ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜನವರಿ 22, 2018

ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!


     ಮಿತ್ರ ಅಶೋಕಕುಮಾರರು ಅಶ್ವತ್ಥಾಮನ್ ನಾಟಕದಲ್ಲಿ ಬರುವ 'ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!' ಎಂಬ ಸಾಲಿನ ಅರ್ಥ ವಿವರಿಸಲು ಕೇಳಿದಾಗ ನನಗೆ ಹಳೆಯ ಘಟನೆಯೊಂದು ನೆನಪಾಯಿತು. ಕೆಲವು ವರ್ಷಗಳ ಹಿಂದೆ ಹಾಸನದ ವಿಜಯನಗರ ಬಡಾವಣೆಗೆ ಹೋಗುವ ಸಲುವಾಗಿ ಸಂತೆಪೇಟೆಯ ಬಳಿ ಸ್ಕೂಟರ್ ನಿಲ್ಲಿಸಿಕೊಂಡು ಸಿಗ್ನಲ್ಲಿಗಾಗಿ ಕಾಯುತ್ತಿದ್ದೆ. ಹಸಿರು ನಿಶಾನೆ ಕಂಡ ಕೂಡಲೇ ವಾಹನಗಳು ಆತುರದಿಂದ ಮುಂದೆ ಹೊರಟ ಸಮಯದಲ್ಲಿಯೇ ಒಂದು ನಾಯಿಯ ಕೊನೆಯ ಚೀತ್ಕಾರ ಕೇಳಿಸಿ ಕಣ್ಣು ಹಾಯಿಸಿದೆ. ಲಾರಿಯ ಹಿಂಬದಿಯ ಚಕ್ರಕ್ಕೆ ಸಿಕ್ಕಿದ್ದ ನಾಯಿ ಕೊನೆಯುಸಿರೆಳೆದಿತ್ತು. ಹಾಗೆಂದು ಆ ನಾಯಿ ಇದ್ದಕ್ಕಿದ್ದಂತೆ ಸಿಕ್ಕಿ ಸತ್ತಿದ್ದಾಗಿರಲಿಲ್ಲ. ಆ ಲಾರಿ ಬಹಳ ಸಮಯದಿಂದ ಅಲ್ಲಿ ನಿಂತಿತ್ತು. ಮಟ ಮಟ ಮಧ್ಯಾಹ್ನದ ಉರಿಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಆ ನಾಯಿ ಲಾರಿಯ ಹಿಂಬದಿಯ ಚಕ್ರಗಳ ಮುಂದೆ ನೆರಳಿನಲ್ಲಿ ಹಿತವಾಗಿ ಮಲಗಿ ನಿದ್ರಿಸಿತ್ತು. ನಾನು ಸಿಗ್ನಲ್ಲಿಗಾಗಿ ಕಾಯುತ್ತಿದ್ದಾಗ ಅದನ್ನು ಗಮನಿಸಿದ್ದೆ. ಚಾಲಕನ ಹೊರಡುವ ಸಮಯ ಬಂದಿದ್ದ ಸಮಯಕ್ಕೆ ಸರಿಯಾಗಿ ಸಿಗ್ನಲ್ ಬಂದುದರಿಂದ ತಕ್ಷಣ ಆತ ಲಾರಿಯನ್ನೇರಿ ನಾಯಿಯನ್ನು ಗಮನಿಸದೆ ಲಾರಿ ಚಲಿಸಿದ್ದರಿಂದ ಅದು ಪರಲೋಕವಾಸಿಯಾಗಿಬಿಟ್ಟಿತ್ತು. ಕೆಲವೇ ಸಮಯದ ಹಿಂದೆ ನೆರಳಿನಲ್ಲಿ ಮಲಗಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದ ನಾಯಿ ಚಿರನಿದ್ರೆಗೆ ಜಾರಿತ್ತು. ಈ ಕ್ಷಣಕ್ಕೆ ಏನೋ, ಮುಂದಿನ ಕ್ಷಣಕ್ಕೆ ಏನೋ ಎಂಬುದನ್ನು ತಿಳಿಯದ ನಶ್ವರ ಜೀವನದ ದರ್ಶನವನ್ನು ಆ ನಾಯಿಯ ಅಂತ್ಯ ನನಗೆ ತೋರಿಸಿತ್ತು. ಆ ನಾಯಿಗೇನೋ ವಿವೇಚನಾ ಶಕ್ತಿ ಇರಲಿಲ್ಲ. ಇದ್ದಿದ್ದರೆ ಲಾರಿಯ ಚಕ್ರದ ಮುಂದೆ ಮಲಗುತ್ತಿರಲಿಲ್ಲ. ಬೇರೆಲ್ಲೋ ಸುರಕ್ಷ್ಷಿತವೆನ್ನಿಸಿದ ಸ್ಥಳದಲ್ಲಿ ಮಲಗುತ್ತಿತ್ತು. ಆದರೆ, ವಿವೇಚನಾ ಶಕ್ತಿ ಇರುವ ಮನುಷ್ಯರೇ ಅವಿವೇಕತನದಿಂದ ವರ್ತಿಸುತ್ತಾರೆ ಎಂದರೆ ಚೋದ್ಯವೆನಿಸುವುದಾದರೂ ಸತ್ಯವಾಗಿದೆ. ಲಾರಿಯ ಚಾಲಕ ವಿವೇಕತನದಿಂದ ವರ್ತಿಸಿದ್ದರೆ ನಾಯಿಯ ಪ್ರಾಣ ಉಳಿಯುತ್ತಿತ್ತು.
     ನಮ್ಮ ಬದುಕು ಶಾಶ್ವತವಲ್ಲವೆಂದು ತಿಳಿದಿದ್ದರೂ ನಾವು ಚಿರಂಜೀವಿಗಳೆಂದು ಭಾವಿಸುವಂತೆ ಮಾಡುವ ಅದೆಂತಹುದೋ ನಮ್ಮೊಳಗೆ ಇದೆ! ಅದೇ ನಮ್ಮ ವಿವೇಚನಾ ಶಕ್ತಿಗೆ ತಡೆ ಒಡ್ಡುವ ಕೆಲಸ ಮಾಡುತ್ತದೆ. 'ಖ' ಎಂದರೆ ಇಂದ್ರಿಯ. ಸುಖ ಎಂದರೆ ಇಂದ್ರಿಯಗಳಿಗೆ ಯಾವುದು ಹಿತವೆನ್ನಿಸುವುದೋ ಅದು ಮತ್ತು ದುಃಖವೆಂದರೆ ಇಂದ್ರಿಯಗಳಿಗೆ ಯಾವುದು ಅಹಿತವೆನಿಸುವುದೋ ಅದು ಎಂದು ಅಂದುಕೊಳ್ಳುತ್ತೇವೆ. ಇಲ್ಲೂ ಸಮಸ್ಯೆಯಿದೆ. ಈಗ ಸುಖವೆಂದುಕೊಂಡಿದ್ದು ಮುಂದೆ ದುಃಖವಾಗಿ ಕಾಡುವುದಿದೆ. ಈಗ ದುಃಖವಾಗಿ ಕಂಡಿದ್ದು ಮುಂದೆ ಸುಖವಾಗಿ ಪರಿಣಮಿಸಬಹುದಾದುದೂ ಇದೆ. ಔಷಧಿ ನಾಲಿಗೆಗೆ ಕಹಿಯಾದರೂ ದೇಹಕ್ಕೆ ಉಪಕಾರಿ. ಆದರೆ ಹಿತವೆಂದು ಭಾವಿಸಿ ಕುಡಿಯುವ ಮಾದಕ ದ್ರವ್ಯ? ಮಜಾ ಇದೆ ಎಂದು ಕುಡಿಯುತ್ತಾರೆ, ದೊಡ್ಡಸ್ತಿಕೆಗಾಗಿ ಕುಡಿಯುತ್ತಾರೆ, ಕೊನೆಗೆ ದುಃಖ ಮರೆಯುವ ಸಲುವಾಗಿ ಎನ್ನುತ್ತಲೂ ಕುಡಿಯುತ್ತಾರೆ. ಆದರೆ ಮೆದುಳಿನ ಮೇಲೆ ಪ್ರಭಾವ ಬೀರುವ ಆ ದ್ರವ ಕ್ರಮೇಣ ಶರೀರದ ಆರೋಗ್ಯವನ್ನೇ ಹದಗೆಡಿಸಿ ನಾನಾ ರೋಗಗಳಿಗೆ ಆಸ್ಪದ ನೀಡಿ ಜೀವನವನ್ನೇ ನರಕ ಮಾಡಬಹುದು. ಕುಡಿತವೇ ಚಟವಾಗಿರಿಸಿಕೊಂಡವರು ಸಮಾಜದ ದೃಷ್ಟಿಯಲ್ಲಿ ಕೀಳಾಗಿ ಕಾಣಲ್ಪಡುತ್ತಾರೆ ಎಂಬುದೂ ಸತ್ಯ. ಎಲ್ಲವೂ ಗೊತ್ತಿದ್ದೂ ಕುಡಿಯುತ್ತಾರೆಂದರೆ, ಅವರ ವಿವೇಚನಾ ಶಕ್ತಿಯ ಬಗ್ಗೆ ಸಂದೇಹ ಬರುತ್ತದೆ. ಶೋಕಿಗಾಗಿ ಸೇದುವ ಸಿಗರೇಟು, ಬೀಡಿಗಳು ಸೇದುವವರದು ಮಾತ್ರವಲ್ಲ, ಜೊತೆಗಿರುವವರ ಆರೋಗ್ಯವನ್ನೂ ಕೆಡಿಸುತ್ತದೆ. 'ಇರುವುದು ಎರಡು ದಿನ, ಮಜಾ ಮಾಡಿ ಹೋಗೋಣ' ಎಂಬ ಮನೋಭಾವದ ಅವರು, "ಕುಡಿಯುವುದಿಲ್ಲ, ಸೇದುವುದಿಲ್ಲ, ಮಜಾ ಮಾಡುವುದಿಲ್ಲ ಎನ್ನುವುದಾದರೆ ಬದುಕಿರುವುದಾದರೂ ಏಕೆ?" ಎಂಬ ಪ್ರಶ್ನೆಯನ್ನೂ ಮುಂದೊಡ್ಡುತ್ತಾರೆ. ಜಗತ್ತಿನಲ್ಲಿ ಇದು ಬೇಕೇ ಬೇಕು ಅಥವ ಇದು ಬೇಡವೇ ಬೇಡ ಎಂಬಂತಹ ಯಾವುದೇ ಸಂಗತಿಗಳಿಲ್ಲ. ಆದರೆ ಇತಿ-ಮಿತಿಯಲ್ಲಿದ್ದರೆ ಎಲ್ಲವೂ ಹಿತವೇ. ಅತಿಯಾದರೆ ಎಲ್ಲವೂ ಕಷ್ಟವೇ. ಇಂದಿನ ಕ್ಷಣಿಕ ಸುಖಕ್ಕಾಗಿ ವರ್ಷಗಟ್ಟಲೇ ನರಳುತ್ತಾ, ಕೊರಗುತ್ತಾ ಸಾಯುವ ಸ್ಥಿತಿ ಬಂದರೆ ಅದು ಬದುಕುವ ಪರಿಯಂತೂ ಖಂಡಿತಾ ಅಲ್ಲ. 
     ವಿವೇಚನಾ ಶಕ್ತಿಯನ್ನು ಸಮರ್ಪಕವಾಗಿ ಬಳಸಿದ್ದರೆ ನಮಗೆ ನೂರು ವರ್ಷಗಳ ಆಸುಪಾಸಿನವರೆಗೆ ಮಾತ್ರ ಜೀವಿಸಿರಬಲ್ಲೆವು ಎಂಬ ಅರಿವು ಜಾಗೃತವಾಗಿರುತ್ತಿತ್ತ್ತಲ್ಲದೆ, ನಾಲ್ಕು ಜನರಿಗೆ ಉಪಕಾರಿಯಾಗಿಯೂ ಇರುತ್ತಿದ್ದವು. ಈ ಭೂಮಿಯಲ್ಲಿ ಎಂತೆಂತಹ ರಾಜ, ಮಹಾರಾಜರುಗಳು, ಚಕ್ರವರ್ತಿಗಳು ಆಳಿಹೋಗಿದ್ದಾರೆ. ಇಡೀ ಜಗತ್ತನ್ನೇ ತಮ್ಮದಾಗಿಸಿಕೊಳ್ಳಬೇಕೆಂಬ ಹಂಬಲವಿದ್ದ ಅವರು ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಈಗಲೂ ನಮ್ಮ ಎಷ್ಟೋ ರಾಜಕಾರಣಿಗಳು, ಅಧಿಕಾರಿಗಳು, ಪುಂಡರು, ಗೂಂಡಾಗಳ ಹತ್ತಿರ ಅದೆಷ್ಟು ಕೋಟಿ ಕೋಟಿ ಬೆಲೆಬಾಳುವ ಹಣ, ಆಸ್ತಿಗಳಿವೆಯೋ ಗೊತ್ತಿಲ್ಲ. ಆದರೂ ಅವರುಗಳಿಗೆ ಅಜೀರ್ಣವಾಗಿಲ್ಲ. ಕೊನೆಯಲ್ಲಿ ಒಂದು ದಿನ ಒಂದು ಸಣ್ಣ ಗುಂಡುಸೂಜಿಯನ್ನೂ ತೆಗೆದುಕೊಂಡು ಹೋಗಲು ಅವರಿಗೆ ಸಾಧ್ಯವಿಲ್ಲ. ದೇವರು ಅದ್ಭುತ ಸಮಾನತಾವಾದಿ. ಹುಟ್ಟುವಾಗ ಏನನ್ನೂ ತೆಗೆದುಕೊಂಡು ಬರಲು ಅವಕಾಶ ಕೊಡುವುದಿಲ್ಲ. ಹಾಗೆಯೇ ಹೋಗುವಾಗಲೂ ಏನನ್ನೂ ಕೊಂಡುಹೋಗಲು ಬಿಡುವುದಿಲ್ಲ.
     ಇನ್ನೂ ಬೇಕು, ಬೇಕು ಎಂಬ ಅನಂತ ಅತೃಪ್ತತೆಯನ್ನು ಹೊಂದಿರುವ ಮನುಷ್ಯ ತಾನು ಈಗಲೇ ಸಾಯುವುದಿಲ್ಲ ಎಂದು ಭಾವಿಸಿ ಕೊನೆಯವರೆಗೂ ಬೇಕು ಅನ್ನುತ್ತಲೇ ಒಂದು ದಿನ ಕಂತೆ ಒಗೆಯುತ್ತಾನೆ. ಅವಧೂತರೊಬ್ಬರು ಭಕ್ತರ ಮನೆಯೊಂದಕ್ಕೆ ಬಂದಾಗ ಆ ಮನೆಯಲ್ಲಿದ್ದ 90ರ ಆಸುಪಾಸಿನ ವಯಸ್ಸಿನ ವೃದ್ಧೆಯೊಬ್ಬರು ಅವರಿಗೆ, "ಸ್ವಾಮಿ, ಜೀವನದಲ್ಲಿ ನಾನು ಅನುಭವಿಸಬೇಕಾದದ್ದೆಲ್ಲವನ್ನೂ ಅನುಭವಿಸಿಬಿಟ್ಟಿದ್ದೇನೆ. ಇನ್ನು ಏನೂ ಉಳಿದಿಲ್ಲ.  ನಿಮ್ಮ ಪಾದದ ಬಳಿಯಲ್ಲಿ ಪ್ರಾಣ ಬಿಡಲು ಅವಕಾಶವಾದರೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ" ಎಂದರಂತೆ. ಆ ಅವಧೂತರು, "ಅದಕ್ಕೇನಂತೆ, ಹಾಗೆಯೇ ಮಾಡಿ" ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತುಬಿಟ್ಟರಂತೆ. ಗಾಬರಿಯಾದ ಆ ವೃದ್ಧೆ, "ಈಗಲೇ ಅಲ್ಲ ಸ್ವಾಮೀಜಿ, ನನ್ನ ಮೊಮ್ಮಗಳ ಮದುವೆ ನೋಡಬೇಕು. ಅವಳ ಮಕ್ಕಳನ್ನು ಆಡಿಸಬೇಕು. ಈ ಆಸೆ ಪೂರೈಸಿಕೊಂಡು ಕಣ್ಣು ಮುಚ್ಚುತ್ತೇನೆ" ಎಂದಳಂತೆ! ಇಂತಹ ಉದಾಹರಣೆಗಳು ಸಾಕಷ್ಟು ಕಂಡುಬರುತ್ತವೆ. 
     ನಾನು ಇಂತಹ ದಿನ ಸಾಯುತ್ತೇನೆ ಎಂಬುದು ಗೊತ್ತಾದರೆ ಮನುಷ್ಯನ ನಡವಳಿಕೆಯೇ ಬದಲಾಗಿಬಿಡುತ್ತದೆ. ಈಗಿನ ಸ್ಥಿತಿ ಹೇಗಿದೆಯೆಂದರೆ ನಮ್ಮ ಎಲ್ಲಾ ಒಳ್ಳೆಯ ನಡವಳಿಕೆಗಳನ್ನು ಕೊನೆಗಾಲಕ್ಕೆ ಮೀಸಲಿರಿಸುತ್ತೇವೆ. ಅಂತಹ ಸಮಯ ಬಂದಾಗ ನೂರೆಂಟು ಕಾಯಿಲೆ, ಕಸಾಲೆಗಳಿಂದ ನರಳುತ್ತಾ, ಪರಾಧೀನರಾಗಿ ಮಾಡುವ ಮನಸ್ಸಿದ್ದರೂ ಮಾಡಲಾಗದ ಸ್ಥಿತಿಗೆ ಬಂದಿರುತ್ತೇವೆ. ಜನಿಸಿದ ನಂತರ ಉಸಿರಾಡಲು ಪ್ರಾರಂಭಿಸಿದ ನಂತರದಲ್ಲಿ ಆ ಉಸಿರು ನಿಲ್ಲುವವರೆಗೂ ಬೇಕು, ಬೇಕು ಎಂತಲೇ ಒದ್ದಾಡುತ್ತಿರುತ್ತೇವೆ. ಹೀಗಾಗಿ ನಾವೂ ನೆಮ್ಮದಿಯಿಂದ ಇರುವುದಿಲ್ಲ, ಇತರರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಪ್ರತಿಯೊಂದು ಸಲ ಉಸಿರಾಡಿದಾಗಲೂ, ಉಸಿರು ನಿಲ್ಲುವ ಸಮಯಕ್ಕೆ ಹತ್ತಿರ ಹೋಗುತ್ತಿರುತ್ತೇವೆ ಎಂಬ ಪರಿಜ್ಞಾನ ಬಂದರೆ, ಇರುವುದರಲ್ಲಿ ತೃಪ್ತಿ ಪಟ್ಟುಕೊಳ್ಳುವ ಮನೋಭಾವ ಬಂದರೆ ಸಂತೋಷ ನಮ್ಮದಾಗುತ್ತದೆ, ಇನ್ನೊಬ್ಬರಿಗೂ ಸಂತೋಷ ಹಂಚಬಲ್ಲವರಾಗುತ್ತೇವೆ. ಅಶ್ವತ್ಥಾಮನ್ ನಾಟಕದ 'ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!' ಎಂಬ ಸಾಲಿನ ನಂತರದಲ್ಲಿ ಬರುವ ಈ ಸಾಲು ಸಹ ಅರ್ಥಗರ್ಭಿತವಾಗಿದೆ: 'ಬಂದುದನೆ ಕೊಂಡುಂಡು ತಾಳ್ದವನೆ ಜಾಣನ್!'
