ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಏಪ್ರಿಲ್ 21, 2014

ಕದಿಯದಿರುವುದು ಸುಲಭವಲ್ಲ!

     ಎಂದಿನಂತೆ ಫೇಸ್ ಬುಕ್ ತೆರೆದಾಗ ಯುವಬರಹಗಾರ್ತಿಯೊಬ್ಬರ ಕವನ ಗಮನ ಸೆಳೆಯಿತು. ಕವನಕ್ಕೆ ಲೈಕುಗಳ ಮೇಲೆ ಲೈಕುಗಳಿದ್ದವು. ವಾವ್, ಸೂಪರ್, ವಂಡರ್ ಫುಲ್, ಕೀಪಿಟಪ್, ನೀನು ಎಷ್ಟು ಚೆನ್ನಾಗಿ ಬರೆದಿದ್ದೀಯಾ!, ಮುಂದುವರೆಸು, ಎಂಬಂತಹ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆಗಳಿದ್ದವು. ಅದನ್ನು ನೋಡಿದವನು ನನ್ನ ಪುಟವನ್ನು ತೆರೆದು ನೋಡಿದೆ. ಅದೇ ಕವನ ಈಕೆಯ ಕವನ ಪ್ರಕಟವಾಗುವುದಕ್ಕಿಂತ ಕೆಲವು ದಿನಗಳ ಮೊದಲೇ ನನ್ನ ಹೆಸರಿನಲ್ಲಿ ಪ್ರಕಟವಾಗಿತ್ತು. ಕೇವಲ ನಾಲ್ಕೈದು ಲೈಕುಗಳಿದ್ದವು. ಮತ್ತೊಮ್ಮೆ ಆ ಬರಹಗಾರ್ತಿಯ ಪುಟ ವೀಕ್ಷಿಸಿದೆ. ನನ್ನ ಪುಟದ ಕವನದಲ್ಲಿದ್ದ ಸಣ್ಣ ಬೆರಳಚ್ಚಿನ ದೋಷ ಸಹ ಯಥಾವತ್ ಅಲ್ಲಿತ್ತು. ಅರ್ಥವಾಯಿತಲ್ಲವೇ? ನಾನು ನನ್ನ ಪ್ರತಿಕ್ರಿಯೆ ದಾಖಲಿಸಿದೆ, "ತುಂಬಾ ಚೆನ್ನಾಗಿದೆ. ಆಶ್ಚರ್ಯವೆಂದರೆ ನಿಮ್ಮ ಕವನ ಪ್ರಕಟವಾಗುವ ನಾಲ್ಕು ದಿನಗಳ ಮೊದಲೇ ನಾನು ಪ್ರಕಟಿಸಿದ ಕವನ ಸಹ ಒಂದಕ್ಷರವೂ ಬದಲಾವಣೆಯಾಗದೆ ಹೀಗೆಯೇ ಮೂಡಿಬಂದಿದೆ. ಇಬ್ಬರ ವಿಚಾರವೂ ಒಂದೇ ರೀತಿ ಇದೆ. ಗೊತ್ತಿಲ್ಲದವರು ಕೃತಿಚೌರ್ಯವೆಂದುಬಿಡುತ್ತಾರೆ. ನಿಮ್ಮ ಮುಂದಿನ ಕವನ ಪ್ರಕಟಿಸುವ ಮುನ್ನ ದಯವಿಟ್ಟು ಹುಷಾರಾಗಿರಿ. ಆ ಕವನವನ್ನೂ ಸಹ ನಾನೋ ಅಥವ ನನ್ನಂತಹವರು ಇನ್ನು ಯಾರೋ ಮೊದಲೇ ಪ್ರಕಟಿಸಿಬಿಟ್ಟಿರುವ ಸಾಧ್ಯತೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಪ್ರಕಟಿಸಿ. ಶುಭವಾಗಲಿ". ಸುಮಾರು ಅರ್ಧ ಗಂಟೆಯ ನಂತರದಲ್ಲಿ ನೋಡಿದರೆ ನನ್ನ ಪ್ರತಿಕ್ರಿಯೆ ಡಿಲೀಟ್ ಆಗಿತ್ತು. ನಾನೂ ನನ್ನ ಗೆಳೆಯರ ಪಟ್ಟಿಯಿಂದ ಆ ಬರಹಗಾರ್ತಿಯ ಹೆಸರನ್ನು ಡಿಲೀಟ್ ಮಾಡಿದೆ. ನಂತರದ ಬೆಳವಣಿಗೆಯಲ್ಲಿ ಆಕೆ ಕ್ಷಮೆ ಕೋರಿ ಸಂದೇಶ ಕಳುಹಿಸಿದ್ದಳು. ವಿಷಯ ಮುಕ್ತಾಯವಾಯಿತು.
     ಅಸ್ತೇಯದ -ಅಂದರೆ ಕದಿಯದಿರುವುದರ- ಬಗ್ಗೆ ಬರೆಯಬೇಕೆಂದುಕೊಂಡವನಿಗೆ ಮೇಲಿನ ವಿಷಯದಿಂದಲೇ ಬರವಣಿಗೆ ಪ್ರಾರಂಭಿಸಲು ಅನುಕೂಲವಾಯಿತು. ಕದಿಯದಿರುವುದು ಎಂಬುದರಲ್ಲೇ ಅಸ್ತೇಯದ ಅರ್ಥ ಅಡಗಿದೆ. ಸ್ವಾಮಿ ಶಿವಾನಂದರು ಹೇಳುತ್ತಾರೆ, 'ಆಸೆಯೇ ಕಳ್ಳತನದ ಮೂಲ'! ಆಸೆ ದುಃಖಕ್ಕೆ ಮೂಲವೆಂಬುದು ಬುದ್ಧವಾಣಿ. ಇದೇ ಆಸೆಯೇ ಕಳ್ಳತನವೂ ಸೇರಿದಂತೆ ಹಲವು ದುಷ್ಟಸಂಗತಿಗಳಿಗೆ ಮತ್ತು ಆ ಮೂಲಕ ನಮ್ಮ ಕಷ್ಟಪರಂಪರೆಗಳಿಗೆ ಮೂಲವೆನ್ನಬಹುದು. ಕಳ್ಳತನಕ್ಕೆ ಸಂಬಂಧಿಸಿದಂತೆ ಗಾಂಧೀಜಿಯವರ ಬಾಲ್ಯದ ಘಟನೆಗಳನ್ನು ಇಲ್ಲಿ ಉಲ್ಲೇಖಿಸಬಹುದು. ಚಿಕ್ಕಂದಿನಲ್ಲಿ ಸಿಗರೇಟು ಸೇದಿ ಅಲೆ ಅಲೆಯಾಗಿ ಹೊಗೆ ಬಿಡುವುದನ್ನು ಕಂಡು ಆಕರ್ಷಿತರಾದ ಗಾಂಧಿ ಮತ್ತು ಆತನ ಗೆಳೆಯ ಮೊದಮೊದಲು ಸೇದಿ ಬಿಸಾಕಿದ ಸಿಗರೇಟು ತುಂಡುಗಳನ್ನು ಆಯ್ದು ಸೇದಿ ಹೊಗೆ ಬಿಡಲು ಪ್ರಯತ್ನಿಸಿದ್ದರು. ಆ ತುಂಡುಗಳಿಂದ ಅವರಿಗೆ ಮಜ ಸಿಗಲಿಲ್ಲ. ಅದಕ್ಕಾಗಿ ಅವರು ಮನೆಯ ಆಳಿನ ಜೇಬಿನಿಂದ ಕೆಲವು ಕಾಸುಗಳನ್ನು ಎಗರಿಸಿ ಸಿಗರೇಟು ಸೇದಿದ್ದರು. ಆದರೆ ಸಿಗರೇಟನ್ನು ಸೇದಲು ದುಡ್ಡನ್ನು ಹಿರಿಯರಿಂದ ಕೇಳುವಂತಿಲ್ಲ, ಅವರಿಗೆ ಕಾಣುವಂತೆ ಸೇದುವಂತಿಲ್ಲ. ಸೇದುವ ಆಸೆಯನ್ನೂ ಹತ್ತಿಕ್ಕುವಂತಿಲ್ಲ. ಹೀಗಾಗಿ ಬೇಸರವೆನಿಸಿ ದತ್ತೂರದ ಬೀಜಗಳನ್ನು ತಿಂದು ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಮಾಡಿದ್ದರಂತೆ. ಆದರೆ ಧೈರ್ಯ ಸಾಲದೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಮನಸ್ಸು ಮಾಡಿಸಿದ್ದ ಆ ಸಿಗರೇಟು ಸೇವನೆಯಿಂದ ದೂರವಿರಲು ನಿರ್ಧರಿಸಿ, ತುಂಡು ಸಿಗರೇಟುಗಳನ್ನು ಆಯುವುದು, ಕಾಸು ಕದಿಯುವುದನ್ನು ಆಗಿನಿಂದ ನಿಲ್ಲಿಸಿದ್ದರು. ಧೂಮಪಾನ ಕೆಟ್ಟದ್ದು, ಅಪಾಯಕಾರಿ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು.
