ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜುಲೈ 25, 2011

'ವೇದವಿಚಾರ - ಚಿಂತನ'

ಸಹೃದಯರೇ,
     ಚನ್ನರಾಯಪಟ್ಟಣದಲ್ಲಿ 'ವೇದವಿಚಾರ - ಚಿಂತನ' ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದು ಅಲ್ಲಿನ ಸತ್ಸಂಗದ ವತಿಯಿಂದ ಬಂದ ಆಹ್ವಾನಪತ್ರಿಕೆಯ ಪ್ರತಿಯನ್ನು ತಮ್ಮ ಅವಗಾಹನೆಗೆ ಪ್ರಕಟಿಸಿದೆ.
-ಕ.ವೆಂ.ನಾಗರಾಜ್.

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೫:

ಕೇಳಿರಿ:-
ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ || (ಅಥರ್ವ. ೬.೧೧೭.೩.)
     [ಅನೃಣಾಃ ಅಸ್ಮಿನ್] ಋಣರಹಿತರಾಗಿ ಈ ಬ್ರಹ್ಮಚರ್ಯದಲ್ಲಿರೋಣ. [ಪರಸ್ಮಿನ್] ಗಾರ್ಹಸ್ಥ್ಯದಲ್ಲಿಯೂ, [ಅನೃಣಾಃ] ಋಣರಹಿತರಾಗಿರೋಣ. [ತೃತೀಯೇ ಲೋಕೇ] ಮೂರನೆಯದಾದ ವಾನಪ್ರಸ್ಥದಲ್ಲಿಯೂ, [ಅನೃಣಾಃ ಸ್ಯಾಮ] ಋಣರಹಿತರಾಗಿರೋಣ. [ಯೇ ದೇವಯಾನಾಃ] ಯಾವ ಆಧ್ಯಾತ್ಮಿಕ ಗತಿಯ [ಚ] ಮತ್ತು, [ಪಿತೃಯಾಣಾಃ ಲೋಕಃ] ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, [ಸರ್ವಾನ್ ಪಥಃ] ಆ ಎಲ್ಲಾ ಮಾರ್ಗಗಳನ್ನೂ [ಅನೃಣಾಃ ಆ ಕ್ಷಿಯೇಷು] ಋಣರಹಿತರಾಗಿ ಸಂಕ್ರಮಿಸೋಣ.
     ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ.
*********************

ಸೋಮವಾರ, ಜುಲೈ 18, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೪: ಕರ್ಮ

     ಇನ್ನು ಧರ್ಮದ ಎರಡನೆಯ ಅಭಿನ್ನ ಅಂಗವಾದ ಕರ್ಮದ ಬಗೆಗೆ ಆಲೋಚಿಸೋಣ. ಜ್ಞಾನ, ಧರ್ಮದ ಶಿರಸ್ಸಿದ್ದಂತೆ ಎಂದು ಹೇಳಿದ್ದೇವೆ. ಅದೇ ರೂಪಕವನ್ನು ಮುಂದುವರೆಸಿ, ಕರ್ಮ, ಧರ್ಮದ ಕೈಕಾಲುಗಳಿದ್ದಂತೆ ಎನ್ನಬಹುದು. ಕರ್ಮರಹಿತವಾದ ಜ್ಞಾನ ಕೇವಲ ಸಿದ್ಧಾಂತ ಮಾತ್ರ. ಅದಕ್ಕನುಸಾರವಾದ ಕರ್ಮವಿಲ್ಲದಿದ್ದರೆ ಧರ್ಮ ಕೈಕಾಲಿಲ್ಲದ ಹೆಳವನಂತೆ ಪಂಗುವಾಗಿ ಹೋಗುವುದು. ಆದುದರಿಂದ, ಯಜುರ್ವೇದ ಹೇಳುತ್ತಲಿದೆ:-
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ |
ಏವಂ ತ್ವಯ ನಾನ್ಯಥೇತೋsಸ್ತಿ ಕರ್ಮ ಲಿಪ್ಯತೇ ನರೇ || (ಯಜು.೪೦.೨.)
     [ಇಹ] ಈ ಲೋಕದಲ್ಲಿ [ಕರ್ಮಾಣಿ ಕುರ್ವನ್ ಏವ] ಕರ್ಮಗಳನ್ನು ಮಾಡುತ್ತಲೇ, [ಶತಂ ಸಮಾಃ] ನೂರು ವರ್ಷಗಳವರೆಗೆ, [ಜಿಜೀವಿಷೇತ್] ಜೀವಿಸಲಿಚ್ಛಿಸಬೇಕು. [ತ್ವಯಿ ನರೇ] ಮಾನವನಾದ ನಿನ್ನಲ್ಲಿ [ಏವಂ ಕರ್ಮ ನ ಲಿಪ್ಯತೇ] ಹೀಗೆ ಕರ್ಮ ಅಂಟಿಕೊಳ್ಳುವುದಿಲ್ಲ. [ಇತಃ] ಇಲ್ಲಿಂದ [ಅನ್ಯಥಾ ನ ಅಸ್ತಿ] ಬೇರೆ ಮಾರ್ಗವಿಲ್ಲ.
     ಇದೂ ವೈದಿಕ ಧರ್ಮದ ಅದ್ಭುತ ಸೌಂದರ್ಯವೇ. ನಾವು ವೇದಾಂತಿಗಳು, ನಾವು ನಿಷ್ಕರ್ಮರು, ಕರ್ಮ ಮಾಡಿದರೆ ಜಗತ್ತಿಗಂಟಿಕೊಳ್ಳುವೆವು. ಆದುದರಿಂದ ನಾವು ಯಾವ ಕರ್ಮಕ್ಕೂ ಕೈ ಹಾಕುವುದಿಲ್ಲ - ಎಂದು ಹೇಳುವವರಿಗೆ ವೈದಿಕ ಧರ್ಮದಲ್ಲಿ ಸ್ಥಳವಿಲ್ಲ. ನೈಷ್ಕರ್ಮ ಆಲಸ್ಯದ ಮತ್ತೊಂದು ಹೆಸರು. ಶರೀರ - ಆತ್ಮ ಎರಡೂ ಒಟ್ಟಿಗಿರುವವರೆಗೆ ಭೌತಿಕ ಆವಶ್ಯಕತೆಗಳನ್ನು, ಆಹಾರ-ಪಾನೀಯ-ವಸ್ತ್ರಾದಿಗಳನ್ನು ಪಡೆಯಲೇ ಬೇಕಾಗುತ್ತದೆ. ಅದನ್ನು ಪಡೆಯುವುದಕ್ಕಾಗಿ ಮಾತ್ರ ಸಮಾಜವನ್ನಾಶ್ರಯಿಸುವುದು, ಆದರೆ ಸಮಾಜಕ್ಕಾಗಿ ಏನನ್ನೂ ಮಾಡದಿರುವುದು ಮಹಾಪಾಪ. ಏಕೆಂದರೆ, ಆ ಆಲಸ್ಯವೃತ್ತಿ ಆತ್ಮನ ಮೇಲೆ ಮಹಾನ್ ಋಣದ ಹೊರೆಯನ್ನು ಹೇರುತ್ತದೆ. ಋಣಿಯಾದವನು ಸಮಾಜದ್ರೋಹಿ ಮಾತ್ರವಲ್ಲ, ಆಧ್ಯಾತ್ಮಿಕ ಉನ್ನತಿಗೂ ಅನರ್ಹನಾಗಿ ಹೋಗುತ್ತಾನೆ. ಸಮಾಜದಿಂದ ಪಡೆದ ಮೇಲೆ ಏನಾದರೂ ಕೊಡಲೂ ಬೇಕಾಗುತ್ತದೆ. ನಾವು ಯಾವುದೇ ಆಶ್ರಮದಲ್ಲಿರಲಿ, ಜಗತ್ತಿಗೆ ಹೊರೆಯಾಗಿ, ಋಣಿಗಳಾಗಿ, ಅನ್ನಶತ್ರುಗಳಾಗಿ ಬಾಳಬಾರದು.
****************************
-Pt. Sudhakara Chaturvedi.

ಭಾನುವಾರ, ಜುಲೈ 17, 2011

ಉತ್ತರ ಸಿಕ್ಕಿತು!

