ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಅಕ್ಟೋಬರ್ 8, 2017

ಚಾರ್ವಾಕ ವಿಚಾರಧಾರೆ


     ರಸ್ತೆ ಬದಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಇಬ್ಬರು ವ್ಯಾಪಾರಿಗಳು ಜಗಳವಾಡುತ್ತಿದ್ದರು. ಒಬ್ಬ ವ್ಯಾಪಾರಿ ಗುಲಾಬಿ ಹೂವು ಮಾರುವವನಾಗಿದ್ದರೆ ಇನ್ನೊಬ್ಬ ಮಲ್ಲಿಗೆಯನ್ನು ಪ್ರಧಾನವಾಗಿ ಮಾರುತ್ತಿದ್ದವನು. ಜಗಳ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸಿದರು. ಜನರಲ್ಲೂ ಎರಡು ಗುಂಪುಗಳಾಗಿ ಕೆಲವರು ಗುಲಾಬಿ ಹೂವಿನ ವ್ಯಾಪಾರಿಯನ್ನು ಬೆಂಬಲಿಸಿದರೆ ಕೆಲವರು ಇನ್ನೊಬ್ಬನನ್ನು ಬೆಂಬಲಿಸಿದರು. ಪೊಲೀಸರು ಬಂದರು, ಲಾಠಿ ಚಾರ್ಜ್ ಆಯಿತು, ಹಲವರ ಬಂಧನವೂ ಆಯಿತು. ಗುಲಾಬಿ ಹೂವು ಶ್ರೇಷ್ಠವೋ, ಮಲ್ಲಿಗೆ ಹೆಚ್ಚೋ ಎಂಬ ವಿವಾದ ಹುಟ್ಟಿಕೊಂಡಿತು. ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು, ಪರಸ್ಪರ ದೂಷಣೆಗಳು ತಾರಕಕ್ಕೇರಿದವು. ಗುಲಾಬಿ ಹೆಚ್ಚು ಅನ್ನುವವರು, ಮಲ್ಲಿಗೆಯೇ ಶ್ರೇಷ್ಠ ಎನ್ನುವವರು, ಎರಡು ಹೂವುಗಳೂ ನಮಗೆ ಇಷ್ಟ ಅನ್ನುವವರು, ರಗಳೆಯೇ ಬೇಡ, ಎರಡೂ ಬೇಡ ಅನ್ನುವವರು, ಇದನ್ನೇ ಅವಕಾಶವಾಗಿಸಿ ಮೂರನೆಯ ಹೂವಿಗೆ ಮನ್ನಣೆ ಕೊಡುವ ಮಾತುಗಳೂ ಹರಿದಾಡಿದವು. ಗೊಂದಲಮಯ ವಾತಾವರಣದಿಂದ ಶಾಂತಿ ಕದಡಿಹೋಯಿತು. ಜನರೂ ಪಂಗಡಗಳಾಗಿ ಹಂಚಿಹೋಗಿ ಹಾದಿ-ಬೀದಿ ರಂಪಗಳು ಸಾಮಾನ್ಯವಾದವು. ಇಂದು ಸಮಾಜದಲ್ಲಿ ನಡೆಯುತ್ತಿರುವ ವಿವಿಧ ಜಾತಿ-ಮತ-ಪಂಥ-ವಿಚಾರಗಳ ಸಂಘರ್ಷವೂ ಇದೇ ರೀತಿಯದೆಂದು ಹೇಳುವ ಸಲುವಾಗಿ ಈ ಕಲ್ಪಿತ ಘಟನೆಯನ್ನು ಪ್ರಸ್ತಾಪಿಸಿದೆ.
     ಹೂತೋಟದಲ್ಲಿ ಬಗೆ ಬಗೆಯ ಬಣ್ಣದ, ಗಾತ್ರದ, ಪರಿಮಳದ ವಿವಿಧ ಹೂವಿನ ಗಿಡಗಳಿದ್ದರೆ ಎಷ್ಟು ಸುಂದರವಾಗಿ ತೋರುತ್ತದೆ! ಹತ್ತು ಹಲವು ಹೂವುಗಳನ್ನು ಪೋಣಿಸಿ ಮಾಲೆ ಮಾಡಿದರೆ ಎಷ್ಟು ಸೊಗಸಾಗಿರುತ್ತದೆ! ಒಂದೇ ಬಗೆಯ ಹೂವು ಇರಬೇಕು, ಇತರ ಎಲ್ಲಾ ಹೂವಿನ ಗಿಡಗಳನ್ನು ನಾಶ ಮಾಡಬೇಕು ಎಂದು ಶಪಥ ಮಾಡಿ ಯಾರಾದರೂ ಹೊರಟರೆ ಅವರನ್ನು ಏನೆನ್ನಬೇಕು? ಅಂತಹವರಿಗೆ ವಿವೇಕ ಹೇಳಬೇಕು, ಮನ ಒಲಿಸಬೇಕು, ಬಗ್ಗದಿದ್ದರೆ ಹೆದರಿಸಬೇಕು, ಅದಕ್ಕೂ ಮಣಿಯದಿದ್ದರೆ ದಂಡಿಸಲೇಬೇಕು. ಈ ಭಾರತ ದೇಶದಲ್ಲಿ ಹೆಚ್ಚಿನವರು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಮನೋಭಾವದವರೆಂಬುದು ಸಮಾಧಾನಕರ ಸಂಗತಿ. ಇದನ್ನು ಹದಗೆಡಿಸುವ ಶಕ್ತಿಗಳು ಅಪಾಯಕಾರಿಯಾಗಿ ಕಾರ್ಯಪ್ರವೃತ್ತವಾಗಿದ್ದರೂ ಅದನ್ನು ಎದುರಿಸುವವರೂ ಜಾಗೃತರಾಗಿರುವುದು ಒಳ್ಳೆಯ ಬೆಳವಣಿಗೆ.  
     ಇಷ್ಟೆಲ್ಲಾ ಪೀಠಿಕೆಗೆ ಕಾರಣವೂ ಇದೆ. ಈ ದೇಶದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ಬೌದ್ಧ, ಜೈನ, ಸಿಖ್ ಇತ್ಯಾದಿ ಹಲವು ಜಾತಿ, ಮತ, ಧರ್ಮಗಳ ಅನುಯಾಯಿಗಳ ಜೊತೆಗೆ ದೇವರೇ ಇಲ್ಲ ಎನ್ನುವ ಚಾರ್ವಾಕ ಮನೋಭಾವದವರೂ ಇದ್ದಾರೆ. ಚಾರ್ವಾಕ ಮನೋಭಾವದವರು ಎಂದು ಹೇಳಿದ್ದೇಕೆಂದರೆ, ಚಾರ್ವಾಕರು ಎಂದು ತಮ್ಮನ್ನು ಕರೆದುಕೊಳ್ಳುವ ಪ್ರತ್ಯೇಕ ಪಂಗಡಗಳು ಕಂಡು ಬರದಿದ್ದರೂ ಈ ಮನೋಭಾವ ಹೊಂದಿದವರು ಗಣನೀಯವಾಗಿ ಕಂಡುಬರುತ್ತಾರೆ. ಚಾರ್ವಾಕರು ಅಂದರೆ ಯಾರು, ಅವರ ವಿಚಾರಗಳೇನು ಎಂಬುದನ್ನು ತಿಳಿಸುವ ಪ್ರಯತ್ನ ಇಲ್ಲಿ ಮಾಡಿದ್ದು, ಇದನ್ನು ಖಂಡಿಸುವುದಾಗಲೀ, ಸಮರ್ಥಿಸುವುದಾಗಲೀ ಉದ್ದೇಶವಿಲ್ಲ. 
     ಮಾಧವಾಚಾರ್ಯ ಎಂಬ ಪೂರ್ವಾಶ್ರಮದ ಹೆಸರು ಹೊಂದಿದ್ದ ವಿದ್ಯಾರಣ್ಯರು ಹಕ್ಕ-ಬುಕ್ಕರನ್ನು ಮುಂದಿಟ್ಟುಕೊಂಡು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದದ್ದು, ಶ್ರೀ ಶೃಂಗೇರಿ ಶಾರದಾಪೀಠದ 12ನೆಯ ಗುರುಗಳಾಗಿದ್ದುದು ತಿಳಿದ ಸಂಗತಿಯೇ ಆಗಿದೆ. ವಿದ್ಯಾರಣ್ಯರು ಸರ್ವ ದರ್ಶನ ಸಂಗ್ರಹ ಎಂಬ ಕೃತಿಯಲ್ಲಿ 14ನೆಯ ಶತಮಾನದಲ್ಲಿ ಭಾರತದಲ್ಲಿ ಪ್ರಚಲಿತವಿದ್ದ ವಿವಿಧ ಮತಗಳ ದರ್ಶನವನ್ನು ಸಂಗ್ರಹಿಸಿದ್ದಾರೆ. ಚಾರ್ವಾಕ, ಬೌದ್ಧ, ಜೈನ, ವೈಷ್ಣವ, ಶೈವ, ಸಾಂಖ್ಯ, ಪಾತಂಜಲ ಇತ್ಯಾದಿ 16 ಪದ್ಧತಿಗಳ ಬಗ್ಗೆ ವಿವರಿಸಿದ್ದು, ಪ್ರತಿಯೊಂದರ ಬಗ್ಗೆ ಹೇಳುವಾಗ ಆಯಾ ಪದ್ಧತಿಗಳ ವಕ್ತಾರರಂತೆ ಮಂಡಿಸಿರುವುದು ಅವರ ಸರ್ವವಿಚಾರ ಸಮಾನತೆಯ ಗೌರವವನ್ನು ಹೊಂದಿರುವುದನ್ನು ತೋರಿಸುತ್ತದೆ. ಪೀಠಿಕೆಯಲ್ಲಿ ಅವರು ಗುಣವುಳ್ಳ ಸಜ್ಜನರು ಪೂರ್ವಾಗ್ರಹಗಳನ್ನು ಬದಿಗಿಟ್ಟು ಇವುಗಳನ್ನು ಗ್ರಹಿಸಲು ಕೋರಿದ್ದು, ಯಾರು ತಾನೇ ವಿವಿಧ ಹೂವುಗಳನ್ನು ಸೇರಿಸಿ ಮಾಡಿದ ಮಾಲೆಯನ್ನು ಇಷ್ಟಪಡುವುದಿಲ್ಲವೆಂದು ಪ್ರಶ್ನಿಸಿದ್ದಾರೆ. ಮೊದಲನೆಯ ಅಧ್ಯಾಯವೇ ಚಾರ್ವಾಕ ಪದ್ಧತಿಯ ದರ್ಶನ ಮಾಡಿಸುತ್ತದೆ. ಇದನ್ನು ಆಧರಿಸಿ ಚಾರ್ವಾಕರ ವಿಚಾರಗಳನ್ನು ಸಂಕ್ಷಿಪ್ತವಾಗಿ ಮುಂದೆ ತಿಳಿಸಿದೆ. 
ಚಾರ್ವಾಕ ವಿಚಾರಧಾರೆಯ ಪ್ರಮುಖ ಅಂಶಗಳು:
1. ದೇವರ ಅಸ್ತಿತ್ವಕ್ಕೆ ಆಧಾರವಿಲ್ಲ. 
2. ಇರುವ ಜೀವನವನ್ನು ಸಂತೋಷವಾಗಿ ಕಳೆಯಿರಿ. ಸಾವು ನಿಶ್ಚಿತವಿರುವಾಗ ಮತ್ತು ದೇಹ ಭಸ್ಮವಾದ ನಂತರ ಮತ್ತೆ ಹೇಗೆ ಬರಲು ಸಾಧ್ಯ? ಸಂಪತ್ತು ಗಳಿಸುವುದು, ಬಯಕೆಗಳನ್ನು ಈಡೇರಿಸಿಕೊಳ್ಳುವುದು ಇಷ್ಟೇ ಮಹತ್ವದ್ದಾಗಿದೆ. ಇನ್ನೊಂದು ಭವಿಷ್ಯತ್ತಿನ ಪ್ರಪಂಚ ಇಲ್ಲ.
3. ನಾಲ್ಕು ತತ್ವಗಳಾದ ಭೂಮಿ, ನೀರು, ಗಾಳಿ ಮತ್ತು ಬೆಂಕಿಗಳಿಂದ ಶರೀರ ಉತ್ಪತ್ತಿಯಾಗುವುದಿದ್ದು, ಬುದ್ಧಿಶಕ್ತಿಯೂ ಉತ್ಪತ್ತಿಯಾಗುತ್ತದೆ ಮತ್ತು ಶರೀರದ ನಾಶದೊಂದಿಗೆ ಅದೂ ನಾಶವಾಗುತ್ತದೆ. ಆತ್ಮ ಎಂಬುದು ಪ್ರತ್ಯೇಕವಾದುದಾಗಿರದೆ ಶರೀರದೊಂದಿಗೆ ಜನಿಸುವ ಬುದ್ಧಿಶಕ್ತಿಯೇ ಆಗಿದೆ. ಆತ್ಮ ಎಂಬುದು ಪ್ರತ್ಯೇಕ ಎಂಬುದಕ್ಕೆ ಯಾವುದೇ ಆಧಾರವಿಲ್ಲ. (ಗಮನಿಸಿ, ಪಂಚಭೂತಗಳಲ್ಲಿ ಒಂದೆಂದು ಪರಿಗಣಿತವಾದ ಆಕಾಶಕ್ಕೆ ಇಲ್ಲಿ ಸ್ಥಾನ ಕೊಟ್ಟಿಲ್ಲ.)
4. ಸಂತೋಷ ಅನುಭವಿಸಬೇಕು. ಇತರರಿಗೆ ತೊಂದರೆಯಾಗುತ್ತದೆ, ಹಿಂಸೆಯಾಗುತ್ತದೆ ಎಂದು ಸಂತೋಷ ಅನುಭವಿಸದಿರುವವರು ಮೂರ್ಖರು. ಅಕ್ಕಿಯನ್ನು ತಿನ್ನಲು ಬತ್ತದ ಮೇಲಿನ ಹೊಟ್ಟು ತೆಗೆದು ಬಿಸಾಕುವುದಿಲ್ಲವೇ? ಅಥವ ಮೀನು ಬಯಸುವವನು ತನಗೆ ಬೇಕಾದುದನ್ನು ಬೇಕಾದಷ್ಟು ತಿಂದು ಮೀನಿನ ಮುಳ್ಳು, ಇತ್ಯಾದಿ ತ್ಯಾಜ್ಯ ಬಿಸಾಕುವುದಿಲ್ಲವೇ? 
5. ವೇದಗಳು ಅಸತ್ಯ, ಸ್ವಾರ್ಥ ಮತ್ತು ಹೇಳಿದ್ದೇ ಹೇಳುವುವಾಗಿವೆ. ವೇದ ಪಂಡಿತರು ಜ್ಞಾನಕಾಂಡವನ್ನು ಬೋಧಿಸುವವರು ಕರ್ಮಕಾಂಡವನ್ನು ವಿರೋಧಿಸುತ್ತಾರೆ, ಕರ್ಮಕಾಂಡ ಹೇಳುವವರು ಜ್ಞಾನಕಾಂಡವನ್ನು ಖಂಡಿಸುತ್ತಾರೆ. ಮುಂದಿನ ಲೋಕದಲ್ಲಿ ಸಂತೋಷ ಸಿಗುವುದಿಲ್ಲವೆಂದಾದರೆ ತಿಳಿದವರು, ಜ್ಞಾನಿಗಳು ಅಗ್ನಿಹೋತ್ರ ಇತ್ಯಾದಿಗಳನ್ನು ಮಾಡಿ ದಣಿಯುವುದೇಕೆ, ತ್ಯಾಗ ಮಾಡುವುದೇಕೆ ಎಂದು ಕೇಳಬಹುದು. ಅವರು ಮಾಡುತ್ತಾರೆಂದ ಮಾತ್ರಕ್ಕೆ ಅದು ಖಚಿತವಾಗುವುದಿಲ್ಲ. ಅದನ್ನು ಅವರು ಹೊಟ್ಟೆಪಾಡಿಗೆ ಮಾಡುತ್ತಾರೆ.
6. ಸ್ವರ್ಗ ಅನ್ನುವುದು ಹೇಗೆ ಇಲ್ಲವೋ, ನರಕ ಅನ್ನುವುದೂ ಇಲ್ಲವೇ ಇಲ್ಲ. ಆಳುವ ರಾಜನೇ ಪರಮೇಶ್ವರ. ದೇಹಾತ್ಮವಾದದಂತೆ ದೇಹದ ಕಪ್ಪು, ಬಿಳುಪು, ಕೃಷ ಇತ್ಯಾದಿಗಳು ದೇಹದೊಂದಿಗೇ ಜೋಡಿಸಲ್ಪಟ್ಟವು. 
7. ಯಾವುದೇ ಘಟನೆಗೆ ಕಾರ್ಯ-ಕಾರಣ ಸಂಬಂಧಗಳಿದ್ದರೂ ಪರೀಕ್ಷಿಸಿ ಒಪ್ಪಬೇಕು. ಮನಸ್ಸು ಸ್ವಂತವಾಗಿ ಹೊರಗಿನ ಸಂಗತಿಗಳನ್ನು ಅರಿಯಬಲ್ಲದೆಂಬುದು ಸರಿಯಲ್ಲ. ಮನಸ್ಸು ದೇಹದ್ದೇ ಭಾಗವಾಗಿದೆ. 
8. ಬೇರೊಬ್ಬರು ಹೇಳಿದರು ಎಂದಾಕ್ಷಣ ಅದನ್ನು ಒಪ್ಪಬೇಕಿಲ್ಲ. ಹೋಲಿಕೆ ಮಾಡಿ ನಿರ್ಧರಿಸಬೇಕಿಲ್ಲ. 
9. ಬೇರೊಂದು ಲೋಕವಿಲ್ಲ, ಮುಕ್ತಿಯಿಲ್ಲ, ಬೇರೊಂದು ಆತ್ಮ ಇಲ್ಲವೇ ಇಲ್ಲ. ಸತ್ತ ಮೇಲೆ ಇನ್ನೊಂದು ಲೋಕಕ್ಕೆ ಹೋಗುತ್ತಾರಾದರೆ, ಅವರು ತಮ್ಮ ಪ್ರೀತಿಪಾತ್ರರ ಸಲುವಾಗಿ ಹಿಂತಿರುಗಿ ಏಕೆ ಬರುವುದಿಲ್ಲ? ಸತ್ತ ಮೇಲೆ ಮಾಡುವ ಕ್ರಿಯೆಗಳೆಲ್ಲಾ ಹೊಟ್ಟೆಪಾಡಿನ ಕ್ರಿಯೆಗಳು. ಯಜ್ಞ-ಯಾಗಗಳಲ್ಲಿ ಮಾಡುವ ಕರ್ಮಗಳು ಭಂಡರು ಕಂಡುಹಿಡಿದಿದ್ದಾಗಿದ್ದು, ಪಂಡಿತರು, ಪೂಜಾರಿಗಳು ತಮ್ಮ ಸಲುವಾಗಿ ಮಾಡುವುದಾಗಿದೆ. 
10. ಯಜ್ಞದಲ್ಲಿ ಬಲಿ ಕೊಡಲಾಗುವ ಪಶು ಸ್ವರ್ಗಕ್ಕೆ ಹೋಗವುದಾದರೆ, ಯಜ್ಞ ಮಾಡುವವರು ತಮ್ಮ ತಂದೆಯನ್ನೇ ಏಕೆ ಬಲಿ ಕೊಡಬಾರದು?
11. ಶ್ರಾದ್ಧ ಮಾಡುವಾಗ ಕೊಡುವ ಪಿಂಡದಿಂದ ಸ್ವರ್ಗದಲ್ಲಿರುವವರು ತೃಪ್ತರಾಗುವುದಾದರೆ, ಮನೆಯ ಕೆಳಭಾಗದಲ್ಲೇ ಆಹಾರ ಕೊಟ್ಟು ಮನೆಯ ಮೇಲೆ ಇರುವವರನ್ನು ತೃಪ್ತಿ ಪಡಿಸಬಹುದಲ್ಲವೇ?
12. ಬದುಕಿದ್ದಾಗ ಸಲ ಮಾಡಿಯಾದರೂ ತುಪ್ಪ ತಿನ್ನಬೇಕು. ಸತ್ತ ಮೇಲೆ ಏನಿದೆ ಮಣ್ಣು? ಮಜಾ ಮಾಡಿ, ಸುಖ ಪಡಿ, ಸಂತೋಷದಿಂದಿರಿ ಎಂಬ ಚಾರ್ವಾಕ ತತ್ವ ಪಾಲಿಸಬೇಕು.
     ಚಾರ್ವಾಕ ಪದ್ಧತಿ ಒಂದು ಪಂಗಡವಾಗಿ ಬೆಳೆದುಬರಲಿಲ್ಲ ಮತ್ತು ಯಾವುದೇ ಒಂದು ಕುಟುಂಬದ ಎಲ್ಲರೂ ಈ ತತ್ವವನ್ನು ಪಾಲಿಸುತ್ತಾರೆ ಎಂಬುದೂ ಇಲ್ಲ. ಆದರೂ ಇಂತಹ ಮನೋಭಾವದ ಜನರು ಅಲ್ಲಲ್ಲಿ ನಮ್ಮ ನಡುವೆ ಕಂಡುಬರುತ್ತಾರೆ. ಅದು ಅವರವರ ವಿವೇಚನಾ ಶಕ್ತಿ ಮತ್ತು ವಿವೇಚನೆಯ ಮಟ್ಟಕ್ಕೆ ಸಂಬಂಧಿಸಿದೆ. ಪ್ರತಿಯೊಂದರಲ್ಲೂ ಒಳ್ಳೆಯದೂ ಇರುತ್ತದೆ, ಕೆಟ್ಟ ಸಂಗತಿಗಳೂ ಇರುತ್ತವೆ. ಒಳ್ಳೆಯದನ್ನು ಗ್ರಹಿಸೋಣ, ಕೆಟ್ಟದ್ದನ್ನು ತ್ಯಜಿಸೋಣ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