     ಗಾಂಧಿ ಸುಮಾರು ೧೨ ವರ್ಷದವರಿದ್ದಾಗ ಮೇಲಿನ ಘಟನೆ ನಡೆದಿದ್ದರೆ, ಇನ್ನೊಂದು ಗಂಭೀರವಾದ ಘಟನೆ ಅವರು ೧೫ ವರ್ಷದವರಿದ್ದಾಗ ನಡೆದದ್ದು. ಹಣದ ಅಗತ್ಯವಿದ್ದುದರಿಂದ ತನ್ನ ಅಣ್ಣನ ಚಿನ್ನದ ತೋಳುಬಂದಿಯಿಂದ ಒಂದು ಚೂರು ಚಿನ್ನವನ್ನು ಅವರು ಕಳ್ಳತನ ಮಾಡಿದ್ದರು. ಆದರೆ ಈ ಕಳ್ಳತನದ ಬಗ್ಗೆ ಅವರ ಮನಸ್ಸಿನಲ್ಲಿ ದೊಡ್ಡ ಆಂದೋಲನ ಏರ್ಪಟ್ಟು ಮುಂದೆ ಕದಿಯದಿರಲು ನಿರ್ಧರಿಸಿದ್ದಲ್ಲದೆ ಪಶ್ಚಾತ್ತಾಪದಿಂದ ನೊಂದು ತಂದೆಯವರಿಗೆ ಘಟನೆಯ ವಿವರಗಳಿರುವ ಪತ್ರ ಬರೆದು ತಮ್ಮ ತಪ್ಪಿಗೆ ಶಿಕ್ಷೆ ಕೊಡಬೇಕೆಂದೂ, ಇನ್ನುಮುಂದೆ ಹೀಗೆ ಮಾಡುವುದಿಲ್ಲವೆಂದೂ ತಿಳಿಸಿ ಸ್ವತಃ ತಂದೆಯವರಿಗೆ ಪತ್ರ ಕೊಟ್ಟು ತಲೆ ತಗ್ಗಿಸಿ ನಿಂತಿದ್ದರು. ಫಿಸ್ತುಲದಿಂದ ನರಳುತ್ತಿದ್ದ ತಂದೆ ಹಾಸಿಗೆಯಲ್ಲಿ ಮಲಗಿದ್ದವರು ಪತ್ರ ಓದಲು ಎದ್ದು ಕುಳಿತಿದ್ದರು. ತಂದೆಯ ಕೋಪವನ್ನು ನಿರೀಕ್ಷಿಸಿದ್ದ ಗಾಂಧಿಗೆ ಅದಕ್ಕೆ ಬದಲಾಗಿ ಅವರು ಪತ್ರ ಓದಿದ ನಂತರ ಕಣ್ಣು ಮುಚ್ಚಿ ಒಂದು ನಿಮಿಷ ಕುಳಿತಿದ್ದು, ನಂತರ ಆ ಪತ್ರವನ್ನು ಚೂರು ಚೂರಾಗಿ ಹರಿದು ಹಾಕಿದ್ದರು ಮತ್ತು ಮತ್ತೆ ಹಾಸಿಗೆಯ ಮೇಲೆ ಮಲಗಿ ಕಣ್ಣೀರು ಸುರಿಸಿದ್ದರು. ಏನೂ ಮಾತಾಡಿರಲಿಲ್ಲ. ಗಾಂಧಿ ಸಹ ಕಣ್ಣೀರು ಸುರಿಸಿದ್ದರು. ತಂದೆಯ ಕಣ್ಣೀರ ಹನಿಗಳು ಮಗನ ಹೃದಯವನ್ನು ಶುದ್ಧಿಗೊಳಿಸಿದ್ದವು. ಅಹಿಂಸೆ ಮತ್ತು ಅಸ್ತೇಯದ ಮಹತ್ವ ಗಾಂಧಿಗೆ ಮನವರಿಕೆಯಾಗಿದ್ದು ಆಗಲೇ!
     ಅಸ್ತೇಯದ ಕಲ್ಪನೆಗೆ ಬಲ ಬರಬೇಕೆಂದರೆ ಪ್ರಾಮಾಣಿಕ ರೀತಿಯಲ್ಲಿ ಗಳಿಸಿದ್ದರಲ್ಲಿ ತೃಪ್ತಿಪಟ್ಟುಕೊಳ್ಳಬೇಕು. ನಮಗೆ ಇಲ್ಲದುದು ಅವರಲ್ಲಿ ಇದೆ ಎಂಬ ಬಗ್ಗೆಯೇ ಮನಸ್ಸನ್ನು ಹರಿಬಿಟ್ಟರೆ, ನಮ್ಮದಲ್ಲದುದನ್ನು ತೆಗೆದುಕೊಳ್ಳುವುದನ್ನು ಮನಸ್ಸು ಸ್ವೀಕರಿಸುತ್ತದೆ ಮತ್ತು ಅದು ಕಳ್ಳತನಕ್ಕೆ ಎಡೆ ಮಾಡಿಕೊಡುತ್ತದೆ. 'ಅವನಿಗೆ ಅಷ್ಟೊಂದು ಇದೆ, ಅದರಲ್ಲಿ ಸ್ವಲ್ಪ ತೆಗೆದುಕೊಂಡರೆ ಅವನಿಗೇನೂ ನಷ್ಟವಾಗುವುದಿಲ್ಲ'ವೆಂದುಕೊಂಡರೆ, ನಾವು ನಮಗೇ ಕದಿಯಲು ಅನುಮತಿಸಿದಂತೆ ಆಗುತ್ತದೆ. ಕ್ರಮೇಣ ಇದು ಅಭ್ಯಾಸವಾಗಿ ಇಂತಹ ಸಂಗತಿಗಳು ತಪ್ಪು ಎಂದು ಅನ್ನಿಸುವುದೇ ಇಲ್ಲ.  ನಾವು ಕೇಳಿರುವ ಹಾಸ್ಯ ಚಟಾಕಿಯೊಂದನ್ನು ಉದಾಹರಿಸುವೆ. ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಹುಡುಗನೊಬ್ಬ ಸಹಪಾಠಿಯೊಬ್ಬನ ನೋಟ್ ಪುಸ್ತಕ ಕದ್ದಿದ್ದುದನ್ನು ಗಮನಿಸಿದ ತಾಯಿ ಮಗನನ್ನು ಗದರಿಸಿದ್ದಲ್ಲದೆ ತಂದೆಯ ಗಮನಕ್ಕೂ ತರುತ್ತಾಳೆ. ಆ ತಂದೆ ಹೇಳುತ್ತಾನೆ, "ಆ ಪುಸ್ತಕ ಕದಿಯುವುದಕ್ಕೆ ಏಕೆ ಹೋದೆ? ಕಳ್ಳತನ ಮಾಡುವುದು ತಪ್ಪು ಮಗು. ನನಗೇ ಹೇಳಿದ್ದರೆ ನಾನೇ ಆಫೀಸಿನಿಂದ ಬೇಕಾದಷ್ಟು ಕಾಗದ ತಂದುಕೊಡುತ್ತಿರಲಿಲ್ಲವೇ?" ಇಂತಹುದನ್ನು ತಪ್ಪು ಎಂದು ಭಾವಿಸದಷ್ಟು ನಮ್ಮ ಮನಸ್ಸು ತಿದ್ದಲ್ಪಟ್ಟಿರುತ್ತದೆ.
     ಅಗತ್ಯಕ್ಕಿಂತ ಹೆಚ್ಚು ಹೊಂದುವುದೂ, ಅದು ಆಹಾರವಾಗಿರಬಹುದು, ಹಣವಾಗಿರಬಹುದು, ಆಸ್ತಿಯಾಗಿರಬಹುದು, ಒಂದು ರೀತಿಯ ಸ್ತೇಯವಾಗುತ್ತದೆ ಎಂಬುದು ಜ್ಞಾನಿಗಳ ಮಾತು. ನಮಗೆ, ನಮ್ಮ ಕುಟುಂಬದವರಿಗೆ ಎಷ್ಟು ಬೇಕು, ಏನು ಬೇಕು ಎಂದು ನಿರ್ಧರಿಸಿ ಅದಕ್ಕೆ ತಕ್ಕಷ್ಟು ಹೊಂದುವುದು ವಿವೇಕವಾದುದು ಎಂಬುದೂ ಅವರದೇ ವಿವೇಕದ ನುಡಿಗಳು. ಕಲಿತ ಜ್ಞಾನವನ್ನು ಇತರರಿಗೆ ಹಂಚದಿದ್ದರೆ ಅದೂ ಕಳ್ಳತನದಂತೆ ಎಂದು ಶತಾಯು ಪಂ. ಸುಧಾಕರ ಚತುರ್ವೇದಿಯವರು ಹೇಳುತ್ತಿರುತ್ತಾರೆ. ಇಂತಹ ಮಾತುಗಳು ರುಚಿಸುವುದು ಕಷ್ಟವೇ. ನಮ್ಮ ನಾಯಕರನ್ನೇ ನೋಡಿ, ಕೋಟಿ ಕೋಟಿ ಸಾರ್ವಜನಿಕರ ಹಣವನ್ನು ಬಾಚಿಕೊಂಡರೂ ಅವರುಗಳಿಗೆ ತೃಪ್ತಿ ಸಿಗುತ್ತದೆಯೇ? ಅಂತಹ ನುಂಗಣ್ಣರಿಗೆ ಅಸ್ತೇಯದ ಪಾಠ ಹೇಳಿದರೆ ಕೇಳುತ್ತಾರೆಯೇ? ಹೋಗಲಿ ಬಿಡಿ, ಏಕೆಂದರೆ ಅಂತಹವರನ್ನು ನಮ್ಮ ಪ್ರತಿನಿಧಿಗಳೆಂದು ಆರಿಸಿರುವವರು ನಾವೇ ಅಲ್ಲವೇ?
