ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಜುಲೈ 31, 2012

ವೇದೋಕ್ತ ಜೀವನ ಪಥ: ಬ್ರಹ್ಮಚರ್ಯಾದಿ ಚತುರಾಶ್ರಮಗಳು - 1


     "ನಮ್ಮ ತಾತಾನೂ ಬ್ರಹ್ಮಚಾರಿ, ನನ್ನ ತಂದೇನೂ ಬ್ರಹ್ಮಚಾರಿ, ನಾನೂ ಬ್ರಹ್ಮಚಾರಿ" ಎಂದು ಹಾಸ್ಯವಾಗಿ ಹೇಳುವುದನ್ನು ಕೇಳಿಯೇ ಇರುತ್ತೇವೆ. ಈ ಹಾಸ್ಯದ ಅರ್ಥ ಬ್ರಹ್ಮಚಾರಿ ಅಂದರೆ ಕೇವಲ ಮದುವೆ ಆಗದಿರುವುದು ಅಷ್ಟೆ ಅಂತ. ನಿಜವಾದ ಬ್ರಹ್ಮಚರ್ಯ ಅಂದರೆ ಮದುವೆಯಾಗದಿರುವುದು ಮಾತ್ರ ಅಲ್ಲ. ಪರಮಾತ್ಮನ ವಿಚಾರದಲ್ಲಿ, ಆತ್ಮನ ಜ್ಞಾನದಲ್ಲಿ, ಜ್ಞಾನಾರ್ಜನೆಯಲ್ಲಿ ವಿಹರಿಸುವುದು ಎಂದು. ಇದು ಸಿದ್ಧಿಸಬೇಕಾದಲ್ಲಿ ಇಂದ್ರಿಯ ನಿಗ್ರಹ ಸಾಧಿಸುವುದು ಅತ್ಯವಶ್ಯ. ಬಾಲ್ಯಾವಸ್ಥೆಯಿಂದ ಸುಮಾರು 25ವರ್ಷಗಳವರೆಗೆ ಅಂದರೆ ಜೀವನದ ಮೊದಲ ಕಾಲುಭಾಗದ ಅವಧಿಯನ್ನು ಬ್ರಹ್ಮಚಾರಿಗಳಾಗಿ, ಜಿತೇಂದ್ರಿಯರಾಗಿ ಜ್ಞಾನಾರ್ಜನೆಯಲ್ಲಿ ತೊಡಗುವುದಕ್ಕೆ ಬ್ರಹ್ಮಚರ್ಯವೆನ್ನಬಹುದು. ಇದು ಜೀವನದ ತಳಹದಿಯೆನ್ನಬಹುದು. ಯಾರ ಜೀವನದ ತಳಪಾಯ ಚೆನ್ನಾಗಿರುವುದೋ, ಭದ್ರವಾಗಿರುವುದೋ ಅವರ ಜೀವನ ಸಹ ಸುಂದರವಾಗಿರುತ್ತದೆ. ಹಿಂದಿನ ಕಾಲದಲ್ಲಿ ಕ್ಷತ್ರಿಯರಾಗಿರಲಿ, ಬ್ರಾಹ್ಮಣರಾಗಿರಲಿ, ಯಾವುದೇ ವರ್ಣಾಶ್ರಮಕ್ಕೆ ಸೇರಿದವರಾಗಿರಲಿ, ಉಪನಯನ ಸಂಸ್ಕಾರವಾದ ತಕ್ಷಣ ಯೋಗ್ಯ ಗುರುಕುಲವನ್ನು ಸೇರಿ ಗುರುಗಳೊಂದಿಗೇ ಇದ್ದು, ಆಶ್ರಮದ ಕೆಲಸಕಾರ್ಯಗಳೊಂದಿಗೆ ಕಲಿಕೆಯನ್ನೂ ಮಾಡುತ್ತಿದ್ದರು. ಗುರುಕುಲಗಳಲ್ಲಿ ಅವರವರಿಗೆ ತಕ್ಕಂತಹ, ಅಗತ್ಯವಾದಂತಹ ಕ್ಷಾತ್ರವಿದ್ಯೆಗಳಲ್ಲದೆ, ಇತರ ಕೆಲಸಗಳನ್ನೂ ಕಲಿಯುವುದರೊಂದಿಗೆ ವೇದ ವಿದ್ಯಾಭ್ಯಾಸವನ್ನೂ ಮಾಡಿಸಲಾಗುತ್ತಿತ್ತು. ಅವರುಗಳು 25 ವರ್ಷಗಳಾಗುವ ವೇಳೆಗೆ ಅವರುಗಳು ಸಂಪೂರ್ಣ ವಿಕಸಿತ ಮಾನವರಾಗಿ, ಬಲಿಷ್ಠರಾಗಿ, ಆತ್ನಸ್ಥೈರ್ಯ ಉಳ್ಳವರಾಗಿ ಹೊರಬರುತ್ತಿದ್ದರು. ನಂತರ ಗೃಹಸ್ಥರಾಗಿ ಮುಂದಿನ ಯಶಸ್ವೀ ಜೀವನಕ್ಕೆ ಕಾಲಿಡುತ್ತಿದ್ದರು.
     ಇಂದು ಪರಿಸ್ಥಿತಿ ಹೇಗಿದೆ? ಮಕ್ಕಳು ಹುಟ್ಟುತ್ತಲೇ ಬೇಬಿ ಕೇರ್, ಡೇ ಕೇರ್ ಗಳಲ್ಲಿ ಬೆಳೆಯುತ್ತವೆ. ಹುಟ್ಟುವ ಮುನ್ನವೇ ಆ ಸಂಸ್ಥೆಗಳಿಗೆ ಲಕ್ಷಾಂತರ ರೂ.ಗಳು ಡೊನೇಶನ್ ಕೊಟ್ಟು ಜಾಗ ಕಾಯ್ದಿರಿಸಿರುತ್ತಾರೆ. ಎಲ್.ಕೆ.ಜಿ., ಯುಕೆಜಿಗಳಿಗೂ ಇದೇ ಹಣೆಬರಹ. ಅಪ್ಪ, ಅಮ್ಮ ಇಬ್ಬರೂ ದುಡಿಯಲು (?) ಹೋಗುತ್ತಾರೆ. ವೀಕೆಂಡುಗಳಲ್ಲಿ ಸುಸ್ತಾಗಿ ಗೊಣಗಾಡಿಕೊಂಡು ಕಳೆಯುತ್ತಾರೆ. ಲಕ್ಷಾಂತರ ರೂ. ಕೊಟ್ಟು ಪ್ರತಿಷ್ಠಿತವೆನ್ನುವ ಶಾಲೆಗೆ ಸೇರಿಸುವ ಕಾರಣವೂ ಸಹ ಮುಂದೆ ಮಕ್ಕಳು ಲಕ್ಷಾಂತರ ರೂ. ಸಂಪಾದಿಸಲಿ ಎಂದೇ, ಜ್ಞಾನವಂತರಾಗಲಿ, ಒಳ್ಳೆಯ ಪ್ರಜೆಗಳೆನಿಸಲಿ ಎಂದಲ್ಲ. ಅಂದರೆ ವಿದ್ಯಾಭ್ಯಾಸದ, ಜೀವನದ ಮೊದಲ ಆದ್ಯತೆ ಹಣ ಸಂಪಾದನೆ ಎಂಬುದೇ ಆಗಿದೆ. ಹೆಚ್ಚು ಅಂಕ ಗಳಿಸುವ ಆತಂಕ ಪ್ರತಿ ಪರೀಕ್ಷೆಯಲ್ಲಿ ಮಕ್ಕಳಿಗೆ ಎದುರಾಗುತ್ತದೆ. ಆತಂಕ, ಆತಂಕ, ಆತಂಕ! ಓದಲು ಆತಂಕ, ಬರೆಯಲು ಆತಂಕ, ಹೆಚ್ಚು ಅಂಕ ಗಳಿಸಲು ಆತಂಕ, ಬೇಕಾದ ಸೀಟುಗಳನ್ನು ಪಡೆಯಲು ಆತಂಕ, ಬೇಕಾದ ಶಾಲೆ ಸೇರುವ ಆತಂಕ, ಓದಿಯಾದ ಮೇಲೆ ಕೆಲಸಕ್ಕೆ ಸೇರುವ ಆತಂಕ, ಸೇರಿದ ಮೇಲೆ ಹೆಚ್ಚು ಸಂಪಾದಿಸುವ ಆತಂಕ!!  ಇಂದ್ರಿಯ ನಿಗ್ರಹ ಎಂಬುದಕ್ಕೆ ಇಂದಿನ ವಿದ್ಯಾಭ್ಯಾಸ ಕ್ರಮದಲ್ಲಿ ಅರ್ಥ ಇರುವಂತೆ ತೋರುತ್ತಿಲ್ಲ. ಪ್ರಾಥಮಿಕ ಶಾಲಾ ಹಂತದಲ್ಲೇ ಪ್ರೇಮ, ಪ್ರೀತಿ, ಕಾಮಗಳ ಸುಳಿಯಲ್ಲಿ ಸಿಲುಕುವುದನ್ನು ಕಾಣುತ್ತಿರುವ ಭಾಗ್ಯ ನಮ್ಮದು. ಇನ್ನು ಕಾಲೇಜು ಕ್ಯಾಂಪಸುಗಳಂತೂ ಪ್ರೇಮಲೋಕದ ಅಡ್ಡೆಯಾಗಿರುವುದರೊಂದಿಗೆ ಎಲ್ಲಾ ರೀತಿಯ ದುಶ್ಚಟಗಳಿಗೆ ಉಗಮಸ್ಥಾನಗಳಾಗಿವೆ. ಜೀವನದ ತಳಪಾಯವೇ ಆತಂಕದಲ್ಲಿ ಕಳೆದರೆ ಉಳಿದ ಜೀವನವೂ ಹಾಗೆಯೇ ಮುಂದುವರೆಯುತ್ತದೆ. ಬಹುತೇಕವಾಗಿ, ಮಾಡುವ ಕೆಲಸಕ್ಕೂ, ಓದಿದ ವಿದ್ಯೆಗೂ ಅರ್ಥಾರ್ಥ ಸಂಬಂಧವಿರುವುದೇ ಇಲ್ಲ. ಇನ್ನು ಹಿಂದಿನ ಕಾಲದ ಬ್ರಹ್ಮಚರ್ಯಕ್ಕೂ,, ಈಗಿನ ಸ್ಥಿತಿಗೂ ಹೋಲಿಸಲು ಸಾಧ್ಯವೇ ಇಲ್ಲ. ಹಿಂದೆ ಸಮಾಜವನ್ನು ಪೋಷಿಸುವ ನವಯುವಕ ಯುವತಿಯರು ತಯಾರಾಗುತ್ತಿದ್ದರೆ, ಇಂದು ಅಂತಹುದನ್ನು ನಿರೀಕ್ಷಿಸಲು ಸಾಧ್ಯವಿದೆಯೆ? ಬೇವಿನ ಬೀಜ ಬಿತ್ತಿ ಬೆಳೆದ ಮರದಲ್ಲಿ ಮಾವಿನಹಣ್ಣನ್ನು ನಿರೀಕ್ಷೆ ಮಾಡಬಹುದೆ? ಹೋಗಲಿ ಬಿಡಿ, ಅವರು ಪಡೆದದ್ದು ಅವರಿಗೆ, ನಾವು ಪಡೆದದ್ದು ನಮಗೆ! ಬ್ರಹ್ಮಚರ್ಯಾಶ್ರಮದ ಬಗ್ಗೆ ಪಂಡಿತ ಸುಧಾಕರ ಚತುರ್ವೇದಿಗಳು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ ಬನ್ನಿ.
-ಕ.ವೆಂ.ನಾಗರಾಜ್.
********************
ಬ್ರಹ್ಮಚರ್ಯ  
     ಸಾಮಾನ್ಯತಃ ಮಾನವನ ಆಯಸ್ಸು ನೂರು ವರ್ಷಗಳ ಪರಿಮಿತಿಯುಳ್ಳದ್ದು. 'ಶತಂ ಜೀವ ಶರದೋ ವರ್ಧಮಾನಃ ||' (ಋಕ್.೧೦.೧೬೧.೪.) - ಅಭಿವೃದ್ಧಿ ಹೊಂದುತ್ತಾ ನೂರು ವರ್ಷಗಳ ಕಾಲ ಜೀವಿಸು - ಎಂಬುದು ವೇದದ ಆದೇಶ. ಸಾಫಲ್ಯವನ್ನು ಗಳಿಸುವ ಸಲುವಾಗಿ, ವೇದಗಳು ಈ ನೂರು ವರ್ಷಗಳನ್ನು ನಾಲ್ಕು ಸಮಭಾಗಗಳಾಗಿ ಭಾವಿಸಿ, ಒಂದೊಂದು ಭಾಗಕ್ಕೂ ಆಶ್ರಮ ಎಂಬ ಹೆಸರನ್ನು ಕೊಡುತ್ತವೆ. ಎಲ್ಲ ಬಗೆಯ ಶಕ್ತಿಗಳನ್ನೂ ವರ್ಧಿಸಿಕೊಳ್ಳುವ ಸಲುವಾಗಿ ಬ್ರಹ್ಮಚರ್ಯ, ವರ್ಧಿತ ಶಕ್ತಿಗಳನ್ನು ತನ್ನ ಮತ್ತು ಸಮಾಜದ ಹಿತಕ್ಕೆ ಉಪಯೋಗಿಸುವ ಸಲುವಾಗಿ ಗಾರ್ಹಸ್ಥ್ಯ, ಆಧ್ಯಾತ್ಮಿಕ ಸಾಧನೆಯೊಂದಿಗೆ, ರಾಷ್ಟ್ರದ ಮಕ್ಕಳಿಗೆ ಶಿಕ್ಷಣದಾನಕ್ಕಾಗಿ ವಾನಪ್ರಸ್ಥ ಹಾಗೂ ಸಾಂಸಾರಿಕ ಮೋಹದ ಪೂರ್ಣತ್ಯಾಗ ಮಾಡಿ, ಆಧ್ಯಾತ್ಮಿಕ ಸಾಧನೆ ಮಾಡುತ್ತಾ ಜಗದುಪಕಾರಾರ್ಥವಾಗಿ ಸದ್ಧರ್ಮ ಪ್ರಚಾರ ಮಾಡುವುದಕ್ಕಾಗಿ ಸಂನ್ಯಾಸ. ಹೀಗೆ ವೈದಿಕ ಧರ್ಮ ನಾಲ್ಕು ಆಶ್ರಮಗಳನ್ನು ವಿಧಿಸುತ್ತದೆ. 
     ಜನ್ಮದಿಂದಾರಂಭಿಸಿ, 25 ವರ್ಷ ಪೂರ್ತಿಯಾಗುವವರೆಗೆ, ಮಾನವನು ಬ್ರಹ್ಮಚಯಶ್ರಮವನ್ನು ಪಾಲಿಸಬೆಕು. ಬ್ರಹ್ಮಚರ್ಯ ಎಂಬ ಶಬ್ದದ ಆರ್ಥ, ಪರಮಾತ್ಮನಲ್ಲಿ ಮತ್ತು ವೇದಗಳಲ್ಲಿ ವಿಹಾರ, ವಿಹರಿಸುವುದು ಎಂದಾಗುತ್ತದೆ. ಈ ಮಹೋಚ್ಚವಾದ ಗುರಿಯನ್ನು ಮುಟ್ಟಬೇಕಾದರೆ, ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯು ಪೂರ್ಣತಃ ಜಿತೇಂದ್ರಿಯರಾಗಬೇಕಾದುದು ಅನಿವಾರ್ಯ. ಇದೇ ಕಾರಣದಿಂದ, ಬ್ರಹ್ಮಚರ್ಯ ಎಂಬ ಶಬ್ದಕ್ಕೆ ಸಾಧಾರಣತಃ ಇಂದ್ರಿಯ ನಿಗ್ರಹ ಎಂಬರ್ಥ ಕೊಡಲ್ಪಡುತ್ತದೆ. 
     ಬಾಲಕ ಮತ್ತು ಬಾಲಿಕೆಯು ಎಂಟು ವರ್ಷ ಪ್ರಾಯದವರಾದಾಗ, ಅವರ ಉಪನಯನ ಸಂಸ್ಕಾರವಾಗಿ, ವೇದಾರಂಭವೂ ನಡೆದು ಅವರು ಗುರುಕುಲವನ್ನು ಸೇರುತ್ತಾರೆ. ಪ್ರಾಪಂಚಿಕ ಹವ್ಯಾಸಗಳಿಂದ ಮತ್ತು ಪ್ರಲೋಭನಕಾರೀ ವಾತಾವರಣದಿಂದ ದೂರವಿದ್ದು, ಆಧ್ಯಾತ್ಮಿಕವಾದ ಸಾತ್ವಿಕ ವಾಯುಮಂಡಲದಲ್ಲಿ ಸ್ವತಃ ಶ್ರಮಸಹಿಷ್ಣುಗಳಾಗಿ, ತಮ್ಮ ಬೌದ್ಧಿಕ ಹಾಗೂ ಮಾನಸಿಕ ಶಕ್ತಿಗಳನ್ನು ಏಕೀಕರಿಸಿ, ವೇದವಿದ್ಯೆ ಹಾಗೂ ಲೌಕಿಕವಿದ್ಯೆಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಸರಳ ಜೀವನ, ಉದಾತ್ತ ವಿಚಾರ - ಎಂಬ ಕಥನಕ್ಕೆ ತಥ್ಯದ ರೂಪ ನೀಡುತ್ತಾರೆ. ಸದಾಚಾರಿಗಳೂ, ಬ್ರಹ್ಮನಿಷ್ಠರೂ, ಶ್ರೋತ್ರೀಯರೂ ಆದ ಆಚಾರ್ಯರ ಅಧೀನದಲ್ಲಿದ್ದು ಸ್ವತಃ ಸಚ್ಚರಿತ್ರರೂ, ಶರೀರಾತ್ಮ-ಬುದ್ಧಿ-ಮನೋಬಲಯುಕ್ತರೂ, ಗಂಭೀರ ವಿದ್ವಾಂಸರೂ, ಆಜೀವಿಕಾ ಸಂಪಾದನ ಸಮರ್ಥರೂ ಆಗುತ್ತಾರೆ. ಸಂಯಮಿಗಳಾಗಿ ಸರ್ವವಿಧ ಶಕ್ತಿಗಳ ಸಂಚಯವನ್ನೂ ಮಾಡಿಕೊಳ್ಳುತ್ತಾರೆ. ಅಥರ್ವವೇದದ ಮಾತುಗಳಲ್ಲಿ ಅವರ ಸ್ವರೂಪ ಹೀಗಿರುತ್ತದೆ:
ಬ್ರಹ್ಮಚಾರೀ ಬ್ರಹ್ಮ ಭ್ರಾಜದ್ಭಿಭರ್ತಿ ತಸ್ಮಿನ್ದೇವಾ ಅಧಿ ವಿಶ್ವೇ ಸಮೋತಾಃ |
ಪ್ರಾಣಾಪಾನೌ ಜನಯನ್ನಾದ್ವ್ಯಾನಂ ವಾಚಂ ಮನೋ ಹೃದಯಂ ಬ್ರಹ್ಮ ಮೇಧಾಮ್ || (ಅಥರ್ವ.೧೧.೫.೨೪.)
     [ಬ್ರಹ್ಮಚಾರೀ] ಬ್ರಹ್ಮಚಾರಿಯು [ಪ್ರಾಣಾಪಾನೌ ವ್ಯಾನಮ್] ಪ್ರಾಣ, ಅಪಾನ ಮತ್ತು ವ್ಯಾನ, ಈ ಮೂರು ಪ್ರಾಣ ಸಕ್ತಿಗಳನ್ನೂ, [ವಾಚಮ್] ವಾಣಿಯನ್ನೂ, [ಮನಃ] ಮನಸ್ಸನ್ನೂ, [ಹರದಯಮ್] ಹೃದಯವನ್ನೂ, [ಬ್ರಹ್ಮ] ವೇದಜ್ಞಾನವನ್ನೂ, [ಮೇಧಾಮ್] ಬುದ್ಧಿಯನ್ನೂ, [ಆತ್ ಜನಯನ್] ಸರ್ವರೀತಿಯಲ್ಲಿಯೂ ವರ್ಧಿಸಿಕೊಳ್ಳುತ್ತಾ, [ಭ್ರಾಜತ್ ಬ್ರಹ್ಮ] ಪ್ರಕಾಶಮಾನವಾದ ಬ್ರಹ್ಮತತ್ವವನ್ನು [ಬಿಭರ್ತಿ] ದರಿಸುತ್ತಾನೆ. [ತಸ್ಮಿನ್ ಅಧಿ] ಅವನಲ್ಲಿ [ವಿಶ್ವೇ ದೇವಾಃ] ಸಮಸ್ತ ಇಂದ್ರಿಯ ಶಕ್ತಿಗಳೂ, ದಿವ್ಯ ಗುಣಗಳೂ, [ಸಂ ಓತಾಃ] ಹಾಸು ಹೊಕ್ಕಾಗಿ ಹೆಣೆದು ಬರುತ್ತವೆ. 
     ನಿಜವಾಗಿ ಬ್ರಹ್ಮಚಾರಿ-ಬ್ರಹ್ಮಚಾರಿಣಿಯರು ಬಲಿಷ್ಠವಾದ ಮನಸ್ಸು, ಪರಿಪುಷ್ಟವಾದ ವಾಣಿ, ಧೃಢವಾದ ಶರೀರ, ವಿಶಾಲವಾದ ಹೃದಯ, ಪೂರ್ಣ ವಿಕಸಿತವಾದ ಬುದ್ಧಿ, ಅದ್ಭುತ ವೇದಜ್ಞಾನ, ಪ್ರಾಣಶಕ್ತಿ - ಎಲ್ಲವನ್ನೂ ಪಡೆದುಕೊಂಡು, ಮೈವೆತ್ತ ದಿವ್ಯಶಕ್ತಿಗಳಂತೆ ವಿರಾಜಿಸುತ್ತಾರೆ. ಸತತವೂ ಸಾಧಿಸಿಕೊಂಡು ಬಂದ ಸಂಯಮದ ಮಧುರ ಮಹಿಮೆಯ ಪರಿಣಾಮದಿಂದ ಆದರ್ಶ ಮಾನವರಾಗಿ ಗುರುಕುಲದಿಂದ ಮರಳಿ ಪಿತೃಗೃಹಕ್ಕೆ ಪ್ರವೇಶಿಸುತ್ತಾರೆ. ಸಚ್ಚರಿತ್ರೆಯ ಸ್ಫುಟ ಸತ್ಯದ ಪ್ರಭಾವದಿಂದ ಸರ್ವರ ಸ್ತುತಿಗೂ ಪಾತ್ರರಾಗುತ್ತಾರೆ. ನಿಜವಾದ ಬ್ರಹ್ಮಚರ್ಯದ ಬಣ್ಣಿಸಲಾಗದ ಬಲ್ಮೆಯಿದು.
     ಕನ್ಯೆಯರ ಕಾಯ, ಪ್ರಕೃತಿನಿಯಮಾನುಸಾರ ಪುರುಷ ಶರೀರಕ್ಕಿಂತ ಬೇಗನೇ ಯೌವನದಲ್ಲಿ ಪ್ರವೇಶ ಮಾಡುವ ಕಾರಣ, ಅವರ ಬ್ರಹ್ಮಚರ್ಯದ ಕನಿಷ್ಠ ಮಿತಿ 16 ವರ್ಷಗಳದ್ದಾಗಿದೆ. ಆದರೆ, ಕನ್ಯೆಯರೇ ಆಗಲಿ, ಬ್ರಹ್ಮಚರ್ಯದ ಕನಿಷ್ಠ ಮಿತಿ ತೀರಿದೊಡನೆ, ವಿವಾಹಿತರಾಗಲೇಬೇಕೆಂಬ ಬಲವದ್ಬಂಧನವೇನೂ ಇಲ್ಲ. ಆ ಮನೋಭಾವ, ಮನೋನಿಗ್ರಹ ಸಾಮರ್ಥ್ಯ, ಯಾವುದಾದರೊಂದು ಉನ್ನತ ಧ್ಯೇಯಕ್ಕಾಗಿ ಜೀವನವನ್ನು ಮೀಸಲಿಡುವ ಧೃಢವಾದ ಭಾವನೆಯಿದ್ದಲ್ಲಿ, ತಮಗೆ ಸೂಕ್ತವೆಂದು ತೋರುವಷ್ಟು ಕಾಲ ಅಥವಾ ಜೀವನ ಪೂರ್ತ ಬ್ರಹ್ಮಚರ್ಯಾಶ್ರಮದಲ್ಲೇ ಇರಬಹುದು. ಆದರೆ ಇದು ಎಲ್ಲರಿಗೂ ಸಾಧ್ಯವಾಗುವ ವಿಷಯವಲ್ಲ. 
*************
ಹಿಂದಿನ ಲೇಖನಕ್ಕೆ ಲಿಂಕ್:  http://vedajeevana.blogspot.in/2012/04/blog-post_08.html

ಸೋಮವಾರ, ಜುಲೈ 30, 2012

ಒಂದು ವಿಭಿನ್ನವಾದ, ವಿಶಿಷ್ಟವಾದ ವೇದೋಕ್ತ ವಿವಾಹ


ನಾನು ನೋಡಿದ ಒಂದು ವಿಭಿನ್ನವಾದ, ವಿಶಿಷ್ಟವಾದ ವೇದೋಕ್ತ ವಿವಾಹದ ಆಮಂತ್ರಣ ಪತ್ರಿಕೆ

ನಿಜಕ್ಕೂ ಇದು ಅನುಕರಣೀಯ ನಡೆ!! 
ಈ ವಿವಾಹವನ್ನು ವೀಕ್ಷಿಸಲು ನಾನು ಮತ್ತು ಹರಿಹರಪುರ ಶ್ರೀಧರ್ ಹೋಗಲಿದ್ದೇವೆ.
                                                                                                                   -ಕ.ವೆಂ.ನಾಗರಾಜ್.


ಬುಧವಾರ, ಜುಲೈ 25, 2012

ಶ್ರಾದ್ಧದ ಬಗೆಗೆ ವೇದದಲ್ಲಿ ಏನು ಹೇಳಿದೆ?

ಸುಧಾಕರ ಶರ್ಮರೇ ಹಾಗೆ. ವಿಷಯಗಳನ್ನು ಅತಿ ಸರಳವಾಗಿ ಅತ್ಯಂತ ದೃಢತೆಯಿಂದ ಹೇಳುತ್ತಾರೆ. ಇಂದು ಅವರು ಶ್ರಾದ್ಧ ಕರ್ಮದ ಬಗ್ಗೆ ಮಾತನಾಡಿದ್ದಾರೆ.ಕೇಳಿ. ತಲೆ ತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಅನೇಕ ಆಚರಣೆಗಳಿಗೆ ಅರ್ಥ ವಿಲ್ಲವೆಂದು ಗೊತ್ತಾದಾಗ ಸ್ವಲ್ಪ ಗಾಭರಿಯಾಗುತ್ತೆ. ಆದರೆ ನಮ್ಮ ಆರೋಗ್ಯಕರ ಬದುಕಿಗೆ ಅಗತ್ಯವಾದ ಸತ್ಯವಾದ ಸರಳವಾದ ವೇದದ ಮಾರ್ಗವನ್ನು ತೋರಿಸುವಾಗ ನಾವು ವಿಮರ್ಷೆಮಾಡಬೇಕಲ್ಲವೇ?


ಮಂಗಳವಾರ, ಜುಲೈ 24, 2012

ಭಗವಾನ್ ರಮಣ ಮಹರ್ಷಿಗಳು

ದಿನಾಂಕ 22.07.2012 ರಂದು ಹಾಸನದಲ್ಲಿ ನಡೆದ ಚಿನ್ಮಯ ಸತ್ಸಂಗದಲ್ಲಿ ತಿಪಟೂರು ಚಿನ್ಮಯ ಕೇಂದ್ರದ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ರಮಣ ಮಹರ್ಶಿಗಳ ಬಗ್ಗೆ ಪ್ರವಚನ ಮಾಡಿದರು. ಪ್ರವಚನದ, ಭಜನೆಯ ಮತ್ತು ಪ್ರವಚನಕ್ಕೆ ಪೂರಕವಾದ ಶ್ರೀ ಶಂಕರಾಚಾರ್ಯ ವಿರಚಿತ ನಿರ್ವಾಣಷಟ್ಕದ ಆಡಿಯೋ ಕ್ಲಿಪ್ ಗಳನ್ನು ಈ ಕೆಳಗೆ ನೀಡಲಾಗಿದೆ.ಸೋಮವಾರ, ಜುಲೈ 23, 2012

ವಿಶೇಷ ರೀತಿಯ ಹುಟ್ಟುಹಬ್ಬ!


ದಿನಾಂಕ 22.7.2012ರ ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತ್ನಯರು ಪಾಲುಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಾಸನದಲ್ಲಿ ಆರಂಭವಾದ ಚಿನ್ಮಯ ಸತ್ಸಂಗದಎರಡನೇ ತಿಂಗಳ ಕಾರ್ಯಕ್ರಮ ಒಂದಾದರೆ, ಎರಡನೆಯದು ಬೆಂಗಳೂರಿನಲ್ಲಿರುವ ಮಗುವಿನ ಹುಟ್ಟುಹಬ್ಬವನ್ನು ಹಾಸನದ ವೃದ್ಧಾಶ್ರಮದಲ್ಲಿ ಆಚರಿಸಿದುದು!! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರದ್ದು ಯಾವಾಗಲೂ ವಿಶಿಷ್ಟವಾದ ಚಿಂತನೆ. ಬೆಂಗಳೂರಿನಲ್ಲಿರುವ ಮಗಳು ಬಿಂದು ಅಪ್ಪನಿಗೆ ಹೇಳಿದಳು,
"ಅಕ್ಷಯಳ ಹುಟ್ಟುಹಬ್ಬಕ್ಕೆ ಏನಾದರೂ ಒಂದಿಷ್ಟು ದಾನ ಕೊಡಬೇಕು, ಯಾವುದಾದರೂ ದೇವಸ್ಥಾನಕ್ಕೆ ಹಣ ಕೊಡೋಣ"
ನಾಗರಾಜ್ ಹೇಳಿದರು, "ನೋಡಮ್ಮಾ  ಜೀವಂತ ದೇವರಿಗೆ ಕೊಟ್ಟರೆ ಸಾರ್ಥಕ ವಾಗುತ್ತೆ!"
"ಏನು ಹಾಗಂದ್ರೆ?" ಮಗಳು ಕೇಳಿದಳು.
"ನೋಡು ಬಿಂದು, ಈ ಸಮಾಜದಲ್ಲಿ ಜನರು ಒಳ್ಳೆಯ ರೀತಿಯಲ್ಲಿಯಲ್ಲಾಗಲೀ, ಕೆಟ್ಟ ರೀತಿಯಲ್ಲಾಗಲೀ  ಬೇಕಾದಷ್ಟು ಹಣ ಮಾಡ್ತಾರೆ, ಸಾಮಾನ್ಯವಾಗಿ ತಾವು ಮಾಡಿದ ಪಾಪ ಹೋಗಿಬಿಡುತ್ತೆ, ಅನ್ನೋ ಭ್ರಮೆಯಲ್ಲಿ ದೇವಸ್ಥಾನಗಳಿಗೆ ಸಾಕಷ್ಟು ಹಣ ಕೊಡ್ತಾರೆ. ಹಾಗಾಗಿ ದೇವಸ್ಥಾನಗಳಿಗೆ ಹಣ ಕೊಡುವ ಜನರು ಸಮಾಜದಲ್ಲಿ ಸಾಕಷ್ಟು ಇದ್ದಾರೆ. ಅದರ ಬದಲು  ನಿನ್ನ ಮಗಳ ಹುಟ್ಟುಹಬ್ಬವನ್ನು ಯಾವುದಾದರೂ  ಅನಾಥಾಶ್ರಮದಲ್ಲೋ, ಅಥವಾ ವೃದ್ಧಾಶ್ರಮದಲ್ಲೋ  ಮಾಡೋಣ. ಅಲ್ಲಿನ ನಿವಾಸಿಗಳೊಡನೆ ಸಂತೋಷ ಹಂಚಿಕೊಳ್ಳೋಣ. ಅವರೆಲ್ಲಾ ಜೀವಂತ ದೇವರುಗಳು. ಈ ದೇವರುಗಳ ಮನಸ್ಸನ್ನು ಸ್ವಲ್ಪ ಸಂತೋಷ ಪಡಿಸಿದರೆ ಭಗವಂತ ಮೆಚ್ಚುತ್ತಾನೆ."
ತಂದೆಯ ಮಾತಿಗೆ ಮಗಳು,ಅಳಿಯ ಒಪ್ಪಿದರು. "ನೀವೇ ಏನು ಬೇಕಾದರೂ ಪ್ಲಾನ್ ಮಾಡಿ, ಹಣ  ನಮ್ಮದು, ಪ್ಲಾನ್ ನಿಮ್ಮದು" ಎಂದರು. ಸರಿ. ಯೋಜನೆ ರೂಪಿಸಿದ್ದಾಯ್ತು. ಹೇಗೂ   ನಮಗೆಲ್ಲಾ ಪರಿಚಿತರಾದ  ಡಾ. ಹೆಬ್ಬಾರ್  ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ, ಮಳೆಗಾಲ ಬೇರೆ!  ಅಲ್ಲಿನ ನಿವಾಸಿಗಳಿಗೆ  ಬೆಚ್ಚಗಿನ ಸ್ವೆಟರ್ ಮತ್ತು ಟವೆಲುಗಳನ್ನು ಕೊಡಲು ತೀರ್ಮಾನಿಸಿ ಕಾರ್ಯಕ್ರಮ ನಿಶ್ಚಯ ಗೊಳಿಸಿದ್ದಾಯ್ತು. ದಿನಾಂಕ 22.7.2012 ರಂದು ಸತ್ಸಂಗ ನಡೆಸಲು ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಬರುತ್ತಾರೆ, ಅವರಿಂದ ಅಲ್ಲೂ ಒಂದು ಸತ್ಸಂಗ ಮಾಡಿ  ಸ್ವೆಟರ್ ವಿತರಿಸಿ, ಎಲ್ಲರೊಡನೆ ಸಿಹಿ ಊಟಮಾಡಿಬರಲು ತೀರ್ಮಾನಿಸಿದೆವು.
     ಈಶಾವಾಸ್ಯಮ್ ನಲ್ಲಿ ಸಂಜೆ 6.00 ರಿಂದ 7.00 ರವರಗೆ ಸತ್ಸಂಗ ನಡೆದ ಕೂಡಲೇ ನಾಲ್ಕು ಕಾರುಗಳು ವೃದ್ಧಾಶ್ರಮತ್ತ ಹೊರಟವು. ವೃದ್ಧಾಶ್ರಮದಲ್ಲಿ ಕೆಲವು ಮಕ್ಕಳಿಗೂ  ಆಶ್ರಯ ಕೊಟ್ಟಿದ್ದಾರೆ. ಆ  ಮಕ್ಕಳಂತೂ ಕುಳಿದು ಕುಪ್ಪಳಿಸಿದವು. ಸುಧರ್ಮ ಚೈತನ್ಯರ ಸವಿಯಾದ ಮಾತುಗಳು, ಭಜನೆ, ಮಕ್ಕಳ ಒಡನಾಟದಿಂದ ಎಲ್ಲರೂ ಆನಂದ ಸಾಗರದಲ್ಲಿ ತೇಲಿದೆವು.  'ಅಕ್ಷಯಾ,  ನೀನು ನೂರ್ಕಾಲ ಬಾಳಮ್ಮಾ' ಎಂದು ಎಲ್ಲರೂ ಹರಸುತ್ತಾ ಬಿಂದು ಮತ್ತು  ಅವರ ಪತಿ ರಘು ಅವರ ಉದಾರತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭಗವಂತನು  ಅವರ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲೆಂದು ಹರಸಿದೆವು. ಅಂತೂ  ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿದ ಕೀರ್ತಿ ಕವಿನಾಗರಾಜರಿಗೂ ಮತ್ತು ಅವರ  ಪತ್ನಿ ಶ್ರೀಮತಿ ಭಾರತಿಯವರಿಗೂ ಸಲ್ಲುತ್ತದೆ. ವೇದಸುಧೆಯ ಓದುಗ ಮಿತ್ರರೂ ಕೂಡ  ತಮ್ಮ ಮನೆಯ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಈ ಆಶ್ರಮದಲ್ಲಿ ಆಚರಿಸಬಹುದೆಂದು ತಿಳಿಸುತ್ತಾ ಹೀಗೆ ಮುಂದೆ  ಬರುವ ಎಲ್ಲರಿಗೂ ತನ್ನ ಎಲ್ಲಾ ಸಹಕಾರವನ್ನೂ ನೀಡಲು ವೇದಸುಧೆ ಬಳಗ ಮತ್ತು ಹಾಸನದ ಚಿನ್ಮಯ ಸತ್ಸಂಗವು ಸಿದ್ಧವಿದೆ ಎಂದು ತಿಳಿಸಲು ಸಂತೋಷಿಸುತ್ತೇವೆ.


ಸಾಂದರ್ಭಿಕವಾಗಿ ಬ್ರಹ್ಮಚಾರಿ ಶ್ರೀ ಸುಧನ್ವ ಚೈತನ್ಯರು  ಆಡಿದ ಮಾತುಗಳು:


                    ವೃದ್ಧಾಶ್ರಮದಲ್ಲಿ ಒಟ್ಟು ಸುಮಾರು ಅರವತ್ತು ಜನ ನಿವಾಸಿಗಳಿದ್ದು  ಒಂದು ದಿನದ ಊಟೋಪಚಾರಕ್ಕೆ ಐದು ಸಾವಿರ ರೂಗಳನ್ನು ನಿಗದಿಪಡಿಸಿರುತ್ತಾರೆ. 

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ


ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ಬೆಂಗಳೂರಿನಲ್ಲಿರುವ ಮೊಮ್ಮಗಳ ಹುಟ್ಟುಹಬ್ಬವನ್ನು 
 ಹಾಸನದ ವೃದ್ಧಾಶ್ರಮದಲ್ಲಿ ಆಚರಿಸುವಾಗ 
 ಕವಿ ನಾಗರಾಜ್  ತಮ್ಮನ್ನು ತಾವು ಮರೆತಿದ್ದರು.

ವೃದ್ಧಾಶ್ರಮದ ಮಕ್ಕಳೊಡನೆ ಹೆಚ್.ಎಸ್.ರಮೇಶ್   

  
                                                                                                                     -ಹರಿಹರಪುರ ಶ್ರೀಧರ್.

ಗುರುವಾರ, ಜುಲೈ 19, 2012

ಸಾರಗ್ರಾಹಿಯ ರಸೋದ್ಗಾರಗಳು -18: ದೇವರೇ, ನೀನು ಹೇಗಿರುವೆ?


ದೇವರನ್ನು ನೋಡಲಾಗದು, ಅನುಭವಿಸಬೇಕು
     ನಾನು ಸೌಭಾಗ್ಯದಿಂದಲೋ, ದುರ್ಭಾಗ್ಯದಿಂದಲೋ ಮುದ್ರೆಯವರ ಮನೆಯಲ್ಲಿ ಹುಟ್ಟಿದೀನಿ. ಭಗವಂತನ್ನ ನಾನು ಕೇಳ್ಕೊಳ್ಳಲಿಲ್ಲ. ಮುದ್ರೆಯವರ ಮನೆಯಲ್ಲಿ ಹುಟ್ಟಿಸಪ್ಪಾ ಅಂತ. ಮನುಷ್ಯನಾಗಿ ಹುಟ್ಟಲು ಯೋಗ್ಯ ಅಂತ ನನಗೆ ಮನುಷ್ಯ ಜನ್ಮ ಕೊಟ್ಟ. ಇದನ್ನು ಯಾಕೆ ಹೇಳ್ತಾ ಇದೀನಿ ಅಂದ್ರೆ, ಪರಮಾತ್ಮ, ಪರಿಪೂರ್ಣ, ವಿಶ್ವವ್ಯಾಪಕ, ಈ ಜೀವಾತ್ಮ ಪರಿಚ್ಛಿನ್ನ. ಕೇವಲ ಒಂದು ಜಾಗದಲ್ಲಿ ಇರತಕ್ಕವನು. ಅದೂ ಕೂಡ ಎಷ್ಟು? ಜೀವಾತ್ಮನ ವಿಸ್ತಾರ, ಉದ್ದ, ಅಗಲ, ಎಷ್ಟಿದೆ ಗೊತ್ತಾ? 'ಬಾಲಾಗ್ರ . . .  . .', ದೇವರೇ! ಲೆಕ್ಕದಲ್ಲಿ ನನ್ನ ತಲೆ ಹಾಗೆ ಹಾಗೆಯೇ. ಇಲ್ಲಿ ಲೆಕ್ಕ ಮಾಡಬೇಕೆಂದರೆ, ಬಾಲಾಗ್ರದ ಶತಭಾಗ, ಒಂದು ಕೂದಲಿನ ತುದಿಯ ೧೦೦ನೆಯ ಒಂದು ಭಾಗ, ಕೂದಲನ್ನು ಉದ್ದುದ್ದ ಸೀಳಬೇಕು, ಅಡ್ಡಡ್ಡಲಾಗಿ ಅಲ್ಲ, ಅದನ್ನು ಮತ್ತೆ ಸೀಳಿ ೧೦೦ನೆಯ ಒಂದು ಭಾಗ ತೆಗೆಯಬೇಕು. ಹೀಗೆ ಆರು ಸಲ ಸೀಳಬೇಕು. ಕೊನೆಗೆ ಎಷ್ಟು ಸೂಕ್ಷ್ಮವಾಗಿ ಆ ಕೂದಲು ಉಳಿದುಕೊಳ್ಳುತ್ತದೋ ಅಷ್ಟು ಸೂಕ್ಷ್ಮ ಈ ಜೀವಾತ್ಮ. ಆಮೇಲೆಯೇ ಅವನನ್ನು ನೋಡುವುದಕ್ಕೆ ಆಗುವುದು. ಒಬ್ಬ ಶಿಷ್ಯ ಗುರುವನ್ನು ಕೇಳ್ತಾನೆ, "ಅದ್ಯಾಕೆ ಅಷ್ಟು ಸೂಕ್ಷ್ಮವಾದ ಅವನನ್ನು ಹುಡುಕಿಕೊಂಡು ಹೋಗಬೇಕು? ಅವನ ಪಾಡಿಗೆ ಅವನಿರಲಿ ಸೂಕ್ಷ್ಮವಾಗಿ, ನಮ್ಮ ಪಾಡಿಗೆ ನಾವು ಇರೋಣ." ಪರಮಾತ್ಮ ಜ್ಞಾನವಿಲ್ಲದೆ ಯಾವ ಜ್ಞಾನವೂ ಸಿಕ್ಕುವುದಿಲ್ಲ. ಈ ಪ್ರಪಂಚದ ಜ್ಞಾನ ಅಂದರೆ - ಸೈಂಟಿಸ್ಟ್‌ಗಳನ್ನು ಕೇಳಿ-  ಎಷ್ಟು ನಕ್ಷತ್ರಗಳಿವೆ ಅಂತ. ಯಾರಿಗೂ ಉತ್ತರ ಹೇಳಕ್ಕಾಗಲ್ಲ. ಗ್ರಹಗಳು, ಹೇಳಿಬಿಡ್ತಾರೆ, ಸೋಮ, ಮಂಗಳ, ಬುಧ, .  ಅಂತ. ಈ ನವಗ್ರಹಗಳೂ ಕೂಡ ಪೌರಾಣಿಕರು ಮಾಡಿರೋದು. ಚಂದ್ರ ಗ್ರಹ ಅಲ್ಲ, ಉಪಗ್ರಹ. ಅಲ್ಲಿ ಇರೋದು ಎಂಟು ಗ್ರಹಗಳೇ. ಚಂದ್ರನಿಗೂ ಪೂರ್ಣಗ್ರಹದಂತೇ ಲೆಕ್ಕ ಹಾಕುತ್ತಾರೆ. [ಸೂರ್ಯ ನಕ್ಷತ್ರ ಅಲ್ಲವೇ?] ಆ ಚಂದ್ರನ ವಿವರವನ್ನು, ಚಂದ್ರಲೋಕದ ವರ್ಣನೆಯನ್ನು ಪದ್ಮಪುರಾಣದಲ್ಲಿ, ಗರುಡಪುರಾಣದಲ್ಲಿ, ಬ್ರಹ್ಮ ವೈವಸ್ವತ ಪುರಾಣದಲ್ಲಿ ನೀವು ನೋಡಬೇಕು. ಆಶ್ಚರ್ಯ ಆಗುತ್ತೆ. ಯಮದೂತರು, ಎಷ್ಟು ಅಗಲ, ಎಷ್ಟು ಉದ್ದ, ಎಷ್ಟು ಎತ್ತರ ಇದಾರೆ ಅವರು? ಅವರ ಕಾಲು ನೆಲದ ಮೇಲೆ ಇದ್ದರೆ ತಲೆ ಆಕಾಶದಲ್ಲಿರುತ್ತಂತೆ. ಆ ಪುರಾಣ ಹೇಳುವ ಮಾತು. ಅಂಥವರು ಯಮದೂತರು, ಯಮ ಅಲ್ಲ. ಯಮದೂತರೇ ಅಷ್ಟು ಗಾತ್ರ ಇದ್ದರೆ, ಒಂದು ಮನೆಯಲ್ಲಿ ಸಾವು ಆದರೆ ಯಮದೂತರು ಆ ಮನೆಯೊಳಗೆ ಹೇಗೆ ಹೋಗ್ತಾರೆ? ಎಲ್ಲಾ ಯೋಚನೆ ಮಾಡಿದರೆ, ನೀವು ಎಷ್ಟು ಯೋಚನೆ ಮಾಡಿ, 'ತ್ವಂ ಸಂಪ್ರಶ್ನಂ ಭುವನಾಯ . . .',  ಪ್ರಶ್ನೆ ಕೇಳುತ್ತಾ ಹೋಗಿ, ಕೊನೆಗೆ ಕೇಳಬೇಕಾದ್ದು ಇನ್ನೂ ಪ್ರಶ್ನೆ ಇರುತ್ತೆ.  ಕೇಳುತ್ತಾ ಕೇಳುತ್ತಾ ನೀನು ಮೌನಿ ಆಗುತ್ತೀಯಲ್ಲಾ, ಸಾಕಾಯ್ತಪ್ಪಾ, ಗಂಟಲು ಒಣಗಿ ಹೋಯಿತು, ಇನ್ನು ಮಾತಾಡಕ್ಕೆ ಆಗಲ್ಲ, ಅಂತ ಸ್ಥಿತಿ ಬಂದಾಗ ಉಂಟಾಗುವ ಮೌನ, ಆ ಮೌನವೂ ಕೂಡ ಒಂದು ವಾಣೀನೇ, ಮೌನವಾಣಿ. ಅದೂ ಭಗವಂತನನ್ನೇ ತೋರಿಸುತ್ತೆ. ತಮಾಷೆ, ಇನ್ನೊಬ್ಬ ಶಿಷ್ಯ ಕೇಳ್ತಾನೆ, "ಸ್ವಾಮಿ, ಅವನು ಸರ್ವವ್ಯಾಪಕ, ನಾವು ಒಂದು ಕಡೆ ಇರತಕ್ಕವರು, ನಾವು ಹೆಚ್ಚು ಅಂದರೆ ನಮ್ಮ ಕಣ್ಣು ಎಷ್ಟು ದೂರ ಹೋಗಬಹುದು, ಅಷ್ಟು ಕಾಣಬಹುದು, ಅದರ ಆಚೆ ಪ್ರಪಂಚ ಇಲ್ಲವಾ?" ಪ್ರಪಂಚ ಇದೆ, ದೇವರೂ ಇದ್ದಾನೆ. 'ಹಿಮಾಲಯ ನೋಡಿದಿಯಾ' ಅಂದರೆ 'ನೋಡಿದೀನಿ' ಅಂತ ಹೇಳ್ತೀವಿ. ಅದು ಡಾರ್ಜಿಲಿಂಗಿನಿಂದ ಹಿಡಿದು ಹಿಂದೂಖುಷ್ ಪರ್ವತದವರೆಗೆ ೨೫೦೦ ಮೈಲಿಗಳ ವರೆಗೆ ಹರಡಿಕೊಂಡಿದೆ. ನಾನು ಹಿಮಾಲಯ ಪರ್ವತ ನೋಡಿದೆ ಅಂದಾಗ, ಸುಳ್ಳು ಹೇಳ್ತಾ ಇಲ್ಲ, ನೋಡಿದೆ, ಅಂದರೆ ಮಾತು ತಪ್ಪು, ಅಂದರೆ ಹಿಮಾಲಯವನ್ನು ನೋಡಲಿಲ್ಲ, ಹಿಮಾಲಯದ ಒಂದು ಭಾಗವನ್ನು ನೋಡಿದೆ ಅನ್ನಬೇಕು. ಯಾರು ಇಷ್ಟೊಂದೆಲ್ಲಾ ದಾರ್ಶನಿಕವಾಗಿ ಯೋಚನೆ ಮಾಡ್ತಾರೆ? 
     ಮತ್ತೆ ಒಬ್ಬ ಗುರುವನ್ನು ಶಿಷ್ಯ ಕೇಳ್ತಾನೆ, "ಪ್ರಪಂಚದಲ್ಲಿ ಇಷ್ಟೆಲ್ಲಾ ವ್ಯಾಪಿಸಿಕೊಂಡಿದಾನೆ, ಭಗವಂತ, ಆ ಪೂರ್ಣ ಭಗವಂತನನ್ನು ತಿಳಿಯಲು ಸಾಧ್ಯವಾ? ನೀವು ಇಷ್ಟೇ ಇದೀರಿ? ಒಂದು ಕಡೆ ಇರುವವರು." ಆಗ ಗುರು ಹೇಳ್ತಾನೆ, "ನೀನು ಒಂದು ಗ್ಲಾಸು ಶರಬತ್ತು ಮಾಡ್ತೀಯ. ನೀನು ಶರಬತ್ತು ಮಾಡಲು ನೀರು ಎಷ್ಟು ಹಾಕ್ತೀಯೋ, ನಿಂಬೆಹುಳಿ ಎಷ್ಟು ಹಾಕ್ತೀಯೋ ಅಷ್ಟೇ ಸಕ್ಕರೆ ಹಾಕ್ತೀಯಾ? ಇಲ್ಲ. ಸಕ್ಕರೆ ಹಾಕೋದು ಸ್ವಲ್ಪವೇ. ಆದರೆ ಶರಬತ್ತಿನ ಯಾವುದೇ ಭಾಗವನ್ನು ತೆಗೆದುಕೊಂಡು ನೀವು ರುಚಿ ನೋಡಿದರೆ ನಿಮಗೆ ಸಿಹಿ ಗೊತ್ತಾಗುತ್ತೆ. " 'ಇಲ್ಲ ನನಗೆ ಉಪ್ಪಿನ ರುಚಿ ಬಂತು' ಅಂತ ಹೇಳಿದರೆ ಅವನು ಮೋಸಗಾರ. ಇದನ್ನು ತತ್ವಶಃ ನಾವು ತಿಳಿಯಬೇಕು. ಒಂದು ತೊಟ್ಟು ಶರಬತ್ತನ್ನು ನಾಲಿಗೆಯ ಮೇಲೆ ಹಾಕಿಕೊಂಡು ರುಚಿ ನೋಡಿ ಅದು ಸಿಹಿ ಅಂತ ನಾನು ಹೇಳುತ್ತೇನೆ. ನನ್ನನ್ನು ಸುಳ್ಳ ಅಂತೀರಾ? ಇಲ್ಲ. ಅದೇ ರೀತಿ ಭಗವಂತನನ್ನು - ಸಾಗರ ರೂಪ ಅಂತಾ ಕೂಡಾ ಹೇಳ್ತಾರೆ - ಅನುಭವಿಸಿ ತಿಳಿಯಬೇಕೇ ಹೊರತು ನೋಡಲಾಗದು. ಒಂದು ಪೂರ್ಣ ಜಗತ್ತನ್ನೇ ಮೊದಲು ನೋಡಿ, ಜಗತ್ತು ಅಂದರೆ ಈ ಭೂಮಿ ಒಂದೇ ಅಲ್ಲ, ಸೂರ್ಯ, ಚಂದ್ರ, ಎಲ್ಲಾ ಗ್ರಹಗಳು, ಲೆಕ್ಕವಿಲ್ಲದಷ್ಟು ನಕ್ಷತ್ರಗಳು, ಇವೆಲ್ಲಾ ಒಟ್ಟಿಗೆ ಸೇರಿ ಬ್ರಹ್ಮಾಂಡ ಅಂತಾರೆ. ಹಾಗಾದರೆ ಆ ಬ್ರಹ್ಮಾಂಡವನ್ನು ತಿಳಿಯಲು ಸಾಧ್ಯವೇ? ಭೌತಿಕ ಬ್ರಹ್ಮಾಂಡವನ್ನಂತೂ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ಯಾಕೆ ಅಂದರೆ ಸೈಂಟಿಸ್ಟುಗಳು ಎಷ್ಟು ಎಷ್ಟು ಅನ್ವೇಷಣೆ ಮಾಡ್ತಾ ಇದಾರೋ ಅಷ್ಟಷ್ಟು ಬೇರೆ ಬೇರೆ ನಕ್ಷತ್ರಗಳು ಕಾಣಿಸುತ್ತಾ ಇರುತ್ತವೆ. ಇದುವರೆಗೆ ನವಗ್ರಹ ಅಂತ ನಮ್ಮವರು ಹೇಳ್ತಾ ಇದ್ದರು. ಪ್ರತಿಯೊಂದು ಶುಭಕಾರ್ಯ ಮಾಡಬೇಕಾದರೂ ಕೂಡ ಮೊದಲು ನವಗ್ರಹಗಳಿಗೆ ದಾನ ಕೊಡಬೇಕು ಅಂತಾರೆ. ಪಾಪ, ಆ ನವಗ್ರಹಗಳಿಗೆ ಏನು ಬೇಕಾಗಿದೆ? ಪುರೋಹಿತರಿಗೆ ದಾನ-ದಕ್ಷಿಣೆ ಬೇಕಾಗಿದೆ, ಪೂಜೆ ಮಾಡಿದ ಮೇಲೆ ಆ ದಾನಗಳನ್ನು ಗ್ರಹಗಳು ಬಂದು ತೆಗೆದುಕೊಂಡು ಹೋಗೋದಿಲ್ಲ. ಪುರೋಹಿತರಿಗೇ ಹೋಗುತ್ತೆ. ಅದಕ್ಕೋಸ್ಕರ ಈ ನಾಟಕಗಳನ್ನೆಲ್ಲಾ ಆಡ್ತಾರೆ. 
     ನಾನು ಹೇಳ್ತಾ ಇದ್ದೆ, ಯಾವ ರೀತಿ ಆ ಶರಬತ್ತಿನ ಒಂದು ತೊಟ್ಟನ್ನು ನಾಲಿಗೆ ಮೇಲೆ ಹಾಕಿಕೊಂಡರೆ ಆ ಪೂರ್ತಿ ಶರಬತ್ತಿನ ರುಚಿ ಗೊತ್ತಾಗುತ್ತೋ ಹಾಗೇನೇ ಭಗವಂತ  ನಮ್ಮ ಹೃದಯದಲ್ಲಿ ಇರ್ತಾನೆ, ಅಲ್ಲಿ ಜೀವಾತ್ಮನೂ ಇರ್ತಾನೆ, ಇಬ್ಬರೂ ಇರ್ತಾರೆ, ಆದರೆ ಇಬ್ಬರೂ ಸೂಕ್ಷ್ಮ, ಪ್ರಕೃತಿ ಮೇಲಿನಿಂದ ಕೆಳಕ್ಕೆ ಬರುತ್ತೆ, ಪರಮಾತ್ಮನನ್ನ ಸಚ್ಚಿದಾನಂದ ಸ್ವರೂಪ ಅಂತೀವಿ, ಒಂದು ಮೆಟ್ಟಲು ಕೆಳಗೆ ಇಳೀತೀವಿ, ಸತ್ ಚಿತ್ ಸ್ವರೂಪ ಜೀವ ಅಂತ, ಆನಂದಕ್ಕೆ ಖೋತಾ, ಆನಂದ ಇಲ್ಲ. ಪ್ರಕೃತಿ ಹತ್ತಿರ ಬಂದರೆ ಚೈತನ್ಯ ಕೂಡಾ ಇಲ್ಲ. ಬರೀ ಪರಮಾಣು ಜಡ ಸಮೂಹ. ಅದು ಇನ್ನೂ ಕೆಳಗೆ ಹೋಯಿತು. ಆದ್ದರಿಂದ ಋಷಿಮುನಿಗಳು ಹೇಳ್ತಾರೆ, 'ನಿನಗಿಂತ ಮೇಲಿರುವ ಪರಮಾತ್ಮ ಆನಂದಮಯ, ಅವನನ್ನು ಕುರಿತು ಧ್ಯಾನ ಮಾಡು, ಈ ಜಡ ಪ್ರಕೃತಿಯನ್ನು ಧ್ಯಾನ ಮಾಡಿದರೆ ಪ್ರಯೋಜನವಿಲ್ಲ.' ನನ್ನನ್ನು ಮೂರ್ತಿಪೂಜಕರು ಕೇಳುವುದು ಇದೇ ಪ್ರಶ್ನೆ, "ಪಂಡಿತಜಿ, ಏನೂ ಇಲ್ಲದೆ ಹೋದರೆ ಮನಸ್ಸನ್ನು ಎಲ್ಲಿ ನಿಲ್ಲಿಸುವುದು? ಒಂದು ಬೇಕು, ಕಲ್ಲಿಂದೋ, ಮಣ್ಣಿಂದೋ, ಕಟ್ಟಿಗೆಯದೋ, ಯಾವುದರದೋ ಒಂದು ಬೇಕು, ಪ್ರತೀಕ ಅದರಲ್ಲಿ ಮನಸ್ಸನ್ನು ನಿಲ್ಲಿಸಬಹುದು." ನಾನು ಕೇಳೋದು, "ನೀವು ಯಾರಲ್ಲಿ ಮನಸ್ಸನ್ನು ನಿಲ್ಲಿಸಬೇಕು ಅಂತಿದೀರಿ? ಪರಮಾತ್ಮನಲ್ಲಿ. ಪರಮಾತ್ಮ ಅದರೊಳಗೆ ಇದಾನೆ ಅನ್ನೋದೇನೋ ನಿಜ, ಅದೇ ಪರಮಾತ್ಮನಾ?" ಅದೇ ಪರಮಾತ್ಮ ಆಗಿದ್ದರೆ, ನಾವು ಹೇಳಿದ ಹಾಗೆ ಕೇಳಬೇಕಾಗಿತ್ತು. ಭಗವಂತ, ನೀನು ಮಲಗಿಕೊಂಡುಬಿಟ್ಟಿದ್ದೀಯಪ್ಪಾ, ಸ್ವಲ್ಪ ಎದ್ದು ಕುಳಿತುಕೊಳ್ಳಪ್ಪಾ, ಆ ಬೊಂಬೆ ಎದ್ದು ಕೂತ್ಕೋಬೇಕಾಗಿತ್ತು. ನಿಂತ್ಕೋ ಅಂದರೆ ನಿಂತುಕೊಳ್ತಾನಾ? ತಾತ್ಪರ್ಯ ಏನು? ಸೂಕ್ಷ್ಮತಮ ತತ್ವ ಇದೆಯಲ್ಲಾ, ಸೂಕ್ಷ್ಮ ಜ್ಞಾನದ ಕಣ್ಣಿಗೆ ಕಾಣುತ್ತೆಯೇ ಹೊರತು, ಈ ಕಣ್ಣಿಗೆ ಏನೂ ಕಾಣೋದಿಲ್ಲ. ಮತ್ತೆ ಈ ಕಣ್ಣು ಹೇಗೆ ಅನುಭವಿಸುತ್ತೆ? ನಿಮ್ಮ ಕಣ್ಣನ್ನು ನೀವು ನೋಡ್ತೀರಾ? ಕನ್ನಡಿ ಹಿಡಕೊಂಡರೆ ನಿಮ್ಮ ಬಲಗಣ್ಣು ಎಡಗಣ್ಣಾಗಿ, ಎಡಗಣ್ಣು ಬಲಗಣ್ಣಾಗಿ ಕಾಣುತ್ತೆ. ನಿಮ್ಮ ಬೆನ್ನನ್ನು ನೀವು ನೋಡ್ತೀರಾ? ನನ್ನ ಬೆನ್ನನ್ನು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ, ಆದ್ದರಿಂದ ಬೆನ್ನೇ ಇಲ್ಲ ಅನ್ನೋಕಾಗುತ್ತಾ? ಆ ಬೆನ್ನು ಇಲ್ಲದಿದ್ದರೆ ನಾವು ಹಾವಿನ ಹಾಗೆ ಸುತ್ತಿಕೊಂಡು ಹೋಗಬೇಕಾಗುತ್ತೆ. ಬೆನ್ನು ಮೂಳೆ ಇರೋದರಿಂದಲೇ ನಾವು ನೆಟ್ಟಗಿದ್ದೇವೆ. ಹೀಗೆ ಅನುಮಾನ ಪ್ರಮಾಣ ಅಂತ ಹೇಳ್ತಾರೆ. ಆಲೋಚನೆ ಮಾಡಿ, ಆ ವಸ್ತುವನ್ನು ನೋಡಿ, ಅದರ ಗುಣವನ್ನು ಹಿಡಿದು ಇದು ಹೀಗೇನೇ ಅಂತ ಹೇಳ್ತೀವಲ್ಲಾ ಅದು. ನಾವು ಯಾವ ಪದಾರ್ಥ ನೋಡುತ್ತೇವೆ ಅದರ ಆಕಾರವನ್ನು ಮಾತ್ರ ನೋಡ್ತೀವಿ. ಚಿನ್ನದ ಬೊಂಬೆ ಇದೆ ಅಂತ ಇಟ್ಕೊಳ್ಳಿ, ನಮ್ಮ ಕಣ್ಣು ಆ ಚಿನ್ನ ಥಳಥಳ ಹೊಳೆಯುತ್ತಾ ಇರಬಹುದು, ಅದು ಬೇರೆ ವಿಷಯ, ಆ ಚಿನ್ನ ನಾನು ನೋಡುತ್ತಾ ಇದೇನಾ? ಚಿನ್ನದ ಹೊಳಪನ್ನು ನೋಡ್ತಾ ಇದೇನೇ ಹೊರತು ಚಿನ್ನ ನೋಡ್ತಾ ಇಲ್ಲ. ಈ ರೀತಿ ದಾಸರು ಇದ್ದಾರಲ್ಲಾ, ತಾವೂ ದಾರಿ ತಪ್ತಾರೆ, ಬೇರೆಯವರನ್ನೂ ದಾರಿ ತಪ್ಪಿಸ್ತಾರೆ. 
      ಆಕಾಶದಲ್ಲಿ ಮೋಡ ಕಂಡಾಗ, ಆಕಾರದಲ್ಲಿ ತುಂಬಾ ಚಿಕ್ಕ ಚಿಕ್ಕದಾದ ಇರುವೆಗಳು ಏನು ಮಾಡುತ್ತವೆ ಗೊತ್ತಾ? ದವಸ, ಆಹಾರವನ್ನು ಹೊತ್ತುಕೊಂಡು ಸಾಲು ಸಾಲಾಗಿ ಹೋಗಿ ಗೂಡಲ್ಲಿ ಇಟ್ಟುಕೊಳ್ಳುತ್ತವೆ. ಯಾಕೆ ಅಂದ್ರೆ ಮಳೆಗಾಲದಲ್ಲಿ ಹೊರಕ್ಕೆ ಬರಕ್ಕೆ ಆಗಲ್ಲ ಅಂತ. ಅಷ್ಟು ಸಣ್ಣ ಇರುವೆಗೆ ತಲೆ ಎಷ್ಟಿರಬಹುದು, ಅದರ ಒಳಗೆ ಮೆದುಳು ಎಷ್ಟಿರಬಹುದು? ಅಷ್ಟು ಸೂಕ್ಷ್ಮವಾದ ಮೆದುಳು ಇರುವೆಗೆ ಕೂಡಾ ಇದೆ. ಹೀಗಿರುವಾಗ ಆ ಪರಮಾತ್ಮನ ವಿಷಯದಲ್ಲಿ ನಾವು ಮಾತಾಡೋದೇನು? ಅವನನ್ನು ಮರೆಮಾಡಿ ನಾವು ಕದಿಯಬಹುದು, ಮೋಸ ಮಾಡಬಹುದು, ಸುಳ್ಳು ಹೇಳಬಹುದು ಅಂತ ಹೇಳಿ ನಾವು ಭಾವಿಸುತ್ತೇವಲ್ಲಾ, ಅದು ಸಾಧ್ಯವಾ? ಅವನು ಸಹಸ್ರಾಕ್ಷ, ಸಹಸ್ರಪಾತ್, ಅವನಿಗೆ ಎಲ್ಲಾ ಕಡೆಯೂ ಕಣ್ಣಿದೆ, ಅಂದರೆ ಕಣ್ಣಿಲ್ಲದೆ ನೋಡತಕ್ಕ ಶಕ್ತಿ ಆ ವಿಶ್ವಚೇತನನಲ್ಲಿ ಇದೆ. ಅವನಿಗೆ ಕಿವಿಯಿಲ್ಲ, ದೇವರ ಕಿವಿ ಯಾವುದು ತೋರಿಸುತ್ತೀರಾ? ಆದರೆ ಅವನು ಕೇಳದೇ ಇರುವ ಪದಾರ್ಥವೇ ಇಲ್ಲ. ಪ್ರತಿಯೊಂದನ್ನೂ ಅವನು ಕೇಳ್ತಾನೆ, ಪ್ರತಿಯೊಬ್ಬರನ್ನೂ ಅವನು ನೋಡ್ತಾನೆ. ಎಲ್ಲವೂ ಅವನಿಗೆ ಗೊತ್ತಾಗುತ್ತೆ. ಮತ್ತೆ ಅವನಿಗೆ ಕಾಲು ಇದೆಯಾ? ಇಲ್ಲ. ಆದರೆ ಅವನು ಇಲ್ಲದೆ ಇರುವ ಜಾಗವೇ ಇಲ್ಲ. 'ಪಾತ್' ಅಂದರೆ ಕಾಲು ಅಂತ ಇಟ್ಕೋಬೇಡಿ. ಕಾಲಿನ ಕೆಲಸ ಏನು? ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗೋದು. ಅವನು ಮೊದಲೇ ಇದ್ದು ಬಿಟ್ಟಿದ್ದಾನೆ. ಹೋಗೋದೆಲ್ಲಿಗೆ? ಆ ಸಮಸ್ಯೆಯೇ ಇಲ್ಲ ಅವನಿಗೆ. ನಾವು ಕೂಗ್ತೀವಲ್ಲಾ, 'ಗೋವಿಂದಾ, ಅಪರಾಧ ಸಹಸ್ರಾಣಿ . . ' ಹಗಲೂ ರಾತ್ರಿ ಲಕ್ಷಾಂತರ ಪಾಪ ಮಾಡಿರ್ತೀನಿ. ನಿನ್ನ ದಾಸ ಅಂದುಕೊಂಡುಬಿಟ್ಟು ನನ್ನನ್ನು ಕ್ಷಮಿಸು, ಅಂತ. ಹಾಗೆ ದೇವರು ಕ್ಷಮಿಸಕ್ಕೆ ಶುರು ಮಾಡಿದರೆ ಪ್ರಪಂಚ ನಡೆಯುವ ಹಾಗೇ ಇರಲಿಲ್ಲ, ಯಾವ ಕೆಲಸವೂ ನಡೆಯುವ ಹಾಗಿರಲಿಲ್ಲ. ಆ ಪರಮಾತ್ಮನ ದಯೆ, ಎಲ್ಲರ ಮೇಲಿದೆ. ತಾಯಿ-ತಂದೆಗಳು ತಪ್ಪು ಮಾಡಿರುವ ಮಕ್ಕಳನ್ನು ದಂಡಿಸ್ತಾರೆ, ಕೋಪ ಇದೆಯೇನು ಅವರಿಗೆ ಮಕ್ಕಳ ಮೇಲೆ? ಇಲ್ಲ. ಮಗು ಸುಧಾರಿಸಲಿ, ಒಳ್ಳೆಯ ಗುಣ ಕಲಿತುಕೊಳ್ಳಲಿ ಅಂತ ದಂಡಿಸುತ್ತಾರೆ. ಆ ಪರಮಾತ್ಮ ವಿಶ್ವತಸ್ಚಕ್ಷು, ಎಲ್ಲಾ ಕಡೆಯೂ ನೋಡಬೇಕು ಅವನು, ವಿಶ್ವತೋಮುಖ ಎಲ್ಲಾ ಕಡೆ ಮುಖ ಇರಬೇಕು. ಆ ಮುಖ ಎಲ್ಲೋ ಒಂದು ಕಡೆಗೆ ತಿರುಗಿಕೊಂಡಿದ್ದರೆ? ಒಂದೇ ಕಡೆ ಇದಾನಾ ಅವನು? 
*****************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/07/17_19.html

ಸಾರಗ್ರಾಹಿಯ ರಸೋದ್ಗಾರಗಳು -17: ಚತುರ್ವರ್ಣ, ಫಿಲಾಸಫಿ. .


ಚತುರ್ವರ್ಣ
      ಕಾಲಿಗೆ ಮುಳ್ಳು ಚುಚ್ಚಿಕೊಂಡರೆ 'ಹಾ' ಅಂತ ಬ್ರಾಹ್ಮಣ ಕಿರುಚಿಕೊಳ್ಳುತ್ತಾನೆ, ಕ್ಷತ್ರಿಯ (ಕೈ) ಮುಳ್ಳನ್ನು ಕೀಳಲು ಬರುತ್ತಾನೆ, ವೈಶ್ಯ(ಮುಂಡ) ಅವನಿಗೆ ಬೇಕಾದ ಸಹಾಯ ಒದಗಿಸುತ್ತಾನೆ. ಹೀಗೆ ಈ ಶರೀರದಲ್ಲೇ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ನಾಲ್ವರೂ ಇದ್ದಾರೆ. ಪಾದ ನೀಚ, ತಲೆ ಉತ್ಕೃಷ್ಟ ಅಂತ ಹೇಳೋ ಪಕ್ಷದಲ್ಲಿ ಒಂದು ದೊಡ್ಡ ಪ್ರಶ್ನೆ ಬರುತ್ತೆ, ನಾನು ಗುರು, ಯಾರದೋ ಮನೆಗೆ ಹೋಗ್ತೀನಿ, ಆಗ ನನ್ನ ಕಾಲಿಗೆ ನೀರು ಕೊಡ್ತಾರೆಯೇ ಹೊರತು ತಲೆಗೆ ನೀರು ಹಾಕಲ್ಲ. ತಲೆಗೆ ನೀರು ಹಾಕಿದರೆ ನನ್ನ ಪರಿಸ್ಥಿತಿ ಕೇಳೋರು ಯಾರು? ಕಾಲಿಗೇ ಬೇಕಾಗಿರೋದು ನೀರು, ತಲೆಗೆ ಬೇಕಾಗಿಲ್ಲ, ಈ ತರಹ ಆಲೋಚನೆ ಮಾಡಿ. ಈ ಚತುರ್ವರ್ಣ ವ್ಯವಸ್ಥೆ ಇದೆಯಲ್ಲಾ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಅಂತ, ಇವು ಸರಿ ಹೋಗದಿದ್ದರೆ,  ಇಂಟಲೆಕ್ಷುಯಲ್, ಮಾರ‍್ಶಿಯಲ್, ಕಮರ್ಶಿಯಲ್ ಮತ್ತು ಮಾನ್ಯುಯಲ್ ಎಂಬ ಈ ನಾಲ್ಕು ಶಬ್ದಗಳನ್ನು ಇಟ್ಟುಕೊಳ್ಳಿ. ನನ್ನ ಕಾಲು ಹಾಳಾದರೆ ಹಾಳಾಗಲಿ, ನನ್ನ ತಲೆ ಮಾತ್ರ ಚೆನ್ನಾಗಿದ್ದರೆ ಸಾಕು ಅಂತ ಹೇಳಿದರೆ ನಾನು ಮೂರ್ಖ ಅಲ್ಲವಾ? ಕಾಲೂ ಚೆನ್ನಾಗಿರಬೇಕು, ತಲೆಯೂ ಚೆನ್ನಾಗಿರಬೇಕು, ಶರೀರದ ಪ್ರತಿಯೊಂದು ಅಂಗಾಂಗವೂ ಚೆನ್ನಾಗಿರಬೇಕು. ಹಾಗಿರುವವನೇ ನಿಜವಾದ ಪುರುಷ. ಕುರುಡ, ಕುಂಟ, ಕಿವುಡ ಇಂತಹವರೆಲ್ಲಾ ಪೂರ್ಣ ಪುರುಷರಲ್ಲ, ಅವರ ಕೆಲವು ಅಂಗಗಳು ಊನವಾಗಿವೆ. ಪೂರ್ತಿ ಇಂದ್ರಿಯ ಸರಿಯಾಗಿರಬೇಕು. 
ಪ್ರಜ್ಞಾಚಕ್ಷು ವಿರಜಾನಂದರು
      ದಯಾನಂದರಂತಹ ಪುರುಷ ಸಿಂಹನನ್ನು ಜಗತ್ತಿಗೆ ಧಾರೆಯೆರೆದು ಕೊಟ್ಟ ವಿರಜಾನಂದರು ಕುರುಡರು, ಕಣ್ಣಿಲ್ಲ. ಆದರೆ ಪ್ರಜ್ಞಾಚಕ್ಷು ಅಂತ ಅವರನ್ನ ಕರೀತಿದ್ದರು. ಆ ಪ್ರಜ್ಞೆ ಎಷ್ಟು ಸೂಕ್ಷ್ಮ ಇತ್ತು ಅಂದರೆ ಅವರು ಎಂಟು ವರ್ಷದ ಹುಡುಗನಾಗಿದ್ದಾಗ ಅವರ ಅತ್ತೆ, ಅಣ್ಣ 'ಈ ಕುರುಡ ಹುಡುಗನನ್ನು ಏಕೆ ನಮ್ಮ ತಲೆಗೆ ಕಟ್ಟಿಹೋದರೋ ಅಪ್ಪ, ಅಮ್ಮ, ಈ ಶನಿ ಎತ್ತಲಾದರೂ ಹೋಗಬಾರದೇ' ಅಂತ ಬಯ್ಯಲು ಶುರು ಮಾಡಿದ್ದರು. ಎಂಟು ವರ್ಷದ ಹುಡುಗ, ಒಂದು ಕೈಯಲ್ಲಿ ಲಾಠಿ ಹಿಡಕೊಂಡ, ಕರ್ತಾರಪುರ ಪಂಜಾಬಿನಲ್ಲಿರೋದು, ಅಲ್ಲಿಂದ ಹೊರಟು ಹರಿದ್ವಾರ, ಸುಮಾರು ೨೦೦೦ ಮೈಲಿ ದೂರ ಆಗುತ್ತೆ, ಅಲ್ಲಿವರೆಗೆ ಕೋಲೂರಿಕೊಂಡು ಬಂದ. ಮತ್ತೆ ಆಗ ಈಗಿನ ಕಾಲದಲ್ಲಿದ್ದಂತೆ ರಸ್ತೆಗಳು ಇರಲಿಲ್ಲ. ಕಾಡುರಸ್ತೆಗಳೇ. ಆ ರಸ್ತೆಗಳಲ್ಲೇ ಕೋಲೂರಿಕೊಂಡು ಕಷ್ಟಪಟ್ಟು ಬಂದ. ಅದೇ ದೊಡ್ಡ ಕೆಲಸ, ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಬುದ್ಧಿ ಎಷ್ಟು ತೀಕ್ಷ್ಣ ಅಂದರೆ, ಕೃಷ್ಣಶಾಸ್ತ್ರಿ ಅನ್ನುವವರು ಗಂಗಾನದಿಯಲ್ಲಿ ನಿಂತುಕೊಂಡು ಋಗ್ವೇದ ಹೇಳುತ್ತಿದ್ದುದನ್ನು ಕೇಳುತ್ತಾ ನಿಂತಿದ್ದ ಅವರು ಕೇಳಿದರು, 'ಶಾಸ್ತ್ರಿಗಳೇ, ಇನ್ನೊಂದು ಒಂದು ಸಲ ಹೇಳಿ'. ಅವರು ಹೇಳಿದರು.  ಇವರು ಸ್ವಲ್ಪವೂ ಮರೆಯದೆ ಕಲಿತರು. ಹೀಗೇನೇ ಆ ಪುಣ್ಯಾತ್ಮ ನಾಲ್ಕೂ ವೇದಗಳನ್ನು ಕಲಿತುಬಿಟ್ಟರು. ಬೇರೆಯವರು ಪುಸ್ತಕ ತೆಗೆದು ಇಂಥ ಅಧ್ಯಾಯ, ಇಷ್ಟನೇ ಮಂತ್ರ ಅಂತ ಹೇಳುತ್ತಿದ್ದರೆ, ಕಣ್ಣಿಲ್ಲದಿದ್ದರೂ, ಇಂಥ ವೇದದ, ಇಷ್ಟನೇ ಅಧ್ಯಾಯದ, ಇಷ್ಟನೇ ಮಂತ್ರ ಅಂತ ಹೇಳೇಬಿಡೋರು. 
     ಅಷ್ಟು ಕಷ್ಟದಲ್ಲಿದ್ದರೂ ವಿರಜಾನಂದರು ವಿನೋದ ಮಾಡುತ್ತಿದ್ದರು. ಒಮ್ಮೆ ಮಥುರಾ ನಗರದಲ್ಲಿ ನಡುಬೇಸಿಗೆಯ ಮಧ್ಯಾಹ್ನದಲ್ಲಿ ಕೋಲೂರಿಕೊಂಡು ಹೋಗ್ತಾ ಇದ್ದರು. ಅದೇ ಸಮಯದಲ್ಲಿ  ಒಂದು ಚಿಕ್ಕ ರಥದ ಮೇಲೆ ದೇವರನ್ನು ಕೂರಿಸಿಕೊಂಡು ಭಕ್ತಾದಿಗಳು ಬರುತ್ತಿದ್ದರು. ಬಿಸಿಲು ಜೋರಾಗಿದ್ದರಿಂದ ರಥವನ್ನು ನಡುರಸ್ತೆಯಲ್ಲೇ ಬಿಟ್ಟು ಮರದ ನೆರಳಿನಲ್ಲಿ ಭಕ್ತರು ಸುಧಾರಿಸಿಕೊಳ್ಳುತ್ತಿದ್ದರು. ಈ ಪುಣ್ಯಾತ್ಮ ಕೋಲೂರಿಕೊಂಡು ಹೋಗ್ತಾ ಹೋಗ್ತಾ ಆ ರಥದ ಮೇಲೇ ಬಿದ್ದುಬಿಟ್ಟರು. ಭಕ್ತರು ಕಿರುಚಿದರು, 'ಏಯ್, ಕುರುಡಾ, ದೇವರು ಇರೋದು ಗೊತ್ತಾಗಲ್ವಾ?' ವಿರಜಾನಂದರು ಹೇಳಿದರು, 'ನಾನು ಕುರುಡ ಅನ್ನೋದು ಜಗತ್ತಿಗೇ ಗೊತ್ತು, ಆ ನಿಮ್ಮ ದೇವರೂ ಕುರುಡನೇ ಇರಬೇಕು, ಪಾಪ, ಮುದುಕ, ಕುರುಡ ಬರ್ತಾ ಇದಾನೆ ಅಂತ ಸರಿಯೋಕೆ ಆಗ್ತಾ ಇರಲಿಲ್ವಾ?' ಈ ರೀತಿ ಸಮಯಕ್ಕೆ ಸರಿಯಾಗಿ ತಕ್ಷಣ ಉತ್ತರ ಕೊಡೋದು ಬಹಳ ಕಷ್ಟ. ಎಡ್ವರ್ಡ್ ದಿ ಸೆವೆನ್ತ್ ಅವನು ಇಂಡಿಯಾ ದೇಶಕ್ಕೆ ಬಂದಿದ್ದ. ಮಥುರಾಕ್ಕೆ ಬಂದಿದ್ದ. ಸ್ವಲ್ಪ ಹಿಂದೂಸ್ತಾನಿ, ಸಂಸ್ಕೃತ ನಾಲ್ಕು ಅಕ್ಷರ ಕಲಿತುಕೊಂಡಿದ್ದ. ನಾಲ್ಕು ವಾಕ್ಯ ಗಟ್ಟು ಮಾಡಿಕೊಂಡಿದ್ದ. ಅವನು ಬಂದ. ಬಂದವನೇ ಒಂದು ಸಭೆಯಲ್ಲಿ ತಪ್ಪು ತಪ್ಪಾಗಿ ಸಂಸ್ಕೃತದಲ್ಲಿ, ಹಿಂದೂಸ್ತಾನಿಯಲ್ಲಿ ಮಾತಾಡಿದ. 'ಇವನಾ ನಮ್ಮ ಚಕ್ರವರ್ತಿ, ಮುಠ್ಠಾಳ, ಇವನಿಗೆ ನಾವು ಪ್ರಜೆಗಳಾ?' ಎಂದು ವಿರಜಾನಂದರು ಅಂದುಬಿಟ್ಟರು. ಅವನೂ ಸಂಭಾವಿತ, ಸಹಿಸಿದ. ಕೋಪ ಮಾಡಿಕೊಳ್ಳಲಿಲ್ಲ. ದೊಡ್ಡಸ್ತಿಕೆಗೆ ಮಿತಿಯಿಲ್ಲ. 
ಫಿಲಾಸಫಿ?
     ನಾನು ಹಿಂದೆ ಈ ವಿಷಯ ಹೇಳಿದೀನಿ, ಡಾ. . . . .ರು ಸೈಂಟಿಸ್ಟೂ ಹೌದು, ಎಜುಕೇಶನಿಸ್ಟೂ ಹೌದು. ಅವರು ಸಮಾಜಕ್ಕೆ ಬರ್ತಾ ಇದ್ದರು, ಪ್ರತೀವಾರ. ಆಮೇಲೆ ಇದ್ದಕ್ಕಿದ್ದ ಹಾಗೇ ನಿಲ್ಲಿಸಿಬಿಟ್ಟರು. ಒಂದು ಸಲ ದಾರಿಯಲ್ಲಿ ಸಿಕ್ಕಿದ್ದರು, ಕೇಳಿದೆ, 'ಯಾಕೆ . . . . .ರೇ, ಬರ್ತಾ ಇಲ್ಲ?' 'ನಿಜ ಹೇಳಿಬಿಡಲಾ?' 'ನಿಜ ನೀವು ಹೇಳ್ತೀರಿ ಅಂತಲೇ ಕೇಳ್ತಾ ಇರೋದು.' 'ನೀವು ಏನು ಹೇಳ್ತೀರಿ, ಅದೆಲ್ಲಾ ನಮಗೆ ಗೊತ್ತಾಗಿ ಹೋಯಿತು. ಯಾವುದು ಗೊತ್ತಾಗಬೇಕೋ ಅದು ನನಗೆ ಸಿಗ್ತಾ ಇಲ್ಲ.' ಗೊತ್ತಿರೋ ವಿಷಯ ಹೇಳಬಾರದು. ಹೇಳೋ ವಿಷಯ ಅದು ಗೊತ್ತಿರಬಾರದು. ಕೇಳೋರಿಗೆ ಅದೇನು ವಿಷಯ ಅಂತ ಗೊತ್ತಾಗಬಾರದು. ಇವನೊಂದು ತರಹ ಹೇಳ್ತಾ ಇರಬೇಕು, ಅವನೊಂದು ತರಹ ಕೇಳ್ತಾ ಇರಬೇಕು. ನಾನು ಹೇಳಿದೆ, ' . . . . .ರೇ, ದಯಮಾಡಿಸಿ, ಈ ಭಾನುವಾರ ನಿಮ್ಮ ಫಿಲಾಸಫಿಯನ್ನೇ ಮಾತಾಡ್ತೀನಿ.' ಅವತ್ತು ಏನು ಮಾತಾಡಿದೆ ಅಂತ ನನಗೇ ಗೊತ್ತಾಗಲಿಲ್ಲ. 'ಹೇ ಜೀವಾತ್ಮ, ನೀನು ಆನಂದಮಯ, ಅಳುತ್ತಾ ಇದೀಯಾ ಯಾಕೆ? ಕಣ್ಣೀರು ಒರೆಸಿಕೋ. ದೇವರಿಗೆ ನಾವು ಹೇಳೋ ಮಾತಾ ಇದು?' ಹೀಗೇ ಹೇಳ್ತಾ ಇದ್ದೆ. ಒಂದು ಗಂಟೆ ಅವರ ತಲೆ ತಿಂದೆ. ಕೊನೆಗೆ, '. . . ರೇ, ಹೇಗಿತ್ತು?'  'ಏನೂ ಗೊತ್ತಾಗಲಿಲ್ಲ, ಸ್ವಾಮಿ.' ಅದಾ ಫಿಲಾಸಫಿ? ಯಾವುದು ಅರ್ಥವಾಗುವುದಿಲ್ಲವೋ ಅದು ಫಿಲಾಸಫಿ ಅಲ್ಲ. ಫಿಲಾಸಫಿ ಅನ್ನೋದು ಇದೆಯಲ್ಲಾ, ಅದರಲ್ಲಿ ಫಿಲ್ ಅನ್ನೋದು ಮುಖ್ಯ, ಫಿಲ್ ಅಂದರೆ ಸ್ವರೂಪ ಅಂತ. ಯಾವುದಾದರೂ ವಸ್ತುವಿನ ಸ್ವರೂಪವನ್ನು ಯಾವ ಶಾಸ್ತ್ರ ಯಾವ ದರ್ಶನ ಮಾಡಿಸುತ್ತೋ ಅದು ಫಿಲಾಸಫಿ. ನಮ್ಮಲ್ಲಿ ಆರು ಫಿಲಾಸಫಿ(ದರ್ಶನ)ಗಳಿವೆ. ಆರೂ ಒಂದಕ್ಕೊಂದು ವಿರೋಧ ಅಂತ ತಿಳಕೋಬೇಡಿ, ದಯಾನಂದರನ್ನು ಒಬ್ಬರು ಕೇಳಿದರು, 'ಒಂದು ದರ್ಶನ ಸಾಕಾಗ್ತಾ ಇರ್ಲಿಲ್ವಾ ಸ್ವಾಮೀಜಿ, ಆರು ಯಾತಕ್ಕೆ?' 'ಜ್ಞಾನಿ ಆದರೆ ಒಂದು ಮಾತು ಹೇಳಿದರೆ ತಿಳಿದುಕೊಳ್ಳುತ್ತಾನೆ. ಎಲ್ಲರಿಗೂ ಅರ್ಥವಾಗಬೇಕಲ್ಲಾ, ಅದಕ್ಕೆ' ಅಂದರು. 
ಪ್ರಾಣಿಗಳಿಂದಲೂ ಕಲಿಯುವುದಿದೆ
     ಮಗು ಇದೆಯಲ್ಲಾ, ಹುಟ್ಟಿದ ಕೂಡಲೇ ಅಳುತ್ತೆ, ಅದೂ ಒಂದು ವಿದ್ಯೆ, ಅದೂ ಒಂದು ಕಲೆ, ಅದೇ ತಾನೇ ಹುಟ್ಟಿದೆ, 'ಸದ್ಯೋಜಾತಸ್ಯ ಹರ್ಷ ಶೋಕ ಭಯ . . . ' ಅದೇ ತಾನೇ ಹುಟ್ಟಿದ ಮಗು ಸಂತೋಷ ತೋರಿಸುತ್ತೆ, ನಗುತ್ತೆ, ಅಳುತ್ತೆ, ಇದನ್ನೆಲ್ಲಾ ತೋರಿಸುತ್ತೆ, ಅದು ಎಲ್ಲಿಂದ ಕಲಿಯಿತು? ಹಿಂದಿನ ಜನ್ಮದ ಅರಿವಿರಬೇಕು. 'ಪೂರ್ವಾಭ್ಯಾಂ ಕೃತಾಂ . . . ' ಕರು ಇದೆ. ಆ ಕರು ಹುಟ್ಟಿದ ಕೂಡಲೇ ತಾಯಿಯ ಮೊಲೆ ಹುಡುಕಿಕೊಂಡು ಹೋಗುತ್ತೆ. ಯಾಕೆ? ಅದು ಹಿಂದೆ ಇತ್ತದು, ಹಾಲು ಕುಡಿದಿತ್ತು. ಅದರ ಸ್ಮರಣೆ ಅದಕ್ಕಿದೆ. ಹೀಗೆ ಪ್ರಾಣಿಗಳನ್ನು ನೋಡಿ ಕೂಡಾ ನಾವು ಕಲಿಯುವುದಿದೆ. ಬಹಳ ಕಲಿಯುವುದಿದೆ. ನಾಯೀನ ಬೈತೀರೋ, ಹೊಗಳುತ್ತೀರೋ? ತನ್ನ ಯಜಮಾನನ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಕೊಡುತ್ತೆ ಅದು. ಅಷ್ಟು ಇದೆ. ಆದರೆ ಆ ನಾಯಿಯಲ್ಲಿ ಒಂದು ಅವಗುಣವೂ ಇದೆ. ದೈನ್ಯ,  humility, ವಿಪರೀತ ದೀನತ್ವ ಅದಕ್ಕೆ. 
ಲಾಂಗೂಲ ಚಾಲನಮಧಶ್ವರಣಾವಪಾತಂ ಭೂಮೌ ನಿಪತ್ಯ ವದನೋದರದರ್ಶನಂ ಚ |
ಶ್ವಾ ಪಿಂಡದಸ್ಯ ಕುರುತೇ ಗಜಪುಂಗವಸ್ತು ಧೀರಂ ವಿಲೋಕಯತಿ ಚೌಟುಶತೈಶ್ಚ ಭುಂಕ್ತೇ || (ನೀತಿ ಶತಕ)
ಯಾವನು ಅನ್ನ ಹಾಕುತ್ತಾನೋ ಅವನನ್ನು ಕಂಡು ನಾಯಿ ಬಾಲ ಆಡಿಸುತ್ತದೆ, ಬೆನ್ನು ಮೇಲೆ ಮಲಗಿ ಹೊಟ್ಟೆ ತೋರಿಸುತ್ತೆ, ಆದರೆ ಆನೆ ಇದೆಯಲ್ಲಾ, ಅದು ಹಾಗಲ್ಲ, ಗಾಂಭೀರ್ಯದಿಂದ ನೋಡ್ತಾ ಇರುತ್ತೆ, ನೂರು ಸಲ ತಿನ್ನು ತಿನ್ನು ಅಂತ ಪುಸಲಾಯಿಸಿದ ಮೇಲೇ ತಿನ್ನುತ್ತೆ. ನಾಯಿ ಆಗಬೇಡ, ಆನೆ ಆಗು ಅಂತ ನೀತಿ ಶಾಸ್ತ್ರದಲ್ಲಿ ಹೇಳಿದೆ. ನಾಯಿಯಲ್ಲಿ ಒಳ್ಳೆ ಗುಣ ಇಲ್ಲ ಅಂತ ಅಲ್ಲವೇ ಅಲ್ಲ, ಆನೆಯಲ್ಲಿ ಎಲ್ಲಾ ಒಳ್ಳೆ ಗುಣ ಇದೆ ಅಂತಲೂ ಅಲ್ಲ, ದಯಾನಂದರು ಒಂದು ಉದಾಹರಣೆ ಕೊಡ್ತಾರೆ, ಸಕ್ಕರೆ ಇದೆ, ಮರಳಿನ ಜೊತೆ ಸೇರಿಸ್ತೀರಿ, ಆನೆ ಕರೆದುಕೊಂಡು ಬಂದು ಸಕ್ಕರೆ ತಿನ್ನು ಅಂದರೆ ಅದಕ್ಕೆ ತಿನ್ನಕ್ಕಾಗುತ್ತಾ? ಒಂದು ಇರುವೆ ಬಿಡಿ ಅಲ್ಲಿ, ಮರಳನ್ನು ಬಿಟ್ಟು ಸಕ್ಕರೆ ತೆಗೆದುಕೊಳ್ಳುತ್ತೆ. ಸೂಕ್ಷ್ಮಗ್ರಾಹಿ ಇರುವೆ. ಇಲಿ ಬಿಲ ಇದೆಯಲ್ಲಾ, ಅದರೊಳಗೆ ನೋಡಿದರೆ ಅದ್ಭುತ, ಬೆಡ್ ರೂಮೇ ಬೇರೆ ಇದೆ, ಆಹಾರ ಇಡಕ್ಕೆ ಸ್ಟೋರ್ ಹೌಸೇ ಬೇರೆ. ಮತ್ತೆ ಕೆಲವು ಪಕ್ಷಿಗಳಿವೆ. ದೀಪದ ಹುಳ, ಮಿಂಚು ಹುಳ ಅಂತಾರಲ್ಲಾ ಅದನ್ನು ತೆಗೆದುಕೊಂಡು ಹೋಗಿ ಗೂಡಿನಲ್ಲಿ ಇಟ್ಟುಕೊಂಡಿರುತ್ತವೆ, ಬೆಳಕಿಗಾಗಿ! 
                                                          ಪಂಡಿತರೊಂದಿಗೆ ನಾಗರಾಜ್.
*************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/07/16.html

ಬುಧವಾರ, ಜುಲೈ 18, 2012

ಸಾರಗ್ರಾಹಿಯ ರಸೋದ್ಗಾರಗಳು -16: ದೇವರನ್ನು ಒಂದು ಜಾತಿ/ಕುಲಕ್ಕೆ ಕಟ್ಟಿಹಾಕಬೇಕೆ?

ದೇವರನ್ನು ಒಂದು ಜಾತಿಗೆ/ಕುಲಕ್ಕೆ ಕಟ್ಟಿಹಾಕಬೇಕೆ?
     ಇದೆಲ್ಲಾ ಯಾಕೆ ಹೇಳ್ತಾ ಇದೀನಿ ಅಂದ್ರೆ, ದೇವರು ಯಾವತ್ತೂ ಕಚ್ಚಾಡಿ, ಹೊಡೆದಾಡಿ ಸಾಯಿರಿ ಅಂತ ಹೇಳಲ್ಲ. ಅವನು ಪ್ರೇಮಸ್ವರೂಪ, ಆನಂದಮಯ. ಎಲ್ಲರಿಗೂ ಪ್ರೀತಿ ತೋರಿಸತಕ್ಕವನು. ಎಲ್ಲಾ ಪ್ರಾಣಿಗಳಲ್ಲೂ ಸಮಾನವಾದ ಮಿತ್ರ ದೃಷ್ಟಿ ಇಟ್ಟುಕೊಳ್ಳುವ ಶಕ್ತಿ ಕೊಡು ಭಗವಂತ ಅಂತ ಪ್ರಾರ್ಥನೆ ಮಾಡ್ತೀವಿ. ಪ್ರಾರ್ಥನೆ ಮಾಡೋದು ಹಾಗೆ, ನಡೆಯೋದು? 'ಥೂ, ಇವನು ತುರುಕ, ಸಾಯಲಿ', 'ಇವನು ಕ್ರಿಶ್ಚಿಯನ್, ಧರ್ಮಭ್ರಷ್ಠ, ಇವನ ಮನೆ ಹಾಳಾಗಲಿ' ಹೀಗೆ ಮನಸ್ಸಿನಲ್ಲಿ ಅಂದುಕೊಂಡು 'ಓಂ' ಅಂದರೆ ಪ್ರಯೋಜನ ಇಲ್ಲ. ಇವನು 'ಹಿಂದೂ, ಕಾಫಿರ್, ಇವನು ಬದುಕಿರಲು ಲಾಯಕ್ಕಿಲ್ಲ' ಅಂತ ಅವರು ಹೇಳಿದರೆ ಅದೂ ದೇವರು ಒಪ್ಪುವ ಮಾತಲ್ಲ. ಸರ್ವಸ್ನೇಹಿ, ಎಲ್ಲರಿಗೂ ಬೇಕಾದ ಆ ಪರಮಾತ್ಮನನ್ನು ಒಂದು ಜಾತಿಗೆ, ಒಂದು ಕುಲಕ್ಕೆ ಕಟ್ಟಿ ಹಾಕೋದು ಸರಿಯಲ್ಲ. ನನಗೂ ಆ ಮುಸಲ್ಮಾನರಿಗೂ ಜಗಳ ಬರ್ತಾ ಇದ್ದದ್ದು ಹೀಗೇನೇ. ಈ ಕಥೆ ನಿಮಗೆ ಈ ಹಿಂದೆಯೇ ಹೇಳಿದ್ದೇನೆ. ಬಿಹಾರದಲ್ಲಿ ಭೂಕಂಪ ಆಯಿತು, ೧೯೩೪ರಲ್ಲಿ. ತುಂಬಾ ಸಾವುಗಳಾದವು. ನಾನೇ ಕಣ್ಣಿಂದ ನೋಡಿದೀನಿ. ಎಲ್ಲಿ ಮುಜಫರ್ ನಗರ ಅನ್ನುವ ಊರಿತ್ತೋ ಅಲ್ಲಿನ ಕ್ಲಾಕ್ ಟವರ್ ಮಾತ್ರ ಉಳ್ಕೊಂಡಿತ್ತು. ಊರೆಲ್ಲಾ ನಾಶವಾಗಿತ್ತು. ನೋಡಬಾರದ್ದನ್ನೆಲ್ಲಾ ಅಲ್ಲಿ ನೋಡಿದೆ. ಒಂದು ಮುಸಲ್ಮಾನರ ಕೇರಿಗೆ ಹೋಗಿದ್ದೆ. ನಾನೊಬ್ಬ ವಾಲಂಟಿಯರ್ ಆಗಿ ಹೋಗಿದ್ದೆ. ಅಲ್ಲಿ ಒಂದು ಮನೆಯಿಂದ 'ಬಚಾವೋ, ಬಚಾವೋ ' ಅಂತ ಯಾರೋ ಕಿರುಚುತ್ತಿದ್ದರು. ನನ್ನ ಜೊತೆಗೆ ಸ್ನೇಹಲತಾ ಅನ್ನುವವರು ಇದ್ದರು. ಅವರು ಜಾಲಂಧರ್ ಆರ್ಯಸಮಾಜದ ಸೆಕ್ರೆಟರಿ.  ಅವರಿಗೆ ಹೇಳಿದೆ, 'ನೋಡಮ್ಮಾ, ಯಾರೋ ಹೆಂಗಸರು ಕಿರುಚುತ್ತಾ ಇದ್ದಾರೆ. ನಾನು ಹೋದರೆ ಸರಿಯಾಗುವುದಿಲ್ಲ. ನೀನು ಹೋಗಿ ನೋಡಮ್ಮಾ' ಅಂದೆ. ಆಕೆ ಒಳಗೆ ಹೋದಳು. ಒಂದು ಹೆಂಗಸು ಮತ್ತು ಆಕೆಯ ಮಗುವಿನ ಮೇಲೆ ಮನೆಯ ತೊಲೆ ಬಿದ್ದಿತ್ತು. ಮಗು ಬದುಕಿತ್ತು. ಆಕೆ ಅರೆಜೀವವಾಗಿದ್ದಳು. ಮಗುವನ್ನಾದರೂ ಉಳಿಸೋಣವೆಂದು ಮಗುವನ್ನು ಎತ್ತಿಕೊಂಡು ಸ್ನೇಹಲತಾ ಬಾಗಿಲ ಹತ್ತಿರ ಬಂದಾಗ ಬಾಗಿಲೇ ಅವರ ಮೇಲೆ ಬಿದ್ದು ಸ್ನೇಹಲತಾ ಮತ್ತು ಮಗು ಇಬ್ಬರೂ ಸತ್ತುಹೋದರು. ನಮ್ಮ ಲೀಡರ್, 'ನೀನು ಹೋಗದೆ, ಪಾಪ ಆ ಹೆಣ್ಣುಮಗಳನ್ನು ಏಕೆ ಸಾಯಿಸಿದೆ?' ಎಂದು ಸಿಟ್ಟು ಮಾಡಿದರು. 'ನೀವು ಆಗಿದ್ರೆ ಹೋಗುತ್ತಿದ್ದರೇನೋ, ನನಗೆ ಧೈರ್ಯ ಬರಲಿಲ್ಲ' ಎಂದು ಸುಳ್ಳು ಹೇಳಿದೆ. ಸತ್ಯ ಏನೆಂದು ನನಗೆ ಗೊತ್ತು. ನಾನೇನು ಆ ಮಗು ಸಾಯಲಿ, ಆ ತಾಯಿ ಸಾಯಲಿ ಎಂದು ಬಯಸಿದ್ದೆನಾ? ಅದು ಆ ಭಗವಂತ ಕೋಪ ಮಾಡಿಕೊಂಡರೆ ಯಾರು ರಕ್ಷಣೆ ಕೊಡುತ್ತಾರೆ? ವಿಜ್ಞಾನಿಗಳು ನಾನು ಅಂಥ ಮನೆ ಕಟ್ಟಿಕೊಡ್ತೀನಿ, ಇಂಥ ಮನೆ ಕಟ್ಟಿಕೊಡ್ತೀನಿ, ಭೂಕಂಪ ಆದ್ರೂ ಬಿದ್ದು ಹೋಗಬಾರದು ಅಂತಾರೆ. ಜಪಾನಿನಲ್ಲಿ ಕಾರ್ಡ್ ಬೋರ್ಡ್ ಮನೆಗಳು, ಬಿದ್ರೂ ಯಾರೂ ಸಾಯಲ್ಲ. ಸದ್ಯಕ್ಕೆ ನಮ್ಮ ದೇಶದಲ್ಲಿ ಆ ಪರಿಸ್ಥಿತಿ ಇಲ್ಲ. ಈ ಭೂಕಂಪ ಬಂತು ಅಂತ ಇಟ್ಕೊಳ್ಳಿ, ನಾಸ್ತಿಕ ಹೇಳ್ತಾನೆ, ಎಂಥಾ ದೇವರು ನಿಮ್ಮ ದೇವರು. ತಾನೇ ಮಾಡಿದ ರಚನೆ. ತಾನೇ ತನ್ನ ಮಕ್ಕಳನ್ನು ಸಾಯಿಸ್ತಾನೆ. ಅವನೆಂಥಾ ಕರುಣಾಳು? ಕ್ರೂರ, ಮಹಾಕ್ರೂರ ಅಂತಾನೆ. ದೇವರು ಅಂದರೆ ನಮ್ಮ ಹಾಗೆ ಶರೀರಧಾರಿ ಆಗಿರೋನಲ್ಲ. ದೇವರು ಅವನಲ್ಲ. ಅವನು ವಿಶ್ವರೂಪ ಚೇತನ. ಸಂಪೂರ್ಣ ವಿಶ್ವಕ್ಕೆ ಚೈತನ್ಯ ನೀಡುವ ಅದ್ಭುತ ಶಕ್ತಿ. ಅವನು ಅನುಪಮ, ನಿರುಪಮ. ಅವನನ್ನು ವಿವರಿಸಲು ಸಾಧ್ಯವೇ ಇಲ್ಲ. ದೇವರು ಹೇಗಿದ್ದಾನೆ ಅಂದರೆ  ಹೇಗೆ ಇದ್ದಾನೋ ಹಾಗೆ ಇದ್ದಾನೆ ಅಂತ ಹೇಳಬಹುದೇ ಹೊರತು ಅವನನ್ನು ಹೋಲಿಕೆ ಮಾಡಲು ಆಗುವುದಿಲ್ಲ. ಅದನ್ನೇ ಮುಸಲ್ಮಾನರು ಬೇನಜೀರ್ ಅಂತಾರೆ. ಅದರ ಅರ್ಥವೂ ಅದೇ, ಅನುಪಮ, ನಿರುಪಮ ಅಂತಲೇ. ಮುಸಲ್ಮಾನರಿಗೆ ಬೇರೆ ಅಂತ ದೇವರಿಲ್ಲ, ಹಿಂದೂಗಳಿಗೆ ಬೇರೆ ದೇವರಿಲ್ಲ, ಕ್ರಿಶ್ಚಿಯನ್ನರಿಗೆ ಬೇರೆ ಅಂತ ದೇವರಿಲ್ಲ. ಇವೆಲ್ಲಾ ನಮ್ಮ ಕಲ್ಪನೆ ಅಷ್ಟೆ.
ಹಿಂದೂ ಆಗಿ ಪರಿವರ್ತಿತನಾದ ಪಾದ್ರಿ
     ನನ್ನ ಹತ್ತಿರ ಒಬ್ಬರು ಬರೋರು. ನಂದೇ ತಪ್ಪು. ಲಾರ್ಡ್ ರಿಚರ್ಡ್ ಕೈಥಾನ್ ಅಂತ ಅಮೆರಿಕನ್ ಮಿಷನರಿ. ಹಿಂದೂಗಳ ಮದ್ಯೆ ಮಾತನಾಡುವಾಗ ಮಹಾತ್ಮಾ ಗಾಂಧಿಯನ್ನು ಹೊಗಳೋನು. ಕ್ರಿಶ್ಚಿಯನ್ನರ ನಡುವೆ ಮಾತಾಡುವಾಗ ಎಲ್ಲಾ ಹಿಂದೂಗಳೂ ಕ್ರಿಶ್ಚಿಯನ್ನರೇ, ಕ್ರಿಸ್ತನ ಪ್ರಭಾವ ಅಷ್ಟೊಂದು ಆಗಿದೆ ಅನ್ನೋನು. ಅಮೆರಿಕಾಕ್ಕೆ ಕಳಿಸುವುದು ಒಂದು ರಿಪೋರ್ಟ್, ಇಲ್ಲಿ ಹೇಳೋದು ಇನ್ನೊಂದು ತರಹ. ನಾನೆ ಕೇಳಿದೆ, 'ಏನು ಕೈಥಾನ್ ಸಾಹೇಬರೇ, ನಿಮ್ಮದು ಡುಯಲ್ ಪರ್ಸನಾಲಿಟೀನಾ?' ವೇದದಲ್ಲಿ ಮಿಥೂಯಾ ಅಂತ ಬರುತ್ತೆ. ಅಂದರೆ ಒಳಗೊಂದು, ಹೊರಗೊಂದು! ಬಾಯಲ್ಲಿ ಹೇಳೋದು ಒಂದು, ಮನಸ್ಸಿನಲ್ಲಿ ಮತ್ತೊಂದು. ನಿಮ್ಮ ಹತ್ತಿರ ವಾದ ಮಾಡುವುದಕ್ಕೆ ನನಗೆ ಆಗಲ್ಲ. ಫಾದರೆ ವಿವಿಯನ್ ಎಲ್ವಿನ್ ಅಂತ ಇದ್ದಾರೆ. ಅವರಿಗೆ ವೇದ, ಉಪನಿಷತ್ತು ಎಲ್ಲಾ ಗೊತ್ತು. ಅವರ ಹತ್ತಿರ ವಾದ ಮಾಡಿ ಅಂತ ಹೇಳಿದರು. ಆ ಪಾದ್ರಿ ಮಧ್ಯಪ್ರದೇಶದ ಭೂಪಾಲಿನ ಆಚೆ ಒಂದು ಕಾಡಿನಲ್ಲಿ ಇದ್ದ. ತಮಾಷೆ ಅಂದ್ರೆ ಒಬ್ಬ ಆದಿವಾಸಿ ಹೆಂಗಸನ್ನು ಮದುವೆ ಮಾಡ್ಕೊಂಡಿದ್ದ. ಅವಳಿಗೆ ಹೇಳಿದ್ದ, 'ನಿನಗೆ ಸ್ವರ್ಗ ಬೇಕಿದ್ರೆ ಕ್ರಿಶ್ಚಿಯನ್ ಆಗು' ಅಂತ. 'ನಾನು ನನ್ನ ದೇವರನ್ನೇ ನಂಬೋದು. ನರಕಕ್ಕೇ ಹೋಗ್ತೀನಿ, ಸ್ವರ್ಗಕ್ಕೆ ಬರಲ್ಲ' ಅಂತ ಅಂದಿದ್ದಳು ಅವಳು. ಅವಳು ಒಂದು ತರಹ, ಅವಳದೂ ಒಂದು ತರಹದ ಭಕ್ತೀನೇ. ಅವನ ಹತ್ತಿರ ಹೋದೆ, ವಾದ ಮಾಡಿದೆ. ಐದು ನಿಮಿಷ ಜೋರು ಜೋರು ಜೋರಾಗಿ ಮಾತನಾಡಿದ. ನಂತರ ಅವನಿಗೆ ಅನ್ನಿಸಿರಬೇಕು, ತನ್ನ ಪಕ್ಷ ದುರ್ಬಲವಾಗ್ತಾ ಇದೆ ಅಂತ. 'ನಿಮ್ಮ ಹತ್ತಿರ ವಾದ ಮಾಡಕ್ಕೆ ಆಗಲ್ಲ' ಅಂದ. 'ವಾದ ಮಾಡಬೇಡಪ್ಪಾ, ವಾದ ನಿಲ್ಲಿಸು ಬೇಕಾದರೆ. ಆದರೆ ನನ್ನ ಪ್ರಶ್ನೆಗೆ ಉತ್ತರ ಕೊಟ್ಟೆಯಾ?' ಅಂದದ್ದಕ್ಕೆ ಅವನು ತಲೆ ಕೆಟ್ಟು, 'ಹಿಂದೂಯಿಸಮ್, ಕ್ರಿಶ್ಚಿಯಾನಿಟಿ - ಬೋತ್ ಗೋ ಟು ಡಾಗ್ಸ್' ಅಂದ್ಬಿಟ್ಟ. ನಾನು ಹೇಳಿದೆ, 'ನಮ್ಮ ಹಿಂದೂ ಧರ್ಮ ಯಾವತ್ತೂ ಹೋಗೋದಿಲ್ಲ. ನಿಮ್ಮ ಕ್ರಿಶ್ಚಿಯಾನಿಟಿ ಬೇಕಾದ್ರೆ ಹೋಗಲಿ. ಎಲ್ಲರನ್ನೂ ಸಮ ಮಾಡಿ ಎಲ್ಲರನ್ನೂ ಸಾಯಿಸಬೇಕೆಂದಿದ್ದೀಯಾ?' ಕೊನೆಗೆ ಒಪ್ಪಿಕೊಂಡ, ಪಾಪ. 'ನೀವು ಹೇಳೋದು ನಿಜ. ದೇವರು ಒಬ್ಬನೇ ಪರಮಾತ್ಮ. ಏಸುಕ್ರಿಸ್ತ ಒಬ್ಬನೇ ದೇವರ ಮಗ ಅಲ್ಲ. ನಾವು ಶೈತಾನನ ಮಕ್ಕಳೂ ಅಲ್ಲ. ನಾವೂ ಕೂಡ ಅದೇ ಪರಮಾತ್ಮನ ಮಕ್ಕಳು ಅಂದ. ಇವತ್ತಿನಿಂದ ನಾನೂ ಕೂಡಾ ಹಿಂದು. ಇನ್ನು ಮುಂದೆ ನಾನು ಫಾದರ್ ವಿವಿಯನ್ ಎಲ್ವಿನ್ ಅಲ್ಲ. ನಾನು ಧರ್ಮವೀರ್ ಅಂತ ಹೆಸರು ಇಟ್ಕೊಳ್ತೀನಿ' ಅಂತ ಹೇಳಿದ. ಸಂತೋಷವಾಗಿ ಇಟ್ಕೋ ಅಂದೆ. ಅವನಷ್ಟಕ್ಕೆ ಅವನೇ ಧರ್ಮವೀರ್ ಅಂತ ಹೆಸರು ಕೊಟ್ಟುಕೊಂಡ. ಮಾತ್ರವಲ್ಲ, ಎಷ್ಟು ಜನರನ್ನು ಕ್ರಿಶ್ಚಿಯನ್ ಆಗಿ ಮಾಡಿದ್ದನೋ ಅವರಲ್ಲಿ ಅರ್ಧದಷ್ಟು ಜನರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತಂದ. ಇದು ಸ್ವಾಮಿ ದಯಾನಂದರ ಸತ್ಯಾರ್ಥ ಪ್ರಕಾಶದ ಪ್ರಭಾವ. ಕೊನೆಗೆ ಕ್ರಿಶ್ಚಿಯನರೇ ಒಪ್ಪಿಕೊಳ್ತಾರೆ. ಆ ಸತ್ಯಾರ್ಥ ಪ್ರಕಾಶ ಇರುವವರೆಗೆ ನಮಗೆ ಉಳಿಬಾಳಿಲ್ಲ ಅಂತಾರೆ. ಮುಸಲ್ಮಾನರೂ ಒಪ್ಪುತ್ತಾರೆ, ಆ ದಯಾನಂದರು ಹೇಳೋದೆಲ್ಲಾ ಸರಿಯೇ, ತಪ್ಪೇನಿಲ್ಲ. ಆದರೆ ನಮ್ಮ ಮಹಮದ್ ಪೈಗಂಬರ್ ಅನ್ನು ಅವರು ಒಪ್ಪೋದಿಲ್ಲ. ಆದ್ದರಿಂದ ಅವರೂ ಕಾಫಿರ್.
ದೇವರು ಪಕ್ಷಪಾತಿಯೇ?
     ಇದೇ ಸಂದರ್ಭದಲ್ಲಿ ನೆನಪಾಗ್ತಾ ಇದೆ. ಬಿಹಾರದಲ್ಲಿ ಭೂಕಂಪ ಆದಾಗ ಒಬ್ಬ ಮುಸಲ್ಮಾನ್ ಖಾಜಿ ನನ್ನ ಜೊತೆಯಲ್ಲಿದ್ದ. ಅವನೇ ಶುರು ಮಾಡಿದ, 'ನೋಡಿ, ಇಲ್ಲಿ ಹಿಂದೂಗಳು ಜಾಸ್ತಿ. ಅದಕ್ಕೇ ಭೂಕಂಪ ಆಯ್ತು. ಇರಾನಿನಲ್ಲಿ, ಪರ್ಷಿಯಾದಲ್ಲಿ ಆಗಲಿಲ್ಲ. ಟರ್ಕಿಸ್ತಾನದಲ್ಲಿ ಆಗಲಿಲ್ಲ'. ಬಿಹಾರದ ಭೂಕಂಪದಲ್ಲಿ ೫೦೦೦೦ ಜನ ಸತ್ತರು. ಮರು ದಿನ ಪೇಪರ್‌ನಲ್ಲಿ ಸುದ್ದಿ ಬಂತು, ಟರ್ಕಿಸ್ತಾನದಲ್ಲಿ ಭೂಕಂಪ ಆಗಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಸತ್ತರು ಅಂತ. ನಾನು ಕೇಳಿದೆ, 'ಏನಪ್ಪಾ, ಅಲ್ಲಿ ಖುದಾ ಇಲ್ಲವಾ? ಅಲ್ಲೂ ಸಾವು ಆಯ್ತಲ್ಲಾ?' ಈ ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ ಇವೆಲ್ಲಾ ಮನುಷ್ಯರ ಕೈಯಲ್ಲಿಲ್ಲ. ಆ ನಿಯಾಮಕ ಇದ್ದಾನೆ. ಎಲ್ಲಾ ಅವನ ನಿಯಮದಂತೆ ಆಗುತ್ತೆ. ನಾವು ಎಷ್ಟು ಜಂಬ ಮಾಡಿದ್ರೂ ಕೂಡ, ಭೂಮಿ ನಡುಗಿದಾಗ, 'ಏಯ್, ನಿಲ್ಲು' ಅಂತ ಹೇಳೋಕ್ಕಾಗಲ್ಲ. ಏನಾಗಬೇಕೋ ಅದು ಆಗೇ ಅಗುತ್ತೆ.
ಪರಮಾತ್ಮನನ್ನು ಗೌರವಿಸಿ
     [ . . . .* ಟಿಪ್ಪಣಿ ಗಮನಿಸಿ.] ಇದೆಲ್ಲಾ ನಾವುಮನುಷ್ಯರು ಮಾಡಿಕೊಳ್ಳೋದು. ನಾವು. ದೇವರಿಗೆ ಗೌರವ ಕೊಡ್ತೀವಿ ಅನ್ನೋದು, ನೋಡಿದ್ರೆ ಹೀಗೆ. ನಾವು ಕುಣಿಸಿದ ಹಾಗೆ ಕುಣೀಬೇಕು ಅವನು. ದಾಸರೂ ಅದನ್ನೇ ಹೇಳ್ತಾರೆ. ಭಕ್ತ ಮಲಗಿ ಭಜನೆ ಮಾಡಿದರೆ ದೇವರು ಕುಳಿತು ಕೇಳ್ತಾನೆ. ಕುಳಿತು ಭಜನೆ ಮಾಡಿದರೆ ನಿಂತು ಕೇಳ್ತಾನೆ. ನಿಂತು ಹೇಳಿದರೆ ಕುಣ್ಕೊಂಡು ಕೇಳ್ತಾನೆ. ಇದಾ ದೇವರಿಗೆ ಕೊಡುವ ಗೌರವ? ಅದನ್ನು ಎಷ್ಟು ಭಕ್ತಿಯಿಂದ ಕೇಳ್ತಾರೆ ಗೊತ್ತಾ? ರುಕ್ಮಿಣೀ ಪರಿಣಯ, ಪದ್ಮಾವತೀ ಪರಿಣಯ, ಶ್ರೀನಿವಾಸ ಕಲ್ಯಾಣ,..ಮಾಡಿದ್ದೂ ಮಾಡಿದ್ದೇ. ದೇವರಿಗೇ ಮದುವೆ ಮಾಡೋರು ದೇವರ ಭಕ್ತರೋ, ಅಪ್ಪಂದಿರೋ ಅನ್ನುವ ಪ್ರಶ್ನೆ ಬರುತ್ತೆ. ಎಲ್ಲಿಯವರೆಗೆ ದೇವರು ಬರ್ತಾನೆ, ಹೋಗ್ತಾನೆ ಅಂತಾ ಅನ್ನುವವರೆಗೆ ದೇವರು ಯಾವತ್ತೂ ಸಿಗುವುದಿಲ್ಲ. ವೇದ ಹೇಳುತ್ತೆ:
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ || (ಯಜು.೪೦.೫.)
ಆ ಪರಮಾತ್ಮ ಜಗತ್ತನ್ನೆಲ್ಲಾ ಓಡಾಡಿಸುತ್ತಾನೆ. ತಾನು ಅಲ್ಲಾಡುವುದಿಲ್ಲ. ನಾನು ಅನೇಕ ಸಲ ಹೇಳ್ತಾ ಇರ್ತೀನಿ. ರೈಲು ಕಂಬಿ ಧೃಢವಾಗಿದ್ದರೆ ರೈಲು ಅದರ ಮೇಲೆ ಹೋಗುತ್ತೆ. ಕಂಬಿಯೇ ಧೃಢವಾಗಿಲ್ಲದಿದ್ದರೆ ರೈಲಿನ ಗತಿಯೇನು? ಪರಮಾತ್ಮ ಬರ್ತಾನೆ, ಹೋಗ್ತಾನೆ ಇವೆಲ್ಲಾ ಮಾನಸಿಕ ವ್ಯಾಪಾರ. ನಿಜವಾಗಿ ಪರಮಾತ್ಮನನ್ನು ನೆನೆದರೆ ನಮ್ಮ ಮನಸ್ಸಿನಲ್ಲೇ ಇದಾನೆ. ಪರಮಾತ್ಮ ಎಲ್ಲೋ ಮೆಕ್ಕಾದಲ್ಲೋ, ಮದೀನಾದಲ್ಲೋ, ಜೆರೂಸಲೇಮಿನಲ್ಲೋ, ಕಾಶಿಯಲ್ಲೋ, ರಾಮೇಶ್ವರದಲ್ಲೋ ಇದಾನೆ ಅಂದ್ರೆ ಅರ್ಥ ಇದೆಯಾ? ಬೆಂಗಳೂರು ಏನು ಪಾಪಿ ಊರಾ? ಇಲ್ಲಿ ಇಲ್ಲವಾ ದೇವರು? ತೀರ್ಥಯಾತ್ರೆ ಹೋಗ್ತಾರಲ್ಲಾ ಅವರಿಗೆ ಅದಕ್ಕೇ ಹೇಳೋದು. ಯಾಕೆ ಬೆಂಗಳೂರು ಪವಿತ್ರ ಅಲ್ಲವಾ? ಇಲ್ಲಿ ಭಗವಂತ ಇಲ್ಲವಾ? ಇಲ್ಲಿ ಭಗವಂತನ ಸ್ಮರಣೆ ಮಾಡಕ್ಕೆ ಆಗಲ್ವಾ?
ಗಂಗಾಜಲ
      ಕಾಶಿಯಲ್ಲಿ ಹಕ್ಕಿಬೈಲಿ ಅಂತ ಸ್ಥಳ ಇದೆ. ಪ್ರಜಾಪತಿ ಬ್ರಹ್ಮ ಅಲ್ಲಿ ಯಜ್ಞ ಮಾಡಿದ್ದನಂತೆ. ಅವಾಗಿನಿಂದ ಇದು ಪವಿತ್ರವಾದ ಸ್ಥಾನವಂತೆ. ಯಾರಿಗೆ ಮೋಕ್ಷ ಬೇಕೋ ಅವರು ಇಲ್ಲಿ ಸ್ನಾನ ಮಾಡಬೇಕಂತೆ. ನಾನು ಹೋದೆ. ನಾನು ಒಳ್ಳೆ ಮಾರ್ವಾಡಿ ಸೇಠ್ ಇದ್ದ ಹಾಗಿದ್ದೆ. ಕಚ್ಚೆ ಪಂಚೆ, ಲಾಂಗ್ ಕೋಟು, ತಲೆ ಮೇಲೆ ಪಗಡಿ ಇವೆಲ್ಲಾ ಹಾಕಿಕೊಂಡು ಸೇಠಜಿ ಇದ್ದ ಹಾಗಿದ್ದೆ. ಅಲ್ಲಿ ಪಂಡಾಗಳು. 'ಸೇಠಜಿ, ಸ್ನಾನ್ ಕರೋ', ಅಂದರು. ಇಲ್ಲಪ್ಪಾ, ನಾನು ಇಲ್ಲಿ ಸ್ನಾನ ಮಾಡೋದಿಲ್ಲ. ಅಲ್ಲಿ ಗೋಮುಖ-ಗಂಗಾನದಿ ಹಿಮಾಲಯದಿಂದ ಕರಗಿ ನೀರಾಗಿ ಹರಿದು ಬರುತ್ತಲ್ಲಾ, ಅಲ್ಲಿ ಸ್ನಾನ ಮಾಡ್ತೀನಿ. ಇಲ್ಲಿ ನೀವೇ ಮಾಡ್ಕೊಳ್ಳಿ ಅಂದೆ. ಹಿಮಾಲಯ ಪರ್ವತದಲ್ಲಿ ಹಾದು ಬರುವ ಆ ನೀರಿಗೆ ಔಷಧೀಯ ಗುಣಗಳಿವೆ. ನಿಮಗೂ ಗೊತ್ತಿರಬಹುದು. ಎಲ್ಲರ ಮನೆಯಲ್ಲೂ ಕಾಶಿಯಿಂದ ತಂದ ಗಂಗಾನದಿಯ ನೀರನ್ನು ಥಾಲಿಯ ಒಳಗೆ ಇಟ್ಟುಕೊಂಡಿರ್ತಾರೆ. ಹೆಚ್ಚೇನು ಹೇಳಲಿ? ಸರ್ ಸಿ.ವಿ.ರಾಮನ್ ಗೊತ್ತಲ್ಲಾ? ಅವರು ಬೆಂಗಳೂರಿನಲ್ಲೇ ಸತ್ತರು. ಅವರು ಸಾಯುವ ಸಮಯ ಬಂದಾಗ ಗಂಗೋದಕ ಬಾಯಿಗೆ ಬಿಡು ಅಂತ ಹೇಳ್ತಿದ್ರಂತೆ. ಆ ಸೈಂಟಿಸ್ಟಿಗೂ ಗಂಗಾಜಲ ಬೇಕಾಯ್ತು. ಒಂದು ಸತ್ಯವಾದ ಸತ್ವ, ಆ ಗಂಗಾಜಲ ಇದೆಯಲ್ಲಾ ಅದು ಎಷ್ಟು ಕಾಲ ಇಟ್ಟರೂ ಹಾಳಾಗುವುದಿಲ್ಲ. ಬೇರೆ ನೀರು ಮಾರನೇ ದಿನಕ್ಕೇ ಕೆಟ್ಟು ಹೋಗಿರುತ್ತೆ. ಅದು ಗೊತ್ತಾಗಲು ಎಲ್ಲರೂ ತಿಳಕೊಂಡ ಹಾಗೆ ಮೂಢನಂಬಿಕೆ ಬೇಕಾಗಿಲ್ಲ. ಹಿಮಾಲಯದ ತಪ್ಪಲಿನಲ್ಲಿ ಇರುವ ಔಷಧೀಯ ಗುಣಗಳುಳ್ಳ ಮಣ್ಣಿನ ಮೇಲೆ ಹಾಯ್ದು ಬರುವ ಆ ನೀರಿನಲ್ಲಿ ಔಷಧೀಯ ಗುಣಗಳಿವೆ. ಅದರ ಫಲ ಇದು. ಈ ರೀತಿ ವಿವೇಚನೆ ಮಾಡಬೇಕು.
*************************
ನಾಗರಾಜನ ಟಿಪ್ಪಣಿ:
     [ . . .*] ಈ ಭಾಗದಲ್ಲಿ ಪಂಡಿತರು ಬಿಹಾರದ ಭೂಕಂಪದ ಸಮಯದಲ್ಲಿ ಜೊತೆಗಿದ್ದ ಖಾಜಿಗೂ ತಮಗೂ ನಡೆದ ಸಂಭಾಷಣೆಯ ಕುರಿತು ಹೇಳಿದ್ದರು. ಭಗವಾನ್ ಕೃಷ್ಣ ಏಕೆ ಕಪ್ಪಗಾದ ಎಂಬ ಕಥೆಯನ್ನು ಕೃಷ್ಣನನ್ನು ಹೀಯಾಳಿಸುವ ರೀತಿಯಲ್ಲಿ ಖಾಜಿ ಹೇಳಿದ್ದರೆ, ಅದಕ್ಕೆ ಪ್ರತಿಯೇಟು ನೀಡಿದ್ದ ಪಂಡಿತರು ಮುಸಲ್ಮಾನರು ಏಕೆ ತಲೆ ಬೋಳಿಸಿ ಗಡ್ಡ ಬಿಡುತ್ತಾರೆ ಎಂಬುದಕ್ಕೆ ಅದೇ ಕಥೆಯನ್ನು ಮುಂದುವರೆಸಿ ಹೇಳಿದ್ದರು. ಸಂಭಾಷಣೆಯ ಪೂರ್ಣ ವಿವರವನ್ನು ತಿಳಿಸಬಹುದಾಗಿದ್ದರೂ ಸೂಕ್ಷ್ಮ ವಿಷಯವೆಂಬ ಕಾರಣಕ್ಕೆ ತಿಳಿಸಿಲ್ಲ. ಹಿಂದೂ ದೇವ-ದೇವತೆಗಳನ್ನು ಹೀಯಾಳಿಸುವ ಕೆಲಸ ಇತರರಿಂದ ಆಗುತ್ತಲೇ ಇದೆ. ದೇವ-ದೇವತೆಗಳ ಚಿತ್ರಗಳನ್ನು ಚಪ್ಪಲಿಗಳ ಮೇಲೆ, ಒಳ ಉಡುಪುಗಳ ಮೇಲೆ ಮುದ್ರಿಸುವುದು, ಅವಹೇಳನಕಾರಿ ಮತ್ತು ಪ್ರಚೋದನಕಾರಿ ಬರಹಗಳನ್ನು ಪ್ರಕಟಿಸುವುದು, ಆ ದೇವ-ದೇವತೆಗಳ ವೇಷಗಳನ್ನು ಹಾಕಿಕೊಂಡು ಅಶ್ಲೀಲವಾಗಿ ನೃತ್ಯ ಮಾಡುವುದು, ಇತ್ಯಾದಿಗಳನ್ನು ಕಾಣುತ್ತಿರುತ್ತೇವೆ. ಪ್ರಖ್ಯಾತ ಚಿತ್ರಕಾರ ಹುಸೇನರು ಸರಸ್ವತಿಯ ನಗ್ನ ಚಿತ್ರ ರಚಿಸಿದ್ದನ್ನು ಕಲೆಯ ಹೆಸರಿನಲ್ಲಿ ಬೆಂಬಲಿಸಿದವರು, ಧಾರ್ಮಿಕ ಭಾವನೆಗೆ ಧಕ್ಕೆ ತಂದರೆಂದು ವಿರೋಧಿಸಿದವರಿಗೇನೂ ಕಡಿಮೆಯಿರಲಿಲ್ಲ. ಈ ರೀತಿ ದೇವರನ್ನು ಗೌರವದಿಂದ ಕಾಣಲಾಗದ ಮನಸ್ಥಿತಿಯ ಕುರಿತು ಪಂಡಿತರ ವಿಷಾದ ವ್ಯಕ್ತವಾಗಿದೆ.
*******************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/07/blog-post.html

ಮಂಗಳವಾರ, ಜುಲೈ 17, 2012

ನಿಜವಾದ ಶ್ರಾದ್ಧ ಯಾವುದು?

ನಿಮಗೆ ಕೇವಲ ಮೂರು ನಿಮಿಷ ಬಿಡುವಿದೆಯೇ? ಈ ಆಡಿಯೋ ಕೇಳಿ.  ಅನುಭವಿಗಳ ಎರಡು ಮಾತು ಸಾವಿರ ಪುಟದ ಗ್ರಂಥದ ಓದುವುದಕ್ಕಿಂತಲೂ ಮೇಲು.ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ತಂದೆ ಶ್ರೀ ಚಂದ್ರಶೇಖರ ಶಾಸ್ತ್ರಿಗಳು.ಅವರು ಪ್ರಾಣ ಬಿಡುವಾಗ ಹೇಳಿದ ಮಾತನ್ನು ಶಾಸ್ತ್ರಿಗಳ ಬಾಯಿಯಿಂದಲೇ ಕೇಳಬೇಕು "  ಇನ್ನು ಈ ಶರೀರದ ಕೆಲಸ ಮುಗೀತು. ತೆಗೆದುಕೊಂಡು ಹೋಗಿ ಸುಟ್ಟುಹಾಕು. ಸಾಲಮಾಡಿ    ಶ್ರಾದ್ಧ ಮಾಡಬೇಡ .ಎರಡು ವರ್ಷ ನೀನು ನನ್ನ ಸೇವೆ ಮಾಡಿದ್ದೀಯಲ್ಲಾ! ನನ್ನ ಶ್ರಾದ್ಧ ಮಾಡಿದಂತಾಯ್ತು. ಇನ್ನು ತಾಯ್ನೆಲದ ಋಣ ತೀರಿಸಲು ಒಂದು ಶಾಲೆ ತೆರೆದು ಮಕ್ಕಳಿಗೆ ವಿದ್ಯೆ ಕೊಡು, ಜೊತೆಗೇ ಅನ್ನವನ್ನೂ ಹಾಕು"......... ನನಗೆ  ನನ್ನ ತಂದೆಯ ಸಾವು ನೆನಪಾಯ್ತು. ಸಾಯುವ ಮುಂಚೆ ಅವರು ಹೇಳಿದ ಮಾತು" ಆ ಭಗವಂತ ನಿನಗೆ ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ...ಒಳ್ಳೆಯದು ಮಾಡಲಿ... " ಈ ಮಾತುಗಳನ್ನು ಹೇಳುವಾಗಲೇ   ಪ್ರಾಣಪಕ್ಷಿ ಹಾರಿಹೋಯ್ತು.
-ಹರಿಹರಪುರ ಶ್ರೀಧರಬುಧವಾರ, ಜುಲೈ 11, 2012

ನಮ್ಮ ಒಳಗಿರುವ ಪರಮಾತ್ಮನ ಅನುಭವ ನಮಗೇಕೆ ಆಗುತ್ತಿಲ್ಲ?

      "ಪರಮಾತ್ಮ ಸರ್ವವ್ಯಾಪಿ, ಆನಂದಸ್ವರೂಪಿ. ಈ ಪರಮಾತ್ಮ ಎಲ್ಲೆಲ್ಲೂ ಇರುವಂತೆ ನಮ್ಮೊಳಗೂ ಇರುವಾಗ ಆ ಪರಮಾತ್ಮನ ಆನಂದದ ಅನುಭವ ನಮಗೇಕೆ ಆಗುತ್ತಿಲ್ಲ" ಎಂಬ ಸಂದೇಹಕ್ಕೆ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಸಮಾಧಾನ ಇದೋ ಇಲ್ಲಿ:

-ಕ.ವೆಂ.ನಾಗರಾಜ್.

ಬುಧವಾರ, ಜುಲೈ 4, 2012

ಬ್ರಾಹ್ಮಣ ಯಾರು?
ಜನ್ಮದಿಂದ ಎಲ್ಲರೂ ಜಂತುಗಳೇ! ಆದರೆ ಅವರವರು ಮಾಡುವ ಕರ್ಮದಿಂದ ಅವರು  ಬದುಕಿರುವಾಗಲೇ  ಎರಡನೆಯ  ಒಳ್ಳೆಯ ಜನ್ಮವನ್ನು ಪಡೆಯುತ್ತಾನೆ. ಜ್ಞಾನ ವನ್ನು ಪಡೆದು ವಿಪ್ರನಾಗಿ[ವಿಶೇಷ ಪ್ರಜ್ಞಾವಾನ್] ಬ್ರಹ್ಮಜ್ಞಾನವನ್ನು ಪಡೆದು ಬ್ರಾಹ್ಮಣನಾಗುತ್ತಾನೆ
[ನಿನ್ನೆ ಹಾಸನಕ್ಕೆ ಆಗಮಿಸಿದ್ದ ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರೊಡನೆ ನಡೆದ ಚರ್ಚೆಯಲ್ಲಿ ಬಂದ ವಿಚಾರ]


ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರೊಡನೆ ವಿಚಾರ ವಿನಿಮಯ


ನಿನ್ನೆ ಗುರುಪೂರ್ಣಿಮೆ.ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರೊಡನೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ನಾನು ಒಂದಿಷ್ಟು ವಿಚಾರ ವಿನಿಮಯ ಮಾಡಿಕೊಂಡೆವು. ಅನೌಪಚಾರಿಕ ಮಾತುಕತೆಯಲ್ಲಿ ಶ್ರೀಶರ್ಮರು ವೇದದವಿಚಾರದಲ್ಲಿ ನಮ್ಮೊಡನೆ ತಮ್ಮ ವಿಚಾರಗಳನ್ನು ಹಂಚಿಕೊಂಡರು.ವೇದಸುಧೆಯ ಮತ್ತು ವೇದ ಜೀವನದ  ಅಭಿಮಾನಿಗಳಿಗಾಗಿಯೇ ನಡೆದ ಈ ಒಂದು ರೆಕಾರ್ಡಿಂಗ್ ನ್ನು ಇಲ್ಲಿ ಪ್ರಕಟಮಾಡಿದ್ದೇವೆ.

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರಿಂದ ಗುರುಪೂರ್ಣಿಮಾ ಸಂದೇಶಸೋಮವಾರ, ಜುಲೈ 2, 2012

ಸಾರಗ್ರಾಹಿಯ ರಸೋದ್ಗಾರಗಳು -15: ರಾಮರಾಜ್ಯ - ರಾವಣರಾಜ್ಯ

     ಶತಾಯುಷಿ ಪಂ. ಸುಧಾಕರ  ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು.   ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
******************************
ರಾಮರಾಜ್ಯ - ರಾವಣರಾಜ್ಯ
     ನೇತ್ರ, ಕರ್ಣ, ನಾಲಿಗೆ, ನಾಸಿಕ, ಚರ್ಮ - ಈ ಪಂಚೇಂದ್ರಿಯಗಳು ಇದಾವಲ್ಲಾ, ಇವುಗಳಿಂದ ಶತ್ರುಗಳಲ್ಲದವರೂ ಶತ್ರುಗಳಾಗುತ್ತಾರೆ. ಆದ್ದರಿಂದ ಹೇ, ಜೀವಾತ್ಮ, ಎಲ್ಲರನ್ನೂ ನಿನ್ನ ಮಿತ್ರರೆಂದೇ ತಿಳಿ - ಇದು ಒಂದು ವೇದ ಮಂತ್ರದ ಅರ್ಥ. ರಾಮಾಯಣ ಓದಿ, ಮಹಾಭಾರತ ಓದಿ, ನಿಮಗೆ ತಿಳಿಯುತ್ತೆ. ಎಲ್ಲಿ ಇಂದ್ರಿಯ ನಿಗ್ರಹ ಇಲ್ಲವೋ, ಆತ್ಮಬಲ ಇಲ್ಲವೋ, ಎಲ್ಲಿ ಇಂದ್ರಿಯಗಳ ರಾಜ್ಯ ಇರುತ್ತದೋ ಅಲ್ಲಿ ಯಾವತ್ತೂ ಯುದ್ಧ, ಸಂಕಟ, ನರಕ ಇರುತ್ತದೆ. ಎಲ್ಲಿ ಆತ್ಮ ಬಲ ಜಾಸ್ತಿ ಇರುತ್ತೋ ಎಲ್ಲಿ ಇಂದ್ರಿಯಗಳು ಆತ್ಮನ ವಶದಲ್ಲಿದ್ದು ಕೆಲಸ ಮಾಡುತ್ತವೋ ಅಲ್ಲಿ ನಮಗೆ ಸ್ವರ್ಗ ಸಿಗುತ್ತದೆ, ರಾಮರಾಜ್ಯ ಅನ್ನಿಸುತ್ತದೆ. ಈ ಕಣ್ಣಿನಿಂದ ಒಬ್ಬ ಕಟುಕ ಕುರಿಯನ್ನು ಕತ್ತರಿಸುವುದನ್ನೂ ನೋಡಬಹುದು, ಗಗನಚುಂಬಿ ಹಿಮಾಲಯವನ್ನೂ ನೋಡಬಹುದು. ಪೆಸಿಫಿಕ್ ಮಹಾಸಾಗರವನ್ನೂ ನೋಡಬಹುದು. ಈ ಕಿವಿಯಿಂದ ಕೆಟ್ಟ ಕೆಟ್ಟ ಹಾಡುಗಳನ್ನೂ ಕೇಳಬಹುದು, ಒಳ್ಳೆಯ ಭಜನೆಗಳನ್ನೂ ಕೇಳಬಹುದು. ಅದರಿಂದ ಒಳ್ಳೆಯದು, ಕೆಟ್ಟದು ಅಂತ ಹೇಳಬಹುದು. ಈಗ ನಾನು ಶುರು ಮಾಡಿರುವುದು ಇದೇ ವಿಷಯ. ಆತ್ಮದ ರಾಜ್ಯ ಇರಬೇಕೋ, ಇಂದ್ರಿಯ ರಾಜ್ಯ ಇರಬೇಕೋ? ಇಂದ್ರಿಯ ರಾಜ್ಯ ಇರಬೇಕು ಅನ್ನುವುದಾದರೆ ರಾವಣ ರಾಜ್ಯ ಆಗುತ್ತೆ, ರಾಮರಾಜ್ಯ ಆಗುವುದಿಲ್ಲ. ರಾಮರಾಜ್ಯ ಆಗಬೇಕೆಂದರೆ ಆತ್ಮ ಬಲ ಗಟ್ಟಿಯಾಗಬೇಕು.  ಈ ಸಂಯಮ ಬೇಕು ಅನ್ನುವುದು ರಾಮಾಯಣ, ಮಹಾಭಾರತ ಎಲ್ಲದರಲ್ಲೂ ಇದೆ. ರಾಮನ ಸಂಹಾರ ಆಗಿಹೋಗಿದೆ. ಯುದ್ಧಕಾಂಡದಲ್ಲಿ ಆ ಸನ್ನಿವೇಶದ ವರ್ಣನೆ ಬರುತ್ತೆ. ಏಕಂ ಶಿರಃ ದ್ವೌಬಾಹುಃ - ಇದು ಅಲ್ಲಿ ಬರುವ ರಾವಣನ ವರ್ಣನೆ, ಸತ್ಯ ಅಲ್ಲಿ ಬಂತು, ಹತ್ತು ತಲೆಗಳು, ಇಪ್ಪತ್ತು ಕೈಗಳು ಅಂತ ಇಲ್ಲ. ಪತಿ ರಾವಣನ ಶವವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಮಹಾರಾಣಿ ಮಂಡೋದರಿ ಶೋಕಿಸುತ್ತಾ ಹೇಳುತ್ತಾಳೆ: "ಇಂದ್ರಿಯಗಳನ್ನು   ಹತೋಟಿಯಲ್ಲಿಟ್ಟುಕೊಂಡು ನೀನು ಮೂಲೋಕಗಳನ್ನೂ ಗೆದ್ದೆ. ಆದರೆ ಇಂದ್ರಿಯಗಳು ತಮ್ಮನ್ನು ತುಳಿದು ನೀನು ಮೇಲಕ್ಕೇರಿದುದನ್ನು ಮರೆತಿರಲಿಲ್ಲ. ತಮ್ಮ ಬಲದಿಂದಲೇ ನೀನು ಮೇಲಕ್ಕೆ ಬಂದೆಯೆಂದು ನಿನ್ನನ್ನು ನಂಬಿಸಿದವು. ಇಂದ್ರಿಯಗಳ ಮಾತು ಕೇಳಿ ನೀನು ನಾಶವಾದೆ" ಎಂದು ಹೇಳುತ್ತಾಳೆ. ಇಂದ್ರಿಯಗಳಿಗೆ ದಾಸರಾದರೆ ಕೆಳಗೆ ಬೀಳುತ್ತೇವೆ, ಒಡೆಯರಾದರೆ ಮೇಲೇರುತ್ತೇವೆ. ಆತ್ಮ ಬೇಕೋ, ಇಂದ್ರಿಯ ಬೇಕೋ? ಹಾಗಾದರೆ ಇಂದ್ರಿಯಗಳು ಬೇಡವಾ ಅಂತ ಕೇಳಬೇಡಿ. ಕಣ್ಣು ಬೇಡವಾ, ಕುರುಡರಾಗಬೇಕಾ? ಕಿವಿ ಬೇಡವಾ, ಕಿವುಡರಾಗಬೇಕಾ? ಬೇಕು, ಇಂದ್ರಿಯಗಳು ಬೇಕು, ಅದರೆ ಅವು ನಿಮ್ಮ ಅಧೀನದಲ್ಲಿರಲಿ. ಅವುಗಳ ಅಧೀನದಲ್ಲಿ ನೀವಿರಬೇಡಿ..ಈಮಾತನ್ನು ಹೇಳೋದನ್ನು ಹೇಳ್ತಾ ಇರುತ್ತೀವಿ, ಕೇಳೋದನ್ನು ಕೇಳ್ತಾ ಇರುತ್ತೀವಿ. ಯಥಾ ಪ್ರಕಾರ ನಡೆದುಕೊಳ್ಳುತ್ತೀವಿ.
     ಕಣ್ಣಿದೆ ನೋಡಿ, ಆದರೆ ಕೆಟ್ಟದ್ದೇ ನೋಡಬೇಡಿ, ಒಳ್ಳೆಯದನ್ನು ನೋಡಲು ಪ್ರಯತ್ನ ಪಡಿ. ಕಿವಿಯಿದೆ. ಯಾವಾಗಲೂ ಕೆಟ್ಟ ಕೆಟ್ಟ ಹಾಡುಗಳನ್ನೇ ಕೇಳಲು ಕೂತ್ಕೋತೀವಿ. ಒಳ್ಳೆಯ ಭಗವಂತನ ಭಕ್ತಿ, ಭಜನೆ, ಸನ್ಮಾರ್ಗಕ್ಕೆ ಸಂಬಂಧಿಸಿದ್ದನ್ನು ಕೇಳಲು ಕಿವಿ ಇರಲಿ. ಹೀಗೆ ನಮ್ಮ ಪಂಚೇಂದ್ರಿಯಗಳು ಇವೆಯಲ್ಲಾ, ಯಾವ ರೀತಿ ಉಪಯೋಗಿಸಿಕೊಳ್ತೀವೋ ಆ ರೀತಿ ಫಲ ಸಿಗುತ್ತೆ. ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಶತ್ರು ಅಲ್ಲದವರನ್ನೂ ಶತ್ರುಗಳನ್ನಾಗಿ ಮಾಡುತ್ತದೆ. 'ನೀನು ಹಿಂದೂ ಅಲ್ಲವಾ? ಮುಸಲ್ಮಾನನಲ್ಲ, ಆದ್ದರಿಂದ ಕಾಫಿರ್, ನಿನಗೆ ಬದುಕೋದಿಕ್ಕೆ ಅಧಿಕಾರವಿಲ್ಲ', 'ನೀನು ಮುಸ್ಲಿಮ್, ಧರ್ಮಭ್ರಷ್ಠ, ನೀನು ಇರಬಾರದು', ಇತ್ಯಾದಿ ಮಾತುಗಳು. . ಹಿಂದೂ-ಮುಸ್ಲಿಮ್ ಯುದ್ಧ. ಅತ್ತಲಾಗೆ ಆ ದೇವರಿಗೂ ಬುದ್ಧಿ ಇಲ್ಲ, ಇತ್ತಲಾಗೆ ಈ ದೇವರಿಗೂ ಬುದ್ಧಿ ಇಲ್ಲ. ಇವರಿಬ್ಬರಿಗೂ ಬುದ್ಧಿ ಬರೋದೇ ಇಲ್ಲ. ಕಚ್ಚಾಡಿಕೊಂಡು ಸಾಯೋದು. ನಿಜವಾದ ಪರಮಾತ್ಮ ಯಾವತ್ತೂ ಹಾಗೆ ಮಾಡೋದಿಲ್ಲ. ಒಂದು ಮಾತು, ಭಗವಂತ ಹೊರಗಿನಿಂದ ಮಾತನಾಡುವುದಿಲ್ಲ. ಹೃದಯದಿಂದ, ಒಳಗಿನಿಂದ, ಅಂತರಂಗದಿಂದ ಮಾತನಾಡುತ್ತಾನೆ. ನೀವು ಜಗತ್ತನ್ನು ಮರೆಯಿರಿ, 2 ನಿಮಿಷ, 3 ನಿಮಿಷ, 4 ನಿಮಿಷ ಭಗವಂತನನ್ನು ಮನಸ್ಸಿನಲ್ಲಿಟ್ಟಿರಿ. ಆಗ ನಿಮಗೆ ಆನಂದವೋ ಆನಂದ ಸಿಕ್ಕುತ್ತೆ. ವ್ಯಾಕರಣ ಓದಿದೆ, ವೇದ ಓದಿದೆ, ನನಗೆ ವೇದಗಳ ಅರ್ಥ ಗೊತ್ತಿದೆ ಅಂದರೆ ಸಾಕಾಗುವುದಿಲ್ಲ. ಯಾವನ ಹೃದಯ ಶುದ್ಧವಾಗಿರುತ್ತೋ ಅವನಿಗೆ ಅರ್ಥವಾಗುತ್ತೆ. ಯಾರ ಮನಸ್ಸಿನಲ್ಲಿ ಪರಿಶುದ್ದಿ ಇಲ್ಲವೋ ಅವನಿಗೆ ಯಾವತ್ತೂ ಅರ್ಥವಾಗುವುದಿಲ್ಲ.   ಹೇ ಜೀವಾತ್ಮ, ಯಾರನ್ನೂ ಶತ್ರು ಅಂತ ತಿಳಕೋಬೇಡ. ಎಲ್ಲಾ ನಿನ್ನ ಮಿತ್ರರೇ. ಈ ಜ್ಞಾನ ಬಂದ ಮೇಲೆ ಸುಮ್ಮನೆ ಕುಳಿತಿರಬೇಡ. ಪ್ರಭುವಿನಿಂದ ಕೂಡಿದ ಜಗತ್ತಿನ ಪ್ರಾಪ್ತಿಗಾಗಿ ಹೋರಾಡು. ಹೋರಾಟ ಅಂದ್ರೆ ಹಿಂದೂ-ಮುಸ್ಲಿಮ್ ಕುಸ್ತಿ ಅಲ್ಲ. ಜ್ಞಾನ ಪ್ರಸಾರ ಮಾಡುವುದು. ಪರಮಾತ್ಮ ಅಂದರೆ 14ನೇ ಆಕಾಶದಲ್ಲೋ, 12ನೇ ಆಕಾಶದಲ್ಲೋ ಇರ್ತಾನೆ ಅಂತ ಹೇಳ್ತಾರಲ್ಲಾ, ಆ ಪರಮಾತ್ಮ ಅಲ್ಲ. ಎಲ್ಲಿಂದ ತೆಗೆದುಕೊಂಡು ಬಂದರೋ ಆ ಆಕಾಶಗಳನ್ನ! 7ನೆಯ ಆಕಾಶ ಅಂತ ಇದೆಯಂತೆ, ಅಲ್ಲಿಗೆ ಹೋದ ಜೀವಾತ್ಮಗಳೆಲ್ಲಾ ಒಂಟೆಗಳಾಗ್ತಾರಂತೆ. ಒಂಟೆ ಆಗುವುದಕ್ಕೆ ಅಲ್ಲಿಗೆ ಹೋಗಬೇಕಾ ನಾವು? ಮನುಷ್ಯರಾಗಿ ಇರೋಕ್ಕೆ ಆಗಲ್ವಾ? ಇವೆಲ್ಲಾ ಮನುಷ್ಯನ ಕೆಟ್ಟ ಕಲ್ಪನೆ. ದೇವರ ಹೆಸರು ಹೇಳೋದು, ಮಾಡೋದೆಲ್ಲಾ ದೆವ್ವದ ಕೆಲಸ. ದೇವರ ಕೆಲಸ ಏನೂ ಮಾಡೋದಿಲ್ಲ.
ಗಾಂಧೀಜಿಯೊಡನೆ ಸರಸ-ವಿರಸ
     ಗಾಂಧೀಜಿಗೂ ನನಗೂ ಈ ವಿಚಾರದಲ್ಲಿ ಕುಸ್ತಿ ಆಗುತ್ತಿತ್ತು. ಸೇವಾಗ್ರಾಮದಲ್ಲಿ 'ರಘುಪತಿ ರಾಘವ ರಾಜಾರಾಮ್. .' ಕಣ್ಣು ಮುಚ್ಚಿ ಚಪ್ಪಾಳೆ ತಟ್ಟಿ ಭಜನೆ ಮಾಡೋರು. ಜಾಕಿರ್ ಹುಸೇನ್, ಮೌಲಾನಾ ಆಜಾದ್ ಸೇರಿದಂತೆ ಮುಸಲ್ಮಾನರೂ ಕೂಡ ಹೇಳೋರು, ಚಪ್ಪಾಳೆ ಹಾಕೋರು. ನಾನು ಸುಮ್ಮನೇ ಕುಳಿತಿರುತ್ತಿದ್ದೆ. ಗಾಂಧೀಜಿ ಕೇಳ್ತಾ ಇದ್ದರು: "ನೀನು ಯಾಕೆ ಹೇಳಲ್ಲ? ನೀನು ಮುಸಲ್ಮಾನರಿಗಿಂತ ಕಡೆ". ನಾನು ಉತ್ತರಿಸುತ್ತಿದ್ದೆ, "ಪಾಪ, ಅವರನ್ನೇಕೆ ಅನ್ನುತ್ತೀರಿ? ಅವರು ಯಾಕೆ ಹೇಳ್ತಾರೆ ಅಂದರೆ ನಿಮ್ಮನ್ನು ಮೆಚ್ಚಿಸೋಕೆ ಹೇಳ್ತಾರೆ. ನಾನು ನಿಮ್ಮನ್ನು ಮೆಚ್ಚಿಸಬೇಕಾಗಿಲ್ಲ. ನಾನು ನನ್ನ ಆತ್ಮನನ್ನು, ಪರಮಾತ್ಮನನ್ನು ಮೆಚ್ಚಿಸಬೇಕಷ್ಟೆ." ಗಾಂಧೀಜಿ, "ನೀನು ಎಷ್ಟು ಕಾಲದಿಂದ ನನ್ನ ಜೊತೆ ಇದ್ದೀಯಾ, ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲವಾ? ನಿನ್ನ ಓಂ ನನ್ನ ರಾಮ. ನೀನು ಯಾರನ್ನು ಓಂ ಅನ್ನುತ್ತೀಯೋ ಅವನನ್ನು ನಾನು ರಾಮ ಅನ್ನುತ್ತೇನೆ" ಅನ್ನೋರು. ನಾನು, "ರಾಮ ಅಂತ ಕರೆಯಿರಿ, ಏನಂತಲಾದರೂ ಕರೆಯಿರಿ, ನಾನು ಒಪ್ಪುತ್ತೇನೆ. ಆದರೆ ಭಗವಂತನನ್ನು ರಘುಪತಿ, ಸೀತೆ ಇವೆಲ್ಲವನ್ನೂ ಸೇರಿಸಿಕೊಂಡು ಹೇಳೋದು ನನಗೆ ಸರಿ ಕಾಣುವುದಿಲ್ಲ. ರಘು ಅಂದರೆ ವೇಗವಾಗಿ ಓಡುವವನು ಎಂದು ಅರ್ಥ, ರಘುಪತಿ ಅಂದರೆ ವೇಗವಾಗಿ ಓಡುವವರ ಒಡೆಯ. ರಾಘವ ಅಂದರೆ ರಘುಕುಲದಲ್ಲಿ ಹುಟ್ಟಿದವನು ಅಂತ. ಅವನನ್ನು ಪರಮಾತ್ಮ ಅಂತ ಹೇಗೆ ಭಾವಿಸಲಿ? ನನ್ನ ದೃಷ್ಟಿಯ ಪರಮಾತ್ಮನೇ ಬೇರೆ. ಆದ್ದರಿಂದ ನನಗೆ ಓಂ ಮಾತ್ರ ಸಾಕು" ಅಂತ ಹೇಳ್ತಾ ಇದ್ದೆ. ಬೆಳಗಿನ ಜಾವದಲ್ಲಿ ಚಳಿಯಲ್ಲಿ ಕುಳಿತು ಭಜನೆ ಮಾಡಿದ್ದೇ ಮಾಡಿದ್ದು, ಸುಮಾರು ಮುಕ್ಕಾಲು ಗಂಟೆ ಹೊತ್ತು. ಸೇವಾಗ್ರಾಮದಲ್ಲಿ ಇದ್ದದ್ದು ಎಲ್ಲಾ ಹರಕಲು ಮುರುಕಲು ಗುಡಿಸಲುಗಳೇ. ಆ ಮುದುಕ ಕಣ್ಣು ಮುಚ್ಚಿಕೊಂಡಿದ್ದನ್ನು ಗಮನಿಸಿ ಜಾಗ ಖಾಲಿ ಮಾಡುತ್ತಿದ್ದೆ. ನಾನು ಒಂದು ಸ್ಟೌ ಇಟ್ಟುಕೊಂಡಿದ್ದೆ. ಹೋಗಿ ಕಾಫಿ ಮಾಡಿಕೊಂಡು ಕುಡಿದು ಬಂದು ಮತ್ತೆ ಕುಳಿತುಕೊಳ್ಳುತ್ತಿದ್ದೆ. ಆ ಘಾಟಿ ಮುದುಕ ಕೇಳದೆ ಇರುತ್ತಿರಲಿಲ್ಲ, "ಎಲ್ಲಿ ಹೋಗಿದ್ದೆ? " ನಾನು, "ಅಗ್ನಿಹೋತ್ರ ಮಾಡೋಕ್ಕೆ ಹೋಗಿದ್ದೆ" ಅನ್ನುತ್ತಿದ್ದೆ. ಸ್ಟೌನಲ್ಲಿ ಅಗ್ನಿ ಇರುತ್ತಿತ್ತಲ್ಲಾ? ಅವರೂ ನಗುತ್ತಾ, 'ನಿನ್ನ ಸಹವಾಸ ಸಾಕಪ್ಪಾ' ಅನ್ನುತ್ತಿದ್ದರು. ನನಗೂ, ಗಾಂಧೀಜಿಗೂ ಯಾವತ್ತೂ ಒಪ್ಪಂದ ಆಗಲೇ ಇಲ್ಲ. ಆದರೆ ನಮ್ಮ ಸ್ನೇಹಕ್ಕೆ ಅದು ಧಕ್ಕೆ ತರಲಿಲ್ಲ. ಕೊನೆಗೂ 'ಹೇ ರಾಮ್' ಅಂತಲೇ ಪ್ರಾಣ ಬಿಟ್ಟ. ಈಗ ಅವನಿಲ್ಲ. ಅವನ ಆತ್ಮಕ್ಕೆ ಯಾಕೆ ಕಷ್ಟ ಕೊಡಬೇಕು? ನಾನು ಸಂಧಿ ಮಾಡಿಕೊಳ್ತೀನಿ. ಅವನ ರಾಮನೇ ನನ್ನ ಓಂ, ಒಪ್ಪಿಕೊಳ್ತೀನಿ, ಇಷ್ಟು ಸಾಕು.
***********
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/06/14.html