ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಏಪ್ರಿಲ್ 26, 2011

ವೇದೋಕ್ತ ಜೀವನ ಪಥ: ಮಾನವಧರ್ಮ - ೧

ಸಹೃದಯರೇ,
     ಮೂರು ಶಾಶ್ವತ ಪದಾರ್ಥಗಳ, ಅನಾದಿ ತತ್ತ್ವಗಳ - ಅಂದರೆ, ಪರಮಾತ್ಮ, ಜೀವಾತ್ಮ ಮತ್ತು ಪ್ರಕೃತಿ - ಪರಿಚಯ ಈಗಾಗಲೇ ಮಾಡಿಕೊಡಲಾಗಿದೆ. ಇನ್ನುಮುಂದೆ ಮಾನವಧರ್ಮದ ಬಗ್ಗೆ ಪಂಡಿತ ಸುಧಾಕರ ಚತುರ್ವೇದಿಯವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ, ಜಿಜ್ಞಾಸೆ ಮುಂದುವರೆಸೋಣ.

ವೇದೋಕ್ತ ಜೀವನ ಪಥ: ಮಾನವಧರ್ಮ - ೧

     ಪರಮಾತ್ಮ ಮತ್ತು ಪ್ರಕೃತಿಯ ನಡುವೆ, ಅಲ್ಪಜ್ಞನೂ, ಅಲ್ಪಶಕ್ತನೂ, ಪರಿಚ್ಛಿನ್ನನೂ ಆದ ಜೀವಾತ್ಮನಿದ್ದಾನೆ. ಪರಮಾತ್ಮ ಸರ್ವಥಾ ನಿರಾಕಾರ, ನಿರ್ವಿಕಾರ, ಅವನು ಪತನ ಹೊಂದುವ ಪರಿಸ್ಥಿತಿ ಮೂರು ಕಾಲಕ್ಕೂ ಇಲ್ಲ. ಪ್ರಕೃತಿ ಜಡವಾದ ಕಾರಣ, ಪೂರ್ಣತಃ ಅನುಭವರಹಿತ. ಅದರ ಉತ್ಥಾನ-ಪತನಗಳಿಗೆ ಏನೂ ಅರ್ಥವಿಲ್ಲ. ಉಳಿದವನು ಜೀವಾತ್ಮ. ಅವನು ಸ್ವರೂಪತಃ ಪರಿಚ್ಛಿನ್ನನಾಗಿರುವುದರಿಂದ ಅವನ ಶಕ್ತಿಗಳಿಗೂ, ಜ್ಞಾನಕ್ಕೂ ಸಹ ಒಂದು ಪರಿಮಿತಿಯಿದೆ. ಈ ಪರಿಮಿತಿಯ ಕಾರಣದಿಂದ ಜೀವಾತ್ಮನು ತನ್ನ ಉದ್ಧಾರಕ್ಕಾಗಿ ಭಗವಂತನಿಂದ ಕೊಡಲ್ಪಟ್ಟ ಮನಸ್ಸು, ಇಂದ್ರಿಯಗಳು, ದೇಹ ಇವುಗಳನ್ನು ತನ್ನ ವಶದಲ್ಲಿಟ್ಟುಕೊಳ್ಳುವುದನ್ನು ಬಿಟ್ಟು, ತಾನೇ ಅವುಗಳಿಗೆ ವಶೀಭೂತನಾಗಿ ಹೋಗುತ್ತಾನೆ. ಈ ದೌರ್ಬಲ್ಯದ ಪರಿಣಾಮವಾಗಿ ಅವನು ಭಗವಂತನ ಸೃಷ್ಟಿಯನ್ನು ಸುಖ-ಶಾಂತಿಗಳ ಬೀಡಾಗಿ ಮಾಡುವ ಬದಲು, ಅದನ್ನು ನಾರಕೀಯ ಸಂಕಟಗಳ ವೇದಿಕೆಯನ್ನಾಗಿ ಮಾಡುತ್ತಾನೆ. ಈ ರೀತಿ, ತನ್ನ ಇಹವನ್ನು ಕೆಡಿಸಿಕೊಳ್ಳುವುದಲ್ಲದೆ, ಇತರರ ಇಹವನ್ನೂ ಹಾಳುಮಾಡುತ್ತಾನೆ. ಇಹವನ್ನೇ ಸುಧಾರಿಸಿಕೊಳ್ಳಲಾರದವನ ಮುಂದೆ ಪರದ ಪ್ರಶ್ನೆ ನಿರರ್ಥಕ. ಏಕೆಂದರೆ, ಪರದ ಆಧಾರ ಇಹವೇ ಆಗಿರುತ್ತದೆ. ಪರವನ್ನು ಗುರಿಯಾಗಿಟ್ಟುಕೊಂಡು ಇಹವನ್ನು ಹದಗೊಳಿಸಿಕೊಳ್ಳುವುದು, ಸುಧಾರಿತವಾದ ಇಹದ ಆಧಾರದ ಮೇಲೆ ಪರವನ್ನು ಸಾಧಿಸುವುದು. ಬೇರೆಯ ರೀತಿಯಲ್ಲಿ ಹೇಳಬೇಕೆಂದರೆ, ಇಹ-ಪರಗಳೆರಡನ್ನೂ ಸಾಧಿಸಿಕೊಳ್ಳುವುದು. ಇದಕ್ಕೆ ಒಂದು ನಿರ್ದಿಷ್ಟ ಮಾರ್ಗವನ್ನು ಅವಲಂಬಿಸಬೇಕಾಗುತ್ತದೆ. ಆ ನಿರ್ದಿಷ್ಟ ಮಾರ್ಗವನ್ನು ಋಗ್ವೇದ ಈ ರೀತಿ ವರ್ಣಿಸುತ್ತದೆ:-
ತೇ ನಸ್ತ್ರಾಧ್ವಂ ತೇsವತ ತ ಉ ನೋ ಅಧಿ ವೋಚತ |
ಮಾ ನಃ ಪಥಃ ಪಿತ್ರ್ಯಾನ್ಮಾನವಾದಧಿ ದೂರಂ ನೈಷ್ಟ ಪರಾವತಃ ||
(ಋಕ್. ೮.೩೦.೩)
     ವಿದ್ವಜ್ಜನರೇ! [ತೇ ನಃ ತ್ರಾಧ್ವಮ್] ಆ ನೀವು ನಮಗೆ ಬಲ ಕೊಡಿರಿ. [ತೇ ಆವತ] ಆ ನೀವು ರಕ್ಷಿಸಿರಿ. [ತ ಉ ನೋ ಅಧಿ ವೋಚತ] ಆ ನೀವೇ ನಮಗೆ ಉಪದೇಶ ಕೊಡಿರಿ. [ನಃ ಪಿತ್ರ್ಯಾತ್ ಮಾನವಾತ್ ಪರಾವತಃ ಪಥಃ ಅಧಿ] ನಮ್ಮನ್ನು ಪಾಲಕನ ಶಕ್ತಿಸಂಪನ್ನವಾದ, ಮಾನವೀಯವಾದ, ಪರಪ್ರಾಪ್ತಿ ಸಾಧಕವಾದ ಮಾರ್ಗದಿಂದ, [ಮಾ ದೂರಂ ನೈಷ್ಟ] ದೂರಕ್ಕೆ ಕರೆದೊಯ್ಯಬೇಡಿ.
     ವೇದಗಳ ಶೈಲಿ ತನ್ನದೇ ಆದ ಅದ್ಭುತ ಶೈಲಿ. ಇಹ-ಪರಗಳೆರಡನ್ನೂ ಶಾಧಿಸುವ ನಿರ್ದಿಷ್ಟ ಮಾರ್ಗವನ್ನು ತಿಳಿಯಲಪೇಕ್ಷಿಸುವ ನಿಜವಾದ ಜಿಜ್ಞಾಸುಗಳು ಜ್ಞಾನಿಗಳಲ್ಲಿ ಬೇಡಿಕೊಳ್ಳುವ ರೀತಿಯದು. ಪ್ರತಿಯೊಬ್ಬ ಧರ್ಮಜಿಜ್ಞಾಸುವಿನ ಹೃದಯಾಂತರಾಳದಲ್ಲಿಯೂ ಅಡಗಿರಬೇಕಾದ ಮೂರು ಅಂಶಗಳು ಈ ಮಂತ್ರದಲ್ಲಿ ಸ್ಪಷ್ಟವಾಗಿ ವರ್ಣಿತವಾಗಿದೆ. ಧರ್ಮದ ಆ ನಿರ್ದಿಷ್ಟವಾದ ಮಾರ್ಗ, ಈ ಲೋಕದಲ್ಲಿ ಪಾಲನೆ-ಪೋಷಣೆ ನೀಡುವ ಶಕ್ತಿ ಹೊಂದಿರಬೇಕು. ಎರಡನೆಯದಾಗಿ, ಅದು ಯಾವುದಾದರೊಂದು ಸಂಪ್ರದಾಯಕ್ಕೆ ಅಥವಾ ಜನಾಂಗಕ್ಕೆ ಅನ್ವಯಿಸುವ ಮಾರ್ಗವಾಗಿರದೆ, ಸಂಪೂರ್ಣ ಮಾನವ ಜಾತಿಗೆ ಅನ್ವಯಿಸುವ ಮಾರ್ಗವಾಗಿರಬೇಕು. ಮೂರನೆಯದಾಗಿ, ಅದು ಆಧ್ಯಾತ್ಮಿಕ ವಿಕಾಸವನ್ನೂ ಸಾಧಿಸಿ, ಪರಲೋಕವನ್ನೂ ಕೂಡ ಗಳಿಸಿಕೊಡುವ ಮಾರ್ಗವಾಗಿರಬೇಕು. ಈ ಮೂರರಲ್ಲಿ ಯಾವುದೇ ಒಂದು ಅಂಶಕ್ಕೆ ಲೋಪ ಬಂದರೂ, ಅದು ಪೂರ್ಣವಾದ ಧರ್ಮಮಾರ್ಗವೆನ್ನಿಸಲಾರದು. ಇಂತಹ ಇಹ-ಪರ ಸಾಧಕವಾದ ಮಾನವ ಪಥವನ್ನೇ 'ಧರ್ಮ' ಎಂದು ಕರೆಯುತ್ತಾರೆ. ಯಾವುದೇ ಒಂದು ಮತ-ಸಂಪ್ರದಾಯದಲ್ಲಿಯೂ, ಧರ್ಮದ ಯಾವುದಾದರೊಂದು ಅಂಶ ಅಡಕವಾಗಿರಬಲ್ಲದೇ ಹೊರತು, ಅದರ ಸಂಕುಚಿತ ಪರಿಧಿಯಲ್ಲಿ ಸಂಪೂರ್ಣ ಧರ್ಮದ ವಿಶಾಲ ತತ್ತ್ವ ಹಿಡಿಸಲಾರದು. ಮತಗಳು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಎಂದು ಹಲವಾರು ಇರಬಲ್ಲವು. ಅವುಗಳ ಹಿಂದೆ ವ್ಯವಚ್ಛೇದಕವಾದ ವಿಶೇಷಣಗಳನ್ನೂ ಉಪಯೋಗಿಸಬಹುದು. ಅದರೆ, ಧರ್ಮ ಸಾರ್ವಭೌಮ ಹಾಗೂ ಸಾರ್ವಕಾಲಿಕವಾದ ಏಕಮಾತ್ರ ತತ್ತ್ವವಾಗಿರುವುದರಿಂದ ಅದರ ಹಿಂದೆ ಇಂತಹ ಯಾವ ವಿಶೇಷಣಗಳನ್ನೂ ಉಪಯೋಗಿಸಲು ಸಾಧ್ಯವಿಲ್ಲ. ವಿಶೇಷಣವಿಡಲೇಬೇಕಾದರೆ ಅದು ಜ್ಞಾನಾಶ್ರಿತವಾದುದರಿಂದ 'ವೈದಿಕ ಧರ್ಮ' ಎನ್ನಬಹುದು. ಸಂಪೂರ್ಣ ಮಾನವ ಸಮಾಜಕ್ಕೆ ಅನ್ವಯಿಸಬಹುದಾದ ಕಾರಣ 'ಮಾನವ ಧರ್ಮ' ಎನ್ನಬಹುದು. ಈ ಧರ್ಮ, ಜೀವಾತ್ಮನು ಪತಿತನಾಗದಂತೆ ಅವನನ್ನು ಎತ್ತಿಹಿಡಿಯುವುದರಿಂದ ಅದನ್ನು ಧರುಣ ಎಂದರೆ ಧಾರಕತತ್ತ್ವ ಎಂದು ವೇದಗಳಲ್ಲಿ ಕರೆದಿದೆ. ಉದಾಹರಣೆಗೆ ಋಗ್ವೇದ - ದಿವೋ ಧರ್ಮನ್ ಧರುಣೀ
(ಋಕ್.೫.೧೫.೨.) - ಧರುಣ ಎಂದರೆ ಧಾರಕವಾದ ಜ್ಯೋತಿಯ ಧರ್ಮದಲ್ಲಿ ಎಂದು ಹೇಳಿರುವುದನ್ನು ನಾವು ನೋಡಬಹುದು. ಧರ್ಮದ ಉದ್ದೇಶ್ಯ, ಕರ್ಮ-ಭೋಗ-ಯೋನಿಯಲ್ಲಿರುವ ಮಾನವನ ಆತ್ಮವನ್ನು ಪತನ ಹೊಂದಲು ಅವಕಾಶ ಕೊಡದೆ, ಆಧ್ಯಾತ್ಮಿಕ ದೃಷ್ಟಿಯಿಂದ ಅವನನ್ನು ಎತ್ತಿ ಹಿಡಿದು, ಇಹ-ಪರಗಳೆರಡನ್ನೂ ಸಾಧಿಸುವ ಸಾಮರ್ಥ್ಯವನ್ನು ಅವನಲ್ಲಿ ತುಂಬಿಕೊಡುವುದೇ ಆಗಿದೆ.
******************************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