     ಕದಿಯದಿರುವುದು ಎಂಬುದು ಅತ್ಯಂತ ಸರಳ, ಆದರೆ ಪಾಲಿಸಲು ಬಹಳ ಕಷ್ಟವಾದ ಜೀವನದ ನಿಯಮ. ಪಾಲಿಸುವವರು ಶ್ರೇಷ್ಠರು, ಸಾಧಕರೇ ಸರಿ. ಅಸ್ತೇಯದಲ್ಲಿ ಮೂರು ವಿಧಗಳಿವೆ - ಕಾಯಾ, ವಾಚಾ, ಮನಸಾ. ಕಾಯಾ ಅಥವ ಭೌತಿಕ ಅಸ್ತೇಯವೆಂದರೆ, ನಮ್ಮದಲ್ಲದ ವಸ್ತುವನ್ನು ಬಲವಂತವಾಗಿ ಅಥವ ಮೋಸದಿಂದ ಅಥವ ಕಳ್ಳತನದಿಂದ ಅದರ ಮಾಲಿಕರ ಅನುಮತಿಲ್ಲದೆ ಹೊಂದದಿರುವುದು. ವಾಚಾ ಅಸ್ತೇಯವೆಂದರೆ, ಇನ್ನೊಬರಿಗೆ ಸೇರಬೇಕಾದ ಗೌರವ, ವೈಭವ, ಗುಣಗಳನ್ನು ಮಾತಿನಲ್ಲಾದರೂ ಹೊಂದದಿರುವುದು, ಇತರರ ಗುಣಗಳ ಬಗ್ಗೆ ಹಗುರವಾಗಿ ಮಾತನಾಡದಿರುವುದು ಸೇರುತ್ತದೆ. ಮಾನಸಿಕ ಅಥವ ಬೌದ್ಧಿಕ ಆಸ್ತೇಯ ಕ್ಲಿಷ್ಟಕರವಾದುದು. 'ಅವನಿಗೆ ಅಷ್ಟೊಂದು ಹಣವಿದೆ. ಅದರಲ್ಲಿ ಸ್ವಲ್ಪವಾದರೂ ನನಗೆ ಸಿಕ್ಕಿದ್ದರೆ' ಎಂದು ಮನಸ್ಸಿನಲ್ಲೂ ಯೋಚಿಸದಿರುವುದು. ಇದರ ಅರ್ಥ, ಸಂಪತ್ತು ಹೊಂದುವುದನ್ನು ಬಯಸಬಾರದೆಂದಲ್ಲ, ಅದಕ್ಕಾಗಿ ಶ್ರಮಿಸಬೇಕಷ್ಟೆ. 
     ನಾವು, ನೀವು ಸಾಮಾನ್ಯವಾಗಿ ಕಾಣಬಹುದಾದ ಪ್ರಸಂಗದ ಬಗ್ಗೆ ಗಮನ ಹರಿಸೋಣ. ಒಂದು ಡಿಪಾರ್ಟ್‌ಮೆಂಟಲ್ ಸ್ಟೋರಿಗೆ ಖರೀದಿಗೆ ಹೋಗುತ್ತೇವೆಂದುಕೊಳ್ಳೋಣ. ಒಂದು ವಸ್ತುವನ್ನು ಇತರರಿಗೆ ಕಾಣದಂತೆ ಕದ್ದು ಜೇಬಿನಲ್ಲೋ, ಮತ್ತೆಲ್ಲೋ ಇಟ್ಟುಕೊಂಡು ಅದಕ್ಕೆ ದುಡ್ಡು ಕೊಡದೆ ಹೊರಬಂದರೆ ಅದು ಕಳ್ಳತನವೆಂದು ನಮಗೇ ಗೊತ್ತಾಗುತ್ತದೆ. ಆದರೆ ಸಾಮಗ್ರಿಗಳನ್ನು ತೆಗೆದುಕೊಂಡು ಬಿಲ್ಲು ಮಾಡಿಸುವ ಸಂದರ್ಭದಲ್ಲಿ ಅಂಗಡಿಯವರು ಯಾವುದಾದರೂ ಒಂದು ವಸ್ತುವಿಗೆ ಬಿಲ್ಲು ಮಾಡುವುದನ್ನು ಮರೆತನೆಂದು ಇಟ್ಟುಕೊಳ್ಳಿ. ನಮಗೆ ಅದು ಗೊತ್ತಾದರೂ ಸುಮ್ಮನಿದ್ದರೆ, ನಾವು ಕದ್ದು ತೆಗೆದುಕೊಂಡು ಹೋಗುವ ವಸ್ತುವಿಗೂ ಇದಕ್ಕೂ ವ್ಯತ್ಯಾಸವಿದೆಯೇ? ಈ ಪ್ರಸಂಗದಲ್ಲಿ ತಪ್ಪು ನಮ್ಮದಲ್ಲ, ಆ ಅಂಗಡಿಯವನದು ಎಂದುಕೊಂಡುಬಿಡುತ್ತೇವೆ. ತುಂಬಾ ರೇಟು ಹಾಕುತ್ತಾನೆ, ಇದರಿಂದ ಅವನಿಗೇನೂ ನಷ್ಟವಾಗುವುದಿಲ್ಲವೆಂದು ಸಮಾಧಾನ ಮಾಡಿಕೊಂಡುಬಿಡುತ್ತೇವೆ. ಅಂಗಡಿಯಿಂದ ವಸ್ತುವನ್ನು ಕದಿಯದೆ ಇರುವುದಕ್ಕೆ ಎರಡು ಕಾರಣಗಳಿರುತ್ತವೆ: ಒಂದು, ಸಿಕ್ಕಿಹಾಕಿಕೊಂಡರೆ ಮರ್ಯಾದೆ ಹೋಗುತ್ತದೆ ಎಂಬ ಭಯ ಮತ್ತು ಇನ್ನೊಂದು, ಕದಿಯುವುದು ತಪ್ಪು ಎಂಬ ಅರಿವು. ಕದಿಯುವುದು ತಪ್ಪು ಎಂಬ ಮನೋಭಾವ ಇದ್ದರೆ ಬಿಲ್ಲು ಹಾಕದೆ ಇರುವ ವಸ್ತುವಿನ ಬಗ್ಗೆ ಅಂಗಡಿಯವರ ಗಮನ ಸೆಳೆಯುತ್ತೇವೆ. ಇಲ್ಲದಿದ್ದರೆ ಇಲ್ಲ. ಚಿಲ್ಲರೆ ವಾಪಸು ಕೊಡುವಾಗ ಕೊಡಬೇಕಾದ ಮೊತ್ತಕ್ಕಿಂತ ಹೆಚ್ಚು ಕೊಟ್ಟರೆ, ಹೆಚ್ಚಾಗಿ ಕೊಟ್ಟುದನ್ನು ಇಟ್ಟುಕೊಳ್ಳುತ್ತೇವೆಯೋ ಅಥವ ವಾಪಸು ಕೊಡುತ್ತೇವೆಯೋ ಎಂಬುದಕ್ಕೂ ಇದೇ ಮಾನದಂಡ ಅನ್ವಯಿಸುತ್ತದೆ. ಕದಿಯುವುದು ತಪ್ಪು ಎಂಬುದನ್ನು ಅರಿತರೆ ನಾವು ಕದಿಯುವುದಿಲ್ಲ. ಹಾಗೆಯೇ ಕದಿಯುವುದರಿಂದ ನಮ್ಮ ಮತ್ತು ಇತರರ ಅಶಾಂತಿಗೆ, ತಳಮಳಕ್ಕೆ, ಅಸಮಾಧಾನಗಳಿಗೆ ಕಾರಣವಾಗುತ್ತದೆ ಎಂದು ಭಾವಿಸುವುದಾದರೆ ಆಗಲೂ ಸಹ ಕದಿಯುವುದಿಲ್ಲ.
     ಸತ್ಯ, ಅಪರಿಗ್ರಹ ಮತ್ತು ಅಸ್ತೇಯ ಅವಿಭಾಜ್ಯ ಸಂಗತಿಗಳು. ಅಕ್ರಮ ಮತ್ತು ಅನೈತಿಕ ಸಂಬಂಧಗಳು, ಪತ್ನಿ/ಪತಿಗೆ ಗೊತ್ತಾಗುವಂತೆ ಆಗಲಿ, ಗೊತ್ತಾಗದಿರುವಂತೆ ಆಗಲಿ ಅದು ಕಳ್ಳತನವೇ ಸರಿ. ಪತಿ/ಪತ್ನಿಗೆ ಗೊತ್ತಾಗದಂತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದು, ನಾನು ಯಾರಿಗೂ ಮೋಸ ಮಾಡುತ್ತಿಲ್ಲವೆಂದರೆ ಅದನ್ನು ಒಪ್ಪಲಾಗುವುದಿಲ್ಲ. ಅಕ್ರಮ ಸಂಬಂಧದ ಬಗ್ಗೆ ಸಂಗಾತಿಗೆ ತಿಳಿದಾಗ ಅವರು ಮೊದಲಿನಂತೆ ವಿಶ್ವಾಸ/ಪ್ರೀತಿ ತೋರಿಸುತ್ತಾರೆಯೇ? ಇಲ್ಲವೆಂದಾದರೆ, ಅವರು ಅಕ್ರಮ ಸಂಬಂಧದ ಬಗ್ಗೆ ತಿಳಿಯದೆ ಇದ್ದಾಗ ತೋರಿಸುವ ಪ್ರ್ರೀತಿಯನ್ನು ಕಳ್ಳತನದಿಂದ, ಮೋಸದಿಂದ ಪಡೆಯುತ್ತಿದ್ದರು ಎಂದು ಆಗುವುದಿಲ್ಲವೇ? ಅಕ್ರಮ ಸಂಬಂಧವಿಲ್ಲದಿದ್ದರೂ ಅಕ್ರಮ ಸಂಬಂಧದ ಆರೋಪ ಮಾಡಿ ಒಬ್ಬರು ಇನ್ನೊಬ್ಬರ ನೆಮ್ಮದಿಯನ್ನು ಕದಿಯವುದನ್ನೂ ಕಾಣುತ್ತಿರುತ್ತೇವೆ, ಅಷ್ಟೇ ಏಕೆ, ಜೀವನವನ್ನೇ ಹಾಳು ಮಾಡುವುದನ್ನೂ (ದರೋಡೆ ಮಾಡುವುದು ಅನ್ನಬಹುದೇ?) ಕಾಣುತ್ತಿರುತ್ತೇವೆ.
     'ನಾನು ಏನು ಪಡೆಯಬಲ್ಲೆ' ಮತ್ತು 'ನಾನು ಏನು ಕೊಡಬಲ್ಲೆ' ಎಂಬುದರಲ್ಲಿನ ಮನೋಭಾವದ ವ್ಯತ್ಯಾಸ ಅಗಾಧವಾಗಿದೆ. 'ನಾನು ಏನು ಪಡೆಯಬಲ್ಲೆ' ಎಂಬುದರಲ್ಲಿ ಬಯಕೆಯ, ಕೊರತೆಯ ಭಾವ ಮತ್ತು ಕೂಡಿಡುವ ಮನಸ್ಥಿತಿ ಇರುತ್ತದೆ. 'ನಾನು ಏನು ಕೊಡಬಲ್ಲೆ' ಎಂಬುದರಲ್ಲಿ ಪ್ರೀತಿಯ ನೆರಳಿರುತ್ತದೆ. ಪ್ರೀತಿಯನ್ನು ನಮ್ಮ ದೇಹಕ್ಕೆ, ಸ್ವಂತಕ್ಕೆ, ಇತರರಿಗೆ ಮತ್ತು ಪ್ರಕೃತಿಗೆ ಕೊಡುವ, ಹಂಚುವ ಮನಸ್ಥಿತಿ ಇರುತ್ತದೆ. ಒಂದು ಗಾದೆ ಇದೆ, "ನಾವು ಕೊಟ್ಟರೆ ನಮಗೆ ಸಿಗುತ್ತದೆ". ಅಸ್ತೇಯ ಅನಗತ್ಯವಾಗಿ, ನಮ್ಮದಲ್ಲದ್ದನ್ನು ಪಡೆಯುವುದನ್ನು ತಡೆಯುತ್ತದೆ. ಇದು ಇನ್ನೊಂದು ರೀತಿಯಲ್ಲಿ ಸುತ್ತಲಿನವರಿಗೆ, ಸಮಾಜಕ್ಕೆ ಪ್ರೀತಿಯನ್ನು ತೋರಿಸುವ ಅದ್ಭುತ ನಡೆಯಾಗುತ್ತದೆ.
     ಉಳ್ಳವರು ಮಾಡುವ ಕಳ್ಳತನ ಕ್ಷಮಾರ್ಹವಲ್ಲ. ಆದರೆ ಹಸಿವಿನಿಂದ ನರಳುತ್ತಿರುವವರು ಬದುಕಲು ಆಹಾರ ಕಳವು ಮಾಡಿದರೆ ತಪ್ಪಾಗುವುದೆ? ಈ ವಿಷಯದಲ್ಲಿ ಅವರ ತಪ್ಪಿಗಿಂತ ಸಮಾಜದ ತಪ್ಪೇ ಹೆಚ್ಚು. ಹೀನರನ್ನು, ದೀನರನ್ನು ಪ್ರೀತಿಯಿಂದ ಕಾಣಬೇಕು, ಅವರನ್ನು ಮೇಲೆತ್ತಬೇಕು ಎಂಬುದು ಪ್ರತಿ ಧರ್ಮದ ಸಾರ. ಹಸಿದವರಿಗೆ ಅನ್ನವಿಕ್ಕುವುದು ಅತ್ಯಂತ ದೊಡ್ಡ ಧರ್ಮ. ಅವರು ಇತರರಂತೆ ಬಾಳಲು ಅನುಕೂಲ ಮಾಡಿಕೊಡುವುದು ಅದಕ್ಕಿಂತ ಹೆಚ್ಚಿನ ಧರ್ಮ. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಹಸಿವಿನಿಂದ ಬಳಲಿ ಆಹಾರ ಕದಿಯುವ ಪ್ರಮೇಯ ಬರಲಾರದು. 
     ನಮ್ಮ ಬಗ್ಗೆ ನಾವೇ ಮೋಸ ಮಾಡಿಕೊಳ್ಳುವುದೂ ಇದೆ. ನಾಲಿಗೆಗೆ ರುಚಿ ಎಂದು ತಿನ್ನಬಾರದುದನ್ನು ತಿಂದರೆ, ಚಪಲಕ್ಕಾಗಿ ಮಾದಕ ದ್ರವ್ಯಗಳನ್ನು ಸೇವಿಸಿದರೆ, ದೇಹ ಸುಸ್ಥಿತಿಯಲ್ಲಿರಲು ವ್ಯಾಯಾಮ ಮಾಡದಿದ್ದರೆ ನಾವು ನಮ್ಮದೇ ದೇಹದ ಆರೋಗ್ಯದ ಕಳವು ಮಾಡಿದಂತೆ ಆಗುವುದಿಲ್ಲವೇ? ಕೇವಲ ಕಳವು ಅಲ್ಲ, ದೇಹದ ವಿರುದ್ಧ ಹಿಂಸೆಯನ್ನೂ ಕೊಟ್ಟಂತೆ ಆಗುತ್ತದೆ. ನಾವು ಯಾರ ವಿರುದ್ಧವೋ ಕಿರುಚಾಡಿದರೆ, ನಿಂದಿಸಿದರೆ ನಮ್ಮದೇ ಮನಸ್ಸಿನ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದಲ್ಲದೆ, ಇತರರಲ್ಲೂ ಅಶಾಂತಿ ಉಂಟುಮಾಡಿ ಅವರ ಸಮಾಧಾನದ ಕಳುವನ್ನೂ ಮಾಡುತ್ತೇವೆ. ಆತ್ಮಾವಲೋಕನ ಮಾಡಿಕೊಂಡಾಗ ನನ್ನನ್ನೂ ಸೇರಿಸಿ ನಾವುಗಳು ಎಷ್ಟರಮಟ್ಟಿಗೆ ಅಸ್ತೇಯದ ಪಾಲನೆ ಮಾಡುತ್ತಿದ್ದೇವೆ ಎಂಬುದು ನಮಗೇ ಗೊತ್ತಾಗುತ್ತದೆ. ನಾವು ಏನು ಮಾಡಬಹುದು ಎಂಬುದು ಸಹ ನಮಗೇ ತಿಳಿಯುತ್ತದೆ. ಏನು ಮಾಡಬೇಕೆಂದು ನಾವೇ ನಿರ್ಧರಿಸಿಕೊಳ್ಳೋಣ. ಕದಿಯದಿರುವುದು ಸುಲಭವಲ್ಲ ಅಲ್ಲವೇ? 
-ಕ.ವೆಂ.ನಾಗರಾಜ್.
**************
[ಜನಮಿತ್ರದಲ್ಲಿನ  'ಚಿಂತನ' ಅಂಕಣದಲ್ಲಿ 21-04-2014ರಲ್ಲಿ ಪ್ರಕಟಿತ]

