ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಫೆಬ್ರವರಿ 28, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 4

ಜಿಲ್ಲಾ ಸಂಸ್ಕೃತ ಸಮ್ಮೇಳನದ ಉದ್ಘಾಟನೆ:
"ಪಠತು ಸಂಸ್ಕೃತಂ ವದತು ಸಂಸ್ಕೃತಂ
ಲಸತು ಸಂಸ್ಕೃತಂ ಚಿರಂ ಗೃಹೇ ಗೃಹೇಚ ಪುನರಪಿ"
     ಸಮ್ಮೇಳನದ ಉದ್ಘಾಟಕರಾದ ಹೆಸರಾಂತ ಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ಶ್ರೀ ಕೆ.ಎಸ್.ಎಲ್. ಸ್ವಾಮಿ (ರವಿ)ಯವರನ್ನು ಮತ್ತು ಇತರ ಗಣ್ಯರನ್ನು ಆರತಿ ಬೆಳಗಿ, ತಿಲಕವಿಟ್ಟು ಕಲಶಗಳೊಂದಿಗೆ ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು. ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸುಶ್ರಾವ್ಯವಾದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಮ್ಮೇಳನದ ಕಾರ್ಯಾಧ್ಯಕ್ಷರಾದ ಶ್ರೀ ಅಟ್ಟಾವರ ರಾಮದಾಸ್ ಗಣ್ಯರನ್ನೂ, ಸರ್ವರನ್ನೂ ಸ್ವಾಗತಿಸಿದರು.  ಸಂಸ್ಕೃತಭಾರತಿಯ ದಕ್ಷಿಣ ಕರ್ನಾಟಕ ಸಂಪರ್ಕ ಪ್ರಮುಖ ಶ್ರೀ ಶ್ರೀನಿವಾಸನ್ ಪ್ರಾಸ್ತಾವಿಕವಾಗಿ ಮಾತನಾಡಿ ಮೃತಭಾಷೆಯೆಂದು ಹೇಳಲಾಗುತ್ತಿದ್ದ ಸಂಸ್ಕೃತ ಇಂದಿಗೂ ಹೇಗೆ ಜೀವಂತವಿದೆ, ಪ್ರಸ್ತುತವಿದೆ ಎಂಬುದನ್ನು ಅಂಕಿ ಅಂಶಗಳೊಂದಿಗೆ ವಿವರಿಸಿದ್ದು ಚೇತೋಹಾರಿಯಾಗಿತ್ತು. ಒಂದು ಅದ್ಭುತವಾದ ಮತ್ತು ಅಮೂಲ್ಯವಾದ ಜ್ಞಾನಭಂಡಾರಕ್ಕೆ ಸಂಸ್ಕೃತ ಕೀಲಿಕೈ ಆಗಿದೆಯೆಂದರು. ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿ ಗಣ್ಯರುಗಳು ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು. ವೇದಿಕೆಯಲ್ಲಿ ಶ್ರೀಯುತರಾದ ಕೆ.ಎಸ್.ಎಲ್. ಸ್ವಾಮಿ, ಬೆಂಗಳೂರಿನ ಸಂಸ್ಕೃತ ವಿ.ವಿ.ಯ ನಿವೃತ್ತ ಕುಲಪತಿ ಶ್ರೀ ಮಲ್ಲೇಪುರಮ್ ವೆಂಕಟೇಶ, ಸಮ್ಮೇಳನದ ಗೌರವಾಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ, ಉಪಾಧ್ಯಕ್ಷ ಗೋವಿಂದರಾಜಶ್ರೇಷ್ಠಿ, ಶ್ರೀನಿವಾಸನ್, ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠದ ಕೃಷ್ಣರಾಜನಗರ ಶಾಖಾಮಠದ ಶ್ರೀ ಶ್ರೀ ಶಿವಾನಂದಪುರಿ ಮಹಾಸ್ವಾಮಿಯವರು, ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಶಂಕರಪ್ಪ ಮತ್ತು ಸಂಯೋಜಕ ಹರಿಹರಪರ ಶ್ರೀಧರ ಉಪಸ್ಥಿತರಿದ್ದರು. ಶ್ರೀ ಪಿ.ವಿ.ಭಟ್ ನಿರೂಪಿಸಿದರು.
     ಶ್ರೀ ಕೆ.ಎಸ್.ಎಲ್. ಸ್ವಾಮಿಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ, 'ಸಂಸ್ಕೃತ ಕೇವಲ ಒಂದು ವರ್ಗದ ಅಥವ ಒಂದು ಜನಾಂಗಕ್ಕೆ ಸೀಮಿತವಾದ ಭಾಷೆಯಲ್ಲ. ಭಾರತ ಜಾತ್ಯಾತೀತ ಎಂದು ಕರೆಸಿಕೊಳ್ಳಬೇಕಾದರೆ, ಭಾಷಾ ಏಕತೆ ಸಾಧಿಸಬೇಕಾದರೆ ಸಂಸ್ಕೃತ ಬಳಕೆ ಆಗಲೇಬೇಕು. ಸಂಸ್ಕೃತವನ್ನು ನಾವು ಬೆಳೆಸಬೇಕಿಲ್ಲ. ಅದು ಆಗಲೇ ಬೆಳೆದಿದೆ. ಅದನ್ನು ನಾವು ಬಳಸಬೇಕು ಅನ್ನಬೇಕು. ದೇಶದ ಜ್ಞಾನ ಭಂಡಾರ ಮತ್ತು ಸಕಲ ಶಾಸ್ತ್ರಗಳನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಸಂಸ್ಕೃತವನ್ನು ಕಲಿಯಲೇಬೇಕು ಮತ್ತು ಬಳಸಲೇಬೇಕು' ಎಂದು ನುಡಿದರು. ಸಮ್ಮೇಳನದ ಗೌರವಾಧ್ಯಕ್ಷ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಭಾರತೀಯತೆ ಉಳಿಯಬೇಕೆಂದರೆ ಸಂಸ್ಕೃತವನ್ನು ಮತ್ತೆ ಉಚ್ಛ್ರಾಯ ಸ್ಥಿತಿಗೆ ಏರಿಸುವ ಅಗತ್ಯತೆಯಿದೆಯೆಂದರು.


ಹಾಸನದಲ್ಲಿ ಸಂಸ್ಕೃತ ಸಂಭ್ರಮ - 3

ಅಗ್ನಿಹೋತ್ರದಿಂದ ಆರಂಭವಾದ ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನ:
ಓಂ ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ || (ಯಜು.೪೦.೧೬.)
ಭಾವಾರ್ಥ:     
ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಪ್ರಭು ವಂದನೆ ||
     ಹಾಸನದ ವೇದಭಾರತೀ ಕಳೆದ ಎರಡೂವರೆ ವರ್ಷಗಳಿಂದ ಜಾತಿ, ಮತ, ಪಂಥ, ಲಿಂಗ ಭೇದವಿಲ್ಲದೆ ವೇದಾಸಕ್ತರೆಲ್ಲರಿಗೂ ವೇದಮಂತ್ರಗಳನ್ನು ಕಲಿಯಲು, ಅರ್ಥ ತಿಳಿಯಲು, ಸಾಮೂಹಿಕ ಅಗ್ನಿಹೋತ್ರದಲ್ಲಿ ಪಾಲುಗೊಳ್ಳಲು ಅವಕಾಶ ಕಲ್ಪಿಸಿದ್ದು ಅನೇಕರು ಇದನ್ನು ಉಪಯೋಗಿಸಿಕೊಂಡಿದ್ದಾರೆ, ಉಪಯೋಗಿಸಿಕೊಳ್ಳುತ್ತಿದ್ದಾರೆ. ವೇದಭಾರತಿ ಸದಸ್ಯರುಗಳು ಸಮ್ಮೇಳನದ ಆರಂಭಪೂರ್ವದಲ್ಲಿ ಸರ್ವರ ಹಿತ ಬಯಸಿ ಅಗ್ನಿಹೋತ್ರ ನೆರವೇರಿಸಿದರು. ಆ ಸಂದರ್ಭದ ಕೆಲವು ದೃಷ್ಯಗಳಿವು:

     

ಶುಕ್ರವಾರ, ಫೆಬ್ರವರಿ 27, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 2

ಜಯತು ಸಂಸ್ಕೃತಮ್ - ಜಯತು ಮನುಕುಲಮ್ - ಜಯತು ಭಾರತಮ್!
ವಿಶೇಷ ಪ್ರದರ್ಶಿನಿ:
     ಸಂಸ್ಕೃತ ಸಮ್ಮೇಳನದ ಅಂಗವಾಗಿ ನಡೆದ ಶೋಭಾಯಾತ್ರೆ ಸರಿಯಾಗಿ ಬೆ. 9.30ಕ್ಕೆ ಸಭಾಸ್ಥಳಕ್ಕೆ ತಲುಪಿತು. ಆಗಮಿಸಿದ್ದ ಗಣ್ಯರುಗಳಿಂದ ಸಂಸ್ಕೃತದ ಹಿರಿಮೆ ಎತ್ತಿ ಹಿಡಿಯುವ ಪ್ರದರ್ಶಿನಿಯನ್ನು ಉದ್ಘಾಟನೆ ಮಾಡಿಸಲಾಯಿತು. ಪ್ರದರ್ಶಿನಿಯಲ್ಲಿ ವಿವಿಧ ದಿನಬಳಕೆಯ ವಸ್ತುಗಳಿಗೆ ಸಂಸ್ಕೃತದಲ್ಲಿ ಏನು ಹೇಳುತ್ತಾರೆ ಎಂಬ ಬಗ್ಗೆ ವಿವರಣಾ ಫಲಕಗಳನ್ನು ಪ್ರದರ್ಶಿಸಲಾಗಿತ್ತು. ಆಯುರ್ವೇದದ ವಿಚಾರಗಳ ಭಿತ್ತಿಫಲಕಗಳು, ಔಷಧೀಯ ಸಸ್ಯಗಳ ಪರಿಚಯ, ಸಂಸ್ಕೃತ ವಿಕಿಪಿಡಿಯದ ಪರಿಚಯ, ಸಂಸ್ಕೃತದ ಹಿಂದಿನ ಗರಿಮೆಯನ್ನು ಎತ್ತಿ ತೋರಿಸುವ ಮಾಹಿತಿಗಳು, ಮುಂತಾಗಿ ಹಲವಾರು ಸಂಗತಿಗಳು ಅಲ್ಲಿ ಪ್ರದರ್ಶಿಸಲ್ಪಟ್ಟಿದ್ದವು. ಸಾವಿರಾರು ಜನರು ಪ್ರದರ್ಶಿನಿಯನ್ನು ವೀಕ್ಷಿಸಿ ಪ್ರೇರಿತರಾದದ್ದು ಸತ್ಯ! ಪ್ರದರ್ಶಿನಿಯ ಕೆಲವು ದೃಷ್ಯಗಳಿವು: