ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಏಪ್ರಿಲ್ 2, 2012

ರಾಮಭಕ್ತರಾಗೋಣ


     ಇಂದು ಶ್ರೀರಾಮನವಮಿ. ಮರ್ಯಾದಾ ಪುರುಷೋತ್ತಮ, ದೇವಮಾನವ ಶ್ರೀರಾಮಚಂದ್ರನ ಜನ್ಮದಿನ. ಈ ತಿಂಗಳು ಶ್ರೀ ರಾಮೋತ್ಸವದ ಹೆಸರಿನಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು, ಹರಿಕಥೆ, ಪ್ರವಚನಗಳು, ಭಜನೆ, ಸಂಗೀತ ಕಾರ್ಯಕ್ರಮಗಳು ನಡೆದು ರಾಮಭಕ್ತರ ಮನತಣಿಸುವ ತಿಂಗಳು. ಶ್ರೀರಾಮನನ್ನು ಗುಡಿಯಲ್ಲಿಟ್ಟು ಪೂಜಿಸಿ, ತೀರ್ಥ, ಪ್ರಸಾದಗಳನ್ನು ಸ್ವೀಕರಿಸಿ ಕೃತಾರ್ಥರಾದೆವೆಂದು ಭಾವಿಸುತ್ತೇವೆ. ರಾಮಾಯಣ ಪ್ರವಚನವನ್ನು ಕೇಳಿ ಪುನೀತರಾದೆವೆಂದು ಅಂದುಕೊಳ್ಳುತ್ತೇವೆ. ರಾಮಾಯಣವೆಂದರೆ ಪದಶಃ ಅರ್ಥ ತೆಗೆದುಕೊಂಡರೆ ರಾಮ ನಡೆದ ದಾರಿ ಎಂದು. ಯಾರನ್ನೇ ಆಗಲಿ, ನಿಜವಾಗಿ ಗೌರವಿಸುವುದೆಂದರೆ, ಪೂಜಿಸುವುದೆಂದರೆ, ಮೆಚ್ಚಿಸುವುದೆಂದರೆ ಅವರು ನಡೆದ ಹಾದಿಯಲ್ಲಿ ನಡೆಯುವುದಕ್ಕಿಂತ ಉತ್ತಮ ದಾರಿ ಯಾವುದು? ಈ ಹಿನ್ನೆಲೆಯಲ್ಲಿ ರಾಮಭಕ್ತರೆಂದರೆ ಯಾರು ಎಂದು ಮನಸ್ಸು ವೈಚಾರಿಕ ತಾಕಲಾಟದ ಬಲೆಯಲ್ಲಿ ಸಿಲುಕಿಕೊಂಡಿತು.
* ಶ್ರೀರಾಮ ಏಕ ಪತ್ನಿ ವ್ರತಸ್ಥ. ೨-೩ ಹೆಂಡಿರ ಮುದ್ದಿನ ಗಂಡರು ರಾಮದೇಗುಲಕ್ಕೆ ಹೋಗಿ ಅಡ್ಡಬಿದ್ದರೆ ಅವರನ್ನು ರಾಮಭಕ್ತರೆನ್ನಬಹುದೇ?
* ಶ್ರೀರಾಮ ಚಂಚಲತೆಗೆ ಒಳಗಾಗದವನು. ಅವನನ್ನು ಮೋಹಿಸಿ ಬಂದ ಶೂರ್ಪನಖಿ, ಮುಂತಾದವರನ್ನು ತಿರಸ್ಕರಿಸಿದವನು. ಪರನಾರೀಮೋಹ ಅಳಿಯುವವರೆಗೆ ರಾಮಭಕ್ತನ ಸ್ಥಾನ ಸಿಗಲಾರದು.
* ಶ್ರೀರಾಮ ಎಂತಹ ಸ್ಥಿತಿಯಲ್ಲೂ ಸಮಚಿತ್ತ ಕಾಯ್ದುಕೊಂಡವನು. ಆಲೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದವನು. ಇಂತಹ ಸಮಚಿತ್ತ ಪಡೆಯುವುದು ಸುಲಭವಲ್ಲ.
* ಶ್ರೀರಾಮ ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸಿ, ಅವರ ಸೂಚನೆಗಳನ್ನು ಸ್ವಂತ ಹಿತ ಬದಿಗಿಟ್ಟು ಪಾಲಿಸಿದವನು. ಸ್ವಂತ ಹಿತಕ್ಕೆ ಮೊದಲ, ಉಳಿದದ್ದಕ್ಕೆಲ್ಲಾ ಎರಡನೆಯ ಪ್ರಾಶಸ್ತ್ಯ ಕೊಡುವ ನಾವು ಸುಧಾರಿಸಬೇಕಿದೆ.
* ಎಷ್ಟೇ ಕಷ್ಟ-ನಷ್ಟಗಳು ಎದುರಾದರೂ ತೆಗೆದುಕೊಂಡ ನಿರ್ಧಾರಕ್ಕೆ [ವನವಾಸ ಪ್ರಸಂಗ] ಅಂಟಿಕೊಂಡವನು, ಹಿಂದೆ ಸರಿಯದವನು. ಕಷ್ಟ, ಅಸಾಧ್ಯವೆಂದುಕೊಂಡು, ತೆಗೆದುಕೊಂಡ ನಿರ್ಧಾರವನ್ನು ಬದಲಿಸುವ ಸ್ವಭಾವದ ನಾವು ಅದಕ್ಕೆ ವಿವರಣೆ ಕೊಡುತ್ತೇವೆ, ಸಮರ್ಥಿಸಿಕೊಳ್ಳುತ್ತೇವೆ.
* ಶ್ರೀರಾಮ ಜಾತಿ ಭೇದ ಮಾಡಲಿಲ್ಲ. ನಾವು ಜಾತಿಗೆ ಅಂಟಿಕೊಂಡಿದ್ದೇವೆ.
* ಶ್ರೀರಾಮ ನ್ಯಾಯ ಪಕ್ಷಪಾತಿ. ಸ್ವಂತಕ್ಕೆ ದುಃಖವಾದರೂ, ಅನ್ಯಾಯವಾದರೂ ಹಿಂದೆ ಮುಂದೆ ನೋಡದವನು. ನಾವು ಸ್ವಂತಹಿತಕ್ಕಾಗಿ ನ್ಯಾಯವನ್ನೇ ತಿರುಚುವವರು.
* ಶ್ರೀರಾಮ ಅಧಿಕಾರ, ಅಂತಸ್ತು, ಸಂಪತ್ತುಗಳಿಗೆ ಅಂಟಿಕೊಂಡವನಲ್ಲ. ಅಧಿಕಾರ, ಅಂತಸ್ತು, ಸಂಪತ್ತುಗಳಿಗಾಗಿ ನಾವು ಏನು ಬೇಕಾದರೂ ಮಾಡುವವರಾಗಿದ್ದೇವೆ. ಅಧಿಕಾರಕ್ಕಾಗಿ ರಾಮನನ್ನೇ ಪರ-ವಿರೋಧದ ದಾಳವಾಗಿಸಿಕೊಳ್ಳುತ್ತೇವೆ.
* ವಿಗ್ರಹಗಳಿಗೆ ಚಿನ್ನದ ಕಿರೀಟ, ಆಭರಣ, ಉಡುಗೆ-ತೊಡುಗೆಗಳನ್ನು ಮಾಡಿಸಿಕೊಡುವವರೆಲ್ಲಾ ಭಕ್ತರೆನಿಸುವುದಿಲ್ಲ. ಅವರಲ್ಲಿ ನಿಜಭಕ್ತರೂ ಇರಬಹುದು, ಆದರೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತರೂಪದಲ್ಲಿ ಮಾಡಿಸಿಕೊಡುವವರೇ ಕಣ್ಣಿಗೆ ಬೀಳುತ್ತಿದ್ದಾರೆ. 
* ಶ್ರೀರಾಮ ಸಜ್ಜನಶಕ್ತಿ ಒಗ್ಗೂಡಿಸಿದವನು, ದುಷ್ಟರನ್ನು ಸದೆ ಬಡಿದವನು. ನಾವು ಕಷ್ಟ, ತೊಂದರೆಗಳ ಕಾರಣವೊಡ್ಡಿ ಅಂತಹ ಕಾರ್ಯಗಳಿಂದ ದೂರ ಉಳಿಯುವವರು, ಆ ಮಾರ್ಗದಲ್ಲಿ ನಡೆಯುವವರ ಸ್ಥೈರ್ಯಗೆಡಿಸುವವರು, ಕನಿಷ್ಠ ಪಕ್ಷ ಅವರಿಗೆ ನೈತಿಕ ಬೆಂಬಲವನ್ನೂ ತೋರಿಸದವರು.
 * . . . . . . . . 
     ಇಂತಹ ಹಲವಾರು ಸಂಗತಿಗಳ ಪಟ್ಟಿ ಬೆಳೆಸುತ್ತಾ ಹೋಗಬಹುದು. . . . . . . . ಒಟ್ಟಿನಲ್ಲಿ. . . . ನಿಜವಾದ ರಾಮಭಕ್ತರಾಗಲು ಪ್ರಯತ್ನಿಸೋಣ. ಎಲ್ಲರಿಗೂ ಶ್ರೀರಾಮನವಮಿ ಶುಭಾಶಯಗಳು.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