ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಸೆಪ್ಟೆಂಬರ್ 3, 2016

ಹೀಗೆಯೇ ಇರುವುದಿಲ್ಲ!


ಒಂದು ಕಾಲದ ಭವ್ಯ ರಾಜಮಹಾರಾಜರೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲಿ |
ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಿನ್ನ ಕಥೆಯೇನು ಹೊರತಲ್ಲ ಮೂಢ ||
     'ಇದು ಹೀಗೆಯೇ ಇರುವುದಿಲ್ಲ' ಎಂಬ ಅರಿವು ನಮಗೆ ಬರುವುದೇ ಇಲ್ಲ; ಬಂದಿದ್ದರೆ ನಾವು ಹೀಗೆ ಇರುತ್ತಿರಲಿಲ್ಲ. ಈ ಭೂಮಿಯನ್ನು ಎಂತೆಂತಹ ರಾಜರು, ಮಹಾರಾಜರು, ಚಕ್ರವರ್ತಿಗಳು ಆಳಿಹೋಗಿದ್ದಾರೆ| ಒಬ್ಬರಿಗಿಂತ ಒಬ್ಬರು ಪ್ರಚಂಡರೇ! ಸಮುದ್ರಕ್ಕೇ ಸೇತುವೆ ಕಟ್ಟಿ ದುಷ್ಟ ರಾವಣನನ್ನು ಸದೆಬಡಿದ ರಾಮಚಂದ್ರ, ಸಂಖ್ಯೆ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಬಲಿಷ್ಠರಾಗಿದ್ದ ಕೌರವರನ್ನು ಸೋಲಿಸಿ ಚಕ್ರಾಧಿಪನೆನಿಸಿದ ಧರ್ಮರಾಯ ಮುಂತಾದವರು ಈ ಭೂಮಿಗೆ ಒಡೆಯರೆನಿಸಿದ್ದರು. ಸೂರ್ಯ ಮುಳುಗದ ಸಾಮ್ಯಾಜ್ಯದ ನಾಯಕರೆನಿಸಿದ್ದ ಬ್ರಿಟಿಷರು ಶತಮಾನಗಳ ಕಾಲ ಈ ದೇಶವನ್ನು ಆಳಿದ್ದರು. ಹಲವು ಶತಮಾನಗಳ ಕಾಲ ಮೊಗಲರ ಅಧಿಪತ್ಯದಲ್ಲಿ ದೇಶವಿತ್ತು. ಛತ್ರಪತಿ ಶಿವಾಜಿ, ಅಶೋಕ, ವಿಷ್ಣುವರ್ಧನ, ಕೃಷ್ಣದೇವರಾಯ, ರಾಣಾ ಪ್ರತಾಪಸಿಂಹರಂತಹವರೂ ದೊಡ್ಡ ಸಾಮ್ರಾಜ್ಯಗಳಿಗೆ ರಾಜರಾಗಿದ್ದರು. ಅವರುಗಳು ಯಾರೂ ಈಗ ಇಲ್ಲ. ಆದರೆ ಅವರು ಆಳಿದ್ದ ಭೂಮಿ ಮಾತ್ರ ಅವರೊಡನೆ ಹೋಗದೆ ಇಲ್ಲಿಯೇ ಇದೆ. ಹುಟ್ಟುವಾಗ ನಮ್ಮೊಡನೆ ಏನೂ ಇರಲಿಲ್ಲ, ಸಾಯುವಾಗಲೂ ನಮ್ಮೊಡನೆ ಯಾವುದೂ ಬರುವುದಿಲ್ಲ. ಪ್ರಪಂಚದ ಅತಿ ದೊಡ್ಡ ಶ್ರೀಮಂತರ ಹೆಸರುಗಳನ್ನು ಕೇಳುತ್ತಿರುತ್ತೇವೆ. ಅವರ ಶ್ರೀಮಂತಿಕೆ ಅವರು ಬದುಕಿರುವವರೆಗೆ ಮಾತ್ರ! ಸತ್ತಾಗ ಒಂದು ಗುಂಡುಸೂಜಿಯನ್ನೂ ಅವರು ತೆಗೆದುಕೊಂಡುಹೋಗಲಾರರು! ಸ್ವಿಸ್ ಬ್ಯಾಂಕಿನಲ್ಲಿ ಗುಟ್ಟಾಗಿ ಸಾವಿರಾರು ಕೋಟಿ ಸಂಪತ್ತು ಇಟ್ಟು ದೇಶಕ್ಕೆ ಮೋಸ ಮಾಡಬಹುದು. ಆದರೆ ಸಾಯುವಾಗ ಗುಟ್ಟಾಗಿ ತೆಗೆದುಕೊಂಡು ಹೋಗಲು ಮಾತ್ರ ಆಗದು!
     'ಹೀಗೆಯೇ ಇರುವುದಿಲ್ಲ!' -  ನೀವು ಒಬ್ಬ ದೊಡ್ಡ ಅಧಿಕಾರಸ್ಥಾನದಲ್ಲಿರುವಿರೇ? ಈ ಅಧಿಕಾರ ನಿಮ್ಮೊಂದಿಗೆ ಸದಾ ಇರಲಾರದು. ಮುಂದೊಮ್ಮೆ ನಿಮಗಿಂತ ಅರ್ಹ ವ್ಯಕ್ತಿಯೊಬ್ಬರು ಆ ಸ್ಥಾನದಲ್ಲಿ ಬಂದು ಕುಳಿತಾರು! ಯಾವುದೋ ಕಾರಣದಿಂದ ನೀವು ಅಧಿಕಾರ ಕಳೆದುಕೊಳ್ಳಬಹುದು. ಅದಕ್ಕೆ ನಿಮ್ಮ ವಯಸ್ಸು, ಅನಾರೋಗ್ಯ, ವೈಫಲ್ಯ ಇತ್ಯಾದಿಗಳು ಕಾರಣವಾಗಬಹುದು. ಗಳಿಸಿಕೊಂಡ ಅಧಿಕಾರ ಕಳೆದುಹೋಗುವುದು ಅಸಹಜವಲ್ಲ, ಆದರೆ ನೋವು ಕೊಡುವಂತಹದು. ಅಧಿಕಾರ ಶಾಶ್ವತವಲ್ಲ ಎಂಬ ಅರಿವಿದ್ದರೆ ದುಃಖದ ಪ್ರಮಾಣ ಕಡಿಮೆಯಾಗುತ್ತದೆ.
ಬರುವಾಗ ತರಲಾರೆ ಹೋಗುವಾಗ ಒಯ್ಯೆ
ಇಹುದು ಬಹುದೆಲ್ಲ ಸಂಚಿತಾರ್ಜಿತ ಫಲ |
ಸಿರಿ ಸಂಪದದೊಡೆಯ ನೀನಲ್ಲ ನಿಜದಿ ದೇವ
ಅಟ್ಟಡುಗೆಯುಣ್ಣದೆ ವಿಧಿಯಿಲ್ಲ ಮೂಢ ||
     'ಹೀಗೆಯೇ ಇರುವುದಿಲ್ಲ!' - ನಿಜ, ಸ್ವತಃ ನಾವು ಹೀಗೆಯೇ ಇರುತ್ತೇವೆಯೇ? ಹುಟ್ಟಿದಾಗ ಸಣ್ಣ ಮಗುವಾಗಿ ಮುದ್ದು ಮುದ್ದಾಗಿದ್ದವರು ಬೆಳೆಯುತ್ತಾ ಬೆಳೆಯುತ್ತಾ ಬದಲಾಗುತ್ತಾ ಹೋಗುತ್ತೇವೆ. ತುಂಟಾಟ ಮಾಡುವ ಬಾಲಕರಾಗುತ್ತೇವೆ, ಏನು ಬೇಕಾದರೂ ಮಾಡಬಲ್ಲೆವೆಂಬ ಹುಮ್ಮಸ್ಸಿನ ತರುಣರಾಗುತ್ತೇವೆ, ಪ್ರೌಢರಾಗಿ ಸಂಸಾರದ ನೊಗಕ್ಕೆ ಹೆಗಲು ಕೊಡುತ್ತೇವೆ, ಮುಂದೊಮ್ಮೆ ವೃದ್ಧರಾಗಿ ಕೈಕಾಲುಗಳಲ್ಲಿ ಶಕ್ತಿ ಕುಂದಿ ನಿತ್ರಾಣರಾಗುತ್ತೇವೆ. ವಯಸ್ಸಿನಲ್ಲಿದ್ದಾಗ, ಅಧಿಕಾರವಿದ್ದಾಗ ಯಜಮಾನರಾಗಿ ಮೆರೆದಿದ್ದವರು ಇತರರ ಆಶ್ರಯ ಬಯಸುವ ಪ್ರಸಂಗ ಬರುತ್ತದೆ. ನಡು ವಯಸ್ಸಿನಲ್ಲಿ ಇರುವ ಒಳ್ಳೆಯ ವರಮಾನ ಬರುವ ನೌಕರಿ ಅಥವ ವಹಿವಾಟು, ಸುಂದರ ಪತ್ನಿ, ಚುರುಕಿನ ಮಕ್ಕಳು, ಭವ್ಯವಾದ ವಾಸದ ಬಂಗಲೆ, ಓಡಾಡಲು ಐಷಾರಾಮಿ ಕಾರು, ಇತ್ಯಾದಿಗಳೆಲ್ಲವೂ ಮೊದಲು ಇರಲಿಲ್ಲ ಅಲ್ಲವೇ? ಕಾಲ ಸರಿದಂತೆ ನಮಗೂ ವಯಸ್ಸಾಗುತ್ತದೆ, ಪತ್ನಿಗೂ ವಯಸ್ಸಾಗುತ್ತದೆ. ಸೌಂದರ್ಯ ಮಾಸುತ್ತದೆ, ಚರ್ಮ ಸುಕ್ಕುಗಟ್ಟುತ್ತದೆ, ವಿವಿಧ ಕಾಯಿಲೆಗಳು ಅಡರಿಕೊಳ್ಳುತ್ತವೆ, ತಲೆಕೂದಲು ನೆರೆಯುತ್ತದೆ, ಉದುರುತ್ತದೆ. ಇದು ಸಹಜ ಕ್ರಿಯೆ. ಮೊದಲು ಇಲ್ಲದುದು ಕೊನೆಯಲ್ಲೂ ಇರುವುದಿಲ್ಲ. ಈ ಅರಿವು ಇದ್ದರೆ ಪೂರ್ವ ತಯಾರಿ ಮಾಡಿಕೊಂಡು ಸಂಧ್ಯಾಕಾಲವನ್ನು ಸಾಧ್ಯವಾದಷ್ಟು ಹಿತವಾಗಿ ಕಳೆಯಲು ಅವಕಾಶವಿರುತ್ತದೆ.
ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ
ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು |
ನಿಂದೆ ಮೂದಲಿಕೆ ಸಾಲಾಗಿ ಎರಗಿರಲು
ಬದುಕಿನರ್ಥ ತಿಳಿದೇನು ಫಲ ಮೂಢ ||
     'ಹೀಗೆಯೇ ಇರುವುದಿಲ್ಲ!' - ಹಗಲು, ರಾತ್ರಿಗಳು ಒಂದಾದ ನಂತರ ಒಂದು ಬರುತ್ತವೆ, ಹೋಗುತ್ತವೆ. ಕಷ್ಟಗಳು ಬಂದು ಅನುಭವಿಸಲಾಗದೆ ಒದ್ದಾಡುವಾಗ ತಾಳ್ಮೆಯಿಂದಿರಲು ಈ ಸೂತ್ರ ನೆರವಾಗುತ್ತದೆ. ಕಷ್ಟಗಳು ಹೊಸದಾಗಿ ಬಂದದ್ದಲ್ಲವೇ? ಒಂದೊಮ್ಮೆ ಹೋಗುತ್ತವೆ. ಅಲ್ಲಿಯವರೆಗೂ ಸಹಿಸುವ ಮತ್ತು ಅದನ್ನು ಎದುರಿಸುವ ಶಕ್ತಿ ಇಟ್ಟುಕೊಳ್ಳಬೇಕಷ್ಟೆ. ಈಸಬೇಕು, ಇದ್ದು ಜೈಸಬೇಕು! ಬಂದದ್ದು ಹೋಗಲೇಬೇಕು, ಹೋದದ್ದು ಬರಲೇಬೇಕು, ಇದು ಪ್ರಕೃತಿನಿಯಮವೆಂದು ಅರಿತರೆ ಅರ್ಧ ಕಷ್ಟ ಕಡಿಮೆಯಾದಂತೆಯೇ.
ತೊಡರು ಬಹುದೆಂದು ಓಡದಿರು ದೂರ
ಓಡಿದರೆ ಸೋತಂತೆ ಸಿಗದು ಪರಿಹಾರ |
ಸಮಸ್ಯೆಯ ಜೊತೆಯಲಿರುವವನೆ ಧೀರ
ಒಗಟಿನೊಳಗಿಹುದು ಉತ್ತರವು ಮೂಢs ||
     'ಹೀಗೆಯೇ ಇರುವುದಿಲ್ಲ!' - ಇದು ಸಮದರ್ಶಿಗೆ, ಸಾಧಕನಿಗೆ ಅರ್ಥವಾಗುವ ವಿಚಾರ. ಜನಸಾಮಾನ್ಯರಾದ ನಮಗೆ ಇದು ಅರ್ಥವಾಗುವುದು ಕಷ್ಟ. ಆ ದೇವರು ಅದು ಯಾವ ಭ್ರಾಮಕ ಅಂಶವನ್ನು ನಮ್ಮೊಳಗೆ ತುರುಕಿದ್ದಾನೋ ಗೊತ್ತಿಲ್ಲ. ನಾವು ಚಿರಂಜೀವಿಗಳಂತೆ ವರ್ತಿಸುತ್ತೇವೆ, ಎಲ್ಲವೂ ನಮಗೆ ಬೇಕು ಎಂಬ ಹಪಾಹಪಿಯಲ್ಲೇ ಜೀವನ ಕಳೆದುಬಿಡುತ್ತೇವೆ. ಕಳೆದುಕೊಳ್ಳಲು ಏನೂ ಇರದವನಿಗೆ ಇರುವ ನೆಮ್ಮದಿ ಎಲ್ಲವೂ ಇರುವ ಶ್ರೀಮಂತನಿಗೆ ಇರಲಾರದು. ನೈಜ ಪರಿವ್ರಾಜಕರು, ಅವಧೂತರಲ್ಲಿ ಈ ಗುಣವನ್ನು ಕಾಣಬಹುದು. ಯಾವುದೇ ವಸ್ತು, ಸಂಗತಿ, ಜೀವಿ ಇರುವಂತೆಯೇ ಇರುವುದಿಲ್ಲ, ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ ಎಂಬ ಅರಿವು ಮೂಡಿದಾಗ ಅದು ಚಮತ್ಕಾರವನ್ನೇ ಮಾಡುತ್ತದೆ. ನವಕೋಟಿ ನಾರಾಯಣನೆಂದು ಹೆಸರು ಪಡೆದಿದ್ದ ಅಂದಿನ ಕಾಲಕ್ಕೆ ಆಗರ್ಭ ಶ್ರೀಮಂತನಾಗಿದ್ದವನು ಎಲ್ಲವನ್ನೂ ದಾನ ಮಾಡಿ ತಂಬರಿ ಹಿಡಿದು ಮನೆ ಬಿಟ್ಟು ಹೊರಟು ಪುರಂದರದಾಸನಾದದ್ದು, ಪರರನ್ನು ದೋಚಿ ಜೀವಿಸುತ್ತಿದ್ದ ಬೇಟೆಗಾರ ವಾಲ್ಮೀಕಿಯಾದದ್ದು, ಬುದ್ಧ ಮತ್ತು ಮಹಾವೀರರು ಐಹಿಕ ಸುಖ-ಭೋಗಗಳನ್ನು ತ್ಯಜಿಸಿ ವಿರಾಗಿಗಳಾದದ್ದು, ಇತ್ಯಾದಿಗಳೆಲ್ಲವೂ ಈ ಅರಿವು ಅವರಲ್ಲಿ ಮೂಡಿದುದರ ಫಲವೇ ಆಗಿದೆ. ಶಾಂತರಾಗಿ ಕುಳಿತು ಚಿಂತಿಸಿದರೆ ಮೂಡುವ ಈ ಅರಿವು ಕಷ್ಟ ಬಂದರೆ ಅಳುಕದ, ಸುಖದಲ್ಲಿ ಹಿಗ್ಗದ, ನಮ್ಮಲ್ಲಿ ಮಾನವೀಯತೆಯ ಒರತೆಯನ್ನು ಚಿಮ್ಮಿಸುವ ಸಾಧನವಾಗದೇ ಇರದು.
-ಕ.ವೆಂ.ನಾಗರಾಜ್.
**************
ದಿನಾಂಕ 18.05.2016 ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