ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಏಪ್ರಿಲ್ 17, 2012

ಸಾರಗ್ರಾಹಿಯ ರಸೋದ್ಗಾರಗಳು -2


     ಪಂ. ಸುಧಾಕರ ಚತುರ್ವೇದಿಯವರಿಗೆ ಈಗ ೧೧೬ ವರ್ಷಗಳು. ಬತ್ತದ ಜೀವನೋತ್ಸಾಹದ ಅವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ.  ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ದೇವರ ಫಜೀತಿ
     ಪರಮಾತ್ಮನೇ ಸೃಷ್ಟಿಸಿದ ತೆಂಗಿನಕಾಯಿಯನ್ನು ದೇವಸ್ಥಾನಕ್ಕೆ ಹೋಗಿ ಅವನಿಗೇ ಅರ್ಪಿಸಿ, 'ಭಗವಂತಾ, ನಮಗೆ ಒಳ್ಳೆಯದು ಮಾಡಪ್ಪಾ' ಅಂತಾ ಕೈಮುಗೀತೇವೆ. ನಮಗೆ ಒಳ್ಳೆಯದು ಮಾಡಬೇಕು ಅನ್ನುವುದು ಭಗವಂತನಿಗೆ ಗೊತ್ತಿಲ್ಲವೇ? ಅವನಿಗೆ ನೆನಪಿಸಬೇಕೇ? ಇದನ್ನೆಲ್ಲಾ ಯಾರೂ ಯೋಚನೆ ಮಾಡುವುದಿಲ್ಲ. ಸುಮ್ಮನೆ ಕಣ್ಣು ಮುಚ್ಚಿಕೊಂಡು ಮಾಡುತ್ತಾ ಹೋಗುತ್ತೇವೆ. ನಿಮ್ಮ ಪಕ್ಕದ ಮನೆಯವರನ್ನು ಕಂಡರೆ ನಿಮಗೆ ಆಗುವುದಿಲ್ಲವೆಂದು ಇಟ್ಟುಕೊಳ್ಳಿ. ನೀವು ಪ್ರಾರ್ಥನೆ ಸಲ್ಲಿಸುತ್ತೀರಿ-'ದೇವರೇ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಆ ಪಕ್ಕದ ಮನೆಯವನ ಎರಡೂ ಕಣ್ಣು ಹೋಗಲಿ'. ಆ ಪಕ್ಕದ ಮನೆಯವನೂ ಹಾಗೆಯೇ ಕೇಳುತ್ತಾನೆ. ಪಾಪ, ದೇವರು ಯಾರ ಮಾತು ಕೇಳಬೇಕು? ಫಜೀತಿಗೆ ಸಿಕ್ಕಿಕೊಳ್ಳುತ್ತಾನೆ. ನಿಮ್ಮ ಮಾತು ಕೇಳಿದರೆ ಪಕ್ಕದ ಮನೆಯವನಿಗೆ ಸಿಟ್ಟು ಬರುತ್ತದೆ, ಅವನ ಮಾತು ಕೇಳಿದರೆ ನಿಮಗೆ ಸಿಟ್ಟು ಬರುತ್ತದೆ. 'ಭಗವಂತಾ, ನನ್ನನ್ನು ಪರೀಕ್ಷೆಯಲ್ಲಿ ಪಾಸು ಮಾಡಿಸಿಬಿಡು', 'ಅಪ್ಪಾ, ನನಗೆ ಒಳ್ಳೆಯ ಹೆಣ್ಣು ಸಿಕ್ಕೋ ಹಾಗೆ ಮಾಡು' ಅಂತೆಲ್ಲಾ ಪ್ರಾರ್ಥನೆ ಮಾಡೋದು! ನಮ್ಮ ಸಾಂಸಾರಿಕ ವ್ಯವಹಾರದಲ್ಲಿ ಅವನನ್ನೂ ಸಿಕ್ಕಿಸಲು ಹೋಗುತ್ತೇವೆ.