-ಕ.ವೆಂ. ನಾಗರಾಜ್.


ಮಂಗಳವಾರ, ಜನವರಿ 2, 2018

ಹೊಟ್ಟೆಕಿಚ್ಚು


     ಹೊಟ್ಟೆ ಹಸಿದಿರುವಾಗ ನಮಗೆ ಆಹಾರ ಬೇಕೆನಿಸುತ್ತದೆ. ಅದನ್ನು ಬಿಟ್ಟು ಬೇರೆ ಯಾವುದೇ ಸಂಗತಿ, ಅದು ನಮಗೆ ಎಷ್ಟೇ ಪ್ರಿಯವಾದುದಾಗಿದ್ದರೂ, ನಮಗೆ ಬೇಕು ಅನ್ನಿಸುವುದಿಲ್ಲ. ಇದೇ ಹಸಿವಿನ ಮಹಿಮೆ. ಒಬ್ಬ ಹಸಿದಿರುವವನ ಮುಂದೆ ಒಣ ಉಪದೇಶ ವ್ಯರ್ಥ. ಬಲವಂತವಾಗಿ ಅವನಿಗೆ, ಅದು ಎಷ್ಟೇ ಉನ್ನತವಾದ ವಿಚಾರವಾಗಿದ್ದರೂ, ಹೇಳತೊಡಗಿದರೆ ಹೇಳುವವನಿಗೆ ಒದೆ ಬಿದ್ದಾವು ಅಥವ ಹಸಿದವನು ಅಲ್ಲಿಂದ ಕಂಬಿ ಕಿತ್ತಾನು! ಆದರೆ ಒಮ್ಮೆ ಹೊಟ್ಟೆ ತುಂಬಿತೋ, ಮುಗಿಯಿತು! ನಮಗೆ ಬೇಕಾದುದು, ಬೇಡವಾದುದೂ ಎಲ್ಲವೂ ನಮಗೇ ಬೇಕು ಎಂದು ಬಯಸುತ್ತೇವೆ. ಇಷ್ಟೇ ಆದರೆ ಏನೂ ಸಮಸ್ಯೆಯಿಲ್ಲ. ನಮಗೆ ಬೇಕು, ಆದರೆ ಅದು ಇನ್ನೊಬ್ಬರಿಗೆ ಬೇಡ ಎನ್ನುವ ಭಾವ ಉಂಟಾದರೆ? ಅದೇ ಹೊಟ್ಟೆಕಿಚ್ಚು! ತಿಂದ ಆಹಾರವನ್ನು ಜೀರ್ಣಿಸುವ ಕಿಚ್ಚು ಒಂದಿದೆ, ಅದನ್ನು ವೈಶ್ವಾನರ ಅನ್ನುತ್ತಾರೆ. ಅದು ಪಚನಕ್ರಿಯೆಗೆ, ಆ ಮೂಲಕ ನಮ್ಮ ಆರೋಗ್ಯಕ್ಕೆ ಹಿತಕಾರಿ. ಆದರೆ ಹೊಟ್ಟೆಗೇ ಕಿಚ್ಚು ಬಿದ್ದರೆ, ಆ ಕಿಚ್ಚು ನಮ್ಮನ್ನಷ್ಟೇ ಅಲ್ಲ, ಇತರರನ್ನೂ ಸುಡುತ್ತದೆ. ಆ ಹೊಟ್ಟೆಕಿಚ್ಚಿಗೆ ಇನ್ನೊಂದು ಹೆಸರೂ ಇದೆ, ಮತ್ಸರ! ಡಿವಿಜಿಯವರು "ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರರೊಳ್| ಹೊಟ್ಟೆ ತುಂಬಿದ ತೋಳ ಮಲಗೀತು; ನೀಂ ಪೆರರ ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ||" ಎಂದಿರುವುದು ಈ ಕಾರಣಕ್ಕಾಗಿಯೇ ಆಗಿದೆ. 
