ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಏಪ್ರಿಲ್ 28, 2012

ಸಾರಗ್ರಾಹಿಯ ರಸೋದ್ಗಾರಗಳು - 7


     ಪಂ. ಸುಧಾಕರ  ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು.    ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಹದಿಮೂರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಕ್ರಾಂತಿಕಾರಿ ಭಗತ್ ಸಿಂಹನ ಗುರುವಾಗಿದ್ದವರು. ಶಿಷ್ಯ ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸೇಡು ತೀರಿಸಿ ಗಲ್ಲಿಗೇರಿಸಲ್ಪಟ್ಟು ಹುತಾತ್ಮನಾದರೆ, ಗುರು ಹತ್ಯಾಕಾಂಡದ ಪ್ರತ್ಯಕ್ಷ ಸಾಕ್ಷಿಯಾಗಿದ್ದವರು. ಅಷ್ಟೇ ಅಲ್ಲ, ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಸತ್ತವರ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಿದವರು. 116 ವರ್ಷಗಳ ಪಂಡಿತರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಆತ್ಮವಂಚನೆ ಬೇಡ



     ಸರ್ದಾರ್ ಭಗತ್ ಸಿಂಗ್ ಹೆಸರು ಕೇಳಿದ್ದೀರಿ, ಮಹಾನ್ ಕ್ರಾಂತಿಕಾರಿ, ಅವನು ನನ್ನ ಶಿಷ್ಯ. ಲಾಹೋರಿನಲ್ಲಿ ದಯಾನಂದ ಆರ್ಯ ವೇದಿಕ್ ಕಾಲೇಜಿನಲ್ಲಿ ಅವನು ಓದುತ್ತಿದ್ದಾಗ ನಾನು ಗಣಿತದ ಪಾಠ ಹೇಳಲು ಹೋಗುತ್ತಿದ್ದೆ. ಒಂದು ಸಲ ಅವನು ನನ್ನ ಹತ್ತಿರ ಬಂದು ಹೇಳಿದ್ದ - "ಪಂಡಿತಜಿ, ನಾನು ಲೆಕ್ಕದಲ್ಲಿ ಸ್ವಲ್ಪ ಹಿಂದೆ. ಕಡಿಮೆ ಅಂಕ ಬಂದರೆ, ಕರುಣೆ ಇದ್ದರೆ ನನಗೆ ಐದು ಅಂಕ ಸೇರಿಸಿ ಕೊಟ್ಟರೆ ಉಪಕಾರವಾಗುತ್ತದೆ". ನಾನು ಹೇಳಿದ್ದೆ- "ಲಕ್ಷಣವಾಗಿ ಫೇಲಾಗು. ನಾನು ಅಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ". 'ಇವನು ನನ್ನ ಶಿಷ್ಯ, ಇವನು ಉದ್ಧಾರವಾಗಲಿ' ಎಂದು ನಾನು ಅಂಕ ಸೇರಿಸಿಕೊಟ್ಟು ನನ್ನ ಆತ್ಮವಂಚನೆ ಮಾಡಿಕೊಳ್ಳಲು ನಾನು ಸಿದ್ಧನಿರಲಿಲ್ಲ. 
ಬದುಕೋಣ
    ಸ್ವಲ್ಪ ಯೋಚನೆ ಮಾಡಿ, ಒಂದು ಜೈಲಿನಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಳಿತುಕೊಂಡರೆ ಎಷ್ಟು ಬೇಸರವಾಗುತ್ತದೆ. ಅಂತಹುದರಲ್ಲಿ ಒಟ್ಟು ೧೩ ವರ್ಷ ಜೈಲಿನಲ್ಲಿ -ಕರಾಚಿಯಿಂದ ಹಿಡಿದು ಬೆಂಗಳೂರು ಸೆಂಟ್ರಲ್ ಜೈಲಿನವರೆಗೆ, ಕೊಚ್ಚಿ, ಆಂಧ್ರ ಸೇರಿ ಹಲವು ಜೈಲುಗಳಲ್ಲಿ -ಕಳೆದಿದ್ದೇನೆ. ಅಲ್ಲಿನ ರೊಟ್ಟಿ, ಅನ್ನ ಎಲ್ಲಾ ತಿಂದಿದ್ದೇನೆ. ಅದೂ ಎಂತಹ ರೊಟ್ಟಿ? ಹಿಟ್ಟಿನಲ್ಲಿ ಬೇಕಂತಲೇ ಮರಳು ಸೇರಿಸಿ ತಿನ್ನಕ್ಕಾಗಬಾರದು ಎಂದು ಮಾಡಿದ್ದ ರೊಟ್ಟಿ. ಸಾರಿನಲ್ಲೂ ಬೇಳೆಕಾಳು ಕಡಿಮೆ, ಮರಳೇ ಜಾಸ್ತಿ. ಅದನ್ನೇ ತಿಂದು ಬದುಕಬೇಕು. ಭಗವಂತನ ದಯೆ ಅಂತ ಕಾಣುತ್ತೆ, ಅಂತಹುದನ್ನು ತಿಂದೂ ಸಹ ಈಗಲೂ ಬದುಕಿದ್ದೀನಿ, ಇನ್ನೂ ಸಾಯುವ ಯೋಚನೆಯಿಲ್ಲ್ಲ. ಏಕೆಂದರೆ ಬದುಕುವುದು ಕಷ್ಟ, ಸಾಯುವುದು ಸುಲಭ, ಬಹಳ ಸುಲಭ. ಸುಲಭವೆಂದು ಹೇಳಿ ಸಾಯಲು ಹೋಗಬಾರದು. ಪೂರ್ಣವಾಗಿ ಬದುಕಬೇಕು.
Optimism is life, Pessimism is death itself!
     ವೇದ ಹೇಳುತ್ತೆ, ಸರಿಯಾಗಿ ಬಾಳಿದರೆ ಜಮದಗ್ನಿಗೆ ೩೦೦ ವರ್ಷ ಆಯಸ್ಸು ಅಂತ. ಜಮದಗ್ನಿ ಅಂದರೆ ಋಷಿಯ ಹೆಸರಲ್ಲ, ಅಗ್ನಿಯನ್ನು ತನ್ನ ವಶದಲ್ಲಿಟ್ಟುಕೊಂಡವನು, ಅಗ್ನಿಹೋತ್ರ ಮಾಡುವವನು -ಗೃಹಸ್ಥ/ಗೃಹಿಣಿ - ಅವರು ಜಮದಗ್ನಿ ಎಂದು ಅರ್ಥ. ನಿಜವಾಗಿ ಅರ್ಥ ಇಟ್ಟುಕೊಂಡು ಮಾಡಿದರೆ ಅಂದರೆ ಅಗ್ನಿಯನ್ನು ವಶದಲ್ಲಿಟ್ಟುಕೊಂಡರೆ ೩೦೦ ವರ್ಷ ಬದುಕಬಹುದು. ಅಷ್ಟೊಂದು ಭಗವಂತ ನಮಗೆ ಹೇಳಿರುವಾಗ ನಾವು ಯಾಕೆ ಸಾಯಬೇಕು, ಸಾಯಬೇಕು ಅನ್ನಬೇಕು? ಆ ಸಾವು ಇದೆಯಲ್ಲಾ, ಅದು ನಿರ್ಲಜ್ಜ. ನೀವು ಕರೆದರೂ ಬರುತ್ತೆ, ಕರೆಯದಿದ್ದರೂ ಬರುತ್ತೆ. ಯಾವತ್ತೂ ನೀವು ಸಾಯಬೇಕು ಎಂದು ಆಸೆಪಡಲೇಬೇಡಿ. 'ಜೀವೇದ ಶರದಶ್ಶತಮ್' ಕನಿಷ್ಠ ಪಕ್ಷ ನೂರು ವರ್ಷ ಆದರೂ ಬದುಕಿರಬೇಕು, ನೂರು ವರ್ಷಕ್ಕಿಂತ ಹೆಚ್ಚುಕಾಲ ಬದುಕೋಣ. ಲೋಕಾರೂಢಿ 'ಶತಾಯುರ್ ವಯ ಪುರುಷಃ' ಅಂತ, ಒಬ್ಬ ಮನುಷ್ಯನ ವಯಸ್ಸು ನೂರು ವರ್ಷ, ನೂರು! ಆಶ್ಚರ್ಯ ಪಡಬೇಡಿ, ನಾವು ಆಸ್ತಿಕರು, ಭಗವಂತನಲ್ಲಿ ನಂಬಿಕೆ ಇರುವವರು, ಜೀವನವನ್ನು ಪರಿಪಕ್ವವಾಗಿ ಇಟ್ಟುಕೊಳ್ಳಬೇಕು ಅನ್ನುವವರು, ನಾವು ಏಕೆ ಆಸೆ ಕಳೆದುಕೊಳ್ಳಬೇಕು? ರಷ್ಯಾದಲ್ಲಿ ಕೆಲವು ಪ್ರದೇಶಗಳಿವೆ, ಡಡ್ ಸೀ ಅಂತ, ಸತ್ತ ಸಮುದ್ರ, ಅದು ಯಾವ ಕಾಲದಲ್ಲಿ ನೀರಿತ್ತೋ, ಈಗ ನೀರಿಲ್ಲ, ಅದರ ಸುತ್ತಮುತ್ತ ಎಲ್ಲಾ ಸಾವೇ! ಅಂತಹ ಕಡೆ ಕೂಡ ಒಬ್ಬ ಮುದುಕ ೧೯೦ ವರ್ಷ ಬದುಕಿದ್ದನಂತೆ. ತಿನ್ನಬಾರದ್ದೆಲ್ಲಾ ತಿಂದುಕೊಂಡು, ಕುಡಿಯಬಾರದ್ದೆಲ್ಲಾ ಕುಡಿದುಕೊಂಡು, ಮಾಡಬಾರದ್ದೆಲ್ಲಾ ಮಾಡಿಕೊಂಡು ೧೯೦ ವರ್ಷ ಬದುಕಿದ್ದ. ಅಂಥವನೇ ಅಷ್ಟು ಕಾಲ ಬದುಕಿದ್ದಾಗ ಪವಿತ್ರವಾಗಿ ಬಾಳುವ ನಮಗೇಕೆ ಸಾಧ್ಯವಿಲ್ಲ? ನಾವು ಸೋತುಬಿಡುತ್ತೇವೆ, ಅದೇ ಕಷ್ಟ,  ಸೋಲಿನ ಮನೋಭಾವ ಇದೆಯಲ್ಲಾ, ನಿರಾಶಾವಾದ ಅದು ತುಂಬಾ ಕೆಟ್ಟದ್ದು. ನಾನು ದುರ್ಯೋಧನನ ಉದಾಹರಣೆ ಕೊಡುತ್ತೇನೆ. ಭೀಷ್ಮ ಹೋದರು, ದ್ರೋಣ ಹೋದರು, ಕರ್ಣನೂ ಹೋದ. ಆದರೆ ಶಲ್ಯ ಇನ್ನೂ ಇದ್ದಾನೆ, ಅವನು ಪಾಂಡವರನ್ನು ಜಯಿಸಿ ನನಗೆ ಗೆಲುವು ತಂದುಕೊಡುತ್ತಾನೆ ಎಂಬ ವಿಶ್ವಾಸ ಅವನಿಗೆ. ಶಲ್ಯನೂ ಹೋದ, ದುರ್ಯೋಧನನೂ ಸತ್ತ, ಅದು ಬೇರೆ ವಿಷಯ. ಬದುಕುವ ಅವನ ಆತ್ಮವಿಶ್ವಾಸ ಮೆಚ್ಚುವಂತಹುದು. ಮುಖ್ಯವಾಗಿ ನನ್ನ ಗುರು ಸ್ವಾಮಿ ಶ್ರದ್ಧಾನಂದಜೀಯವರು ಹೇಳುತ್ತಿದ್ದರು -'Optimism is life, Pessimism is death itself!'
ಸಾವನ್ನು ಸ್ವಾಗತಿಸುವ ಧೈರ್ಯ
     ಸಾವನ್ನು ಏಕೆ ಬಯಸಬೇಕು? ಅದು ಬಂದೇ ಬರುತ್ತೆ, ಬಂದಾಗ ಹೋಗೋಣ, ಸಾವು ಬಂದಾಗ ಸ್ವಾಗತಿಸೋಣ, ಯಮನಿಗೆ ನಮಸ್ಕರಿಸಿ ಹೊರಡೋಣ. ಯಮ ಅಂದರೆ ಕೋಣನ ಮೇಲೆ ಕುಳಿತುಕೊಂಡು ಬರುತ್ತಾನೆ ಅಂತಾರಲ್ಲ, ಅವನಲ್ಲ, ಸಂಪೂರ್ಣ ಜಗತ್ತನ್ನೇ ತನ್ನ ವಶದಲ್ಲಿಟ್ಟುಕೊಂಡಿದ್ದಾನಲ್ಲಾ, ಜಗನ್ನಿಯಾಮಕ ಭಗವಂತ, ಅವನು ಯಮ! ಅವನು ಅನ್ಯಾಯವಾಗಿ ಯಾರಿಗೂ ಸಾವು ಕೊಡುವುದಿಲ್ಲ, ಯಾವನ ಇಚ್ಛೆಯಿಂದಲೇ ಅಮೃತ ಸಿಕ್ಕುತ್ತೋ, ಯಾವನ ಇಚ್ಛೆಯಿಂದ ಸಾವು ಸಿಗುತ್ತದೋ ಆ ಯಮನಿಗೆ ನಮಸ್ಕಾರ! ಸಾವು, ಬಾಳು ಎರಡೂ ಅವನ ವಶದಲ್ಲೇ ಇದೆ, ಆ ಪರಮಾತ್ಮ ಯಾವ ಜೀವ ಎಷ್ಟು ಬಾಳಬೇಕು, ಬದುಕಬೇಕು ಅದನ್ನು ನಿರ್ಧರಿಸಿರುತ್ತಾನೆ, ಅದು ತೀರುವವರೆಗೂ ಸಾಯುವಹಾಗಿಲ್ಲ, ಬಾವಿಗೆ ಬಿದ್ದು, ನೇಣು ಹಾಕಿಕೊಂಡು ಮುಂಚೆಯೇ ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ, ನಿಜವಾದ ಸಾವಲ್ಲ, ಅಪಮೃತ್ಯು, ಅದು ಯಾರಿಗೂ ಬೇಡ, ಅದಾಗೇ ಸಾವು ಬಂದಾಗ ಬಾ ಮೃತ್ಯು, ಕರೆದುಕೊಂಡು ಹೋಗು ಎಂದು ಹೇಳುವ ಧೈರ್ಯ ನಮಗೆಲ್ಲಿ ಬರಬೇಕು! ಸ್ವಾಮಿ ದಯಾನಂದರಿಗೆ ಸಾವು ಬಂದಾಗ ಅವರು ಅಳುಕಲಿಲ್ಲ, ಭಗವಂತ, ನಿನ್ನ ಇಚ್ಛೆ, ಕರೆದುಕೊಂಡು ಹೋಗು ಎಂದರು.* ಅವರಿಗೆ ಸಾಯಬೇಕೆಂದಿರಲಿಲ್ಲ. ಭಗವಂತನ ಇಚ್ಛೆಯಿದ್ದರಿಂದ ಸಾಯಲು ಸಿದ್ಧರಾದರು, ಅಷ್ಟೆ. ಬದುಕುವುದಕ್ಕೆ ಆ ಹಟ ಇರಬೇಕು. ಯಾವತ್ತೂ ಸಾಯಬೇಕೆಂದು ಬಯಸಬೇಡಿ. ಏಕೆಂದರೆ ಆ ಆಸೆ ಇದೆಯಲ್ಲಾ ಅದು ದುರಾಸೆ, ಅದು ನಮ್ಮ ನಿಜವಾದ ನಿಶ್ಚಯ ಶಕ್ತಿಯನ್ನೇ ಹಾಳುಮಾಡಿಬಿಡುತ್ತದೆ. 
*********************************
[*ಟಿಪ್ಪಣಿ: ಸ್ವಾಮಿ ದಯಾನಂದರ ಸಾವು:
     ಮಹರ್ಷಿ ದಯಾನಂದ ಸರಸ್ವತಿಯವರದು ಸಹಜ ಸಾವಲ್ಲ. ಕೊಲೆ ಎನ್ನಬಹುದು. ೧೮೮೩ರಲ್ಲಿ ಜೋಧಪುರದ ಮಹಾರಾಜರ ಆಹ್ವಾನದ ಮೇಲೆ ಅವರ ಅತಿಥಿಯಾಗಿ ಹೋಗಿ ಅರಮನೆಯಲ್ಲಿ ತಂಗಿದ್ದರು. ಮಹಾರಾಜನಿಗೆ ಅವರ ಶಿಷ್ಯನಾಗಿ ಉಪದೇಶಗಳನ್ನು ತಿಳಿಯುವ ಆಸಕ್ತಿಯಿತ್ತು. ಒಮ್ಮೆ ದಯಾನಂದರು ಮಹಾರಾಜರ ವಿಶ್ರಾಂತಿ ಕೊಠಡಿಗೆ ಹೋದ ಸಂದರ್ಭದಲ್ಲಿ ಮಹಾರಾಜರು ನನ್ಹಿಜಾನ್ ಎಂಬ ನೃತ್ಯಗಾತಿಯ ಜೊತೆಗೆ ಇದ್ದುದನ್ನು ಕಂಡರು. ದಯಾನಂದರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಧೈರ್ಯವಾಗಿ ಮತ್ತು ನೇರವಾಗಿ ಮಹಾರಾಜರಿಗೆ ಸ್ತ್ರೀ ಸಹವಾಸ ಬಿಡಲು ಮತ್ತು ಒಬ್ಬ ನಿಜವಾದ ಆರ್ಯ(ಸಭ್ಯ)ನಂತೆ ಧರ್ಮ ಪಾಲನೆ ಮಾಡುವಂತೆ ಹೇಳಿದರು. ದಯಾನಂದರ ಸಲಹೆ ಆ ನೃತ್ಯಗಾತಿಯನ್ನು ಕೆರಳಿಸಿತು ಮತ್ತು ಸೇಡಿಗಾಗಿ ಹಪಹಪಿಸುವಂತೆ ಮಾಡಿತು. ಅಡಿಗೆ ಭಟ್ಟನಿಗೆ ಆಕೆ ಲಂಚ ನೀಡಿ ದಯಾನಂದರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಡಲು ಒಪ್ಪಿಸಿದಳು. ಅಡಿಗೆ ಭಟ್ಟ ರಾತ್ರಿಯ ಮಲಗುವ ಸಮಯದಲ್ಲಿ ವಿಷ ಮತ್ತು ನುಣ್ಣಗೆ ಪುಡಿ ಮಾಡಿದ ಗಾಜಿನ ಹರಳುಗಳನ್ನು ಸೇರಿಸಿದ ಹಾಲನ್ನು ದಯಾನಂದರಿಗೆ ಕುಡಿಯಲು ಕೊಟ್ಟ. ಹಾಲು ಕುಡಿದು ಮಲಗಿದ ದಯಾನಂದರಿಗೆ ಕೆಲ ಸಮಯದಲ್ಲಿಯೇ ಹೊಟ್ಟೆಯ ಒಳಗೆ ಸುಡುವ ಅನುಭವವಾದಾಗ ಎಚ್ಚರವಾಗಿ ತಮಗೆ ವಿಷ ಉಣಿಸಿದ್ದಾರೆಂದು ಗೊತ್ತಾಗಿ ವಿಷವನ್ನು ಹೊರಹಾಕಲು ಪ್ರಯತ್ನಿಸಿದರು. ಆದರೆ ಅದಾಗಲೇ ತಡವಾಗಿತ್ತು. ವಿಷವಾಗಲೇ ರಕ್ತ ಸೇರಿಬಿಟ್ಟಿತ್ತು. ಅವರು ಹಾಸಿಗೆ ಹಿಡಿದು ಅಸಾಧ್ಯ ನೋವನ್ನು ಸಹಿಸಬೇಕಾಯಿತು. ಅನೇಕ ವೈದ್ಯರುಗಳು ನೀಡಿದ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಅವರ ದೇಹದಲ್ಲಿ ಎಲ್ಲೆಲ್ಲೂ ರಕ್ತ ಸೋರುವ ಹುಣ್ಣುಗಳಾದವು. ಅವರ ಸ್ಥಿತಿಯನ್ನು ನೋಡಲಾಗದ ಅಡಿಗೆ ಭಟ್ಟ ಕಣ್ಣೀರು ಸುರಿಸುತ್ತಾ ಬಂದು ದಯಾನಂದರಲ್ಲಿ ತನ್ನ ತಪ್ಪು ಒಪ್ಪಿಕೊಂಡ. ಅಂತಹ ಸಾವಿನ ಸಮೀಪದಲ್ಲಿ ಇದ್ದಾಗಲೂ ದಯಾನಂದರು ಆತನನ್ನು ಕ್ಷಮಿಸಿದ್ದಲ್ಲದೆ, ಅವನಿಗೆ ಒಂದು ಥೈಲಿಯಲ್ಲಿ ಹಣ ನೀಡಿ ಆದಷ್ಟು ಬೇಗ ರಾಜ್ಯ ತೊರೆದು ಹೋಗಿ ಮಹಾರಾಜರ ಭಟರಿಂದ ಜೀವ ಉಳಿಸಿಕೊಳ್ಳಲು ಸಲಹೆ ನೀಡಿದ್ದರು. ೩೦-೧೦-೧೯೮೩ರಲ್ಲಿ ಅವರು ದೇಹತ್ಯಾಗ ಮಾಡಿದರು. ಅಂತಹ ಸಾವನ್ನೂ ಸಹ ಅವರು ಆದರದಿಂದ ಬರಮಾಡಿಕೊಂಡಿದ್ದರು.
ಲಗತ್ತು ಚಿತ್ರ: ಮಹರ್ಷಿ ದಯಾನಂದ ಸರಸ್ವತಿಯವರ ನೆನಪಿಗೆ ಬಿಡುಗಡೆಯಾಗಿದ್ದ 15 ನಯಾಪೈಸೆಗಳ ಅಂಚೆ ಚೀಟಿ.]
***********************
ಹಿಂದಿನ ಲೇಖನಕ್ಕೆ ಲಿಂಕ್:

ಗುರುವಾರ, ಏಪ್ರಿಲ್ 26, 2012

ಸಾರಗ್ರಾಹಿಯ ರಸೋದ್ಗಾರಗಳು - 6


     ಪಂ. ಸುಧಾಕರ ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು.    ನೇರವಾಗಿ ಅವರ ಕುರಿತು ತಮ್ಮ ಅನಿಸಿಕೆಗಳನ್ನು ಅವರಿಗೇ ಹೇಳುತ್ತಿದ್ದವರು.    ಗಾಂಧೀಜಿ ಸಹ ಅವರ ಕುರಿತು ಗೌರವವುಳ್ಳವರಾಗಿದ್ದರು. 116 ವರ್ಷಗಳಾಗಿರುವ ಪಂಡಿತರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಗಾಂಧೀಜಿ ಮತ್ತು ಉಪವಾಸ
     ಗಾಂಧೀಜಿ ಜೊತೆ ಮಾತನಾಡುವಾಗ ನಾನು ಹೇಳುತ್ತಿದ್ದೆ - "ಗಾಂಧೀಜಿ, ನೀವು ಮಾತುಮಾತಿಗೆ ಉಪವಾಸ, ಉಪವಾಸ ಅಂತ ಮಾಡ್ತೀರಲ್ಲಾ, ಅದು ಹಿಂಸೆಯಲ್ಲವೋ?" ಗಾಂಧೀಜಿ "ಯಾಕಪ್ಪಾ ಹಾಗೆ ಹೇಳ್ತೀಯಾ?" ಅಂದಾಗ ನಾನು ಕೇಳಿದ್ದೆ: "ನೀವು ಬೇರೆಯವರನ್ನು  ಉಪವಾಸ ಕೆಡವಿದರೆ ಅದೂ ಪಾಪವೇ, ನೀವು ಉಪವಾಸ ಮಾಡಿದರೆ ನಿಮ್ಮ ಆತ್ಮಕ್ಕೆ ಉಪವಾಸ ಮಾಡಿಸಿದ ಹಾಗೆ ಆಯಿತು, ಇದು ಎಲ್ಲಿಯ ಪುಣ್ಯ? ಇದರಿಂದ ಯಾರಿಗೆ ಲಾಭ?" ಗಾಂಧಿ ಒಂದೇ ಮಾತು ಹೇಳಿಬಿಟ್ಟರು: "ಅಪ್ಪಾ, ನೀನೇ ಮಹಾತ್ಮ, ನಾನಲ್ಲ."  ನನ್ನದು ಸ್ವಲ್ಪ ಚೇಷ್ಟೆ ಸ್ವಭಾವ, ಹೇಳಿದೆ: "ಗಾಂಧೀಜಿ, ದಯವಿಟ್ಟು ನನ್ನನ್ನು ಮಹಾತ್ಮ ಅಂತ ಕರೀಬೇಡಿ, ಯಾಕೆ ಅಂದರೆ, ಮಹಾತ್ಮನಾದ ರಾವಣ ಸೀತೆಯನ್ನು ಅಪಹರಿಸಿದ ಅಂತ ರಾಮಾಯಣದಲ್ಲಿದೆ. ನಾನು ಯಾವ ಸೀತೆಯನ್ನೂ ಅಪಹರಿಸಿಲ್ಲ. ಆದ್ದರಿಂದ ನನಗೆ ಮಹಾತ್ಮ ಅನ್ನಬೇಡಿ, ಅದನ್ನು ನೀವೇ ಇಟ್ಟುಕೊಳ್ಳಿ." "ನಿನ್ನ ಹತ್ತಿರ ತರ್ಕ ಮಾಡುವುದಿಲ್ಲಪ್ಪಾ" ಎಂದು ನಗುತ್ತಾ ಹೇಳಿದ ಗಾಂಧೀಜಿ ಸುಮ್ಮನಾಗಿಬಿಟ್ಟರು.
      ಬಡತನ ಅನ್ನುವುದು ಒಂದು ಅಭಿಶಾಪ. ಭಗವಂತ ಸರ್ವೈಶ್ಯರ್ಯ ಸಂಪನ್ನ. ಅವನ ಮಕ್ಕಳು ನಾವು ಬಡತನದಲ್ಲಿದ್ದರೆ ಅವನಿಗೆ ಸಂತೋಷವಿರುತ್ತೇನು? ಅವನ ಮಕ್ಕಳು ನಾವು ಚೆನ್ನಾಗಿ ತಿನ್ನಬೇಕು, ಸುಖವಾಗಿರಬೇಕು, ಅದು ಭಗವಂತನ ಆಸೆ. ನಾವು ಬಲವಂತವಾಗಿ ಉಪವಾಸ ಮಾಡಿದರೆ ಅವನಿಗೆ ಸಂತೋಷ ಆಗುತ್ತೆ ಅಂತ ಮಾಡಿದ್ದೀರಾ?
      ಗಾಂಧೀಜಿ ಪತ್ನಿ ಕಸ್ತೂರಿಬಾ ಹೇಳುತ್ತಿದ್ದರು, "ನಮ್ಮ ಯಜಮಾನರು ೭ ದಿನ, ೧೫ ದಿನ, ೨೧ ದಿನ ಹೀಗೆಲ್ಲಾ ಉಪವಾಸ ಮಾಡುತ್ತಾರೆ,  ಸ್ವಲ್ಪ ಸ್ವಲ್ಪ ದಿನ ಏಕೆ, ಪೂರ್ಣ ಸಾಯುವವರೆಗೂ ಉಪವಾಸ ಮಾಡಿ ಸತ್ತುಬಿಡಲಿ, ನಾಲ್ಕು ದಿನ ಅತ್ತು ಸುಮ್ಮನಾಗುತ್ತೇನೆ, ನಂತರ ಮರೆತುಬಿಡುತ್ತೇನೆ" ಅಂತ. ಆ ಸಾಧ್ವಿಯ ಬಾಯಲ್ಲಿ, ಮಹಾಪತಿವ್ರತೆಯ ಬಾಯಲ್ಲಿ ಅಂತಹ ಮಾತು ಬರಬೇಕಾದರೆ ಎಷ್ಟು ನೊಂದಿರಬೇಕು, ಊಹಿಸಿ.
ಭಗವಂತನಿಗೆ ಪ್ರಿಯವಾದ ಕೆಲಸ
     ಭಗವಂತನಿಗೆ ಅನೇಕ ಹೆಸರುಗಳಿವೆ, ಸೋಮ ಅನ್ನುವುದೂ ಅವನ ಹೆಸರೇ. ಆ ಸೋಮ ಅನ್ನುವುದಕ್ಕೆ ಬೇಕಾದಷ್ಟು ಅರ್ಥ ಇದೆ. ಭಕ್ತಿರಸ ಅಂತಲೂ ಅರ್ಥ ಇದೆ, ಜಗತ್ತಿನ ಪ್ರೇರಕ, ಉತ್ಪಾದಕ ಅನ್ನುವ ಅರ್ಥವೂ ಇದೆ. ದೇವತೆಗಳ ಉತ್ಪಾದಕ, ಪ್ರೇರಕನೂ ಅವನೇ. ಅವನನ್ನು ಪ್ರಾರ್ಥನೆ ಮಾಡುವುದನ್ನು ಬಿಟ್ಟು ಅವನ ಹೆಸರಿನಲ್ಲಿ ಬೇರೆ ಯಾವ ಯಾವುದನ್ನೋ ಪೂಜೆ ಮಾಡುತ್ತಾ ಹೋದರೆ ಫಲ ಸಿಗುತ್ತಾ? ಮತ್ತೆ ಆ ಸೋಮ ವಿಶ್ವಪ್ರಿಯ.  ಪ್ರತಿದಿನ ಅವನಿಗೆ ಪ್ರಿಯವಾದ ಕೆಲಸವನ್ನು ಮಾಡಿಕೊಂಡು ಹೋಗುವುದೇ ಪೂಜೆ. ಭಗವಂತನಿಗೆ ಪ್ರಿಯವಾದ ಕೆಲಸ ಯಾವುದು? ಅವನಿಗೇನು ಉದ್ಧಾರ ಆಗಬೇಕಿಲ್ಲ. ಉದ್ಧಾರ ಆಗಬೇಕಾಗಿರುವುದು ನಮಗೆ. ನಾವು ಅಂದರೆ ನಮ್ಮ ಸಮೂಹ. ನಮ್ಮ ಸಮೂಹದ ಉದ್ಧಾರಕ್ಕಾಗಿ ನಾವು ಕೆಲಸ ಮಾಡಬೇಕಾಗಿದೆ. ಪೀಡಿಸೋದು, ಎಲ್ಲರನ್ನೂ ಗೋಳು ಹುಯ್ಕೊಳ್ಳೋದು, ಅನ್ಯಾಯ ಮಾಡೋದು, ಮತ್ತೆ ನಾನು ಭಗವದ್ಭಕ್ತ ಕಣಯ್ಯಾ ಅನ್ನೋದು, ಎಂಥಾ ಭಕ್ತರು? ಅವನಿಗೆ ಪ್ರಿಯರಾಗಿ, ಭಗವಂತನ ಮಕ್ಕಳು ನಾವೆಲ್ಲಾ, ಕಷ್ಟ, ಕಾರ್ಪಣ್ಯದಲ್ಲಿರುವವರಿಗೆ, ಬಡವರಿಗೆ, ಬಗ್ಗರಿಗೆ, ದೀನ ದಲಿತರಿಗೆ ಸಹಾಯ ಮಾಡಿದರೆ ನಿಜವಾದ ಭಗವಂತನ ಭಕ್ತರು ಅನ್ನಬಹುದು.
ಭಗವಂತನ ಮಕ್ಕಳ ಸೇವೆ ಭಗವಂತನ ಸೇವೆ
     ಅಯ್ಯೋ, ಅವನು ನಾಸ್ತಿಕ, ದೇವಸ್ಥಾನಕ್ಕೇ ಹೋಗೋದಿಲ್ಲ, ಅವನ ಮಾತು ಕೇಳ್ಬೇಡಿ ಅಂತ ಹೇಳ್ತಾರೆ. ಒಳ್ಳೇ ತಮಾಷೆ ಆಯ್ತಲ್ಲಾ ಇದು! ದೇವಸ್ಥಾನದಲ್ಲಿ ಮಾತ್ರ ಅವನಿದ್ದಿದ್ದರೆ ಬೇರೆ ಇನ್ನೆಲ್ಲೂ ಇಲ್ಲ ಅಂತಿದ್ದರೆ ಅಲ್ಲಿಗೆ ಹೋಗಬೇಕಾಗಿತ್ತು. ಸರ್ವವ್ಯಾಪಕ ಅಂತೀರಿ, ಎಲ್ಲಾ ಕಡೆಯೂ ಇದ್ದಾನೆ ಅಂತೀರಿ, ನಿಮ್ಮ ಹೃದಯಕ್ಕಿಂತ ದೊಡ್ಡ ಮಂದಿರ ಬೇಕಾ? ನಿಮ್ಮ ಹೃದಯದಲ್ಲೂ ಪರಮಾತ್ಮನಿದ್ದಾನೆ. ಸುಖವಾಗಿ ಆ ಪರಮಾತ್ಮನ ಕುರಿತು ಧ್ಯಾನ ಮಾಡಿ. ನಿಜವಾಗಿ ನಿಮಗೆ ಆನಂದ ಸಿಕ್ಕುತ್ತೆ. ಈ ಮಾತನ್ನು ನಾನು ನೂರು ವರ್ಷಗಳ ಅನುಭವದಿಂದ ಹೇಳುತ್ತಿದ್ದೇನೆ. ನಾನು ಆ ಸ್ಥಿತಿಯಲ್ಲಿ ಇರುವಾಗ ಈ ಪ್ರಪಂಚ ಏನೂ ಇರುವುದೇ ಇಲ್ಲ. ನನ್ನ ದೃಷ್ಟಿಯ ಒಳಗೆ ಈ ಪ್ರಪಂಚ ಇರೋದೆ ಇಲ್ಲ, ಇರೋದು ನನ್ನೊಳಗಿನ ಪರಮಾತ್ಮ ಒಬ್ಬನೇ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು;  ಭಗವಂತನ ಮಕ್ಕಳ ಸೇವೆ ಭಗವಂತನ ಸೇವೆ. 
     ದೇವಸ್ಥಾನಗಳನ್ನು ಕಟ್ಟುವ ಬದಲು ಧರ್ಮಶಾಲೆ ಕಟ್ಟಿಸಿ, ಅನಾಥಾಲಯಗಳನ್ನು ಕಟ್ಟಿಸಿ, ಛತ್ರಗಳನ್ನು ನಿರ್ಮಾಣ ಮಾಡಿ, ಜನ ವಾಸ ಮಾಡಲಾದರೂ ಆಗುತ್ತೆ, ಅದು ಬಿಟ್ಟು ದೇವಸ್ಥಾನದಲ್ಲಿ ಮಾತ್ರ ಅವನಿದ್ದಾನೆ, ಬೇರೆ ಕಡೆ ಇಲ್ಲ ಅನ್ನೋದು ಸರಿಯಲ್ಲ. ಮೊದಲೇ ಅಜ್ಞಾನದಲ್ಲಿ ನರಳುತ್ತಿದ್ದೇವೆ, ನಮ್ಮನ್ನು ಇನ್ನೂ ಅಜ್ಞಾನಕ್ಕೆ ತಳ್ಳಿ ನೋಡೋದು ಎಷ್ಟು ಸರಿ? ಇದು ತಪ್ಪಬೇಕು. ಭಗವಂತನ ಮಕ್ಕಳ ಸೇವೆ ಮಾಡುವುದಕ್ಕೆ ನಮಗೆ ಉದಾರವಾದ ಮನಸ್ಸು ಕೊಡು ಅಂತ ದೇವರಲ್ಲಿ ಪ್ರಾರ್ಥಿಸಬೇಕು.
ಒಳ್ಳೆಯ ರೀತಿ ಬಾಳೋಣ
      ಯಾರು ಏನೇ ಅನ್ನಲಿ, ನಿಮ್ಮನ್ನು ಶತ್ರುವಾಗೇ ಕಾಣಲಿ, ನೀವು ಮಾತ್ರಾ ನಾನು ಎಲ್ಲರ ಮಿತ್ರ ಎಂದುಕೊಳ್ಳಿ, ಇತರರು ನಿಮ್ಮನ್ನು ದ್ವೇಶಿಸಲಿ, ಪ್ರತಿಯಾಗಿ ನೀವು ದ್ವೇಶಿಸಲು ಹೋಗಬೇಡಿ. ದೊಡ್ಡಮಾತು, ಮಹಾತ್ಮರಿಗೆ ಅರ್ಥವಾಗುತ್ತೆ, ನಮಗೆ ಅರ್ಥವಾಗಲ್ಲ, ನಮಗೆ ಯಾಕೆ? ಅಂದುಕೊಂಡು ಅವನು ಎರಡು ಮಾತು ಬೈದನಲ್ಲಾ, ಹತ್ತು ಮಾತು ಜಾಡಿಸಿಬಿಡುತ್ತೇನೆ ಅಂದರೆ ಅವನದು ಎರಡು, ನಿಮ್ಮದು ಹತ್ತು, ಹನ್ನೆರಡು ಮಾತು ಕೇಳಿ ಬಂತು, ಯಾರ ಉದ್ಧಾರಕ್ಕೆ? ನಾವು ಈರೀತಿ ಯೋಚನೆ ಮಾಡುವುದನ್ನು ಕಲಿಯಬೇಕು, ಯೋಚನೆ ಮಾಡದೆ ಯಾವ ಕೆಲಸವನ್ನೂ ಮಾಡಬಾರದು, ವಿದ್ಯೆ, ಜ್ಞಾನದಿಂದ ಮಾಡುವ ಕೆಲಸದಲ್ಲಿ ಶಕ್ತಿ ತುಂಬಿಕೊಂಡಿರುತ್ತದೆ,  ಎಲ್ಲರೊಡನೆ ಮೃದುವಾಗಿ, ಮಧುರವಾಗಿ ಮಾತನಾಡಬೇಕೆಂದು ವೇದ ಹೇಳುತ್ತದೆ. ಜೇನುತುಪ್ಪದಂತಿರಬೇಕೆಂದು ಹೇಳುತ್ತದೆ. ಒಳ್ಳೆಯ ಮಾತು ಎಲ್ಲಿ ಕೇಳುತ್ತೇವೆ, ಒಬ್ಬರನ್ನೊಬ್ಬರು ಬಯ್ಯುವುದು, ಒಬ್ಬರನ್ನೊಬ್ಬರು ಹಂಗಿಸುವುದು, ಇದರಲ್ಲೆ ಕಳೆಯುತ್ತೇವೆ. ಆಲೋಚನೆ ಮಾಡೋಣ, ಒಳ್ಳೆಯ ರೀತಿ ಬಾಳೋಣ. 
ಭೇದ ಮಾಡದ ಭಗವಂತ     
     ಸರ್ಕಾರಿ ಚಿಹ್ನೆ ಹಾಕ್ತಾರೆ - 'ಸತ್ಯಮೇವ ಜಯತೇ'. ಯಾರ ಜೀವನದಲ್ಲೂ ಇಲ್ಲ, ಪ್ರೈಮ್ ಮಿನಿಸ್ಟರಿಂದ ಹಿಡಿದು ಚೀಫ್ ಮಿನಿಸ್ಟರ್, ಒಬ್ಬ ಸಾಧಾರಣ ಮಿನಿಸ್ಟರ್‌ವರೆಗೂ ಯಾರಿಗೂ ಇಲ್ಲ. ಒಂದು ಸಲ ಒಬ್ಬ ಅಂತಿದ್ದನಂತೆ; 'ಪರಮಾತ್ಮ ನೀನು ಬಲೇ ಕಂತ್ರಿ, ಯಾಕೆ? ನಾನಾಗಲಿಲ್ಲ ಮಂತ್ರಿ! ನನ್ನನ್ನು ಮಂತ್ರಿನೂ ಮಾಡಲಿಲ್ಲ, ನೀನೆಂಥಾ ದೇವ್ರು, ಕಂತ್ರಿ ನೀನು'. ನಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದಕ್ಕೆ ಆ ದೌರ್ಬಲ್ಯವನ್ನು ಪರಮಾತ್ಮನ ಮೇಲೆ ಹಾಕೋದು. ಇಷ್ಟು ತಿಳ್ಕೊಳ್ಳಿ, ನಿಮ್ಮ ನಿಂದೆ, ನಿಮ್ಮ ಸ್ತುತಿ ಯಾವುದೂ ಭಗವಂತನ ಮೇಲೆ ಪರಿಣಾಮ ಬೀರುವುದಿಲ್ಲ. ಹೊಗಳಿದರು ಅಂತ ಕೇಳಿದ್ದನ್ನೆಲ್ಲಾ ಕೊಟ್ಟುಬಿಡುವುದಿಲ್ಲ, ಬೈದುಬಿಟ್ಟರು, ಅವರು ನಾಸ್ತಿಕರು ಅಂತ ಅವರ ಆಹಾರವನ್ನು ಕಿತ್ತುಕೊಳ್ಳುವುದಿಲ್ಲ, ನಾಸ್ತಿಕರು ಹೆಚ್ಚಿರುವ ರಷ್ಯದವರು ನಮಗಿಂತ ಚೆನ್ನಾಗಿ ಊಟ ಮಾಡ್ತಾರೆ. ಭಗವಂತ ಅವರ ಅನ್ನ ಕಿತ್ತುಕೊಳ್ಳಲಿಲ್ಲ. ನನ್ನನ್ನೇ ಇಲ್ಲ ಅಂತ ಹೇಳ್ತಾರಲ್ಲಾ, ಅವರೆಲ್ಲಾ ನಾಸ್ತಿಕರು ಅಂತ ಅನ್ನ ಕಿತ್ತುಕೊಳ್ಳೋದಿಲ್ಲ, ಆಸ್ತಿಕರಿಗೂ ಅನ್ನ ಕೊಡ್ತಾನೆ, ನಾಸ್ತಿಕರಿಗೂ ಅನ್ನ ಕೊಡ್ತಾನೆ. ನಮ್ಮ ಕುಂದುಕೊರತೆಗಳನ್ನು ಭಗವಂತನ ಮೇಲೆ ಹೊರಿಸುವುದು ಸರಿಯಲ್ಲ.
ಸತ್ಯವನ್ನೇ ಹೇಳುತ್ತೇನೆ . .
      ಈಗ ಕೋರ್ಟುಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ -"ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟದ್ದೇ ಸತ್ಯ , ಅದನ್ನೇ ಹೇಳು" ಅಂತ. (ನಾನು ತಮಾಷೆ ಮಾಡುತ್ತಿರುತ್ತೇನೆ) ಲಾಯರ್ ಅಂದರೆ ಲೈಯರ್ ಅಂತ! ಮಾಡುತ್ತಾ ಇರುವುದು ಹಾಗೇನೇ, ಇವತ್ತು ಇರುವುದೂ ಹಾಗೇನೇ. ಇಂದಿನ ಸತ್ಯದ ಸ್ಥಿತಿ ಇದು.
. . .ಮುಂದುವರೆಯುವುದು. . 
[ಗಾಂಧೀಜಿ ಮತ್ತು ಕಸ್ತೂರ ಬಾ ಚಿತ್ರ ಕೃಪೆ: ಅಂತರ್ಜಾಲದಿಂದ ಹೆಕ್ಕಿದ್ದು]
*********************
ಹಿಂದಿನ ಲೇಖನಕ್ಕೆ ಲಿಂಕ್: 

ಭಾನುವಾರ, ಏಪ್ರಿಲ್ 22, 2012

ಸಾರಗ್ರಾಹಿಯ ರಸೋದ್ಗಾರಗಳು - 5


     ಪಂ. ಸುಧಾಕರ ಚತುರ್ವೇದಿಯವರೇ ಹಾಗೆ. ನಡೆಯೊಂದು ತರಹ, ನುಡಿಯೊಂದು ತರಹದವರಲ್ಲ. ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. ೧೧೬ ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಸ್ತ್ರೀಯರು ವೇದ ಮಂತ್ರಗಳನ್ನು ಹೇಳಬಾರದು ಎಂಬ ವಿಚಾರ ಸಂಪೂರ್ಣ ಅವೈದಿಕ ಎಂದು ಸಾಧಾರ ಹೇಳುವ ಅವರ ಪ್ರತಿವಾರದ ಸತ್ಸಂಗದಲ್ಲಿ ನಡೆಯುವ ಅಗ್ನಿಹೋತ್ರದ    ಕಾರ್ಯವನ್ನು ಮಂತ್ರಸಹಿತವಾಗಿ ಮಹಿಳೆಯರೇ ಮಾಡುತ್ತಾರೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************

ಮೂರ್ತಿಪೂಜೆಯ ತಪ್ಪು ಕಲ್ಪನೆ
     ಒಮ್ಮೆ ಆರ್ಯ ಸಮಾಜದ ಒಬ್ಬ ದೊಡ್ಡ ವಿದ್ವಾಂಸರು ಮತ್ತು ಮಾಧವಾಚಾರ್ಯ ಅನ್ನುವ ಪೌರಾಣಿಕರ ಜೊತೆ ಹೈದರಾಬಾದಿನಲ್ಲಿ ಮೂರ್ತಿಪೂಜೆ ಕುರಿತು ಚರ್ಚೆ, ಜಿಜ್ಞಾಸೆ ನಡೆಯುತ್ತಿತ್ತು. ಆ ಮಾಧವಾಚಾರ್ಯರಿಗೆ ಇನ್ನೇನೂ ಉಪಾಯ ಹೊಳೆಯಲಿಲ್ಲ, ದಯಾನಂದರ ಫೋಟೋ ತಂದು ಎದುರಿಗೆ ಇಟ್ಟರು. "ನೀವು ಮೂರ್ತಿ ಪೂಜೆ ಮಾಡಲ್ಲ ಅಲ್ವಾ? ಹಾಗಾದರೆ ಈ ದಯಾನಂದರ ಫೋಟೋಗೆ ಎಕ್ಕಡದಿಂದ ಹೊಡೀರಿ, ನೋಡೋಣ" ಅಂದರು. ಆ ವಿದ್ವಾಂಸ ಪುಣ್ಯಾತ್ಮ ಯೋಚನೆ ಮಾಡಲಿಲ್ಲ, ಆ ದಯಾನಂದರ ಫೋಟೋಗೆ ಚಚ್ಚಿಯೇ ಬಿಟ್ಟರು. ನಾನು ಹೇಳಿದೆ, "ಪಂಡಿತಜಿ, ನಿಮ್ಮ ಬುದ್ಧೀನೂ ಜೇಡಿ ಮಣ್ಣಾಯಿತಾ? ಆ ಫೋಟೋ ಯಾರದು? ದಯಾನಂದರದು. ಆ ದಯಾನಂದರಿಗೆ ಒಂದು ಆಕಾರ ಇತ್ತು. ಅದರ ಫೋಟೋ ಹಿಡಿಯುವುದು ಸಾಧ್ಯವಿತ್ತು. ಹಾಗಾಗಿ ನೀವು ಮಾಡಿದ್ದು ಸರಿಯಲ್ಲ. ನಿರಾಕಾರನಾದ ಭಗವಂತನ ಫೋಟೋ ಹಿಡಿಯುವುದಕ್ಕೆ ಸಾಧ್ಯವಿದೆಯೇ? ಇಲ್ಲದಿರುವಾಗ ಕಲ್ಪನೆಯ ಆಕಾರವನ್ನು ಭಗವಂತ ಅನ್ನಬಹುದೇ ಎಂದು ಕೇಳಬಹುದಿತ್ತಲ್ಲವೇ?"
ಪರಮಾತ್ಮ ಎಲ್ಲಿದ್ದಾನೆ?
     ನನಗೆ ಒಂದು ಟೈಟಲ್ಲು ಸಿಕ್ಕಿದೆ, ಪಂಡಿತಜಿ ಸುಮ್ಮನೆ ವೇದ, ವೇದ ಅಂತ ಹೇಳ್ತಾರೆ, ಅವರು ನಾಸ್ತಿಕರು, ದೇವಸ್ಥಾನಕ್ಕೆ ಹೋಗೋದಿಲ್ಲ, ಮಸೀದಿಗೆ ಹೋಗೋದಿಲ್ಲ, ಚರ್ಚಿಗೂ ಹೋಗೋದಿಲ್ಲ. ಹೌದು, ನಾನು ಎಲ್ಲಿಗೂ ಹೋಗುವುದಿಲ್ಲ. ಆ ಎಲ್ಲಾ ನನ್ನ ಎದೆಯಲ್ಲೇ ಇದೆ. ದೇವಸ್ಥಾನವೂ ನನ್ನ ಎದೆಯಲ್ಲಿದೆ, ಮಸೀದಿಯೂ ನನ್ನ ಎದೆಯಲ್ಲಿದೆ, ಚರ್ಚೂ ನನ್ನ ಎದೆಯಲ್ಲಿದೆ. ಪರಮಾತ್ಮ ಇಲ್ಲೇ ಇದ್ದಾನೆ. ನಾನು ಹೊರಗೆ ಇನ್ನೆಲ್ಲಿ ಅವನನ್ನು ಹುಡುಕಲು ಹೋಗಬೇಕು? ಇದು ಒಂದು ಪ್ರಶ್ನೆ, ಇದನ್ನು ಸ್ವಲ್ಪ ದರ್ಶನ ಶಾಸ್ತ್ರಕ್ಕೆ ಹೋಗಬೇಕು. ವ್ಯಾಪ್ಯ-ವ್ಯಾಪಕ- ವ್ಯಾಪಕ ಪರಮಾತ್ಮ, ಬೊಂಬೆಯಲ್ಲೂ ಇದ್ದಾನೆ, ಬೊಂಬೆಯ ಹೊರಗೂ ಇದ್ದಾನೆ, ಎಲ್ಲಾ ಕಡೆಯೂ ಇದ್ದಾನೆ, ನೀವು ಪೂಜೆ ಮಾಡುವುದು ವ್ಯಾಪ್ಯನನ್ನೋ, ವ್ಯಾಪಕನನ್ನೋ? ವಿಗ್ರಹ ಪೂಜೆ ಮಾಡ್ತಾ ಇದ್ದರೆ, ಸ್ಪಷ್ಟವಾಗಿದೆ, ನೀವು ವ್ಯಾಪಕನನ್ನಲ್ಲ, ವ್ಯಾಪ್ಯನನ್ನು ಪೂಜೆ ಮಾಡ್ತಾ ಇದೀರಿ. ಬಲ್ಬು ಇದೆ, ಅದರಲ್ಲಿ ವಿದ್ಯುತ್ ಇದೆ, ಸ್ವಿಚ್ ಹಾಕಿದರೆ ಅದರಲ್ಲಿ ಲೈಟು ಹತ್ತುತ್ತದೆ, ಆ ಸ್ವಿಚ್ಚೇ ಇಲ್ಲದಿದ್ದರೆ ಆ ಬಲ್ಬು ೧೦೦ ವೋಲ್ಟಿನದಾಗಿರಲಿ, ೧೦೦೦ ವೋಲ್ಟಿನದಾಗಿರಲಿ, ಹತ್ತುತ್ತಾ? ಸ್ವಿಚ್ಚು ಒತ್ತಿದರೇ ಹತ್ತುವುದು, ಇಲ್ಲದಿದ್ದರೆ ಹತ್ತುವುದಿಲ್ಲ, ಹಾಗೆಯೇ ನಿಮಗೆ ಧ್ಯಾನ ಅನ್ನುವುದು ಸ್ವಿಚ್ಚು, ಆ ಸ್ವಿಚ್ಚಿರಬೇಕು, ಆ ಸ್ವಿಚ್ಚು ನಿಮ್ಮ ಎದೆಯಲ್ಲೇ ಇದೆ. ಆಗ ಪರಮಾತ್ಮನನ್ನು ನೀವು ಕಂಡುಕೊಳ್ಳುತ್ತೀರಿ, ಜ್ಞಾನಕ್ಕೇ ಸೊನ್ನೆ ಬಿದ್ದಿದ್ದರೆ ಪರಮಾತ್ಮನೂ ಇಲ್ಲ, ಜೀವಾತ್ಮನೂ ಇಲ್ಲ, ಎಲ್ಲಾ ಬರೀ ಮಾತು, ಟೊಳ್ಳು ಮಾತು,
ಆಲೋಚನೆ ಮಾಡೋಣ
      ಪಕ್ಕಾ ಮೂರ್ತಿಪೂಜಕರಾದ ಮಧ್ವಾಚಾರ್ಯರೂ ಕೂಡ ಒಪ್ಪಿಕೊಳ್ಳುತ್ತಾರೆ. 'ಯಾವುದು ವಿಷ್ಣುವಲ್ಲವೋ ಅದನ್ನು ವಿಷ್ಣು ಅಂತ ಪೂಜೆ ಮಾಡೋನು, ಯಾವುದರಲ್ಲಿ ವಿಷ್ಣು ಇದ್ದಾನೋ ಅದನ್ನು ಬಿಟ್ಟು ಬೇರೆ ಪದಾರ್ಥಗಳನ್ನು ಪೂಜೆ ಮಾಡೋನು, ಅವನಿಗೆ ನೂರು ಜನ್ಮಕ್ಕೂ ಉದ್ಧಾರ ಇಲ್ಲ' ಅಂತಾ ಹೇಳ್ತಾರೆ. ಮಧ್ವಾಚಾರ್ಯರು ಕೃಷ್ಣನ ಪ್ರತಿಮೆ ಇಟ್ಟುಕೊಂಡು ಪೂಜೆ ಮಾಡೋರು, ಅವರ ಬಾಯಲ್ಲೇ ಈ ಮಾತು ಬರುತ್ತೆ. ಚತುರರು, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ, ಧ್ಯಾನ ಅನ್ನುವ ಪದ ಉಪಯೋಗಿಸುತ್ತಾರೆಯೇ ಹೊರತು ಪೂಜೆ ಅನ್ನುವ ಪದ ಉಪಯೋಗಿಸುವುದಿಲ್ಲ. ಮೂರ್ತಿಪೂಜೆ ಅಂತ ಹೇಳುವುದಿಲ್ಲ ಅವರು - ಧ್ಯಾನ - ಅದರೊಳಗೆ ಪರಮಾತ್ಮ ಇದಾನೆ ಅಂತ ಧ್ಯಾನ ಮಾಡಿ ಅಂತಾರೆ, ಮತ್ತೆ ಅದೇ ಪ್ರಶ್ನೆ ಬರುತ್ತೆ, ಅಲ್ಲೇ ಇದಾನಾ ಅವನು? ಸರ್ವವ್ಯಾಪಕನನ್ನು ಒಂದು ಕಲ್ಲಿನ ಮೂರ್ತಿಯ ಒಳಗೆ ಅಡಕ ಮಾಡೋಕಾಗುತ್ತಾ? ಆಗುವುದಿಲ್ಲ. ಆದ್ದರಿಂದ ನಾವು, ಜೀವಾತ್ಮರು, ಚೇತನ ಸ್ವರೂಪರು, ಅದರಲ್ಲೂ ಮಾನವ ಜನ್ಮ ಎತ್ತಿರುವ ನಾವು ಆಲೋಚನೆ ಮಾಡುವ ಶಕ್ತಿ ಉಪಯೋಗಿಸಿಕೊಳ್ಳಬೇಕು, ನಾವೇನೇ ಹಾಗೆ ಮಾಡುತ್ತಾ ಕುಳಿತುಕೊಂಡರೆ ಇನ್ನು ತಿಳಿಯದವರು  ಇನ್ನೇನು ಮಾಡ್ತಾರೆ? ನಮ್ಮನ್ನೇ ಅನುಸರಿಸುತ್ತಾರೆ. ಬೇರೆಯವರು ಏನು ಮಾಡ್ತಾರೋ ಅದನ್ನು ನೋಡಿಕೊಂಡು ಮಾಡ್ತಾ ಹೋಗೋದು, ಅಷ್ಟೆ. ಯಾವುದಕ್ಕೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ
ಸುಪ್ಪತ್ತಿಗೆ
     ಪುರಾಣದ ಕಥೆಗಳು, ನಾಟಕ, ನೃತ್ಯ ಇವುಗಳನ್ನು ನೋಡ್ತಾ ಇದ್ದರೆ ರಾತ್ರಿ ಪೂರ್ತಾ ನಿದ್ದೆ ಬರುವುದಿಲ್ಲ, ವೇದ, ಉಪನಿಷತ್ತುಗಳ ವಿಚಾರ ಕೇಳ್ತಾ ಇದ್ದರೆ ಸ್ವಲ್ಪ ಹೊತ್ತಿಗೇ ನಿದ್ದೆ ಬಂದುಬಿಡುತ್ತೆ. ಒಬ್ಬ ಭಕ್ತ ಕೇಳಿದ, "ಯಾಕೆ ಸ್ವಾಮಿ, ಹೀಗಾಗುತ್ತೆ? " ಅದಕ್ಕೆ ದಯಾನಂದರು ಹೇಳಿದರು: "ಪುರಾಣದ ಕಥೆಗಳು, ನಾಟಕ, ನೃತ್ಯ, ಎಲ್ಲಾ ಮುಳ್ಳಿನ ಹಾಸಿಗೆ ಇದ್ದಂತೆ, ವೇದ, ಉಪನಿಷತ್ತುಗಳು ಸುಪ್ಪತ್ತಿಗೆ ಇದ್ದಂತೆ. ಮುಳ್ಳಿನ ಹಾಸಿಗೆ ಮೇಲೆ ಮಲಗಿದರೆ ನಿದ್ದೆ ಹೇಗೆ ಬರಬೇಕು? ಸುಪ್ಪತ್ತಿಗೆ ಮೇಲೆ ಮಲಗಿದರೆ ನಿದ್ದೆ ಬರದೆ ಇದ್ದರೆ ಇನ್ನು ಯಾವುದರ ಮೇಲೆ ಬರಬೇಕು?"
ಸ್ತ್ರೀಯರು ಮತ್ತು ವೇದ
     ನಮ್ಮ ತಾಯಿ, ತಂದೆ ರಾತ್ರಿ ಹೊತ್ತು ಹವನಕ್ಕೆ ಕುಳಿತುಕೊಳ್ಳೋರು, ತಂದೆ ಮಂತ್ರ ಹೇಳೋರು, ತಾಯಿ ಬಾಯಿ ಮುಚ್ಚಿಕೊಂಡು ಕೂರೋರು, ನಾನು ಕೇಳ್ತಾ ಇದ್ದೆ, 'ಅಮ್ಮಾ, ಯಾಕೆ ಹೀಗೆ?' ಅವರು ಹೇಳುತ್ತಿದ್ದರು: "ಅಯ್ಯೋ, ಹೆಂಗಸರು ವೇದ ಹೇಳೋದು ಉಂಟಾ? ಮಹಾ ಪಾಪ".  [ಉತ್ತರ ಕೊಡೋಕ್ಕೆ ಆಗದೇ ಹೋದರೆ ಇಂತಹಾ ಮಾತುಗಳನ್ನು ಆಡುವ ಇತರ ಪಂಡಿತರೆನಿಸಿಕೊಂಡವರ ಮಾತನ್ನೇ ಅವರು ಹೇಳಿದ್ದರು.]  ವೇದದಲ್ಲಿ ಋಷಿಗಳಿದ್ದಾರಲ್ಲಾ, ಹಾಗೆಯೇ ಋಷಿಕೆಯರೂ ಇದ್ದಾರೆ. ನಾನೇ ಒಂದು ಋಗ್ವೇದದಲ್ಲಿ ೯೭ ಋಷಿಕೆಯರನ್ನು ಗುರುತಿಸಿದ್ದೇನೆ. ಇನ್ನು ಅಥರ್ವವೇದ, ಯಜುರ್ವೇದ ಇವನ್ನೆಲ್ಲಾ ತೆಗೆದುಕೊಂಡರೆ ಇನ್ನು ಎಷ್ಟು ಜನ ಋಷಿಕೆಯರನ್ನು ಗುರುತಿಸಬಹುದು ಊಹಿಸಿ. ಅವರೆಲ್ಲಾ ಪಾಪ ಮಾಡಿದರಾ? ಋಷಿಕೆಯರೆಲ್ಲಾ ವೇದಮಂತ್ರಗಳಿಗೆ ವ್ಯಾಖ್ಯಾನ ಮಾಡಿದ್ದಾರೆ, ಅವರೆಲ್ಲಾ ಪಾಪ ಮಾಡಿದರಾ? ಅವರೆಲ್ಲಾ ಪಾಪ ಮಾಡಿದ್ದರೆ ಅವರ ಹಿಂದೆಯೇ ನಾವೂ ಹೋಗೋಣ, ಈ ಪುಣ್ಯಾತ್ಮರು ಇದ್ದಾರಲ್ಲಾ, ಕಲ್ಲು, ಮಣ್ಣು ಪೂಜೆ ಮಾಡೋರು ಅವರು ಇಲ್ಲೇ ಇರಲಿ, ನಾವು ಪಾಪ ಮಾಡಿದೋರ ಜೊತೆ ಹೋಗೋಣ!
..ಮುಂದುವರೆಯುವುದು.
***************
ಹಿಂದಿನ ಲೇಖನಕ್ಕೆ ಲಿಂಕ್:

ಶುಕ್ರವಾರ, ಏಪ್ರಿಲ್ 20, 2012

ಸಾರಗ್ರಾಹಿಯ ರಸೋದ್ಗಾರಗಳು -4

     ಪಂ. ಸುಧಾಕರ ಚತುರ್ವೇದಿಯವರು ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು.  ೧೧೬ ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ, ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಅರ್ಪಣಾಭಾವ
     ಅಗ್ನಿಹೋತ್ರ ಮಾಡುವಾಗ  ಮೊದಲು ಒಂದುಸಲ 'ಅಯಂತ ಇಧ್ಮ. ' ಎಂದು ಹೇಳುತ್ತೇವೆ. ಆಮೇಲೆ ೫ ಸಲ . 'ಅಯಂತ ಇಧ್ಮ'. ಎಂದು ಹೇಳುತ್ತೇವೆ. ಅಗ್ನಿಹೋತ್ರ ಮಾಡುವ ವಿಚಾರದಲ್ಲಿ ತಿಳಿದುಕೊಳ್ಳಬೇಕಾದ್ದಿದೆ. ವಾಯುಶುದ್ಧಿ, ಜಲಶುದ್ದಿ ಇವೆಲ್ಲಾ ಇದ್ದದ್ದೇ. ಎಲ್ಲರಿಗೂ ಅರ್ಥವಾಗುತ್ತೆ. ಆಧ್ಯಾತ್ಮಿಕ ಭಾವನೆಯನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಹೋಮ, ಹವನ ಮಾಡಿದೆವು ಅಂತೀವಿ, ನಮ್ಮ ಉದ್ಧಾರವಾಗುತ್ತೋ, ಭಗವಂತನ ಉದ್ಧಾರವಾಗುತ್ತೋ ತಿಳಿದುಕೊಳ್ಳುವುದಿಲ್ಲ., ಭಗವಂತ, ನೀನು ಮಹಾನ್ ಅಗ್ನಿ, 'ಅಯಂ ಆತ್ಮಾ ತೇ ಇಧ್ಮ' - ನನ್ನ ಆತ್ಮ ಇದು ನಿನಗೆ ಸಮಿತ್ತು-  ಅಂತ. ನಾನು ಸಮಿತ್ತು. ನನ್ನ ಆತ್ಮ ಇದೆಯಲ್ಲಾ, ಭಗವಂತಾ, ಅದನ್ನು ನಿನಗೆ ಸಮರ್ಪಿಸುತ್ತಿದ್ದೇನೆ, ಅಂತ. ಅರ್ಥ ಮಾಡಿಕೊಳ್ಳಿ, ಅಗ್ನಿಯಲ್ಲಿ ಬೆಳಕಿದೆ, ಸಮಿತ್ತಿನಲ್ಲಿ ಸ್ವತಃ ಬೆಳಕಿಲ್ಲ. ಅಗ್ನಿಯೊಡನೆ ಬೆರೆತಾಗ ಸಮಿತ್ತು ಉರಿದು ಬೆಳಕು ಕೊಡುತ್ತದೆ. ಹೀಗೆ, ಪರಮಾತ್ಮ ಜ್ಯೋತಿಸ್ವರೂಪ, ಸರ್ವಶಕ್ತ, ನಮ್ಮ ಆತ್ಮ ಅಲ್ಪಜ್ಞ, ಅಲ್ಪಶಕ್ತ. ಒಳ್ಳೆ ಕೆಲಸಾನೂ ಮಾಡ್ತೇವೆ, ಕೆಟ್ಟ ಕೆಲಸಾನೂ ಮಾಡ್ತೇವೆ. ಒಳ್ಳೆ ಕೆಲಸ ಮಾಡಿದಾಗ ಸ್ವಲ್ಪ ಮೇಲೇರುತ್ತೇವೆ, ಕೆಟ್ಟ ಕೆಲಸ ಮಾಡಿದಾಗ ಕೆಳಕ್ಕೆ ಬೀಳುತ್ತೇವೆ. ಈ ಏಳೋದು, ಬೀಳೋದು ನಮ್ಮ ಹಣೆಬರಹ. ಅದರ ಫಲವೇನೇ ಈ ಸುಖ-ದುಃಖ ಅನ್ನುವುದು,.ಒಳ್ಳೆ ಕೆಲಸ ಮಾಡಿದಾಗ ಸುಖ, ಕೆಟ್ಟ ಕೆಲಸ ಮಾಡಿದಾಗ ದುಃಖ. ಇದು ಇದ್ದದ್ದೇ. ಇದನ್ನು ಇಲ್ಲವೆನ್ನುವಂತಿಲ್ಲ. ಇದನ್ನು ಮೀರಿ, ಪರಮಾತ್ಮನಲ್ಲಿ ಆತ್ಮ ಸಮರ್ಪಣೆ ಮಾಡಿಕೊಂಡರೆ ಜೀವಾತ್ಮಕ್ಕೆ ಪ್ರಕಾಶ ಬರುತ್ತದೆ. ಜೀವಾತ್ಮ ಸಮಿತ್ತಿದ್ದಂತೆ, ಅದಕ್ಕೆ ಸ್ವಯಂಪ್ರಕಾಶವಿಲ್ಲ, ಪರಮಾತ್ಮನೆಂಬ ಅಗ್ನಿಯೊಂದಿಗೆ ಒಂದಾದಾಗ ಅದಕ್ಕೆ ಪ್ರಕಾಶ ಬರುತ್ತದೆ.  .ಈಶ್ವರ ಸನ್ನಿಧಾನ ಅಂತ ಹೇಳ್ತೀವಲ್ಲಾ, ಏನಿದರ ಅರ್ಥ?  ತ್ರಿಕರಣ ಪೂರ್ವಕವಾಗಿ ನಮ್ಮನ್ನು ಅಂದರೆ  ಆತ್ಮನನ್ನು ಪರಮಾತ್ಮನೊಂದಿಗೆ ಅರ್ಪಿಸಿಕೊಂಡಾಗ ನಮಗೆ ಪರಮಾನಂದ ಸಿಕ್ಕುತ್ತೆ. 
ನಾವೆಲ್ಲರೂ ದೇವರ ಮಕ್ಕಳು
     ಯಾರೋ ಒಬ್ಬರನ್ನು ದೇವರ ಮಗ ಅನ್ನುವುದು ಎಷ್ಟು ಸರಿ? ಆ ರೀತಿ ಹೇಳುವವರಿಗೆ ಒಬ್ಬ ಕೇಳಿಯೇ ಬಿಟ್ಟ: 'ನಾವು ಭಗವಂತನ ಮಕ್ಕಳಲ್ಲ ಅಂತೀರಲ್ಲಾ, ಹಾಗಾದರೆ ನಾವೆಲ್ಲಾ ಏನು ಶೈತಾನನ ಮಕ್ಕಳಾ? ಪಿಶಾಚಿಗಳ ಮಕ್ಕಳಾ?' ವೇದ ಹೇಳುತ್ತೆ: 'ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ  . . . .'   ಈ ದಿವ್ಯವಾದ ಲೋಕ ಲೋಕಾಂತರದಲ್ಲಿ ಎಷ್ಟು ಜನ ಬದುಕಿದ್ದಾರೆ, ಜೀವಿಸಿದ್ದಾರೆ, ಅವರೆಲ್ಲಾ 'ಅಮೃತಸ್ಯ ಪುತ್ರಾಃ' - ಅವರೆಲ್ಲರೂ ಆ ಅಮರನಾದ ಪರಮಾತ್ಮನ ಮಕ್ಕಳೇ. ಯಾರೋ ಒಬ್ಬರನ್ನು ಮಾತ್ರ ದೇವರ ಮಗ ಅನ್ನುವುದು ಸರಿಯಲ್ಲ. 
ಚೇತನ ಅಚೇತನ ವಸ್ತುವನ್ನು ಪೂಜಿಸಬೇಕೆ?
     ಯಥಾ ಪ್ರಕಾರ ಸತ್ಸಂಗಕ್ಕೆ ಬಂದ್ರು, ಕೂತ್ಕೊಂಡ್ರು, 'ಪಂಡಿತಜಿ ಬಹಳ ಸೊಗಸಾಗಿ ಮಾತನಾಡಿದರು' ಅನ್ನೋದು. ಹೊರಗೆ ಹೋಗುವಾಗ ಕೇಳಿದ್ದನ್ನೆಲ್ಲಾ ಪಂಡಿತಜಿಗೇ ಬಿಟ್ಟು ಹೋಗೋದು. ತೆಗೆದುಕೊಂಡು ಹೋಗೋದು ಏನೂ ಇಲ್ಲ, ಮನೆಗೆ ಹೋದ ಮೇಲೆ ಅದೇ ಪ್ರಕಾರ ಮೂರ್ತಿ ಪೂಜೆ, ಅದೇ ಪ್ರಕಾರ ನಡೆದುಕೊಳ್ಳುವುದು, ಮೂರ್ತಿಪೂಜೆ ಮಾಡಲೇಬೇಕು ಅನ್ನುವ ಹಟ ಇದ್ದರೆ, ಪರಮಾತ್ಮನ ಮೂರ್ತಿ ಆಚಾರ್ಯ, ತಂದೆಗೆ ಪ್ರಜಾಪತಿ ಸ್ಥಾನ, ತಾಯಿಯೇ ಪೃಥ್ವಿ, ಅವರುಗಳನ್ನು ಪೂಜೆ ಮಾಡಿ, ಅದು ಬಿಟ್ಟು ಜೀವ ಇಲ್ಲದ ಅಚೇತನವಾದ ವಸ್ತುಗಳನ್ನು ಎದುರಿಗೆ ಇಟ್ಟುಕೊಂಡು ಅಡ್ಡ ಬೀಳುವುದೇಕೆ? ಅವಕ್ಕೆ ಗೊತ್ತಾಗುತ್ತಾ? 
ಭಗವಂತನ ಭಕ್ತರ ಭಯ!
     ನನಗೆ ಭಕ್ತರ ಭಯ, ಭಗವಂತನ ಭಯವಿಲ್ಲ, ಭಗವಂತನ ಭಕ್ತರಿದ್ದಾರಲ್ಲಾ, ಅವರದ್ದೇ ಯಾವಾಗಲೂ ಅಪಾಯವೇ. ಹಿಂದೆ ಒಮ್ಮೆ ಗ್ರಾಮದೇವತೆಯ ಉತ್ಸವ ಮೂರ್ತಿ ಹೊತ್ತುಕೊಂಡು ಬಂದು ನಮ್ಮ ಬಾಡಿಗೆ ಮನೆಯ ಮುಂದೆ ನಿಲ್ಲಿಸಿದರು. ಉತ್ಸವ ಮಾಡುವಾಗ ಗ್ರಾಮದೇವತೆಯ ಕಥೆ ಹೇಳುವುದಿಲ್ಲ, ಸಂಬಂಧವಿಲ್ಲದ ಸಿನೆಮಾ ಸಾಂಗ್ಸು ಹಾಕಿಕೊಂಡು ಕುಣೀತಾ ಹೋಗೋದು. ಅದೆಂಥಾ ಭಕ್ತಿ? ನಾನು ಹೇಳಿದೆ: "ತೆಗೆದುಕೊಂಡು ಹೋಗ್ರಪ್ಪಾ, ಬೇರೆ ಎಲ್ಲಾದರೂ ಕೂಡಿಸಿಕೊಳ್ಳಿ, ಯಾಕೆ ನಮ್ಮ ಪ್ರಾಣ ತಿಂತೀರಿ?" ಅವರುಗಳು, "ಅಯ್ಯಯ್ಯೋ, ಅಮ್ಮ, ತಾಯಿ, ಹೋಗು ಅಂತ ಹೇಳಿದರೆ ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ, ಶಿಕ್ಷೆ ಕೊಡ್ತಾಳೆ". ಆವಾಗ ನಾನು ಹೇಳಿದೆ: "ನೀವು ಭಕ್ತರು ಇದ್ದೀರಲ್ಲಾ, ನೀವು ಏನೂ ಮಾಡೋದಿಲ್ಲ ಅಂತ ಭರವಸೆ ಕೊಡಿ, ಆಗ ನಾನು ಈ ಮೂರ್ತಿಗೆ ನಾನು ಮಾಡುವ ರೀತಿಯಲ್ಲಿ ಪೂಜೆ ಮಾಡ್ತೀನಿ, ಏನಾಗುತ್ತೋ ನೋಡೋಣ". ಏನಾಗುತ್ತೆ? ಏನೂ ಆಗಲ್ಲ. 
ವಿದ್ವಾಂಸರಲ್ಲಿ ದೇವರನ್ನು ಕಾಣೋಣ
     ಈ ಪ್ರಪಂಚದಲ್ಲಿ ಯಾರು ವಿದ್ವಾಂಸರು ಇರುತ್ತಾರೋ ಅವರನ್ನೇ ದೇವರು ಅನ್ನಬಹುದು. ಆ ವಿದ್ವಾಂಸರಲ್ಲಿ ಫಟಿಂಗರೂ ಇರುತ್ತಾರೆ, ಎಲ್ಲರೂ ಒಳ್ಳೆಯವರಿರುವುದಿಲ್ಲ. ಜನರಿಗೆ  ಟೋಪಿ ಹಾಕುವುದಕ್ಕೆ ಏನು ಬೇಕೋ ಅದನ್ನು ಹೇಳುವವರು ಇರುತ್ತಾರೆ. ಋಜು ಮಾರ್ಗದಲ್ಲಿ, ನೇರ ಮಾರ್ಗದಲ್ಲಿ ಯಾರು ನಡೆಯುತ್ತಾರೋ ಅಂತಹ ವಿದ್ವಾಂಸರ ಬುದ್ಧಿ ನಮಗೆ ಬರಲಿ, ವಿದ್ವಾಂಸರುಗಳು ನೇರವಾದ ಮಾರ್ಗವನ್ನು ತೋರಿಸಬೇಕು. 'ಜ್ಞಾನ ಕೊಡುವ, ಫಲ ಕೊಡುವ ವಿದ್ವಾಂಸರೇ ನಮಗೆ ಉಪದೇಶ ಕೊಡಿ' ಇದು ವೇದ ಹೇಳುವ ಮಾತು. ಆ ಪುಣ್ಯಾತ್ಮನಿಗೇ ಜ್ಞಾನ ಇಲ್ಲದೇ ಹೋದರೆ, ಅವನೇ ಅವಿದ್ಯಾವಂತನಾದರೆ ಅವನಿಂದ ನಮಗೆ ಏನು ಸಿಕ್ಕುತ್ತೆ? ಆದ್ದರಿಂದ ವಿದ್ವಾಂಸರಿಗೆ ಶರಣಾಗಬೇಕು, ಜ್ಞಾನಿಗಳಿಗೆ ಶರಣಾಗಬೇಕು, ಅವರನ್ನು ನಾವು ಪ್ರಾರ್ಥನೆ ಮಾಡಬೇಕು.
     ಗಂಭೀರವಾಗಿ ಯೋಚಿಸಿ, ಆಲೋಚಿಸಿ, ವೇದದ ಮಂತ್ರ ಹೇಳುತ್ತೆ, ಸತ್ಕರ್ಮ ಮಾಡುವುದನ್ನು ಬಿಟ್ಟು ಬೇರೆಡೆ ಹೊರಳದಿರೋಣ, ನಾವು ಯಾವ ದಾರಿಯಲ್ಲಿ ಹೋಗಬೇಕೋ ಆ ದಾರಿಯನ್ನು ಬಿಟ್ಟು ಹೋಗದಿರೋಣ, ಸರ್ವೈಶ್ವರ್ಯನಾದ ಪರಮಾತ್ಮ ನಮಗೆ ಬದುಕು ಕೊಟ್ಟಿದ್ದಾನೆ, ಜೊತೆಗೆ ಐಶ್ವರ್ಯವನ್ನೂ ಕೊಟ್ಟಿದ್ದಾನೆ. ಸೋಮ ಅನ್ನುವ ಪದ ಇದೆ, ಆ ಪದಕ್ಕೆ ೪೦ ಅರ್ಥ ಇದೆ. ಎಲ್ಲಾ ಬೇಡ, ೨-೩ ಅರ್ಥ ನೋಡೋಣ, ಒಂದು ಮಥನ ಮಾಡು ಅಂತ. ಹಾಲನ್ನು ಸುಮ್ಮನೆ ಇಟ್ಟರೆ ಕೆನೆ ಸಿಕ್ಕುವುದಿಲ್ಲ, ಕಾಯಿಸಿ ಹೆಪ್ಪಿಟ್ಟರೆ ಮೊಸರಾಗುತ್ತದೆ, ಮಥಿಸಿದರೆ ಬೆಣ್ಣೆ ಸಿಗುತ್ತದೆ, ಆ ಮಥನ ಶಕ್ತಿ ನಿಮ್ಮಲ್ಲಿರಬೇಕು.  ಇನ್ನೊಂದು ವಿಚಾರ ಮಾಡುವ ಶಕ್ತಿ, ಆಲೋಚನೆ ಮಾಡುವ ಶಕ್ತಿ. ಗುರೂಜಿ ಎಲ್ಲಾ ಯೋಚನೆ ಮಾಡಿಬಿಟ್ಟಿದ್ದಾರೆ, ನಾವೇನು ಯೋಚನೆ ಮಾಡುವುದು ಬೇಡ, ಅವರು ಹೇಳಿದಂತೆ ನಡೆದರೆ ಸಾಕು ಎಂದು ಭಾವಿಸುವುದು ಸರಿಯಲ್ಲ. ಗುರು ಅಂದರೆ ಎರಡು ನಮೂನೆ - ಒಂದು ಸತ್ಯೋಪದೇಶ ಮಾಡುವವನು, ಇನ್ನೊಂದು ಭಾರ ಅಂತ. ಈಗ ಹೆಚ್ಚಿನ ಗುರುಗಳು ಭಾರವಾಗಿರುವವರೇ.
***************
ಹಿಂದಿನ ಲೇಖನಕ್ಕೆ ಲಿಂಕ್: 
http://vedajeevana.blogspot.in/2012/04/3.html

ಬುಧವಾರ, ಏಪ್ರಿಲ್ 18, 2012

ಸಾರಗ್ರಾಹಿಯ ರಸೋದ್ಗಾರಗಳು -3

      ೧೧೬ ವರ್ಷಗಳ ಪಂ. ಸುಧಾಕರ ಚತುರ್ವೇದಿಯವರು ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. ಬತ್ತದ ಜೀವನೋತ್ಸಾಹದ ಅವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ.  ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 

-ಕ.ವೆಂ.ನಾಗರಾಜ್.
****************

ಯಾಂತ್ರಿಕ ಪೂಜೆಯ ಫಲ
     ಭಗವಂತನ ಪ್ರಾರ್ಥನೆ, ಪೂಜೆಯನ್ನು ಯಾಂತ್ರಿಕವಾಗಿ ಮಾಡಿದರೆ ಫಲವಿಲ್ಲ. ನಮ್ಮ ಪ್ರಾರ್ಥನೆ ಮಾಡುವ ಮಂತ್ರದ ಅರ್ಥದ ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಮಾತ್ರ ಅದರಲ್ಲಿ ಅರ್ಥವಿರುತ್ತದೆ. ಇಲ್ಲದಿದ್ದರೆ ಅದು ಕೇವಲ ನಾಲಿಗೆಗೆ ವ್ಯಾಯಾಮ ಅಷ್ಟೆ. ನಾವು ಈಗ ಅಗ್ನಿಹೋತ್ರ ಮಾಡುವಾಗ ಮೂರು ಸಲ ಗಾಯತ್ರಿ ಮಂತ್ರದ ಉಚ್ಛಾರ ಮಾಡಿದೆವು ಅದರ ಅರ್ಥ ನಮ್ಮ ಅರಿವಿಗೆ ಬಂತೇ, ನಮ್ಮ ಮನಸ್ಸನ್ನು ತಟ್ಟಿತೇ ಎಂಬುದನ್ನು ಅರಿಯೋಣ. ಇಲ್ಲದಿದ್ದರೆ ಸಾವಿರ ಸಲ ಗಾಯತ್ರಿ ಮಂತ್ರ ಹೇಳಿದರೂ ಫಲ ಮಾತ್ರ ಶೂನ್ಯ. ಸ್ನಾನ ಮಾಡಿದರೆ ದೇಹದ ಕೊಳಕು ಹೋಗುತ್ತದೆ. ಆತ್ಮಕ್ಕೆ ಅಂಟಿದ ಕೊಳಕು ಹೋಗಬೇಕೆಂದರೆ ಸತ್ಕರ್ಮದಿಂದ ಮಾತ್ರ ಸಾಧ್ಯ.
ಸಂಸ್ಕಾರ
     ನಾನು ಒಂದು ಉಪನಯನ ಸಮಾರಂಭಕ್ಕೆ ಹೋಗಿದ್ದೆ. ನೆಂಟರು, ಇಷ್ಟರನ್ನೆಲ್ಲಾ ಕರೆದಿದ್ದರು. ದೊಡ್ಡ ಗುಂಪೇ ಸೇರಿತ್ತು. ಪುರೋಹಿತರು ಅವರ ಪಾಡಿಗೆ ಅವರು ಮಂತ್ರ ಹೇಳ್ತಾ ಇದ್ದರು. ಬಂದವರೆಲ್ಲಾ ಸಬ್ ಕಮಿಟಿಗಳನ್ನು ಮಾಡಿಕೊಂಡು ಕಾಡುಹರಟೆ ಹೊಡೆಯುತ್ತಾ ಕೂತಿದ್ದರು. ಉಪನಯನ ಮಾಡಿದವರಿಗಾಗಲೀ, ಮಾಡಿಸಿಕೊಂಡವರಿಗಾಗಲೀ, ಮಂತ್ರ ಹೇಳುತ್ತಿದ್ದವರಿಗಾಗಲೀ ಅದರ ಅರ್ಥ ಗೊತ್ತಿತ್ತೋ ಇಲ್ಲವೋ! ಇಂತಹ ಆಚರಣೆಗಳನ್ನಾದರೂ ಮಾಡಿದರೂ ಒಂದೇ, ಮಾಡದಿದ್ದರೂ ಒಂದೇ! ಅರ್ಥ ತಿಳಿದು, ಎಲ್ಲರೂ ಮನಃಪೂರ್ವಕ ಭಾಗವಹಿಸಿದರೆ ಅದರಲ್ಲಿ ಸಾರ್ಥಕ್ಯವಿದೆ.
Thinking by proxy
     ಮಾನವ ಜನ್ಮ ಎತ್ತಿರುವ ನಾವು ಆಲೋಚನೆ ಮಾಡುವ ಶಕ್ತಿ ಉಪಯೋಗಿಸಿಕೊಳ್ಳಬೇಕು, ತಿಳಿದವರು, ವಿದ್ವಾಂಸರು ಎನ್ನಿಸಿಕೊಂಡವರೇ ವಿವೇಚನೆ ಮಾಡದೆ ಹಿಂದಿನವರು ಮಾಡುತ್ತಿದ್ದರು, ನಾವೂ ಮಾಡೋಣ, ಎಂಬಂತೆ ವರ್ತಿಸಿದರೆ, ಇನ್ನು ಮೂಢರು ಇನ್ನೇನು ಮಾಡ್ತಾರೆ? ಅವರನ್ನೇ ಅನುಸರಿಸುತ್ತಾರೆ. ಬೇರೆಯವರು ಏನು ಮಾಡ್ತಾರೋ ಅದನ್ನು ನೋಡಿಕೊಂಡು ಮಾಡ್ತಾ ಹೋಗೋದು, ಅಷ್ಟೆ. ಯಾವುದಕ್ಕೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಕೇಳಿದರೆ 'ನಮ್ಮ ಗುರುಗಳು ಯೋಚನೆ ಮಾಡಿದ್ದಾರೆ, ಅವರಿಗೆ ಎಲ್ಲಾ ತಿಳಿದಿದೆ, ಅವರು ಹೇಳಿದ ಮೇಲೆ ಆಯಿತು' ಅನ್ನುತ್ತಾರೆ - Thinking by proxy- ಇದು ಸರಿಯೇ? ನಮಗಾಗಿ ನಾವು ಯೋಚನೆ ಮಾಡಬೇಕೇ ಹೊರತು, ನಮಗಾಗಿ ಬೇರೆಯವರು ಯೋಚಿಸುವುದಲ್ಲ.
ಅರಿತು ಆಚರಿಸುವುದೇ ಜ್ಞಾನದ ತಳಹದಿ 
     ಯಾಸ್ಕರು ಕೇವಲ ವ್ಯಾಕರಣ ಅಲ್ಲ, ಇತಿಹಾಸವನ್ನೂ ತಿಳಿದುಕೊಂಡು ಆಲೋಚನೆ ಮಾಡಿ ಒಂದು ಮಾತು ಹೇಳುತ್ತಾರೆ- ಯಾವನು ತಪಸ್ವಿಯಲ್ಲವೋ, ಇಂದ್ರಿಯ ನಿಗ್ರಹ ಮಾಡುವುದಿಲ್ಲವೋ ಕೇವಲ ವೇದಪಾಠ ಮಾಡುತ್ತಾ ಹೋಗುತ್ತಾನೋ ಅದರಿಂದ ಏನೂ ಪ್ರಯೋಜನವಿಲ್ಲ. ಪ್ರತ್ಯಕ್ಷ ಅರ್ಥ ಆಗಬೇಕು. ತಪಸ್ವಿ ಆಗಬೇಕು, ಬ್ರಹ್ಮಚಾರಿ ಆಗಬೇಕು, ಆಮೇಲೆ ಇಂದ್ರಿಯ ನಿಗ್ರಹ ಮಾಡಬೇಕು, ಆನಂತರವೇ ನಮಗೆ ಅರ್ಥವಾಗುವುದು. ಮಾಡಬಾರದ್ದನ್ನು ಮಾಡಿಕೊಂಡು, ತಿನ್ನಬಾರದ್ದನ್ನು ತಿಂದುಕೊಂಡು, ಆಡಬಾರದ್ದನ್ನು ಆಡಿಕೊಂಡು 'ಓಹೋ, ನಾನು ಅಗ್ನಿಹೋತ್ರ ಮಾಡಿಬಿಟ್ಟೆ' ಅಂದರೆ ಏನೂ ಪ್ರಯೋಜನ ಇಲ್ಲ. ಹಾಗೆಯೇ ವಾಯುಶುದ್ಧಿ ಆಗಬೇಕು ಅಂದುಕೊಂಡು ಈ ಮಂತ್ರ ಎಲ್ಲಾ ಹೇಳಿಕೊಂಡು ಅಗ್ನಿಹೋತ್ರ ಮಾಡೋದು ಏಕೆ? ಮಂತ್ರ ಹೇಳದೇ ಮಾಡಬಹುದಲ್ಲಾ! ಆಗಲೂ ವಾಯುಶುದ್ಧಿ ಆಗುತ್ತಲ್ಲಾ! ಹಾಗಲ್ಲ, ಈ ಮಂತ್ರದಲ್ಲಿ ಆಧ್ಯಾತ್ಮ ತುಂಬಿಕೊಂಡಿದೆ. ಅನೇಕ ಸಾರಿ ನಾನು ಹೇಳಿದ್ದೇನೆ 'ಅಯಂತ ಇದ್ಮ ಆತ್ಮ ಜಾತ ವೇದ' ಅಂತ ಮೊದಲು ಒಂದು ಸಲ ಹೇಳ್ತೀವಿ, ಆಮೇಲೆ ೫ ಸಲ ಹೇಳ್ತೀವಿ, ಯಾತಕ್ಕೆ? ಮೊದಲು ಒಂದು ಸಲ ಹೇಳುವಾಗ 'ಭಗವಂತ ನನ್ನ ಜೀವನ, ಈ ಆತ್ಮ ನಿನಗೆ ಕಾಷ್ಠ, ಸಮಿತ್ತು ಇದ್ದ ಹಾಗೆ'  ಎಂದು ಇದರ ಅರ್ಥ. ಭಗವಂತ ಬ್ರಹ್ಮಾಂಡ, ದೊಡ್ಡ ಅಗ್ನಿ, ಆ ಅಗ್ನಿಯಲ್ಲಿ ನಮ್ಮ ಆತ್ಮವನ್ನು ಹಾಕಿದರೆ, ನಮ್ಮ ಆತ್ಮ ಇಲ್ಲದಂತಹ ಅದ್ಭುತ ಜ್ಞಾನ ನಮಗೆ ಬರುತ್ತದೆ. ನೀವು ಸುಳ್ಳು ಅಂತ ತಿಳಿದುಕೊಳ್ಳಬೇಡಿ, ಈಗಲಾದರೋ ನೀವು ವಿಮಾನ ನೋಡುತ್ತೀರಿ, ಸ್ಪೇಸ್ ಶಿಪ್ಪುಗಳನ್ನು ನೋಡ್ತೀರಿ. ಅವು ಯಾವುವೂ ಗೊತ್ತಿಲ್ಲದೇ ಇರುವಾಗ ಜ್ಯೋತಿಷಿಗಳು ೧೦೦ ವರ್ಷ ಆದಮೇಲೆ ಯಾವ ದೇಶದಲ್ಲಿ ಯಾವಾಗ ಸೂರ್ಯಗ್ರಹಣ ಆಗುತ್ತೆ, ಚಂದ್ರ ಗ್ರಹಣ ಆಗುತ್ತೆ, ಎಷ್ಟು ಕಾಲ ಇರುತ್ತೆ, ಇದನ್ನೆಲ್ಲಾ ಹೇಳಿಬಿಡುತ್ತಿದ್ದರಲ್ಲಾ, ಹೇಗೆ? ಅವರೇನು ಪ್ರಾಪಂಚಿಕ ವಿಷಯದಲ್ಲಿ ಯಾವುದೇ ಬಿ.ಎ., ಎಂ.ಎ. ಪಾಸು ಮಾಡಿದವರಲ್ಲ. ನಮ್ಮ ಋಷಿಗಳೂ ಅಷ್ಟೆ, ವಸಿಷ್ಠ ಋಷಿ, ವಸಿಷ್ಠ, ಬಿ.ಎ., ಎಂ.ಎ. ಅಂತ ಹೆಸರಿನ ಮುಂದೆ ಹಾಕಿಕೊಂಡಿದ್ದರಾ? ಏನೂ ಇಲ್ಲ, ಡಿಗ್ರಿಗಳು ಬೇಕೇ ಇಲ್ಲ. ನನ್ನ ಗುರು ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದರು: 'ನಿಮಗೆ ನಾವು ಡಿಗ್ರಿ ಕೊಡುತ್ತೇವೆ, ವಿದ್ಯಾಲಂಕಾರ, ವೇದಾಲಂಕಾರ, ವಿದ್ಯಾವಾಚಸ್ಪತಿ, ಡಿಗ್ರಿ ಕೊಡುತ್ತೇವೆ. ಅದರಿಂದ ನೀವು ಉದ್ಧಾರವಾಗುವುದಿಲ್ಲ. ಅದು ತಳಹದಿ. ಅದರ ಮೇಲೆ ನೀವು ಕಟ್ಟಡ ಕಟ್ಟಬೇಕು. ಹೊಟ್ಟೆಪಾಡಿಗಲ್ಲ, ಹೊಟ್ಟೇಪಾಡೂ ಬೇಕು, ಸಿಕ್ಕುತ್ತೆ.' ಸಂಸಾರಿಗಳು ಹೇಳೋರು, "ಸ್ವಾಮೀಜಿ, ನಿಮಗೇನೋ ಪರವಾಗಿಲ್ಲ, ಸಂಸಾರವಿಲ್ಲ, ಹೆಂಡರಿಲ್ಲ, ಮಕ್ಕಳಿಲ್ಲ, ಹ್ಯಾಗೋ ನಡೆದುಹೋಗುತ್ತೆ, ನಾವು ಗೃಹಸ್ಥರು, ಪೂಜೆ ಮಾಡೋದು ಬಿಟ್ಟುಬಿಟ್ರೆ, ನಮಗೆ ನೈವೇದ್ಯ ಕೊಡೋರು ಯಾರು? ದಕ್ಷಿಣೆ ಕೊಡೋರು ಯಾರು?ದಾನ ಕೊಡೋರು ಯಾರು? ನಮ್ಮ ಹೊಟ್ಟೆಪಾಡು?"  ದಯಾನಂದರು ಹೇಳೋರು: "ನಿಮ್ಮ ಪ್ರಾರಬ್ಧ ನಿಮ್ಮ ಜೊತೆಯಲ್ಲಿದೆ, ನಿಮಗೆ ಇದೊಂದೇ ಜನ್ಮ ಅಲ್ಲ, ಹಿಂದೆ ಯಾವ ಯಾವುದೋ ಜನ್ಮ ಎತ್ತಿದ್ದೀರಾ. ಅವುಗಳ ಫಲ ನಿಮ್ಮ ಜೊತೆಯಲ್ಲೇ ಇರುತ್ತೆ. ನಿಮಗೆ ಅನ್ನ ಸಿಕ್ಕೇ ಸಿಕ್ಕುತ್ತೆ. ಜನರಿಗೆ ಟೋಪಿ ಹಾಕಿ, ಸುಳ್ಳು ಹೇಳಿ ನೀವು ನಿಮ್ಮ ಅನ್ನ ದುಡಿಯಬೇಕಿಲ್ಲ."
. . . . .ಮುಂದುವರೆಯುವುದು.
*************
ಹಿಂದಿನ ಲೇಖನಕ್ಕೆ ಲಿಂಕ್:

ಮಂಗಳವಾರ, ಏಪ್ರಿಲ್ 17, 2012

ಸಾರಗ್ರಾಹಿಯ ರಸೋದ್ಗಾರಗಳು -2


     ಪಂ. ಸುಧಾಕರ ಚತುರ್ವೇದಿಯವರಿಗೆ ಈಗ ೧೧೬ ವರ್ಷಗಳು. ಬತ್ತದ ಜೀವನೋತ್ಸಾಹದ ಅವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ.  ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ದೇವರ ಫಜೀತಿ
     ಪರಮಾತ್ಮನೇ ಸೃಷ್ಟಿಸಿದ ತೆಂಗಿನಕಾಯಿಯನ್ನು ದೇವಸ್ಥಾನಕ್ಕೆ ಹೋಗಿ ಅವನಿಗೇ ಅರ್ಪಿಸಿ, 'ಭಗವಂತಾ, ನಮಗೆ ಒಳ್ಳೆಯದು ಮಾಡಪ್ಪಾ' ಅಂತಾ ಕೈಮುಗೀತೇವೆ. ನಮಗೆ ಒಳ್ಳೆಯದು ಮಾಡಬೇಕು ಅನ್ನುವುದು ಭಗವಂತನಿಗೆ ಗೊತ್ತಿಲ್ಲವೇ? ಅವನಿಗೆ ನೆನಪಿಸಬೇಕೇ? ಇದನ್ನೆಲ್ಲಾ ಯಾರೂ ಯೋಚನೆ ಮಾಡುವುದಿಲ್ಲ. ಸುಮ್ಮನೆ ಕಣ್ಣು ಮುಚ್ಚಿಕೊಂಡು ಮಾಡುತ್ತಾ ಹೋಗುತ್ತೇವೆ. ನಿಮ್ಮ ಪಕ್ಕದ ಮನೆಯವರನ್ನು ಕಂಡರೆ ನಿಮಗೆ ಆಗುವುದಿಲ್ಲವೆಂದು ಇಟ್ಟುಕೊಳ್ಳಿ. ನೀವು ಪ್ರಾರ್ಥನೆ ಸಲ್ಲಿಸುತ್ತೀರಿ-'ದೇವರೇ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಆ ಪಕ್ಕದ ಮನೆಯವನ ಎರಡೂ ಕಣ್ಣು ಹೋಗಲಿ'. ಆ ಪಕ್ಕದ ಮನೆಯವನೂ ಹಾಗೆಯೇ ಕೇಳುತ್ತಾನೆ. ಪಾಪ, ದೇವರು ಯಾರ ಮಾತು ಕೇಳಬೇಕು? ಫಜೀತಿಗೆ ಸಿಕ್ಕಿಕೊಳ್ಳುತ್ತಾನೆ. ನಿಮ್ಮ ಮಾತು ಕೇಳಿದರೆ ಪಕ್ಕದ ಮನೆಯವನಿಗೆ ಸಿಟ್ಟು ಬರುತ್ತದೆ, ಅವನ ಮಾತು ಕೇಳಿದರೆ ನಿಮಗೆ ಸಿಟ್ಟು ಬರುತ್ತದೆ. 'ಭಗವಂತಾ, ನನ್ನನ್ನು ಪರೀಕ್ಷೆಯಲ್ಲಿ ಪಾಸು ಮಾಡಿಸಿಬಿಡು', 'ಅಪ್ಪಾ, ನನಗೆ ಒಳ್ಳೆಯ ಹೆಣ್ಣು ಸಿಕ್ಕೋ ಹಾಗೆ ಮಾಡು' ಅಂತೆಲ್ಲಾ ಪ್ರಾರ್ಥನೆ ಮಾಡೋದು! ನಮ್ಮ ಸಾಂಸಾರಿಕ ವ್ಯವಹಾರದಲ್ಲಿ ಅವನನ್ನೂ ಸಿಕ್ಕಿಸಲು ಹೋಗುತ್ತೇವೆ.
ಸರ್ವಾಧಾರ ಪರಮಾತ್ಮ
    'ಸ್ಕಂಭೋದಾಧಾರ ಪೃಥಿವೀಮುತದ್ಯಾ . . . .'  ಅಥರ್ವಣ ವೇದದ ಮಂತ್ರ ಇದು. ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸುವುದುಂಟು. ಇಲ್ಲಿ ಅವನನ್ನು ಕಂಬ ಎಂದು ಹೇಳಿದ್ದಾರೆ. ಭೂಲೋಕ ಪರಲೋಕಗಳನ್ನು ಕಂಬದಂತಿರುವ ಪರಮಾತ್ಮ ಎತ್ತಿ ಹಿಡಿದಿದ್ದಾನೆ ಎಂದು ಇದರ ಅರ್ಥ. ಅವನು ಎತ್ತಿ ಹಿಡಿಯದಿದ್ದರೆ ಎಲ್ಲವೂ ಛಿದ್ರ ಛಿದ್ರವೇ. ಭೂಮಿಯ ಆಕರ್ಷಣ ಶಕ್ತಿ ಸೀಮಿತ. ಎಲ್ಲಾ ಕಡೆ ವ್ಯಾಪಿಸಿಲ್ಲ. ಭೂಮಿಯ ಈ ಆಕರ್ಷಣ ಶಕ್ತಿ ಚಂದ್ರನನ್ನು ತನ್ನ ಸುತ್ತ ತಿರುಗುವಂತೆ ನೋಡಿಕೊಳ್ಳುತ್ತಿದೆ. ಈ ಆಕರ್ಷಣ ಶಕ್ತಿ ಇಲ್ಲದಿದ್ದರೆ ಚಂದ್ರ ಎಲ್ಲೋ, ನಾವು ಎಲ್ಲೋ! ಭಗವಂತನ ನಿಯಮವೇ ಹಾಗೆ. ಮನುಷ್ಯನ ನಿಯಮ ವ್ಯತ್ಯಾಸ ಆಗಬಹುದು. ಭಗವಂತನ ನಿಯಮ ವ್ಯತ್ಯಾಸವಾಗುವುದಿಲ್ಲ.
ಒಂದು ರಾಜ್ಯಕ್ಕೆ ಹಲವರು ರಾಜರು!
     ನಾವು ಭಗವಂತನನ್ನು ಸಾರ್ವಕಾಲಿಕ, ಸಾರ್ವದೇಶಿಕ ಎಂತೆಲ್ಲಾ ಹೇಳುತ್ತೇವೆ. ನಮಗೆ ಬ್ರಹ್ಮಾಂಡ ಎಷ್ಟಿದೆ ಗೊತ್ತಿಲ್ಲ. ನಮ್ಮ ಸರ್ವ ಅನ್ನುವುದು ಚಿಕ್ಕದು. ಎಲ್ಲವನ್ನೂ ತಿಳಿಯುವುದು ನಮಗೆ ಸಾಧ್ಯವೇ ಇಲ್ಲ. ಅಷ್ಟೇ ಏಕೆ, ನಮ್ಮ ಭೂಮಿ ಬಗ್ಗೆ ತಿಳಿಯ ಹೊರಟರೆ ನಮ್ಮ ತಲೆ ತಿರುಗುತ್ತೆ. ನಮ್ಮ ಮನೆಯೇ ನಮಗೆ ಒಂದು ಪ್ರಪಂಚ. ಈ ಮನೆಯಲ್ಲೂ ಒಳಗೆ ಕುಳಿತವರಿಗೆ ಹೊರಗಿನವರು ಕಾಣುವುದಿಲ್ಲ, ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ನಮ್ಮ ಪರಿಸ್ಥಿತಿ ಸಂಕುಚಿತ. ಹೀಗಿರುವಾಗ ನಾವು ಸರ್ವಜ್ಞರು ಅಂದುಕೊಂಡರೆ ಆ ಸರ್ವ ಅನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾರೂ ಸರ್ವಜ್ಞರಲ್ಲ. ಈ ಮಾತು ಹೇಳಿದರೆ ಕೆಲವರಿಗೆ ಕೋಪ ಬರುತ್ತೆ. ಶಂಕರಾಚಾರ್ಯರು ಸರ್ವಜ್ಞರಲ್ಲವೇ, ರಾಮಾನುಜಾಚಾರ್ಯರು ಸರ್ವಜ್ಞರಲ್ಲವೇ, ಮಧ್ವರು ಸರ್ವಜ್ಞರಲ್ಲವಾ ಅನ್ನುತ್ತಾರೆ. (ಅವರುಗಳು ತಮ್ಮನ್ನು ಸರ್ವಜ್ಞರು ಅಂದುಕೊಳ್ಳಲಿಲ್ಲ. ಅವರ ಅನುಯಾಯಿಗಳು ಅನ್ನುತ್ತಾರೆ!) ಇಷ್ಟೊಂದೆಲ್ಲಾ ಸರ್ವಜ್ಞರಿದ್ದರೆ ಆ ಸರ್ವನ ಗತಿಯೇನು? ಒಂದು ಭೂಪ್ರದೇಶವನ್ನು ಒಬ್ಬ ರಾಜ ಆಳಬಹುದು. ಅದೇ ೨೫ ರಾಜರು ಕಿತ್ತಾಡಿ ಆಳಿದರೆ ಆ ರಾಜ್ಯದಲ್ಲಿ ಬಾಳುವ ಪ್ರಜೆಗಳಿಗೆ ಏನು ಸುಖ? ಆದ್ದರಿಂದ ಒಬ್ಬ ನಿಯಾಮಕನನ್ನು ನಂಬಬೇಕು. ನನ್ನ ಗುರು ದೊಡ್ಡವನು, ನಿನ್ನ ಗುರು ಚಿಕ್ಕವನು ಅನ್ನುವ ಮಾತು ತಕ್ಕದ್ದಲ್ಲ. ಈಗಿನ ಕಾಲದಲ್ಲಿ ಗುರುಗಳ ಕಾಟ ಬಹಳ ಜಾಸ್ತಿ. ಕೆಲವರು ಗುರುಗಳಿಗೆ ಶಿಷ್ಯರೇ ಇಲ್ಲ. ಶಿಷ್ಯರುಗಳಿಗಿಂತ ಗುರುಗಳೇ ಜಾಸ್ತಿ ಈಗ. ಗುರು ಅಂದರೆ ಭಾರ, ದೊಡ್ಡವನು ಎಂದರ್ಥ. ಸತ್ಯವನ್ನು ಉಪದೇಶಿಸುವವನೇ ಗುರು. ಸತ್ಯ ಬಿಟ್ಟು ನಾನು ಹೇಳುವುದೇ ಸತ್ಯ ಎಂದು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳುತ್ತಾ ಹೋಗುತ್ತಾರೆ. ಆ ಗುರು ದೊಡ್ಡವನು, ಈ ಗುರು ಚಿಕ್ಕವನು ಅನ್ನುವುದೆಲ್ಲಾ ಇಲ್ಲ. 'ಸತ್ಯಮೇವ ಜಯತೇ ನಾನೃತಮ್. . . . . ' ದೇವಗುಣ ಸಂಪನ್ನರಿಗೆ, ದೇವಜ್ಞರಿಗೆ ಸತ್ಯ ಯೋಗ್ಯವಾದ ದಾರಿ ತೋರಿಸುತ್ತದೆ. ಸತ್ಯವನ್ನು ಆಶ್ರಯಿಸಿದರೆ ಮಾತ್ರ ಸುಖ. ಹಿಂದೆ ಮೇಷ್ಟ್ರಿಗೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಇಂದು ಮೇಷ್ಟ್ರೇ ಹುಡುಗರಿಗೆ ಹೆದರುತ್ತಾ ಶಾಲಾಕೊಠಡಿಗೆ ಹೋಗುತ್ತಾರೆ, ಯಾರು ಏನು ಕೀಟಲೆ ಮಾಡುತ್ತಾರೋ, ಏನು ತೊಂದರೆ ಕೊಡುತ್ತಾರೋ ಅಂತ! ಕಾಲ ಹಾಗೆ ಬಂದಿದೆ. ಅದಕ್ಕೇ ಈ ಪ್ರಪಂಚದಲ್ಲಿ ಶಾಂತಿ ಇಲ್ಲ. ಸುಖ ಶಾಂತಿ ಬೇಕೆಂದರೆ ಸತ್ಯವನ್ನು ಆಶ್ರಯಿಸಬೇಕು.
ಗಿಣಿಪಾಠ
      ಅದೇನು ಮಂತ್ರವೋ ಗೊತ್ತಿಲ್ಲದೆ ೪೦-೫೦ ವರ್ಷಗಳಿಂದ ಅಗ್ನಿಹೋತ್ರ ಮಾಡುವವರು, ಪೂಜೆ, ಜಪ,ತಪ ಮಾಡುವವರು ನನಗೆ ಗೊತ್ತಿದ್ದಾರೆ. ಒಂದು ಮಂತ್ರದ ಅರ್ಥವೂ ಗೊತ್ತಿಲ್ಲವೆಂದರೆ ಪ್ರಯೋಜನವೇನು? ಇದರಿಂದ ಲಾಭ ಉಂಟೇ? ಶುಕಪಾಠ -ಗಿಳಿಪಾಠ- ಅಂತ ಹೇಳ್ತಾರೆ. ರಾಮ-ರಾಮ ಅಂತ ಗಿಳಿಗೆ ಹೇಳಿಕೊಟ್ಟರೆ ಅದು ರಾಮ-ರಾಮ ಅನ್ನುತ್ತೆ. ಅದಕ್ಕೆ ರಾಮ ಯಾರು, ರಾವಣ ಯಾರು ಗೊತ್ತೇನು? ಅದರ ತಲೆಯಲ್ಲಿ ಆ ವಿಷಯ ಇರುವುದೇ ಇಲ್ಲ. ಅಂತಹ ಪಾಠವನ್ನು ನಾವೂ ಮಾಡಿದರೆ ಏನು ಪ್ರಯೋಜನ? ಅರ್ಥಸಹಿತವಾಗಿ ತಿಳಿದುಕೊಂಡರೆ ಆ ಮಂತ್ರಗಳಲ್ಲಿ ಏನು ಅರ್ಥ ಇದೆ ಅದನ್ನು ಜೀವನಕ್ಕೆ ತರಬಹುದು. 'ಅರ್ಥ ಗೊತ್ತಿಲ್ಲದೆ ಮಂತ್ರ ಹೇಳ್ತೀರಲ್ಲಾ, ಅದರಿಂದ ಏನು ಲಾಭ?' ಅಂತ ಅವರನ್ನು ಕೇಳಿದರೆ, ಅವರು ಕೊಟ್ಟ ಉತ್ತರ -"ಭಗವಂತನಿಗೇ ಗೊತ್ತು ಸ್ವಾಮಿ, ನಮಗೆ ಅದೆಲ್ಲಾ ಯಾಕೆ ಬೇಕು? ನಮ್ಮ ತಂದೆ ಮಾಡ್ತಾ ಇದ್ದರು,  ನಾವೂ ಮಾಡ್ತಾ ಇದೀವಿ. ಮಂತ್ರದ ಅರ್ಥ ಅವನಿಗೆ ಗೊತ್ತಿಲ್ವಾ? ತಿಳಿದುಕೊಳ್ಳುತ್ತಾನೆ. ನಮಗೆ ಅರ್ಥ  ಗೊತ್ತಿಲ್ಲದೇ ಹೋದರೆ ಏನಂತೆ? ಭಗವಂತನಿಗೆ ಗೊತ್ತಾಗಲ್ವಾ?" ವೇದ ಉಪದೇಶ ಮಾಡಿರುವುದು ಭಗವಂತ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅಲ್ಲ, ಮಾನವಜಾತಿಯ ಬುದ್ಧಿಶಕ್ತಿಯನ್ನು ಎಚ್ಚರಿಸುವ ಸಲುವಾಗಿ ವೇದ ಇರುವುದು! ಅದನ್ನೇ ತಿಳಿಯದೇ ಗಿಳಿಪಾಠ ಮಾಡಿದರೆ ಏನು ಲಾಭ? ಸ್ವಲ್ಪ ಲಾಭ ಇದೆ, ಮಂತ್ರ ಪಾಠ ಮಾಡುವ -ಅರ್ಧ ಗಂಟೆಯೋ ಒಂದು ಗಂಟೆಯೋ- ಆ ಸಮಯದಲ್ಲಿ ಯಾರನ್ನೋ ಬಯ್ಯುವುದಕ್ಕೋ, ಕೆಟ್ಟ ಮಾತಾಡುವುದಕ್ಕೋ, ಇನ್ನು ಯಾವುದೋ ಕೆಟ್ಟ ರೀತಿಯಲ್ಲಿ ಬಳಕೆಯಾಗಬಹುದಾದುದು ತಪ್ಪಿದ ಲಾಭ!
*********************
ಹಿಂದಿನ ಲೇಖನಕ್ಕೆ ಲಿಂಕ್:  

ಭಾನುವಾರ, ಏಪ್ರಿಲ್ 15, 2012

ಸಾರಗ್ರಾಹಿಯ ರಸೋದ್ಗಾರಗಳು -1



     ಪಂ. ಸುಧಾಕರ ಚತುರ್ವೇದಿಯವರಿಗೆ ಈಗ ೧೧೬ ವರ್ಷಗಳು. ಬತ್ತದ ಜೀವನೋತ್ಸಾಹದ ಅವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ.  ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇನ್ನು ಮುಂದೆ ಅವರ ವಿಚಾರದ ತುಣುಕುಗಳು . . . 
-ಕ.ವೆಂ.ನಾಗರಾಜ್.
****************
ವಿವೇಚಿಸೋಣ
     ಪಶು-ಪಕ್ಷಿ, ಕ್ರಿಮಿ-ಕೀಟಗಳಿಗೂ ಮಾನವರಿಗೂ ಇರುವ ವ್ಯತ್ಯಾಸವೆಂದರೆ ಆ ಕ್ರಿಮಿ-ಕೀಟ, ಪಶು-ಪಕ್ಷಿಗಳು ತಮ್ಮ ಸ್ವಾಭಾವಿಕ ಪ್ರಕೃತಿ ಅನುಸರಿಸಿ ಬಾಳುತ್ತವೆ. ಒಂದು ನಾಯಿ ಒಂದು ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆ ನಾಯಿಯ ತಲೆಯೊಳಗೆ ಆ ಬೆಕ್ಕು ಶತ್ರು ಎಂದು ಇರುವುದಿಲ್ಲ, ಅದು ಅದರ ಸ್ವಾಭಾವಿಕ ಪ್ರವೃತ್ತಿ, ಬೆಕ್ಕಿಗೆ ಇಲಿಯ ಮೇಲೆ ಏನಾದರೂ ಕೋಪ ಇದೆಯೇನು? ಇಲಿಗೂ ಅಷ್ಟೆ, ಬೆಕ್ಕಿನ ಮೇಲೆ ಕೋಪ ಇಲ್ಲ. ಸ್ವಾಭಾವಿಕ ಪ್ರವೃತ್ತಿ, ಯೋಚನೆ ಮಾಡುವ ಶಕ್ತಿ ಇಲ್ಲ, ಹಸಿವಾದಾಗ ಏನಾದರೂ ತಿನ್ನಬೇಕು, ಬಾಯಾರಿದಾಗ ಏನಾದರೂ ಕುಡಿಯಬೇಕು, ಅಷ್ಟೇ ಅವಕ್ಕೆ ಗೊತ್ತಿರುವುದು. ಆದರೆ ಮಾನವರಿಗೆ ವಿವೇಚನೆ ಮಾಡುವ ಶಕ್ತಿ ಇದೆ.  ತೆಂಗಿನ ಮರ ಇದೆ, ಈಚಲ ಮರ ಇದೆ, ಇವೆಲ್ಲಾ ಭಗವಂತನ ಸೃಷ್ಟಿಯೇ. ಪರಮಾತ್ಮ ತೆಂಗಿನ ಮರವನ್ನಾಗಲೀ, ಈಚಲಮರವನ್ನಾಗಲೀ ಸೃಷ್ಟಿಸಿರುವುದು, ಅದರಿಂದ ಹೆಂಡ ಇಳಿಸಿ ಕುಡಿದು ಮತ್ತಿನಿಂದ ಕುಣಿದಾಡಲಿ ಅನ್ನುವ ಉದ್ದೇಶದಿಂದ ಅಲ್ಲ. ಪ್ರಾಣಿಗಳನ್ನು ಸೃಷ್ಟಿಸಿರುವುದು ಅವನ್ನು ತಿಂದು ತೇಗಲಿ ಎಂದಲ್ಲ. ಯಾವುದನ್ನು ಯಾವುದಕ್ಕೆ ಉಪಯೋಗಿಸಬೇಕು, ಹೇಗೆ ಉಪಯೋಗಿಸಬೇಕು ಎಂದು ವಿವೇಚಿಸಿ ಉಪಯೋಗಿಸಬೇಕು. ಆದರೆ ಉಪಯೋಗ ಮಾಡುವಾಗ ನಾವು ತಪ್ಪುತ್ತೇವೆ. ಯಾವ ಕೆಲಸಕ್ಕೆ ಯಾವ ಪದಾರ್ಥ ಉಪಯೋಗಿಸಬೇಕೋ ಅದನ್ನು ಉಪಯೋಗಿಸುವುದಿಲ್ಲ.
     ಭಗವಂತ ಈ ಭೂಮಿ, ಆಕಾಶ, ನೀರು, ಬೆಂಕಿ, ಗಾಳಿ ಯಾವುದನ್ನೂ ನಿರರ್ಥಕವಾಗಿ ಕೊಟ್ಟಿಲ್ಲ. ಪ್ರತಿಯೊಂದಕ್ಕೂ ಒಂದೊಂದು ಉದ್ದೇಶ ಇದ್ದೇ ಇದೆ. ಈ ಬೆಂಕಿ ಇದೆ, ಅದನ್ನು ಒಳ್ಳೆಯ ಕೆಲಸಕ್ಕೆ ಅಂದರೆ ಅಡಿಗೆ ಮಾಡುವುದಕ್ಕೆ, ಅಗ್ನಿಹೋತ್ರ ಮಾಡುವುದಕ್ಕೆ, ಇತ್ಯಾದಿಗೆ ಬಳಸಬಹುದು. ಪಕ್ಕದ ಮನೆಯವನ ಮೇಲೆ ಕೋಪ ಇದೆ ಅಂತ ಅವನ ಮನೆಯನ್ನು ಸುಡಲು ಬಳಸಿದರೆ ಆ ಬೆಂಕಿ ಏನು ಮಾಡುತ್ತೆ? ಬೆಂಕಿಗೆ ವಿವೇಕವಿಲ್ಲ, ಅದರ ಕೆಲಸ ಸುಡುವುದು ಅಷ್ಟೆ. ವಾಯುಶುದ್ಧಿ ಬಗ್ಗೆ ಮಾತಾಡ್ತೀವಿ, ಅಗ್ನಿಹೋತ್ರ ಮಾಡ್ತೀವಿ, ಒಂದು ಚಮಚ ತುಪ್ಪ ಒಬ್ಬರು ತಿನ್ನಬಹುದು. ಅದನ್ನೇ ಅಗ್ನಿಗೆ ಹಾಕಿದರೆ ಅದು ನಾಶವಾಗುವುದಿಲ್ಲ, ಸೂಕ್ಷ್ಮ ಕಣಗಳಾಗಿ ಪರಿವರ್ತಿತವಾಗಿ ವಾಯುವಿನಲ್ಲಿ ಹರಡಿ ಅದನ್ನು ಎಷ್ಟು ಜನ ಉಸಿರಾಡುತ್ತಾರೋ ಅವರಿಗೆಲ್ಲಾ ಉಪಯೋಗವಾಗುತ್ತದೆ ಬಡವ ಇರುತ್ತಾನೆ, ಅವನಿಗೆ ಅಗ್ನಿಹೋತ್ರಕ್ಕೆ ಪಾತ್ರೆ ಉಪಯೋಗಿಸುವ ಶಕ್ತಿ ಇಲ್ಲ ಎಂದಿಟ್ಟುಕೊಳ್ಳಿ. ಅವನು ಮಣ್ಣಿನ ಮಡಿಕೆಯನ್ನೇ ಉಪಯೋಗಿಸಬಹುದು, ಏನೂ ಪರವಾಗಿಲ. ಚಿನ್ನದ ಪಾತ್ರೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ, ಮಣ್ಣಿನ ಕುಡಿಕೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ. ಅದಕ್ಕೆ ಬಡವರು, ಶ್ರೀಮಂತರು ಅನ್ನುವ ಭೇದ ಇಲ್ಲ. ಬೆಂಕಿಯಿಂದ ಅಡಿಗೆ ಮಾಡುವುದು, ಹವನ ಮಾಡುವುದು, ಇಷ್ಟೇ ಮಾಡ್ತೀವೇನು? ಬೀಡಿ, ಸಿಗರೇಟು, ಚುಟ್ಟಾ ಸೇದಲೂ ಬಳಸುತ್ತೇವೆ. ಆ ಬೆಂಕಿ ಪಾಪ, ಅದೇನು ಮಾಡುತ್ತೆ? ಯಾವುದನ್ನು ಕೊಟ್ಟರೂ ಸುಡುತ್ತೆ. ವಾಯುಶುದ್ಧಿ ಬಗ್ಗೆ ಮಾತಾಡುವ ಬದಲು ಅದಕ್ಕೆ ಏನು ಬೇಕೋ ಅದನ್ನು ಮಾಡಬೇಕು. ವಾಯುವೇ ಸ್ವಾಹಾ ಅನ್ನುವುದು, ಬೀಡಿ. ಚುಟ್ಟಾ ಹಚ್ಚುವುದು! ಏನು ಪ್ರಯೋಜನ? ಈ ತರಹ ಆಲೋಚನೆ ಮಾಡಬೇಕು.
ನರಜನ್ಮ ದೊಡ್ಡದು
     ನಾವು ಯಾವ ದಾರಿಯನ್ನು ಹಿಡಿದು ನಡೆಯಬೇಕು, ಯಾವ ದಾರಿಯಲ್ಲಿ ಹೋದರೆ ನಮಗೆ ಆತ್ಮವಿಕಾಸ ಉಂಟಾಗುತ್ತದೆ ಅನ್ನುವ ವಿಷಯದಲ್ಲಿ ವೇದದ ಒಂದು ಮಂತ್ರದಲ್ಲಿ ವಿವರಿಸಿದೆ. ಇದು ಪ್ರಾರ್ಥನಾ ರೂಪದಲ್ಲಿದೆ. ವೇದಗಳಲ್ಲಿ ಇದೊಂದು ವಿಶೇಷ. ಪ್ರಾರ್ಥನಾ ರೂಪದಲ್ಲೇ ಎಲ್ಲವನ್ನೂ ನಾವು ತಿಳಿದುಕೊಳ್ಳುತ್ತೇವೆ. ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ| ಯದ್ಭದ್ರಂ ತನ್ನ ಆ ಸುವ || (ಯಜು. ೩೦.೩.) ಭಗವಂತ, ಜಗತ್ ಶ್ರೇಯಕ, ಜಗತ್ ಉತ್ಪಾದಕ, ನೀನು ನಮಗೆ ಯಾವುದು ಒಳ್ಳೆಯದು ಇದೆಯೋ ಅದರ ಕಡೆಗೆ ಮಾತ್ರ ಕರೆದುಕೊಂಡು ಹೋಗು, ಕೆಟ್ಟದರಿಂದ ನಮ್ಮನ್ನು ದೂರ ಇರಿಸು ಎಂದು ಇದರ ಅರ್ಥ. ತಾತ್ಪರ್ಯವೆಂದರೆ ನಮ್ಮ ನಡೆಯಲ್ಲಿ ನಮ್ಮ ನುಡಿಯಲ್ಲಿ ಕೊಂಕು, ಸುತ್ತು ಇರಬಾರದು, ನೇರವಾದ ಮಾತು, ನೇರವಾದ ಯೋಚನೆಗಳು, ನೇರವಾದ ಕಾರ್ಯಗಳು, ಹೀಗಿದ್ದರೆ ಮಾತ್ರ ನಾವು ಧರ್ಮಿಗಳಾಗುತ್ತೇವೆ. ಮನುಷ್ಯ ಜನ್ಮ ಸಿಕ್ಕುವುದೇ ಕಷ್ಟ. ಸಿಕ್ಕಿರುವಾಗ ಅದನ್ನು ವ್ಯರ್ಥವಾಗಿ ಕಳೆಯುವುದು ಯಾರಿಗೂ ಶುಭವಲ್ಲ. ಜ್ಞಾಪಕವಿಟ್ಟುಕೊಳ್ಳಿ, ೮೬ ಲಕ್ಷ ಯೋನಿಗಳಿವೆ ಎನ್ನುತ್ತಾರೆ, ಅದರಲ್ಲಿ ಇದೂ ಒಂದು. ಸ್ವಲ್ಪ ಕಾಲು ಜಾರಿತೆಂದರೆ ಮನುಷ್ಯ ಜನ್ಮದಿಂದ ಕೆಳಗೆ ಬೀಳುತ್ತೇವೆ. ಮತ್ತೆ ಮೇಲಕ್ಕೆ ಬರಬೇಕೆಂದರೆ ಎಷ್ಟು ಜನ್ಮ ಜನ್ಮಾಂತರಗಳು ಬೇಕೋ ಗೊತ್ತಿಲ್ಲ. ಸಿಕ್ಕಿದೆಯಲ್ಲಾ ಮಾನವಜನ್ಮ, ಈ ಜನ್ಮದಲ್ಲಿ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ? ನಾವು ಒಂದು ವಿಷಯ ಮರೆಯುತ್ತೇವೆ, ೮೬ ಲಕ್ಷ ಹೋಗಲಿ, ಈ ಒಂದು ಜನ್ಮ ಇದೆಯಲ್ಲಾ ಇದು ಸಿಕ್ಕಬೇಕಾದರೆ ನಾವು ಎಷ್ಟು ಸಲ ಈ ಪ್ರಪಂಚಕ್ಕೆ ಬಂದಿರಬಹುದು, ಹೋಗಿರಬಹುದು! ಹಳೆಯ ಜನ್ಮದ ನೆನಪಿಲ್ಲ. ಕೆಲವರು ಹೇಳುತ್ತಾರೆ - ಪುನರ್ಜನ್ಮ ಇದ್ದರೆ ನೆನಪಿರಬೇಕಿತ್ತು, ನೆನಪೇಕಿಲ್ಲ? ಅದಕ್ಕೆ ಎರಡು ಕಾರಣ ಕೊಡಬಹುದು: ಒಂದು, ಹಳೆಯ ಜನ್ಮದ ಒಳ್ಳೆಯ, ಕೆಟ್ಟ ಸಂಗತಿಗಳು ನೆನಪಿದ್ದರೆ, ಒಳ್ಳೆಯ ವಿಷಯಗಳನ್ನೇನೋ ಉತ್ಸಾಹದಿಂದ ಒಪ್ಪಿಕೊಳ್ಳಬಹುದು, ಕೆಟ್ಟ ವಿಷಯಗಳಿದ್ದರೆ ಈ ಜನ್ಮದ ಸುಖ ಎಲ್ಲೋ ಹೊರಟುಹೋಗುತ್ತದೆ. ನಾವು ಹಿಂದಿನ ಜನ್ಮದಲ್ಲಿ ಯಾರದೋ ಮನೆ ಕೊಳ್ಳೆ ಹೊಡೆದಿದ್ದೇವೆಂದು ನೆನಪಿಗೆ ಬಂದರೆ ಈ ಜನ್ಮದಲ್ಲಿ ನಮ್ಮ ಮನೆಯನ್ನು ಇನ್ನು ಯಾರು ಕೊಳ್ಳೆ ಹೊಡೆಯುತ್ತಾರೋ, ಏನು ಮಾಡುತ್ತಾರೋ ಎಂದು ಚಿಂತೆಯಲ್ಲೇ ನೆಮ್ಮದಿ ಕಳೆದುಕೊಳ್ಳುತ್ತೇವೆ. ಎರಡನೆಯದು, ಈಗಿರುವ ಜನ್ಮದಲ್ಲೇ ನಮಗೆ ಎಲ್ಲಾ ವಿಷಯ ನೆನಪಿನಲ್ಲಿ ಇರುವುದಿಲ್ಲ, ಅದು ಭಗವಂತನ ಕರುಣೆ ಎಂದಿಟ್ಟುಕೊಳ್ಳಿ. ಜ್ಞಾಪಕ ಇದ್ದಿದ್ದರೆ ಕೆಟ್ಟದು ನೆನಪಿಗೆ ಬಂದರೆ ಅದರ ಚಿಂತೆಯಲ್ಲೇ, ಕೊರಗಿನಲ್ಲೇ ಜೀವನ ಕಳೆದುಹೋಗುತ್ತಿತ್ತು.
...............(ಮುಂದುವರೆಯುವುದು)

ಶನಿವಾರ, ಏಪ್ರಿಲ್ 14, 2012

ಒಂಟಿತನ ಮತ್ತು ಏಕಾಂತ




     ಒಂಟಿತನ - ಮಾನವ ಜೀವಿಗಳು ಸಾಮಾನ್ಯವಾಗಿ ಅನುಭವಿಸುವ ಅನಿವಾರ್ಯ ಸ್ಥಿತಿ. ತಾನೊಬ್ಬನೇ, ತನ್ನೊಡನೆ ಇತರರಿಲ್ಲ ಎಂಬ ಭಾವವನ್ನು, ಇನ್ನೊಬ್ಬರ ತೀವ್ರವಾದ ಅಗತ್ಯವಿದ್ದು, ಸಿಗದಿದ್ದಾಗ ಉಂಟಾಗುವ ಸ್ಥಿತಿಯನ್ನು ಒಂಟಿತನವೆನ್ನಬಹುದು. ಇಂತಹ ಸ್ಥಿತಿಯಲ್ಲಿ ಆಹಾರ ರುಚಿಸುವುದಿಲ್ಲ, ನೀರು ಹಿತವಾಗುವುದಿಲ್ಲ. ಆಹಾರ ಸೇವಿಸಿದರೂ ಅನಿವಾರ್ಯ ಕ್ರಿಯೆಯಂತೆ ಜರುಗುವುದು. ಯಾವ ವಿಷಯಗಳಲ್ಲೂ ಆಸಕ್ತಿ ಬರದು. ಆಲಸ್ಯತನ ಮೈವೆತ್ತುವುದು. ಗಡಿಯಾರದ ಚಲನೆ ಅತ್ಯಂತ ನಿಧಾನವಾಗಿ ತೋರುವುದು. ತಾತ್ಕಾಲಿಕ ಒಂಟಿತನ ಸಹ್ಯವಾಗಬಹುದು, ಆದರೆ ದೀರ್ಘಕಾಲದ ಅನಿವಾರ್ಯ ಒಂಟಿತನ ಖಿನ್ನತೆಗೆ ದೂಡುತ್ತದೆ, ಇನ್ನಿತರ ಕಾಯಿಲೆಗಳಿಗೂ ದಾರಿ ಮಾಡಿಕೊಡುತ್ತದೆ. ಒಂಟಿತನದಿಂದ ಬರುವ ಹತಾಶೆ, ಸಿಟ್ಟು, ಅಸಹಾಯಕತೆಗಳು ಹುದುಗಿಟ್ಟಿಸಿದ್ದ ಆಕ್ರೋಶ ಒಮ್ಮೆಲೇ ಹೊರನುಗ್ಗಿ ಅಸಹ್ಯಕರ ವಾತಾವರಣ ಸೃಷ್ಟಿಸುವುದರ ಜೊತೆಗೆ, ಸಂಬಂಧಗಳನ್ನು ಶಾಶ್ವತವಾಗಿ ಮುರಿಯುವಂತೆ ಮಾಡಬಹುದು. ಪರಿಸ್ಥಿತಿ ಬಿಗಡಾಯಿಸಿ ಇತರರಿಗೂ ಮತ್ತು ಮುಖ್ಯವಾಗಿ ಸಂಬಂಧಿಸಿದವರಿಗೇ ಸರಿಡಿಸಲಾಗದ ಹಾನಿ ಉಂಟು ಮಾಡಬಹುದು. ಇಂತಹ ಸಂದರ್ಭಗಳಲ್ಲಿ ದುರ್ಬಲ ಮನಸ್ಕರು ಆತ್ಮಹತ್ಯೆ ಸಹ ಮಾಡಿಕೊಳ್ಳಬಹುದು. ಒಂಟಿತನದ ಭಾವವೆಂದರೆ ಸ್ನೇಹಕ್ಕಾಗಿ ಹಪಹಪಿಸುವ ಹಂಬಲಿಕೆಯ ಸೂಚಿ. 
     ಹಲವಾರು ರೀತಿಯ ಒಂಟಿತನಗಳನ್ನು ಗಮನಿಸಬಹುದು. ಒಂದು ಉದಾಹರಣೆ ನೋಡೋಣ. ಅವನೊಬ್ಬ ಆದರ್ಶವಾದಿ ಯುವಕ. ಹಲವಾರು ಕನಸುಗಳನ್ನು ಕಟ್ಟಿಕೊಂಡವನು, ನ್ಯಾಯ, ನೀತಿ, ಧರ್ಮ ಎಂದು ಹೋರಾಡುವ ಮನೋಭಾವದ ಅವನಿಗೆ ಕುಟುಂಬದ ಸದಸ್ಯರ ಸಹಕಾರ, ಬೆಂಬಲ ಸಿಗುವುದಿಲ್ಲ. ನಾಲ್ಕು ಜನರಂತೆ ನಮ್ಮ ಹುಡುಗ ಇಲ್ಲ, ಅವನು ಉದ್ಧಾರವಾಗುವುದಿಲ್ಲವೆಂಬ ಆತಂಕ ಅವನ ಪೋಷಕರಿಗೆ. ಅನೇಕ ರೀತಿಯಲ್ಲಿ ತಿಳಿ ಹೇಳುತ್ತಾರೆ, ಬೈದು ಬುದ್ಧಿ ಹೇಳುತ್ತಾರೆ, ಅವರಿವರಿಂದ ಉಪದೇಶ ಮಾಡಿಸುತ್ತಾರೆ. ಆದರೆ ಆದರ್ಶದ ಬೆನ್ನು ಬಿದ್ದ ಯುವಕನಿಗೆ ಅವಾವುದೂ ರುಚಿಸುವುದಿಲ್ಲ. ಒಳ್ಳೆಯ ವಿಚಾರಕ್ಕೆ ಮನೆಯವರೇ ಬೆಂಬಲಿಸದಿದ್ದರೆ ಹೇಗೆ ಎಂಬುದು ಅವನ ವಾದ. ಕೊನೆಗೆ ಮನೆಯವರು ಸುಮ್ಮನಾದರೂ ಅವರ ಕಿರಿಕಿರಿ, ಗೊಣಗಾಟಗಳು ತಪ್ಪುವುದೇ ಇಲ್ಲ. ಕಠಿಣ ಆದರ್ಶದ ಹಾದಿ ಹಿಡಿದ ಅವನಿಗೆ ಮನೆಯ ಹೊರಗೂ ಪ್ರೋತ್ಸಾಹ ಸಿಗುವುದಿಲ್ಲ. ತಾನು ಮಾಡುತ್ತಿರುವುದು ಸರಿ ಎಂಬ ಅವನ ಅಂತರಂಗದ ಒಪ್ಪಿಗೆ ಮಾತ್ರ ಅವನ ಜೊತೆಗಾರನಾಗಿರುತ್ತದೆ. ಬೆನ್ನು ತಟ್ಟುವವರಿಲ್ಲದ ಅವನನ್ನು ಪ್ರಿಯರ ಹೀನೈಕೆ ಜೊತೆಗೂಡಿ ಕುಗ್ಗಿಸುತ್ತದೆ, ಒಂಟಿತನದ ಅನುಭವ ಮಾಡಿಸುತ್ತದೆ. 'ಒಳ್ಳೆಯವನಾಗು, ನೀನು ಒಂಟಿಯಾಗುವೆ' ಎಂಬ ಮಾತು ಅವನಂತಹವರನ್ನು ಕಂಡೇ ಹೇಳಿದ್ದಿರಬೇಕು.
     ಹದಿಹರೆಯದ ಹುಚ್ಚು ಪ್ರೇಮಿಗಳ ಒಂಟಿತನ ಮತ್ತೊಂದು ತರಹ. ಅವನಿಲ್ಲದೆ/ಅವಳಿಲ್ಲದೆ ಬಾಳು ಶೂನ್ಯ ಎಂದು ಭಾವಿಸಿ ಕೊರಗುವ, ಹುಚ್ಚಾಗುವ ದೇವದಾಸಗಳದ್ದು ಒಂದು ರೀತಿಯಾದರೆ, ತನಗೆ ದಕ್ಕದ ಅವಳು/ಅವನು ಬೇರೆಯವರಿಗೂ ಸಿಗಬಾರದು ಎಂದು ಆಸಿಡ್ ಎರಚುವರದು, ಕೊಲೆ ಮಾಡುವರದು ಮತ್ತೊಂದು ರೀತಿ. ಆತ್ಮಹತ್ಯೆ ಮಾಡಿಕೊಳ್ಳುವವರದೂ ಒಂಟಿತನವನ್ನು ಎದುರಿಸಲಾಗದವರ ಮಗದೊಂದು ರೀತಿ. ಅವನ/ಅವಳ ನೆನಪಿನಲ್ಲಿ ಕೊನೆಯವರೆಗೂ ಮದುವೆಯಾಗದೇ ಉಳಿಯುವ ಪ್ರೇಮಿಗಳನ್ನೂ, ಮಾನಸಿಕ ಕಾಯಿಲೆಗಳಿಂದ ನರಳುವವರನ್ನೂ ಕಾಣಬಹುದು. ಅವನು/ಅವಳು ಜೊತೆಗಿರದ ಕಾರಣ ಕಾಡುವ ಒಂಟಿತನದ ಪರಿಣಾಮಗಳಿವು. ಕೇವಲ ಇವರಷ್ಟೇ ಅಲ್ಲ, ತಾವು ಅತಿಯಾಗಿ ಹಚ್ಚಿಕೊಂಡ ಸ್ನೇಹಿತರು, ಬಂಧುಗಳು, ಗಂಡ, ಹೆಂಡತಿ, ಸೋದರ-ಸೋದರಿಯರು, ಮನೆಯವರು ಯಾರೇ ಆಗಲಿ ತಮ್ಮಿಂದ ದೂರವಾದಾಗ/ಕಾಲವಾದಾಗ ಸಹ ಒಂಟಿತನ ಕಾಡದೇ ಇರದು. ಎಷ್ಟರ ಮಟ್ಟಿಗೆ ಅವರನ್ನು ಹಚ್ಚಿಕೊಂಡಿದ್ದರು ಎಂಬುದರ ಮೇಲೆ ಅಂತಹ ಒಂಟಿತನದ ಪರಿಣಾಮ ಬೀರುತ್ತದೆ. ವೃದ್ಧಾಪ್ಯದಲ್ಲಿ ಮಕ್ಕಳು ತಮಗೆ ಏನು ಮಾಡದಿದ್ದರೂ ಪರವಾಗಿಲ್ಲ, ಪ್ರೀತಿಯಿಂದ ಮಾತನಾಡಿಸಿದರೆ ಸಾಕು ಎಂದು ಹಂಬಲಿಸುವ ವೃದ್ಧರ ಸಂಖ್ಯೆಗೂ ಏನೂ ಕಡಿಮೆಯಿಲ್ಲ. 
     ಮೇಲಿನ ಉದಾಹರಣೆಗಳಿಂದ ಪ್ರೀತಿ, ವಿಶ್ವಾಸ, ಸ್ನೇಹದ ಕೊರತೆಯೇ ಒಂಟಿತನದ ಮೂಲವೆಂದು ತಿಳಿಯುವುದಲ್ಲವೇ? ಒಗಟಿನ ಒಳಗೇ ಉತ್ತರ ಅಡಗಿರುವಂತೆ ನಮಗೆ ಒಂಟಿತನ ಕಾಡಬಾರದೆಂದರೆ ಪರಸ್ಪರ ಪ್ರೀತಿ, ವಿಶ್ವಾಸಗಳಿಗೆ ಕನಿಷ್ಠ ನಮ್ಮ ಕಡೆಯಿಂದಲಾದರೂ ತಪ್ಪಾಗದಂತೆ ನೋಡಿಕೊಳ್ಳುವುದರ ಅಗತ್ಯತೆ ಗೋಚರಿಸುತ್ತದೆ. ಆಗ ನಮ್ಮ ಅಂತರಂಗವಾದರೂ ನಮ್ಮ ಜೊತೆಗೆ ಇರುತ್ತದೆ, ಸಮಾಧಾನಿಸುತ್ತದೆ. ನಮ್ಮ ತಪ್ಪಿದ್ದು ತಿದ್ದಿಕೊಳ್ಳದಿದ್ದರೆ ಅಂತರಂಗವೂ ಜೊತೆಗಿರುವುದಿಲ್ಲ. ಕಳೆದುಕೊಳ್ಳುವವರು ಇನ್ನು ಯಾರೂ ಉಳಿದಿಲ್ಲವೆಂದಾದಾಗ, ನಮ್ಮ ಸ್ವಂತಿಕೆಗೆ ಬೆಲೆಯೇ ಇಲ್ಲವಾದಾಗ ಅದನ್ನು ಜೀವನದ ಸಾವು (ಜೀವದ ಸಾವಲ್ಲ) ಎನ್ನಬಹುದು. ಅಂತಹ ಸಾವು ಜೀವನಕ್ಕೆ ಬರಬಾರದೆಂದರೆ ನಮ್ಮ ಒಳಗಿನ ಮಾತುಗಳಿಗೆ ನಾವು ಕಿವಿಗೊಡಲೇಬೇಕು. 
     ಮತ್ತೊಂದು ರೀತಿಯ ಒಂಟಿತನವಿದೆ. ಆ ಒಂಟಿತನದಲ್ಲಿ ಹಿತವಿದೆ. ಅದೆಂದರೆ ವಿವಿಧ ರಂಗಗಳಲ್ಲಿ ಸುಪ್ರಸಿದ್ಧರಾದವರ, ಮುಖಂಡರ, ಹಿರಿಯ ಅಧಿಕಾರಿಗಳ ಒಂಟಿತನ. ಅವರುಗಳು  ಒಂಟಿತನವನ್ನು ಒಪ್ಪಿಕೊಳ್ಳಲೇಬೇಕು, ಅಪ್ಪಿಕೊಳ್ಳಲೇಬೇಕು. 'ಒಂಟಿಯಾಗಿರುವುದೆಂದರೆ ಇತರರಿಗಿಂತ ಭಿನ್ನವಾಗಿರುವುದು, ಇತರರಿಗಿಂತ ಭಿನ್ನವೆಂದರೆ ಒಂಟಿಯಾಗಿರುವುದು' ಎಂದು ಅವರ ಮಟ್ಟಿಗೆ ಹೇಳಬಹುದು. ಅವರುಗಳನ್ನು ಸಮನಾಗಿ ಪರಿಗಣಿಸುವವರ ಸಂಖ್ಯೆ  ಬಹಳ ಕಡಿಮೆ. ಅವರ ಒಂಟಿತನದಲ್ಲೇ ಅವರ ಸೃಜನಾತ್ಮಕ ಶಕ್ತಿ ಹೊರಹೊಮ್ಮುತ್ತದೆ. ಇದರಲ್ಲೂ ಒಂದು ಅಪಾಯವಿದೆ. ಅದೆಂದರೆ ಸುಪ್ರಸಿದ್ಧರಾದವರು ಕಾರಣಾಂತರಗಳಿಂದ ಪ್ರಸಿದ್ಧಿ ಕಳೆದುಕೊಂಡರೆ, ಅಧಿಕಾರ ಚ್ಯುತಿಯಾದರೆ ಅವರ ಜೊತೆಗಿದ್ದು ಬಹುಪರಾಕ್ ಹೇಳುತ್ತಿದ್ದವರು ಇದ್ದಕ್ಕಿದ್ದಂತೆ ಕಣ್ಮರೆಯಾದರೆ ಅವರು ಅನುಭವಿಸುವ ಒಂಟಿತನದ ನೋವು ವರ್ಣನಾತೀತ. ಅದನ್ನು ಅವರು ಮಾತ್ರ ಅರಿಯಬಲ್ಲರು. ಇತ್ತೀಚಿನ ಉದಾಹರಣೆಯೆಂದರೆ ಕ್ಷಣಿಕ ವ್ಯಾಮೋಹದಿಂದಾಗಿ ಅಧಿಕಾರ, ಸ್ಥಾನ, ಮಾನಗಳನ್ನು ಕಳೆದುಕೊಂಡ ಕರ್ನಾಟಕದ ಸಚಿವರ ಜೊತೆಗೆ ಈಗ ಯಾರಿದ್ದಾರೆ? ಒಂದು ರೀತಿಯಲ್ಲಿ ಹೇಳಬೇಕೆಂದರೆ ಅವರಿಗೆ ಈಗ ಆಗಿರುವ, ಆಗುತ್ತಿರುವ ಶಿಕ್ಷೆ ಕಡಿಮೆಯೇನಲ್ಲ.
     ಇನ್ನೊಂದು ಅಪಾಯಕಾರಿ ಒಂಟಿತನದ ಬಗ್ಗೆ ನೋಡೋಣ. ಅದೆಂದರೆ ಒಟ್ಟಿಗಿದ್ದರೂ ಕಾಡುವ ಒಂಟಿತನ. ಸಾಗರದ ಮಧ್ಯದಲ್ಲಿದ್ದು 'ಎಲ್ಲೆಲ್ಲೂ ನೀರು, ಕುಡಿಯಲು ತೊಟ್ಟೂ ನೀರಿಲ್ಲ' ಎಂಬಂತಹ ಸ್ಥಿತಿ ಅದು. ಯಾವುದೋ ಒಂದು ಕುಟುಂಬದ ಉದಾಹರಣೆಯನ್ನು ತೆಗೆದುಕೊಳ್ಳೋಣ. (ಎಲ್ಲಾ ಕುಟುಂಬಗಳೂ ಹೀಗಿರುತ್ತವೆ ಎಂದು ಹೇಳುತ್ತಿಲ್ಲ, ಹೀಗಿರಲೂ ಬಾರದು) ಎಲ್ಲರೂ ಒಟ್ಟಿಗೇ ಟಿವಿ ನೋಡುತ್ತಿರುತ್ತಾರೆ. ಪರಸ್ಪರ ಮಾತುಗಳು ಅನಿವಾರ್ಯವಾದರೆ ಮಾತ್ರ ಆಡುತ್ತಾರೆ. ಅವರವರ ಪಾಡು ಅವರಿಗೆ. ಪರಸ್ಪರರನ್ನು ಸಹಿಸಿಕೊಂಡು ಹೋಗುತ್ತಿರುತ್ತಾರೆ. ಕೆಲವೊಮ್ಮೆ  ಅಸಹನೀಯವಾದಾಗ ಕಿರುಚಾಡುತ್ತಾರೆ, ಜಗಳವಾಡುತ್ತಾರೆ, ಅನಿವಾರ್ಯವೆಂಬಂತೆ ಸುಮ್ಮನಾದರೂ ಎಲ್ಲರೂ ಅಲ್ಲಿ ಒಂಟಿಗಳೇ. ನೆಂಟರು, ಸ್ನೇಹಿತರು ಬಂದರೂ ಔಪಚಾರಿಕವಾದ ಮಾತುಗಳನ್ನಾಡಿ ಪುನಃ ಟಿವಿಯ ಕಡೆ ಗಮನ ಕೊಡುತ್ತಾರೆ. ಬಂದವರಿಗೆ ಏಕಾದರೂ ಬಂದೆವಪ್ಪಾ ಅನ್ನುವ ಸ್ಥಿತಿ. ಕಛೇರಿಗಳಲ್ಲೂ ಅಷ್ಟೇ. ಒಂಟಿತನವನ್ನು ಅನುಭವಿಸುವ ಅಧಿಕಾರಿಗಳು, ನೌಕರರನ್ನು ಕಾಣಬಹುದು. ಇಲ್ಲಿ ಗಮನಿಸುವ ಅಂಶವೆಂದರೆ ಸ್ವಂತಿಕೆಗೆ, ಅಹಂಗೆ ಬೀಳುವ ಪೆಟ್ಟು ಒಂಟಿತನವಾಗಿ ಕಾಡುವುದು! ಪರಸ್ಪರ ಅಪನಂಬಿಕೆಯಿಂದ ಉಂಟಾಗುವ ಒಂಟಿತನ ನರಕಸದೃಶ. ಉದ್ದೇಶೂರ್ವಕವಾಗಿ ಅಹಂಗೆ ಪೆಟ್ಟು ಕೊಡುವ ಕುಟುಂಬದವರಿಂದಲೇ, ಜೊತೆಗಾರರಿಂದಲೇ, ಸಹೋದ್ಯೋಗಿಗಳಿಂದಲೇ ನೋವು ಅಧಿಕವಾಗಿ ಒಂಟಿಯಾದ ಭಾವ ತರುವುದು. 
     ಒಂಟಿತನದ ತಾಪ ಕಡಿಮೆ ಮಾಡಿಕೊಳ್ಳಲು ಮಾರ್ಗಗಳಿವೆ. ಓದುವುದು, ಬರೆಯುವುದು, ಸಂಗೀತ ಕೇಳುವುದು, ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯ ಅಭ್ಯಾಸಗಳಾದರೆ, ದುಶ್ಚಟಗಳಿಗೆ ದಾಸರಾಗುವುದು ಇನ್ನೊಂದು ರೀತಿಯ ಪಲಾಯನ. ಸಿಗರೇಟು ಸೇದುವುದು, ಕುಡಿಯುವುದು, ಜೂಜಾಡುವುದು, ವೇಶ್ಯಾಸಂಗ, ಇತ್ಯಾದಿಗಳು ಇದರಲ್ಲಿ ಸೇರುತ್ತವೆ. ಕ್ರಮೇಣ ದುಶ್ಚಟಗಳು ಅವರನ್ನೇ ಆಕ್ರಮಿಸಿ ಅವರನ್ನಲ್ಲದೆ ಅವರನ್ನು ನಂಬಿದವರಿಗೂ ನಾನಾ ರೀತಿಯ ತೊಂದರೆ ಕೊಡುತ್ತವೆ. ಇನ್ನೂ ಹೆಚ್ಚಿದ ಒಂಟಿತನದಿಂದ ಬಳಲುವಂತೆ ಮಾಡುತ್ತವೆ. ಒಂಟಿತನ ಜೀವನಕ್ಕೆ ಅನುಭವ ಕೊಡುತ್ತದೆ. ಸರಿಯಾಗಿ ಬಳಸಿಕೊಂಡಲ್ಲಿ ಒಂಟಿತನ ವರವಾಗುತ್ತದೆ. ಒಳ್ಳೆಯ ಸಾಹಿತ್ಯ, ಸಂಗೀತ, ಇತ್ಯಾದಿಗಳು ಕುಡಿಯೊಡೆಯುವುದು ಆಗಲೇ. ಪ್ರೀತಿಸುವವರ, ತನ್ನನ್ನು ಗುರುತಿಸುವವರ ಕೊರತೆ ನೀಗಿಸಿಕೊಳ್ಳಲು ಅವರೇ ಇತರರನ್ನು ಪ್ರೀತಿಸಲು, ಇತರರನ್ನು ಗೌರವಿಸಲು ಮುಂದಾದರೆ ಅವರಿಂದಲೂ ಪ್ರತಿ ಪ್ರೀತಿ, ಪ್ರತಿ ಗೌರವ ಸಿಗಲಾರದೆ? ಬಂದದ್ದೂ ಒಂಟಿ, ಹೋಗುವುದೂ ಒಂಟಿ, ಆದರೆ ನಡುವಿನ ಜೀವನದಲ್ಲಿ ಪರಸ್ಪರರ ಅವಲಂಬನೆ, ಅಗತ್ಯತೆ ಬರುವುದರಿಂದ ಒಂಟಿತನವನ್ನೂ ಎದುರಿಸಬೇಕಾಗುತ್ತದೆ. ಪ್ರೀತಿ, ವಿಶ್ವಾಸಗಳು ನಾವು ಒಂಟಿಯಲ್ಲವೆಂದು ಭಾವಿಸುವಂತೆ ಮಾಡುತ್ತದೆ. ಆಳವಾಗಿ ಯೋಚಿಸಿದರೆ ಸಮುದಾಯ, ಸಂಘಟನೆ, ಜಾತಿ, ಧರ್ಮ, ಗುಂಪು, ಇತ್ಯಾದಿಗಳೂ ಸಹ ಮಾನವನ ಒಂಟಿತನವನ್ನು ಹೋಗಲಾಡಿಸುವ ಸಲುವಾಗಿಯೇ ಹುಟ್ಟಿಕೊಂಡದ್ದು ಎಂದು ಅನ್ನಿಸದಿರದು. ದುಃಖ ಅನುಭವಿಸಲು ಒಬ್ಬರು ಇದ್ದರೂ ಆಗುತ್ತದೆ, ಆದರೆ ಸಂತೋಷ ಹಂಚಿಕೊಳ್ಳಲು ಇಬ್ಬರಾದರೂ ಇರಬೇಕು. ಆದ್ದರಿಂದ ಮನುಜ-ಮನುಜರ ನಡುವೆ ಗೋಡೆಗಳನ್ನು ಕಟ್ಟದೆ ಸೇತುವೆಗಳನ್ನು ಕಟ್ಟಿದರೆ ಒಂಟಿತನ ಕಡಿಮೆಯಾದೀತು. ಒಂಟಿಯಾಗಿ ಇರಬಯಸುವವರು ಯಶಸ್ವಿ ಮಾನವರಲ್ಲ. ಇತರ ಹೃದಯಗಳ ಮಿಡಿತ ಕೇಳದವರ ಹೃದಯ ಬಾಡುತ್ತದೆ, ಇತರರ ಮಾತುಗಳನ್ನು ಕೇಳಲಿಚ್ಛಿಸದೆ ತನ್ನೊಬ್ಬನ ಮಾತುಗಳನ್ನೇ ಕೇಳುವವನ ಮೆದುಳು ಕುಗ್ಗುತ್ತದೆ.
     ಇದುವರೆಗೆ ಒಂಟಿತನದ ಬಗ್ಗೆ ಸಾಕಷ್ಟು ಹೇಳಿದ್ದಾಯಿತು. ಒಂಟಿತನದಂತೆಯೇ ತೋರುವ, ಆದರೆ ಒಂಟಿತನವಲ್ಲದ, ಒಂಟಿತನಕ್ಕೆ ಹೋಲಿಸಲಾಗದ ಸಂಗತಿಯೊಂದಿದೆ. ಅದೇ ಏಕಾಂತ. ಏಕಾಂತ ಬೇರೆ, ಒಂಟಿತನ ಬೇರೆ. ಒಂಟಿತನ ತನ್ನತನದ ಬಡತನವಾದರೆ, ಏಕಾಂತ ತನ್ನತನದ ವೈಭವದ ಸ್ಥಿತಿಯೆನ್ನಬಹುದು. ಒಂಟಿತನ ಒಬ್ಬನೇ ಇರುವ ನೋವ ಹೇಳಿದರೆ, ಏಕಾಂತ ಒಬ್ಬನೇ ಇರುವ ಸೊಬಗ ತೋರುವುದು. ಏಕಾಂತದಲ್ಲಿ ಬರಹಗಾರನೊಬ್ಬ ಅರ್ಥವಾಗದ ಸಂಗತಿಗಳಿಗೆ ಅರ್ಥ ಹುಡುಕುತ್ತಾನೆ, ಸಂಗೀತಗಾರ ಹೊಸ ಆಯಾಮಗಳ ಕುರಿತು ಧ್ಯಾನಿಸುತ್ತಾನೆ, ವಿವಿಧ ಸ್ತರಗಳವರು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಮುಂದುವರೆಯುವ ಕುರಿತು ಚಿಂತಿಸುತ್ತಾರೆ, ಸಾಧಕ ಬದುಕಿನ ಅರ್ಥ ತಿಳಿಯುವ ಪ್ರಯತ್ನ ನಡೆಸುತ್ತಾನೆ. ಆಗ ಅವರುಗಳ ಜೊತೆಗಿರುವುದು ಅವರ ಅಂತರಂಗ, ಅವರಿಗೆ ದಾರಿ ತೋರುವುದು ಅವರ ಅಂತರಂಗ. ನಮ್ಮ ತಪ್ಪುಗಳನ್ನು ಇತರರ ಎದುರಿಗೆ ಒಪ್ಪಿಕೊಳ್ಳದಿದ್ದರೂ ಅಂತರಂಗದ ಎದುರು ತಲೆಬಾಗಲೇಬೇಕು, ಅದುವರೆಗೆ ಗೋಚರಿಸದ ಸತ್ಯ ಗೋಚರಿಸುವುದು ಆಗಲೇ. ಅದೇ ಏಕಾಂತದ ಮಹಿಮೆ. ಏಕಾಂತ ಪ್ರೌಢತೆಯ ಸಂಕೇತ. ಏಕಾಂತದಲ್ಲಿ ಚಟುವಟಿಕೆಗಳ ಉದಯವಾಗುತ್ತದೆ, ಅಲ್ಲಿ ಚಲನೆಯಿಲ್ಲದ ಕ್ರಿಯೆಯಿದೆ, ಶ್ರಮವಿರದ ಕೆಲಸವಿದೆ, ಕಣ್ಣು ಮೀರಿದ ದೃಷ್ಟಿಯಿದೆ, ಬಯಕೆ ಮೀರಿದ ಆಸೆಯಿದೆ, ಅನಂತ ತೃಪ್ತಿಯ ಭಾವವಿದೆ. ಏಕಾಂತ ತನ್ನತನವನ್ನು ಬೆಳೆಸುವುದು, ಇತರರು ಏಕಾಂತದ ಸ್ಥಾನವನ್ನು ತುಂಬಲಾರರು. ಅಂತರಂಗ ಬಹಿರಂಗಕ್ಕೆ ಹೊಂದಿಕೆಯಾಗದಿದ್ದರೆ ಒಂಟಿತನ ಕಾಡುತ್ತದೆ. ಏಕಾಂತ ಹೊಂದಿಕೆ ಮಾಡಿಕೊಳ್ಳುವ ದಾರಿ ತೋರುತ್ತದೆ, ಒಂಟಿಯಲ್ಲವೆಂಬ ಭಾವಕ್ಕೆ ಇಂಬು ಕೊಡುತ್ತದೆ, ನಾವು ನಾವಾಗಿರಲು ಏಕಾಂತದಲ್ಲಿ ಮಾತ್ರ ಸಾಧ್ಯ. ಸಮೂಹದಲ್ಲಿ ಮತ್ತು ಇತರರೊಂದಿಗೆ ಇದ್ದಾಗ ನಾವು ನಮ್ಮತನವನ್ನು ಕಳೆದುಕೊಳ್ಳುತ್ತೇವೆ ಎಂಬುದು ನಿತ್ಯ ಸತ್ಯ. ಇತರರು ಏನೆಂದುಕೊಳ್ಳುತ್ತಾರೋ ಎಂಬ ಭಾವನೆಯಿಂದಲೋ, ಇತರರು ತಪ್ಪು ತಿಳಿಯುತ್ತಾರೆ ಎಂತಲೋ ಅಥವಾ ಯಾರನ್ನಾದರೂ ಮೆಚ್ಚಿಸುವ ಕಾರಣಕ್ಕಾಗಿಯೋ ನಾವು  ನಮಗಿಷ್ಟವಿಲ್ಲದಿದ್ದರೂ ನಮ್ಮತನಕ್ಕೆ ಹೊರತಾಗಿ ವರ್ತಿಸುತ್ತೇವೆ ಅಥವ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುತ್ತೇವೆ. ಅಂತರಂಗ ಬಹಿರಂಗಗಳಿಗೆ ಹೊಂದಿಕೆಯಾಗದ ಕಾರಣ ಆಗ ಒಂಟಿತನದ ಭಾವ ಮನೆ ಮಾಡುತ್ತದೆ. ಏಕಾಂತದಲ್ಲಿ ಹಾಗಲ್ಲ, ಅಲ್ಲಿ ಅಂತರಂಗ ಬಹಿರಂಗಗಳಿಗೆ ಹೊಂದಿಕೆಯಿರುತ್ತದೆ ಮತ್ತು ಆ ಕಾರಣದಿಂದಾಗಿ ಅಲ್ಲಿ ಸಂತೋಷವಿರುತ್ತದೆ. ಸಾಧನೆಗೆ, ಧ್ಯಾನಕ್ಕೆ, ಮನನಕ್ಕೆ, ವಿಮರ್ಶೆಗೆ, ಹೇಗಿರಬೇಕೆಂದು ನಿರ್ಧರಿಸುವುದಕ್ಕೆ, ಉತ್ತಮ ರೀತಿಯಲ್ಲಿ ಮುಂದುವರೆಯುವುದಕ್ಕೆ ಏಕಾಂತದಲ್ಲಿ ಅವಕಾಶವಿದೆ. ಇತರರನ್ನು ಕೈಯಿಂದ ಮುಟ್ಟುವುದಕ್ಕೂ ಹೃದಯದಿಂದ ಮುಟ್ಟುವುದಕ್ಕೂ ವ್ಯತ್ಯಾಸ ತಿಳಿಯುವುದು ಏಕಾಂತದಲ್ಲೇ.
*********************
-ಕ.ವೆಂ.ನಾಗರಾಜ್.

ಗುರುವಾರ, ಏಪ್ರಿಲ್ 12, 2012

ಪುಣ್ಯವೆನ್ನಿರಿ


ಕಾಣಿರೋ ಕಾಣಿರೋ ನೀವು ಕಾಣಿರೋ
ನರಜನ್ಮ ಸಿಕ್ಕಿಹುದು ಪುಣ್ಯವೆನ್ನಿರೋ |
ಪಶು ಪಕ್ಷಿ ಕ್ರಿಮಿ ಕೀಟ ಅಲ್ಲ ಕಾಣಿರೋ
ಯೋಚಿಸುವ ಶಕ್ತಿಯಿದೆ ಧನ್ಯರೆನ್ನಿರೋ ||


ನೂರಾರು ಜನ್ಮಗಳ ಫಲವು ತಿಳಿಯಿರೋ
ಏರುವುದು ಕಷ್ಟವಿದೆ ಜಾರಬೇಡಿರೋ |
ಜ್ಞಾನದ ಬೆಳಕಿನಲ್ಲಿ ಸತ್ಯ ಅರಿಯಿರೋ
ಅಟ್ಟಡುಗೆಯುಣಬೇಕು ವಿಧಿಯಿಲ್ಲವೋ ||


ಜ್ಞಾನಿಗಳ ಅರಿತವರ ನುಡಿಯ ಕೇಳಿರೋ
ಅನುಭವವೇ ದೊಡ್ಡ ಗುರು ನಿಜವ ಕಾಣಿರೋ |
ಸಂಪ್ರದಾಯದುರುಳಲ್ಲಿ ಸಿಕ್ಕಬೇಡಿರೋ
ಅರ್ಥವರಿತು ಪಾಲಿಸುವ ಮನಸ ಮಾಡಿರೋ ||


ದೇವನಿರದ ಜಾಗವಿಲ್ಲ ಅವಗೆ ನಮಿಸಿರೋ
ಹೃದಯವೇ ಅವನಿರುವ ಮೂಲಸ್ಥಾನವೋ |
ಮಠ ಮಂದಿರ ಚರ್ಚುಗಳ ಹಂಗಿಲ್ಲವೋ
ಜ್ಞಾನಜ್ಯೋತಿ ಬೆಳಗುವುದೆ ಪೂಜೆ ಕಾಣಿರೋ ||


ಹೊಗಳಿಕೆಗೆ ಉಬ್ಬನು ತೆಗಳಿಕೆಗೆ ಕುಗ್ಗನೋ
ಸ್ತುತಿ ನಿಂದೆ ಎಲ್ಲಾ ಒಂದೆ ನಿರ್ವಿಕಾರನವನೋ |
ಜಾತಿ ಭೇದ ಅವಗಿಲ್ಲ ನಿಮಗದು ಮತ್ತೇತಕೋ
ವಿಶ್ವಪ್ರಿಯನ ಮಕ್ಕಳಾಗಿ ಪ್ರಿಯರಾಗಿ ಬಾಳಿರೋ ||


ಹೀನ ದೀನ ಆರ್ತರ ಕಣ್ಣೀರು ಒರೆಸಿರೋ
ಇದಕಿಂತ ಪರಮ ಪೂಜೆ ಬೇರಿಲ್ಲ ತಿಳಿಯಿರೋ |
ಬರಿಗೈಲಿ ಬಂದವರು ಏನ ಹೊತ್ತೊಯ್ಯುವಿರೋ
ಇರುವುದೇ ಮೂರು ದಿನ ನಗುನಗುತಾ ಬಾಳಿರೋ ||
***********
-ಕ.ವೆಂ.ನಾಗರಾಜ್.

ಭಾನುವಾರ, ಏಪ್ರಿಲ್ 8, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೮


ವೇದದ ಈ ಭವ್ಯ ಆದೇಶವನ್ನು ಸದಾ ನೆನಪಿಡೋಣ:-


ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ|
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ|| (ಋಕ್. ೧೦.೧೯೧.೪.)


     [ವಃ ಆಕೂತಿಃ] ನಿಮ್ಮ ಆಲೋಚನೆಗಳು, [ಸಮಾನೀ] ಸಮಾನವಾಗಿರಲಿ. [ವಃ ಹೃದಯಾನಿ] ನಿಮ್ಮ ಹೃದಯಗಳು [ಸಮಾನಾ] ಸಮಾನವಾಗಿರಲಿ. [ವೋ ಮನಃ] ನಿಮ್ಮ ಮನಸ್ಸು [ಸಮಾನಂ ಅಸ್ತು] ಸಮಾನವಾಗಿರಲಿ. [ಯಥಾ] ಈ ರೀತಿ [ವಃ ಸು] ನಿಮ್ಮ ಒಳಿತು, [ಸಹ ಅಸತಿ] ಒಂದಿಗೇ ಆಗುವುದು.


ಜ್ಯಾಯಸ್ವಂತಶ್ಚಿತ್ತಿನೋ ಮಾ ವಿ ಯೌಷ್ಟ ಸಂರಾಧಯಂತಃ ಸಧುರಾಶ್ಚರಂತಃ|
ಅನ್ಯೋ ಅನ್ಯಸ್ಮೈ ವಲ್ಗು ವದಂತ ಏತ ಸಧ್ರೀಚೀನಾನ್ವಃ ಸಂಮನಸಸ್ಕೃಣೋಮಿ|| (ಅಥರ್ವ.೩.೩೦.೫.)


     ಹೇ ಮನುಷ್ಯರೇ! [ಜ್ಯಾಯಸ್ವಂತಃ} ನೀವೆಲ್ಲರೂ ಶ್ರೇಷ್ಠತ್ವವನ್ನು ಪಡೆಯುತ್ತಾ [ಚಿತ್ತಿನಃ] ವಿವೇಕಶೀಲರಾಗಿ [ಸಂ ರಾಧಯಂತಃ ಸಧುರಾಶ್ಚರಂತಃ] ಒಂದೇ ಲಕ್ಷ್ಯದ ಸಿದ್ಧಿಗಾಗಿ ಒಂದಿಗೆಯೇ ನಡೆಯಿರಿ. [ಮಾ ವಿ ಯೌಷ್ಟ] ಒಬ್ಬರು ಇನ್ನೊಬ್ಬರನ್ನು ಬಿಟ್ಟಗಲಬೇಡಿರಿ. [ಅನ್ಯೋ ಅನ್ಯಸ್ಮೈ] ಸದಾ ಒಬ್ಬರಿನ್ನೊಬ್ಬರೊಂದಿಗೆ [ವಲ್ಗು ವದಂತ ಏತ] ಮಧುರ ಶಬ್ದಗಳಲ್ಲಿ ಮಾತನಾಡುತ್ತಾ ನಡೆಯಿರಿ. [ಸಧ್ರೀಚೀನಾನ್ವಃ ಸಂಮನಸಸ್ಕೃಣೋಮಿ] ನಾನು ನಿಮ್ಮನ್ನು ಸಮಾನ ಮನ ಹಾಗೂ ಸಮಾನ ಗತಿಶೀಲರನ್ನಾಗಿ ಮಾಡುತ್ತೇನೆ. 
     ವೇದಗಳ ಆದೇಶದಂತೆ ಸರ್ವರೂ ಸಮಾನತಾ ಭಾವದಿಂದ ಕೂಡಿಕೊಂಡು ಬಾಳಿದರೆ, ರಾಷ್ಟ್ರದ ಎಷ್ಟೋ ಕೆಲಸಗಳು ಸುಗಮವಾಗಿ, ಪ್ರಜಾಸಮೂಹ ನೆಮ್ಮದಿಯಿಂದ ಇರಬಲ್ಲದು. ಈ ಸಮಾನತೆ ರಾಷ್ಟ್ರನಾಯಕರಲ್ಲಿಯೂ ಸಮಾಜದ ಮುಖಂಡರಲ್ಲಿಯೂ ಉದಯವಾದರೆ, ನಮ್ಮ ಭಾರತದ ಭವ್ಯತೆ ಹಿಂದಿನಂತೆಯೇ ಬೆಳಗೀತು.
-ಪಂ.ಸುಧಾಕರ ಚತುರ್ವೇದಿ.
*****************************
ನನ್ನ ಅನಿಸಿಕೆ: 
     ಇಂದು ಸಮಾನತಾ ಭಾವವನ್ನು ಹಾಳು ಮಾಡುವ ಶಕ್ತಿಗಳೇ ವಿಜೃಂಭಿಸುತ್ತಿವೆ. ಸಜ್ಜನಶಕ್ತಿಯನ್ನು ಒಡೆದು ಆಳುವ ನೀತಿಯಲ್ಲಿ ಯಶಸ್ಸು ಕಾಣುತ್ತಿವೆ. ಸಣ್ಣ ಪುಟ್ಟ ಭಿನ್ನತೆಗಳನ್ನು ಮರೆತು, ದುಷ್ಟ ಶಕ್ತಿಗಳನ್ನು, ದುಷ್ಟ ವಿಚಾರಗಳನ್ನು ದೂರ ಮಾಡುವ ಕೆಲಸಕ್ಕೆ ಸಜ್ಜನರು ಮುಂದುವರೆಯುವ ಅಗತ್ಯವಿದೆ. ಇತರರು ಮಾಡಲಿ, ನಾವು ಹಿಂದೆ ನಿಂತು ನೋಡೋಣ ಎಂಬ ಮನೋಭಾವ ದೂರವಾಗಲಿ. ನಿಜವಾದ ಅಪಾಯವಿರುವುದು ದುಷ್ಟ ಶಕ್ತಿಗಳಿಂದ ಅಲ್ಲ, ಅದನ್ನು ಸಹಿಸಿ ಸುಮ್ಮನಿರುವ, ಏನೂ ಮಾಡದಿರುವ, ಕನಿಷ್ಟ ಪಕ್ಷ ಆ ರೀತಿಯಲ್ಲಿ ಮುಂದುವರೆಯುವವರಿಗೆ ನೈತಿಕ ಬೆಂಬಲವನ್ನೂ ಕೊಡದಿರುವ ಸರಳರು, ಸಜ್ಜನರುಗಳು ಎಂದು ಅನ್ನಿಸಿಕೊಂಡವರಿಂದಲೇ. ಕಪಟ ವಿಚಾರವಾದ, ಕಪಟ ಜಾತ್ಯಾತೀತವಾದ. ಕಪಟ ಕೋಮು ಸೌಹಾರ್ದದ ನಾಟಕಗಳು ನಿಲ್ಲಲಿ. ನಿಜ ಸಮಾನತೆ ಮೂಡಲಿ.
-ಕ.ವೆಂ.ನಾಗರಾಜ್.
*****************************
ಹಿಂದಿನ ಲೇಖನಗಳಿಗೆ ಲಿಂಕ್:
 http://vedajeevana.blogspot.in/search/label/%E0%B2%B5%E0%B3%87%E0%B2%A6%E0%B3%8B%E0%B2%95%E0%B3%8D%E0%B2%A4%20%E0%B2%9C%E0%B3%80%E0%B2%B5%E0%B2%A8%20%E0%B2%AA%E0%B2%A5

ಬುಧವಾರ, ಏಪ್ರಿಲ್ 4, 2012

ಶವಸಂಸ್ಕಾರ ಹೇಗೆ ಮಾಡಿದರೆ ಒಳ್ಳೆಯದು? ದೇಹದಾನ ಮಾಡಬಹುದೇ?


     ಶವಸಂಸ್ಕಾರವನ್ನು  ಹೇಗೆ ಮಾಡಿದರೆ ಒಳ್ಳೆಯದು? ದೇಹದಾನ ಮಾಡಬಹುದೇ? ಇತ್ಯಾದಿಗಳ ಕುರಿತು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರೊಂದಿಗೆ ಚರ್ಚಿಸಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು: 
ಚರ್ಚೆ, ಫೋಟೋಗಳು, ವಿಡಿಯೋ ಚಿತ್ರಣ: ಕ.ವೆಂ.ನಾಗರಾಜ್.

ಮಂಗಳವಾರ, ಏಪ್ರಿಲ್ 3, 2012

ಜಗತ್ತು ಬದಲಾಗಬೇಕು, ಸಮಾಜ ಸುಧಾರಣೆಯಾಗಬೇಕು!! ಹೇಗೆ??

       ಈ ಜಗತ್ತು, ಬದಲಾಗಬೇಕು, ಸಮಾಜ ಸುಧಾರಣೆಯಾಗಬೇಕು, ನಮಗೆ ಈ ಪ್ರಪಂಚ ಸಹನೀಯವೆನಿಸಬೇಕು, ಎಂಬುದೇ ನಮ್ಮ, ನಿಮ್ಮ, ಎಲ್ಲರ ಆಸೆ, ಆಕಾಂಕ್ಷೆ. ಆದರೆ, ಅದು ಹೇಗೆ? ಸಮಾಜವನ್ನು ಬದಲಿಸಬಹುದಾದ, ಬದಲಿಸಬೇಕಾದ ಸಮಾಜ ಸುಧಾರಣೆಯ ಪ್ರಾರಂಭ ಎಲ್ಲಿಂದ ಆಗಬೇಕು? ಕೇಳಿ,  ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ವಿಚಾರ ಹೀಗಿದೆ:



[ಶ್ರೀ ಶರ್ಮರವರ ನಿವಾಸದಲ್ಲಿ ಚರ್ಚಿಸಿದ ಸಂದರ್ಭದಲ್ಲಿ ದಾಖಲಿಸಿಕೊಂಡದ್ದು].
-ಕ.ವೆಂ.ನಾಗರಾಜ್.

ಸೋಮವಾರ, ಏಪ್ರಿಲ್ 2, 2012

ರಾಮಭಕ್ತರಾಗೋಣ


     ಇಂದು ಶ್ರೀರಾಮನವಮಿ. ಮರ್ಯಾದಾ ಪುರುಷೋತ್ತಮ, ದೇವಮಾನವ ಶ್ರೀರಾಮಚಂದ್ರನ ಜನ್ಮದಿನ. ಈ ತಿಂಗಳು ಶ್ರೀ ರಾಮೋತ್ಸವದ ಹೆಸರಿನಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು, ಹರಿಕಥೆ, ಪ್ರವಚನಗಳು, ಭಜನೆ, ಸಂಗೀತ ಕಾರ್ಯಕ್ರಮಗಳು ನಡೆದು ರಾಮಭಕ್ತರ ಮನತಣಿಸುವ ತಿಂಗಳು. ಶ್ರೀರಾಮನನ್ನು ಗುಡಿಯಲ್ಲಿಟ್ಟು ಪೂಜಿಸಿ, ತೀರ್ಥ, ಪ್ರಸಾದಗಳನ್ನು ಸ್ವೀಕರಿಸಿ ಕೃತಾರ್ಥರಾದೆವೆಂದು ಭಾವಿಸುತ್ತೇವೆ. ರಾಮಾಯಣ ಪ್ರವಚನವನ್ನು ಕೇಳಿ ಪುನೀತರಾದೆವೆಂದು ಅಂದುಕೊಳ್ಳುತ್ತೇವೆ. ರಾಮಾಯಣವೆಂದರೆ ಪದಶಃ ಅರ್ಥ ತೆಗೆದುಕೊಂಡರೆ ರಾಮ ನಡೆದ ದಾರಿ ಎಂದು. ಯಾರನ್ನೇ ಆಗಲಿ, ನಿಜವಾಗಿ ಗೌರವಿಸುವುದೆಂದರೆ, ಪೂಜಿಸುವುದೆಂದರೆ, ಮೆಚ್ಚಿಸುವುದೆಂದರೆ ಅವರು ನಡೆದ ಹಾದಿಯಲ್ಲಿ ನಡೆಯುವುದಕ್ಕಿಂತ ಉತ್ತಮ ದಾರಿ ಯಾವುದು? ಈ ಹಿನ್ನೆಲೆಯಲ್ಲಿ ರಾಮಭಕ್ತರೆಂದರೆ ಯಾರು ಎಂದು ಮನಸ್ಸು ವೈಚಾರಿಕ ತಾಕಲಾಟದ ಬಲೆಯಲ್ಲಿ ಸಿಲುಕಿಕೊಂಡಿತು.
* ಶ್ರೀರಾಮ ಏಕ ಪತ್ನಿ ವ್ರತಸ್ಥ. ೨-೩ ಹೆಂಡಿರ ಮುದ್ದಿನ ಗಂಡರು ರಾಮದೇಗುಲಕ್ಕೆ ಹೋಗಿ ಅಡ್ಡಬಿದ್ದರೆ ಅವರನ್ನು ರಾಮಭಕ್ತರೆನ್ನಬಹುದೇ?
* ಶ್ರೀರಾಮ ಚಂಚಲತೆಗೆ ಒಳಗಾಗದವನು. ಅವನನ್ನು ಮೋಹಿಸಿ ಬಂದ ಶೂರ್ಪನಖಿ, ಮುಂತಾದವರನ್ನು ತಿರಸ್ಕರಿಸಿದವನು. ಪರನಾರೀಮೋಹ ಅಳಿಯುವವರೆಗೆ ರಾಮಭಕ್ತನ ಸ್ಥಾನ ಸಿಗಲಾರದು.
* ಶ್ರೀರಾಮ ಎಂತಹ ಸ್ಥಿತಿಯಲ್ಲೂ ಸಮಚಿತ್ತ ಕಾಯ್ದುಕೊಂಡವನು. ಆಲೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದವನು. ಇಂತಹ ಸಮಚಿತ್ತ ಪಡೆಯುವುದು ಸುಲಭವಲ್ಲ.
* ಶ್ರೀರಾಮ ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸಿ, ಅವರ ಸೂಚನೆಗಳನ್ನು ಸ್ವಂತ ಹಿತ ಬದಿಗಿಟ್ಟು ಪಾಲಿಸಿದವನು. ಸ್ವಂತ ಹಿತಕ್ಕೆ ಮೊದಲ, ಉಳಿದದ್ದಕ್ಕೆಲ್ಲಾ ಎರಡನೆಯ ಪ್ರಾಶಸ್ತ್ಯ ಕೊಡುವ ನಾವು ಸುಧಾರಿಸಬೇಕಿದೆ.
* ಎಷ್ಟೇ ಕಷ್ಟ-ನಷ್ಟಗಳು ಎದುರಾದರೂ ತೆಗೆದುಕೊಂಡ ನಿರ್ಧಾರಕ್ಕೆ [ವನವಾಸ ಪ್ರಸಂಗ] ಅಂಟಿಕೊಂಡವನು, ಹಿಂದೆ ಸರಿಯದವನು. ಕಷ್ಟ, ಅಸಾಧ್ಯವೆಂದುಕೊಂಡು, ತೆಗೆದುಕೊಂಡ ನಿರ್ಧಾರವನ್ನು ಬದಲಿಸುವ ಸ್ವಭಾವದ ನಾವು ಅದಕ್ಕೆ ವಿವರಣೆ ಕೊಡುತ್ತೇವೆ, ಸಮರ್ಥಿಸಿಕೊಳ್ಳುತ್ತೇವೆ.
* ಶ್ರೀರಾಮ ಜಾತಿ ಭೇದ ಮಾಡಲಿಲ್ಲ. ನಾವು ಜಾತಿಗೆ ಅಂಟಿಕೊಂಡಿದ್ದೇವೆ.
* ಶ್ರೀರಾಮ ನ್ಯಾಯ ಪಕ್ಷಪಾತಿ. ಸ್ವಂತಕ್ಕೆ ದುಃಖವಾದರೂ, ಅನ್ಯಾಯವಾದರೂ ಹಿಂದೆ ಮುಂದೆ ನೋಡದವನು. ನಾವು ಸ್ವಂತಹಿತಕ್ಕಾಗಿ ನ್ಯಾಯವನ್ನೇ ತಿರುಚುವವರು.
* ಶ್ರೀರಾಮ ಅಧಿಕಾರ, ಅಂತಸ್ತು, ಸಂಪತ್ತುಗಳಿಗೆ ಅಂಟಿಕೊಂಡವನಲ್ಲ. ಅಧಿಕಾರ, ಅಂತಸ್ತು, ಸಂಪತ್ತುಗಳಿಗಾಗಿ ನಾವು ಏನು ಬೇಕಾದರೂ ಮಾಡುವವರಾಗಿದ್ದೇವೆ. ಅಧಿಕಾರಕ್ಕಾಗಿ ರಾಮನನ್ನೇ ಪರ-ವಿರೋಧದ ದಾಳವಾಗಿಸಿಕೊಳ್ಳುತ್ತೇವೆ.
* ವಿಗ್ರಹಗಳಿಗೆ ಚಿನ್ನದ ಕಿರೀಟ, ಆಭರಣ, ಉಡುಗೆ-ತೊಡುಗೆಗಳನ್ನು ಮಾಡಿಸಿಕೊಡುವವರೆಲ್ಲಾ ಭಕ್ತರೆನಿಸುವುದಿಲ್ಲ. ಅವರಲ್ಲಿ ನಿಜಭಕ್ತರೂ ಇರಬಹುದು, ಆದರೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತರೂಪದಲ್ಲಿ ಮಾಡಿಸಿಕೊಡುವವರೇ ಕಣ್ಣಿಗೆ ಬೀಳುತ್ತಿದ್ದಾರೆ. 
* ಶ್ರೀರಾಮ ಸಜ್ಜನಶಕ್ತಿ ಒಗ್ಗೂಡಿಸಿದವನು, ದುಷ್ಟರನ್ನು ಸದೆ ಬಡಿದವನು. ನಾವು ಕಷ್ಟ, ತೊಂದರೆಗಳ ಕಾರಣವೊಡ್ಡಿ ಅಂತಹ ಕಾರ್ಯಗಳಿಂದ ದೂರ ಉಳಿಯುವವರು, ಆ ಮಾರ್ಗದಲ್ಲಿ ನಡೆಯುವವರ ಸ್ಥೈರ್ಯಗೆಡಿಸುವವರು, ಕನಿಷ್ಠ ಪಕ್ಷ ಅವರಿಗೆ ನೈತಿಕ ಬೆಂಬಲವನ್ನೂ ತೋರಿಸದವರು.
 * . . . . . . . . 
     ಇಂತಹ ಹಲವಾರು ಸಂಗತಿಗಳ ಪಟ್ಟಿ ಬೆಳೆಸುತ್ತಾ ಹೋಗಬಹುದು. . . . . . . . ಒಟ್ಟಿನಲ್ಲಿ. . . . ನಿಜವಾದ ರಾಮಭಕ್ತರಾಗಲು ಪ್ರಯತ್ನಿಸೋಣ. ಎಲ್ಲರಿಗೂ ಶ್ರೀರಾಮನವಮಿ ಶುಭಾಶಯಗಳು.
-ಕ.ವೆಂ.ನಾಗರಾಜ್.