ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಆಗಸ್ಟ್ 23, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ - 16: ಮುಗಿಯದ ಪ್ರಶ್ನೆ


ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ವಾತ್ |
ಸಂ ಬಾಹುಭ್ಯಾಂ ದಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ || (ಋಕ್. ೧೦.೮೧.೩.)
     ವೇದಗಳಲ್ಲಿ ಪರಮಾತ್ಮನ ವಿಷಯದಲ್ಲಿ ಸಾವಿರಾರು ಮಂತ್ರಗಳಿವೆ. ಒಂದು ಮಂತ್ರದಲ್ಲಿ 'ತ್ವಂ ಸಂಪ್ರಶ್ನಂ ಭುವನಾಯ . . . . ' 'ಪ್ರಶ್ನೆ ಕೇಳುತ್ತಾ ಹೋಗು' ಅಂತಾ ಇದೆ, ಅವನು ದಯಾಳು ಅಂತ ಇದೆ, ದಯಾಳು ಆಗಿದ್ರೆ ಕಷ್ಟ ಯಾಕೆ ಇರ್ತಿತ್ತು? ಅವನು ನ್ಯಾಯಕಾರಿ, ನ್ಯಾಯ ಮಾಡ್ತಾನೆ ಅಂತ ಇದೆ, ಅನ್ಯಾಯದಿಂದ ಜನ ಏಕೆ ನರಳುತ್ತಾ ಇದ್ದಾರೆ? ಕೇಳುತ್ತಾ ಹೋದಷ್ಟೂ ಇದ್ದೇ ಇದೆ. 'ಸಂಪ್ರಶ್ನಾ'- ಹೀಗೆ ಎಷ್ಟು ಪ್ರಶ್ನೆ ಬೇಕಾದರೂ ಕೇಳು, ಇನ್ನೂ ಇರುತ್ತೆ. ನಾರದ-ಸನತ್ಕುಮಾರ ಸಂವಾದ ಅಂತ ಉಪನಿಷತ್ತಿನಲ್ಲಿ ಬರುತ್ತೆ. ಬಹಳ ಭವ್ಯವಾಗಿದೆ. ಸನತ್ ಕುಮಾರ ಅಂದರೆ ಯಾವಾಗಲೂ ಕುಮಾರನೇ. ವೃದ್ಧಾಪ್ಯವೇ ಇಲ್ಲ. ನಾರದ - ನರರ ಜ್ಞಾನವನ್ನು ನಾರ ಅಂತಾರೆ, ದದಾತಿ - ನರರಿಗೆ ಬೇಕಾದ ಜ್ಞಾನವನ್ನು ಕೊಡುವವನು ನಾರದ! ಇವರಿಬ್ಬರ ಸಂವಾದ ಇದೆಯಲ್ಲಾ, ಇವರು ಇಬ್ಬರು ಯಾವಾಗಲೂ, ಯಾವ ಕಾಲಕ್ಕೂ ಇರುತ್ತಾರೋ, ಈ ಭಗವಂತನೂ ಅಷ್ಟೆ, ಸಂಪ್ರಶ್ನ - ಎಷ್ಟು ಪ್ರಶ್ನೆ ಬೇಕಾದರೂ ಕೇಳುತ್ತಾ ಹೋಗು, ಕೊನೆಗೆ ಪ್ರಶ್ನೆ ಇದ್ದೇ ಇರುತ್ತೆ. ಪ್ರಶ್ನೆಗಳಿಗೆ ಇನ್ನು ಉತ್ತರ ಕೊಡುವುದಕ್ಕೆ ಆಗುವುದಿಲ್ಲವೆಂದಾಗ ಉಂಟಾಗುವ ಆ ಮೌನ ಇದೆಯಲ್ಲಾ ಅದೂ ಭಗವತ್ ಪ್ರೀತಿ. ಅನಿರ್ವಚನೀಯ ಅಂತ ಒಂದು ಪದ ಇದೆ. ಪರಮಾತ್ಮನ ನಿರ್ವಚನವನ್ನು ಅವನು ಹೀಗೆಯೇ ಇದ್ದಾನೆ ಅಂತ ಹೇಳಲು ಸಾಧ್ಯವಿಲ್ಲ, ಯಾರ ಯಾರ ಬುದ್ಧಿಶಕ್ತಿ, ಮೇಧಾಶಕ್ತಿ, ತಪಶ್ಶಕ್ತಿ ಎಷ್ಟೆಷ್ಟು ಹೆಚ್ಚುತ್ತಾ ಹೋಗುತ್ತೋ ಅಷ್ಟಷ್ಟು ಆ ಭಗವಂತನ ಜ್ಞಾನ ಕೂಡಾ ಹೆಚ್ಚುತ್ತಾ ಹೋಗುತ್ತೆ.
ದೇವರು ದೇವರೇ!
     ಆಗ ನಾವು 33 ಕೋಟಿ ಇದ್ದೆವು, ಇವತ್ತು ನಾವು ನೂರು ಕೋಟಿ ಇದೀವಿ, ಲಕ್ಷಣವಾಗಿ. ಒಬ್ಬೊಬ್ಬರ ಮನೆಯಲ್ಲಿ ಎಷ್ಟೊಂದು ದೇವರುಗಳ ಫೋಟೋಗಳಿವೆ, ವಿಗ್ರಹಗಳಿವೆ! ಎಷ್ಟು ದೇವರುಗಳಾದರು? 100 ಕೋಟಿ ಜನ ಇದಾರೆ, ಅದರಲ್ಲಿ ಒಬ್ಬೊಬ್ಬರಿಗೆ ಎಷ್ಟೆಷ್ಟು ದೇವರಿದ್ದಾರೆ ಅಂತ ಲೆಕ್ಕ ಇಲ್ಲ. ಎಷ್ಟು ದೇವರಿದ್ದಾರೆ ಸ್ವಾಮಿ? ಹೀಗೆ ನೋಡ್ತಾ ಹೋದರೆ ನಾಸ್ತಿಕವಾದಕ್ಕೆ ನಾವು ಬರುತ್ತೇವೆ. ಮತ್ತೆ ಜ್ಞಾಪಕ ಇಟ್ಟುಕೊಳ್ಳಬೇಕು, ದೇವರು ದೇವರೇ! ಒಬ್ಬ ಹೇಳ್ತಾನೆ, ‘Where is God?  He is nowhere’, ಅವನು ಎಲ್ಲೂ ಇಲ್ಲ. ಮತ್ತೆ ಇನ್ನೊಬ್ಬ ಹೇಳ್ತಾನೆ, ‘He is now here’, ಈಗ ಇಲ್ಲಿದ್ದಾನೆ ಅವನು. ಇದು ಜ್ಞಾನಕ್ಕೆ ಸಂಬಂಧ ಪಟ್ಟ ಮಾತು. 'ಒಂದು ಮಡಕೆ ತೆಗೆದುಕೊಂಡು ಬಾರಪ್ಪಾ' ಅಂತ ಒಬ್ಬ ಗುರು ಶಿಷ್ಯನಿಗೆ ಹೇಳ್ತಾನೆ. ಅವನು ಮಡಕೆ ತೆಗೆದುಕೊಂಡು ಬರ್ತಾನೆ. 'ಅಯ್ಯೋ, ನನಗೆ ಆ ಮಡಕೆ ಬೇಡಯ್ಯಾ, ಆ ಮಡಕೆ ಯಾವ ಮಣ್ಣಿಂದ ಆಗಿದೆಯೋ ಆ ಮಣ್ಣು ಬೇಕು'. ಆ ಶಿಷ್ಯ ಹೇಳ್ತಾನೆ, 'ಆ ಮಡಕೇನೇ ಚೂರು ಚೂರು ಮಾಡಿ ಸ್ವಾಮಿ, ನಿಮಗೆ ಬೇಕಾದ ಆ ಮಣ್ಣು ಸಿಕ್ಕುತ್ತೆ' ಅಂತ. ಪರಮಾತ್ಮ ಅಸೀಮ, ಪರಿಪೂರ್ಣ. ಈ ಜೀವಾತ್ಮ ಎಷ್ಟು ದೊಡ್ಡ ಯೋಗಿಯಾಗಲೀ, ಎಷ್ಟು ದೊಡ್ಡ ವಿದ್ವಾಂಸನಾಗಲೀ, ತಿಳುವಳಿಕೆ ಸೀಮಿತವಾದುದ್ದಾಗಿರುತ್ತದೆ.
ದೇವರನ್ನು ನೋಡಲಾಗದು, ಅನುಭವಿಸಬೇಕು
     ನಾನು ಇಂತಹ ಮನೆಯಲ್ಲಿ ಹುಟ್ಟಬೇಕು ಎಂದು ಭಗವಂತನನ್ನು ನಾನು ಕೇಳ್ಕೊಳ್ಳಲಿಲ್ಲ. ಮನುಷ್ಯನಾಗಿ ಹುಟ್ಟಲು ಯೋಗ್ಯ ಅಂತ ನನಗೆ ಮನುಷ್ಯ ಜನ್ಮ ಕೊಟ್ಟ. ಇದನ್ನು ಯಾಕೆ ಹೇಳ್ತಾ ಇದೀನಿ ಅಂದ್ರೆ, ಪರಮಾತ್ಮ, ಪರಿಪೂರ್ಣ, ವಿಶ್ವವ್ಯಾಪಕ, ಈ ಜೀವಾತ್ಮ ಪರಿಚ್ಛಿನ್ನ. ಕೇವಲ ಒಂದು ಜಾಗದಲ್ಲಿ ಇರತಕ್ಕವನು. ಅದೂ ಕೂಡ ಎಷ್ಟು? ಜೀವಾತ್ಮನ ವಿಸ್ತಾರ, ಉದ್ದ, ಅಗಲ, ಎಷ್ಟಿದೆ ಗೊತ್ತಾ? 'ಬಾಲಾಗ್ರ . . . ' . . ದೇವರೇ! ಲೆಕ್ಕದಲ್ಲಿ ನನ್ನ ತಲೆ ಹಾಗೆ ಹಾಗೆಯೇ. ಇಲ್ಲಿ ಲೆಕ್ಕ ಮಾಡಬೇಕೆಂದರೆ, ಬಾಲಾಗ್ರದ ಶತಭಾಗ, ಒಂದು ಕೂದಲಿನ ತುದಿಯ 100ನೆಯ ಒಂದು ಭಾಗ, ಕೂದಲನ್ನು ಉದ್ದುದ್ದ ಸೀಳಬೇಕು, ಅಡ್ಡಡ್ಡಲಾಗಿ ಅಲ್ಲ, ಅದನ್ನು ಮತ್ತೆ ಸೀಳಿ 100ನೆಯ ಒಂದು ಭಾಗ ತೆಗೆಯಬೇಕು. ಹೀಗೆ ಆರು ಸಲ ಸೀಳಬೇಕು. ಕೊನೆಗೆ ಎಷ್ಟು ಸೂಕ್ಷ್ಮವಾಗಿ ಆ ಕೂದಲು ಉಳಿದುಕೊಳ್ಳುತ್ತದೋ ಅಷ್ಟು ಸೂಕ್ಷ್ಮ ಈ ಜೀವಾತ್ಮ. ಆಮೇಲೆಯೇ ಅವನನ್ನು ನೋಡುವುದಕ್ಕೆ ಆಗುವುದು. ಒಬ್ಬ ಶಿಷ್ಯ ಗುರುವನ್ನು ಕೇಳ್ತಾನೆ, 'ಅದ್ಯಾಕೆ ಅಷ್ಟು ಸೂಕ್ಷ್ಮವಾದ ಅವನನ್ನು ಹುಡುಕಿಕೊಂಡು ಹೋಗಬೇಕು? ಅವನ ಪಾಡಿಗೆ ಅವನಿರಲಿ ಸೂಕ್ಷ್ಮವಾಗಿ, ನಮ್ಮ ಪಾಡಿಗೆ ನಾವು ಇರೋಣ.' ಪರಮಾತ್ಮ ಜ್ಞಾನವಿಲ್ಲದೆ ಯಾವ ಜ್ಞಾನವೂ ಸಿಕ್ಕುವುದಿಲ್ಲ. ಈ ಪ್ರಪಂಚದ ಜ್ಞಾನ ಅಂದರೆ - ಸೈಂಟಿಸ್ಟ್‌ಗಳನ್ನು ಕೇಳಿ-  ಎಷ್ಟು ನಕ್ಷತ್ರಗಳಿವೆ ಅಂತ. ಯಾರಿಗೂ ಉತ್ತರ ಹೇಳಕ್ಕಾಗಲ್ಲ. ಗ್ರಹಗಳು, ಹೇಳಿಬಿಡ್ತಾರೆ, ಸೋಮ, ಮಂಗಳ, ಬುಧ, .  ಅಂತ. ಈ ನವಗ್ರಹಗಳೂ ಕೂಡ ಪೌರಾಣಿಕರು ಮಾಡಿರೋದು. ಚಂದ್ರ ಗ್ರಹ ಅಲ್ಲ, ಉಪಗ್ರಹ. ಚಂದ್ರನಿಗೂ ಪೂರ್ಣಗ್ರಹದಂತೇ ಲೆಕ್ಕ ಹಾಕುತ್ತಾರೆ. ಸೂರ್ಯ ಒಂದು ನಕ್ಷತ್ರ. ಎಲ್ಲಾ ಯೋಚನೆ ಮಾಡಿದರೆ, ನೀವು ಎಷ್ಟು ಯೋಚನೆ ಮಾಡಿ, 'ತ್ವಂ ಸಂಪ್ರಶ್ನಂ ಭುವನಾಯ . . .'  ಪ್ರಶ್ನೆ ಕೇಳುತ್ತಾ ಹೋಗಿ, ಕೊನೆಗೆ ಕೇಳಬೇಕಾದ್ದು ಇನ್ನೂ ಪ್ರಶ್ನೆ ಇರುತ್ತೆ.  ಕೇಳುತ್ತಾ ಕೇಳುತ್ತಾ ನೀನು ಮೌನಿ ಆಗುತ್ತೀಯಲ್ಲಾ, ಸಾಕಾಯ್ತಪ್ಪಾ, ಗಂಟಲು ಒಣಗಿ ಹೋಯಿತು, ಇನ್ನು ಮಾತಾಡಕ್ಕೆ ಆಗಲ್ಲ, ಅಂತ ಸ್ಥಿತಿ ಬಂದಾಗ ಉಂಟಾಗುವ ಮೌನ, ಆ ಮೌನವೂ ಕೂಡ ಒಂದು ವಾಣೀನೇ, ಮೌನವಾಣಿ. ಅದೂ ಭಗವಂತನನ್ನೇ ತೋರಿಸುತ್ತೆ. ತಮಾಷೆ, ಇನ್ನೊಬ್ಬ ಶಿಷ್ಯ ಕೇಳ್ತಾನೆ, "ಸ್ವಾಮಿ, ಅವನು ಸರ್ವವ್ಯಾಪಕ, ನಾವು ಒಂದು ಕಡೆ ಇರತಕ್ಕವರು, ನಾವು ಹೆಚ್ಚು ಅಂದರೆ ನಮ್ಮ ಕಣ್ಣು ಎಷ್ಟು ದೂರ ಹೋಗಬಹುದು, ಅಷ್ಟು ಕಾಣಬಹುದು, ಅದರ ಆಚೆ ಪ್ರಪಂಚ ಇಲ್ಲವಾ?' ಪ್ರಪಂಚ ಇದೆ, ದೇವರೂ ಇದ್ದಾನೆ. ಹಿಮಾಲಯ ನೋಡಿದಿಯಾ ಅಂದರೆ 'ನೋಡಿದೀನಿ' ಅಂತ ಹೇಳ್ತೀವಿ. ಅದು ಡಾರ್ಜಿಲಿಂಗಿನಿಂದ ಹಿಡಿದು ಹಿಂದೂಖುಷ್ ಪರ್ವತದವರೆಗೆ 2500 ಮೈಲಿಗಳವರೆಗೆ ಹರಡಿಕೊಂಡಿದೆ. ನಾನು ಹಿಮಾಲಯ ಪರ್ವತ ನೋಡಿದೆ ಅಂದಾಗ, ಸುಳ್ಳು ಹೇಳ್ತಾ ಇಲ್ಲ, ನೋಡಿದೆ, ಅಂದರೆ ಮಾತು ತಪ್ಪು, ಅಂದರೆ ಹಿಮಾಲಯವನ್ನು ನೋಡಲಿಲ್ಲ, ಹಿಮಾಲಯದ ಒಂದು ಭಾಗವನ್ನು ನೋಡಿದೆ ಅನ್ನಬೇಕು. ಯಾರು ಇಷ್ಟೊಂದೆಲ್ಲಾ ದಾರ್ಶನಿಕವಾಗಿ ಯೋಚನೆ ಮಾಡ್ತಾರೆ?
     ಮತ್ತೆ ಒಬ್ಬ ಗುರುವನ್ನು ಶಿಷ್ಯ ಕೇಳ್ತಾನೆ, 'ಪ್ರಪಂಚದಲ್ಲಿ ಇಷ್ಟೆಲ್ಲಾ ವ್ಯಾಪಿಸಿಕೊಂಡಿದಾನೆ, ಭಗವಂತ, ಆ ಪೂರ್ಣ ಭಗವಂತನನ್ನು ತಿಳಿಯಲು ಸಾಧ್ಯವಾ? ನೀವು ಇಷ್ಟೇ ಇದೀರಿ? ಒಂದು ಕಡೆ ಇರುವವರು'. ಆಗ ಗುರು ಹೇಳ್ತಾನೆ, 'ನೀನು ಒಂದು ಗ್ಲಾಸು ಶರಬತ್ತು ಮಾಡ್ತೀಯ. ನೀನು ಶರಬತ್ತು ಮಾಡಲು ನೀರು ಎಷ್ಟು ಹಾಕ್ತೀಯೋ, ನಿಂಬೆಹುಳಿ ಎಷ್ಟು ಹಾಕ್ತೀಯೋ ಅಷ್ಟೇ ಸಕ್ಕರೆ ಹಾಕ್ತೀಯಾ? ಇಲ್ಲ. ಸಕ್ಕರೆ ಹಾಕೋದು ಸ್ವಲ್ಪವೇ. ಆದರೆ ಶರಬತ್ತಿನ ಯಾವುದೇ ಭಾಗವನ್ನು ತೆಗೆದುಕೊಂಡು ನೀವು ರುಚಿ ನೋಡಿದರೆ ನಿಮಗೆ ಸಿಹಿ ಗೊತ್ತಾಗುತ್ತೆ.' 'ಇಲ್ಲ ನನಗೆ ಉಪ್ಪಿನ ರುಚಿ ಬಂತು' ಅಂತ ಹೇಳಿದರೆ ಅವನು ಮೋಸಗಾರ. ಇದನ್ನು ತತ್ವಶಃ ನಾವು ತಿಳಿಯಬೇಕು. ಒಂದು ತೊಟ್ಟು ಶರಬತ್ತನ್ನು ನಾಲಿಗೆಯ ಮೇಲೆ ಹಾಕಿಕೊಂಡು ರುಚಿ ನೋಡಿ ಅದು ಸಿಹಿ ಅಂತ ನಾನು ಹೇಳುತ್ತೇನೆ. ನನ್ನನ್ನು ಸುಳ್ಳ ಅಂತೀರಾ?' ಇಲ್ಲ. ಅದೇ ರೀತಿ ಭಗವಂತನನ್ನು - ಸಾಗರ ರೂಪ ಅಂತಾ ಕೂಡಾ ಹೇಳ್ತಾರೆ - ಅನುಭವಿಸಿ ತಿಳಿಯಬೇಕೇ ಹೊರತು ನೋಡಲಾಗದು. ಒಂದು ಪೂರ್ಣ ಜಗತ್ತನ್ನೇ ಮೊದಲು ನೋಡಿ, ಜಗತ್ತು ಅಂದರೆ ಈ ಭೂಮಿ ಒಂದೇ ಅಲ್ಲ, ಸೂರ್ಯ, ಚಂದ್ರ, ಎಲ್ಲಾ ಗ್ರಹಗಳು, ಲೆಕ್ಕವಿಲ್ಲದಷ್ಟು ನಕ್ಷತ್ರಗಳು, ಇವೆಲ್ಲಾ ಒಟ್ಟಿಗೆ ಸೇರಿ ಬ್ರಹ್ಮಾಂಡ ಅಂತಾರೆ. ಹಾಗಾದರೆ ಆ ಬ್ರಹ್ಮಾಂಡವನ್ನು ತಿಳಿಯಲು ಸಾಧ್ಯವೇ? ಭೌತಿಕ ಬ್ರಹ್ಮಾಂಡವನ್ನಂತೂ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ವಿಜ್ಞಾನಿಗಳು ಎಷ್ಟು ಎಷ್ಟು ಅನ್ವೇಷಣೆ ಮಾಡ್ತಾ ಇದಾರೋ ಅಷ್ಟಷ್ಟು ಬೇರೆ ಬೇರೆ ನಕ್ಷತ್ರಗಳು, ಗ್ರಹಗಳು ಕಾಣಿಸುತ್ತಾ ಇರುತ್ತವೆ. ಪ್ರತಿಯೊಂದು ಶುಭಕಾರ್ಯ ಮಾಡಬೇಕಾದರೂ ಕೂಡ ಮೊದಲು ನವಗ್ರಹಗಳಿಗೆ ದಾನ ಕೊಡಬೇಕು ಅಂತಾರೆ. ಪಾಪ, ಆ ನವಗ್ರಹಗಳಿಗೆ ಏನು ಬೇಕಾಗಿದೆ? ಪೂಜೆ ಮಾಡಿದ ಮೇಲೆ ಆ ದಾನಗಳನ್ನು ಗ್ರಹಗಳು ಬಂದು ತೆಗೆದುಕೊಂಡು ಹೋಗೋದಿಲ್ಲ.
     ನಾನು ಹೇಳ್ತಾ ಇದ್ದೆ, ಯಾವ ರೀತಿ ಆ ಶರಬತ್ತಿನ ಒಂದು ತೊಟ್ಟನ್ನು ನಾಲಿಗೆ ಮೇಲೆ ಹಾಕಿಕೊಂಡರೆ ಆ ಪೂರ್ತಿ ಶರಬತ್ತಿನ ರುಚಿ ಗೊತ್ತಾಗುತ್ತೋ ಹಾಗೇನೇ ಭಗವಂತ  ನಮ್ಮ ಹೃದಯದಲ್ಲಿ ಇರ್ತಾನೆ, ಅಲ್ಲಿ ಜೀವಾತ್ಮನೂ ಇರ್ತಾನೆ, ಇಬ್ಬರೂ ಇರ್ತಾರೆ, ಆದರೆ ಇಬ್ಬರೂ ಸೂಕ್ಷ್ಮ. ಪರಮಾತ್ಮನನ್ನು ಸಚ್ಚಿದಾನಂದ ಸ್ವರೂಪ ಅಂತೀವಿ, ಒಂದು ಮೆಟ್ಟಲು ಕೆಳಗೆ ಇಳೀತೀವಿ, ಸತ್ ಚಿತ್ ಸ್ವರೂಪ ಜೀವ ಅಂತ, ಆನಂದಕ್ಕೆ ಖೋತಾ, ಆನಂದ ಇಲ್ಲ. ಪ್ರಕೃತಿ ಹತ್ತಿರ ಬಂದರೆ ಚೈತನ್ಯ ಕೂಡಾ ಇಲ್ಲ. ಬರೀ ಪರಮಾಣು ಜಡ ಸಮೂಹ. ಅದು ಇನ್ನೂ ಕೆಳಗೆ ಹೋಯಿತು. ಆದ್ದರಿಂದ ಋಷಿಮುನಿಗಳು ಹೇಳ್ತಾರೆ, 'ನಿನಗಿಂತ ಮೇಲಿರುವ ಪರಮಾತ್ಮ ಆನಂದಮಯ, ಅವನನ್ನು ಕುರಿತು ಧ್ಯಾನ ಮಾಡು, ಈ ಜಡ ಪ್ರಕೃತಿಯನ್ನು ಧ್ಯಾನ ಮಾಡಿದರೆ ಪ್ರಯೋಜನವಿಲ್ಲ.' ನನ್ನನ್ನು ಮೂರ್ತಿಪೂಜಕರು ಕೇಳುವುದು ಇದೇ ಪ್ರಶ್ನೆ, 'ಪಂಡಿತಜಿ, ಏನೂ ಇಲ್ಲದೆ ಹೋದರೆ ಮನಸ್ಸನ್ನು ಎಲ್ಲಿ ನಿಲ್ಲಿಸುವುದು? ಒಂದು ಬೇಕು, ಕಲ್ಲಿಂದೋ, ಮಣ್ಣಿಂದೋ, ಕಟ್ಟಿಗೆಯದೋ, ಯಾವುದಾದರೂ ಒಂದು ಪ್ರತೀಕ ಬೇಕು, ಅದರಲ್ಲಿ ಮನಸ್ಸನ್ನು ನಿಲ್ಲಿಸಬಹುದು.' ನಾನು ಕೇಳೋದು, 'ನೀವು ಯಾರಲ್ಲಿ ಮನಸ್ಸನ್ನು ನಿಲ್ಲಿಸಬೇಕು ಅಂತಿದೀರಿ?' 'ಪರಮಾತ್ಮನಲ್ಲಿ'. ಪರಮಾತ್ಮ ಅದರೊಳಗೆ ಇದಾನೆ ಅನ್ನೋದೇನೋ ನಿಜ, ಅದೇ ಪರಮಾತ್ಮನಾ? ತಾತ್ಪರ್ಯ ಏನು? ಸೂಕ್ಷ್ಮತಮ ತತ್ವ ಇದೆಯಲ್ಲಾ, ಅದು ಜ್ಞಾನದ ಕಣ್ಣಿಗೆ ಕಾಣುತ್ತೆಯೇ ಹೊರತು, ಈ ಕಣ್ಣಿಗೆ ಏನೂ ಕಾಣೋದಿಲ್ಲ.
-ಕ.ವೆಂ. ನಾಗರಾಜ್.
***************
ದಿನಾಂಕ  -8-2015ರ ಜನಹಿತ ಪತ್ರಿಕೆಯ ಜನಕಲ್ಯಾಣ ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಆಗಸ್ಟ್ 9, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -15: ತಿಳಿಯುವುದು ಬಹಳವಿದೆ


ಪ್ರಜ್ಞಾಚಕ್ಷು ವಿರಜಾನಂದರು
      ದಯಾನಂದರಂತಹ ಪುರುಷ ಸಿಂಹನನ್ನು ಜಗತ್ತಿಗೆ ಧಾರೆಯೆರೆದು ಕೊಟ್ಟ ವಿರಜಾನಂದರು ಕುರುಡರು, ಕಣ್ಣಿಲ್ಲ. ಆದರೆ ಪ್ರಜ್ಞಾಚಕ್ಷು ಎಂದು ಅವರನ್ನು ಕರೆಯುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಅವರ ತಂದೆ-ತಾಯಿ ತೀರಿಹೋಗಿದ್ದರು. ಆಗ ಅವರಿಗೆ ಅವರು ಎಂಟು ವರ್ಷ ವಯಸ್ಸು. ಅವರ ಅತ್ತಿಗೆ, ಅಣ್ಣ ಈ ಕುರುಡ ಹುಡುಗನನ್ನು ಪ್ರತಿ ನಿತ್ಯವೆಂಬಂತೆ 'ಏಕೆ ಇವನನ್ನು ನಮ್ಮ ತಲೆಗೆ ಕಟ್ಟಿಹೋದರೋ ಅಪ್ಪ, ಅಮ್ಮ, ಈ ಶನಿ ಎತ್ತಲಾದರೂ ಹೋಗಬಾರದೇ' ಅಂತ ಬಯ್ಯಲು ಶುರು ಮಾಡಿದ್ದರು. ಇದನ್ನು ಸಹಿಸದ ಆ ಹುಡುಗ ಒಂದು ದಿನ ಕೈಯಲ್ಲಿ ಲಾಠಿ ಹಿಡಕೊಂಡು ಮನೆ ಬಿಟ್ಟು ಹೊರಟೇಬಿಟ್ಟ. ಅವನು ಇದ್ದುದು ಪಂಜಾಬಿನ  ಕರ್ತಾರಪುರದಲ್ಲಿ. ಅಲ್ಲಿಂದ ಹೊರಟು ಹರಿದ್ವಾರ, ಸುಮಾರು 2000 ಮೈಲಿ ದೂರ ಆಗುತ್ತೆ, ಅಲ್ಲಿಯವರೆಗೆ ಕೋಲೂರಿಕೊಂಡು ಬಂದ. ಆಗ ಈಗಿನ ಕಾಲದಲ್ಲಿದ್ದಂತೆ ರಸ್ತೆಗಳು ಇರಲಿಲ್ಲ. ಕಾಡುರಸ್ತೆಗಳೇ. ಆ ರಸ್ತೆಗಳಲ್ಲೇ ಕೋಲೂರಿಕೊಂಡು ಕಷ್ಟಪಟ್ಟು ಬಂದ. ಅದೇ ದೊಡ್ಡ ಕೆಲಸ, ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಬುದ್ಧಿ ಎಷ್ಟು ತೀಕ್ಷ್ಣ ಅಂದರೆ, ಕೃಷ್ಣಶಾಸ್ತ್ರಿ ಅನ್ನುವವರು ಗಂಗಾನದಿಯಲ್ಲಿ ನಿಂತುಕೊಂಡು ಋಗ್ವೇದ ಹೇಳುತ್ತಿದ್ದುದನ್ನು ಕೇಳುತ್ತಾ ನಿಂತಿದ್ದ ಅವರು ಕೇಳಿದರು, 'ಶಾಸ್ತ್ರಿಗಳೇ, ಇನ್ನೊಂದು ಒಂದು ಸಲ ಹೇಳಿ'. ಅವರು ಹೇಳಿದರು.  ಇವರು ಸ್ವಲ್ಪವೂ ಮರೆಯದೆ ಕಲಿತರು. ಹೀಗೇನೇ ಆ ಪುಣ್ಯಾತ್ಮ ನಾಲ್ಕೂ ವೇದಗಳನ್ನು ಕಲಿತುಬಿಟ್ಟರು. ಬೇರೆಯವರು ಪುಸ್ತಕ ತೆಗೆದು ಇಂಥ ಅಧ್ಯಾಯ, ಇಷ್ಟನೇ ಮಂತ್ರ ಅಂತ ಹೇಳುತ್ತಿದ್ದರೆ, ಕಣ್ಣಿಲ್ಲದಿದ್ದರೂ, ಇಂಥ ವೇದದ, ಇಷ್ಟನೇ ಅಧ್ಯಾಯದ, ಇಷ್ಟನೇ ಮಂತ್ರ ಅಂತ ಹೇಳೇಬಿಡೋರು.
     ಅಷ್ಟು ಕಷ್ಟದಲ್ಲಿದ್ದರೂ ವಿರಜಾನಂದರು ವಿನೋದ ಮಾಡುತ್ತಿದ್ದರು. ಒಮ್ಮೆ ಮಥುರಾ ನಗರದಲ್ಲಿ ನಡುಬೇಸಿಗೆಯ ಮಧ್ಯಾಹ್ನದಲ್ಲಿ ಕೋಲೂರಿಕೊಂಡು ಹೋಗ್ತಾ ಇದ್ದರು. ಅದೇ ಸಮಯದಲ್ಲಿ  ಒಂದು ಚಿಕ್ಕ ರಥದ ಮೇಲೆ ದೇವರನ್ನು ಕೂರಿಸಿಕೊಂಡು ಭಕ್ತಾದಿಗಳು ಬರುತ್ತಿದ್ದರು. ಬಿಸಿಲು ಜೋರಾಗಿದ್ದರಿಂದ ರಥವನ್ನು ನಡುರಸ್ತೆಯಲ್ಲೇ ಬಿಟ್ಟು ಮರದ ನೆರಳಿನಲ್ಲಿ ಭಕ್ತರು ಸುಧಾರಿಸಿಕೊಳ್ಳುತ್ತಿದ್ದರು. ಈ ಪುಣ್ಯಾತ್ಮ ಕೋಲೂರಿಕೊಂಡು ಹೋಗ್ತಾ ಹೋಗ್ತಾ ಆ ರಥದ ಮೇಲೇ ಬಿದ್ದುಬಿಟ್ಟರು. ಭಕ್ತರು ಕಿರುಚಿದರು, 'ಏಯ್, ಕುರುಡಾ, ದೇವರು ಇರೋದು ಗೊತ್ತಾಗಲ್ವಾ?' ವಿರಜಾನಂದರು ಹೇಳಿದರು, 'ನಾನು ಕುರುಡ ಅನ್ನೋದು ಜಗತ್ತಿಗೇ ಗೊತ್ತು, ಆ ನಿಮ್ಮ ದೇವರೂ ಕುರುಡನೇ ಇರಬೇಕು, ಪಾಪ, ಮುದುಕ, ಕುರುಡ ಬರ್ತಾ ಇದಾನೆ ಅಂತ ಸರಿಯೋಕೆ ಆಗ್ತಾ ಇರಲಿಲ್ವಾ?' ಈ ರೀತಿ ಸಮಯಕ್ಕೆ ಸರಿಯಾಗಿ ತಕ್ಷಣ ಉತ್ತರ ಕೊಡೋದು ಬಹಳ ಕಷ್ಟ.
ಫಿಲಾಸಫಿ?
     ನಾನು ಹಿಂದೊಮ್ಮೆ ಸಹ  ಈ ವಿಷಯ ಹೇಳಿದ್ದೆ. ಒಬ್ಬರು ವಿಜ್ಞಾನಿ,  ಶಿಕ್ಷಣ ತಜ್ಞರೂ ಆಗಿದ್ದರು. ಅವರು ಸತ್ಸಂಗಕ್ಕೆ ಪ್ರತಿ ವಾರ ಬರುತ್ತಿದ್ದವರು ಇದ್ದಕ್ಕಿದ್ದ ಹಾಗೇ ನಿಲ್ಲಿಸಿಬಿಟ್ಟರು. ಒಂದು ಸಲ ದಾರಿಯಲ್ಲಿ ಅವರು ಸಿಕ್ಕಿದಾಗ ಏಕೆ ಬರುತ್ತಿಲ್ಲವೆಂದು ವಿಚಾರಿಸಿದೆ. ಅವರು ಹೇಳಿದರು, "ನಿಜ ಹೇಳಿಬಿಡಲಾ?"
"ನೀವು ನಿಜ ಹೇಳ್ತೀರಿ ಅಂತಲೇ ಕೇಳ್ತಾ ಇರೋದು".
"ನೀವು ಏನು ಹೇಳ್ತೀರಿ, ಅದೆಲ್ಲಾ ನಮಗೆ ಗೊತ್ತಾಗಿ ಹೋಗಿದೆ. ಯಾವುದು ಗೊತ್ತಾಗಬೇಕೋ ಅದು ನನಗೆ ಸಿಗ್ತಾ ಇಲ್ಲ".
     ಗೊತ್ತಿರೋ ವಿಷಯ ಹೇಳಬಾರದು. ಹೇಳೋ ವಿಷಯ ಅದು ಗೊತ್ತಿರಬಾರದು. ಕೇಳೋರಿಗೆ ಅದೇನು ವಿಷಯ ಅಂತ ಗೊತ್ತಾಗಬಾರದು. ಇವನೊಂದು ತರಹ ಹೇಳ್ತಾ ಇರಬೇಕು, ಅವನೊಂದು ತರಹ ಕೇಳ್ತಾ ಇರಬೇಕು. ನಾನು ಹೇಳಿದೆ: " ದಯವಿಟ್ಟು ಈ ಭಾನುವಾರ ಬನ್ನಿ. ನಿಮ್ಮ ಫಿಲಾಸಫಿಯನ್ನೇ ಮಾತಾಡ್ತೀನಿ."
     ಅವರು ಬಂದರು. ಅವತ್ತು ಏನು ಮಾತಾಡಿದೆ ಅಂತ ನನಗೇ ಗೊತ್ತಾಗಲಿಲ್ಲ. ಏನೇನೋ ಸುತ್ತಿ ಬಳಸಿ ಒಂದು ಗಂಟೆ ಅವರ ತಲೆ ತಿಂದೆ. ಕೊನೆಗೆ ಕೇಳಿದೆ:
 "ಹೇಗಿತ್ತು?"
"ಏನೂ ಗೊತ್ತಾಗಲಿಲ್ಲ, ಸ್ವಾಮಿ".
     ಇದೇನಾ ಫಿಲಾಸಫಿ? ಯಾವುದು ಅರ್ಥವಾಗುವುದಿಲ್ಲವೋ ಅದು ಫಿಲಾಸಫಿ ಅಲ್ಲ. ಫಿಲಾಸಫಿ ಅನ್ನೋದು ಇದೆಯಲ್ಲಾ, ಅದರಲ್ಲಿ ಫಿಲ್ ಅನ್ನೋದು ಮುಖ್ಯ, ಫಿಲ್ ಅಂದರೆ ಸ್ವರೂಪ ಅಂತ. ಯಾವುದಾದರೂ ವಸ್ತುವಿನ ಸ್ವರೂಪವನ್ನು ಯಾವ ಶಾಸ್ತ್ರ ಯಾವ ದರ್ಶನ ಮಾಡಿಸುತ್ತೋ ಅದು ಫಿಲಾಸಫಿ. ನಮ್ಮಲ್ಲಿ ಆರು ಫಿಲಾಸಫಿ(ದರ್ಶನ)ಗಳಿವೆ. ಯಾವುದೂ ಮತ್ತೊಂದಕ್ಕೆ ವಿರೋಧವಾದುದಲ್ಲ. ದಯಾನಂದರನ್ನು ಒಬ್ಬರು ಕೇಳಿದರು, "ಒಂದು ದರ್ಶನ ಸಾಕಾಗ್ತಾ ಇರ್ಲಿಲ್ವಾ ಸ್ವಾಮೀಜಿ, ಆರು ಯಾತಕ್ಕೆ?" ವಿಜ್ಞಾನಿ ಆದರೆ ಒಂದು ಮಾತು ಹೇಳಿದರೆ ತಿಳಿದುಕೊಳ್ಳುತ್ತಾನೆ. ಎಲ್ಲರಿಗೂ ಅರ್ಥವಾಗಬೇಕಲ್ಲಾ, ಅದಕ್ಕೆ" ಎಂದು ಅವರು ಉತ್ತರಿಸಿದ್ದರು.
ಪ್ರಾಣಿಗಳಿಂದಲೂ ಕಲಿಯುವುದಿದೆ
     ಮಗು ಇದೆಯಲ್ಲಾ, ಹುಟ್ಟಿದ ಕೂಡಲೇ ಅಳುತ್ತೆ, ಅದೂ ಒಂದು ವಿದ್ಯೆ, ಅದೂ ಒಂದು ಕಲೆ. ಅದೇ ತಾನೇ ಹುಟ್ಟಿದೆ, 'ಸದ್ಯೋಜಾತಸ್ಯ ಹರ್ಷ ಶೋಕ ಭಯ . . . ' ಅದೇ ತಾನೇ ಹುಟ್ಟಿದ ಮಗು ಸಂತೋಷ ತೋರಿಸುತ್ತೆ, ನಗುತ್ತೆ, ಅಳುತ್ತೆ, ಇದನ್ನೆಲ್ಲಾ ತೋರಿಸುತ್ತೆ, ಅದು ಎಲ್ಲಿಂದ ಕಲಿಯಿತು? ಹಿಂದಿನ ಜನ್ಮದ ಅರಿವಿರಬೇಕು. 'ಪೂರ್ವಾಭ್ಯಾಂ ಕೃತಾಂ . . . ' ಕರು ಇದೆ, ಅದು ಹುಟ್ಟಿದ ಕೂಡಲೇ ತಾಯ ಮೊಲೆ ಹುಡುಕಿಕೊಂಡು ಹೋಗುತ್ತೆ. ಯಾಕೆ? ಅದು ಹಿಂದೆ ಇತ್ತದು, ಹಾಲು ಕುಡಿದಿತ್ತು. ಅದರ ಸ್ಮರಣೆ ಅದಕ್ಕಿದೆ. ಹೀಗೆ ಪ್ರಾಣಿಗಳನ್ನು ನೋಡಿ ಕೂಡಾ ನಾವು ಕಲಿಯುವುದಿದೆ. ಬಹಳ ಕಲಿಯುವುದಿದೆ. ನಾಯಿಯನ್ನು ಬೈತೀರೋ, ಹೊಗಳುತ್ತೀರೋ? ತನ್ನ ಯಜಮಾನನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಕೊಡುತ್ತೆ ಅದು. ಅಷ್ಟು ಇದೆ. ಆದರೆ ಆ ನಾಯಿಯಲ್ಲಿ ಒಂದು ಅವಗುಣವೂ ಇದೆ. ಅದೇ ದೈನ್ಯ, ವಿಪರೀತ ದೀನತ್ವ ಅದಕ್ಕೆ.
ಲಾಂಗೂಲ ಚಾಲನಮಧಶ್ವರಣಾವಪಾತಂ ಭೂಮೌ ನಿಪತ್ಯ ವದನೋದರದರ್ಶನಂ ಚ |
ಶ್ವಾ ಪಿಂಡದಸ್ಯ ಕುರುತೇ ಗಜಪುಂಗವಸ್ತು ಧೀರಂ ವಿಲೋಕಯತಿ ಚೌಟುಶತೈಶ್ಚ ಭುಂಕ್ತೇ || (ನೀತಿ ಶತಕ)
ಯಾವನು ಅನ್ನ ಹಾಕುತ್ತಾನೋ ಅವನನ್ನು ಕಂಡು ನಾಯಿ ಬಾಲ ಆಡಿಸುತ್ತದೆ, ಬೆನ್ನು ಮೇಲೆ ಮಲಗಿ ಹೊಟ್ಟೆ ತೋರಿಸುತ್ತೆ, ಆದರೆ ಆನೆ ಇದೆಯಲ್ಲಾ, ಅದು ಹಾಗಲ್ಲ, ಗಾಂಭೀರ್ಯದಿಂದ ನೋಡ್ತಾ ಇರುತ್ತೆ, ನೂರು ಸಲ ತಿನ್ನು ತಿನ್ನು ಅಂತ ಪುಸಲಾಯಿಸಿದ ಮೇಲೇ ತಿನ್ನುತ್ತೆ. ನಾಯಿ ಆಗಬೇಡ, ಆನೆ ಆಗು ಅಂತ ನೀತಿ ಶಾಸ್ತ್ರದಲ್ಲಿ ಹೇಳಿದೆ. ನಾಯಿಯಲ್ಲಿ ಒಳ್ಳೆ ಗುಣ ಇಲ್ಲ ಅಂತಲೇ? ಇದೆ. ಆನೆಯಲ್ಲಿ ಎಲ್ಲಾ ಒಳ್ಳೆ ಗುಣ ಇದೆ ಅಂತಲೂ ಅಲ್ಲ. ದಯಾನಂದರು ಒಂದು ಉದಾಹರಣೆ ಕೊಡುತ್ತಿದ್ದರು, ಸಕ್ಕರೆ ಇದೆ, ಮರಳಿನ ಜೊತೆ ಮಿಶ್ರವಾಗಿದೆ,  ಆನೆಯನ್ನು ಕರೆದುಕೊಂಡು ಬಂದು ಸಕ್ಕರೆ ತಿನ್ನು ಅಂದರೆ ಅದಕ್ಕೆ ತಿನ್ನಕ್ಕಾಗುತ್ತಾ? ಒಂದು ಇರುವೆ ಬಿಡಿ ಅಲ್ಲಿ, ಮರಳನ್ನು ಬಿಟ್ಟು ಸಕ್ಕರೆ ತೆಗೆದುಕೊಳ್ಳುತ್ತೆ. ಅದಕ್ಕೆ ಅದು ಸಾಧ್ಯವಿದೆ. ಇಲಿ ಬಿಲ ಇದೆಯಲ್ಲಾ, ಅದರೊಳಗೆ ನೋಡಿದರೆ ಅದ್ಭುತ, ಬೆಡ್ ರೂಮೇ ಬೇರೆ ಇದೆ, ಆಹಾರ ಇಡಕ್ಕೆ ಸ್ಟೋರ್ ಹೌಸೇ ಬೇರೆ. ಮತ್ತೆ ಕೆಲವು ಪಕ್ಷಿಗಳಿವೆ. ದೀಪದ ಹುಳ, ಮಿಂಚು ಹುಳ ಅಂತಾರಲ್ಲಾ ಅದನ್ನು ತೆಗೆದುಕೊಂಡು ಹೋಗಿ ಗೂಡಿನಲ್ಲಿ ಇಟ್ಟುಕೊಂಡಿರುತ್ತವೆ, ಬೆಳಕಿಗಾಗಿ! ಹೀಗೆ ಪ್ರಾಣಿಗಳನ್ನು ನೋಡಿ ಕಲಿಯುವುದೂ ಬಹಳವಿದೆ.
ನೆನಪಿನಲ್ಲಿಡೋಣ
     ವೇದಗಳು ಕಲಿಸುವುದು ಆತ್ಮಾವಲಂಬನೆಯ ಭವ್ಯಪಾಠವನ್ನು ಪ್ರತಿ ಜೀವಿ ಉದ್ಧಾರವಾಗುವುದಕ್ಕೆ, ಹಾಳಾಗುವುದಕ್ಕೆ ಅವನೇ ಕಾರಣ. ಬೇರೆಯವರಲ್ಲ.
ಸ್ವಯಂ ವಾಜಿಸ್ವನ್ವಂ ಕಲ್ಪಯಸ್ವ ಸ್ವಯಂ ಯಜಸ್ವ| ಸ್ವಯಂ ಜುಷಸ್ವ ಮಹಿಮಾ ತೇsನ್ಯೇನ ನ ಸನ್ನಶೇ|| (ಯಜು. 23.15.)
     ಓ ಜೀವಾತ್ಮನೇ, ಸ್ವತಃ ಶರೀರಧಾರ್ಢ್ಯವನ್ನು ಸಾಧಿಸಿಕೋ. ಸ್ವತಃ ಸತ್ಕರ್ಮ ಮಾಡು. ಸ್ವತಃ ಸಂತೋಷಪಡು. ನಿನ್ನ ಮಾಹಾತ್ಮ್ಯ ಬೇರೆಯವರಿಂದ ಸಿದ್ಧಿಸದು ಎಂದು ಇದರ ಅರ್ಥ. ಸತ್ಯವಾದ ಮಾತು. ಬೇರೆಯವರ ಪುಣ್ಯವನ್ನು ದೋಚಿಕೊಂಡು ತಾನು ಸ್ವರ್ಗ ಅಥವಾ ಮೋಕ್ಷಕ್ಕೆ ಹೋಗಲು ಮೂರು ಕಾಲಕ್ಕೂ ಸಾಧ್ಯವಿಲ್ಲ. ಎಲ್ಲರೂ ಪ್ರತಿಯೊಂದು ಕ್ಷಣದಲ್ಲಿಯೂ ನೆನಪಿಡಲೇಬೇಕಾದ ಅಂಶವೆಂದರೆ ಪ್ರತಿಯೊಬ್ಬ ಜೀವಾತ್ಮನೂ ತನ್ನ ಕರ್ಮಕ್ಕೆ -ಅದು ಪುಣ್ಯವಾಗಿರಲಿ, ಪಾಪವಾಗಿರಲಿ- ತಾನೇ ಹೊಣೆಗಾರ. ಉಚ್ಛೃಂಖಲ ಹಾಗೂ ಹಿಂಸಾಮಯ ಜೀವನ ಸಾಗಿಸುತ್ತಾ. 'ನಾನು ಈ ದಿವ್ಯ ಪುರುಷನನ್ನು ನಂಬಿದ್ದೇನೆ, ಆದುದರಿಂದ ಮುಕ್ತಿ ನನಗೆ ಕಟ್ಟಿಟ್ಟ ಬುತ್ತಿ' ಎಂದು ಯಾರೂ ಹೇಳುವಂತಿಲ್ಲ.
     ವೇದೋಕ್ತ ಕರ್ಮಫಲಸಿದ್ಧಾಂತ ಸರ್ವತಂತ್ರ, ಸಾರ್ವಭೌಮ, ಸಾರ್ವಕಾಲಿಕ ಸತ್ಯ. ಇಲ್ಲಿ ಕೇಳಿ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ | ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)
     ಈ ಈಶ್ವರೀಯ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು ನಾನು ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನವನ್ನು (ಕರ್ಮಫಲವಿಪಾಕ) ಅಡುಗೆ ಮಾಡಿದವನೇ ತಿನ್ನಲೇಬೇಕಾಗುತ್ತದೆ. ಅರ್ಥ ಸ್ಪಷ್ಟವಾಗಿದೆ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ, ಮಾಡಿದ್ದುಣ್ಣೋ ಮಹರಾಯ! ಆದ ಕಾರಣ ಅನ್ಯ ವ್ಯಕ್ತಿಯ ಹೆಗಲ ಮೇಲೆ ತನ್ನ ಪಾಪದ ಹೊರೆ ಹೊರಿಸಿ, ಮುಕ್ತನಾಗುತ್ತೇನೆಂದು ಭಾವಿಸುವುದಕ್ಕಿಂತ ಆತ್ಮಘಾತಕವಾದ ಘೋರ ಅಜ್ಞಾನ ಮತ್ತೊಂದಿಲ್ಲ.
-ಕ.ವೆಂ. ನಾಗರಾಜ್.
***************
ದಿನಾಂಕ 29.07.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: