ಸಹೃದಯರೇ, ಪಂ. ಸುಧಾಕರ ಚತುರ್ವೇದಿಯವರು ಭಗವಂತನ ಸ್ವರೂಪದ ಕುರಿತು ಹಾಗೂ ಜೀವಾತ್ಮದ ಸ್ವರೂಪ ಕುರಿತು ವೇದಗಳು ಏನು ಹೇಳುತ್ತವೆ ಎಂಬ ಬಗ್ಗೆ ತಿಳಿಸಿರುವುದನ್ನು ಓದಿರುವಿರಿ ಹಾಗೂ ಆ ವಿಷಯಗಳಲ್ಲಿ ಅರ್ಥಪೂರ್ಣ ಚರ್ಚೆಗಳನ್ನೂ ಮಾಡಿರುವಿರಿ. ಇನ್ನುಮುಂದೆ ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ ಕುರಿತು ವೇದ ಏನು ಹೇಳುತ್ತದೆ ಎಂಬುದನ್ನು ಪಂಡಿತರ ಮಾತುಗಳಲ್ಲೇ ನೋಡೋಣ.
ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ
ಸೃಷ್ಟಿಯ ನಿಮಿತ್ತ ಕಾರಣ, ಮಹಾನ್ ವಿಶ್ವಚೇತನ, ಅಂದರೆ ಭಗವಂತನು. ಅವನು ಈ ಸೃಷ್ಟಿಯನ್ನು ರಚಿಸಿರುವುದು ಪರಿಚ್ಛಿನ್ನ ಚೇತನರಾದ ಜೀವಾತ್ಮರ ಸಲುವಾಗಿ. ಈ ವಿಷಯಗಳನ್ನು ವಿಸ್ತಾರವಾಗಿ ಅರಿತುದಾಯಿತು. ಈ ವಿಶ್ವಬ್ರಹ್ಮಾಂಡದ ಕಡೆ ಗಮನವಿತ್ತು ನೋಡಿದಾಗ, ಅಷ್ಟೇ ಸಿಕ್ಕುಗಟ್ಟಿದ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಭಗವಂತನು ಚೇತನ ಜೀವಾತ್ಮರಿಗಾಗಿ ಸೃಷ್ಟಿಯನ್ನು ರಚಿಸಿದ, ಸರಿ. ಅದರೆ ಏತರಿಂದ ಸೃಜಿಸಿದ? ಕೆಲವು ಮತದವರು 'ಭಗವಂತ ಸೃಷ್ಟಿಯಾಗಲಿ ಎಂದ, ಸೃಷ್ಟಿಯಾಗಿ ಹೋಯಿತು' - ಎನ್ನುತ್ತಾರೆ. ಯಾರಿಗೆ ಹೇಳಿದ ಭಗವಂತ ಸೃಷ್ಟಿಯಾಗಿ ಹೋಗಲಿ ಎಂದು? ಶೂನ್ಯಕ್ಕೇನು? ಶೂನ್ಯ ಎಂದರೆ ಅಭಾವ, ಏನೂ ಇಲ್ಲದಿರುವಿಕೆ. ಅಭಾವದಿಂದ ಭಾವೋತ್ಪತ್ತಿ, ಅಸತ್ನಿಂದ ಸದುತ್ಪತ್ತಿ ಎಂದಿಗೂ ಆಗಲಾರದು. ಮಣ್ಣಿದ್ದರೆ ಮಡಕೆ, ನೂಲಿದ್ದರೆ ಬಟ್ಟೆ, ಮರದ ಹಲಗೆಗಳಿದ್ದರೆ ಕಾಲುಮಣೆ ಇದು ಸರಿ. ಕಾರಣವಿಲ್ಲದೆ ಕಾರ್ಯ ಉದ್ಭವಿಸಲಾರದು. ಶೂನ್ಯದಿಂದ ಮಡಕೆಯಾಗಲಾರದು, ಶೂನ್ಯದಿಂದ ಬಟ್ಟೆಯಾಗಲಾರದು, ಶೂನ್ಯದಿಂದ ಕಾಲುಮಣೆಯಾಗಲಾರದು. ಹೀಗಿರುವಾಗ ಇಷ್ಟು ದೊಡ್ಡ ಬ್ರಹ್ಮಾಂಡ ಶೂನ್ಯದಿಂದ ಆಗಿಹೋಯಿತೇ? ಕೆಲವರು 'ಭಗವಂತ ಸರ್ವಶಕ್ತ, ಅವನು ಏನು ಬೇಕಾದರೂ ಮಾಡಬಲ್ಲನು' ಎನ್ನುವುದುಂಟು. ಆದರೆ ವೈಜ್ಞಾನಿಕ ವಿಶ್ಲೇಷಣದ ಮುಂದೆ ಈ ವಾದ ಅರೆಕ್ಷಣವೂ ನಿಲ್ಲಲಾರದು. ಅಸಂಭವವಾದುದು ಎಂದಿಗೂ ಸಂಭವವಾಗಲಾರದು. 'ದೇವರು ಸರ್ವಶಕ್ತನಾದುದರಿಂದ ಅವನು ತಾನೇ ಎತ್ತಿ ಹಿಡಿಯಲಾರದ ವಸ್ತುವನ್ನು ರಚಿಸಬಲ್ಲನೇ?' - ಎಂದು ನಾವು ಪ್ರಶ್ನಿಸುತ್ತೇವೆ. 'ಓಹೋ, ರಚಿಸಬಲ್ಲ' ಎಂದು ನೀವು ಹೇಳಿದರೆ, 'ಅವನು ಆ ವಸ್ತುವನ್ನು ಎತ್ತಿ ಹಿಡಿಯಲಾರ, ಹೀಗೆ ಅವನ ಸರ್ವಶಕ್ತಿತ್ವ ಕುಂಠಿತವಾಯಿತು' - ಎಂದು ಒಪ್ಪಬೇಕಾಗುತ್ತದೆ.' ರಚಿಸಲಾರ ' ಎಂದರಂತೂ ಅವನ ಸರ್ವಶಕ್ತಿತ್ವಕ್ಕೆ ಚ್ಯುತಿ ಸ್ಪಷ್ಟ. ಭಗವಂತ ತನ್ನಂತಹ ಇನ್ನೊಬ್ಬ ಭಗವಂತನನ್ನು ಸೃಜಿಸಬಲ್ಲನೇ? ಎಂದು ನಾವು ಪ್ರಶ್ನಿಸಿದರೆ ನೀವು ಇಲ್ಲ ಎನ್ನಲೇಬೇಕಾಗುತ್ತದೆ. ಇದರ ತಾತ್ಪರ್ಯವೇನು? ಎಲ್ಲಾ ಮಾಡಬಲ್ಲ ಶಕ್ತಿಯಲ್ಲ ಸರ್ವಶಕ್ತಿ. ಬೇರೆಯವರ ಸಹಾಯವಿಲ್ಲದೆ ತನ್ನ ಗುಣ-ಕರ್ಮ-ಸ್ವಭಾವಕ್ಕನುಸಾರವಾಗಿ ಸೃಷ್ಟಿ-ಸ್ಥಿತಿ-ಲಯಗಳನ್ನು ಪ್ರವಾಹರೂಪದಲ್ಲಿ ಮಾಡುತ್ತಾ ಹೋಗುವುದೇ ಸರ್ವಶಕ್ತಿ - ಎಂಬುದೇ ಸಾಧುವಾದ, ತರ್ಕಬದ್ಧ ಹಾಗೂ ತಾತ್ವಿಕವಾದ ಪಕ್ಷ. ಭಗವಂತನೂ ಶೂನ್ಯದಿಂದ ಸೃಷ್ಟಿಯನ್ನು ರಚಿಸಲಾರನು.