     ನನ್ನಲ್ಲಿ ಇರದಿರುವುದು ಅವನಲ್ಲಿ ಇರಬಾರದು; ನನಗಿಂತ ಹೆಚ್ಚು- ಅದು ಶ್ರೀಮಂತಿಕೆಯಿರಬಹುದು, ಅಂತಸ್ತಿರಬಹುದು, ಅಧಿಕಾರವಿರಬಹುದು, ಹೆಸರು ಇರಬಹುದು- ಅವನಲ್ಲಿ ಇರಲೇಬಾರದು ಎಂದು ಬಯಸುವಂತೆ ಮಾಡುವುದೇ ಈ ಹೊಟ್ಟೆಕಿಚ್ಚು! ನಾನು ಎಷ್ಟೋ ವಿಷಯಗಳಲ್ಲಿ ಅವನಿಗಿಂತ ಮುಂದೆ ಇರಬಹುದು, ಆದರೆ ಯಾವುದಾದರೂ ಒಂದು ವಿಷಯದಲ್ಲಿ ಅವನು ಮುಂದುವರೆದರೆ ನನಗೆ ಹೊಟ್ಟೆ ಉರಿಯುವಂತೆ ಅನುಭವ ಉಂಟುಮಾಡುವುದೇ ಈ ಹೊಟ್ಟೆಕಿಚ್ಚು. ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಎದುರಾಳಿಯ ಎರಡು ಕಣ್ಣೂ ಹೋಗಬೇಕು ಎಂದು ಬಯಸುವುದನ್ನು ಕಾಣುತ್ತಿರುತ್ತೇವೆ. ಎದುರಾಳಿಯ ಸರ್ವನಾಶವಾಗಲಿ ಎಂದು ನಾನಾ ವಿಧದ ತಂತ್ರ ಕುತಂತ್ರಗಳನ್ನು ಮಾಡುವವರಿಗೇನೂ ಕಡಿಮೆಯಿಲ್ಲ. ಅವರು ಏಕೆ ಹಾಳಾಗಬೇಕು? ಅವರು ಏಕೆ ತೊಂದರೆಗೆ ಒಳಗಾಗಬೇಕು? ಅದರಿಂದ ಇವರಿಗೆ ಏನು ಲಾಭ? ಏನೂ ಲಾಭವಿಲ್ಲ. ಅವರ ಕಷ್ಟ-ನಷ್ಟಗಳನ್ನು ಕಂಡು ಅನುಭವಿಸುವ ವಿಕೃತ ಆನಂದವೇ ಇವರಿಗಾಗುವ ಲಾಭ. ಇದು ವೈಯಕ್ತಿಕ ಅಧಃಪತನಕ್ಕೆ ಒಯ್ಯುವ ಮಾರ್ಗವಲ್ಲದೆ ಮತ್ತೇನು? ಮನುಷ್ಯನ ಅನೇಕ ಗುಣವಿಶೇಷಗಳಲ್ಲಿ ಕೇವಲ ಕೆಡುಕನ್ನೇ ತರುವ ಏಕೈಕ ಗುಣವೆಂದರೆ ಅದು ಈ ಹೊಟ್ಟೆಕಿಚ್ಚು ಮಾತ್ರ.
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ|| 
     ಕೋಪಿಷ್ಠರೊಡನೆ ಏಗಬಹುದು, ಮೂರ್ಖರೊಡನೆ ಸ್ನೇಹ ಮಾಡಬಹುದು, ಸಂಕೋಚ ಸ್ವಭಾವದವರೊಡನೆ ಮೌನವಾಗಿರಬಹುದು, ಆದರೆ ಮತ್ಸರಿಸುವವರ ಜೊತೆ ಬಾಂಧವ್ಯ ಹೊಂದಿರುವುದು, ಸರಸ ಸಂಭಾಷಣೆಗಳನ್ನು ಮಾಡುವುದೂ ಸಹ ಅಪಾಯಕಾರಿಯೇ ಎಂಬುದು ಅನುಭವಿಗಳ ಮಾತು. ಏಕೆಂದರೆ ಮೇಲೆ ಕಾಣುವಂತೆ, ತೋರಿಸಿಕೊಳ್ಳುವಂತೆ ಅವರು ಇರುವುದೇ ಇಲ್ಲ. ಒಳಗಿರುವ ವಿಷಸರ್ಪ ಯಾವಾಗ ಕಚ್ಚಲಿ ಎಂದು ಒಳಗೊಳಗೇ ಬುಸುಗುಡುತ್ತಿರುತ್ತದೆ. ಮತ್ಸರದಲ್ಲಿ ಪ್ರೀತಿ ಇರುತ್ತದೆ, ಆದರೆ ಅದು ಅವರಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರೀತಿ ನಿಜವಾಗಿ ಕುರುಡಲ್ಲ, ಮತ್ಸರ ಕುರುಡಾಗಿರುತ್ತದೆ. ಅದು ವಾಸ್ತವತೆಯನ್ನು ಕಾಣಲು, ಅರಿಯಲು ಇಚ್ಚಿಸುವುದೇ ಇಲ್ಲ. ಇತರರ ಕೆಡುಕಿಗಾಗಿ ಹಂಬಲಿಸುವ ಅದು ಮುಂದೊಮ್ಮೆ ತಿರುಗುಬಾಣವಾಗಿ ಬರುತ್ತದೆಂಬ ಅರಿವು ಅದಕ್ಕಿರುವುದಿಲ್ಲ.
