿಕವಾಗಿ, ಧಾರ್ಮಿಕವಾಗಿ ವಿವೇಚಿಸುವ, ವಿಶ್ಲೇಷಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಆದರೆ ಎಲ್ಲರೂ ಒಪ್ಪುವಂತಹ ವಿಚಾರವನ್ನು ಮುಂದಿಡಲು, ಆ ಅಗೋಚರ ಶಕ್ತಿಯ ಮೂಲವನ್ನು ತಿಳಿದು ಅರ್ಥೈಸುವ ಕಾರ್ಯ ಮಾಡಲು ಬಹಳ ಹಿಂದಿನ ಕಾಲದಿಂದಲೇ ನಿರಂತರ ಪ್ರಯತ್ನಗಳು, ಹುಡುಕಾಟಗಳು ಸಾಗಿವೆ, ಸಾಗುತ್ತಲೇ ಇವೆ, ಬಹುಷಃ ಸಾಗುತ್ತಲೇ ಇರುತ್ತದೆ.
     ಸಕಲ ಜೀವರಾಶಿಗಳಲ್ಲಿ ಮನುಷ್ಯ ಪ್ರಾಣಿ ಬಿಟ್ಟರೆ ಉಳಿದವು ದೇವರ ಬಗ್ಗೆ ತಲೆ ಕೆಡಿಸಿಕೊಂಡಿರಲಾರವು. ಮನುಷ್ಯ ಮಾತ್ರ ತಾನೂ ತಲೆ ಕೆಡಿಸಿಕೊಂಡು ಇತರರ ತಲೆಯನ್ನೂ ಕೆಡಿಸುತ್ತಿದ್ದಾನೆ. ಇದಕ್ಕೆ ಕಾರಣ ಅವನಿಗೆ ವಿವೇಚಿಸುವ ಶಕ್ತಿಯನ್ನು ದೇವರು ನೀಡಿರುವುದು. ಮನುಷ್ಯನಿಗೂ ಸಹ ಮೊದಲು ಈ ವಿಚಾರಗಳಿರಲಿಲ್ಲ. ವಿಕಾಸ ಹೊಂದುತ್ತಾ ಬಂದಂತೆ, ವಿಚಾರವಿಮರ್ಶೆ ಮಾಡುವ ಬುದ್ಧಿ ಬೆಳೆಯುತ್ತಾ ಹೋದಂತೆ, ತನ್ನನ್ನು ಮತ್ತು ಇತರ ಜೀವರಾಶಿಗಳನ್ನು ನಿಯಂತ್ರಿಸುವ ಶಕ್ತಿಯನ್ನು ಭಕ್ತಿಯಿಂದ, ಭಯದಿಂದ, ಗೌರವದಿಂದ ನೋಡುವ ಪ್ರವೃತ್ತಿ ಬೆಳೆದು ತನ್ನ ಕಲ್ಪನೆಯ ದೇವರುಗಳನ್ನು ಸೃಷ್ಟಿಸಿದ. ಮರ, ಗಿಡ, ಸೂರ್ಯ, ಚಂದ್ರ, ನಕ್ಷತ್ರ, ಗುಡುಗು, ಸಿಡಿಲು, ಮಿಂಚು, ಬೆಂಕಿ, ನೀರು, ಇತ್ಯಾದಿಗಳಲ್ಲಿ ದೇವರನ್ನು ಕಂಡು ಪೂಜಿಸತೊಡಗಿದ. ಇವುಗಳನ್ನೂ ಮೀರಿದ, ಇವುಗಳನ್ನೂ ನಿಯಂತ್ರಿಸುವ ಶಕ್ತಿಯೊಂದಿದೆ ಎಂದು ಅರಿತು ದೇವರ ಸಾಮ್ರಾಜ್ಯವನ್ನು ತನ್ನ ಕಲ್ಪನಾಶಕ್ತಿಯಲ್ಲಿ ಬೆಳೆಸತೊಡಗಿದ. ದೇವರ ಹೆಸರಿನಲ್ಲಿ ಕಥೆಗಳು, ಪುರಾಣಗಳು ಹುಟ್ಟಿಕೊಂಡವು. ದೇವರ ಮಹಿಮೆಯನ್ನು ಕೊಂಡಾಡಿದವು. ತಮ್ಮ ಕಲ್ಪನೆ, ನಂಬಿಕೆ, ಪ್ರದೇಶಗಳಿಗೆ ತಕ್ಕಂತೆ ಗುಂಪುಗಳಾಗಿ ಜಾತಿ, ಮತ, ಧರ್ಮಗಳು ಹುಟ್ಟಿಕೊಂಡವು. ನಂತರದಲ್ಲಿ ಹುಟ್ಟಿನ ಆಧಾರದಲ್ಲಿ ಮನುಷ್ಯನ ಜಾತಿ, ಧರ್ಮಗಳು ನಿಗದಿಸಲ್ಪಟ್ಟವು. ದೇವರು ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯ ಹಲವು ದೇವರುಗಳನ್ನೇ ಸೃಷ್ಟಿಸಿದ.
