ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಏಪ್ರಿಲ್ 16, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ -2

     ವೇದಗಳು ಸ್ಪಷ್ಟವಾಗಿ ಪರಮಾತ್ಮನು ಜಡವಾದ ಪ್ರಕೃತಿ ತತ್ವದಿಂದ ಜಗದ್ರಚನೆ ಮಾಡಿದನು ಎಂದು ಹೇಳುತ್ತವೆ. ಕೇಳಿರಿ:-
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ ||
(ಋಕ್. ೧೦.೧೨೯.೧)
     [ತದಾನೀಮ್] ಆಗ, ಸೃಷ್ಟಿಯಾಗುವ ಮುನ್ನ [ಅಸತ್ ನ ಆಸೀತ್] ಅಭಾವ ಅಥವಾ ಶೂನ್ಯವಿರಲಿಲ್ಲ. [ಸತ್ ನೋ ಆಸೀತ್] ಈ ವಿಶ್ವದ ಸತ್ತೆ ಅಥವಾ ಭಾವವೂ ಇರಲಿಲ್ಲ. [ರಜಃ ನ ಆಸೀತ್] ಲೋಕವೂ ಇರಲಿಲ್ಲ. [ಯತ್ ಪರಃ] ಯಾವುದು ಮೇಲಿದೆಯೋ, [ವ್ಯೋಮಾ ನೋ] ಆ ಆಕಾಶವೂ ಇರಲಿಲ್ಲ. [ಆವರೀವಃ ಕಿಮ್] ಆವರಿಸುವ ಏನೋ ಒಂದು ತತ್ವವಿತ್ತು. [ಕುಹ] ಎಲ್ಲಿತ್ತು? [ಕಸ್ಯ ಶರ್ಮನ್] ಆನಂದಮಯನಾದ ಪರಮಾತ್ಮನ ಆಶ್ರ್ರಯದಲ್ಲಿತ್ತು. [ಗಹನಂ ಗಭೀರಂ ಅಂಭಃ] ಗಹನವೂ, ಗಂಭೀರವೂ ಆದ ಏನೋ ಒಂದು ತರಳ ಪದಾರ್ಥವು, [ಆಸೀತ್] ಇದ್ದಿತು.
     ಸೃಷ್ಟಿಗೆ ಮುನ್ನ ಸ್ಥೂಲ ಜಗತ್ತಿರಲಿಲ್ಲ. ಆದರೆ ಏನೋ ಒಂದು ಸೂಕ್ಷ್ಮವಾದ ತರಳ ಅಂದರೆ ಹರಿದಾಡುವ ದ್ರವರೂಪವಾದ ವಸ್ತುವಿತ್ತು. ಬೇರಾವ ಅಧಿಷ್ಠಾನ ಅಂದರೆ ಆಶ್ರಯ ಸ್ಥಾನವಿಲ್ಲದುದರಿಂದ, ಅದು ಪರಮಾತ್ಮನ ಆಶ್ರಯದಲ್ಲಿಯೇ ಇತ್ತು. ಅಭಾವ ಅಥವಾ ಶೂನ್ಯವಂತೂ ಇರಲಿಲ್ಲ.
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ ||
(ಋಕ್. ೧೦.೧೨೯.೨)
     [ಮೃತ್ಯುಃ ನ ಆಸೀತ್] ಸಾವು ಇರಲಿಲ್ಲ. [ತರ್ಹಿ] ಅದೇ ಕಾರಣದಿಂದ [ಅಮೃತಃ ನ} ಅಮರತ್ವವೂ ಇರಲಿಲ್ಲ. [ರಾತ್ರ್ಯಾ] ರಾತ್ರಿಯ [ಅಹ್ನಃ] ಹಗಲಿನ [ಪ್ರಕೇತಃ] ಚಿಹ್ನೆಯೇ [ನ ಆಸೀತ್] ಇರಲಿಲ್ಲ. [ತತ್ ಏಕಮ್] ಆ ಒಂದು ತತ್ವ ಮಾತ್ರ [ಸ್ವಧಯಾ] ತನ್ನದೇ ಆದ ಅಸ್ತಿತ್ವದಿಂದ [ಅವಾತಮ್] ವಾಯುರಹಿತವಾಗಿ [ಆಸೀತ್] ಬೇರೆಯವರಿಗೆ ಪ್ರಾಣ ನೀಡಬಲ್ಲದಾಗಿತ್ತು. [ತಸ್ಮಾತ್ ಅನ್ಯತ್] ಅದರಿಂದ ಭಿನ್ನವಾದ [ಕಿಂಚನ ಪರಃ] ಯಾವುದೇ ಬೇರೆ ವಸ್ತುವೂ [ನ ಆಸ] ಇರಲಿಲ್ಲ.
     ಸೃಷ್ಟಿಯಾಗುವ ಮೊದಲೂ ಕೂಡ ಅದೇನೋ ಒಂದು ಅನಾದಿ ಪದಾರ್ಥವು ಇದ್ದೇ ಇತ್ತು. ಆದರೆ ಸೂರ್ಯ, ಪೃಥಿವೀ, ಚಂದ್ರ ಮೊದಲಾದ ಗ್ರಹಗಳ ರಚನೆಯೇ ಆಗಿರಲಿಲ್ಲವಾದ ಕಾರಣ, ಇರುಳು, ಹಗಲು ಎಂದು ವಿಭಾಗ ಮಾಡಿ ಹೇಳಲಾಗುತ್ತಿರಲಿಲ್ಲ. ಆ ಏನೋ ಒಂದು ತತ್ವದ ಲಕ್ಷಣವೇನು? ಆಲಿಸಿರಿ:-
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್||
(ಋಕ್.೧೦.೧೨೯.೩)
     [ಅಗ್ರೇ] ಸೃಷ್ಟಿಗೆ ಮುನ್ನ [ಇದಂ ಸರ್ವಮ್] ಇದೆಲ್ಲವೂ [ಅಪ್ರಕೇತಮ್] ಲಕ್ಷಣರಹಿತವಾಗಿ [ಸಲಿಲಮ್] ದ್ರವರೂಪವಾಗಿ [ತಮಸಾ ಗೂಳ್ಹಮ್] ಅಂಧಕಾರದಿಂದ ಗೂಢವಾಗಿ [ತಮಃ ಆಸೀತ್] ಪ್ರಕೃತಿಯ ರೂಪದಲ್ಲಿತ್ತು. [ಯತ್] ಯಾವುದು ಇದ್ದಿತೋ, ಅದು [ತುಚ್ಛ್ಯೇನ] ತನ್ನ ತುಚ್ಛತ್ವದಿಂದ [ಅಭಿ ಆಪಿಹಿತಮ್] ನಾಲ್ಕೆಡೆಯಿಂದಲೂ ಮುಚ್ಚಲ್ಪಟ್ಟುದಾಗಿ [ಆಸೀತ್] ಇದ್ದಿತು. [ತತ್] ಅದು [ತಪಸಃ ಮಹಿನಾ] ಪರಮ ತೇಜಸ್ವಿಯಾದ ಪ್ರಭುವಿನ ಮಹಿಮೆಯಿಂದ [ಏಕಂ ಅಜಾಯತ] ಒಂದು ಎಂದಾಯಿತು.
      ಡಾರ್ವಿನ್ನನ ಅನುಯಾಯಿಗಳ ಅಭಿಪ್ರಾಯದಂತೆ, ಮಾನವನ ಉತ್ತರೋತ್ತರ ಉತ್ಕ್ರಾಂತಿ, ಅಂದರೆ ವಿಕಾಸ ಒಂದು ಸತ್ಯ ತಾನೇ? ಸ್ವಲ್ಪ ಹೊತ್ತು ಆ ತತ್ವ ಸತ್ಯವೆಂದು ಭಾವಿಸಿದರೆ, ಆದಿಮಾನವ ಅತ್ಯಂತ ಅವಿಕಸಿತ ಬುದ್ಧಿಯವನಾಗಿದ್ದನು. ಆದಿಮಾನವನ ಕಾಲದಲ್ಲೇ ಅವಿರ್ಭವಿಸಿದ ವೇದಗಳಲ್ಲಿ, ೨೦ನೆಯ ಶತಮಾನದ ಭೌತಿಕ ವಿಜ್ಞಾನಿಗಳೂ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವ, ಸೃಷ್ಟಿಯ ಪೂರ್ವಸ್ಥಿತಿಯ ಈ ಪರಮ ವೈಜ್ಞಾನಿಕ ವರ್ಣನೆ ಕಂಡುಬರಬೇಕಾದರೆ ಅದರ ಹಿಂದೆ ಭಗವಂತನ ಕೈವಾಡವಿರಲೇಬೇಕು. ನಾವೇನೂ ಡಾರ್ವಿನ್ನನ ವಿಕಾಸವಾದವನ್ನು ಒಪ್ಪುವುದಿಲ್ಲ. ಮಾನವನ ಬುದ್ಧಿ ಆಗಿಗಿಂತ ಈಗ ಹೆಚ್ಚಿದೆ ಎಂದು ನಾವು ಹೇಳಲಾರೆವು. ಈ ಸಮಯದಂತೆ, ಹಿಂದೆ ಅದೆಷ್ಟು ಸಾರಿ ವಿಜ್ಞಾನ ಬೆಳೆದು ನಾಶವಾಗಿದೆಯೋ? ಆದರೆ, ಇನ್ನೂ ಯಾವ ಶಾಲಾ-ಕಾಲೇಜುಗಳೂ, ಪ್ರಾಧ್ಯಾಪಕ-ಆಚಾರ್ಯರೂ ಕಲಿಸಿಕೊಡಲು ಇಲ್ಲದಿದ್ದಾಗ ಇಂತಹ ಸ್ಥಿತಿ ಚಿತ್ರಣವನ್ನು ಕಾಣಬೇಕಾದರೆ, ವೇದಗಳು ಈಶ್ವರವಾಣಿಯೇ ಆಗಿರಬೇಕೆಂಬುದರಲ್ಲಿ ಸಂದೇಹವೇ ಇಲ್ಲ. ಇಂದಿನ ವೈಜ್ಞಾನಿಕರು ಉಗ್ಗಡಿಸುವ ನೇಬ್ಯುಲಾ ಸಿದ್ಧಾಂತಕ್ಕೂ, ವೇದಗಳ ಈ ಕಥನಕ್ಕೂ ವ್ಯತ್ಯಾಸವೇನಿದೆ?
     ತಾತ್ಪರ್ಯವಿಷ್ಟೆ. ಭಗವಂತ ಅಭಾವದಿಂದ ಸೃಷ್ಟಿಯನ್ನು ರಚಿಸಿಲ್ಲ. ಸೃಷ್ಟಿಗೆ ಉಪಾದಾನ ಕಾರಣವೂ ಇದೆ. ಆ ಉಪಾದಾನ ಕಾರಣ (Material Cause) ಪ್ರಕೃತಿ. ಅದು ಪರಮಾಣುಗಳ ಸಂಘಾತ. ಪ್ರತಿಯೊಂದು ಪರಮಾಣುವೂ, ವಿಶ್ವಚೇತನ (ಪರಮಾತ್ಮ), ಪರಿಚ್ಛಿನ್ನ ಚೇತನ (ಜೀವಾತ್ಮ) ಇವರಂತೆಯೇ ಅನಾದಿ. ಯಾವ ರೀತಿ ಜೀವಾತ್ಮರು ಎಷ್ಟಿದ್ದಾರೆಂದು ಎಣಿಸಲು ಅಲ್ಪಜ್ಞರಾದ ನಮಗೆ ಸಾಧ್ಯವಿಲ್ಲವೋ, ಅದೇ ರೀತಿ ಪರಮಾಣುಗಳೆಷ್ಟಿವೆ ಎಂದು ಎಣಿಸಲೂ ಸಾಧ್ಯವಿಲ್ಲ. ಅರ್ಬುದಾರ್ಬುದಕ್ಕಿಂತ ಅತಿ ಹೆಚ್ಚು ಪರಮಾಣುಗಳಿಂದ ಸೃಜಿತವಾದ ನಕ್ಷತ್ರಗಳೆಷ್ಟಿವೆ ಎಂಬುದನ್ನೇ ಎಣಿಸಲಾಗಿಲ್ಲ. ಒಂದು ಘನ ಅಂಗುಲ ಪ್ರಮಾಣದ ಕಲ್ಲು ಅಥವಾ ಹೆಂಟೆಯಲ್ಲಿ ಎಷ್ಟು ಪರಮಾಣುಗಳಿವೆ ಎಂದು ಎಣಿಸುವುದೂ ದುಸ್ತರವೇ. ಇನ್ನು ಸೃಷ್ಟಿಗಾಗಿ ಉಪಯೋಗಿಸಲ್ಪಟ್ಟ ಪರಮಾಣುಗಳೆಷ್ಟಿವೆ ಎಂದು ನಾವು ಎಣಿಸಬಲ್ಲೆವೇ? ಆದರೆ, ಇಷ್ಟೇನೋ ನಿಜ. ಪರಮಾಣುಗಳು ಯಾವುದೇ ಒಂದು ನಿಶ್ಚಿತ ಪ್ರಮಾಣದಲ್ಲಿವೆ. ಅವು ಒಂದೊಂದು ಸಾರಿ ಕಣರೂಪದಲ್ಲಿ ಇರುತ್ತವೆ, ರೂಪ ಬದಲಾಯಿಸುತ್ತವೆಯೇ ಹೊರತು ನಾಶ ಹೊಂದುವುದಿಲ್ಲ. ಹೊಸ ಪರಮಾಣುಗಳೂ ಹುಟ್ಟುವುದಿಲ್ಲ.
-ಪಂ. ಸುಧಾಕರ ಚತುರ್ವೇದಿ.
. . . .(ಮುಂದಿನ ಕಂತಿನಲ್ಲಿ: ಅಥರ್ವವೇದದಲ್ಲಿ ಪ್ರಕೃತಿಯ ವರ್ಣನೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