ಸರ್ವಾಧಾರ ಪರಮಾತ್ಮ
    'ಸ್ಕಂಭೋದಾಧಾರ ಪೃಥಿವೀಮುತದ್ಯಾ . . . .'  ಅಥರ್ವಣ ವೇದದ ಮಂತ್ರ ಇದು. ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸುವುದುಂಟು. ಇಲ್ಲಿ ಅವನನ್ನು ಕಂಬ ಎಂದು ಹೇಳಿದ್ದಾರೆ. ಭೂಲೋಕ ಪರಲೋಕಗಳನ್ನು ಕಂಬದಂತಿರುವ ಪರಮಾತ್ಮ ಎತ್ತಿ ಹಿಡಿದಿದ್ದಾನೆ ಎಂದು ಇದರ ಅರ್ಥ. ಅವನು ಎತ್ತಿ ಹಿಡಿಯದಿದ್ದರೆ ಎಲ್ಲವೂ ಛಿದ್ರ ಛಿದ್ರವೇ. ಭೂಮಿಯ ಆಕರ್ಷಣ ಶಕ್ತಿ ಸೀಮಿತ. ಎಲ್ಲಾ ಕಡೆ ವ್ಯಾಪಿಸಿಲ್ಲ. ಭೂಮಿಯ ಈ ಆಕರ್ಷಣ ಶಕ್ತಿ ಚಂದ್ರನನ್ನು ತನ್ನ ಸುತ್ತ ತಿರುಗುವಂತೆ ನೋಡಿಕೊಳ್ಳುತ್ತಿದೆ. ಈ ಆಕರ್ಷಣ ಶಕ್ತಿ ಇಲ್ಲದಿದ್ದರೆ ಚಂದ್ರ ಎಲ್ಲೋ, ನಾವು ಎಲ್ಲೋ! ಭಗವಂತನ ನಿಯಮವೇ ಹಾಗೆ. ಮನುಷ್ಯನ ನಿಯಮ ವ್ಯತ್ಯಾಸ ಆಗಬಹುದು. ಭಗವಂತನ ನಿಯಮ ವ್ಯತ್ಯಾಸವಾಗುವುದಿಲ್ಲ.
ಒಂದು ರಾಜ್ಯಕ್ಕೆ ಹಲವರು ರಾಜರು!
     ನಾವು ಭಗವಂತನನ್ನು ಸಾರ್ವಕಾಲಿಕ, ಸಾರ್ವದೇಶಿಕ ಎಂತೆಲ್ಲಾ ಹೇಳುತ್ತೇವೆ. ನಮಗೆ ಬ್ರಹ್ಮಾಂಡ ಎಷ್ಟಿದೆ ಗೊತ್ತಿಲ್ಲ. ನಮ್ಮ ಸರ್ವ ಅನ್ನುವುದು ಚಿಕ್ಕದು. ಎಲ್ಲವನ್ನೂ ತಿಳಿಯುವುದು ನಮಗೆ ಸಾಧ್ಯವೇ ಇಲ್ಲ. ಅಷ್ಟೇ ಏಕೆ, ನಮ್ಮ ಭೂಮಿ ಬಗ್ಗೆ ತಿಳಿಯ ಹೊರಟರೆ ನಮ್ಮ ತಲೆ ತಿರುಗುತ್ತೆ. ನಮ್ಮ ಮನೆಯೇ ನಮಗೆ ಒಂದು ಪ್ರಪಂಚ. ಈ ಮನೆಯಲ್ಲೂ ಒಳಗೆ ಕುಳಿತವರಿಗೆ ಹೊರಗಿನವರು ಕಾಣುವುದಿಲ್ಲ, ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ನಮ್ಮ ಪರಿಸ್ಥಿತಿ ಸಂಕುಚಿತ. ಹೀಗಿರುವಾಗ ನಾವು ಸರ್ವಜ್ಞರು ಅಂದುಕೊಂಡರೆ ಆ ಸರ್ವ ಅನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾರೂ ಸರ್ವಜ್ಞರಲ್ಲ. ಈ ಮಾತು ಹೇಳಿದರೆ ಕೆಲವರಿಗೆ ಕೋಪ ಬರುತ್ತೆ. ಶಂಕರಾಚಾರ್ಯರು