     ಒಂದು ಹಂತದವರೆಗೆ ವಿವಿಧ ಆಚಾರ-ವಿಚಾರಗಳನ್ನು ಒಪ್ಪಿಕೊಳ್ಳಬಹುದು. ಆದರೆ, ನಾವು ಹೇಳುವುದೇ ಸರಿ, ಇತರರು ಹೇಳುವುದು ತಪ್ಪು, ದೇವರು ಹೀಗೆಯೇ ಇದ್ದಾನೆ, ನಾವು ಪಾಲಿಸುವ ಧರ್ಮ/ಜಾತಿ/ಮತವೇ ನೈಜವಾದದ್ದು ಎಂಬ ವಾದ ಒಪ್ಪುವುದು ಕಷ್ಟ. ಇತರ ವಿಚಾರಗಳನ್ನು ಹೊಂದಿರುವವರು ಧರ್ಮದ್ರೋಹಿಗಳು, ಶಿಕ್ಷಾರ್ಹರು, ಅವರು ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು, ನಮ್ಮ ಧರ್ಮಾನುಯಾಯಿಗಳಾಗಲೇಬೇಕು, ವಿಚಾರವನ್ನು ಒಪ್ಪಲೇಬೇಕು, ಎಂಬ ವಿಚಾರಧಾರೆ ಎಷ್ಟರ ಮಟ್ಟಿಗೆ ಸರಿ? ಅವರವರ ವಿಚಾರ ಅವರಿಗಿರಲಿ. ಅದನ್ನು ಕಡ್ಡಾಯವಾಗಿ ಇತರರ ಮೇಲೆ ಹೇರುವುದು ತರವಲ್ಲ. ತಮ್ಮ ಮತ/ಧರ್ಮ ಬೆಳೆಸಲು ಆರೋಗ್ಯ/ಶಿಕ್ಷಣ/ ಧಾರ್ಮಿಕ/ ವ್ಯಾವಹಾರಿಕ ಮಾಧ್ಯಮಗಳೆಲ್ಲವನ್ನೂ ಬಳಸಿಕೊಳ್ಳುವುದರ ಜೊತೆಗೆ ಬಡತನ, ಅಜ್ಞಾನಗಳನ್ನೂ ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಧರ್ಮಯುದ್ಧದ ಹೆಸರಿನಲ್ಲಿ ಇತರರನ್ನು ಮಟ್ಟ ಹಾಕುವ, ಬೆದರಿಕೆ ಹಾಕುವ, ಭಯೋತ್ಪಾದನೆ ನಡೆಸುವ ಕುರುಡು ಮತಾಂಧರ ಸಂಖ್ಯೆ ಸಹ ಕಡಿಮೆಯೇನಿಲ್ಲ. ವಿಗ್ರಹಾರಾಧನೆ ಮಾಡದಿರುವವರು ಧರ್ಮದ ಹೆಸರಿನಲ್ಲಿ ದೇವಸ್ಥಾನಗಳನ್ನು, ಪೂಜಾಸ್ಥಾನಗಳನ್ನು ಧ್ವ್ವಂಸ ಮಾಡಿ ಅನೇಕ ಅಮೂಲ್ಯ ಕಲಾಕೃತಿಗಳ ನಾಶ ಮಾಡುವುದನ್ನು, ಅದೇ ರೀತಿ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಘರ್ಷಣೆ ನಡೆಸುವುದನ್ನು ನಾಗರಿಕ ಸಮಾಜ ಒಪ್ಪಲಾರದು. ಕಲಾಕೃತಿಗಳನ್ನು ನಿರ್ಮಿಸುವುದು ಸುಲಭದ ಕೆಲಸವಲ್ಲ; ಆದರೆ ಹಾಳು ಮಾಡುವುದು ಸುಲಭ. ಸ್ವತಃ ಜೀವ ಕೊಡಲಾರದವರು ಜೀವ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಪ್ರಯತ್ನಗಳಿಂದ ಅವರು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ತರ್ಕಕ್ಕಾಗಿ ಕಾಲಘಟ್ಟದಲ್ಲಿ ಎಲ್ಲರೂ ಒಂದೇ ಮತ/ಜಾತಿ/ಧರ್ಮಕ್ಕೆ ಸೇರಿದರು ಎಂದಿಟ್ಟುಕೊಳ್ಳೋಣ. ಆಮೇಲೆ ಏನು ಮಾಡುವುದು? ವಾಸ್ತವವಾಗಿ ಆಗ ಘಟಿಸಬಹುದಾದುದೇನೆಂದರೆ ಅವರಲ್ಲೇ ಪುನಃ ಒಳಪಂಗಡಗಳ ಸೃಷ್ಟಿಯಾಗಿ ತಮ್ಮದೇ ಮೇಲು ಎಂದು ವಾದಿಸತೊಡಗುವರು. ದೇವರ ಕೊಡುಗೆಯಾದ ವೈಚಾರಿಕ ಶಕ್ತಿಯನ್ನು ಮೊಟಕುಗೊಳಿಸುವ, ಇದಕ್ಕೂ ಮುಂದೆ ಯೋಚಿಸಬಾರದು ಎಂದು ಬೇಲಿ ಹಾಕುವ ಇಂತಹ ಪ್ರವೃತ್ತಿಗಳಿಂದ ಒಂದು ರೀತಿಯಲ್ಲಿ ಪ್ರಗತಿಗೆ ಹಿನ್ನಡೆಯಾಗುತ್ತದೆ ಎಂದು ಅನ್ನಿಸುವುದಿಲ್ಲವೇ?
     'ಸಂಕಟ ಬಂದಾಗ ವೆಂಕಟರಮಣ' ಎಂಬಂತೆ ನಾವು ಕಷ್ಟದ ಪರಿಸ್ಥಿತಿಯಲ್ಲಿ ದೇವರನ್ನು ನೆನೆಯುವುದೇ ಹೆಚ್ಚು. ತೊಂದರೆ, ತಾಪತ್ರಯಗಳಿಲ್ಲದವರು ಯಾರಿದ್ದಾರೆ? ಹೀಗಾಗಿ ಯಾರೂ ಸಹಾಯಕ್ಕೆ ಬಾರದಿದ್ದಾಗ ಸಹಾಯ ಮಾಡು ಎಂದು ದೇವರನ್ನು ಬಿಟ್ಟು ಇನ್ನು ಯಾರನ್ನು ಕೋರಬೇಕು? ಈ ಕಾರಣಕ್ಕಾಗಿಯಾದರೂ ದೇವರು ನಮಗೆ ಬೇಕು. ಒಂದೆರಡು ಉದಾಹರಣೆಗಳನ್ನು ಗಮನಿಸೋಣ. ರಸ್ತೆ ಅಪಘಾತದಲ್ಲಿ ಇರುವ ಒಬ್ಬನೇ ೬ ವರ್ಷದ ಮಗ ತೀವ್ರವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿಸಿದ ತಂದೆ-ತಾಯಿಯರ ಗೋಳು ಹೇಳತೀರದು. ತುಂಬಾ ರಕ್ತಸ್ರಾವವಾಗಿ ಮಗುವಿಗೆ ತುರ್ತಾಗಿ ರಕ್ತ ಕೊಡಬೇಕಾಗಿದೆ. ತಂದೆ ನೀಡಿದ ರಕ್ತದ ಪ್ರಮಾಣ ಸಾಲದು. ಆಸ್ಪತ್ರೆಯಲ್ಲಿ ಮಗುವಿಗೆ ಬೇಕಾದ ವರ್ಗದ ರಕ್ತ ಇಲ್ಲ. ಬೇರೆಲ್ಲಾ ಕಡೆ ರಕ್ತ ಹೊಂದಿಸಲು ಪರದಾಡಿದರೂ ಫಲ ಸಿಗಲಿಲ್ಲ. ಏನು ಮಾಡಲೂ ತೋಚದ ಆ ಸಂದರ್ಭದಲ್ಲಿ ಅಕಾಸ್ಮಾತ್ತಾಗಿ ಅಲ್ಲಿಗೆ ಬಂದಿದ್ದವರೊಬ್ಬರಿಗೆ ವಿಷಯ ತಿಳಿದು ಅವರ ರಕ್ತದ ವರ್ಗವೂ ಮಗುವಿನ ರಕ್ತದ ವರ್ಗಕ್ಕೆ ಸೇರಿದ್ದು ಅವರು ರಕ್ತ ನೀಡಿದ್ದಲ್ಲದೇ ತಮ್ಮ ಸಹೋದರನನ್ನೂ ಕರೆಸಿ ಅವರಿಂದಲೂ ರಕ್ತದಾನ ಮಾಡಿಸಿದರು. ಮಗುವಿನ ಪ್ರಾಣ ಉಳಿಯಿತು. ಮಗುವಿನ ತಂದೆ, ತಾಯಿ ಆ ವ್ಯಕ್ತಿಯ ಕಾಲಿಗೆ ಬಿದ್ದು ಹೇಳಿದರು -'ನೀವೇ ನಮ್ಮ ಪಾಲಿನ ದೇವರು!'.
     ಸುಮಾರು ೨೫ವರ್ಷಗಳ ಹಿಂದಿನ ನನ್ನ ಸ್ವಂತದ ಒಂದು ಅನುಭವ ಹೇಳುವೆ. ನಾನು ಹಾಸನ ಜಿಲ್ಲೆಯ ಹಳ್ಳಿಮೈಸೂರಿನಲ್ಲಿ ಉಪತಹಸೀಲ್ದಾರನಾಗಿದ್ದಾಗ ಒಂದು ಮಧ್ಯಾಹ್ನ ಒಬ್ಬ ಸುಮಾರು ೫೦ ವರ್ಷದ ಸುಬ್ಬಯ್ಯ ಎಂಬ ವ್ಯಕ್ತಿ ಕಛೇರಿಗೆ ಬಂದ. ಅಂದು ಹೆಚ್ಚಿನ ಕೆಲಸವಿಲ್ಲದ್ದರಿಂದ ಅವನೊಂದಿಗೆ ಕುಶಲೋಪರಿ ಮಾತನಾಡುತ್ತಿದ್ದೆ. ತೊಗಲು ಗೊಂಬೆ ಆಡಿಸುವ ವೃತ್ತಿಯ ಆತ ಹಲವಾರು ಪೌರಾಣಿಕ, ಐತಿಹಾಸಿಕ ಸಂಗತಿಗಳನ್ನು ರಾಗವಾಗಿ ಜಾನಪದ ಧಾಟಿಯಲ್ಲಿ ಹಾಡಿದ ಕುಶಲತೆಗೆ ಬೆರಗಾದೆ. ಅನಕ್ಷರಸ್ತನಾದರೂ ಅದ್ಭುತ ಕಲಾವಿದ ಅವನಲ್ಲಿ ನನಗೆ ಕಂಡ. ಸರ್ಕಾರ ಅವನಿಗೆ ಮಂಜೂರು ಮಾಡಿದ್ದ ೪ ಎಕರೆ ಜಮೀನನ್ನು ಗ್ರಾಮದ ಬಲಾಢ್ಯರೊಬ್ಬರು ಆಕ್ರಮಿಸಿಕೊಂಡು ಅನುಭವಿಸುತ್ತಿದ್ದರು. ವಂಶದ ಕಾಯಕವಾಗಿ ತೊಗಲು ಗೊಂಬೆ ಆಡಿಸಿಕೊಂಡು ಊರೂರು ಅಲೆಯುತ್ತಿದ್ದರಿಂದ ಜಮೀನು ಉಳಿಸಿಕೊಳ್ಳಲು ಅವನಿಗೆ ಆಗಿರಲಿಲ್ಲ. ಈ ಸಮಸ್ಯೆಯ ಸಲುವಾಗಿಯೇ ಆತ ನನ್ನನ್ನು ಭೇಟಿ ಮಾಡಲು ಬಂದಿದ್ದ. ವಿವರ ಪಡೆದು ನಾನೇ ಖುದ್ದು ಗ್ರಾಮಕ್ಕೆ ಹೋಗಿ ಜಮೀನನ್ನು ಅವನಿಗೆ ಬಿಡಿಸಿಕೊಟ್ಟೆ. ನನ್ನ ಪ್ರಯತ್ನದಿಂದ ಆ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೊಂಬೆಸುಬ್ಬಯ್ಯನನ್ನು ಸನ್ಮಾನಿಸಿ ಗೌರವಿಸಲಾಯಿತು. ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಹಾಗೂ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯೂ ನಾನೇ ಆಗಿದ್ದರಿಂದ ಸಂಘಗಳ ವತಿಯಿಂದಲೂ ತೊಗಲು ಗೊಂಬೆ ಆಡಿಸಲು ಅಗತ್ಯವಾಧ ಉತ್ತಮ ಗುಣಮಟ್ಟದ ಪರದೆ, ಗ್ಯಾಸ್ ಲೈಟು, ತಬಲ, ಮುಂತಾದ ವಾದ್ಯ ಪರಿಕರಗಳೊಂದಿಗೆ ಧನಸಹಾಯವನ್ನೂ ಸಹ ಮಾಡಿಸಿದೆ. ಆ ಸಂದರ್ಭದಲ್ಲಿ ಆತ ನನಗೆ ಕೈ ಮುಗಿದು ಹೇಳಿದ್ದು: 'ಯಪ್ಪಾ, ನೀವೇ ನಮ್ಮ ದ್ಯಾವರು!'.
     ಮೇಲೆ ತಿಳಿಸಿದಂತಹ ಅನೇಕ ಉದಾಹರಣೆಗಳು ನಿಮ್ಮ ಗಮನಕ್ಕೂ ಬಂದಿರಬಹುದು. ನಮ್ಮ ನಿಮ್ಮೆಲ್ಲರ ಅನುಭವದಂತೆ ಕಷ್ಟದಲ್ಲಿದ್ದಾಗ, ಬೇರೆ ಯಾವುದೇ ಸಹಾಯ ದೊರಕದಿದ್ದಾಗ ಅನಿರೀಕ್ಷಿತ ನೆರವು ನೀಡುವವರನ್ನು ದೇವರು ಎಂತಲೋ ಅಥವಾ ದೇವರೇ ಅವರ ಮೂಲಕ ಮಾಡಿಸಿದ ಸಹಾಯ ಎಂತಲೋ ಭಾವಿಸುವುದು ಸುಳ್ಳಲ್ಲ. ಹಸಿವಿನಿಂದ ಕಂಗೆಟ್ಟು ಹಪಹಪ ಪಡುತ್ತಿರುವವರಿಗೆ ತಿನ್ನಲು ಏನಾದರೂ ಕೊಡುವವರೇ ದೇವರು. ಅಂದರೆ ದೇವರು ಆಪದ್ಭಾಂದವನೆಂದು ಎಲ್ಲರೂ ಒಪ್ಪುತ್ತೇವಲ್ಲವೇ?
