'ನೆಲ'ಕ್ಕಿಂತ ಜಲ ಮೇಲಿನದಾಗಿದೆ. ಘನವಾದ ಯಾವುದೇ ವಸ್ತುವು ಮೂಲತಃ ದ್ರವ ಸ್ಥಿತಿಯಲ್ಲಿದ್ದುದಾಗಿದ್ದು, ಭೂಮಿ ಸಹ ದ್ರವಮೂಲದಿಂದ ಉಗಮವಾದದ್ದಾಗಿದೆ. ಕೇವಲ ಭೂಮಿಯಲ್ಲ, ವಿಶ್ವದ ಯಾವುದೇ ಘನರೂಪದ ಕಾಯವಾಗಲೀ, ವಸ್ತುವಾಗಲೀ ಮೊದಲು ದ್ರವರೂಪದಲ್ಲಿ ಇದ್ದುದಾಗಿದೆ. ಈ ದ್ರವರೂಪದಲ್ಲಿದ್ದ ವಸ್ತು ಅದಕ್ಕೂ ಮೊದಲು ಅನಿಲರೂಪದಲ್ಲಿದ್ದಿತ್ತು. ಹೀಗಾಗಿ 'ಜಲ' ಎಂಬ ಪದದಲ್ಲಿ ಸಂಬೋಧಿಸಬಹುದಾದ ಈ ಸಂಗತಿ ಭೂಮಿಗಿಂತ ಮೇಲಿನದಾಗಿದೆ. ಸೃಷ್ಟಿಯ ರಚನೆಗೆ ಮೂಲ ದ್ರವರೂಪದ ವಸ್ತುವೆಂದು ಹೇಳುತ್ತಾರೆ.
ಜಲತತ್ತ್ವವಿಲ್ಲದಿರುತ್ತಿದ್ದರೆ ಜೀವನ ದುಸ್ತರವಾಗುತ್ತಿತ್ತು. ಮಳೆ ಇರದಿದ್ದಿದ್ದರೆ ಬೆಳೆ ಇರುತ್ತಿರಲಿಲ್ಲ. ನೆಲ ಒಣಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿತ್ತು. ಮಳೆ ಇಲ್ಲದಿದ್ದರೆ ನೆಲ ಆಹಾರ ಉತ್ಪಾದಿಸುವ ಶಕ್ತಿ ಕಳೆದುಕೊಳ್ಳುತ್ತಿತ್ತು. ನೆಲದ ಘನತತ್ತ್ವ ಮತ್ತು ಜಲತತ್ತ್ವಗಳ ಸಂಯೋಗ 'ಅನ್ನತತ್ತ್ವ'ದ ಉಗಮಕ್ಕೆ ಅಗತ್ಯ. ಮಳೆ ಬರದಿದ್ದರೆ ಕ್ಷಾಮ ಆವರಿಸಿ ಎಲ್ಲೆಲ್ಲೂ ಆಹಾರದ ಕೊರತೆಯಿಂದ ಜೀವಜಗತ್ತು ತಲ್ಲಣಿಸುತ್ತದೆ. ಮಳೆ ಬಂದರೆ ಪಶು, ಪಕ್ಷಿಗಳು ಸೇರಿದಂತೆ ಎಲ್ಲಾ ಜೀವಗಳಿಗೂ ತಂಪಾಗುತ್ತದೆ, ಪ್ರಕೃತಿ ಸಂತಸದಿಂದ ನಳನಳಿಸುತ್ತದೆ. 'ಅನ್ನ'ದ ಕುರಿತ ಲೇಖನದಲ್ಲಿ ಹೇಳಿದ ಎಲ್ಲಾ ಸಂಗತಿಗಳೂ ಜಲಕ್ಕೂ ಅನ್ವಯಿಸುತ್ತದೆ. ಪ್ರಪಂಚದ ನಾಗರಿಕತೆಗಳು ಬೆಳೆದದ್ದು, ಉಳಿದದ್ದು ನದಿ ತಟಗಳಲ್ಲಿಯೇ ಎಂಬುದು ಗಮನಾರ್ಹ. ಎಲ್ಲಿ ಜಲದ ಅಭಾವ ಇರುತ್ತದೋ ಅಲ್ಲಿ ಬದುಕು ದುಸ್ತರವಾಗುತ್ತದೆ.
