ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಅಕ್ಟೋಬರ್ 26, 2017

ಬೀದಿಗೊಂದು ಜಾತಿ, ಗುಂಪಿಗೊಂದು ಧರ್ಮ!


     ಪ್ರತಿ ಸಲ ಜನಗಣತಿ ನಡೆಯುವ ಸಂದರ್ಭದಲ್ಲಿ ಗಮನಕ್ಕೆ ಬರುವ ಸಂಗತಿಯೆಂದರೆ, ನಮ್ಮ ಜಾತಿಯನ್ನು ನಮೂದಿಸುವಾಗ ಹೀಗೆ ಬರೆಯಿಸಿ, ಹಾಗೆ ಬರೆಯಿಸಿ, ಧರ್ಮ ಕಲಮ್ಮಿನಲ್ಲಿ ನಮ್ಮದೇ ಪ್ರತ್ಯೇಕ ಧರ್ಮ ಎಂದು ನಮೂದಿಸಿ ಎಂಬಿತ್ಯಾದಿ ಕರೆಗಳು ಜಾತಿ/ಮತಗಳ ಮುಖಂಡರಿಂದ ಕೊಡಲ್ಪಡುವುದು! ಪ್ರತ್ಯೇಕ ಗುಂಪಾದರೆ, ಪ್ರತ್ಯೇಕ ಜಾತಿ ಆದರೆ, ಪ್ರತ್ಯೇಕ ಧರ್ಮ ಎಂದು ಗುರುತಿಸಲ್ಪಟ್ಟರೆ ಸರ್ಕಾರದಿಂದ ವಿಶೇಷ ಸವಲತ್ತುಗಳು ಸಿಗುತ್ತವೆ ಎಂಬ ಅಂಶ ಇಲ್ಲಿ ಎದ್ದು ಕಾಣುತ್ತದೆ. ಈಗ ಪ್ರತ್ಯೇಕ ಲಿಂಗಾಯತ ಧರ್ಮದ ಘೋಷಣೆಗೆ ಬಲವಾಗಿ ಪ್ರಯತ್ನಗಳು ಸಾಗಿವೆ. ಲಿಂಗಾಯತ ಬೇರೆ, ವೀರಶೈವ ಬೇರೆ ಅನ್ನುವವರು, ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಅನ್ನುವವರು, ಪ್ರತ್ಯೇಕ ಧರ್ಮ ಬೇಕು ಅನ್ನುವವರು, ಬೇಡ ಅನ್ನುವವರು, ಧರ್ಮದ ಹೆಸರಿನ ಬಗ್ಗೆ ಗುದ್ದಾಡುವವರು, ತಟಸ್ಥರಾಗಿ ಉಳಿದವರು, ಹೀಗೆ ಆ ಸಮುದಾಯ ತಮ್ಮತಮ್ಮಲ್ಲೇ ಕಚ್ಚಾಡಿಕೊಳ್ಳುವ, ವಿಭಜಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲು ಚುನಾವಣೆಯ ಲಾಭದ ಸಲುವಾಗಿ ಆಡಳಿತ ಪಕ್ಷದ ನಾಯಕರೇ ಕೊಟ್ಟ ಕುಮ್ಮಕ್ಕೂ ಸಹ ಭಾಗಶಃ ಕಾರಣವಾಗಿದೆ. ಇದು ಹಾದಿರಂಪ, ಬೀದಿರಂಪ ಮಾಡದೆ ಸಮುದಾಯದವರು ಒಟ್ಟಾಗಿ ತೆಗೆದುಕೊಳ್ಳಬೇಕಾದ ನಿರ್ಧಾರವಾಗಿದೆ. ಸಂಬಂಧಪಡದ ಮೂರನೆಯವರು ಸಹ ತಮ್ಮದೇ ಆದ ಕಾರಣಗಳಿಗಾಗಿ ಪರ, ವಿರೋಧ ಚಿತಾವಣೆ ಮಾಡುತ್ತಿರುವುದೂ  ಕಳವಳಕಾರಿಯಾಗಿದೆ. ಧರ್ಮ ಸಾರಬೇಕಾದ ವಿಶಾಲತೆಯನ್ನು ಸಂಕುಚಿತಗೊಳಿಸುವ, ಅಲ್ಪಕಾಲಿಕ ಲಾಭದ ಉದ್ದೇಶದ ಇಂತಹ ನಡೆಗಳು ಯಾರಿಗೂ ಹಿತ ತರಲಾರವು.
