ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಡಿಸೆಂಬರ್ 24, 2015

ಸಾಧನಾ ಸೋಪಾನ - 15: ಸ್ವಂತ ಅಸ್ತಿತ್ವ


     "ಹಾಂ? ಏನೆಂದಿರಿ? ಆಕಾಶಕ್ಕಿಂತಲೂ ಮಿಗಿಲಾದುದು ಇದೆಯೇ? ಆಕಾಶ ಸರ್ವವ್ಯಾಪಿ. ಅದು ಎಷ್ಟು ವಿಶಾಲವಾದುದು, ಹಿರಿದಾದುದು ಎಂಬುದೇ ತಿಳಿಯದಿರುವಾಗ, ಅದನ್ನು ವಿವರಿಸಲು ಸಾಧ್ಯವೇ ಇಲ್ಲ ಎಂಬಂತಿರುವಾಗ ಅದಕ್ಕಿಂತಲೂ ಮಿಗಿಲಾದುದು ಇದೆಯೇ? ನಿಮಗೆಲ್ಲೋ ತಲೆ ಕೆಟ್ಟಿರಬೇಕು" ಎಂಬ ಪ್ರತಿಕ್ರಿಯೆ ಆಕಾಶಕ್ಕಿಂತಲೂ ಹೆಚ್ಚಿನದು ಇದೆ ಎಂದು ಹೇಳಿದಾಗ ಬರಬಹುದಾದ ಸಾಮಾನ್ಯ ಪ್ರತಿಕ್ರಿಯೆ. ಅದು 'ಸ್ವಂತ ಅಸ್ತಿತ್ವ' ಎಂದು ಹೇಳಿದಾಗ 'ನಿಜಕ್ಕೂ ಇವನಿಗೆ ತಲೆ ಕೆಟ್ಟಿದೆ ಅಥವ ನಮ್ಮ ತಲೆ ಕೆಡಿಸುತ್ತಿದ್ದಾನೆ' ಎಂತಲೂ ಭಾವಿಸಬಹುದು. ಈ ನಮ್ಮ ಅಸ್ತಿತ್ವ ಹೇಗೆ ದೊಡ್ಡದು ಎಂಬ ಬಗ್ಗೆ ವಿಚಾರ ಮಾಡೋಣ.
ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು|
ವಿಚಾರ ಮಥನದ ಫಲವೆ ನಿತ್ಯ ಸತ್ಯ
ವೇದವಿದಿತ ಸತ್ಯ ತತ್ವವಿದು ಮೂಢ||
     ಈ ಆಕಾಶ ದೊಡ್ಡದು ಎಂಬ ಅರಿವು ನಮಗೆ ಬರಬೇಕಾದರೆ ನಮಗೆ ನಮ್ಮ ಅಸ್ತಿತ್ವದ ಬಗ್ಗೆ ಅರಿವು ಇರಬೇಕು. ಅಸ್ತಿತ್ವದ ಅರಿವು ಮೊದಲು ಬರುತ್ತದೆ, ನಂತರ ಹೊರಗಿನ ಆಕಾಶದ ಅರಿವು! ನಾವು ಮೊದಲು ಇದ್ದರೆ ತಾನೇ ಆಕಾಶ ಅನ್ನುವುದು ಇರುವುದು! ಆದ್ದರಿಂದ, ವಿಶಾಲ ಆಕಾಶದ ಕುರಿತು ತಿಳಿಯಬೇಕಾದರೆ ನಮ್ಮ ಅಸ್ತ್ತಿತ್ವದ ಅರಿವು ನಿರ್ಧಾರಕ ಅಂಶವಾಗುತ್ತದೆ. 'ಸ್ಮರ' ಎಂತಲೂ ಹೇಳಲಾಗುವ ಈ ನಮ್ಮ ಅಸ್ತಿತ್ವ ನಮ್ಮ ಅರಿವಿಗೆ, ತಿಳುವಳಿಕೆಗೆ ಸಮನಾಗಿರುತ್ತದೆ. ನೋಡಿ, ನಾವೇ ಇಲ್ಲದಿದ್ದರೆ, ಆಕಾಶ ಇದೆಯೋ ಇಲ್ಲವೋ ಅನ್ನುವ ಪ್ರಶ್ನೆಯೇ ಬರುವುದಿಲ್ಲ. ಯಾರಾದರೂ ತಮ್ಮ ಅಸ್ತಿತ್ವದ ಅರಿವನ್ನು ಕಳೆದುಕೊಂಡರೆ, ಅರ್ಥಾತ್ ತಾವು ಯಾರು ಎಂಬುದರ ಅರಿವೇ ಇಲ್ಲದಿದ್ದರೆ, ಅಂತಹವರಿಗೆ ಆಕಾಶದ ಕುರಿತು ಜಿಜ್ಞಾಸೆಯಾಗಲೀ, ಹೇಳುವುದಾಗಲೀ, ಕೇಳುವುದಾಗಲೀ, ಯೋಚಿಸುವುದಾಗಲೀ ಸಾಧ್ಯವಿರುವುದಿಲ್ಲ ಮತ್ತು ಅರ್ಥ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸ್ವಪ್ರಜ್ಞೆ ಇಲ್ಲದಿದ್ದರೆ ಯಾವುದೇ ಉಪಯುಕ್ತವಾದ ಕ್ರಿಯೆಗಳಾಗಲೀ, ಕೆಲಸಗಳಾಗಲೀ ಅಸಾಧ್ಯವಾಗುತ್ತದೆ. ನಮ್ಮ ಅಸ್ತಿತ್ವದ ಬಗ್ಗೆ ನಮಗೇ ಅರಿವಿಲ್ಲದಿದ್ದರೆ, ಆಕಾಶದ ಬಗ್ಗೆಯಾಗಲೀ ಅಥವ ಇನ್ನು ಯಾವುದರ ಬಗ್ಗೆಯಾಗಲೀ ತಿಳಿಯಬಯಸುವುದರಲ್ಲಿ ಏನು ಪ್ರಯೋಜನವಿದೆ? ಎಲ್ಲೆಲ್ಲಿ ಸ್ವಪ್ರಜ್ಞೆ ಜಾಗೃತವಾಗಿರುತ್ತದೋ, 'ನಮ್ಮತನ' ಅನ್ನುವುದು ಹಾಜರಿರುತ್ತದೆಯೋ ಅಲ್ಲಿ ಎಲ್ಲಾ ವಿಧವಾದ ಜ್ಞಾನ ಲಭಿಸುತ್ತಾ ಹೋಗುತ್ತದೆ. ಅಲ್ಲಿ ಯೋಚಿಸುವ ಪ್ರಕ್ರಿಯೆ ಇರುತ್ತದೆ, ಅರ್ಥ ಮಾಡಿಕೊಳ್ಳುವ ಶಕ್ತಿ ಇರುತ್ತದೆ, ಕೇಳುವ, ತಿಳಿಯುವ ಕೆಲಸ ಆಗುತ್ತದೆ ಮತ್ತು ಹಲವು ರೀತಿಗಳಲ್ಲಿ ಜ್ಞಾನಾರ್ಜನೆ ಮಾಡುವ ಆಸಕ್ತಿ ಮೂಡುತ್ತದೆ. ಜೀವನದಲ್ಲಿನ ನಮ್ಮ ಎಲ್ಲಾ ಚಟುವಟಿಕೆಗಳು, ಕ್ರಿಯೆಗಳು ನಮ್ಮ ಸ್ವಂತ ಅಸ್ತಿತ್ವದ ಅರಿವಿನ ಫಲಗಳಾಗಿವೆ. ಇದು ಇಲ್ಲದಿದ್ದರೆ ಇಡೀ ಜಗತ್ತೇ ಶೂನ್ಯ!
     ನಾವು ಧ್ಯಾನಿಸುವಾಗ ಯಾವುದು ಅತ್ಯಂತ ದೊಡ್ಡದೋ ಆ ಕುರಿತು ಧ್ಯಾನಿಸುವುದು ಸೂಕ್ತವೆಂದು ಹಿಂದೆಯೇ ತಿಳಿದುಕೊಂಡಿದ್ದೇವೆ. ನಮ್ಮ ತಿಳುವಳಿಕೆಗೆ ಮೀರಿದ ಕಾಲ್ಪನಿಕ ಸಂಗತಿಗಳನ್ನು ಗುರಿಯಾಗಿರಿಸಿ ಮಾಡುವ ಧ್ಯಾನದಿಂದ ಚಂಚಲ ಮನಸ್ಸಿನ ಹತೋಟಿ ಕಷ್ಟವೆಂಬುದೂ ನಮಗೆ ತಿಳಿದಿದೆ. ಆಕಾಶ ಎಲ್ಲಕ್ಕಿಂತ ದೊಡ್ಡದೆಂದುಕೊಂಡರೆ, ಆಕಾಶದ ಅಗಾಧತೆ ಕುರಿತು ಧ್ಯಾನಿಸುವುದು ಮನೋನಿಯಂತ್ರಣಕ್ಕೆ ಸಹಕಾರಿ. ಅದಕ್ಕಿಂತಲೂ ಸ್ವಂತ ಅಸ್ತಿತ್ವದ ಅರಿವು ಹಿರಿದು ಎಂದು ಮನನ ಮಾಡಿಕೊಂಡರೆ ನಮ್ಮ ಮನಸ್ಸನ್ನು ಆ ಕಡೆಗೆ ಹೊರಳಿಸಬೇಕು. ನಾವು ನಿಧಾನವಾಗಿ, ಹಂತ ಹಂತವಾಗಿ ಅರಿವಿನ ಹಂತವನ್ನು ಏರಿಸಿಕೊಳ್ಳುತ್ತಾ ಹೋಗುತ್ತಿದ್ದೇವೆ ಎಂಬುದು ನಮಗೇ ಅರಿವಾಗುತ್ತಾ ಹೋಗುತ್ತದೆ. ನಾವು ಈ ರೀತಿಯಾಗಿ ಏರುತ್ತಾ ಹೋದಂತೆ ಇನ್ನೂ ಎತ್ತರದ ಸಂಗತಿಗಳ ಅರಿವು ನಮಗೆ ಆಗುತ್ತಾ ಹೋಗುತ್ತದೆ. ಸ್ವಂತ ಅಸ್ತಿತ್ವದ ಪ್ರಜ್ಞೆ ಹೊಂದಿರುವ ವ್ಯಕ್ತಿಗೆ ಪ್ರತಿಯೊಂದು ವಸ್ತು ಅಥವ ಸಂಗತಿಯ ಅಥವ ಆಕಾಶದ ಕುರಿತೇ ಆಗಲಿ ಅ ಅರಿವಿನ ಫಲ ಸ್ವಪ್ರಜ್ಞೆಯ ಬಲದಿಂದಲೇ ಲಭಿಸಿದುದು ಎಂದು ತಿಳಿಯುತ್ತದೆ ಮತ್ತು ಅವನು ಅಷ್ಟರ ಮಟ್ಟಿಗೆ ಅವನು ಸ್ವಂತ ಅಸ್ತಿತ್ವದ ಮಹತ್ವ ತಿಳಿದವನಾಗುತ್ತಾನೆ.
ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||
     ಧ್ಯಾನದ ಕ್ರಿಯೆಯಲ್ಲಿ ಸ್ವಂತ ಅಸ್ತಿತ್ವದ ಮಹಿಮೆ ತಿಳಿದುಕೊಳ್ಳುವುದು ಒಂದು ಅದ್ಭುತ ತಿರುವು ಮೂಡಿಸುತ್ತದೆ. ಸಾಮಾನ್ಯವಾಗಿ, ನಾವು ಧ್ಯಾನಿಸುವಾಗ ಹೊರಗಿನ ವಸ್ತುಗಳು, ಸಂಗತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಧ್ಯಾನಿಸುತ್ತೇವೆ, ದಿಗಂತದೆಡೆಗೆ ದೃಷ್ಟಿ ಹಾಯಿಸುತ್ತೇವೆ. ಆದರೆ, ಧ್ಯಾನಿಸುವ ಆ ವಸ್ತುಗಳು, ಸಂಗತಿಗಳು, ಗುರಿಗಳು ನಮ್ಮ ಸ್ವಂತ ಅಸ್ತಿತ್ವದೊಂದಿಗೆ ಥಳಕು ಹಾಕಿಕೊಂಡಿದೆಯೆಂಬುದನ್ನು ಅರಿಯಲು ಮರೆತುಬಿಡುತ್ತೇವೆ. ವಸ್ತು/ಸಂಗತಿಯ ಪ್ರಜ್ಞೆ ಮತ್ತು ಪ್ರಜ್ಞೆಯ ವಸ್ತುವಿನ ಸಂಬಂಧಗಳು ಅರಿವಿನಿಂದ ಮರೆಯಾಗಿ ಅಂತಹ ವಸ್ತುಗಳು, ಸಂಗತಿಗಳು, ಗುರಿಗಳು ಹೊರಗೆ ಇರುತ್ತವೆ, ಸ್ವತಂತ್ರವಾಗಿರುತ್ತವೆ, ನಮ್ಮ ಅಸ್ತಿತ್ವಕ್ಕೂ ಅದು ಹೊರತಾಗಿದೆ ಎಂದುಕೊಂಡುಬಿಡುತ್ತೇವೆ. ಇದು ಸತ್ಯವಾಗಿರಲಾರದು. ನಮ್ಮ ಅಸ್ತಿತ್ವಕ್ಕೂ ಅಂತಹ ಸಂಗತಿಗಳಿಗೂ ಪರಸ್ಪರ ಸಂಬಂಧವಿದ್ದೇ ಇರುತ್ತದೆ. ಸಾಮಾನ್ಯರು ಅಸಾಮಾನ್ಯ ಸಂಗತಿಗಳಿಗೂ ತಮಗೂ ಪ್ರತ್ಯೇಕತೆಯಿದೆಯೆಂದು ಭಾವಿಸುತ್ತಾರೆ. ಅವುಗಳನ್ನು ಅವಲಂಬಿಸುತ್ತಾರೆ ಮತ್ತು ಅವುಗಳ ಸಹಾಯ, ಆಧಾರ ತಮಗೆ ಅಗತ್ಯವೆಂದು ಅದಕ್ಕೆ ಜೋತುಬೀಳುತ್ತಾರೆ. ಅಂತಹ ಅಸಾಮಾನ್ಯ ಸಂಗತಿಗಳಿಗೆ ತಾವೇ ಆಧಾರವಾಗಿರುವುದನ್ನು ಮರೆಯುತ್ತಾರೆ. ನಾವು ಇದ್ದರೆ ದೇವರು ಇರುತ್ತಾನೆ ಅಲ್ಲವೇ? ನಾವೇ ಇಲ್ಲದಿದ್ದರೆ ಏನೂ ಇರುವುದಿಲ್ಲವೆಂಬ ಅರಿವು ಮೂಡಿದರೆ ನಾವು ನಮ್ಮ ಧ್ಯಾನದ ಗುರಿಯನ್ನು ಹೊರಗಿನ ಸಂಗತಿಗಳಿಂದ ಒಳಗಿನ ಕಡೆಗೆ ತಿರುಗಿಸುತ್ತೇವೆ. ಹೀಗೆ ಮಾಡಲು ಸಾಧ್ಯವಾದರೆ ನಿಜಕ್ಕೂ ಇದು ಅದ್ಭುತ ಸಾಧನೆಯೆನಿಸುತ್ತದೆ.
ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ
ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ |
ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ
ಮಾಯಾಶಕ್ತಿಗೆದುರುಂಟೆ ಮೂಢ ||
     ಒಂದು ಸಿನೆಮಾ ಹೇಗಿರುತ್ತದೆಯೆಂಬುದನ್ನು  ಅದರ ಟ್ರೈಲರ್ ನೋಡಿ ತಿಳಿಯಬಹುದು. ಹಾಗೆಯೇ ಸ್ವಂತ ಅಸ್ತಿತ್ವದ ಮಹತ್ವವನ್ನು ತಿಳಿಯಲು ಗಾಢನಿದ್ದೆಯಲ್ಲಿ ನಮ್ಮ ಸ್ಥಿತಿ ಹೇಗಿರುತ್ತದೆಯೆಂಬುದನ್ನು ಕಲ್ಪಿಸಿಕೊಂಡರೆ ಸಾಕು. ಗಾಢ ನಿದ್ದೆಯಲ್ಲಿದ್ದಾಗ ನಮಗೆ ನಮ್ಮ ಅರಿವೇ ಇರುವುದಿಲ್ಲ. ಇನ್ನು ದೇವರು, ಜಗತ್ತು, ಆಕಾಶ ಮುಂತಾದವುಗಳು ಸಹ ಇವೆಯೋ, ಇಲ್ಲವೋ ಎಂಬುದರ ಯೋಚನೆ ಸಹ ಬರುವುದಿಲ್ಲ. ಆ ಸಮಯದಲ್ಲಿ ಸುಖ-ದುಃಖ, ಲಾಭ-ನಷ್ಟ, ನೋವು-ನಲಿವುಗಳ ಸುಳಿವೂ ಇರುವುದಿಲ್ಲ. ಯಾವ ಜಂಜಾಟವೂ ಇರುವುದೇ ಇಲ್ಲ. ನಿದ್ದೆಯಿಂದ ಎಚ್ಚರವಾದ ತಕ್ಷಣದಲ್ಲಿ 'ನಾನು' ಎದ್ದುಬಿಡುತ್ತದೆ! ಸುತ್ತಮುತ್ತಲ ಪ್ರಪಂಚವೂ ಎದ್ದುಬಿಡುತ್ತದೆ! 'ನಾನು' ಏಳದಿದ್ದರೆ ಯಾವುದರ ಅಸ್ತಿತ್ವವೂ ಇರುವುದೇ ಇಲ್ಲ. ಇದು ಅಸ್ತಿತ್ವದ ವಿಸ್ಮಯಕಾರಿ ಗುಣ. ನಮ್ಮ ತಡಕಾಟ, ಹುಡುಕಾಟಗಳು ಬಹುತೇಕ ಹೊರಗೆ ಇರುತ್ತವೆ. ಏನು ಹುಡುಕುತ್ತಿದ್ದೇವೆಯೋ ಅದು ಹೊರಗಿಲ್ಲ, ನಮ್ಮೊಳಗೇ ಇದೆ ಎಂಬ ಅರಿವು ಮೂಡತೊಡಗಿದಾಗ ಸ್ವಲ್ಪ ಸ್ವಲ್ಪವಾಗಿ ಬೆಳಕು ಮೂಡತೊಡಗುತ್ತದೆ.
ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು |
ಅಂತರಂಗದ ಕರೆಯನನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನು ಮೂಢ ||
     ಅಂತರಂಗದ ಕರೆಗೆ ಓಗೊಟ್ಟರೆ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ: "ನಾವು ಇದ್ದರೆ ಎಲ್ಲವೂ ಇರುತ್ತದೆ; ನಾವು ಇಲ್ಲದಿದ್ದರೆ ಏನೂ ಇರುವುದಿಲ್ಲ. ಇದು ನಮ್ಮ ಅಸ್ತಿತ್ವದ ಮಹತ್ವ!"
-ಕ.ವೆಂ.ನಾಗರಾಜ್.
*****************
ದಿನಾಂಕ 25.11.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಡಿಸೆಂಬರ್ 16, 2015

ಸಾಧನಾ ಸೋಪಾನ - 14: ಆಕಾಶ - ದೇವರ ವಿಶ್ವರೂಪ!

 
     ಹೀಗೆ ಊಹಿಸಿಕೊಳ್ಳೋಣ, ಒಂದೊಮ್ಮೆ ಭೂಮಿ ನೀರಿನಲ್ಲಿ ಮುಳುಗಿ ಕರಗಿಹೋದರೆ? ನೀರು ಬೆಂಕಿಯಿಂದ ಒಣಗಿ ಆವಿಯಾದರೆ? ಬೆಂಕಿಯನ್ನು ಗಾಳಿ ನಂದಿಸಿದರೆ? ಗಾಳಿ ಆಕಾಶದಲ್ಲಿ ಐಕ್ಯವಾದರೆ? ಕೊನೆಯಲ್ಲಿ ಉಳಿಯುವುದು ಆಕಾಶ ಮಾತ್ರ, ಆಕಾಶ, ಆಕಾಶ, ಎಲ್ಲೆಲ್ಲೂ ಆಕಾಶ, ಅಷ್ಟೆ! ಪ್ರಳಯ ಎಂಬ ಕಲ್ಪನೆ ಸಹ ಇದನ್ನೇ ಹೇಳುತ್ತದೆ. ಅಂತಿಮವಾಗಿ ಉಳಿಯುವ ಆಕಾಶ ಮಾತ್ರ ಕಾಣುವ ಸತ್ಯ, ಅತ್ಯಂತ ಗ್ರಾಹ್ಯ ಸಂಗತಿ. ಅದು ಎಲ್ಲವನ್ನೂ ಒಳಗೊಳ್ಳಬಲ್ಲ, ಸೇರಿಸಿಕೊಳ್ಳಬಲ್ಲ, ಎಲ್ಲೆಲ್ಲೂ ಇರುವಂತಹ ವಿಶಾಲ ಶಕ್ತಿಯಾಗಿರುತ್ತದೆ. ಹೀಗಾಗಿ ಇದು ಸರ್ವವ್ಯಾಪಿ, ಸರ್ವಶಕ್ತ ಪರಮಾತ್ಮನನ್ನು ಹೋಲುತ್ತದೆ.
     ಆಕಾಶದ ಮಹತ್ವ ಅರಿವಾಗುವುದು ಅದು ಇರುವುದರಿಂದಲೇ! ಎಲ್ಲದರ ಅಸ್ತಿತ್ವಕ್ಕೆ ಅವಕಾಶವಾಗಿರುವುದು ಆಕಾಶದಿಂದಲೇ. ಪ್ರತಿಯೊಂದೂ ಪರಿಣಾಮಸ್ವರೂಪವಾಗಿ ಆಕಾಶದಿಂದಲೇ ಬರುತ್ತದೆ. ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ಗುಡುಗು, ಸಿಡಿಲು, ಇಂತಹದು ಇದೆ, ಇಂತಹದು ಇಲ್ಲವೆನ್ನುವಂತಿಲ್ಲದೆ ಪ್ರತಿಯೊಂದಕ್ಕೂ ಅವಕಾಶ ಮಾಡಿಕೊಟ್ಟಿರುವುದು ಆಕಾಶವೇ. ಇರಲು ಜಾಗವಿರದಿರುತ್ತಿದ್ದರೆ ನಾವು ಎಲ್ಲಿರುತ್ತಿದ್ದೆವು? ನಮ್ಮ ಸುಖ-ದುಃಖಗಳು ಎಲ್ಲಿರುತ್ತಿದ್ದವು? ಆಕಾಶವಿರದಿದ್ದರೆ ಯಾವುದೇ ವಸ್ತುಗಳು ಇರುತ್ತಿರಲಿಲ್ಲ, ಸುಖ-ದುಃಖಗಳ ಅನುಭವವೂ ನಮಗೆ ಇರುತ್ತಿರಲಿಲ್ಲ. ಜೀವನದಲ್ಲಿ ನಾವು ಅನುಭವಿಸುವ ನವರಸಗಳಿಗೂ, ತೃಪ್ತಿ, ಅತೃಪ್ತಿಗಳಿಗೂ ಆಕಾಶ ಕಾರಣವೆಂದರೆ ಅತಿಶಯೋಕ್ತಿಯಲ್ಲ. ಭೂಮಿಯಲ್ಲಿನ ಗಿಡ-ಮರಗಳು ಬೆಳೆಯಲು ಆಕಾಶವಿರುವುದರಿಂದಲೇ ಸಾಧ್ಯವಾಗಿದೆ. ಆಕಾಶದ ಕುರಿತು ಎಷ್ಟು ಹೆಚ್ಚು ವಿವರಣೆ ನೀಡಿದರೂ ಅದು ಕಡಿಮೆಯೇ ಆಗುತ್ತದೆ, ಏನೋ ಕೊರತೆ ಇದ್ದೇ ಇರುತ್ತದೆ. ಅದನ್ನು ವಿವರಿಸುವುದು ಕಷ್ಟ. ನಮ್ಮ ಮೆದುಳು ಗ್ರಹಿಸಬಹುದಾದ ಅತ್ಯಂತ ಕೊನೆಯ ಸಂಗತಿ ಎಂದರೆ ಆಕಾಶ ಮಾತ್ರ. ಅದರ ಆಚೆಗೆ ಮೆದುಳು ಚಿಂತಿಸಲು ಸಾಧ್ಯವಿದೆಯೇ? ಅದು ಹೀಗೆ ಎಂದು ಹೇಳಲು ಸಾಧ್ಯವಿದೆಯೇ?
ಆಗಸದ ಬಣ್ಣವದು ತೋರುವಂತಿಹುದೇನು
ನೀಲಿ ಕೆಂಪು ಕಪ್ಪಾಗಿ ತೋರುವುದೆ ಸೊಗಸು |
ಅರಿತವರು ಯಾರಿಹರು ಗಗನದ ನಿಜಬಣ್ಣ
ದೇವನೆಂತಿಹನೆಂದು ಗೊತ್ತಿಹುದೆ ಮೂಢ? ||
     ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂ ಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ -ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ- ಕೂಡಿದ್ದುದಾಗಿದ್ದು, ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ?  ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ: ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ | ತದಂತರಸ್ಯ ಸರ್ವಸ್ಯ ಅದು ಸರ್ವಸ್ಯಾಸ್ಯ ಬಾಹುತಃ || (ಯಜು. ೪೦.೫.) ಅದು ವಿಶ್ವಕ್ಕೆ ಗತಿ ನೀಡುತ್ತದೆ, ಅದು ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿದೆ, ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ, ಇದೆಲ್ಲದರ ಹೊರಗೂ ಇದೆ ಎಂಬುದು ಇದರ ಅರ್ಥ. ಈ ಎಲ್ಲಾ ಗುಣಗಳು ಆಕಾಶಕ್ಕೆ ಇರುವುದರಿಂದ ಆಕಾಶವನ್ನು ಕಣ್ಣಿಲ್ಲದೇ ಕಾಣಬಲ್ಲ 'ದೇವರ ಕಣ್ಣು' ಎನ್ನೋಣವೇ?
     ಆಕಾಶ ಇಂತಹ ಸ್ಥಳದಲ್ಲಿ ಇದೆ, ಇಂತಹ ಸ್ಥಳದಲ್ಲಿ ಇರುವುದಿಲ್ಲವೆಂದು ಹೇಳಲಾಗುವುದಿಲ್ಲ. ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದಿದೆ, ಧಗಧಗಿಸುವ ಅಗ್ನಿಯ ಜೊತೆಗೂ ಇದೆ, ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು, ನೀರು ತೋಯಿಸಲಾರದು, ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜೊತೆಗೂ ಅದು ಇರುತ್ತದೆ, ಪ್ರಳಯ, ವಿನಾಶ ಕಾಲದಲ್ಲೂ ಅದು ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ, ಕೊನೆಯಿಲ್ಲ, ಅರ್ಥಾತ್ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪರಮಾತ್ಮನನ್ನೂ ಹೀಗೆಯೇ ಇದ್ದಾನೆ ಅನ್ನುತ್ತೇವೆ. ದೇವರ ವಿಶ್ವರೂಪ ದರ್ಶನವೆಂದರೆ ಆಕಾಶವೇ ಅಲ್ಲವೇ? ಒಳಗಣ್ಣಿದ್ದು ತೆರೆದು ನೋಡಬಲ್ಲವರು ಈ ವಿಶ್ವರೂಪವನ್ನು ಅವರ ಶಕ್ತ್ಯಾನುಸಾರ ಕಂಡಾರು. ನಿಜವಾಗಿ ದೇವರ ಪ್ರತಿನಿಧಿ ಎಂದು ಆಕಾಶವನ್ನು ಹೆಸರಿಸಬಹುದೇ ಹೊರತು, ಯಾವುದೇ ವ್ಯಕ್ತಿ ಅಥವ ಜೀವಿಯನ್ನು ಇಂತಹ ಅಗಾಧ ಶಕ್ತಿಯ ಪ್ರತಿನಿಧಿ ಎಂದು ಹೇಳುವುದು, ದೇವರ ಮಗ ಅನ್ನುವುದು, ದೇವರ ರೂಪದಲ್ಲಿ ಕಾಣುವುದು ಸಮಂಜಸವೆನಿಸುವುದಿಲ್ಲ. ಎಲ್ಲರಲ್ಲೂ 'ಅವನ' ಅಂಶವಿರುವುದರಿಂದ ಆ ವಿಶಾಲಾರ್ಥದಲ್ಲಿ ತೆಗೆದುಕೊಳ್ಳಬಹುದೇ ಹೊರತು, ಯಾರನ್ನೇ ಆಗಲಿ ದೇವರಂತೆ ಭಾವಿಸುವುದು ಸೂಕ್ತವಲ್ಲ. ನಾಶವಿರದ ಭಗವಂತನನ್ನು ನಾಶವಾಗಬಹುದಾದ ಸಂಗತಿಗಳಲ್ಲಿ ಗುರುತಿಸುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಬೇಕಾದರೆ ದೇವಮಾನವರು, ಮಹಿಮಾವಂತರು, ವಿಶೇಷ ಶಕ್ತಿಯುಳ್ಳವರು, ಹೀಗೆ ಭಾವಿಸಬಹುದು.
ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ |
ಆಗಸದ ನಿಜತತ್ವ ಅರಿತವರು ಯಾರು?
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ ||
     ಆಕಾಶವನ್ನು ಕಾಣಲಾಗುವುದಿಲ್ಲ, ಆದುದರಿಂದ ಅದನ್ನು ನಂಬುವುದಿಲ್ಲ ಎನ್ನಬಹುದೇ? ಆಕಾಶವೇ ಇಲ್ಲವೆಂದರೆ ಅದು ಇಲ್ಲವಾಗುತ್ತದೆಯೇ? ಆಕಾಶದ ಗುಣ ಹೇಗಿದೆ? ಅದಕ್ಕೆ ಗುಣವಿಲ್ಲ, ನಿರ್ಗುಣ. ಅದಕ್ಕೆ ಮಮಕಾರವೂ ಇಲ್ಲ, ಅಹಂಕಾರವೂ ಇಲ್ಲ. ಭೇದ-ಭಾವ ಮಾಡುವುದೇ ಇಲ್ಲ. ಜಾತಿ, ಮತ, ಪಂಥಗಳ ಕಟ್ಟಿಲ್ಲ. ಆ ದೇಶ, ಈ ದೇಶ ಅನ್ನುವುದು ಇಲ್ಲ. ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ, ಮುಂದೆಯೂ ಹೀಗೆಯೇ ಇರುತ್ತದೆ. ಇದು ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮಿಕ ಸತ್ಯ. ಕೆಟ್ಟವರು, ಒಳ್ಳೆಯವರು, ಜೀವಿ, ನಿರ್ಜೀವಿ ಎಂದು ಎಣಿಸುವುದೇ ಇಲ್ಲ. ಯಾರು ಏನೇ ಮಾಡಿದರೂ ಅಡ್ಡಿಪಡಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಎಲ್ಲಾ ಆಗು-ಹೋಗುಗಳಿಗೆ, ಕ್ರಿಯೆಗಳಿಗೆ ಅದು ಕೇವಲ ಸಾಕ್ಷಿಯಾಗಿರುತ್ತದೆ. ಖಾಲಿ ಆಕಾಶವನ್ನು ಯಾವುದರಿಂದಲಾದರೂ ತುಂಬಿ ಭರ್ತಿ ಮಾಡಲು ಸಾಧ್ಯವಿದೆಯೇ? ಇಲ್ಲ, ಎಷ್ಟು ತುಂಬಿದರೂ, ಏನನ್ನು ತುಂಬಿದರೂ ಅದು ಭರ್ತಿಯಾಗುವುದೇ ಇಲ್ಲ. ಹಾಗೆಯೇ ನಾವು ಆಕಾಶವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಹೊರಟರೂ ಅದು ಆಕಾಶವಾಗಿಯೇ, ಗೂಢವಾಗಿಯೇ ಉಳಿಯುತ್ತದೆ. ಆಕಾಶ ನಮ್ಮನ್ನು ಅರಗಿಸಿಕೊಳ್ಳುತ್ತದೆ. ನಾವು ಆಕಾಶವನ್ನಲ್ಲ. ಆಕಾಶ ನಮ್ಮ ಅಹಂ, ಮನಸ್ಸು, ಯೋಚನೆಗಳು, ಚಿಂತನೆಗಳು, ಜ್ಞಾನ, ಅಜ್ಞಾನ, ಎಲ್ಲವನ್ನೂ, ಎಲ್ಲಾ ಅಂದರೆ ಎಲ್ಲವನ್ನೂ, ನುಂಗಿ ನೀರು ಕುಡಿಯಬಲ್ಲದು, ಅರ್ಥಾತ್ ಅರಗಿಸಿಕೊಳ್ಳಬಲ್ಲದು. ಪರಮಾತ್ಮ 'ನಿರ್ಮಮೋ ನಿರಹಂಕಾರಃ' ಎಂಬುದನ್ನು ತೋರ್ಪಡಿಸಿಕೊಂಡಿರುವುದು ಆಕಾಶದಿಂದಲೇ. ಆಕಾಶವನ್ನು ತೃಪ್ತಿ ಪಡಿಸಲು ಯಾವ ಪೂಜೆ ಮಾಡಬೇಕು? ಯಾವ ಪ್ರಾಣಿಯ ಬಲಿ ಕೊಡಬೇಕು? ಯಾವ ನೈವೇದ್ಯ ಇಡಬೇಕು? ಏನೂ ಮಾಡಬೇಕಿಲ್ಲ. 'ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟದ್ದಕ್ಕೆ ಕೆಟ್ಟದ್ದು' ಎಂಬುದು ಜ್ಞಾನಿಗಳು, ಸಾಧಕರು ಹೇಳುವ ಮಾತು. ಪುನರ್ಜನ್ಮವನ್ನು ನಂಬದವರೂ ಸಹ ದೇವರು ಒಂದು 'ನಿರ್ಣಾಯಕ ದಿನ'ದಂದು ಎಲ್ಲಾ ಜೀವಿಗಳಿಗೆ ಅವರ ಕರ್ಮಕ್ಕನುಸಾರವಾಗಿ ಫಲ ಕೊಡುತ್ತಾನೆಂದು ನಂಬುತ್ತಾರೆ. ಪುನರ್ಜನ್ಮವನ್ನು ನಂಬುವವರಿಗೆ ಪೂರ್ವಾರ್ಜಿತ ಕರ್ಮದ ಅನುಸಾರ ಮುಂದಿನ ಜನ್ಮವೆಂದು ಹೇಳುತ್ತಾರೆ. ಒಟ್ಟಿನಲ್ಲಿ ನಾವು 'ಒಳ್ಳೆಯ' ರೀತಿ ಬಾಳಬೇಕೆಂಬುದು ನೀತಿ. ಹಾಗೆ ಮಾಡಲು ಏನು ಅಡ್ಡಿ? ಆಕಾಶವನ್ನು ಕೃತಕ ಭಯ, ಭಕ್ತಿಗಳಿಂದ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ದೇವರನ್ನೂ ಭಯ-ಭಕ್ತಿಗಳಿಂದ ತೃಪ್ತಿಪಡಿಸಿ ನಮ್ಮ ಇಚ್ಛೆ ಈಡೇರಿಸಿಕೊಳ್ಳುವೆವೆಂಬುದು ಭ್ರಮೆ ಎಂದು ಆಕಾಶ ಸಾರುತ್ತಿದೆ. ನಮ್ಮ ಕಷ್ಟ-ನಷ್ಟಗಳಿಗೆ, ಒಳಿತು-ಕೆಡಕುಗಳಿಗೆ ದೇವರು ಕಾರಣನಲ್ಲ, ನಾವೇ ಎಂಬುದನ್ನು 'ಆಕಾಶ' ತನ್ನ ಇರುವಿಕೆಯ ರೀತಿಯಿಂದ ಹೇಳುತ್ತಿದೆ.
     ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಗಳನ್ನು ಮೇಲೆತ್ತಿ 'ದೇವರೇ ಕಾಪಾಡಪ್ಪಾ' ಅನ್ನುತ್ತೇವೆ. ಅಂದರೆ ದೇವರು 'ಮೇಲೆ' ಇದ್ದಾನೆ ಎಂದು ಅಂದುಕೊಳ್ಳುತ್ತೇವೆ, ಆಕಾಶವನ್ನೂ 'ಮೇಲೆ' ಇದೆ ಎಂದು ಭಾವಿಸಿದಂತೆ! ಆಕಾಶವನ್ನು ಬೆಟ್ಟ-ಗುಡ್ಡಗಳ ಮೇಲೆ, ರಾತ್ರಿಯಲ್ಲಿ ಮಿನುಗುವ ಚಂದ್ರ-ತಾರೆಗಳ ಹಿನ್ನೆಲೆಯಲ್ಲಿ ಕಾಣುವ ಸುಂದರ ದೃಷ್ಯಗಳ ರೀತಿಯಲ್ಲಿ ಕಾಣುವ ನಾವು ದೇವರೂ ವೈಕುಂಠ, ಕೈಲಾಸ, ಇತ್ಯಾದಿ ಬೇರೆಯೇ ಲೋಕಗಳಲ್ಲಿದ್ದಾನೆಂದು ಭಾವಿಸುತ್ತೇವೆ. ಕಾಶಿ, ಬದರಿ, ಅಯೋಧ್ಯೆ, ಕನ್ಯಾಕುಮಾರಿ, ಮೆಕ್ಕಾ, ಜೆರುಸಲೇಮ್, ಇತ್ಯಾದಿ ಸ್ಥಳಗಳು ದೇವರು ಇರುವ ವಿಶೇಷ ಸ್ಥಳಗಳೆಂದುಕೊಳ್ಳುತ್ತೇವೆ. ಆಕಾಶವನ್ನು ಮೇಲೆ ಮಾತ್ರ ಇದೆ ಎಂದು ಅಂದುಕೊಳ್ಳುವ ನಾವು ಅದು ನಮ್ಮೊಡನೆಯೇ ಇದೆ ಎಷ್ಟು ಜನ ಭಾವಿಸುತ್ತೇವೆ? ಅಶನ, ವಸನ, ವಸತಿಗಳನ್ನು ಕರಣಿಸುವ ಭೂಮಿ ನಮ್ಮ ತಾಯಿಯಾದರೆ, ಸದಾ ನಮ್ಮೊಡನಿದ್ದು ನಮ್ಮನ್ನು ಗಮನಿಸುವ ಆಕಾಶ ನಮ್ಮ ತಂದೆ! ನಮ್ಮೊಂದಿಗಿದ್ದರೂ ತನ್ನ ಇರುವನ್ನು ಪ್ರಕಟಿಸದ, ನಮ್ಮ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸದ, ಜಗತ್ತನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿರುವ ಆಗಸಕ್ಕಿಂತ ಹೆಚ್ಚು ವಾತ್ಸಲ್ಯಮಯಿ ತಂದೆ ಬೇರೆ ಯಾರಾದರೂ ಇರಲು ಸಾಧ್ಯವೇ?
     ನಾಟಕದಲ್ಲಿ ಪಾತ್ರಧಾರಿಗಳು ನಾಟಕ ಆಡುವಾಗ ಪಾತ್ರಗಳೇ ಆಗಿ ಅನುಭವಿಸಿ ಆಡಿದರೂ ನಾಟಕ ಮುಗಿದ ನಂತರ ವಾಸ್ತವ ವ್ಯಕ್ತಿಗಳಾಗುತ್ತಾರೆ. ಆದರೆ ನಿಜ ಜೀವನನಾಟಕದಲ್ಲಿ? ಈ ನಾಟಕರಂಗದ ಅದ್ಭುತ ಪರದೆ ಆಕಾಶ! ಈ ಪರದೆಯ ಮುಂದೆ ನಾವು-ನೀವೆಲ್ಲರೂ ಪಾತ್ರಧಾರಿಗಳೇ. ನಮ್ಮ ಪಾತ್ರಗಳನ್ನು ನಾವು ಎಷ್ಟು ತನ್ಮಯರಾಗಿ ನಿರ್ವಹಿಸುತ್ತೇವೆಂದರೆ ನಾವು ಆ ಪಾತ್ರಗಳೇ ಆಗಿಬಿಡುತ್ತೇವೆ. ನಾವು ನಿಜವಾಗಿ 'ಯಾರು' ಎಂದು ತಲೆಕೆಡಿಸಿಕೊಳ್ಳುವುದೇ ಇಲ್ಲ, ಮತ್ತು ಪಾತ್ರವಲ್ಲದೆ ನಾವು ಬೇರೆ ಎಂದು ಅಂದುಕೊಳ್ಳುವುದೇ ಇಲ್ಲ.  ಈ ಜೀವನ ನಾಟಕದಲ್ಲಿ ನಮ್ಮದು ಕೆಲ ಸೀಮಿತ ಅವಧಿಗೆ ಬಂದು ಹೋಗುವ ಪಾತ್ರವಾಗಿದ್ದರೂ ನಾವು ಶಾಶ್ವತರೆಂದು ಅಂದುಕೊಂಡು, ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸಲು, ನಮ್ಮತನವನ್ನು ಅಚ್ಚೊತ್ತಲು ಜೀವನ ಪೂರ್ತಿ ತೊಡಗಿಕೊಳ್ಳುತ್ತೇವೆ!
     ಒಂದು ಮೂಲವಸ್ತು ಯಾವ ಕಾಲಕ್ಕೂ ನಾಶವಾಗುವುದಿಲ್ಲ, ರೂಪಾಂತರ ಮಾತ್ರ ಹೊಂದುವುದೆಂದು ವಿಜ್ಞಾನ ಹೇಳುತ್ತದೆ. ನಮ್ಮ ದೇಹ ಪಂಚಭೂತಗಳಿಂದ ಆಗಿದ್ದು ಆ ದೇಹಕ್ಕೆ ಅರ್ಥ ಕೊಡುವ ಒಂದು ಶಕ್ತಿ ಜೀವಾತ್ಮ. ಸತ್ತ ನಂತರದಲ್ಲಿ ದೇಹ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ಜೀವಾತ್ಮ? ಅದಕ್ಕೆ ನಾಶವಿಲ್ಲ. ನಂತರದಲ್ಲಿ ಅದು ಹೊಸ ಶರೀರವನ್ನು ಕಂಡುಕೊಳ್ಳುತ್ತದೆ ಎಂದು ತಿಳಿದವರು ಹೇಳುತ್ತಾರೆ. ವೈಜ್ಞಾನಿಕವಾಗಿ ಚಿಂತಿಸಿದರೂ ಪಂಚಭೂತಗಳಿಗೆ ಸೇರದ ಜೀವಾತ್ಮ ಯಾವುದಾದರೂ ರೂಪದಲ್ಲಿ ಇರಲೇಬೇಕಲ್ಲವೆ? ಈ ಎಲ್ಲಾ ಕ್ರಿಯೆಗಳಿಗೆ ಸಾಕ್ಷಿಯಾಗುವುದು ಆಕಾಶವೊಂದೇ! ಇದ್ದದ್ದು ಆಕಾಶದಲ್ಲಿ, ಹೋದದ್ದು ಆಕಾಶದಲ್ಲಿ, ಬರುವುದೂ ಆಕಾಶದಲ್ಲಿ! ಇದನ್ನು ವೈಜ್ಞಾನಿಕ ಆಸ್ತಿಕವಾದವೆನ್ನಬಹುದು.
-ಕ.ವೆಂ.ನಾಗರಾಜ್.
*****************
ದಿನಾಂಕ 18.11.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಡಿಸೆಂಬರ್ 7, 2015

ಸಾಧನಾ ಸೋಪಾನ - 13: ಪ್ರಾಣಾಧಾರ ವಾಯು



     ಜೀವಿಗಳು ಜೀವ ಧರಿಸಲು ಸಾಧ್ಯವಾಗಿರುವುದು ಪಂಚಭೂತಗಳಲ್ಲೊಂದಾದ ವಾಯುವುನಿಂದಾಗಿಯೇ! ಹೀಗಾಗಿ ವಾಯುವು ಭೂಮಿ, ಜಲ, ಅಗ್ನಿಗಳಿಗಿಂತಲೂ ಮೇಲಿನ ಸಂಗತಿಯಾಗಿದೆ. ಸಾಮಾನ್ಯವಾಗಿ ಗಾಳಿ ಎನ್ನುವ ಇದಕ್ಕೆ ವಾತ, ಪವನ, ಪ್ರಾಣ ಇತ್ಯಾದಿ ಹೆಸರುಗಳೂ ಇವೆ. ವಾಯುವಿನ ಪ್ರಾಮುಖ್ಯತೆ ಬಗ್ಗೆ ಒಂದು ಕಥೆಯಿದೆ. ಒಮ್ಮೆ ದೇಹದ ಅಂಗಗಳು, ಇಂದ್ರಿಯಗಳನ್ನು ನಿಯಂತ್ರಿಸುವ ದೇವರುಗಳಲ್ಲಿ ಯಾರು ಹೆಚ್ಚು ಎಂಬ ಬಗ್ಗೆ ಸ್ಪರ್ಧೆ ಉಂಟಾಯಿತಂತೆ. ಒಂದರ ನಂತರ ಒಂದರಂತೆ ಅವರುಗಳು ದೇಹವನ್ನು ಬಿಟ್ಟು ಹೋಗಿ ಪರಿಣಾಮ ವೀಕ್ಷಿಸಿದರಂತೆ. ಒಬ್ಬೊಬ್ಬ ದೇವರು ಹೊರಹೋದಾಗಲೂ ಕಣ್ಣು ಕಾಣಿಸದಿರುವುದು, ಕಿವಿ ಕೇಳಿಸದಿರುವುದು, ಇತ್ಯಾದಿ ಪರಿಣಾಮಗಳಾಗಿ ಏರುಪೇರುಗಳಾಗುತ್ತಿದ್ದವಂತೆ. ಕೊನೆಯಲ್ಲಿ ವಾಯುದೇವ ಬಿಟ್ಟು ಹೊರಡಲು ಅನುವಾಗುತ್ತಿದ್ದಂತೆ ಇತರ ಎಲ್ಲಾ ದೇವರುಗಳಿಗೂ ಬಲವಂತವಾಗಿ ಹೊರದೂಡಲ್ಪಡುವ ಅನುಭವವಾಯಿತಂತೆ. ವಾಯು ಇದ್ದರೆ ಮಾತ್ರ ತಮ್ಮ ಅಸ್ತಿತ್ವ, ಇಲ್ಲದಿದ್ದರೆ ತಮಗೆ ಅಸ್ತಿತ್ವ ಇಲ್ಲ ಎಂಬುದನ್ನು ಮನಗಂಡ ಅವರುಗಳು ವಾಯುವೇ ಪ್ರಧಾನ ಎಂದು ಒಪ್ಪಿಕೊಂಡರಂತೆ. ಇದು ಕಲ್ಪಿತ ಕಥೆಯಾದರೂ ಇದರಲ್ಲಿ ಸತ್ಯವಿದೆ, ಸತ್ವವಿದೆ.
     ಜೀವಿಯ ಹುಟ್ಟು ಮತ್ತು ಸಾವು ಎರಡೂ ಉಸಿರಿನ ಮೇಲೆ ನಿಂತಿದೆ. ಹುಟ್ಟುವ ಕ್ಷಣದಿಂದಲೇ ಆರಂಭವಾಗುವ ಉಸಿರಾಟ ಸಾವಿನವರೆಗೂ ನಿರಂತರವಾಗಿ ಮುಂದುವರೆಯುತ್ತದೆ. ಉಸಿರು ನಿಂತಾಗ ಜೀವವೂ ನಿಲ್ಲುತ್ತದೆ. ಒಬ್ಬ ಮನುಷ್ಯ ಒಂದು ನಿಮಿಷಕ್ಕೆ 30 ಸಲ ಉಸಿರಾಡುತ್ತಾನೆ ಎಂದಿಟ್ಟುಕೊಂಡರೆ ಮತ್ತು 100 ವರ್ಷ ಬದುಕುತ್ತಾನೆ ಎಂದುಕೊಂಡರೆ ಜೀವಿತಾವಧಿಯಲ್ಲಿ ಒಟ್ಟು 30x60x24x365x100 ಸಲ ಉಸಿರಾಡುತ್ತಾನೆ! ಒಂದೊಂದು ಸಲ ಉಸಿರಾಡಿದಾಗಲೂ ಅಷ್ಟರ ಮಟ್ಟಿಗೆ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ. ಈ ಉಸಿರು ಯಾವಾಗ ಪ್ರಾರಂಭವಾಗುತ್ತದೆ, ಯಾವಾಗ ನಿಲ್ಲುತ್ತದೆ, ಯಾರಿಗೆ ಗೊತ್ತು? ಈ ಉಸಿರಿನ ನಿಯಂತ್ರಣ ಯಾರದ್ದು? ನಮ್ಮದಂತೂ ಇರಲಾರದು. ಏಕೆಂದರೆ ನಿದ್ದೆ ಮಾಡುತ್ತಿರುವಾಗಲೂ, ಎಚ್ಚರವಿಲ್ಲದಿರುವಾಗಲೂ ನಾವು ಉಸಿರಾಡುತ್ತಲೇ ಇರುತ್ತೇವೆ! ನಮ್ಮ ನಿಯಂತ್ರಣವಿದ್ದಿದ್ದರೆ ನಾವು ಉಸಿರಾಡುವುದನ್ನು ನಿಲ್ಲಿಸುತ್ತಲೇ ಇರುತ್ತಿರಲಿಲ್ಲ. ಏಕೆಂದರೆ, ಸಾಯುವುದಕ್ಕೆ ಯಾರು ಇಷ್ಟ ಪಡುತ್ತಾರೆ?
     ಉಸಿರು ಜೀವನಾಧಾರವಾಗಿರುವಂತೆಯೇ ನಮ್ಮನ್ನು ಮತ್ತು ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲೂ ಸಹಕಾರಿಯಾಗಿದೆ. ಕೋಪ ಬಂದಾಗ ಭುಸುಗುಡುತ್ತಾ ವೇಗವಾಗಿ ಉಸಿರಾಡುತ್ತೇವೆ. ಶೋಕದಲ್ಲಿದ್ದಾಗ, ಸಂತೋಷದಲ್ಲಿದ್ದಾಗ, ಶಾಂತವಾಗಿದ್ದಾಗ ಉಸಿರಾಡುವ ರೀತಿಗಳೇ ಬೇರೆಯಾಗಿರುತ್ತವೆ. ಶಾಂತವಾಗಿರುವಾಗ ಉಸಿರಾಟ ಬಹಳ ನಿಧಾನವಾಗಿರುತ್ತದೆ. ಆದ್ದರಿಂದ ಕೋಪ ಬಂದಾಗ, ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಸ್ವಲ್ಪ ಹೊತ್ತು ನಿಧಾನವಾಗಿ ಮತ್ತು ದೀರ್ಘವಾಗಿ ಉಸಿರಾಟ ಮಾಡಿದರೆ ಮನಸ್ಸು ತಹಬಂದಿಗೆ ಬರುತ್ತದೆ. ಪ್ರಾಣಾಯಾಮ ಮನಸ್ಸನ್ನು ಶಾಂತಗೊಳಿಸಲು ಸಹಕಾರಿಯಾದ ಕ್ರಮವಾಗಿದೆ. ಪ್ರಾಣಾಯಾಮದಲ್ಲಿ ಉಸಿರನ್ನು ಹೊರಬಿಡುವುದಕ್ಕೆ ರೇಚಕ, ಸಾಧ್ಯವಾದಷ್ಟು ಉಸಿರನ್ನು ಹೊರಗೇ ತಡೆಹಿಡಿದಿಡುವುದಕ್ಕೆ ಬಾಹ್ಯ ಕುಂಭಕ, ಉಸಿರನ್ನು ಒಳಗೆ ತೆಗೆದುಕೊಳ್ಳುವುದಕ್ಕೆ ಪೂರಕ, ಸಾಧ್ಯವಾದಷ್ಟು ಉಸಿರನ್ನು ಒಳಗೇ ತಡೆಹಿಡಿದಿಡುವುದಕ್ಕೆ ಅಭ್ಯಂತರ ಕುಂಭಕ ಎನ್ನುತ್ತಾರೆ. ಈ ನಾಲ್ಕೂ ಸೇರಿದರೆ ಒಂದು ಪ್ರಾಣಾಯಾಮ ಎನ್ನುತ್ತಾರೆ. ವಿವಿಧ ರೀತಿಯ ಪ್ರಾಣಾಯಾಮಗಳಿದ್ದು ಅದರಿಂದ ದೇಹದ ಕಾಯಿಲೆಗಳ ಉಪಶಮನಕ್ಕೆ ಸಹಕಾರಿಯಾಗುವಂತಹವೂ ಇವೆ. ತಿಳಿದವರಿಂದ ಕಲಿತು ಪ್ರಾಣಾಯಾಮದ ಅಭ್ಯಾಸ ಮಾಡುವುದು ಒಳಿತು. ಸರಿಯಾದ ವಿದ್ಯೆ ಕಲಿಸುವವರು ಸಿಗದಿದ್ದರೆ ಅಥವ ಕಲಿಯಲು ಸಾಧ್ಯವಾಗದಿದ್ದರೆ ದೀರ್ಘ ಶ್ವಾಸೋಚ್ಛ್ವಾಸಗಳೇ ಸಾಕಾಗುತ್ತದೆ. ದೀರ್ಘ ಉಸಿರಾಟ ದೀರ್ಘ ಆಯಸ್ಸಿನ ರಹಸ್ಯವೆಂದು ಹೇಳುತ್ತಾರೆ. ದೀರ್ಘಕಾಲ ಬದುಕುವ ಆಮೆ ಬಹಳ ನಿಧಾನವಾಗಿ ಉಸಿರಾಡುತ್ತದೆ. ಪ್ರಾಣಾಯಾಮದ ಮಂತ್ರಗಳಿವು:
ಓಂ ಭೂಃ| ಓಂ ಭುವಃ| ಓಂ ಸ್ವಃ| ಓಂ ಮಹಃ| ಓಂ ಜನಃ| ಓಂ ತಪಃ| ಓಂ ಸತ್ಯಂ|
     ಸರ್ವರಕ್ಷಕ ದೇವ ಸದ್ರೂಪನು, ಸರ್ವವ್ಯಾಪಿ ದೇವ ಚಿದ್ರೂಪನು, ಸರ್ವಪ್ರದ ದೇವ ಆನಂದಸ್ವರೂಪನು, ಸರ್ವಾಚ್ಛಾದಕ ದೇವ ಮಹತ್ತಮನು, ಸರ್ವ ಪ್ರಾಪ್ಯ ದೇವ ಜಗಜ್ಜನಕನು, ಜ್ಞಾನಸ್ವರೂಪ ದೇವ ತಪಃಸ್ವರೂಪನು, ಸಹನಶೀಲನು, ಅನಾದಿ ಅನಂತ ಸತ್ಯಸ್ವರೂಪನು ಎಂಬುದು ಈ ಮಂತ್ರದ ಅರ್ಥವಾಗಿದೆ. ಯಜ್ಞ ಮಾಡುವಾಗ, ಅಗ್ನಿಹೋತ್ರ, ಹೋಮ-ಹವನಗಳನ್ನು ಮಾಡುವಾಗ ಸಾಮಾನ್ಯವಾಗಿ ಈ ಮಂತ್ರವನ್ನೂ ಉಚ್ಛರಿಸಲಾಗುತ್ತದೆ:
ಓಂ ಭೂರ್ಭುವಃ ಸ್ವರಗ್ನಿ ವಾಯ್ವಾದಿತ್ಯೇಭ್ಯಃ ಸ್ವಾಹಾ| ಇದಮಗ್ನಿ ವಾಯ್ವಾದಿತ್ಯೇಭ್ಯಃ ಇದಂ ನ ಮಮ|| (ತೈತ್ತರೀಯ ಅರಣ್ಯಕ.10.3.)
     ಆ ಸಚ್ಚಿದಾನಂದ ಸ್ವರೂಪನಾದ ಪ್ರಭುವಿನ ನಾಯಕತ್ವ, ಪ್ರಾಣಾಧಾರಕತ್ವ, ಅಖಂಡತ್ವಗಳ ಅನುಭೂತಿಗಾಗಿ ಈ ಆತ್ಮನಿವೇದನೆ. ಇದು ಆ ದೇವನ ನೇತೃತ್ವ, ಪ್ರಾಣಪ್ರದತ್ವ ಮತ್ತು ಅಖಂಡತ್ವದ ಸಾಕ್ಷಾತ್ಕಾರಕ್ಕಾಗಿಯೇ ಹೊರತು ನನ್ನ ಸ್ವಾರ್ಥಕ್ಕಲ್ಲ ಎಂಬುದು ಈ ಮಂತ್ರದ ಅರ್ಥ. ಯಜ್ಞದ ಸಂದರ್ಭದಲ್ಲಿ ಅರ್ಪಿಸಲಾಗುವ ಔಷಧೀಯ ಗುಣಗಳುಳ್ಳ ಹವಿಸ್ಸು, ಸಮಿತ್ತುಗಳನ್ನು ಅಗ್ನಿ ಅರಗಿಸಿದರೆ, ವಾಯುವು ಅದನ್ನು ಸರ್ವರಿಗೂ ತಲುಪಿಸುವ ಕೆಲಸ ಮಾಡುತ್ತಾನೆ.
     ವೈಜ್ಞಾನಿಕವಾಗಿಯೂ ಸಹ ವಾತಾವರಣವೆಂದು ಕರೆಯಲಾಗುವ ವಾಯುವಿನ ಮಹತ್ವ ವಿವರಿಸಲಾಗಿದೆ. ವಾಯು ಒಂದು ಮಹತ್ವವಾದ ಶಕ್ತಿಯಾಗಿದ್ದು, ಈ ಜೀವನಾಧಾರ ವಾಯುವಿನ ಬಗ್ಗೆ ನಾವು ಕೃತಜ್ಞರಾಗಿರಬೇಕಿದೆ. ಪ್ರತಿ ಮಾನವ ಮಾನವನೆನಿಸಿಕೊಳ್ಳಬೇಕಾದರೆ ಜೀವಿತಕಾಲದಲ್ಲಿ ಮೂರು ಋಣಗಳನ್ನು ತೀರಿಸಬೇಕಿರುತ್ತದೆ - ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ಪಿತೃಋಣ ಮತ್ತು ಆಚಾರ್ಯಋಣಗಳ ಬಗ್ಗೆ ಚರ್ಚಿಸುವುದು ಇಲ್ಲಿ ಅಪ್ರಸ್ತುತವಾಗುತ್ತದೆ. ಇನ್ನು ದೇವಋಣವನ್ನು ತೀರಿಸುವುದು ಹೇಗೆ? ದೇವರ ಧ್ಯಾನ ಮಾಡುತ್ತಾ ಕೂರುವುದೇ? ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಪೂಜೆ ಸಲ್ಲಿಸುವುದೇ? ಇದಾವುದೂ ಅಲ್ಲ. ನಮ್ಮ ಶರೀರ ಪಂಚಭೂತಗಳಿಂದ ಕೂಡಿದ್ದು ಅಂತ್ಯದಲ್ಲಿ ಸೇರುವುದು ಪಂಚಭೂತಗಳಲ್ಲಿಯೇ! ನಮಗೆ ದೇವರ ಅನುಭವವಾಗಬೇಕೆಂದರೆ ಪಂಚಭೂತಗಳ ಸಹಾಯದಿಂದ ಪಂಚಭೂತಗಳ ರೂಪದಲ್ಲಿಯೇ ಆಗಬೇಕು. ಈ ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶಗಳ ಪ್ರತಿ ನಮಗೆ ಜವಾಬ್ದಾರಿಯಿದೆ. ಅದೆಂದರೆ ಅವುಗಳನ್ನು ಹಾನಿ ಮಾಡದೆ ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗಳೂ 'ಜೀವಿಸಲು' ಅನುಕೂಲ ಮಾಡಿಕೊಡುವುದು! ಇದೇ ದೇವಋಣ ತೀರಿಸುವ ರೀತಿ!
     ವಾಯುವನ್ನು ಶುದ್ಧವಾಗಿಡುವಲ್ಲಿ ನಮ್ಮ ಕರ್ತವ್ಯದ ಬಗ್ಗೆ ಗಮನಿಸೋಣ. ವಾಯುಮಾಲಿನ್ಯದಿಂದ ಜಗತ್ತು ತಲ್ಲಣಿಸುತ್ತಿದೆ. ಇದರಿಂದಾಗಿ ನೂರಾರು ರೀತಿಯ ಕಾಯಿಲೆಗಳು, ಸಾವು ಸಂಭವಿಸುವುದು, ಇತರ ಜೀವ ಜಗತ್ತುಗಳಿಗೂ ಆಪತ್ತು, ತಿನ್ನುವ ಆಹಾರ ಕಲುಷಿತವಾಗುವುದು, ಬೆಳೆಗಳು ರೋಗಗ್ರಸ್ಥವಾಗುವುದು, ಇತ್ಯಾದಿ ಗಂಭೀರ ಸಮಸ್ಯೆಗಳು ಉಂಟಾಗುತ್ತಿವೆ. ಭೋಪಾಲ್ ವಿಷಾನಿಲ ದುರಂತದಿಂದ ಸಾವಿರಾರು ಜನರು ಮೃತರಾದುದು, ಬದುಕಿರುವವರು ಶೇಷ ಜೀವನ ಪೂರ್ತಿ ವಾಸಿಯಾಗದ ಕಾಯಿಲೆಗಳಿಂದ ನರಳುತ್ತಿರುವುದು ನಮ್ಮ ಕಣ್ಣ ಮುಂದಿನ ಜ್ವಲಂತ ಉದಾಹರಣೆಯಾಗಿದೆ. ಫ್ಯಾಕ್ಟರಿಗಳಿಂದ ಹೊರಹೊಮ್ಮುವ ವಿಷಾನಿಲಗಳು, ವಾಹನಗಳ ಹೊಗೆ, ಅಣುವಿಕಿರಣ ಹೊಮ್ಮಿಸುವ ಮಿಲಿಟರಿ ಉಪಕರಣಗಳು, ಅಸಮರ್ಪಕ ತ್ಯಾಜ್ಯ ವಿಲೇವಾರಿ, ರಾಸಾಯನಿಕ ಅಸ್ತ್ರ-ಶಸ್ತ್ರಗಳು ಇತ್ಯಾದಿಗಳು ಮಾನವ ಕಾರಣದಿಂದಾಗಿ ಆಗುವ ಮಾಲಿನ್ಯಗಳಿಗೆ ಉದಾಹರಣೆಯಾಗಿವೆ. ಮನೆಯ ಒಳಗೆ ಸರಿಯಾಗಿ ಗಾಳಿ, ಬೆಳಕು ಚಲಿಸಲು ಅವಕಾಶವಿಲ್ಲದಿದ್ದರೆ ಸಹ ಅಲ್ಲಿ ದೂಷಿತ ವಾತಾವರಣ ಸೃಷ್ಟಿಯಾಗುತ್ತದೆ. ವಾಯುಮಾಲಿನ್ಯದಿಂದ ಹೃದ್ರೋಗಗಳು, ಕ್ಯಾನ್ಸರ್, ಆಸ್ತಮಾ ಮುಂತಾದ ರೋಗಗಳಲ್ಲದೆ ಮಕ್ಕಳು ಹುಟ್ಟುವಾಗಲೇ ಸಾಯುವ ಸಂಭವನೀಯತೆಯೂ ಇರುತ್ತದೆ.
     ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಜನಪರ ಕಾಳಜಿಯುಳ್ಳ ಜನರು ಮತ್ತು ಸಂಘ-ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ತಂದು ಯೋಜಿತ ರೀತಿಯಲ್ಲಿ ನಗರಗಳ ನಿರ್ಮಾಣ, ವಾಹನಗಳ ನಿಯಂತ್ರಣ, ವೈಜ್ಞಾನಿಕ ರೀತಿಯ ತ್ಯಾಜ್ಯ ವಿಲೇವಾರಿ, ವಾಯುಶುದ್ಧೀಕರಣದ ಕುರಿತು ಕ್ರಮಗಳನ್ನು ಅನುಸರಿಸುವಂತೆ ಮಾಡಬೇಕಿದೆ. ಭಾರತದಲ್ಲಿ ದೆಹಲಿ, ಕೊಲ್ಕತ್ತ, ಕಾನ್ಪುರ, ಲಕ್ನೌಗಳು ಅತ್ಯಂತ ಕಲುಷಿತ ನಗರಗಳೆಂದು ಹೆಸರಿಸಲ್ಪಟ್ಟಿವೆ. ಉದ್ಯಾನನಗರಿಯೆಂದು ಒಮ್ಮೆ ಹೆಸರಾಗಿದ್ದ ಬೆಂಗಳೂರನ್ನು ಇಂದು ಕಾಂಕ್ರೀಟ್ ನಗರಿ ಮಾತ್ರವಲ್ಲ ಕೊಳಚೆನಗರಿ ಎಂತಲೂ ಹೆಸರಿಸಬಹುದೇನೋ! ವೈಯಕ್ತಿಕವಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಮಾಲಿನ್ಯ ಉಂಟುಮಾಡುವವರನ್ನು ತಡೆಯುವ ಕೆಲಸವನ್ನೂ ಮಾಡಿದರೆ ಇದು ಖಂಡಿತವಾಗಿ ದೇವಋಣವನ್ನು ತೀರಿಸಿದಂತೆ ಆಗುತ್ತದೆ. ಈ ವೇದಮಂತ್ರ ಹೇಳುತ್ತದೆ:
ಯಸ್ಯ ಸೂರ್ಯಶ್ಚಕ್ಷುಶ್ಚಂದ್ರಮಾಶ್ಚ ಪುನರ್ಣವಃ| ಅಗ್ನಿಂ ಯಶ್ಚಕ್ರ ಅಸ್ಯಂ ತಸ್ಮೈ ಜ್ಯೇಷ್ಠಾಯ ಬ್ರಹ್ಮಣೇ ನಮಃ|| ಯಸ್ಯ ವಾತಃ ಪ್ರಾಣಾಪಾನೌ ಚಕ್ಷುರಂಗಿರಸೋ ಭವನ್| ದಿಶೋ ಯಶ್ಚಕ್ರೇ ಪ್ರಜ್ಞಾನೀಸ್ತಸ್ಯ ಜ್ಯೇಷ್ಠಾಯ ಬ್ರಹ್ಮಣೇ ನಮಃ|| (ಅಥರ್ವ.10.7.32-34)
     ಅರ್ಥ: ಸಕಲ ಜೀವಿಗಳಿಗೆ ಆಶ್ರಯವಾದ ಭೂಮಿ ಯಾರ ಪಾದಗಳಂತಿರುವುದೋ, ವಿಶಾಲ ಅಂತರಿಕ್ಷವು ಯಾರ ಉದರಸಮಾನವಾಗಿರುವುದೋ, ದ್ಯುಲೋಕವು ಯಾರ ಶಿರದಂತೆ ಇರುವುದೋ, ಸೂರ್ಯ-ಚಂದ್ರರು ಯಾರ ಕಣ್ಣುಗಳಂತಿರುವುದೋ, ಉಜ್ವಲವಾದ ಅಗ್ನಿಯು ಯಾರ ಮುಖದಂತಿರುವುದೋ, ಸರ್ವವ್ಯಾಪಿ, ಗತಿಶೀಲ ವಾಯು ಯಾರ ಪ್ರಾಣಾಪಾನಗಳಂತಿರುವುದೋ, ಪ್ರಕಾಶಮಾನ ಕಿರಣಗಳ ಸಮೂಹ ಯಾರ ಕಣ್ಣಿನ ಬೆಳಕಿನಂತಿರುವುದೋ, ಜ್ಞಾನ ಸಾಧಕ ದಿಕ್ಕುಗಳು ಯಾರ ಕರ್ಣಗಳಿಂತಿರುವುದೋ ಆ ಬ್ರಹ್ಮಾಂಡಸ್ವರೂಪಿ ಶರೀರಧಾರಿಯಾದ, ವಸ್ತುತಃ ಅಶರೀರನಾದ ಸರ್ವಶ್ರೇಷ್ಠ ಪರಮಾತ್ಮನಿಗೆ ನಮ್ಮ ಅತ್ಯಂತ ಭಕ್ತ್ಯಾದರಗಳ ನಮನಗಳು. ಪಂಚಭೂತಗಳ ರೂಪದಲ್ಲಿ ಭಗವಂತನನ್ನು ಕಾಣಲು ಈ ಮಂತ್ರ ನಮ್ಮನ್ನು ಪ್ರೇರಿಸುವುದಿಲ್ಲವೇ?
-ಕ.ವೆಂ.ನಾಗರಾಜ್.
***************
ದಿನಾಂಕ 12.11.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಡಿಸೆಂಬರ್ 6, 2015

ಸಾಧನಾ ಸೋಪಾನ - 12: ಅಗ್ನಿ - ಜೀವರು ಮತ್ತು ದೇವರ ನಡುವಣ ಕೊಂಡಿ


     ಸಾಧನಾಪಥದ ಸೋಪಾನಗಳಾದ ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ್ಯಾನ ಏಕೆ ಮತ್ತು ಹೇಗೆ ಎಂಬ ಅರಿವು, ದೈಹಿಕ ಮತ್ತು ಮಾನಸಿಕ ಶಕ್ತಿ, ಆಹಾರ, ನೆಲ ಮತ್ತು ಜಲಗಳಿಗಿಂತ ಅಗ್ನಿತತ್ತ್ವ ಹೇಗೆ ಮೇಲಿನದೆಂಬ ಬಗ್ಗೆ ನೋಡೋಣ. ಸೂಕ್ಷ್ಮ ತತ್ತ್ವಗಳು ಸ್ಥೂಲ ತತ್ತ್ವಗಳಿಗಿಂತ ಹೆಚ್ಚು ವ್ಯಾಪಿಸಬಲ್ಲವಾದುದಾಗಿವೆ. ಅಗ್ನಿತತ್ತ್ವ ಸೃಷ್ಟಿಕಾರಕ, ಸ್ಥಿತಿಕಾರಕ ಮತ್ತು ಲಯಕಾರಕ ಪರಮಾತ್ಮನ ಗುಣಗಳನ್ನು ಹೊಂದಿದೆ. ಸೂರ್ಯ ನಮಗೆ ಬೆಳಕು ಮತ್ತು ಶಾಖ ನೀಡುವವನಾಗಿದ್ದಾನೆ. ಶಾಖ ಹೆಚ್ಚಾದಾಗ ಮಳೆ ಬರುತ್ತದೆ, ನೀರು ಅಗ್ನಿಯ ಕಾರಣದಿಂದ, ಅದರ ನಂತರದಲ್ಲಿ ಬರುತ್ತದೆ. ಮಳೆ ಹೇಗೆ ಬರುತ್ತದೆ ಎಂಬುದು ಸಾಮಾನ್ಯ ಜ್ಞಾನದ ಅರಿವಿರುವವರಿಗೆ ತಿಳಿದೇ ಇರುತ್ತದೆ. ನದಿ, ಕೆರೆ, ಕಟ್ಟೆಗಳು, ಸಾಗರಗಳಲ್ಲಿನ ನೀರು ಶಾಖದಿಂದಾಗಿ ಆವಿಯಾಗಿ ವಾತಾವರಣದಲ್ಲಿ ಸೇರಿ ನೀರಿನ ಸಣ್ಣ ಕಣಗಳಾಗಿ ಸಂಗ್ರಹವಾಗುತ್ತವೆ. ಇವುಗಳು ಮೋಡದ ರೂಪದಲ್ಲಿ ಸಂಗ್ರಹವಾಗುತ್ತವೆ. ಹೆಚ್ಚಿನ ಕಣಗಳ ದಟ್ಟ ಸಂಗ್ರಹವಾದಾಗ ಮೋಡಗಳು ಕಪ್ಪಾಗಿ ಭಾರವಾಗುತ್ತಾ ಹೋಗುತ್ತವೆ. ನೀರಿನ ಸಣ್ಣ ಕಣಗಳು ಪರಸ್ಪರ ಡಿಕ್ಕಿ ಹೊಡೆದಾಗ ಒಟ್ಟುಗೂಡಿ ದೊಡ್ಡ ಕಣಗಳಾಗುತ್ತಾ ಹೋಗುತ್ತವೆ. ಗುಡುಗು, ಸಿಡಿಲುಗಳೂ ಸಹ ಈ ಸಂದರ್ಭದಲ್ಲಿ ಕಾಣಬರುತ್ತವೆ. ಸಾಂದ್ರತೆ ಹೆಚ್ಚಾಗಿ ಗಾಳಿಗಿಂತ ಭಾರವಾದಾಗ ಅದು ಮಳೆಯಾಗಿ ಕೆಳಗೆ ಬೀಳುತ್ತದೆ. ಈ ಚಕ್ರ ನಿರಂತರವಾಗಿ ನಡೆಯುತ್ತಿರುತ್ತದೆ. ಸ್ವಾರ್ಥಕ್ಕಾಗಿ ಜಲಮೂಲಗಳನ್ನು ಮುಚ್ಚುತ್ತಿರುವ, ಕಾಡುಗಳನ್ನು, ಬೆಟ್ಟಗುಡ್ಡಗಳನ್ನು ನಾಶ ಮಾಡುತ್ತಿರುವ ಮಾನವ ಈ ಚಕ್ರ ಸುಗಮವಾಗಿ ತಿರುಗಲು ಅಡ್ಡಿಯಾಗಿದ್ದಾನೆ. ಇದರಿಂದಾಗಿ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದಿರುವುದು ಅಥವ ಅತಿಯಾಗಿ ಮಳೆಯಾಗುವುದು ಮುಂತಾದ ಅತಿರೇಕಗಳನ್ನು ಕಾಣುತ್ತಿದ್ದೇವೆ.
     ಪ್ರಮುಖವಾದ ಶಾಖ ಮತ್ತು ಬೆಳಕಿನ ಮೂಲವಾದ ಸೂರ್ಯ ಸೌರ ಮಂಡಲದ ಪ್ರಧಾನವಾದ ಮತ್ತು ಕೇಂದ್ರದಲ್ಲಿರುವ ಬೃಹತ್ ನಕ್ಷತ್ರವಾಗಿದೆ. ಭೂಮಿಯ ವ್ಯಾಸದ ಸುಮಾರು 109ರಷ್ಟು ದೊಡ್ಡದಾದ ಸೂರ್ಯ, ಭೂಮಿಯ ಸುಮಾರು 330,000ದಷ್ಟು ತೂಕವುಳ್ಳದ್ದಾಗಿದೆ. ಇದು ಸೌರಮಂಡಲದ ಒಟ್ಟು ತೂಕದ ಶೇ.99.86 ರಷ್ಟಿದೆ. ಈಗಿನ ಸೂರ್ಯ ಸುಮಾರು 4.567 ಬಿಲಿಯನ್ ವರ್ಷಗಳ ಹಿಂದೆ ಉಗಮಗೊಂಡವನಾಗಿದ್ದು, ಇನ್ನೂ ಸುಮಾರು 4 ಬಿಲಿಯನ್ ವರ್ಷಗಳವರೆಗೆ ಇರುತ್ತಾನೆನ್ನಲಾಗಿದೆ. ಶೇ.73.46ರಷ್ಟು ಜಲಜನಕ, ಶೇ.24.85ರಷ್ಟು ಹೀಲಿಯಮ್ ಹೊಂದಿರುವ ಸೂರ್ಯ ಉಳಿದ ಶೇ.1.69ರಷ್ಟು ಪ್ರಮಾಣದಲ್ಲಿ ಆಮ್ಲಜನಕ, ಇಂಗಾಲ, ಕಬ್ಬಿಣ, ನಿಯಾನ್, ಸಾರಜನಕ, ಸಿಲಿಕಾನ್, ಮೆಗ್ನೀಷಿಯಮ್ ಮತ್ತು ಗಂಧಕಗಳನ್ನು ಹೊಂದಿದೆ. ಇನ್ನೂ ಹೆಚ್ಚಿನ ಕುತೂಹಲಕಾರಿ ವಿಷಯಗಳನ್ನು  http://en.wikipedia.org/wiki/Sun ಇಲ್ಲಿ ತಿಳಿಯಬಹುದು. ಲೇಖನಕ್ಕೆ ಪೂರಕವಾಗಿ ಕೆಲವು ಮಾಹಿತಿಯನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಿದೆ. ಆಗಸದಲ್ಲಿ ಅತಿ ಪ್ರಕಾಶಮಾನವಾದ ನಕ್ಷತ್ರವೆಂದರೆ ಸೂರ್ಯವೇ ಆಗಿದೆ. ಸೂರ್ಯನನ್ನು ದೇವತೆಯೆಂದು ಆರಾಧಿಸುವುದನ್ನು ಕಾಣಬಹುದು. ಭೂಮಿಯ ಮೇಲೆ ಸೂರ್ಯನ ಪ್ರಭಾವ ಗಣನೀಯವಾಗಿದ್ದು, ಸೂರ್ಯನ ಸುತ್ತ ಒಂದು ಸುತ್ತು ಸುತ್ತಲು ಭೂಮಿ ತೆಗೆದುಕೊಳ್ಳುವ ಕಾಲವನ್ನು ಒಂದು ವರ್ಷವೆನ್ನುತ್ತಾರೆ. ಈ ಕಾಲಗಣನೆಯೇ ಇಂದು ಬಳಕೆಯಲ್ಲಿರುವುದಾಗಿದೆ. ವಾರದ ಮೊದಲ ದಿನವನ್ನು ರವಿವಾರವೆಂದು ಹೆಸರಿಸಲಾಗಿದೆ. ಒಟ್ಟಾರೆಯಾಗಿ ಸೂರ್ಯ ಜೀವಿಗಳಿಗೆ ಶಕ್ತಿ, ಬೆಳಕು, ಜೀವನಾಧಾರ ಸಂಗತಿಯಾಗಿದ್ದಾನೆ.      ಈ ಬೃಹತ್ ಬ್ರಹ್ಮಾಂಡದಲ್ಲಿ ನಮ್ಮ ಭೂಮಿ ಇರುವುದೊಂದೇ ಸೂರ್ಯ ಮಂಡಲ ಅಲ್ಲ. ಇಂತಹ ಅದೆಷ್ಟು ಅಸಂಖ್ಯ ಸೂರ್ಯಗಳು, ಭೂಮಿಗಳು ಇರುವ ಸೂರ್ಯಮಂಡಲವಿದೆಯೋ ಗೊತ್ತಿಲ್ಲ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಈಗಾಗಲೇ ಸುಮಾರು 500 ಸೂರ್ಯಮಂಡಲಗಳಿರುವುದನ್ನು ಖಚಿತಪಡಿಸಿದ್ದಾರೆ, ಇನ್ನೂ ಹೊಸ ಹೊಸ ಸೂರ್ಯಮಂಡಲಗಳು ಪತ್ತೆಯಾಗುತ್ತಿವೆ.
     "ಓಂ ಸೂರ್ಯೋ ಜ್ಯೋತಿರ್ಜ್ಯೋತಿಃ ಸೂರ್ಯಃ ಸ್ವಾಹಾ||" (ಯಜು.3.9.1.) 'ಸೂರ್ಯ ಜ್ಯೋತಿರ್ಯುಕ್ತನಾಗಿದ್ದಾನೆ. ಆದರೆ ಜ್ಯೋತಿರ್ಮಯ ಪ್ರಭುವು ಸೂರ್ಯನಿಗೂ ಸೂರ್ಯನಾಗಿದ್ದಾನೆ. ಇದು ಸತ್ಯ' ಎಂಬುದು ಇದರ ಅರ್ಥ. ವೇದಗಳು ಪರಮಾತ್ಮನನ್ನು ಅಗ್ನಿ ಎಂತಲೂ ಸಂಬೋಧಿಸಿರುವುದನ್ನು ಕಾಣಬಹುದು. ಇಲ್ಲಿ ಅಗ್ನಿ ಎಂದರೆ ಜ್ಯೋತಿರ್ಮಯ ಎಂದರ್ಥ. ಋಗ್ವೇದದ ಮೊದಲ ಮಂತ್ರ ಹೀಗಿದೆ:
ಅಗ್ನಿಮೀಳೇ ಪುರೋಹಿತಂ ಯಜ್ಷಸ್ಯ ದೇವಮೃತ್ವಿಜಮ್ | ಹೋತಾರಂ ರತ್ನಧಾತಮಮ್ || (ಋಕ್.೧.೧.೧.) (ಸರ್ವಹಿತಕಾರಿ, ಪೂಜ್ಯತಮ, ಜ್ಞಾನಸ್ವರೂಪ, ಜ್ಞಾನದಾತ, ಸರ್ವಪ್ರಥಮ, ಸರ್ವೋಪರಿಸ್ಥಿತ ಪರಮಾತ್ಮನನ್ನು ಸ್ತುತಿಸುತ್ತೇನೆ. ಅವನು ಬ್ರಹ್ಮಾಂಡರೂಪಿ ಯಜ್ಞದ ಪ್ರಕಾಶಕ, ಪ್ರವರ್ತಕ, ಸಮಯಾನುಸಾರ ಎಲ್ಲವನ್ನೂ ಪ್ರಾಪ್ತಗೊಳಿಸುವವನು,, ಸೃಷ್ಟಿ, ಸ್ಥಿತಿ, ಲಯಕರ್ತನು, ಪ್ರಸನ್ನತೆಯನ್ನುಂಟುಮಾಡುವ ರತ್ನಾದಿಗಳನ್ನು, ಉತ್ಕೃಷ್ಟ ಅನ್ನ, ಜಲ, ಫಲ ಪುಷ್ಪಾದಿಗಳನ್ನು ಕರುಣಿಸುವವನೂ ಆಗಿದ್ದಾನೆ.) ಪ್ರಾತಃಕಾಲದಲ್ಲಿ ಆಸ್ತಿಕರು ಉಚ್ಛರಿಸುವ ಈ ಮಂತ್ರವನ್ನು ಗಮನಿಸಿ:
ಓಂ ಪ್ರಾತರ್ಜಿತಂ ಭಗಮುಗ್ರಂ ಹುವೇಮ ವಯಂ ಪುತ್ರಮದಿತೇರ್ಯೋ ವಿಧರ್ತಾ |
ಆಧ್ರಶ್ಚಿದ್ ಯಂ ಮನ್ಯಮನಸ್ತುರಶ್ಚಿದ್ ರಾಜಾ ಚಿದ್ ಯಂ ಭಗಂ ಭಕ್ಷೀತ್ಯಾಹಃ || (ಋಕ್.೭.೪೧.೨)
    'ನಿತ್ಯವಿಜಯಿಯೂ, ಅತಿ ತೇಜಸ್ವಿಯೂ, ಸೂರ್ಯಾದಿ ಪ್ರಕಾಶಪುಂಜಗಳ ನಿತ್ಯಧಾರಕನೂ, ಸರ್ವಜ್ಞನೂ, ಪಾತಕಿಗಳನ್ನು ದಂಡಿಸುವವನೂ ಆದ ದೇವದೇವನ ದಿವ್ಯ ಪ್ರಕಾಶವನ್ನು ನಾವು ಪ್ರಾತಃಕಾಲ ಧರಿಸೋಣ' ಎಂಬದು ಇದರ ಅರ್ಥ. ಅಗ್ರಣಿಯಾಗಿರುವುದರಿಂದ, ಸದಾ ಜಾಗೃತವಾಗಿರುವುದರಿಂದ, ಜ್ಞಾನದಾಯಕನಾಗಿರುವುದರಿಂದ ಅಗ್ನಿಯನ್ನು ಆತ್ಮಕ್ಕೂ ಹೋಲಿಸುತ್ತಾರೆ. ಜ್ಞಾನಜ್ಯೋತಿ ಬೆಳಗಲಿ ಎಂಬ ಪದಪ್ರಯೋಗ ಗಮನಿಸಬಹುದು. ಯಜ್ಞದಲ್ಲಿ ಅಗ್ನಿಗೆ ಪ್ರಧಾನ ಪಾತ್ರವಿದೆ. ಇಲ್ಲಿ ಯಜ್ಞವೆಂದರೆ ಕೇವಲ ಹವನ, ಹೋಮಗಳಲ್ಲ. ಯಜ್ಞವೆಂದರೆ ಶ್ರೇಷ್ಠತಮವಾದ ಕರ್ಮಗಳು. ಈ ಅರ್ಥದಲ್ಲಿ ಒಳ್ಳೆಯ ರೀತಿಯಲ್ಲಿ ಸಹಜೀವಿಗಳ ಹಿತ ಗಮನದಲ್ಲಿರಿಸಿ ಬಾಳುವುದೇ ಯಜ್ಞವೆನಿಸುತ್ತದೆ. ಅಗ್ನಿಗೆ ಅರ್ಪಿಸುವ ವಸ್ತುಗಳನ್ನು ಅರಗಿಸಿ, ವಿಭಜಿಸಿ ಅದರ ಗುಣವನ್ನು ಎಲ್ಲೆಡೆಗೆ ಹರಡುವ ಶಕ್ತಿ ಇದೆ. ಆದ್ದರಿಂದ ಯಜ್ಞದಲ್ಲಿ ಅರ್ಪಿಸುವ ಹವಿಸ್ಸುಗಳು ಸುತ್ತಮತ್ತಲಿನ ವಾತಾವರಣವನ್ನು ಶುದ್ಧಗೊಳಿಸುವಂತಹದಾಗಿರಬೇಕು, ಆಹ್ಲಾದಕರ ವಾತಾವರಣ ನಿರ್ಮಿಸುವಂತಿರಬೇಕು. ಹವಿಸ್ಸು, ಸಮಿತ್ತು, ಪದಾರ್ಥಗಳನ್ನು ಅಗ್ನಿಗೆ ಅರ್ಪಿಸುವಾಗ 'ಇದಂ ನ ಮಮ' ಎಂಬ ಮಂತ್ರ ಉಚ್ಛರಿಸಲಾಗುತ್ತದೆ. ಇದರ ಅರ್ಥ, ಈ ಕಾರ್ಯ 'ನನಗಾಗಿ ಅಲ್ಲ', ಸಕಲರ ಹಿತಕ್ಕಾಗಿ ಎಂಬುದು ಸೂಚ್ಯಾರ್ಥವಾಗಿದೆ. ಅಗ್ನಿ ಜೀವರು ಮತ್ತು ದೇವರ ನಡುವಣ ಕೊಂಡಿಯಾಗಿದೆ.
     ಐದು ವಿಧದ ಅಗ್ನಿಯನ್ನು ಗುರುತಿಸುತ್ತಾರೆ - ಕಾಲಾಗ್ನಿ (ಸಮಯ), ಕ್ಷುದ್ಧಾಗ್ನಿ (ಹಸಿವು), ಶೀತಾಗ್ನಿ (ಶೀತಲ), ಕೋಪಾಗ್ನಿ (ಕೋಪ) ಮತ್ತು ಜ್ಞಾನಾಗ್ನಿ(ಜ್ಞಾನ). ನಮ್ಮ ಜೀವನದಲ್ಲಿ ಅನುಭವಕ್ಕೆ ಬರುವ ನವರಸಗಳೂ ಅಗ್ನಿಯ ಪ್ರತಿರೂಪವಾಗಿರುತ್ತವೆ. ಕಾಮಾಗ್ನಿ, ವಿರಹಾಗ್ನಿ, ಮೋಹಾಗ್ನಿ ಮುಂತಾದ ಪದಬಳಕೆಯನ್ನು ಗಮನಿಸಬಹುದು. ಬೆಂಕಿ ಉಗುಳುವ ಮಾತುಗಳು, ಕಣ್ಣಿನಲ್ಲೇ ಸುಡುವ ನೋಟ, ಹೊಟ್ಟೆಯುರಿ (ಮತ್ಸರ) ಮುಂತಾದವುಗಳೂ ಸಹ ಅಗ್ನಿಯ ಜೊತೆಗೂಡಿರುವುದನ್ನು ಕಾಣಬಹುದು. ಅಂದರೆ ಅಗ್ನಿ ನಮ್ಮತನವನ್ನು ಪ್ರತಿನಿಧಿಸುವ ಸಂಗತಿಯಾಗಿದೆ.
     ಅಗ್ನಿ ನೀರಿನಿಂದ ಉದಯಿಸುತ್ತದೆ ಮತ್ತು ನೀರಿನಲ್ಲಿ ವಾಸಿಸುತ್ತದೆ ಎಂದು ಋಗ್ವೇದದಲ್ಲಿ ಉಲ್ಲೇಖ ಬರುತ್ತದೆ. ವಿಷಯದ ಆಳಕ್ಕೆ ಹೋದರೆ ಇದರ ಅರ್ಥ ನಮಗೆ ತಿಳಿಯಬಹುದು. ನೀರು ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾಗಿದೆ. ಜಲಜನಕ ಶೀಘ್ರವಾಗಿ ದಹಿಸುವ ಅನಿಲವಾಗಿದ್ದು, ಆಮ್ಲಜನಕ ದಹನಕ್ಕೆ ಸಹಕಾರಿಯಾಗಿರುತ್ತದೆ ಅಲ್ಲವೇ? ಪ್ರತಿ ಶುಭ, ಅಶುಭ ಕಾರ್ಯಗಳಿಗೆ ಅಗ್ನಿ ಸಾಕ್ಷಿಯಾಗಿರುತ್ತದೆ. ಅಂತ್ಯ ಸಂಸ್ಕಾರದ ಕ್ರಿಯೆಯಲ್ಲಿ ಶವದಹನಕ್ಕೂ ಅಗ್ನಿ ಬೇಕು. ವೈವಾಹಿಕ ಜೀವನಕ್ಕೆ ಕಾಲಿಡುವಾಗಲೂ ಅಗ್ನಿಸಾಕ್ಷಿಯಾಗಿ ಕೈ ಹಿಡಿಯುವುದು ಎನ್ನುವರಲ್ಲವೇ? ಅಗ್ನಿ ಪಾವಿತ್ರ್ಯದ ಸಂಕೇತವೂ ಆಗಿದೆ, ಪರಮಾತ್ಮನಂತೆ ದಾರಿ ತೋರುವ ಗುಣವನ್ನೂ ಹೊಂದಿದೆ. ಈ ವೇದಮಂತ್ರ ಗಮನಿಸೋಣ:
ಓಂ ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ || (ಯಜು.40.16.)
     ಈ ಮಂತ್ರದ ಭಾವಾನುವಾದವನ್ನು ಹೀಗೆ ಮಾಡಬಹುದು:
ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಪ್ರಭು ವಂದನೆ ||
-ಕ.ವೆಂ.ನಾಗರಾಜ್.
***************
ದಿನಾಂಕ 5.11.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಡಿಸೆಂಬರ್ 1, 2015

ಸಾಧನಾ ಸೋಪಾನ - 11: ಜೀವಾಧಾರ ಜಲ



     'ನೆಲ'ಕ್ಕಿಂತ ಜಲ ಮೇಲಿನದಾಗಿದೆ. ಘನವಾದ ಯಾವುದೇ ವಸ್ತುವು ಮೂಲತಃ ದ್ರವ ಸ್ಥಿತಿಯಲ್ಲಿದ್ದುದಾಗಿದ್ದು, ಭೂಮಿ ಸಹ ದ್ರವಮೂಲದಿಂದ ಉಗಮವಾದದ್ದಾಗಿದೆ. ಕೇವಲ ಭೂಮಿಯಲ್ಲ, ವಿಶ್ವದ ಯಾವುದೇ ಘನರೂಪದ ಕಾಯವಾಗಲೀ, ವಸ್ತುವಾಗಲೀ ಮೊದಲು ದ್ರವರೂಪದಲ್ಲಿ ಇದ್ದುದಾಗಿದೆ. ಈ ದ್ರವರೂಪದಲ್ಲಿದ್ದ ವಸ್ತು ಅದಕ್ಕೂ ಮೊದಲು ಅನಿಲರೂಪದಲ್ಲಿದ್ದಿತ್ತು. ಹೀಗಾಗಿ 'ಜಲ' ಎಂಬ ಪದದಲ್ಲಿ ಸಂಬೋಧಿಸಬಹುದಾದ ಈ ಸಂಗತಿ ಭೂಮಿಗಿಂತ ಮೇಲಿನದಾಗಿದೆ. ಸೃಷ್ಟಿಯ ರಚನೆಗೆ ಮೂಲ ದ್ರವರೂಪದ ವಸ್ತುವೆಂದು ಹೇಳುತ್ತಾರೆ. 
     ಜಲತತ್ತ್ವವಿಲ್ಲದಿರುತ್ತಿದ್ದರೆ ಜೀವನ ದುಸ್ತರವಾಗುತ್ತಿತ್ತು. ಮಳೆ ಇರದಿದ್ದಿದ್ದರೆ ಬೆಳೆ ಇರುತ್ತಿರಲಿಲ್ಲ. ನೆಲ ಒಣಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿತ್ತು. ಮಳೆ ಇಲ್ಲದಿದ್ದರೆ ನೆಲ ಆಹಾರ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುತ್ತಿತ್ತು. ನೆಲದ ಘನತತ್ತ್ವ ಮತ್ತು ಜಲತತ್ತ್ವಗಳ ಸಂಯೋಗ 'ಅನ್ನತತ್ತ್ವ'ದ ಉಗಮಕ್ಕೆ ಅಗತ್ಯ. ಮಳೆ ಬರದಿದ್ದರೆ ಕ್ಷಾಮ ಆವರಿಸಿ ಎಲ್ಲೆಲ್ಲೂ ಆಹಾರದ ಕೊರತೆಯಿಂದ ಜೀವಜಗತ್ತು ತಲ್ಲಣಿಸುತ್ತದೆ. ಮಳೆ ಬಂದರೆ ಪಶು, ಪಕ್ಷಿಗಳು ಸೇರಿದಂತೆ ಎಲ್ಲಾ ಜೀವಗಳಿಗೂ ತಂಪಾಗುತ್ತದೆ, ಪ್ರಕೃತಿ ಸಂತಸದಿಂದ ನಳನಳಿಸುತ್ತದೆ. 'ಅನ್ನ'ದ ಕುರಿತ ಲೇಖನದಲ್ಲಿ ಹೇಳಿದ ಎಲ್ಲಾ ಸಂಗತಿಗಳೂ ಜಲಕ್ಕೂ ಅನ್ವಯಿಸುತ್ತದೆ. ಪ್ರಪಂಚದ ನಾಗರಿಕತೆಗಳು ಬೆಳೆದದ್ದು, ಉಳಿದದ್ದು ನದಿ ತಟಗಳಲ್ಲಿಯೇ ಎಂಬುದು ಗಮನಾರ್ಹ. ಎಲ್ಲಿ ಜಲದ ಅಭಾವ ಇರುತ್ತದೋ ಅಲ್ಲಿ ಬದುಕು ದುಸ್ತರವಾಗುತ್ತದೆ.
     ಭೂಮಿಯ ಮೇಲ್ಭಾಗದ ಮುಕ್ಕಾಲು ಭಾಗ ನೀರಿನಿಂದ ಕೂಡಿದ್ದು ಕಾಲು ಭಾಗ ಮಾತ್ರ ಭೂಮಿ ಇದೆ. ಹೀಗಿದ್ದರೂ ನೀರಿನ ಅಭಾವ ಅನ್ನುವುದು ಆಶ್ಚರ್ಯ. ಭೂಮಿಯಲ್ಲಿರುವ ನೀರಿನ ಶೇ. 96.5ರಷ್ಟು ಭಾಗ ಸಾಗರಗಳಲ್ಲಿನ ಉಪ್ಪುನೀರಾಗಿದ್ದು ಮಾನವ ಬಳಕೆಗೆ ಬರುವುದಿಲ್ಲ. ಉಳಿದ ಶೇ. 3.5ರಷ್ಟರಲ್ಲಿ ಸಹ ಹೆಚ್ಚಿನ ಭಾಗ ಹೆಪ್ಪುಗಟ್ಟಿದ ನೀರಿನ ರೂಪದಲ್ಲಿ ಅಂದರೆ ಮಂಜುಗಡ್ಡೆಯ ರೂಪದಲ್ಲಿದೆ. ಉಳಿದ ಶೇ. 1 ರಿಂದ 2ರಷ್ಟು ಭಾಗ ಮಾತ್ರ ಮಾನವ ಬಳಕೆಗೆ ಯೋಗ್ಯವಾಗಿ ಲಭ್ಯವಿದೆ. ಮಂಜುಗಡ್ಡೆಯ ರೂಪದಲ್ಲಿರುವ ನೀರೆಲ್ಲಾ ಕರಗಿಸಿದರೆ ಸಮುದ್ರದ ಮಟ್ಟ ಈಗಿನದಕ್ಕಿಂತಲೂ ಸುಮಾರು 3 ಕಿ.ಮೀ. ಎತ್ತರಕ್ಕೆ ಏರುತ್ತದೆ. ಆಗ ಜಲಪ್ರಳಯವೇ ಆಗುತ್ತದೆ. ಒಂದು ದೊಡ್ಡ ಗಾತ್ರದ ಹಿಮದ ಗಡ್ಡೆ ಉರುಳಿ ಸಮುದ್ರಕ್ಕೆ ಜಾರಿದರೂ ದೊಡ್ಡ ಅನಾಹುತವೇ ಆಗುತ್ತದೆ.
     ಜನಸಂಖ್ಯೆ ಹೆಚ್ಚಾದಂತೆ ನೀರಿನ ಬಳಕೆ ಸಹ ಹೆಚ್ಚಾಗುತ್ತಿದೆ. ಆದ್ದರಿಂದ ನೀರಿನ ಬಳಕೆಯನ್ನು ಎಚ್ಚರದಿಂದ, ಜಾಣತನದಿಂದ ಮಾಡಬೇಕಿದೆ. ಆದರೆ, ವಾಸ್ತವವಾಗಿ ನಾವು ಮಾಡುತ್ತಿರುವುದೇನು? ಉಪಯೋಗಿಸಬಹುದಾದ ನೀರಿನ ಜಲಮೂಲಗಳಾದ ಕೆರೆ, ಕಟ್ಟೆಗಳನ್ನು ಮುಚ್ಚುತ್ತಿದ್ದೇವೆ, ಅತಿಕ್ರಮಿಸುತ್ತಿದ್ದೇವೆ, ನಾಶಪಡಿಸುತ್ತಿದ್ದೇವೆ. ಕೊಳವೆ ಬಾವಿಗಳನ್ನು ವಿವೇಚನೆಯಿಲ್ಲದೆ ತೋಡುತ್ತಾ ಅಂತರ್ಜಲದ ಮಟ್ಟವನ್ನು ತಗ್ಗಿಸುತ್ತಿದ್ದೇವೆ. ಹೀಗೇ ಆದರೆ ಮುಂದೊಮ್ಮೆ ಪ್ರಕೃತಿಯ ಸಮತೋಲನ ತಪ್ಪಿ ಅನಾಹುತಗಳಾಗುವುದು ಶತಃಸ್ಸಿದ್ಧ. ಮನುಕುಲದ ಉಳಿವಿಗಾಗಿ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು. ನೀರಿನ ಸದ್ಬಳಕೆ ಮಾಡದಿರುವುದು, ವಿವೇಚನೆಯಿಲ್ಲದ ಕ್ರಮಗಳಿಂದಾಗಿ ಕುಡಿಯುವ ನೀರಿಗೂ ಕಷ್ಟವಾಗಿದೆ, ಬೆಳೆ ಬೆಳೆಯಲು ನೀರು ಸಿಗದಾಗಿದೆ. ಕಾವೇರಿ ವಿವಾದ, ಮಹದಾಯಿ ವಿವಾದ, ಕೃಷ್ಣಾ ವಿವಾದ ಮುಂತಾದ ಸಮಸ್ಯೆಗಳಿಂದಾಗಿ ರಾಜ್ಯಗಳ ನಡುವೆ ಜಲಜಗಳಗಳಾಗುತ್ತಿವೆ, ಕೋರ್ಟು-ಕಛೇರಿಗಳಲ್ಲಿ, ಟ್ರಿಬ್ಯೂನಲ್ಲುಗಳಲ್ಲಿ ದಶಕಗಳಿಂದ ವಿವಾದಗಳು ಇತ್ಯರ್ಥ ಕಾಣದಿವೆ. ಮಾತೆತ್ತಿದರೆ, 'ನಮ್ಮನ್ನು ಆ ದೇವರೇ ಕಾಪಾಡಬೇಕು' ಅಂದುಬಿಡುತ್ತೇವೆ. ವಿವೇಚನೆಯಿಲ್ಲದೆ ಮುಂದುವರೆದರೆ ಮುಂದೊಮ್ಮೆ ನಮ್ಮನ್ನು ಯಾರೂ ಕಾಪಾಡಲು ಸಾಧ್ಯವೇ ಇಲ್ಲದಂತಹ ಸ್ಥಿತಿ ಬರಬಹುದು.
     ಮಳೆ ನೀರು ಕೊಯ್ಲು, ನೀರಿನ ಅಪವ್ಯಯದ ತಡೆಗಟ್ಟುವಿಕೆ, ಜಲಮೂಲಗಳು ಕಲುಷಿತಗೊಳ್ಳುವುದನ್ನು ತಪ್ಪಿಸುವುದು, ಕೆರೆ-ಕಟ್ಟೆಗಳ ಪುನರುಜ್ಜೀವನ, ಒಡ್ಡುಗಳ ನಿರ್ಮಾಣ ಮುಂತಾದ ಕೆಲಸಗಳಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸ ಸರ್ಕಾರಗಳು ಮಾಡಬೇಕು, ಮಾಡುವಂತೆ ಜನರೂ ಮಾಡಬೇಕು. ನೀರಿನ ಮಹತ್ವ ಅರಿತು ಜಲಸಂರಕ್ಷಣಾಕಾರ್ಯಗಳನ್ನು ಕೈಗೊಂಡು ನಾಗರಿಕಪ್ರಜ್ಞೆ ಮೆರೆಯುವ ತುರ್ತು ಅಗತ್ಯ ಇಂದಿದೆ.
ನೀರನ್ನು ಉಳಿಸಿದರೆ ಭವಿಷ್ಯವನ್ನು ಉಳಿಸಿದಂತೆ!
ನೀರನ್ನು ರಕ್ಷಿಸಿದರೆ, ನೀರು ನಮ್ಮನ್ನು ರಕ್ಷಿಸುತ್ತದೆ!
-ಕ.ವೆಂ.ನಾಗರಾಜ್.
***************
ದಿನಾಂಕ  28.10.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ನವೆಂಬರ್ 22, 2015

ಸಾಧನಾ ಸೋಪಾನ - 10: ಕ್ಷಮಾಶೀಲ ಧರಿತ್ರಿ


     ಒಂದು ಸಂಗತಿ ದೊಡ್ಡದೆಂದುಕೊಂಡರೆ ಅದಕ್ಕಿಂತ ದೊಡ್ಡದಾದುದು ಗೋಚರಿಸುತ್ತಾಹೋಗುತ್ತದೆ. ವಿವೇಚನಾಶಕ್ತಿ ಇರುವ ಮಾನವನಿಗೆ ಜ್ಞಾನ ದೊಡ್ಡದು. ಜ್ಞಾನಕ್ಕೆ ಮೂಲವಾದ ವಾಕ್ಕು ಜ್ಞಾನಕ್ಕಿಂತ ಹಿರಿದು. ವಾಕ್ಕಿಗಿಂತ ಮನಸ್ಸು, ಮನಸ್ಸಿಗಿಂತ ಇಚ್ಛಾಶಕ್ತಿ, ಇಚ್ಛಾಶಕ್ತಿಗಿಂತ ಸ್ಮರಣಶಕ್ತಿ, ಸ್ಮರಣಶಕ್ತಿಗಿಂತ ಮನೋಕೇಂದ್ರೀಕರಣ(ಧ್ಯಾನ), ಧ್ಯಾನಕ್ಕಿಂತ ಧ್ಯಾನ ಏಕೆ ಮತ್ತು ಹೇಗೆ ಎಂಬ ಅರಿವು ಮಿಗಿಲೆಂಬುದನ್ನು ಅರಿತೆವು. ದೈಹಿಕ ಮತ್ತು ಮಾನಸಿಕ ಬಲವಿಲ್ಲದಿದ್ದರೆ ಮೇಲಿನದೆಲ್ಲವೂ ವ್ಯರ್ಥವಾದ್ದರಿಂದ ಶಕ್ತಿಯೇ ಮಿಗಿಲು. ಶಕ್ತಿಗೆ ಕಾರಣವಾದ 'ಅನ್ನ' ಅದಕ್ಕಿಂತಲೂ ಮಿಗಿಲು. ಈ 'ಅನ್ನ'ಕ್ಕಿಂತ ಹೆಚ್ಚಿನದಾದುದು ಪಂಚಭೂತಗಳೆಂದು ಕರೆಯಲ್ಪಡುವ ನೆಲ, ಜಲ, ಅಗ್ನಿ, ವಾಯು ಮತ್ತು ಆಕಾಶಗಳು! ಏಕೆಂದರೆ, ಅನ್ನದ ಉತ್ಪತ್ತಿಗೆ ಇವು ಅಗತ್ಯವಾಗಿವೆ. ಜೀವಿಗಳು ಸಹ ಪಂಚಭೂತಗಳ ಆವಿಷ್ಕಾರವಾಗಿವೆ; ಪಂಚಭೂತಗಳ ಸೂಕ್ತ ಸಂಯೋಜನೆಯೊಂದಿಗೆ ಜೀವ ಚೈತನ್ಯ ಸೇರಿಕೊಂಡು ಜೀವಿಗಳು ಎನ್ನಿಸಿಕೊಳ್ಳುತ್ತವೆ. ಪ್ರಧಾನವಾದ ಭೂಮಿಯ ಕುರಿತು ಇಲ್ಲಿ ವಿವೇಚಿಸೋಣ.
     'ಅನ್ನ' ಎಂಬ ಪದಕ್ಕೆ ಬಹು ವಿಶಾಲ ಅರ್ಥವಿದ್ದು, ಅದು ಕೇವಲ ನಾವು ಸೇವಿಸುವ ಆಹಾರ ಮಾತ್ರವಾಗಿರದೆ, ಜೀವಜಗತ್ತಿನ ಪೋಷಣೆಗೆ ನೆರವಾಗುವಂತಹ ಯಾವುದೇ ಸಂಗತಿ ಅಥವ ವಸ್ತುವಾಗಿದೆ. ಅದು ಇಡೀ ವಿಶ್ವದ ಚೈತನ್ಯದ ಮೂಲವಾಗಿದೆ. ಈ ಅರ್ಥದಲ್ಲಿ ಜೀವ ಜಗತ್ತಿಗೆ ಆಧಾರಪ್ರಾಯವಾದ ಇಡೀ ಭೂಮಿಯೂ ಸಹ ಆನ್ನವನ್ನು ಪ್ರತಿನಿಧಿಸುತ್ತದೆ, ಈ ಭೂಮಿ ರಚನೆಯಾದುದಾದರೂ ಹೇಗೆ? ವ್ಶೆಜ್ಞಾನಿಕವಾಗಿ ಹೇಳುವುದಾದರೆ ಸುಖಾಸುಮ್ಮನೆ ಶೂನ್ಯದಿಂದ ಯಾವುದೇ ಸೃಷ್ಟಿ ಸಾಧ್ಯವೇ ಇಲ್ಲ. ಇರುವುದನ್ನು ರೂಪಾಂತರ ಮಾಡಿ ಇನ್ನೊಂದು ರೂಪಕ್ಕೆ ತರಬಹುದಷ್ಟೇ. ದೇವರು ಈ ಜಗತ್ತಿನ ಜನಕನೆಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಯಾವುದರಿಂದ ಸೃಷ್ಟಿಸಿದ? ಏಕೆ ಸೃಷ್ಟಿಸಿದ? ಹೇಗೆ ಸೃಷ್ಟಿಸಿದ?  ತರ್ಕಬದ್ಧವಾಗಿ ನೋಡಿದರೆ ಈ ಜಡ ಜಗತ್ತಿನ ಸೃಷ್ಟಿ ಶೂನ್ಯದಿಂದಂತೂ ಆಗಿರಲಾರದು. ದೇವರ ಸೃಷ್ಟಿ, ಶೂನ್ಯದಿಂದ ಸೃಷ್ಟಿಸಿದ ಎಂಬುದನ್ನು ವಾದದ ಸಲುವಾಗಿ ಒಪ್ಪಿಕೊಂಡರೂ, ಪ್ರಶ್ನೆ ಉದ್ಭವಿಸುತ್ತದೆ. ದೇವರು ಶೂನ್ಯದಿಂದ ಏನು ಬೇಕಾದರೂ ಸೃಷ್ಟಿಸಬಹುದಾದರೆ ಇನ್ನೊಬ್ಬ ತನ್ನಷ್ಟೇ ಅಥವ ತನಗಿಂತ ಬಲಿಷ್ಠ ದೇವರನ್ನು ಸೃಷ್ಟಿಸಬಲ್ಲನೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಹೀಗೆಯೇ ಈ ಜಗತ್ತೂ ಸಹ ಮೊದಲೂ ಇತ್ತು, ಈಗಲೂ ಇದೆ, ಮುಂದೂ ಇರುತ್ತದೆ, ಆದರೆ ಬೇರೆ ರೂಪಾಂತರಗಳಲ್ಲಿ ಎನ್ನವುದು ಹೆಚ್ಚು ಸಮಂಜಸ ವಾದವಾಗುತ್ತದೆ. ಶೂನ್ಯದಿಂದ ಏನೂ ಸೃಷ್ಟಿಸಲು ಸಾಧ್ಯವಿಲ್ಲವೆನ್ನುವುದನ್ನು ಒಪ್ಪುವುದಾದರೆ, ಜಡ ಪ್ರಕೃತಿಯಿಲ್ಲದಿದ್ದರೆ ಸ್ವತಃ ದೇವರೂ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು ಒಪ್ಪಲೇಬೇಕಾಗುತ್ತದೆ. ಹಾಗಾಗಿ ಈ ಜಗತ್ತು ಮೊದಲಿನಿಂದಲೂ ಇತ್ತು, ಮುಂದೂ ಇರುತ್ತದೆ, ಎಂದೆಂದೂ ಇರುತ್ತದೆ, ಅದು ಜೀವ ಹಾಗೂ ದೇವರಂತೆ ಅನಂತ, ಶಾಶ್ವತ ಎಂದು ತಿಳಿಯಬೇಕಾಗುತ್ತದೆ.
     ಇಂತಹ ಶಾಶ್ವತವಾದ ಜಗತ್ತಿನ ರಚನೆಯ ವಿಚಾರದಲ್ಲಿ ಋಗ್ವೇದ ಬೆಳಕು ಚೆಲ್ಲಿರುವುದು ಹೀಗೆ:
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ || (ಋಕ್. ೧೦.೧೨೯.೧)
     ಸೃಷ್ಟಿಯ ಮುನ್ನ ಶೂನ್ಯವಿರಲಿಲ್ಲ, ಈ ಲೋಕವಿರಲಿಲ್ಲ ಮತ್ತು ಆಕಾಶವೂ ಇರಲಿಲ್ಲ. ಆದರೆ ಎಲ್ಲವನ್ನೂ ಆವರಿಸುವ ಗಂಭೀರ ಮತ್ತು ಗಹನವಾದ ಯಾವುದೋ ಒಂದು ತತ್ವ ಅಥವ ಪದಾರ್ಥ ದೇವರ ಆಶ್ರಯದಲ್ಲಿತ್ತು ಎಂದು ಈ ಮಂತ್ರದ ಅರ್ಥವಾಗಿದ್ದು, ಜಡ ಪ್ರಕೃತಿಯ ಮೂಲ ಅಸ್ತಿತ್ವದ ಬಗ್ಗೆ ಹೇಳುತ್ತದೆ.
ಇನ್ನೊಂದು ಮಂತ್ರ ಹೇಳುತ್ತದೆ:
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ || (ಋಕ್. ೧೦.೧೨೯.೨)
    ಸಾವು ಇರಲಿಲ್ಲ, ಹಾಗಾಗಿ ಅಮರತ್ವವಿರಲಿಲ್ಲ, ರಾತ್ರಿ, ಹಗಲುಗಳು ಇರಲಿಲ್ಲ. ಆ ಒಂದು ತತ್ವ ಮಾತ್ರ ತನ್ನ ಬಲದಿಂದ ಗಾಳಿಯಿಲ್ಲದಿದ್ದರೂ ಪ್ರಾಣದಾಯಿಯಾಗಿತ್ತು, ಅದನ್ನು ಬಿಟ್ಟು ಬೇರೇನೂ ಇರಲಿಲ್ಲ ಎಂದು ಈ ಮಂತ್ರದ ಅರ್ಥ. ಪ್ರಳಯ, ಇತ್ಯಾದಿ ಕಾರಣಗಳಿಂದ ಜೀವಜಗತ್ತಿನ ಸರ್ವನಾಶವಾದರೆ ಜಗತ್ತಿನ ಸ್ಥಿತಿ ಹೀಗೆಯೇ ಇದ್ದಿರಬಹುದೇನೋ! ಆ ಸ್ಥಿತಿ ಹೇಗಿರಬಹುದು ಎಂದು ತಿಳಿಸುವ ಇನ್ನೊಂದು ಮಂತ್ರವಿದು:
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ || (ಋಕ್.೧೦.೧೨೯.೩)
     ಈ ಮೊದಲು ಇವೆಲ್ಲವೂ ರೂಪ ಲಕ್ಷಣಗಳಿಲ್ಲದೆ, ರಹಸ್ಯಮಯ ಅಂಧಕಾರದಲ್ಲಿ ದ್ರವರೂಪದಲ್ಲಿ (ಹರಿಯುವ ರೀತಿಯಲ್ಲಿ) ಇದ್ದಿತು. ದೇವನ ಕೃಪೆಯಿಂದ ಅದು ಒಂದಾಯಿತು, ಅರ್ಥಾತ್ ಹೊಸ ಸೃಷ್ಟಿಯಾಯಿತು. ಅಥರ್ವವೇದದ ಮಂತ್ರ ಹೇಳುತ್ತದೆ:
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹಿ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ || (ಅಥರ್ವ. ೧೦.೮.೩೦)
     ಅನಾದಿ ಕಾಲದಿಂದಲೇ ಇರುವ ಈ ಪ್ರಕೃತಿ ಸನಾತನವಾಗಿದ್ದು, ಎಲ್ಲಕ್ಕಿಂತಲೂ ಮೊದಲು ಇದ್ದುದಾಗಿದ್ದು, ದೇವರ ಇಚ್ಛೆಯಂತೆ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ, ಪ್ರತಿ ಜೀವಿಯ ಮೂಲಕವೂ ವ್ಯಕ್ತವಾಗುತ್ತದೆ. ಈ ಮಂತ್ರ ಜೀವಿಗಳ ಅಸ್ತಿತ್ವದ ಬಗ್ಗೆಯೂ ಬೆಳಕು ಚೆಲ್ಲಿದೆ. ಸೃಷ್ಟಿ, ಸ್ಥಿತಿ. ಲಯಗಳು ಜಗದ ನಿಯಮ. ಸೃಷ್ಟಿಯಾಗುತ್ತಿರುತ್ತದೆ, ಇರುತ್ತದೆ, ನಾಶವಾಗುತ್ತದೆ - ಈ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ. ಜೀವಿಗಳ ಅಸ್ತಿತ್ವಕ್ಕೂ ಪ್ರಕೃತಿ ಇರಲೇಬೇಕು.
     ಈ ಬ್ರಹ್ಮಾಂಡದಲ್ಲಿ ಒಂದು ಸೂರ್ಯಮಂಡಲ ಮಾತ್ರ ಇಲ್ಲ, ಅದೆಷ್ಟು ಸೂರ್ಯಮಂಡಲಗಳು, ಭೂಮಿಗಳು ಇವೆಯೋ ಅನ್ನುವುದು ಎಣಿಕೆಗೆ ಮೀರಿದ್ದಾಗಿದೆ. ನಮ್ಮ ಕರ್ತವ್ಯ ಮರೆತರೆ ನಾವು ಇರುವ ಭೂಮಿಯ ವಿನಾಶಕ್ಕೆ ನಾವೇ ಕಾರಣರಾಗುತ್ತೇವೆ.. ನಮ್ಮ ಸ್ವಾರ್ಥಕ್ಕಾಗಿ ಅದೆಷ್ಟು ಗಿಡಮರಗಳನ್ನು ಕಡಿಯುತ್ತೇವೆ, ಅಂತರ್ಜಲ ಹೀರುತ್ತೇವೆ,, ಕೆರೆಕಟ್ಟೆಗಳನ್ನು ಮುಚ್ಚುತ್ತೇವೆ, ಕಾಡುಗಳನ್ನು ನಾಶ ಮಾಡಿ ಸಹಜೀವಿಗಳ ಜೀವನಕ್ಕೆ ನೆಲೆಯಿಲ್ಲದಂತೆ ಮಾಡುತ್ತೇವೆ, ಗುಡ್ಡ-ಬೆಟ್ಟಗಳನ್ನು ನೆಲಸಮ ಮಾಡುತ್ತೇವೆ, ಗಗನಚುಂಬಿ ಕಟ್ಟಡಗಳನ್ನು ಕಟ್ಟುತ್ತೇವೆ. ಭೂಮಿತಾಯಿ ಎಂದು ಬಾಯಿತುಂಬಾ ಹೇಳುತ್ತೇವೆ, ಅದರ ಮೇಲೆ ಮಾಡಬಾರದ ಅತ್ಯಾಚಾರ ಮಾಡುತ್ತೇವೆ. ನಮ್ಮ ಮಕ್ಕಳ ಕಾಲಕ್ಕಾದರೂ ಭೂಮಿತಾಯಿಯನ್ನು ಈಗ ಇರುವಂತೆ  ಗೌರವಿಸುವುದು, ಉಳಿಸುವುದು, ಸಂರಕ್ಷಿಸುವುದು ಮಕ್ಕಳಾದ ನಮ್ಮ ಕರ್ತವ್ಯವಾಗಿದೆ.
     ನೋಡುವ ಕಣ್ಣುಗಳಿದ್ದರೆ, ಕೇಳುವ ಕಿವಿಗಳಿದ್ದರೆ ಅತ್ಯಂತ ಕ್ಷಮಾಶೀಲ ಧರಿತ್ರಿ ತನ್ನ ಮೇಲೆ ಮಾನವನಿಂದ  ಆದ, ಆಗುತ್ತಿರುವ ಅತ್ಯಾಚಾರಗಳಿಗಾಗಿ ರೋದಿಸುತ್ತಿರುವುದು ಕಾಣುತ್ತದೆ, ಕೇಳುತ್ತದೆ. ಆದರೆ ಆ ರೋದನ ತನಗಾಗಿ ಅಲ್ಲ, ತನ್ನನ್ನು ಆಶ್ರಯಿಸಿರುವ ಜೀವಸಂಕುಲಕ್ಕಾಗಿ ಎಂಬುದನ್ನು ಸಾಧಕ ಮಾತ್ರ ಅರಿಯಬಲ್ಲ!
-ಕ.ವೆಂ.ನಾಗರಾಜ್.
***************
ದಿನಾಂಕ 21.10.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಅಕ್ಟೋಬರ್ 28, 2015

ಸಾಧನಾ ಸೋಪಾನ - 9: ಅನ್ನದೇವರ ಮುಂದೆ ಅನ್ಯ ದೇವರುಂಟೆ?





     ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಶಕ್ತಿಗಿಂತಲೂ ದೊಡ್ಡದಾದುದು. ಶಕ್ತಿಯನ್ನು ಕರುಣಿಸುವುದೇ ಆಹಾರ ಅಥವ ಅನ್ನ! ಅನ್ನ ಎಂಬ ಪದದ ಬಳಕೆ ವೇದ, ಉಪನಿಷತ್ತುಗಳಲ್ಲಿ ಅನೇಕ ಸಲ ಬರುವ ವಿಶಿಷ್ಟ ಪದವಾಗಿದೆ. ಈ ಪದ ಹೊರಡಿಸುವ ಅರ್ಥ ಆಹಾರ ಎಂಬುದೇ ಆಗಿದೆ. ಸೇವಿಸಲು ಉಪಯೋಗಿಸುವ ಯಾವುದೇ ಪದಾರ್ಥವಾಗಲಿ ಅದು ಆಹಾರವೆನಿಸುತ್ತದೆ, ಅದು ಅಕ್ಕಿಯಿರಬಹುದು, ಗೋಧಿಯಿರಬಹುದು ಅಥವ ಮತ್ತೇನೋ ಆಗಿರಬಹುದು. ಅದು ಯಾವುದೋ ಮಾನಸಿಕ ವಸ್ತುವೂ ಆಗಿರಬಹುದು. ಜೀವಿತಕ್ಕೆ ಪೂರಕವಾಗುವ ಯಾವುದೇ ಸಂಗತಿ ಅನ್ನವೆನಿಸುವುದು. ಹೀಗೆ ಅನ್ನ ಎಂಬುದರಲ್ಲಿ ವಿಷಯಾತ್ಮಕ ಮತ್ತು ಗುಣಾತ್ಮಕವಾಗಿ ಸಮ್ಮಿಲಿತವಾದ ಯಾವುದೇ ರೀತಿಯ ಶಕ್ತಿಯ ಉತ್ಪತ್ತಿಗೆ ಕಾರಣವಾಗುವ ಅಂಶ ಅಡಗಿದೆ.
     ಜೀವನದಲ್ಲಿ ಯಶಸ್ಸು ಅನ್ನುವುದು ಯಾವುದೋ ಒಂದು ಸಂಗತಿಯನ್ನು ಅವಲಂಬಿಸಿರದೆ ಹಲವಾರು ಸಂಗತಿಗಳ ಸಮ್ಮಿಲಿತಫಲವಾಗಿರುತ್ತದೆ. ಉದಾಹರಣೆಗೆ, ಗಾಳಿಯಲ್ಲದೆ ಉಸಿರಾಡಲಾರೆವು, ನಿಜ. ಆದರೆ ಶ್ವಾಸಕೋಶಗಳಿಲ್ಲದೆಯೂ ಸಹ ಉಸಿರಾಡಲಾಗುವುದಿಲ್ಲ. ಸಾಮಾಜಿಕ ಜೀವನಕ್ಕೂ ಈ ನಿಯಮ ಅನ್ವಯವಾಗುತ್ತದೆ. ನಾವು ಪರಸ್ಪರ ಹೊಂದಾಣಿಕೆ, ಸಹಕಾರ ಮತ್ತು ಅರ್ಥ ಮಾಡಿಕೊಳ್ಳುವಿಕೆಯಿಂದ ಬಾಳಬೇಕಾಗುತ್ತದೆ. ಉಪನಿಷತ್ತು ಹೇಳುವ ವಿಶಾಲ ಅರ್ಥದಲ್ಲಿ ಹೀಗೆ ಬಾಳುವುದಕ್ಕೆ ಸಹಾಯ ಮಾಡುವುದು, ಸಹಾಯವಾಗುವುದೂ ಅನ್ನವೆನಿಸಿಕೊಳ್ಳುತ್ತದೆ. ಪ್ರಕೃತಿಯ ಶಕ್ತಿಗಳು ಮತ್ತು ವ್ಯಕ್ತಿಗತ ಶಕ್ತಿಗಳ ಪರಸ್ಪರ ಸಂಬಂಧಗಳು ಪ್ರತಿಯೊಂದು ಕ್ರಿಯೆಗೆ ಕಾರಣವಾಗುತ್ತದೆ. ಇದೇ ಶಕ್ತಿಯ ಮೂಲ. ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡಿದ್ದಾಗ ಮತ್ತು ಪ್ರಕೃತಿಯ ಶಕ್ತಿಗಳು ನಮ್ಮೊಡನೆ ಹೊಂದಿಕೊಂಡಾಗ ನಾವು ಶಕ್ತಿಶಾಲಿಗಳಾಗುತ್ತೇವೆ. ಹೀಗೆ ಶಕ್ತಿಯ ಉತ್ಪಾದನೆಗೆ ಕಾರಣವಾಗುವುದೆಲ್ಲವೂ 'ಅನ್ನ'ವಾಗಿದೆ.
     ಈ ವೇದಮಂತ್ರ ಹೇಳುತ್ತದೆ:
ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ ಸ ತಸ್ಯ |
ನಾರ್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ || (ಋಕ್.೧೦.೧೧೭.೬.)
     'ಸೋಮಾರಿಯೂ, ಅಜ್ಞಾನಿಯೂ ಆದವನು ವ್ಯರ್ಥವಾಗಿ ಆಹಾರವನ್ನು ಪಡೆಯುತ್ತಾನೆ. ಸತ್ಯ ಹೇಳುತ್ತೇನೆ, ಅವನು ಆಹಾರದ ಕೊಲೆಗಾರನೇ ಸರಿ. ಅವನು ದೇವರ ಶಾಸನವನ್ನಾಗಲೀ, ತನ್ನ ಆಪ್ತೇಷ್ಟರನ್ನಾಗಲೀ ಬಲಗೊಳಿಸುವುದಿಲ್ಲ. ಕುಳಿತು ತಿನ್ನುವ ಸೋಮಾರಿಯೂ, ಅಜ್ಞಾನಿಯೂ ಆದ ಅವನು ಪಾಪದ ಪ್ರತೀಕ' ಎಂಬುದು ಇದರ ಅರ್ಥ. ಅವಧೂತ ಮುಕುಂದೂರು ಸ್ವಾಮಿಗಳು ಊಟಕ್ಕೆ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಿದ್ದರು: "ಮುದ್ದೆ ಅಂತ ಊಟ ಇಲ್ಲ, ಸಿದ್ದಪ್ಪನಂತ ದೇವ್ರಿಲ್ಲ ಅಂತಾರೆ. ಆದ್ರೆ ಒಂದ್ಮಾತು, ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಕೇಳ್ಕಂಡು, ಹೇಳ್ಕಂಡು ಮುದ್ದೆ ಮುರೀರಪ್ಪಾ." ಎಂತಹ ದಿವ್ಯ ಸಂದೇಶ. ಊಟ ಮಾಡುವುದಕ್ಕೂ ಅರ್ಹತೆ ಇರಬೇಕು. ಹಾಗಿರುವಾಗ ಆಹಾರಕ್ಕಾಗಿ ಹಪಹಪಿಸುವ ಲಕ್ಷಾಂತರ ಜೀವಿಗಳಿರುವ ಈ ಜಗತ್ತಿನಲ್ಲಿ ತಿನ್ನುವ ಆಹಾರವನ್ನೇ ವ್ಯರ್ಥ ಮಾಡುವುದು ಮಹಾಪಾಪ ಎಂಬ ಸಾಮಾಜಿಕ ಪ್ರಜ್ನೆ ಎಲ್ಲರಲ್ಲೂ ಮೂಡಬೇಕು.
     ಒಬ್ಬ ವ್ಯಕ್ತಿ ಹತ್ತು ದಿನಗಳಿಂದ ಆಹಾರ ಸೇವಿಸಿಲ್ಲವೆಂದಿಟ್ಟುಕೊಳ್ಳೋಣ. ಏನಾಗುತ್ತದೆ? ಅವನು ಬದುಕಿರಬಹುದು, ಜೀವಿಯೆಂದು ಅನ್ನಿಸಿಕೊಳ್ಳಬಹುದು, ಆದರೆ ಆತ ಕಾಣುವ, ಕೇಳುವ, ಯೋಚಿಸುವ ಅಥವ ಅರ್ಥ ಮಾಡಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿರುತ್ತಾನೆ. ಅಲ್ಲಿ ಪ್ರಾಣವಿದೆ, ಸತ್ವವಿಲ್ಲ, ಏಕೆಂದರೆ 'ಅನ್ನ' ಇಲ್ಲ. ಆಹಾರ ಕಂಡ ಕೂಡಲೇ ಅವನಿಗೆ ಚೈತನ್ಯ ಬಂದಂತಾಗುತ್ತದೆ. 'ಅನ್ನ'ವೆಂದರೆ ಕೇವಲ ತಿನ್ನುವ ಆಹಾರವಲ್ಲ. ಅದು ವಿಶ್ವದ ಉಗಮದ ಪ್ರತೀಕ. ಆಹಾರವೆಂದರೆ ಅದರಲ್ಲಿ ನಾವು ಸ್ವೀಕರಿಸುವುದೆಲ್ಲವೂ ಸೇರುತ್ತದೆ, ಅಂದರೆ ನೋಡುವುದು, ಕೇಳುವುದು, ತಿನ್ನುವುದು, ಇತ್ಯಾದಿಗಳೆಲ್ಲವೂ ಆಹಾರವೆಂದೇ ತಿಳಿಯಬೇಕು. ನಾವು ಎಂತಹ ಆಹಾರ ಸೇವಿಸುತ್ತೇವೆ ಎಂಬುದಕ್ಕೆ ತಕ್ಕಂತೆ ನಾವು ಶಕ್ತಿ ಗಳಿಸಿಕೊಳ್ಳುತ್ತೇವೆ.
     'ನೀನು ಹೊಟ್ಟೆಗೆ ಏನು ತಿಂತೀಯ?'- ಯಾರಾದರೂ ಏನಾದರೂ ಅಚಾತುರ್ಯವೆಸಗಿದಾಗ, ತಪ್ಪು ಮಾಡಿದಾಗ ಈ ರೀತಿ ಪ್ರತಿಕ್ರಿಯಿಸುತ್ತೇವೆ ಅಲ್ಲವೇ? ಇದರ ಅರ್ಥ ಸಹ ಸ್ಪಷ್ಟ. ನಾವು ಸೇವಿಸುವ ಆಹಾರ ನಮ್ಮ ಕೃತಿಯ ಮೇಲೆ, ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಅದು. ಪ್ರಾಣಿಲೋಕದಲ್ಲೂ ಸಹ ಸಸ್ಯಾಹಾರಿ ಪ್ರಾಣಿಗಳು ಮತ್ತು ಮಾಂಸಾಹಾರಿ ಪ್ರಾಣಿಗಳ ಗುಣ, ಲಕ್ಷಣ ಮತ್ತು ಸ್ವಭಾವಗಳಲ್ಲಿ ಎದ್ದು ಕಾಣುವ ವ್ಯತ್ಯಾಸಗಳನ್ನು ಗಮನಿಸಬಹುದಾಗಿದೆ. ಆಯುರ್‍ವೇದದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರದ ಬಗ್ಗೆ ವಿವರಣೆ ಸಿಗುತ್ತದೆ. ಸಾತ್ವಿಕ ಗುಣವೆಂದರೆ ರಚನಾತ್ಮಕ, ಸ್ಪಷ್ಟ ಮತ್ತು ಜೀವನವನ್ನು ಪೋಷಿಸುವುದಾಗಿದೆ. ಶಾಂತಿ, ನೆಮ್ಮದಿ, ಪ್ರೀತಿ, ಇತ್ಯಾದಿಗಳು ಸಾತ್ವಿಕರ ಲಕ್ಷಣಗಳು. ಸಾತ್ವಿಕರು ಸಾಮಾನ್ಯವಾಗಿ ಆಧ್ಯಾತ್ಮಿಕ ಒಲವುಳ್ಳವರು, ಸರಳರು, ಉದ್ವೇಗರಹಿತರು, ಸಂತುಷ್ಟರು, ಕೋಪನಿಗ್ರಹಿಗಳು ಆಗಿದ್ದು, ಅವರ ವಿಚಾರಗಳು ಸ್ಪಷ್ಟವಾಗಿರುತ್ತವೆ. ಅವರು ಇತರರಿಗೆ ಸಂತೋಷ ಕೊಡುವವರು, ಉತ್ಸಾಹಿತರು, ಕುತೂಹಲಿಗಳು ಮತ್ತು ಪ್ರೇರಕರಾಗಿರುತ್ತಾರೆ. ಸಾತ್ವಿಕ ಆಹಾರ ಸತ್ವಯುತವಾಗಿದ್ದು ಸುಲಭವಾಗಿ ಜೀರ್ಣವಾಗುವಂತಹದು ಮತ್ತು ಹಗುರವಾಗಿರುತ್ತವೆ. ಹದವಾಗಿ ಬೇಯಿಸಿದ ತರಕಾರಿಗಳು, ಕಳಿತ ಹಣ್ಣುಗಳು, ಕಾಳುಗಳು, ಜೇನುತುಪ್ಪ, ಶುಂಠಿ, ಸ್ವಲ್ಪ ಪ್ರಮಾಣದ ತುಪ್ಪ, ಹಸುವಿನ ಹಾಲು ಇತ್ಯಾದಿಗಳು ಸಾತ್ವಿಕ ಆಹಾರದ ಪಟ್ಟಿಯಲ್ಲಿವೆ. ಸತ್ವ ಹೆಚ್ಚಲು ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಸತ್ಸಂಗ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವುದಲ್ಲದೆ, ಪ್ರಶಾಂತವಾದ ಮತ್ತು ಹಿತಕರವೆನಿಸುವ ವಾತಾವರಣದಲ್ಲಿ ಇರುವುದು ಸಹಾಯಕಾರಿಯಾಗುತ್ತವೆ. ನೋಡುವ ನೋಟಗಳು, ಕೇಳುವ ಸಂಗತಿಗಳು, ಓದುವ ಪುಸ್ತಕಗಳು ಒಳ್ಳೆಯದಾಗಿದ್ದಲ್ಲಿ, ಧನಾತ್ಮಕವಾಗಿದ್ದಲ್ಲಿ ಅವೂ ಸಹ ಸಾತ್ವಿಕ ಗುಣವನ್ನು ವೃದ್ಧಿಸುತ್ತವೆ.
     ರಾಜಸಿಕತೆಯೆಂದರೆ ಮನ್ನುಗ್ಗುವ ಮತ್ತು ಚಟುವಟಿಕೆಯಿಂದ ಒಡಗೂಡಿದ ಸ್ವಭಾವ. ಜೀವನದಲ್ಲಿ ಕೆಲಸಗಳಾಗಬೇಕಾದರೆ ಈ ಸ್ವಭಾವವೂ ಅಗತ್ಯವಾಗಿದ್ದರೂ, ಅತಿಯಾದಲ್ಲಿ ಇದು ಅತಿ ಚಟುವಟಿಕೆ ಮತ್ತು ತಳಮಳಕ್ಕೂ ಕಾರಣವಾಗುತ್ತದೆ. ಮನಸ್ಸು ವಿಶ್ರಾಂತವಾಗಿರದೆ ಭಯ, ಕಾತುರ ಮತ್ತು ಉಗ್ರತೆಯಿಂದ ಚಡಪಡಿಸುತ್ತದೆ. ಮಿತಿಯಲ್ಲಿರುವ ರಾಜಸಿಕತೆ ಒಳ್ಳೆಯ ಫಲ ನೀಡುತ್ತದೆ, ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಅತಿಯಾದಲ್ಲಿ ಅದು ಗರ್ವ, ಸ್ಪರ್ಧೆ, ಅತಿಕ್ರಮಣಕಾರಿ ಮನೋಭಾವ ಮತ್ತು ಮತ್ಸರಕ್ಕೆ ರಹದಾರಿಯಾಗುತ್ತದೆ. ಭೌತಿಕವಾದಕ್ಕೆ ಹೆಚ್ಚು ಮಹತ್ವ ಕೊಡುವ ಇವರು ಅಧಿಕಾರ, ಹೆಸರು, ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿಗಾಗಿ ಹಂಬಲಿಸುತ್ತಾರೆ. ತಕ್ಷಣದಲ್ಲಿ ಇವರು ಮಾಡುವ ಕ್ರಿಯೆಗಳಿಂದಾಗಿ ನಂತರದಲ್ಲಿ ಪಶ್ಚಾತ್ತಾಪ ಪಡಬೇಕಾಗಿಯೂ ಬರಬಹುದು. ಬಹುತೇಕ ರಾಜಕಾರಣಿಗಳು ಇದಕ್ಕೆ ಉದಾಹರಣೆಯಾಗಿದ್ದಾರೆ. ಮತೀಯ ಹುಚ್ಚಾಟಗಳಿಗೂ ಇದು ಮೂಲಕಾರಣವಾಗಿದೆ. ಅವರುಗಳು ತಾವು ನಂಬಿರುವುದೇ ಸರಿಯೆನ್ನುತ್ತಾರೆ ಮತ್ತು ಇತರರು ತಮ್ಮ ಮಾತನ್ನು ಕೇಳಬೇಕೆನ್ನುವ ಸಲುವಾಗಿ ಏನು ಮಾಡಲೂ ತಯಾರಿರುತ್ತಾರೆ. ಅತಿ ರಾಜಸಿಕತೆಯಲ್ಲಿ ಯಾವುದು ಒಳ್ಳೆಯದೆಂದು ಹೃದಯಕ್ಕೆ ಗೊತ್ತಿದ್ದರೂ, ಮನಸ್ಸು ಮಾತ್ರ ಬೇರೆಲ್ಲೋ ಕೊಂಡೊಯ್ದುಬಿಡುತ್ತದೆ. ಆದರೆ ಹಿಡಿತದಲ್ಲಿರುವ ರಾಜಸಿಕತೆ ಅತ್ಯಗತ್ಯವಾಗಿದ್ದು, ಗುರಿ ತಲುಪಲು ಮತ್ತು ಸಮಾಜವನ್ನು ಸರಿಯಾಗಿ ಕೊಂಡೊಯ್ಯಲು ಇದು ಸಹಕಾರಿಯಾಗಿರುತ್ತದೆ. ನೋಡುವ ದೃಷ್ಯಗಳು/ಸಂಗತಿಗಳು, ದಾರಿ ತಪ್ಪಿಸುವ ಚಿತ್ರಗಳು, ಧಾರಾವಾಹಿಗಳು, ಕೇಳುವ ಕೆಟ್ಟ ಮಾತುಗಳು, ವಾಸಿಸುವ ಅಶಾಂತ ಪರಿಸರ ಸಹ ರಾಜಸಿಕತೆಗೆ ಪ್ರಚೋದಿಸುತ್ತವೆ. ಅತಿಯಾದ ವ್ಯಾಯಾಮ, ಅತಿಯಾದ ಪ್ರಯಾಣ, ಅತಿಯಾದ ಮಾತು, ಅತಿಯಾದ ಕೆಲಸ, ಅತಿಯಾದ ಮನರಂಜನೆಗಳೂ ಸಹ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕರಿದ, ಹುರಿದ ಪದಾರ್ಥಗಳು, ಚಾಕೊಲೇಟುಗಳು, ಅತಿಯಾದ ಸಿಹಿ, ಉಪ್ಪು, ಖಾರದ ಪದಾರ್ಥಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳು ರಾಜಸಿಕ ಆಹಾರದ ಪಟ್ಟಿಯಲಿದ್ದು, ಹಿತ-ಮಿತವಾಗಿ ಬಳಸಿದರೆ ಒಳಿತು. ಸಾತ್ವಿಕರ ಮತ್ತು ನಿಯಂತ್ರಿತ ರಾಜಸಿಕರ ಹಿತಕರ ಒಟ್ಟುಗೂಡುವಿಕೆ ಸಮಾಜಕ್ಕೆ ಉಪಕಾರಿಯಾಗಿರುತ್ತದೆ.
     ತಾಮಸಿಕತೆ ನಾಶ ಮಾಡುವ ಗುಣವಾಗಿದೆ. ಆಲಸ್ಯ, ಜಡತ್ವ, ನಿರಾಶೆ, ಖಿನ್ನತೆ, ಕ್ರೋಧ ಇದರ ಉತ್ಪನ್ನಗಳು. ನಿದ್ರೆ, ವಿಶ್ರಾಂತಿ, ಮುನ್ನುಗ್ಗದಿರುವಿಕೆ, ಇತ್ಯಾದಿಗಳು ಸಂದರ್ಭಗಳಲ್ಲಿ ಅವಶ್ಯವಾಗಿದ್ದು ತಾಮಸಿಕತೆಯೂ ಸಹ ಸ್ವಲ್ಪ ಮಟ್ಟಿಗೆ ಅಗತ್ಯವಾದುದೇ ಆಗಿದೆ. ಆದರೆ ತಮೋಗುಣ ಹೆಚ್ಚಾದರೆ ಅನರ್ಥಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಕೀಳು ಅಭಿರುಚಿಯ ಚಿತ್ರಗಳು, ಕೀಳು ಮನೋಭಾವದ ಚಾನೆಲ್ಲುಗಳು, ಅಂತರ್ಜಾಲದ ಅಶ್ಲೀಲ ತಾಣಗಳು ತಾಮಸಿಕತೆಯ ಬೆಂಕಿಗೆ ತುಪ್ಪ ಸುರಿಯುವಂತಹವಾಗಿವೆ. ತಾಮಸಿಕರು ಸ್ವನಾಶಕ್ಕೆಡೆಮಾಡುವ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸದವರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ, ಅತಿಯಾದ ಕಾಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ ಮಾಡಲು ಹಂಬಲಿಸುತ್ತಾರೆ.  ಪರಿಣಾಮವಾಗಿ ನಿಸ್ತೇಜತೆ, ಭಾರವಾದ ಮನಸ್ಸಿನೊಂದಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಮತ್ತು ಇತರರ ಬಗ್ಗೆ ಲೆಕ್ಕಿಸದಂತೆ ಇರುತ್ತಾರೆ. ಕೊನೆಯಲ್ಲಿ ಯಾವ ಸ್ಥಿತಿಗೆ ತಲುಪುತ್ತಾರೆಂದರೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದಂತಾಗಿ ಇತರರನ್ನು ಆಶ್ರಯಿಸಬೇಕಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲಾರರು ಮತ್ತು ಅಸ್ಪಷ್ಟ ಮನಸ್ಸಿನಿಂದಾಗಿ ಒಳ್ಳೆಯ ನಿರ್ಧಾರ ತಳೆಯಲಾರರು. ತಾಮಸಿಕ ಆಹಾರ ಕಡಿಮೆ ಸತ್ವಯುತವಾಗಿದ್ದು, ಜೀವಕ್ಕೆ ಪೋಷಕವಾಗಿರುವುದಿಲ್ಲ. ಹಳೆಯದಾದ ಮತ್ತು ತಂಗಳು ಆಹಾರ, ಅತಿಯಾಗಿ ಕರಿದ ಮತ್ತು ಹುರಿದ ಪದಾರ್ಥಗಳು, ಸುಲಭವಾಗಿ ಜೀರ್ಣವಾಗದಂತಹ ಗಡಸು ಆಹಾರ, ಹೆಚ್ಚು ಅನ್ನಿಸುವಷ್ಟು ಮಾಂಸಾಹಾರ, ಇತ್ಯಾದಿಗಳು ತಾಮಸಿಕವೆನಿಸುವ ಆಹಾರಗಳ ಪಟ್ಟಿಯಲ್ಲಿ ಸೇರಿವೆ. ಮಾದಕ ದ್ರವ್ಯಗಳು, ಡ್ರಗ್ಸ್ ಮುಂತಾದವು ತಾಮಸ ಗುಣ ಪ್ರಚೋದಕಗಳು. ಇವು ರಾಜಸಿಕ ಪರಿಣಾಮಗಳನ್ನೂ ಬೀರುತ್ತವೆ. ಮೆದುಳಿನ ಮೇಲೆ ಪ್ರಭಾವ ಬೀರುವ, ಅದನ್ನು ಮಂಕುಗೊಳಿಸುವ ಪದಾರ್ಥಗಳೆಲ್ಲವೂ ತಾಮಸಿಕ ಆಹಾರವೆನಿಸುವುವು. ಮೆದುಳನ್ನು ಆವರಿಸಿರುವ ತಾಮಸಿಕ ಪೊರೆಯನ್ನು ಸರಿಸಲು ಶಾಂತ ಪರಿಸರ, ಸಾತ್ವಿಕ ಆಹಾರ ಸೇವನೆ ಮತ್ತು ಬದಲಾದ ಜೀವನಶೈಲಿಯಿಂದ ಸಾಧ್ಯವಿದೆ.
     'ಅನ್ನ'ವೆಂದರೆ ಕೇವಲ ನಾವು ಸೇವಿಸುವ ಆಹಾರ ಮಾತ್ರವಲ್ಲ ಮತ್ತು ನಾವು ನೋಡುವ, ಕೇಳುವ ಮತ್ತು ತಿನ್ನುವ 'ಅನ್ನ'ವನ್ನು ಅವಲಂಬಿಸಿ ನಮ್ಮ ಗುಣ, ಸ್ವಭಾವಗಳು ರೂಪಿತವಾಗುತ್ತವೆ ಎಂಬುದನ್ನು ತಿಳಿದೆವು. ಒಂದು ಕೆಟ್ಟ ಸುದ್ದಿಯೆಂದರೆ, ಮನುಷ್ಯನ ಸ್ವಭಾವಕ್ಕೂ ಆತನ ಹುಟ್ಟಿನ ಜಾತಿಗೂ ಯಾವುದೇ ಸಂಬಂಧವಿಲ್ಲ. ಹಿಂದುಳಿದಿರುವಿಕೆ ಅಥವ ಮುಂದುವರೆದಿರುವಿಕೆಗೆ ಜಾತಿ ಕಾರಣ ಅಲ್ಲವೇ ಅಲ್ಲ. ಜಾತಿ ಆಧಾರಿತವಾಗಿ ಇದನ್ನು ನಿರ್ಧರಿಸುವುದು ಕೇವಲ ಅಧಿಕಾರದ, ಸ್ವಾರ್ಥದ ಅಥವ ರಾಜಕೀಯ ಲಾಭಗಳಿಕೆಯ ಉದ್ದೇಶದಿಂದ ಮಾತ್ರವೇ ಆಗಿದೆ. ಒಂದು ಒಳ್ಳೆಯ ಸುದ್ದಿಯೆಂದರೆ, ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿದ್ದು, ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಎಂತಹ ಒಳ್ಳೆಯ ಅವಕಾಶ! ನಾವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬಲ್ಲೆವು. ಅದನ್ನು ನಾವು ಸೂಕ್ತವಾಗಿ ಆರಿಸಿಕೊಳ್ಳುವ 'ಅನ್ನ'ದ ಮೂಲಕ ಮತ್ತು ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಪಡೆದುಕೊಳ್ಳಬಲ್ಲೆವು. ಇಂತಹ ಕರುಣಾಮಯಿ ಅನ್ನದೇವರ ಮುಂದೆ ಅನ್ಯ ದೇವರುಂಟೇ?
-ಕ.ವೆಂ.ನಾಗರಾಜ್.
***************
ದಿನಾಂಕ 14.10.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಅಕ್ಟೋಬರ್ 23, 2015

ಸಾಧನಾ ಸೋಪಾನ - 8: ಬಲಶಾಲಿಯ ಮಾತನ್ನು ಜಗತ್ತು ಕೇಳುತ್ತದೆ!



ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ
ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ? |
ವೀರನಿಗೆ ಅವಕಾಶ ಹೇಡಿಗದು ನೆಪವು
ನಿಲುವು ಸರಿಯಿರಲು ಗೆಲುವೆ ಮೂಢ ||
     ಕೇವಲ ವಿದ್ಯೆಯನ್ನು ಮನನ ಮಾಡಿಕೊಂಡರೆ ಪ್ರಯೋಜನವಿಲ್ಲ, ವಿದ್ಯೆಯ ಅಂತಃಸತ್ವವನ್ನು ಅರಿತವರಾಗಬೇಕು. ವಾಸ್ತವತೆಗೆ ಆ ಅರಿವು ಸರಿಹೊಂದಬೇಕು. ಯಾವುದೇ ವಿಷಯದ ಸ್ಪಷ್ಟ ಅರಿವಿಲ್ಲದಿದ್ದಲ್ಲಿ ಆ ಕುರಿತು ಮನಸ್ಸನ್ನು ಕೇಂದ್ರೀಕರಿಸುವುದು ಸಾಧ್ಯವಿಲ್ಲವೆಂಬುದನ್ನೂ ಕಂಡುಕೊಂಡೆವು. ಈಗ ಮುಂದಿನ ಸಂಗತಿಯ ಬಗ್ಗೆ ಗಮನ ಹರಿಸೋಣ. ದೇಹ ಮತ್ತು ಮನಸ್ಸುಗಳ ಸಂಬಂಧ ಪರಸ್ಪರ ಪೂರಕವಾಗಿರುತ್ತದೆ. ಮನಸ್ಸಿನ ಇಚ್ಛೆಗೆ ತಕ್ಕಂತೆ ದೇಹ ಸಹಕರಿಸದಿದ್ದರೆ ಪ್ರಯೋಜನವಿಲ್ಲ. ಈ ಕಾರಣದಿಂದಾಗಿ ದೈಹಿಕ ಬಲಕ್ಕೆ ಅರಿವಿಗಿಂತ ಹೆಚ್ಚಿನ ಪ್ರಾಧಾನ್ಯತೆ ಬರುತ್ತದೆ. ದೈಹಿಕ ಬಲದ ಮಹತ್ವದ ಬಗ್ಗೆ ನೋಡೋಣ.
     ಶಕ್ತಿ ಎಂದರೆ ಮನಸ್ಸು ಮತ್ತು ದೇಹದ ಕಾರ್ಯಗಳ ಹಿತಕರ ಮಿಶ್ರಣದ ಫಲ. ದೇಹ ಮತ್ತು ಮನಸ್ಸುಗಳು ಒಟ್ಟಾದರೆ ಒಂದು ಶ್ರೇಷ್ಠ ಚೈತನ್ಯದ ಉದಯವಾಗುತ್ತದೆ. ಒಬ್ಬ ವ್ಯಕ್ತಿಗೆ ಅಸಾಧಾರಣ ಮನೋಬಲವಿದ್ದು, ಆರೋಗ್ಯಕರ ಶರೀರವಿಲ್ಲದಿದ್ದರೆ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಅವನು ಅಸಮರ್ಥನಾಗುತ್ತಾನೆ. ಕಾಯಿಲೆಗಳಿಂದ ನರಳುತ್ತಿರುವ, ಸಾಯುವ ಹಂತದಲ್ಲಿರುವವರು ತಮ್ಮ ಇಚ್ಛೆಗಳನ್ನು ತಾವು ಬಯಸಿದಂತೆ ಕ್ರಿಯಾರೂಪಕ್ಕೆ ತರಲಾರರು. ಒಬ್ಬ ಆರೋಗ್ಯಕರ, ಸಧೃಢಕಾಯ ವ್ಯಕ್ತಿ ಸಹ ಶಕ್ತ ಮನೋಬಲವಿಲ್ಲದಿದ್ದರೆ ಏನನ್ನೂ ಸಾಧಿಸಲಾರ. ಹೀಗಾಗಿ ಬಲವೆಂದರೆ ಅದು ಮನಸ್ಸು ಮತ್ತು ದೇಹಗಳ ಸಂಯುಕ್ತ ಕ್ರಿಯೆಯಾಗಿದ್ದು, ಇದು ಜ್ಞಾನ, ವಾಕ್ಕು, ಮನಸ್ಸು, ಸಂಕಲ್ಪ, ನೆನಪು, ಧ್ಯಾನ, ಅರಿವು, ಇತ್ಯಾದಿಗಳಿಗಿಂತ ಮೇಲಿನ ಸ್ಥಾನದಲ್ಲಿ ನಿಲ್ಲುತ್ತದೆ. ಬಲವಿಲ್ಲದ ನೂರು ಪಂಡಿತರನ್ನು ಬಲವಿರುವ (ಪಾಂಡಿತ್ಯ ಮತ್ತು ಶಕ್ತಿ) ಒಬ್ಬ ಸೋಲಿಸಬಲ್ಲ ಎಂಬುದು ಆಡುನುಡಿಯಾಗಿದೆ.
     ಹಿಂದೆ ಗುರುಕುಲದಲ್ಲಿ ಶಿಷ್ಯ ಗುರುವಿನೊಂದಿಗೇ ಕುಟೀರದಲ್ಲಿ ವಾಸವಿದ್ದು ವಿದ್ಯೆ ಕಲಿಯಬೇಕಿತ್ತು. ಶಿಷ್ಯರಾದವರು ಗುರುವಿನ ಸೇವೆ ಮಾಡಬೇಕಿತ್ತು. ಒಬ್ಬ ಸೊರಗಿಹೋಗಿರುವ, ರೋಗಿಷ್ಠ, ಶಕ್ತಿಹೀನ ಶಿಷ್ಯನಿಗೆ, ಆತ ಎಷ್ಟೇ ಕಲಿಯುವ ಶಕ್ತಿ ಮತ್ತು ಸಾಮರ್ಥ್ಯ ಇದ್ದರೂ, ಗುರುವಿನ ಸೇವೆ ಮಾಡಲು ಆಗುವುದೇ ಇಲ್ಲ. ಶಕ್ತಿ ಇದ್ದಿದ್ದರೆ, ಆತ ಗುರುವಿನ ಬಳಿ ಹೋಗಿ ನಿಲ್ಲಬಲ್ಲ, ಸೇವೆ ಮಾಡಬಲ್ಲ, ಗುರುವಿನ ಸಮೀಪ ಕುಳಿತು ಯೋಗ್ಯ ವಿದ್ಯೆಯನ್ನು ಕಲಿಯಬಲ್ಲ, ಗುರು ಹೇಳಿದ್ದನ್ನು ತಿಳಿಯಬಲ್ಲ, ದೇಹ ಸಾಮರ್ಥ್ಯದಿಂದ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲ, ಆಗ ಮಾತ್ರ ಆತನ ಕಲಿಕೆ ಪೂರ್ಣವಾಗುತ್ತಿತ್ತು.
     ನೂಕು ನುಗ್ಗಲು ಇರುವ ಸ್ಥಳದಲ್ಲಿ ಒಬ್ಬ ಠೊಣಪ ಸಣಕಲನೊಬ್ಬನ ಕಾಲನ್ನು ಅಕಸ್ಮಾತ್ತಾಗಿ ತುಳಿದುಬಿಟ್ಟಾಗ ಸಣಕಲ ಠೊಣಪನಿಗೆ, 'ಏಯ್, ಕಣ್ಣು ಕಾಣಿಸಲ್ವಾ? ನೋಡಿಕೊಂಡು ಹೋಗಕ್ಕೆ ಆಗಲ್ವಾ?' ಅನ್ನುತ್ತಾನೆ ಎಂದುಕೊಳ್ಳೋಣ. ಠೊಣಪ, 'ಕಾಣಲಿಲ್ಲ, ಸಾರಿ' ಎಂದರೆ ಸಣಕಲ ಸುಮ್ಮನಿರದೆ, 'ಮಾಡೋದು ಮಾಡಿಬಿಟ್ಟು ಸಾರಿ ಅಂತೆ ಸಾರಿ. ಕೊಬ್ಬು ಜಾಸ್ತಿ' ಎಂದುಬಿಟ್ಟರೆ? ಸಣಕಲ ದೊಡ್ಡ ವಿದ್ಯಾವಂತ, ಪ್ರಭಾವಶಾಲಿ ಇರಬಹುದು. ಆದರೆ ಠೊಣಪ ಮುಷ್ಠಿ ಕಟ್ಟಿ ಒಂದು ಬಿಗಿದುಬಿಟ್ಟರೆ ಸಣಕಲನ ಶರೀರದ ಆಕಾರವೇ ಬದಲಾಗುವುದಿಲ್ಲವೇ? ನಮ್ಮ ರಾಜಕೀಯ ನಾಯಕರುಗಳಾದರೂ ಬಹತೇಕರು ಜನಬಲ, ಜಾತಿಬಲ, ಅಧಿಕಾರಬಲ, ತೋಳ್ಬಲದಲ್ಲಿ ಮುಂದಿರುವವರೇ. ಅವರ ಮಾತುಗಳು, ನಡೆ-ನುಡಿಗಳು ಇಷ್ಟವಾಗದಿದ್ದರೂ ಅವರ ವಿರುದ್ಧ ಯಾರಾದರೂ ಎದುರು ಮಾತನಾಡುತ್ತಾರೆಯೇ? ಬಲದ ಬಲವಿದು! ಒಂದು ಸುಭಾಷಿತ ಹೇಳುತ್ತದೆ: "ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವಚ ನೈವಚ; ಅಜಾಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲಘಾತಕಃ"- ('ಕುದುರೆಯಲ್ಲ, ಆನೆಯಲ್ಲ, ಹುಲಿಯಂತೂ ಅಲ್ಲವೇ ಅಲ್ಲ, ಮೇಕೆಯನ್ನು ಬಲಿ ಕೊಡುತ್ತಾರೆ, ದೇವರೂ ಸಹ ದುರ್ಬಲರನ್ನೇ ಘಾತಿಸುತ್ತಾನೆ'). ಅರ್ಥ ಸ್ಪಷ್ಟ, ಬಲವಿರುವವರ ತಂಟೆಗೆ ಯಾರೂ ಹೋಗುವುದಿಲ್ಲ!
     ಭೂಮಿ ಧ್ಯಾನಿಸುತ್ತಿದೆ ಎಂದರೆ ವಿಚಿತ್ರವಾಗಿದೆಯೆಂದು ಭಾವಿಸಿಯಾರು! ಧ್ಯಾನವೆಂದರೆ ಕಣ್ಣು ಮುಚ್ಚಿ ಕುಳಿತು ಯಾವುದೋ ಮಂತ್ರ ಪಠಿಸುತ್ತಾ ಕೂರುವುದಲ್ಲ. ಧ್ಯಾನವೆಂದರೆ ಒಂದು ನಿರ್ದಿಷ್ಟ ವಿಷಯದ ಬಗ್ಗೆ ತದೇಕಚಿತ್ತರಾಗಿ ಚಿಂತಿಸುತ್ತಾ ವಿಚಲಿತರಾಗದೆ ಧ್ಯಾನದ ಗಮ್ಯವನ್ನು ತಲುಪಲು ಉಪಕ್ರಮಿಸುವುದು. ಭೂಮಿ ತನ್ನ ಅಕ್ಷದ ಸುತ್ತಲೂ ನಿರ್ದಿಷ್ಟ ಸಮಯ ಅನುಸರಿಸಿ ಸುತ್ತುತ್ತಿರುತ್ತದೆ, ಸೂರ್ಯನ ಸುತ್ತಲೂ ಸುತ್ತಿಬರುವಾಗಲೂ ನಿರ್ದಿಷ್ಟ ನಿಯಮ ಅನುಸರಿಸಿ ನಡೆಯುತ್ತದೆ. ಭೂಮಿ ಚಂಚಲವಾಗಿದ್ದರೆ, ಅರ್ಥಾತ್ ಧ್ಯಾನಿಸದಿದ್ದಿದ್ದರೆ, ಹೇಗೆ ಹೇಗೋ ಸುತ್ತುತ್ತಿತ್ತು ಮತ್ತು ಅದರ ಪರಿಣಾಮ ಸಹ ವಿಪರೀತವಾಗಿರುತ್ತಿತ್ತು ಅಲ್ಲವೇ? ಭೂಮಿಗೆ ಹೀಗೆ ಧ್ಯಾನಿಸುವ ಶಕ್ತಿ ಬಂದಿದ್ದು ಅದು ಹೊಂದಿರುವ ಪ್ರಚಂಡ ಬಲದಿಂದ! ಆದ್ದರಿಂದ ಬಲ ಅಥವ ಶಕ್ತಿ ಅನ್ನುವುದು ಭೌತಿಕ ಬಲ ಮತ್ತು ಜ್ಞಾನ ಮತ್ತು ತಿಳುವಳಿಕೆಯ ಸಂಯುಕ್ತ ಪರಿಣಾಮ ಎನ್ನಬಹುದು. ಎಲ್ಲಾ ಜೀವಿಗಳ ಯಶೋಗಾಥೆಗೆ ಬಲವೇ ಕಾರಣವಾಗಿದೆ. ಇಡೀ ಪ್ರಪಂಚವೇ ಒಂದಲ್ಲಾ ಒಂದು ಶಕ್ತಿಯ ಕಾರಣದಿಂದ ಅಸ್ತಿತ್ವದಲ್ಲಿದೆ. 'ನೀನು ಏನು ಚಿಂತಿಸುತ್ತೀಯೋ, ಅದೇ ನೀನಾಗುತ್ತೀಯೆ' ಎಂಬುದು ಒಂದು ನಾಣ್ಣುಡಿ. ಒಬ್ಬ ವ್ಯಕ್ತಿ ತನ್ನನ್ನು ತಾನು ಒಬ್ಬ ದುರ್ಬಲ, ಏನೂ ಪ್ರಯೋಜನವಿಲ್ಲದವನು, ಜನರಿಗೆ ಬೇಡವಾದವನು, ಬಡವ, ಇತ್ಯಾದಿ ಅಂದುಕೊಂಡರೆ ಅವನು ಸಹಜವಾಗಿ, ತನ್ನನ್ನೇ ಸಮ್ಮೋಹಕ್ಕೆ ಒಳಪಡಿಸಿಕೊಂಡಂತೆ,  ಅದೇ ರೀತಿ ಆದರೆ ಆಶ್ಚರ್ಯಪಡಬೇಕಿಲ್ಲ. ತನ್ನನ್ನು ತಾನು ನಂಬುವ, ತನ್ನ ಶಕ್ತಿಯಲ್ಲಿ ಭರವಸೆ ಇಟ್ಟುಕೊಂಡ ವ್ಯಕ್ತಿ, ತನ್ನ ಮಾನಸಿಕ ಮತ್ತು ಭೌತಿಕ ಬಲಗಳ ಸೂಕ್ತ ಸಂಯೋಜನೆಯಿಂದಾಗಿ ಖಂಡಿತ ಮುಂದಕ್ಕೆ ಬರುತ್ತಾನೆ. ಆದ್ದರಿಂದ ಬಲ ಗಳಿಸಿಕೊಳ್ಳುವಲ್ಲಿ ಸಾಧಕ ಮುಂದುವರೆಯುತ್ತಾನೆ.
     ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯವಿರುವುದೇ ಆರೋಗ್ಯ. ಶರೀರದ ಆಲಸ್ಯ ಮತ್ತು ಮನಸ್ಸಿನ ಚಂಚಲತೆ ಇವುಗಳನ್ನು ತೊರೆಯುವುದು ಇದಕ್ಕೆ ಅತ್ಯಗತ್ಯ. ಇದನ್ನು ಗಳಿಸಲು ಯೋಗಾಭ್ಯಾಸ ಉತ್ತಮ ಮಾರ್ಗವಾಗಿದೆ. ಮಹಾಕವಿ ಕಾಳಿದಾಸ ಹೇಳಿರುವಂತೆ 'ಶರೀರಮಾದ್ಯಂ ಖಲು ಧರ್ಮಸಾಧನಂ' (ಎಲ್ಲ ಧರ್ಮಸಾಧನೆಗೂ ಶರೀರವೇ ಮೊದಲು). ಶರೀರದ ಸ್ವಾಸ್ಥ್ಯ ಕಾಪಾಡುವುದು ಬಹಿರಂಗ ಸಾಧನೆಯಾದರೆ, ಮನಸ್ಸಿನ ಸ್ವಾಸ್ಥ್ಯ ಕಾಪಾಡುವುದು ಅಂತರಂಗ ಸಾಧನೆಯಾಗುತ್ತದೆ. ಅಂತರಂಗ ಮತ್ತು ಬಹಿರಂಗ ಸಾಧನೆಗಳನ್ನು ಸಾಧಿಸುವವನೇ ಸಾಧಕ.
ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ |
ದುರ್ಬಲತೆ ಪಾಪ ದುರ್ಬಲತೆಯೇ ಸಾವು
ವಿವೇಕವಾಣಿಯಿದು ನೆನಪಿರಲಿ ಮೂಢ ||
     ಪ್ರಪಂಚದಲ್ಲಿನ ಎಲ್ಲಾ ದುಃಖಗಳ, ಅಸಂತೋಷಗಳ ಕಾರಣ ದುರ್ಬಲತೆ ಎಂದು ವೇದಾಂತ ಸಾರುತ್ತದೆ. ನಾವು ಅಸಹಾಯಕರಾಗುವುದು, ಸುಳ್ಳು ಹೇಳುವುದು, ಕೊಲೆಗಾರರಾಗುವುದು, ಇನ್ನಿತರ ಅಪರಾಧಗಳನ್ನು ಮಾಡುವುದು, ಇತ್ಯಾದಿಗಳ ಮೂಲ ಕಾರಣವೆಂದರೆ ದುರ್ಬಲರಾಗಿರುವುದು. ದುರ್ಬಲರಾಗಿರುವ ಭಯ ಕೀಳರಿಮೆಗೆ, ಪಾಪ ಮಾಡುವುದಕ್ಕೆ ನಿಶ್ಚಿತ ಮೂಲಕಾರಣವಾಗಿದೆ.  ದುರ್ಬಲರಾಗಿರುವುದರಿಂದ ನಾವು ಸಾಯುತ್ತೇವೆ. ನಮ್ಮನ್ನು ದುರ್ಬಲಗೊಳಿಸುವಂತಹದು ಏನೂ ಇಲ್ಲವೆಂದರೆ, ಅಲ್ಲಿ ಸಾವಿಲ್ಲ, ದುಃಖವಿಲ್ಲವೆಂಬದು ವಿವೇಕಾನಂದರ ನುಡಿ. ಶಕ್ತಿಯೆಂಬುದು ಜೀವನ, ಶಕ್ತಿಯೆಂಬುದು ಪುಣ್ಯ.
     ಈ ಭರತಭೂಮಿ ಶತಮಾನಗಳ ಕಾಲ ದಾಸ್ಯಕ್ಕೊಳಗಾಗಲು ಕಾರಣ ಮಾನಸಿಕ ದುರ್ಬಲತೆಯಲ್ಲದೇ ಮತ್ತೇನಲ್ಲ. ವೀರ-ಶೂರರ ನಾಡು ತುಳಿತಕ್ಕೊಳಗಾಯಿತೆಂದರೆ ಅದು ನಮ್ಮತನದ ಅರಿವಿನ ಕೊರತೆಯಲ್ಲದೆ ಬೇರೆಯಲ್ಲ. ಇತರರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದವರು ನಾವೇನೇ! ಮಾನಸಿಕ ಮತ್ತು ದೈಹಿಕ ಬಲ ನಮ್ಮ ಮಂತ್ರವಾದರೆ ಯಾವ ಕುಯುಕ್ತಿಯೂ ಅಲುಗಾಡಿಸಲಾಗದು. ಸುಯೋಗ್ಯ ಶಿಕ್ಷಣ ಪದ್ಧತಿ ರೂಪಿತವಾಗಿ, ಮನೆಮನೆಗಳು ಉತ್ತಮ ಸಂಸ್ಕಾರ ರೂಪಿಸುವ ಶಕ್ತಿ ಕೇಂದ್ರಗಳಾಗುವತ್ತ ಪ್ರಾಜ್ಞರು, ಗುರು-ಹಿರಿಯರು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ. ಬಲ -ದೈಹಿಕ ಮತ್ತು ಮಾನಸಿಕ- ನಮ್ಮ ಧ್ಯೇಯವಾಗಲಿ. ಎಳೆಯ ಮಗು ಹಾಲು ಕುಡಿಯುತ್ತಾ ಶಕ್ತಿಯನ್ನು ಗಳಿಸಿಕೊಳ್ಳಲಿ, ಬೆಳೆಯುತ್ತಾ ಅಂಬೆಗಾಲಿಡುತ್ತಾ ಶಕ್ತಿ ವೃದ್ಧಿಸಿಕೊಳ್ಳಲಿ, ತರುಣರಾಗಿ ಶಕ್ತಿಯ ಚೈತನ್ಯದಿಂದ ನಳನಳಿಸಲಿ, ಆ ಮೂಲಕ ಮತ್ತೊಮ್ಮೆ ನಮ್ಮ ನಾಡು ವಿಶ್ವಕ್ಕೆ ಗುರುವಾಗಲಿ. ಬಲಶಾಲಿ ನಾಡಿನ ಮಾತನ್ನು ಜಗತ್ತು ಕೇಳುತ್ತದೆ, ಒಪ್ಪಿಕೊಳ್ಳುತ್ತದೆ.
-ಕ.ವೆಂ. ನಾಗರಾಜ್.
****************
ದಿನಾಂಕ  7.10.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಶುಕ್ರವಾರ, ಅಕ್ಟೋಬರ್ 16, 2015

ಸಾಧನಾ ಸೋಪಾನ - 6,7: ಧ್ಯಾನ ಮತ್ತು ಧ್ಯಾನದ ಅರಿವು


     ಹಿಂದಿನ ಲೇಖನದಲ್ಲಿ ನೆನಪಿನ ಶಕ್ತಿ ಅನ್ನುವುದು ಇಚ್ಛಾಶಕ್ತಿ ಅಥವ ಸಂಕಲ್ಪಕ್ಕಿಂತ ಮಿಗಿಲೆಂಬುದನ್ನು ಕಂಡುಕೊಂಡೆವು. ಈ ನೆನಪಿನ ಶಕ್ತಿಗಿಂತ ಮೇಲಿನ ಸಂಗತಿಯೊಂದಿದೆ. ಸಾಮಾನ್ಯ ನೆನಪಿಗಿಂತ ಮೇಲಿನದು ಮನೋಕೇಂದ್ರೀಕರಣ ಅಥವ ಧ್ಯಾನ. ಅದೊಂದು ಉತ್ತಮವಾದ ಗುಣ. ನಾವು ನಮ್ಮ ಎಷ್ಟರಮಟ್ಟಿಗೆ ಕೇಂದ್ರೀಕರಿಸಲು ಸಾಧ್ಯವೋ, ಅರ್ಥಾತ್ ಧ್ಯಾನಿಸುತ್ತೇವೆಯೋ, ಅಷ್ಟರ ಮಟ್ಟಿಗೆ ಇತರರಿಗಿಂತ ಮೇಲಿರುತ್ತೇವೆ. ಕೇಂದ್ರೀಕರಿಸುವುದೆಂದರೆ ಮನಸ್ಸಿನ ಸ್ಥಿರತೆ ಹೊಂದುವುದು. ಎಲ್ಲೆಲ್ಲಿ ನಾವು ಯಾವುದೇ ರೀತಿಯ ಧೃಡತೆಯನ್ನು, ಯಾವುದೇ ರೀತಿಯ ಸ್ಥಿರತೆಯನ್ನು ಕಾಣುತ್ತೇವೆಯೋ, ಅಲ್ಲಿ ಕೇಂದ್ರೀಕರಣ ಇರುವುದನ್ನು ಕಾಣುತ್ತೇವೆ. ಭೂಮಿ ತನ್ನ ಗುಣದಲ್ಲಿನ ಸ್ಥಿರತೆ, ಧೃಡತೆಯ ಕಾರಣದಿಂದ ಕೇಂದ್ರೀಕರಿಸಿದ ಸ್ಥಿತಿಯಲ್ಲಿದೆ. ಇದರಿಂದಾಗಿ ಪ್ರಕೃತಿಯಲ್ಲಿ ಯಾವುದೇ ಗೊಂದಲವನ್ನು ನಾವು ಕಾಣುವುದಿಲ್ಲ. ಪ್ರಕೃತಿಯ ವಿವಿಧ ಸಂಗತಿಗಳಲ್ಲಿ ಸ್ಥಿರತೆ ಇದೆ. ಈ ಸ್ಥಿರತೆಯ ಕಾರಣದಿಂದಲೇ ಭೂಮಿ, ಜಲ, ಸೂರ್ಯ, ಚಂದ್ರ, ನಕ್ಷತ್ರಗಳು, ಇವೆಲ್ಲವೂ ಇರುವೆಡೆಯಲ್ಲಿ ತಮ್ಮ ಸ್ವಭಾವಕ್ಕನುಗುಣವಾಗಿ ಸ್ಥಿರವಾಗಿವೆ, ಅರ್ಥಾತ್ ಧ್ಯಾನಿಸುತ್ತಿವೆ. ಅವುಗಳಿಗ್ಲೆ ತಮ್ಮ ತಮ್ಮಲ್ಲಿ ಗೊಂದಲವಿಲ್ಲ, ಸಂದೇಹವಿಲ್ಲ. ಯಾರಾದರೂ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಾಧನೆಯನ್ನು ಮಾಡಿದ್ದರೆ, ಅದು ಕೇಂದ್ರೀಕರಿಸುವ ಶಕ್ತಿಯ ಕಾರಣದಿಂದ ಆದದ್ದಾಗಿದೆ. ಅದು ದೇವರೇ ಆಗಿರಬಹುದು, ಮನುಷ್ಯನೇ ಆಗಿರಬಹುದು, ಮನಸ್ಸು ಕೇಂದ್ರೀಕರಿಸಿ ಮಾಡಿದ ಕಾರಣದಿಂದಲೇ ಯಶಸ್ಸು ಲಭಿಸಿರುವುದಾಗಿದೆ. ಯೋಚನೆಯನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದೇ ಯಶಸ್ಸಿನ ಕಾರಣವಾಗಿದೆ. ಮನಸ್ಸನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದು ಮತ್ತು ಆ ದಿಕ್ಕಿನಲ್ಲೇ ಸತತ ಪ್ರಯತ್ನದಿಂದ ಮನಸ್ಸನ್ನು ಆ ನಿರ್ದಿಷ್ಟ ವಿಚಾರದಿಂದ ಹೊರಳದಿರುವಂತೆ ನೋಡಿಕೊಳ್ಳುವುದೇ ಕೇಂದ್ರೀಕರಣ. ಒಂದು ನಿರ್ದಿಷ್ಟ ಸಂಗತಿಯೊಂದಿಗೆ ಕುರಿತು ಆತ್ಮಪೂರ್ವಕವಾಗಿ, ಬೇರೆ ಯೋಚನೆಗಳು ಬರದಂತೆ ನೋಡಿಕೊಂಡು, ಒಂದಾಗುವುದೇ ಕೇಂದ್ರೀಕರಣ. ಇದೇ ಧ್ಯಾನ!
     ಮನಸ್ಸಿನ ಇಂತಹ ಕ್ರಿಯೆಯಿಂದಾಗಿಯೇ ಪ್ರಪಂಚದಲ್ಲಿ ಜನರು ಮಹಿಮರಾಗುತ್ತಾರೆಯೇ ಹೊರತು, ಚಂಚಲಿತ ಚಿಂತನೆಗಳಿಂದಲ್ಲ. ನಾವು ನೂರು ಸಂಗತಿಗಳ ಕುರಿತು ಮನಸ್ಸನ್ನು ತೊಡಗಿಸಿಕೊಂಡರೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವು ಒಂದು ಸಲಕ್ಕೆ, ಒಂದು ಸಮಯಕ್ಕೆ ಒಂದು ವಿಷಯದ ಬಗ್ಗೆ ಆತ್ಮಪೂರ್ವಕವಾಗಿ, ಹೃದಯಪೂರ್ವಕವಾಗಿ ತೊಡಗಿಸಿಕೊಂಡರೆ ನಾವು ಯಶಸ್ವಿಯಾಗುತ್ತೇವೆ. ಇದೇ ಕೇಂದ್ರೀಕರಿಸುವ ಶಕ್ತಿಯ ಮಹತ್ವವಾಗಿದೆ. ಇಲ್ಲಿ ಮತ್ತೆ ಉತ್ತರಪ್ರದೇಶದ ಅರುಣಿಮಾ ಸಿನ್ಹ ನೆನಪಾಗುತ್ತಾಳೆ. 11.4.2011ರಂದು ಚಲಿಸುತ್ತಿದ್ದ ರೈಲಿನಲ್ಲಿ ದರೋಡೆಗೊಳಗಾಗಿ ಹೊರಗೆ ಎಸೆಯಲ್ಪಟ್ಟು ಪಕ್ಕದ ಹಳಿಯ ಮೇಲೆ ಬಿದ್ದಾಗ ಎದುರಿನಿಂದ ಬಂದಿದ್ದ ರೈಲಿನ ಅಡಿಯಲ್ಲಿ ಸಿಕ್ಕು ಎರಡು ಕಾಲುಗಳನ್ನೂ ಕಳೆದುಕೊಂಡ 23 ವರ್ಷಗಳ ನತದೃಷ್ಟ ತರುಣಿ ಅವಳು. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಆಕೆಯನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು. ಹಲವಾರು ತಿಂಗಳುಗಳು ನರಳಿದ ಅವಳಿಗೆ ಕೃತಕ ಮರದ ಕಾಲುಗಳನ್ನು ಅಳವಡಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಆಕೆ ಹಿಮಾಲಯ ಪರ್ವತ ಏರುವ ಕನಸು ಕಂಡಳು. ಆಸ್ಪತ್ರೆಯಿಂದ ಹೊರಬಿದ್ದ ಕೂಡಲೇ ಆಕೆ ಆ ದಿಸೆಯಲ್ಲಿ ಕಾರ್ಯಪ್ರವೃತ್ತಳಾದಳು. ಅಗತ್ಯ ತರಬೇತಿ, ಮಾರ್ಗದರ್ಶನ ಪಡೆದಳು. 1.4.2013ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ 51 ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು 21.5.2013ರಂದು ತಲುಪಿಯೇಬಿಟ್ಟಳು! ಇದು ಅವಳ ಧೃಢ ಮನೋನಿರ್ಧಾರದಿಂದ ಲಭಿಸಿದ ವಿಜಯವಾಗಿತ್ತು! ಕೈ ಕಾಲುಗಳು ಗಟ್ಟಿಯಾಗಿರುವವರಿಗೇ ದುಸ್ಸಾಧ್ಯವೆನಿಸುವ ಸಾಹಸವನ್ನು ಈ ತರುಣಿಗೆ ಮಾಡಲು ಸಾಧ್ಯವಾಯಿತೆಂದರೆ ಆಕೆಯ ಮನೋಕೇಂದ್ರೀಕರಣದ ಶಕ್ತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತದೆ.
     ಕೇಂದ್ರೀಕರಿಸುವ ಶಕ್ತಿಯ ಕೊರತೆಯಿರುವವರು ಪ್ರಪಂಚದಲ್ಲಿ ಜಗಳಗಂಟರು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವವರಾಗಿರುತ್ತಾರೆ. ಅವರು ತಮ್ಮ ವಿಫಲತೆಗಳಿಗೆ ಕಥೆ ಕಟ್ಟುವವರಾಗಿರುತ್ತಾರೆ. ಮನಸ್ಸಿನ ಶಕ್ತಿಯನ್ನು ಕೇಂದ್ರೀಕರಿಸಬಲ್ಲವರು ತಮ್ಮ ಉದ್ದೇಶಗಳಿಗಾಗಿ ತಮ್ಮನ್ನು ಎಷ್ಟರಮಟ್ಟಿಗೆ ತೊಡಗಿಸಿಕೊಳ್ಳುತ್ತಾರೆಂದರೆ, ಅವರಿಗೆ ಉಪಯೋಗವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಮಯ ಸಿಗುವುದಿಲ್ಲ. ಅಂತಹವರೇ ದೊಡ್ಡವರು. ಆದ್ದರಿಂದ ಕೇಂದ್ರೀಕರಿಸಲು, ಧ್ಯಾನಿಸಲು ಮನಸ್ಸು ಮಾಡಬೇಕು.
     ಮನಸ್ಸನ್ನು ಕೇಂದ್ರೀಕರಿಸುವ ಅಭ್ಯಾಸದಿಂದ ಆಗುವ, ಸಿಗುವ ಫಲಿತಗಳ ಕುರಿತು ವಿವರಿಸುವುದು ಕಷ್ಟ, ಆದರೆ ಅದರಿಂದ ಬಹಳ ಅನುಕೂಲಗಳಿವೆ ಎಂಬುದು ನಿರ್ವಿವಾದ. ಯೋಗಾಭ್ಯಾಸ ಸಹ ಕೇಂದ್ರೀಕರಿಸುವ ಶಕ್ತಿಯ ಗಳಿಕೆಯ ಮಾರ್ಗವೇ ಆಗಿದೆ.  ಈ ಯೋಗಾಭ್ಯಾಸ ದೇಹ ಮತ್ತು ಮನಸ್ಸುಗಳ ಚೈತನ್ಯವೃದ್ಧಿಗೆ ಸಹಕಾರಿ. ಇದು ದೈಹಿಕ ಮತ್ತು ಮಾನಸಿಕ ಅಂಗಗಳನ್ನು ಸಹಜಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಕೃತಕ ಮಾರ್ಗಗಳಿಂದ, ಔಷಧಿಗಳಿಂದ ಗಳಿಸುವ ಆರೋಗ್ಯ ಸ್ಥಿರವಲ್ಲ. ಇದರಿಂದ ಅಡ್ಡಪರಿಣಾಮಗಳೂ ಆಗುತ್ತವೆ. ಆದರೆ ಯೋಗಾಭ್ಯಾಸದಿಂದ ದೀರ್ಘ ಮತ್ತು ಸ್ಥಿರವಾದ, ಅಡ್ಡಪರಿಣಾಮಗಳಿಲ್ಲದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಾಧ್ಯವಿದೆ. ಧೃಡವಾದ ಮಾನಸಿಕ ಆರೋಗ್ಯವಂತ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಲ್ಲ. ಮನೋನಿಗ್ರಹ, ಮನೋಕೇಂದ್ರೀಕರಣವಿಲ್ಲದಿದ್ದರೆ ಜೀವನದ ಯಾವುದೇ ಸಂಗತಿ ಅರ್ಥ ಕಳೆದುಕೊಳ್ಳುತ್ತದೆ ಎಂದು ಉಪನಿಷತ್ತು ಹೇಳುತ್ತದೆ. ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದೋ ಅಷ್ಟರಮಟ್ಟಿಗೆ ಬಂಧಮುಕ್ತನಾಗಬಹುದು, ಸ್ವತಂತ್ರನಾಗಬಹುದು ಮತ್ತು ಜೀವನದಲ್ಲಿ ಯಶಸ್ವಿಯಾಗಬಹುದು.
     ಧ್ಯಾನ ಮಾಡುವುದರಿಂದ ಒತ್ತಡ ಕಡಿಮೆಯಾಗುವುದು, ಮನಸ್ಸು ಹಗುರಾಗುವುದು, ಆಂತರಿಕ ಶಾಂತಿ ಲಭಿಸುವುದು. ಈ ಸ್ಥಿತಿಯಲ್ಲಿ ಸ್ಥಿತಪ್ರಜ್ಞತೆ ನಮ್ಮದಾಗುವುದು. ನೆನಪಿನ ಶಕ್ತಿ ಜಾಗೃತಗೊಳ್ಳುವುದು. ಮನಸ್ಸು ಸರಿಯಾದ ದಿಕ್ಕಿನಲ್ಲಿ ಚಲಿಸುವುದು. ಋಣಾತ್ಮಕ ಚಿಂತನೆಗಳು ಸರಿಯುವುವು. ಗುರಿ ಸಾಧನೆಗೆ ಇದು ಹೇಳಿ ಮಾಡಿಸಿದ ಸ್ಥಿತಿ. ಖಿನ್ನತೆ, ಉದ್ವೇಗ, ಆಸ್ತಮಾ, ರಕ್ತದ ಒತ್ತಡ, ನಿದ್ರಾಹೀನತೆ, ಕ್ಯಾನ್ಸರ್ ಮುಂತಾದ ಹಲವಾರು ಕಾಯಿಲೆಗಳಿಗೂ ಧ್ಯಾನ ಪರಿಣಾಮಕಾರಿಯಾದ ಪರಿಹಾರ ನೀಡುವುದೆಂದು ಸಂಶೋಧನೆಗಳು ಹೇಳುತ್ತವೆ.
     ಮನಸ್ಸನ್ನು ಕೇಂದ್ರೀಕರಿಸುವ ಮೊದಲು ಕೇಂದ್ರೀಕರಿಸುವುದರಿಂದ ಆಗುವ ಪರಿಣಾಮಗಳ ಅರಿವು ಮೊದಲು ಮನಸ್ಸಿಗೆ ಸ್ಪಷ್ಟವಾಗಬೇಕು. ಮನಸ್ಸನ್ನು ಯಾವುದರ ಮೇಲೆ ಕೇಂದ್ರೀಕರಿಸಬೇಕು, ಯಾವುದರ ಕುರಿತು ಧ್ಯಾನಿಸಬೇಕು ಎಂಬುದರ ಅರಿವಿಲ್ಲದೆ ಮಾಡುವ ಅರ್ಥವಿಲ್ಲದ ಧ್ಯಾನ ಫಲ ಕೊಡಲಾರದು. ಧ್ಯಾನಿಸುವ ವಿಧಾನ, ಧ್ಯಾನಿಸುವ ರೀತಿ, ಯಾವ ಉದ್ದೇಶಕ್ಕಾಗಿ ಮನಸ್ಸನ್ನು ಕೇಂದ್ರೀಕರಿಸುವುದು, ಧ್ಯಾನದ ಅಭ್ಯಾಸದಲ್ಲಿ ಎದುರಿಸಬಹುದಾದ ಸಮಸ್ಯೆಗಳು, ಇತ್ಯಾದಿಗಳನ್ನು ಮೊದಲು ಅರಿತುಕೊಳ್ಳಬೇಕು. ಈ ಅರಿವು ಧ್ಯಾನ ಮಾಡುವ ಮೊದಲು ಇರಬೇಕಾದುದು ಅತ್ಯಂತ ಅಗತ್ಯ.
     ಎಲ್ಲಾ ಸಂಗತಿಗಳು, ಪಂಚಭೂತಗಳು (ವಾಯು, ಆಕಾಶ, ಜಲ, ನೆಲ, ಅಗ್ನಿ), ಪಡೆಯುವ ಯಾವುದೇ ವಿದ್ಯೆ, ದೇವರು ಮತ್ತು ಮಾನವ ಜೀವಿಗಳು, ಪ್ರಾಣಿಗಳು ಮತ್ತು ಪಕ್ಷಿಗಳು, ಗುಣಗಳು ಮತ್ತು ದೋಷಗಳು, ಒಳ್ಳೆಯದು ಮತ್ತು ಕೆಟ್ಟದ್ದು, ಸತ್ಯ ಮತ್ತು ಅಸತ್ಯ, ಸಂತೋಷಕರವಾದದ್ದು ಮತ್ತು ದುಃಖಕರವಾದದ್ದು, ಮತ್ತು ಇಂತಹ ಜೀವನದ ಏನೆಲ್ಲಾ ಸಂಗತಿಗಳಿಗೆ ಅರ್ಥ ಬರುವುದು ಅವುಗಳ ಕುರಿತು ಅರಿವು ಇದ್ದರೆ ಮಾತ್ರ. ಯಾವುದಾದರೂ ವಿಷಯದ ಕುರಿತು ನಮಗೆ ಗೊತ್ತಿದೆಯೆಂದರೆ ಅದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಅರ್ಥ. ಅರ್ಥ ತಿಳಿದಿಲ್ಲವೆಂದರೆ ಏನೂ ಗೊತ್ತಿಲ್ಲವೆಂದೇ ತಿಳಿಯಬೇಕು. ಜೀವನದ ಬಗ್ಗೆ ನಾವು ಎಷ್ಟು ತಿಳಿದುಕೊಳ್ಳುತ್ತೇವೆಯೋ ಅಷ್ಟರ ಮಟ್ಟಿಗೆ ನಾವು ಜೀವನವನ್ನು ಆಸ್ವಾದಿಸಬಲ್ಲೆವು. ವ್ಯಕ್ತಿಗತವಾಗಿ, ಸಾಮಾಜಿಕವಾಗಿ ಅಥವ ಬೇರೆ ಯಾವುದೇ ಮಾರ್ಗದಲ್ಲಿ ನಾವು ಗಳಿಸುವ ಶಕ್ತಿ ನಮ್ಮ ಜ್ಞಾನವನ್ನು ಅವಲಂಬಿಸಿದೆ. ಜ್ಞಾನಿ ಅಂದರೆ ಅರಿವಿರುವವನು ಶಕ್ತಿವಂತನಾಗಿರುತ್ತಾನೆ. ಅವನ ಶಕ್ತಿಯ ಪ್ರಮಾಣ ಅವನು ಹೊಂದಿರುವ ಜ್ಞಾನವನ್ನವಲಂಬಿಸಿದೆ.
     ಜ್ಞಾನ ಮಿಗಿಲು; ಜ್ಞಾನಮೂಲವಾದ ವಾಕ್ಕು ಅದಕ್ಕಿಂತ ಮಿಗಿಲು; ಇವೆರಡಕ್ಕಿಂತ ಇವುಗಳನ್ನು ಸಾಧಿಸಲು ಅವಶ್ಯಕವಾದ ಮನಸ್ಸು ಮಿಗಿಲು; ಮನಸ್ಸಿನ ಇಚ್ಛಾಶಕ್ತಿ ಇದಕ್ಕೂ ಮಿಗಿಲು; ನೆನಪಿನ ಶಕ್ತಿಯಿಲ್ಲದಿದ್ದರೆ ಮೇಲಿನದೆಲ್ಲವೂ ವ್ಯರ್ಥವಾದ್ದರಿಂದ ಇದು ಮತ್ತೂ ಹೆಚ್ಚು; ಮೇಲಿನದೆಲ್ಲವೂ ಇದ್ದು ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿ ಇಲ್ಲದಿದ್ದರೆ, ಧ್ಯಾನ ಮಾಡಲಾಗದಿದ್ದರೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲವಾದ್ದರಿಂದ ಇದರ ಕೈಮೇಲು; ಯಾವುದರ ಕುರಿತು ಮನಸ್ಸನ್ನು ಕೇಂದ್ರೀಕರಿಸುವುದು ಅಥವ ಧ್ಯಾನಿಸುವುದು ಎಂಬುದರ ಸ್ಪಷ್ಟ ಅರಿವೂ ಇರಬೇಕಾದುದರಿಂದ ಇದು ಮತ್ತೂ ಹೆಚ್ಚಿನದು. ಆದ್ದರಿಂದ ಸಾಧನೆಯ ಆರನೆಯ ಹಂತವಾದ ಮನಸ್ಸನ್ನು ಕೇಂದ್ರೀಕರಿಸುವ, ಉದ್ದೇಶಿತ ಗುರಿಯ ಸಾಧನೆಗೆ ತನು-ಮನಗಳನ್ನು ತೊಡಗಿಸುವ ಶಕ್ತಿ ಮತ್ತು ಏಳನೆಯ ಹಂತವಾದ ಧ್ಯಾನದ ವಿಷಯ ಕುರಿತ ಸ್ಪಷ್ಟ ತಿಳುವಳಿಕೆಯನ್ನು ಗಳಿಸಿಕೊಂಡರೆ ನಾವು ಯಶಸ್ವಿ ವ್ಯಕ್ತಿಗಳಾಗಿಯೇ ಆಗುವೆವು!
-ಕ.ವೆಂ.ನಾಗರಾಜ್.
****************
ದಿನಾಂಕ 30.09.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಅಕ್ಟೋಬರ್ 5, 2015

ಸಾಧನಾ ಸೋಪಾನ - 5: ಸ್ಮರಣ ಶಕ್ತಿ


"ನಿನ್ನೆ ಅನ್ನುವುದು ಇಂದಿನ ನೆನಪಾದರೆ ನಾಳೆ ಅನ್ನುವುದು ಇಂದಿನ ಕನಸು."
     ಮನಸ್ಸಿಗಿಂತಲೂ ಮಿಗಿಲಾದ ಇಚ್ಛಾಶಕ್ತಿ ನಮ್ಮ ಮನೋವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮನಸ್ಸಿನ ವಿಚಾರಗಳನ್ನು ಒಂದೆಡೆ ಕೇಂದ್ರೀಕರಿಸಿದ ಶಕ್ತಿಯೇ ಹೊರತು ಮತ್ತೇನಲ್ಲ. ಮನಸ್ಸನ್ನು ಒಂದು ನಿರ್ದಿಷ್ಟ ರೀತಿಯಲ್ಲಿ, ನಿರ್ದಿಷ್ಟ ದಿಕ್ಕಿನಲ್ಲಿ ನಿರ್ದೇಶಿಸುವುದನ್ನೇ ನಾವು ಇಚ್ಛಾಶಕ್ತಿ ಅಥವ ಸಂಕಲ್ಪ ಎನ್ನುತ್ತೇವೆ. ಇನ್ನೊಂದು ಸಂಗತಿ ಇಲ್ಲದಿದ್ದರೆ ಈ ಇಚ್ಛಾಶಕ್ತಿ ಸಹ ಅರ್ಥ ಕಳೆದುಕೊಳ್ಳುತ್ತದೆ ಮತ್ತು ಅದು ಕೆಲಸ ಮಾಡಲು ಸಾಧ್ಯವಾಗದು. ಅದೇ ಸ್ಮರಣಶಕ್ತಿ! ಇದನ್ನು ಚಿತ್ತ ಎಂದೂ ಕರೆಯುತ್ತಾರೆ. ನೆನಪಿನ ಶಕ್ತಿ ಇಲ್ಲದ ವ್ಯಕ್ತಿ, ಒಂದು ಘಳಿಗೆಯ ಹಿಂದೆ ಏನಾಯಿತು ಎಂಬುದೇ ನೆನಪಿನಲ್ಲಿ ಇಟ್ಟುಕೊಳ್ಳಲಾಗದವನು, ಇಚ್ಛಾಶಕ್ತಿಯನ್ನು ಬಳಸಿ ಮನಸ್ಸನ್ನು ಕೇಂದ್ರೀಕರಿಸಲಾರ. ಏಕೆಂದರೆ ಹಿಂದಿನ ಸಂಗತಿಗಳು, ಅನುಭವಗಳು, ನಿಶ್ಚಯಗಳು, ಇತ್ಯಾದಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮನಸ್ಸಿನಲ್ಲಿ ಸಂಕಲ್ಪ ಮೂಡಲು ಅತ್ಯಗತ್ಯವಾಗಿದೆ. ನೆನಪಿಟ್ಟುಕೊಳ್ಳುವ ಮತ್ತು ಅದನ್ನು ಉಳಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ಇಚ್ಛಾಶಕ್ತಿ ಕೆಲಸ ಮಾಡಬಲ್ಲದು, ಮನಸ್ಸು ಕೇಳಬಲ್ಲುದು, ಸರಿಯಾದ ಮಾತು ಹೊರಬರುವುದು ಮತ್ತು ಜ್ಞಾನಕ್ಕೆ ಅರ್ಥ ಬರುವುದು! ಇವೆಲ್ಲವೂ ಒಂದು ಸರಪಳಿಯಿದ್ದಂತೆ!
     ಒಬ್ಬ ದೊಡ್ಡ ಪಂಡಿತನಿದ್ದಾನೆ ಎಂದುಕೊಳ್ಳೋಣ. ಅವನಿಗೆ ಎಷ್ಟೇ ದೊಡ್ಡ ಪಾಂಡಿತ್ಯವಿರಬಹುದು, ಅವನು ಎಷ್ಟೋ ವಿದ್ಯೆಗಳನ್ನು ಕಲಿತು ಅರಗಿಸಿಕೊಂಡಿರಬಹುದು, ಆದರೆ ಸ್ಮರಣ ಶಕ್ತಿ ಇಲ್ಲದಿದ್ದರೆ ಅವನ ಪಾಂಡಿತ್ಯವೆಲ್ಲವೂ ವ್ಯರ್ಥ. ಸ್ಮರಣಶಕ್ತಿ ಇರುವ ಜ್ಞಾನಿಗಳ ಮಾತಿಗೆ ಜನ ಬೆಲೆ, ಗೌರವ ಕೊಡುತ್ತಾರೆ. ಆದ್ದರಿಂದ ಮನುಷ್ಯನ ವ್ಯಕ್ತಿತ್ವ ಪಾಂಡಿತ್ಯದೊಡನೆ ಅವನ ನೆನಪಿನ ಶಕ್ತಿಯನ್ನೂ ಆಧರಿಸಿರುತ್ತದೆ. ಓದಿದ ಎಷ್ಟೋ ವರ್ಷಗಳ ನಂತರದಲ್ಲೂ ಇಂತಹ ವಿಷಯ ಇಂತಹ ಗ್ರಂಥದ ಇಷ್ಟನೇ ಪುಟದಲ್ಲಿದೆ ಎಂದು ಹೇಳಬಲ್ಲ ಅದ್ಭುತ ವ್ಯಕ್ತಿಗಳೂ ಕಾಣಸಿಗುತ್ತಾರೆ.
     ನೆನಪು ಯಾವಾಗಲೂ ಹೃದಯದ ಮಾತನ್ನು ಕೇಳುತ್ತದೆ! ಹೃದಯದ ಮಾತು ಎಂದರೆ ನಮಗೆ ಇಷ್ಟವೆನಿಸುವ, ನಮಗೆ ಮಹತ್ವದ್ದೆನಿಸುವ ಸಂಗತಿಗಳು! ಅವು ನೆನಪಿನಲ್ಲಿ ಉಳಿಯುತ್ತವೆ. ಒಂದು ಸಣ್ಣ ಉದಾಹರಣೆ ಹೇಳಬೇಕೆಂದರೆ ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಟ್ಟಿದ್ದು 1967ರಲ್ಲಿ. ಸುಮಾರು 48 ವರ್ಷಗಳ ಹಿಂದೆ ಕಟ್ಟಿದ್ದ ಆ ಪರೀಕ್ಷೆಯ ರಿಜಿಸ್ಟರ್ ನಂ. 47983 ಅನ್ನುವುದು ಈಗಲೂ ನೆನಪಿದೆ. ಪಿಯುಸಿಯ ನಂ. 17253 ಆಗಿತ್ತು. ಆದರೆ ಪದವಿ ಪರೀಕ್ಷೆಯ ನಂ. ನನಗೆ ನೆನಪಿಲ್ಲ. ಇದರ ಅರ್ಥ ಇಷ್ಟೇ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಿಗೆ ಕೊಟ್ಟಿದ್ದಷ್ಟು ಮಹತ್ವವನ್ನು ನಾನು ಪದವಿ ಪರೀಕ್ಷೆಗೆ ಕೊಡಲಾಗಿರಲಿಲ್ಲ ಅಥವ ಕೊಟ್ಟಿರಲಿಲ್ಲ. ನಿಮಗೆ ನಿಮ್ಮ ಸ್ನೇಹಿತನೋ, ನಿಮ್ಮ ಮನೆಯ ಯಾರಾದರೂ ಸದಸ್ಯರೋ ಏನನ್ನಾದರೂ ಹೇಳಿರುತ್ತಾರೆಂದು ಇಟ್ಟುಕೊಳ್ಳಿ. ನೀವು ಅದಕ್ಕೆ ಮಹತ್ವ ಕೊಟ್ಟಿದ್ದರೆ ಮಾತ್ರ ನಿಮಗೆ ಅದು ನೆನಪಿರುತ್ತದೆ. ಇಲ್ಲದಿದ್ದರೆ ಅವರು ಎದುರಿಗೆ ಬಂದಾಗ ಮಾತ್ರ ನೆನಪಾಗಿ, 'ಅಯ್ಯೋ ಮರೆತೇಬಿಟ್ಟೆ' ಅನ್ನುತ್ತೀರಿ.
     ಒಳ್ಳೆಯ ಅನುಭವಗಳಿಗಿಂತ ಕೆಟ್ಟ ಅನುಭವಗಳು ನೆನಪಿನಲ್ಲಿ ಉಳಿಯುತ್ತವೆ! ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ, ಸ್ವಾಭಿಮಾನವನ್ನು ಕೆಣಕುವ ಮಾತುಗಳನ್ನು ನಾವು ಮರೆಯುವುದಿಲ್ಲ. 'ನಾನು ಸತ್ತರೂ ಇದನ್ನು ಮಾತ್ರ ಮರೆಯುವುದಿಲ್ಲ' ಎಂಬಂತಹ ಮಾತುಗಳನ್ನು ಕೇಳಿರುತ್ತೇವಲ್ಲವೇ? ಸ್ವಾಭಿಮಾನವನ್ನು ಕೆಣಕುವ ಮಾತುಗಳು, ಅವಮಾನಗಳು, ಸೋಲುಗಳು ದೀರ್ಘಕಾಲ ನೆನಪಿನಲ್ಲಿರುತ್ತವೆ. ಇವು ಅಸಾಧಾರಣವಾದುದನ್ನು ಸಾಧಿಸಲೂ ಉತ್ತೇಜಿಸುತ್ತವೆ. ಹುಟ್ಟುಕುರುಡನಾಗಿ ಜನಿಸಿದ್ದ ಬಾಲಕ ಚಿಕ್ಕಂದಿನಲ್ಲೇ ತಂದೆ-ತಾಯಿಯರನ್ನು ಕಳೆದುಕೊಂಡು ಅಣ್ಣ-ಅತ್ತಿಗೆಯರಿಂದ ದಂಡಪಿಂಡ, ಶನಿ, ಕೂಳಿಗೆ ಭಾರ, ಇತ್ಯಾದಿ ದೂಷಣೆಗಳನ್ನು ಪ್ರತಿನಿತ್ಯ ಕೇಳಿ ಸಹಿಸಿಕೊಳ್ಳಲಾಗದೆ ಮನೆಬಿಟ್ಟು ಹೊರಟಾಗ ಅವನಿಗೆ ಕೇವಲ ಎಂಟು ವರ್ಷಗಳು. ಮುಂದೆ ಆ ಬಾಲಕ  ವಿರಜಾನಂದ ಸರಸ್ವತಿಯಾಗಿ ರೂಪುಗೊಂಡಿದ್ದ. ತಮ್ಮ ಶಿಷ್ಯ ಮಹರ್ಷಿ ದಯಾನಂದ ಸರಸ್ವತಿಯಂತಹ ಮಹಿಮಾನ್ವಿತರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದು ಈ ವಿರಜಾನಂದರೇ! ವಿರಜಾನಂದರ ಸಾಧನೆಗೆ ಪ್ರೇರಣೆಯಾಗಿದ್ದು ಅವರು ದಂಡಪಿಂಡ ಎಂದು ಬೈಯಿಸಿಕೊಂಡ ನೆನಪು ಅಚ್ಚಳಿಯದೇ ಉಳಿದಿದ್ದು!
     ಈ ನೆನಪಿನ ಶಕ್ತಿ ಉಳಿಯಲು ಕೆಲವು ಆಂತರಿಕ ಮತ್ತು ಬಾಹ್ಯ ಸಂಗತಿಗಳು ಸಹಾಯಕವಾಗುತ್ತವೆ. ಈ ಸಂಗತಿಗಳೆಂದರೆ ಮನಸ್ಸನ್ನು ನಿಯಂತ್ರಿಸುವುದು, ಜ್ಞಾನ ಸಂಪಾದನೆ, ಸಜ್ಜನ ಸಹವಾಸ (ಸತ್ಸಂಗ), ಸುಯೋಗ್ಯ ಗುರುಗಳ ಮಾರ್ಗದರ್ಶನ, ನಿಯಮಿತವಾದ ವ್ಯಾಯಾಮ, ಧ್ಯಾನ, ಇತ್ಯಾದಿಗಳು. ಹಿಂದೆ ಹಿರಿಯರು ಮರೆಗುಳಿಗಳಿಗೆ ಏನಾದರೂ ಸಂಗತಿಯ ನೆನಪು ಮರೆಯದಿರಲು ಜೇಬಿನಲ್ಲಿ ಒಂದು ಕಲ್ಲು ಇಟ್ಟುಕೋ, ಸೆರಗಿನಲ್ಲಿ ಒಂದು ಕಲ್ಲು ಕಟ್ಟಿಕೋ, ಇತ್ಯಾದಿ ಸಲಹೆ ಕೊಡುತ್ತಿದ್ದರು. ಆ ಕಲ್ಲನ್ನು ಕಂಡಾಗ, 'ಓಹ್, ಈ ಕೆಲಸ ಮಾಡಬೇಕಾಗಿತ್ತು' ಎಂಬುದು ಅವರುಗಳಿಗೆ ನೆನಪಾಗುತ್ತಿತ್ತು. ಈಗ ಉಪನಯನವನ್ನು ಯಾವ ಯಾವ ಸಮಯದಲ್ಲೋ ಮಾಡುತ್ತಾರೆ. ಇಂದಿನ ಸಾಮಾಜಿಕ ವ್ಯವಸ್ಥೆ ಸಹ ಈ ಏರುಪೇರಿಗೆ ಕಾರಣವಾಗಿದೆ. ಮೊದಲಾದರೋ ಇದನ್ನು ಯಾವುದೇ ಜಾತಿ, ಮತ, ಪಂಥ, ಲಿಂಗಬೇಧವಿಲ್ಲದೆ ಮಕ್ಕಳನ್ನು ಶಿಕ್ಷಣದ ಸಲುವಾಗಿ ಗುರುಕುಲಗಳಿಗೆ ಕಳುಹಿಸುವ ಮುನ್ನ ಮಾಡಿ ಕಳುಹಿಸಲಾಗುತ್ತಿತ್ತು. ಸುಯೋಗ್ಯ ಶಿಕ್ಷಣ ಪಡೆಯುವ ಸಂಕಲ್ಪದ ಜೊತೆಗೆ ಉಪವೀತದ ಮೂರು ಎಳೆಗಳು ಒಬ್ಬ ಮಾನವ ಜೀವಿತಕಾಲದಲ್ಲಿ ತೀರಿಸಬೇಕಾದ ಮೂರು ಋಣಗಳ-ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ಕುರಿತು ಸದಾಕಾಲ ನೆನಪಿರಲಿ ಎಂಬ ಉದ್ದೇಶವನ್ನು ಧರಿಸಿದವರಿಗೆ ನೆನಪಿಸುತ್ತಿದ್ದವು. ಇಂದು ಇದು ಕೇವಲ ಜಾತಿಸೂಚಕವಾಗಿ ಬಳಸಲಾಗುತ್ತಿರುವುದು ವಿಷಾದದ ಸಂಗತಿ. ಶುಭಕಾರ್ಯಗಳ ಸಂದರ್ಭದಲ್ಲಿ ಕಟ್ಟಿಕೊಳ್ಳುವ ಕಂಕಣವೂ ಸಹ ಸ್ಮರಣಶಕ್ತಿಯ ಜಾಗೃತಿಗಾಗಿಯೇ ಆಗಿದೆ.
ಚಿತ್ತ ಚಪಲತೆಯಿಂ ಚಿತ್ತ ಚಂಚಲತೆ
ಚಿತ್ತ ಚಂಚಲತೆಯಿಂ ಚಿತ್ತ ತಳಮಳವು |
ತಳಮಳ ಕಳವಳ ಹಾಳುಗೆಡವದೆ ಶಾಂತಿ
ಶಾಂತಿಯಿಲ್ಲದಿರೆ ಸುಖವೆಲ್ಲಿ ಮೂಢ ||
     ನೆನಪಿನ ಶಕ್ತಿ ಹಾಳಾಗಲು ಚಿತ್ತ ಚಪಲತೆ ಪ್ರಧಾನ ಕಾರಣವಾಗಿದೆ. ಒಂದು ತರಬೇತಿ ಕೇಂದ್ರದಲ್ಲಿ ಚಿತ್ರಕಲೆ, ಕರಕುಶಲಕಲೆ, ಶಿಲ್ಪಕಲೆ, ನಟನೆಗಳನ್ನು ಕಲಿಸಲಾಗುತ್ತಿತ್ತು. ಪ್ರತಿಯೊಂದೂ ಆರು ತಿಂಗಳ ಕಾಲಾವಧಿಯ ತರಬೇತಿಯಾಗಿದ್ದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುತ್ತಿತ್ತು. ರಾಮಣ್ಣ ಮತ್ತು ಶಾಮಣ್ಣ ತರಬೇತಿಗೆ ಸೇರಿದರು. ರಾಮಣ್ಣ ಮೊದಲಿಗೆ ಚಿತ್ರಕಲೆ ಆರಿಸಿಕೊಂಡರೆ ಶಾಮಣ್ಣ ಕರಕುಶಲಕಲೆ ಆರಿಸಿಕೊಂಡ. ಒಂದು ತಿಂಗಳ ನಂತರ ಶಾಮಣ್ಣನಿಗೆ ಕರಕುಶಲಕಲೆ ಕಷ್ಟ, ನಂತರ ಕಲಿತರಾಯಿತು ಎಂದು ಶಿಲ್ಪಕಲೆ ಕಲಿಯಲು ಆರಂಭಿಸಿದ. ಅಲ್ಲೂ ಒಂದೆರಡು ತಿಂಗಳ ನಂತರ ಅದನ್ನು ಬಿಟ್ಟು ನಟನೆಗೆ ಸೇರಿದ. ಅಲ್ಲೂ ಬೇಸರವಾಗಿ ಚಿತ್ರಕಲೆ ಕಲಿಯಲು ಆರಂಭಿಸಿದ. ಇಷ್ಟರಲ್ಲಿ ರಾಮಣ್ಣ ಚಿತ್ರಕಲೆ, ಕರಕುಶಲಕಲೆ ತರಬೇತಿಗಳನ್ನು ಪೂರ್ಣವಾಗಿ ಮುಗಿಸಿ ಶಿಲ್ಪಕಲೆಯಲ್ಲಿ ತರಬೇತಿ ಪಡೆಯತೊಡಗಿದ್ದ. ತರಬೇತಿ ಅವಧಿ ಪೂರ್ಣಗೊಂಡಾಗ ರಾಮಣ್ಣ ಎಲ್ಲದರಲ್ಲೂ ಪರಿಣಿತನಾಗಿದ್ದರೆ, ಶಾಮಣ್ಣ ಯಾವುದರಲ್ಲೂ ಪ್ರಯೋಜನವಿಲ್ಲದವನಾಗಿದ್ದ. ಅವನ ಚಿತ್ತ ಚಂಚಲತೆ ಅವನನ್ನು ಹಾಳು ಮಾಡಿತ್ತು. ರಾಮಣ್ಣನನ್ನು ಕಂಡು ಅಸೂಯೆಪಟ್ಟು ಮನಃಶಾಂತಿ ಹಾಳು ಮಾಡಿಕೊಂಡದ್ದೇ ಅವನಿಗೆ ಬಂದ ಲಾಭ! ಸಾತತ್ಯವಿಲ್ಲದಿದ್ದರೆ ಯಾವುದೂ ಸಿದ್ಧಿಸದು.
     ದೈಹಿಕ ತೊಂದರೆಗಳು, ಮಾನಸಿಕ ಕಾಯಿಲೆಗಳು, ಭಯ, ದುರಭ್ಯಾಸಗಳು ಮುಂತಾದವು ಸಹ ನೆನಪಿನ ಶಕ್ತಿ ಹಾಳಾಗಲು ಕಾರಣವಾಗುತ್ತವೆ. ವೃದ್ಧಾಪ್ಯದಲ್ಲಿ ಮೆದುಳಿನ ನರಗಳು ಶಕ್ತಿ ಕಳೆದುಕೊಳ್ಳುತ್ತವೆ. ಆಗಲೂ ನೆನಪು ಕೈಕೊಡುತ್ತದೆ. ಆದ್ದರಿಂದ ದೈಹಿಕವಾಗಿ, ಮಾನಸಿಕವಾಗಿ ಧೃಢವಾಗಿದ್ದರೆ ನೆನಪಿನ ಶಕ್ತಿಗೆ ಬಲ ಇರುತ್ತದೆ. ನಮ್ಮ ಜೀವನಶೈಲಿ ಒಳ್ಳೆಯದಾಗಿದ್ದರೆ ನಾವು ದೈಹಿಕವಾಗಿ, ಮಾನಸಿಕವಾಗಿ ಧೃಢವಾಗಿರಲು ಸಾಧ್ಯವಿದೆ. ಒಳ್ಳೆಯ ರೀತಿಯಲ್ಲಿ ಬಾಳಿದರೆ ನಮ್ಮ ನೆನಪಿನ ಶಕ್ತಿ ಅಬಾಧಿತವಾಗಿರುತ್ತದೆ. ಒಳ್ಳೆಯ ರೀತಿಯಲ್ಲಿ ಬಾಳಿದರೆ ಇತರರ ನೆನಪಿನಲ್ಲೂ ಉಳಿಯುತ್ತೇವೆ!
     ಕೆಲವು ಸಂಗತಿಗಳನ್ನು ಮರೆಯುವುದೂ ಅಗತ್ಯವಿರುತ್ತದೆ. ಹಲವು ಕಹಿ ನೆನಪುಗಳು, ಘಟನೆಗಳು ನಮ್ಮ ನೆಮ್ಮದಿಯನ್ನು ಹಾಳುಗೆಡವುತ್ತವೆ. ಅಂತಹವುಗಳನ್ನು ಮರೆಯಲು ಅಥವ ನೆನಪಿನ ಬುತ್ತಿಯಿಂದ ಅಳಿಸಲು ನಮ್ಮ ಮನಸ್ಸನ್ನು ಟ್ಯೂನ್ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಮೆದುಳು ಅಂತಹ ಕೆಲಸವನ್ನೂ ಆಗಾಗ ಸಹಜವೆಂಬಂತೆ ಮಾಡುತ್ತಿರುತ್ತದೆ. ನಮ್ಮ ಸನಾತನ ಧರ್ಮ ಪುನರ್ಜನ್ಮವನ್ನು ಪ್ರತಿಪಾದಿಸುತ್ತದೆ. ಒಂದು ವೇಳೆ ಹಿಂದಿನ ಜನ್ಮದ ನೆನಪುಗಳು ಮುಂದಿನ ಜನ್ಮದಲ್ಲೂ ನೆನಪಿನಲ್ಲಿ ಉಳಿಯುತ್ತಿದ್ದರೆ ವ್ಯವಸ್ಥೆಯಲ್ಲಿ ಏರುಪೇರು ಆಗುವ ಸಂಭವವಿರುತ್ತದೆ. ಹಾಗಾಗಿ ಅಂತಹ ನೆನಪು ಉಳಿಯದಿದ್ದರೇ ಒಳಿತು.
     ಜಗತ್ತಿನ ಇತಿಹಾಸ ಅನ್ನುವುದು ನೆನಪಿನ ದಾಖಲೆಯೇ ಹೊರತು ಮತ್ತೇನಲ್ಲ! ಆಯಾ ಕಾಲದ ಇತಿಹಾಸಕಾರರು, ಕವಿಗಳು, ಲೇಖಕರು ತಮ್ಮ ಕಾಲದ ಸಂಗತಿಗಳನ್ನು ತಮ್ಮ ಕೃತಿಗಳಲ್ಲಿ ದಾಖಲು ಮಾಡಿರುವುದನ್ನು ಆಧರಿಸಿ ಇತಿಹಾಸವನ್ನು ಅರಿಯಬಹುದಾಗಿದೆ. ಇತಿಹಾಸ ಅನ್ನುವುದು ಹಿಂದೆ ಹೀಗಿತ್ತು ಎಂದು ತೋರಿಸಿ ಹೇಗಿದ್ದರೆ ಚೆನ್ನಾಗಿರುತ್ತಿತ್ತು ಎಂಬುದರ ಅರಿವು ಮೂಡಿಸುವ ದಾಖಲೆ. ಇತಿಹಾಸ ಕಲಿಸುವ ಪಾಠಗಳನ್ನು 'ಮರೆತು' ಮತ್ತೆ ಅದೇ ತಪ್ಪುಗಳನ್ನು ಮಾಡಿ ಇತಿಹಾಸ ಪುನರಾವರ್ತಿಸುವಂತೆ ಮಾಡುತ್ತಿರುವುದು 'ಜನರ ನೆನಪು ಕ್ಷಣಿಕ' ಎಂಬುದರ ದ್ಯೋತಕ. ಕೆಲವರು ರಾಜಕಾರಣಿಗಳು ನೂರೆಂಟು ಅಕ್ರಮಗಳು, ಅನ್ಯಾಯಗಳನ್ನು ಮಾಡಿದವರು, ಮಾಡುವವರು ಎಂದು ತಿಳಿದಿದ್ದೂ ಅವರುಗಳನ್ನು ಚುನಾವಣೆಗಳಲ್ಲಿ ಮತ್ತೆ ಮತ್ತೆ ಗೆಲ್ಲಿಸುವುದಕ್ಕೆ ಕಾರಣ ಅವರ ತಪ್ಪುಗಳನ್ನು ನಾನಾ ಕಾರಣಗಳಿಗಾಗಿ 'ಮರೆಯುವುದೂ' ಕಾರಣವಾಗಿದೆ. ಇರಲಿ ಬಿಡಿ, ನೆನಪು ಮತ್ತು ಮರೆವು ಒಂದೇ ನಾಣ್ಯದ ಎರಡು ಮುಖಗಳು! ಜ್ಞಾನವಿರಲಿ, ಜ್ಞಾನಕ್ಕೆ ಮುಕುಟವಾದ ಸುವಾಕ್ಕುವಿರಲಿ, ಸುವಾಕ್ಕುವಾಡುವ ಮನಸ್ಸಿರಲಿ, ಮನಸ್ಸು ನಿಯಂತ್ರಿಸುವ ಸುಸಂಕಲ್ಪವಿರಲಿ ಮತ್ತು ಈ ಸುಸಂಕಲ್ಪವನ್ನು ಮರೆಯದಿರುವ ನೆನಪು ನಮ್ಮದಿರಲಿ. ಹೀಗಾದರೆ ಸಾಧನೆಯ ಐದು ಮೆಟ್ಟಲುಗಳನ್ನು ಏರಿದವರು ನಾವಾಗುತ್ತೇವೆ.
-ಕ.ವೆಂ.ನಾಗರಾಜ್.
**************
ದಿನಾಂಕ  23-09-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಸೆಪ್ಟೆಂಬರ್ 29, 2015

ಸಾಧನಾ ಸೋಪಾನ - 4: ಇಚ್ಛಾಶಕ್ತಿಯಿರದ ಸೃಷ್ಟಿಯಿಲ್ಲ!


     ಮನಸ್ಸು ಅನ್ನುವುದು ಜ್ಞಾನ ಮತ್ತು ಮಾತಿನ ಕ್ರಿಯೆಗಳಿಗೆ ಮೇಲಿನದೆಂದು ತಿಳಿದೆವು. ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆಯೂ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನು ಹಿಡಿದಿಡಬಲ್ಲುದಾಗಿದೆ. ಅದೇ ಇಚ್ಛಾಶಕ್ತಿ! ಸಂಸ್ಕೃತದಲ್ಲಿ ಇದನ್ನು 'ಸಂಕಲ್ಪ' ಎನ್ನುತ್ತಾರೆ. ಈ ಇಚ್ಛಾಶಕ್ತಿ ಅನುಸರಿಸಿ ಮನಸ್ಸು ಕೆಲಸ ಮಾಡುತ್ತದೆ.
     ಪ್ರತಿಯೊಂದು ಸಂಗತಿ/ವಿಷಯದ ಹಿಂದೆ ಒಂದು ನಿರ್ದಿಷ್ಟ ಇಚ್ಛಾಶಕ್ತಿ ಇರುತ್ತದೆ. ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಭೂಮಿ, ನೀರುಗಳಿಗೂ ತಮ್ಮದೇ ಆದ ಇಚ್ಛಾಶಕ್ತಿ ಇರುತ್ತದೆ. ಅವುಗಳ ಗುಣ, ಸ್ವಭಾವಗಳ ಹಿಂದೆ ಅವುಗಳದೇ ಆದ ಇಚ್ಛಾಶಕ್ತಿ ಅಡಗಿರುತ್ತದೆ. ಅದು ಅವುಗಳ ಗುಣ, ಸ್ವಭಾವ, ಅಸ್ತಿತ್ವಗಳನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ಹಾಗೆ ಇರದಿದ್ದರೆ ಒಂದು ಇನ್ನೊಂದರ ಗುಣಗಳನ್ನು ಅರಗಿಸಿಕೊಂಡು ಎಲ್ಲವೂ ಒಂದೇ ಆಗಿಬಿಡುತ್ತಿದ್ದವು. ಈ ವಿಶ್ವದಲ್ಲಿ ಇಚ್ಛಾಶಕ್ತಿಯಿಲ್ಲದ ಯಾವ ಒಂದು ಸೃಷ್ಟಿಯೂ ಇಲ್ಲ, ಅಣುವೂ ಇಲ್ಲ. ಇದು ವಿಶ್ವಶಕ್ತಿ! ಜೀವಿಗಳೂ ಸಹ ಇಚ್ಛಾಶಕ್ತಿಯಿಂದಲೇ ಅಸ್ತಿತ್ವ ಕಂಡುಕೊಂಡಿವೆ. ನಮ್ಮ ದೇಹರಚನೆ, ಉಸಿರಾಟ, ಹೃದಯದ ಬಡಿತ, ರಕ್ತಪರಿಚಲನೆ ಮುಂತಾದುವುಗಳನ್ನೂ ನಿರ್ದಿಷ್ಟ ಇಚ್ಛಾಶಕ್ತಿ ನಿಯಂತ್ರಿಸುತ್ತಿದೆ.
     ಇಂತಹ ಪ್ರಬಲ ಇಚ್ಛಾಶಕ್ತಿಯಿಂದ ಮನಸ್ಸನ್ನು ನಿಯಂತ್ರಿಸಬಹುದಾಗಿದೆ. ಎಲ್ಲರಿಗೂ ಇಚ್ಛಾಶಕ್ತಿ ಇರುತ್ತದೆ. ಅದನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ ಎಂಬುದೇ ಮುಖ್ಯ. ಉತ್ತರಪ್ರದೇಶದ ಅಂಬೇಡ್ಕರ್ ನಗರದ ಅರುಣಿಮಾ ಸಿನ್ಹಾ ಪ್ರಬಲ ಇಚ್ಛಾಶಕ್ತಿಗೆ ಇತ್ತೀಚಿನ ಮಾದರಿಯಾಗಿದ್ದಾಳೆ. ಸಿ.ಐ.ಎಸ್.ಎಫ್ ಪರೀಕ್ಷೆಗೆ ಹೋಗುವ ಸಲುವಾಗಿ ಲಕ್ನೌನಿಂದ ದೆಹಲಿಗೆ ಹೋಗುವ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿಗೆ 11.4.2011ರಲ್ಲಿ ಹತ್ತಿ ಕುಳಿತಾಗ ಆಕೆಯ ವಯಸ್ಸು 23 ವರ್ಷಗಳು. ಮಾರ್ಗಮಧ್ಯದಲ್ಲಿ ಕಳ್ಳರು ಆಕೆಯ ಚೀಲ ಮತ್ತು ಸರವನ್ನು ಕಿತ್ತುಕೊಳ್ಳಲು ಬಂದಾಗ ಪ್ರತಿಭಟಿಸಿದ್ದ ಅವಳನ್ನು ಚಲಿಸುತ್ತಿದ್ದ ರೈಲಿನಿಂದ ಅವರು ಹೊರಗೆ ಎಸೆದುಬಿಟ್ಟಿದ್ದರು. ಅದೇ ಸಮಯಕ್ಕೆ ಎದುರಿನಿಂದ ಬರುತ್ತಿದ್ದ ರೈಲಿಗೆ ಸಿಕ್ಕಿ ಅವಳ ಕಾಲು ಜರ್ಜರಿತವಾಗಿತ್ತು. ಪ್ರಜ್ಞೆಯಿಲ್ಲದೆ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವಳನ್ನು ಆ ಸ್ಥಿತಿಯಲ್ಲಿ ಕಂಡಿದ್ದವರಿಗೆ ಅವಳು ಬದುಕುವ ಬಗ್ಗೆ ಸಂದೇಹವಿತ್ತು. ಜೀವ ಉಳಿಸಲು ಆಸ್ಪತ್ರೆಯಲ್ಲಿ ಆಕೆಯ ಕಾಲನ್ನು ಮೊಳಕಾಲಿನಿಂದ ಕೆಳಕ್ಕೆ ಕತ್ತರಿಸಿದ್ದರು. ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಆಕೆಗೆ ಇದರಿಂದ ಆಘಾತವಾಗಿತ್ತು. ಆಕೆಗೆ ಕೇಂದ್ರ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕ ನೆರವು ದೊರೆತು. ಖಾಸಗಿ ಕಂಪೆನಿಯೊಂದು ಆಕೆಗೆ ಉಚಿತವಾಗಿ ಕೃತಕ ಕಾಲು ಅಳವಡಿಸಲು ನೆರವಾಯಿತು. ಅಲಹಾಬಾದ್ ಉಚ್ಛನ್ಯಾಯಾಲಯ ರೈಲ್ವೆಯವರು ಆಕೆಗೆ ರೂ.5.00 ಲಕ್ಷ ಪರಿಹಾರಧನ ನೀಡಬೇಕೆಂದು ಆದೇಶಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಕೆ ಎವರೆಸ್ಟ್ ಶಿಖರವನ್ನು ಏರುವ ಕನಸು ಕಂಡದ್ದು. ಕ್ಯಾನ್ಸರ್ ಗೆದ್ದು ಬಂದಿದ್ದ ಕ್ರಿಕೆಟಿಗ ಯುವರಾಜಸಿಂಗನಿಂದ ಆಕೆ 'ಏನನ್ನಾದರೂ ಸಾಧಿಸಬೇಕೆಂದು' ಪ್ರೇರಿತಳಾಗಿದ್ದಳು. ಮೌಂಟನಿಯರಿಂಗ್ ಕೋರ್ಸಿಗೆ ಸೇರಿದ ಅಕೆ ಅದರ ಪ್ರಾಥಮಿಕ ವಿಷಯಗಳಲ್ಲಿ ಅಗ್ರಗಣ್ಯತೆ ಗಳಿಸಿದಳು. ವಡೋದರದ ಸ್ವಾಮಿ ರಾಮಕೃಷ್ಣ ಮಿಶನ್ನಿನ ಸಹಾಯದಿಂದ ಕೃತಕ ಕಾಲಿನಿಂದ ಎವರೆಸ್ಟ್ ಏರುವ ಆಸೆಗೆ ಬೆಂಬಲ ಸಿಕ್ಕಿತು. ಎವರೆಸ್ಟ್ ಏರಿದ ಪ್ರಥಮ ಮಹಿಳೆ ಬಚೇಂದ್ರಿಪಾಲಳಿಂದ ಅಗತ್ಯದ ತರಬೇತಿ ಪಡೆದಳು. ಪೂರ್ವಭಾವಿಯಾಗಿ 6150 ಮೀಟರ್ ಎತ್ತರದ ಐಲೆಂಡ್ ಶಿಖರವನ್ನು 2012ರಲ್ಲಿ ಯಶಸ್ವಿಯಾಗಿ ಏರಿದ್ದಳು. 1.4.2013ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ 51 ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು 21.5.2013ರಂದು ತಲುಪಿಯೇಬಿಟ್ಟಳು! ಶಿಖರವೇರಿದ ಆಕೆ ಒಂದು ಸಂದೇಶವನ್ನು ಬರೆದು ಬಟ್ಟೆಯಲ್ಲಿ ಸುತ್ತಿ ಹಿಮದಲ್ಲಿ ಹೂತಿಟ್ಟಳು. ಆಕೆಯೇ ಹೇಳಿದಂತೆ ಅದು, "ಶಂಕರ ಭಗವಾನ್ ಮತ್ತು ಜೀವನದುದ್ದಕ್ಕೂ ತನಗೆ ಚೈತನ್ಯದಾಯೆನಿಸಿದ್ದ ಸ್ವಾಮಿ ವಿವೇಕಾನಂದರಿಗೆ ಸಲ್ಲಿಸಿದ ಕೃತಜ್ಞತೆಯಾಗಿತ್ತು". ಕೈಕಾಲುಗಳು ಗಟ್ಟಿಯಾಗಿರುವವರಿಗೇ ಕಷ್ಟವೆನಿಸುವ ಆ ಕೆಲಸ ಆಕೆಗೆ ಸಾಧ್ಯವಾಗಿಸಿದ್ದು ಆಕೆಯ ಇಚ್ಛಾಶಕ್ತಿ!
     ನಮ್ಮ ಕನಸುಗಳನ್ನು ಜೀವಂತವಾಗಿರಿಸಿಕೊಳ್ಳಬೇಕು. ಅದಕ್ಕಾಗಿ ನಮ್ಮ ಬಗ್ಗೆಯೇ ನಮಗೆ ನಂಬಿಕೆ ಮತ್ತು ವಿಶ್ವಾಸಗಳಿರಬೇಕು. ದೂರದೃಷ್ಟಿ, ಕಠಿಣ ಶ್ರಮ, ಧೃಢ ನಿರ್ಧಾರ ಮತ್ತು ಅದಕ್ಕೋಸ್ಕರ ಅರ್ಪಣಾ ಮನೋಭಾವಗಳಿದ್ದರೆ ಎಂತಹುದನ್ನಾದರೂ ಸಾಧಿಸಬಹುದು ಎಂಬುದಕ್ಕೆ ನೂರಾರು ನಿದರ್ಶನಗಳು ಸಿಗುತ್ತವೆ. ಹಿಂದೆ ಆಗಿಹೋದ ಹಲವಾರು ಸಾಧು-ಸಂತರು, ಸಾಧಕರುಗಳು, ವಿವಿಧ ಕ್ಷೇತ್ರಗಳಲ್ಲಿ ಉತ್ತುಂಗ ಸಾಧನೆಗಳನ್ನು ಮಾಡಿದವರು, ಮಾಡುತ್ತಿರುವವರನ್ನು ಕಾಣುತ್ತಿರುತ್ತೇವೆ. ದೌರ್ಭಾಗ್ಯವೆಂದರೆ ಅಂತಹ ಸಾಧಕರುಗಳನ್ನು ದೇವರುಗಳಂತೆ ಕಂಡು ಗುಡಿ ಕಟ್ಟಿ ಪೂಜಿಸಿ ಧನ್ಯರಾದೆವೆಂದುಕೊಂಡುಬಿಡುತ್ತೇವೆ. ಅವರುಗಳಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರುಗಳು ತೋರಿದ ಹಾದಿಯಲ್ಲಿ ನಡೆದು ನಾವುಗಳೂ ಸಹ ಅಂತಹ ಸಾಧನಾ ಪರಂಪರೆ ಮುಂದುವರೆಸುವುದು. ಪ್ರತಿಯೊಂದು ಸಾಧನೆಯೂ ಸುಮ್ಮನೆ ಆದುದಲ್ಲ. ಪ್ರಯತ್ನಿಸುವ ನಿರ್ಧಾರದಿಂದ ಆ ಸಾಧನೆ ಆರಂಭವಾಗುತ್ತದೆ ಅಷ್ಟೆ. ಸಾವಿರ ಮೈಲುಗಳ ಪ್ರಯಾಣ ಆರಂಭವಾಗುವುದೂ ನಾವಿಡುವ ಮೊದಲ ಸಣ್ಣ ಹೆಜ್ಜೆಯಿಂದಲೇ! ಆ ಹೆಜ್ಜೆಯಿಡಲು ಬೇಕಿರುವುದು ಇಚ್ಛಾಶಕ್ತಿ! ವಿವೇಕಾನಂದರ ವಾಣಿಯಿದು: "ಧೃಢನಿರ್ಧಾರದ ಒಬ್ಬ ವ್ಯಕ್ತಿ ಬದಲಾವಣೆ ತರಬಲ್ಲ; ಧೃಢ ನಿರ್ಧಾರ ಹೊಂದಿದ ಸಣ್ಣ ಜನರ ಗುಂಪು ಇತಿಹಾಸದ ಗತಿಯನ್ನೇ ಬದಲಾಯಿಸಬಲ್ಲದು!"
     ಇಚ್ಛಾಶಕ್ತಿಯನ್ನು ಹೊಸದಾಗಿ ಗಳಿಸಿಕೊಳ್ಳಬೇಕಿಲ್ಲ, ನಮ್ಮೊಳಗೆಯೇ ಇರುವ ಅದನ್ನು ಉಪಯೋಗಿಸಿಕೊಳ್ಳಬೇಕಷ್ಟೆ. ಕುಡಿಯುವುದು ಕೆಟ್ಟದ್ದು, ಸಿಗರೇಟು ಸೇದುವುದರಿಂದ ನಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯವೂ ಹಾಳಾಗುತ್ತದೆ ಎಂಬುದು ಕುಡಿಯುವವರಿಗೂ ಗೊತ್ತು, ಧೂಮಪಾನಿಗಳಿಗೂ ಗೊತ್ತು. ಆದರೂ ಅವರು ಕುಡಿಯುತ್ತಾರೆ, ಸಿಗರೇಟು ಸೇದುತ್ತಾರೆ. ಏಕೆಂದರೆ ಇಚ್ಛಾಶಕ್ತಿಯನ್ನು ಉಪಯೋಗಿಸಿಕೊಳ್ಳಲು ಅವರ ಮನಸ್ಸು ಬಿಡುವುದಿಲ್ಲ. ಮಧುಮೇಹದಿಂದ ನರಳುತ್ತಿರುವವನ ಮನಸ್ಸು 'ಇದೊಂದು ಸಲ ಹೋಳಿಗೆ ತಿಂದುಬಿಡು, ಒಂದು ಮಾತ್ರೆ ಜಾಸ್ತಿ ತೆಗೆದುಕೊಂಡರಾಯಿತು' ಎಂದು ಪುಸಲಾಯಿಸುತ್ತದೆ. ಚಂಚಲ ಮನಸ್ಸಿಗೆ ಕಡಿವಾಣ ಹಾಕಬೇಕೆಂದರೆ ನಮ್ಮ ಅಂತರಂಗದ ಧ್ವನಿಗೆ ಕಿವಿಗೊಡಲೇಬೇಕು.
     ಮನಸ್ಸಿನ ನಿಯಂತ್ರಣಕ್ಕೆ ಮತ್ತು ಇಚ್ಛಾಶಕ್ತಿಯ ಉಪಯೋಗಕ್ಕೆ ಕೆಲವು ಆಂತರಿಕ ಮತ್ತು ಬಾಹ್ಯ ಆಚರಣೆಗಳು ನೆರವಾಗುತ್ತವೆ. ಯಾವುದಾದರೂ ಶುಭ ಕಾರ್ಯ ಮಾಡುವ ಮುನ್ನ ಸಂಕಲ್ಪ ಮಾಡುವ, ಕಂಕಣ ಕಟ್ಟಿಕೊಳ್ಳುವ ಸಂಪ್ರದಾಯವಿದೆ. ನಾವು ಮಾಡುವ ಈ ಕೆಲಸದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ನಿಶ್ಚಯದಿಂದ ಆ ಕೆಲಸ ಮುಗಿಯುವವರೆಗೂ ಶ್ರದ್ಧೆಯಿಂದ ಮಾಡುವವರು ಇರುತ್ತಾರೆ. ಅಂತಹ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ, ಸಂತೋಷವೂ ಸಿಗುತ್ತದೆ. ಸ್ವಾಮಿ ಅಯ್ಯಪ್ಪನ ದರ್ಶನ ಮತ್ತು ಪೂಜೆಯ ಸಲುವಾಗಿ ಮಾಲೆ ಧರಿಸುವವರ ನಡವಳಿಕೆಗಳನ್ನು ನಾವು ಕಂಡಿರುತ್ತೇವೆ ಅಲ್ಲವೇ? ಅವರು ವ್ರತದಲ್ಲಿರುವ ಅವಧಿಯಲ್ಲಿ ಅವರು ಎಲ್ಲರನ್ನೂ 'ಸ್ವಾಮಿ' ಎಂದೇ ಸಂಬೋಧಿಸುತ್ತಾರೆ, ಸ್ತ್ರೀ ಸಂಗ ಮಾಡುವುದಿಲ್ಲ, ಯಾರ ಮೇಲೂ ಸಿಟ್ಟಿಗೇಳುವುದಿಲ್ಲ, ಕುಡಿಯುವ, ಮಾಂಸ ತಿನ್ನುವ ಅಭ್ಯಾಸವಿರುವವರು ಆ ಅವಧಿಯಲ್ಲಿ ಅವನ್ನೆಲ್ಲಾ ವರ್ಜಿಸುತ್ತಾರೆ. ಇದನ್ನೆಲ್ಲಾ ಅವರುಗಳು ಮಾಡುವುದು ಅವರ 'ಸಂಕಲ್ಪ'ದ/ಇಚ್ಛಾಶಕ್ತಿಯ ಕಾರಣದಿಂದ! ಇಂತಹ ಒಳ್ಳೆಯ ನಿರ್ಧಾರಗಳನ್ನು ಮುಂದುವರೆಸಲು ಅವಕಾಶವಿದೆ ಅಲ್ಲವೇ? ಭಜನೆ, ಪೂಜೆ, ಪುನಸ್ಕಾರ, ಇತ್ಯಾದಿಗಳು ಮನಸ್ಸನ್ನು ನಿಯಂತ್ರಿಸಲು, ಶಾಂತಗೊಳಿಸಲು ಪೂರಕ ಸಹಕಾರ ಕೊಡುತ್ತವೆ. ಸಜ್ಜನರ ಸಹವಾಸ, ಗುರು-ಹಿರಿಯರ ಮಾರ್ಗದರ್ಶನಗಳು, ಸಂಸ್ಕಾರಯುತ ನಡವಳಿಕೆಗಳು, ಸುಯೋಗ್ಯ ಶಿಕ್ಷಣ, ಉತ್ತಮ ವೃತ್ತಿ, ಪ್ರವೃತ್ತಿಗಳು ಸಹ ಹುಚ್ಚು ಕುದುರೆಯಂತೆ ಓಡುವ ಮನಸ್ಸಿಗೆ ಕಡಿವಾಣ ಹಾಕಲು ಸಹಕಾರಿ. ನಿಯಮಿತವಾದ ಒಳ್ಳೆಯ ಅಭ್ಯಾಸಗಳು- ಪ್ರತಿನಿತ್ಯ ವಾಕಿಂಗ್ ಮಾಡುವುದು, ವ್ಯಾಯಾಮ, ಯೋಗಾಭ್ಯಾಸ, ಇತ್ಯಾದಿಗಳಲ್ಲಿ ತೊಡಗುವುದು, ಉತ್ತಮ ಸಾಹಿತ್ಯವನ್ನು ಓದಲು ಸಮಯ ಮಾಡಿಕೊಳ್ಳುವುದು, ಆರೋಗ್ಯಕರವಾದ ಆಹಾರ ಸೇವನೆ, ಇತ್ಯಾದಿಗಳೂ ಸಹ ಮನಸ್ಸನ್ನು ಹಿಡಿತದಲ್ಲಿಡಲು ಉಪಯೋಗಕಾರಿ. ಹಿಡಿತದಲ್ಲಿರುವ ಮನಸ್ಸಿಗೆ ಇಚ್ಛಾಶಕ್ತಿಯ ಆದೇಶವನ್ನು ಪಾಲಿಸುವ ಮನಸ್ಸು ಬರುತ್ತದೆ.
     "ಯಶಸ್ಸು ಮುಕ್ತಾಯವಲ್ಲ, ಸೋಲು ಹೀನಾಯವಲ್ಲ; ಆದರೆ ಸತತ ಪ್ರಯತ್ನ ಮಾಡುತ್ತಿರುವುದು ಮಾತ್ರ ಲೆಕ್ಕಕ್ಕೆ ಬರುತ್ತದೆ! ಗೆಲ್ಲಬೇಕೆಂಬ ಇಚ್ಛಾಶಕ್ತಿ ಪ್ರಬಲವಾಗಿದ್ದರೆ ಸೋಲು ಅದನ್ನು ಹಿಮ್ಮೆಟ್ಟಿಸಲಾರದು. ಅಸಾಧ್ಯ ಮತ್ತು ಸಾಧ್ಯಗಳ ನಡುವಣ ವ್ಯತ್ಯಾಸ ಇಚ್ಛಾಶಕ್ತಿಯಲ್ಲಿದೆ. ಗೆಲ್ಲುವ ಧೃಢನಿರ್ಧಾರ ಗೆಲ್ಲುವುದಕ್ಕಿಂತಲೂ ದೊಡ್ಡದು. ಸೋಲಿಗೆ ನಿಜವಾದ ಕಾರಣವೆಂದರೆ ಇಚ್ಛಾಶಕ್ತಿಯ ಕೊರತೆಯಷ್ಟೆ."
     ಇಚ್ಛಾಶಕ್ತಿರುವ ವ್ಯಕ್ತಿ ಹೇಗೆ ಯೋಚಿಸುತ್ತಾನೆ, ಗೊತ್ತೇ? ಆರ್ಕಿಮಿಡಿಸ್ ಹೇಳುತ್ತಿದ್ದ ಮಾತು ಇದು: 'ನನಗೆ ಒಂದು ದೊಡ್ಡ ಮೀಟುಕೋಲು ಮತ್ತು ಅದನ್ನು ಸನ್ನೆಯಂತೆ ಬಳಸಲು ಒಂದು ಕಲ್ಲು ಹಾಗೂ ನಿಲ್ಲಲು ಸರಿಯಾದ ಸ್ಥಳ ಸಿಕ್ಕರೆ ಪ್ರಪಂಚವನ್ನೇ ಮೀಟುವೆ." ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಗೆಲ್ಲುವ ಪದಕಗಳು ಚಿನ್ನದ್ದಿರಬಹುದು, ಆದರೆ ಅವುಗಳು ನಿಜವಾಗಿಯೂ ಚಿನ್ನದ್ದಲ್ಲ, ಸ್ಪರ್ಧಿಗಳ ಬೆವರು, ಧೃಢನಿರ್ಧಾರ ಮತ್ತು ಅದಮ್ಯ ಶಕ್ತಿಗಳಿಂದ ಕೂಡಿದ್ದಾಗಿರುತ್ತವೆ. ರಾಹುಲ್ ದ್ರಾವಿಡರ ಈ ಮಾತು ಮನನೀಯ: "ನಾವು ಕೌಶಲ್ಯವನ್ನು ತಪ್ಪಾಗಿ ಅರ್ಥೈಸುತ್ತೇವೆ. ನಾನೂ ಸಹ ಆ ತಪ್ಪು ಮಾಡಿದ್ದೇನೆ. ಕ್ರಿಕೆಟ್ ಚೆಂಡನ್ನು ಹೊಡೆಯುವ ರೀತಿ, ಹೊಡೆಯುವ ಆ ಸರಿಯಾದ ಸಮಯಗಳನ್ನು ಕೌಶಲ್ಯವಾಗಿ ಕಾಣುತ್ತೇವೆ. ಆದರೆ ಅದರ ಹಿಂದಿನ ಧೃಢನಿರ್ಧಾರ, ಧೈರ್ಯ, ಶಿಸ್ತು, ಮನೋಭಾವ, ಇತ್ಯಾದಿಗಳೂ ಕೌಶಲ್ಯಗಳಾಗಿವೆ." ದ್ರಾವಿಡರ ಆ ಇಚ್ಛಾಶಕ್ತಿಯೇ ಅವರನ್ನು ಬೌಲರುಗಳು ಬೀಳಿಸಲಾಗದ 'ಗೋಡೆ'ಯಾಗಿ ಅವರನ್ನು ರೂಪಿಸಿದ್ದು, ಭಾರತವನ್ನು ಅನೇಕ ಸಂದರ್ಭಗಳಲ್ಲಿ ಸಂಕಷ್ಟದ ಸ್ಥಿತಿಯಿಂದ ಪಾರು ಮಾಡಿದ್ದು! ನಾವೂ ಸಹ ನಮ್ಮೊಳಗೇ ಇರುವ ಇಚ್ಛಾಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಿಕೊಳ್ಳಬಹುದಲ್ಲವೇ?
-ಕ.ವೆಂ.ನಾಗರಾಜ್.
***************
ದಿನಾಂಕ 16-09-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: