ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಅಕ್ಟೋಬರ್ 26, 2017

ಬೀದಿಗೊಂದು ಜಾತಿ, ಗುಂಪಿಗೊಂದು ಧರ್ಮ!


     ಪ್ರತಿ ಸಲ ಜನಗಣತಿ ನಡೆಯುವ ಸಂದರ್ಭದಲ್ಲಿ ಗಮನಕ್ಕೆ ಬರುವ ಸಂಗತಿಯೆಂದರೆ, ನಮ್ಮ ಜಾತಿಯನ್ನು ನಮೂದಿಸುವಾಗ ಹೀಗೆ ಬರೆಯಿಸಿ, ಹಾಗೆ ಬರೆಯಿಸಿ, ಧರ್ಮ ಕಲಮ್ಮಿನಲ್ಲಿ ನಮ್ಮದೇ ಪ್ರತ್ಯೇಕ ಧರ್ಮ ಎಂದು ನಮೂದಿಸಿ ಎಂಬಿತ್ಯಾದಿ ಕರೆಗಳು ಜಾತಿ/ಮತಗಳ ಮುಖಂಡರಿಂದ ಕೊಡಲ್ಪಡುವುದು! ಪ್ರತ್ಯೇಕ ಗುಂಪಾದರೆ, ಪ್ರತ್ಯೇಕ ಜಾತಿ ಆದರೆ, ಪ್ರತ್ಯೇಕ ಧರ್ಮ ಎಂದು ಗುರುತಿಸಲ್ಪಟ್ಟರೆ ಸರ್ಕಾರದಿಂದ ವಿಶೇಷ ಸವಲತ್ತುಗಳು ಸಿಗುತ್ತವೆ ಎಂಬ ಅಂಶ ಇಲ್ಲಿ ಎದ್ದು ಕಾಣುತ್ತದೆ. ಈಗ ಪ್ರತ್ಯೇಕ ಲಿಂಗಾಯತ ಧರ್ಮದ ಘೋಷಣೆಗೆ ಬಲವಾಗಿ ಪ್ರಯತ್ನಗಳು ಸಾಗಿವೆ. ಲಿಂಗಾಯತ ಬೇರೆ, ವೀರಶೈವ ಬೇರೆ ಅನ್ನುವವರು, ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಅನ್ನುವವರು, ಪ್ರತ್ಯೇಕ ಧರ್ಮ ಬೇಕು ಅನ್ನುವವರು, ಬೇಡ ಅನ್ನುವವರು, ಧರ್ಮದ ಹೆಸರಿನ ಬಗ್ಗೆ ಗುದ್ದಾಡುವವರು, ತಟಸ್ಥರಾಗಿ ಉಳಿದವರು, ಹೀಗೆ ಆ ಸಮುದಾಯ ತಮ್ಮತಮ್ಮಲ್ಲೇ ಕಚ್ಚಾಡಿಕೊಳ್ಳುವ, ವಿಭಜಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲು ಚುನಾವಣೆಯ ಲಾಭದ ಸಲುವಾಗಿ ಆಡಳಿತ ಪಕ್ಷದ ನಾಯಕರೇ ಕೊಟ್ಟ ಕುಮ್ಮಕ್ಕೂ ಸಹ ಭಾಗಶಃ ಕಾರಣವಾಗಿದೆ. ಇದು ಹಾದಿರಂಪ, ಬೀದಿರಂಪ ಮಾಡದೆ ಸಮುದಾಯದವರು ಒಟ್ಟಾಗಿ ತೆಗೆದುಕೊಳ್ಳಬೇಕಾದ ನಿರ್ಧಾರವಾಗಿದೆ. ಸಂಬಂಧಪಡದ ಮೂರನೆಯವರು ಸಹ ತಮ್ಮದೇ ಆದ ಕಾರಣಗಳಿಗಾಗಿ ಪರ, ವಿರೋಧ ಚಿತಾವಣೆ ಮಾಡುತ್ತಿರುವುದೂ  ಕಳವಳಕಾರಿಯಾಗಿದೆ. ಧರ್ಮ ಸಾರಬೇಕಾದ ವಿಶಾಲತೆಯನ್ನು ಸಂಕುಚಿತಗೊಳಿಸುವ, ಅಲ್ಪಕಾಲಿಕ ಲಾಭದ ಉದ್ದೇಶದ ಇಂತಹ ನಡೆಗಳು ಯಾರಿಗೂ ಹಿತ ತರಲಾರವು.
     ಇಷ್ಟಕ್ಕೂ ಈ ಧರ್ಮ ಎಂದರೇನು? ನಿಜವಾದ ಧರ್ಮ ಹೇಗಿರಬೇಕು ಎಂಬ ಬಗ್ಗೆ ದಾರ್ಶನಿಕರು, ಧರ್ಮಾಚಾರ್ಯರು, ಸಾಧಕರು ಉದಾತ್ತ ದೃಷ್ಟಿ ಹರಿಸಿದ್ದರೂ, ಅವರ ಅನುಯಾಯಿಗಳೆನಿಸಿಕೊಂಡವರು ಅದನ್ನು ಗೆರೆ ಎಳೆದು ಸಂಕುಚಿತಗೊಳಿಸಿರುವುದು ಇತಿಹಾಸದ ಸಂಗತಿಯಾಗಿದೆ. ಇಡೀ ಜೀವಜಗತ್ತಿನ ಹಿತ ಬಯಸುವುದೇ ನಿಜವಾದ ಧರ್ಮ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಸಮಸ್ಯೆ ಬರುವುದು ಅದು ಹೇಗಿರಬೇಕು ಎಂಬ ವಿಚಾರದಲ್ಲಿ! ಎಲ್ಲಾ ಜೀವಜಂತುಗಳ ಹಿತ ಬಯಸುವುದು ಬಹಳ ದೊಡ್ಡ ವಿಷಯವಾಯಿತು. ಕನಿಷ್ಠ ಎಲ್ಲಾ ಮಾನವಜೀವಗಳ ಹಿತವನ್ನು ಬಯಸುವಂತಹುದಾದರೂ ಆಗಿರಬೇಕಲ್ಲವೇ? ವೇದಗಳು, ಬೈಬಲ್, ಕುರಾನ್, ಇತ್ಯಾದಿ ಧರ್ಮಗ್ರಂಥಗಳು ಮೂರು ಅಂಶಗಳ ಸುತ್ತಲೇ ಸುತ್ತುತ್ತವೆ. ಮಾನವ ತಲೆ ಕೆಡಿಸಿಕೊಂಡಿರುವುದೂ ಈ ಮೂರು ಅಂಶಗಳ ಕುರಿತೇ - ಜೀವ, ಜಗತ್ತು ಮತ್ತು ದೇವರು! ಈ ಮೂರು ಅಂಶಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ, ತಮ್ಮದೇ ಸರಿ ಎಂದು ವಾದಿಸುತ್ತಾ ಸಮಸ್ಯೆಗಳನ್ನು ಸೃಷ್ಟಿಸುತ್ತಾ ಪರಿಸ್ಥಿತಿಯನ್ನು ಗೋಜಲು ಗೋಜಲಾಗಿಸುತ್ತಾ, ಇದರಿಂದ ಮತ್ತಷ್ಟು ಸಮಸ್ಯೆಗಳಿಗೆ ಕಾರಣರಾಗುತ್ತಾ ಹೋಗಿರುವ ಜನರಿಂದ ನೆಮ್ಮದಿ, ಶಾಂತಿ ಕಣ್ಮರೆಯಾಗುತ್ತಿವೆ.
     ನಿಜವಾದ ಧರ್ಮ ಹೇಗಿರಬೇಕೆಂಬ ಬಗ್ಗೆ ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: 1. ಅದು ಸಕಲ ಜಗತ್ತಿನ ಪಾಲನೆ, ಪೋಷಣೆ ಮಾಡುವಂತಿರಬೇಕು, 2. ಒಂದು ಸಮುದಾಯ, ವರ್ಗ, ಗುಂಪಿಗೆ ಸೀಮಿತವಾಗದೆ ಇಡೀ ಮನುಕುಲಕ್ಕೆ ಅನ್ವಯವಾಗುವಂತಿರಬೇಕು ಮತ್ತು 3. ಇಹ-ಪರಗಳೆರಡರಲ್ಲೂ ಔನ್ನತ್ಯ ಸಾಧನೆಗೆ ಮಾರ್ಗದರ್ಶಿಯಾಗಿರಬೇಕು. ಮಾನವ ಪತಿತನಾಗದಂತೆ ಎತ್ತಿ ಹಿಡಿಯುವ ಧಾರಕ ತತ್ವ ಹೊಂದಿರುವುದೇ ಧರ್ಮ. ಈಗಿನ ಆಚರಣೆಯಲ್ಲಿರುವ ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ ಇತ್ಯಾದಿಗಳಲ್ಲಿ ಧರ್ಮದ ಅಂಶಗಳು ಅಡಕಗೊಂಡಿರಬಹುದೇ ಹೊರತು, ಅವುಗಳು ಎಳೆದುಕೊಂಡಿರುವ ಸಂಕುಚಿತ ಪರಿಧಿಗಳಲ್ಲಿ ನಿಜವಾದ ಧರ್ಮದ ಪೂರ್ಣ ವಿಶಾಲತೆಯನ್ನು ಅಡಕಗೊಳಿಸುವುದು ಕಷ್ಟ. ನಮ್ಮದೇ ನಿಜವಾದ ಧರ್ಮ, ನಾವು ನಂಬಿರುವ ದೇವರೇ ನಿಜವಾದ ದೇವರು. ಇದನ್ನು ನಂಬದವರು ಧರ್ಮದ್ರೋಹಿಗಳು, ನಾಶಗೊಳಿಸಲ್ಪಡಲು ಅರ್ಹರು ಎಂದು ವಾದಿಸುವ ಧರ್ಮಗ್ರಂಥಗಳೇ ಆಗಲಿ, ಅದನ್ನು ಒಪ್ಪಿ ಅನುಸರಿಸುವ ಅನುಯಾಯಿಗಳ ನಡೆಯೇ ಆಗಲಿ ಧರ್ಮದ ವಿಶಾಲತೆಯನ್ನು ಸಂಕುಚಿತಗೊಳಿಸುವುವೇ ಆಗಿವೆ. ಮತಾಂಧ ಭಯೋತ್ಪಾದಕರ ಕೃತ್ಯಗಳಿಂದ ಇಂದು ಪ್ರಪಂಚದ ಬಹುಭಾಗ ತಲ್ಲಣಿಸಿದೆ. ಮಾನವನನ್ನು ಮಾನವನನ್ನಾಗಿ ಕಾಣದ ಧರ್ಮ ಧರ್ಮವೇ ಅಲ್ಲ.
     ಸಕಲ ಜೀವರಾಶಿಗಳಲ್ಲಿ ದೇವರು ಮಾನವಜೀವಿಗೆ ವಿವೇಚನೆ ಮಾಡುವ ಶಕ್ತಿಯನ್ನು ಕೊಟ್ಟಿದ್ದಾನೆ. ಅದನ್ನು ಉಪಯೋಗಿಸಿಕೊಳ್ಳುವುದಕ್ಕೆ ಅಡ್ಡಿಯಾದರೂ ಏನಿದೆ? ಒಂದು ಮತದವರು ಇನ್ನೊಂದು ಮತದವರನ್ನು, ಅವರ ಧರ್ಮಗ್ರಂಥವನ್ನು ಇವರು, ಇವರ ಧರ್ಮಗ್ರಂಥವನ್ನು ಅವರು ಹಳಿಯುವುದರಿಂದ ಏನು ಲಾಭವಿದೆ? ಸಂಪ್ರದಾಯಗಳನ್ನು ಕುರುಡಾಗಿ ಅನುಸರಿಸದೆ ಸರಿ, ತಪ್ಪುಗಳನ್ನು ತುಲನೆ ಮಾಡಿ ಸರಿಯಾದುದನ್ನು ಉಳಿಸಿಕೊಂಡು, ಸರಿಯಲ್ಲದುದನ್ನು ಬಿಡಲು ಇರುವ ತೊಂದರೆಯಾದರೂ ಏನು? ಮಾನವ-ಮಾನವರಲ್ಲಿ ಭೇದ ಉಂಟುಮಾಡುವ ಜಾತಿಗಳಿಗೆ ಪುಷ್ಟಿ ನೀಡುವ ರಾಜಕಾರಣಿಗಳು ಮತ್ತು ಪಟ್ಟಭದ್ರ ಹಿತಾಸಕ್ತರು ಇಂದು ಸಮಸ್ಯೆಗಳ ಸೃಷ್ಟಿಕರ್ತರಾಗಿದ್ದಾರೆ. ಅಂಥಹವರನ್ನು ಮೊದಲು ನಿಯಂತ್ರಣದಲ್ಲಿ ಇಡಲು ಜ್ಞಾನವಂತರು (ಬುದ್ಧಿಜೀವಿಗಳು ಎಂಬ ಪದ ಉಪಯೋಗಿಸಲು ಮನಸ್ಸಾಗುವುದಿಲ್ಲ) ಉಳಿದವರಿಗೆ ಮಾರ್ಗದರ್ಶನ ಮಾಡಬೇಕಿದೆ. ಈ ಕೆಲಸ ಆದರೆ ಸಮಸ್ಯೆಯ ಗಂಭೀರತೆ ಕಡಿಮೆಯಾಗುತ್ತದೆ. ಜಾತಿ ಆಧಾರದಲ್ಲಿ ನೀಡುವ ಸವಲತ್ತುಗಳು ಜನರ ನಡುವೆ ಕಂದಕ ಉಂಟುಮಾಡುತ್ತಿವೆ. ಈ ಸವಲತ್ತುಗಳ ಸಲುವಾಗಿಯೇ ಹೊಸ ಹೊಸ ಜಾತಿಗಳು, ಧರ್ಮಗಳು ಹುಟ್ಟಿಕೊಳ್ಳುತ್ತಿವೆ. ಜಾತಿ, ಮತ, ಪಂಥ ಇವುಗಳಿಂದ ದೂರ ಉಳಿದು, ಅರ್ಹ ಬಡವರಿಗೆ ಸವಲತ್ತುಗಳು ದೊರೆಯುವಂತಾದರೆ ಸುದಿನಗಳು ಬಂದೇಬರುತ್ತವೆ.
     ಮುಸ್ಲಿಮರು ಒಬ್ಬನೇ ದೇವರು ಎನ್ನುತ್ತಾರೆ. ಕ್ರೈಸ್ತರು ಹೇಳುವುದೂ ಸಹ ಒಬ್ಬನೇ ದೇವರು ಎಂದು. ಹಿಂದೂಗಳು ಬಹುದೈವಾರಾಧಕರಾದರೂ ಅವರುಗಳೂ ಸಹ ಒಬ್ಬನೇ ದೇವರು ಎಂಬುದರಲ್ಲಿ ವಿಶ್ವಾಸವಿಟ್ಟವರು, ದೇವನೊಬ್ಬ ನಾಮ ಹಲವು ಎಂಬುದನ್ನು ಅವರೂ ಒಪ್ಪುತ್ತಾರೆ. ಆದರೆ ದೇವನೊಬ್ಬ ಎಂಬದರಲ್ಲಿ ಏಕನಾದ ಹೊರಡದೆ ಅಪಶೃತಿ ಹೊರಡಲು ಕಾರಣವೆಂದರೆ ಆ ಒಬ್ಬ ದೇವರು ಯಾರು ಎಂಬುದರಲ್ಲಿ! ದೇವರು ಸಕಲರ ಹಿತವನ್ನು ಬಯಸುವವನೇ ಹೊರತು ಕೆಲವರ ಹಿತವನ್ನು ಮಾತ್ರ ಬಯಸುವವನಲ್ಲ ಎಂಬುದನ್ನೂ ಎಲ್ಲರೂ ಒಪ್ಪುವಾಗ ತೊಂದರೆಯೇನು? ಆ ದೇವರು ಯಾರಾದರೂ ಆಗಿರಲಿ, ಧರ್ಮದ ಆಧಾರ ಸ್ತಂಭಗಳಾದ ಜ್ಞಾನ, ಕರ್ಮ, ಉಪಾಸನೆಗಳನ್ನು, ಇತರರ ರೀತಿ-ನೀತಿಗಳನ್ನು ಗೌರವಿಸುತ್ತಾ ಎಲ್ಲರೂ ಅವರವರ ಭಾವಕ್ಕೆ ಮಾಡಿಕೊಂಡು ಹೋದರೆ ಮನುಕುಲ ನೆಮ್ಮದಿಯಾಗಿದ್ದೀತು. ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ಹೇಳುವ ಈ ಮಾತು ಮಾರ್ಮಿಕವಾಗಿದೆ: "ನಿಮಗೆ ಜನಿವಾರ ಬೇಡವಾ, ಬಿಟ್ಟುಬಿಡಿ; ಬೇಕಾ, ಹಾಕಿಕೊಳ್ಳಿ. ಕ್ರಾಸ್ ಬೇಕಾ, ಹಾಕಿಕೊಳ್ಳಿ. ಲಿಂಗಾಯಿತರಾಗಬೇಕಾ, ಬ್ರಾಹ್ಮಣರಾಗಬೇಕಾ, ಮುಸ್ಲಿಮರಾಗಬೇಕಾ, ಬೇರೆ ಏನಾಗಬೇಕೋ ಅದೇ ಆಗಿ. ಆದರೆ ಸತ್ಯ, ನ್ಯಾಯ, ಧರ್ಮದ ಹಾದಿಯಲ್ಲಿ ನಡೆಯುವ ನಿಶ್ಚಯ ಮಾಡಿ. ಹೀಗೆ ನಿಶ್ಚಯ ಮಾಡಿ ನೀವು ಯಾವ ದೇವರನ್ನು ಪೂಜಿಸಬೇಕೆಂದುಕೊಳ್ಳುತ್ತೀರೋ ಆ ದೇವರನ್ನು, ರಾಮನೋ, ಕೃಷ್ಣನೋ, ಶಿವನೋ, ಅಲ್ಲಾಹು, ಏಸು ಯಾರಾದರೂ ಆಗಿರಲಿ, ಆ ದೇವರನ್ನು ನಿಮ್ಮ ಹೃದಯದಲ್ಲಿ ಇಟ್ಟುಕೊಳ್ಳಿ. ಆ ದೇವರು ಹೃದಯದಲ್ಲೇ ಇರಲಿ, ಬೀದಿಗೆ ತರಬೇಡಿ. ಎಲ್ಲಾ ಜಾತಿ, ಧರ್ಮಗಳು ಮನುಷ್ಯಕಲ್ಪಿತ. ನಮಗೆ ಎಷ್ಟು ಧರ್ಮ ಬೇಕು? ಒಂದು ಧರ್ಮ, ಒಬ್ಬ ದೇವರು ಇಷ್ಟು ಸಾಕು. ಅದೇ ಮಾನವಧರ್ಮ. ಮನುರ್ಭವ, ಮಾನವರಾಗೋಣ. ಇದೇ ಪರಮ ಧರ್ಮ".
ಸಕಲರನು ಪಾಲಿಪುದು ಪೊರೆಯುವುದೆ ಧರ್ಮ
ಜಗದಗಲ ಜಗದುದ್ದ ಭೇದವೆಣಿಸದ ಮರ್ಮ |
ಕೈಹಿಡಿದು ಮೇಲೆತ್ತಿ ನಿಲಿಸುವುದೆ ಧರ್ಮ
ಇಹಪರಕೆ ಸಾಧನವು ಕರ್ಮವೋ ಮೂಢ ||
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 16, 2017

ಅಪಾತ್ರ ದಾನ


     ಕೆಲವರು ಇರುತ್ತಾರೆ, 'ಇವರೇಕೆ ನಮ್ಮ ಮನೆಗೆ ಬಂದರಪ್ಪಾ. ಏನು ಕಿತಾಪತಿ ಮಾಡುತ್ತಾರೋ, ಯಾರು ಯಾರಿಗೆ ಜಗಳ ತಂದುಹಾಕುತ್ತಾರೋ' ಅನ್ನಿಸುವಂತಹವರು. ಸ್ನೇಹಿತರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ: "ನಮ್ಮ ಮನೆಯಲ್ಲೊಂದು ಕಾರ್ಯಕ್ರಮಕ್ಕೆ ನೆಂಟರನ್ನು ಕರೆದಿದ್ದೆವು. ಅವರ ಪೈಕಿ ಆ ವಿಶೇಷ ನೆಂಟರೂ ಇದ್ದರು. ನಯವಂಚನೆಯ ಮಾತುಗಳು, ಗೊತ್ತಿಲ್ಲದವರಿಗೆ ಒಳ್ಳೆಯದಾಗಿ ತೋರುವ ಪರೋಕ್ಷ ಕೊಂಕುನುಡಿಗಳು ಅವರ ವಿಶೇಷತೆ. ಊಟೋಪಚಾರಗಳು ನಡೆದು ಎಲ್ಲರೂ ವಾಪಸು ಹೋದರು.  ಉಡುಗೊರೆ, ಪ್ರತಿ ಉಡುಗೊರೆಗಳೂ ಇಂತಹ ಸಂದರ್ಭದಲ್ಲಿ ಸಾಮಾನ್ಯ. ಅವರು ಕೊಟ್ಟಿದ್ದ ಉಡುಗೊರೆ ತೆರೆದು ನೋಡಿದರೆ ಅದು ಹಿಂದೊಮ್ಮೆ ನಾನು ಅವರಿಗೆ ಕೊಟ್ಟಿದ್ದ ಉಡುಗೊರೆಯೇ ಆಗಿತ್ತು. ನಾನು ಅವರಿಗೆ ಕೊಟ್ಟಿದ್ದು ಪ್ರೀತಿಯಿಂದ. ಅವರು ನನಗೆ ಮರಳಿಸಿದ್ದು ನೋವು ಕೊಡುವ ಉದ್ದೇಶದಿಂದ". ಇಂತಹ ಅನುಭವಗಳು ಸಾಮಾನ್ಯವಾಗಿ ಹಲವರಿಗೆ ಆಗುತ್ತಿರುತ್ತದೆ. ಈ ಕಾರಣಕ್ಕಾಗಿಯೇ ಹಿರಿಯರು ಅಪಾತ್ರ ದಾನ ಮಾಡಬಾರದು ಎಂದು ಹೇಳುವುದು.
     ದಾನ ಕೊಡುವುದು ಧರ್ಮದ ಒಂದು ಭಾಗವಾಗಿದೆ. ದಾನ ಕೊಡುವುದರಿಂದ ಸ್ವಾರ್ಥದ ಭಾವನೆ ದೂರವಾಗುತ್ತದೆ, ಇನ್ನೊಬ್ಬರಿಗೆ ಸಹಾಯ ಮಾಡಿದ ಸಂತೋಷ ಉಂಟಾಗುತ್ತದೆ, ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ. ಆದರೆ, ದಾನ ಯಾರಿಗೆ ಕೊಡುತ್ತೇವೆ, ಏನು ಕೊಡುತ್ತೇವೆ ಅನ್ನುವುದನ್ನು ಅವಲಂಬಿಸಿ ಕೆಲವೊಮ್ಮೆ ಅದು ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಸೋಮಾರಿಯೊಬ್ಬನಿಗೆ ಹಣ ಕೊಟ್ಟರೆ ಅವನು ಮತ್ತಷ್ಟು ಸೋಮಾರಿಯಾಗುತ್ತಾನೆ. ಯಾವುದೇ ಶ್ರಮ ಪಡದೆ ಸಿಗುವ ಸವಲತ್ತುಗಳೂ ಮನುಷ್ಯನನ್ನು ಸೋಮಾರಿಯಾಗಿಸುತ್ತದೆ, ಹಿಂದುಳಿಸುತ್ತವೆ. ಇದನ್ನೇ ಅಪಾತ್ರ ದಾನವೆನ್ನುವುದು. ಹಣ ಅಥವ ಸವಲತ್ತುಗಳನ್ನು ಉಚಿತವಾಗಿ ಕೊಟ್ಟು ಜನರನ್ನು ಮತ್ತಷ್ಟು ಸೋಮಾರಿಗಳನ್ನಾಗಿಸುವುದಕ್ಕಿಂತ ಅವರುಗಳು ಸ್ವಂತ ಕಾಲಿನ ಮೇಲೆ ನಿಲ್ಲಲು ಪ್ರೇರಿಸುವಂತಹ, ಅನುಕೂಲವಾಗುವಂತಹ ಅವಕಾಶಗಳನ್ನು ಕಲ್ಪಿಸುವುದು ಉತ್ತಮ. ಬಾಂಬುಗಳನ್ನು ತಯಾರಿಸುವ ಜ್ಞಾನ ಭಯೋತ್ಪಾದಕರ ಪಾಲಾದರೆ ಆಗುವ ಹಾನಿಯನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ.
     ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ: 'ದಾನ ಕೊಡುವಾಗ ಏನು ಕೊಡುತ್ತೇವೆ ಮತ್ತು ಯಾರಿಗೆ ಕೊಡುತ್ತೇವೆ ಎಂಬುದನ್ನು ಪರಿಗಣಿಸಬೇಕೆ? ಒಬ್ಬ ವ್ಯಕ್ತಿ ಪಡೆದ ದಾನವನ್ನು ಅಧರ್ಮ ಕಾರ್ಯಕ್ಕೆ ಬಳಸುತ್ತಾನೆಂದಾದರೆ ದಾನ ಕೊಡಲು ನಿರಾಕರಿಸಬಹುದೆ? ಒಂದು ವೇಳೆ ದಾನ ಕೊಟ್ಟರೆ, ಆ ಪಾಪಕ್ಕೆ ನಾವು ಹೊಣೆಗಾರರಾಗುತ್ತೇವೆಯೆ? ಅಧರ್ಮ ಮಾಡುವವನಿಗೆ ದಾನ ಕೊಟ್ಟು, ಮತ್ತಷ್ಟು ಅಧರ್ಮ ಮಾಡಲು ನೆರವಾಗುವುದು ಅಧರ್ಮವಾಗುವುದೇ? ದಾನ ಕೊಡಲು ನೀತಿ, ನಿಯಮಗಳಿವೆಯೇ?' - ಇವುಗಳಿಗೆ ಉತ್ತರ ತಿಳಿಯಲು ಪ್ರಯತ್ನಿಸೋಣ.
     ಕೊಡುವ ದಾನ ಚಿಕ್ಕದೋ, ದೊಡ್ಡದೋ ಮುಖ್ಯವಲ್ಲ. ಕೊಡುವಾಗ ಶ್ರದ್ಧೆ, ಭಕ್ತಿಗಳಿಂದ, ಪ್ರಾಮಾಣಿಕತೆಯಿಂದ, ಗೌರವದಿಂದ ಕೊಟ್ಟರೆ ಅಂತಹ ದಾನಕ್ಕೆ ಮಹತ್ವವಿದೆ. ದಾನ ಪಡೆಯುವವರೂ ಹಾಗೆಯೇ ಇರಬೇಕು. ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ, ಗೌರವದಿಂದ ಸ್ವೀಕರಿಸಬೇಕು ಮತ್ತು ದಾನ ಸ್ವೀಕರಿಸಲು ಅರ್ಹನಾಗಿರಬೇಕು. ಇಲ್ಲದಿದ್ದರೆ, ಅಂತಹ ದಾನದ ಕೊಡುವಿಕೆ, ತೆಗೆದುಕೊಳ್ಳುವಿಕೆಯಿಂದ ಒಳ್ಳೆಯ ಪರಿಣಾಮವಾಗುವುದಿಲ್ಲ. ಇದಕ್ಕೆ ಪೂರಕವೆನಿಸುವ ಒಂದು ಸುಂದರ ಕಥೆಯಿದೆ. ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಬೃಹತ್ ವಿಗ್ರಹ ಸ್ಥಾಪಿಸಿದ ಚಾವುಂಡರಾಯ ಗರ್ವದಿಂದ ಕೂಡಿದವನಾಗಿ ಮಸ್ತಕಾಭಿಷೇಕ ಮಾಡಲು ನಿರ್ಧರಿಸಿ ಬೃಹತ್ ಪ್ರಮಾಣದಲ್ಲಿ ಹಾಲು, ಎಳನೀರು, ಪಂಚಾಮೃತಗಳನ್ನು ಅಭಿಷೇಕ ಮಾಡಿದಾಗ ಅದು ವಿಗ್ರಹದ ಹೊಕ್ಕಳಿನಿಂದ ಕೆಳಭಾಗಕ್ಕೆ ಇಳಿಯುತ್ತಲೇ ಇರಲಿಲ್ಲ. ಊರಿನ ಜನರೆಲ್ಲರೂ ಸಹ ಮನೆಗಳಿಂದ ಹಾಲು, ಎಳನೀರುಗಳನ್ನು ತಂದು ಎರೆದರೂ ಪ್ರಯೋಜನವಾಗಿರಲಿಲ್ಲ. ಊರಿನ ಒಬ್ಬ ವೃದ್ಧೆ ಸಣ್ಣ ಗುಳ್ಳಕಾಯಿಯಲ್ಲಿ ಸ್ವಲ್ಪ ಹಾಲನ್ನು ತಂದಿದ್ದಳು. ಊರವರು ಆಕೆಯನ್ನು ಕಂಡು ಹಾಸ್ಯ ಮಾಡಿದರೂ, ಆಚಾರ್ಯರ ಸಲಹೆಯಂತೆ ಆಕೆಗೆ ಅಭಿಷೇಕ ಮಾಡಲು ಅವಕಾಶ ಸಿಕ್ಕಿತ್ತು. ಆಕೆ ಭಕ್ತಿಯಿಂದ ಅರ್ಪಿಸಿದಾಗ ಆಶ್ಚರ್ಯವೆಂಬಂತೆ ವಿಗ್ರಹ ಪೂರ್ತಿ ಅಭಿಷೇಕದ ಜಲದಿಂದ ತೊಯ್ದಿತ್ತು. ಗುಳ್ಳಕಾಯಜ್ಜಿ ಎಂದು ಹೆಸರಾದ ಆಕೆಯ ವಿಗ್ರಹ ಈಗಲೂ ಶ್ರವಣಬೆಳಗೊಳದಲ್ಲಿದೆ.  ಸ್ಕಂದ ಪುರಾಣದಲ್ಲಿ ದಾನವನ್ನು ಅಥವ ದಾನದ ಮಹತ್ವವನ್ನು ಹಾಳುಗೆಡವುವ ದಾನನಾಶಕಗಳಲ್ಲಿ ಒಂದು ಅಪಾತ್ರ ದಾನ ಎಂದು ಹೇಳಲಾಗಿದೆ. ಮೂರು ರೀತಿಯ ದಾನನಾಶಕಗಳಿವೆ: ಪಶ್ಚಾತ್ತಾಪ ದಾನ, ಅಪಾತ್ರ ದಾನ ಮತ್ತು ಅಶ್ರದ್ಧಾ ದಾನ. ಪಶ್ಚಾತ್ತಾಪ ದಾನವೆಂದರೆ ಏಕಾದರೂ ದಾನ ಕೊಟ್ಟೆವೋ ಎಂದು ವಿಷಾದಪಡುವ ದಾನ. ಅಪಾತ್ರ ದಾನವೆಂದರೆ ತಪ್ಪು ವ್ಯಕ್ತಿಗೆ ಅಥವ ಅನರ್ಹ ವ್ಯಕ್ತಿಗೆ ಕೊಡುವ ದಾನ. ದಾನ ಕೊಡದಿರುವುದು ಎಷ್ಟು ಕೆಟ್ಟದ್ದೋ, ಅಷ್ಟೇ ಕೆಟ್ಟದ್ದು ಅಪಾತ್ರ ದಾನ. ಅಶ್ರದ್ಧಾ ದಾನವೆಂದರೆ ಸೋಮಾರಿಗೆ ಕೊಡುವ ದಾನ. ಅದನ್ನು ರಾಕ್ಷಸ ದಾನವೆಂದೂ ಹೇಳುತ್ತಾರೆ.
     ದಾನ ಕೊಡುವಾಗ ಹೊಂದಿರುವ ಶಕ್ತಿಗೆ ಮತ್ತು ತೆಗೆದುಕೊಳ್ಳುವವರ ಅಗತ್ಯತೆ ಅನುಸರಿಸಿ ದಾನ ಮಾಡಬೇಕು. ದುಷ್ಟರಿಂದ, ಕಪಟಿಗಳಿಂದ, ಸುಳ್ಳು ಹೇಳುವವರಿಂದ, ಅಧೀನದಲ್ಲಿ ಕೆಲಸ ಮಾಡುವವರಿಂದ ದಾನ ಪಡೆಯುವವರು ದಾನ ಪಡೆಯಲು ಅನರ್ಹರೆನಿಸಿ, ದಾನ ಅಪಾತ್ರವೆನಿಸುವುದು. ಭಗವದ್ಗೀತೆಯ ೧೭ನೆಯ ಅಧ್ಯಾಯದಲ್ಲಿ ಶ್ರೀಕೃಷ್ಣ ಹೇಳಿರುವಂತೆ, ದಾನವನ್ನು ಕರ್ತವ್ಯದಂತೆ, ಪ್ರತಿಫಲಾಪೇಕ್ಷೆಯಿಲ್ಲದೆ ಅರ್ಹರಾದವರಿಗೆ ಸೂಕ್ತ ಸಮಯ ಮತ್ತು ಸೂಕ್ತ ಸ್ಥಳದಲ್ಲಿ ನೀಡುವವರು ಉತ್ತಮರು. ಪ್ರತಿಫಲದ ಅಪೇಕ್ಷೆ ಮತ್ತು ನಿರೀಕ್ಷೆಯಲ್ಲಿ, ಅಸಮಾಧಾನದಿಂದ ಮಾಡುವ ದಾನ ಪರಿಶುದ್ಧವಲ್ಲ. ಅಶುದ್ಧ ಸ್ಥಳದಲ್ಲಿ, ಅಕಾಲದಲ್ಲಿ ಅನರ್ಹ ವ್ಯಕ್ತಿಗೆ ಕೊಡುವ ಅಥವ ಸರಿಯಾದ ಗಮನ ಮತ್ತು ಗೌರವವಿಲ್ಲದೆ ಕೊಡುವ ದಾನ ಕೆಟ್ಟದಾನವಾಗುತ್ತದೆ. ಗರುಡ ಪುರಾಣದಲ್ಲೂ ಅರ್ಹ ವ್ಯಕ್ತಿಗೆ ಗೌರವದಿಂದ ದಾನ ಕೊಡಬೇಕೆಂಬ ಉಲ್ಲೇಖವಿದೆ. ಸಮುದ್ರದಲ್ಲಿ ಬೀಳುವ ಮಳೆ, ಹಗಲು ಹೊತ್ತಿನಲ್ಲಿ ಉರಿಸುವ ದೀಪ, ಹೊಟ್ಟೆ ತುಂಬಿದವರಿಗೆ ಹಾಕುವ ಊಟ ಮತ್ತು ಅಪಾತ್ರ ದಾನಗಳು ವ್ಯರ್ಥವೆಂದು ನೀತಿ ಶಾಸ್ತ್ರ ಹೇಳುತ್ತದೆ.
     ಅಪಾತ್ರ ದಾನ, ಅಶ್ರದ್ಧಾ ದಾನ ಮತ್ತು ಪಶ್ಚಾತ್ತಾಪ ದಾನಗಳ ಜೊತೆಗೆ ಇಂದಿನ ಕಾಲಕ್ಕೆ ಅನುಗುಣವಾಗಿ ಕುರುಡು ದಾನ ಎಂಬುದನ್ನೂ ಸೇರಿಸಬಹುದು. ಕುರುಡು ದಾನ ಅಂದರೆ? ಏನು ದಾನ ಕೊಡುವುದು ಮತ್ತು ಯಾರಿಗೆ ಎಂಬದನ್ನು ತಿಳಿಯದೆ ಕೊಡುವ ದಾನ. ಸತ್ತ ನಂತರದಲ್ಲಿ ತಮ್ಮ ಕಣ್ಣುಗಳನ್ನು, ಅಂಗದ ಉಪಯೋಗಕ್ಕೆ ಬರುವ ಭಾಗಗಳನ್ನು ದಾನ ಮಾಡುವ ಪುಣ್ಯಾತ್ಮರಿರುತ್ತಾರೆ. ಇಂದಿನ ಕಾನೂನು, ನಿಯಮಗಳಿಗನುಸಾರವಾಗಿ ಇಂತಹ ದಾನ ಕೊಡುವವರು ಮತ್ತು ಪಡೆಯುವವರ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ಇಂತಹ ದಾನವನ್ನು ಯಾರೋ ಒಬ್ಬ ರೌಡಿಯೋ, ಮತಾಂಧ ಭಯೋತ್ಪಾದಕನೋ ಪಡೆದರೆ? ಅವನು ಮತ್ತಷ್ಟು ಕೆಟ್ಟ ಕೆಲಸಗಳಿಗೆ ತೊಡಗಲು ಸಹಕಾರಿಯಾಗುತ್ತದೆ. ಆರೋಗ್ಯವಂತರಾಗಿರುವವರ ಕಿಡ್ನಿಗಳನ್ನೇ ಕದಿಯುವ ಖದೀಮ ವೈದ್ಯರುಗಳೇ ಇರುವ ಈ ಕಾಲದಲ್ಲಿ ಒಳ್ಳೆಯ ಕೆಲಸಗಳೂ ಕೆಟ್ಟದಾಗುತ್ತವೆ.
     ಈ ಕೈಯಲ್ಲಿ ಕೊಟ್ಟದ್ದು ಆ ಕೈಗೆ ಗೊತ್ತಾಗಬಾರದು ಎಂಬ ಆಡುನುಡಿಯಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ದಾನ ಮಾಡಬೇಕೆಂಬ ಆಶಯವಿದೆ. ಸರ್ಕಾರದ ಅನೇಕ ಕಲ್ಯಾಣ ಯೋಜನೆಗಳು ಅಪಾತ್ರರ ಪಾಲಾಗುತ್ತಿವೆ. ಕೆಲವು ಸೋಮಾರಿಗಳನ್ನು ಬೆಳೆಸುವ ಯೋಜನೆಗಳನ್ನೂ ಮತಗಳಿಕೆ ದೃಷ್ಟಿಯಿಂದ ಜಾರಿಗೆ ತಂದಿರುವುದರಿಂದ ಸಾರ್ವಜನಿಕರ ಹಣದ ದುರುಪಯೋಗವಲ್ಲದೆ, ಕಾಲಾನುಕ್ರಮದಲ್ಲಿ ಅಂತಹ ಕ್ರಮಗಳು ಸಮಾಜದ, ದೇಶದ ಪ್ರಗತಿಗೆ ಅಡ್ಡಗಾಲಾಗುವುದು ನಿಶ್ಚಿತ. ವೈಯಕ್ತಿಕವಾಗಲೀ, ಸಾರ್ವಜನಿಕ ಸಂಸ್ಥೆಗಳಾಗಲೀ, ಸರ್ಕಾರವಾಗಲೀ ಸವಲತ್ತುಗಳು ಜಾತಿ, ಮತ, ಧರ್ಮಗಳನ್ನು ಅಂತರದಲ್ಲಿರಿಸಿ ಅರ್ಹರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳುವುದು ಸಧೃಢ ಸಮಾಜಕ್ಕೆ ಹಿತಕಾರಿ. ವಿಪರ್ಯಾಸವೆಂದರೆ ಸಮಾಜವನ್ನು ಒಗ್ಗೂಡಿಸಬೇಕಾದ ಆಳುವವರು ಸಂಕುಚಿತ ಲಾಭಗಳಿಗಾಗಿ ಸಮಾಜವನ್ನು ಒಡೆಯುತ್ತಿದ್ದಾರೆ ಮತ್ತು ಆ ಮೂಲಕ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ. ಜನಜಾಗೃತಿಯೇ ಇದಕ್ಕಿರುವ ಏಕೈಕ ಪರಿಹಾರ.
-ಕ.ವೆಂ.ನಾಗರಾಜ್.