ಸರ್ವಜ್ಞರಲ್ಲವೇ, ರಾಮಾನುಜಾಚಾರ್ಯರು ಸರ್ವಜ್ಞರಲ್ಲವೇ, ಮಧ್ವರು ಸರ್ವಜ್ಞರಲ್ಲವಾ ಅನ್ನುತ್ತಾರೆ. (ಅವರುಗಳು ತಮ್ಮನ್ನು ಸರ್ವಜ್ಞರು ಅಂದುಕೊಳ್ಳಲಿಲ್ಲ. ಅವರ ಅನುಯಾಯಿಗಳು ಅನ್ನುತ್ತಾರೆ!) ಇಷ್ಟೊಂದೆಲ್ಲಾ ಸರ್ವಜ್ಞರಿದ್ದರೆ ಆ ಸರ್ವನ ಗತಿಯೇನು? ಒಂದು ಭೂಪ್ರದೇಶವನ್ನು ಒಬ್ಬ ರಾಜ ಆಳಬಹುದು. ಅದೇ ೨೫ ರಾಜರು ಕಿತ್ತಾಡಿ ಆಳಿದರೆ ಆ ರಾಜ್ಯದಲ್ಲಿ ಬಾಳುವ ಪ್ರಜೆಗಳಿಗೆ ಏನು ಸುಖ? ಆದ್ದರಿಂದ ಒಬ್ಬ ನಿಯಾಮಕನನ್ನು ನಂಬಬೇಕು. ನನ್ನ ಗುರು ದೊಡ್ಡವನು, ನಿನ್ನ ಗುರು ಚಿಕ್ಕವನು ಅನ್ನುವ ಮಾತು ತಕ್ಕದ್ದಲ್ಲ. ಈಗಿನ ಕಾಲದಲ್ಲಿ ಗುರುಗಳ ಕಾಟ ಬಹಳ ಜಾಸ್ತಿ. ಕೆಲವರು ಗುರುಗಳಿಗೆ ಶಿಷ್ಯರೇ ಇಲ್ಲ. ಶಿಷ್ಯರುಗಳಿಗಿಂತ ಗುರುಗಳೇ ಜಾಸ್ತಿ ಈಗ. ಗುರು ಅಂದರೆ ಭಾರ, ದೊಡ್ಡವನು ಎಂದರ್ಥ. ಸತ್ಯವನ್ನು ಉಪದೇಶಿಸುವವನೇ ಗುರು. ಸತ್ಯ ಬಿಟ್ಟು ನಾನು ಹೇಳುವುದೇ ಸತ್ಯ ಎಂದು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳುತ್ತಾ ಹೋಗುತ್ತಾರೆ. ಆ ಗುರು ದೊಡ್ಡವನು, ಈ ಗುರು ಚಿಕ್ಕವನು ಅನ್ನುವುದೆಲ್ಲಾ ಇಲ್ಲ. 'ಸತ್ಯಮೇವ ಜಯತೇ ನಾನೃತಮ್. . . . . ' ದೇವಗುಣ ಸಂಪನ್ನರಿಗೆ, ದೇವಜ್ಞರಿಗೆ ಸತ್ಯ ಯೋಗ್ಯವಾದ ದಾರಿ ತೋರಿಸುತ್ತದೆ. ಸತ್ಯವನ್ನು ಆಶ್ರಯಿಸಿದರೆ ಮಾತ್ರ ಸುಖ. ಹಿಂದೆ ಮೇಷ್ಟ್ರಿಗೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಇಂದು ಮೇಷ್ಟ್ರೇ ಹುಡುಗರಿಗೆ ಹೆದರುತ್ತಾ ಶಾಲಾಕೊಠಡಿಗೆ ಹೋಗುತ್ತಾರೆ, ಯಾರು ಏನು ಕೀಟಲೆ ಮಾಡುತ್ತಾರೋ, ಏನು ತೊಂದರೆ ಕೊಡುತ್ತಾರೋ ಅಂತ! ಕಾಲ ಹಾಗೆ ಬಂದಿದೆ. ಅದಕ್ಕೇ ಈ ಪ್ರಪಂಚದಲ್ಲಿ ಶಾಂತಿ ಇಲ್ಲ. ಸುಖ ಶಾಂತಿ ಬೇಕೆಂದರೆ ಸತ್ಯವನ್ನು ಆಶ್ರಯಿಸಬೇಕು.