     ಶ್ರೀರಾಮ ರಾಜನಾಗಿಬಿಡುತ್ತಾನೆ, ಭರತನಿಗೆ ಅವಕಾಶ ತಪ್ಪುತ್ತದೆ ಎಂಬ ಕಾರಣಕ್ಕಾಗಿ ಕೈಕೇಯಿಯಲ್ಲಿ ಉಂಟಾದ ಹೊಟ್ಟೆಕಿಚ್ಚು ರಾಮಾಯಣಕ್ಕೆ ಕಾರಣವಾಯಿತು. ಪಾಂಡವರು ರಾಜ್ಯ-ಕೋಶಗಳನ್ನು ಅನುಭವಿಸಬಾರದು, ಅವರಿಗೆ ಸೂಜಿಮೊನೆಯಷ್ಟೂ ಭೂಮಿ ಸಿಗಬಾರದು ಎಂಬ ದುರ್ಯೋಧನನ ಮತ್ಸರ ಮಹಾಭಾರತಕ್ಕೆ ನಾಂದಿಯಾಯಿತು. ಪೃಥ್ವೀರಾಜ ಜಯಚಂದ್ರನ ಮೇಲಿನ ಮತ್ಸರದಿಂದ ಮಹಮದ್ ಘೋರಿಗೆ ಸಹಾಯ ಮಾಡಿದ್ದರಿಂದ ಭಾರತ ಅನೇಕ ಶತಮಾನಗಳ ಕಾಲ ಮುಸ್ಲಿಮ್ ಆಕ್ರಮಣಕಾರರ ದಾಸ್ಯಕ್ಕೆ ಒಳಗಾಗಬೇಕಾಯಿತು. ಇಂದಿನ ನಿಜಜೀವನದ ರಾಮಾಯಣ, ಮಹಾಭಾರತದ ಕಥೆಗಳಿಗೂ ಮತ್ಸರವೇ ಮೂಲಕಾರಣವಾಗಿದೆ. ಇಂದು ಪ್ರಸಾರವಾಗುತ್ತಿರುವ ಅನೇಕ ಟಿವಿ ಧಾರಾವಾಹಿಗಳಲ್ಲಿ ಮತ್ಸರವನ್ನು ವೈಭವೀಕರಿಸಿ ಇತರರನ್ನು ಹೇಗೆ ಹಾಳು ಮಾಡಬೇಕು, ಹೇಗೆ ತುಳಿಯಬೇಕು ಎಂಬುದನ್ನು ತೋರಿಸುತ್ತಾ ಋಣಾತ್ಮಕ ಅಂಶಗಳಿಗೆ ನೀರೆರೆಯುತ್ತಿರುವುದು ವಿಷಾದಕರ. ಯಾವುದೇ ವ್ಯಕ್ತಿಯ ಹತ್ಯೆಯಂತಹ ಭೀಕರ ಕೃತ್ಯಗಳಲ್ಲೂ ಜಾತಿ, ವಿಚಾರ, ರಾಜಕೀಯ ಪಕ್ಷ ಇತ್ಯಾದಿ ಪ್ರೇರಿತ ಮತ್ಸರಗಳೇ ಪ್ರಧಾನವಾಗಿ ನ್ಯಾಯ, ಮಾನವೀಯ ಅಂಶಗಳು ಮೂಲೆಗುಂಪಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮಹದಾಯಿ ನೀರಿನ ವಿವಾದದ ವಿಷಯವೂ ಸಹ ರಾಜಕೀಯ ಪಕ್ಷಗಳ ಲಾಭದ ಸಲುವಾಗಿ ಬಳಕೆಯಾಗುತ್ತಿದೆ. ಪರ-ವಿರೋಧದ ಹೋರಾಟಗಳಲ್ಲೂ ಸಹ ನ್ಯಾಯಕ್ಕಿಂತ ಹೆಚ್ಚಾಗಿ ಯಾರಿಗೋ ನಷ್ಟ ಉಂಟುಮಾಡುವುದು ಅಥವ ಲಾಭ ಗಳಿಸುವುದೇ ಪ್ರಧಾನ ಅಂಶವಾಗಿದೆ. ಇಂತಹ ವಿಷಯಗಳಲ್ಲಾದರೂ ಪಕ್ಷಾತೀತವಾಗಿ ವರ್ತಿಸುವ ಪ್ರಜ್ಞೆ ಹೋರಾಟಗಾರರಲ್ಲೂ ಕಾಣದಿರುವುದು ಸಮಸ್ಯೆಯ ಇತ್ಯರ್ಥಕ್ಕೆ ಪ್ರಮುಖ ಅಡ್ಡಿಯಾಗಿದೆ. ಪರಸ್ಪರರ ಮತ್ಸರ ವಿವೇಕವನ್ನು ನುಂಗಿಬಿಟ್ಟಿದೆ.
     ತನ್ನ ಪ್ರಾಮುಖ್ಯತೆಗೆ ಧಕ್ಕೆಯಾಗುವ, ನಂಬಿಕೆ ದ್ರೋಹವಾಗುವ ಕಲ್ಪನೆಯೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಅತ್ತೆ, ಸೊಸೆಯರ ನಡುವೆ ವೈಮನಸ್ಯಕ್ಕೆ, ತಮ್ಮನೋ, ತಂಗಿಯೋ ಜನಿಸಿದಾಗ ಮೊದಲ ಮಗುವಿಗೆ ಅದರ ಮೇಲಿನ ಮುನಿಸಿಗೆ, ಗಂಡ-ಹೆಂಡತಿ ಅಥವ ಪ್ರೇಮಿಗಳ ನಡುವಣ ಕಲಹಗಳಿಗೆ ಮತ್ಸರ ಕಾರಣ. ಮತ್ಸರ ಒಮ್ಮೆ ಆವರಿಸಿತೆಂದರೆ ಸದ್ಗುಣಗಳಿಗೆ ಗ್ರಹಣ ಹಿಡಿಯುತ್ತದೆ, ಎಲ್ಲವೂ ತಪ್ಪಾಗಿ ಕಾಣುತ್ತದೆ, ಇನ್ನೊಬ್ಬರನ್ನು ಕೀಳಾಗಿ ಕಾಣುವಂತೆ ಮಾಡುತ್ತದೆ. ನೋಡುವ ನೋಟಗಳು ಬದಲಾಗುತ್ತವೆ. ಪರಸ್ಪರರಲ್ಲಿ ದ್ವೇಷ ಭುಗಿಲೇಳುತ್ತದೆ. ಕಾಳ ಮತ್ಸರದ ಚೇಳು ಕುಟುಕಿಬಿಟ್ಟರೆ ವಿಷ ಬ್ರಹ್ಮರಂಧ್ರದವರೆಗೂ ಏರಿಬಿಡುತ್ತದೆ.
     ಆಳವಾಗಿ ಚಿಂತಿಸಿದರೆ ಅರ್ಥವಾಗುತ್ತದೆ. ಹೊಟ್ಟೆಕಿಚ್ಚು ಕೀಳರಿಮೆಯಿಂದ ನರಳುವವರ ಕಾಯಿಲೆಯೇ ಸರಿ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಹುಡುಕುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಬೆಳವಣಿಗೆ, ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಹೊಟ್ಟೆಕಿಚ್ಚು ನಮ್ಮ ಬೆಳವಣಿಗೆಯನ್ನು ತಿನ್ನುತ್ತದೆ. ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ.
     ಒಟ್ಟಾರೆಯಾಗಿ ಹೇಳಬೇಕೆಂದರೆ ಹೊಟ್ಟೆಕಿಚ್ಚು ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ. ನಮ್ಮ ಶಕ್ತಿಯನ್ನು ಇತರರಿಗೆ ಕೇಡು ಮಾಡುವ ಸಲುವಾಗಿ ಬಳಸದೆ, ಬೇರೆ ಒಳ್ಳೆಯ ಸಂಗತಿಗಳಿಗೆ ಬಳಸಿದರೆ ನಮಗೆ ನಾವೇ ಉಪಕಾರ ಮಾಡಿಕೊಂಡಂತೆ ಆಗುತ್ತದೆ. ಈ ವೇದಮಂತ್ರ ನಮ್ಮನ್ನು ಎಚ್ಚರಿಸಲಿ: ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್.೯.೬೩.೪). ಅರ್ಥ: ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ. 
-ಕ.ವೆಂ.ನಾಗರಾಜ್.