ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಅಕ್ಟೋಬರ್ 16, 2017

ಅಪಾತ್ರ ದಾನ


     ಕೆಲವರು ಇರುತ್ತಾರೆ, 'ಇವರೇಕೆ ನಮ್ಮ ಮನೆಗೆ ಬಂದರಪ್ಪಾ. ಏನು ಕಿತಾಪತಿ ಮಾಡುತ್ತಾರೋ, ಯಾರು ಯಾರಿಗೆ ಜಗಳ ತಂದುಹಾಕುತ್ತಾರೋ' ಅನ್ನಿಸುವಂತಹವರು. ಸ್ನೇಹಿತರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ: "ನಮ್ಮ ಮನೆಯಲ್ಲೊಂದು ಕಾರ್ಯಕ್ರಮಕ್ಕೆ ನೆಂಟರನ್ನು ಕರೆದಿದ್ದೆವು. ಅವರ ಪೈಕಿ ಆ ವಿಶೇಷ ನೆಂಟರೂ ಇದ್ದರು. ನಯವಂಚನೆಯ ಮಾತುಗಳು, ಗೊತ್ತಿಲ್ಲದವರಿಗೆ ಒಳ್ಳೆಯದಾಗಿ ತೋರುವ ಪರೋಕ್ಷ ಕೊಂಕುನುಡಿಗಳು ಅವರ ವಿಶೇಷತೆ. ಊಟೋಪಚಾರಗಳು ನಡೆದು ಎಲ್ಲರೂ ವಾಪಸು ಹೋದರು.  ಉಡುಗೊರೆ, ಪ್ರತಿ ಉಡುಗೊರೆಗಳೂ ಇಂತಹ ಸಂದರ್ಭದಲ್ಲಿ ಸಾಮಾನ್ಯ. ಅವರು ಕೊಟ್ಟಿದ್ದ ಉಡುಗೊರೆ ತೆರೆದು ನೋಡಿದರೆ ಅದು ಹಿಂದೊಮ್ಮೆ ನಾನು ಅವರಿಗೆ ಕೊಟ್ಟಿದ್ದ ಉಡುಗೊರೆಯೇ ಆಗಿತ್ತು. ನಾನು ಅವರಿಗೆ ಕೊಟ್ಟಿದ್ದು ಪ್ರೀತಿಯಿಂದ. ಅವರು ನನಗೆ ಮರಳಿಸಿದ್ದು ನೋವು ಕೊಡುವ ಉದ್ದೇಶದಿಂದ". ಇಂತಹ ಅನುಭವಗಳು ಸಾಮಾನ್ಯವಾಗಿ ಹಲವರಿಗೆ ಆಗುತ್ತಿರುತ್ತದೆ. ಈ ಕಾರಣಕ್ಕಾಗಿಯೇ ಹಿರಿಯರು ಅಪಾತ್ರ ದಾನ ಮಾಡಬಾರದು ಎಂದು ಹೇಳುವುದು.
     ದಾನ ಕೊಡುವುದು ಧರ್ಮದ ಒಂದು ಭಾಗವಾಗಿದೆ. ದಾನ ಕೊಡುವುದರಿಂದ ಸ್ವಾರ್ಥದ ಭಾವನೆ ದೂರವಾಗುತ್ತದೆ, ಇನ್ನೊಬ್ಬರಿಗೆ ಸಹಾಯ ಮಾಡಿದ ಸಂತೋಷ ಉಂಟಾಗುತ್ತದೆ, ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ. ಆದರೆ, ದಾನ ಯಾರಿಗೆ ಕೊಡುತ್ತೇವೆ, ಏನು ಕೊಡುತ್ತೇವೆ ಅನ್ನುವುದನ್ನು ಅವಲಂಬಿಸಿ ಕೆಲವೊಮ್ಮೆ ಅದು ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಸೋಮಾರಿಯೊಬ್ಬನಿಗೆ ಹಣ ಕೊಟ್ಟರೆ ಅವನು ಮತ್ತಷ್ಟು ಸೋಮಾರಿಯಾಗುತ್ತಾನೆ. ಯಾವುದೇ ಶ್ರಮ ಪಡದೆ ಸಿಗುವ ಸವಲತ್ತುಗಳೂ ಮನುಷ್ಯನನ್ನು ಸೋಮಾರಿಯಾಗಿಸುತ್ತದೆ, ಹಿಂದುಳಿಸುತ್ತವೆ. ಇದನ್ನೇ ಅಪಾತ್ರ ದಾನವೆನ್ನುವುದು. ಹಣ ಅಥವ ಸವಲತ್ತುಗಳನ್ನು ಉಚಿತವಾಗಿ ಕೊಟ್ಟು ಜನರನ್ನು ಮತ್ತಷ್ಟು ಸೋಮಾರಿಗಳನ್ನಾಗಿಸುವುದಕ್ಕಿಂತ ಅವರುಗಳು ಸ್ವಂತ ಕಾಲಿನ ಮೇಲೆ ನಿಲ್ಲಲು ಪ್ರೇರಿಸುವಂತಹ, ಅನುಕೂಲವಾಗುವಂತಹ ಅವಕಾಶಗಳನ್ನು ಕಲ್ಪಿಸುವುದು ಉತ್ತಮ. ಬಾಂಬುಗಳನ್ನು ತಯಾರಿಸುವ ಜ್ಞಾನ ಭಯೋತ್ಪಾದಕರ ಪಾಲಾದರೆ ಆಗುವ ಹಾನಿಯನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ.
     ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ: 'ದಾನ ಕೊಡುವಾಗ ಏನು ಕೊಡುತ್ತೇವೆ ಮತ್ತು ಯಾರಿಗೆ ಕೊಡುತ್ತೇವೆ ಎಂಬುದನ್ನು ಪರಿಗಣಿಸಬೇಕೆ? ಒಬ್ಬ ವ್ಯಕ್ತಿ ಪಡೆದ ದಾನವನ್ನು ಅಧರ್ಮ ಕಾರ್ಯಕ್ಕೆ ಬಳಸುತ್ತಾನೆಂದಾದರೆ ದಾನ ಕೊಡಲು ನಿರಾಕರಿಸಬಹುದೆ? ಒಂದು ವೇಳೆ ದಾನ ಕೊಟ್ಟರೆ, ಆ ಪಾಪಕ್ಕೆ ನಾವು ಹೊಣೆಗಾರರಾಗುತ್ತೇವೆಯೆ? ಅಧರ್ಮ ಮಾಡುವವನಿಗೆ ದಾನ ಕೊಟ್ಟು, ಮತ್ತಷ್ಟು ಅಧರ್ಮ ಮಾಡಲು ನೆರವಾಗುವುದು ಅಧರ್ಮವಾಗುವುದೇ? ದಾನ ಕೊಡಲು ನೀತಿ, ನಿಯಮಗಳಿವೆಯೇ?' - ಇವುಗಳಿಗೆ ಉತ್ತರ ತಿಳಿಯಲು ಪ್ರಯತ್ನಿಸೋಣ.
     ಕೊಡುವ ದಾನ ಚಿಕ್ಕದೋ, ದೊಡ್ಡದೋ ಮುಖ್ಯವಲ್ಲ. ಕೊಡುವಾಗ ಶ್ರದ್ಧೆ, ಭಕ್ತಿಗಳಿಂದ, ಪ್ರಾಮಾಣಿಕತೆಯಿಂದ, ಗೌರವದಿಂದ ಕೊಟ್ಟರೆ ಅಂತಹ ದಾನಕ್ಕೆ ಮಹತ್ವವಿದೆ. ದಾನ ಪಡೆಯುವವರೂ ಹಾಗೆಯೇ ಇರಬೇಕು. ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ, ಗೌರವದಿಂದ ಸ್ವೀಕರಿಸಬೇಕು ಮತ್ತು ದಾನ ಸ್ವೀಕರಿಸಲು ಅರ್ಹನಾಗಿರಬೇಕು. ಇಲ್ಲದಿದ್ದರೆ, ಅಂತಹ ದಾನದ ಕೊಡುವಿಕೆ, ತೆಗೆದುಕೊಳ್ಳುವಿಕೆಯಿಂದ ಒಳ್ಳೆಯ ಪರಿಣಾಮವಾಗುವುದಿಲ್ಲ. ಇದಕ್ಕೆ ಪೂರಕವೆನಿಸುವ ಒಂದು ಸುಂದರ ಕಥೆಯಿದೆ. ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಬೃಹತ್ ವಿಗ್ರಹ ಸ್ಥಾಪಿಸಿದ ಚಾವುಂಡರಾಯ ಗರ್ವದಿಂದ ಕೂಡಿದವನಾಗಿ ಮಸ್ತಕಾಭಿಷೇಕ ಮಾಡಲು ನಿರ್ಧರಿಸಿ ಬೃಹತ್ ಪ್ರಮಾಣದಲ್ಲಿ ಹಾಲು, ಎಳನೀರು, ಪಂಚಾಮೃತಗಳನ್ನು ಅಭಿಷೇಕ ಮಾಡಿದಾಗ ಅದು ವಿಗ್ರಹದ ಹೊಕ್ಕಳಿನಿಂದ ಕೆಳಭಾಗಕ್ಕೆ ಇಳಿಯುತ್ತಲೇ ಇರಲಿಲ್ಲ. ಊರಿನ ಜನರೆಲ್ಲರೂ ಸಹ ಮನೆಗಳಿಂದ ಹಾಲು, ಎಳನೀರುಗಳನ್ನು ತಂದು ಎರೆದರೂ ಪ್ರಯೋಜನವಾಗಿರಲಿಲ್ಲ. ಊರಿನ ಒಬ್ಬ ವೃದ್ಧೆ ಸಣ್ಣ ಗುಳ್ಳಕಾಯಿಯಲ್ಲಿ ಸ್ವಲ್ಪ ಹಾಲನ್ನು ತಂದಿದ್ದಳು. ಊರವರು ಆಕೆಯನ್ನು ಕಂಡು ಹಾಸ್ಯ ಮಾಡಿದರೂ, ಆಚಾರ್ಯರ ಸಲಹೆಯಂತೆ ಆಕೆಗೆ ಅಭಿಷೇಕ ಮಾಡಲು ಅವಕಾಶ ಸಿಕ್ಕಿತ್ತು. ಆಕೆ ಭಕ್ತಿಯಿಂದ ಅರ್ಪಿಸಿದಾಗ ಆಶ್ಚರ್ಯವೆಂಬಂತೆ ವಿಗ್ರಹ ಪೂರ್ತಿ ಅಭಿಷೇಕದ ಜಲದಿಂದ ತೊಯ್ದಿತ್ತು. ಗುಳ್ಳಕಾಯಜ್ಜಿ ಎಂದು ಹೆಸರಾದ ಆಕೆಯ ವಿಗ್ರಹ ಈಗಲೂ ಶ್ರವಣಬೆಳಗೊಳದಲ್ಲಿದೆ.  ಸ್ಕಂದ ಪುರಾಣದಲ್ಲಿ ದಾನವನ್ನು ಅಥವ ದಾನದ ಮಹತ್ವವನ್ನು ಹಾಳುಗೆಡವುವ ದಾನನಾಶಕಗಳಲ್ಲಿ ಒಂದು ಅಪಾತ್ರ ದಾನ ಎಂದು ಹೇಳಲಾಗಿದೆ. ಮೂರು ರೀತಿಯ ದಾನನಾಶಕಗಳಿವೆ: ಪಶ್ಚಾತ್ತಾಪ ದಾನ, ಅಪಾತ್ರ ದಾನ ಮತ್ತು ಅಶ್ರದ್ಧಾ ದಾನ. ಪಶ್ಚಾತ್ತಾಪ ದಾನವೆಂದರೆ ಏಕಾದರೂ ದಾನ ಕೊಟ್ಟೆವೋ ಎಂದು ವಿಷಾದಪಡುವ ದಾನ. ಅಪಾತ್ರ ದಾನವೆಂದರೆ ತಪ್ಪು ವ್ಯಕ್ತಿಗೆ ಅಥವ ಅನರ್ಹ ವ್ಯಕ್ತಿಗೆ ಕೊಡುವ ದಾನ. ದಾನ ಕೊಡದಿರುವುದು ಎಷ್ಟು ಕೆಟ್ಟದ್ದೋ, ಅಷ್ಟೇ ಕೆಟ್ಟದ್ದು ಅಪಾತ್ರ ದಾನ. ಅಶ್ರದ್ಧಾ ದಾನವೆಂದರೆ ಸೋಮಾರಿಗೆ ಕೊಡುವ ದಾನ. ಅದನ್ನು ರಾಕ್ಷಸ ದಾನವೆಂದೂ ಹೇಳುತ್ತಾರೆ.
     ದಾನ ಕೊಡುವಾಗ ಹೊಂದಿರುವ ಶಕ್ತಿಗೆ ಮತ್ತು ತೆಗೆದುಕೊಳ್ಳುವವರ ಅಗತ್ಯತೆ ಅನುಸರಿಸಿ ದಾನ ಮಾಡಬೇಕು. ದುಷ್ಟರಿಂದ, ಕಪಟಿಗಳಿಂದ, ಸುಳ್ಳು ಹೇಳುವವರಿಂದ, ಅಧೀನದಲ್ಲಿ ಕೆಲಸ ಮಾಡುವವರಿಂದ ದಾನ ಪಡೆಯುವವರು ದಾನ ಪಡೆಯಲು ಅನರ್ಹರೆನಿಸಿ, ದಾನ ಅಪಾತ್ರವೆನಿಸುವುದು. ಭಗವದ್ಗೀತೆಯ ೧೭ನೆಯ ಅಧ್ಯಾಯದಲ್ಲಿ ಶ್ರೀಕೃಷ್ಣ ಹೇಳಿರುವಂತೆ, ದಾನವನ್ನು ಕರ್ತವ್ಯದಂತೆ, ಪ್ರತಿಫಲಾಪೇಕ್ಷೆಯಿಲ್ಲದೆ ಅರ್ಹರಾದವರಿಗೆ ಸೂಕ್ತ ಸಮಯ ಮತ್ತು ಸೂಕ್ತ ಸ್ಥಳದಲ್ಲಿ ನೀಡುವವರು ಉತ್ತಮರು. ಪ್ರತಿಫಲದ ಅಪೇಕ್ಷೆ ಮತ್ತು ನಿರೀಕ್ಷೆಯಲ್ಲಿ, ಅಸಮಾಧಾನದಿಂದ ಮಾಡುವ ದಾನ ಪರಿಶುದ್ಧವಲ್ಲ. ಅಶುದ್ಧ ಸ್ಥಳದಲ್ಲಿ, ಅಕಾಲದಲ್ಲಿ ಅನರ್ಹ ವ್ಯಕ್ತಿಗೆ ಕೊಡುವ ಅಥವ ಸರಿಯಾದ ಗಮನ ಮತ್ತು ಗೌರವವಿಲ್ಲದೆ ಕೊಡುವ ದಾನ ಕೆಟ್ಟದಾನವಾಗುತ್ತದೆ. ಗರುಡ ಪುರಾಣದಲ್ಲೂ ಅರ್ಹ ವ್ಯಕ್ತಿಗೆ ಗೌರವದಿಂದ ದಾನ ಕೊಡಬೇಕೆಂಬ ಉಲ್ಲೇಖವಿದೆ. ಸಮುದ್ರದಲ್ಲಿ ಬೀಳುವ ಮಳೆ, ಹಗಲು ಹೊತ್ತಿನಲ್ಲಿ ಉರಿಸುವ ದೀಪ, ಹೊಟ್ಟೆ ತುಂಬಿದವರಿಗೆ ಹಾಕುವ ಊಟ ಮತ್ತು ಅಪಾತ್ರ ದಾನಗಳು ವ್ಯರ್ಥವೆಂದು ನೀತಿ ಶಾಸ್ತ್ರ ಹೇಳುತ್ತದೆ.