     ಸೂರ್ಯನ ಕಿರಣಗಳನ್ನು ಮಸೂರದ (ಲೆನ್ಸ್) ಮೂಲಕ ಹಾಯಿಸಿ ಕೇಂದ್ರೀಕರಿಸಿ ಒಣಗಿದ ಕಾಗದ, ತರಗೆಲೆಗಳಿಗೆ ಬೆಂಕಿ ಹೊತ್ತಿಸಲು ಸಾಧ್ಯವಿರುವಂತೆಯೇ, ನಮ್ಮ ಮನಸ್ಸನ್ನು ನಿಯಂತ್ರಿಸಿ ಒಂದು ವಿಷಯದ ಕುರಿತು ಕ್ರೋಢೀಕರಿಸಿ ಪ್ರಾರ್ಥಿಸಿದಾಗ, ನಾವು ಎಷ್ಟರ ಮಟ್ಟಿಗೆ ಆರೀತಿ ಮಾಡಲು ಸಾಧ್ಯವಿದೆಯೋ ಅಷ್ಟರ ಮಟ್ಟಿಗೆ ಸಫಲತೆ ಕಂಡುಕೊಳ್ಳಬಹುದೆಂಬುದು ನನ್ನ ವೈಯಕ್ತಿಕ ಅನುಭವ. ಅನಿರೀಕ್ಷಿತವಾಗಿ ಕಷ್ಟಕರ ಪರಿಸ್ಥಿತಿಗೆ ಸಿಲುಕಿ ಹತಾಶನಾಗಿದ್ದಾಗ, ಅವಮಾನಿತನಾಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದು ಒಳಿತೆಂದು ಭಾವಿಸಿದ ಸಂದರ್ಭವೊಂದರಲ್ಲಿ ನಾನು ದೇವಸ್ಥಾನಕ್ಕೆ ಹೋಗಿ ಅಡ್ಡಬೀಳಲಿಲ್ಲ. ಆ ಸಮಯದಲ್ಲಿ ನಾನು ಸುಬ್ರಹ್ಮಣ್ಯದಲ್ಲಿ ಕೊಠಡಿಯೊಂದರಲ್ಲಿ ವಾಸವಿದ್ದೆ. ದೇವಸ್ಥಾನದ ಹೊರಗಿನ ಕಟ್ಟೆಯೊಂದರ ಮೇಲೆ ಕುಳಿತು ನನ್ನನ್ನು ಪಾರು ಮಾಡುವಂತೆ ಅಗೋಚರ ಶಕ್ತಿಯಲ್ಲಿ ತದೇಕ ಚಿತ್ತದಿಂದ ಆರ್ತನಾಗಿ, ಮೌನವಾಗಿ ಪ್ರಾರ್ಥಿಸಿದ್ದೆ. ನನ್ನ ಪ್ರಾರ್ಥನೆಯ ಫಲವೋ, ದೇವರ ಸಹಾಯವೋ ಎಂಬಂತೆ ನನ್ನನ್ನು ಮುಸುಕಿ ಮುಳುಗಿಸಲಿದ್ದ ಕಾರ್ಮೋಡ ಸರಿದು ಹೋಗಿದ್ದಂತೂ ಸತ್ಯ. ಒಮ್ಮೆಯಾದರೆ ಆಕಸ್ಮಿಕವೆನ್ನಬಹುದಿತ್ತು. ಹಲವಾರು ಸಂದರ್ಭಗಳಲ್ಲಿ ಮನಸ್ಸು ನಿಯಂತ್ರಿಸಿ ಮಾಡಿದ ಏಕಚಿತ್ತದ ಧ್ಯಾನ ನನಗೆ ಪರಿಹಾರದ ದಾರಿ ತೋರಿದೆ, ಸಾಂತ್ವನ ನೀಡಿದೆ. ನನಗೆ ದೇವರ ಕುರಿತು ಸ್ಪಷ್ಟ ಕಲ್ಪನೆಯಿಲ್ಲ, ಅಭಿಪ್ರಾಯವಿಲ್ಲ. ಯಾರನ್ನು ಪ್ರಾರ್ಥಿಸುತ್ತಿದ್ದೇನೆ, ಆ ದೇವರು ಹೇಗಿದ್ದಾನೆ ಎಂಬುದೂ ಗೊತ್ತಿಲ್ಲ. ಆದರೆ ಅಗೋಚರ, ಕಲ್ಪನೆ/ತರ್ಕಕ್ಕೆ ಮೀರಿದ, ನಮ್ಮನ್ನೆಲ್ಲಾ ನಿಯಂತ್ರಿಸುವ ಶಕ್ತಿಯೊಂದಿದೆ ಎಂಬ ನಂಬಿಕೆ ಮಾತ್ರ ಧೃಢವಾಗಿದ್ದು ನಾನು ಪ್ರಾರ್ಥಿಸಿದ್ದು, ಪ್ರಾರ್ಥಿಸುವುದು ಆ ಶಕ್ತಿಯನ್ನೇ! ಹಾಗಾದರೆ ನಮ್ಮ ಪ್ರಾರ್ಥನೆ ಸಫಲಗೊಳಿಸಿಕೊಳ್ಳಬಲ್ಲ ಶಕ್ತಿ ನಮ್ಮೊಳಗೇ ಇದೆಯೇ? ಹೌದಾದರೆ ದೇವರು ನಮ್ಮೊಳಗೂ ಇದ್ದಾನಲ್ಲವೇ?
. . . .(ಮುಂದುವರೆದಿದೆ.)