ಭೂಮಿಯ ಮೇಲ್ಭಾಗದ ಮುಕ್ಕಾಲು ಭಾಗ ನೀರಿನಿಂದ ಕೂಡಿದ್ದು ಕಾಲು ಭಾಗ ಮಾತ್ರ ಭೂಮಿ ಇದೆ. ಹೀಗಿದ್ದರೂ ನೀರಿನ ಅಭಾವ ಅನ್ನುವುದು ಆಶ್ಚರ್ಯ. ಭೂಮಿಯಲ್ಲಿರುವ ನೀರಿನ ಶೇ. 96.5ರಷ್ಟು ಭಾಗ ಸಾಗರಗಳಲ್ಲಿನ ಉಪ್ಪುನೀರಾಗಿದ್ದು ಮಾನವ ಬಳಕೆಗೆ ಬರುವುದಿಲ್ಲ. ಉಳಿದ ಶೇ. 3.5ರಷ್ಟರಲ್ಲಿ ಸಹ ಹೆಚ್ಚಿನ ಭಾಗ ಹೆಪ್ಪುಗಟ್ಟಿದ ನೀರಿನ ರೂಪದಲ್ಲಿ ಅಂದರೆ ಮಂಜುಗಡ್ಡೆಯ ರೂಪದಲ್ಲಿದೆ. ಉಳಿದ ಶೇ. 1 ರಿಂದ 2ರಷ್ಟು ಭಾಗ ಮಾತ್ರ ಮಾನವ ಬಳಕೆಗೆ ಯೋಗ್ಯವಾಗಿ ಲಭ್ಯವಿದೆ. ಮಂಜುಗಡ್ಡೆಯ ರೂಪದಲ್ಲಿರುವ ನೀರೆಲ್ಲಾ ಕರಗಿಸಿದರೆ ಸಮುದ್ರದ ಮಟ್ಟ ಈಗಿನದಕ್ಕಿಂತಲೂ ಸುಮಾರು 3 ಕಿ.ಮೀ. ಎತ್ತರಕ್ಕೆ ಏರುತ್ತದೆ. ಆಗ ಜಲಪ್ರಳಯವೇ ಆಗುತ್ತದೆ. ಒಂದು ದೊಡ್ಡ ಗಾತ್ರದ ಹಿಮದ ಗಡ್ಡೆ ಉರುಳಿ ಸಮುದ್ರಕ್ಕೆ ಜಾರಿದರೂ ದೊಡ್ಡ ಅನಾಹುತವೇ ಆಗುತ್ತದೆ.
ಜನಸಂಖ್ಯೆ ಹೆಚ್ಚಾದಂತೆ ನೀರಿನ ಬಳಕೆ ಸಹ ಹೆಚ್ಚಾಗುತ್ತಿದೆ. ಆದ್ದರಿಂದ ನೀರಿನ ಬಳಕೆಯನ್ನು ಎಚ್ಚರದಿಂದ, ಜಾಣತನದಿಂದ ಮಾಡಬೇಕಿದೆ. ಆದರೆ, ವಾಸ್ತವವಾಗಿ ನಾವು ಮಾಡುತ್ತಿರುವುದೇನು? ಉಪಯೋಗಿಸಬಹುದಾದ ನೀರಿನ ಜಲಮೂಲಗಳಾದ ಕೆರೆ, ಕಟ್ಟೆಗಳನ್ನು ಮುಚ್ಚುತ್ತಿದ್ದೇವೆ, ಅತಿಕ್ರಮಿಸುತ್ತಿದ್ದೇವೆ, ನಾಶಪಡಿಸುತ್ತಿದ್ದೇವೆ. ಕೊಳವೆ ಬಾವಿಗಳನ್ನು ವಿವೇಚನೆಯಿಲ್ಲದೆ ತೋಡುತ್ತಾ ಅಂತರ್ಜಲದ ಮಟ್ಟವನ್ನು ತಗ್ಗಿಸುತ್ತಿದ್ದೇವೆ. ಹೀಗೇ ಆದರೆ ಮುಂದೊಮ್ಮೆ ಪ್ರಕೃತಿಯ ಸಮತೋಲನ ತಪ್ಪಿ ಅನಾಹುತಗಳಾಗುವುದು ಶತಃಸ್ಸಿದ್ಧ. ಮನುಕುಲದ ಉಳಿವಿಗಾಗಿ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು. ನೀರಿನ ಸದ್ಬಳಕೆ ಮಾಡದಿರುವುದು, ವಿವೇಚನೆಯಿಲ್ಲದ ಕ್ರಮಗಳಿಂದಾಗಿ ಕುಡಿಯುವ ನೀರಿಗೂ ಕಷ್ಟವಾಗಿದೆ, ಬೆಳೆ ಬೆಳೆಯಲು ನೀರು ಸಿಗದಾಗಿದೆ. ಕಾವೇರಿ ವಿವಾದ, ಮಹದಾಯಿ ವಿವಾದ, ಕೃಷ್ಣಾ ವಿವಾದ ಮುಂತಾದ ಸಮಸ್ಯೆಗಳಿಂದಾಗಿ ರಾಜ್ಯಗಳ ನಡುವೆ ಜಲಜಗಳಗಳಾಗುತ್ತಿವೆ, ಕೋರ್ಟು-ಕಛೇರಿಗಳಲ್ಲಿ, ಟ್ರಿಬ್ಯೂನಲ್ಲುಗಳಲ್ಲಿ ದಶಕಗಳಿಂದ ವಿವಾದಗಳು ಇತ್ಯರ್ಥ ಕಾಣದಿವೆ. ಮಾತೆತ್ತಿದರೆ, 'ನಮ್ಮನ್ನು ಆ ದೇವರೇ ಕಾಪಾಡಬೇಕು' ಅಂದುಬಿಡುತ್ತೇವೆ. ವಿವೇಚನೆಯಿಲ್ಲದೆ ಮುಂದುವರೆದರೆ ಮುಂದೊಮ್ಮೆ ನಮ್ಮನ್ನು ಯಾರೂ ಕಾಪಾಡಲು ಸಾಧ್ಯವೇ ಇಲ್ಲದಂತಹ ಸ್ಥಿತಿ ಬರಬಹುದು.
ಮಳೆ ನೀರು ಕೊಯ್ಲು, ನೀರಿನ ಅಪವ್ಯಯದ ತಡೆಗಟ್ಟುವಿಕೆ, ಜಲಮೂಲಗಳು ಕಲುಷಿತಗೊಳ್ಳುವುದನ್ನು ತಪ್ಪಿಸುವುದು, ಕೆರೆ-ಕಟ್ಟೆಗಳ ಪುನರುಜ್ಜೀವನ, ಒಡ್ಡುಗಳ ನಿರ್ಮಾಣ ಮುಂತಾದ ಕೆಲಸಗಳಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸ ಸರ್ಕಾರಗಳು ಮಾಡಬೇಕು, ಮಾಡುವಂತೆ ಜನರೂ ಮಾಡಬೇಕು. ನೀರಿನ ಮಹತ್ವ ಅರಿತು ಜಲಸಂರಕ್ಷಣಾಕಾರ್ಯಗಳನ್ನು ಕೈಗೊಂಡು ನಾಗರಿಕಪ್ರಜ್ಞೆ ಮೆರೆಯುವ ತುರ್ತು ಅಗತ್ಯ ಇಂದಿದೆ.
ನೀರನ್ನು ಉಳಿಸಿದರೆ ಭವಿಷ್ಯವನ್ನು ಉಳಿಸಿದಂತೆ!
ನೀರನ್ನು ರಕ್ಷಿಸಿದರೆ, ನೀರು ನಮ್ಮನ್ನು ರಕ್ಷಿಸುತ್ತದೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