     ಅಪಾತ್ರ ದಾನ, ಅಶ್ರದ್ಧಾ ದಾನ ಮತ್ತು ಪಶ್ಚಾತ್ತಾಪ ದಾನಗಳ ಜೊತೆಗೆ ಇಂದಿನ ಕಾಲಕ್ಕೆ ಅನುಗುಣವಾಗಿ ಕುರುಡು ದಾನ ಎಂಬುದನ್ನೂ ಸೇರಿಸಬಹುದು. ಕುರುಡು ದಾನ ಅಂದರೆ? ಏನು ದಾನ ಕೊಡುವುದು ಮತ್ತು ಯಾರಿಗೆ ಎಂಬದನ್ನು ತಿಳಿಯದೆ ಕೊಡುವ ದಾನ. ಸತ್ತ ನಂತರದಲ್ಲಿ ತಮ್ಮ ಕಣ್ಣುಗಳನ್ನು, ಅಂಗದ ಉಪಯೋಗಕ್ಕೆ ಬರುವ ಭಾಗಗಳನ್ನು ದಾನ ಮಾಡುವ ಪುಣ್ಯಾತ್ಮರಿರುತ್ತಾರೆ. ಇಂದಿನ ಕಾನೂನು, ನಿಯಮಗಳಿಗನುಸಾರವಾಗಿ ಇಂತಹ ದಾನ ಕೊಡುವವರು ಮತ್ತು ಪಡೆಯುವವರ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ಇಂತಹ ದಾನವನ್ನು ಯಾರೋ ಒಬ್ಬ ರೌಡಿಯೋ, ಮತಾಂಧ ಭಯೋತ್ಪಾದಕನೋ ಪಡೆದರೆ? ಅವನು ಮತ್ತಷ್ಟು ಕೆಟ್ಟ ಕೆಲಸಗಳಿಗೆ ತೊಡಗಲು ಸಹಕಾರಿಯಾಗುತ್ತದೆ. ಆರೋಗ್ಯವಂತರಾಗಿರುವವರ ಕಿಡ್ನಿಗಳನ್ನೇ ಕದಿಯುವ ಖದೀಮ ವೈದ್ಯರುಗಳೇ ಇರುವ ಈ ಕಾಲದಲ್ಲಿ ಒಳ್ಳೆಯ ಕೆಲಸಗಳೂ ಕೆಟ್ಟದಾಗುತ್ತವೆ.
     ಈ ಕೈಯಲ್ಲಿ ಕೊಟ್ಟದ್ದು ಆ ಕೈಗೆ ಗೊತ್ತಾಗಬಾರದು ಎಂಬ ಆಡುನುಡಿಯಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ದಾನ ಮಾಡಬೇಕೆಂಬ ಆಶಯವಿದೆ. ಸರ್ಕಾರದ ಅನೇಕ ಕಲ್ಯಾಣ ಯೋಜನೆಗಳು ಅಪಾತ್ರರ ಪಾಲಾಗುತ್ತಿವೆ. ಕೆಲವು ಸೋಮಾರಿಗಳನ್ನು ಬೆಳೆಸುವ ಯೋಜನೆಗಳನ್ನೂ ಮತಗಳಿಕೆ ದೃಷ್ಟಿಯಿಂದ ಜಾರಿಗೆ ತಂದಿರುವುದರಿಂದ ಸಾರ್ವಜನಿಕರ ಹಣದ ದುರುಪಯೋಗವಲ್ಲದೆ, ಕಾಲಾನುಕ್ರಮದಲ್ಲಿ ಅಂತಹ ಕ್ರಮಗಳು ಸಮಾಜದ, ದೇಶದ ಪ್ರಗತಿಗೆ ಅಡ್ಡಗಾಲಾಗುವುದು ನಿಶ್ಚಿತ. ವೈಯಕ್ತಿಕವಾಗಲೀ, ಸಾರ್ವಜನಿಕ ಸಂಸ್ಥೆಗಳಾಗಲೀ, ಸರ್ಕಾರವಾಗಲೀ ಸವಲತ್ತುಗಳು ಜಾತಿ, ಮತ, ಧರ್ಮಗಳನ್ನು ಅಂತರದಲ್ಲಿರಿಸಿ ಅರ್ಹರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳುವುದು ಸಧೃಢ ಸಮಾಜಕ್ಕೆ ಹಿತಕಾರಿ. ವಿಪರ್ಯಾಸವೆಂದರೆ ಸಮಾಜವನ್ನು ಒಗ್ಗೂಡಿಸಬೇಕಾದ ಆಳುವವರು ಸಂಕುಚಿತ ಲಾಭಗಳಿಗಾಗಿ ಸಮಾಜವನ್ನು ಒಡೆಯುತ್ತಿದ್ದಾರೆ ಮತ್ತು ಆ ಮೂಲಕ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ. ಜನಜಾಗೃತಿಯೇ ಇದಕ್ಕಿರುವ ಏಕೈಕ ಪರಿಹಾರ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