ಇನ್ನೊಂದು ಭ್ರಾಮಕ ವಾದವಿದೆ. ಅದನ್ನು 'ಅಭಿನ್ನ ನಿಮಿತ್ತೋಪಾದಾನ ಕಾರಣವಾದ' - ಎಂಬ ಉದ್ದವಾದ ಹೆಸರಿನಿಂದ ಕರೆಯುತ್ತಾರೆ. 'ಭಗವಂತನೇ ಈ ಜಗತ್ತಿಗೆ ನಿಮಿತ್ತ ಕಾರಣ, ಅವನೇ ಉಪಾದಾನ ಕಾರಣ. ಭಗವಂತನೇ ಜಗತ್ತನ್ನು ರಚಿಸುತ್ತಾನೆ, ಅವನೇ ಜಗತ್ತಾಗುತ್ತಾನೆ' - ಎನ್ನುವುದೇ ಆ ವಾದದ ಸಾರ. ಏನರ್ಥ ಇದಕ್ಕೆ? ಬ್ರಹ್ಮವೇ ಜೀವವಾಯಿತು ಅಥವಾ ಬ್ರಹ್ಮದಿಂದಲೇ ಜೀವೋತ್ಪತ್ತಿಯಾಯಿತು - ಎಂಬ ವಾದಕ್ಕೆ ವಿರುದ್ಧವಾಗಿ ನಾವು ಹಿಂದಿನ ಅಧ್ಯಾಯದಲ್ಲಿ ಎತ್ತಿದ್ದ ಆಕ್ಷೇಪಣೆಗಳನ್ನು ಪಾಠಕರು ಜ್ಞಾಪಿಸಿಕೊಳ್ಳಬಹುದು. 'ಬ್ರಹ್ಮ ಪೂರ್ಣತಃ ಜಡವಾಗಿ ಅದರಿಂದ ಜಗತ್ತಾಯಿತು' - ಎಂದರೆ, ಈಗ ಬ್ರಹ್ಮವಿಲ್ಲವೇ ಇಲ್ಲವೇ? - ಎಂಬ ಪ್ರಶ್ನೆ ಹುಟ್ಟುತ್ತದೆ. ಎರಡನೆಯದಾಗಿ, ಸಂಪೂರ್ಣ ಬ್ರಹ್ಮವೇ ಜಡವಾಗಿ ಹೋದ ಮೇಲೆ, ಚೇತನ ಉಳಿಯಲೇ ಇಲ್ಲ, ಆ ಜಡೀಭೂತ ಬ್ರಹ್ಮಕ್ಕೆ ಜಗದಾಕಾರ ಕೊಟ್ಟವರಾರು? ತನ್ನಷ್ಟಕ್ಕೆ ತಾನೇ ನಿಯಮಪೂರ್ವಕವಾಗಿ ಬೇರೆ ಸಾರ್ಥಕರೂಪ ತಾಳೂವುದು ಜಡಕ್ಕೆ ಸಾಧ್ಯವಿಲ್ಲವಷ್ಟೇ?. 'ಹಾಗಲ್ಲ, ಬ್ರಹ್ಮನ ಯಾವುದೋ ಒಂದು ಭಾಗ ಮಾತ್ರ ಜಡವಾಯಿತು, ಉಳಿದ ಚೇತನ ಭಾಗ ಜಗತ್ತಿಗೆ ನಿಮಿತ್ತ ಕಾರಣವಾಯಿತು' - ಎಂದರೆ, ಬ್ರಹ್ಮದ ಅಖಂಡತ್ವದ ಗತಿ ಏನಾಯಿತು? 'ಬ್ರಹ್ಮ ಪ್ರಜ್ಞಾನ, ಬ್ರಹ್ಮ ನಿರ್ವಿಕಾರ' - ಎಂಬ ಹೇಳಿಕೆಗಳಿಗೆ ಅರ್ಥವೇನುಳಿಯಿತು?
ನಿಜವಾಗಿ ಇಂತಹ ವಾದಗಳೆಲ್ಲಾ ಕೇವಲ ಭ್ರಾಂತಿವಿಲಾಸ ಮಾತ್ರ. ವೇದಗಳು ಸ್ಪಷ್ಟವಾಗಿ ಪರಮಾತ್ಮನು ಜಡವಾದ ಪ್ರಕೃತಿ ತತ್ವದಿಂದ ಜಗದ್ರಚನೆ ಮಾಡಿದನು ಎಂದು ಹೇಳುತ್ತವೆ.
. . . . . . . ಏನು ಹೇಳುತ್ತವೆ? ಮುಂದಿನ ಕಂತಿನಲ್ಲಿ ನೋಡೋಣ.
Kavi sir,
ಪ್ರತ್ಯುತ್ತರಅಳಿಸಿtumbaa upayukta lekhana, mundina bhagakaagi kaayutiddene.
ಧನ್ಯವಾದ, ಅಶೋಕಕೊಡ್ಲಾಡಿಯವರೇ.
ಪ್ರತ್ಯುತ್ತರಅಳಿಸಿ