ಸ್ವಾರಸ್ಯಕರವಾದ ದೃಷ್ಯಕಾವ್ಯದ ರೀತಿಯಲ್ಲಿ ಈ ವೇದಮಂತ್ರ ಜೀವಿಗಳು ಮತ್ತು ದೇವರ ನಡುವಣ ಸಂಬಂಧವನ್ನು ಚಿತ್ರಿಸಿದೆ:
ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿ ಷಸ್ವಜಾತೇ| ತಯೋರನ್ಯಃ ಪಿಪ್ಪಲಂ ಸ್ವಾದ್ವತ್ಯನಶ್ನನ್ನನ್ಯೋ ಅಭಿ ಚಾಕಶೀತಿ|| (ಋಕ್.೧.೧೬೪.೨೦)
ಯಾವಾಗಲೂ ಜೊತೆಯಾಗಿರುವ, ಸ್ನೇಹಿತರಾದ (ಅಥವಾ ಆತ್ಮ ಎಂಬ ಸಮಾನ ವ್ಯಾಖ್ಯೆಗೊಳಪಟ್ಟ) ಎರಡು ಸುಂದರವಾದ ರೆಕ್ಕೆಗಳನ್ನುಳ್ಳ ಹಕ್ಕಿಗಳು (ಅಥವಾ ಸೊಗಸಾದ ಗತಿಯನ್ನುಳ್ಳ ಇಬ್ಬರು ಆತ್ಮರು) ಒಂದೇ ಮರವನ್ನು (ಅಥವಾ ಪ್ರಾಕೃತಿಕ ಜಗತ್ತನ್ನು) ಆಶ್ರಯಿಸಿದ್ದಾರೆ. ಅವರಲ್ಲಿ ಒಬ್ಬನು (ಜೀವಾತ್ಮನು) ಮಧುರವಾದ ಫಲವನ್ನು ಸವಿಯುತ್ತಿದ್ದಾನೆ. ಮತ್ತೊಬ್ಬನು ಏನನ್ನೂ ಸೇವಿಸದೆ ಸಾಕ್ಷಿರೂಪನಾಗಿ ವಿರಾಜಿಸುತ್ತಿದ್ದಾನೆ. ಸರಳಗನ್ನಡದಲ್ಲಿ ಇದರ ಭಾವಾರ್ಥವನ್ನು ಹೀಗೆ ಹೇಳಬಹುದೇನೋ!
ಒಂದನೊಂದನಗಲಿರದ ಸೊಗದ ಹಕ್ಕಿಗಳೆರಡು
ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು |
ಫಲ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ
ಜೀವಾತ್ಮ ಪರಮಾತ್ಮರವರಲ್ತೆ ಮೂಢ ||
ಅನಾದಿ ಕಾಲದಿಂದಲೂ ಜಿಜ್ಞಾಸುಗಳನ್ನು ಬಹಳವಾಗಿ ಕಾಡಿರುವ, ಕಾಡುತ್ತಿರುವ ಮತ್ತು ಮುಂದೆಯೂ ಕಾಡಲಿರುವ ಮೂರು ಕುತೂಹಲದ ಸಂಗತಿಗಳೆಂದರೆ, ಜಗತ್ತು, ದೇವರು ಮತ್ತು ಜೀವರು! ಅನೇಕ ಧರ್ಮಗ್ರಂಥಗಳು, ಪುರಾಣಗಳು, ಪುಣ್ಯಕಥೆಗಳು ಈ ಮೂರರ ಸಂಗತಿಗಳ ಕುರಿತೇ ಸುತ್ತುತ್ತವೆ. ಮೇಲೆ ಹೇಳಿದ ವೇದಮಂತ್ರ ಜೀವರು ಮತ್ತು ದೇವರ ನಡುವಣ ಸಂಬಂಧ ಹೇಗಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದೆ. ಜೀವಿಗಳಿಗೂ, ದೇವರಿಗೂ ಅವಿನಾಭಾವ ಸಂಬಂಧವಿದೆ. ಒಂದನ್ನು ಮತ್ತೊಂದು ಸದಾ ಆಶ್ರಯಿಸಿರುತ್ತದೆ. ಜೀವಿಗಳು ಜಗತ್ತಿನ ಸುಖ, ಸೌಲಭ್ಯಗಳನ್ನು ಅನುಭವಿಸುತ್ತಾ ಇದ್ದರೆ ಪರಮಾತ್ಮ ಜೀವಿಗಳ ಕ್ರಿಯೆಗಳನ್ನು ಕೇವಲ ಸಾಕ್ಷಿರೂಪವಾಗಿ ನೋಡುತ್ತಿರುತ್ತಾನೆ ಎಂದು ಹೇಳುವ ಈ ಮಂತ್ರ ನಮ್ಮಲ್ಲಿ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ.
ಪರಮಾತ್ಮ ಸರ್ವಶಕ್ತ, ಸರ್ವತೃಪ್ತ, ಸರ್ವವ್ಯಾಪಕ, ನಿರ್ವಿಕಾರಿ, ನಿರಾಕಾರಿಯಾಗಿರುವುದರಿಂದ ಆತನಿಗೆ ಯಾವುದೇ ಸಂಗತಿಯ ಅವಶ್ಯಕತೆ ಇರುವುದಿಲ್ಲ. ಯಾವುದಾದರೂ ಸಂಗತಿ ಬೇಕು, ಯಾವುದಾದರೂ ಅಗತ್ಯ ಅವನಿಗೆ ಇದೆ ಎಂದರೆ ಆತ ಪರಮಾತ್ಮ ಹೇಗಾದಾನು? ಆಕಾರಿಯಾಗಿದ್ದರೆ, ಆತ ಸರ್ವವ್ಯಾಪಕನಾಗಿರಲಾರ, ಆದ್ದರಿಂದ ಆತ ನಿರಾಕಾರಿಯೇ ಸರಿ. ಆತನನ್ನು ಹೋಲಿಸಬಹುದಾದ ಯಾವುದಾದರೂ ಒಂದು ಸಂಗತಿ ಇದ್ದರೆ, ಅದು ಬಹುಷಃ ಎಲ್ಲೆಲ್ಲೂ ವ್ಯಾಪಿಸಿರುವ, ಅದು ಇಲ್ಲದ ಸ್ಥಳವೇ ಇರದ, ಜಗತ್ತನ್ನು ಸ್ಥಿತಿಯಲ್ಲಿ ಇರಿಸಲು ಸಹಾಯಕಾರಿಯಾಗಿರುವ, ಇದ್ದರೂ ತನ್ನ ಇರುವನ್ನು ತೋರಿಸಿಕೊಳ್ಳದ, ಯಾವುದಕ್ಕೂ ಅಡ್ಡಿಪಡಿಸದ, ಸುಡಲಾರದ, ಕತ್ತರಿಸಲಾಗದ, ತೋಯಿಸಲಾಗದ, ಆಕಾರವಿರದ, ಜಗದ ಯಾವುದೇ ಚಟುವಟಿಕೆಗಳಿಗೆ ಸಾಕ್ಷಿಯಾಗುವ, ನಿರ್ಲಿಪ್ತವಾಗಿರುವ ಆಕಾಶವೇ ಆಗಿದೆ.
ದೇವರು ಸರ್ವಶಕ್ತ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಅವನು ಜೀವಿಗಳ ಕಾರ್ಯಗಳನ್ನು ಕೇವಲ ಸಾಕ್ಷಿಯಾಗಿ ನೋಡುತ್ತಿರುತ್ತಾನೆ ಅಂದರೆ ಸರಿಯೇ? ಯಾರೋ ಇನ್ಯಾರನ್ನೋ ಕೊಲೆ ಮಾಡಿದರೂ ನೋಡಿಕೊಂಡು ಸುಮ್ಮನಿರುತ್ತಾನೆ ಎಂದರೆ, ಕೊಲೆಯಾದವನು ಯಾರಿಗೂ ತೊಂದರೆ ಕೊಡದ ಸಜ್ಜನನಾಗಿದ್ದರೂ ಅವನ ರಕ್ಷಣೆಗೆ ಬರುವುದಿಲ್ಲವೆಂದರೆ ಅವನು ಎಂತಹ ದೇವರು ಎಂದು ಅನ್ನಿಸುವುದಿಲ್ಲವೇ? ಏಕೆ ಹೀಗೆ? ಭಗವದ್ಗೀತೆಯಲ್ಲಿ ಹೇಳಿದಂತೆ ಧರ್ಮರಕ್ಷಣೆಗಾಗಿ, ದುಷ್ಟರ ಶಿಕ್ಷೆಗಾಗಿ, ಶಿಷ್ಟರ ರಕ್ಷಣೆಗಾಗಿ ಅವತರಿಸಿ ಬರುತ್ತೇನೆ ಎಂದು ಹೇಳಿದ ಮಾತು ಸುಳ್ಳಾಗುವುದಿಲ್ಲವೇ? ಈ ವಿಷಯದಲ್ಲಿ ಆಳವಾಗಿ ಜಿಜ್ಞಾಸೆ ಮಾಡಿದಲ್ಲದೆ ಇದರಲ್ಲಿನ ಹೊಳಹು ಗೋಚರವಾಗುವುದಿಲ್ಲ. ಕೆಲವರು ಹೇಳುತ್ತಾರೆ, ನಮ್ಮ ಕೈಯಲ್ಲಿ ಏನಿದೆ? ನಾವೆಲ್ಲಾ ಅವನು ಆಡಿಸಿದಂತೆ ಆಡುವ ಸೂತ್ರದ ಗೊಂಬೆಗಳು! ಇದನ್ನು ಒಪ್ಪುವುದಾದರೆ, ನಾವು ಯಾರದಾದರೂ ತಲೆಯನ್ನು ಒಡೆದರೆ ಅದು ದೇವರೇ ಮಾಡಿಸಿದ್ದು, ನಮ್ಮ ತಪ್ಪಲ್ಲ ಎಂದಾಗುವುದಿಲ್ಲವೇ? ಹಾಗಾದರೆ ತಲೆ ಒಡೆದ ತಪ್ಪಿಗೆ ಶಿಕ್ಷೆ ಯಾರಿಗೆ ಕೊಡಬೇಕು?
ಎಲ್ಲಾ ನಮ್ಮ ಹಣೆಬರಹ, ನಾವೇನು ಮಾಡಕ್ಕೆ ಆಗುತ್ತೆ? ಎಂಬ ಮಾತನ್ನು ಕೇಳುತ್ತಿರುತ್ತೇವೆ. 'ಮಾಡಿದ್ದುಣ್ಣೋ ಮಹರಾಯ' ಎಂಬ ಪ್ರಸಿದ್ಧ ನಾಣ್ನುಡಿಯೂ ಕಿವಿಗೆ ಬೀಳುತ್ತಿರುತ್ತದೆ. ಈ ಮಾತುಗಳಲ್ಲಿ ನಾವು ಏನು ಮಾಡಿದರೂ ದೇವರು ಏಕೆ ಸುಮ್ಮನಿರುತ್ತಾನೆ ಎಂಬುದಕ್ಕೆ ಸೂಕ್ಷ್ಮವಾಗಿ ಉತ್ತರ ಕಾಣುತ್ತದೆ. ಅದೆಂದರೆ, ಕರ್ಮಕ್ಕೆ ತಕ್ಕ ಫಲ ಅನಿವಾರ್ಯ ಎಂಬುದು! ದೇವರು ಒಂದು ಸರಳ ನಿಯಮವನ್ನು ಮಾಡಿಟ್ಟುಬಿಟ್ಟಿದ್ದಾನೆ. 'ನೀನು ಏನು ಮಾಡುತ್ತೀಯೋ ಅದಕ್ಕೆ ನೀನೇ ಹೊಣೆ. ತಪ್ಪು ಮಾಡಿದರೂ ಸರಿ, ಒಳ್ಳೆಯದು ಮಾಡಿದರೂ ಸರಿ. ಅದಕ್ಕೆ ತಕ್ಕಂತೆ ಫಲವನ್ನು ನೀನು ಅನುಭವಿಸಲೇಬೇಕು' ಎಂಬುದೇ ಆ ನಿಯಮ. 'ಈ ಮಾತಿನಲ್ಲಿ ಸತ್ಯವಿಲ್ಲ. ಅನ್ಯಾಯ ಮಾಡಿದವರು, ದರೋಡೆ ಮಾಡುವವರು ಸುಖವಾಗಿಲ್ಲವೇ? ನ್ಯಾಯ, ನೀತಿ, ಧರ್ಮ ಅನ್ನುವವರೇಕೆ ಕಷ್ಟಪಡುತ್ತಿದ್ದಾರೆ?' ಎಂಬ ಮಾತೂ ಬರುತ್ತದೆ. ಆದರೆ ಅನ್ಯಾಯ ಮಾಡಿದವರು ಎಷ್ಟು ಸುಖಿಗಳಾಗಿದ್ದಾರೆ ಎಂಬುದು ಅವರಿಗೇ ಗೊತ್ತು. ಅಲ್ಲದೆ, ಸುಖ ಮತ್ತು ದುಃಖಗಳು ಮಾನಸಿಕ ಸ್ಥಿತಿಗಳಷ್ಟೇ ಹೊರತು ಭೌತಿಕ ಸಂಪತ್ತು, ವಿಚಾರಗಳಲ್ಲಿ ಇಲ್ಲ. ವೇದಗಳು ಪುನರ್ಜನ್ಮವನ್ನು ಪ್ರತಿಪಾದಿಸುತ್ತಿದ್ದು, ಹಿಂದಿನ ಕರ್ಮಗಳಿಗನುಸಾರವಾಗಿ ಮುಂದೆ ಪಡೆಯುವ ಜನ್ಮ ಲಭ್ಯವಾಗುತ್ತದೆ ಎನ್ನುತ್ತದೆ. ಅನೇಕರು ಹುಟ್ಟುವಾಗಲೇ ಅಂಗವಿಕಲರಾಗಿ, ರೋಗಿಷ್ಟರಾಗಿ, ಬಡವರಾಗಿ, ಶ್ರೀಮಂತರಾಗಿ, ಬಲಶಾಲಿಗಳಾಗಿ, ಪ್ರಾಣಿ-ಪಕ್ಷಿಗಳಾಗಿ, ಕ್ರಿಮಿ-ಕೀಟಗಳಾಗಿ ಹೀಗೆ ವಿವಿಧ ರೀತಿಯಲ್ಲಿ ಹುಟ್ಟಲು ಈ ಕಾರಣವಲ್ಲದೆ ಬೇರೆ ಕಾರಣಗಳು ಇರಲಾರವು. ಬೇರೆ ಯಾವುದೇ ಕಾರಣವಿಲ್ಲದೆ ಹೀಗೆ ಹುಟ್ಟುವುದಾದರೆ ದೇವರು ಪಕ್ಷಪಾತಿ ಎನ್ನಿಸಿಕೊಳ್ಳುತ್ತಾನೆ. ಆಸ್ತಿಕ ಮನಸ್ಸುಗಳನ್ನು ದೇವರು ಪಕ್ಷಪಾತಿ ಎಂಬುದನ್ನು ಒಪ್ಪುವುದಿಲ್ಲ. ಈ ವಿಷಯ ಸಂಕ್ಷಿಪ್ತವಾಗಿ ಚರ್ಚಿಸಬಹುದಾದ ವಿಷಯವಲ್ಲವಾದುದರಿಂದ ಇಲ್ಲಿಗೇ ಮೊಟಕುಗೊಳಿಸಿ ಮೂಲ ವಿಷಯಕ್ಕೆ ಮತ್ತೆ ಬರೋಣ.
ಒಂದು ಲಘುವಾದರೂ ಅರ್ಥವತ್ತಾದ ಉದಾಹರಣೆ ನೋಡೋಣ. ಅವರಿಬ್ಬರೂ ನೆರೆಹೊರೆಯವರು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ, ಇಬ್ಬರೂ ಒಬ್ಬನೇ ದೇವರ ಭಕ್ತರು. ಒಬ್ಬ ಪ್ರಾರ್ಥಿಸುತ್ತಾನೆ, 'ದೇವರೇ, ಪಕ್ಕದ ಮನೆಯವನು ದುಷ್ಟ. ನನಗೆ ಬಹಳ ತೊಂದರೆ ಕೊಡುತ್ತಾನೆ. ಅವನ ಎರಡು ಕಣ್ಣುಗಳನ್ನೂ ಇಂಗಿಸಿಬಿಡು'. ಇನ್ನೊಬ್ಬನೂ ಕೋರುತ್ತಾನೆ, 'ದೇವರೇ, ಅವನ ಕಾಟ ಸಹಿಸಲಾಗುತ್ತಿಲ್ಲ. ಅವನಿಗೆ ಲಕ್ವ ಹೊಡೆಯಲಿ'. ದೇವರು ಯಾರ ಮಾತು ಕೇಳಬೇಕು? ಇಬ್ಬರೂ ಭಕ್ತರೇ, ಇಬ್ಬರೂ ದೇವರ ಮಕ್ಕಳೇ. ಇಬ್ಬರ ಬೇಡಿಕೆಯನ್ನೂ ಈಡೇರಿಸಿದರೂ ಅವನ ಭಕ್ತರಿಗೇ ತೊಂದರೆ. ಆಗ ಮತ್ತೆ ಪ್ರಾರ್ಥಿಸಿ ಸರಿಪಡಿಸುವಂತೆ ಗೋಳಾಡುತ್ತಾರೆ, ಸುಮ್ಮನಿರುವುದೇ ಲೇಸು ಎಂದು ಸುಮ್ಮನಾಗಿಬಿಡುತ್ತಾನೆ.
ಮಾನವನ ಬದುಕಿನಲ್ಲಿ ದೇವರ ಪಾತ್ರ ಹೇಗಿರುತ್ತದೆಂಬುದಕ್ಕೆ ಇನ್ನೊಂದು ಸಣ್ಣ ಉದಾಹರಣೆಯಾಗಿ ಚದುರಂಗದ ಆಟವನ್ನೇ ತೆಗೆದುಕೊಳ್ಳೋಣ. ಈ ಆಟಕ್ಕೆ ನಿಯಮವಿದೆ. ನಿಯಮಗಳ ಅನುಸಾರವಾಗಿ ಚದುರಂಗದ ಕಾಯಿಗಳನ್ನು ಆಟಗಾರ ನಡೆಸಬೇಕು. ನಿಯಮಗಳ ಅನುಸಾರವಾಗಿ ಆಟಗಾರ ಬುದ್ಧಿಮತ್ತೆಯನ್ನು ಉಪಯೋಗಿಸಿ ಕಾಯಿಗಳ ಚಲನೆ ಮಾಡಿದರೆ ಎದುರಾಳಿಯನ್ನು ಸೋಲಿಸಬಹುದು. ತಪ್ಪು ನಡೆಗಳನ್ನು ಮಾಡಿದರೆ ಸೋಲುತ್ತಾನೆ. ಈ ಆಟವನ್ನು ಗಮನಿಸಲು ಒಬ್ಬ ರೆಫರಿ ಇದ್ದು ಆತ ಪಂದ್ಯದ ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಮಾತ್ರ ಗಮನಿಸುತ್ತಿರುತ್ತಾನೆ. ಕೊನೆಯಲ್ಲಿ ಫಲಿತಾಂಶ ನಿರ್ಧರಿಸುತ್ತಾನೆ. ಆತನ ಪಾತ್ರ ಅಷ್ಟಕ್ಕೇ ಸೀಮಿತ. ಆತ ಯಾವುದೇ ಆಟಗಾರನಿಗೆ ಹೀಗೆ ಆಡು, ಹಾಗೆ ಆಡು ಎಂದು ಹೇಳುವುದಿಲ್ಲ. ರೆಫರಿ/ಅಂಪೈರ್ ನನಗೆ ಸಹಾಯ ಮಾಡಲಿಲ್ಲ ಎಂದು ಯಾರಾದರೂ ದೂರುತ್ತಾರೆಯೇ? ಇಲ್ಲ. ದೇವರ ಕೆಲಸವೂ ಅಷ್ಟೇ. ಆತ ಕೇವಲ ಸಾಕ್ಷಿಯಾಗಿ ನಮ್ಮ ಚಟುವಟಿಕೆಗಳನ್ನು, ಕ್ರಿಯೆಗಳನ್ನು ನೋಡುತ್ತಿರುತ್ತಾನೆಯೇ ಹೊರತು, ಆತ ಸಹಾಯವನ್ನಾಗಲೀ, ಅಡ್ಡಿಯನ್ನಾಗಲೀ ಮಾಡುವುದಿಲ್ಲ. ಜೀವನವೆಂಬ ಆಟದಲ್ಲಿ ನಾವು ಪ್ರತಿಯೊಬ್ಬರೂ ಸ್ವತಂತ್ರ ಆಟಗಾರರೇ. ಮೊದಲೇ ಹೇಳಿದ್ದಂತೆ ಪ್ರತಿಯೊಂದೂ ನಿಯಮಾನುಸಾರವೇ ನಡೆಯುತ್ತದೆ. ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬುದು ನಿರ್ಧರವಾಗಿರುತ್ತದೆ. ನಮ್ಮ ಬದುಕು ಎಚ್ಚರಿಕೆಯಿಂದ ಸಾಗಿದರೆ, ವಿವೇಚನಾಶಕ್ತಿ ಬಳಸಿ ನಡೆದರೆ ನಮಗೆ ಯಶಸ್ಸು ಸಿಕ್ಕೇಸಿಗುತ್ತದೆ. ಇಲ್ಲದಿದ್ದರೆ ಇಲ್ಲ. ಬದುಕೆಂಬ ಆಟವನ್ನು ಸುಂದರವಾಗಿ, ಎಚ್ಚರಿಕೆಯಿಂದ, ಸಂತೋಷದಿಂದ ಅನುಭವಿಸುತ್ತಾ ಆಡೋಣ, ಗೆಲ್ಲೋಣ, ಮುಂದುವರೆಯೋಣ!
-ಕ.ವೆಂ.ನಾಗರಾಜ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