     ಇಷ್ಟಕ್ಕೂ ಈ ಧರ್ಮ ಎಂದರೇನು? ನಿಜವಾದ ಧರ್ಮ ಹೇಗಿರಬೇಕು ಎಂಬ ಬಗ್ಗೆ ದಾರ್ಶನಿಕರು, ಧರ್ಮಾಚಾರ್ಯರು, ಸಾಧಕರು ಉದಾತ್ತ ದೃಷ್ಟಿ ಹರಿಸಿದ್ದರೂ, ಅವರ ಅನುಯಾಯಿಗಳೆನಿಸಿಕೊಂಡವರು ಅದನ್ನು ಗೆರೆ ಎಳೆದು ಸಂಕುಚಿತಗೊಳಿಸಿರುವುದು ಇತಿಹಾಸದ ಸಂಗತಿಯಾಗಿದೆ. ಇಡೀ ಜೀವಜಗತ್ತಿನ ಹಿತ ಬಯಸುವುದೇ ನಿಜವಾದ ಧರ್ಮ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಸಮಸ್ಯೆ ಬರುವುದು ಅದು ಹೇಗಿರಬೇಕು ಎಂಬ ವಿಚಾರದಲ್ಲಿ! ಎಲ್ಲಾ ಜೀವಜಂತುಗಳ ಹಿತ ಬಯಸುವುದು ಬಹಳ ದೊಡ್ಡ ವಿಷಯವಾಯಿತು. ಕನಿಷ್ಠ ಎಲ್ಲಾ ಮಾನವಜೀವಗಳ ಹಿತವನ್ನು ಬಯಸುವಂತಹುದಾದರೂ ಆಗಿರಬೇಕಲ್ಲವೇ? ವೇದಗಳು, ಬೈಬಲ್, ಕುರಾನ್, ಇತ್ಯಾದಿ ಧರ್ಮಗ್ರಂಥಗಳು ಮೂರು ಅಂಶಗಳ ಸುತ್ತಲೇ ಸುತ್ತುತ್ತವೆ. ಮಾನವ ತಲೆ ಕೆಡಿಸಿಕೊಂಡಿರುವುದೂ ಈ ಮೂರು ಅಂಶಗಳ ಕುರಿತೇ - ಜೀವ, ಜಗತ್ತು ಮತ್ತು ದೇವರು! ಈ ಮೂರು ಅಂಶಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ, ತಮ್ಮದೇ ಸರಿ ಎಂದು ವಾದಿಸುತ್ತಾ ಸಮಸ್ಯೆಗಳನ್ನು ಸೃಷ್ಟಿಸುತ್ತಾ ಪರಿಸ್ಥಿತಿಯನ್ನು ಗೋಜಲು ಗೋಜಲಾಗಿಸುತ್ತಾ, ಇದರಿಂದ ಮತ್ತಷ್ಟು ಸಮಸ್ಯೆಗಳಿಗೆ ಕಾರಣರಾಗುತ್ತಾ ಹೋಗಿರುವ ಜನರಿಂದ ನೆಮ್ಮದಿ, ಶಾಂತಿ ಕಣ್ಮರೆಯಾಗುತ್ತಿವೆ.