ಭಾನುವಾರ, ಅಕ್ಟೋಬರ್ 15, 2017

ಅನ್ನಬ್ರಹ್ಮನ ಸ್ಮರಿಸಿ ಧನ್ಯರಾಗಿ!


      ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಶಕ್ತಿಗಿಂತಲೂ ದೊಡ್ಡದಾದುದು. ಶಕ್ತಿಯನ್ನು ಕರುಣಿಸುವುದೇ ಆಹಾರ ಅಥವ ಅನ್ನ! ಅನ್ನ ಎಂಬ ಪದ ವೇದ, ಉಪನಿಷತ್ತುಗಳಲ್ಲಿ ಅನೇಕ ಸಲ ಬಳಸಲಾಗಿರುವ ವಿಶಿಷ್ಟ ಪದವಾಗಿದೆ. ಈ ಪದ ಹೊರಡಿಸುವ ಅರ್ಥ ಆಹಾರ ಎಂಬುದೇ ಆಗಿದೆ. ಸೇವಿಸಲು ಉಪಯೋಗಿಸುವ ಯಾವುದೇ ಪದಾರ್ಥವಾಗಲಿ ಅದು ಆಹಾರವೆನಿಸುತ್ತದೆ, ಅದು ಅಕ್ಕಿಯಿರಬಹುದು, ಗೋಧಿಯಿರಬಹುದು ಅಥವ ಮತ್ತೇನೋ ಆಗಿರಬಹುದು. ಅದು ಯಾವುದೋ ಮಾನಸಿಕ ವಸ್ತುವೂ ಆಗಿರಬಹುದು. ಯಾವುದೋ ಒಂದರ ಜೀವಿತಕ್ಕೆ ಪೂರಕವಾಗುವ ಯಾವುದೇ ಸಂಗತಿ ಅನ್ನವೆನಿಸುವುದು. ಹೀಗೆ ಅನ್ನ ಎಂಬುದರಲ್ಲಿ ವಿಷಯಾತ್ಮಕ ಮತ್ತು ಗುಣಾತ್ಮಕವಾಗಿ ಸಮ್ಮಿಲಿತವಾದ ಯಾವುದೇ ರೀತಿಯ ಶಕ್ತಿಯ ಉತ್ಪತ್ತಿಗೆ ಕಾರಣವಾಗುವ ಅಂಶ ಅಡಗಿದೆ. 
     ಜೀವನದಲ್ಲಿ ಯಶಸ್ಸು ಅನ್ನುವುದು ಯಾವುದೋ ಒಂದು ಸಂಗತಿಯನ್ನು ಅವಲಂಬಿಸಿ ಬರುವಂತಹುದಲ್ಲ. ಹಲವಾರು ಸಂಗತಿಗಳ ಸಮ್ಮಿಲಿತ ಫಲವಾಗಿ ಯಶಸ್ಸು ಸಿದ್ಧಿಸುತ್ತದೆ. ಉದಾಹರಣೆ ಕೊಡಬೇಕೆಂದರೆ: ಗಾಳಿ ಇಲ್ಲದೆ ನಾವು ಉಸಿರಾಡಲಾರೆವು, ನಿಜ. ಆದರೆ ಶ್ವಾಸಕೋಶಗಳಿಲ್ಲದೆಯೂ ಸಹ ನಮಗೆ ಉಸಿರಾಡಲಾಗುವುದಿಲ್ಲ. ಸಾಮಾಜಿಕ ಜೀವನದಲ್ಲೂ ಸಹ ಈ ನಿಯಮ ಅನ್ವಯವಾಗುತ್ತದೆ. ನಾವು ಪರಸ್ಪರ ಹೊಂದಾಣಿಕೆ, ಸಹಕಾರ ಮತ್ತು ಅರ್ಥ ಮಾಡಿಕೊಳ್ಳುವಿಕೆಯಿಂದ ಬಾಳಬೇಕಾಗುತ್ತದೆ. ಉಪನಿಷತ್ತು ಹೇಳುವ ವಿಶಾಲ ಅರ್ಥದಲ್ಲಿ ಹೀಗೆ ಬಾಳುವುದಕ್ಕೆ ಸಹಾಯ ಮಾಡುವುದು, ಸಹಾಯವಾಗುವುದೂ ಅನ್ನವೆಂದು ಕರೆಸಿಕೊಳ್ಳುತ್ತದೆ. ಪ್ರಕೃತಿಯ ಶಕ್ತಿಗಳು ಮತ್ತು ವ್ಯಕ್ತಿಗತ ಶಕ್ತಿಗಳ ಪರಸ್ಪರ ಸಂಬಂಧಗಳು ಪ್ರತಿಯೊಂದು ಕ್ರಿಯೆಗೆ ಕಾರಣವಾಗುತ್ತದೆ. ಇದೇ ಶಕ್ತಿಯ ಮೂಲ. ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡಿದ್ದಾಗ ಮತ್ತು ಪ್ರಕೃತಿಯ ಶಕ್ತಿಗಳು ನಮ್ಮೊಡನೆ ಹೊಂದಿಕೊಂಡಾಗ ನಾವು ಶಕ್ತಿಶಾಲಿಗಳಾಗುತ್ತೇವೆ. ಯಾವದು ಶಕ್ತಿಯ ಉತ್ಪಾದನೆಗೆ ಕಾರಣವಾಗುತ್ತದೋ ಅದೇ ಅನ್ನ!
     ಇಂತಹ ಚೈತನ್ಯದಾಯಕವಾದ ಅನ್ನದ ಕುರಿತು ಈ ವೇದಮಂತ್ರ ಹೀಗೆ ಹೇಳುತ್ತದೆ:
ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ ಸ ತಸ್ಯ |
ನಾರ್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ || (ಋಕ್.೧೦.೧೧೭.೬.)
     ಸೋಮಾರಿಯೂ, ಅಜ್ಞಾನಿಯೂ ಆದವನು ವ್ಯರ್ಥವಾಗಿ ಆಹಾರವನ್ನು ಪಡೆಯುತ್ತಾನೆ. ಸತ್ಯ ಹೇಳುತ್ತೇನೆ, ಅವನು ಆಹಾರದ ಕೊಲೆಗಾರನೇ ಸರಿ. ಅವನು ದೇವರ ಶಾಸನವನ್ನಾಗಲೀ, ತನ್ನ ಆಪ್ತೇಷ್ಟರನ್ನಾಗಲೀ ಬಲಗೊಳಿಸುವುದಿಲ್ಲ. ಕುಳಿತು ತಿನ್ನುವ ಸೋಮಾರಿಯೂ, ಅಜ್ಞಾನಿಯೂ ಆದ ಅವನು ಪಾಪದ ಪ್ರತೀಕ ಎಂಬುದು ಈ ಮಂತ್ರ ಅರ್ಥ. ಅವಧೂತ ಮುಕುಂದೂರು ಸ್ವಾಮಿಗಳು ಊಟಕ್ಕೆ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಿದ್ದರು: ಮುದ್ದೆ ಅಂತ ಊಟ ಇಲ್ಲ, ಸಿದ್ದಪ್ಪನಂತ ದೇವ್ರಿಲ್ಲ ಅಂತಾರೆ. ಆದ್ರೆ ಒಂದ್ಮಾತು, ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಕೇಳ್ಕಂಡು, ಹೇಳ್ಕಂಡು ಮುದ್ದೆ ಮುರೀರಪ್ಪಾ. ಎಂತಹ ದಿವ್ಯ ಸಂದೇಶ. ಊಟ ಮಾಡುವುದಕ್ಕೂ ಅರ್ಹತೆ ಇರಬೇಕು. ಹಾಗಿರುವಾಗ ಆಹಾರಕ್ಕಾಗಿ ಹಪಹಪಿಸುವ ಲಕ್ಷಾಂತರ ಜೀವಿಗಳಿರುವ ಈ ಜಗತ್ತಿನಲ್ಲಿ ತಿನ್ನುವ ಆಹಾರವನ್ನೇ ವ್ಯರ್ಥ ಮಾಡುವುದು ಮಹಾಪಾಪ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಇದೇ ಸಾಮಾಜಿಕ ಪ್ರಜ್ಞೆ. 
     ಒಬ್ಬ ವ್ಯಕ್ತಿ ಹತ್ತು ದಿನಗಳಿಂದ ಆಹಾರ ಸೇವಿಸಿಲ್ಲವೆಂದಿಟ್ಟುಕೊಳ್ಳೋಣ. ಏನಾಗುತ್ತದೆ? ಅವನು ಬದುಕಿರಬಹುದು, ಜೀವಿಯೆಂದು ಅನ್ನಿಸಿಕೊಳ್ಳಬಹುದು, ಆದರೆ ಆತ ಕಾಣುವ, ಕೇಳುವ, ಯೋಚಿಸುವ ಅಥವ ಅರ್ಥ ಮಾಡಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿರುತ್ತಾನೆ. ಇದಕ್ಕೆ ಕಾರಣ ಆತ ಹತ್ತು ದಿನಗಳಿಂದ ಏನನ್ನೂ ಸೇವಿಸದಿರುವುದು. ಅಲ್ಲಿ ಪ್ರಾಣವಿದೆ, ಆದರೆ ಸತ್ವವಿಲ್ಲ, ಏಕೆಂದರೆ ಅನ್ನ ಇಲ್ಲ. ಆಹಾರ ಕಂಡ ಕೂಡಲೇ ಅವನಿಗೆ ಚೈತನ್ಯ ಬಂದಂತಾಗುತ್ತದೆ. ಅನ್ನವೆಂದರೆ ಕೇವಲ ತಿನ್ನುವ ಆಹಾರವಲ್ಲ. ಅದು ವಿಶ್ವದ ಉಗಮದ ಪ್ರತೀಕವಾಗಿದೆ. ಶಕ್ತಿಯ ಮೂಲವಾದ ಆಹಾರವೆಂದರೆ ಅದರಲ್ಲಿ ನಾವು ಸ್ವೀಕರಿಸುವುದೆಲ್ಲವೂ ಸೇರುತ್ತದೆ, ಅಂದರೆ ನಾವು ನೋಡುವುದು, ಕೇಳುವುದು, ತಿನ್ನುವುದು, ಇತ್ಯಾದಿಗಳೆಲ್ಲವೂ ಆಹಾರವೆಂದೇ ತಿಳಿಯಬೇಕು. ನಾವು ಎಂತಹ ಆಹಾರ ಸೇವಿಸುತ್ತೇವೆ ಎಂಬುದನ್ನು ಅವಲಂಬಿಸಿ ಅದಕ್ಕೆ ತಕ್ಕಂತೆ ನಾವು ಶಕ್ತಿ ಗಳಿಸಿಕೊಳ್ಳುತ್ತೇವೆ.

     . ನಾವು ಸೇವಿಸುವ ಆಹಾರ ನಮ್ಮ ಕೃತಿಯ ಮೇಲೆ, ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ ಎಂಬುದೇ ಅದು. ಪ್ರಾಣಿಲೋಕದಲ್ಲೂ ಸಹ ಸಸ್ಯಾಹಾರಿ ಪ್ರಾಣಿಗಳು ಮತ್ತು ಮಾಂಸಾಹಾರಿ ಪ್ರಾಣಿಗಳ ಗುಣ, ಲಕ್ಷಣ ಮತ್ತು ಸ್ವಭಾವಗಳಲ್ಲಿ ಎದ್ದು ಕಾಣುವ ವ್ಯತ್ಯಾಸಗಳನ್ನು ಗಮನಿಸಬಹುದಾಗಿದೆ. ಆಯುರ‍್ವೇದದಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರದ ಬಗ್ಗೆ ವಿವರಣೆ ಸಿಗುತ್ತದೆ. ಸಾತ್ವಿಕ ಗುಣವೆಂದರೆ ರಚನಾತ್ಮಕ, ಸ್ಪಷ್ಟ ಮತ್ತು ಜೀವನವನ್ನು ಪೋಷಿಸುವುದಾಗಿದೆ. ಶಾಂತಿ, ನೆಮ್ಮದಿ, ಪ್ರೀತಿ, ಇತ್ಯಾದಿಗಳು ಸಾತ್ವಿಕರ ಲಕ್ಷಣಗಳು. ಸಾತ್ವಿಕರು ಸಾಮಾನ್ಯವಾಗಿ ಆಧ್ಯಾತ್ಮಿಕ ಒಲವುಳ್ಳವರು, ಸರಳರು, ಉದ್ವೇಗರಹಿತರು, ಸಂತುಷ್ಟರು, ಕೋಪನಿಗ್ರಹಿಗಳು ಆಗಿದ್ದು, ಅವರ ವಿಚಾರಗಳು ಸ್ಪಷ್ಟವಾಗಿರುತ್ತವೆ. ಅವರು ಇತರರಿಗೆ ಸಂತೋಷ ಕೊಡುವವರು, ಉತ್ಸಾಹಿತರು, ಕುತೂಹಲಿಗಳು ಮತ್ತು ಪ್ರೇರಕರಾಗಿರುತ್ತಾರೆ. ಸಾತ್ವಿಕ ಆಹಾರ ಸತ್ವಯುತವಾಗಿದ್ದು ಸುಲಭವಾಗಿ ಜೀರ್ಣವಾಗುವಂತಹದು ಮತ್ತು ಹಗುರವಾಗಿರುತ್ತವೆ. ಹದವಾಗಿ ಬೇಯಿಸಿದ ತರಕಾರಿಗಳು, ಕಳಿತ ಹಣ್ಣುಗಳು, ಕಾಳುಗಳು, ಜೇನುತುಪ್ಪ, ಶುಂಠಿ, ಸ್ವಲ್ಪ ಪ್ರಮಾಣದ ತುಪ್ಪ, ಹಸುವಿನ ಹಾಲು ಇತ್ಯಾದಿಗಳು ಸಾತ್ವಿಕ ಆಹಾರದ ಪಟ್ಟಿಯಲ್ಲಿವೆ. ಸತ್ವವನ್ನು ಹೆಚ್ಚಿಸಿಕೊಳ್ಳಲು ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ, ಸತ್ಸಂಗ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವುದಲ್ಲದೆ, ಪ್ರಶಾಂತವಾದ ಮತ್ತು ಹಿತಕರವೆನಿಸುವ ವಾತಾವರಣದಲ್ಲಿ ಇರುವುದು ಸಹಾಯಕಾರಿಯಾಗುತ್ತವೆ. ನೋಡುವ ನೋಟಗಳು, ಕೇಳುವ ಸಂಗತಿಗಳು, ಓದುವ ಪುಸ್ತಕಗಳು ಒಳ್ಳೆಯದಾಗಿದ್ದಲ್ಲಿ, ಧನಾತ್ಮಕವಾಗಿದ್ದಲ್ಲಿ ಅವೂ ಸಹ ಸಾತ್ವಿಕ ಗುಣವನ್ನು ವೃದ್ಧಿಸುತ್ತವೆ.
     ರಾಜಸಿಕತೆಯೆಂದರೆ ಮನ್ನುಗ್ಗುವ ಮತ್ತು ಚಟುವಟಿಕೆಯಿಂದ ಒಡಗೂಡಿದ ಸ್ವಭಾವ. ಜೀವನದಲ್ಲಿ ಕೆಲಸಗಳಾಗಬೇಕಾದರೆ ಈ ಸ್ವಭಾವವೂ ಅಗತ್ಯವಾಗಿದೆ. ಆದರೆ ಅತಿಯಾದಲ್ಲಿ ಇದು ಅತಿ ಚಟುವಟಿಕೆ ಮತ್ತು ತಳಮಳಕ್ಕೂ ಕಾರಣವಾಗುತ್ತದೆ. ಮನಸ್ಸು ವಿಶ್ರಾಂತವಾಗುವುದಿಲ್ಲ, ಭಯ, ಕಾತುರ ಮತ್ತು ಉಗ್ರತೆಯಿಂದ ಚಡಪಡಿಸುತ್ತದೆ. ಮಿತಿಯಲ್ಲಿರುವ ರಾಜಸಿಕತೆ ಒಳ್ಳೆಯ ಫಲ ನೀಡುತ್ತದೆ, ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಅತಿಯಾದಲ್ಲಿ ಅದು ಗರ್ವ, ಸ್ಪರ್ಧೆ, ಅತಿಕ್ರಮಣಕಾರಿ ಮನೋಭಾವ ಮತ್ತು ಮತ್ಸರಕ್ಕೆ ರಹದಾರಿಯಾಗುತ್ತದೆ. ಭೌತಿಕವಾದಕ್ಕೆ ಹೆಚ್ಚು ಮಹತ್ವ ಕೊಡುವ ಇವರು ಅಧಿಕಾರ, ಹೆಸರು, ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿಗಾಗಿ ಹಂಬಲಿಸುತ್ತಾರೆ. ತಕ್ಷಣದಲ್ಲಿ ಇವರು ಮಾಡುವ ಕ್ರಿಯೆಗಳಿಂದಾಗಿ ನಂತರದಲ್ಲಿ ಪಶ್ಚಾತ್ತಾಪ ಪಡಬೇಕಾಗಿ ಬರುವುದನ್ನೂ ನಾವು ಕಾಣುತ್ತಿರುತ್ತೇವೆ. ನಮ್ಮ ಬಹುತೇಕ ರಾಜಕಾರಣಿಗಳನ್ನು ನೋಡಿದರೆ ಇದಕ್ಕೆ ಹೇರಳವಾದ ಉದಾಹರಣೆಗಳು ಸಿಗುತ್ತವೆ. ಮತೀಯ ಹುಚ್ಚಾಟಗಳಿಗೂ ಇದು ಮೂಲಕಾರಣವಾಗಿದೆ. ಅವರುಗಳು ತಾವು ನಂಬಿರುವುದೇ ಸರಿಯೆನ್ನುತ್ತಾರೆ ಮತ್ತು ಇತರರು ತಮ್ಮ ಮಾತನ್ನು ಕೇಳಬೇಕೆನ್ನುವ ಸಲುವಾಗಿ ಏನು ಮಾಡಲೂ ತಯಾರಿರುತ್ತಾರೆ. ಅತಿ ರಾಜಸಿಕತೆಯಲ್ಲಿ ಯಾವುದು ಒಳ್ಳೆಯದೆಂದು ಹೃದಯಕ್ಕೆ ಗೊತ್ತಿದ್ದರೂ, ಮನಸ್ಸು ಮಾತ್ರ ಬೇರೆಲ್ಲೋ ಕೊಂಡೊಯ್ಯುತ್ತದೆ. ಆದರೆ ಹಿಡಿತದಲ್ಲಿರುವ ರಾಜಸಿಕತೆ ಅತ್ಯಗತ್ಯವಾಗಿದ್ದು, ಗುರಿ ತಲುಪಲು ಮತ್ತು ಸಮಾಜವನ್ನು ಸರಿಯಾಗಿ ಕೊಂಡೊಯ್ಯಲು ಸಹಕಾರಿಯಾಗಿರುತ್ತದೆ. ಇದಕ್ಕೂ ಸಹ ನಮ್ಮ ರಾಜಕಾರಣಿಗಳಲ್ಲಿ ಉದಾಹರಣೆಗಳು ಸಿಗುತ್ತವೆ. ನೋಡುವ ದೃಷ್ಯಗಳು/ಸಂಗತಿಗಳು, ದಾರಿ ತಪ್ಪಿಸುವ ಚಿತ್ರಗಳು, ಧಾರಾವಾಹಿಗಳು, ಕೇಳುವ ಕೆಟ್ಟ ಮಾತುಗಳು, ವಾಸಿಸುವ ಅಶಾಂತ ಪರಿಸರ ಸಹ ರಾಜಸಿಕತೆಗೆ ಪ್ರಚೋದಿಸುತ್ತವೆ. ಅತಿಯಾದ ವ್ಯಾಯಾಮ, ಅತಿಯಾದ ಪ್ರಯಾಣ, ಅತಿಯಾದ ಮಾತುಗಳು, ಅತಿಯಾದ ಕೆಲಸಗಳು, ಅತಿಯಾದ ಮನರಂಜನೆಗಳೂ ಸಹ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕರಿದ, ಹುರಿದ ಪದಾರ್ಥಗಳು, ಚಾಕೊಲೇಟುಗಳು, ಅತಿಯಾದ ಸಿಹಿ, ಉಪ್ಪು, ಖಾರದ ಪದಾರ್ಥಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳು ರಾಜಸಿಕ ಆಹಾರದ ಪಟ್ಟಿಯಲ್ಲಿ ಇವೆ. ಇವುಗಳನ್ನು ಹಿತ-ಮಿತವಾಗಿ ಬಳಸಿದರೆ ಒಳಿತು. ರಾಜಸಿಕತೆಯನ್ನು ಸಾತ್ವಿಕ ಆಹಾರಗಳ ಬಳಕೆಯೊಂದಿಗೆ ನಿಯಂತ್ರಿಸಬಹುದು. ಸಾತ್ವಿಕರ ಸಂಗವೂ ಸಹಕಾರಿಯಾಗುವುದು. ಸಾತ್ವಿಕರ ಮತ್ತು ನಿಯಂತ್ರಿತ ರಾಜಸಿಕರ ಒಟ್ಟುಗೂಡುವಿಕೆ ಸಮಾಜಕ್ಕೆ ಉಪಕಾರಿಯಾಗಿರುತ್ತದೆ.
     ತಾಮಸಿಕತೆ ನಾಶ ಮಾಡುವ ಗುಣವಾಗಿದೆ. ಆಲಸ್ಯ, ಜಡತ್ವ, ನಿರಾಶೆ, ಖಿನ್ನತೆ, ಕ್ರೋಧ ಇದರ ಉತ್ಪನ್ನಗಳು. ನಿದ್ರೆ, ವಿಶ್ರಾಂತಿ, ಮುನ್ನುಗ್ಗದಿರುವಿಕೆ, ಇತ್ಯಾದಿಗಳು ಸಂದರ್ಭಗಳಲ್ಲಿ ಅವಶ್ಯವಾಗಿದ್ದು ತಾಮಸಿಕತೆಯೂ ಸಹ ಸ್ವಲ್ಪ ಮಟ್ಟಿಗೆ ಅಗತ್ಯವಾದುದೇ ಆಗಿದೆ. ಆದರೆ ತಮೋಗುಣ ಹೆಚ್ಚಾದರೆ ಅನರ್ಥಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಕೀಳು ಅಭಿರುಚಿಯ ಚಿತ್ರಗಳು, ಕೀಳು ಮನೋಭಾವದ ಚಾನೆಲ್ಲುಗಳು, ಅಂತರ್ಜಾಲದ ಅಶ್ಲೀಲ ತಾಣಗಳು ತಾಮಸಿಕತೆಯ ಬೆಂಕಿಗೆ ತುಪ್ಪ ಸುರಿಯುತ್ತವೆ. ತಾಮಸಿಕರು ಸ್ವನಾಶಕ್ಕೆಡೆಮಾಡುವ ಜೀವನಶೈಲಿ ಮತ್ತು ಆಹಾರಸೇವನೆಯ ಅಭ್ಯಾಸದವರಾಗಿರುತ್ತಾರೆ. ಅತಿಯಾದ ಆಹಾರ ಸೇವನೆ, ಅತಿಯಾದ ಕಾಮ ಚಟುವಟಿಕೆ, ಮಾದಕ ದ್ರವ್ಯಗಳ ಸೇವನೆ ಮಾಡಲು ಹಂಬಲಿಸುತ್ತಾರೆ.  ಪರಿಣಾಮವಾಗಿ ನಿಸ್ತೇಜತೆ, ಭಾರವಾದ ಮನಸ್ಸಿನೊಂದಿಗೆ ಏನು ಮಾಡಬೇಕೆಂದು ತೋಚದ ಸ್ಥಿತಿಗೆ ತಲುಪುತ್ತಾರೆ. ತಮ್ಮ ಮತ್ತು ಇತರರ ಬಗ್ಗೆ ಲೆಕ್ಕಿಸದಂತೆ ಇರುತ್ತಾರೆ. ಕೊನೆಯಲ್ಲಿ ಯಾವ ಸ್ಥಿತಿಗೆ ತಲುಪುತ್ತಾರೆಂದರೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗದಂತಾಗಿ ಇತರರನ್ನು ಆಶ್ರಯಿಸಬೇಕಾಗುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲಾರರು ಮತ್ತು ಅಸ್ಪಷ್ಟ ಮನಸ್ಸಿನಿಂದಾಗಿ ಒಳ್ಳೆಯ ನಿರ್ಧಾರ ತಳೆಯಲಾರರು. ತಾಮಸಿಕ ಆಹಾರ ಕಡಿಮೆ ಸತ್ವಯುತವಾಗಿದ್ದು, ಜೀವಕ್ಕೆ ಪೋಷಕವಾಗಿರುವುದಿಲ್ಲ. ಹಳೆಯದಾದ ಮತ್ತು ತಂಗಳು ಆಹಾರ, ಅತಿಯಾಗಿ ಕರಿದ ಮತ್ತು ಹುರಿದ ಪದಾರ್ಥಗಳು, ಸುಲಭವಾಗಿ ಜೀರ್ಣವಾಗದಂತಹ ಗಡಸು ಆಹಾರ, ಹೆಚ್ಚು ಅನ್ನಿಸುವಷ್ಟು ಮಾಂಸಾಹಾರ, ಇತ್ಯಾದಿಗಳು ತಾಮಸಿಕವೆನಿಸುವ ಆಹಾರಗಳ ಪಟ್ಟಿಯಲ್ಲಿ ಸೇರಿವೆ. ಮಾದಕ ದ್ರವ್ಯಗಳು, ಡ್ರಗ್ಸ್ ಮುಂತಾದವು ತಾಮಸ ಗುಣ ಪ್ರಚೋದಕಗಳು. ಇವು ರಾಜಸಿಕ ಪರಿಣಾಮಗಳನ್ನೂ ಬೀರುತ್ತವೆ. ಮೆದುಳಿನ ಮೇಲೆ ಪ್ರಭಾವ ಬೀರುವ, ಅದನ್ನು ಮಂಕುಗೊಳಿಸುವ ಪದಾರ್ಥಗಳೆಲ್ಲವೂ ತಾಮಸಿಕ ಆಹಾರವೆನಿಸುವುವು. ಮೆದುಳನ್ನು ಆವರಿಸಿರುವ ತಾಮಸಿಕ ಪೊರೆಯನ್ನು ಸರಿಸಲು ಶಾಂತ ಪರಿಸರ, ಸಾತ್ವಿಕ ಆಹಾರ ಸೇವನೆ ಮತ್ತು ಬದಲಾದ ಜೀವನಶೈಲಿಯಿಂದ ಸಾಧ್ಯವಿದೆ.
     ಅನ್ನದ ಮಹತ್ವವನ್ನು ಮತ್ತು ಅನ್ನವೆಂದರೆ ಕೇವಲ ನಾವು ಸೇವಿಸುವ ಆಹಾರ ಮಾತ್ರವಲ್ಲ ಎಂಬುದನ್ನೂ ಅರಿತೆವು. ಹಾಗೆಯೇ ನಾವು ನೋಡುವ, ಕೇಳುವ ಮತ್ತು ತಿನ್ನುವ ಅನ್ನವನ್ನು ಅವಲಂಬಿಸಿ ನಮ್ಮ ಗುಣ, ಸ್ವಭಾವಗಳು ರೂಪಿತವಾಗುತ್ತವೆ ಎಂಬುದನ್ನೂ ತಿಳಿದೆವು. ಒಂದು ಕೆಟ್ಟ ಸುದ್ದಿಯಿದೆ. ಅದೆಂದರೆ, ಮನುಷ್ಯನ ಸ್ವಭಾವಕ್ಕೂ ಆತನ ಹುಟ್ಟಿನ ಜಾತಿಗೂ ಯಾವುದೇ ಸಂಬಂಧವಿಲ್ಲ. ಹಿಂದುಳಿದಿರುವಿಕೆ ಅಥವ ಮುಂದುವರೆದಿರುವಿಕೆಗೆ ಜಾತಿ ಕಾರಣ ಅಲ್ಲವೇ ಅಲ್ಲ. ಜಾತಿ ಆಧಾರಿತವಾಗಿ ಇದನ್ನು ನಿರ್ಧರಿಸುವುದು ಕೇವಲ ಅಧಿಕಾರದ, ಸ್ವಾರ್ಥದ ಅಥವ ರಾಜಕೀಯ ಲಾಭಗಳಿಕೆಯ ಉದ್ದೇಶದಿಂದ ಮಾತ್ರವೇ ಆಗಿದೆ. ಒಂದು ಒಳ್ಳೆಯ ಸುದ್ದಿಯೂ ಇದೆ. ಅದೆಂದರೆ, ಸಾತ್ವಿಕರೇ ಬೇರೆ, ರಾಜಸಿಕರೇ ಬೇರೆ ಮತ್ತು ತಾಮಸಿಕರೇ ಬೇರೆ ಎಂದು ಪ್ರತ್ಯೇಕವಾಗಿ ಗುರುತಿಸಲ್ಪಡುವವರು ಇರುವದಿಲ್ಲ. ಪ್ರತಿಯೊಬ್ಬರೂ ಸಾತ್ವಿಕರೂ, ರಾಜಸಿಕರೂ ಮತ್ತು ತಾಮಸಿಕರೂ ಆಗಿರುತ್ತಾರೆ. ಅವರು ಈ ಮೂರೂ ಗುಣಗಳ ಮಿಶ್ರಣವಾಗಿರುತ್ತಾರೆ. ಕೆಲವರಲ್ಲಿ ಕೆಲವೊಂದು ಗುಣಗಳು ಪ್ರಧಾನವಾಗಿರುತ್ತವೆ. ಆ ಪ್ರಧಾನ ಗುಣಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಎಂತಹ ಒಳ್ಳೆಯ ಅವಕಾಶ! ನಾವು ಏನಾಗಬೇಕು, ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬಲ್ಲೆವು. ಅದನ್ನು ನಾವು ಸೂಕ್ತವಾಗಿ ಆರಿಸಿಕೊಳ್ಳುವ ಅನ್ನದ ಮೂಲಕ ಮತ್ತು ಬದಲಾಯಿಸಿಕೊಳ್ಳುವ ಜೀವನಶೈಲಿಯಿಂದ ಪಡೆದುಕೊಳ್ಳಬಲ್ಲೆವು. ಇಂತಹ ಕರುಣಾಮಯಿ ಅನ್ನಬ್ರಹ್ಮನಿಗೆ ನಮಸ್ಕಾರಗಳು.
-ಕ.ವೆಂ.ನಾಗರಾಜ್.


ಶುಕ್ರವಾರ, ಅಕ್ಟೋಬರ್ 13, 2017

ಜೀವನ ಗೊಂಬೆಯಾಟವಲ್ಲ!


     ಅಯ್ಯೋ, ನಮ್ಮದೇನಿದೆ?, ಎಲ್ಲಾ ಭಗವಂತ ಆಡಿಸಿದ ಹಾಗೆ! ಅವನ ಕೈಯಲ್ಲಿ ಆಡೋ ಗೊಂಬೆಗಳು ನಾವು, ಅವನ ಇಚ್ಛೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ. ಇದು ಸರಿಯೇ? ಇದರ ಗೂಢಾರ್ಥವೇನಿರಬಹುದು? ವಿಚಾರ ಮಾಡೋಣ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ದೇವರೇ ಕಾರಣವೆಂದರೆ ನಮ್ಮ ತಪ್ಪು ಏನಿರುತ್ತದೆ? ಯಾರನ್ನಾದರೂ ಕೊಲೆ ಮಾಡಿದರೆ ಅದಕ್ಕೂ ದೇವರೇ ಕಾರಣ ಎನ್ನಬಹುದಲ್ಲವೇ? ದೇವರು ಮಾಡಿಸಿದ ಕೆಲಸಕ್ಕೆ ಶಿಕ್ಷೆ ದೇವರಿಗೆ ಕೊಡಬೇಕೇ ಹೊರತು ನಿಮಿತ್ತ ಮಾತ್ರವಾಗಿ ಕೊಲೆ ಮಾಡಿದವರಿಗೆ ಶಿಕ್ಷೆ ಏಕೆ ಕೊಡಬೇಕು? ಹೀಗಿರುವಾಗ ಧರ್ಮ, ಅಧರ್ಮ, ಸತ್ಯ, ಅಸತ್ಯ, ಪಾಪ, ಪುಣ್ಯ, ಮೋಕ್ಷ, ಸ್ವರ್ಗ, ನರಕ ಮುಂತಾದುವುಗಳಿಗೆ ಅರ್ಥವಾದರೂ ಎಲ್ಲಿ ಬರುತ್ತದೆ?
     ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ, ಕೆಲವರು ಹುಟ್ಟುತ್ತಲೇ ಅಂಗವಿಕಲರಾಗಿರುತ್ತಾರೆ, ಕೆಲವರು ರೋಗಿಷ್ಠರಾಗಿರುತ್ತಾರೆ. ಕೆಲವರು ದುಃಖಿಗಳಾಗಿರುತ್ತಾರೆ, ಕಷ್ಟಪಡುತ್ತಾರೆ, ಕೆಲವರು ಸುಖ-ಸಂತೋಷಗಳಲ್ಲಿ ಮುಳುಗಿರುತ್ತಾರೆ. ಕಂಡ ಕೂಡಲೇ ಹೊಡೆದು ಸಾಯಿಸಲ್ಪಡುವ ಸೊಳ್ಳೆಗಳಿರುತ್ತವೆ, ಬೆಕ್ಕಿನ ಭಯದ ಇಲಿ, ನಾಯಿಯ ಭಯದ ಬೆಕ್ಕುಗಳು ಜನ್ಮ ತಾಳುತ್ತವೆ. ಇಂತಹ ಜೀವಿಗಳನ್ನು ದೇವರೇ ಸೃಷ್ಟಿಸಿದ ಎಂದರೆ ಅವನನ್ನು ಪಕ್ಷಪಾತಿ, ಅನ್ಯಾಯಿ, ನಿಷ್ಕರುಣಿ ಅನ್ನದಿರಲು ಸಾಧ್ಯವಿದೆಯೇ? ದೇವರನ್ನು ಪಕ್ಷಪಾತಿ ಎಂದು ಹೇಳಲು ಮನಸ್ಸು, ಅದರಲ್ಲೂ ಆಸ್ತಿಕ ಮನಸ್ಸು, ಒಪ್ಪುವುದಿಲ್ಲ. ಹಾಗಾದರೆ ಈ ರೀತಿಯ ಜೀವಿಗಳು ಸೃಷ್ಟಿಯಾಗಲು ಮತ್ತೇನೋ ಕಾರಣವಿರಲೇಬೇಕು. ಕರ್ಮಸಿದ್ಧಾಂತ ಮತ್ತು ಪುನರ್ಜನ್ಮದ ಸಿದ್ಧಾಂತಗಳು ಕೆಲಮಟ್ಟಿಗೆ ಇಂತಹುದಕ್ಕೆ ಉತ್ತರ ನೀಡಬಲ್ಲುದಾಗಿವೆ. ಇನ್ನೊಂದು ಉದಾಹರಣೆಯನ್ನು ನೋಡೋಣ. ಇಬ್ಬರು ಆಟಗಾರರು ಪರಸ್ಪರ ಮುಖಾಮುಖಿಯಾದಾಗ ಒಬ್ಬ ಗೆಲ್ಲುತ್ತಾನೆ, ಇನ್ನೊಬ್ಬ ಸೋಲುತ್ತಾನೆ. ಒಬ್ಬ ಸೋಲಲು ಅಥವ ಇನ್ನೊಬ್ಬ ಗೆಲ್ಲಲು ದೇವರು ಕಾರಣನೇ? ಆಟಗಾರರ ಪಾತ್ರ ಏನೂ ಇರುವುದಿಲ್ಲವೇ? ದೇವರೇ ಕಾರಣ ಎನ್ನುವುದಾದರೆ ಸೋಲಿನಿಂದ ಹತಾಶೆಗೊಳ್ಳುವುದಕ್ಕೆ ಅಥವ ಗೆಲುವಿನಿಂದ ಬೀಗುವುದಕ್ಕೆ ಅರ್ಥ ಇರುವುದಿಲ್ಲ. ಆಟಗಾರರೇ ಕಾರಣವೆಂದಾದರೆ ಇಲ್ಲಿ ದೇವರ ಪಾತ್ರ ಏನಿರಬಹುದು?
     ಇಷ್ಟೆಲ್ಲಾ ಚರ್ಚೆ ಮಾಡುತ್ತೀವಲ್ಲಾ, ಆ ದೇವರ ಬಗ್ಗೆ ನಮಗೆ ಯಾರಿಗಾದರೂ ಸ್ಪಷ್ಟವಾಗಿ ತಿಳಿದಿದೆಯೇ? ನಮ್ಮ ಸೀಮಿತ ಬುದ್ಧಿಮತ್ತೆಯ ಮಿತಿಯಲ್ಲಿ ನಾವು ಏನು ಭಾವಿಸುತ್ತೇವೆಯೋ ಅದೇ ಮತ್ತು ಅಷ್ಟೇ ದೇವರಾಗಿರಲಿಕ್ಕಿಲ್ಲ. ಒಂದು ಸಾಮಾನ್ಯವಾದ ರಬ್ಬರಿನ ಚೆಂಡನ್ನು ಯಾವುದೇ ಆಧಾರವಿಲ್ಲದೆ ಶೂನ್ಯದಲ್ಲಿ ನಿಲ್ಲಿಸಲು ನಮಗೆ ಸಾಧ್ಯವಿದೆಯೇ? ಇದನ್ನೇ ಆಧಾರವಾಗಿರಿಸಿಕೊಂಡು ನೋಡೋಣ. ವಿಶಾಲವಾದ ನಮ್ಮ ಭೂಮಿ ನಿಂತಿರುವುದಾದರೂ ಎಲ್ಲಿ? ಸೂರ್ಯ, ಚಂದ್ರ, ವಿವಿಧ ಗ್ರಹಗಳು, ನಕ್ಷತ್ರಗಳು, ಆಕಾಶಕಾಯಗಳು ನಿಗದಿತ ಸ್ಥಳಗಳಲ್ಲಿ ಯಾವುದರ ಆಧಾರದಲ್ಲಿ ನೆಲೆಗೊಳಿಸಲ್ಪಟ್ಟಿವೆ? ಇವನ್ನೆಲ್ಲಾ ಒಂದು ಸೂತ್ರದಲ್ಲಿ ಬಂಧಿಸಿ ಇರಿಸಿರುವ ಶಕ್ತಿಯಾದರೂ ಯಾವುದು? ಆ ಶಕ್ತಿಯಾದರೂ ಹೇಗಿದ್ದೀತು? ಇಂತಹ ಬೃಹತ್ ಬ್ರಹ್ಮಾಂಡವನ್ನು ಸ್ಥಿತಿಯಲ್ಲಿಡುವ ಕೆಲಸ ಬೃಹತ್ ಶಕ್ತಿಯಿಂದ ಮಾತ್ರ ಸಾಧ್ಯ. ಅದನ್ನೇ ದೇವರು ಅಂದುಕೊಳ್ಳೋಣ. ಅಂತಹ ಬೃಹತ್ ಸರ್ವಶಕ್ತ, ಸರ್ವವ್ಯಾಪಿ, ಸರ್ವಾಧಾರಕನನ್ನು ನಾವು ಮಾನವರು ನಮ್ಮ ಗುಣಸ್ವಭಾವಕ್ಕನುಗುಣವಾಗಿ ಮಾನವರ ರೂಪದಲ್ಲಿ ಕಲ್ಪಿಸಿಕೊಂಡರೆ ಅದು ಆ ಸರ್ವಶಕ್ತಿಗೆ ಸಲ್ಲಿಸುವ ಗೌರವವಂತೂ ಆಗದು. ದೈವಿಕ ಗುಣಗಳು, ಅಸಾಮಾನ್ಯ ಶಕ್ತಿ ಹೊಂದಿರುವ ಮಹಾತ್ಮರನ್ನು ದೇವಮಾನವರೆನ್ನಬಹುದೇ ಹೊರತು ಅವರನ್ನು ದೇವರಿಗೆ ಸಮೀಕರಿಸಲಾಗದು. ಇರಲಿ ಬಿಡಿ, ಎಲ್ಲರ ವಿಚಾರವೂ ಒಂದೇ ರೀತಿ ಇರುವುದಿಲ್ಲ. ಲೋಕೋ ಭಿನ್ನರುಚಿಃ! ಅಲ್ಲದೆ, ದೇವರು ಆಕಾರಿಯೋ, ನಿರಾಕಾರಿಯೋ ಎಂಬುದು ಈ ಲೇಖನದ ಚರ್ಚೆಯ ವಿಷಯವಲ್ಲವಾದುದರಿಂದ ಇದನ್ನು ಬಿಟ್ಟು ಮುಂದೆ ಹೋಗೋಣ.
     ನಾವು ದೇವರನ್ನು ನೆನಪಿಸಿಕೊಳ್ಳುವುದು ಕಷ್ಟ ಬಂದಾಗ ಮಾತ್ರ. ನಮಗೆ ಕಷ್ಟಗಳೇ ಇರದಿದ್ದರೆ, ಸುಖ, ಸಂತೋಷಗಳೇ ಬದುಕಿನಲ್ಲಿ ತುಂಬಿದ್ದರೆ ದೇವರ ನೆನಪೂ ಆಗುವುದಿಲ್ಲ. ಕಟ್ಟಿದ ದೊಡ್ಡ ಬಂಗಲೆ, ಐಷಾರಾಮಿ ಕಾರು, ದೊಡ್ಡ ಆಸ್ತಿಗೆ ಒಡೆಯರಾದುದು ಸ್ವಂತ ಪರಿಶ್ರಮದ ಫಲದಿಂದ ಎಂದು ಅಂದುಕೊಳ್ಳುವ ನಾವು ವಹಿವಾಟಿನಲ್ಲಿ ದೊಡ್ಡ ನಷ್ಟವಾಗಿ ಎಲ್ಲವನ್ನೂ ಕಳೆದುಕೊಳ್ಳುವ ಹಂತ ಬಂದಾಗ ಮಾತ್ರ ದೇವರನ್ನು ನಿಷ್ಕರುಣಿ ಎಂದುಬಿಡುತ್ತೇವೆ. ದೇವರು ಕಣ್ಣು ಬಿಟ್ಟು ನಮ್ಮನ್ನು ನೋಡಲಿಲ್ಲ, ಕಾಪಾಡಲಿಲ್ಲ ಎಂದು ಅಲವತ್ತುಕೊಳ್ಳುತ್ತೇವೆ. ದೇವರ ಕೆಲಸ ನಮಗೆ ತೊಂದರೆ ಬರದಂತೆ ನೋಡಿಕೊಳ್ಳುವುದೇ? ನಾವು ಏನೇ ಮಾಡಿದರೂ ದೇವರು ನಮ್ಮನ್ನು ರಕ್ಷಿಸಬೇಕೇ? ನಮ್ಮ ಆಲೋಚನಾ ಸರಣಿ ದಾರಿ ತಪ್ಪುವುದು ಇಲ್ಲಿಯೇ! ಸಕಲ ಚರಾಚರ ಜೀವಿಗಳು, ಪ್ರಕೃತಿ, ಬೃಹತ್ ಬ್ರಹ್ಮಾಂಡ ಎಲ್ಲವೂ ನಿರ್ದಿಷ್ಟ ಸೂತ್ರಗಳ ಅನುಸಾರ ಅಸ್ತಿತ್ವದಲ್ಲಿವೆ. ಈ ಅಸ್ತಿತ್ವಕ್ಕೆ ಹಲವಾರು ಸೂತ್ರಗಳಿವೆ. ಆ ಸೂತ್ರಕ್ಕೆ ಅನುಸಾರವಾಗಿಯೇ ಎಲ್ಲವೂ ನಡೆಯುತ್ತವೆ. ಒಂದು ಸಣ್ಣ ಉದಾಹರಣೆ ನೋಡೋಣ. ಬೆಂಕಿಯ ಗುಣ ಸುಡುವುದು. ಅದು ದೇಶ, ಕಾಲ ಅನುಸರಿಸಿ ಬದಲಾಗುವುದಿಲ್ಲ. ಬೆಂಕಿ ಸುಡಬಾರದೆಂದು ಜನರೆಲ್ಲರೂ ಒಟ್ಟಾಗಿ ನಿರ್ಧರಿಸಿದರೂ ಅದು ಸುಡದೇ ಇರುವುದಿಲ್ಲ. ಆ ಬೆಂಕಿ ತನ್ನ ಹತ್ತಿರಕ್ಕೆ ಬರುವ ಯಾವುದೇ ವಸ್ತುವನ್ನು ಯಾವುದೇ ಭೇದ ಮಾಡದೇ ಸುಡುತ್ತದೆ.
     ಮಾನವನ ಬದುಕಿನಲ್ಲಿ ದೇವರ ಪಾತ್ರ ಹೇಗಿರುತ್ತದೆಂಬುದಕ್ಕೆ ಒಂದು ಸಣ್ಣ ಉದಾಹರಣೆ ಮೂಲಕ ವಿವರಿಸಲು ಪ್ರಯತ್ನಿಸಬಹುದು. ಚದುರಂಗದ ಆಟವನ್ನೇ ತೆಗೆದುಕೊಳ್ಳೋಣ. ಆ ಆಟಕ್ಕೆ ನಿಯಮವಿದೆ. ಆ ನಿಯಮಗಳ ಅನುಸಾರವಾಗಿ ಚದುರಂಗದ ಕಾಯಿಗಳನ್ನು ಆಟಗಾರ ನಡೆಸಬೇಕು. ಆ ನಿಯಮಗಳ ಅನುಸಾರವಾಗಿ ಆಟಗಾರ ತನ್ನ ಬುದ್ಧಿಮತ್ತೆಯನ್ನು ಉಪಯೋಗಿಸಿ ಕಾಯಿಗಳ ಚಲನೆ ಮಾಡಿದರೆ ಎದುರಾಳಿಯನ್ನು ಸೋಲಿಸಬಹುದು. ತಪ್ಪು ನಡೆಗಳನ್ನು ಮಾಡಿದರೆ ಸೋಲುತ್ತಾನೆ. ಈ ಆಟವನ್ನು ಗಮನಿಸಲು ಒಬ್ಬ ರೆಫರಿ ಇದ್ದು ಆತ ಪಂದ್ಯದ ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಮಾತ್ರ ಗಮನಿಸುತ್ತಿರುತ್ತಾನೆ. ಕೊನೆಯಲ್ಲಿ ಫಲಿತಾಂಶ ನಿರ್ಧರಿಸುತ್ತಾನೆ. ಆತನ ಪಾತ್ರ ಅಷ್ಟಕ್ಕೇ ಸೀಮಿತ. ಆತ ಯಾವುದೇ ಆಟಗಾರನಿಗೆ ಹೀಗೆ ಆಡು, ಹಾಗೆ ಆಡು ಎಂದು ಹೇಳುವುದಿಲ್ಲ. ರೆಫರಿ/ಅಂಪೈರ್ ನನಗೆ ಸಹಾಯ ಮಾಡಲಿಲ್ಲ ಎಂದು ಯಾರಾದರೂ ದೂರುತ್ತಾರೆಯೇ? ಇಲ್ಲ. ದೇವರ ಕೆಲಸವೂ ಅಷ್ಟೇ. ಆತ ಕೇವಲ ಸಾಕ್ಷಿಯಾಗಿ ನಮ್ಮ ಚಟುವಟಿಕೆಗಳನ್ನು, ಕ್ರಿಯೆಗಳನ್ನು ನೋಡುತ್ತಿರುತ್ತಾನೆಯೇ ಹೊರತು, ಆತ ಸಹಾಯವನ್ನಾಗಲೀ, ಅಡ್ಡಿಯನ್ನಾಗಲೀ ಮಾಡುವುದಿಲ್ಲ. ಜೀವನವೆಂಬ ಆಟದಲ್ಲಿ ನಾವು ಪ್ರತಿಯೊಬ್ಬರೂ ಸ್ವತಂತ್ರ ಆಟಗಾರರೇ. ಮೊದಲೇ ಹೇಳಿದ್ದಂತೆ ಪ್ರತಿಯೊಂದೂ ನಿಯಮಾನುಸಾರವೇ ನಡೆಯುತ್ತದೆ. ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬುದು ನಿರ್ಧರವಾಗಿರುತ್ತದೆ. ನಮ್ಮ ಬದುಕು ಎಚ್ಚರಿಕೆಯಿಂದ ಸಾಗಿದರೆ, ವಿವೇಚನಾಶಕ್ತಿ ಬಳಸಿ ನಡೆದರೆ ನಮಗೆ ಯಶಸ್ಸು ಸಿಕ್ಕೇಸಿಗುತ್ತದೆ. ಇಲ್ಲದಿದ್ದರೆ ಇಲ್ಲ, ಅಷ್ಟೆ. ಕೈ ಕೆಸರಾದರೆ ಬಾಯಿ ಮೊಸರು, ಕಷ್ಟಪಟ್ಟರೆ ಫಲವುಂಟು ಎಂಬುದು ಆಡುಮಾತಿನ ವೇದಮಂತ್ರಗಳು. ಇದು ಸರಿ, ಅದು ತಪ್ಪು ಎಂದು ಹೇಳುವವರು ಯಾರು? ಬೇರೆ ಯಾರೂ ಅಲ್ಲ, ನಾವೇ!
     ಈ ವೇದಮಂತ್ರ ಬದುಕಿನಲ್ಲಿ ನಮ್ಮ ಪಾತ್ರ ಮತ್ತು ದೇವರ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದೆ: ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈ ಸಮಮಮಾನ ಏತಿ| ಅನೂನಂ ಪಾತ್ರಮ್ ನಿಹಿತಂ ಏತತ್ಪಕ್ತಾರಂ ಪಕ್ವಃ ಪುನರಾವಿಷಾತಿ||(ಅಥರ್ವ.೧೨.೩.೪೮). ಯಾವುದೇ ಕಲ್ಮಶವಿಲ್ಲದ, ನ್ಯೂನತೆಯಿಲ್ಲದ ಪಾತ್ರೆ ನಮ್ಮಲ್ಲಿ ಅಂತರ್ನಿಹಿತವಾಗಿದೆ. ಈ ಪಾತ್ರೆಯಲ್ಲಿ ಬೇಯಿಸಲಾಗುವ ಪದಾರ್ಥ ಬೇಯಿಸಿದವನನ್ನು ತಪ್ಪದೆ ಸೇರಿಕೊಳ್ಳುತ್ತದೆ. ಯಾರಾದರೂ ಮಿತ್ರರು, ಹಿತೈಷಿಗಳು ಇದನ್ನು ತಪ್ಪಿಸುತ್ತಾರೆ ಎಂಬುದಕ್ಕೆ ಆಧಾರವಿಲ್ಲ ಎಂಬುದು ಈ ಮಂತ್ರದ ಅರ್ಥ. ದೇವರ ನ್ಯಾಯಪದ್ಧತಿಯಲ್ಲಿ ಅನ್ಯಾಯವಿಲ್ಲ, ಲೋಪವಿಲ್ಲ. ಅಂತರ್ನಿಹಿತವಾದ ಅಗೋಚರ ವ್ಯವಸ್ಥೆಯಲ್ಲಿ ನಾವು ಮಾಡುವ ಕರ್ಮಗಳು (ಅಂದರೆ ಬೇಯಿಸುವ ಅಡಿಗೆ) ಅದಕ್ಕೆ ತಕ್ಕ ಫಲಗಳನ್ನು ಕೊಡುತ್ತವೆ. ಅದನ್ನು ಮಾಡಿದವರೇ  ಅನುಭವಿಸಬೇಕೇ ಹೊರತು (ಮಾಡಿದ ಅಡಿಗೆಯನ್ನು ಬೇಯಿಸಿದವನೇ ತಿನ್ನಬೇಕು) ತಪ್ಪಿಸಿಕೊಳ್ಳಲು ಅನ್ಯ ಮಾರ್ಗಗಳಿಲ್ಲ. ಹಿತೈಷಿಗಳು, ಸ್ನೇಹಿತರು, ಗುರುಗಳು, ಬಂಧುಗಳು, ಮಧ್ಯವರ್ತಿಗಳು, ಪುರೋಹಿತರು, ಕೊನೆಯಲ್ಲಿ ದೇವರೂ ಸಹ ನಮ್ಮನ್ನು ನಮ್ಮ ಕರ್ಮಗಳ ಫಲವನ್ನು ಅನುಭವಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಬೆನ್ನಿಗಂಟಿದ ಕರ್ಮವನ್ನು ಅನುಭವಿಸಿ ಕಳೆದುಕೊಳ್ಳಲು ಮಾತ್ರ ಸಾಧ್ಯ. ಆದ್ದರಿಂದ ಜೀವನದ ಆಟವನ್ನು ಎಚ್ಚರಿಕೆಯಿಂದ ಆಡಿದರೆ ಮಾತ್ರ ನಾವು ಗೆಲ್ಲುತ್ತೇವೆ, ಇಲ್ಲದಿದ್ದರೆ ಸೋಲುತ್ತೇವೆ. ನಾವು ದೇವರ ಕೈಯಲ್ಲಿ ಆಡುವ ಗೊಂಬೆಗಳಲ್ಲ, ದೇವರ ಸಾಕ್ಷಿಯಾಗಿ ಆಟ ಆಡುವ ಆಟಗಾರರು! ಚೆನ್ನಾಗಿ ಆಡೋಣ!
-ಕ.ವೆಂ.ನಾಗರಾಜ್.

ಮಂಗಳವಾರ, ಅಕ್ಟೋಬರ್ 10, 2017

ಅಪರಿಗ್ರಹ ಮತ್ತು ಅಪಾರಗ್ರಹಣ


     ಮನಸ್ಸಿನಲ್ಲಿ ಏನೋ ಒಂದು ಆಸೆ ಇರುತ್ತದೆ. ಅದು ಈಡೇರಿದಾಗ ಸಂತೋಷವಾಗುತ್ತದೆ. ಆದರೆ ಅಲ್ಲಿಗೆ ಮುಗಿಯುವುದಿಲ್ಲ, ಇನ್ನೂ ಮುಂದಿನದನ್ನು ಪಡೆಯುವ ಆಸೆ ಹುಟ್ಟುತ್ತದೆ. ಅತೃಪ್ತಿ ಸಂತೋಷದ ಜಾಗವನ್ನು ಕಬಳಿಸಿಬಿಡುತ್ತದೆ. ಪುನಃ ಹೆಚ್ಚಿನದಕ್ಕಾಗಿ ಕಷ್ಟಪಡುತ್ತೇವೆ. ಇದು ಮುಗಿಯುವುದೆಂದು? ಎಲ್ಲಿಯವರೆಗೆ ನಮಗೆ ಸಾಕು ಅನ್ನಿಸುವುದಿಲ್ಲವೋ ಅಲ್ಲಿಯವರೆಗೆ ಇದು ಇದ್ದೇ ಇರುತ್ತದೆ. ಸಾಕು ಅನ್ನಿಸಿದಾಗ ತೃಪ್ತಿ ನೆಲೆಸುತ್ತದೆ. ಇಂದಿನ ಪ್ರಪಂಚದಲ್ಲಿ ಸಂತೋಷ, ತೃಪ್ತಿ, ಆಂತರಿಕ ಶಾಂತಿ ಮತ್ತು ಆನಂದಗಳನ್ನು ಅನುಭವಿಸುವುದು ದುಸ್ತರವೆನ್ನಿಸುವ ಸ್ಥಿತಿ ಇದೆ. ಆಂತರಿಕ ಶಾಂತಿ, ಸಂತೋಷಗಳನ್ನು ಹುಡುಕುವುದೇ ಮಾನವರ ನಿರಂತರವಾದ ಕೆಲಸವಾಗಿದ್ದು, ಸುಯೋಗ್ಯ ದಾರಿಯಲ್ಲಿ ಸಾಗಿ ಸಫಲರಾಗುವವರು ಕೆಲವರು ಮಾತ್ರ.
     ಸಾಕು ಅನ್ನಿಸಿದರೆ ತೃಪ್ತಿಯ ಹಂತ ತಲುಪಿದಂತೆ ಅನ್ನುವುದು ಸರಿ. ಈ ಸಾಕು ಅನ್ನುವ ಭಾವನೆ ಬೆಳೆಸಿಕೊಳ್ಳಲು ಅನುಸರಿಸಬೇಕಾದ ಒಂದು ನೈತಿಕ ಗುಣ ಮತ್ತು ಆಂತರಿಕ ಕಟ್ಟುಪಾಡೇ ಅಪರಿಗ್ರಹ. ಅಪರಿಗ್ರಹವೆಂದರೆ ಅಸಂಗ್ರಹ, ತನ್ನದೆಂಬ ಭಾವರಾಹಿತ್ಯ ಮತ್ತು ನಿರ್ಲಿಪ್ತತೆ ಎಂಬ ಆರ್ಥಗಳಿವೆ. ಹಾಗಾದರೆ ನಾವು ಏನನ್ನೂ ಕೂಡಿಡಲೇಬಾರದೆ? ನಿರಾಸಕ್ತರಾಗಿ ಚಿಂದಿ ಬಟ್ಟೆ ತೊಟ್ಟು ಬೀದಿಯಲ್ಲಿ ಅಲೆದಾಡಬೇಕೆ? ಅಪರಿಗ್ರಹವೆಂದರೆ ಹೀಗೂ ಅಲ್ಲ. ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ಜನರನ್ನು ಮತ್ತು ಅವರ ಸ್ವಭಾವಗಳನ್ನು ಗಮನಿಸುತ್ತೇವಲ್ಲವೆ? ತಮೋಗುಣದವರು ಆಲಸಿಕರಾಗಿದ್ದರೆ, ರಜೋಗುಣದವರು ಮುನ್ನುಗ್ಗುವ, ರೋಷಾವೇಶದ ಸ್ವಭಾವದವರಾಗಿರುತ್ತಾರೆ. ಆದರೆ ಸಾತ್ವಿಕ ಗುಣದವರು ಮಾದರಿಯಾಗಿದ್ದು, ಅವರಲ್ಲಿ ತಮಸ್ ಮತ್ತು ರಜಸ್ ಗುಣಗಳ ಹಿತವಾದ ಸಾಂಗತ್ಯವಿರುತ್ತದೆ. ಭೌತಿಕ ಸಂಪತ್ತಿನ ಬಗ್ಗೆ ವೈರಾಗ್ಯ ತಳೆದು ವಾಸದ ಮನೆಯನ್ನೂ ತೊರೆದು, ದೇಹವನ್ನು ಬೆಚ್ಚಗಿಡುವ ಬಟ್ಟೆಗಳನ್ನೂ ವರ್ಜಿಸುವವರು ಅತಿರೇಕದ ಒಂದು ಕೊನೆಯಲ್ಲಿದ್ದರೆ, ಬಂದದ್ದೆಲ್ಲವನ್ನೂ ಕೂಡಿಡುತ್ತಾ, ಹೊರಗೆ ಹೋಗಲು ಬಿಡದ, ಅಗತ್ಯಕ್ಕಿಂತಲೂ ಹೆಚ್ಚು ಸಂಪತ್ತನ್ನು ಸಂಗ್ರಹಿಸುತ್ತಲೇ ಹೋಗುವವರು ಅತಿರೇಕದ ಮತ್ತೊಂದು ಕೊನೆಯಲ್ಲಿರುತ್ತಾರೆ. ಸಾತ್ವಿಕ ಗುಣದವರು ತಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಹೊಂದಿ ತೃಪ್ತರಾಗುತ್ತಾರೆ. ಇದು ಅಪರಿಗ್ರಹದ ಆದರ್ಶ ಸ್ಥಿತಿ. 
     ನಮಗೆ ಜೀವಿಸಲು ಎಷ್ಟು ಅಗತ್ಯ ಮತ್ತು ಏನು ಅಗತ್ಯ? ನಮಗೆ ಅನುಕೂಲಕರವಾಗಿರಲು, ರಕ್ಷಣೆಯಿರಲು, ಆರೋಗ್ಯದಿಂದ ಇರಲು, ಉತ್ತಮ ಶಿಕ್ಷಣ ಹೊಂದಲು, ಇತ್ಯಾದಿ ಮೂಲಭೂತ ಅಗತ್ಯವಿರುವ ಸಂಗತಿಗಳು ಇರಬೇಕು. ಈ ಅಗತ್ಯ ಅನ್ನುವುದು ವಿಚಿತ್ರವಾಗಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಗತ್ಯವಾಗುತ್ತದೆ. ಆಡಳಿತಗಾರರಿಗೆ, ಅಧಿಕಾರಿಗಳಿಗೆ, ಸಾಮಾನ್ಯರಿಗೆ ಅವರ ಅಗತ್ಯಗಳು ಬೇರೆಯದೇ ಆಗಿರುತ್ತವೆ. ನಾನು ಉಪತಹಸೀಲ್ದಾರನಾಗಿದ್ದಾಗ ಒಂದು ಮೊಪೆಡ್ ಹೊಂದಿದ್ದೆ. ನನ್ನ ಅಗತ್ಯಗಳಿಗೆ ಅದು ಸಾಕಿತ್ತು. ನನ್ನ ಡಿಗ್ನಿಟಿಗೆ ತಕ್ಕಂತೆ ಬೈಕು ತೆಗೆದುಕೊಳ್ಳಲು ಹಲವರು ಸೂಚಿಸುತ್ತಿದ್ದರು. ೫-೬ ವರ್ಷಗಳ ನಂತರ ಒಂದು ಸುಜುಕಿ ಸಮುರಾಯ್ ತೆಗೆದುಕೊಂಡು ನನ್ನ ಡಿಗ್ನಿಟಿ ಹೆಚ್ಚಿಸಿಕೊಂಡಿದ್ದೆ! ತಹಸೀಲ್ದಾರನಾದ ಮೇಲೆ ಸರ್ಕಾರಿ ವಾಹನವೇ ಇತ್ತಾದ್ದರಿಂದ ಡಿಗ್ನಿಟಿಗೆ ಧಕ್ಕೆಯಾಗಿರಲಿಲ್ಲ. ನಿಜ, ಒಬ್ಬ ಪ್ರಧಾನ ಮಂತ್ರಿಗೆ, ಒಂದು ದೊಡ್ಡ ಕಂಪೆನಿಯ ಮಾಲಿಕನಿಗೆ, ಗಣ್ಯರು ಮತ್ತು ಉನ್ನತ ಸ್ಥಾನಗಳಲ್ಲಿರುವವರಿಗೆ ಕೆಲವು ಹೆಚ್ಚಿನ ಅಗತ್ಯಗಳು ಅವರ ಸ್ಥಾನಮಾನಗಳಿಗೆ ತಕ್ಕಂತೆ ಇರಬೇಕಾಗುತ್ತದೆ, ಅವರುಗಳು ಇಷ್ಟಪಡಲಿ, ಇಷ್ಟಪಡದಿರಲಿ.
     ಅಪರಿಗ್ರಹದ ವಿಚಾರ ಚರ್ಚಿಸುವಾಗ ಅಪಾರಗ್ರಹಣದ ಅನಾನುಕೂಲಗಳನ್ನೂ ಗಮನಿಸೋಣ. ಹೆಚ್ಚಿನ ಹಣ, ಸಂಪತ್ತು, ಆಸ್ತಿ ಇತ್ಯಾದಿಗಳನ್ನು ಹೊಂದಿದವರಿಗೆ ಅವುಗಳ ರಕ್ಷಣೆ ಮತ್ತು ಉಳಿಸಿಕೊಳ್ಳುವ ಬಗ್ಗೆ ಗಮನವಿರಬೇಕಾಗುತ್ತದೆ, ಅವು ಎಲ್ಲಿ ಹಾಳಾಗುವುವೋ, ನಷ್ಟ ಹೊಂದುವವೋ ಎಂಬ ಆತಂಕ ಸಹ ಇರುತ್ತದೆ. ಕೆಲವು ವರ್ಷದ ಹಿಂದೆ ನಡೆದಿದ್ದ ಘಟನೆಯಿದು. ತನ್ನ ಮಗು ಕಾರಿನ ಗಾಜಿನ ಮೇಲೆ ಕಲ್ಲಿನಿಂದ ಗೀಚಿತೆಂದು ಕೋಪದ ಭರದಲ್ಲಿ ಅದೇ ಕಲ್ಲಿನಿಂದ ಪುಟ್ಟ ಮಗುವಿನ ಕೈಯನ್ನು ಜಜ್ಜಿದ್ದ ಒಬ್ಬ ತಂದೆ. ನಂತರ ಅರಿವು ಬಂದು ಆಸ್ಪತ್ರೆಗೆ ಕರೆದೊಯ್ದಾಗ ಮಗುವಿನ ಮುಂಗೈಯನ್ನೇ ಕತ್ತರಿಸಬೇಕಾಗಿ ಬಂದಿತ್ತು. ಮಗು ತಾನು ದೊಡ್ಡ ತಪ್ಪು ಮಾಡಿದ್ದ ಭಾವನೆಯಿಂದ ಹೊರಬಂದಿರಲಿಲ್ಲ. ಇದೇ ರೀತಿ ಕಾರನ್ನೂ ರಿಪೇರಿ ಮಾಡಿಸಬಹುದಾ ಅಪ್ಪಾ? ಎಂದು ಅಪ್ಪನನ್ನು ಕೇಳಿತ್ತು! ಹೊಂದಿದ ಸಂಪತ್ತಿನ ರಕ್ಷಣೆಯ ಒತ್ತಡದಿಂದ ಅಥವ ಸಂಪತ್ತಿನ ನಷ್ಟದಿಂದ ಬದುಕು ಸಂತೋಷವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಅಪರಿಗ್ರಹ ಇಂತಹ ಸಂಗತಿಗಳ ಬಗ್ಗೆ ಹೆಚ್ಚು ಕೇಂದ್ರೀಕೃತವಾಗದಿರಲು ಹೇಳುತ್ತದೆ. ಅಪಾರಗ್ರಹಣದ ಭೀಕರ ಫಲವನ್ನು ನಮ್ಮ ದೇಶ ಎದುರಿಸುತ್ತಿದೆ. ಅಕ್ರಮ ಮಾರ್ಗದಿಂದ ಮೊದಲು ಸಾಮಾನ್ಯರಂತಿದ್ದ ಹಲವಾರು ರಾಜಕಾರಣಿಗಳು ಇಂದು ಲೆಕ್ಕವಿಲ್ಲದಷ್ಟು ಕೋಟಿ ಕೋಟಿ ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದು ಕೊಬ್ಬಿದ್ದಾರೆ ಮತ್ತು ಅದರ ಬಲದಿಂದಲೇ ಅಧಿಕಾರ ಉಳಿಸಿಕೊಳ್ಳುತ್ತಿದ್ದಾರೆ ಮತ್ತು ಉಳಿಸಿಕೊಳ್ಳಲು ಎಂತಹ ಹೇಯ ಮಾರ್ಗವನ್ನೂ ಅನುಸರಿಸುತ್ತಾರೆ.                  ಇವರುಗಳ ಕಪಿಮುಷ್ಟಿಯಿಂದ ಪಾರಾಗುವುದು ಸಾಮಾನ್ಯ ಜನತೆಗೆ ಸಾಧ್ಯವಿಲ್ಲದೆ ದೇಶ ಅಧೋಗತಿಗೆ ಜಾರುತ್ತಿದೆ.
     ಅಪರಿಗ್ರಹದ ಪ್ರಬಲ ಬೆಂಬಲಿಗ ಗಾಂಧೀಜಿಯವರ ಅನಿಸಿಕೆಯಿದು: ನನ್ನ ಹೆಗಲ ಮೇಲೆ ಬಿದ್ದ ಹೊರೆಯಿಂದಾಗಿ ಆರಾಮವಾಗಿ ನಡೆಯಲಾಗುತ್ತಿಲ್ಲ ಮತ್ತು ಸಹಜನರ ಸೇವೆಯನ್ನು ಸುಸೂತ್ರವಾಗಿ ಮತ್ತು ಸಂತೋಷದಿಂದ ಮಾಡಲಾಗುತ್ತಿಲ್ಲವೆಂದು ನನಗೆ ಭಾಸವಾಗುತ್ತಿತ್ತು. ಯಾವುದನ್ನೇ ಆಗಲಿ ಹೊಂದುವುದು ತ್ರಾಸದಾಯಕ ಮತ್ತು ಹೊರೆ. ಮೂಲವನ್ನು ಹುಡುಕಿದಾಗ ನನಗೆ ಕಂಡದ್ದೇನೆಂದರೆ, ಯಾವುದನ್ನಾದರೂ ನನ್ನ ಸ್ವಂತದ್ದೆಂದು ಇಟ್ಟುಕೊಂಡರೆ, ಅದನ್ನು ಇಡೀ ಪ್ರಪಂಚದ ವಿರುದ್ಧ ರಕ್ಷಿಸಬೇಕಿತ್ತು. ಯಾರಾದರೂ ಅದನ್ನು ಬಯಸಿದರೆ, ಅವರು ಕೆಟ್ಟ ಉದ್ದೇಶದಿಂದ ಮಾಡಿರಲಾರರು; ಅವರಿಗೆ ನನಗಿಂತ ಹೆಚ್ಚಿನ ಅವಶ್ಯಕತೆ ಇದ್ದೀತು. ಹೊಂದುವುದು ನನಗೆ ಅಪರಾಧದಂತೆ ತೋರುತ್ತದೆ. ಇತರರು ಹೊಂದಲು ಸಾಧ್ಯವಿರುವಂತಹ ವಸ್ತುಗಳನ್ನಷ್ಟೇ ನಾನೂ ಹೊಂದಬಹುದು. ಅದು ಅಸಾಧ್ಯವೇ ಅರಿ.  ಆದ್ದರಿಂದ ಎಲ್ಲರೂ ಹೊಂದಬಹುದಾದ ಒಂದೇ ವಸ್ತುವೆಂದರೆ ಏನನ್ನೂ ಹೊಂದದಿರುವುದು ಅಥವ ಇಚ್ಛಾಪೂರ್ವಕ ಸಮರ್ಪಣ. ಸರಳತೆಗೆ ಹೆಸರಾಗಿದ್ದ ದಿ. ಲಾಲಬಹಾದುರ ಶಾಸ್ತ್ರಿಯವರು ತಮ್ಮ ಪತ್ನಿ ಮನೆ ಖರ್ಚು ಕಳೆದು ಹತ್ತು ರೂ. ಉಳಿಸಿದ್ದು ತಿಳಿದಾಗ ತಮ್ಮ ಸಂಬಳದಲ್ಲಿ ಹತ್ತು ರೂ. ಕಡಿಮೆ ಮಾಡಲು ತಮ್ಮ ಕಾರ್ಯದರ್ಶಿಗೆ ತಿಳಿಸಿದ್ದರಂತೆ. ಇನ್ನೊಬ್ಬ ಪ್ರಧಾನಿ ದಿ. ಗುಲ್ಜಾರಿಲಾಲ್ ನಂದಾರವರು ತಮ್ಮ ಅಂತ್ಯಕಾಲವನ್ನು ಒಂದು ಗುಡಿಸಲಿನಲ್ಲಿ ಸರಳವಾಗಿ ಕಳೆದಿದ್ದರು. ಇಂತಹ ವ್ಯಕ್ತಿತ್ವದವರು ಇಂದಿಗೂ ನಮ್ಮ ನಡುವೆ ಕಂಡುಬರುತ್ತಾರೆ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರೂ ಇಂತಹ ವ್ಯಕ್ತಿತ್ವದವರೇ! ಭೌತಿಕ ಸಂಪತ್ತು, ಸ್ವಂತ ಜೀವನವನ್ನು ಬದಿಗೊತ್ತಿ ದೇಶಕಾರ್ಯದ ಸಲುವಾಗಿ, ಸಮಾಜದ ಉನ್ನತಿಗಾಗಿ, ಸರ್ವರ ಒಳಿತಿಗಾಗಿ ಜೀವನವನ್ನೇ ಮೀಸಲಿರಿಸಿರುವ ಸಾವಿರಾರು ಜೀವಗಳಿವೆ. ನಮಗೆ ನೋಡುವ ಕಣ್ಣುಗಳಿರಬೇಕು ಅಷ್ಟೆ.
     ಅನುಗಾಲವೂ ಚಿಂತೆ ಜೀವಕೆ ಎಂದು ಹಾಡಿದ ಪುರಂದರದಾಸರ ವೈಯಕ್ತಿಕ ಜೀವನವೇ ಅಪರಿಗ್ರಹದ ಔನ್ನತ್ಯಕ್ಕೆ ಮಾದರಿಯಾಗಿದೆ. ಅಂದಿನ ಕಾಲಕ್ಕೆ ಅತ್ಯುನ್ನತ ಶ್ರೀಮಂತರೆನಿಸಿ ನವಕೋಟಿ ನಾರಾಯಣರೆಂಬ ಹೆಸರಿದ್ದ ಅವರು ಕಡುಲೋಭಿಯಾಗಿದ್ದು ತಾವೂ ನೆಮ್ಮದಿಯಾಗಿರದೆ ತಮ್ಮ ಕುಟುಂಬದವರನ್ನೂ ನೆಮ್ಮದಿಯಾಗಿ ಇರಲು ಬಿಡದಿದ್ದವರು. ಇಂತಹವರು ದೈವಪ್ರೇರಣೆಯಿಂದ ಪತ್ನಿಯ ಮೂಲಕವಾಗಿ ಭೌತಿಕ ಸಂಪತ್ತಿನ ಮೂಲಕ ಸುಖವಾಗಿರಲಾರೆನೆಂಬುದನ್ನು ಮನಗಂಡು, ಅಕ್ಷರಶಃ ತಮ್ಮ ಸಂಪತ್ತೆಲ್ಲವನ್ನೂ ತ್ಯಜಿಸಿ ಹೊರಬಂದು ಬರಿಗೈಯಲ್ಲಿ ತಂಬೂರಿ, ತಾಳ ಹಿಡಿದು ಸಂತಸಪಟ್ಟವರು. ಕಳೆದುಕೊಳ್ಳಲು ಏನೂ ಇರದಾಗ ಮುಂದೆ ಎಲ್ಲಾ ಗಳಿಸುವುದೇ ಆಗಿರುತ್ತದೆ ಎಂದು ಸಾರಿದವರು. 
     ಸಾರಾಂಶ: ಅಪರಿಗ್ರಹವು ಕಳೆದುಹೋಗಬಹುದಾದ, ನಷ್ಟವಾಗಬಹುದಾದ ಸಂಗತಿಗಳ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸದೆ, ಕಳೆಯಲಾಗದ ಸಂಗತಿಗಳ ಬಗ್ಗೆ ಕೇಂದ್ರೀಕರಿಸಲು ಸೂಚಿಸುತ್ತದೆ. ಕಳೆದುಹೋಗದ, ನಷ್ಟವಾಗದ ಸಂಗತಿಗಳಾದರೂ ಯಾವುವು? ನಿಷ್ಕಲ್ಮಶ ಪ್ರೀತಿ, ಸುತ್ತಲಿನ ಜೀವಜಗತ್ತು, ಪ್ರಕೃತಿಯ ಕುರಿತು ಕಾಳಜಿ, ಸುಮನಸ್ಸಿನಿಂದ, ಸದುದ್ದೇಶದಿಂದ ಮಾಡುವ ಒಳ್ಳೆಯ ಕೆಲಸಗಳು, ಇತರರಿಗೆ ಹಿತವೆನಿಸುವ ನಡವಳಿಕೆಗಳು, ಮನಸ್ಸನ್ನು ಶಾಂತಗೊಳಿಸುವ ಪ್ರಯತ್ನಗಳು, ಆತ್ಮನನ್ನು ಅರಿಯುವ, ಅಂತರಂಗದ ಕರೆಗೆ ಓಗೊಡುವ ಮನಸ್ಥಿತಿಗಳು ಕಳೆದುಹೋಗುವ ಸಂಗತಿಗಳಲ್ಲ. ಅತ್ಯಂತ ಬಡವನೆನಿಸಿಕೊಂಡವನೂ ಸಹ ಇತರರಿಗೆ ಒಳ್ಳೆಯ ಮಾತನಾಡಬಲ್ಲ, ಸಹಾಯ ಮಾಡಬಲ್ಲ! ಅಂತರಂಗದ ಶುದ್ಧತೆಗೆ ಅಪರಿಗ್ರಹ ಅತ್ಯುತ್ತಮ ಸಾಧನವಾಗಿದೆ.
-ಕ.ವೆಂ.ನಾಗರಾಜ್.

ಭಾನುವಾರ, ಅಕ್ಟೋಬರ್ 8, 2017

ಚಾರ್ವಾಕ ವಿಚಾರಧಾರೆ


     ರಸ್ತೆ ಬದಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಇಬ್ಬರು ವ್ಯಾಪಾರಿಗಳು ಜಗಳವಾಡುತ್ತಿದ್ದರು. ಒಬ್ಬ ವ್ಯಾಪಾರಿ ಗುಲಾಬಿ ಹೂವು ಮಾರುವವನಾಗಿದ್ದರೆ ಇನ್ನೊಬ್ಬ ಮಲ್ಲಿಗೆಯನ್ನು ಪ್ರಧಾನವಾಗಿ ಮಾರುತ್ತಿದ್ದವನು. ಜಗಳ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸಿದರು. ಜನರಲ್ಲೂ ಎರಡು ಗುಂಪುಗಳಾಗಿ ಕೆಲವರು ಗುಲಾಬಿ ಹೂವಿನ ವ್ಯಾಪಾರಿಯನ್ನು ಬೆಂಬಲಿಸಿದರೆ ಕೆಲವರು ಇನ್ನೊಬ್ಬನನ್ನು ಬೆಂಬಲಿಸಿದರು. ಪೊಲೀಸರು ಬಂದರು, ಲಾಠಿ ಚಾರ್ಜ್ ಆಯಿತು, ಹಲವರ ಬಂಧನವೂ ಆಯಿತು. ಗುಲಾಬಿ ಹೂವು ಶ್ರೇಷ್ಠವೋ, ಮಲ್ಲಿಗೆ ಹೆಚ್ಚೋ ಎಂಬ ವಿವಾದ ಹುಟ್ಟಿಕೊಂಡಿತು. ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು, ಪರಸ್ಪರ ದೂಷಣೆಗಳು ತಾರಕಕ್ಕೇರಿದವು. ಗುಲಾಬಿ ಹೆಚ್ಚು ಅನ್ನುವವರು, ಮಲ್ಲಿಗೆಯೇ ಶ್ರೇಷ್ಠ ಎನ್ನುವವರು, ಎರಡು ಹೂವುಗಳೂ ನಮಗೆ ಇಷ್ಟ ಅನ್ನುವವರು, ರಗಳೆಯೇ ಬೇಡ, ಎರಡೂ ಬೇಡ ಅನ್ನುವವರು, ಇದನ್ನೇ ಅವಕಾಶವಾಗಿಸಿ ಮೂರನೆಯ ಹೂವಿಗೆ ಮನ್ನಣೆ ಕೊಡುವ ಮಾತುಗಳೂ ಹರಿದಾಡಿದವು. ಗೊಂದಲಮಯ ವಾತಾವರಣದಿಂದ ಶಾಂತಿ ಕದಡಿಹೋಯಿತು. ಜನರೂ ಪಂಗಡಗಳಾಗಿ ಹಂಚಿಹೋಗಿ ಹಾದಿ-ಬೀದಿ ರಂಪಗಳು ಸಾಮಾನ್ಯವಾದವು. ಇಂದು ಸಮಾಜದಲ್ಲಿ ನಡೆಯುತ್ತಿರುವ ವಿವಿಧ ಜಾತಿ-ಮತ-ಪಂಥ-ವಿಚಾರಗಳ ಸಂಘರ್ಷವೂ ಇದೇ ರೀತಿಯದೆಂದು ಹೇಳುವ ಸಲುವಾಗಿ ಈ ಕಲ್ಪಿತ ಘಟನೆಯನ್ನು ಪ್ರಸ್ತಾಪಿಸಿದೆ.
     ಹೂತೋಟದಲ್ಲಿ ಬಗೆ ಬಗೆಯ ಬಣ್ಣದ, ಗಾತ್ರದ, ಪರಿಮಳದ ವಿವಿಧ ಹೂವಿನ ಗಿಡಗಳಿದ್ದರೆ ಎಷ್ಟು ಸುಂದರವಾಗಿ ತೋರುತ್ತದೆ! ಹತ್ತು ಹಲವು ಹೂವುಗಳನ್ನು ಪೋಣಿಸಿ ಮಾಲೆ ಮಾಡಿದರೆ ಎಷ್ಟು ಸೊಗಸಾಗಿರುತ್ತದೆ! ಒಂದೇ ಬಗೆಯ ಹೂವು ಇರಬೇಕು, ಇತರ ಎಲ್ಲಾ ಹೂವಿನ ಗಿಡಗಳನ್ನು ನಾಶ ಮಾಡಬೇಕು ಎಂದು ಶಪಥ ಮಾಡಿ ಯಾರಾದರೂ ಹೊರಟರೆ ಅವರನ್ನು ಏನೆನ್ನಬೇಕು? ಅಂತಹವರಿಗೆ ವಿವೇಕ ಹೇಳಬೇಕು, ಮನ ಒಲಿಸಬೇಕು, ಬಗ್ಗದಿದ್ದರೆ ಹೆದರಿಸಬೇಕು, ಅದಕ್ಕೂ ಮಣಿಯದಿದ್ದರೆ ದಂಡಿಸಲೇಬೇಕು. ಈ ಭಾರತ ದೇಶದಲ್ಲಿ ಹೆಚ್ಚಿನವರು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಮನೋಭಾವದವರೆಂಬುದು ಸಮಾಧಾನಕರ ಸಂಗತಿ. ಇದನ್ನು ಹದಗೆಡಿಸುವ ಶಕ್ತಿಗಳು ಅಪಾಯಕಾರಿಯಾಗಿ ಕಾರ್ಯಪ್ರವೃತ್ತವಾಗಿದ್ದರೂ ಅದನ್ನು ಎದುರಿಸುವವರೂ ಜಾಗೃತರಾಗಿರುವುದು ಒಳ್ಳೆಯ ಬೆಳವಣಿಗೆ.  
     ಇಷ್ಟೆಲ್ಲಾ ಪೀಠಿಕೆಗೆ ಕಾರಣವೂ ಇದೆ. ಈ ದೇಶದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ಬೌದ್ಧ, ಜೈನ, ಸಿಖ್ ಇತ್ಯಾದಿ ಹಲವು ಜಾತಿ, ಮತ, ಧರ್ಮಗಳ ಅನುಯಾಯಿಗಳ ಜೊತೆಗೆ ದೇವರೇ ಇಲ್ಲ ಎನ್ನುವ ಚಾರ್ವಾಕ ಮನೋಭಾವದವರೂ ಇದ್ದಾರೆ. ಚಾರ್ವಾಕ ಮನೋಭಾವದವರು ಎಂದು ಹೇಳಿದ್ದೇಕೆಂದರೆ, ಚಾರ್ವಾಕರು ಎಂದು ತಮ್ಮನ್ನು ಕರೆದುಕೊಳ್ಳುವ ಪ್ರತ್ಯೇಕ ಪಂಗಡಗಳು ಕಂಡು ಬರದಿದ್ದರೂ ಈ ಮನೋಭಾವ ಹೊಂದಿದವರು ಗಣನೀಯವಾಗಿ ಕಂಡುಬರುತ್ತಾರೆ. ಚಾರ್ವಾಕರು ಅಂದರೆ ಯಾರು, ಅವರ ವಿಚಾರಗಳೇನು ಎಂಬುದನ್ನು ತಿಳಿಸುವ ಪ್ರಯತ್ನ ಇಲ್ಲಿ ಮಾಡಿದ್ದು, ಇದನ್ನು ಖಂಡಿಸುವುದಾಗಲೀ, ಸಮರ್ಥಿಸುವುದಾಗಲೀ ಉದ್ದೇಶವಿಲ್ಲ. 
     ಮಾಧವಾಚಾರ್ಯ ಎಂಬ ಪೂರ್ವಾಶ್ರಮದ ಹೆಸರು ಹೊಂದಿದ್ದ ವಿದ್ಯಾರಣ್ಯರು ಹಕ್ಕ-ಬುಕ್ಕರನ್ನು ಮುಂದಿಟ್ಟುಕೊಂಡು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದದ್ದು, ಶ್ರೀ ಶೃಂಗೇರಿ ಶಾರದಾಪೀಠದ 12ನೆಯ ಗುರುಗಳಾಗಿದ್ದುದು ತಿಳಿದ ಸಂಗತಿಯೇ ಆಗಿದೆ. ವಿದ್ಯಾರಣ್ಯರು ಸರ್ವ ದರ್ಶನ ಸಂಗ್ರಹ ಎಂಬ ಕೃತಿಯಲ್ಲಿ 14ನೆಯ ಶತಮಾನದಲ್ಲಿ ಭಾರತದಲ್ಲಿ ಪ್ರಚಲಿತವಿದ್ದ ವಿವಿಧ ಮತಗಳ ದರ್ಶನವನ್ನು ಸಂಗ್ರಹಿಸಿದ್ದಾರೆ. ಚಾರ್ವಾಕ, ಬೌದ್ಧ, ಜೈನ, ವೈಷ್ಣವ, ಶೈವ, ಸಾಂಖ್ಯ, ಪಾತಂಜಲ ಇತ್ಯಾದಿ 16 ಪದ್ಧತಿಗಳ ಬಗ್ಗೆ ವಿವರಿಸಿದ್ದು, ಪ್ರತಿಯೊಂದರ ಬಗ್ಗೆ ಹೇಳುವಾಗ ಆಯಾ ಪದ್ಧತಿಗಳ ವಕ್ತಾರರಂತೆ ಮಂಡಿಸಿರುವುದು ಅವರ ಸರ್ವವಿಚಾರ ಸಮಾನತೆಯ ಗೌರವವನ್ನು ಹೊಂದಿರುವುದನ್ನು ತೋರಿಸುತ್ತದೆ. ಪೀಠಿಕೆಯಲ್ಲಿ ಅವರು ಗುಣವುಳ್ಳ ಸಜ್ಜನರು ಪೂರ್ವಾಗ್ರಹಗಳನ್ನು ಬದಿಗಿಟ್ಟು ಇವುಗಳನ್ನು ಗ್ರಹಿಸಲು ಕೋರಿದ್ದು, ಯಾರು ತಾನೇ ವಿವಿಧ ಹೂವುಗಳನ್ನು ಸೇರಿಸಿ ಮಾಡಿದ ಮಾಲೆಯನ್ನು ಇಷ್ಟಪಡುವುದಿಲ್ಲವೆಂದು ಪ್ರಶ್ನಿಸಿದ್ದಾರೆ. ಮೊದಲನೆಯ ಅಧ್ಯಾಯವೇ ಚಾರ್ವಾಕ ಪದ್ಧತಿಯ ದರ್ಶನ ಮಾಡಿಸುತ್ತದೆ. ಇದನ್ನು ಆಧರಿಸಿ ಚಾರ್ವಾಕರ ವಿಚಾರಗಳನ್ನು ಸಂಕ್ಷಿಪ್ತವಾಗಿ ಮುಂದೆ ತಿಳಿಸಿದೆ. 
ಚಾರ್ವಾಕ ವಿಚಾರಧಾರೆಯ ಪ್ರಮುಖ ಅಂಶಗಳು:
1. ದೇವರ ಅಸ್ತಿತ್ವಕ್ಕೆ ಆಧಾರವಿಲ್ಲ. 
2. ಇರುವ ಜೀವನವನ್ನು ಸಂತೋಷವಾಗಿ ಕಳೆಯಿರಿ. ಸಾವು ನಿಶ್ಚಿತವಿರುವಾಗ ಮತ್ತು ದೇಹ ಭಸ್ಮವಾದ ನಂತರ ಮತ್ತೆ ಹೇಗೆ ಬರಲು ಸಾಧ್ಯ? ಸಂಪತ್ತು ಗಳಿಸುವುದು, ಬಯಕೆಗಳನ್ನು ಈಡೇರಿಸಿಕೊಳ್ಳುವುದು ಇಷ್ಟೇ ಮಹತ್ವದ್ದಾಗಿದೆ. ಇನ್ನೊಂದು ಭವಿಷ್ಯತ್ತಿನ ಪ್ರಪಂಚ ಇಲ್ಲ.
3. ನಾಲ್ಕು ತತ್ವಗಳಾದ ಭೂಮಿ, ನೀರು, ಗಾಳಿ ಮತ್ತು ಬೆಂಕಿಗಳಿಂದ ಶರೀರ ಉತ್ಪತ್ತಿಯಾಗುವುದಿದ್ದು, ಬುದ್ಧಿಶಕ್ತಿಯೂ ಉತ್ಪತ್ತಿಯಾಗುತ್ತದೆ ಮತ್ತು ಶರೀರದ ನಾಶದೊಂದಿಗೆ ಅದೂ ನಾಶವಾಗುತ್ತದೆ. ಆತ್ಮ ಎಂಬುದು ಪ್ರತ್ಯೇಕವಾದುದಾಗಿರದೆ ಶರೀರದೊಂದಿಗೆ ಜನಿಸುವ ಬುದ್ಧಿಶಕ್ತಿಯೇ ಆಗಿದೆ. ಆತ್ಮ ಎಂಬುದು ಪ್ರತ್ಯೇಕ ಎಂಬುದಕ್ಕೆ ಯಾವುದೇ ಆಧಾರವಿಲ್ಲ. (ಗಮನಿಸಿ, ಪಂಚಭೂತಗಳಲ್ಲಿ ಒಂದೆಂದು ಪರಿಗಣಿತವಾದ ಆಕಾಶಕ್ಕೆ ಇಲ್ಲಿ ಸ್ಥಾನ ಕೊಟ್ಟಿಲ್ಲ.)
4. ಸಂತೋಷ ಅನುಭವಿಸಬೇಕು. ಇತರರಿಗೆ ತೊಂದರೆಯಾಗುತ್ತದೆ, ಹಿಂಸೆಯಾಗುತ್ತದೆ ಎಂದು ಸಂತೋಷ ಅನುಭವಿಸದಿರುವವರು ಮೂರ್ಖರು. ಅಕ್ಕಿಯನ್ನು ತಿನ್ನಲು ಬತ್ತದ ಮೇಲಿನ ಹೊಟ್ಟು ತೆಗೆದು ಬಿಸಾಕುವುದಿಲ್ಲವೇ? ಅಥವ ಮೀನು ಬಯಸುವವನು ತನಗೆ ಬೇಕಾದುದನ್ನು ಬೇಕಾದಷ್ಟು ತಿಂದು ಮೀನಿನ ಮುಳ್ಳು, ಇತ್ಯಾದಿ ತ್ಯಾಜ್ಯ ಬಿಸಾಕುವುದಿಲ್ಲವೇ? 
5. ವೇದಗಳು ಅಸತ್ಯ, ಸ್ವಾರ್ಥ ಮತ್ತು ಹೇಳಿದ್ದೇ ಹೇಳುವುವಾಗಿವೆ. ವೇದ ಪಂಡಿತರು ಜ್ಞಾನಕಾಂಡವನ್ನು ಬೋಧಿಸುವವರು ಕರ್ಮಕಾಂಡವನ್ನು ವಿರೋಧಿಸುತ್ತಾರೆ, ಕರ್ಮಕಾಂಡ ಹೇಳುವವರು ಜ್ಞಾನಕಾಂಡವನ್ನು ಖಂಡಿಸುತ್ತಾರೆ. ಮುಂದಿನ ಲೋಕದಲ್ಲಿ ಸಂತೋಷ ಸಿಗುವುದಿಲ್ಲವೆಂದಾದರೆ ತಿಳಿದವರು, ಜ್ಞಾನಿಗಳು ಅಗ್ನಿಹೋತ್ರ ಇತ್ಯಾದಿಗಳನ್ನು ಮಾಡಿ ದಣಿಯುವುದೇಕೆ, ತ್ಯಾಗ ಮಾಡುವುದೇಕೆ ಎಂದು ಕೇಳಬಹುದು. ಅವರು ಮಾಡುತ್ತಾರೆಂದ ಮಾತ್ರಕ್ಕೆ ಅದು ಖಚಿತವಾಗುವುದಿಲ್ಲ. ಅದನ್ನು ಅವರು ಹೊಟ್ಟೆಪಾಡಿಗೆ ಮಾಡುತ್ತಾರೆ.
6. ಸ್ವರ್ಗ ಅನ್ನುವುದು ಹೇಗೆ ಇಲ್ಲವೋ, ನರಕ ಅನ್ನುವುದೂ ಇಲ್ಲವೇ ಇಲ್ಲ. ಆಳುವ ರಾಜನೇ ಪರಮೇಶ್ವರ. ದೇಹಾತ್ಮವಾದದಂತೆ ದೇಹದ ಕಪ್ಪು, ಬಿಳುಪು, ಕೃಷ ಇತ್ಯಾದಿಗಳು ದೇಹದೊಂದಿಗೇ ಜೋಡಿಸಲ್ಪಟ್ಟವು. 
7. ಯಾವುದೇ ಘಟನೆಗೆ ಕಾರ್ಯ-ಕಾರಣ ಸಂಬಂಧಗಳಿದ್ದರೂ ಪರೀಕ್ಷಿಸಿ ಒಪ್ಪಬೇಕು. ಮನಸ್ಸು ಸ್ವಂತವಾಗಿ ಹೊರಗಿನ ಸಂಗತಿಗಳನ್ನು ಅರಿಯಬಲ್ಲದೆಂಬುದು ಸರಿಯಲ್ಲ. ಮನಸ್ಸು ದೇಹದ್ದೇ ಭಾಗವಾಗಿದೆ. 
8. ಬೇರೊಬ್ಬರು ಹೇಳಿದರು ಎಂದಾಕ್ಷಣ ಅದನ್ನು ಒಪ್ಪಬೇಕಿಲ್ಲ. ಹೋಲಿಕೆ ಮಾಡಿ ನಿರ್ಧರಿಸಬೇಕಿಲ್ಲ. 
9. ಬೇರೊಂದು ಲೋಕವಿಲ್ಲ, ಮುಕ್ತಿಯಿಲ್ಲ, ಬೇರೊಂದು ಆತ್ಮ ಇಲ್ಲವೇ ಇಲ್ಲ. ಸತ್ತ ಮೇಲೆ ಇನ್ನೊಂದು ಲೋಕಕ್ಕೆ ಹೋಗುತ್ತಾರಾದರೆ, ಅವರು ತಮ್ಮ ಪ್ರೀತಿಪಾತ್ರರ ಸಲುವಾಗಿ ಹಿಂತಿರುಗಿ ಏಕೆ ಬರುವುದಿಲ್ಲ? ಸತ್ತ ಮೇಲೆ ಮಾಡುವ ಕ್ರಿಯೆಗಳೆಲ್ಲಾ ಹೊಟ್ಟೆಪಾಡಿನ ಕ್ರಿಯೆಗಳು. ಯಜ್ಞ-ಯಾಗಗಳಲ್ಲಿ ಮಾಡುವ ಕರ್ಮಗಳು ಭಂಡರು ಕಂಡುಹಿಡಿದಿದ್ದಾಗಿದ್ದು, ಪಂಡಿತರು, ಪೂಜಾರಿಗಳು ತಮ್ಮ ಸಲುವಾಗಿ ಮಾಡುವುದಾಗಿದೆ. 
10. ಯಜ್ಞದಲ್ಲಿ ಬಲಿ ಕೊಡಲಾಗುವ ಪಶು ಸ್ವರ್ಗಕ್ಕೆ ಹೋಗವುದಾದರೆ, ಯಜ್ಞ ಮಾಡುವವರು ತಮ್ಮ ತಂದೆಯನ್ನೇ ಏಕೆ ಬಲಿ ಕೊಡಬಾರದು?
11. ಶ್ರಾದ್ಧ ಮಾಡುವಾಗ ಕೊಡುವ ಪಿಂಡದಿಂದ ಸ್ವರ್ಗದಲ್ಲಿರುವವರು ತೃಪ್ತರಾಗುವುದಾದರೆ, ಮನೆಯ ಕೆಳಭಾಗದಲ್ಲೇ ಆಹಾರ ಕೊಟ್ಟು ಮನೆಯ ಮೇಲೆ ಇರುವವರನ್ನು ತೃಪ್ತಿ ಪಡಿಸಬಹುದಲ್ಲವೇ?
12. ಬದುಕಿದ್ದಾಗ ಸಲ ಮಾಡಿಯಾದರೂ ತುಪ್ಪ ತಿನ್ನಬೇಕು. ಸತ್ತ ಮೇಲೆ ಏನಿದೆ ಮಣ್ಣು? ಮಜಾ ಮಾಡಿ, ಸುಖ ಪಡಿ, ಸಂತೋಷದಿಂದಿರಿ ಎಂಬ ಚಾರ್ವಾಕ ತತ್ವ ಪಾಲಿಸಬೇಕು.
     ಚಾರ್ವಾಕ ಪದ್ಧತಿ ಒಂದು ಪಂಗಡವಾಗಿ ಬೆಳೆದುಬರಲಿಲ್ಲ ಮತ್ತು ಯಾವುದೇ ಒಂದು ಕುಟುಂಬದ ಎಲ್ಲರೂ ಈ ತತ್ವವನ್ನು ಪಾಲಿಸುತ್ತಾರೆ ಎಂಬುದೂ ಇಲ್ಲ. ಆದರೂ ಇಂತಹ ಮನೋಭಾವದ ಜನರು ಅಲ್ಲಲ್ಲಿ ನಮ್ಮ ನಡುವೆ ಕಂಡುಬರುತ್ತಾರೆ. ಅದು ಅವರವರ ವಿವೇಚನಾ ಶಕ್ತಿ ಮತ್ತು ವಿವೇಚನೆಯ ಮಟ್ಟಕ್ಕೆ ಸಂಬಂಧಿಸಿದೆ. ಪ್ರತಿಯೊಂದರಲ್ಲೂ ಒಳ್ಳೆಯದೂ ಇರುತ್ತದೆ, ಕೆಟ್ಟ ಸಂಗತಿಗಳೂ ಇರುತ್ತವೆ. ಒಳ್ಳೆಯದನ್ನು ಗ್ರಹಿಸೋಣ, ಕೆಟ್ಟದ್ದನ್ನು ತ್ಯಜಿಸೋಣ.
-ಕ.ವೆಂ.ನಾಗರಾಜ್.

ಸೋಮವಾರ, ಅಕ್ಟೋಬರ್ 2, 2017

ಸಸ್ಯಾಹಾರವೋ? ಮಾಂಸಾಹಾರವೋ?

     ಈ ಲೇಖನ ಸಸ್ಯಾಹಾರದ ಪರವಾಗಲೀ, ಮಾಂಸಾಹಾರದ ವಿರುದ್ದದ್ದಾಗಲೀ ಅಲ್ಲವೆಂದು ಮೊದಲಿಗೇ ಸ್ಪಷ್ಟಪಡಿಸಿಬಿಡುತ್ತೇನೆ. ಈಗ ಗೋವಧೆ ನಿಷೇಧದ ಕ್ರಮದಿಂದಾಗಿ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಅದರ ಜೊತೆಗೇ ಸಸ್ಯಾಹಾರ ಮತ್ತು ಮಾಂಸಾಹಾರದ ಕುರಿತೂ ವಾಗ್ವಾದಗಳಾಗುತ್ತಿವೆ. ಗೋವಧೆ ನಿಷೇಧಿಸುವುದು ನಮ್ಮ ಆಹಾರದ ಹಕ್ಕನ್ನು ಕಸಿದುಕೊಂಡಂತೆ ಎಂದು ವ್ಯಗ್ರವಾಗಿರುವವರೂ ಇದ್ದಾರೆ. ಮಾಂಸಾಹಾರದ ಪರ ವಾದಿಸುವವರು ಸಸ್ಯಗಳಿಗೂ ಜೀವವಿದೆ, ಸಸ್ಯಾಹಾರವೂ ಹಿಂಸೆಯಿಂದ ಕೂಡಿದೆ ಎಂದು ವಾದ ಮುಂದಿಡುತ್ತಾರೆ. ನನ್ನ ದೃಷ್ಟಿಕೋನದಿಂದ ಆಹಾರದ ವಿಚಾರದಲ್ಲಿ ನನಗೆ ಅನ್ನಿಸಿದ್ದನ್ನು ಮುಂದಿಡುವ ಪ್ರಯತ್ನ ಮಾಡಿದ್ದು, ಇದನ್ನೇ ಎಲ್ಲರೂ ಒಪ್ಪಬೇಕೆಂಬ ಒತ್ತಾಯ ಇಲ್ಲವೇ ಇಲ್ಲ. ಎಲ್ಲರೂ ಒಪ್ಪುತ್ತಾರೆಂಬ ಭ್ರಮೆಯೂ ನನಗಿಲ್ಲ. ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳೇ ಬಹುಸಂಖ್ಯಾತರು! ಮಾಂಸಾಹಾರಿಗಳು ಹೇಳಿದ್ದೇ ಸರಿ ಎಂಬುದಾಗಲೀ, ಸಸ್ಯಾಹಾರಿಗಳ ವಾದವೇ ಸರಿ ಎಂದಾಗಲೀ ಒಪ್ಪಲಾಗದು ಎಂಬುದೇ ಈಗ ಸರಿ.
     ಬಲಶಾಲಿಯಾದವನು ಬದುಕುತ್ತಾನೆ ಎಂಬುದು ಪ್ರಕೃತಿಯ ನಿಯಮ. ಈ ಜಗತ್ತಿನಲ್ಲಿ ಬದುಕಲು ಒಬ್ಬರು ಇನ್ನೊಬ್ಬರ ಮೇಲೆ ಅವಲಂಬಿಸಿರಲೇಬೇಕು. ನಾನು ಪ್ರಾಣಿಯನ್ನು ತಿನ್ನುತ್ತೇನೋ, ಸಸ್ಯವನ್ನು ತಿನ್ನುತ್ತೇನೋ, ಒಟ್ಟಿನಲ್ಲಿ ಜೀವಹಾನಿಯಂತೂ ಆಗುತ್ತದೆ. ಏನು ತಿನ್ನಬೇಕು ಅನ್ನುವುದನ್ನು ಮಾನವನೇ ವಿವೇಚಿಸಿ ನಿರ್ಧರಿಸಬೇಕು. ಸುಮಾರು ೮೪ ಲಕ್ಷ ವಿವಿಧ ಬಗೆಯ ಜೀವಜಂತುಗಳು ಇರುವ ಈ ಪ್ರಪಂಚದಲ್ಲಿ ಮಾನವನೂ ಒಂದು ಜೀವಜಂತು! ಪಶು-ಪಕ್ಷಿ, ಕ್ರಿಮಿ-ಕೀಟಗಳಿಗೂ ಮಾನವನಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಮಾನವನಿಗೆ ವಿವೇಚನೆ ಮಾಡುವ ಶಕ್ತಿಯಿದೆ. ಆತ ಮಾಡಬಲ್ಲ, ಮಾಡದಿರಲೂ ಬಲ್ಲ ಅಥವ ಬೇರೇನನ್ನೋ ಮಾಡಲುಬಲ್ಲ. ಇದೇ ಅವನ ವಿಶೇಷತೆ. ಎಲ್ಲಾ ಬಗೆಯ ಜೀವಮಾತ್ರರಲ್ಲಿ ಮಾನವ ಇತರ ಜೀವಿಗಳಿಗಿಂತ ಭಿನ್ನ. ಅವನಿಗೆ ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂದು ತುಲನೆ ಮಾಡುವ ಶಕ್ತಿಯಿದೆ. ಅದು ಅವನಿಗೆ ಆಯ್ಕೆಯ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ಸಸ್ಯಗಳು ಕೇವಲ ದೇಹ ಮತ್ತು ಬಹುಷಃ ಪ್ರಾರಂಭಿಕ ಹಂತದ ಮನಸ್ಸು ಹೊಂದಿರಬಹುದು. ಪ್ರಾಣಿಗಳು ದೇಹ ಮತ್ತು ಭಾವನೆಗಳು ಹಾಗೂ ನೋವನ್ನು ವ್ಯಕ್ತಪಡಿಸುವ ಮನಸ್ಸು ಹೊಂದಿರುವುದರ ಜೊತೆಗೆ ಪ್ರಾರಂಭಿಕ ಹಂತದ ಬುದ್ಧಿಶಕ್ತಿ ಹೊಂದಿರಬಹುದು. ಮಾನವ ದೇಹ ಮಾತ್ರವಲ್ಲ, ಮನಸ್ಸು ಮತ್ತು ಪರಿಶೀಲಿಸುವ, ನಿರ್ಧರಿಸುವ ಮತ್ತು ಆಯ್ಕೆ ಮಾಡುವ ಉತ್ತಮ ಬೆಳವಣಿಗೆ ಹೊಂದಿದ ಬುದ್ಧಿಶಕ್ತಿಯನ್ನೂ ಹೊಂದಿದ್ದಾನೆ. 
     ಪ್ರಾಣಿಗಳನ್ನು ಕೊಂದು ತಿನ್ನುವುದು ನಮ್ಮ ಹಕ್ಕು ಎನ್ನುವುದಾದರೆ ಆ ಹಕ್ಕನ್ನು ಕೊಟ್ಟವರು ಯಾರು? ಪ್ರಾಣಿಗಳು ನಮಗೂ ನಿಮ್ಮಂತೆ ಜೀವಿಸುವ ಹಕ್ಕು ಇಲ್ಲವೇ ಎಂದು ಕೇಳಲು ಬರುವಂತಿದ್ದರೆ ಕೇಳುತ್ತಿದ್ದವು. ಆದರೆ ವಿವೇಚನೆಯಿರುವ ಮಾನವನಿಗಂತೂ ಈ ಪ್ರಶ್ನೆಯನ್ನು ಹಾಕಿಕೊಳ್ಳಲು ಸಾಧ್ಯವಿದೆ. ಉತ್ತರವನ್ನೂ ಅವನೇ ಕೊಟ್ಟುಕೊಳ್ಳಬೇಕು. ಯಾರಿಗೇ ಆಗಲಿ, ಇನ್ನೊಂದು ಜೀವದ ಮೇಲೆ ತನ್ನ ಹಕ್ಕು ಇದೆ ಎಂದು ಸಾಧಿಸಲಾಗದು. ಅನಿವಾರ್ಯತೆ ಅಥವ ಅಗತ್ಯತೆ ಇದೆ ಎಂದು ಹೇಳಬಹುದಷ್ಟೆ. ಒಂದು ಹುಲಿ ಬೇಟೆಯಾಡಿ ತಿಂದರೆ ಅದು ಪಾಪ ಮಾಡಿದಂತೆ ಆಗುವುದಿಲ್ಲ. ಏಕೆಂದರೆ ಅದರ ಬುದ್ಧಿಶಕ್ತಿ ಪ್ರಾರಂಭಿಕ ಹಂತದಲ್ಲಿದ್ದು, ಅದು ಕೊಲ್ಲುವ ಮುನ್ನ, ಕೊಲ್ಲಬೇಕೋ, ಬೇಡವೋ, ಮಾಂಸಾಹಾರಿಯಾಗಿರಬೇಕೋ,  ಸಸ್ಯಾಹಾರಿಯಾಗಿರಬೇಕೋ  ಎಂದು ವಿಮರ್ಶಿಸುತ್ತಾ ಕೂರುವುದಿಲ್ಲ. ಅದಕ್ಕೆ ಹಸಿವಾದಾಗ, ಪ್ರಾಕೃತಿಕ ಬೇಡಿಕೆ ಈಡೇರಿಸಿಕೊಳ್ಳಲು ತನ್ನ ಬೇಟೆಯನ್ನು ಕೊಲ್ಲುತ್ತದೆ, ತಿನ್ನುತ್ತದೆ ಮತ್ತು ಅಗತ್ಯವಿರುವಷ್ಟು ತಿಂದ ನಂತರ ಉಳಿದುದನ್ನು ಬಿಡುತ್ತದೆ. ಅದಕ್ಕೆ ಹೊಟ್ಟೆಬಾಕತನ ಇಲ್ಲ. ಅದು ಅದರ ಸ್ವಧರ್ಮ. ಅದು ಸುಂದರ ಪರಿಸರ ವ್ಯವಸ್ಥೆಯನ್ನು ಪಾಲಿಸುತ್ತದೆ. ಮನುಷ್ಯನೊಬ್ಬ ಮಾತ್ರ ತನ್ನ ಹೊಟ್ಟೆಬಾಕತನದಿಂದ ಪರಿಸರ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾನೆ. ನಾನು ಸಸ್ಯಾಹಾರಿಯಾಗಿರಬೇಕೇ, ಮಾಂಸಾಹಾರಿ ಆಗಬೇಕೆ? ಎಂಬ ಪ್ರಶ್ನೆ ಅವನೊಬ್ಬನಿಂದ ಮಾತ್ರ ಬರಲು ಸಾಧ್ಯ. ಏಕೆಂದರೆ ಅವನಿಗೆ ವಿವೇಚನೆ ಮಾಡುವ ಬುದ್ಧಿಶಕ್ತಿ ಇದೆ ಮತ್ತು ಅವನು ಹೊಟ್ಟೆ ತುಂಬಿಸಿಕೊಳ್ಳಲು ಇತರರನ್ನು ನೋಯಿಸಲು ಬಯಸದಿರುವುದರಿಂದ ಈ ಪ್ರಶ್ನೆ ಬರುತ್ತದೆ. ಆತನಿಗೆ ನೋವು ಎಂದರೆ ಏನೆಂದು ಗೊತ್ತಿದೆ. 
     ಸಸ್ಯಗಳೂ ಜೀವಿಗಳೇ, ಅವುಗಳಿಗೆ ನೋವುಂಟು ಮಾಡಬಹುದೇ? ಎಂದು ಕೇಳಬಹುದು. ಯಾವುದೇ ಜೀವ ವೈವಿಧ್ಯಕ್ಕೆ ಹಾನಿಯುಂಟು ಮಾಡದೆ ಬದುಕಲು ಸಾಧ್ಯವಿದ್ದರೆ ಅದು ಅತ್ಯುತ್ತಮ, ಆದರೆ ಅದು ಸಾಧ್ಯವಿಲ್ಲ. ಜೀವನ ಜೀವದ ಮೇಲೆ ಜೀವಿಸಿದೆ - ಅದು ಪ್ರಕೃತಿಯ ನಿಯಮ. ವಿವೇಚನಾಶಕ್ತಿಯುಳ್ಳ ಮನುಷ್ಯನಾಗಿ ನನ್ನ ಪಾತ್ರವೆಂದರೆ ನಾನು ಬದುಕಿರುವ ಸಲುವಾಗಿ  ಪ್ರಕೃತಿಗೆ  ಕನಿಷ್ಠ ಹಾನಿಯಾಗುವಂತೆ ನೋಡಿಕೊಳ್ಳುವುದು. ಆದ್ದರಿಂದ ಬದುಕಲಿಕ್ಕಾಗಿ ತಿನ್ನುವುದು ಮತ್ತು ತಿನ್ನಲಿಕ್ಕಾಗಿ ಬದುಕದಿರುವುದು ನಿರ್ಣಾಯಕ ಅಂಶವಾಗುತ್ತದೆ. ಅಪಾಯ ಕಂಡು ಬಂದಾಗ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಓಡುತ್ತವೆ. ಆದರೆ ಗಿಡ-ಮರಗಳಿಗೆ ಆ ಅವಕಾಶವಿಲ್ಲ. ಆದರೆ ದೇವರು ಕರುಣಾಮಯಿಯಾಗಿದ್ದಾನೆ. ನೋವನ್ನು ಸಹಿಸುವ ಅಥವ ಗೊತ್ತಾಗದಂತಹ ಶಕ್ತಿ ಅವುಗಳಿಗೆ ಇದೆ. ಒಂದು ರೆಂಬೆಯನ್ನು ಕತ್ತರಿಸಿದರೆ ಅದು ಮತ್ತೆ ಚಿಗುರಬಲ್ಲದು. ಆದರೆ ಒಂದು ಪ್ರಾಣಿಯ ಕಾಲು ಮುರಿದರೆ ಮತ್ತೆ ಬರಲಾರದು. ಮರವನ್ನು ಬುಡದವರೆಗೂ ಕತ್ತರಿಸಿದರೂ ಅದು ಮತ್ತೆ ಚಿಗುರೊಡೆದು ಬೆಳೆಯಬಲ್ಲದು. ಆದರೆ ಪ್ರಾಣಿಯ ವಿಷಯದಲ್ಲಿ ಹಾಗಿಲ್ಲ. ಕಸಿ ಮಾಡುವ ಕ್ರಮದಲ್ಲಿ ಗಿಡಮರಗಳನ್ನು ಅಲ್ಲಲ್ಲಿ ಕತ್ತರಿಸುತ್ತಾರೆ. ಆಗ ಮತ್ತಷ್ಟು ಸೊಂಪಾಗಿ ಗಿಡ ಬೆಳೆಯುತ್ತದೆ. ಮರದಲ್ಲಿನ ಹಣ್ಣುಗಳು ಪೂರ್ಣವಾಗಿ ಕಳಿತ ನಂತರ ತಾನಾಗಿ ಬೀಳುವ ಸಮಯದಲ್ಲಿ ಕಿತ್ತು ಉಪಯೋಗಿಸುವುದರಿಂದ ಕನಿಷ್ಠ ನೋವಿನ ಸಾಧ್ಯತೆಯಿದೆ. ಇದನ್ನು ಕೇವಲ ಉದಾಹರಣೆಗಾಗಿ ಹೇಳಿದ್ದಷ್ಟೆ. ಇಂತಹ ವಿವೇಚನೆ ಬಳಸಿ ನಮ್ಮ ಆಹಾರ ಕ್ರಮವನ್ನು ನಿರ್ಧರಿಸಿಕೊಳ್ಳಬೇಕಾದವರು ನಾವೇನೇ!
     ಡಾರ್ವಿನ್ನನ ವಿಕಾಸವಾದದಂತೆ ಜೀವಿಗಳು ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗದಿರುವಂತೆ ನೋಡಿಕೊಳ್ಳಲು ಕ್ರಮೇಣ ವಿಕಾಸ ಹೊಂದುತ್ತವೆ. ಆದರೆ ಶತಮಾನಗಳಿಂದಲೂ ಇತರ ಜೀವ ಸಂಕುಲಗಳ ಅಸ್ತಿತ್ವಕ್ಕೆ ಆಸರೆಯಾಗಿ ನಿಂತಿರುವ ಸಸ್ಯ ಸಂಕುಲ ಮಾತ್ರ ಓಡುವುದನ್ನಾಗಲೀ, ಹಾರುವುದನ್ನಾಗಲೀ ಮಾಡದೆ ಹಾಗೆಯೇ ಇದೆ. ತನ್ನ ಅಸ್ತಿತ್ವವನ್ನು ಇರುವಲ್ಲಿಯೇ ಹೇಗೆ ಮುಂದುವರೆಸಿಕೊಳ್ಳಬಹುದು ಎಂಬ ಧಾರಣಾಶಕ್ತಿ ಮಾತ್ರ ಗಳಿಸಿಕೊಂಡಿವೆ. ಪ್ರಾಣಿಗಳನ್ನು ಮಾಂಸದ ಸಲುವಾಗಿ ಸಾಕಿ ಬೆಳೆಸಲೂ ಸಸ್ಯ ಸಂಪತ್ತೇ ಬೇಕು. ಮಾಂಸಾಹಾರದಿಂದ ಪ್ರಾಣಿ ಮತ್ತು ಸಸ್ಯ ಸಂಪತ್ತುಗಳೆರಡೂ ನಶಿಸುತ್ತವೆ. ಮಾಂಸಾಹಾರಿಗಳು ಮಾಂಸ ತಿನ್ನುವುದನ್ನು ಬಿಡಬೇಕೆಂದು ಹೇಳಲು ಸಾಧ್ಯವಿಲ್ಲ. ಅದನ್ನು ಅವರವರೇ ನಿರ್ಧರಿಸಬೇಕು. ಆದರೆ ಒಂದನ್ನಂತೂ ಹೇಳಬಹುದು. ತಾವು ತಿನ್ನಬಯಸುವ ಪ್ರಾಣಿಗಳನ್ನು ಕೊಂದು ತಿನ್ನುವವರೆಗಾದರೂ ಮಾನವತೆಯಿಂದ ಕಾಣಲು ಹೇಳಬಹುದು. ಅವುಗಳಿಗೆ ಸರಿಯಾಗಿ ಆಹಾರ ಕೊಡದಿರುವುದು, ಒರಟಾಗಿ ನಡೆಸಿಕೊಳ್ಳುವುದು, ಸಾಗಾಣಿಕೆ ಮಾಡುವಾಗ ಸರಕುಗಳಂತೆ ಒತ್ತೊತ್ತಾಗಿ ತುಂಬಿಡುವುದು, ಹಿಂಸಿಸುವುದು, ಇತ್ಯಾದಿಗಳನ್ನಾದರೂ ಮಾಡದಿರಬಹುದಲ್ಲವೇ? ಕೇರಳದ ಕಣ್ಣೂರಿನಲ್ಲಿ ಗೋವಧೆ ನಿಷೇಧವನ್ನು ವಿರೋಧಿಸಿ ಯುವ ಕಾಂಗ್ರೆಸ್ಸಿಗರು ಬಹಿರಂಗವಾಗಿ ಗೋಹತ್ಯೆ ಮಾಡಿದ ವಿಡಿಯೋ ವೈರಲ್ ಆಗಿ ಹರಿದಾಡುತ್ತಿದೆ. ಇದರಲ್ಲಿ ಹಸುವಿನ ತಪ್ಪೇನಿದೆ? ಮನುಷ್ಯ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು. ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕಿಂತ ಕೀಳು ಎಂಬುದು ನಿಜವೆನಿಸುವಂತೆ ಮಾಡುವ ಇಂತಹ ಕೃತ್ಯಗಳು ಮರುಕಳಿಸಬಾರದು. ವಿವೇಚನೆ ಇರುವವರು ಯಾರೂ ಹೀಗೆ ಮಾಡಲಾರರು. 
     ಹೇಳಬಹುದಾದ ವಿಚಾರಗಳು ಬಹಳಷ್ಟಿದ್ದರೂ ಲೇಖನ ವಿಸ್ತಾರದ ಕಾರಣದಿಂದ ಕೊನೆಯ ಮಾತನ್ನು ದಾಖಲಿಸಿ ಮೊಟಕುಗೊಳಿಸುವೆ.  ನಮಗೆ ನಾವೇ ಒಂದು ಉಪಕಾರ ಮಾಡಿಕೊಳ್ಳಬಹುದು. ಅದೆಂದರೆ, ನಮ್ಮ ಅಂತರಂಗದ ಧ್ವನಿಗೆ ಕಿವಿಗೊಡುವುದು, ನಮ್ಮ ಬುದ್ಧಿಶಕ್ತಿ, ವಿವೇಚನಾ ಶಕ್ತಿ ಏನು ಸರಿ ಎಂದು ಹೇಳುತ್ತದೆಯೋ ಹಾಗೆ ನಡೆದುಕೊಳ್ಳುವುದು. ನಮಗೆ ನಿಜಕ್ಕೂ ಯಾವ ಆಹಾರದ ಅಗತ್ಯವಿದೆಯೋ ಅದನ್ನು ತಿನ್ನುವುದು ಮತ್ತು ಯಾವುದು ನಿಜಕ್ಕೂ ಅಗತ್ಯವಿಲ್ಲವೋ ಅದನ್ನು ಬಿಟ್ಟುಬಿಡುವುದು. 
-ಕ.ವೆಂ.ನಾಗರಾಜ್.