ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಏಪ್ರಿಲ್ 15, 2012

ಸಾರಗ್ರಾಹಿಯ ರಸೋದ್ಗಾರಗಳು -1     ಪಂ. ಸುಧಾಕರ ಚತುರ್ವೇದಿಯವರಿಗೆ ಈಗ ೧೧೬ ವರ್ಷಗಳು. ಬತ್ತದ ಜೀವನೋತ್ಸಾಹದ ಅವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ.  ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇನ್ನು ಮುಂದೆ ಅವರ ವಿಚಾರದ ತುಣುಕುಗಳು . . . 
-ಕ.ವೆಂ.ನಾಗರಾಜ್.
****************
ವಿವೇಚಿಸೋಣ
     ಪಶು-ಪಕ್ಷಿ, ಕ್ರಿಮಿ-ಕೀಟಗಳಿಗೂ ಮಾನವರಿಗೂ ಇರುವ ವ್ಯತ್ಯಾಸವೆಂದರೆ ಆ ಕ್ರಿಮಿ-ಕೀಟ, ಪಶು-ಪಕ್ಷಿಗಳು ತಮ್ಮ ಸ್ವಾಭಾವಿಕ ಪ್ರಕೃತಿ ಅನುಸರಿಸಿ ಬಾಳುತ್ತವೆ. ಒಂದು ನಾಯಿ ಒಂದು ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆ ನಾಯಿಯ ತಲೆಯೊಳಗೆ ಆ ಬೆಕ್ಕು ಶತ್ರು ಎಂದು ಇರುವುದಿಲ್ಲ, ಅದು ಅದರ ಸ್ವಾಭಾವಿಕ ಪ್ರವೃತ್ತಿ, ಬೆಕ್ಕಿಗೆ ಇಲಿಯ ಮೇಲೆ ಏನಾದರೂ ಕೋಪ ಇದೆಯೇನು? ಇಲಿಗೂ ಅಷ್ಟೆ, ಬೆಕ್ಕಿನ ಮೇಲೆ ಕೋಪ ಇಲ್ಲ. ಸ್ವಾಭಾವಿಕ ಪ್ರವೃತ್ತಿ, ಯೋಚನೆ ಮಾಡುವ ಶಕ್ತಿ ಇಲ್ಲ, ಹಸಿವಾದಾಗ ಏನಾದರೂ ತಿನ್ನಬೇಕು, ಬಾಯಾರಿದಾಗ ಏನಾದರೂ ಕುಡಿಯಬೇಕು, ಅಷ್ಟೇ ಅವಕ್ಕೆ ಗೊತ್ತಿರುವುದು. ಆದರೆ ಮಾನವರಿಗೆ ವಿವೇಚನೆ ಮಾಡುವ ಶಕ್ತಿ ಇದೆ.  ತೆಂಗಿನ ಮರ ಇದೆ, ಈಚಲ ಮರ ಇದೆ, ಇವೆಲ್ಲಾ ಭಗವಂತನ ಸೃಷ್ಟಿಯೇ. ಪರಮಾತ್ಮ ತೆಂಗಿನ ಮರವನ್ನಾಗಲೀ, ಈಚಲಮರವನ್ನಾಗಲೀ ಸೃಷ್ಟಿಸಿರುವುದು, ಅದರಿಂದ ಹೆಂಡ ಇಳಿಸಿ ಕುಡಿದು ಮತ್ತಿನಿಂದ ಕುಣಿದಾಡಲಿ ಅನ್ನುವ ಉದ್ದೇಶದಿಂದ ಅಲ್ಲ. ಪ್ರಾಣಿಗಳನ್ನು ಸೃಷ್ಟಿಸಿರುವುದು ಅವನ್ನು ತಿಂದು ತೇಗಲಿ ಎಂದಲ್ಲ. ಯಾವುದನ್ನು ಯಾವುದಕ್ಕೆ ಉಪಯೋಗಿಸಬೇಕು, ಹೇಗೆ ಉಪಯೋಗಿಸಬೇಕು ಎಂದು ವಿವೇಚಿಸಿ ಉಪಯೋಗಿಸಬೇಕು. ಆದರೆ ಉಪಯೋಗ ಮಾಡುವಾಗ ನಾವು ತಪ್ಪುತ್ತೇವೆ. ಯಾವ ಕೆಲಸಕ್ಕೆ ಯಾವ ಪದಾರ್ಥ ಉಪಯೋಗಿಸಬೇಕೋ ಅದನ್ನು ಉಪಯೋಗಿಸುವುದಿಲ್ಲ.
     ಭಗವಂತ ಈ ಭೂಮಿ, ಆಕಾಶ, ನೀರು, ಬೆಂಕಿ, ಗಾಳಿ ಯಾವುದನ್ನೂ ನಿರರ್ಥಕವಾಗಿ ಕೊಟ್ಟಿಲ್ಲ. ಪ್ರತಿಯೊಂದಕ್ಕೂ ಒಂದೊಂದು ಉದ್ದೇಶ ಇದ್ದೇ ಇದೆ. ಈ ಬೆಂಕಿ ಇದೆ, ಅದನ್ನು ಒಳ್ಳೆಯ ಕೆಲಸಕ್ಕೆ ಅಂದರೆ ಅಡಿಗೆ ಮಾಡುವುದಕ್ಕೆ, ಅಗ್ನಿಹೋತ್ರ ಮಾಡುವುದಕ್ಕೆ, ಇತ್ಯಾದಿಗೆ ಬಳಸಬಹುದು. ಪಕ್ಕದ ಮನೆಯವನ ಮೇಲೆ ಕೋಪ ಇದೆ ಅಂತ ಅವನ ಮನೆಯನ್ನು ಸುಡಲು ಬಳಸಿದರೆ ಆ ಬೆಂಕಿ ಏನು ಮಾಡುತ್ತೆ? ಬೆಂಕಿಗೆ ವಿವೇಕವಿಲ್ಲ, ಅದರ ಕೆಲಸ ಸುಡುವುದು ಅಷ್ಟೆ. ವಾಯುಶುದ್ಧಿ ಬಗ್ಗೆ ಮಾತಾಡ್ತೀವಿ, ಅಗ್ನಿಹೋತ್ರ ಮಾಡ್ತೀವಿ, ಒಂದು ಚಮಚ ತುಪ್ಪ ಒಬ್ಬರು ತಿನ್ನಬಹುದು. ಅದನ್ನೇ ಅಗ್ನಿಗೆ ಹಾಕಿದರೆ ಅದು ನಾಶವಾಗುವುದಿಲ್ಲ, ಸೂಕ್ಷ್ಮ ಕಣಗಳಾಗಿ ಪರಿವರ್ತಿತವಾಗಿ ವಾಯುವಿನಲ್ಲಿ ಹರಡಿ ಅದನ್ನು ಎಷ್ಟು ಜನ ಉಸಿರಾಡುತ್ತಾರೋ ಅವರಿಗೆಲ್ಲಾ ಉಪಯೋಗವಾಗುತ್ತದೆ ಬಡವ ಇರುತ್ತಾನೆ, ಅವನಿಗೆ ಅಗ್ನಿಹೋತ್ರಕ್ಕೆ ಪಾತ್ರೆ ಉಪಯೋಗಿಸುವ ಶಕ್ತಿ ಇಲ್ಲ ಎಂದಿಟ್ಟುಕೊಳ್ಳಿ. ಅವನು ಮಣ್ಣಿನ ಮಡಿಕೆಯನ್ನೇ ಉಪಯೋಗಿಸಬಹುದು, ಏನೂ ಪರವಾಗಿಲ. ಚಿನ್ನದ ಪಾತ್ರೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ, ಮಣ್ಣಿನ ಕುಡಿಕೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ. ಅದಕ್ಕೆ ಬಡವರು, ಶ್ರೀಮಂತರು ಅನ್ನುವ ಭೇದ ಇಲ್ಲ. ಬೆಂಕಿಯಿಂದ ಅಡಿಗೆ ಮಾಡುವುದು, ಹವನ ಮಾಡುವುದು, ಇಷ್ಟೇ ಮಾಡ್ತೀವೇನು? ಬೀಡಿ, ಸಿಗರೇಟು, ಚುಟ್ಟಾ ಸೇದಲೂ ಬಳಸುತ್ತೇವೆ. ಆ ಬೆಂಕಿ ಪಾಪ, ಅದೇನು ಮಾಡುತ್ತೆ? ಯಾವುದನ್ನು ಕೊಟ್ಟರೂ ಸುಡುತ್ತೆ. ವಾಯುಶುದ್ಧಿ ಬಗ್ಗೆ ಮಾತಾಡುವ ಬದಲು ಅದಕ್ಕೆ ಏನು ಬೇಕೋ ಅದನ್ನು ಮಾಡಬೇಕು. ವಾಯುವೇ ಸ್ವಾಹಾ ಅನ್ನುವುದು, ಬೀಡಿ. ಚುಟ್ಟಾ ಹಚ್ಚುವುದು! ಏನು ಪ್ರಯೋಜನ? ಈ ತರಹ ಆಲೋಚನೆ ಮಾಡಬೇಕು.
ನರಜನ್ಮ ದೊಡ್ಡದು
     ನಾವು ಯಾವ ದಾರಿಯನ್ನು ಹಿಡಿದು ನಡೆಯಬೇಕು, ಯಾವ ದಾರಿಯಲ್ಲಿ ಹೋದರೆ ನಮಗೆ ಆತ್ಮವಿಕಾಸ ಉಂಟಾಗುತ್ತದೆ ಅನ್ನುವ ವಿಷಯದಲ್ಲಿ ವೇದದ ಒಂದು ಮಂತ್ರದಲ್ಲಿ ವಿವರಿಸಿದೆ. ಇದು ಪ್ರಾರ್ಥನಾ ರೂಪದಲ್ಲಿದೆ. ವೇದಗಳಲ್ಲಿ ಇದೊಂದು ವಿಶೇಷ. ಪ್ರಾರ್ಥನಾ ರೂಪದಲ್ಲೇ ಎಲ್ಲವನ್ನೂ ನಾವು ತಿಳಿದುಕೊಳ್ಳುತ್ತೇವೆ. ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ| ಯದ್ಭದ್ರಂ ತನ್ನ ಆ ಸುವ || (ಯಜು. ೩೦.೩.) ಭಗವಂತ, ಜಗತ್ ಶ್ರೇಯಕ, ಜಗತ್ ಉತ್ಪಾದಕ, ನೀನು ನಮಗೆ ಯಾವುದು ಒಳ್ಳೆಯದು ಇದೆಯೋ ಅದರ ಕಡೆಗೆ ಮಾತ್ರ ಕರೆದುಕೊಂಡು ಹೋಗು, ಕೆಟ್ಟದರಿಂದ ನಮ್ಮನ್ನು ದೂರ ಇರಿಸು ಎಂದು ಇದರ ಅರ್ಥ. ತಾತ್ಪರ್ಯವೆಂದರೆ ನಮ್ಮ ನಡೆಯಲ್ಲಿ ನಮ್ಮ ನುಡಿಯಲ್ಲಿ ಕೊಂಕು, ಸುತ್ತು ಇರಬಾರದು, ನೇರವಾದ ಮಾತು, ನೇರವಾದ ಯೋಚನೆಗಳು, ನೇರವಾದ ಕಾರ್ಯಗಳು, ಹೀಗಿದ್ದರೆ ಮಾತ್ರ ನಾವು ಧರ್ಮಿಗಳಾಗುತ್ತೇವೆ. ಮನುಷ್ಯ ಜನ್ಮ ಸಿಕ್ಕುವುದೇ ಕಷ್ಟ. ಸಿಕ್ಕಿರುವಾಗ ಅದನ್ನು ವ್ಯರ್ಥವಾಗಿ ಕಳೆಯುವುದು ಯಾರಿಗೂ ಶುಭವಲ್ಲ. ಜ್ಞಾಪಕವಿಟ್ಟುಕೊಳ್ಳಿ, ೮೬ ಲಕ್ಷ ಯೋನಿಗಳಿವೆ ಎನ್ನುತ್ತಾರೆ, ಅದರಲ್ಲಿ ಇದೂ ಒಂದು. ಸ್ವಲ್ಪ ಕಾಲು ಜಾರಿತೆಂದರೆ ಮನುಷ್ಯ ಜನ್ಮದಿಂದ ಕೆಳಗೆ ಬೀಳುತ್ತೇವೆ. ಮತ್ತೆ ಮೇಲಕ್ಕೆ ಬರಬೇಕೆಂದರೆ ಎಷ್ಟು ಜನ್ಮ ಜನ್ಮಾಂತರಗಳು ಬೇಕೋ ಗೊತ್ತಿಲ್ಲ. ಸಿಕ್ಕಿದೆಯಲ್ಲಾ ಮಾನವಜನ್ಮ, ಈ ಜನ್ಮದಲ್ಲಿ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ? ನಾವು ಒಂದು ವಿಷಯ ಮರೆಯುತ್ತೇವೆ, ೮೬ ಲಕ್ಷ ಹೋಗಲಿ, ಈ ಒಂದು ಜನ್ಮ ಇದೆಯಲ್ಲಾ ಇದು ಸಿಕ್ಕಬೇಕಾದರೆ ನಾವು ಎಷ್ಟು ಸಲ ಈ ಪ್ರಪಂಚಕ್ಕೆ ಬಂದಿರಬಹುದು, ಹೋಗಿರಬಹುದು! ಹಳೆಯ ಜನ್ಮದ ನೆನಪಿಲ್ಲ. ಕೆಲವರು ಹೇಳುತ್ತಾರೆ - ಪುನರ್ಜನ್ಮ ಇದ್ದರೆ ನೆನಪಿರಬೇಕಿತ್ತು, ನೆನಪೇಕಿಲ್ಲ? ಅದಕ್ಕೆ ಎರಡು ಕಾರಣ ಕೊಡಬಹುದು: ಒಂದು, ಹಳೆಯ ಜನ್ಮದ ಒಳ್ಳೆಯ, ಕೆಟ್ಟ ಸಂಗತಿಗಳು ನೆನಪಿದ್ದರೆ, ಒಳ್ಳೆಯ ವಿಷಯಗಳನ್ನೇನೋ ಉತ್ಸಾಹದಿಂದ ಒಪ್ಪಿಕೊಳ್ಳಬಹುದು, ಕೆಟ್ಟ ವಿಷಯಗಳಿದ್ದರೆ ಈ ಜನ್ಮದ ಸುಖ ಎಲ್ಲೋ ಹೊರಟುಹೋಗುತ್ತದೆ. ನಾವು ಹಿಂದಿನ ಜನ್ಮದಲ್ಲಿ ಯಾರದೋ ಮನೆ ಕೊಳ್ಳೆ ಹೊಡೆದಿದ್ದೇವೆಂದು ನೆನಪಿಗೆ ಬಂದರೆ ಈ ಜನ್ಮದಲ್ಲಿ ನಮ್ಮ ಮನೆಯನ್ನು ಇನ್ನು ಯಾರು ಕೊಳ್ಳೆ ಹೊಡೆಯುತ್ತಾರೋ, ಏನು ಮಾಡುತ್ತಾರೋ ಎಂದು ಚಿಂತೆಯಲ್ಲೇ ನೆಮ್ಮದಿ ಕಳೆದುಕೊಳ್ಳುತ್ತೇವೆ. ಎರಡನೆಯದು, ಈಗಿರುವ ಜನ್ಮದಲ್ಲೇ ನಮಗೆ ಎಲ್ಲಾ ವಿಷಯ ನೆನಪಿನಲ್ಲಿ ಇರುವುದಿಲ್ಲ, ಅದು ಭಗವಂತನ ಕರುಣೆ ಎಂದಿಟ್ಟುಕೊಳ್ಳಿ. ಜ್ಞಾಪಕ ಇದ್ದಿದ್ದರೆ ಕೆಟ್ಟದು ನೆನಪಿಗೆ ಬಂದರೆ ಅದರ ಚಿಂತೆಯಲ್ಲೇ, ಕೊರಗಿನಲ್ಲೇ ಜೀವನ ಕಳೆದುಹೋಗುತ್ತಿತ್ತು.
...............(ಮುಂದುವರೆಯುವುದು)

12 ಕಾಮೆಂಟ್‌ಗಳು:

 1. ಪಂ.ಸುಧಾಕರ ಚತುರ್ವೇದಿಗಳ ಚಿಂತನೆಯನ್ನು, ವೇದೋಕ್ತ ವಿಚಾರಗಳನ್ನು ಹಿಡಿದಿಡುವ ನಿಮ್ಮ ಪ್ರಯತ್ನ ಶ್ಲಾಘನೀಯ. ಧನ್ಯವಾದಗಳು.
  - ಸುಧಾಕರ ಶರ್ಮಾ

  ಪ್ರತ್ಯುತ್ತರಅಳಿಸಿ
 2. ಮಾನ್ಯ ಶರ್ಮಾಜಿಯವರಿಗೆ ವಂದನೆಗಳು. ನಿಮ್ಮ ಪ್ರೋತ್ಸಾಹವೂ ಸಾಥ್ ನೀಡಿರುವುದು ಸುಳ್ಳಲ್ಲ.

  ಪ್ರತ್ಯುತ್ತರಅಳಿಸಿ
 3. ಆತ್ಮೀಯ ನಾಗರಾಜ್,
  ಒಂದು ವಿಚಾರಪೂರ್ಣ ಲೇಖನ, ಮುಂದುವರೆಸಿ. ಬೇಸರವೆಂದರೆ ಕಾಯುವ ಹಾಗೆ ಆಯಿತಲ್ಲ!
  ಧನ್ಯವಾದಗಳು.
  ಪ್ರಕಾಶ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಆತ್ಮೀಯ ಪ್ರಕಾಶರೇ, ನಿಮ್ಮಂತಹವರ ಪ್ರತಿಕ್ರಿಯೆ ಸಹ ಚಾಲನೆ ನೀಡುತ್ತಿದೆ. ಧನ್ಯವಾದಗಳು.

   ಅಳಿಸಿ
 4. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 5. Namaste sir

  It is a very great effort from all of you to protect the veda and the works of all the Arya samaj scholars specially who did their work in Kannada.I request the team to collaborate with Agniveer mission (www.Agniveer.com) who also share the same Ideology of yours to spread the Light of Truth fare and wide :)

  ಪ್ರತ್ಯುತ್ತರಅಳಿಸಿ
 6. ನೀವು ತಿಳಿಸಿದ ವೆಬ್ ಸೈಟ್ ಮತ್ತು ನಿಮ್ಮ ಬ್ಲಾಗ್ ಗಳನ್ನು ನೋಡಿದೆ. ಆಸಕ್ತಿಕರ ವಿಷಯಗಳಿವೆ. ಇಂತಹ ಸಂಗತಿಗಳಿಗೆ ಪ್ರಚಾರ ಮತ್ತು ಮಹತ್ವ ಸಿಗಬೇಕಿದೆ. ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 7. I Came to know about this web site through a kannada news paper who have published an artical on this web site.Agniveer mission is already a very popular web site with more than 2,00,000 subscription to the site.I request the team of this site to think on the collaboration part(it may be of any kind for example you people can translate their artical and publish them in this site or you can contribute to that web site ) .Agniveer mission is working on a very vast spectrum.It has conducted lot of shudi movement all over India and countering the muslim fanatic organisation like IRF and Dr zakir naik and Other anti-veda wed site like www.islamhinduism.com.

  ಪ್ರತ್ಯುತ್ತರಅಳಿಸಿ
 8. I request the team to come on facebook create your page and publish your advertisement on the facebook so that you can get more publicity.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಸಲಹೆಗಳು ಉತ್ತಮವಾಗಿವೆ. ಹೊಂದಾಣಿಕೆಗೆ ಹಾಗೂ ಅಗತ್ಯದ ಸಹಕಾರಕ್ಕೆ ನನ್ನ ಸಹಮತವಿದೆ. ವಂದನೆಗಳು, ಮೂಲ ಆರ್ಯರವರೇ.

   ಅಳಿಸಿ
 9. ಒಂದು ವಿಚಾರಪೂರ್ಣ ಚಿಂತನೆ... ಮಾನ್ಯ ಸುಧಾಕರ ಚತುರ್ವೇದಿಯವರಿಗೂ, ಮಾನ್ಯ ಸುಧಾಕರ ಶರ್ಮಾ ಅವರಿಗೂ ಮತ್ತು ಬರಹರೂಪದಲ್ಲಿ ಪ್ರಸ್ತುತಪಡಿಸಿದ ತಮಗೂ ಅನಂತ ನಮನಗಳು...

  ಪ್ರತ್ಯುತ್ತರಅಳಿಸಿ