ಗಿಣಿಪಾಠ
      ಅದೇನು ಮಂತ್ರವೋ ಗೊತ್ತಿಲ್ಲದೆ ೪೦-೫೦ ವರ್ಷಗಳಿಂದ ಅಗ್ನಿಹೋತ್ರ ಮಾಡುವವರು, ಪೂಜೆ, ಜಪ,ತಪ ಮಾಡುವವರು ನನಗೆ ಗೊತ್ತಿದ್ದಾರೆ. ಒಂದು ಮಂತ್ರದ ಅರ್ಥವೂ ಗೊತ್ತಿಲ್ಲವೆಂದರೆ ಪ್ರಯೋಜನವೇನು? ಇದರಿಂದ ಲಾಭ ಉಂಟೇ? ಶುಕಪಾಠ -ಗಿಳಿಪಾಠ- ಅಂತ ಹೇಳ್ತಾರೆ. ರಾಮ-ರಾಮ ಅಂತ ಗಿಳಿಗೆ ಹೇಳಿಕೊಟ್ಟರೆ ಅದು ರಾಮ-ರಾಮ ಅನ್ನುತ್ತೆ. ಅದಕ್ಕೆ ರಾಮ ಯಾರು, ರಾವಣ ಯಾರು ಗೊತ್ತೇನು? ಅದರ ತಲೆಯಲ್ಲಿ ಆ ವಿಷಯ ಇರುವುದೇ ಇಲ್ಲ. ಅಂತಹ ಪಾಠವನ್ನು ನಾವೂ ಮಾಡಿದರೆ ಏನು ಪ್ರಯೋಜನ? ಅರ್ಥಸಹಿತವಾಗಿ ತಿಳಿದುಕೊಂಡರೆ ಆ ಮಂತ್ರಗಳಲ್ಲಿ ಏನು ಅರ್ಥ ಇದೆ ಅದನ್ನು ಜೀವನಕ್ಕೆ ತರಬಹುದು. 'ಅರ್ಥ ಗೊತ್ತಿಲ್ಲದೆ ಮಂತ್ರ ಹೇಳ್ತೀರಲ್ಲಾ, ಅದರಿಂದ ಏನು ಲಾಭ?' ಅಂತ ಅವರನ್ನು ಕೇಳಿದರೆ, ಅವರು ಕೊಟ್ಟ ಉತ್ತರ -"ಭಗವಂತನಿಗೇ ಗೊತ್ತು ಸ್ವಾಮಿ, ನಮಗೆ ಅದೆಲ್ಲಾ ಯಾಕೆ ಬೇಕು? ನಮ್ಮ ತಂದೆ ಮಾಡ್ತಾ ಇದ್ದರು,  ನಾವೂ ಮಾಡ್ತಾ ಇದೀವಿ. ಮಂತ್ರದ ಅರ್ಥ ಅವನಿಗೆ ಗೊತ್ತಿಲ್ವಾ? ತಿಳಿದುಕೊಳ್ಳುತ್ತಾನೆ. ನಮಗೆ ಅರ್ಥ  ಗೊತ್ತಿಲ್ಲದೇ ಹೋದರೆ ಏನಂತೆ? ಭಗವಂತನಿಗೆ ಗೊತ್ತಾಗಲ್ವಾ?" ವೇದ ಉಪದೇಶ ಮಾಡಿರುವುದು ಭಗವಂತ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅಲ್ಲ, ಮಾನವಜಾತಿಯ ಬುದ್ಧಿಶಕ್ತಿಯನ್ನು ಎಚ್ಚರಿಸುವ ಸಲುವಾಗಿ ವೇದ ಇರುವುದು! ಅದನ್ನೇ ತಿಳಿಯದೇ ಗಿಳಿಪಾಠ ಮಾಡಿದರೆ ಏನು ಲಾಭ? ಸ್ವಲ್ಪ ಲಾಭ ಇದೆ, ಮಂತ್ರ ಪಾಠ ಮಾಡುವ -ಅರ್ಧ ಗಂಟೆಯೋ ಒಂದು ಗಂಟೆಯೋ- ಆ ಸಮಯದಲ್ಲಿ ಯಾರನ್ನೋ ಬಯ್ಯುವುದಕ್ಕೋ, ಕೆಟ್ಟ ಮಾತಾಡುವುದಕ್ಕೋ, ಇನ್ನು ಯಾವುದೋ ಕೆಟ್ಟ ರೀತಿಯಲ್ಲಿ ಬಳಕೆಯಾಗಬಹುದಾದುದು ತಪ್ಪಿದ ಲಾಭ!
*********************
ಹಿಂದಿನ ಲೇಖನಕ್ಕೆ ಲಿಂಕ್:  

2 ಕಾಮೆಂಟ್‌ಗಳು: