ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಫೆಬ್ರವರಿ 4, 2018

ಬದಲಾವಣೆ - ಜಗದ ನಿಯಮ - Change - Rule of the Universe


     ಜಗತ್ತು ಬದಲಾಗುತ್ತಲೇ ಇರುತ್ತದೆ, ನಾವೂ ಬದಲಾಗುತ್ತಲೇ ಇರುತ್ತೇವೆ. ಸದಾ ಬದಲಾವಣೆಯನ್ನು ಬಯಸುತ್ತಲೇ ಇರುತ್ತೇವೆ. ಬದಲಾಗುತ್ತ ಇರುವುದರಿಂದಲೇ ಜಗತ್ತು ನಡೆಯುತ್ತಿದೆ. ಹರಿಯುವ ನದಿಯಿಂದ ಒಂದು ಬೊಗಸೆ ನೀರು ತೆಗೆದುಕೊಂಡು ಮತ್ತೆ ನದಿಗೆ ಬಿಟ್ಟರೆ, ಆ ಬೊಗಸೆ ನೀರು ಮತ್ತೆ ನಮಗೆ ಬೇಕೆಂದರೂ ಸಿಗದು, ಮುಂದೆ ಹರಿದುಹೋಗಿಬಿಡುತ್ತದೆ. ಕಳೆದು ಹೋದ ಕ್ಷಣ ಮತ್ತೆ ಎಂದಿಗೂ ಸಿಗದು, ಕಾಲ ಮುಂದಕ್ಕೆ ಓಡುತ್ತಲೇ ಇರುತ್ತದೆ. ನಾವೂ ಅಷ್ಟೆ. ನಮ್ಮ ಶರೀರ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋಗುತ್ತಿರುತ್ತದೆ. ಮಗು, ಬಾಲ್ಯ, ಯೌವನ, ಪ್ರೌಢ, ವೃದ್ಧ ಸ್ಥಿತಿಯೆಡೆಗೆ ಅನವರತ ಬದಲಾಗುತ್ತಲೇ ಹೋಗುತ್ತದೆ. ಯಾವುದೇ ಸ್ಥಿತಿಯನ್ನು ಯಥಾ ರೀತಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದು ಸಿಗುತ್ತದೋ ಇಲ್ಲವೋ, ಆದರೆ ನಾವು ಈಗಿಗಿಂತ ಉತ್ತಮ ಸ್ಥಿತಿಗೆ ಬದಲಾವಣೆಯನ್ನು, ಅದು ವೈಯಕ್ತಿಕವಾಗಿರಬಹುದು, ಕೌಟುಂಬಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಏನೇ ಆಗಿರಬಹುದು, ಬಯಸುತ್ತಲೇ ಇರುತ್ತೇವೆ.
     ನಾವು ಇಷ್ಟಪಟ್ಟಂತೆ ಬದಲಾವಣೆ ಆಗದಿದ್ದಾಗ ಬೇಸರವಾಗುತ್ತದೆ, ಅಸಮಾಧಾನವಾಗುತ್ತದೆ ಮತ್ತು ಜೀವನ ಅಸಹನೀಯವೆಂಬ ಭಾವನೆ ಉಂಟಾಗುತ್ತದೆ. ಕೆಲವರು ಗೊಣಗಾಡುವುದನ್ನು ಕೇಳುತ್ತಿರುತ್ತೇವೆ, 'ಅಯ್ಯೋ, ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲಪ್ಪ. ಈಗ ಕಾಲ ಕೆಟ್ಟುಹೋಗಿದೆ. ಈ ಜನ ಬದಲಾಗುವುದಿಲ್ಲ'. ಬದಲಾಗದಿರುವುದು ಜನವೋ ಅಥವ ಬದಲಾವಣೆಗೆ ಹೊಂದಿಕೊಳ್ಳದವರೋ? ಬದಲಾವಣೆಗೆ ಒಗ್ಗದವರು, ಇಚ್ಛೆಯಂತೆ ಬದಲಾವಣೆ ತರಲಾಗದಿದ್ದವರು ದುಃಖಿಗಳಾಗುತ್ತಾರೆ. ಹಿಂದೆ ಹಾಯಿದೋಣಿಗಳು ಇದ್ದ ಕಾಲದಲ್ಲಿ ಬೀಸುತ್ತಿದ್ದ ಗಾಳಿಯನ್ನು ಉಪಯೋಗಿಸಿಕೊಂಡು ದೋಣಿಗಳನ್ನು ನಡೆಸುತ್ತಿದ್ದರು. ದೋಣಿಯ ಅನುಕೂಲಕ್ಕೆ ತಕ್ಕಂತೆ ಗಾಳಿ ಬೀಸದೇ ಇದ್ದಾಗ ಗಾಳಿಯ ದಿಕ್ಕನ್ನು ಬದಲಾಯಿಸಲು ಸಾಧ್ಯವಿರಲಿಲ್ಲವಾದ್ದರಿಂದ ಹಾಯಿಗಳನ್ನೇ ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿ ಪ್ರಯಾಣ ಮುಂದುವರೆಸಿ ಗುರಿ ತಲುಪುತ್ತಿದ್ದರು. ಈ ನೀತಿಯನ್ನೇ ಅನುಸರಿಸಿದರೆ ದುಃಖವನ್ನೇ ಸಂತೋಷವಾಗಿ ಮಾರ್ಪಡಿಸಿಕೊಳ್ಳುವ ಕಲೆ ಸಿದ್ಧಿಸುತ್ತದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಬೇಕು. ಆದರೆ ಬದಲಾವಣೆ ಸಾಧ್ಯವೇ ಇಲ್ಲವೆಂಬ ಸ್ಥಿತಿ ಇದ್ದರೆ ಅದನ್ನು ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದರಲ್ಲಿ ಜಾಣತನವಿದೆ. ಉದಾಹರಣೆಗೆ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಿರುವ ಹಕ್ಕಿಗಳ ಹಿಂಡನ್ನು ನೋಡಿ ನಮಗೆ ಸಂತೋಷವಾಗುತ್ತದೆ. ಆ ಹಕ್ಕಿಗಳು ಆ ದಿಕ್ಕಿನಲ್ಲಿ ಹಾರಬಾರದಿತ್ತು, ಹೀಗೆ ಹಾರಬಾರದು, ಹಾಗೆ ಹಾರಬಾರದು ಎಂದು ನಮಗೆ ಅನ್ನಿಸುವುದಿಲ್ಲ. ಏಕೆಂದರೆ ನಮ್ಮ ಇಚ್ಛೆಯಂತೆ ಅದು ನಡೆಯುವುದಿಲ್ಲವೆಂಬುದು ನಮಗೆ ಗೊತ್ತಿರುತ್ತದೆ. ಪ್ರತಿದಿನ ಪೂರ್ಣಚಂದ್ರನೇ ಆಕಾಶದಲ್ಲಿ ಕಾಣಬೇಕು, ಬೆಂಕಿ ಸುಡಬಾರದು, ನೀರು ಕೆಳಗಿನಿಂದ ಮೇಲಕ್ಕೆ ಹರಿಯಬೇಕು, ಕಾಡಿನಲ್ಲಿ ಕೇವಲ ಮಾವು, ಹಲಸು ಇತ್ಯಾದಿ ನಮಗೆ ಇಷ್ಟವಾದ ಗಿಡಮರಗಳು ಮಾತ್ರ ಹುಟ್ಟಬೇಕು ಎಂದೆಲ್ಲಾ ಬಯಸಲು ಸಾಧ್ಯವಿಲ್ಲದೆ ಇರುವುದರಿಂದ ಅವನ್ನು ನಾವು ಒಪ್ಪಿಕೊಳ್ಳುವ ಹಾಗೆ, ಬದಲಾವಣೆ ಸಾಧ್ಯವಿಲ್ಲದ ಸಂಗತಿಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ನಮಗೆ ಬದುಕು ಸಹನೀಯವಾಗುತ್ತದೆ. 
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ನೀನು ಮೊದಲಾಗು |
ಬದಲಾಗು ನೀ ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
     ಮಕರ ಸಂಕ್ರಮಣದಂದು ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಾನೆಂಬುದು ಪ್ರಚಲಿತ ವಿಷಯ. ಆದರೆ ನಿಜವಾಗಿ ಹೇಳಬೇಕೆಂದರೆ ಪಥ ಬದಲಾಯಿಸುವುದು ಸೂರ್ಯನಾಗಿರದೆ ಭೂಮಿ ಆಗಿರುತ್ತದೆ. ಭೂಮಿಯ ಪಥ ಬದಲಾಗುವುದರಿಂದ ಸೂರ್ಯ ಪಥ ಬದಲಾಯಿಸಿದಂತೆ ನಮಗೆ ಕಾಣುತ್ತದೆ. ಇದೇ ನಿಯಮ ನಮಗೂ ಅನ್ವಯಿಸುತ್ತದೆ. ಇನ್ನೊಬ್ಬರು ಬದಲಾಗಬೇಕೆಂದು ಬಯಸುವ ನಾವು ಬದಲಾಗಬೇಕಾದುದು ನಾವೇ ಆಗಿರಬಾರದೇಕೆ ಎಂದು ಯೋಚಿಸಬೇಕು. ನಾವು ಬದಲಾದರೆ ನಮಗೆ ಇತರರೂ ಬದಲಾದಂತೆ ಕಂಡೇ ಕಾಣುತ್ತದೆ. ಇದೇ ನಿಜವಾದ ಬದಲಾವಣೆ! ನಮ್ಮ ಚಿಂತನಾಧಾಟಿ ಬದಲಾದರೆ ಜಗತ್ತೇ ಬದಲಾಗಿಬಿಡುತ್ತದೆ! ಇಂತಹ ಬದಲಾವಣೆಯೂ ಸುಲಭವಾಗಿಬರುವುದಿಲ್ಲ. ನಾವು ಯಾರು ಬದಲಾಗಬೇಕೆಂದು ಬಯಸುತ್ತೇವೆಯೋ ಅವರ ಸ್ಥಾನದಲ್ಲಿ ನಮ್ಮನ್ನು ಕಲ್ಪಿಸಿಕೊಂಡು ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೆ ಮಾಡಿದರೆ, ನಮ್ಮ ನ್ಯೂನತೆಗಳು, ದೌರ್ಬಲ್ಯಗಳು ನಮ್ಮ ಅರಿವಿಗೆ ಬರುತ್ತವೆ. ಅಂತಹವುಗಳನ್ನು ನಿವಾರಿಸಿಕೊಳ್ಳಲು ಪ್ರಾರಂಭಿಸಿದರೆ ಬದಲಾವಣೆ ಗೋಚರವಾಗುತ್ತದೆ. ನಮ್ಮ ಮನಸ್ಸು ಆ ಬದಲಾವಣೆಯನ್ನು ಒಪ್ಪಿಕೊಳ್ಳುತ್ತದೆ. ನಾವು ಯಾವ ಬಣ್ಣದ ಕನ್ನಡಕದಿಂದ ಜಗತ್ತನ್ನು ನೋಡುತ್ತೇವೆಯೋ ಜಗತ್ತು ಅದೇ ಬಣ್ಣದಿಂದ ನಮಗೆ ಕಾಣುತ್ತದೆ. ದೇವರನ್ನು ಕುರಿತು ಮಾಡುವ/ಸಲ್ಲಿಸುವ ಪ್ರಾರ್ಥನೆ ದೇವರನ್ನು ಬದಲಾಯಿಸುತ್ತದೆಯೇ? ಇಲ್ಲ, ಅದು ಪ್ರಾರ್ಥಿಸುವವನನ್ನು ಬದಲಾಯಿಸುತ್ತದೆ!  ಈ ಅರಿವೇ ಸಂಕ್ರಾಂತಿ, ಒಳ್ಳೆಯ ಕ್ರಾಂತಿ, ಒಳ್ಳೆಯ ಬೆಳವಣಿಗೆ! 
     ಜಗತ್ತು ಬದಲಾಗಬೇಕಾದರೆ ನಾವು ಬದಲಾಗಬೇಕು, ನಾವು ಮೊದಲು ಬದಲಾಗಬೇಕು ಎಂದು ಹೇಳುವುದೇನೋ ಸುಲಭ. ಆದರೆ ನಾವು ಬದಲಾಗಬೇಕು ಎಂದು ತಿಳಿದುಕೊಳ್ಳುವುದಾದರೂ ಹೇಗೆ? ಒಂದು ಪ್ರಯೋಗ ಮಾಡಬಹುದು. ನಾವು ಈದಿನ ಯಾವುದೋ ಒಂದು ಕೆಲಸ ಮಾಡಬೇಕೆಂದುಕೊಂಡಿದ್ದೇವೆ ಎಂದುಕೊಳ್ಳೋಣ. ಕನ್ನಡಿಯ ಮುಂದೆ ನಿಂತು ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: 'ಇಂದು ನನ್ನ ಬದುಕಿನ ಕೊನೆಯ ದಿನವೆಂದಾದರೆ ಈ ಕೆಲಸವನ್ನು ಮಾಡುತ್ತೇನಾ?' 'ಇಲ್ಲ' ಎಂಬ ಉತ್ತರ ಹಲವು ದಿನಗಳವರೆಗೆ ಸತತವಾಗಿ ಬರುವುದಾದರೆ ನಾವು ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ನಾವು ಏನಾಗಿದ್ದೇವೆಯೋ ಅದನ್ನು ಬದಲಾಯಿಸಲಾರೆವು. ಆದರೆ, ನಮ್ಮ ತಲೆಯೊಳಗೆ ಯಾವ ವಿಚಾರವಿದೆಯೋ ಅದನ್ನು ಬದಲಾಯಿಸಲು ಸಾಧ್ಯವಿದೆ. ಹೊಸ ವಿಚಾರಗಳು, ಒಳ್ಳೆಯ ವಿಚಾರಗಳನ್ನು ನಮ್ಮ ತಲೆಯಲ್ಲಿ ಸೇರಿಸಲು ಅವಕಾಶವಿದೆ.
     ನಾವು ಹಲವಾರು ಸಂಗತಿಗಳಲ್ಲಿ ಬದಲಾವಣೆ ಬಯಸುತ್ತೇವೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತ ಒಂದು ಸಮಾಜವಾದಿ ಜಾತ್ಯಾತೀತ ರಾಷ್ಟ್ರ ಎಂದು ತಿದ್ದುಪಡಿ ಮಾಡಿದರು. ಆದರೆ ವಾಸ್ತವದಲ್ಲಿ ಈಗ ಏನಾಗಿದೆ? ಹೆಸರಿಗೆ ಜಾತ್ಯಾತೀತ ಎಂದು ಬಾಯಿಯಲ್ಲಿ ಜಪ ಮಾಡುವ ರಾಜಕಾರಣಿಗಳು ಜಾತಿಗಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಜಾತೀಯತೆಯ ವಿಷಬೀಜವನ್ನು ಮತ್ತಷ್ಟು ಬಲಗೊಳಿಸುತ್ತಿದ್ದಾರೆ, ಜಾತಿಯ ಹೆಸರಿನಲ್ಲಿ ಕಿತ್ತಾಟ ಮಾಡುತ್ತಾರೆ, ಒಬ್ಬರನ್ನೊಬ್ಬರ ವಿರುದ್ದ ಎತ್ತಿಕಟ್ಟುತ್ತಾರೆ, ಜಾತಿಗಳ ಆಧಾರದಲ್ಲೇ ಅಸ್ತಿತ್ವ ಕಂಡುಕೊಂಡಿದ್ದಾರೆ. ಸಾಹಿತ್ಯಿಕವಾಗಿ ಎಡ, ಬಲ, ದಲಿತ, ಮಹಿಳಾ, ಪ್ರಗತಿಪರ, ಪ್ರಗತಿವಿರೋಧಿ, ಇತ್ಯಾದಿ ಹಣೆಪಟ್ಟಿಗಳನ್ನು ಹಚ್ಚುತ್ತಾ ಆ ಕ್ಷೇತ್ರವನ್ನೂ ಮಲಿನಗೊಳಿಸಿದ್ದಾರೆ. ಎಲ್ಲರ ಹಿತವನ್ನು ಬಯಸುವುದೇ ಸಾಹಿತ್ಯವಾಗಿರುವಾಗ ಅದನ್ನೂ ಕೆಸರೆರಚುವ ಸಾಧನ ಮಾಡಿಕೊಂಡಿರುವುದು ವಿಷಾದದ ಸಂಗತಿ. ಭಾಷೆಯ ಪ್ರೀತಿಯನ್ನೇ ಬಂಡವಾಳ ಮಾಡಿಕೊಂಡು ಮೆರೆಯುತ್ತಿರುವ ಸಂಘಟನೆಗಳು ಭಯ ಹುಟ್ಟಿಸುವ ಮಟ್ಟಕ್ಕೆ ಬೆಳೆದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ಹಿತಕ್ಕೆ ಧಕ್ಕೆ ತರುವ, ದೇಶದ ಮಾನವನ್ನೇ ಹರಾಜು ಹಾಕುವವರು ಗಣ್ಯರೆನಿಸಿಕೊಂಡಿದ್ದಾರೆ. ಇದನ್ನೆಲ್ಲಾ ಪಟ್ಟಿ ಮಾಡುತ್ತಾ ಹೋದರೆ ದಿಗಿಲಾಗುತ್ತದೆ. ಆದರೆ ಬದಲಾವಣೆಯ ದಿನಗಳು ಬರಲೇಬೇಕು, ಬರುತ್ತವೆ! ಈ ಆಶಾವಾದ ನಮ್ಮನ್ನು ಹತಾಶೆಯಿಂದ ಹೊರಬರುವಂತೆ ಮಾಡುತ್ತದೆ.
     ನಿಜ, ಬದಲಾವಣೆ ಆಗಬೇಕು. ಯಾರು ಮಾಡಬೇಕು? ಬೇರೆ ಯಾರಾದರೂ ಮಾಡಲಿ ಎಂದು ಕಾಯುತ್ತಾ ಕೂರಬೇಕೇ? ನಮಗೆ ಬೇಕಾದ ಬದಲಾವಣೆ ಮಾಡಬೇಕಾದವರು ನಾವೇ ಆಗಿದ್ದೇವೆ. ಬದಲಾವಣೆ ಮಾಡಲೆಂದು ಯಾರನ್ನು ಕಾಯುತ್ತಿದ್ದೇವೆಯೋ ಆ ಅವರು ಬೇರೆ ಯಾರೂ ಅಲ್ಲ, ನಾವೇ ಆಗಿದ್ದೇವೆ. ನಾವು ಬಯಸುವ ಬದಲಾವಣೆಯನ್ನು ಮೊದಲು ನಮ್ಮಲ್ಲಿ ತಂದುಕೊಳ್ಳೋಣ. ಆಗ ಕ್ರಮೇಣ ಬದಲಾವಣೆ ಬರುತ್ತಾ ಹೋಗುತ್ತದೆ. ಮೊದಲು ಕ್ಷೀಣವಾಗಿ ಪ್ರಾರಂಭವಾಗುವ ಬದಲಾವಣೆ ಬರಬರುತ್ತಾ ದಟ್ಟವಾಗುತ್ತೆ. ಬದಲಾವಣೆಯ ತಂಗಾಳಿ ಬೀಸತೊಡಗುತ್ತದೆ. ನಮ್ಮಲ್ಲಿ ನಾವು ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ಬೇರೆ ಏನನ್ನೂ ಬದಲಾವಣೆ ಮಾಡಲಾರೆವು. ಸರ್ವರ ಹಿತ ಬಯಸುವ ಕೆಲವೇ ಸಜ್ಜನರು ಜಗತ್ತಿನಲ್ಲಿ ಬದಲಾವಣೆಯ ಬೆಳಕು ತರಬಲ್ಲರು. ಆ ಕೆಲವರಲ್ಲಿ ನಾವೂ ಒಬ್ಬರಾಗೋಣ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