ಶುಕ್ರವಾರ, ಏಪ್ರಿಲ್ 18, 2014

ನಿಜರಸಿಕರಾಗೋಣ!

      ರಸಿಕರಾಗೋಣ!
      ಈ ಮಾತು ಹೇಳಿದರೆ ಈ ವಯಸ್ಸಿನಲ್ಲಿ ಇದೇನು ಹೇಳುತ್ತಿದ್ದಾನೆ ಎಂದು ಅನ್ನಿಸಬಹುದು. ಹೀಗೆ ಅನ್ನಿಸುವುದು ಸಹಜವೇ ಸರಿ. ಏಕೆಂದರೆ ರಸಿಕತೆ ಎಂದರೆ ವಿಲಾಸಪ್ರಿಯತೆ, ಸರಸವಾಗಿರುವಿಕೆ ಎಂಬ ಅರ್ಥವಿದೆ. ರಸಿಕನೆಂದರೆ ವಿಷಯಲಂಪಟನೆಂದೇ ತಿಳಿಯುವವರು ಹೆಚ್ಚು.  ೯೦ ವರ್ಷದ ಮುದುಕ ೧೮ ವರ್ಷದ ಹುಡುಗಿಯನ್ನು ಮದುವೆಯಾಗುವ ಸುದ್ದಿ, ಕಪಟ ಸಂನ್ಯಾಸಿಗಳ ಕುರಿತು ಅಗತ್ಯಕ್ಕಿಂತ ಹೆಚ್ಚು ಅಬ್ಬರದ ಕುಪ್ರಚಾರ, ಅನ್ಶೆತಿಕ ಸಂಬಂಧಗಳ ವರ್ಣರಂಜಿತ, ವೈಭವೀಕರಿಸಿದ ಸುದ್ದಿಗಳು ದೃಷ್ಯಮಾಧ್ಯಮಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ. ವಿಷಯಲಂಪಟತೆಯನ್ನು ಕೃಷ್ಣಲೀಲೆ ಎನ್ನುವುದು, ವಿಷಯಲಂಪಟರನ್ನು 'ಕೃಷ್ಣಪರಮಾತ್ಮ' ಎಂದು ವ್ಯಂಗ್ಯವಾಗಿ ಹೋಲಿಸುವುದು, ಇತ್ಯಾದಿಗಳು 'ರಸಿಕತೆ' ಎಂಬ ಪದ ಈಗ ಯಾವ ಅರ್ಥ ಪಡೆದುಕೊಂಡಿದೆಯೆಂಬುದರ ದ್ಯೋತಕ. ಧನಾತ್ಮಕ ವಿಷಯಗಳಿಗೆ, ಸುಕೃತಿಗಳಿಗೆ ಪ್ರಾಧಾನ್ಯತೆ ಸಿಗದಿರುವುದು, ಕೇವಲ ಋಣಾತ್ಮಕ ಸಂಗತಿಗಳಿಗೆ, ವಿಕೃತಿಗಳಿಗೆ ಸಿಗಬೇಕಾದಕ್ಕಿಂತ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿರುವುದರಿಂದ 'ರಸಿಕತೆ'ಯ ನಿಜವಾದ ಅರ್ಥ ಕಣ್ಮರೆಯಾಗಿದೆಯೇನೋ ಎಂದು ಭಾಸವಾಗುತ್ತಿದೆ. ಈ ಕಾರಣದಿಂದ ರಸಿಕತೆಯ ಕೆಲವು ಮಗ್ಗಲುಗಳನ್ನು ವಿವೇಚಿಸುವುದು ಈ ಬರಹದ ಉದ್ದೇಶ.
     ರಸವೆಂದರೆ 'ಸಾರ', ರಸಿಕನೆಂದರೆ ರಸಾಸ್ವಾದ ಮಾಡುವವನು ಎಂದಷ್ಟೇ ಅರ್ಥ. ರಸಿಕತೆಯೆಂದರೆ ಅದರಲ್ಲಿ ನಿಜವಾದ ಸುಖ, ಸಂತೋಷ ಸಿಗುವಂತಿರಬೇಕು. ಇಲ್ಲದಿದ್ದರೆ ಅದು ನ್ಶೆಜ ರಸಿಕತೆಯೆನಿಸಲಾರದು. ಚಾಕೊಲೇಟು, ಪೆಪ್ಪರಮೆಂಟುಗಳನ್ನು ಸವಿಯುವ ಮಕ್ಕಳನ್ನು ಗಮನಿಸಿದ್ದೀರಾ? ಎಲ್ಲಿ ಚಾಕೊಲೇಟು ಬೇಗ ಮುಗಿದು ಹೋಗುವುದೋ ಎಂದು ನಿಧಾನವಾಗಿ ರಸವನ್ನು ಚಪ್ಪರಿಸುತ್ತಾ ಆಗಾಗ್ಗೆ ಅದನ್ನು ಬಾಯಿಂದ ಹೊರತೆಗೆದು ನೋಡಿ ಖುಷಿಪಡುವ ಮಕ್ಕಳನ್ನು 'ಕೈ, ಬಾಯಿ ಎಲ್ಲವನ್ನೂ ಅಂಟು ಮಾಡಿಕೊಳ್ಳಬೇಡ'ವೆಂದು ದೊಡ್ಡವರು ಗದರಿಸುತ್ತಾರಲ್ಲವೇ? ಆದರೆ, ಯಾವುದನ್ನೂ ಲೆಕ್ಕಿಸದ ಮಗು ತನ್ನ ಪಾಡಿಗೆ ತಾನು ರಸಾಸ್ವಾದ ಮಾಡುತ್ತಿರುತ್ತದೆ, ಆನಂದಿಸುತ್ತಿರುತ್ತದೆ. ತನಗೆ ಖುಷಿ ಕೊಡುವ ಚಾಕೋಲೇಟನ್ನು ತೆಗೆತೆಗದು ನೋಡಿ ಕಣ್ತುಂಬಿಕೊಳ್ಳುತ್ತಿರುತ್ತದೆ. ಅದು ರಸಿಕತೆ! ಎಳೆಯ ಕಂದಮ್ಮಗಳನ್ನು ಆಡಿಸಿದಾಗ ಅವು ಬೊಚ್ಚುಬಾಯಿ ಬಿಟ್ಟು ಕೇಕೆ ಹಾಕಿ ನಗುವುದರಲ್ಲಿ ರಸಿಕತೆಯಿದೆ, ಏಕೆಂದರೆ ಅಲ್ಲಿ ಕೃತಕತೆಯ ಸೋಂಕಿಲ್ಲ. ನಾವೂ ಅಷ್ಟೆ, ರುಚಿರುಚಿಯಾದ ಪದಾರ್ಥಗಳನ್ನು ಗಬಗಬನೆ ತಿನ್ನುವುದಿಲ್ಲ, ಕುಡಿಯುವುದಿಲ್ಲ. ಅದರ ಸವಿಯನ್ನು ಅನುಭವಿಸುತ್ತಾ ಸ್ವಲ್ಪ ಸ್ವಲ್ಪವಾಗಿ ತಿನ್ನುತ್ತೇವಲ್ಲಾ, ಕುಡಿಯುತ್ತೇವಲ್ಲಾ, ಅದರಲ್ಲಿ ರಸಿಕತೆಯಿದೆ. ಟಿವಿಯನ್ನು ನೋಡುತ್ತಾ ರುಚಿಯನ್ನು ಅನುಭವಿಸದೆ ತಿಂದು, ಕುಡಿದು ಮಾಡುವವರು ನೈಜಸ್ವಾದವನ್ನು ಅನುಭವಿಸಲಾರರು. ನ್ಶೆಜಸವಿಯನ್ನು ಸವಿಯೋಣ, ನಿಜರಸಿಕರಾಗೋಣ.
     ರಸಿಕತೆಯಲ್ಲಿ ತನ್ಮಯತೆಯಿದೆ. ಧಾರ್ಮಿಕ ಸಮಾರಂಭದಲ್ಲಿ, ದೇವಸ್ಥಾನಗಳಲ್ಲಿ ಸಾಮೂಹಿಕ ಭಜನೆ ನಡೆಯುವ ಸಂದರ್ಭದಲ್ಲಿ ಕೆಲವರು ತಮ್ಮನ್ನೇ ಮರೆತು ತನ್ಮಯರಾಗಿ ಭಾವಪರವಶತೆಯಿಂದ, ಆನಂದಾನುಭವ ಹೊಂದುವುದನ್ನು  ಗಮನಿಸಿರಬಹುದು, ಆನಂದಾನುಭವ ನೀಡುವ ಆ ತನ್ಮಯತೆಯೇ ರಸಿಕತೆ! ಮನಸ್ಸಿಗೆ ಹಿತವಾಗುವ ಸಂಗೀತ, ಕಾರ್ಯಕ್ರಮಗಳೂ ಸಹ ಇಂತಹ ರಸಾನುಭೂತಿಗೆ ನೆರವಾಗುತ್ತವೆ. ಒಬ್ಬ ಚಿತ್ರಕಾರ, ಒಬ್ಬ ಬರಹಗಾರ, ಒಬ್ಬ ಶಿಲ್ಪಿ ತಮ್ಮ ಕೃತಿಯನ್ನು ಶ್ರದ್ಧೆಯಿಂದ ಪೂರ್ಣಗೊಳಿಸಿದ ನಂತರ ಅದನ್ನು ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಳ್ಳುತ್ತಾರಲ್ಲಾ, ಆನಂದಿಸುತ್ತಾರಲ್ಲಾ, ಅದು ರಸಿಕತೆ! ಹೊಟ್ಟೆಪಾಡಿಗೆ ಮಾಡುವ ಕೆಲಸದಲ್ಲೂ ಆನಂದ ಕಾಣುವ ರಸಿಕರಿದ್ದಾರೆ. ಅಂತಹ ರಸಿಕರೇ ತಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ, ಚೊಕ್ಕವಾಗಿ ಮಾಡುವವರೆಂದರೆ ಅದರಲ್ಲಿ ಅತಿಶಯೋಕ್ತಿಲ್ಲ. ಇಂತಹವರಿಂದಲೇ ಏನನ್ನಾದರೂ ಸಾಧಿಸಲು ಸಾಧ್ಯ. ಸ್ವಾಮಿ ವಿವೇಕಾನಂದರ ಈ ಮಾತು ಮನನೀಯ: "ಒಂದು ವಿಚಾರವನ್ನು ತೆಗೆದುಕೊಳ್ಳಿ. ಆ ವಿಚಾರವನ್ನು ನಿಮ್ಮ ಜೀವನವನ್ನಾಗಿಸಿಕೊಳ್ಳಿ, ಅದರ ಬಗ್ಗೆ ಕನಸು ಕಾಣಿ, ಅದರಲ್ಲೇ ಜೀವಿಸಿ. ನಿಮ್ಮ ಮೆದುಳು, ಸ್ನಾಯು, ನರಮಂಡಲ ಮತ್ತು ದೇಹದ ಎಲ್ಲಾ ಭಾಗಗಳೂ ಆ ವಿಚಾರದಲ್ಲೇ ಮುಳುಗಿರಲಿ. ಇತರ ಎಲ್ಲಾ ವಿಚಾರಗಳನ್ನೂ ಬದಿಗೆ ಸರಿಸಿ. ಅದು ಯಶಸ್ಸಿಗೆ ದಾರಿ. ದೊಡ್ಡ ಸಾಧಕರುಗಳು ಸಿದ್ಧಗೊಳ್ಳುವುದು ಹೀಗೆಯೇ." ಶ್ರದ್ಧಾಪೂರ್ವಕವಾಗಿ ಮನವೊಪ್ಪುವ ಕೆಲಸಗಳಲ್ಲಿ ತೊಡಗಿಕೊಂಡು, ಅದರಿಂದ ಸಿಗುವ ಹಿತಾನಂದವನ್ನು ಅನುಭವಿಸುವ ರಸಿಕರಾಗೋಣ.
ದೇಹ ದೇಹದ ಬೆಸುಗೆಯೆನಿಸುವುದು ಕಾಮ
ಹೃದಯಗಳ ಮಿಲನದಿಂದರಳುವುದು ಪ್ರೇಮ |
ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ
ಅಂತರಂಗದ ಸುಖವೆ ಸುಖವು ಮೂಢ ||
     ರಸಿಕತೆಯೆಂದರೆ ಪ್ರೀತಿಸುವುದು, ಅದರಲ್ಲಿ ಪೂರ್ಣ ಸಂತೋಷ ಪಡೆಯುವುದು. ಕಳ್ಳತನದ ಕಾಮದಾಟವನ್ನು ರಸಿಕತೆಯೆನ್ನುವುದಾದರೆ ಅದು ಆ ಪದಕ್ಕೆ ಮಾಡುವ ಅಪಚಾರವೇ ಸರಿ. ಏಕೆಂದರೆ ಅಂತಹ ಕ್ರಿಯೆಯಲ್ಲಿ ಪೂರ್ಣ ಸಂತೋಷ ಸಿಗುವುದೆಂಬುದು ಭ್ರಮೆ. ಅಂತಹ ಕ್ರಿಯೆಯಲ್ಲಿ ಅಳುಕಿದೆ, ಆತಂಕವಿದೆ, ಭಯವಿದೆ. ಇನ್ನು ಆನಂದಕ್ಕೆ ಅರ್ಥವೆಲ್ಲಿ? ಯಾವ ಕ್ರಿಯೆಯಿಂದ ಅಳುಕಿಲ್ಲದ, ಆತಂಕವಿಲ್ಲದ ಆನಂದ ದೊರೆಯುವುದೋ ಅದನ್ನು ಮಾತ್ರ ರಸಿಕತೆಯೆನ್ನಬಹುದು. ನಿಜವಾದ ರಸಿಕ ಬಲವಂತ ಮಾಡಲಾರ. ರಾವಣ ಸಹ ಸಮಾಗಮಕ್ಕಾಗಿ ಸೀತೆಯ ಒಪ್ಪಿಗೆ ಪಡೆಯಲು ಪ್ರಯತ್ನಿಸಿದನೇ ಹೊರತು ಬಲಾತ್ಕಾರ ಮಾಡಲಿಲ್ಲ. ಪ್ರೀತಿಯೆಂದರೆ ಕೇವಲ ಗಂಡು-ಹೆಣ್ಣಿನ ಮಿಲನಕ್ಕೆ ಸೀಮಿತವಾಗಿರದೆ, ಅದಕ್ಕೂ ಮೀರಿರಬೇಕು.  ಗಂಡು-ಹೆಣ್ಣಿನ ಮಿಲನ ಸಹ ಪ್ರೀತಿಪೂರ್ವಕವಾಗಿರಬೇಕು. ಇಲ್ಲದಿದ್ದರೆ ಅದನ್ನು ಕಾಮವೆಂದು ಮಾತ್ರ ಹೇಳಬಹುದು. ಪಾಶ್ಚಾತ್ಯರಲ್ಲಿ ಕಂಡು ಬರುವ ಮುಕ್ತಕಾಮವನ್ನು, ಗುತ್ತಿಗೆಯ ಪ್ರೇಮದಾಟಗಳು, ಕರಾರಿನ ವಿವಾಹಗಳು, ಇತ್ಯಾದಿಗಳನ್ನು  ಸ್ವೇಚ್ಛಾಚಾರದ ಸಾಲಿಗೆ ಸೇರಿಸಬಹುದೇ ಹೊರತು ರಸಿಕತೆಯೆನ್ನಲಾಗದು. ಅಲ್ಲಿ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಕ್ರಿಯೆಯಿದೆಯೇ ಹೊರತು ಪ್ರೀತಿಯ ಅಂಶ ಕಾಣಲಾಗದು. ನಿಜರಸಿಕರಾಗೋಣ.
     ತಾಯಿ-ಮಕ್ಕಳ ಪ್ರೀತಿ, ಮಕ್ಕಳನ್ನು ಮುದ್ದು ಮಾಡುವ ಹಿರಿಯರ ಪ್ರೀತಿ, ಮಕ್ಕಳು ದೊಡ್ಡವರನ್ನು ಪ್ರೀತಿಸುವ, ಗೌರವಿಸುವ ರೀತಿಯೂ ರಸಿಕತೆಯೇ! ನಾನು ಹೇಗಿದ್ದೇನೆ, ನನ್ನ ಆಕಾರ ಈಗ ಹೇಗಿದೆಯೆಂದು ನನಗೆ ಗೊತ್ತು. ಒಂದಾನೊಂದು ಕಾಲದಲ್ಲಿ ಸುಂದರನಾಗಿದ್ದೆನೇನೋ! ಆದರೂ ನನ್ನ ಮೊಮ್ಮಗಳು 'ಮೈ ತಾತಾ ಈಸ್ ವೆರಿ ವೆರಿ ಕ್ಯೂಟ್" ಅನ್ನುತ್ತಾಳೆ! ಸುಂದರತೆ ಅನ್ನುವುದು ಹೊರರೂಪದಲ್ಲಿ ಕಾಣುವುದಾಗಿದ್ದರೆ ಅವಳು ನನ್ನನ್ನು ಕ್ಯೂಟ್ ಅನ್ನಲು ಸಾಧ್ಯವಿರಲಿಲ್ಲ. ನಾನು ಅವಳನ್ನು ತುಂಬಾ ಹಚ್ಚಿಕೊಂಡಿದ್ದೇನೆ, ಮುದ್ದಿಸುತ್ತೇನೆ, ಪ್ರೀತಿಸುತ್ತೇನೆ, ಅದಕ್ಕೇ ಹಾಗೆ ಹೇಳಿರಬಹುದು. ನಿಷ್ಕಳಂಕವಾಗಿ ಪ್ರೀತಿಸುವ ಮತ್ತು ಆ ಮೂಲಕ ಸಿಗುವ ಅದ್ಭುತ ಆನಂದವನ್ನು ಪಡೆಯುವಂತಹ ರಸಿಕರಾಗೋಣ.
ಸುಖವನಾಳೆ ಭೋಗಿ ಮನವನಾಳೆ ಯೋಗಿ 
ಸುಖವನುಂಡೂ ದುಃಖಪಡುವವನೆ ರೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ನಿಜರಸಿಕನವನೆ ತಿಳಿಯೊ ನೀ ಮೂಢ ||
      ನಿಜವಾದ ರಸಿಕರೆಂದರೆ ವಿರಾಗಿಗಳೇ! ಆಶ್ಚರ್ಯಪಡಬೇಡಿ. ಕಪಟಿ ಸನ್ಯಾಸಿಗಳನ್ನೂ ನೆನಪಿಸಿಕೊಳ್ಳಬೇಡಿ! ವಿರಾಗಿಗಳು, ಸನ್ಯಾಸಿಗಳು ಬಯಕೆಗಳನ್ನು, ಆಸೆಗಳನ್ನು ಬಿಟ್ಟವರು ಎಂದು ಹೇಳಲಾಗದು. ಅವರು ಸಾಮಾನ್ಯರು ಬಯಸುವಂತಹ ಸಂಗತಿಗಳು, ಆಸೆಗಳನ್ನು ಬಯಸುವವರಲ್ಲ. ಅವರದು ಅತ್ಯುನ್ನತ ಬಯಕೆ, ಆಸೆ. ಅವರು ಅತ್ಯುನ್ನತ ಬಯಕೆಯಾದ ಆತ್ಮವನ್ನು  ಅರಿಯುವ, ಆ ಮೂಲಕ ಪರಮಾತ್ಮನನ್ನು ಅರಿಯುವ ಹಾಗೂ ಅದರಿಂದ ಅತ್ಯುನ್ನತ ಆನಂದಸ್ಥಿತಿಯಾದ ಸಚ್ಚಿದಾನಂದಭಾವವನ್ನು ಹೊಂದುವ ಹೆಬ್ಬಯಕೆ ಹೊಂದಿದವರು. ಧ್ಯಾನದಿಂದ ಇಂತಹ ಸ್ಥಿತಿಯನ್ನು ತಲುಪಬಹುದೆನ್ನುತ್ತಾರೆ. ಹಿತವಾದ ಆನಂದಾನುಭವ ನೀಡುವ ಇದನ್ನೇ ಭಾವಸಮಾಧಿ ಅನ್ನುತ್ತಾರೆ. ಇದು ರಸಿಕತೆಯ ಉತ್ಕಟ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಆನಂದಾನುಭವ ಹೊರತುಪಡಿಸಿ ಬೇರೆ ಏನೂ ಬೇಕೆನ್ನಿಸುವುದಿಲ್ಲ. ಆ ಸಂದರ್ಭದಲ್ಲಿ ಏನೇ ಆದರೂ ಪರವಾಗಿಲ್ಲವೆಂಬ ಸ್ಥಿತಿ ತಲುಪಿರುತ್ತಾರೆ, ದೇಹದ ಪರಿವೆಯೂ ಇರುವುದಿಲ್ಲ. ದೈವಿಕ ಆನಂದದ ಸ್ಥಿತಿಯಲ್ಲಿ ತತ್ತ ಬೇಕಿರುವುದಿಲ್ಲ, ಸಿದ್ಧಾಂತಗಳ ಅಗತ್ಯವಿರುವುದಿಲ್ಲ, ಮುಕ್ತಿ, ಮೋಕ್ಷ ಇತ್ಯಾದಿಗಳೂ ಬೇಕೆನ್ನಿಸುವುದಿಲ್ಲ. ಇದು ರಸಿಕತೆಯ ಮಹತ್ವ. ರಸಿಕರಾಗಲು ಪ್ರಯತ್ನಿಸೋಣ, ರಸಿಕರಾಗೋಣ!


-ಕ.ವೆಂ.ನಾಗರಾಜ್.

ಮಂಗಳವಾರ, ಏಪ್ರಿಲ್ 8, 2014

ಇತಿಹಾಸದ ನೈಜ, ಜೀವಂತ ಪ್ರತಿನಿಧಿ: ೧೧೮ನೆಯ ವರ್ಷಕ್ಕೆ ಕಾಲಿರಿಸಿರುವ ಪಂ. ಸುಧಾಕರ ಚತುರ್ವೇದಿ

     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಜನ್ಮದಿನವೂ ಆಗಿರುವುದು ವಿಶೇಷವೇ ಸರಿ. ಈ ರಾಮನವಮಿಗೆ (೮-೦೪-೨೦೧೪) ೧೧೭ ವಸಂತಗಳನ್ನು ಕಂಡು ೧೧೮ನೆಯ ವರ್ಷಕ್ಕೆ ಕಾಲಿರಿಸಿರುವ ಅವರಿಗೆ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ಕೆಲವು ಸಾಲುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. 
     ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ  ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ ೧೮೯೭ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ನಾನು ಹಾಸನದವನೆಂದು ತಿಳಿದಾಗ, ಪಂಡಿತರು ತಮ್ಮ ತಂದೆ ಹಾಸನದ ಶಿಕ್ಷಣ ಇಲಾಖೆಯಲ್ಲೂ ಕೆಲಸ ನಿರ್ವಹಿಸಿದ್ದು ತಾವು ೬-೭ ವರ್ಷದವರಾಗಿದ್ದಾಗ -ಅಂದರೆ ಸುಮಾರು ೧೧೦ ವರ್ಷಗಳ ಹಿಂದೆ-  ಹಾಸನದ ದೇವಿಗೆರೆ ಸಮೀಪದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೆಲವು ಸಮಯ ಇದ್ದೆವೆಂದು ನೆನಪಿಸಿಕೊಂಡಿದ್ದರು.  ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವ9ತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. 
     ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದ ಅವರು ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತರಾಗಿದ್ದವರ ನೂರಾರು ಶವಗಳ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ, ಆತ್ಮಗೌರವದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು ೧೫ ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ  ಇತಿಹಾಸದ ನೈಜ ಜೀವಂತ ಪ್ರತಿನಿಧಿ.
     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. 'ಅರವತ್ತಕ್ಕೆ ಅರಳು-ಮರಳು' ಎಂಬ ಪ್ರಚಲಿತ ಗಾದೆ ಮಾತಿಗೆ ವಿರುದ್ಧವಾಗಿ ಇಂದಿಗೂ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಎರಡು ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವದಂದು ರಾಜ್ಯಸರ್ಕಾರ ಇವರನ್ನು ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿಯಲ್ಲಿ ವಾಸವಿರುವ ಇವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಸತ್ಸಂಗ ನಡೆಯುತ್ತಿದ್ದು, ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. 
     ವೇದದ ಬೆಳಕಿನಲ್ಲಿ ಸತ್ಯ ವಿಚಾರಗಳನ್ನು ಪ್ರಸರಿಸುವ ಧ್ಯೇಯದಲ್ಲಿ ಅವಿರತ ತೊಡಗಿರುವ ಮಹಾನ್ ವ್ಯಕ್ತಿಯ ಮಾರ್ಗದರ್ಶನ ಹೀಗೆಯೇ ಮುಂದುವರೆಯುತ್ತಿರಲಿ ಎಂದು ಪ್ರಾರ್ಥಿಸೋಣ. ಕರ್ಮಯೋಗಿ ಸಾಧಕರಿಗೆ ಸಾಷ್ಟಾಂಗ ಪ್ರಣಾಮಗಳು.
-ಕ.ವೆಂ.ನಾಗರಾಜ್.
[8-04-2014ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ ಲೇಖನ]

ಪಂಡಿತರೊಡನೆ: 
ಮಾಹಿತಿಗೆ: ಎರಡು ವರ್ಷಗಳ ಹಿಂದಿನ ಫೋಟೋಗಳಿವು.

ಸಂಪದಿಗ ಗಣೇಶರು ಒದಗಿಸಿದ ಮಾಹಿತಿ:

The Times of India
BangaloreI have no desire for death: Pt Sudhakar Chaturvedi


BANGALORE: At the World Elders Day celebrations, Pandit Sudhakar Chaturvedi, who claims to be 121 years and wants to live to be 300 years, said he had no time for death. 

"I have no desire for death. Marne ko fursat nahin (no time for death)," he said, adding, "For longevity, one has to practise celibacy (brahmacharya) and also eat less so that the stomach doesn't bend." 

He went on: "Now you don't find brahmacharis — there are only brashtacharis (corrupt people)."
************

ಬುಧವಾರ, ಏಪ್ರಿಲ್ 2, 2014

ಪರಮಾತ್ಮ ಸ್ತುತಿ

ಸ್ವಾಮಿ ದೇವನೆ ಸರ್ವದಾತನೆ ವಂದನೆ ಶತವಂದನೆ |
ದುರಿತವೆಲ್ಲವ ದೂರಮಾಡಿ ಒಳಿತುಗೊಳಿಸಲು ಪ್ರಾರ್ಥನೆ || ಪ ||

ಜಗವ ಸಲಹುವ ಸ್ವಾಮಿ ನೀನೇ ಒಬ್ಬನೇ ನೀನೊಬ್ಬನೇ
ಸರ್ವ ಗ್ರಹಗಳ ಶಕ್ತಿ ನೀನೆ ಲೋಕದೊಡೆಯನೆ ವಂದನೆ |
ಜ್ಯೋತಿ ನೀನೇ ಶಕ್ತಿ ನೀನೇ ಸಚ್ಚಿದಾನಂದನೊಬ್ಬನೇ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೧ ||

ಆತ್ಮದಾತನೆ ಶಕ್ತಿದಾತನೆ ಜಗದ್ವಂದ್ಯನೆ ಪರಮನೆ
ಸತ್ಯಮಾರ್ಗದಿ ನಡೆಸುವಾತನೆ ದೇವದೇವನೆ ವಂದನೆ |
ಸತ್ಯ ಸುಂದರ ಶಿವನು ನೀನೆ ಹುಟ್ಟು ಸಾವಿನ ಒಡೆಯನೆ 
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೨ ||

ಪಶುಗಳೊಡೆಯನೆ ಪಕ್ಷಿಪಿತನೆ ಸಕಲ ಜೀವರ ರಾಜನೆ
ಜೀವರಾಶಿಯ ಕಾರ್ಯಕೊಡೆಯ ನ್ಯಾಯದೇವಗೆ ವಂದನೆ |
ಪ್ರಾಣದಾತನೆ ತ್ರಾಣದಾತನೆ ಹರುಷರೂಪಕೆ ತಿಲಕನೆ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೩ ||

ಭುವಿಗೆ ಆಸರೆ ನಿನ್ನ ಕರುಣೆ ಪರಮ ಬೆಳಕಿನ ಲೋಕಕೆ
ಮುಕ್ತ ಸ್ಥಿತಿಗೆ ನೆಲೆಯ ನೀಡಿಹ ಕರುಣದೇವಗೆ ವಂದನೆ |
ಅಂತರಿಕ್ಷದ ಗ್ರಹಸಮೂಹಕೆ ಗತಿಯ ನೀಡಿಹ ಮಾನ್ಯನೆ
ಸಕಲವೆಲ್ಲವು ನಿನ್ನದಾಗಿರೆ ನಮ್ಮತನವಿದು ಅರ್ಪಣೆ || ೪ ||

ನಿನ್ನ ಬಿಟ್ಟು ಅನ್ಯರರಿಯೆವು  ಜೀವಕುಲದ ಸ್ವಾಮಿಯೆ
ಸರ್ವ ಸೃಷ್ಟಿಯ ಜನಕ ನೀನೆ ಒಡೆಯ ನಿನಗೆ ವಂದನೆ |
ದಾಸರಾಗದೆ ಸಿರಿಗೆ ನಾವು ಒಡೆಯರಾಗಿ ಬಾಳುವ 
ಕಾಮಿತಾರ್ಥದ ಫಲವು ಸಿಗಲಿ ನಿನ್ನ ಪೂಜಿಪ ಜೀವಗೆ || ೫ ||

ತೃಪ್ತಭಾವದ ಮುಕ್ತ ಸ್ಥಿತಿಯ ನಿನ್ನ ನೆಲೆಯಲಿ ಅರಸುವ
ವಿದ್ವಜ್ಜನರಿಗೆ ಜ್ಯೋತಿಯಾಗಿ ಮಾರ್ಗ ತೋರುವ ದೇವನೆ |
ನೀನೆ ಬಂಧು ನೀನೆ ದಾರಿ ನೀನೆ ಭಾಗ್ಯವಿಧಾತನು
ನಿನ್ನ ಸೃಷ್ಟಿಯ ನೀನೆ ಬಲ್ಲೆ ವಂದನೆ ಜಗದೊಡೆಯನೆ || ೬ ||

ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಶತ ವಂದನೆ || ೭ ||
-ಕ.ವೆಂ.ನಾ.
*********
ಪ್ರೇರಣೆ:
     ಈ ಕೆಳಕಂಡ ವೇದಮಂತ್ರಗಳ ಪ್ರೇರಣೆಯಿಂದ ಇದನ್ನು ರಚಿಸಿದ್ದು, ಇದು ಪದಶಃ ಅನುವಾದವಲ್ಲ. ಮಂತ್ರದ ಸಾರವನ್ನು, ಭಾವವನ್ನು ಕನ್ನಡದಲ್ಲಿ ಮೂಡಿಸುವ ಸಣ್ಣ ಪ್ರಯತ್ನವಷ್ಟೆ.

ಓಂ ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ| ಯದ್ಭದ್ರಂ ತನ್ನ ಆ ಸುವ|| (ಯಜು.೩೦.೩.)

ಓಂ ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್| ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು.೧೩.೪.)

ಓಂ ಯ ಆತ್ಮದಾ ಬಲದಾ ಯಸ್ಯ ವಿಶ್ವ ಉಪಾಸತೇ ಪ್ರಶಿಷಂ ಯಸ್ಯ ದೇವಾಃ| ಯಸ್ಯ ಚ್ಛಾಯಾಮೃತಂ ಯಸ್ಯ ಮೃತ್ಯುಃ ಕಸ್ಮೈಃ ದೇವಾಯ ಹವಿಷಾ ವಿಧೇಮ|| (ಯಜು.೨೫.೧೩.)

ಓಂ ಯಃ ಪ್ರಾಣತೋ ನಿಮಿಷತೋ ಮಹಿತ್ವೈಕ ಇದ್ರಾಜಾ ಜಗತೋ ಬಭೂವ| ಯ ಈಶೇ ಅಸ್ಯ ದ್ವಿಪದಶ್ಚತುಷ್ಪದಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು.೨೫.೧೧.)

ಓಂ ಯೇನ ದ್ಯೌರುಗ್ರಾ ಪೃಥಿವೀ ಚ ಧೃಢಾ ಯೇನ ಸ್ವ ಸ್ತಭಿತಂ ಯೇನ ನಾಕಃ| ಯೋ ಅಂತರಿಕ್ಷೇ ರಜಸೋ ವಿಮಾನಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು.೩೨.೬.)

ಓಂ ಪ್ರಜಾಪತೇ ನ ತ್ವದೇತಾನ್ಯನ್ಯೋ ವಿಶ್ವಾ ಜಾತಾನಿ ಪರಿ ತಾ ಬಭೂವ| ಯತ್ ಕಾಮಾಸ್ತೇ ಜುಹುಮಸ್ತನ್ನೋ ಅಸ್ತು ವಯಂ ಸ್ಯಾಮ ಪತಯೋ ರಯೀಣಾಮ್|| (ಋಕ್.೧೦.೧೨೧.೧೦.)

ಓಂ ಸ ನೋ ಬಂಧುರ್ಜನಿತಾ ಸ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ| ಯತ್ರ ದೇವಾ ಅಮೃತಮಾನಶಾನಾಸ್ತೃತೀಯೇ ಧಾಮನ್ನಧ್ಯೈರಯಂತ|| (ಯಜು.೩೨.೧೦.)

ಓಂ ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್| ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ|| (ಯಜು.೪೦.೧೬.)