     ಅವನ ಪಾಡಿಗೆ ಅವನು ಸುಮ್ಮನೆ ಹೋಗುತ್ತಿದ್ದಾಗ ಎದುರಿಗೆ ಪ್ರಶ್ನೆಯೊಂದು ಅಡ್ಡ ಬಂದಿತು. ಅದನ್ನು ನಿರ್ಲಕ್ಷಿಸಿ ಪಕ್ಕಕ್ಕೆ ಸರಿಸಿ ಹೋಗಲು ಪ್ರಯತ್ನಿಸಿದರೆ ಅದೂ ಪಕ್ಕಕ್ಕೆ ಬಂದು ಉತ್ತರ ಹೇಳಲು ಆಗ್ರಹಿಸಿತು. ಅದನ್ನು ದೂಡಿದಷ್ಟೂ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಿತ್ತು. ಉತ್ತರ ಹೇಳದೆ ಬಿಡುಗಡೆಯಿಲ್ಲವೆಂದು ಅವನಿಗೆ ಮನದಟ್ಟಾಯಿತು. ಅವನಿಗೆ ಉತ್ತರ ಗೊತ್ತಿರಲಿಲ್ಲ. ಅವನು ಉತ್ತರ ಹುಡುಕಲು ಪ್ರಾರಂಭಿಸಿದ. ಪ್ರಶ್ನೆಯೂ ಅವನನ್ನು ನೆರಳಿನಂತೆ ಹಿಂಬಾಲಿಸುತ್ತಲೇ ಇತ್ತು. ಉತ್ತರ ಕಂಡು ಹಿಡಿಯಲು ಅವನು ಹಲವಾರು ವರ್ಷಗಳ ಕಾಲ ಊರೂರು ಅಲೆದ, ಕಾಡು-ಮೇಡುಗಳನ್ನು ಸುತ್ತಿದ. ಎಲ್ಲರನ್ನೂ ವಿಚಾರಿಸಿದ. ಉತ್ತರ ಸಿಗುತ್ತಿರಲಿಲ್ಲ. ಚರ್ಚು, ಮಸೀದಿ, ಮಠ, ಮಂದಿರಗಳಿಗೆ ಭೇಟಿ ಕೊಟ್ಟ. ಉಹುಂ, ಉತ್ತರ ಸಿಗಲಿಲ್ಲ. ಮೌಲ್ವಿ, ಮುಲ್ಲಾ, ಪಾದ್ರಿ, ಅರ್ಚಕರು, ವಿದ್ವಾಂಸರುಗಳು, ಗುರುಗಳು, ಸಾಧು, ಸಂತರನ್ನು ಕಂಡು ಪ್ರಾರ್ಥಿಸಿದ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. ಕೆಲವರು ತಾವು ಹೇಳಿದ ದಾರಿಯಲ್ಲಿ ಹೋದರೆ ಮಾತ್ರ ಉತ್ತರ ಸಿಗುತ್ತದೆ, ಇಲ್ಲದಿದ್ದರೆ ಸಿಗಲು ಸಾಧ್ಯವೇ ಇಲ್ಲ ಎಂದರು. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. ಅವರು ಹೇಳುವುದನ್ನು ಕೇಳುತ್ತಿದ್ದರೆ ಅದು ಸರಿಯಿರಬಹುದು ಎನ್ನಿಸುತ್ತಿತ್ತು. ಇನ್ನೊಬ್ಬರು ಹೇಳುವುದನ್ನು ಕೇಳಿದಾಗ ಇದೂ ಸರಿಯಿರಬಹುದು ಎನ್ನಿಸುತ್ತಿತ್ತು, ಆದರೆ ಸ್ಪಷ್ಟ ಉತ್ತರ ಸಿಗದೆ ಗೊಂದಲವಾಗಿಬಿಡುತ್ತಿತ್ತು. ಪ್ರಶ್ನೆ ಅವನನ್ನು ನೋಡಿ ಗಹಗಹಿಸಿ ನಗುತ್ತಿತ್ತು. ಕೊನೆಗೆ ಸುಸ್ತಾಗಿ ಒಂದೆಡೆ ಕುಳಿತು ಕಣ್ಣು ಮುಚ್ಚಿ ಯಾವ ಉತ್ತರ ಸರಿ ಎಂದು ಆಲೋಚಿಸತೊಡಗಿದ. ಪ್ರಶ್ನೆಯೂ ಆದಿಶೇಷನಂತೆ ಅವನ ಬೆನ್ನ ಹಿಂದೆಯೇ ಕುಳಿತಿತ್ತು. ಸಿಕ್ಕ ಎಲ್ಲಾ ಉತ್ತರಗಳನ್ನು ಮನಸ್ಸಿನಲ್ಲೇ ವಿಮರ್ಶಿಸತೊಡಗಿದ, ಅಳೆದು ತೂಗಿ ನೋಡತೊಡಗಿದ. ಹೀಗೆ ಆಲೋಚಿಸುತ್ತಾ, ಆಲೋಚಿಸುತ್ತಾ ಅವನು ಒಳಗೆ, ಒಳಗೆ, ತನ್ನ ಒಳಗೆ, ತನ್ನ ಅಂತರಂಗದ ಒಳಗೇ ಸಾಗತೊಡಗಿದ. ಹಾಗೆಯೇ ಸಾಗುತ್ತಿದ್ದಾಗ ಅವನಿಗೆ ಕ್ಷೀಣ ಬೆಳಕೊಂದು ಕಂಡಿತು. ಅದನ್ನು ಅನುಸರಿಸಿ ಮುಂದೆ ಮುಂದೆ ಹೋಗತೊಡಗಿದ. ಕ್ರಮೇಣ ಬೆಳಕು ದೊಡ್ಡದಾಗುತ್ತಾ ಹೋಯಿತು. ಕೊನೆಗೊಮ್ಮೆ ಉಜ್ವಲ ಪ್ರಕಾಶ ಕಂಡಿತು. ಅವನಿಗೆ ತಾನು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತ್ತು. ಅದುವರೆಗೆ ಉತ್ತರ ಇದ್ದ ಸ್ಥಳ ಬಿಟ್ಟು ಆತ ಬೇರೆಲ್ಲಾ ಕಡೆ ಹುಡುಕಿದ್ದ. ಉತ್ತರ ಸಿಕ್ಕಿದ ಸಂತೋಷದಿಂದ ಪ್ರಶ್ನೆಗೆ ಉತ್ತರ ಹೇಳಲು ಹೊರಪ್ರಪಂಚಕ್ಕೆ ಬಂದರೆ, ಅಲ್ಲಿ ಪ್ರಶ್ನೆಯೇ ಕಾಣುತ್ತಿರಲಿಲ್ಲ. ಅದು ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ಉತ್ತರದೊಳಗೆ ಐಕ್ಯವಾಗಿಬಿಟ್ಟಿತ್ತು!
(ಚಿತ್ರಕೃಪೆ: ಅಂತರ್ಜಾಲ).
*****************
-ಕ.ವೆಂ.ನಾಗರಾಜ್.

ಶನಿವಾರ, ಜುಲೈ 16, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೩:


ಇಂದ್ರ ಕ್ರತುಂ ನ ಆ ಭರ ಪಿತಾ ಪುತ್ರೇಭ್ಯೋ ಯಥಾ |
ಶಿಕ್ಷಾ ಣೋ ಅಸ್ಮಿನ್ ಪುರುಹೂತ ಯಾಮನಿ ಜೀವಾ ಜ್ಯೋತಿರಶೀಮಹಿ || (ಋಕ್. ೭.೩೨.೨೬.)
     [ಇಂದ್ರ] ಓ ಶಕ್ತಿಮಾನ್ ಪ್ರಭೋ! [ಯಥಾ ಪಿತಾ ಪುತ್ರೇಭ್ಯಃ] ಯಾವ ರೀತಿ ತಂದೆಯು ತನ್ನ ಮಕ್ಕಳಿಗೆ ತುಂಬಿಕೊಡುತ್ತಾನೋ ಅದೇ ರೀತಿ, [ ನಃ ಕ್ರತುಂ ಆಭರ] ನಮಗೆ ಉತ್ತಮ ಆಲೋಚನೆಗಳನ್ನು ತುಂಬಿಕೊಡು. [ಜೀವಾಃ] ಜೀವರಾದ ನಾವು, [ಜ್ಯೋತಿಃ ಆಶೀಮಹಿ] ಜ್ಯೋತಿಯನ್ನು ಸೇವಿಸೋಣ.
     ಈ ಜ್ಯೋತಿ, ಜೀವನಪಥವನ್ನು ಬೆಳಗುವ ನಿರ್ಮಲಜ್ಞಾನ ಎಂಬುದನ್ನು ನೆನಪಿಟ್ಟರೆ, ವೈದಿಕ ಧರ್ಮದ ಸೌಂದರ್ಯ ವ್ಯಕ್ತವಾಗುತ್ತದೆ. ಈ ಜಾನ, ಪ್ರಾಕೃತಿಕ ಜಗತ್ತಿನಿಂದಾರಂಭಿಸಿ, ಪರಮಾತ್ಮನವರೆಗಿನ ಸಮಸ್ತ ತತ್ತ್ವಗಳನ್ನೂ ಯಥಾವತ್ತಾಗಿ ಅರಿಯುವುದೇ ಆಗಿದೆ. ಈ ಬಗೆಯ ಅರಿವಿಲ್ಲದೆ, ಮಾನವಜೀವನದ ವಿಕಾಸವಾಗುವುದು ಹಾಗೂ ಅವನು ತನ್ನ ಗುರಿಯನ್ನು ಮುಟ್ಟುವುದು ಅಸಂಭವ. ಅದಕ್ಕಾಗಿಯೇ ವೈದಿಕ ಧರ್ಮೀಯರು ಪ್ರತಿದಿನವೂ ಮಾಡುವ ಸಂಧ್ಯಾವಂದನೆಯಲ್ಲಿ ನಾವು ಈ ಮಂತ್ರವನ್ನು ಕಾಣುತ್ತೇವೆ:-
ಉದ್ವಯಂ ತಮಸಸ್ಪರಿ ಸ್ವಃ ಪಶ್ಯಂತ ಉತ್ತರಮ್ |
ದೇವಂ ದೇವತ್ರಾ ಸೂರ್ಯಮಗನ್ಮ ಜ್ಯೋತಿರುತ್ತಮಮ್ || (ಯಜು. ೩೫.೧೪.)
     [ವಯಮ್] ನಾವು, [ತಮಸಃ ಪರಿ] ಅಂಧಕಾರದಿಂದ ಮೇಲೆದ್ದು, [ಉತ್] ಜಗದುತ್ಪತ್ತಿಗೆ ಉಪಾದಾನವಾದ ಪ್ರಕೃತಿಯನ್ನೂ, [ಉತ್ತರಂ ಸ್ವಃ] ಅದಕಿಂತ ಶ್ರೇಷ್ಠನಾದ, ಸುಖರೂಪನಾದ ಜೀವಾತ್ಮನನ್ನೂ, [ಪಶ್ಶಂತಃ] ನೋಡುತ್ತಾ, [ದೇವತ್ರ] ವಿದ್ವನ್ಮಂಡಲದಲ್ಲಿ [ಉತ್ತಮಂ ಜ್ಯೋತಿಃ] ಸರ್ವಶ್ರೇಷ್ಠನಾದ ಜ್ಞಾನಸ್ವರೂಪನೂ, [ದೇವಂ ಸೂರ್ಯಮ್] ಪ್ರಕಾಶಮಯನೂ, ಸರ್ವಧಾತೃವೂ ಆದ ವಿಶ್ವಸಂಚಾಲಕ ಪ್ರಭುವನ್ನು, [ಅಗನ್ಮ] ಸಾಕ್ಷಾತ್ಕಾರ ಮಾಡಿಕೊಳ್ಳೋಣ.
     ಪ್ರಕೃತಿಯ ಜ್ಞಾನದಿಂದ ಇಹಲೋಕದ ಸುಧಾರಣೆ; ಸ್ವಂತ ಆತ್ಮನ ಜ್ಞಾನದಿಂದ ತನ್ನ ವ್ಯಕ್ತಿಗತ ಸುಧಾರಣೆ ಹಾಗೂ ಪರಮಾತ್ಮ ಜ್ಞಾನದಿಂದ ಮೋಕ್ಷಸಾಧನೆ - ಹೀಗೆ ಮಾನವಜೀವನದ ಸಾಫಲ್ಯ ಸಿದ್ಧಿಸುತ್ತದೆ. ವೇದೋಕ್ತವಾದ ಈ ಜ್ಞಾನ ಕೇವಲ ಆಧ್ಯಾತ್ಮಿಕ ವಿಷಯಗಳಿಗೆ ಮಾತ್ರ ಸಂಬಂಧಿಸಿದುದಲ್ಲ; ಕೇವಲ ದಾರ್ಶನಿಕ ಉಗ್ಗಡಣೆಯಲ್ಲ; ಈ ಪ್ರಪಂಚದಲ್ಲಿ ಸಾಂಸಾರಿಕ ಜೀವನವನ್ನು ಉತ್ತಮ ಮಟ್ಟಕ್ಕೇರಿಸಲು ಸುಖೋತ್ಕರ್ಷದ ಪ್ರಾಪ್ತಿಗಾಗಿ ವೈಜ್ಞಾನಿಕ ಆವಿಷ್ಕಾರಗಳನ್ನೂ, ಇತರ ಸಾಮಾಜಿಕ - ಆರ್ಥಿಕ - ರಾಜಕೀಯ - ಪಾರಿವಾರಿಕ ಹಾಗೂ ವೈಜ್ಞಾನಿಕ ಜೀವನಗಳನ್ನು ಉನ್ನತಗೊಳಿಸುವ ಸಾಧನವಾದ ಲೌಕಿಕ ಜ್ಞಾನವನ್ನೂ ಒಳಗೊಂಡಿದೆ ಎಂಬುದನ್ನು ಯಾರೂ ಮರೆಯಬಾರದು. ಪ್ರಾಪಂಚಿಕ ಅಥವಾ ಭೌತಿಕವಿದ್ಯೆಗೆ ತಿಲಾಂಜಲಿಯಿತ್ತು, ಕೇವಲ ಆಧ್ಯಾತ್ಮಿಕ ವಿದ್ಯೆಯನ್ನೇ ಸಾಧಿಸಲು ಹೊರಟವರು, ಆಧ್ಯಾತ್ಮಿಕ ವಿದ್ಯೆಗೆ ತಿಲಾಂಜಲಿಯಿತ್ತು ಕೇವಲ ಭೌತಿಕ ವಿದ್ಯೆಗೆ ಗಮನ ಕೊಡುವವರಿಗಿಂತ ಹೆಚ್ಚು ಗಾಢವಾದ ಅಂಧಕಾರದಲ್ಲಿ ಬೀಳುವರು ಎಂದು ಯಜುರ್ವೇದ ಹೇಳುತ್ತದೆ. ಕೊನೆಗೆ,
ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ |
ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾಮೃತಮಶ್ನುತೇ || (ಯಜು. ೪೦.೧೧.)
ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ |
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ || (ಯಜು.೪೦.೧೪.)
     [ಸಂಭೂತಿಮ್] ಉತ್ಕೃಷ್ಟವಾದ ತತ್ತ್ವವಾದ ಪರಮಾತ್ಮನನ್ನೂ, [ಚ] ಮತ್ತು, [ವಿನಾಶಂಚ] ನಾಶವಾನ್ ಜಗತ್ತನ್ನೂ, [ಯಃ] ಯಾವನು, [ತತ್ ಉಭಯಂ ಸಹ] ಎರಡನ್ನೂ ಜೊತೆಯಲ್ಲಿಯೇ, [ವೇದ] ತಿಳಿಯುತ್ತಾನೋ ಅವನು, [ವಿನಾಶೇನ] ನಾಶವಾನ್ ಜಗತ್ತಿನ ಜ್ಞಾನದಿಂದ, [ಮೃತ್ಯುಂ ತೀರ್ತ್ವಾ] ಮರ್ತ್ಯಲೋಕವನ್ನು ದಾಟಿ, [ಸಂಭೂತ್ಮಾ] ಉತ್ಕೃಷ್ಟನಾದ ಪರಮಾತ್ಮನ ಜ್ಞಾನದಿಂದ, [ಅಮೃತಂ ಅಶ್ನುತೇ] ಅಮರತ್ವವನ್ನು ಪಡೆಯುತ್ತಾನೆ.
     [ವಿದ್ಯಾಂ ಚ] ಆಧ್ಯಾತ್ಮಿಕ ವಿದ್ಯೆಯನ್ನೂ [ಅವಿದ್ಯಾಂ ಚ] ಭೌತಿಕ ವಿದ್ಯೆಯನ್ನೂ. [ಯಃ] ಯಾವನು, [ತತ್ ಉಭಯಂ ಸಹ] ಎರಡನ್ನೂ ಜೊತೆಯಲ್ಲಿಯೇ, [ವೇದ] ತಿಳಿಯುತ್ತಾನೋ ಅವನು, [ಅವಿದ್ಯಯಾ] ಭೌತಿಕ ವಿದ್ಯೆಯಿಂದ, [ಮೃತ್ಯುಂ ತೀರ್ತ್ವಾ] ಮರ್ತ್ಯಲೋಕವನ್ನು ದಾಟಿ, [ವಿದ್ಯಯಾ] ವಿದ್ಯೆಯಿಂದ [ಅಮೃತಂ ಅಶ್ನುತೇ] ಅಮರತ್ವವನ್ನು ಪಡೆಯುತ್ತಾನೆ.
     ಈ ಮಂತ್ರಗಳ ಮೇಲೆ ಟೀಕೆ ಅನಾವಶ್ಯಕ. ವೈದಿಕ ಧರ್ಮ ಜ್ಞಾನಾಶ್ರಿತ ಧರ್ಮ. ಇದರಲ್ಲಿ ಅಜ್ಞಾನಕ್ಕೆಡೆಯಿಲ್ಲ. ಈ ಜ್ಞಾನ ಸರ್ವವಿಷಯಾಚ್ಛಾದಕ, ಶಾಶ್ವತ ತತ್ತ್ವಗಳ ಹಾಗೂ ಅಶಾಶ್ವತ ತತ್ತ್ವಗಳ ನಿರ್ಭ್ರಾಂತ ಜ್ಞಾನ ಪಡೆದೇ ಮಾನವನು ಆದರ್ಶಮಾನವನಾಗಿ, ಇಹಪರಗಳೆರಡರಲ್ಲೂ ಸಾಧಿಸಿಕೊಳ್ಳುವನು. ಅಂಧವಿಶ್ವಾಸಕ್ಕೆ, ಅಜ್ಞಾನದ ಆಡಳಿತಕ್ಕೆ ವೈದಿಕ ಧರ್ಮದಲ್ಲಿ ಸೂಜಿಯ ಮೊನೆಯಷ್ಟೂ ಜಾಗವಿಲ್ಲ.
************************
-ಪಂ.ಸುಧಾಕರ ಚತುರ್ವೇದಿ.

ಗುರುವಾರ, ಜುಲೈ 14, 2011

ಅರಿವು



ನಮ್ಮವರೆಂಬರು ನಮ್ಮವರಲ್ಲ; ಮೋಹಕೆ ಸಿಲುಕಿ ಬಳಲಿದೆನಲ್ಲ |
ದೇವ ನಿನ್ನನು ನೆನೆಯಲೆ ಇಲ್ಲ; ಹುಟ್ಟಿನ ಮಹತಿ ತಿಳಿಯಲೆ ಇಲ್ಲ ||ಪ||


ಕಂಡದ್ದೆಲ್ಲ ಬಯಸಿದೆನಲ್ಲ: ಸಿಕ್ಕದೆ ಇರಲು ಶಪಿಸಿದೆನಲ್ಲ |
ಇಲ್ಲದ ಬಯಸಿ ಕೊರಗಿದೆನಲ್ಲ; ಇದ್ದುದ ಬಿಟ್ಟು ಕೆಟ್ಟೆನಲ್ಲ ||೧||


ಚಪಲತೆ ಕಣ್ಣನು ಮುಚ್ಚಿತಲ್ಲ; ನಿಜ ಕಾಣದಾಯಿತಲ್ಲ |
ಚಂಚಲ ಬುದ್ಧಿ ಆಡಿದ ಆಟಕೆ ಎಡವಿ ಬಿದ್ದೆನಲ್ಲಾ ||೨||


ಸಜ್ಜನ ಸಂಗವ ಮಾಡಲಿಲ್ಲ; ಸದ್ಗತಿ ಸಿಗಲಿಲ್ಲ |
ಕೋಪವು ಮತಿಯ ತಿಂದಿತಲ್ಲ; ಮನಸೇ ಸರಿಯಿಲ್ಲ ||೩||


ಮಿಗಿಲಾರೆಂದು ಬೀಗಿದೆನಲ್ಲ; ನಗೆಪಾಟಲಾಯಿತಲ್ಲ |
ರಜೋ ತಮಗಳ ಆರ್ಭಟದಲ್ಲಿ ಸತ್ವ ಸತ್ತಿತಲ್ಲಾ ||೪||


ನಾನು ಎಂಬುದು ನಿಜವಲ್ಲ; ನಾನೇ ಎಂಬುದು ತರವಲ್ಲ |
ನಿನ್ನನು ಬಿಟ್ಟು ನಾನೆಲ್ಲೆಂಬುದ ಅರಿಯಲಿಲ್ಲವಲ್ಲಾ ||೫||
********************
-ಕ.ವೆಂ.ನಾಗರಾಜ್.

ಗುರುವಾರ, ಜುಲೈ 7, 2011

ಆಯುರ್ಧಾರಾ - ೩: ಆಯುರ್ವೇದ ಅವತರಣ:



ಚತುರ್ಮುಖ ಬ್ರಹ್ಮ

         ಚರಕ ಸಂಹಿತೆಯಲ್ಲಿ ಆಯುರ್ವೇದ ಶಾಶ್ವತ ಹಾಗೂ ಅನಾದಿ ಎಂದು ವರ್ಣಿಸಲಾಗಿದೆ. ಎಲ್ಲಾ ಸಂಹಿತೆಗಳಲ್ಲೂ ಆಯುರ್ವೇದದ ಮೂಲ ಕರ್ತೃ ಬ್ರಹ್ಮ ಎಂದು ಹೇಳಲಾಗಿದೆ. ಸುಶ್ರುತ ಸಂಹಿತೆಯಲ್ಲಿ, ಬ್ರಹ್ಮನು ಸೃಷ್ಠಿ ರಚನೆಗೂ ಮುನ್ನ ಪ್ರಜೆಗಳ ಹಿತಕ್ಕಾಗಿ ಶತಸಹಸ್ರ (೧೦೦೦೦೦) ಶ್ಲೋಕ, ಸಹಸ್ರ(೧೦೦೦) ಅಧ್ಯಾಯಗಳನ್ನುಳ್ಳ ’ಆಯುರ್ವೇದ’ ಎಂಬ ಅಥರ್ವ ವೇದದ ಉಪಾಂಗವನ್ನು ರಚಿಸಿದನು ಎಂದು ಉಲ್ಲೇಖಿಸಲಾಗಿದೆ. 
         ಆಯುರ್ವೇದದ ಅವತರಣದಲ್ಲಿ ಮುಖ್ಯವಾಗಿ ಎರಡು ಸಂಪ್ರದಾಯಗಳಿವೆ. ೧. ಆತ್ರೇಯ ಸಂಪ್ರದಾಯ. ೨. ಧನ್ವಂತರಿ ಸಂಪ್ರದಾಯ. 

     ಆತ್ರೇಯ ಸಂಪ್ರದಾಯದ ಪ್ರಕಾರ, ಬ್ರಹ್ಮನು ಆಯುರ್ವೇದವನ್ನು ದಕ್ಷ ಪ್ರಜಾಪತಿಗೆ ತಿಳಿಸಿದನು. ಅವನಿಂದ ಅದು ಕ್ರಮವಾಗಿ ಅಶ್ವಿನಿ ಕುಮಾರರು, ಇಂದ್ರ, ಭಾರದ್ವಾಜ ಮುನಿ, ಪುನರ್ವಸು ಆತ್ರೇಯ, ಅಗ್ನಿವೇಶಾದಿ ಮುನಿಗಳಿಗೆ ತಿಳಿಸಲ್ಪಟ್ಟಿತು. ಈ ಸಂಪ್ರದಾಯ ಕಾಯ ಚಿಕಿತ್ಸಾ ಪದ್ಧತಿಗೆ ಒತ್ತು ನೀಡುತ್ತದೆ.
ಪುನರ್ವಸು ಆತ್ರೇಯ ಹಾಗು ಅಗ್ನಿವೇಶಾದಿ ೬ ಶಿಶ್ಯಂದಿರು
     ಧನ್ವಂತರಿ ಸಂಪ್ರದಾಯದ ಪ್ರಕಾರ ಬ್ರಹ್ಮನಿಂದ ಇಂದ್ರನವರೆಗಿನ ಅವತರಣ ಕ್ರಮ ಹಾಗೇ ಇದ್ದು, ನಂತರ ಅದು ಕಾಶಿರಾಜ ದಿವೋದಾಸ ಧನ್ವಂತರಿಗೆ ತಿಳಿಸಲ್ಪಟ್ಟಿತು. ಅವನಿಂದ ಅದನ್ನು (ಆಯುರ್ವೇದದ ಜ್ಞಾನವನ್ನು) ಸುಶ್ರುತಾದಿ ಮುನಿಗಳು ಗ್ರಹಿಸಿದರು. ಈ ಸಂಪ್ರದಾಯ ಶಲ್ಯ ಚಿಕಿತ್ಸಾ(surgery) ಪದ್ಧತಿಗೆ ಒತ್ತು ನೀಡುತ್ತದೆ.
ಸುಶ್ರುತ
ಆಯುರ್ವೇದದ ಮೂಲ ಉದ್ದೇಶ :
          ಆಯುರ್ವೇದ ಮುಖ್ಯವಾಗಿ ಎರಡು ಉದ್ದೇಶಗಳನ್ನು ಹೊಂದಿದೆ .

೧. ’ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ’- ಆರೋಗ್ಯವಂತರ ಆರೋಗ್ಯವನ್ನು ಕಾಪಾಡುವುದು.
೨. ’ಆತುರಸ್ಯ ವಿಕಾರ ಪ್ರಶಮನಂ ಚ’- ರೋಗಿಗಳ ರೋಗವನ್ನು ಗುಣಪಡಿಸುವುದು.
      

ಬುಧವಾರ, ಜುಲೈ 6, 2011

ಕೈವಲ್ಯೋಪನಿಷತ್ ಆಧಾರಿತ ಧ್ಯಾನ


     ಹಾಸನದ ಶ್ರೀ ಶಂಕರ ಮಠದಲ್ಲಿ ಇತ್ತೀಚಿಗೆ ತಿಪಟೂರಿನ ಶ್ರೀ ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯ ರಿಂದ ಕೈವಲ್ಯೋಪನಿಷತ್ ಆಧಾರಿತ ಧ್ಯಾನದ ತರಗತಿ ನಡೆಯಿತು. ಎರಡು ದಿನಗಳ ಧ್ಯಾನದ ಪ್ರವಚನದ ರೆಕಾರ್ಡ್ ಇಲ್ಲಿ ಪ್ರಕಟಿಸಿದೆ. ಮನಸ್ಸನ್ನು ಪ್ರಶಾಂತಗೊಳಿಸಬಲ್ಲ ಇಂತಹ ಧ್ಯಾನದಿಂದ ನಿಜಕ್ಕೂ ಉಪಯೋಗವಾಗುತ್ತದೆ. 

ವೈದ್ಯರೋ ? ಕೊಲೆಗಡುಕರೋ?

* ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಪ್ರತಿ ವರ್ಷ ಒಂದು ಕೋಟಿ ೨೫ ಲಕ್ಷಕ್ಕಿಂತಲೂ ಹೆಚ್ಚು ಮಂದಿ ಹೃದಯ ರೋಗಗಳಿಂದ ಸಾವನ್ನಪ್ಪುತ್ತಾರೆ.
* ಇದು ಈ ವರೆಗೆ ಪ್ರಪಂಚದಲ್ಲಿ ನಡೆದ ಎಲ್ಲಾ ಯುದ್ಧಗಳಲ್ಲೂ ಮರಣ ಹೊಂದಿದವರ ಒಟ್ಟು ಸಂಖ್ಯೆಗಿಂತ ಅತೀ ಹೆಚ್ಚು.
* ವಿಶೇಷವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲೇ ಇದು ನಂ.೧ ಕಿಲ್ಲರ್!
* ಅತೀ ದುಬಾರೀ ಚಿಕಿತ್ಸೆ ಮತ್ತು ಆಧುನಿಕ ಶಸ್ತ್ರಚಿಕಿತ್ಸಾ ಕ್ರಮಗಳಿದ್ದರೂ ಕೂಡಾ ಸಾವಿನ ಸಂಖ್ಯೆ ನಿಯಂತ್ರಣವಾಗಿಲ್ಲ.
* ಆಧುನಿಕ ವೈದ್ಯಶಾಸ್ತ್ರದ ಪ್ರಕಾರ ಕೊಲೆಸ್ಟ್ರಾಲ್ ಒಂದೇ ಇದಕ್ಕೆ ಮೂಲ ಕಾರಣ. ಅಂತೆಯೇ ಅದನ್ನು ನಿಯಂತ್ರಿಸುವ ನಾನಾ ತರಹದ ಔಷಧಿಗಳು (statins) ಚಾಲ್ತಿಯಲ್ಲಿದ್ದು ಅವನ್ನೇ ಹೆಚ್ಚು ಹೆಚ್ಚು ಪ್ರಚುರ ಪಡಿಸಿ ರೋಗಿಗಳಿಗೆ ಸೂಚಿಸಲಾಗುತ್ತಿದೆ.
* ಬರೀ statin ಔಷಧಿಗಳನ್ನೇ ಮಾರಾಟ ಮಾಡುವ ೯ ಕಂಪನಿಗಳ ಒಟ್ಟು ಆದಾಯ ಉಳಿದ 490 Fortune-500 ಕಂಪನಿಗಳ ಒಟ್ಟು ಆದಾಯಕ್ಕಿಂತ ಹೆಚ್ಚು.
* ನಾನಾ ಮಾತ್ರೆಗಳ ಪರ್ವತಗಳನ್ನೇ ಸುರಿದರೂ (ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ) ಹೃದಯ ರೋಗ ಮಾತ್ರ ಕಾಳ್ಗಿಚ್ಚಿನಂತೆ ಹಬ್ಬುತ್ತಲೇ ಇದೆ.
* ಹೃದಯ ಶಾಸ್ತ್ರ, ಹಾಗಾಗಿ, ತಪ್ಪು ಕಾರಣದ ಹಿಂದೆ ಬಿದ್ದಿದೆ.
* ಡಾ:ನಾರ್ಟನ್ ಹಡ್ಲರ್, ಎಂ.ಡಿ., ಅವರ ಪ್ರಕಾರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಅರ್ಥವೇ ಇಲ್ಲ. ಏಕೆಂದರೆ ಶೇ.೯೫ ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಖಾಯಿಲೆ ಮರುಕಳಿಸುತ್ತದೆ.
* ಡಾ:ಜೂಲಿಯನ್ ವಿಟಾಖರ್, ಎಂ.ಡಿ., ರವರ ಪ್ರಕಾರ ಆಂಜಿಯೋಪ್ಲಾಸ್ಟಿ ಬಹು ಅಪಾಯಕಾರೀ ಚಿಕಿತ್ಸೆ. ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ. ಈ ವಿಧಾನವನ್ನು ಅಳವಡಿಸಿಕೊಂಡವರಲ್ಲಿ ಹೆಚ್ಚಿನ ಸಾವಿನ ಪ್ರಮಾಣ, ಹೆಚ್ಚಿನ ಮರುಕಳಿಸಿದ ಹೃದಯಾಘಾತ ಮತ್ತು ಪುನ: ಶಸ್ತ್ರಚಿಕಿತ್ಸೆಯ ಅವಶ್ಯಕತೆ ಕಂಡು ಬಂದಿದೆ.
* ಅನೇಕ ಹೃದಯ ತಜ್ಞರು ಅನವಶ್ಯವಾಗಿ ರೋಗಿ ಮತ್ತು ಅವರ ಆಪ್ತರನ್ನು ಕೂಡಲೇ ಸರ್ಜರಿ ಮಾಡದಿದ್ದರೆ ಅಪಾಯ ಎಂದು ಹೇಳಿ ಭಯ ಹುಟ್ಟಿಸುತ್ತಾರೆ. ಡಾ: ವಿಟಾಖರ್ ರವರು ಪ್ರಸಿದ್ಧ ವೈದ್ಯಕೀಯ ಪತ್ರಿಕೆಯಲ್ಲಿ ಬರೆಯುತ್ತಾ ಅಂತಹ ಶೇ.೯೮.೪ ಕ್ಕಿಂತ ಹೆಚ್ಚಿನವರು ಸರ್ಜರಿ ಇಲ್ಲದೇ ಆರೋಗ್ಯವಾಗಿರುವ ವಿಚಾರವನ್ನು ಸ್ಪಷ್ಟಪಡಿಸುತ್ತಾರೆ.
* ಹಾರ್ವರ್ಡ ವೈದ್ಯಕೀಯ ಸಂಸ್ಥೆಯ ಡಾ: ಥಾಮಸ್ ಗ್ರಾಬೋಸ್ ರವರು ಒಂದು ವಿಮರ್ಶಾತ್ಮಕ ಸಂಶೋಧನೆ ನಡೆಸಿದರು. ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲ್ಪಟ್ಟ ಸುಮಾರು ೧೬೮ ಪ್ರಕರಣಗಳಲ್ಲಿ ಅವರು ಪುನರ್-ಪರಿಶೀಲಿಸಿದಾಗ ಕೇವಲ ೬ ಜನ ಮಾತ್ರಾ ಅಂತಹ ಅತೀ ದುಬಾರಿ ಮತ್ತು ಮಾರಣಾಂತಿಕ ಶಸ್ತ್ರಚಿಕಿತ್ಸೆಗೆ ಅರ್ಹರೆಂಬುದು ಬೆಳಕಿಗೆ ಬಂತು. ಈ ಒಂದು ಅನೈತಿಕ ವ್ಯಾಪಾರೀಕರಣದ ಪ್ರವೃತ್ತಿ ಅಮೆರಿಕದ ಒಂದು ದೊಡ್ಟ ನಾಟಕ ಎಂದು ಡಾ:ಮೈಕೇಲ್ ಓಜ್ನರ್ ಎಂ.ಡಿ. ಖಂಡಿಸಿದ್ದಾರೆ.
* ೧೯೭೭ ರಿಂದ ಸತತವಾಗಿ ನಡೆಸಿದ ಸಂಶೋಧನೆಗಳಿಂದ ಸ್ಪಷ್ಟವಾಗುವ ಅಂಶವೆಂದರೆ, ಬೇರೆ ಚಿಕಿತ್ಸೆಗಳಿಗಿಂತ ಹೃದಯ ಶಸ್ತ್ರಚಿಕಿತ್ಸೆಯಿಂದ ಉಂಟಾಗುತ್ತಿರುವ ಅನಾಹುತಗಳೇ ಹೆಚ್ಚು.
* ಶಸ್ತ್ರಚಿಕಿತ್ಸೆಯೇ ಅಂತಿಮ ಪರಿಹಾರ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಂಶೋಧನೆಗಳ ಆಧಾರವಿಲ್ಲ. ಆದರೆ ಇದರ ಬಗ್ಗೆ ವ್ಯಾಪಾರೀಕರಣದ ಏಕೈಕ ಗುರಿಯುಳ್ಳವರು ಇದೇ ಅಂತಿಮ ಎಂದು ದಾರಿ ತಪ್ಪಿಸುತ್ತಿದ್ದಾರೆ.
* ಡಾ; ವಿಲಿಯಮ್ ಇ. ಬೊಡೆನ್, ಎಂ.ಡಿ., ರವರು ಲಘು ಹೃದಯಾಘಾತವಾಗಿ ಶಸ್ತ್ರಚಿಕಿತ್ಸೆ ಸೂಚಿಸಲ್ಪಟ್ಟ ಸುಮಾರು ೯೨೦ ರೋಗಿಗಳ ಪ್ರಕರಣಗಳನ್ನು ಪರಿಶೀಲನೆಗೆ ಎತ್ತಿಕೊಂಡರು. ಸುಮಾರು ೨ ೧/೨ ವರ್ಷಗಳ ಕಾಲ ಸಂಶೋಧನೆ ನಡೆಸಿದರು. ಅವರಲ್ಲಿ ೪೫೮ ಜನರಿಗೆ ಔಷಧಿಗಳನ್ನು ನೀಡಲಾಯಿತು ಮತ್ತು ಕಾಲಕಾಲಕ್ಕೆ ಟ್ರೆಡ್ ಮಿಲ್ ನಂತಹ ಬಾಹ್ಯ ಸರಳ ಪರೀಕ್ಷೆಗಳನ್ನು ನಡೆಸಲಾಯಿತು. ಉಳಿದ ೪೬೨ ಜನ ಆಂಜಿಯೋಗ್ರಾಂ ಬಳಿಕ ಆಂಜಿಯೋಪ್ಲಾಸ್ಟಿ ಅಥವಾ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರು. ಫಲಿತಾಂಶಗಳು ಅಚ್ಚರಿ ಮೂಡಿಸುವಂತಿತ್ತು. ಮೊದಲ ೯ ದಿನಗಳಲ್ಲೇ ಶಸ್ತ್ರಚಿಕಿತ್ಸೆಗೊಳಗಾದ ೨೧ ರೋಗಿಗಳು ಸತ್ತರು. ಬರೀ ಔಷಧೋಪಚಾರ ಪಡೆದವರಲ್ಲಿ ಕೇವಲ ೬ ಮಂದಿ ಮೃತರಾದರು. ೨ ೧/೨ ವರ್ಷಗಳ ನಂತರ ಶಸ್ತ್ರಚಿಕಿತ್ಸೆಗೊಳಗಾದವರಲ್ಲಿ ೮೦ ಜನ ಮೃತಪಟ್ಟರೆ, ಬರೀ ಔಷಧೋಪಚಾರ ಪಡೆದ ವರ್ಗದಲ್ಲಿ ಕೇವಲ ೫೯ ಜನ ಮಾತ್ರ ಮೃತರಾದರು.
* ಆದುದರಿಂದ ಶಸ್ತ್ರಚಿಕಿತ್ಸೆಯೇ ಅಂತಿಮ ಪರಿಹಾರ ಎನ್ನುವ ಈಗಿನ ಪ್ರವೃತ್ತಿ ಕೇವಲ ಒಂದು ಢೋಂಗಿತನ. ಸತ್ಯ ಮೇಲಿನ ಸಂಶೋಧನೆಯಿಂದ ಸ್ಷಷ್ಟವಾಗುತ್ತದೆ.
* ಡಾ:ಡ್ವೈಟ್ ಲಂಡೆಲ್, ಖ್ಯಾತ ಹೃದಯತಜ್ಞ, ಇವರು ಬರೆದ The Cure for Heart Diseases ಮತ್ತುe-book : The Great Cholesterol Lie ನಲ್ಲಿ ಹೃದಯ ಶಸ್ತ್ರಚಿಕಿತ್ಸೆಗಳ ಮತ್ತು ಸ್ಟ್ಯಾಟಿನ್ ಔಷಧಿಗಳ ಅರ್ಥಹೀನತೆಯನ್ನು ವಿವರಿಸಿದ್ದಾರೆ. ಹೃದಯ ಶಸ್ತ್ರಚಿಕಿತ್ಸಕರಾಗಿ ಅವರ ದಿನಾದಾಯ ರೂ.೫೦ ಲಕ್ಷ ವಿತ್ತು. ಆದರಿಂದು ಪ್ರತಿ ರೋಗಿಗೆ ಕೇವಲ ರೂ.೫೦ ರಂತೆ (ಸರಳ ಔಷಧಿಗಳನ್ನು ಸೂಚಿಸಿ) ಪಡೆದು ಸಂತಸ ಕಂಡುಕೊಂಡಿದ್ದಾರೆ. ಅಮೆರಿಕನ್ ಹಾರ್ಟ ಅಸೋಷಿಯೇಷನ್ ಮತ್ತು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಫೆಲೋ ಮತ್ತು ಮಂಡಳಿ ಪ್ರಮಾಣಿತ ಹೃದಯತಜ್ಞರಾದ ಡಾ: ಮೈಕೇಲ್ ಓಜನರ್, ಎಂ.ಡಿ., ರವರು ತಮ್ಮ ಪುಸ್ತಕ: The Great American Heart Hoax ನಲ್ಲಿ ಹೀಗೆ ಬರೆದಿದ್ದಾರೆ:
- ೧೯೭೦ ರ ಅಂತ್ಯದಲ್ಲಿ ಮತ್ತು ೧೯೮೦ ರ ಪೂರ್ವದಲ್ಲಿ ನಡೆಸಿದ ಸಂಶೋಧನೆಗಳ ರೀತ್ಯಾ ಸಾಂಪ್ರದಾಯಿಕ ಚಿಕಿತ್ಸೆಗಳು ಬೈ-ಪಾಸ್ ಸರ್ಜರಿಗಿಂತ ಹೆಚ್ಚು ಪರಿಣಾಮಕಾರಿ.
- ಶಸ್ತ್ರಚಿಕಿತ್ಸೆಗೆ ಒಳಗಾದವರು ಶಸ್ತ್ರಚಿಕಿತ್ಸೆಗೆ ಒಳಗಾಗದವರಿಗಿಂತ ಹೆಚ್ಚು ಕಾಲ ಬದುಕಲಿಲ್ಲ ಮತ್ತು ಹೆಚ್ಚಿನ ಮರುಕಳಿಸಿದ ಹೃದಯಾಘಾತಗಳನ್ನು ಎದುರಿಸಿದ್ದರು.
- ಆಂಜಿಯೋಪ್ಲಾಸ್ಟಿ ಸಹ ಹೆಚ್ಚಿನ ಉತ್ತೇಜನಕರ ಫಲಿತಾಂಶ ತೋರಲಿಲ್ಲ. ಬದಲಾಗಿ ಅದು ಮರಣದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿತ್ತು.
- ಡಾ: ಓಜನರ್ ಪ್ರಕಾರ ಸ್ಟೆಂಟ್ ಗಳು (ಸ್ವದೇಶಿ - ವಿದೇಶೀ ಎಂದು ಹೇಳಿ ದೊಡ್ಡ ಮೊತ್ತ ಕೀಳುವ ದಂಧೆ - ಸ್ಟಂಟು!) ಕೂಡಾ ಅನುಪಯುಕ್ತ ಮತ್ತು ಅಪಾಯಕಾರಿ. ಅದರ ಅಳವಡಿಕೆಯಿಂದ ಮರುಕಳಿಸುವ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳೇ ಹೆಚ್ಚು. ಸ್ಟೆಂಟ್ ಅಳವಡಿಸಿದ ೧/೩ ರಷ್ಟು ಜನರಲ್ಲಿ ೬ ತಿಂಗಳೊಳಗೆ ರಕ್ತನಾಳದ ಬ್ಲಾಕೇಜ್ (ತಡೆ) ಪುನ: ಕಾಣಿಸಿಕೊಂಡಿದೆ. ಸ್ಟೆಂಟ್ ಹಾಕಿದ ಭಾಗದಲ್ಲಿ ಅನಿರೀಕ್ಷಿತವಾಗಿ ರಕ್ತ ಹೆಪ್ಪುಗಟ್ಟಿ ತಕ್ಷಣ ಹೃದಯ ಸ್ತಂಭನ ಆಗುವ ಸಂದರ್ಭಗಳೂ ಹೆಚ್ಚು.
* ಅಮೆರಿಕನ್ ಹಾರ್ಟ ಅಸೋಷಿಯೇಷನ್ ಮತ್ತು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯನ್ನು ಬೆಂಬಲಿಸುವ ಅನೇಕ ವೈದ್ಯರು ಶಸ್ತ್ರಚಿಕಿತ್ಸೆ ಬಿಟ್ಟರೆ ಅನ್ಯಮಾರ್ಗವಿಲ್ಲ ಎಂಬುದನ್ನು ಬಿಟ್ಟರೆ, ಉಳಿದ ಮತ್ತು ಸಾಕಷ್ಟು ಪುರಾವೆ ಸಹಿತ ಒದಗಿಸಿದ ಅನ್ಯ ಮಾರ್ಗಗಳನ್ನು, ಅವರು ಒಪ್ಪಲು ತಯಾರಿಲ್ಲ. ಕಾರಣ ಸುಸ್ಪಷ್ಟ. ಕೇವಲ ಹಣ ಮಾಡುವ ದಂಧೆ ಮತ್ತು ದುರುದ್ದೇಶ.
* ರಕ್ತನಾಳಗಳಲ್ಲಿ ಉಂಟಾಗುವ ಅನೇಕ ಸಣ್ಣಸಣ್ಣ ಬ್ಲಾಕ್ ಗಳನ್ನು ತಾನಾಗೆ ಸರಿಪಡಿಸಿಕೊಳ್ಳುವ ಸ್ವಾಭಾವಿಕ ವ್ಯವಸ್ಥೆ ನಮ್ಮ ದೇಹದೊಳಗೇ ಇದೆ. ಅದು ಹಾಗಾಗದಾದಾಗ ಹೃದಯಾಘಾತವಾಗುವ ಸಂಭವ ಇರುತ್ತದೆ.
* ವಿಶೇಷವಾಗಿ ದೊಡ್ಡ ರಕ್ತನಾಳಗಳು ಬ್ಲಾಕ್ ಆಗಿ ಒಡೆಯುವ ಸಂದರ್ಭಗಳು ಅತೀ ವಿರಳ. ಆದರೆ ಅದು ಹಾಗಾಗಿದೆ ಎಂದು ಸ್ವಾರ್ಥ ಉದ್ದೇಶಕ್ಕಾಗಿ ಹೆದರಿಸುವ ವೈದ್ಯರೇ ಬಹು ಮಂದಿ.
* ಮತ್ತೊಂದು ವಿಶೇಷ ಅಂಶವೆಂದರೆ ದೊಡ್ಡ ರಕ್ತನಾಳಗಳು ಬ್ಲಾಕ್ ಆದರೂ ಸಹಜವಾಗಿಯೇ ಪರ್ಯಾಯ ರಕ್ತನಾಳಗಳು (collateral new blood vessels) ಬ್ಲಾಕ್ ನ್ನು ಬಳಸಿ ಬೇರೆ ಸಂಪರ್ಕ ಕಲ್ಪಿಸಿಬಿಡುತ್ತವೆ. ಇದನ್ನೇ ಡಾ: ಓಜನರ್ ರವರು ಸಹಜ ಬೈ-ಪಾಸ್ ಎಂದು ಕರೆಯುತ್ತಾರೆ. ಈ ಅಂಶವನ್ನೂ ಸಹ ವೈದ್ಯರು ರೋಗಿಗಳಲ್ಲಿ ಮರೆ ಮಾಚುತ್ತಾರೆ.
* ನೀವು ಜೀವಂತ ಬಾಂಬ್ ಮೇಲೆ ಇದ್ದೀರಿ, ನೀವು ಯಾವುದೇ ಕ್ಷಣ ಸಾಯಬಹುದು ಇತ್ಯಾದಿ ಬೆದರಿಕೆಗಳನ್ನು ಶಸ್ತ್ರಚಿಕಿತ್ಸೆ ಬೇಡವೆನ್ನುವ ಅನೇಕರಿಗೆ ವೃತ್ತಿ-ನಿಯತ್ತು ಇಲ್ಲದ ಮತ್ತು ಕಪಟ ವೈದ್ಯರು ಹಾಕುತ್ತಾರೆ. ಉತ್ತಮ ವೈದ್ಯರು ಸಾಕಷ್ಟಿದ್ದಾರೆ. ಆದರೆ ಹಣಕ್ಕಾಗಿಯೇ ವೈದ್ಯ ಮಾಡುವ ವೃತ್ತಿ-ದ್ರೋಹಿಗಳು ಅವರಿಗಿಂತ ಹೆಚ್ಚಾಗಿದ್ದಾರೆ.
* ಡಾ: ವಿಟಾಖರ್ ರವರ ಪ್ರಕಾರ ಇಂತಹ ಮತಿಹೀನ ಚಿಕಿತ್ಸೆಗಳಿಂದ ಅಮೇರಿಕೆಯಲ್ಲೇ ಪ್ರತಿ ವರ್ಷ ೩೩,೦೦೦ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಸಾವಲ್ಲ; ವ್ಯವಸ್ಥಿತ ಹರಣ. ಏಕೆಂದರೆ ಈ ಫಾರ್ಮ ಲಾಬಿ ನಮ್ಮನ್ನು ಹೆದರಿಸಿ, ವಸ್ತುಸ್ಥಿತಿ ಮರೆಮಾಚಿ ಸದಾ ಕತ್ತಲೆಯಲ್ಲೇ ಇಡಲು ನಿರಂತರ ಶ್ರಮಿಸುತ್ತಿದೆ.
* ಶಸ್ತ್ರ ಚಿಕಿತ್ಸೆಯಿಲ್ಲದ ಸರಳ ಉಪಾಯವನ್ನು ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಡಾ: ಲಿನಸ್ ಪಾಲಿಂಗ್ ರವರು ತಿಳಿಸಿದ್ದಾರೆ. ಈಗಿನ ಕಟ್ಟು ಕಥೆಗಳೆಲ್ಲ ಫಾರ್ಮ ಲಾಬಿ ಮತ್ತು ಹೃದಯ ಹೀನ ಹೃದಯ ಸಂಸ್ಥೆಗಳ ಲಾಬಿ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಜೀವನಶೈಲಿಯ ಸೂಕ್ತ ಬದಲಾವಣೆಯೇ ಈ ಅಪಾಯವನ್ನು ಅತೀ ಪರಿಣಾಮಕಾರಿಯಾಗಿ ಎದುರಿಸಬಲ್ಲದು ಮತ್ತು ವಿಟಮಿನ್-ಸಿ ಕೂಡಾ ಅತೀ ಸಹಾಯಕಾರಿ.
* ಈ ಖಾಯಿಲೆ ಇಷ್ಟು ಭಯಾನಕವಾಗಿ ಇಂದಿಗೂ ಇರಲು ಫಾರ್ಮ ಲಾಬಿ ಮತ್ತು ಅದರಿಂದ ಅನಾಯಾಸವಾಗಿ ಲಾಭ ಮಾಡಿಕೊಳ್ಳುತ್ತಿರುವ ಸ್ವಾರ್ಥೀ ವೈದ್ಯರುಗಳೇ ಪ್ರಮುಖ ಕಾರಣ. ಅವರಿಗೆ ಸತ್ಯ ತಿಳಿಯುವ ಹಂಬಲವಿಲ್ಲ; ಬಯಕೆಯೂ ಇಲ್ಲ. ಆದರೆ ಅವರಿಗೆ ಸತ್ಯವನ್ನೆದುರಿಸುವ ಭಯವಿದೆ (ಏಕೆಂದರೆ ಅದು ಅವರ ಆದಾಯದ ಮೇಲೆ ಪರಿಣಾಮ ಬೀರಲಿದೆ). ಆದರೆ ಇಂತಹ ಸುಶಿಕ್ಷಿತ, ಪ್ರಜ್ಞಾವಂತ ಮತ್ತು ಆರ್ಥಿಕವಾಗಿ ಸದೃಢರಾದ ಈ ವರ್ಗವೇ (ವೈದ್ಯರುಗಳೇ) ಸತ್ಯದ ಈ ಬೆಳಕನ್ನು ಏಕೆ ಕಂಡೂ ಕಾಣದಂತಿದ್ದಾರೆಂಬುದೇ ಯಕ್ಷ ಪ್ರಶ್ನೆ!
[Bhavans Journal – June 30, 2011 – Article: The Healers and the Killers by G.A. Mahew]
ಸಾರಾಂಶ ಕನ್ನಡದಲ್ಲಿ: ಕವಿ ವೆಂ. ಸುರೇಶ್, ಶಿವಮೊಗ್ಗ.

ಹೃದಯ ನಿಮ್ಮದೇ : ಅದರ ಹೊಣೆಯೂ ನಿಮ್ಮದೇ : ತೀರ್ಮಾನ ನಿಮ್ಮ ಕೈಯಲ್ಲಿದೆ.

ಅಂಬಿಗ ನಾ ನಿನ್ನ ನಂಬಿದೆ

     ಎಚ್ಚರ-ನಿದ್ದೆ-ಕನಸು ಇವು ಪ್ರತಿ ನಿತ್ಯ ಮಾನವ ಅನುಭವಿಸುವ ಮೂರು ಅವಸ್ಥೆಗಳು. ನಿದ್ರಾವಸ್ಥೆ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಅದೊಂದು ಅರೆ-ಸಾವಿನ ಸ್ಥಿತಿ! ಇಂದ್ರಿಯಾದಿಗಳೆಲ್ಲವೂ ನಿಶ್ಚೇಷ್ಟವಾಗಿ, ನಿಷ್ಕ್ರಿಯವಾಗಿ ಹಾಗೂ ಪ್ರತಿಕ್ರಿಯಾಶೂನ್ಯವಾಗಿರುವ ಸ್ಥಿತಿ. ಇನ್ನು ಕನಸುಗಳ ಲೋಕವೇ ಬೇರೆ. ಅವುಗಳ ರೂಪಗಳೂ ಮತ್ತು ಲಕ್ಷಣಗಳೂ ಚಿತ್ರ-ವಿಚಿತ್ರವಾದವುಗಳು. ಅವು ಮನಸ್ಸನ್ನು ಮುದಗೊಳಿಸಲೂಬಹುದು; ಭಯಗೊಳಿಸಲೂ ಬಹುದು. ಮುಂದೊದಗಬಹುದಾದ ಘಟನೆಗಳ ಬಗ್ಗೆ ಮುನ್ಸೂಚನೆಯನ್ನೂ ಅನೇಕ ಬಾರಿ ನೀಡಬಲ್ಲವು. ಕನಸಿನಲ್ಲಿ ಬೆಟ್ಟದಿಂದ ನಾವು ಬೀಳಬಹುದು; ಆನೆ ಅಟ್ಟಿಸಿಕೊಂಡು ಬಂದು ತುಳಿಯಬಹುದು. ಆದರೆ ಈ ಭೌತಿಕ ಶರೀರಕ್ಕೆ ಮಾತ್ರಾ ಏನೂ ಘಾಸಿಯಾಗದು! ಕನಸಿನ ಸಾಮ್ರಾಜ್ಯವೇ ಹಾಗೆ. ಹಾಗಾಗಿ ಅವುಗಳ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಇಲ್ಲಿ ಅಪ್ರಸ್ತುತ.
     ನಿದ್ದೆ-ಕನಸಿನ ನಂತರ ಬಹು ಮಹತ್ತರವಾದ ಅವಸ್ಥೆ ಎಚ್ಚರ. ಎಚ್ಚರದಲ್ಲಿ ಮನುಷ್ಯನ ಇಂದ್ರಿಯಾದಿಗಳು ಮತ್ತು ಬುದ್ಧಿ-ಮನಸ್ಸು ಕೂಡಾ ಸಂಪೂರ್ಣ ಜಾಗೃದಾವಸ್ಥೆಯಲ್ಲಿರುತ್ತವೆ. ಮಾತಿಗೆ ತಕ್ಕ ಮಾತು, ನಗುವಿಗೆ ಪ್ರತಿ ನಗು, ಮುಳ್ಳು ಚುಚ್ಚಿದಾಗ ನೋವಿನ ಅನುಭವ, ದು:ಖದ ವಿಚಾರ ಬಂದಾಗ ಅಳು-ನೋವು, ಸುಖ ಬಂದಾಗ ಪ್ರಸನ್ನತೆ, ಆಹ್ಲಾದ - ಹೀಗೆ ನಾನಾ ಪ್ರತಿಕ್ರಿಯೆಗಳನ್ನು ಎಚ್ಚರದ ಸ್ಥಿತಿಯಲ್ಲಿ ಉಚ್ಛ್ರಾಯ ಮಟ್ಟದಲ್ಲಿ ಗಮನಿಸಬಹುದು.
     ಎಚ್ಚರದ ಅವಸ್ಥೆಯಲ್ಲಿ ನಾವು ಏನು ಮಾಡುತ್ತೇವೆಯೋ (ಅದು ಕೆಟ್ಟದ್ದೂ ಇರಬಹುದು), ಏನು ಮಾತನಾಡುತ್ತೇವೆಯೋ (ಅದು ಸುಳ್ಳು ಇರಬಹುದು) ಮತ್ತು ಏನು ಯೋಚಿಸುತ್ತೇವೆಯೋ (ಅದು ದುರ್ಯೋಚನೆಯೂ ಇರಬಹುದು) ಅದೇ ಆಗಿನ ಸತ್ಯ. ಅಂದು ಅನುಭವಿಸುವ ಸುಖ-ದು:ಖ, ನೋವು-ನಲಿವುಗಳೇ ಆಗಿನ ಸತ್ಯ. ಆದರೆ ನಾವು ಏನು ಮಾಡುತ್ತೇವೆ, ಏನು ಮಾತನಾಡುತ್ತೇವೆ ಮತ್ತು ಏನು ಯೋಚಿಸುತ್ತೇವೆ ಎಂಬುದು ನಮ್ಮ ನಮ್ಮ ವ್ಯಕ್ತಿಗತವಾದಂತಹ ಸಂಸ್ಕಾರ, ಪರಿಸರ, ಜ್ಞಾನ ಮುಂತಾದ ಅಪರಿಮಿತ ವಿಷಯಗಳನ್ನು ಅವಲಂಬಿಸಿದೆ ಎಂದರೆ ತಪ್ಪಾಗದು.
     "ಲೋಕೋ ಭಿನ್ನ ರುಚಿ:" ಎನ್ನುವುದು ಬಹಳ ಹಳೆಯ ಮಾತು. ಒಂದು ಮದುವೆಯ ಆರತಕ್ಷತೆಯ ಭೋಜನಕ್ಕೆ ಹೋಗಿದ್ಧೇವೆ. ಖಾಲಿದೋಸೆಯಿಂದ ಹಿಡಿದು ಫಿಜ್ಜಾವರೆಗೆ ಅನೇಕಾನೇಕ ಖಾದ್ಯಗಳನ್ನು ಸಾಲಾಗಿ ಇಟ್ಟು ಬಡಿಸುತ್ತಿದ್ದಾರೆ. ಆದರೆ ನೋಡಿ. ಎಲ್ಲರು ಎಲ್ಲವನ್ನೂ ತಿನ್ನುವುದಿಲ್ಲ; ತಿನ್ನಲಾಗುವುದಿಲ್ಲ. ಒಬ್ಬೊಬ್ಬರು ತಮಗಿಷ್ಟವಾದ ಖಾದ್ಯಗಳನ್ನೇ ಮನ:ಪೂರ್ತಿ ತಿನ್ನುತ್ತಾರೆ. ಏಕೆಂದರೆ ಆಸೆ ಇದ್ದರೂ ಹೊಟ್ಟೆ ಗಾತ್ರ ಸೀಮಿತ. ಅದೇ ರೀತಿ ಮಾನವನ ಮೆದುಳೂ ಸಹ. ಮೇಲ್ನೋಟಕ್ಕೆ, ರಚನೆಯಾನುಸಾರ, ಎಲ್ಲರ ಮೆದುಳೂ ಒಂದೇ ಇದ್ದರೂ ಸಹ, ಅದರ ಗ್ರಹಣಶಕ್ತಿ ಮಾತ್ರಾ ಸೀಮಿತವಾದದ್ದು. ಉಪಯುಕ್ತ/ಅನುಪಯುಕ್ತ ವಿಷಯಗಳನ್ನು ಜರಡಿ ಹಿಡಿಯುವ ಸಾಮರ್ಥ್ಯ ಕೂಡಾ ವ್ಯಕ್ತಿ ವ್ಯಕ್ತಿಗೆ ಭಿನ್ನ. ನದಿಯ ತುಂಬಾ ನೀರು ಹರಿಯುತ್ತಿದ್ದರೂ ನಾವು ಕುಡಿಯಲಾಗುವುದು (ಕುಡಿಯುವುದು) ಮೂರ್ನಾಲ್ಕು ಬೊಗಸೆಯಷ್ಟು ಮಾತ್ರ. ಅದರಲ್ಲೇ ನಾವು ಸಂತೃಪ್ತಿ ಹೊಂದುತ್ತೇವೆ. ವಿಷಯ/ವಸ್ತು ಒಂದೇ ಇದ್ದರೂ ಅದನ್ನು ಬೇರೆ ಬೇರೆ ವ್ಯಕ್ತಿಗಳು ತಮ್ಮದೇ ದೃಷ್ಟಿಕೋನದಲ್ಲಿ ಅರ್ಥೈಸಿಕೊಳ್ಳುತ್ತಾರೆ; ನೋಡುತ್ತಾರೆ. ಹೀಗಾಗಿಯೇ ನಾವು ಪ್ರಪಂಚದಲ್ಲಿ ನಾನಾ ರೀತಿಯ ಆಚಾರ-ವಿಚಾರಗಳನ್ನು ಹೊಂದಿರುವ, ನಾನಾ ನಂಬಿಕೆಗಳನ್ನಿಟ್ಟು ಕೊಂಡಿರುವ ಮತ್ತು ನಾನಾ ಸಂಪ್ರದಾಯಗಳನ್ನು ಅನುಸರಿಸುವಂತಹ ಅಸಂಖ್ಯಾತ ಜನರನ್ನು ಕಾಣುತ್ತೇವೆ.
     ಅನ್ನ ಸಂಪಾದನೆಗೆ ನಾನಾ ಮಾರ್ಗಗಳಿದ್ದಂತೆ, ಜ್ಞಾನ/ಪಾರಮಾರ್ಥಿಕ ಸಾಧನೆಗೂ ಕೂಡ ಬಹು ಜನರು ತಮ್ಮ ತಮ್ಮ ಆಸ್ಥೆಯಾನುಸಾರ ನಾನಾ ಮಾರ್ಗಗಳನ್ನು ಅಳವಡಿಸಿಕೊಂಡಿರುವುದು ಸ್ವಯಂಸ್ಪಷ್ಟವಾದ ವಿಚಾರ. ತಾನು ಮಾಡುವ ನಿಷ್ಕಾಮ ಕರ್ಮವೇ ಭಗವತ್ಸೇವೆ ಎಂದು ಒಬ್ಬ ಭಾವಿಸಿದರೆ, ಮತ್ತೊಬ್ಬ ಒಂದು ಮೂರ್ತಿಯಲ್ಲಿಯೇ ತನ್ನ ಇಷ್ಟದೈವವನ್ನು ಉತ್ಕಟ ಭಕ್ತಿಯಿಂದ, ನಾನಾ ರೀತಿಯಿಂದ ಪೂಜಿಸಿ, ಭಜಿಸಿ ಸಾಕ್ಷಾತ್ಕಾರಭಾವ ಅನುಭವಿಸುತ್ತಾನೆ. ಮೂರ್ತಿ ಪೂಜೆಯನ್ನೇ ನಂಬದ ಮುಸಲ್ಮಾನರಲ್ಲಿ ಇಂದೂ ಅನೇಕ ಮುಸಲ್ಮಾನ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಂತಾನ ಪ್ರಾಪ್ತಿಗಾಗಿ ಆಶ್ಲೇಷ ಬಲಿ ಇತ್ಯಾದಿ ಸೇವೆ ಮಾಡಿಸುವವರನ್ನು ನೋಡಬಹುದಾಗಿದೆ; ಅದರಿಂದ ಫಲ ಪಡೆದ ಅನೇಕರ ಅನುಭವಗಳು ಇಲ್ಲಿ ಸಾಕಷ್ಟಿವೆ. ಅದೇ ಕ್ಷೇತ್ರದಲ್ಲಿ ಎಂಜಲೆಲೆಯ ಮೇಲೆ ಉರುಳು ಸೇವೆ ಮಾಡಿ ಚರ್ಮರೋಗ ಪರಿಹರಿಸಿಕೊಂಡವರಲ್ಲಿ ನನಗೆ ಅತೀ ಸಮೀಪದ ಬಂಧುವೇ ಸಾಕ್ಷಿಯಾಗಿದ್ದಾರೆ. ಇವೆಲ್ಲಾ ಅವರವರ ಶ್ರದ್ಧೆ-ನಂಬಿಕೆಯ ವಿಚಾರ. ನಮಗೆ ಅರ್ಥವಾಗದಿದ್ದರೆ (ಅಥವಾ ಅರ್ಥಮಾಡಿಕೊಳ್ಳುವ ಮನಸ್ಸಿಲ್ಲದಿದ್ದರೆ) ಅದಕ್ಕೆ ಅರ್ಥವಿಲ್ಲವೆಂದು ಜರೆಯುವುದು ಯಾವ ಧರ್ಮ?
ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ |
ನಂಬಿಯುಂ ನಂಬದಿರುವಿಬ್ಬಂದಿ ನೀನು ||
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು |
ಸಿಂಬಳದಿ ನೊಣ ನೀನು - ಮಂಕುತಿಮ್ಮ ||
     ಅದೇ ರೀತಿ ಪರೋಪಕಾರದಲ್ಲಿ ಕೆಲವರು ಭಗವದ್ಧರ್ಶನ ಪರಿಭಾವಿಸಿಕೊಂಡರೆ, ಅಪರಿಮಿತ ಪಾರಮಾರ್ಥಿಕ ಜ್ಞಾನಾರ್ಜನೆಯಲ್ಲಿ ಮತ್ತೆ ಕೆಲವರು ಸಚ್ಚಿದಾನಂದದ ಅನುಭವ ಕಾಣುತ್ತಾರೆ. ದಾನ-ಧರ್ಮದಲ್ಲಿ ಕೂಡ ಹಲವರು ನೆಮ್ಮದಿ-ಶಾಂತಿ ಕಂಡುಕೊಳ್ಳುತ್ತಾರೆ. ಜ್ಞಾನದ ಅಭಾವವೋ, ವೈಯುಕ್ತಿಕ ಪೂರ್ವಾಗ್ರಹವೋ ಅಥವಾ ಪ್ರತಿಷ್ಠೆಯೋ ಗೊತ್ತಿಲ್ಲ, ಇಂದು ಒಬ್ಬರು ಮತ್ತೊಬ್ಬರ ಆಚರಣೆಗಳನ್ನು, ನಂಬಿಕೆಗಳನ್ನು, ಅವರು ನಂಬಿಕೊಂಡ ಸಂಪ್ರದಾಯಗಳನ್ನು (ಸಾಮಾಜಿಕ ಮತ್ತು ವೈಯುಕ್ತಿಕ ಹಾನಿಮಾಡದಂತವುಗಳನ್ನು ಬಿಟ್ಟು) ಹೀಯಾಳಿಸುವುದರಲ್ಲಿಯೇ ಬಹು ಸಮಯ ವ್ಯರ್ಥ ಮಾಡುತ್ತಿರುವುದು ಇಂದಿನ ದುರಂತ. ಮೊದಲೇ ಹೇಳಿದಂತೆ, ಪ್ರತಿ ಮಾನವನ ಗ್ರಹಣ ಶಕ್ತಿ, ಆತನ ಸಂಸ್ಕಾರ, ಆತನ ಪರಿಸರ ಎಲ್ಲವೂ ಕೂಡ ಭಿನ್ನ ಭಿನ್ನ. ಹಾಗಾಗಿ ಎಲ್ಲರಿಗೂ ಒಂದೇ ಸಾಧನಾ ಪಥ ಸಾಧುವೂ ಅಲ್ಲ; ಸಾಧ್ಯವೂ ಅಲ್ಲ. ಬಹುಶ: ಇದು ಆ ಅಗೋಚರ ಶಕ್ತಿಯೇ ಉದ್ಧೇಶಪೂರ್ವಕವಾಗಿ ನಿರ್ಮಿಸಿದಂತಹ ಸನ್ನಿವೇಶವಿರಬಹುದು. ಇಲ್ಲದಿದ್ದರೆ ಲೋಕದ ಜನರು ಜೀವನದ ಆಚರಣೆಗಳಲ್ಲಿ ಏಕತಾನತೆಯಿಂದ ಬಳಲುತ್ತಿದ್ದರೋ ಏನೋ. ಭಾರತದ ಸಂಸ್ಕೃತಿಯೇ ಹಾಗೆ. ಭಗವತ್ಸಾಕ್ಷಾತ್ಕಾರಕ್ಕೆ ಪ್ರತಿಯೊಬ್ಬನಿಗೂ (ಅವನ ಇತಿಮಿತಿಯಾನುಸಾರ) ಎಟಕುವಂತಹ ಅನೇಕ ಸಾಧನಾಪಥವನ್ನು ಹಾಕಿಕೊಟ್ಟಿದೆ. ದಾರಿ ಹಲವು. ಗುರಿ ಮಾತ್ರ ಒಂದೇ. ಅಂತಿಮವಾಗಿ ನೆಮ್ಮದಿ ಮತ್ತು ಸಚ್ಚಿದಾನಂದ ಹೊಂದುವ ಗುರಿ.
ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಮಧುರವಿರೆ ಯಶ ನಿನದೆ ಮೂಡ ||
[ಕವಿ ನಾಗರಾಜ್ ರವರ "ಮೂಢ ಉವಾಚ" ಪುಸ್ತಕದಿಂದ]
ಒಳ್ಳೆಯ ದಾರಿ, ಒಳ್ಳೆಯ ಚಿಂತನೆ, ಮನಸ್ಸಿಗೊಪ್ಪಿದ (ಅನ್ಯರ ನೋಯಿಸದ) ಆಚರಣೆ ಇದ್ದಾಗ ನೆಮ್ಮದಿ ಖಂಡಿತಾ ಹತ್ತಿರ ಸುಳಿದೀತು. ನನ್ನ ಆಚರಣೆಯೇ ಸರಿ, ನನ್ನ ನಂಬಿಕೆಯೇ ಸರಿ, ಬೇರೆಯವರದು ಕೆಳಮಟ್ಟದ ಮಾರ್ಗ ಎನ್ನುವ ಭಾವ ಬಹುಶ: ತರವಲ್ಲ. "ನಹಿ ಸರ್ವ: ಸರ್ವಂ ಜಾನಾತಿ" - ಎಲ್ಲರಿಗೆ ಎಲ್ಲವೂ ತಿಳಿದಿರುವುದಿಲ್ಲ. ಇದು ನಿತ್ಯಸತ್ಯವಾದ ಮಾತು. ಆದುದರಿಂದ ವಿಚಾರಗಳನ್ನು ಅಧಿಕಾರವಾಣಿಯಿಂದ ಇತರರ ಮೇಲೆ ಹೇರುವ ಪ್ರವೃತ್ತಿ ಕೂಡ ಪ್ರಶ್ನಾರ್ಹವೇ. ವಿಚಾರ ಮಂಡನೆ ಇರಲಿ. ಹೇರಿಕೆ ಬೇಡ; ಎಲ್ಲರೂ ಒಪ್ಪ ಬೇಕೆಂಬ ನಿರೀಕ್ಷೆ ಕೂಡಾ ಬೇಡ. ಮನುಷ್ಯನ ಮೆದುಳು ಬ್ಲಾಟಿಂಗ್ ಪೇಪರ ಇದ್ದ ಹಾಗೆ. ತನಗೆ ಸಾಧ್ಯವಾದಷ್ಟು ಮಾತ್ರಾ ಗ್ರಹಿಸಬಲ್ಲದು; ಒಪ್ಪಿಕೊಂಡಷ್ಟು ಮಾತ್ರಾ ಅನುಸರಿಸಬಲ್ಲದು. ಆದ್ಧರಿಂದ ಸದ್ವಿಚಾರಗಳಿಗೆ ಸದಾ ಮನಸ್ಸು ತೆರೆದಿರಲಿ. ಆದರೆ ಆಚರಣೆ ಮತ್ತು ನಮ್ಮ ದೈನಂದಿನ ನಡವಳಿಕೆ ನಮ್ಮ ಅಂತರಾತ್ಮ ನಿರ್ದೇಶಿಸಿದಂತೇ (ಸದಾ ಸನ್ಮಾರ್ಗದಲ್ಲಿಯೇ) ಸಾಗಲಿ.
".........ಇನ್ನು ಅಲ್ಪ ಸ್ವಲ್ಪ ಸಾಧನೆ ಮಾಡಿ ಆಂಶಿಕವಾಗಿ ಪರಮಾತ್ಮತತ್ತ್ವವನ್ನು ತಿಳಿದುಕೊಂಡಿರುವವರು ಭೇದ-ಭಾವಗಳ ಕೆಸರಿನ ಹೊಂಡದಲ್ಲಿ ಬಿದ್ದುಕೊಂಡಿರುತ್ತಾರೆ. ಇಂತಹವರು ಕೂಪ ಮಂಡೂಕಗಳಂತೆ ನನ್ನ ಮತವೇ ಶ್ರೇಷ್ಠ ನನ್ನ ದೇವರೇ ಶ್ರೇಷ್ಠ ಎನ್ನುವ ಭ್ರಮೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುತ್ತಾರೆ. ಸತ್ಯಕ್ಕೆ ಅನಂತ ಮುಖಗಳಿವೆ. ನಾನು ನೋಡಿದ್ದು ಕೇವಲ ಒಂದು ಮುಖ ಎನ್ನುವ ವಾಸ್ತವಿಕ ವಿಚಾರವನ್ನು ಇಂತಹವರು ಮರೆತಿರುತ್ತಾರೆ....."
**ಶ್ರೀ ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳವರು, ಶ್ರೀಮಠ, ಹರಿಹರಪುರ
(ಸ್ವಯಂಪ್ರಕಾಶ ಮಾಸಪತ್ರಿಕೆ - ಮೇ-2009)
-ಕವಿ ವೆಂ.ಸುರೇಶ್
 [ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.]