ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಫೆಬ್ರವರಿ 17, 2018

ಅಡಗೂರಿನಲ್ಲಿ ಅರ್ಥಪೂರ್ಣ ಶಿವರಾತ್ರಿಯ ಜಾಗರಣೆ


     ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ ದಿನವೇ ಶಿವರಾತ್ರಿ. ಶಿವರಾತ್ರಿ ವಿಶೇಷವಾದ ಜಾಗರಣೆ ಎಂದರೆ ಕೇವಲ ನಿದ್ರೆ ಮಾಡದಿರುವುದಲ್ಲ, ಜಾಗೃತರಾಗುವುದು, ಎಚ್ಚರಗೊಳ್ಳುವುದು, ಅರಿಯುವುದು ಎಂದೇ ಅರ್ಥ. ನಾವು ಜಾಗೃತರಾಗುವುದಲ್ಲದೆ, ಇತರರನ್ನೂ ಜಾಗೃತಗೊಳಿಸುವ ವಿಶೇಷ ಜಾಗರಣೆಯ ಕಾರ್ಯ 13-02-2018ರ ಶಿವರಾತ್ರಿಯಂದು ನಡೆದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಆಸಕ್ತರ ಅವಗಾಹನೆಗಾಗಿ ನೀಡುತ್ತಿರುವೆ.      ಹಾಸನದಿಂದ ಹಳೇಬೀಡಿಗೆ ಹೋಗುವ ಮಾರ್ಗದಲ್ಲಿ ಸುಮಾರು 15 ಕಿ.ಮೀ. ದೂರದಲ್ಲಿರುವ ಗ್ರಾಮ ಅಡಗೂರು. ಬೇಲೂರು ತಾಲ್ಲೂಕಿಗೆ ಸೇರಿದ ಅಡಗೂರಿನಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಕಾಶಿಪುರ ಎಂಬ ಜನವಸತಿ ಇರದ ಬೇಚರಾಕ್ ಗ್ರಾಮವಿದೆ. ಅಲ್ಲಿ ಒಂದು ಪುರಾತನವಾದ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದುದಲ್ಲದೆ ದೇವಸ್ಥಾನದ ಕಲ್ಲುಗಳನ್ನು ಅವರಿವರು ಸಾಗಿಸಿದ್ದು ಅಳಿದುಳಿದ ಭಾಗ ಮಾತ್ರ ಉಳಿದಿದೆ. ಈ ದೇವಸ್ಥಾನದ ಅಸ್ತಿತ್ವವೇ ಮರೆತು ಹೋದಂತಾಗಿದ್ದು, ಜನವಸತಿ ಇರದ ಗ್ರಾಮವಾಗಿದ್ದು, ಸುತ್ತಮುತ್ತಲೂ ಜಮೀನುಗಳು ಇರುವುದರಿಂದ ಹತ್ತಿರದ ಅಡಗೂರಿನವರಿಗೇ ಗೊತ್ತಿಲ್ಲವೇನೋ ಎಂಬಂತಾಗಿತ್ತು. ಅಲ್ಲಿ ಒಂದು ದೇವಸ್ಥಾನದ ಸಮುಚ್ಛಯವೇ ಇದ್ದುದು ಅವಶೇಷಗಳಿಂದ ತಿಳಿದುಬರುತ್ತದೆ. ಪ್ರವೇಶ ಮಂಟಪ, ಸುತ್ತಲೂ ಆವರಣ, ಒಳಭಾಗದಲ್ಲಿ ಮಂಟಪಗಳು, ಅಶ್ವಲಾಯ, ಗಜಲಾಯಗಳು, ಬಂದುಹೋಗುವವರಿಗೆ ಉಳಿದುಕೊಳ್ಳಬಹುದಾದ ಕೊಠಡಿಗಳು, ಶಿವ ಮತ್ತು ವಿಷ್ಣುವಿನ ದೇವಾಲಯಗಳಿದ್ದುದು ತಿಳಿದುಬರುತ್ತದೆ. ನಿಧಿಯ ಆಸೆಗಾಗಿ ಸುಮಾರು ಮೂರು ಅಡಿ ಎತ್ತರದ ಲಿಂಗವನ್ನು ನೆಲದಿಂದ ಕಿತ್ತು ಹೊರತೆಗೆದಿರುವುದು ಕಾಣುತ್ತದೆ. ಪಕ್ಕದಲ್ಲಿ ಜಯ ವಿಜಯರ ವಿಗ್ರಹವಿರುವ ದ್ವಾರವಿದ್ದು ವಿಷ್ಣುವಿನ ದೇವಸ್ಥಾನವೂ ಅಲ್ಲಿದ್ದುದು ತಿಳಿಯುತ್ತದೆ. ವಿಗ್ರಹ ಕಳುವಾಗಿದೆ ಅಥವ ಬೇರೆಲ್ಲೋ ಸಾಗಿಸಿರುವ ಸಾಧ್ಯತೆಯಿದೆ. ಈ ದೇವಸ್ಥಾನ ಸಮುಚ್ಛಯ ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿದ್ದು ಅಕ್ಕಪಕ್ಕದ ಆವರಣ ಒತ್ತುವರಿ ಆಗಿರುವ ಸಾಧ್ಯತೆಯಿದೆ. ದೇವಸ್ಥಾನ ಸಮುಚ್ಛಯವಿರುವ ಭಾಗವನ್ನು ಪುನರುಜ್ಜೀವನಗೊಳಿಸಿ ಉಳಿಸಿಕೊಳ್ಳಬೇಕಾದ ಅಗತ್ಯತೆಯಿದೆ. ಜಿಲ್ಲಾಡಳಿತ, ಕಂದಾಯ, ಮೋಜಣಿ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ, ಮುಜರಾಯಿ ಇಲಾಖೆಗಳು, ಜಿಲ್ಲಾ ಪಂಚಾಯಿತಿ, ಇತ್ಯಾದಿಗಳ ಗಮನ ಇತ್ತ ಕಡೆ ಹರಿಯಬೇಕಿದೆ.
     ಕೆಲವು ತಿಂಗಳುಗಳ ಹಿಂದೆ ಮಿತ್ರ ಹರಿಹರಪುರ ಶ್ರೀಧರ ಕಾಶಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಾಲಿಡಲು ಅವಕಾಶವಿಲ್ಲದಂತೆ ಕುರುಚಲು ಗಿಡಗಳು, ಮುಳ್ಳುಕಂಟಿಗಳು ಬೆಳೆದಿದ್ದವು. ಹಿಂದೆ ಯಾವಾಗಲೋ ಇನ್ನೊಬ್ಬ ಮಿತ್ರ ದಿ. ದಾಸೇಗೌಡರು ಆವರನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋಗಿ ಇದರ ಪುನರುತ್ಥಾನಕ್ಕೆ ಏನಾದರೂ ಮಾಡಬೇಕಲ್ಲಾ ಎಂದು ಹೇಳಿದ್ದ ಮಾತು ನೆನಪಿನಲ್ಲಿ ಉಳಿದಿದ್ದುದೂ ಅವರ ಕಾಶಿಪುರ ಭೇಟಿಗೆ ಕಾರಣವಾಗಿತ್ತಂತೆ. ಆದರೆ ಅದಕ್ಕೆ ತಕ್ಕ ಮುಹೂರ್ತ ಬರಬೇಕಿತ್ತಷ್ಟೆ. ಮಿತ್ರ ಶ್ರೀಧರ್ ದೇವಸ್ಥಾನದ ಆಗಿನ ಸ್ಥಿತಿಯನ್ನು ಫೇಸ್ ಬುಕ್ಕಿನ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಸಹಿತ ಪ್ರಕಟಿಸಿದಾಗ ರಾಜ್ಯದಾದ್ಯಂತ ಮತ್ತು ಹಾಸನ ಜಿಲ್ಲೆಯವರ ಗಮನ ಸೆಳೆಯಿತು. ಪರಿಣಾಮವಾಗಿ ಹಾಸನದ ವೇದಭಾರತಿ, ಪತಂಜಲಿ ಯೋಗ ಸಮಿತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರುಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಹೀಗೆ ಹತ್ತು ಹಲವಾರು ಸಂಘಟನೆಗಳು ಕೈಜೋಡಿಸಿದವು. ಹಲವಾರು ದಿನಗಳವರೆಗೆ ಶ್ರಮದಾನ ನಡೆದು ದೇವಸ್ಥಾನದ ಆವರಣದಲ್ಲಿ ಓಡಾಡಲು ಸಾಧ್ಯವಾಗುವಂತಹ ಸ್ಥಿತಿ ಏರ್ಪಟ್ಟಿತು. ಸ್ಕೌಟ್ಸ್ ಮತ್ತು ಗೈಡ್ಸ್‌ನವರ ಕಾರ್ಯ ವಿಶೇಷ ಗಮನ ಸೆಳೆಯಿತು. ಬೆಂಗಳೂರಿನ ತರುಣರೂ ಈ ಕೆಲಸದಲ್ಲಿ ಆಸಕ್ತಿ ವಹಿಸಿದರು. ರಿಕ್ಲೈಮ್ ಟೆಂಪಲ್ಸ್ ಆಂದೋಲನದ ಕಾರ್ಯಕರ್ತರು ಶ್ರೀ ಗಿರೀಶ್ ಭಾರಧ್ವಾಜರ ನೇತೃತ್ವದಲ್ಲಿ ಸಹಕಾರ ನೀಡಲು ಮುಂದೆ ಬಂದರು. ಹರಿಹರಪುರ ಶ್ರೀಧರ್, ಕವಿ ನಾಗರಾಜ್  ನೇತೃತ್ವದಲ್ಲಿ ಎರಡು ಮೂರು ಸಲ ಗ್ರಾಮಸ್ಥರ ಸಭೆಗಳೂ ನಡೆದು ಗ್ರಾಮಸ್ಥರ ಸಹಕಾರವನ್ನೂ ಕೋರಲಾಯಿತು.      ಹಿರಿಯರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ಕಾರ್ಯಗಳಿಗೆ ಒತ್ತಾಸೆ ನೀಡಿ ಬೆಂಬಲಿಸಿದರು. ಅವರ ಬೆಂಗಳೂರು ನಿವಾಸದಲ್ಲಿ ಮತ್ತು ರಾಜಾಜಿನಗರದ ರಸಧ್ವನಿ ಕಲಾಕೇಂದ್ರದಲ್ಲಿ ಬೆಂಗಳೂರಿನ ಆಸಕ್ತರ ಸಭೆ ಕರೆದು ಚರ್ಚಿಸಲಾಯಿತು. ದೇವಸ್ಥಾನ ಸಮುಚ್ಛಯದ ಪುನರುತ್ಥಾನಕ್ಕಾಗಿ ಜಾಗೃತಿ ಉಂಟುಮಾಡುವ ಸಲುವಾಗಿ ಒಂದು ರಾಜ್ಯಮಟ್ಟದ ಸಮಿತಿ ರಚಿಸಿ ಅದಕ್ಕೆ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ಅಧ್ಯಕ್ಷರು, ಶ್ರೀ ಕವಿ ನಾಗರಾಜ್ ಉಪಾಧ್ಯಕ್ಷರು, ಶ್ರೀ ಹರಿಹರಪುರ ಶ್ರೀಧರ್ ಪ್ರಧಾನ ಸಂಚಾಲಕರು, ಶ್ರೀ ಶ್ರೀಕಾಂತ್ ಕಾರ್ಯದರ್ಶಿ, ಶ್ರೀ ನರೇಂದ್ರ ಕೋಶಾಧಿಕಾರಿ ಎಂದು ತೀರ್ಮಾನವಾಯಿತು. ಶ್ರೀಯುತರಾದ ಸುನೀಲ್, ಸದ್ಯೋಜಾತ ಭಟ್ಟರು ಸೇರಿದಂತೆ ಹಲವರನ್ನು ಜೋಡಿಸಿಕೊಳ್ಳಲಾಯಿತು. ಶಿವರಾತ್ರಿ ದಿನದಂದು ಕಾಶಿಪುರ ಉತ್ಸವ ನಡೆಸುವ ಮೂಲಕ ಅಡಗೂರು ಮತ್ತು ಸುತ್ತಮುತ್ತಲ ಗ್ರಾಮದವರನ್ನು ಜಾಗೃತಗೊಳಿಸಿ ಮುಂದಿನ ಪುನರುತ್ಥಾನದ ಕೆಲಸಗಳಿಗೆ ಅವರನ್ನು ಪ್ರೇರೇಪಿಸುವ ಕೆಲಸ ಮಾಡಬೇಕೆಂದು ನಿರ್ಧರಿಸಲಾಯಿತು. ಕಾರ್ಯಕ್ರಮದ ವ್ಯವಸ್ಥೆ, ರೂಪುರೇಷೆಗಳ ತಯಾರಿ, ಇತ್ಯಾದಿಗಳ ಹೊಣೆಯನ್ನು ಮಿತ್ರ ಶ್ರೀಧರ್ ಸ್ವತಃ ಹೊತ್ತುಕೊಂಡು ಅದಕ್ಕಾಗಿ ಪೂರ್ಣವಾಗಿ ತೊಡಗಿಕೊಂಡರು. ಅವರಿಗೆ ಮಿತ್ರರ ಸಹಕಾರವೂ ಸಿಕ್ಕಿತು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಂಕಲ್ಪ ಯಜ್ಞಗಳು, ಬೈಠಕ್ಕುಗಳು, ಹಣಕಾಸಿನ ವ್ಯವಸ್ಥೆಗಾಗಿ ಸಂಪರ್ಕ, ನಡೆಸಬೇಕಾದ ಕಾರ್ಯಕ್ರಮಗಳ ವ್ಯವಸ್ಥೆ, ಇತ್ಯಾದಿ ನಡೆದು ಕಾರ್ಯಕ್ರಮ ಯಶಸ್ಸು ಕಾಣುವ ಲಕ್ಷಣಗಳು ಸ್ಫುಟವಾಗಿ ಗೋಚರವಾಯಿತು. ಕಾರ್ಯಕ್ರಮ ನಡೆಯಲು ಎರಡು-ಮೂರು ದಿನಗಳಿದ್ದಂತೆ ಶ್ರಮದಾನದಿಂದ ನೋಡುವಂತಾಗಿದ್ದ ಕಾಶಿಪುರ ದೇವಸ್ಥಾನ ಸಮುಚ್ಚಯದ ಸ್ಥಳವನ್ನು ಜೆಸಿಬಿ ಸಹಾಯದಿಂದ ಸಮತಟ್ಟುಗೊಳಿಸಿ ಸಿದ್ಧಪಡಿಸಲಾಯಿತು. ಹಿಂದೆ ಆ ಸ್ಥಳ ಹೇಗಿದ್ದಿರಬಹುದು ಎಂಬ ಕಲ್ಪನೆಯೊಂದಿಗೆ ಅಚ್ಚರಿ ಮತ್ತು ಈಗಿನ ಸ್ಥಿತಿಯೊಂದಿಗೆ ವಿಷಾದ ಎರಡೂ ಭಾವಗಳು ನೋಡುಗರಿಗೆ ಉಂಟಾಗುತ್ತಿತ್ತು.
     ಶಿವರಾತ್ರಿಯ ದಿನದಂದು ಹಾಸನದಿಂದ ಒಂದು ನೂರು ಕಾರ್ಯಕರ್ತರು ವಿಶೇಷ ಬಸ್ಸು ಮತ್ತು ಖಾಸಗಿ ವಾಹನಗಳ ಮೂಲಕ ಅಡಗೂರಿಗೆ ಬಂದಿಳಿದರು. ಅಡಗೂರಿನ ಗಣಪತಿ ದೇವಸ್ಥಾನದ ಮುಂಭಾಗದ ಬಯಲು ರಂಗಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳಿಗಾಗಿ ವೇದಿಕೆ ಸಿದ್ಧಪಡಿಸಲಾಯಿತು. ಊರಲ್ಲೆಲ್ಲಾ ಕೇಸರಿ ಧ್ವಜಗಳು ವಿಜೃಂಭಿಸಿದ್ದವು. ಕಾಶಿಪುರದಲ್ಲಿ, ಅಡಗೂರಿನಲ್ಲಿ ಭವ್ಯವಾದ ೨೦ ಮತ್ತು ೧೦ ಅಡಿಗಳ ಫ್ಲೆಕ್ಸ್‌ಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದವು. ಸಿದ್ಧಿ ಸಮಾಧಿ ಯೋಗದ ಭಜನಾ ತಂಡವೂ ಬಂದಿಳಿಯಿತು. ಮಧ್ಯಾಹ್ನ ನಾಲ್ಕು ಗಂಟೆಗೆ ಸರಿಯಾಗಿ ಅಡಗೂರಿನಿಂದ ಕಾಶಿಪುರದವರೆಗೆ ಪುಷ್ಪಗಿರಿ ಮಠದ ೧೧೦೮ನೇ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಭವ್ಯ ಶೋಭಾಯಾತ್ರೆ ಭಜನಾತಂಡಗಳಿಂದ ಭಜನೆ, ಘೋಷಣೆಗಳೊಂದಿಗೆ ನಡೆಯಿತು. ಅಡಗೂರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಉತ್ಸಾಹದಿಂದ ಪಾಲುಗೊಂಡಿದ್ದರು.

     ಕಾಶಿಪುರದ ದೇವಸ್ಥಾನದ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಗ್ರಾಮಸ್ಥರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ವೇದಭಾರತೀ ಕಾರ್ಯಕರ್ತರು ಅಗ್ನಿಹೋತ್ರ, ಸಂಕಲ್ಪ ಯಜ್ಞ ಮಾಡುವುದರ ಮೂಲಕ ಶತಮಾನಗಳ ನಂತರದಲ್ಲಿ ಆ ಸ್ಥಳದಲ್ಲಿ ಮತ್ತೊಮ್ಮೆ ಧಾರ್ಮಿಕ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿತು. 'ಓಂ ರಾಷ್ಟ್ರಾಯ ಸ್ವಾಹಾ| ಇದಂ ರಾಷ್ಟ್ರಾಯ ಇದಂ ನ ಮಮ||' (ಈ ಸಮರ್ಪಣೆ ರಾಷ್ಟ್ರದ ಸಲುವಾಗಿ, ರಾಷ್ಟ್ರಕ್ಕೆ ಸಮರ್ಪಿತ, ಇದು ನಮ್ಮ ಸ್ವಾರ್ಥಕ್ಕಲ್ಲ} ಎಂಬ ಮಂತ್ರವನ್ನೂ ಪಠಿಸಿ ಸಮಿತ್ತು ಅರ್ಪಿಸಲಾಯಿತು. ಪುಷ್ಪಗಿರಿ ಸ್ವಾಮೀಜಿಯವರು, ಹಾಸನದಿಂದ ಬಂದು ಈ ಕಾರ್ಯ ಮಾಡುತ್ತಿರುವುದು ವಿಶೇಷವಾಗಿದೆ. ಈ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯ. ಹೊಸ ಹೊಸ ದೇವಸ್ಥಾನಗಳನ್ನು ಕಟ್ಟುತ್ತಿರುವ ಈ ಕಾಲದಲ್ಲಿ ಹಳೆಯ ದೇವಸ್ಥಾನವನ್ನು ಪುನರುದ್ಧಾರ ಮಾಡುವ ದಿಸೆಯಲ್ಲಿ ವೇದಭಾರತಿಯವರು ಮತ್ತು ಇತರರ ಕಾರ್ಯ ಮೆಚ್ಚುವಂತಹುದು. ಅಡಗೂರಿನ ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು. ಹರಿಹರಪುರ ಶ್ರೀಧರ್ ಮಾತನಾಡಿ, ಈ ಕಾರ್ಯದ ಮಹತ್ವವನ್ನು ಗ್ರಾಮಸ್ಥರಿಗೆ ಮನಗಾಣಿಸಿದ್ದಾಗಿದೆ. ಮುಂದಿನ ಕೆಲಸಗಳನ್ನು ಸ್ವಾಮೀಜಿಯವರೊಂದಿಗೆ ಊರಿನವರು ಸೇರಿಕೊಂಡು ಮುಂದುವರೆಸಬೇಕು ಎಂದರು. ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ತುಂಬಿಹೋಗಿದ್ದರು. ಎಲ್ಲರಲ್ಲೂ ಉತ್ಸಾಹ ಮತ್ತು ಕೈಜೋಡಿಸುವ ಮನಸ್ಸು ಇದ್ದುದು ಕಾಣುತ್ತಿತ್ತು.       ಪುನಃ ಅಡಗೂರಿನ ಬಯಲು ರಂಗಮಂದಿರದಲ್ಲಿ ಎಲ್ಲರೂ ಒಟ್ಟುಗೂಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿನಾಗರಾಜ್ ವಹಿಸಿದ್ದು ಅಡಗೂರಿನ ಆನಂದ್, ವಿಶ್ವನಾಥ್, ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಹರಿಹರಪುರ ಶ್ರೀಧರ್, ಅಶೋಕಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಎಲ್ಲರೂ ಕಾಶಿಪುರ ದೇವಸ್ಥಾನದ ಪುನರುಜ್ಜೀವನಕ್ಕೆ ಮುಂದಾಗುವಂತೆ ಕರೆ ನೀಡಿದರು. ಹಾಸನದ ಸಿದ್ಧಿ ಸಮಾಧಿಯೋಗದ ತಂಡದವರಿಂದ ಭಜನೆ, ಬೆಂಗಳೂರಿನ ಕು|| ಅಕ್ಷತಾ ರಾಮಕೃಷ್ಣ ಮತ್ತು ಹಾಸನದ ಕು|| ವೈಷ್ಣವಿ ಜಯರಾಮರಿಂದ ಭರತನಾಟ್ಯ, ಶ್ರೀಮತಿ ಪಲ್ಲವಿ ಗಿರೀಶ್, ಕು|| ಶ್ರದ್ಧಾ, ತನ್ಮಯಿ, ಯಶಸ್, ಶ್ರೀಮತಿ ಕಲವಾತಿ ಮಧುಸೂದನ್ ಮತ್ತು ಇತರರಿಂದ ಭಕ್ತಿಗೀತೆಗಳು, ಕು|| ಅನೀಶ್ ಮತ್ತು ತಂಡದವರಿಂದ ಕೊಳಲು ವಾದನ, ಪತಂಜಲಿ ಯೋಗಕೇಂದ್ರಗಳವರಿಂದ ಯೋಗ ನೃತ್ಯಗಳು, ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನೆರೆದಿದ್ದ ಜನರ ಮನರಂಜಿಸುವಲ್ಲಿ ಯಶಸ್ವಿಯಾಯಿತು. ಒಟ್ಟಾರೆಯಾಗಿ ಹೇಳಬೇಕೆಂದರೆ ಅಡಗೂರಿನಲ್ಲಿ ನಡೆದ ಕಾರ್ಯಕ್ರಮ ನಭೂತೋ ಎಂಬಂತಿತ್ತು. ಹರಿಹರಪುರ ಶ್ರೀಧರ ಮತ್ತು ಮಿತ್ರರೆಲ್ಲರ ಶ್ರಮ, ಸಹಕಾರ, ಪಾಲುಗೊಳ್ಳುವಿಕೆ ಫಲ ನೀಡಿತ್ತು. 
     ಕಾರ್ಯಕ್ರಮದ ಪೂರ್ಣ ವ್ಯವಸ್ಥೆಯನ್ನು ಹಾಸನದ ಕಾರ್ಯಕರ್ತರೇ ಮಾಡಿದ್ದುದಲ್ಲದೆ, ಪ್ರಸಾದದ ವ್ಯವಸ್ಥೆ ಸಹ ಹಾಸನದಿಂದಲೇ ಆಗಿದ್ದು ಗಮನಾರ್ಹ. ಮುಂದಿನ ವರ್ಷದ ಕಾಶಿಪುರ ಉತ್ಸವವನ್ನು ಅಡಗೂರಿನವರೇ ಮಾಡಲು ಮುಂದೆ ಬರುತ್ತಾರೆ, ಹಾಸನ ಮತ್ತು ಪರ ಊರಿನವರು ಕೈಜೋಡಿಸುತ್ತಾರೆ ಎಂಬ ಆಶಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ನಿಜವಾದ ಅರ್ಥದಲ್ಲಿ ಜಾಗರಣೆ ಅಡಗೂರಿನಲ್ಲಿ ಉಂಟಾಗಿತ್ತು. ಅದು ನಿರಂತರ ಮುಂದುವರೆಯಲಿ, ಯೋಜಿತ ಕಾರ್ಯ ಸಾಧಿತವಾಗಲಿ.
ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ 
ನಮಃ ಶಿವಾಯ ಚ ಶಿವತರಾಯ ಚ || (ಯಜು. ೧೬.೪೧)
ಅರ್ಥ: ಶಾಂತಿ ಸ್ವರೂಪನಿಗೆ ನಮಸ್ಕಾರ, ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳ ಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ.
-ಕ.ವೆಂ. ನಾಗರಾಜ್.

ಭಾನುವಾರ, ಫೆಬ್ರವರಿ 4, 2018

ಬದಲಾವಣೆ - ಜಗದ ನಿಯಮ - Change - Rule of the Universe


     ಜಗತ್ತು ಬದಲಾಗುತ್ತಲೇ ಇರುತ್ತದೆ, ನಾವೂ ಬದಲಾಗುತ್ತಲೇ ಇರುತ್ತೇವೆ. ಸದಾ ಬದಲಾವಣೆಯನ್ನು ಬಯಸುತ್ತಲೇ ಇರುತ್ತೇವೆ. ಬದಲಾಗುತ್ತ ಇರುವುದರಿಂದಲೇ ಜಗತ್ತು ನಡೆಯುತ್ತಿದೆ. ಹರಿಯುವ ನದಿಯಿಂದ ಒಂದು ಬೊಗಸೆ ನೀರು ತೆಗೆದುಕೊಂಡು ಮತ್ತೆ ನದಿಗೆ ಬಿಟ್ಟರೆ, ಆ ಬೊಗಸೆ ನೀರು ಮತ್ತೆ ನಮಗೆ ಬೇಕೆಂದರೂ ಸಿಗದು, ಮುಂದೆ ಹರಿದುಹೋಗಿಬಿಡುತ್ತದೆ. ಕಳೆದು ಹೋದ ಕ್ಷಣ ಮತ್ತೆ ಎಂದಿಗೂ ಸಿಗದು, ಕಾಲ ಮುಂದಕ್ಕೆ ಓಡುತ್ತಲೇ ಇರುತ್ತದೆ. ನಾವೂ ಅಷ್ಟೆ. ನಮ್ಮ ಶರೀರ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋಗುತ್ತಿರುತ್ತದೆ. ಮಗು, ಬಾಲ್ಯ, ಯೌವನ, ಪ್ರೌಢ, ವೃದ್ಧ ಸ್ಥಿತಿಯೆಡೆಗೆ ಅನವರತ ಬದಲಾಗುತ್ತಲೇ ಹೋಗುತ್ತದೆ. ಯಾವುದೇ ಸ್ಥಿತಿಯನ್ನು ಯಥಾ ರೀತಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದು ಸಿಗುತ್ತದೋ ಇಲ್ಲವೋ, ಆದರೆ ನಾವು ಈಗಿಗಿಂತ ಉತ್ತಮ ಸ್ಥಿತಿಗೆ ಬದಲಾವಣೆಯನ್ನು, ಅದು ವೈಯಕ್ತಿಕವಾಗಿರಬಹುದು, ಕೌಟುಂಬಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಏನೇ ಆಗಿರಬಹುದು, ಬಯಸುತ್ತಲೇ ಇರುತ್ತೇವೆ.
     ನಾವು ಇಷ್ಟಪಟ್ಟಂತೆ ಬದಲಾವಣೆ ಆಗದಿದ್ದಾಗ ಬೇಸರವಾಗುತ್ತದೆ, ಅಸಮಾಧಾನವಾಗುತ್ತದೆ ಮತ್ತು ಜೀವನ ಅಸಹನೀಯವೆಂಬ ಭಾವನೆ ಉಂಟಾಗುತ್ತದೆ. ಕೆಲವರು ಗೊಣಗಾಡುವುದನ್ನು ಕೇಳುತ್ತಿರುತ್ತೇವೆ, 'ಅಯ್ಯೋ, ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲಪ್ಪ. ಈಗ ಕಾಲ ಕೆಟ್ಟುಹೋಗಿದೆ. ಈ ಜನ ಬದಲಾಗುವುದಿಲ್ಲ'. ಬದಲಾಗದಿರುವುದು ಜನವೋ ಅಥವ ಬದಲಾವಣೆಗೆ ಹೊಂದಿಕೊಳ್ಳದವರೋ? ಬದಲಾವಣೆಗೆ ಒಗ್ಗದವರು, ಇಚ್ಛೆಯಂತೆ ಬದಲಾವಣೆ ತರಲಾಗದಿದ್ದವರು ದುಃಖಿಗಳಾಗುತ್ತಾರೆ. ಹಿಂದೆ ಹಾಯಿದೋಣಿಗಳು ಇದ್ದ ಕಾಲದಲ್ಲಿ ಬೀಸುತ್ತಿದ್ದ ಗಾಳಿಯನ್ನು ಉಪಯೋಗಿಸಿಕೊಂಡು ದೋಣಿಗಳನ್ನು ನಡೆಸುತ್ತಿದ್ದರು. ದೋಣಿಯ ಅನುಕೂಲಕ್ಕೆ ತಕ್ಕಂತೆ ಗಾಳಿ ಬೀಸದೇ ಇದ್ದಾಗ ಗಾಳಿಯ ದಿಕ್ಕನ್ನು ಬದಲಾಯಿಸಲು ಸಾಧ್ಯವಿರಲಿಲ್ಲವಾದ್ದರಿಂದ ಹಾಯಿಗಳನ್ನೇ ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿ ಪ್ರಯಾಣ ಮುಂದುವರೆಸಿ ಗುರಿ ತಲುಪುತ್ತಿದ್ದರು. ಈ ನೀತಿಯನ್ನೇ ಅನುಸರಿಸಿದರೆ ದುಃಖವನ್ನೇ ಸಂತೋಷವಾಗಿ ಮಾರ್ಪಡಿಸಿಕೊಳ್ಳುವ ಕಲೆ ಸಿದ್ಧಿಸುತ್ತದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಬೇಕು. ಆದರೆ ಬದಲಾವಣೆ ಸಾಧ್ಯವೇ ಇಲ್ಲವೆಂಬ ಸ್ಥಿತಿ ಇದ್ದರೆ ಅದನ್ನು ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದರಲ್ಲಿ ಜಾಣತನವಿದೆ. ಉದಾಹರಣೆಗೆ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಿರುವ ಹಕ್ಕಿಗಳ ಹಿಂಡನ್ನು ನೋಡಿ ನಮಗೆ ಸಂತೋಷವಾಗುತ್ತದೆ. ಆ ಹಕ್ಕಿಗಳು ಆ ದಿಕ್ಕಿನಲ್ಲಿ ಹಾರಬಾರದಿತ್ತು, ಹೀಗೆ ಹಾರಬಾರದು, ಹಾಗೆ ಹಾರಬಾರದು ಎಂದು ನಮಗೆ ಅನ್ನಿಸುವುದಿಲ್ಲ. ಏಕೆಂದರೆ ನಮ್ಮ ಇಚ್ಛೆಯಂತೆ ಅದು ನಡೆಯುವುದಿಲ್ಲವೆಂಬುದು ನಮಗೆ ಗೊತ್ತಿರುತ್ತದೆ. ಪ್ರತಿದಿನ ಪೂರ್ಣಚಂದ್ರನೇ ಆಕಾಶದಲ್ಲಿ ಕಾಣಬೇಕು, ಬೆಂಕಿ ಸುಡಬಾರದು, ನೀರು ಕೆಳಗಿನಿಂದ ಮೇಲಕ್ಕೆ ಹರಿಯಬೇಕು, ಕಾಡಿನಲ್ಲಿ ಕೇವಲ ಮಾವು, ಹಲಸು ಇತ್ಯಾದಿ ನಮಗೆ ಇಷ್ಟವಾದ ಗಿಡಮರಗಳು ಮಾತ್ರ ಹುಟ್ಟಬೇಕು ಎಂದೆಲ್ಲಾ ಬಯಸಲು ಸಾಧ್ಯವಿಲ್ಲದೆ ಇರುವುದರಿಂದ ಅವನ್ನು ನಾವು ಒಪ್ಪಿಕೊಳ್ಳುವ ಹಾಗೆ, ಬದಲಾವಣೆ ಸಾಧ್ಯವಿಲ್ಲದ ಸಂಗತಿಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ನಮಗೆ ಬದುಕು ಸಹನೀಯವಾಗುತ್ತದೆ. 
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ನೀನು ಮೊದಲಾಗು |
ಬದಲಾಗು ನೀ ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
     ಮಕರ ಸಂಕ್ರಮಣದಂದು ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆಂಬುದು ಪ್ರಚಲಿತ ವಿಷಯ. ಆದರೆ ನಿಜವಾಗಿ ಹೇಳಬೇಕೆಂದರೆ ಪಥ ಬದಲಾಯಿಸುವುದು ಸೂರ್ಯನಾಗಿರದೆ ಭೂಮಿ ಆಗಿರುತ್ತದೆ. ಭೂಮಿಯ ಪಥ ಬದಲಾಗುವುದರಿಂದ ಸೂರ್ಯ ಪಥ ಬದಲಾಯಿಸಿದಂತೆ ನಮಗೆ ಕಾಣುತ್ತದೆ. ಇದೇ ನಿಯಮ ನಮಗೂ ಅನ್ವಯಿಸುತ್ತದೆ. ಇನ್ನೊಬ್ಬರು ಬದಲಾಗಬೇಕೆಂದು ಬಯಸುವ ನಾವು ಬದಲಾಗಬೇಕಾದುದು ನಾವೇ ಆಗಿರಬಾರದೇಕೆ ಎಂದು ಯೋಚಿಸಬೇಕು. ನಾವು ಬದಲಾದರೆ ನಮಗೆ ಇತರರೂ ಬದಲಾದಂತೆ ಕಂಡೇ ಕಾಣುತ್ತದೆ. ಇದೇ ನಿಜವಾದ ಬದಲಾವಣೆ! ನಮ್ಮ ಚಿಂತನಾಧಾಟಿ ಬದಲಾದರೆ ಜಗತ್ತೇ ಬದಲಾಗಿಬಿಡುತ್ತದೆ! ಇಂತಹ ಬದಲಾವಣೆಯೂ ಸುಲಭವಾಗಿಬರುವುದಿಲ್ಲ. ನಾವು ಯಾರು ಬದಲಾಗಬೇಕೆಂದು ಬಯಸುತ್ತೇವೆಯೋ ಅವರ ಸ್ಥಾನದಲ್ಲಿ ನಮ್ಮನ್ನು ಕಲ್ಪಿಸಿಕೊಂಡು ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೆ ಮಾಡಿದರೆ, ನಮ್ಮ ನ್ಯೂನತೆಗಳು, ದೌರ್ಬಲ್ಯಗಳು ನಮ್ಮ ಅರಿವಿಗೆ ಬರುತ್ತವೆ. ಅಂತಹವುಗಳನ್ನು ನಿವಾರಿಸಿಕೊಳ್ಳಲು ಪ್ರಾರಂಭಿಸಿದರೆ ಬದಲಾವಣೆ ಗೋಚರವಾಗುತ್ತದೆ. ನಮ್ಮ ಮನಸ್ಸು ಆ ಬದಲಾವಣೆಯನ್ನು ಒಪ್ಪಿಕೊಳ್ಳುತ್ತದೆ. ನಾವು ಯಾವ ಬಣ್ಣದ ಕನ್ನಡಕದಿಂದ ಜಗತ್ತನ್ನು ನೋಡುತ್ತೇವೆಯೋ ಜಗತ್ತು ಅದೇ ಬಣ್ಣದಿಂದ ನಮಗೆ ಕಾಣುತ್ತದೆ. ದೇವರನ್ನು ಕುರಿತು ಮಾಡುವ/ಸಲ್ಲಿಸುವ ಪ್ರಾರ್ಥನೆ ದೇವರನ್ನು ಬದಲಾಯಿಸುತ್ತದೆಯೇ? ಇಲ್ಲ, ಅದು ಪ್ರಾರ್ಥಿಸುವವನನ್ನು ಬದಲಾಯಿಸುತ್ತದೆ!  ಈ ಅರಿವೇ ಸಂಕ್ರಾಂತಿ, ಒಳ್ಳೆಯ ಕ್ರಾಂತಿ, ಒಳ್ಳೆಯ ಬೆಳವಣಿಗೆ! 
     ಜಗತ್ತು ಬದಲಾಗಬೇಕಾದರೆ ನಾವು ಬದಲಾಗಬೇಕು, ನಾವು ಮೊದಲು ಬದಲಾಗಬೇಕು ಎಂದು ಹೇಳುವುದೇನೋ ಸುಲಭ. ಆದರೆ ನಾವು ಬದಲಾಗಬೇಕು ಎಂದು ತಿಳಿದುಕೊಳ್ಳುವುದಾದರೂ ಹೇಗೆ? ಒಂದು ಪ್ರಯೋಗ ಮಾಡಬಹುದು. ನಾವು ಈದಿನ ಯಾವುದೋ ಒಂದು ಕೆಲಸ ಮಾಡಬೇಕೆಂದುಕೊಂಡಿದ್ದೇವೆ ಎಂದುಕೊಳ್ಳೋಣ. ಕನ್ನಡಿಯ ಮುಂದೆ ನಿಂತು ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: 'ಇಂದು ನನ್ನ ಬದುಕಿನ ಕೊನೆಯ ದಿನವೆಂದಾದರೆ ಈ ಕೆಲಸವನ್ನು ಮಾಡುತ್ತೇನಾ?' 'ಇಲ್ಲ' ಎಂಬ ಉತ್ತರ ಹಲವು ದಿನಗಳವರೆಗೆ ಸತತವಾಗಿ ಬರುವುದಾದರೆ ನಾವು ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ನಾವು ಏನಾಗಿದ್ದೇವೆಯೋ ಅದನ್ನು ಬದಲಾಯಿಸಲಾರೆವು. ಆದರೆ, ನಮ್ಮ ತಲೆಯೊಳಗೆ ಯಾವ ವಿಚಾರವಿದೆಯೋ ಅದನ್ನು ಬದಲಾಯಿಸಲು ಸಾಧ್ಯವಿದೆ. ಹೊಸ ವಿಚಾರಗಳು, ಒಳ್ಳೆಯ ವಿಚಾರಗಳನ್ನು ನಮ್ಮ ತಲೆಯಲ್ಲಿ ಸೇರಿಸಲು ಅವಕಾಶವಿದೆ.
     ನಾವು ಹಲವಾರು ಸಂಗತಿಗಳಲ್ಲಿ ಬದಲಾವಣೆ ಬಯಸುತ್ತೇವೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತ ಒಂದು ಸಮಾಜವಾದಿ ಜಾತ್ಯಾತೀತ ರಾಷ್ಟ್ರ ಎಂದು ತಿದ್ದುಪಡಿ ಮಾಡಿದರು. ಆದರೆ ವಾಸ್ತವದಲ್ಲಿ ಈಗ ಏನಾಗಿದೆ? ಹೆಸರಿಗೆ ಜಾತ್ಯಾತೀತ ಎಂದು ಬಾಯಿಯಲ್ಲಿ ಜಪ ಮಾಡುವ ರಾಜಕಾರಣಿಗಳು ಜಾತಿಗಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಜಾತೀಯತೆಯ ವಿಷಬೀಜವನ್ನು ಮತ್ತಷ್ಟು ಬಲಗೊಳಿಸುತ್ತಿದ್ದಾರೆ, ಜಾತಿಯ ಹೆಸರಿನಲ್ಲಿ ಕಿತ್ತಾಟ ಮಾಡುತ್ತಾರೆ, ಒಬ್ಬರನ್ನೊಬ್ಬರ ವಿರುದ್ದ ಎತ್ತಿಕಟ್ಟುತ್ತಾರೆ, ಜಾತಿಗಳ ಆಧಾರದಲ್ಲೇ ಅಸ್ತಿತ್ವ ಕಂಡುಕೊಂಡಿದ್ದಾರೆ. ಸಾಹಿತ್ಯಿಕವಾಗಿ ಎಡ, ಬಲ, ದಲಿತ, ಮಹಿಳಾ, ಪ್ರಗತಿಪರ, ಪ್ರಗತಿವಿರೋಧಿ, ಇತ್ಯಾದಿ ಹಣೆಪಟ್ಟಿಗಳನ್ನು ಹಚ್ಚುತ್ತಾ ಆ ಕ್ಷೇತ್ರವನ್ನೂ ಮಲಿನಗೊಳಿಸಿದ್ದಾರೆ. ಎಲ್ಲರ ಹಿತವನ್ನು ಬಯಸುವುದೇ ಸಾಹಿತ್ಯವಾಗಿರುವಾಗ ಅದನ್ನೂ ಕೆಸರೆರಚುವ ಸಾಧನ ಮಾಡಿಕೊಂಡಿರುವುದು ವಿಷಾದದ ಸಂಗತಿ. ಭಾಷೆಯ ಪ್ರೀತಿಯನ್ನೇ ಬಂಡವಾಳ ಮಾಡಿಕೊಂಡು ಮೆರೆಯುತ್ತಿರುವ ಸಂಘಟನೆಗಳು ಭಯ ಹುಟ್ಟಿಸುವ ಮಟ್ಟಕ್ಕೆ ಬೆಳೆದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ಹಿತಕ್ಕೆ ಧಕ್ಕೆ ತರುವ, ದೇಶದ ಮಾನವನ್ನೇ ಹರಾಜು ಹಾಕುವವರು ಗಣ್ಯರೆನಿಸಿಕೊಂಡಿದ್ದಾರೆ. ಇದನ್ನೆಲ್ಲಾ ಪಟ್ಟಿ ಮಾಡುತ್ತಾ ಹೋದರೆ ದಿಗಿಲಾಗುತ್ತದೆ. ಆದರೆ ಬದಲಾವಣೆಯ ದಿನಗಳು ಬರಲೇಬೇಕು, ಬರುತ್ತವೆ! ಈ ಆಶಾವಾದ ನಮ್ಮನ್ನು ಹತಾಶೆಯಿಂದ ಹೊರಬರುವಂತೆ ಮಾಡುತ್ತದೆ.
     ನಿಜ, ಬದಲಾವಣೆ ಆಗಬೇಕು. ಯಾರು ಮಾಡಬೇಕು? ಬೇರೆ ಯಾರಾದರೂ ಮಾಡಲಿ ಎಂದು ಕಾಯುತ್ತಾ ಕೂರಬೇಕೇ? ನಮಗೆ ಬೇಕಾದ ಬದಲಾವಣೆ ಮಾಡಬೇಕಾದವರು ನಾವೇ ಆಗಿದ್ದೇವೆ. ಬದಲಾವಣೆ ಮಾಡಲೆಂದು ಯಾರನ್ನು ಕಾಯುತ್ತಿದ್ದೇವೆಯೋ ಆ ಅವರು ಬೇರೆ ಯಾರೂ ಅಲ್ಲ, ನಾವೇ ಆಗಿದ್ದೇವೆ. ನಾವು ಬಯಸುವ ಬದಲಾವಣೆಯನ್ನು ಮೊದಲು ನಮ್ಮಲ್ಲಿ ತಂದುಕೊಳ್ಳೋಣ. ಆಗ ಕ್ರಮೇಣ ಬದಲಾವಣೆ ಬರುತ್ತಾ ಹೋಗುತ್ತದೆ. ಮೊದಲು ಕ್ಷೀಣವಾಗಿ ಪ್ರಾರಂಭವಾಗುವ ಬದಲಾವಣೆ ಬರಬರುತ್ತಾ ದಟ್ಟವಾಗುತ್ತೆ. ಬದಲಾವಣೆಯ ತಂಗಾಳಿ ಬೀಸತೊಡಗುತ್ತದೆ. ನಮ್ಮಲ್ಲಿ ನಾವು ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ಬೇರೆ ಏನನ್ನೂ ಬದಲಾವಣೆ ಮಾಡಲಾರೆವು. ಸರ್ವರ ಹಿತ ಬಯಸುವ ಕೆಲವೇ ಸಜ್ಜನರು ಜಗತ್ತಿನಲ್ಲಿ ಬದಲಾವಣೆಯ ಬೆಳಕು ತರಬಲ್ಲರು. ಆ ಕೆಲವರಲ್ಲಿ ನಾವೂ ಒಬ್ಬರಾಗೋಣ.
-ಕ.ವೆಂ.ನಾಗರಾಜ್.

ಸೋಮವಾರ, ಜನವರಿ 22, 2018

ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!


     ಮಿತ್ರ ಅಶೋಕಕುಮಾರರು ಅಶ್ವತ್ಥಾಮನ್ ನಾಟಕದಲ್ಲಿ ಬರುವ 'ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!' ಎಂಬ ಸಾಲಿನ ಅರ್ಥ ವಿವರಿಸಲು ಕೇಳಿದಾಗ ನನಗೆ ಹಳೆಯ ಘಟನೆಯೊಂದು ನೆನಪಾಯಿತು. ಕೆಲವು ವರ್ಷಗಳ ಹಿಂದೆ ಹಾಸನದ ವಿಜಯನಗರ ಬಡಾವಣೆಗೆ ಹೋಗುವ ಸಲುವಾಗಿ ಸಂತೆಪೇಟೆಯ ಬಳಿ ಸ್ಕೂಟರ್ ನಿಲ್ಲಿಸಿಕೊಂಡು ಸಿಗ್ನಲ್ಲಿಗಾಗಿ ಕಾಯುತ್ತಿದ್ದೆ. ಹಸಿರು ನಿಶಾನೆ ಕಂಡ ಕೂಡಲೇ ವಾಹನಗಳು ಆತುರದಿಂದ ಮುಂದೆ ಹೊರಟ ಸಮಯದಲ್ಲಿಯೇ ಒಂದು ನಾಯಿಯ ಕೊನೆಯ ಚೀತ್ಕಾರ ಕೇಳಿಸಿ ಕಣ್ಣು ಹಾಯಿಸಿದೆ. ಲಾರಿಯ ಹಿಂಬದಿಯ ಚಕ್ರಕ್ಕೆ ಸಿಕ್ಕಿದ್ದ ನಾಯಿ ಕೊನೆಯುಸಿರೆಳೆದಿತ್ತು. ಹಾಗೆಂದು ಆ ನಾಯಿ ಇದ್ದಕ್ಕಿದ್ದಂತೆ ಸಿಕ್ಕಿ ಸತ್ತಿದ್ದಾಗಿರಲಿಲ್ಲ. ಆ ಲಾರಿ ಬಹಳ ಸಮಯದಿಂದ ಅಲ್ಲಿ ನಿಂತಿತ್ತು. ಮಟ ಮಟ ಮಧ್ಯಾಹ್ನದ ಉರಿಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಆ ನಾಯಿ ಲಾರಿಯ ಹಿಂಬದಿಯ ಚಕ್ರಗಳ ಮುಂದೆ ನೆರಳಿನಲ್ಲಿ ಹಿತವಾಗಿ ಮಲಗಿ ನಿದ್ರಿಸಿತ್ತು. ನಾನು ಸಿಗ್ನಲ್ಲಿಗಾಗಿ ಕಾಯುತ್ತಿದ್ದಾಗ ಅದನ್ನು ಗಮನಿಸಿದ್ದೆ. ಚಾಲಕನ ಹೊರಡುವ ಸಮಯ ಬಂದಿದ್ದ ಸಮಯಕ್ಕೆ ಸರಿಯಾಗಿ ಸಿಗ್ನಲ್ ಬಂದುದರಿಂದ ತಕ್ಷಣ ಆತ ಲಾರಿಯನ್ನೇರಿ ನಾಯಿಯನ್ನು ಗಮನಿಸದೆ ಲಾರಿ ಚಲಿಸಿದ್ದರಿಂದ ಅದು ಪರಲೋಕವಾಸಿಯಾಗಿಬಿಟ್ಟಿತ್ತು. ಕೆಲವೇ ಸಮಯದ ಹಿಂದೆ ನೆರಳಿನಲ್ಲಿ ಮಲಗಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದ ನಾಯಿ ಚಿರನಿದ್ರೆಗೆ ಜಾರಿತ್ತು. ಈ ಕ್ಷಣಕ್ಕೆ ಏನೋ, ಮುಂದಿನ ಕ್ಷಣಕ್ಕೆ ಏನೋ ಎಂಬುದನ್ನು ತಿಳಿಯದ ನಶ್ವರ ಜೀವನದ ದರ್ಶನವನ್ನು ಆ ನಾಯಿಯ ಅಂತ್ಯ ನನಗೆ ತೋರಿಸಿತ್ತು. ಆ ನಾಯಿಗೇನೋ ವಿವೇಚನಾ ಶಕ್ತಿ ಇರಲಿಲ್ಲ. ಇದ್ದಿದ್ದರೆ ಲಾರಿಯ ಚಕ್ರದ ಮುಂದೆ ಮಲಗುತ್ತಿರಲಿಲ್ಲ. ಬೇರೆಲ್ಲೋ ಸುರಕ್ಷ್ಷಿತವೆನ್ನಿಸಿದ ಸ್ಥಳದಲ್ಲಿ ಮಲಗುತ್ತಿತ್ತು. ಆದರೆ, ವಿವೇಚನಾ ಶಕ್ತಿ ಇರುವ ಮನುಷ್ಯರೇ ಅವಿವೇಕತನದಿಂದ ವರ್ತಿಸುತ್ತಾರೆ ಎಂದರೆ ಚೋದ್ಯವೆನಿಸುವುದಾದರೂ ಸತ್ಯವಾಗಿದೆ. ಲಾರಿಯ ಚಾಲಕ ವಿವೇಕತನದಿಂದ ವರ್ತಿಸಿದ್ದರೆ ನಾಯಿಯ ಪ್ರಾಣ ಉಳಿಯುತ್ತಿತ್ತು.
     ನಮ್ಮ ಬದುಕು ಶಾಶ್ವತವಲ್ಲವೆಂದು ತಿಳಿದಿದ್ದರೂ ನಾವು ಚಿರಂಜೀವಿಗಳೆಂದು ಭಾವಿಸುವಂತೆ ಮಾಡುವ ಅದೆಂತಹುದೋ ನಮ್ಮೊಳಗೆ ಇದೆ! ಅದೇ ನಮ್ಮ ವಿವೇಚನಾ ಶಕ್ತಿಗೆ ತಡೆ ಒಡ್ಡುವ ಕೆಲಸ ಮಾಡುತ್ತದೆ. 'ಖ' ಎಂದರೆ ಇಂದ್ರಿಯ. ಸುಖ ಎಂದರೆ ಇಂದ್ರಿಯಗಳಿಗೆ ಯಾವುದು ಹಿತವೆನ್ನಿಸುವುದೋ ಅದು ಮತ್ತು ದುಃಖವೆಂದರೆ ಇಂದ್ರಿಯಗಳಿಗೆ ಯಾವುದು ಅಹಿತವೆನಿಸುವುದೋ ಅದು ಎಂದು ಅಂದುಕೊಳ್ಳುತ್ತೇವೆ. ಇಲ್ಲೂ ಸಮಸ್ಯೆಯಿದೆ. ಈಗ ಸುಖವೆಂದುಕೊಂಡಿದ್ದು ಮುಂದೆ ದುಃಖವಾಗಿ ಕಾಡುವುದಿದೆ. ಈಗ ದುಃಖವಾಗಿ ಕಂಡಿದ್ದು ಮುಂದೆ ಸುಖವಾಗಿ ಪರಿಣಮಿಸಬಹುದಾದುದೂ ಇದೆ. ಔಷಧಿ ನಾಲಿಗೆಗೆ ಕಹಿಯಾದರೂ ದೇಹಕ್ಕೆ ಉಪಕಾರಿ. ಆದರೆ ಹಿತವೆಂದು ಭಾವಿಸಿ ಕುಡಿಯುವ ಮಾದಕ ದ್ರವ್ಯ? ಮಜಾ ಇದೆ ಎಂದು ಕುಡಿಯುತ್ತಾರೆ, ದೊಡ್ಡಸ್ತಿಕೆಗಾಗಿ ಕುಡಿಯುತ್ತಾರೆ, ಕೊನೆಗೆ ದುಃಖ ಮರೆಯುವ ಸಲುವಾಗಿ ಎನ್ನುತ್ತಲೂ ಕುಡಿಯುತ್ತಾರೆ. ಆದರೆ ಮೆದುಳಿನ ಮೇಲೆ ಪ್ರಭಾವ ಬೀರುವ ಆ ದ್ರವ ಕ್ರಮೇಣ ಶರೀರದ ಆರೋಗ್ಯವನ್ನೇ ಹದಗೆಡಿಸಿ ನಾನಾ ರೋಗಗಳಿಗೆ ಆಸ್ಪದ ನೀಡಿ ಜೀವನವನ್ನೇ ನರಕ ಮಾಡಬಹುದು. ಕುಡಿತವೇ ಚಟವಾಗಿರಿಸಿಕೊಂಡವರು ಸಮಾಜದ ದೃಷ್ಟಿಯಲ್ಲಿ ಕೀಳಾಗಿ ಕಾಣಲ್ಪಡುತ್ತಾರೆ ಎಂಬುದೂ ಸತ್ಯ. ಎಲ್ಲವೂ ಗೊತ್ತಿದ್ದೂ ಕುಡಿಯುತ್ತಾರೆಂದರೆ, ಅವರ ವಿವೇಚನಾ ಶಕ್ತಿಯ ಬಗ್ಗೆ ಸಂದೇಹ ಬರುತ್ತದೆ. ಶೋಕಿಗಾಗಿ ಸೇದುವ ಸಿಗರೇಟು, ಬೀಡಿಗಳು ಸೇದುವವರದು ಮಾತ್ರವಲ್ಲ, ಜೊತೆಗಿರುವವರ ಆರೋಗ್ಯವನ್ನೂ ಕೆಡಿಸುತ್ತದೆ. 'ಇರುವುದು ಎರಡು ದಿನ, ಮಜಾ ಮಾಡಿ ಹೋಗೋಣ' ಎಂಬ ಮನೋಭಾವದ ಅವರು, "ಕುಡಿಯುವುದಿಲ್ಲ, ಸೇದುವುದಿಲ್ಲ, ಮಜಾ ಮಾಡುವುದಿಲ್ಲ ಎನ್ನುವುದಾದರೆ ಬದುಕಿರುವುದಾದರೂ ಏಕೆ?" ಎಂಬ ಪ್ರಶ್ನೆಯನ್ನೂ ಮುಂದೊಡ್ಡುತ್ತಾರೆ. ಜಗತ್ತಿನಲ್ಲಿ ಇದು ಬೇಕೇ ಬೇಕು ಅಥವ ಇದು ಬೇಡವೇ ಬೇಡ ಎಂಬಂತಹ ಯಾವುದೇ ಸಂಗತಿಗಳಿಲ್ಲ. ಆದರೆ ಇತಿ-ಮಿತಿಯಲ್ಲಿದ್ದರೆ ಎಲ್ಲವೂ ಹಿತವೇ. ಅತಿಯಾದರೆ ಎಲ್ಲವೂ ಕಷ್ಟವೇ. ಇಂದಿನ ಕ್ಷಣಿಕ ಸುಖಕ್ಕಾಗಿ ವರ್ಷಗಟ್ಟಲೇ ನರಳುತ್ತಾ, ಕೊರಗುತ್ತಾ ಸಾಯುವ ಸ್ಥಿತಿ ಬಂದರೆ ಅದು ಬದುಕುವ ಪರಿಯಂತೂ ಖಂಡಿತಾ ಅಲ್ಲ. 
     ವಿವೇಚನಾ ಶಕ್ತಿಯನ್ನು ಸಮರ್ಪಕವಾಗಿ ಬಳಸಿದ್ದರೆ ನಮಗೆ ನೂರು ವರ್ಷಗಳ ಆಸುಪಾಸಿನವರೆಗೆ ಮಾತ್ರ ಜೀವಿಸಿರಬಲ್ಲೆವು ಎಂಬ ಅರಿವು ಜಾಗೃತವಾಗಿರುತ್ತಿತ್ತ್ತಲ್ಲದೆ, ನಾಲ್ಕು ಜನರಿಗೆ ಉಪಕಾರಿಯಾಗಿಯೂ ಇರುತ್ತಿದ್ದವು. ಈ ಭೂಮಿಯಲ್ಲಿ ಎಂತೆಂತಹ ರಾಜ, ಮಹಾರಾಜರುಗಳು, ಚಕ್ರವರ್ತಿಗಳು ಆಳಿಹೋಗಿದ್ದಾರೆ. ಇಡೀ ಜಗತ್ತನ್ನೇ ತಮ್ಮದಾಗಿಸಿಕೊಳ್ಳಬೇಕೆಂಬ ಹಂಬಲವಿದ್ದ ಅವರು ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಈಗಲೂ ನಮ್ಮ ಎಷ್ಟೋ ರಾಜಕಾರಣಿಗಳು, ಅಧಿಕಾರಿಗಳು, ಪುಂಡರು, ಗೂಂಡಾಗಳ ಹತ್ತಿರ ಅದೆಷ್ಟು ಕೋಟಿ ಕೋಟಿ ಬೆಲೆಬಾಳುವ ಹಣ, ಆಸ್ತಿಗಳಿವೆಯೋ ಗೊತ್ತಿಲ್ಲ. ಆದರೂ ಅವರುಗಳಿಗೆ ಅಜೀರ್ಣವಾಗಿಲ್ಲ. ಕೊನೆಯಲ್ಲಿ ಒಂದು ದಿನ ಒಂದು ಸಣ್ಣ ಗುಂಡುಸೂಜಿಯನ್ನೂ ತೆಗೆದುಕೊಂಡು ಹೋಗಲು ಅವರಿಗೆ ಸಾಧ್ಯವಿಲ್ಲ. ದೇವರು ಅದ್ಭುತ ಸಮಾನತಾವಾದಿ. ಹುಟ್ಟುವಾಗ ಏನನ್ನೂ ತೆಗೆದುಕೊಂಡು ಬರಲು ಅವಕಾಶ ಕೊಡುವುದಿಲ್ಲ. ಹಾಗೆಯೇ ಹೋಗುವಾಗಲೂ ಏನನ್ನೂ ಕೊಂಡುಹೋಗಲು ಬಿಡುವುದಿಲ್ಲ.
     ಇನ್ನೂ ಬೇಕು, ಬೇಕು ಎಂಬ ಅನಂತ ಅತೃಪ್ತತೆಯನ್ನು ಹೊಂದಿರುವ ಮನುಷ್ಯ ತಾನು ಈಗಲೇ ಸಾಯುವುದಿಲ್ಲ ಎಂದು ಭಾವಿಸಿ ಕೊನೆಯವರೆಗೂ ಬೇಕು ಅನ್ನುತ್ತಲೇ ಒಂದು ದಿನ ಕಂತೆ ಒಗೆಯುತ್ತಾನೆ. ಅವಧೂತರೊಬ್ಬರು ಭಕ್ತರ ಮನೆಯೊಂದಕ್ಕೆ ಬಂದಾಗ ಆ ಮನೆಯಲ್ಲಿದ್ದ 90ರ ಆಸುಪಾಸಿನ ವಯಸ್ಸಿನ ವೃದ್ಧೆಯೊಬ್ಬರು ಅವರಿಗೆ, "ಸ್ವಾಮಿ, ಜೀವನದಲ್ಲಿ ನಾನು ಅನುಭವಿಸಬೇಕಾದದ್ದೆಲ್ಲವನ್ನೂ ಅನುಭವಿಸಿಬಿಟ್ಟಿದ್ದೇನೆ. ಇನ್ನು ಏನೂ ಉಳಿದಿಲ್ಲ.  ನಿಮ್ಮ ಪಾದದ ಬಳಿಯಲ್ಲಿ ಪ್ರಾಣ ಬಿಡಲು ಅವಕಾಶವಾದರೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ" ಎಂದರಂತೆ. ಆ ಅವಧೂತರು, "ಅದಕ್ಕೇನಂತೆ, ಹಾಗೆಯೇ ಮಾಡಿ" ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತುಬಿಟ್ಟರಂತೆ. ಗಾಬರಿಯಾದ ಆ ವೃದ್ಧೆ, "ಈಗಲೇ ಅಲ್ಲ ಸ್ವಾಮೀಜಿ, ನನ್ನ ಮೊಮ್ಮಗಳ ಮದುವೆ ನೋಡಬೇಕು. ಅವಳ ಮಕ್ಕಳನ್ನು ಆಡಿಸಬೇಕು. ಈ ಆಸೆ ಪೂರೈಸಿಕೊಂಡು ಕಣ್ಣು ಮುಚ್ಚುತ್ತೇನೆ" ಎಂದಳಂತೆ! ಇಂತಹ ಉದಾಹರಣೆಗಳು ಸಾಕಷ್ಟು ಕಂಡುಬರುತ್ತವೆ. 
     ನಾನು ಇಂತಹ ದಿನ ಸಾಯುತ್ತೇನೆ ಎಂಬುದು ಗೊತ್ತಾದರೆ ಮನುಷ್ಯನ ನಡವಳಿಕೆಯೇ ಬದಲಾಗಿಬಿಡುತ್ತದೆ. ಈಗಿನ ಸ್ಥಿತಿ ಹೇಗಿದೆಯೆಂದರೆ ನಮ್ಮ ಎಲ್ಲಾ ಒಳ್ಳೆಯ ನಡವಳಿಕೆಗಳನ್ನು ಕೊನೆಗಾಲಕ್ಕೆ ಮೀಸಲಿರಿಸುತ್ತೇವೆ. ಅಂತಹ ಸಮಯ ಬಂದಾಗ ನೂರೆಂಟು ಕಾಯಿಲೆ, ಕಸಾಲೆಗಳಿಂದ ನರಳುತ್ತಾ, ಪರಾಧೀನರಾಗಿ ಮಾಡುವ ಮನಸ್ಸಿದ್ದರೂ ಮಾಡಲಾಗದ ಸ್ಥಿತಿಗೆ ಬಂದಿರುತ್ತೇವೆ. ಜನಿಸಿದ ನಂತರ ಉಸಿರಾಡಲು ಪ್ರಾರಂಭಿಸಿದ ನಂತರದಲ್ಲಿ ಆ ಉಸಿರು ನಿಲ್ಲುವವರೆಗೂ ಬೇಕು, ಬೇಕು ಎಂತಲೇ ಒದ್ದಾಡುತ್ತಿರುತ್ತೇವೆ. ಹೀಗಾಗಿ ನಾವೂ ನೆಮ್ಮದಿಯಿಂದ ಇರುವುದಿಲ್ಲ, ಇತರರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಪ್ರತಿಯೊಂದು ಸಲ ಉಸಿರಾಡಿದಾಗಲೂ, ಉಸಿರು ನಿಲ್ಲುವ ಸಮಯಕ್ಕೆ ಹತ್ತಿರ ಹೋಗುತ್ತಿರುತ್ತೇವೆ ಎಂಬ ಪರಿಜ್ಞಾನ ಬಂದರೆ, ಇರುವುದರಲ್ಲಿ ತೃಪ್ತಿ ಪಟ್ಟುಕೊಳ್ಳುವ ಮನೋಭಾವ ಬಂದರೆ ಸಂತೋಷ ನಮ್ಮದಾಗುತ್ತದೆ, ಇನ್ನೊಬ್ಬರಿಗೂ ಸಂತೋಷ ಹಂಚಬಲ್ಲವರಾಗುತ್ತೇವೆ. ಅಶ್ವತ್ಥಾಮನ್ ನಾಟಕದ 'ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!' ಎಂಬ ಸಾಲಿನ ನಂತರದಲ್ಲಿ ಬರುವ ಈ ಸಾಲು ಸಹ ಅರ್ಥಗರ್ಭಿತವಾಗಿದೆ: 'ಬಂದುದನೆ ಕೊಂಡುಂಡು ತಾಳ್ದವನೆ ಜಾಣನ್!'
-ಕ.ವೆಂ. ನಾಗರಾಜ್.


ಮಂಗಳವಾರ, ಜನವರಿ 2, 2018

ಹೊಟ್ಟೆಕಿಚ್ಚು


     ಹೊಟ್ಟೆ ಹಸಿದಿರುವಾಗ ನಮಗೆ ಆಹಾರ ಬೇಕೆನಿಸುತ್ತದೆ. ಅದನ್ನು ಬಿಟ್ಟು ಬೇರೆ ಯಾವುದೇ ಸಂಗತಿ, ಅದು ನಮಗೆ ಎಷ್ಟೇ ಪ್ರಿಯವಾದುದಾಗಿದ್ದರೂ, ನಮಗೆ ಬೇಕು ಅನ್ನಿಸುವುದಿಲ್ಲ. ಇದೇ ಹಸಿವಿನ ಮಹಿಮೆ. ಒಬ್ಬ ಹಸಿದಿರುವವನ ಮುಂದೆ ಒಣ ಉಪದೇಶ ವ್ಯರ್ಥ. ಬಲವಂತವಾಗಿ ಅವನಿಗೆ, ಅದು ಎಷ್ಟೇ ಉನ್ನತವಾದ ವಿಚಾರವಾಗಿದ್ದರೂ, ಹೇಳತೊಡಗಿದರೆ ಹೇಳುವವನಿಗೆ ಒದೆ ಬಿದ್ದಾವು ಅಥವ ಹಸಿದವನು ಅಲ್ಲಿಂದ ಕಂಬಿ ಕಿತ್ತಾನು! ಆದರೆ ಒಮ್ಮೆ ಹೊಟ್ಟೆ ತುಂಬಿತೋ, ಮುಗಿಯಿತು! ನಮಗೆ ಬೇಕಾದುದು, ಬೇಡವಾದುದೂ ಎಲ್ಲವೂ ನಮಗೇ ಬೇಕು ಎಂದು ಬಯಸುತ್ತೇವೆ. ಇಷ್ಟೇ ಆದರೆ ಏನೂ ಸಮಸ್ಯೆಯಿಲ್ಲ. ನಮಗೆ ಬೇಕು, ಆದರೆ ಅದು ಇನ್ನೊಬ್ಬರಿಗೆ ಬೇಡ ಎನ್ನುವ ಭಾವ ಉಂಟಾದರೆ? ಅದೇ ಹೊಟ್ಟೆಕಿಚ್ಚು! ತಿಂದ ಆಹಾರವನ್ನು ಜೀರ್ಣಿಸುವ ಕಿಚ್ಚು ಒಂದಿದೆ, ಅದನ್ನು ವೈಶ್ವಾನರ ಅನ್ನುತ್ತಾರೆ. ಅದು ಪಚನಕ್ರಿಯೆಗೆ, ಆ ಮೂಲಕ ನಮ್ಮ ಆರೋಗ್ಯಕ್ಕೆ ಹಿತಕಾರಿ. ಆದರೆ ಹೊಟ್ಟೆಗೇ ಕಿಚ್ಚು ಬಿದ್ದರೆ, ಆ ಕಿಚ್ಚು ನಮ್ಮನ್ನಷ್ಟೇ ಅಲ್ಲ, ಇತರರನ್ನೂ ಸುಡುತ್ತದೆ. ಆ ಹೊಟ್ಟೆಕಿಚ್ಚಿಗೆ ಇನ್ನೊಂದು ಹೆಸರೂ ಇದೆ, ಮತ್ಸರ! ಡಿವಿಜಿಯವರು "ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರರೊಳ್| ಹೊಟ್ಟೆ ತುಂಬಿದ ತೋಳ ಮಲಗೀತು; ನೀಂ ಪೆರರ ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ||" ಎಂದಿರುವುದು ಈ ಕಾರಣಕ್ಕಾಗಿಯೇ ಆಗಿದೆ. 
     ನನ್ನಲ್ಲಿ ಇರದಿರುವುದು ಅವನಲ್ಲಿ ಇರಬಾರದು; ನನಗಿಂತ ಹೆಚ್ಚು- ಅದು ಶ್ರೀಮಂತಿಕೆಯಿರಬಹುದು, ಅಂತಸ್ತಿರಬಹುದು, ಅಧಿಕಾರವಿರಬಹುದು, ಹೆಸರು ಇರಬಹುದು- ಅವನಲ್ಲಿ ಇರಲೇಬಾರದು ಎಂದು ಬಯಸುವಂತೆ ಮಾಡುವುದೇ ಈ ಹೊಟ್ಟೆಕಿಚ್ಚು! ನಾನು ಎಷ್ಟೋ ವಿಷಯಗಳಲ್ಲಿ ಅವನಿಗಿಂತ ಮುಂದೆ ಇರಬಹುದು, ಆದರೆ ಯಾವುದಾದರೂ ಒಂದು ವಿಷಯದಲ್ಲಿ ಅವನು ಮುಂದುವರೆದರೆ ನನಗೆ ಹೊಟ್ಟೆ ಉರಿಯುವಂತೆ ಅನುಭವ ಉಂಟುಮಾಡುವುದೇ ಈ ಹೊಟ್ಟೆಕಿಚ್ಚು. ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಎದುರಾಳಿಯ ಎರಡು ಕಣ್ಣೂ ಹೋಗಬೇಕು ಎಂದು ಬಯಸುವುದನ್ನು ಕಾಣುತ್ತಿರುತ್ತೇವೆ. ಎದುರಾಳಿಯ ಸರ್ವನಾಶವಾಗಲಿ ಎಂದು ನಾನಾ ವಿಧದ ತಂತ್ರ ಕುತಂತ್ರಗಳನ್ನು ಮಾಡುವವರಿಗೇನೂ ಕಡಿಮೆಯಿಲ್ಲ. ಅವರು ಏಕೆ ಹಾಳಾಗಬೇಕು? ಅವರು ಏಕೆ ತೊಂದರೆಗೆ ಒಳಗಾಗಬೇಕು? ಅದರಿಂದ ಇವರಿಗೆ ಏನು ಲಾಭ? ಏನೂ ಲಾಭವಿಲ್ಲ. ಅವರ ಕಷ್ಟ-ನಷ್ಟಗಳನ್ನು ಕಂಡು ಅನುಭವಿಸುವ ವಿಕೃತ ಆನಂದವೇ ಇವರಿಗಾಗುವ ಲಾಭ. ಇದು ವೈಯಕ್ತಿಕ ಅಧಃಪತನಕ್ಕೆ ಒಯ್ಯುವ ಮಾರ್ಗವಲ್ಲದೆ ಮತ್ತೇನು? ಮನುಷ್ಯನ ಅನೇಕ ಗುಣವಿಶೇಷಗಳಲ್ಲಿ ಕೇವಲ ಕೆಡುಕನ್ನೇ ತರುವ ಏಕೈಕ ಗುಣವೆಂದರೆ ಅದು ಈ ಹೊಟ್ಟೆಕಿಚ್ಚು ಮಾತ್ರ.
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ|| 
     ಕೋಪಿಷ್ಠರೊಡನೆ ಏಗಬಹುದು, ಮೂರ್ಖರೊಡನೆ ಸ್ನೇಹ ಮಾಡಬಹುದು, ಸಂಕೋಚ ಸ್ವಭಾವದವರೊಡನೆ ಮೌನವಾಗಿರಬಹುದು, ಆದರೆ ಮತ್ಸರಿಸುವವರ ಜೊತೆ ಬಾಂಧವ್ಯ ಹೊಂದಿರುವುದು, ಸರಸ ಸಂಭಾಷಣೆಗಳನ್ನು ಮಾಡುವುದೂ ಸಹ ಅಪಾಯಕಾರಿಯೇ ಎಂಬುದು ಅನುಭವಿಗಳ ಮಾತು. ಏಕೆಂದರೆ ಮೇಲೆ ಕಾಣುವಂತೆ, ತೋರಿಸಿಕೊಳ್ಳುವಂತೆ ಅವರು ಇರುವುದೇ ಇಲ್ಲ. ಒಳಗಿರುವ ವಿಷಸರ್ಪ ಯಾವಾಗ ಕಚ್ಚಲಿ ಎಂದು ಒಳಗೊಳಗೇ ಬುಸುಗುಡುತ್ತಿರುತ್ತದೆ. ಮತ್ಸರದಲ್ಲಿ ಪ್ರೀತಿ ಇರುತ್ತದೆ, ಆದರೆ ಅದು ಅವರಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರೀತಿ ನಿಜವಾಗಿ ಕುರುಡಲ್ಲ, ಮತ್ಸರ ಕುರುಡಾಗಿರುತ್ತದೆ. ಅದು ವಾಸ್ತವತೆಯನ್ನು ಕಾಣಲು, ಅರಿಯಲು ಇಚ್ಚಿಸುವುದೇ ಇಲ್ಲ. ಇತರರ ಕೆಡುಕಿಗಾಗಿ ಹಂಬಲಿಸುವ ಅದು ಮುಂದೊಮ್ಮೆ ತಿರುಗುಬಾಣವಾಗಿ ಬರುತ್ತದೆಂಬ ಅರಿವು ಅದಕ್ಕಿರುವುದಿಲ್ಲ.
     ಶ್ರೀರಾಮ ರಾಜನಾಗಿಬಿಡುತ್ತಾನೆ, ಭರತನಿಗೆ ಅವಕಾಶ ತಪ್ಪುತ್ತದೆ ಎಂಬ ಕಾರಣಕ್ಕಾಗಿ ಕೈಕೇಯಿಯಲ್ಲಿ ಉಂಟಾದ ಹೊಟ್ಟೆಕಿಚ್ಚು ರಾಮಾಯಣಕ್ಕೆ ಕಾರಣವಾಯಿತು. ಪಾಂಡವರು ರಾಜ್ಯ-ಕೋಶಗಳನ್ನು ಅನುಭವಿಸಬಾರದು, ಅವರಿಗೆ ಸೂಜಿಮೊನೆಯಷ್ಟೂ ಭೂಮಿ ಸಿಗಬಾರದು ಎಂಬ ದುರ್ಯೋಧನನ ಮತ್ಸರ ಮಹಾಭಾರತಕ್ಕೆ ನಾಂದಿಯಾಯಿತು. ಪೃಥ್ವೀರಾಜ ಜಯಚಂದ್ರನ ಮೇಲಿನ ಮತ್ಸರದಿಂದ ಮಹಮದ್ ಘೋರಿಗೆ ಸಹಾಯ ಮಾಡಿದ್ದರಿಂದ ಭಾರತ ಅನೇಕ ಶತಮಾನಗಳ ಕಾಲ ಮುಸ್ಲಿಮ್ ಆಕ್ರಮಣಕಾರರ ದಾಸ್ಯಕ್ಕೆ ಒಳಗಾಗಬೇಕಾಯಿತು. ಇಂದಿನ ನಿಜಜೀವನದ ರಾಮಾಯಣ, ಮಹಾಭಾರತದ ಕಥೆಗಳಿಗೂ ಮತ್ಸರವೇ ಮೂಲಕಾರಣವಾಗಿದೆ. ಇಂದು ಪ್ರಸಾರವಾಗುತ್ತಿರುವ ಅನೇಕ ಟಿವಿ ಧಾರಾವಾಹಿಗಳಲ್ಲಿ ಮತ್ಸರವನ್ನು ವೈಭವೀಕರಿಸಿ ಇತರರನ್ನು ಹೇಗೆ ಹಾಳು ಮಾಡಬೇಕು, ಹೇಗೆ ತುಳಿಯಬೇಕು ಎಂಬುದನ್ನು ತೋರಿಸುತ್ತಾ ಋಣಾತ್ಮಕ ಅಂಶಗಳಿಗೆ ನೀರೆರೆಯುತ್ತಿರುವುದು ವಿಷಾದಕರ. ಯಾವುದೇ ವ್ಯಕ್ತಿಯ ಹತ್ಯೆಯಂತಹ ಭೀಕರ ಕೃತ್ಯಗಳಲ್ಲೂ ಜಾತಿ, ವಿಚಾರ, ರಾಜಕೀಯ ಪಕ್ಷ ಇತ್ಯಾದಿ ಪ್ರೇರಿತ ಮತ್ಸರಗಳೇ ಪ್ರಧಾನವಾಗಿ ನ್ಯಾಯ, ಮಾನವೀಯ ಅಂಶಗಳು ಮೂಲೆಗುಂಪಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮಹದಾಯಿ ನೀರಿನ ವಿವಾದದ ವಿಷಯವೂ ಸಹ ರಾಜಕೀಯ ಪಕ್ಷಗಳ ಲಾಭದ ಸಲುವಾಗಿ ಬಳಕೆಯಾಗುತ್ತಿದೆ. ಪರ-ವಿರೋಧದ ಹೋರಾಟಗಳಲ್ಲೂ ಸಹ ನ್ಯಾಯಕ್ಕಿಂತ ಹೆಚ್ಚಾಗಿ ಯಾರಿಗೋ ನಷ್ಟ ಉಂಟುಮಾಡುವುದು ಅಥವ ಲಾಭ ಗಳಿಸುವುದೇ ಪ್ರಧಾನ ಅಂಶವಾಗಿದೆ. ಇಂತಹ ವಿಷಯಗಳಲ್ಲಾದರೂ ಪಕ್ಷಾತೀತವಾಗಿ ವರ್ತಿಸುವ ಪ್ರಜ್ಞೆ ಹೋರಾಟಗಾರರಲ್ಲೂ ಕಾಣದಿರುವುದು ಸಮಸ್ಯೆಯ ಇತ್ಯರ್ಥಕ್ಕೆ ಪ್ರಮುಖ ಅಡ್ಡಿಯಾಗಿದೆ. ಪರಸ್ಪರರ ಮತ್ಸರ ವಿವೇಕವನ್ನು ನುಂಗಿಬಿಟ್ಟಿದೆ.
     ತನ್ನ ಪ್ರಾಮುಖ್ಯತೆಗೆ ಧಕ್ಕೆಯಾಗುವ, ನಂಬಿಕೆ ದ್ರೋಹವಾಗುವ ಕಲ್ಪನೆಯೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಅತ್ತೆ, ಸೊಸೆಯರ ನಡುವೆ ವೈಮನಸ್ಯಕ್ಕೆ, ತಮ್ಮನೋ, ತಂಗಿಯೋ ಜನಿಸಿದಾಗ ಮೊದಲ ಮಗುವಿಗೆ ಅದರ ಮೇಲಿನ ಮುನಿಸಿಗೆ, ಗಂಡ-ಹೆಂಡತಿ ಅಥವ ಪ್ರೇಮಿಗಳ ನಡುವಣ ಕಲಹಗಳಿಗೆ ಮತ್ಸರ ಕಾರಣ. ಮತ್ಸರ ಒಮ್ಮೆ ಆವರಿಸಿತೆಂದರೆ ಸದ್ಗುಣಗಳಿಗೆ ಗ್ರಹಣ ಹಿಡಿಯುತ್ತದೆ, ಎಲ್ಲವೂ ತಪ್ಪಾಗಿ ಕಾಣುತ್ತದೆ, ಇನ್ನೊಬ್ಬರನ್ನು ಕೀಳಾಗಿ ಕಾಣುವಂತೆ ಮಾಡುತ್ತದೆ. ನೋಡುವ ನೋಟಗಳು ಬದಲಾಗುತ್ತವೆ. ಪರಸ್ಪರರಲ್ಲಿ ದ್ವೇಷ ಭುಗಿಲೇಳುತ್ತದೆ. ಕಾಳ ಮತ್ಸರದ ಚೇಳು ಕುಟುಕಿಬಿಟ್ಟರೆ ವಿಷ ಬ್ರಹ್ಮರಂಧ್ರದವರೆಗೂ ಏರಿಬಿಡುತ್ತದೆ.
     ಆಳವಾಗಿ ಚಿಂತಿಸಿದರೆ ಅರ್ಥವಾಗುತ್ತದೆ. ಹೊಟ್ಟೆಕಿಚ್ಚು ಕೀಳರಿಮೆಯಿಂದ ನರಳುವವರ ಕಾಯಿಲೆಯೇ ಸರಿ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಹುಡುಕುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಬೆಳವಣಿಗೆ, ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಹೊಟ್ಟೆಕಿಚ್ಚು ನಮ್ಮ ಬೆಳವಣಿಗೆಯನ್ನು ತಿನ್ನುತ್ತದೆ. ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ.
     ಒಟ್ಟಾರೆಯಾಗಿ ಹೇಳಬೇಕೆಂದರೆ ಹೊಟ್ಟೆಕಿಚ್ಚು ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ. ನಮ್ಮ ಶಕ್ತಿಯನ್ನು ಇತರರಿಗೆ ಕೇಡು ಮಾಡುವ ಸಲುವಾಗಿ ಬಳಸದೆ, ಬೇರೆ ಒಳ್ಳೆಯ ಸಂಗತಿಗಳಿಗೆ ಬಳಸಿದರೆ ನಮಗೆ ನಾವೇ ಉಪಕಾರ ಮಾಡಿಕೊಂಡಂತೆ ಆಗುತ್ತದೆ. ಈ ವೇದಮಂತ್ರ ನಮ್ಮನ್ನು ಎಚ್ಚರಿಸಲಿ: ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್.೯.೬೩.೪). ಅರ್ಥ: ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ. 
-ಕ.ವೆಂ.ನಾಗರಾಜ್.

ಸೋಮವಾರ, ಡಿಸೆಂಬರ್ 18, 2017

ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ಸಲ್ಲದು! (No importance to the caste by birth)


     ಪುನರ್ಜನ್ಮ ನಂಬುವವರಿಗೆ ಒಂದು ಪ್ರಶ್ನೆ: "ನೀವು ಹಿಂದಿನ ಜನ್ಮದಲ್ಲಿ ಮನುಷ್ಯರಾಗಿಯೇ ಹುಟ್ಟಿದ್ದಿರಾ? ಮನುಷ್ಯರಾಗಿಯೇ ಹುಟ್ಟಿದ್ದಿದ್ದರೂ ಈಗಿನ ಜಾತಿಯಲ್ಲೇ ಹುಟ್ಟಿದ್ದಿರಾ?" ಈ ಪ್ರಶ್ನೆಗೆ ಯಾರೂ ಉತ್ತರ ಕೊಡಲಾರರು. ಏಕೆಂದರೆ ಹಿಂದೆ ಏನಾಗಿ ಹುಟ್ಟಿದ್ದೆವೋ, ಎಲ್ಲಿ ಹುಟ್ಟಿದ್ದೆವೋ, ನಮ್ಮ ಅಪ್ಪ-ಅಮ್ಮ ಯಾರಾಗಿದ್ದರೋ ಯಾರಿಗೆ ಗೊತ್ತು? ಮುಂದೆ ಸತ್ತ ಮೇಲೆ ಮತ್ತೆ ಏನಾಗಿ ಹುಟ್ಟುತ್ತೇವೋ, ಯಾವ ಜಾತಿಯಲ್ಲಿ ಹುಟ್ಟುತ್ತೇವೋ ಅದೂ ಸಹ ಗೊತ್ತಿಲ್ಲ. ಏಕೆಂದರೆ ಸತ್ತವರು ಯಾರೂ ತಾವು ಎಲ್ಲಿದ್ದೇವೆ, ಹೇಗಿದ್ದೇವೆ ಎಂದು ತಮ್ಮ ವಿಳಾಸ ತಿಳಿಸಿ ಯಾರಿಗೂ ಏನೂ ಹೇಳುವುದೇ ಇಲ್ಲ. ಅಷ್ಟಿದ್ದೂ ಜಾತಿ, ಜಾತಿ ಎಂದು ಸಾಯುವ, ಮೇಲು-ಕೀಳು ಎಂದು ಹೊಡೆದಾಡುವ ಜನರೇ ಜಾಸ್ತಿ. ಪುನರ್ಜನ್ಮ ನಂಬದಿದ್ದವರಿಗೂ ಒಂದು ಪ್ರಶ್ನೆ: "ನೀವು ಹಿಂದೆ ಹುಟ್ಟಿರಲಿಲ್ಲ ಮತ್ತು ಮುಂದೆ ಹುಟ್ಟುವುದಿಲ್ಲ ಎಂದಾದರೆ ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದೇವೆ ಎಂದು ಬೊಬ್ಬೆ ಹೊಡೆಯುವುದಾದರೂ ಏಕೆ? ಈಗ ಏನಾಗಿದ್ದೇವೆ ಅದನ್ನು ಮಾತ್ರ ಗಣನೆಗೆ ತೆಗೆದುಕೊಂಡು ವ್ಯವಹರಿಸಬೇಕಲ್ಲವೇ?" ಹಿಂದೆ ಯಾರೋ ಯಾರಿಗೋ ಅನ್ಯಾಯ ಮಾಡಿದ್ದರು ಎಂದು ಈಗ ಮತ್ಯಾರೋ ಮತ್ಯಾರನ್ನೋ ಟೀಕಿಸಿದರೆ, ಹೊಣೆ ಮಾಡಿದರೆ ಅದಕ್ಕೆ ಅರ್ಥವಿದೆಯೇ? ಬ್ರಾಹ್ಮಣ ಬ್ರಾಹ್ಮಣನಾಗಿಯೇ ಹುಟ್ಟುತ್ತಾನೆ, ಜೈನ ಜೈನನಾಗಿಯೇ ಹುಟ್ಟುತ್ತಾನೆ, ಮುಸ್ಲಿಮ ಮುಸ್ಲಿಮನಾಗಿಯೇ ಹುಟ್ಟುತ್ತಾನೆ, ಯಾವುದೇ ಜಾತಿಯವರು ಅದೇ ಜಾತಿಯಲ್ಲೇ ಹುಟ್ಟುತ್ತಾರೆ ಎಂದು ಯಾರಾದರೂ ಖಚಿತಪಡಿಸಿದರೆ, ಪ್ರಮಾಣ ಪಡಿಸಿದರೆ ಜಾತಿ ಲೆಕ್ಕಾಚಾರಗಳನ್ನು ಒಪ್ಪಿಕೊಳ್ಳೋಣ. ಇಲ್ಲವೆಂದರೆ ರಾಜಕೀಯದ ಕಾರಣಕ್ಕಾಗಿ, ಕ್ಷುಲ್ಲಕ ಸ್ವಾರ್ಥಗಳಿಗಾಗಿ ಹುಟ್ಟಿನ ಜಾತಿಗಳನ್ನು ಉಳಿಸಿಕೊಂಡು ಬಂದಿದ್ದೇವೆಂದು ನಾಚಿಕೆಯಿಲ್ಲದೆ ಒಪ್ಪಿಕೊಂಡುಬಿಡೋಣ.
     ಈ ಜಾತಿಗಳು ದೇವರ ಸೃಷ್ಟಿಯಂತೂ ಅಲ್ಲ. ಮಾನವಸೃಷ್ಟಿ ಎಂಬುದು ನಿರ್ವಿವಾದ. ಜಗತ್ತಿನಲ್ಲಿ ವ್ಯಾಪಕವಾಗಿರುವ ಕ್ರಿಶ್ಚಿಯನ್ ಧರ್ಮ 2000 ವರ್ಷಗಳಿಗೂ ಹಿಂದೆ ಇರಲೇ ಇಲ್ಲ. ಇಡೀ ಪ್ರಪಂಚವನ್ನೇ ಇಸ್ಲಾಮೀಕರಣ ಮಾಡಬೇಕು ಎಂದು ಕಟಿಬದ್ಧರಾಗಿರುವ ಜನರು ಇರುವ, ಭಯೋತ್ಪಾದನೆಗೂ ಕಾರಣವಾಗಿರುವ ಇಸ್ಲಾಮ್ 1500 ವರ್ಷಗಳಿಗೂ ಹಿಂದೆ ಯಾರಿಗೂ ಗೊತ್ತೇ ಇರಲಿಲ್ಲ. ಈ ಮಾನವಬ್ರಹ್ಮ ಸಾಮಾನ್ಯನಲ್ಲ. ಅವನು ಕೇವಲ ಜಾತಿಗಳನ್ನು ಮಾತ್ರ ಅಲ್ಲ, ದೇವರುಗಳನ್ನೂ ಸೃಷ್ಟಿ ಮಾಡಿಬಿಟ್ಟಿದ್ದಾನೆ. ಹೊಸ ಹೊಸ ಜಾತಿಗಳು, ಹೊಸ ಹೊಸ ದೇವರುಗಳನ್ನು ಸೃಷ್ಟಿಸುತ್ತಲೇ ಇದ್ದಾನೆ. ಜಾತಿ, ಜಾತಿಗಳಿಗೂ ಬೇರೆ ಬೇರೆ ದೇವರುಗಳು! ಕ್ರಿಶ್ಚಿಯನರ ದೇವರು ಏಸು, ಮುಸ್ಲಿಮರ ದೇವರು ಅಲ್ಲಾಹು, ಹಿಂದೂಗಳ ದೇವರುಗಳಂತೂ ಲೆಕ್ಕವೇ ಇಲ್ಲದಷ್ಟು ಇದ್ದಾರೆ. ದೇವರು ಒಬ್ಬನೇ ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಆ ದೇವರು ನಮ್ಮ ದೇವರು ಮಾತ್ರ ಎಂದು ಬಡಿದಾಡುತ್ತೇವೆ. ನಮ್ಮ ದೇವರನ್ನು ಒಪ್ಪದಿದ್ದವರು ಕಾಫಿರರು, ಬದುಕಲು ಅರ್ಹರಲ್ಲ ಎಂದು ಮುಸ್ಲಿಮರು ಹೇಳುತ್ತಾರೆ. ಏಸುವನ್ನು ಒಪ್ಪದಿದ್ದವರು ನರಕಕ್ಕೆ ಹೋಗುತ್ತಾರೆ ಎಂದು ಕ್ರಿಶ್ಚಿಯನರು ಹೇಳುತ್ತಾರೆ. ಹಿಂದೂಗಳಂತೂ ತಮ್ಮ ದೇವರನ್ನು ನಂಬಿದರೆ ಕೈಲಾಸಕ್ಕೋ, ವೈಕುಂಠಕ್ಕೋ, ಸ್ವರ್ಗಕ್ಕೋ ಹೋಗುತ್ತೇವೆಂದು ನಂಬುತ್ತಾರೆ. ಈಗ ಪ್ರಚಲಿತವಾಗಿರುವ ಮನುಷ್ಯರಲ್ಲಿನ ಹುಟ್ಟಿನ ಜಾತಿಗಳು ಮಾನವಸೃಷ್ಟಿ ಅಲ್ಲ ಎಂದು ಯಾರಾದರೂ ಆಧಾರಪೂರ್ವಕವಾಗಿ ಸಾಬೀತುಪಡಿಸಿದರೆ ಜಾತಿಗಳನ್ನು ಒಪ್ಪಿಕೊಳ್ಳೋಣ. ಇಲ್ಲದಿದ್ದರೆ ನಮ್ಮ ವೈಚಾರಿಕತೆಗೆ, ವಿವೇಚನಾಶಕ್ತಿಗೆ ಸ್ವಲ್ಪ ಕೆಲಸ ಕೊಡೋಣ. ಸರಿ ಯಾವುದು, ತಪ್ಪು ಯಾವುದು ಎಂದು ತರ್ಕಿಸೋಣ. 
     ಮಾನವನ ಉಗಮವಾದ ಅದೆಷ್ಟೋ ಸಹಸ್ರ ಸಹಸ್ರ ವರ್ಷಗಳ ನಂತರದಲ್ಲಿ ಈ ಜಾತಿಯ ಪಿಡುಗು ಮಾನವಕುಲಕ್ಕೆ ಮಾರಕವಾಗಿ ಕಾಡುತ್ತಿದೆ. ಸುಮಾರು ಐದು ಸಹಸ್ರ ವರ್ಷಗಳ ಹಿಂದಿನ ವೇದ ಸಾಹಿತ್ಯ ಅತ್ಯಂತ ಪುರಾತನವಾದ ಲಭ್ಯ ಸಾಹಿತ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೂಲ ವೇದಮಂತ್ರಗಳು ಸಕಲ ಚರಾಚರ ಜೀವಿಗಳೆಲ್ಲರ ಶಾಂತಿ, ನೆಮ್ಮದಿ ಬಯಸುವ ಸದಾಶಯಗಳಿಂದ ಕೂಡಿವೆ. ಅದರಲ್ಲಿನ ಯಾವುದೇ ವಿಷಯ ವಿರೋಧಾಭಾಸಗಳಿಂದ ಕೂಡಿಲ್ಲವೆಂಬುದು ವಿಶೇಷ. ವೇದೋತ್ತರ ಸಾಹಿತ್ಯಗಳೆಂದು ಹೇಳುವ ಪುರಾಣಗಳು ಇತ್ಯಾದಿಗಳಲ್ಲಿ ವಿರೋಧಾಭಾಸದ ಸಂಗತಿಗಳು, ವಿವಾದದ ವಿಚಾರಗಳು ಇರಬಹುದಾದರೂ, ವಿವಾದ, ಸಂಶಯ ಬಂದ ಸಂದರ್ಭಗಳಲ್ಲಿ ಮೂಲವೇದಮಂತ್ರಗಳು ಹೇಳುವ ಅಂಶವೇ ಪರಮಪ್ರಮಾಣವಾಗಿವೆ. ವೇದಗಳ ಹೆಸರಿನಲ್ಲಿ ಇಂದು ಆಚರಣೆಯಲ್ಲಿರುವ ಅನೇಕ ಸಂಪ್ರದಾಯಗಳು ಅವೈದಿಕವಾಗಿವೆ ಎಂದರೆ ಕಹಿ ಅನ್ನಿಸಿದರೂ ಅದು ಸತ್ಯದ ಮಾತಾಗಿದೆ. ನೈಜ ವೇದಾಧ್ಯಾಯಿಗಳು, ವೇದಪಂಡಿತರುಗಳು ಪ್ರತಿಷ್ಠೆಯನ್ನು ಬದಿಗಿಟ್ಟು ಸತ್ಯಶೋಧ ಮತ್ತು ಸತ್ಯಪ್ರಚಾರಕ್ಕೆ ತೊಡಗುವುದು ಒಳ್ಳೆಯದು. ವೇದಕಾಲದಲ್ಲಿ ಪ್ರಚಲಿತವಿದ್ದ ವರ್ಣಾಶ್ರಮ ಪದ್ಧತಿಯ ಬಗೆಗೂ ಸಂಕ್ಷಿಪ್ತವಾಗಿ ಗಮನಿಸೋಣ.
     ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳೋಣ. ಇಂದಿನ ಜಾತಿವ್ಯವಸ್ಥೆಗೂ ಅಂದಿನ ವರ್ಣಾಶ್ರಮ ಪದ್ಧತಿಗೂ ಸಂಬಂಧವಿಲ್ಲ. ಈಗ ಹುಟ್ಟಿನಿಂದ ಬರುವುದೆಂದು ಭಾವಿಸಲಾಗಿರುವ ಜಾತಿ ಪದ್ಧತಿಯು, ಸ್ವಾರ್ಥಿಗಳು ಮೇಲು-ಕೀಳು ಎಂಬ ನೀಚ ಭಾವನೆಗಳಿಗೆ ಅವಕಾಶ ಕೊಡುವುದಾಗಿದೆ ಮತ್ತು ವರ್ಣಾಶ್ರಮ ವ್ಯವಸ್ಥೆಗೆ ಸುದೀರ್ಘ ಕಾಲಾನಂತರದಲ್ಲಿ ಹಚ್ಚಿರುವ ಕಳಂಕವಾಗಿದೆ, ವಿರೂಪಗೊಳಿಸಿರುವುದಾಗಿದೆ. ಸರಿಯಾಗಿ ವಿವೇಚಿಸಿದರೆ, ಕಾಣುವ ದೃಷ್ಟಿಯಿದ್ದರೆ ವರ್ಣಾಶ್ರಮದಲ್ಲಿದ್ದ ಶ್ರೇಷ್ಠತೆಯನ್ನು ಗುರುತಿಸಬಹುದು.  ವರ್ಣಾಶ್ರಮ ಪದ್ಧತಿಯಲ್ಲಿ ನಾಲ್ಕು ವರ್ಣಗಳನ್ನು ಗುರುತಿಸಿದ್ದಾರೆ - ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಈ ಪದಗಳನ್ನು ಒಪ್ಪಿಕೊಳ್ಳುವುದು ಬೇಡವೆಂದಾದರೆ ಬೌದ್ಧಿಕ ಪರಿಶ್ರಮ, ಬಾಹುಬಲ ಆಧಾರಿತ ಕಾರ್ಯ, ವ್ಯಾಪಾರೋದ್ಯಮ ಮತ್ತು ಕೃಷಿ ಹಾಗೂ ಶಾರೀರಿಕ ಪರಿಶ್ರಮದ ವೃತ್ತಿಗಳು ಎಂದಿಟ್ಟುಕೊಳ್ಳಬಹುದು. ವರ್ಣ ಎಂಬ ಪದದ ಅರ್ಥ 'ಆರಿಸಿಕೊಳ್ಳುವ ತತ್ವ' ಎಂದು. ಹುಟ್ಟಿನ ಜಾತಿಗೂ ವರ್ಣಕ್ಕೂ ಸಂಬಂಧವಿಲ್ಲ. ಅವರವರ ವ್ಯಕ್ತಿಗತ ಸಾಮರ್ಥ್ಯ, ಅಭಿರುಚಿ, ಗುಣ, ಸ್ವಭಾವಗಳಿಗೆ ತಕ್ಕಂತೆ ಆರಿಸಿಕೊಳ್ಳುವ ವೃತ್ತಿಯೇ ವರ್ಣ. ಇದರಲ್ಲಿ ಯಾವುದೂ ಕೀಳಲ್ಲ, ಯಾವುದೂ ಮೇಲಲ್ಲ. ಎಲ್ಲರ ಅಭಿರುಚಿ, ಸಾಮರ್ಥ್ಯಗಳೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಹೀಗಾಗಿ ಒಂದೇ ಕುಟುಂಬದಲ್ಲಿ ನಾಲ್ಕು ವರ್ಣಗಳವರೂ ಇರುವ ಸಾಧ್ಯತೆಯಿದೆ. ಒಬ್ಬ ಬ್ರಾಹ್ಮಣನ ಮಗ ಬ್ರಾಹ್ಮಣನೂ ಆಗಬಹುದು, ಆಗದೆಯೂ ಇರಬಹುದು; ಕ್ಷತ್ರಿಯನೂ ಆಗಬಹುದು, ಕಾರ್ಮಿಕನೂ ಆಗಬಹುದು. ಹಾಗೆಯೇ ಒಬ್ಬ ಕ್ಷತ್ರಿಯ, ವೈಶ್ಯ, ಶೂದ್ರರು ಬ್ರಾಹ್ಮಣರಾಗಲೂ ಅಭ್ಯಂತರವಿರಲಿಲ್ಲ. ಇಲ್ಲಿ ಅಭಿರುಚಿ, ಗುಣ, ಸ್ವಭಾವ ಮತ್ತು ಸಾಮರ್ಥ್ಯಕ್ಕಷ್ಟೇ ಪ್ರಾಧಾನ್ಯತೆ. 
     ಜಗತ್ತಿನ ಯಾವುದೇ ದೇಶವಿರಲಿ, ಆಸ್ತಿಕ ದೇಶವಾಗಿರಲಿ, ನಾಸ್ತಿಕ ದೇಶವಾಗಿರಲಿ, ನಾಲ್ಕು ಬಗೆಯ ಜನರು ಇದ್ದೇ ಇರುತ್ತಾರೆ - ಬೌದ್ಧಿಕ ಪ್ರಾಧಾನ್ಯರು, ಸೈನಿಕರು ಮುಂತಾದ ಶಕ್ತಿ ಪ್ರಾಧಾನ್ಯರು, ವ್ಯಾಪಾರಿಗಳು ಮತ್ತು ಶ್ರಮಿಕರು! ಯಾರು ಒಪ್ಪಲಿ, ಬಿಡಲಿ ಈ ಸಹಜ ವಿಂಗಡಣೆ ಇದ್ದೇ ಇರುತ್ತದೆ. ಇದನ್ನು ವಿರೋಧಿಸಿ ಎಲ್ಲರೂ ಬುದ್ಧಿಜೀವಿಗಳಾಗಲಿ, ಎಲ್ಲರೂ ಸೈನಿಕರಾಗಲಿ, ಎಲ್ಲರೂ ವ್ಯಾಪಾರಿಗಳಾಗಲಿ ಅಥವ ಎಲ್ಲರೂ ಕಾರ್ಮಿಕರಾಗಲಿ, ಎಲ್ಲರೂ ಒಂದೇ ವೃತ್ತಿಯನ್ನು ಆರಿಸಿಕೊಳ್ಳಲಿ ಎಂದು ಬಯಸಿದರೂ ಅದು ಸಾಧ್ಯವಾಗದು. ಈ ನಾಲ್ಕು ವರ್ಗಗಳೂ ದೇಶದ ಅಭಿವೃದ್ದಿಗೆ ಅತ್ಯಗತ್ಯ ಮತ್ತು ಪರಸ್ಪರ ಪೂರಕ; ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಇಂತಹ ವರ್ಗಗಳನ್ನು ಸಮಾನ ಗೌರವದಿಂದ ಕಾಣುವುದು ಮತ್ತು ಹುಟ್ಟಿನ ಜಾತಿಗೆ ಅನಗತ್ಯ ಪ್ರಾಮುಖ್ಯತೆ ನೀಡುವುದು ತಪ್ಪಿದಲ್ಲಿ ಸಧೃಢ ಸಮಾಜ ನಿರ್ಮಾಣ ಸಾಧ್ಯ. ಸಮಾನತೆ ಸಾರುವ ವೇದಮಂತ್ರದ ಕರೆ ನಮ್ಮನ್ನು ಎಚ್ಚರಿಸಲಿ:
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ | ಯುವಾ ವಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || (ಋಕ್.5.60.5.) 
     ಅರ್ಥ: ಈ ಮಾನವರು ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರೂ ಅಲ್ಲ, ಪರಸ್ಪರ ಸಹೋದರರು. ಸೌಭಾಗ್ಯಪ್ರಾಪ್ತಿಗಾಗಿ ಮುಂದುವರೆಯುತ್ತಾರೆ. ಶಿಷ್ಟರಕ್ಷಕ, ದುಷ್ಟಶಿಕ್ಷಕ ಪರಮಾತ್ಮ ಇವರೆಲ್ಲರ ತಂದೆ. ಭೂಮಾತೆ ಈ ಮರ್ತ್ಯರಿಗೆಲ್ಲಾ ಉತ್ತಮ ಶಕ್ತಿಯನ್ನೆರೆಯುವವಳೂ, ಉತ್ತಮ ದಿನಗಳನ್ನು ತೋರಿಸುವವಳೂ ಆಗಿದ್ದಾಳೆ.
-ಕ.ವೆಂ.ನಾಗರಾಜ್.