     ನಿಜವಾದ ಧರ್ಮ ಹೇಗಿರಬೇಕೆಂಬ ಬಗ್ಗೆ ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: 1. ಅದು ಸಕಲ ಜಗತ್ತಿನ ಪಾಲನೆ, ಪೋಷಣೆ ಮಾಡುವಂತಿರಬೇಕು, 2. ಒಂದು ಸಮುದಾಯ, ವರ್ಗ, ಗುಂಪಿಗೆ ಸೀಮಿತವಾಗದೆ ಇಡೀ ಮನುಕುಲಕ್ಕೆ ಅನ್ವಯವಾಗುವಂತಿರಬೇಕು ಮತ್ತು 3. ಇಹ-ಪರಗಳೆರಡರಲ್ಲೂ ಔನ್ನತ್ಯ ಸಾಧನೆಗೆ ಮಾರ್ಗದರ್ಶಿಯಾಗಿರಬೇಕು. ಮಾನವ ಪತಿತನಾಗದಂತೆ ಎತ್ತಿ ಹಿಡಿಯುವ ಧಾರಕ ತತ್ವ ಹೊಂದಿರುವುದೇ ಧರ್ಮ. ಈಗಿನ ಆಚರಣೆಯಲ್ಲಿರುವ ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ ಇತ್ಯಾದಿಗಳಲ್ಲಿ ಧರ್ಮದ ಅಂಶಗಳು ಅಡಕಗೊಂಡಿರಬಹುದೇ ಹೊರತು, ಅವುಗಳು ಎಳೆದುಕೊಂಡಿರುವ ಸಂಕುಚಿತ ಪರಿಧಿಗಳಲ್ಲಿ ನಿಜವಾದ ಧರ್ಮದ ಪೂರ್ಣ ವಿಶಾಲತೆಯನ್ನು ಅಡಕಗೊಳಿಸುವುದು ಕಷ್ಟ. ನಮ್ಮದೇ ನಿಜವಾದ ಧರ್ಮ, ನಾವು ನಂಬಿರುವ ದೇವರೇ ನಿಜವಾದ ದೇವರು. ಇದನ್ನು ನಂಬದವರು ಧರ್ಮದ್ರೋಹಿಗಳು, ನಾಶಗೊಳಿಸಲ್ಪಡಲು ಅರ್ಹರು ಎಂದು ವಾದಿಸುವ ಧರ್ಮಗ್ರಂಥಗಳೇ ಆಗಲಿ, ಅದನ್ನು ಒಪ್ಪಿ ಅನುಸರಿಸುವ ಅನುಯಾಯಿಗಳ ನಡೆಯೇ ಆಗಲಿ ಧರ್ಮದ ವಿಶಾಲತೆಯನ್ನು ಸಂಕುಚಿತಗೊಳಿಸುವುವೇ ಆಗಿವೆ. ಮತಾಂಧ ಭಯೋತ್ಪಾದಕರ ಕೃತ್ಯಗಳಿಂದ ಇಂದು ಪ್ರಪಂಚದ ಬಹುಭಾಗ ತಲ್ಲಣಿಸಿದೆ. ಮಾನವನನ್ನು ಮಾನವನನ್ನಾಗಿ ಕಾಣದ ಧರ್ಮ ಧರ್ಮವೇ ಅಲ್ಲ.
     ಸಕಲ ಜೀವರಾಶಿಗಳಲ್ಲಿ ದೇವರು ಮಾನವಜೀವಿಗೆ ವಿವೇಚನೆ ಮಾಡುವ ಶಕ್ತಿಯನ್ನು ಕೊಟ್ಟಿದ್ದಾನೆ. ಅದನ್ನು ಉಪಯೋಗಿಸಿಕೊಳ್ಳುವುದಕ್ಕೆ ಅಡ್ಡಿಯಾದರೂ ಏನಿದೆ? ಒಂದು ಮತದವರು ಇನ್ನೊಂದು ಮತದವರನ್ನು, ಅವರ ಧರ್ಮಗ್ರಂಥವನ್ನು ಇವರು, ಇವರ ಧರ್ಮಗ್ರಂಥವನ್ನು ಅವರು ಹಳಿಯುವುದರಿಂದ ಏನು ಲಾಭವಿದೆ? ಸಂಪ್ರದಾಯಗಳನ್ನು ಕುರುಡಾಗಿ ಅನುಸರಿಸದೆ ಸರಿ, ತಪ್ಪುಗಳನ್ನು ತುಲನೆ ಮಾಡಿ ಸರಿಯಾದುದನ್ನು ಉಳಿಸಿಕೊಂಡು, ಸರಿಯಲ್ಲದುದನ್ನು ಬಿಡಲು ಇರುವ ತೊಂದರೆಯಾದರೂ ಏನು? ಮಾನವ-ಮಾನವರಲ್ಲಿ ಭೇದ ಉಂಟುಮಾಡುವ ಜಾತಿಗಳಿಗೆ ಪುಷ್ಟಿ ನೀಡುವ ರಾಜಕಾರಣಿಗಳು ಮತ್ತು ಪಟ್ಟಭದ್ರ ಹಿತಾಸಕ್ತರು ಇಂದು ಸಮಸ್ಯೆಗಳ ಸೃಷ್ಟಿಕರ್ತರಾಗಿದ್ದಾರೆ. ಅಂಥಹವರನ್ನು ಮೊದಲು ನಿಯಂತ್ರಣದಲ್ಲಿ ಇಡಲು ಜ್ಞಾನವಂತರು (ಬುದ್ಧಿಜೀವಿಗಳು ಎಂಬ ಪದ ಉಪಯೋಗಿಸಲು ಮನಸ್ಸಾಗುವುದಿಲ್ಲ) ಉಳಿದವರಿಗೆ ಮಾರ್ಗದರ್ಶನ ಮಾಡಬೇಕಿದೆ. ಈ ಕೆಲಸ ಆದರೆ ಸಮಸ್ಯೆಯ ಗಂಭೀರತೆ ಕಡಿಮೆಯಾಗುತ್ತದೆ. ಜಾತಿ ಆಧಾರದಲ್ಲಿ ನೀಡುವ ಸವಲತ್ತುಗಳು ಜನರ ನಡುವೆ ಕಂದಕ ಉಂಟುಮಾಡುತ್ತಿವೆ. ಈ ಸವಲತ್ತುಗಳ ಸಲುವಾಗಿಯೇ ಹೊಸ ಹೊಸ ಜಾತಿಗಳು, ಧರ್ಮಗಳು ಹುಟ್ಟಿಕೊಳ್ಳುತ್ತಿವೆ. ಜಾತಿ, ಮತ, ಪಂಥ ಇವುಗಳಿಂದ ದೂರ ಉಳಿದು, ಅರ್ಹ ಬಡವರಿಗೆ ಸವಲತ್ತುಗಳು ದೊರೆಯುವಂತಾದರೆ ಸುದಿನಗಳು ಬಂದೇಬರುತ್ತವೆ.
     ಮುಸ್ಲಿಮರು ಒಬ್ಬನೇ ದೇವರು ಎನ್ನುತ್ತಾರೆ. ಕ್ರೈಸ್ತರು ಹೇಳುವುದೂ ಸಹ ಒಬ್ಬನೇ ದೇವರು ಎಂದು. ಹಿಂದೂಗಳು ಬಹುದೈವಾರಾಧಕರಾದರೂ ಅವರುಗಳೂ ಸಹ ಒಬ್ಬನೇ ದೇವರು ಎಂಬುದರಲ್ಲಿ ವಿಶ್ವಾಸವಿಟ್ಟವರು, ದೇವನೊಬ್ಬ ನಾಮ ಹಲವು ಎಂಬುದನ್ನು ಅವರೂ ಒಪ್ಪುತ್ತಾರೆ. ಆದರೆ ದೇವನೊಬ್ಬ ಎಂಬದರಲ್ಲಿ ಏಕನಾದ ಹೊರಡದೆ ಅಪಶೃತಿ ಹೊರಡಲು ಕಾರಣವೆಂದರೆ ಆ ಒಬ್ಬ ದೇವರು ಯಾರು ಎಂಬುದರಲ್ಲಿ! ದೇವರು ಸಕಲರ ಹಿತವನ್ನು ಬಯಸುವವನೇ ಹೊರತು ಕೆಲವರ ಹಿತವನ್ನು ಮಾತ್ರ ಬಯಸುವವನಲ್ಲ ಎಂಬುದನ್ನೂ ಎಲ್ಲರೂ ಒಪ್ಪುವಾಗ ತೊಂದರೆಯೇನು? ಆ ದೇವರು ಯಾರಾದರೂ ಆಗಿರಲಿ, ಧರ್ಮದ ಆಧಾರ ಸ್ತಂಭಗಳಾದ ಜ್ಞಾನ, ಕರ್ಮ, ಉಪಾಸನೆಗಳನ್ನು, ಇತರರ ರೀತಿ-ನೀತಿಗಳನ್ನು ಗೌರವಿಸುತ್ತಾ ಎಲ್ಲರೂ ಅವರವರ ಭಾವಕ್ಕೆ ಮಾಡಿಕೊಂಡು ಹೋದರೆ ಮನುಕುಲ ನೆಮ್ಮದಿಯಾಗಿದ್ದೀತು. ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ಹೇಳುವ ಈ ಮಾತು ಮಾರ್ಮಿಕವಾಗಿದೆ: "ನಿಮಗೆ ಜನಿವಾರ ಬೇಡವಾ, ಬಿಟ್ಟುಬಿಡಿ; ಬೇಕಾ, ಹಾಕಿಕೊಳ್ಳಿ. ಕ್ರಾಸ್ ಬೇಕಾ, ಹಾಕಿಕೊಳ್ಳಿ. ಲಿಂಗಾಯಿತರಾಗಬೇಕಾ, ಬ್ರಾಹ್ಮಣರಾಗಬೇಕಾ, ಮುಸ್ಲಿಮರಾಗಬೇಕಾ, ಬೇರೆ ಏನಾಗಬೇಕೋ ಅದೇ ಆಗಿ. ಆದರೆ ಸತ್ಯ, ನ್ಯಾಯ, ಧರ್ಮದ ಹಾದಿಯಲ್ಲಿ ನಡೆಯುವ ನಿಶ್ಚಯ ಮಾಡಿ. ಹೀಗೆ ನಿಶ್ಚಯ ಮಾಡಿ ನೀವು ಯಾವ ದೇವರನ್ನು ಪೂಜಿಸಬೇಕೆಂದುಕೊಳ್ಳುತ್ತೀರೋ ಆ ದೇವರನ್ನು, ರಾಮನೋ, ಕೃಷ್ಣನೋ, ಶಿವನೋ, ಅಲ್ಲಾಹು, ಏಸು ಯಾರಾದರೂ ಆಗಿರಲಿ, ಆ ದೇವರನ್ನು ನಿಮ್ಮ ಹೃದಯದಲ್ಲಿ ಇಟ್ಟುಕೊಳ್ಳಿ. ಆ ದೇವರು ಹೃದಯದಲ್ಲೇ ಇರಲಿ, ಬೀದಿಗೆ ತರಬೇಡಿ. ಎಲ್ಲಾ ಜಾತಿ, ಧರ್ಮಗಳು ಮನುಷ್ಯಕಲ್ಪಿತ. ನಮಗೆ ಎಷ್ಟು ಧರ್ಮ ಬೇಕು? ಒಂದು ಧರ್ಮ, ಒಬ್ಬ ದೇವರು ಇಷ್ಟು ಸಾಕು. ಅದೇ ಮಾನವಧರ್ಮ. ಮನುರ್ಭವ, ಮಾನವರಾಗೋಣ. ಇದೇ ಪರಮ ಧರ್ಮ".
ಸಕಲರನು ಪಾಲಿಪುದು ಪೊರೆಯುವುದೆ ಧರ್ಮ
ಜಗದಗಲ ಜಗದುದ್ದ ಭೇದವೆಣಿಸದ ಮರ್ಮ |
ಕೈಹಿಡಿದು ಮೇಲೆತ್ತಿ ನಿಲಿಸುವುದೆ ಧರ್ಮ
ಇಹಪರಕೆ ಸಾಧನವು ಕರ್ಮವೋ ಮೂಢ ||
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