ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ಫೆಬ್ರವರಿ 17, 2018

ಅಡಗೂರಿನಲ್ಲಿ ಅರ್ಥಪೂರ್ಣ ಶಿವರಾತ್ರಿಯ ಜಾಗರಣೆ


     ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ ದಿನವೇ ಶಿವರಾತ್ರಿ. ಶಿವರಾತ್ರಿ ವಿಶೇಷವಾದ ಜಾಗರಣೆ ಎಂದರೆ ಕೇವಲ ನಿದ್ರೆ ಮಾಡದಿರುವುದಲ್ಲ, ಜಾಗೃತರಾಗುವುದು, ಎಚ್ಚರಗೊಳ್ಳುವುದು, ಅರಿಯುವುದು ಎಂದೇ ಅರ್ಥ. ನಾವು ಜಾಗೃತರಾಗುವುದಲ್ಲದೆ, ಇತರರನ್ನೂ ಜಾಗೃತಗೊಳಿಸುವ ವಿಶೇಷ ಜಾಗರಣೆಯ ಕಾರ್ಯ 13-02-2018ರ ಶಿವರಾತ್ರಿಯಂದು ನಡೆದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಆಸಕ್ತರ ಅವಗಾಹನೆಗಾಗಿ ನೀಡುತ್ತಿರುವೆ. 



     ಹಾಸನದಿಂದ ಹಳೇಬೀಡಿಗೆ ಹೋಗುವ ಮಾರ್ಗದಲ್ಲಿ ಸುಮಾರು 15 ಕಿ.ಮೀ. ದೂರದಲ್ಲಿರುವ ಗ್ರಾಮ ಅಡಗೂರು. ಬೇಲೂರು ತಾಲ್ಲೂಕಿಗೆ ಸೇರಿದ ಅಡಗೂರಿನಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಕಾಶಿಪುರ ಎಂಬ ಜನವಸತಿ ಇರದ ಬೇಚರಾಕ್ ಗ್ರಾಮವಿದೆ. ಅಲ್ಲಿ ಒಂದು ಪುರಾತನವಾದ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದುದಲ್ಲದೆ ದೇವಸ್ಥಾನದ ಕಲ್ಲುಗಳನ್ನು ಅವರಿವರು ಸಾಗಿಸಿದ್ದು ಅಳಿದುಳಿದ ಭಾಗ ಮಾತ್ರ ಉಳಿದಿದೆ. ಈ ದೇವಸ್ಥಾನದ ಅಸ್ತಿತ್ವವೇ ಮರೆತು ಹೋದಂತಾಗಿದ್ದು, ಜನವಸತಿ ಇರದ ಗ್ರಾಮವಾಗಿದ್ದು, ಸುತ್ತಮುತ್ತಲೂ ಜಮೀನುಗಳು ಇರುವುದರಿಂದ ಹತ್ತಿರದ ಅಡಗೂರಿನವರಿಗೇ ಗೊತ್ತಿಲ್ಲವೇನೋ ಎಂಬಂತಾಗಿತ್ತು. ಅಲ್ಲಿ ಒಂದು ದೇವಸ್ಥಾನದ ಸಮುಚ್ಛಯವೇ ಇದ್ದುದು ಅವಶೇಷಗಳಿಂದ ತಿಳಿದುಬರುತ್ತದೆ. ಪ್ರವೇಶ ಮಂಟಪ, ಸುತ್ತಲೂ ಆವರಣ, ಒಳಭಾಗದಲ್ಲಿ ಮಂಟಪಗಳು, ಅಶ್ವಲಾಯ, ಗಜಲಾಯಗಳು, ಬಂದುಹೋಗುವವರಿಗೆ ಉಳಿದುಕೊಳ್ಳಬಹುದಾದ ಕೊಠಡಿಗಳು, ಶಿವ ಮತ್ತು ವಿಷ್ಣುವಿನ ದೇವಾಲಯಗಳಿದ್ದುದು ತಿಳಿದುಬರುತ್ತದೆ. ನಿಧಿಯ ಆಸೆಗಾಗಿ ಸುಮಾರು ಮೂರು ಅಡಿ ಎತ್ತರದ ಲಿಂಗವನ್ನು ನೆಲದಿಂದ ಕಿತ್ತು ಹೊರತೆಗೆದಿರುವುದು ಕಾಣುತ್ತದೆ. ಪಕ್ಕದಲ್ಲಿ ಜಯ ವಿಜಯರ ವಿಗ್ರಹವಿರುವ ದ್ವಾರವಿದ್ದು ವಿಷ್ಣುವಿನ ದೇವಸ್ಥಾನವೂ ಅಲ್ಲಿದ್ದುದು ತಿಳಿಯುತ್ತದೆ. ವಿಗ್ರಹ ಕಳುವಾಗಿದೆ ಅಥವ ಬೇರೆಲ್ಲೋ ಸಾಗಿಸಿರುವ ಸಾಧ್ಯತೆಯಿದೆ. ಈ ದೇವಸ್ಥಾನ ಸಮುಚ್ಛಯ ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿದ್ದು ಅಕ್ಕಪಕ್ಕದ ಆವರಣ ಒತ್ತುವರಿ ಆಗಿರುವ ಸಾಧ್ಯತೆಯಿದೆ. ದೇವಸ್ಥಾನ ಸಮುಚ್ಛಯವಿರುವ ಭಾಗವನ್ನು ಪುನರುಜ್ಜೀವನಗೊಳಿಸಿ ಉಳಿಸಿಕೊಳ್ಳಬೇಕಾದ ಅಗತ್ಯತೆಯಿದೆ. ಜಿಲ್ಲಾಡಳಿತ, ಕಂದಾಯ, ಮೋಜಣಿ, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ, ಮುಜರಾಯಿ ಇಲಾಖೆಗಳು, ಜಿಲ್ಲಾ ಪಂಚಾಯಿತಿ, ಇತ್ಯಾದಿಗಳ ಗಮನ ಇತ್ತ ಕಡೆ ಹರಿಯಬೇಕಿದೆ.




     ಕೆಲವು ತಿಂಗಳುಗಳ ಹಿಂದೆ ಮಿತ್ರ ಹರಿಹರಪುರ ಶ್ರೀಧರ ಕಾಶಿಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಾಲಿಡಲು ಅವಕಾಶವಿಲ್ಲದಂತೆ ಕುರುಚಲು ಗಿಡಗಳು, ಮುಳ್ಳುಕಂಟಿಗಳು ಬೆಳೆದಿದ್ದವು. ಹಿಂದೆ ಯಾವಾಗಲೋ ಇನ್ನೊಬ್ಬ ಮಿತ್ರ ದಿ. ದಾಸೇಗೌಡರು ಆವರನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋಗಿ ಇದರ ಪುನರುತ್ಥಾನಕ್ಕೆ ಏನಾದರೂ ಮಾಡಬೇಕಲ್ಲಾ ಎಂದು ಹೇಳಿದ್ದ ಮಾತು ನೆನಪಿನಲ್ಲಿ ಉಳಿದಿದ್ದುದೂ ಅವರ ಕಾಶಿಪುರ ಭೇಟಿಗೆ ಕಾರಣವಾಗಿತ್ತಂತೆ. ಆದರೆ ಅದಕ್ಕೆ ತಕ್ಕ ಮುಹೂರ್ತ ಬರಬೇಕಿತ್ತಷ್ಟೆ. ಮಿತ್ರ ಶ್ರೀಧರ್ ದೇವಸ್ಥಾನದ ಆಗಿನ ಸ್ಥಿತಿಯನ್ನು ಫೇಸ್ ಬುಕ್ಕಿನ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಸಹಿತ ಪ್ರಕಟಿಸಿದಾಗ ರಾಜ್ಯದಾದ್ಯಂತ ಮತ್ತು ಹಾಸನ ಜಿಲ್ಲೆಯವರ ಗಮನ ಸೆಳೆಯಿತು. ಪರಿಣಾಮವಾಗಿ ಹಾಸನದ ವೇದಭಾರತಿ, ಪತಂಜಲಿ ಯೋಗ ಸಮಿತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರುಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಹೀಗೆ ಹತ್ತು ಹಲವಾರು ಸಂಘಟನೆಗಳು ಕೈಜೋಡಿಸಿದವು. ಹಲವಾರು ದಿನಗಳವರೆಗೆ ಶ್ರಮದಾನ ನಡೆದು ದೇವಸ್ಥಾನದ ಆವರಣದಲ್ಲಿ ಓಡಾಡಲು ಸಾಧ್ಯವಾಗುವಂತಹ ಸ್ಥಿತಿ ಏರ್ಪಟ್ಟಿತು. ಸ್ಕೌಟ್ಸ್ ಮತ್ತು ಗೈಡ್ಸ್‌ನವರ ಕಾರ್ಯ ವಿಶೇಷ ಗಮನ ಸೆಳೆಯಿತು. ಬೆಂಗಳೂರಿನ ತರುಣರೂ ಈ ಕೆಲಸದಲ್ಲಿ ಆಸಕ್ತಿ ವಹಿಸಿದರು. ರಿಕ್ಲೈಮ್ ಟೆಂಪಲ್ಸ್ ಆಂದೋಲನದ ಕಾರ್ಯಕರ್ತರು ಶ್ರೀ ಗಿರೀಶ್ ಭಾರಧ್ವಾಜರ ನೇತೃತ್ವದಲ್ಲಿ ಸಹಕಾರ ನೀಡಲು ಮುಂದೆ ಬಂದರು. ಹರಿಹರಪುರ ಶ್ರೀಧರ್, ಕವಿ ನಾಗರಾಜ್  ನೇತೃತ್ವದಲ್ಲಿ ಎರಡು ಮೂರು ಸಲ ಗ್ರಾಮಸ್ಥರ ಸಭೆಗಳೂ ನಡೆದು ಗ್ರಾಮಸ್ಥರ ಸಹಕಾರವನ್ನೂ ಕೋರಲಾಯಿತು.



      ಹಿರಿಯರಾದ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ಕಾರ್ಯಗಳಿಗೆ ಒತ್ತಾಸೆ ನೀಡಿ ಬೆಂಬಲಿಸಿದರು. ಅವರ ಬೆಂಗಳೂರು ನಿವಾಸದಲ್ಲಿ ಮತ್ತು ರಾಜಾಜಿನಗರದ ರಸಧ್ವನಿ ಕಲಾಕೇಂದ್ರದಲ್ಲಿ ಬೆಂಗಳೂರಿನ ಆಸಕ್ತರ ಸಭೆ ಕರೆದು ಚರ್ಚಿಸಲಾಯಿತು. ದೇವಸ್ಥಾನ ಸಮುಚ್ಛಯದ ಪುನರುತ್ಥಾನಕ್ಕಾಗಿ ಜಾಗೃತಿ ಉಂಟುಮಾಡುವ ಸಲುವಾಗಿ ಒಂದು ರಾಜ್ಯಮಟ್ಟದ ಸಮಿತಿ ರಚಿಸಿ ಅದಕ್ಕೆ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರು ಅಧ್ಯಕ್ಷರು, ಶ್ರೀ ಕವಿ ನಾಗರಾಜ್ ಉಪಾಧ್ಯಕ್ಷರು, ಶ್ರೀ ಹರಿಹರಪುರ ಶ್ರೀಧರ್ ಪ್ರಧಾನ ಸಂಚಾಲಕರು, ಶ್ರೀ ಶ್ರೀಕಾಂತ್ ಕಾರ್ಯದರ್ಶಿ, ಶ್ರೀ ನರೇಂದ್ರ ಕೋಶಾಧಿಕಾರಿ ಎಂದು ತೀರ್ಮಾನವಾಯಿತು. ಶ್ರೀಯುತರಾದ ಸುನೀಲ್, ಸದ್ಯೋಜಾತ ಭಟ್ಟರು ಸೇರಿದಂತೆ ಹಲವರನ್ನು ಜೋಡಿಸಿಕೊಳ್ಳಲಾಯಿತು. ಶಿವರಾತ್ರಿ ದಿನದಂದು ಕಾಶಿಪುರ ಉತ್ಸವ ನಡೆಸುವ ಮೂಲಕ ಅಡಗೂರು ಮತ್ತು ಸುತ್ತಮುತ್ತಲ ಗ್ರಾಮದವರನ್ನು ಜಾಗೃತಗೊಳಿಸಿ ಮುಂದಿನ ಪುನರುತ್ಥಾನದ ಕೆಲಸಗಳಿಗೆ ಅವರನ್ನು ಪ್ರೇರೇಪಿಸುವ ಕೆಲಸ ಮಾಡಬೇಕೆಂದು ನಿರ್ಧರಿಸಲಾಯಿತು. ಕಾರ್ಯಕ್ರಮದ ವ್ಯವಸ್ಥೆ, ರೂಪುರೇಷೆಗಳ ತಯಾರಿ, ಇತ್ಯಾದಿಗಳ ಹೊಣೆಯನ್ನು ಮಿತ್ರ ಶ್ರೀಧರ್ ಸ್ವತಃ ಹೊತ್ತುಕೊಂಡು ಅದಕ್ಕಾಗಿ ಪೂರ್ಣವಾಗಿ ತೊಡಗಿಕೊಂಡರು. ಅವರಿಗೆ ಮಿತ್ರರ ಸಹಕಾರವೂ ಸಿಕ್ಕಿತು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಂಕಲ್ಪ ಯಜ್ಞಗಳು, ಬೈಠಕ್ಕುಗಳು, ಹಣಕಾಸಿನ ವ್ಯವಸ್ಥೆಗಾಗಿ ಸಂಪರ್ಕ, ನಡೆಸಬೇಕಾದ ಕಾರ್ಯಕ್ರಮಗಳ ವ್ಯವಸ್ಥೆ, ಇತ್ಯಾದಿ ನಡೆದು ಕಾರ್ಯಕ್ರಮ ಯಶಸ್ಸು ಕಾಣುವ ಲಕ್ಷಣಗಳು ಸ್ಫುಟವಾಗಿ ಗೋಚರವಾಯಿತು. ಕಾರ್ಯಕ್ರಮ ನಡೆಯಲು ಎರಡು-ಮೂರು ದಿನಗಳಿದ್ದಂತೆ ಶ್ರಮದಾನದಿಂದ ನೋಡುವಂತಾಗಿದ್ದ ಕಾಶಿಪುರ ದೇವಸ್ಥಾನ ಸಮುಚ್ಚಯದ ಸ್ಥಳವನ್ನು ಜೆಸಿಬಿ ಸಹಾಯದಿಂದ ಸಮತಟ್ಟುಗೊಳಿಸಿ ಸಿದ್ಧಪಡಿಸಲಾಯಿತು. ಹಿಂದೆ ಆ ಸ್ಥಳ ಹೇಗಿದ್ದಿರಬಹುದು ಎಂಬ ಕಲ್ಪನೆಯೊಂದಿಗೆ ಅಚ್ಚರಿ ಮತ್ತು ಈಗಿನ ಸ್ಥಿತಿಯೊಂದಿಗೆ ವಿಷಾದ ಎರಡೂ ಭಾವಗಳು ನೋಡುಗರಿಗೆ ಉಂಟಾಗುತ್ತಿತ್ತು.




     ಶಿವರಾತ್ರಿಯ ದಿನದಂದು ಹಾಸನದಿಂದ ಒಂದು ನೂರು ಕಾರ್ಯಕರ್ತರು ವಿಶೇಷ ಬಸ್ಸು ಮತ್ತು ಖಾಸಗಿ ವಾಹನಗಳ ಮೂಲಕ ಅಡಗೂರಿಗೆ ಬಂದಿಳಿದರು. ಅಡಗೂರಿನ ಗಣಪತಿ ದೇವಸ್ಥಾನದ ಮುಂಭಾಗದ ಬಯಲು ರಂಗಮಂದಿರದಲ್ಲಿ ವಿಶೇಷ ಕಾರ್ಯಕ್ರಮಗಳಿಗಾಗಿ ವೇದಿಕೆ ಸಿದ್ಧಪಡಿಸಲಾಯಿತು. ಊರಲ್ಲೆಲ್ಲಾ ಕೇಸರಿ ಧ್ವಜಗಳು ವಿಜೃಂಭಿಸಿದ್ದವು. ಕಾಶಿಪುರದಲ್ಲಿ, ಅಡಗೂರಿನಲ್ಲಿ ಭವ್ಯವಾದ ೨೦ ಮತ್ತು ೧೦ ಅಡಿಗಳ ಫ್ಲೆಕ್ಸ್‌ಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದವು. ಸಿದ್ಧಿ ಸಮಾಧಿ ಯೋಗದ ಭಜನಾ ತಂಡವೂ ಬಂದಿಳಿಯಿತು. ಮಧ್ಯಾಹ್ನ ನಾಲ್ಕು ಗಂಟೆಗೆ ಸರಿಯಾಗಿ ಅಡಗೂರಿನಿಂದ ಕಾಶಿಪುರದವರೆಗೆ ಪುಷ್ಪಗಿರಿ ಮಠದ ೧೧೦೮ನೇ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಭವ್ಯ ಶೋಭಾಯಾತ್ರೆ ಭಜನಾತಂಡಗಳಿಂದ ಭಜನೆ, ಘೋಷಣೆಗಳೊಂದಿಗೆ ನಡೆಯಿತು. ಅಡಗೂರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಉತ್ಸಾಹದಿಂದ ಪಾಲುಗೊಂಡಿದ್ದರು.





     ಕಾಶಿಪುರದ ದೇವಸ್ಥಾನದ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ಗ್ರಾಮಸ್ಥರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ವೇದಭಾರತೀ ಕಾರ್ಯಕರ್ತರು ಅಗ್ನಿಹೋತ್ರ, ಸಂಕಲ್ಪ ಯಜ್ಞ ಮಾಡುವುದರ ಮೂಲಕ ಶತಮಾನಗಳ ನಂತರದಲ್ಲಿ ಆ ಸ್ಥಳದಲ್ಲಿ ಮತ್ತೊಮ್ಮೆ ಧಾರ್ಮಿಕ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿತು. 'ಓಂ ರಾಷ್ಟ್ರಾಯ ಸ್ವಾಹಾ| ಇದಂ ರಾಷ್ಟ್ರಾಯ ಇದಂ ನ ಮಮ||' (ಈ ಸಮರ್ಪಣೆ ರಾಷ್ಟ್ರದ ಸಲುವಾಗಿ, ರಾಷ್ಟ್ರಕ್ಕೆ ಸಮರ್ಪಿತ, ಇದು ನಮ್ಮ ಸ್ವಾರ್ಥಕ್ಕಲ್ಲ} ಎಂಬ ಮಂತ್ರವನ್ನೂ ಪಠಿಸಿ ಸಮಿತ್ತು ಅರ್ಪಿಸಲಾಯಿತು. ಪುಷ್ಪಗಿರಿ ಸ್ವಾಮೀಜಿಯವರು, ಹಾಸನದಿಂದ ಬಂದು ಈ ಕಾರ್ಯ ಮಾಡುತ್ತಿರುವುದು ವಿಶೇಷವಾಗಿದೆ. ಈ ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯ. ಹೊಸ ಹೊಸ ದೇವಸ್ಥಾನಗಳನ್ನು ಕಟ್ಟುತ್ತಿರುವ ಈ ಕಾಲದಲ್ಲಿ ಹಳೆಯ ದೇವಸ್ಥಾನವನ್ನು ಪುನರುದ್ಧಾರ ಮಾಡುವ ದಿಸೆಯಲ್ಲಿ ವೇದಭಾರತಿಯವರು ಮತ್ತು ಇತರರ ಕಾರ್ಯ ಮೆಚ್ಚುವಂತಹುದು. ಅಡಗೂರಿನ ಎಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದರು. ಹರಿಹರಪುರ ಶ್ರೀಧರ್ ಮಾತನಾಡಿ, ಈ ಕಾರ್ಯದ ಮಹತ್ವವನ್ನು ಗ್ರಾಮಸ್ಥರಿಗೆ ಮನಗಾಣಿಸಿದ್ದಾಗಿದೆ. ಮುಂದಿನ ಕೆಲಸಗಳನ್ನು ಸ್ವಾಮೀಜಿಯವರೊಂದಿಗೆ ಊರಿನವರು ಸೇರಿಕೊಂಡು ಮುಂದುವರೆಸಬೇಕು ಎಂದರು. ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ತುಂಬಿಹೋಗಿದ್ದರು. ಎಲ್ಲರಲ್ಲೂ ಉತ್ಸಾಹ ಮತ್ತು ಕೈಜೋಡಿಸುವ ಮನಸ್ಸು ಇದ್ದುದು ಕಾಣುತ್ತಿತ್ತು.  















     ಪುನಃ ಅಡಗೂರಿನ ಬಯಲು ರಂಗಮಂದಿರದಲ್ಲಿ ಎಲ್ಲರೂ ಒಟ್ಟುಗೂಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರಂಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿನಾಗರಾಜ್ ವಹಿಸಿದ್ದು ಅಡಗೂರಿನ ಆನಂದ್, ವಿಶ್ವನಾಥ್, ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಹರಿಹರಪುರ ಶ್ರೀಧರ್, ಅಶೋಕಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಎಲ್ಲರೂ ಕಾಶಿಪುರ ದೇವಸ್ಥಾನದ ಪುನರುಜ್ಜೀವನಕ್ಕೆ ಮುಂದಾಗುವಂತೆ ಕರೆ ನೀಡಿದರು. ಹಾಸನದ ಸಿದ್ಧಿ ಸಮಾಧಿಯೋಗದ ತಂಡದವರಿಂದ ಭಜನೆ, ಬೆಂಗಳೂರಿನ ಕು|| ಅಕ್ಷತಾ ರಾಮಕೃಷ್ಣ ಮತ್ತು ಹಾಸನದ ಕು|| ವೈಷ್ಣವಿ ಜಯರಾಮರಿಂದ ಭರತನಾಟ್ಯ, ಶ್ರೀಮತಿ ಪಲ್ಲವಿ ಗಿರೀಶ್, ಕು|| ಶ್ರದ್ಧಾ, ತನ್ಮಯಿ, ಯಶಸ್, ಶ್ರೀಮತಿ ಕಲವಾತಿ ಮಧುಸೂದನ್ ಮತ್ತು ಇತರರಿಂದ ಭಕ್ತಿಗೀತೆಗಳು, ಕು|| ಅನೀಶ್ ಮತ್ತು ತಂಡದವರಿಂದ ಕೊಳಲು ವಾದನ, ಪತಂಜಲಿ ಯೋಗಕೇಂದ್ರಗಳವರಿಂದ ಯೋಗ ನೃತ್ಯಗಳು, ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನೆರೆದಿದ್ದ ಜನರ ಮನರಂಜಿಸುವಲ್ಲಿ ಯಶಸ್ವಿಯಾಯಿತು. ಒಟ್ಟಾರೆಯಾಗಿ ಹೇಳಬೇಕೆಂದರೆ ಅಡಗೂರಿನಲ್ಲಿ ನಡೆದ ಕಾರ್ಯಕ್ರಮ ನಭೂತೋ ಎಂಬಂತಿತ್ತು. ಹರಿಹರಪುರ ಶ್ರೀಧರ ಮತ್ತು ಮಿತ್ರರೆಲ್ಲರ ಶ್ರಮ, ಸಹಕಾರ, ಪಾಲುಗೊಳ್ಳುವಿಕೆ ಫಲ ನೀಡಿತ್ತು. 








     ಕಾರ್ಯಕ್ರಮದ ಪೂರ್ಣ ವ್ಯವಸ್ಥೆಯನ್ನು ಹಾಸನದ ಕಾರ್ಯಕರ್ತರೇ ಮಾಡಿದ್ದುದಲ್ಲದೆ, ಪ್ರಸಾದದ ವ್ಯವಸ್ಥೆ ಸಹ ಹಾಸನದಿಂದಲೇ ಆಗಿದ್ದು ಗಮನಾರ್ಹ. ಮುಂದಿನ ವರ್ಷದ ಕಾಶಿಪುರ ಉತ್ಸವವನ್ನು ಅಡಗೂರಿನವರೇ ಮಾಡಲು ಮುಂದೆ ಬರುತ್ತಾರೆ, ಹಾಸನ ಮತ್ತು ಪರ ಊರಿನವರು ಕೈಜೋಡಿಸುತ್ತಾರೆ ಎಂಬ ಆಶಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ನಿಜವಾದ ಅರ್ಥದಲ್ಲಿ ಜಾಗರಣೆ ಅಡಗೂರಿನಲ್ಲಿ ಉಂಟಾಗಿತ್ತು. ಅದು ನಿರಂತರ ಮುಂದುವರೆಯಲಿ, ಯೋಜಿತ ಕಾರ್ಯ ಸಾಧಿತವಾಗಲಿ.
ಓಂ ನಮಃ ಶಂಭವಾಯ ಚ ಮಯೋಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ 
ನಮಃ ಶಿವಾಯ ಚ ಶಿವತರಾಯ ಚ || (ಯಜು. ೧೬.೪೧)
ಅರ್ಥ: ಶಾಂತಿ ಸ್ವರೂಪನಿಗೆ ನಮಸ್ಕಾರ, ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳ ಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ.
-ಕ.ವೆಂ. ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