ಆದಿಗುರು ಶ್ರೀ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವನ್ನು ತೋರಿಸುವ ಈ ಪಂಚಕದಲ್ಲಿ ಒಂದೊಂದರಲ್ಲಿ 8 ಸೂತ್ರಗಳಂತೆ ಒಟ್ಟು 40 ಸೂತ್ರಗಳನ್ನು ಅಳವಡಿಸಲಾಗಿದೆ. ಇದರ ಕನ್ನಡ ಭಾವಾನುವಾದವನ್ನು ಮೂಢನ ಮುಕ್ತಕಗಳ ರೂಪದಲ್ಲಿ ಸಹೃದಯರ ಮಂದಿಟ್ಟಿರುವೆ. ಮೂಲ ಕೃತಿಯನ್ನೂ ಇಲ್ಲಿ ಅವಗಾಹನೆಗೆ ಮಂಡಿಸಿದೆ.
ಮುಕ್ತಿಪಥ (ಆದಿಗುರು ಶ್ರೀ ಶಂಕರಾಚಾರ್ಯರ ಸಾಧನಾ ಪಂಚಕದ
ಕನ್ನಡ ಭಾವಾನುವಾದ - ಮೂಢನ ಮುಕ್ತಕಗಳ ರೂಪದಲ್ಲಿ)
ನಿತ್ಯ ವೇದಾಧ್ಯಯನ ಮಾಡುವವನಾಗಿ
ವೇದೋಕ್ತ ಕರ್ಮಗಳ ಪಾಲಿಸುವನಾಗಿ |
ಈಶಾರಾಧನೆಯಾಗೆ ಕರ್ಮಗಳು ಸಕಲ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧ ||
ಹಾದಿ ತಪ್ಪಿಸುವ ಕರ್ಮಗಳ ತ್ಯಜಿಸಿ
ಅಂತರಂಗದ ಕೊಳೆಯ ತೊಳೆದುಹಾಕಿ |
ಹೊರಸುಖದ ದೋಷವನು ಗುರುತಿಸುವನಾಗೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೨ ||
ನಿನ್ನ ನಿಜರೂಪವನು ತಿಳಿಯಲೆಣಿಸಿರಲು
ಮೋಹ ಸಂಕಲೆಯ ಕಳೆಯಹೊರಟಿರಲು |
ಜ್ಞಾನಿಗಳ ಸಂಗದಲಿ ನಿಜವನರಿಯುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೩ ||
ಪರಮಾತ್ಮನಲಿ ಭಕ್ತಿ ಧೃಢವಾಗಿ ತಾನಿರಲು
ಶಾಂತಿ ಮತ್ತಿತರ ಗುಣಗಳನೆ ಪಡೆದಿರಲು |
ಸ್ವಾರ್ಥಪರ ಕರ್ಮದಲಿ ಆಸಕ್ತಿ ತ್ಯಜಿಸಿದೊಡೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೪ ||
ಸದ್ವಿದ್ಯದಾತರಲಿ ಆಶ್ರಯವ ಪಡೆದಿರಲು
ಸದ್ಗುರು ಪಾದಸೇವೆಯನು ನಿತ್ಯ ಗೈದಿರಲು |
ತಿಳಿಯಲುಜ್ಜುಗಿಸೆ ಓಂಕಾರದರ್ಥವನು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೫ ||
ಉಪನಿಷದ್ವಾಕ್ಯಗಳು ಸುಮನನವಾಗಿರಲು
ವಾಕ್ಯಾಂತರಾರ್ಥದ ಜಿಜ್ಞಾಸೆ ಮಾಡುತಲಿ |
ಉನಿಷದ್ವಾಕ್ಯವದೆ ನಿಜಜ್ಞಾನವೆನಿಸಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೬ ||
ವಿತಂಡವಾದದೊಡೆ ಇರಿಸಿ ಅಂತರವ
ಉಪನಿಷತ್ತಿನ ಪಥವೆ ನಿನ್ನ ಪಥವೆನಿಸಿರಲು |
ಬ್ರಹ್ಮಾನುಭವದಲ್ಲಿ ಒಂದಾಗಿ ಸಾಗುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೭ ||
ಗರ್ವದಲಿ ಮೆರೆಯದಿರು ಎಂದೆಂದಿಗು
ಶರೀರವಿದು ನೀನಲ್ಲ ನೆನಪಿಟ್ಟಿರು |
ತಿಳಿದವರ ಕೂಡೆ ವಾದವನು ಮಾಡದಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೮ ||
ಹಸಿವು ರೋಗಗಳ ಪರಿಹರಿಸಿಕೊಳಬೇಕು
ದಿನನಿತ್ಯದಾಹಾರ ಔಷಧಿಯೊಲಿರಬೇಕು |
ರುಚಿಯಾದ ಭೋಜನವ ಬಯಸದಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೯ ||
ತಾನಾಗಿ ಬಂದುದೇ ಪರಮಾನ್ನವೆನಬೇಕು
ಶೀತೋಷ್ಣ ಆದಿಗಳ ಸಹಿಸಿಕೊಳಬೇಕು |
ಅನುಚಿತ ಮಾತುಗಳನಾಡದಿರೆ ಮನುಜ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೦ ||
ನಿರ್ಲಿಪ್ತಭಾವವನು ಹೊಂದಿದವನಾಗಿ
ನಿಂದಾಪನಿಂದೆಗಳ ಗಣಿಸದಿರಬೇಕು |
ಏಕಾಂತದಲಿ ಸುಖವನರಸುತಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೧ ||
ಪರಮಾತ್ಮನಲಿ ಚಿತ್ತ ಲೀನವಿರಿಸಲುಬೇಕು
ಎಲ್ಲೆಲ್ಲು ಅವನನ್ನೆ ಕಾಣುತಿರಬೇಕು |
ಜಗವಿದು ಮನಸಿನಾಟವೆಂದೆಣಿಸುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೨ ||
ಪೂರ್ವಕರ್ಮಗಳ ಫಲವನನುಭವಿಸಬೇಕು
ಒದಗುವ ಫಲದಿಂದ ಹೆದರದಿರಬೇಕು |
ಕರ್ಮಫಲವನನುಭವಿಸಿ ಕಳೆದಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೩ ||
ಬ್ರಹ್ಮಾನುಭವದಲ್ಲಿ ಅಚಲನಾಗಿರುತಿರಲು
ಪರಮಾನಂದವದು ಸನಿಹದಲಿರದೇನು |
ಆದಿಗುರು ಶಂಕರರು ತೋರಿರುವ ಮಾರ್ಗ
ಮನುಜಕುಲಕಿದು ಉತ್ತಮವು ಮೂಢ || ೧೪ ||
-ಕ.ವೆಂ.ನಾಗರಾಜ್.
***************
'ಸಾಧನಾ ಪಂಚಕಮ್'
ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನುಷ್ಠೀಯತಾಂ
ತೇನೇಶಸ್ಯ ವಿಧೀಯತಾಂ ಅಪಚಿತಿಃ ಕಾಮ್ಯೇ ಮತಿಸ್ತ್ಯಜತಾಮ್ |
ಪಾಪೌಘಃ ಪರುಧೂಯತಾಂ ಭವಸುಖೇ ದೋಷೋsನುಸಂಧೀಯತಾಂ
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್ || ೧ ||
ಸಂಗಃಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾsಧೀಯತಾಂ
ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್ |
ಅದ್ವಿದ್ವಾಬುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || ೨ ||
ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃ ಪಕ್ಷಃ ಸಮಾಶ್ರೀಯತಾಂ
ದುಸ್ತರ್ಕಾತ್ ಸುವಿರಮ್ಯತಾಂ ಶ್ರುತಿಮತಸ್ತರ್ಕೋsನುಸಂಧೀಯತಾಮ್ |
ಬ್ರಹ್ಮಾಸ್ಮೀತಿ ವಿಭಾವ್ಯತಾಂ ಅಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇsಹಂ ಮತಿರುಝ್ಯುತಾಂ ಬುಧಜನೈರ್ವಾದಃ ಪರಿತ್ಯಜ್ಯತಾಮ್ || ೩ ||
ಕ್ಷುದ್ ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ಯನ್ನಂ ನ ತು ಯಾಚ್ಯತಾಂ ವಿಧಿವಶಾತ್ ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಂ
ಔದಾಸೀನ್ಯಮಭೀಷ್ಟತಾಂ ಜನಕೃಪಾನೈಷ್ಠುರ್ಯಮುತ್ ಸೃಜ್ಯತಾಮ್ || ೪ ||
ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷತಾಂ ಜಗದಿದಂ ತದ್ಭಾದಿತಂ ದೃಶ್ಯತಾಮ್ |
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಂ ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ || ೫ ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