ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಡಿಸೆಂಬರ್ 3, 2013

ವೇದೋಕ್ತ ಜೀವನ ಶಿಬಿರ-2

ಶಿಬಿರದ ಬಗ್ಗೆ:

ನಿತ್ಯ ಸತ್ಯ ಸಂಸ್ಕೃತಿ ವಿಚಾರಗಳ ಅರಿವಿನಲ್ಲಿ ವ್ಯವಹರಿಸುವುದಕ್ಕೆ ಒತ್ತಡ ರಹಿತ ಸುಲಭ ಸೂತ್ರಗಳ ಪರಿಚಯ.    ವಿಮರ್ಶೆ ಮಾಡಿ  ಸತ್ಯ, ಸತ್ವ ಕಂಡರೆ ಮಾತ್ರ ಸ್ವೀಕರಿಸಿ.ಪುರುಷ-ಮಹಿಳೆಯರು ಎಂಬ ಭೇದವಿಲ್ಲ, ವಯಸ್ಸಿನ ಮಿತಿಯಿಲ್ಲ. ವೇದ ಮಂತ್ರಗಳು ತಿಳಿದಿರಬೇಕೆಂದಿಲ್ಲ. ಕಟುವಾದ ನಿಯಮಗಳಾವುದೂ ಇಲ್ಲ.ಕಾರ್ಯಕ್ರಮದ ಸ್ಥಳದಲ್ಲಿ ವೇದ ಸಾಹಿತ್ಯ ಕೃತಿಗಳ ಮಾರಾಟ ವ್ಯವಸ್ಥೆ ಇರುತ್ತದೆ.ವೇದದ ಬಗ್ಗೆ ಸಾಮಾನ್ಯ ಅರಿವು ಮತ್ತು ಆಸಕ್ತಿ ಇರುವ ೫೦ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಸರಳವಾದ ಊಟೋಪಚಾರದ ವ್ಯವಸ್ಥೆ ಇರುತ್ತದೆ.

ಅರ್ಜಿ ಪಡೆಯಲು ಕೆಳಗಿನ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಿ:
   
9980813162/9448033813/9448868537
ಇ-ಮೇಲ್: vedasudhe@gmail.com

ಅಂಚೆ ವಿಳಾಸ:
ವ್ಯವಸ್ಥಾಪಕರು
ವೇದಭಾರತೀ ಸಂಪ್ರತಿಷ್ಠಾನ
ಶಾಖೆ, ಚನ್ನರಾಯಪಟ್ಟಣ

------------------------------------------------------
ಪ್ರವೇಶ ಅರ್ಜಿ


ವೇದಭಾರತಿ ಸಂಪ್ರತಿಷ್ಠಾನ
ಜಾಗೃತಿ ಟ್ರಸ್ಟ್ ಕಾರ್ಯಾಲಯ
ಕೋಟೆ, ಚನ್ನರಾಯಪಟ್ಟಣ- 573116

ವೇದೋಕ್ತ ಜೀವನ ಪಥದ
ಶಿಬಿರ

ಮಾನ್ಯರೇ,
ಮುಂಬರುವ ೨೦೧೪ನೇ ಏಪ್ರಿಲ್ ತಿಂಗಳಲ್ಲಿ ಕೈಗೊಂಡಿರುವ ಜೀವನ ಪೋಷಕ ಆದರ್ಶಗಳನ್ನೊಳಗೊಂಡಿರುವ ಕಾರ್ಯಕ್ರಮದ ಧ್ಯೇಯೊದ್ದೇಶಗಳನ್ನು ನಾನು ಮನಸಾರೆ ಒಪ್ಪಿ ಈ ಮೂಲಕ ಸತ್ಯ ಜೀವನ ನಡೆಸಲು ಅದರ ಅರ್ಥ ಮತ್ತು ಉದ್ದೇಶವನ್ನು ಪಡೆಯಲಿಚ್ಚಿಸುತ್ತೇನೆ.  ತಾವು ನನ್ನನ್ನು ಶಿಬಿರಾರ್ಥಿಯಾಗಿ ಸ್ವೀಕರಿಸಬೇಕೆಂದು ಪ್ರಾರ್ಥನೆ.

ಶಿಬಿರ ಶುಲ್ಕ ವಿವರ:

ಪಾವತಿಸಿರುವ ಬ್ಯಾಂಕ್ ಶಾಖೆಯ ಹೆಸರು,ಊರು------------

ಚಲನ್ ನಂಬರ್:----------------

ದಿನಾಂಕ:-------------


ನನ್ನ ವಿಳಾಸ: ದೂರವಾಣಿ ಸಂಖ್ಯೆ:
_________________ ಸ್ಥಿರ : ________________
_________________ ಸಂಚಾರಿ:
_________________

ಸಹಿ/-
-------------------------------------------------------------------------------------------

ವೇದೋಕ್ತ ಜೀವನ ಶಿಬಿರದ ಬಗ್ಗೆ ಇನ್ನೊಂದಿಷ್ಟು ಮಾಹಿತಿ

1.  ಶಿಬಿರ ಶುಲ್ಕ ರೂ 500.00 [ಶಿಬಿರದಿಂದ ಶಿಬಿರಾರ್ಥಿಗಳು ಹಿಂದಿರುಗುವಾಗ ಹಿಂದಿರುಗಿಸಲಾಗುವುದೆಂದು ವ್ಯವಸ್ಥಾಪಕರು ತಿಳಿಸಿದ್ದಾರೆ]
2. ಶಿಬಿರಶುಲ್ಕ ಪಾವತಿಸಲು ಕೆನರಾ ಬ್ಯಾಂಕ್  ಉಳಿತಾಯ ಖಾತೆಯ ನಂಬರ್ ಪ್ರಕಟಿಸಲಾಗುವುದು.
3. ಶಿಬಿರಶುಲ್ಕವನ್ನು ಬ್ಯಾಂಕ್ ಖಾತೆಗೆ ಪಾವತಿಸಿ ವಿವರವನ್ನು  ನಮೂದಿಸಿರುವ ಅರ್ಜಿಯನ್ನು ತುಂಬಿ " ವೇದಭಾರತಿ ಸಂಪ್ರತಿಷ್ಠಾನ" ಜಾಗೃತಿ ಟ್ರಸ್ಟ್ ಕಾರ್ಯಾಲಯ, ಕೋಟೆ, ಚನ್ನರಾಯಪಟ್ಟಣ- 573116-ಈ ವಿಳಾಸಕ್ಕೆ ಕಳುಹಿಸಲು ಕೋರಿದೆ.
4. ಕಾಲಕಾಲಕ್ಕೆ ಅವಶ್ಯ ಮಾಹಿತಿಗಳನ್ನು ಪ್ರಕಟಿಸಲಾಗುವುದು.

ಗುರುವಾರ, ನವೆಂಬರ್ 28, 2013

ವೇದೋಕ್ತ ಜೀವನ ಪಥ-ಶಿಬಿರ

ಈಗಾಗಲೇ ಹಾಸನದಲ್ಲಿ ಒಂದು ವೇದೋಕ್ತಜೀವನ ಶಿಬಿರ ನಡೆದಿರುವುದು ಹಲವರ ಗಮನಕ್ಕೆ ಬಂದಿದೆ. ಹಲವರು ಅದರಲ್ಲಿ ಭಾಗವಹಿಸಿದ್ದಿರಿ. ಈಗ ಎರಡನೆಯ ಶಿಬಿರವನ್ನು ಚನ್ನರಾಯಪಟ್ಟಣದ ವೇದ ಭಾರತೀ ಸಂಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದೆ. ಅದರ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.ಆಸಕ್ತರಿಂದ ಅರ್ಜಿಯನ್ನು ಪಡೆಯಲು ವ್ಯವಸ್ಥಾಪಕರು ಉದ್ಧೇಶಿಸಿದ್ದಾರೆ. ಶಿಬಿರದಲ್ಲಿ ಪಾಲ್ಗೊಳ್ಲಲು ಇಚ್ಚೆ ಇರುವ ವೇದಾಭಿಮಾನಿಗಳು ಅರ್ಜಿಯನ್ನು ನೇರವಾಗಿ ವ್ಯವಸ್ಥಾಪಕರ ವಿಳಾಸಕ್ಕೆ ಕಳಿಸಬಹುದು.


ವೇದಗಳಷ್ಟು ಪ್ರಾಚೀನವೂ, ಸರ್ವಜನಾದರಣೀಯವೂ, ಶ್ರೇಷ್ಠ ಸಂಸ್ಕೃತಿಯೂ, ಶ್ರೀಮಂತ ಕಲೆಯೂ, ಅನುಪಮ ಸಾಹಿತ್ಯ ಜ್ಞಾನಭಂಡಾರಗಳು ಮತ್ತೊಂದಿಲ್ಲ. ಅಂತೆಯೇ ಹೃದಯ ವೈಶಾಲ್ಯತೆಯನ್ನು ಹೊಂದಿರುವ ಈ ಸನಾತನ ಧರ್ಮದ ವೈಭವ ಮನುಕುಲಕ್ಕೆ ನೀಡಿರುವ ಅಭೂತಪೂರ್ವ ಕೊಡುಗೆಯ ಅರಿವು ಮೂಡಿಸಲು ವೇದಪ್ರಚಾರಕರಾಗಿ, ಪರಿಚಾರಕರಾಗಿ ದೇಶದ ಉದ್ದಗಲಗಳಲ್ಲಿಯೂ ಸಂಚರಿಸಿ ದುಡಿಯುತ್ತಿರುವ ಬೆರಳೆಣಿಕೆಯ ಮಹನೀಯರಲ್ಲಿ ವೇದಾಧ್ಯಾಯೀ ಶ್ರೀಯುತ ಸುಧಾಕರಶರ್ಮಾ ಒಬ್ಬರು.  ವೇದ ಭಾಷ್ಯಕಾರರೂ, ವಿದ್ವಾಂಸರೂ,  ಸಂಶೋಧಕರೂ, ಲೇಖಕರೂ, ಸಾಹಿತಿಗಳೂ ಬಹುಭಾಷಾ ಪ್ರವಚನಕಾರರೂ ಮತ್ತು ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರವಾದ ಜಗತ್ತಿನ ಪ್ರಪ್ರಥಮ ವೇದ- ವೈದಿಕ ಧಾರಾವಾಹಿ ಹೊಸಬೆಳಕು ಎಂಬ ಖ್ಯಾತಿಯ ರುವಾರಿಗಳೂ ಆದ ಶ್ರೀಯುತ ಶರ್ಮರು ವೇದಗಳಲ್ಲಿ ಹೇಳಿರುವ ಹಾಗೂ ಮಹರ್ಷಿಗಳ ಉದಾತ್ತ ಚಿಂತನೆಯ ವಿಚಾರಗಳು ಮತ್ತು ಆಧ್ಯಾತ್ಮ ವಿದ್ಯೆಯ ವಾಸ್ತವಿಕ ಸ್ವರೂಪವನ್ನು ಅತಿ ಸುಲಭ ಮತ್ತು ಸರಳ ರೀತಿಯನ್ನು ಅನುಸರಿಸಿ ಸುಲಲಿತವಾಗಿ ಜನರಿಗೆ ತಿಳಿಸಿಕೊಡುವುದರೊಂದಿಗೆ ಅವರು ವೇದಪ್ರಣೀತ ಜೀವನವನ್ನು ನಡೆಸುವಂತಾಗಬೇಕು ಎಂಬ ಇಚ್ಛೆಯಿಂದ ಚನ್ನರಾಯಪಟ್ಟಣದಲ್ಲಿ ವೇದೋಕ್ತ ಜೀವನ ಪಥ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಸಕಲ ವಿಚಾರಗಳಲ್ಲಿಯೂ ಜೀವನ ಪೋಷಕ ಆದರ್ಶಗಳನ್ನು ಆಕರ್ಷಣೀಯ ಮಾತುಗಳಲ್ಲಿ ಮನಮುಟ್ಟುವಂತೆ ತಿಳಿಸಿಕೊಡಲಿದ್ದಾರೆ. ಶಾಂತಿ ಮತ್ತು ಸೌಭಾಗ್ಯದ ಆನಂದಕ್ಕಾಗಿ ರೂಪಿಸಲಾದ ಈ ಪವಿತ್ರ ಸಂಕಲ್ಪವನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ. ವೇದಾನುಭವ ಸಂಪನ್ನರಿಂದ ನಡೆಯುತ್ತಿರುವ ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸಿ, ಮುಕ್ತ ಮನಸ್ಸಿನಿಂದ ವಿಮರ್ಶಿಸಿ ತಿಳಿಯುವವರಿಗೆ ರಸದೌತಣ. ಈ ಮಾರ್ಗದರ್ಶನ ನಾಳಿನ ಬಾಳಿಗೆ ನಂದಾದೀವಿಗೆಯಾಗಬಲ್ಲದು.

ಶಿಬಿರದ ಬಗ್ಗೆ:

ನಿತ್ಯ ಸತ್ಯ ಸಂಸ್ಕೃತಿ ವಿಚಾರಗಳ ಅರಿವಿನಲ್ಲಿ ವ್ಯವಹರಿಸುವುದಕ್ಕೆ ಒತ್ತಡ ರಹಿತ ಸುಲಭ ಸೂತ್ರಗಳ ಪರಿಚಯ.    ವಿಮರ್ಶೆ ಮಾಡಿ  ಸತ್ಯ, ಸತ್ವ ಕಂಡರೆ ಮಾತ್ರ ಸ್ವೀಕರಿಸಿ.ಪುರುಷ-ಮಹಿಳೆಯರು ಎಂಬ ಭೇದವಿಲ್ಲ, ವಯಸ್ಸಿನ ಮಿತಿಯಿಲ್ಲ. ವೇದ ಮಂತ್ರಗಳು ತಿಳಿದಿರಬೇಕೆಂದಿಲ್ಲ. ಕಟುವಾದ ನಿಯಮಗಳಾವುದೂ ಇಲ್ಲ.ಕಾರ್ಯಕ್ರಮದ ಸ್ಥಳದಲ್ಲಿ ವೇದ ಸಾಹಿತ್ಯ ಕೃತಿಗಳ ಮಾರಾಟ ವ್ಯವಸ್ಥೆ ಇರುತ್ತದೆ.ವೇದದ ಬಗ್ಗೆ ಸಾಮಾನ್ಯ ಅರಿವು ಮತ್ತು ಆಸಕ್ತಿ ಇರುವ ೫೦ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಸರಳವಾದ ಊಟೋಪಚಾರದ ವ್ಯವಸ್ಥೆ ಇರುತ್ತದೆ.

ಅರ್ಜಿ ಪಡೆಯಲು ಕೆಳಗಿನ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಿ:
 
9980813162/9448033817/9448868531
ಇ-ಮೇಲ್: vedasudhe@gmail.com

ಅಂಚೆ ವಿಳಾಸ:
ವ್ಯವಸ್ಥಾಪಕರು
ವೇದಭಾರತೀ ಸಂಪ್ರತಿಷ್ಠಾನ
ಶಾಖೆ, ಚನ್ನರಾಯಪಟ್ಟಣ
-------------------------------------------------------------------------------------------

ಪ್ರವೇಶ ಅರ್ಜಿ


ವೇದಭಾರತಿ ಸಂಪ್ರತಿಷ್ಠಾನ
ಜಾಗೃತಿ ಟ್ರಸ್ಟ್ ಕಾರ್ಯಾಲಯ
ಕೋಟೆ, ಚನ್ನರಾಯಪಟ್ಟಣ-೫೭೩೧೧೬

ವೇದೋಕ್ತ ಜೀವನ ಪಥದ
ಶಿಬಿರ

ಮಾನ್ಯರೇ,
ಮುಂಬರುವ ೨೦೧೪ನೇ ಏಪ್ರಿಲ್ ತಿಂಗಳಲ್ಲಿ ಕೈಗೊಂಡಿರುವ ಜೀವನ ಪೋಷಕ ಆದರ್ಶಗಳನ್ನೊಳಗೊಂಡಿರುವ ಕಾರ್ಯಕ್ರಮದ ಧ್ಯೇಯೊದ್ದೇಶಗಳನ್ನು ನಾನು ಮನಸಾರೆ ಒಪ್ಪಿ ಈ ಮೂಲಕ ಸತ್ಯ ಜೀವನ ನಡೆಸಲು ಅದರ ಅರ್ಥ ಮತ್ತು ಉದ್ದೇಶವನ್ನು ಪಡೆಯಲಿಚ್ಚಿಸುತ್ತೇನೆ.  ತಾವು ನನ್ನನ್ನು ಶಿಬಿರಾರ್ಥಿಯಾಗಿ ಸ್ವೀಕರಿಸಬೇಕೆಂದು ಪ್ರಾರ್ಥನೆ.


ನನ್ನ ವಿಳಾಸ: ದೂರವಾಣಿ ಸಂಖ್ಯೆ:
_________________ ಸ್ಥಿರ : ________________
_________________ ಸಂಚಾರಿ:
_________________

ಸಹಿ/-

ಗೋರಕ್ಷೆಗಾಗಿ ಭಕ್ತಿ ಸಂಗೀತ


ಬನ್ನಿ, ಭಾಗವಹಿಸಿ, ಸತ್ಕಾರ್ಯಕ್ಕೆ ಸಹಕರಿಸಿ



ಗುರುವಾರ, ನವೆಂಬರ್ 14, 2013

ಹಾಸನದ ವೇದಭಾರತಿಯ ಸ್ತುತ್ಯಾರ್ಹ ಕಾರ್ಯ

     ಬೇಸಿಗೆಯ ರಜಾ ಆಗಲಿ, ದಸರಾ ರಜಾ ಆಗಲಿ ಬಂತೆಂದರೆ ಸಾಕು, ನನ್ನ ಮಗಳು ಹಾಸನದ ಅಜ್ಜಿ-ತಾತನ ಮನೆಗೆ ಹಾರಿಬಿಡುತ್ತಾಳೆ. ೨ನೆಯ ತರಗತಿಯಲ್ಲಿ ಓದುತ್ತಿರುವ ಮಗಳು ಅಕ್ಷಯ ಈ ಸಲವೂ ಬೇಸಿಗೆಯ ರಜೆಯಲ್ಲಿ ಹಾಸನಕ್ಕೆ ಹೋಗಿ ವಾಪಸು ಬಂದಾಗ ನಮಗೆ ಆಶ್ಚರ್ಯ ಕಾದಿತ್ತು. ಅವಳು ಸುಮಾರು ಒಂದು-ಒಂದೂವರೆ ಗಂಟೆಗಳ ಕಾಲ  ವೇದ ಮಂತ್ರಗಳನ್ನು ಪುಸ್ತಕ ನೋಡಿಕೊಳ್ಳದೆ ಸ್ವರಸಹಿತವಾಗಿ ಹೇಳಬಲ್ಲವಳಾಗಿದ್ದುದು ನಮಗೆ ಬಹಳ ಸಂತೋಷ ನೀಡಿತ್ತು. ೭-೪-೨೦೧೩ರಿಂದ ೧೭-೪-೨೦೧೩ರವರೆಗೆ ವೇದಭಾರತಿಯ ಆಶ್ರಯದಲ್ಲಿ ನಡೆದ 'ಬಾಲ ಸಂಸ್ಕಾರ ಶಿಬಿರ'ದಲ್ಲಿ ನನ್ನ ಮಗಳೂ ಸೇರಿದಂತೆ ಸುಮಾರು ೮೦ ಮಕ್ಕಳು ಭಾಗವಹಿಸಿದ್ದರು. ಮಕ್ಕಳಲ್ಲಿ ವೇದಮಂತ್ರಗಳ ಕಲಿಕೆಯನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದ್ದ ಆ ಶಿಬಿರದಲ್ಲಿ ವೇದಮಂತ್ರಗಳ ಅಭ್ಯಾಸದ ಜೊತೆಗೆ ದೇಶಭಕ್ತಿಗೀತೆಗಳನ್ನೂ ಹೇಳಿಕೊಡಲಾಗುತ್ತಿತ್ತು. ದೇಶಭಕ್ತರ ಕಥೆಗಳನ್ನು ಹೇಳುತ್ತಿದ್ದರು. ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲೂ ಅವಕಾಶ ಮಾಡಿಕೊಟ್ಟಿದ್ದರು. ವಿವಿಧ ಆಟೋಟಗಳೂ ಮಕ್ಕಳಿಗೆ ಮುದ ನೀಡಿದ್ದವು. ಶಿಬಿರದ ಭಾಗವಾಗಿ ಜೋಡಿಸಿಕೊಂಡಿದ್ದ ಒಂದು ಕಾರ್ಯಕ್ರಮಕ್ಕೆ ಮಕ್ಕಳ ತಾಯಿ-ತಂದೆಯರನ್ನೂ ಆಹ್ವಾನಿಸಿದ್ದು, 'ಮಾತೃವಂದನಾ ಮತ್ತು ಭಾರತ ಮಾತಾಪೂಜನ' ಎಂಬ ಆ ಕಾರ್ಯಕ್ರಮವಂತೂ ಎಲ್ಲರ ಮನಮುಟ್ಟುವಂತಿತ್ತು. ಮಕ್ಕಳು ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರದಲ್ಲಿ ಮಕ್ಕಳ ಪೋಷಕರನ್ನು ಸಾಲಾಗಿ ಕುಳ್ಳಿರಿಸಿ ಅವರ ಮಕ್ಕಳು ವೇದಮಂತ್ರಗಳನ್ನು ಉಚ್ಛರಿಸುತ್ತಾ ನಿರೂಪಕರ ಸೂಚನೆಗಳನ್ನು ಅನುಸರಿಸಿ ತಾಯಿ-ತಂದೆಯರ ಪಾದಪೂಜೆ ಮಾಡಿದರು. ಆ ದೃಷ್ಯ ಪೋಷಕರ ಮತ್ತು ಅದನ್ನು ಕಂಡವರ ಕಣ್ಣುಗಳಲ್ಲಿ ಆನಂದಭಾಷ್ಪ ಉದುರುವಂತೆ ಮಾಡಿದ್ದು ಕಾರ್ಯಕ್ರಮದ ಸಾರ್ಥಕತೆ ತೋರಿಸಿತ್ತು. ಶಿಬಿರ ಮುಗಿದ ನಂತರವೂ ನನ್ನ ಮಗಳು 'ಈಶಾವಾಸ್ಯಮ್'ನಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ವೇದಾಭ್ಯಾಸದ ಕಲಿಕಾ ಕೇಂದ್ರಕ್ಕೆ ಹೋಗಿ ಕಲಿಕೆ ಮುಂದುವರೆಸಿದಳು. ಹಾಸನದ ಆಕಾಶವಾಣಿಯಲ್ಲಿ ಪ್ರಸಾರವಾಗುವ ಬಾಲನಂದನ ಕಾರ್ಯಕ್ರಮದಲ್ಲಿ ನನ್ನ ಮಗಳ ಸಂದರ್ಶನ ನಡೆದು ಅಲ್ಲಿ ಅವಳು ವೇದಮಂತ್ರಗಳನ್ನು ನಿರರ್ಗಳವಾಗಿ ಹೇಳಿದ್ದು ನಮಗಂತೂ ನಂಬಲಾರದಂತಾಗಿತ್ತು.

     ಹಾಸನದಲ್ಲಿ ವೇದಭಾರತಿ ಅನೇಕ ಸ್ತುತ್ಯಾರ್ಹ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಬಂಧು ಹರಿಹರಪುರ ಶ್ರೀಧರ ಸಂಘಟಕ ಹಾಗೂ ಸಂಯೋಜಕರಾಗಿರುವ ಮತ್ತು ನನ್ನ ತಂದೆ ಅಧ್ಯಕ್ಷರಾಗಿರುವ 'ವೇದಭಾರತಿ' ಸಂಸ್ಥೆ ಹರಿಹರಪುರ ಶ್ರೀಧರರ ಮನೆಯ ಮೇಲ್ಮಹಡಿಯಲ್ಲಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಶ್ರೀಧರ ಅವರು ಈ ಮಹಡಿಯನ್ನು ಸಂಪೂರ್ಣವಾಗಿ ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟಿರುವುದು ಅವರ ಸಾಮಾಜಿಕ ಕಳಕಳಿಗೆ ಸೂಚಕವಾಗಿದೆ. "ಎಲ್ಲರಿಗಾಗಿ ವೇದ" ಎಂಬ ಘೋಷವಾಕ್ಯದೊಂದಿಗೆ ೧೯-೮-೨೦೧೨ರಂದು ವೇದಭಾರತಿಯ ವೇದಾಭ್ಯಾಸ ಕಲಿಕಾ ಕೇಂದ್ರ ಪ್ರಾರಂಭವಾಗಿ, ಅಂದಿನಿಂದ ಜಾತಿ, ಮತ, ಪಂಥ, ಲಿಂಗ ಮತ್ತು ವಯೋಭೇದವಿಲ್ಲದೆ ಆಸಕ್ತ ಎಲ್ಲರಿಗೂ ಇಲ್ಲಿ ವೇದಾಭ್ಯಾಸಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ. ವೇದ ಒಂದು ಜಾತಿಯ ಅಥವ ಒಂದು ವರ್ಗದ ಸ್ವತ್ತಲ್ಲ, ಜ್ಞಾನಾರ್ಜನೆಗೆ ಜಾತಿ, ಮತ, ಲಿಂಗಗಳ ಕಟ್ಟಿಲ್ಲ ಎಂಬುದನ್ನು ಪ್ರತ್ಯಕ್ಷ ಆಚರಣೆಗೆ ತಂದಿದ್ದು ಶ್ಲಾಘನೀಯ.
     ವೇದಭಾರತಿ ತನ್ನದೇ ಆದ ವೇದಾಭ್ಯಾಸಿಗಳ ಕಾರ್ಯಕರ್ತರ ತಂಡ ಹೊಂದಿದ್ದು ಪ್ರತಿಯೊಬ್ಬರೂ ಸಂಸ್ಥೆಯ ಚಟುವಟಿಕೆಗಳಿಗೆ ಹೃತ್ಪೂರ್ವಕ ಸಹಕಾರ ನೀಡುತ್ತಿರುವುದನ್ನು ಬಾಲಶಿಬಿರದ ಸಂದರ್ಭದಲ್ಲಿ ಕಂಡಿದ್ದೇನೆ. ಶ್ರೀ ಸಿ.ಎಸ್.ಕೃಷ್ಣಸ್ವಾಮಿ, ಜನಮಿತ್ರ ಪ್ರಧಾನ ಸಂಪಾದಕರಾದ ಶ್ರೀ ಕೆ.ಪಿ.ಎಸ್.ಪ್ರಮೋದ್, ಡಾ. ಗುರುರಾಜ ಹೆಬ್ಬಾರ್ ಮುಂತಾದ ಹಲವಾರು ಗಣ್ಯರುಗಳು ಸಂಸ್ಥೆಯ ಚಟುವಟಿಕೆಗಳಿಗೆ ಪೋಷಕರಾಗಿದ್ದಾರೆ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನವಿದೆ. ಶ್ರೀ ವಿಶ್ವನಾಥ ಶರ್ಮ, ಶ್ರೀ ಅನಂತನಾರಾಯಣರವರುಗಳು ವೇದಮಂತ್ರಗಳನ್ನು ಕಲಿಸಿಕೊಡುತ್ತಿದ್ದಾರೆ.
     ಆಗಾಗ್ಗೆ ಸಾಧು-ಸಂತರು, ಚಿಂತಕರುಗಳನ್ನು ಆಹ್ವಾನಿಸಿ ಸತ್ಸಂಗಗಳನ್ನು ಏರ್ಪಡಿಸುತ್ತಾರೆ. ಬಾಲಶಿಬಿರವಲ್ಲದೆ, 'ರೂಢಿಗತ ಸಂಪ್ರದಾಯಗಳು, ಆಚರಣೆಗಳು ಎಷ್ಟರಮಟ್ಟಿಗೆ ವೇದೋಕ್ತವಾಗಿವೆ' ಎಂಬ ಬಗ್ಗೆ ಶ್ರೀ ಸುಧಾಕರ ಶರ್ಮರನ್ನು ಕರೆಸಿ ಒಂದು ಸಾರ್ವಜನಿಕ ಸಂವಾದ ಕಾರ್ಯಕ್ರಮ, ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಂದ ಒಂದು ವಾರ ಕಾಲದ 'ಗೀತಾ ಜ್ಞಾನಯಜ್ಞ' ಕಾರ್ಯಕ್ರಮಗಳು ವೇದಭಾರತಿ ಏರ್ಪಡಿಸಿದ ಉಲ್ಲೇಖಾರ್ಹ ಚಟುವಟಿಕೆಗಳಾಗಿವೆ. ಇತ್ತೀಚೆಗೆ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ'ವನ್ನು ನಡೆಸಿದ್ದು ಪುಣೆಯ ಒಬ್ಬರು ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಬಂದ ೬೦ ಜನರು ವೇದೋಕ್ತ ರೀತಿಯಲ್ಲಿ ಜೀವನ ನಡೆಸುವುದು ಹೇಗೆ ಎಂಬ ಬಗ್ಗೆ ಶ್ರೀ ಸುಧಾಕರ ಶರ್ಮರವರಿಂದ ಮಾರ್ಗದರ್ಶನ ಪಡೆದರು. ಪ್ರತಿ ದಿನ ಸಂಜೆ ಸಾರ್ವಜನಿಕ ಉಪನ್ಯಾಸವನ್ನೂ ಆ ಸಂದರ್ಭದಲ್ಲಿ ಏರ್ಪಡಿಸಿದ್ದರು. ಶಿಬಿರದ ಕೊನೆಯ ದಿನದಂದು ನಾಲ್ವರು ವಿವಾಹಿತ ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದಿದ್ದು ವಿಶೇಷ. ಒಟ್ಟಾರೆಯಾಗಿ ವೇದಭಾರತಿ ಸಂಸ್ಥೆ ವೇದ ಪ್ರಚಾರ ಮತ್ತು ಪ್ರಸಾರದಲ್ಲಿ ಸದ್ದಿಲ್ಲದೆ ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ. 
-ಬಿಂದು ರಾಘವೇಂದ್ರ, ಬೆಂಗಳೂರು.

ಸೋಮವಾರ, ನವೆಂಬರ್ 11, 2013

ಭಕ್ತಿಯೆಂಬ ಭಾವ

ಭಕ್ತಿಯೆಂಬುದು ಕೇಳು ಒಳಗಿರುವ ಭಾವ 
ಅಂತರಂಗದೊಳಿರುವ ಪ್ರೇಮಪ್ರವಾಹ |
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ ||
     'ಸಂಕಟ ಬಂದಾಗ ವೆಂಕಟರಮಣ!' ಮನುಷ್ಯನಿಗೆ ಕಷ್ಟಗಳು, ದುಃಖಗಳು ಬಾರದಿದ್ದರೆ ಅವನು ದೇವರನ್ನು ಸ್ಮರಿಸುತ್ತಿದ್ದನೋ ಇಲ್ಲವೋ ಎಂಬುದು ಯೋಚಿಸಬೇಕಾದ ವಿಷಯವೇ. ಇರಲಿ ಬಿಡಿ, ಸದ್ಯಕ್ಕೆ ಇದನ್ನು ಒಂದು ಪಕ್ಕಕ್ಕೆ ಇಟ್ಟುಬಿಡೋಣ. ಭಕ್ತಿಯ ಕುರಿತು ಚರ್ಚಿಸುವ ಪೂರ್ವದಲ್ಲಿ ಪೂರಕವಾದ ಮೂಲ ಸಂಗತಿಗಳ ಬಗ್ಗೆ ಗಮನಹರಿಸಲೇಬೇಕು. ಜ್ಞಾನ, ಕರ್ಮ ಮತ್ತು ಉಪಾಸನೆಗಳು ನಾಗರಿಕ ಮಾನವಧರ್ಮದ ಮೂರು ಅಭಿನ್ನ ಅಂಗಗಳೆಂದು ಹೇಳುತ್ತಾರೆ. ಈ ಮೂರೂ ಒಂದಕ್ಕೊಂದು ಪೂರಕವಾಗಿವೆ. ಮಾನವನಿಗೂ ಇನ್ನಿತರ ಪಶು, ಪಕ್ಷಿ, ಕ್ರಿಮಿ, ಕೀಟಗಳಿಗೂ ಇರುವ ಎದ್ದು ಕಾಣುವ ವ್ಯತ್ಯಾಸವೆಂದರೆ ಮಾನವನಿಗೆ ವಿವೇಚನೆ ಮಾಡುವ ಶಕ್ತಿಯಿದೆ. ಆತ ತನಗನ್ನಿಸಿದ್ದನ್ನು ಮಾಡಬಲ್ಲ, ಮಾಡದಿರಲೂ ಬಲ್ಲ, ಇನ್ನೇನನ್ನೋ ಮಾಡಬಲ್ಲ. ಏನು, ಏಕೆ, ಹೇಗೆ ಇತ್ಯಾದಿಗಳನ್ನು ಕೇಳುವ, ತಿಳಿದುಕೊಳ್ಳುವ ಶಕ್ತಿ ಅವನಿಗೆ ಇದ್ದು, ತನ್ನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಜ್ಞಾನಸಂಪತ್ತು ಹೆಚ್ಚಿಸಿಕೊಳ್ಳುವ ಸೌಭಾಗ್ಯ ಅವನಿಗೆ ಇದೆ. ಇಂತಹ ಆಸಕ್ತಿ ಇಲ್ಲದವರ ಮಾನಸಿಕ ಬೆಳವಣಿಗೆ ಕುಂಠಿತವಾಗಿ ಆಕಾರದಲ್ಲಿ ಮಾತ್ರ ಮಾನವರಾಗಿರುವರೂ ಇರುತ್ತಾರೆ. ಅಜ್ಞಾನದ ಅಂಧಕಾರವನ್ನು ಕಳೆದುಕೊಳ್ಳಲು, ದುರಾಚಾರದಿಂದ ಸದಾಚಾರಕ್ಕೆ ಬದಲಾಗಲು, ಇರುವ ಸ್ಥಿತಿಗಿಂತ ಮೇಲಕ್ಕೇರಲು ಜ್ಷಾನ ನೆರವಾಗುತ್ತದೆ.
     ತಿಳಿವಳಿಕೆಯಿದೆ, ಆದರೆ ಅದು ಆಚರಣೆಗೆ ಬರುವುದಿಲ್ಲವೆಂದರೆ ಅದಕ್ಕೆ ಅರ್ಥವಿಲ್ಲ. ಹೀಗಾಗಿ ಕರ್ಮ ಮಾನವಧರ್ಮದ ಮತ್ತೊಂದು ಅಮೂಲ್ಯ ಭಾಗ. ಜ್ಞಾನ ಅನ್ನುವುದು ಮಾನವಧರ್ಮದ ತಲೆಯಿದ್ದಂತೆ ಅನ್ನುವುದಾದರೆ, ಕರ್ಮವನ್ನು ಅದರ ಕೈಕಾಲುಗಳು ಅನ್ನಬಹುದು. ಜ್ಞಾನ ಆಚರಣೆಗೆ ಬರದಿದ್ದರೆ ಅದೊಂದು ಸಿದ್ಧಾಂತ ಅಥವ ತತ್ವವಾಗಿಯೇ ಉಳಿಯುತ್ತದೆ. ಕರ್ಮವಿಲ್ಲದ ಧರ್ಮ ಕೈಕಾಲುಗಳಿಲ್ಲದ ಅಂಗವಿಕಲನಂತೆ ಅರ್ಥ ಕಳೆದುಕೊಳ್ಳುತ್ತದೆ. ಶರೀರ ಮತ್ತು ಆತ್ಮ ಒಟ್ಟಿಗೆ ಇರುವವರೆಗೆ ಆಹಾರ, ಬಟ್ಟೆ, ಆಶ್ರಯ ಇತ್ಯಾದಿಗಳಿಗಾಗಿ ಕೆಲಸ ಮಾಡಲೇಬೇಕು. ಇವನ್ನೆಲ್ಲಾ ಪಡೆಯಲು ಸುತ್ತಲಿನ ಸಮಾಜದ ಅವಲಂಬಿಗಳಾಗುತ್ತೇವಾದ್ದರಿಂದ, ಇವುಗಳನ್ನು ಕೊಡುವ ಸಮಾಜಕ್ಕೆ ಪ್ರತಿಯಾಗಿ ಏನೂ ಮಾಡದಿದ್ದರೆ ಪಾಪವಲ್ಲದೇ ಮತ್ತೇನು? ಕರ್ಮ ಮಾಡದವನು ಸಮಾಜದ ಋಣ ಉಳಿಸಿಕೊಂಡು ಸಮಾಜದ್ರೋಹಿಯಾಗುವುದಲ್ಲದೆ, ಆಧ್ಯಾತ್ಮಿಕ ಉನ್ನತಿ ಹೊಂದಲೂ ಅನರ್ಹನಾಗುತ್ತಾನೆಂದರೆ ತಪ್ಪಿಲ್ಲ. ಹೀಗಾಗಿ ಕರ್ಮ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ.
     ಈಗ ವಿಷಯಕ್ಕೆ ಬರೋಣ. ಮಾನವಧರ್ಮದ ಮೂರನೆಯ ಮಹತ್ತಾದ ಭಾಗ ಉಪಾಸನೆ. ಉಪಾಸನಾ ಪದದ ಅರ್ಥ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು ಎಂದು. ಭಗವಂತನಿಗೆ ಹತ್ತಿರವಾಗಿರುವುದು ಎಂದರೆ ಭಗವಂತ ನಮ್ಮಿಂದ ದೂರದಲ್ಲಿದ್ದಾನೆಂದು ಅರ್ಥವಲ್ಲ. ಎಲ್ಲೆಲ್ಲೂ ಇರುವ ದೇವರು ನಮ್ಮಿಂದ ದೂರವಿರಲು ಹೇಗೆ ಸಾಧ್ಯ. ಆದರೆ ಹುಲುಮನುಜರಾದ ನಾವು ಮಾನಸಿಕವಾಗಿ ಅವನಿಂದ ದೂರವಿದ್ದೇವಷ್ಟೆ. ಈ ಜ್ಞಾನಸಂಬಂಧಿತ ದೂರವನ್ನು ಕಡಿಮೆ ಮಾಡಿಕೊಳ್ಳುವುದೇ ಉಪಾಸನೆಯ ಮೂಲ ಉದ್ದೇಶ. ದಿನದ ಕೆಲ ಸಮಯವಾದರೂ ಮನಸ್ಸನ್ನು ಧ್ಯಾನ, ಅರ್ಚನೆ, ಇತ್ಯಾದಿಗಳ ಮೂಲಕ ಮನಸ್ಸನ್ನು ಕೇಂದ್ರೀಕರಿಸಿ ದೇವರಿಗೆ ಮಾನಸಿಕವಾಗಿ ಹತ್ತಿರವಿರುವುದೇ ಇದರ ಗುರಿ. ಉಪಾಸನೆಯ ಅಗತ್ಯ ಕಾಣುವುದು ಇಲ್ಲಿಯೇ. ಈ ಉಪಾಸನೆಯನ್ನೇ ಭಕ್ತಿ, ಪೂಜೆ, ಅರ್ಚನೆ ಮುಂತಾದ ರೀತಿಯಲ್ಲೂ ಹೆಸರಿಸುತ್ತಾರೆ.  
ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ
ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ |
ರಾಗ ದ್ವೇಷಗಳು ಭಕ್ತಿ ನವರಸಗಳೂ ಭಕ್ತಿ
ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ ||
    ಪರಮಾತ್ಮನನ್ನು ಅರ್ಥ ಮಾಡಿಕೊಳ್ಳುವುದು ಗುರಿ ಎಂದಿಟ್ಟುಕೊಂಡರೆ, ಅದನ್ನು ತಲುಪಲು ಪಡೆದುಕೊಳ್ಳುವ ಸಹಾಯವನ್ನು ಸಾಧನ (ಶ್ರವಣ, ಮನನ, ಮಥನ, ಮಂಥನ, ಇತ್ಯಾದಿ) ಮತ್ತು ಗುರಿ ತಲುಪಿದರೆ ಸಾಧನೆ ಎನ್ನಬಹುದು. ಈ ಪ್ರಯತ್ನದಲ್ಲಿರುವವರು ಸಾಧಕರು. ಗುರಿ ತಲುಪಿದಾಗ ಆಗುವ ಆನಂದವನ್ನು ಮೋಕ್ಷ ಅನ್ನಬಹುದು, ಅಥವ ಬೇರೆ ಯಾವುದೇ ಪದದಿಂದ ಗುರುತಿಸಬಹುದು. ಇಂತಹ ಸಾಧ್ಯ(ಗುರಿ), ಸಾಧನೆ, ಸಾಧನ, ಸಾಧಕರ ಮಧ್ಯದಲ್ಲಿ ಉದ್ಭವವಾಗುವುದೇ ಭಕ್ತಿ! ಭಕ್ತಿ ಹಲವಾರು ರೀತಿಯಲ್ಲಿ ಅಭಿವ್ಯಕ್ತವಾಗುತ್ತದೆ. ಭಕ್ತಿಯಲ್ಲಿ ಕೃತಜ್ಞತೆ, ಪ್ರೀತಿ, ಭಯ, ಕೋಪ, ವಾತ್ಸಲ್ಯ, ಬೇಸರ, ಮಮತೆ, ರೋಷ, ಅನುನಯ, ಆನಂದ, ದುಃಖ, ಇತ್ಯಾದಿ ಭಾವಗಳನ್ನು ಕಾಣಬಹುದು. ಈ ಅಖಂಡ ಜಗತ್ತನ್ನು ಸೃಷ್ಟಿಸಿ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಭಗವಂತನನ್ನು ಕೃತಜ್ಞತಾ ಭಾವದಿಂದ ಸ್ಮರಿಸಬಹುದು. ಅವನ ಕರುಣೆಯನ್ನು ನೆನೆದು ಅವನನ್ನು ಪ್ರೀತಿಸಬಹುದು. ಇಷ್ಟೊಂದು ಅಗಾಧ ಶಕ್ತಿಯನ್ನು, ಸೃಷ್ಟಿಯ ಬೃಹತ್ತತೆಯನ್ನು ಕಂಡು ಬೆರಗಾಗಿ ಭಯ ಪಡಲೂಬಹುದು, ಇತರರಿಗೆ ಕೊಟ್ಟ ಅವಕಾಶವನ್ನು ತನಗೆ ಕೊಡದ ಬಗ್ಗೆ ಕೋಪಿಸಿಕೊಳ್ಳಲೂಬಹುದು, ಅವನನ್ನು ಓಲೈಸಿ ಒಳಿತನ್ನು ಬೇಡಲೂಬಹುದು,. . . . ., ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಂತಹ ಭಾವಗಳು ಭಕ್ತರ ಮನೋಭಾವವನ್ನು ಅವಲಂಬಿಸಿರುತ್ತದೆ. 'ಅವರವವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಭಗವಂತ' ಎಂಬ ಕವಿವಾಣಿ ಅದಷ್ಟು ಸಮಂಜಸವಾಗಿ ತೋರುತ್ತದೆ! ದೇವಸ್ಥಾನಗಳಲ್ಲಿ ಪ್ರದರ್ಶಿಸುವ ದಾನಿಗಳ ಪಟ್ಟಿ, ಭಕ್ತರು ಮಾಡಿಸಿಕೊಡುವ ಬಂಗಾರ, ಬೆಳ್ಳಿ, ವಜ್ರದ ಆಭರಣಗಳು ಮುಂತಾದವನ್ನು ಭಕ್ತಿಯ ಯಾವ ಪ್ರಾಕಾರಕ್ಕೆ ಸೇರಿಸಬೇಕು ಅನ್ನುವುದನ್ನು ಓದುಗರೇ ನಿರ್ಧರಿಸಿಕೊಳ್ಳಲಿ. ದೇವರಂತೂ ಏನನ್ನೂ ಬಯಸಲಾರ, ಬಯಸಿದರೆ ಅವನು ದೇವರಾಗಲಾರ. ಆದರೂ ಭಕ್ತರು ತಮ್ಮ ಭಕ್ತಿಯನ್ನು ತೋರ್ಪಡಿಸಿಕೊಳ್ಳುವ ರೀತಿಗಳಲ್ಲಿ ಇವೂ ಒಂದಾಗಿವೆ. 
     ಮೇಲೆ ಹೇಳಿದಂತೆ ಭಕ್ತಿಯಲ್ಲಿ ರಾಗ-ದ್ವೇಷಗಳೂ ಇವೆ, ನವರಸಗಳೂ ಇವೆ. ಹಿರಣ್ಯಕಶಿಪು ಮುಂತಾದ ಅಸುರರನ್ನು ದ್ವೇಷಭಕ್ತಿಗೆ ಉದಾಹರಿಸಬಹುದಾದರೆ ಹನುಮಂತನನ್ನು ದಾಸಭಕ್ತಿಗೆ ಹೆಸರಿಸಬಹುದು. ಗ್ರಾಮಗಳ ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೇಳಿ ಕುಳಿತ ಭಕ್ತ/ಭಕ್ತೆಯರನ್ನು ಗಮನಿಸಿದ್ದೀರಾ? (ಮನದಲ್ಲೇ ನೆನಸಿಕೊಂಡು ದೇವರ ವಿಗ್ರಹವನ್ನೇ ನೋಡುತ್ತಾ ಹೂವಿನ ಪ್ರಸಾದ ಕೇಳುವ ಪದ್ಧತಿಯಿದೆ. ಬಲಗಡೆ ಹೂವು ಬಿದ್ದರೆ ಶುಭ, ಎಡಗಡೆ ಬಿದ್ದರೆ ಅಶುಭ ಎಂದುಕೊಳ್ಳುತ್ತಾರೆ. ಇದರ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿ ಅಪ್ರಾಸಂಗಿಕ). ಕೆಲವರು "ಏಕಪ್ಪಾ/ ಏಕಮ್ಮಾ ಇಷ್ಟೊಂದು ಸತಾಯಿಸುತ್ತಿಯಾ? ಆಗುವುದಾದರೆ ಪ್ರಸಾದ ಕೊಡು, ಆಗಲ್ಲಾ ಅಂತಲಾದರೂ ಹೇಳಿಬಿಡು" ಅಂತ ವಿಗ್ರಹದೊಂದಿಗೆ ಸಂಭಾಷಣೆಯನ್ನೂ ಮಾಡುತ್ತಿರುತ್ತಾರೆ. ಬರಬಾರದ ಕಷ್ಟ-ನಷ್ಟಗಳಾದಾಗ, 'ಈ ದೇವರು ಅನ್ನುವವನು ಇದ್ದಿದ್ದರೆ ನನಗೆ ಹೀಗೆ ತೊಂದರೆ ಕೊಡುತ್ತಿರಲಿಲ್ಲ. ಇನ್ನು ಅವನನ್ನು ಪೂಜೆ ಮಾಡುವುದಿಲ್ಲ' ಎಂದು ಘೋಷಿಸುವವರನ್ನೂ ನಾವು ಕಾಣುತ್ತಿರುತ್ತೇವೆ. ನಾವು ಮಾಡುವ ಕರ್ಮಗಳಿಗೆ ನಾವೇ ಹೊಣೆ, ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ನಮ್ಮ ಕರ್ಮಫಲಗಳನ್ನು ನಾವೇ ಅನುಭವಿಸಬೇಕು ಎಂದು ತಿಳಿದು ನಡೆಯುವ ನಿರ್ಲಿಪ್ತ ಭಕ್ತರನ್ನೂ ಕಾಣುತ್ತೇವೆ. ಕೆಡುಕನ್ನು ಯಾರಿಗೂ ಬಯಸದೆ, ಸಾಧ್ಯವಾದಷ್ಟೂ ಎಲ್ಲರ ಹಿತ/ಒಳಿತನ್ನೇ ಬಯಸುವ, ಪ್ರತಿಫಲ ಬಯಸದ ಭಕ್ತರ ಭಕ್ತಿ ಶ್ರೇಷ್ಠವಾದುದು ಎಂಬುದರಲ್ಲಿ ಎರಡು ಮಾತಿರಲಿಕ್ಕಿಲ್ಲ. 
     ಪ್ರಾಸಂಗಿಕವಾಗಿ ನೀವು ಕೇಳಿರಬಹುದಾದ ಒಂದು ಕಥೆ ಹೇಳುವೆ. ಒಬ್ಬ ವಿಷ್ಣು ಭಕ್ತ ಪ್ರವಾಸ ಮಾಡುತ್ತಾ ಹೋಗುತ್ತಿದ್ದಾಗ ದಾರಿಯಲ್ಲಿ ಹರಿಹರನ ವಿಗ್ರಹವಿರುವ ಒಂದು ದೇವಸ್ಥಾನ ಕಂಡ. ವಿಷ್ಣು-ಶಿವರಿಬ್ಬರೂ ಇರುವ ವಿಗ್ರಹಕ್ಕೆ ಪೂಜೆ ಮಾಡಲು ಅವನ ಮನಸ್ಸು ಒಪ್ಪಲಿಲ್ಲ. ಸರಿ, ತಾನು ಮಾಡುವ ಪೂಜೆಯನ್ನು ಶಿವ ನೋಡಬಾರದೆಂದು ಅವನ ಕಣ್ಣನ್ನು ಮುಚ್ಚಿದ, ಧೂಪದ ವಾಸನೆಯನ್ನು ಶಿವನ ನಾಸಿಕ ಗ್ರಹಿಸಬಾರದೆಂದು ಆ ಮೂಗಿನ ಹೊಳ್ಳೆಗೆ ಹತ್ತಿಯಿಟ್ಟ, ನೈವೇದ್ಯ ಸಿಗದಿರಲೆಂದು ಶಿವನ ಬಾಯಿಯ ಭಾಗ ಮುಚ್ಚಿದ, ಶಿವನ ಕಿವಿ ತನ್ನ ಪೂಜಾ ಮಂತ್ರ ಕೇಳಬಾರದೆಂದು ಕಿವಿಗೂ ಹತ್ತಿ ತುರುಕಿದ. ಹೀಗೆಲ್ಲಾ ಮಾಡಿ ಪೂಜೆ ಮುಗಿಸಿದಾಗ ಭಕ್ತನ ಎದುರು ಶಿವ ಪ್ರತ್ಯಕ್ಷನಾದ. ಭಕ್ತ ಅವನನ್ನು ಕುರಿತು, "ನೀನೇಕೆ ಬಂದೆ? ನಾನು ಪ್ರಾರ್ಥಿಸಿದ್ದು ವಿಷ್ಣುವನ್ನು" ಅಂದ. ಶಿವ ಹೇಳಿದ, "ಭಕ್ತಾ, ನೀನು ನಿನ್ನ ಪೂಜೆಯುದ್ದಕ್ಕೂ ವಿಷ್ಣುವನ್ನು ನೆನೆಸಲೇ ಇಲ್ಲ. ಬದಲಾಗಿ ನನಗೆಲ್ಲಿ ನಿನ್ನ ಪೂಜೆ ತಲುಪೀತೋ ಅಂತಲೇ ನನ್ನನ್ನೇ ನೆನೆಸುತ್ತಿದ್ದೆ. ನನ್ನನ್ನೇ ನೀನು ನೆನೆಯುತ್ತಿದ್ದರಿಂದ ನಾನು ಬಂದೆ!"
     ಭಕ್ತರಲ್ಲಿ ನಾಲ್ಕು ರೀತಿಯ ಭಕ್ತರಿದ್ದಾರೆಂದು ಭಗವದ್ಗೀತೆ ಹೇಳುತ್ತದೆ: ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿ. ತನಗೆ ಇರುವ ತೊಂದರೆಯನ್ನು ಪರಿಹರಿಸಲು ಪ್ರಾರ್ಥಿಸುವವನು ಆರ್ತ, ಸಂಪತ್ತು, ಐಶ್ವರ್ಯ, ಇತ್ಯಾದಿ ಅನುಕೂಲಗಳನ್ನು ಬಯಸುವವನು ಅರ್ಥಾರ್ಥಿ, ಜ್ಞಾನ ಬಯಸುವವನು ಜಿಜ್ಞಾಸು ಮತ್ತು ಪ್ರತಿಯಾಗಿ ಏನನ್ನೂ ಬಯಸದೆ, ಅವನನ್ನು ಹೊಂದುವ ಪ್ರಯತ್ನದಲ್ಲೇ ಆನಂದ ಕಾಣುವವನು ಜ್ಞಾನಿ. ನಾರದ ಭಕ್ತಿ ಸೂತ್ರದಲ್ಲಿ ಭಕ್ತಿಯ ವಿವಿಧ ಮಜಲುಗಳನ್ನು ಹೇಳಲಾಗಿದೆ. (ಭಗವಂತನ ವಿಚಾರಗಳ ಕುರಿತು) ಶ್ರವಣಾಸಕ್ತಿ, ಅವನನ್ನು ಭಜಿಸುವ ಕೀರ್ತನಾಸಕ್ತಿ, ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸಖ್ಯಾಸಕ್ತಿ, ಆತ್ಮನಿವೇದನೆ, ಸಖ್ಯಭಾವ, ವಾತ್ಸಲ್ಯಭಾವ, ತನ್ಮಯಭಾವ, ವಿರಹಭಾವ, ಇತ್ಯಾದಿಗಳನ್ನು ಅಲ್ಲಿ ವಿವರಿಸಿದೆ. ಇರಲಿ, ಇವುಗಳನ್ನೆಲ್ಲಾ ವಿವರಿಸುತ್ತಾ ಹೋದರೆ ದೀರ್ಘ ಬರಹವಾಗುವುದು. ಲೋಕದ ಕಣ್ಣಿನಲ್ಲಿ ಹುಚ್ಚರಂತೆ ಕಂಡು ಬರುವ ಕೆಲವು ಅವಧೂತರು, ಸಾಧು-ಸಂತರ ಭಕ್ತಿಯನ್ನು ವಿವರಿಸಲು ಸಾಧ್ಯವೇ? ರಾಮಕೃಷ್ಣ ಪರಮಹಂಸರನ್ನೂ ಹುಚ್ಚರೆಂದು ಜರಿದವರಿಗೇನೂ ಕಡಿಮೆಯಿರಲಿಲ್ಲ.
     ನಿಷ್ಕಾಮ ಪ್ರೀತಿಯೆಂದರೆ ಯಾವುದೇ ಪ್ರತಿಫಲ ಬಯಸದೆ ದೇವರನ್ನು ಪೂಜಿಸುವುದು. ವಿವೇಕಾನಂದರು ಹೀಗೆ ಹೇಳುತ್ತಿದ್ದರು: "ನನ್ನ ಸ್ವಭಾವ 'ಅವನನ್ನು' ಪ್ರೀತಿಸುವುದು. ಆದ್ದರಿಂದ 'ಅವನನ್ನು' ಪ್ರೀತಿಸುತ್ತೇನೆ. ನಾನು ಯಾವುದಕ್ಕಾಗಿಯೂ ಪ್ರಾರ್ಥಿಸುವುದಿಲ್ಲ. ನಾನು ಯಾವುದನ್ನೂ ಬೇಡುವುದಿಲ್ಲ. 'ಅವನು' ನನ್ನನ್ನು ಎಲ್ಲಿಡಬಯಸುವನೋ ಅಲ್ಲಿ ಇಡಲಿ. ನಾನು ;ಅವನನ್ನು' ಪ್ರೀತಿಯ ಸಲುವಾಗಿ ಪ್ರೀತಿಸುತ್ತೇನೆ. ನಾನು ಪ್ರೀತಿಯಲ್ಲಿ ವ್ಯವಹರಿಸಬಯಸುವುದಿಲ್ಲ". ದೇವರು ಮತ್ತು ಭಕ್ತರ ನಡುವಣ ನೈಜ, ನಿಷ್ಕಾಮ ಪ್ರೀತಿಯ ಬಂಧ ವಾಸ್ತವವಾಗಿ ಮನುಷ್ಯನನ್ನು ಪ್ರಾಪಂಚಿಕ ಬಂಧನಗಳಿಂದ ಬಿಡಿಸುತ್ತದೆ. 
ದೇವನನು ಬಯಸುವ ಉತ್ಕಟತೆ ಭಕ್ತಿ
ಪ್ರೀತಿಯಾಮೃತದ ರಸಧಾರೆ ಭಕ್ತಿ |
ಭಕ್ತಿಯದು ಸಾಧಿಸಲು ಬೇರೇನು ಬೇಕಿಲ್ಲ
ಒಳಗೊಳಗೆ ಆನಂದ ಚಂದ ಮೂಢ ||
     ಭಕ್ತಿ ದೇವರನ್ನು ಕಾಣುವ ಪ್ರಯತ್ನದಲ್ಲಿ ಅತ್ಯಂತ ಸಹಜವಾದ, ಸುಲಭವಾದ ಮತ್ತು ಪ್ರಯತ್ನದಲ್ಲೇ ಆನಂದವನ್ನು ಕಾಣಬಲ್ಲ ಸರಳವಾದ ಮಾರ್ಗ; ಆದರೆ ಭಕ್ತಿಯ ಕೆಳಹಂತದಲ್ಲಿರುವವರು ತಾವು ನಂಬಿದ ತತ್ವ, ಆದರ್ಶಗಳಿಗೆ ಕಟ್ಟುಬಿದ್ದು ಇತರರ ನಂಬಿಕೆಗಳನ್ನು ವಿರೋಧಿಸುವ ಪ್ರವೃತ್ತಿ ಬೆಳೆಸಿಕೊಳ್ಳುವ ಅಪಾಯವಿದೆ. ಪ್ರೀತಿಯ ವಸ್ತುವಿಗೆ ತೋರುವ ಅವರ ಏಕನಿಷ್ಠೆ ಹೆಚ್ಚಿನ ಸಂದರ್ಭಗಳಲ್ಲಿ ಇತರರನ್ನು ದ್ವೇಷಿಸುವಲ್ಲಿ, ಅನೇಕ ಹುಚ್ಚಾಟಗಳಿಗೆ ಇಳಿಯುವಲ್ಲಿ ಕೊನೆಗೊಳ್ಳುತ್ತದೆ. ಇಂತಹ ಹುಚ್ಚಾಟದ ಮತ್ತ್ಠು ಅಮಾಯಕರ ರಕ್ತ ಹರಿಸುವ ಭಯೋತ್ಪಾದನೆಯ ಚಟುವಟಿಕೆಗಳಲ್ಲಿ ತೊಡಗುವ ಮುಸ್ಲಿಮರು, ಹಿಂದೂಗಳು, ಕ್ರಿಶ್ಚಿಯನರು, ಇತರ ಮತೀಯರುಗಳು ಇಂತಹ ಭಕ್ತಿಯ ಕೆಳಸ್ತರದ ಹಂತದಿಂದ ಬಂದವರಾಗಿದ್ದಾರೆ. ದುರ್ಬಲ ಮತ್ತು ಅವಿಕಸಿತ ಮನಸ್ಸುಗಳವರು ತಮ್ಮ ನಂಬಿಕೆಯನ್ನು ಪ್ರೀತಿಸುವ ರೀತಿಯೆಂದರೆ, ಇತರ ಎಲ್ಲಾ ಆದರ್ಶಗಳನ್ನು ದ್ವೇಷಿಸುವುದು. ಇಂದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹುಚ್ಚಾಟಗಳ, ಭಯೋತ್ಪಾದನೆಗಳ ಮೂಲಕಾರಣ ಇದೇ ಆಗಿದೆ.
     ನಿಜವಾಗಿ ಹೇಳಬೇಕೆಂದರೆ ದೇವಸ್ಥಾನಗಳು, ಚರ್ಚುಗಳು, ಮಸೀದಿಗಳು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಸಹಕಾರಿ ಸಾಧನಗಳೇ ಹೊರತು ಅವೇ ಅಂತ್ಯವಲ್ಲ. ನಿಜವಾದ ಅರಿವು ಮೂಡಿದಾಗ, ನಿಜವಾದ ದೈವಿಕ ಆನಂದವನ್ನು ಸವಿಯುತ್ತಿರುವಾಗ ಅವುಗಳ ಯಾವುದರ ಆಸರೆಯೂ ಬೇಕೆನಿಸುವುದಿಲ್ಲ, ಯಾವ ಧರ್ಮಗ್ರಂಥಗಳೂ ಬೇಕಿರುವುದಿಲ್ಲ ಮತ್ತು ಯಾವ ಉಪದೇಶಗಳ ಅಗತ್ಯವೂ ಇರುವುದಿಲ್ಲ. ಆಗ ದೇವರು ಹೃದಯದಲ್ಲೇ ಇರುತ್ತಾನೆ. ಮತ್ತೆ ಬೇರೆ ಎಲ್ಲಿ ಅವನನ್ನು ಹುಡುಕಬೇಕು?
ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||
                                                                        -ಕ.ವೆಂ.ನಾಗರಾಜ್.

ಬುಧವಾರ, ಅಕ್ಟೋಬರ್ 30, 2013

ವಿಷವಿಕ್ಕಿದವಗೆ ದಯೆ ತೋರಿಸಿದ ದಯಾನಂದರು!

ಇಂದು ಮಹರ್ಷಿ ದಯಾನಂದರ ಸ್ಮರಣದಿನ!
     ಮಹರ್ಷಿ ದಯಾನಂದ ಸರಸ್ವತಿಯವರದು ಸಹಜ ಸಾವಲ್ಲ. ಕೊಲೆ ಎನ್ನಬಹುದು. ೧೮೮೩ರಲ್ಲಿ ಜೋಧಪುರದ ಮಹಾರಾಜರ ಆಹ್ವಾನದ ಮೇಲೆ ಅವರ ಅತಿಥಿಯಾಗಿ ಹೋಗಿ ಅರಮನೆಯಲ್ಲಿ ತಂಗಿದ್ದರು. ಮಹಾರಾಜನಿಗೆ ಅವರ ಶಿಷ್ಯನಾಗಿ ಉಪದೇಶಗಳನ್ನು ತಿಳಿಯುವ ಆಸಕ್ತಿಯಿತ್ತು. ಒಮ್ಮೆ ದಯಾನಂದರು ಮಹಾರಾಜರ ವಿಶ್ರಾಂತಿ ಕೊಠಡಿಗೆ ಹೋದ ಸಂದರ್ಭದಲ್ಲಿ ಮಹಾರಾಜರು ನನ್ಹಿಜಾನ್ ಎಂಬ ನೃತ್ಯಗಾತಿಯ ಜೊತೆಗೆ ಇದ್ದುದನ್ನು ಕಂಡರು. ದಯಾನಂದರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಧೈರ್ಯವಾಗಿ ಮತ್ತು ನೇರವಾಗಿ ಮಹಾರಾಜರಿಗೆ ಸ್ತ್ರೀ ಸಹವಾಸ ಬಿಡಲು ಮತ್ತು ಒಬ್ಬ ನಿಜವಾದ ಆರ್ಯ(ಸಭ್ಯ)ನಂತೆ ಧರ್ಮ ಪಾಲನೆ ಮಾಡುವಂತೆ ಹೇಳಿದರು. ದಯಾನಂದರ ಸಲಹೆ ಆ ನೃತ್ಯಗಾತಿಯನ್ನು ಕೆರಳಿಸಿತು ಮತ್ತು ಸೇಡಿಗಾಗಿ ಹಪಹಪಿಸುವಂತೆ ಮಾಡಿತು. ಅಡಿಗೆ ಭಟ್ಟನಿಗೆ ಆಕೆ ಲಂಚ ನೀಡಿ ದಯಾನಂದರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಡಲು ಒಪ್ಪಿಸಿದಳು. ಅಡಿಗೆ ಭಟ್ಟ ರಾತ್ರಿಯ ಮಲಗುವ ಸಮಯದಲ್ಲಿ ವಿಷ ಮತ್ತು ನುಣ್ಣಗೆ ಪುಡಿ ಮಾಡಿದ ಗಾಜಿನ ಹರಳುಗಳನ್ನು ಸೇರಿಸಿದ ಹಾಲನ್ನು ದಯಾನಂದರಿಗೆ ಕುಡಿಯಲು ಕೊಟ್ಟ. ಹಾಲು ಕುಡಿದು ಮಲಗಿದ ದಯಾನಂದರಿಗೆ ಕೆಲ ಸಮಯದಲ್ಲಿಯೇ ಹೊಟ್ಟೆಯ ಒಳಗೆ ಸುಡುವ ಅನುಭವವಾದಾಗ ಎಚ್ಚರವಾಗಿ ತಮಗೆ ವಿಷ ಉಣಿಸಿದ್ದಾರೆಂದು ಗೊತ್ತಾಗಿ ವಿಷವನ್ನು ಹೊರಹಾಕಲು ಪ್ರಯತ್ನಿಸಿದರು. ಆದರೆ ಅದಾಗಲೇ ತಡವಾಗಿತ್ತು. ವಿಷವಾಗಲೇ ರಕ್ತ ಸೇರಿಬಿಟ್ಟಿತ್ತು. ಅವರು ಹಾಸಿಗೆ ಹಿಡಿದು ಅಸಾಧ್ಯ ನೋವನ್ನು ಸಹಿಸಬೇಕಾಯಿತು. ಅನೇಕ ವೈದ್ಯರುಗಳು ನೀಡಿದ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಅವರ ದೇಹದಲ್ಲಿ ಎಲ್ಲೆಲ್ಲೂ ರಕ್ತ ಸೋರುವ ಹುಣ್ಣುಗಳಾದವು. ಅವರ ಸ್ಥಿತಿಯನ್ನು ನೋಡಲಾಗದ ಅಡಿಗೆ ಭಟ್ಟ ಕಣ್ಣೀರು ಸುರಿಸುತ್ತಾ ಬಂದು ದಯಾನಂದರಲ್ಲಿ ತನ್ನ ತಪ್ಪು ಒಪ್ಪಿಕೊಂಡ. ಅಂತಹ ಸಾವಿನ ಸಮೀಪದಲ್ಲಿ ಇದ್ದಾಗಲೂ ದಯಾನಂದರು ಆತನನ್ನು ಕ್ಷಮಿಸಿದ್ದಲ್ಲದೆ, ಅವನಿಗೆ ಒಂದು ಥೈಲಿಯಲ್ಲಿ ಹಣ ನೀಡಿ ಆದಷ್ಟು ಬೇಗ ರಾಜ್ಯ ತೊರೆದು ಹೋಗಿ ಮಹಾರಾಜರ ಭಟರಿಂದ ಜೀವ ಉಳಿಸಿಕೊಳ್ಳಲು ಸಲಹೆ ನೀಡಿದ್ದರು. ೩೦-೧೦-೧೯೮೩ರಲ್ಲಿ ಅವರು ದೇಹತ್ಯಾಗ ಮಾಡಿದರು. ಅಂತಹ ಸಾವನ್ನೂ ಸಹ ಅವರು ಆದರದಿಂದ ಬರಮಾಡಿಕೊಂಡಿದ್ದರು. ಮಾರಿಷಸ್ ಸರ್ಕಾರ ಅವರ ನೆನಪಿನಲ್ಲಿ ಹೊರಡಿಸಿದ್ದ ಅಂಚೆ ಚೀಟಿಗಳ ಚಿತ್ರವಿದು.

ಭಾನುವಾರ, ಅಕ್ಟೋಬರ್ 13, 2013

ಸಂಪ್ರದಾಯಗಳು ಮತ್ತು ನಾವು

ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು 
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳು ಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ ||
     ಒಂದು ಕಾಲವಿತ್ತು, ಕೈ ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು, ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು, ಕೈಗೆ ಬಳೆ ಹಾಕಿಕೊಳ್ಳದೆ, ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ ಕಾಲವಿತ್ತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವರ ಪಾಡು ಅನುಭವಿಸಿದವರಿಗೇ ಗೊತ್ತು.  ಆಕೆಗೆ ಶುಭ ಕಾರ್ಯಗಳಲ್ಲಿ ಆಹ್ವಾನವಿರುತ್ತಿರಲಿಲ್ಲ. ಆಕೆ ಎದುರಿಗೆ ಬಂದರೆ ಅಪಶಕುನವೆಂದು ಭಾವಿಸುವವರಿದ್ದರು. ಹೊಸ ಪೀಳಿಗೆಯವರಿಗೆ ಇಂತಹ ಅನಿಷ್ಟ ಸಂಪ್ರದಾಯದ ಪರಿಚಯ ಇರಲಾರದು. ಪ್ರಾರಂಭದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವುದು ನಿಂತರೂ ಕೈಗೆ ಬಳೆ ಹಾಕಿಕೊಳ್ಳಲು, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ, ಸುಧಾರಣೆಯಾಗಿದೆ. ಕಳೆದ ಮೂರು-ನಾಲ್ಕು ದಶಕಗಳಿಂದೀಚೆಗೆ ಈ ಸಂಪ್ರದಾಯದ ಆಚರಣೆ ಕಂಡು ಬರುತ್ತಿಲ್ಲ. ಒಂದು ಅನಿಷ್ಟ ಸಂಪ್ರದಾಯದ ಅಂತ್ಯವಾಗಿರುವುದು ಸಮಾಧಾನದ ಸಂಗತಿ. 
     ಸಂಪ್ರದಾಯವೆಂದರೆ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುವ ಆಚರಣೆಗಳು/ ನಡವಳಿಕೆಗಳು. ಸರಿಯೋ, ತಪ್ಪೋ ವಿಚಾರ ಮಾಡದೆ ಅದನ್ನು ಮುಂದುವರೆಸಿಕೊಂಡು ಬರುವವರನ್ನು ಸಂಪ್ರದಾಯವಾದಿಗಳು ಎನ್ನುತ್ತಾರೆ. ಕೆಲವನ್ನು ಆಚರಿಸಿ ಕೆಲವನ್ನು ಕೈಬಿಡುವ ಅನುಕೂಲ/ಅವಕಾಶವಾದಿಗಳೂ ಇದ್ದಾರೆ. ಅರ್ಥವಿಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಸ್ವತಃ ಸಂಪ್ರದಾಯಗಳನ್ನು ಆಚರಿಸದಿದ್ದರೂ, ಅರ್ಥವಿಲ್ಲವೆಂದು ತಿಳಿದಿದ್ದರೂ, ಇತರರ ಸಲುವಾಗಿ ಅವನ್ನು ಬೆಂಬಲಿಸುವವರ ಸಂಖ್ಯೆ  ಸಹ ಗಣನೀಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ  ಎಲ್ಲರನ್ನೂ ಹೊಂದಿಸಿಕೊಂಡು, ಹೊಂದಿಕೊಂಡು ಸಮನ್ವಯ ಮಾಡಿ ಸದ್ವಿಚಾರ ತಿಳಿಸಲು ಹೆಣಗುವವರೂ ಇದ್ದಾರೆ. ಎಲ್ಲಾ ಸಂಪ್ರದಾಯಗಳೂ ಕೆಟ್ಟವಲ್ಲ. ಹಾಗೆಯೇ ಎಲ್ಲವೂ ಒಳ್ಳೆಯವು ಎಂದು ಹೇಳಲಾಗುವುದಿಲ್ಲ. ಯಾವ ಆಚರಣೆಗಳಿಂದ ಯಾರಿಗೂ ತೊಂದರೆಯಿಲ್ಲವೋ, ಯಾವುದರಿಂದ ಮನುಷ್ಯನ ಬೌದ್ಧಿಕ ಹಾಗೂ ಮಾನಸಿಕ ವಿಕಾಸ, ಅಭಿವೃದ್ಧಿಗೆ ಸಹಕಾರವಾಗುವುದೋ, ಸಂತಸ ಹರಡುವುದೋ, ತಾರತಮ್ಯ ಇಲ್ಲದಿರುವುದೋ ಅಂತಹವುಗಳನ್ನು  ಒಳ್ಳೆಯ ಸಂಪ್ರದಾಯಗಳೆನ್ನಬಹುದು. ಇದಕ್ಕೆ ತದ್ವಿರುದ್ಧವಾದ ಸಂಪ್ರದಾಯಗಳನ್ನು ಕೆಟ್ಟವು ಎಂದುಕೊಳ್ಳಬಹುದು. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ, ಈಗಂತೂ ಹೊಸ ಹೊಸ ಸಂಪ್ರದಾಯಗಳು, ಆಚರಣೆಗಳು ಚಾಲ್ತಿಗೆ ಬರುತ್ತಿವೆ. ಹಿಂದಿನ ಅನುಭವಗಳಿಂದ ಹೇಳುವುದಾದರೆ ಕ್ರಮೇಣ ಅವು ಗಟ್ಟಿಗೊಳ್ಳುತ್ತವೆ.
     ಬಾಲ ಗಂಗಾಧರನಾಥ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವ ಸಲುವಾಗಿ ಹುಟ್ಟುಹಾಕಿದ ಸಾರ್ವಜನಿಕ ಗಣೇಶ ಉತ್ಸವಗಳು ಇಂದು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಮೊದಲು ಊರಿಗೆ ಒಂದರಂತೆ ಇದ್ದುದು, ಈಗ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟು ಅಲ್ಲಿ ನಡೆಸುವ ಕಾರ್ಯಕ್ರಮಗಳು, ಪೈಪೋಟಿ, ವಂತಿಕೆ ವಸೂಲಿ, ವಿಸರ್ಜನೆ ಸಮಯದಲ್ಲಿ ಕುಡಿದು ಕುಣಿಯುವ ಯುವಕರು, ಮತೀಯ ಘರ್ಷಣೆಗಳು, ಇತ್ಯಾದಿಗಳನ್ನು ಗಮನಿಸಿದರೆ ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ ಎಂದು ಅನ್ನಿಸದೇ ಇರದು. ಒಳ್ಳೆಯ ರೀತಿಯಲ್ಲಿ ಆಚರಿಸುವವರು ಇದ್ದರೂ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಗಣೇಶೋತ್ಸವಗಳು ಮುಗಿಯುವವರೆಗೂ ಶಾಂತಿ, ಸುವ್ಯವಸ್ಥೆಗಳಿಗಾಗಿ ಸಂಬಂಧಿಸಿದವರು ಹಗಲೂ ರಾತ್ರಿ ಹೆಣಗುವ, ಇಂತಹ ಉತ್ಸವಗಳು (ಗಣೇಶೋತ್ಸವ ಮಾತ್ರ ಅಲ್ಲ, ಎಲ್ಲಾ ಮತೀಯ/ಧಾರ್ಮಿಕ ಉತ್ಸವಗಳು ಸೇರಿ) ಏಕಾದರೂ     ಬರುತ್ತವೋ ಎಂದು ಅಂದುಕೊಳ್ಳುವ ಪರಿಸ್ಥಿತಿ ಇಂದು  ಇದೆ. ನಾನು ಗಣೇಶೋತ್ಸವವನ್ನಾಗಲೀ, ಇಂತಹ ಇತರ ಉತ್ಸವಗಳನ್ನಾಗಲೀ ವಿರೋಧಿಸುತ್ತಿಲ್ಲ, ಅದನ್ನು ಆಚರಿಸಲಾಗುತ್ತಿರುವ ರೀತಿಯ  ಬಗ್ಗೆ ಮಾತ್ರ ಬೆರಳು ತೋರಿಸುತ್ತಿದ್ದು, ಆಚರಣೆಗಳು ಅರ್ಥಪೂರ್ಣವಾಗಿರಬೇಕೆಂಬ ಕಳಕಳಿ ಮಾತ್ರ ಇಲ್ಲಿದೆ. 
     ಸಂಕಷ್ಟಹರ ಗಣಪತಿ ಪೂಜೆಯನ್ನು  ಇಂದು ಸಾಮೂಹಿಕ ಸನ್ನಿಯಂತೆ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರು ಇದನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ? ಹೆಚ್ಚಿನವರು ಸ್ವಸಹಾಯ ಪದ್ಧತಿಯ ಹೋಟೆಲ್ಲಿನಲ್ಲಿ ಹಣ ಕೊಟ್ಟು ಕಾಫಿ ಕುಡಿದಂತೆ ದೇವಸ್ಥಾನಕ್ಕೆ ಹೋಗಿ ಹಣ ಕೊಟ್ಟು ಚೀಟಿ ಬರೆಸಿ ಹೋಗುತ್ತಾರೆ, ಪ್ರಸಾದ ಕೊಡುವ ಸಮಯಕ್ಕೆ ಬಂದು ಕೈಮುಗಿದು ಪ್ರಸಾದ ಪಡೆದು ಹೋಗುತ್ತಾರೆ. ಪೂಜೆಯ ಸಮಯದಲ್ಲಿ ದೇವಸ್ಥಾನದಲ್ಲಿದ್ದವರೂ ಪರಸ್ಪರ ಮಾತುಕತೆಗಳಲ್ಲಿ ತೊಡಗಿರುತ್ತಾರೆ. ಹಣ ಕೊಟ್ಟು ಪದಾರ್ಥಗಳನ್ನು ಕೊಂಡುಕೊಂಡಂತೆ ಪುಣ್ಯವನ್ನು ಖರೀದಿಸಬಹುದೇ? ಇಂತಹ ಆಚರಣೆಯಿಂದ ಯಾರಿಗೆ ಪ್ರಯೋಜನ? ಯಾರ ಕಷ್ಟಗಳು ಪರಿಹಾರವಾಗುತ್ತದೆ? ಶ್ರದ್ಧೆಯಿಂದ, ಅರ್ಥ ತಿಳಿದುಕೊಂಡು ಮಾಡುವ ಕ್ರಿಯೆಗಳಿಂದ ಮಾತ್ರ ಫಲ ಸಿಗಲು ಸಾಧ್ಯವಲ್ಲವೇ? ಇಲ್ಲದಿದ್ದರೆ ಅವು ತೋರಿಕೆಗೆ ಮಾಡುವ ಆಚರಣೆಗಳಾಗುತ್ತವೆ ಅಷ್ಟೆ. ಇಸ್ಲಾಮ್ ಮತ ಪ್ರಾರಂಭವಾದ ಸಂದರ್ಭದಲ್ಲಿ ಧ್ವನಿವರ್ಧಕವಿರಲಿಲ್ಲ. ಆದರೆ ಇಂದು ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿವರ್ಧಿಸಿ ನಮಾಜು, ಉಪದೇಶಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾದ ಸಂಪ್ರದಾಯವಾಗಿಬಿಟ್ಟಿದೆ. ಅದನ್ನು ಕೇಳಲು ಇಚ್ಛಿಸದವರಿಗೂ ಬಲವಂತವಾಗಿ ಕೇಳುವಂತೆ ಮಾಡುತ್ತಿರುವುದು ಒಂದು ರೀತಿಯ ಶಬ್ದಮಾಲಿನ್ಯವಲ್ಲವೇ? 
     ಜಾತ್ರೆ, ಪೂಜೆ, ಇತ್ಯಾದಿಗಳ ಹೆಸರಿನಲ್ಲಿ ದೇವರನ್ನು ಸಂತುಷ್ಟಗೊಳಿಸುವ(?) ಕಾರಣದಿಂದ ಪ್ರಾಣಿಬಲಿ ನೀಡುವ ಸಂಪ್ರದಾಯ ಒಳ್ಳೆಯದೆಂದು ಹೇಳಬಹುದೆ? ಇದನ್ನು ಸಮರ್ಥಿಸುವ ಜನರಿಗೆ ಕಡಿಮೆಯೇನಿಲ್ಲ. ಶಿಕಾರಿಪುರದಲ್ಲಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಾತ್ರೆಯ ಸಮಯದಲ್ಲಿ ಕೋಣಬಲಿ ತಡೆಯಲು ಒಂದು ಗ್ರಾಮದಲ್ಲಿ  ಪೋಲಿಸರ ನೆರವಿನೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿತ್ತು. ಗ್ರಾಮಸ್ಥರಿಗೆ ಕಾನೂನಿನಲ್ಲಿ ಇರುವ ನಿಷೇಧ, ಉಲ್ಲಂಘಿಸಿದರೆ ಆಗುವ ಪರಿಣಾಮಗಳು, ಇತ್ಯಾದಿ ಕುರಿತು ತಿಳುವಳಿಕೆ ಹೇಳಲಾಗಿತ್ತು. ಮುಂಚಿತವಾಗಿ ನಡೆಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಪಶುವೈದ್ಯರ ಸಹಾಯದಿಂದ ಸಿರಿಂಜಿನಲ್ಲಿ ಕೋಣನ ರಕ್ತವನ್ನು ತೆಗೆದು ಸಾಂಕೇತಿಕವಾಗಿ ದೇವಿಗೆ ಅರ್ಪಿಸಲು ಗ್ರಾಮದ ಮುಖ್ಯಸರು ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಪೋಲಿಸರ ಹಾಗೂ ನಮ್ಮ ಸಿಬ್ಬಂದಿಯ ಕಣ್ಗಾವಲು ಇದ್ದರೂ, ನಂತರ  ಎಲ್ಲರ ಕಣ್ಣುತಪ್ಪಿಸಿ ಕೋಣಬಲಿ ನೀಡಿದ ಪ್ರಸಂಗ ಬೇಸರ, ಮುಜುಗರ ಉಂಟುಮಾಡಿತ್ತು. ಎಲ್ಲಾ ಮಾಧ್ಯಮಗಳಲ್ಲೂ ವಿಷಯ ಅತಿರಂಜಿತವಾಗಿ ಪ್ರಚಾರಗೊಂಡಿತು. ಕೆಲವರ ಮೇಲೆ ಪ್ರಕರಣ ದಾಖಲಿಸಿದರೂ ರಾಜಕೀಯ ನಾಯಕರ ಮಧ್ಯಪ್ರವೇಶ ಪ್ರಕರಣವನ್ನು ದುರ್ಬಲಗೊಳಿಸಿದ್ದು ಸುಳ್ಳಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡುವ ಸಲುವಾಗಿ ಪರವಾಗಿ ಮತ್ತು ವಿರೋಧವಾಗಿ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಬಳಸಿಕೊಂಡವು. ಅನಿಷ್ಟ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದವರೂ ಸಾತ್ವಿಕ ಕಾರಣಕ್ಕೆ ವಿರೋಧಿಸದೆ ವಿರೋಧಿಗಳನ್ನು ವಿರೋಧಿಸಲು ಮಾತ್ರ ಬಳಸಿದ್ದು ನೋವಿನ ವಿಷಯ. ಮಾಧ್ಯಮಗಳೂ ಕೆಸರೆರಚಾಟಕ್ಕೆ ಸಾಥ್ ನೀಡಿದವೇ ಹೊರತು, ಅವುಗಳಿಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಶಕ್ತಿಯಿದ್ದರೂ ಮಾಡಲಿಲ್ಲ.  ಇಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಪ್ರಚಲಿತ ನಾಡಿನ ಕಾನೂನುಗಳನ್ನೂ ಧಿಕ್ಕರಿಸಿ ನಡೆಸುವ ಅಂಧ ಸಂಪ್ರದಾಯಗಳ ಕುರಿತು ತಿಳಿಸುವ ಸಲುವಾಗಿ ಮಾತ್ರ ಇದನ್ನು ಸಾಂಕೇತಿಕವಾಗಿ ಉದಾಹರಿಸಿರುವೆ.  
     ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕು ಅನ್ನುವುದಕ್ಕಿಂತ ಕೆಟ್ಟ ಸಂಪ್ರದಾಯಗಳನ್ನು ಗುರುತಿಸಿ ಅವುಗಳಿಂದ ದೂರ ಉಳಿಯಲು ಮತ್ತು ಸಾಧ್ಯವಾದರೆ ತಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯ. ಮಠ-ಮಂದಿರಗಳು, ಮಸೀದಿಗಳು, ಚರ್ಚುಗಳು, ಇತ್ಯಾದಿಗಳು ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಮತ್ತು ಅರ್ಥರಹಿತ ಸಂಪ್ರದಾಯಗಳನ್ನು ದೂರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ. ಈ ಕೇಂದ್ರಗಳು ವಾಸ್ತವವಾಗಿ ಸತ್ಕರ್ಮಗಳನ್ನು ಪೋಷಿಸುವ, ಜ್ಞಾನ ಪಸರಿಸುವ ಕೆಲಸ ಮಾಡಬೇಕು. ವಿಷಾದದ ಸಂಗತಿಯೆಂದರೆ ಹೆಚ್ಚಿನವು ಋಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ ಸಂಸ್ಥೆಗಳನ್ನು, ಕಲ್ಯಾಣ ಮಂದಿರಗಳನ್ನು ಕಟ್ಟಿ ಹಣ ಮಾಡುವ ಕೇಂದ್ರಗಳಾಗಿವೆ. ತಿರುಳಿಗಿಂತ ಸಿಪ್ಪೆಗೆ ಹೆಚ್ಚು ಮಾನ್ಯತೆ ಕೊಡಲಾಗುತ್ತಿದೆ. ನಿಜ, ತಿರುಳಿನ ರಕ್ಷಣೆಗೆ ಸಿಪ್ಪೆಯಿರಬೇಕು, ಆದರೆ ಸಿಪ್ಪೆಯೇ ತಿರುಳಾಗಬಾರದು. ಆ ಕಾರಣದಿಂದಾಗಿಯೇ ಉತ್ತರಾಧಿಕಾರಕ್ಕಾಗಿ ಕಚ್ಚಾಡುವ, ಒಡೆತನ ಸಾಧಿಸಬಯಸುವವರ ಕೂಟ ಅಲ್ಲಿ ಮನೆ ಮಾಡಿವೆ. ಮೂಲ ಉದ್ದೇಶ ಮರೆತು ಭೌತಿಕ ಆಸ್ತಿ, ಸಂಪತ್ತು ಕ್ರೋಢೀಕರಿಸಲು ನೀಡುವ ಮಹತ್ವವೇ ಇದಕ್ಕೆ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ. 
     ರೂಢಿಗತ ಸಂಪ್ರದಾಯಗಳಿಗೆ ಹೇಗೆ ಮನಸ್ಸು ಒಗ್ಗಿಕೊಳ್ಳುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಬಲಶಾಲಿ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಮರವೊಂದಕ್ಕೆ ಅಥವ ಒಂದು ಗೂಟಕ್ಕೆ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಪ್ರಯತ್ನವೇ ಮಾಡುವುದಿಲ್ಲ. ಆನೆ ಎಷ್ಟು ಬಲಶಾಲಿಯೆಂದರೆ ಅದಕ್ಕೆ ಆ ಸರಪಳಿಯಾಗಲೀ, ಗೂಟವಾಗಲೀ ಅಥವ ಮರವಾಗಲೀ ಲೆಕ್ಕವೇ ಅಲ್ಲ. ಅದು ಮನಸ್ಸು ಮಾಡಿದರೆ ಸರಪಳಿ ತುಂಡರಿಸಬಲ್ಲದು ಮತ್ತು ಮರವನ್ನು ಕಿತ್ತು ಬಿಸಾಡಬಲ್ಲದು. ಆದರೂ ಆ ಕೆಲಸವನ್ನು ಆನೆ ಮಾಡುವುದಿಲ್ಲ. ಏಕೆಂದರೆ ಚಿಕ್ಕದಾಗಿದ್ದಾಗ ಅದನ್ನು ಅದೇ ರೀತಿ ಕಟ್ಟಿ ಹಾಕಲಾಗುತ್ತಿತ್ತು. ಚಿಕ್ಕದಾಗಿದ್ದರಿಂದ ಬಂಧನದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಆಗ ಆಗುತ್ತಿರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗಿ ಮರಕ್ಕೆ ಕಟ್ಟಿ ಹಾಕಿದರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂಬ ಭಾವ ಗಟ್ಟಿಗೊಂಡು ಅದು ದೊಡ್ಡದಾದ ಮೇಲೂ ಹಾಗೆ ಕಟ್ಟಿಹಾಕಿದರೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೇ ಇರಲಿಲ್ಲ. ನಮ್ಮ ಸ್ಥಿತಿ ಸಹ ಅದೇ ರೀತಿ ಇದೆ. ನಮಗೆ ವಿಚಾರ ಮಾಡುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಕೆಲವು ಸಂಪ್ರದಾಯಗಳು ಅರ್ಥಹೀನವೆಂದು ನಮಗೆ ತಿಳಿಯುತ್ತದೆ, ಮನಸ್ಸು ಮಾಡಿದರೆ ಅದನ್ನು ಧಿಕ್ಕರಿಸುವ, ಮುಂದುವರೆಸದಿರುವ ಶಕ್ತಿ ನಮಗಿದೆ, ಆದರೂ ನಾವು ಹಾಗೆ ಮಾಡುವುದಿಲ್ಲ. 'ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳಲಾಗುವುದೇ' ಎಂಬ ಪ್ರಚಲಿತ ಗಾದೆ ಮಾತು ತಿಳಿಸುವುದೂ ವಿಚಾರ ಮಾಡಿ ಮುಂದುವರೆಯಿರಿ ಎಂದೇ. ಮರದ ನೆರಳಿನಲ್ಲಿ ಬಾಳೋಣ, ಆದರೆ ಏಕೆ ನೇಣು ಹಾಕಿಕೊಳ್ಳಬೇಕು? ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕಬೇಕಾಗಿಲ್ಲ. ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಹಿತವೆನಿಸುವ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬಹುದು, ಒಳ್ಳೆಯದಾದ ಹೊಸ ಸಂಪ್ರದಾಯಗಳನ್ನು ಹುಟ್ಟು ಹಾಕಬಹುದು, ಆದರೆ ಅನಿಷ್ಠ ಸಂಪ್ರದಾಯಗಳನ್ನು ನಿಲ್ಲಿಸುವ ಮತ್ತು ಸದ್ಯಕ್ಕೆ ಒಳ್ಳೆಯದೆನಿಸಿದರೂ ಕಾಲಾನುಕಾಲಕ್ಕೆ ಅದರ ಆಚರಣೆಯಿಂದ ಆಗುವ ಪರಿಣಾಮಗಳನ್ನೂ ಗಮನಿಸಿ ಯೋಗ್ಯತಾನುಸಾರ ನಿರ್ಣಯಿಸಿ ಅಂತಹವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸುವುದು ಇಂದಿನ ಅಗತ್ಯವಾಗಿದೆ. ಸಂಪ್ರದಾಯಗಳು ನಮ್ಮನ್ನು ಕಟ್ಟಿಹಾಕುವ ಸರಪಳಿಗಳಾಗದೆ, ನಮ್ಮನ್ನು ಒಳ್ಳೆಯ ದಾರಿಯಲ್ಲಿ ಕೈಹಿಡಿದು ಮುನ್ನಡೆಸುವ ದಾರಿದೀಪಗಳಾಗಲಿ. 
-ಕ.ವೆಂ. ನಾಗರಾಜ್.

ಗುರುವಾರ, ಸೆಪ್ಟೆಂಬರ್ 26, 2013

ನೂರು ವರ್ಷಗಳಿಗೂ ಮೀರಿ ಬದುಕೋಣ !


ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರುತಿಹುದು ಸಾವು |
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||
     ಸಾವಿಲ್ಲದ ಜೀವಿಗಳು ಯಾವುದಾದರೂ ಇವೆಯೇ? ಜೀವಿಗಳಿಗೆಲ್ಲಾ ಸಾವು ಖಚಿತವೆಂಬ ಸರಳ ಸತ್ಯವನ್ನು ತಿಳಿಯದವರು, ಒಪ್ಪದವರು ಯಾರಾದರೂ ಇದ್ದಾರೆಯೇ? ಯಾವುದೇ ಸಿದ್ಧಾಂತ, ತತ್ವ, ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದೀತು, ಆದರೆ ಎಲ್ಲರೂ ಸಾಯುತ್ತಾರೆ ಎಂಬ ಬಗ್ಗೆ ಭಿನ್ನಾಭಿಪ್ರಾಯವಿರಲಾರದು. ಸಾಯುವುದು ಗೊತ್ತಿದ್ದರೂ ಮನುಷ್ಯರು ಚಿರಂಜೀವಿಗಳಂತೆ ವರ್ತಿಸಿ, ಎಲ್ಲವೂ ಬೇಕು, ತಮಗೊಬ್ಬರಿಗೇ ಬೇಕು ಎಂದು ಏಕೆ ಹಪಹಪಿಸುತ್ತಾರೆಂಬುದು ಚೋದ್ಯವೇ ಸರಿ. ಆಳವಾಗಿ ತರ್ಕಿಸುತ್ತಾ ಹೋದರೆ 'ಬೇಕು' ಎಂಬುದು ಪ್ರತಿ ಜೀವಿಯ ಅಂತರ್ಗತ ಸ್ವಭಾವವೆಂಬುದನ್ನು ಒಪ್ಪಲೇಬೇಕು. ಈಗ ಇರುವ ಸ್ಥಿತಿಗಿಂತ ಮೇಲೇರಬೇಕು ಎಂಬ ಪ್ರಬಲ ಇಚ್ಛೆ ಎಲ್ಲರಿಗೂ ಸಹಜ. ಈ 'ಬೇಕು' ಅನ್ನುವುದು ಯಾವ ಹಂತದಲ್ಲೇ ಆಗಲಿ, 'ಸಾಕು' ಎಂಬ ಭಾವನೆ ಮೂಡಲು ಬಿಡುವುದಿಲ್ಲ. ಅಂದುಕೊಂಡಿದ್ದಂತೆ ಬಯಸಿದ್ದು ಸಿಕ್ಕಿದ ತಕ್ಷಣದಲ್ಲೇ ಅದಕ್ಕಿಂತ ಮೇಲಿನ 'ಬೇಕು' ಧುತ್ತೆಂದು ಆ ಸ್ಥಾನವನ್ನು ಆಕ್ರಮಿಸಿಬಿಡುತ್ತದೆ. ಮನುಷ್ಯೇತರ ಜೀವಿಗಳಿಗಿಂತ ವಿವೇಚನೆ ಮಾಡುವ ಶಕ್ತಿ ಹೊಂದಿರುವ ಮಾನವಜೀವಿಗಳಲ್ಲಿ ಈ 'ಬೇಕು'ವಿನ ಪ್ರಮಾಣ ಜಾಸ್ತಿ. ಈ 'ಬೇಕು'ವಿನಿಂದಲೇ ಜೀವಚಕ್ರ ತಿರುಗುತ್ತಿರುವುದು ಎನ್ನಬಹುದು. 'ಬೇಕು'ಗಳನ್ನು ಮೀರಿ ಯಾವುದೂ ಬೇಡವೆಂದು ವಿರಾಗಿಗಳಾದವರಿಗೂ ಮೋಕ್ಷ ಸಾಧಿಸಬೇಕೆಂಬ ದೊಡ್ಡ 'ಬೇಕು' ಇರುತ್ತದೆ. ಈ 'ಬೇಕು'ವಿಗಾಗಿಯೇ ಅವರು ಇತರ ಪ್ರಾಪಂಚಿಕ 'ಬೇಕು'ಗಳನ್ನು ದೂರಮಾಡಿರುತ್ತಾರೆ! 
     ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರು ಒಂದು ಸತ್ಸಂಗದಲ್ಲಿ ಹೇಳಿದ ಪ್ರಸಂಗವಿದು: ಅವರು ಒಮ್ಮೆ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ ರೋಗಿಗಳನ್ನು ಸಂತಯಿಸುವ ಸಲುವಾಗಿ ಹೋಗಿದ್ದಾಗ ರೋಗದಿಂದ ನರಳುತ್ತಿದ್ದ ಮುದುಕಿಯೊಬ್ಬಳು, "ಯಪ್ಪಾ, ನನಗೆ ನರಳಿ ನರಳಿ ಸಾಕಾಗಿ ಹೋಗಿದೆ. ಜೀವನ ಸಾಕು ಅನ್ನಿಸಿಬಿಟ್ಟಿದೆ. ದಯವಿಟ್ಟು ನನ್ನ ತಲೆಯ ಮೇಲೆ ಕೈಯಿಟ್ಟು ನನ್ನನ್ನು ಬೇಗ ಕರೆಸಿಕೊಳ್ಳಲು ದೇವರಲ್ಲಿ ಹೇಳಪ್ಪಾ" ಅಂದಳಂತೆ. ಆಕೆಯನ್ನು ಸಂತೈಸಿ ಮುಂದೆ ಹೋಗುತ್ತಿದ್ದಾಗ ಆಕೆ ಹಿಂದೆಯೇ ಧಾವಿಸಿ ಬಂದು, "ಯಪ್ಪಾ, ನಿಮಗೆ ದೊಡ್ಡ ಡಾಕ್ಟರು ತುಂಬಾ ಪರಿಚಯ ಅಂತೆ. ಅವರಿಗೆ ಹೇಳಿ ಒಳ್ಳೆಯ ಔಷಧಿ ಕೊಡಲು ಹೇಳಪ್ಪಾ" ಅಂದಳಂತೆ! ಇಲ್ಲಿ ಕಾಣುವುದೇನೆಂದರೆ ಸಾವನ್ನು ಮೀರಿ ಬದುಕಬೇಕೆಂಬ ಆಸೆ. ಇದು ಸಹಜ. ಜೀವ ಹೋಗಲು ಈಗಲೋ ಆಗಲೋ ಎನ್ನುತ್ತಿರುವಾಗಲೂ ಆ ಜೀವ ಬದುಕಲು ತುಡಿಯುತ್ತಿರುತ್ತದೆ. ಇಷ್ಟಾದರೂ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರೂ ಇರುತ್ತಾರೆ. ಬಹುಷಃ ಅದಕ್ಕೆ ಕಾರಣ ಈ ಜನ್ಮದಲ್ಲಿ ಸಿಗದಿದ್ದುದು ಮುಂದಿನ ಜನ್ಮದಲ್ಲಾದರೂ ಸಿಗಲಿ ಎಂಬ ಭಾವವೂ ಇದ್ದಿರಬಹುದು. ಬಡತನ, ಸಾಂಸಾರಿಕ ಸಮಸ್ಯೆಗಳು, ಇತ್ಯಾದಿಗಳಿಂದ ರೋಸಿಹೋದವರು, ಭಗ್ನಪ್ರೇಮಿಗಳು, ಮುಂತಾದವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಡೆದು, ಸಾಯುವುದರಿಂದ ಸಮಸ್ಯೆ ಪರಿಹಾರವಾಗುವುದೇ ಎಂದು ವಿಚಾರಿಸಿದರೆ ಅವರು ಬಹುಷಃ ಸಾಮಾನ್ಯವಾಗಿ ಏನು ಹೇಳಬಹುದೆಂದರೆ ಅವರು ಬಯಸಿದ್ದುದು ಈ ಜನ್ಮದಲ್ಲಿ ಸಿಗುವುದೇ ಇಲ್ಲವೆಂಬ ಭಾವದಿಂದ, ಅದು ಇಲ್ಲದೇ ಜೀವನ ವ್ಯರ್ಥವೆಂಬ ಕಾರಣದಿಂದ, ತಮ್ಮ ಸಮಸ್ಯೆಗೆ ಈ ಜನ್ಮದಲ್ಲಿ ಪರಿಹಾರ ಸಿಕ್ಕುವುದೇ ಇಲ್ಲವೆಂಬ, ಇತ್ಯಾದಿ ಕಾರಣಗಳನ್ನು ಕೊಟ್ಟಾರು. ಗಮನಿಸಬೇಕಾದುದೇನೆಂದರೆ, ಅವರ 'ಬೇಕು'ಗಳಿಗಾಗಿಯೇ ಅವರು ಸಾಯುತ್ತಾರೆ. ಏಕೆಂದರೆ ಅದು ಅವರಿಗೆ 'ಬೇಕಾಗಿದೆ'. ಇದು ಏನು ಸೂಚಿಸುತ್ತದೆ? ತಮಗೆ ಬೇಕೆನಿಸಿದಂತೆ ಬದುಕುವುದು ಅವರಿಗೆ ಬೇಕಿದೆ. 
ಬಯಸಿದರು ಸಾವೆ ಬಯಸದಿದ್ದರು ಸಾವೆ
ಬೇಡವೆಂದರೆ ನೀನು ಬರದಿಹುದೆ ಸಾವು |
ಬೇಡದಿರು ಮನವೆ ಬೇಡದಿಹ ಸಾವ
ಅಡ್ಡದಾರಿಯಲಿ ನುಗ್ಗದಿರು ಮೂಢ ||
     ಈ ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ಅದು ತಾನಾಗಿ ಬಂದಾಗ ಸಂತೋಷದಿಂದ ಹೋಗೋಣ. ನಗುತ್ತಾ ಸಾವನ್ನು ಅದು ಬರುವಾಗ ಮಿತ್ರನಂತೆ ಬರಮಾಡಿಕೊಳ್ಳೋಣ. ೮೪ ಲಕ್ಷ ವಿವಿಧ ಜೀವಿಗಳ ಪೈಕಿ ವಿರಳವಾದ ಮಾನವಜನ್ಮ ಹೊಂದುವುದು ಆ ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಈ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮ ಮಾತ್ರ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ; ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಆದರೆ, ಇಲ್ಲಿ ಒಂದು ವಿಶೇಷ ಅಂಶವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದಲ್ಲಿ ಮಾಡಿದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ. 
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮.)
     ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶ ಇಲ್ಲಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
     ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಲಾಗುವುದೇ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನನ ಉದಾಹರಣೆ ಕೊಡಬಹುದು. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ ಇನ್ನೂ ವಿಶ್ವಾಸವಿತ್ತು. ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಅವನಿಗೆ ಸಾಯುವವರೆಗೂ ಇತ್ತು. ಅವನ ಆತ್ಮವಿಶ್ವಾಸ ಮೆಚ್ಚುವಂತಹದು. ಮನುಷ್ಯ ಕನಸು ಕಾಣುವುದನ್ನು ನಿಲ್ಲಿಸಿದಾಗ ಸಾಯತೊಡಗುತ್ತಾನೆ.  ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯರಾದ ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದಂತೆ, "ಆಶಾವಾದವೇ ಜೀವನ, ನಿರಾಶಾವಾದವೇ ಮರಣ". ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು, ಎಷ್ಟು ಬಾಳಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ. ಸಾಯಲು ಬಯಸುವ ದುರಾಸೆ ಜೀವಿಯ ಇಚ್ಛಾಶಕ್ತಿಯನ್ನೇ ಹಾಳುಮಾಡುತ್ತದೆ. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿರುವವರ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ರಷ್ಯಾ, ಜಪಾನ್ ಮುಂತಾದ ದೇಶಗಳಲ್ಲಿ ೧೯೦ ವರ್ಷಗಳವರೆಗೂ ಜೀವಿಸಿದ್ದವರು ಇದ್ದರು. ಈಗಲೂ ನೂರು ವರ್ಷಗಳನ್ನು ಮೀರಿ ಜೀವಿಸಿರುವ ಹಲವರು ನಮ್ಮ ನಡುವೆ ಇದ್ದಾರೆ. ಸ್ವಾಮಿ ಶ್ರದ್ಧಾನಂದರ ಶಿಷ್ಯರಾದ, ಅದಮ್ಯ ಜೀವನೋತ್ಸಾಹದ ಚಿಲುಮೆ, ನಾಲ್ಕು ವೇದಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಚತುರ್‍ವೇದಿ ಎಂಬ ಸಾರ್ಥಕ ಹೆಸರನ್ನು ಪಡೆದಿರುವ, ವೇದದ ಸಾರ ಮತ್ತು ಉದ್ದೇಶಗಳನ್ನು ಈಗಲೂ ಸಾರುತ್ತಿರುವ, ನಿಜಬದುಕು ಸಾಗಿಸುತ್ತಿರುವ ಬೆಂಗಳೂರಿನ ೧೧೭ ವರ್ಷಗಳ ಅನುಪಮ ಸಾಧಕ ಮಾರ್ಗದರ್ಶಿ ಪಂ. ಸುಧಾಕರ ಚತುರ್‍ವೇದಿಯವರು ಇಚ್ಛಾಶಕ್ತಿಗೆ ಜ್ವಲಂತ ಉದಾಹರಣೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿದ್ದ, ಅಲ್ಲಿ ಹುತಾತ್ಮರಾದವರ ಸಾಮೂಹಿಕ ಸಂಸ್ಕಾರಕಾರ್ಯದಲ್ಲಿ ಭಾಗಿಯಾಗಿದ್ದ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು ಸುಮಾರು ೧೪ ವರ್ಷಗಳ ಕಾಲ ಸೆರೆವಾಸ ಕಂಡಿದ್ದ, ಈಗಲೂ ಸತ್ಸಂಗಗಳನ್ನು ನಡೆಸುತ್ತಾ, ನೂರಾರು ಅಂತರ್ಜಾತೀಯ ವಿವಾಹಗಳನ್ನು ಮಾಡಿಸಿರುವ, ರೂಢಿಗತ ಅಂಧ ಸಂಪ್ರದಾಯಗಳನ್ನು ವಿರೋಧಿಸಿ ವೇದದ ಬೆಳಕಿನಲ್ಲಿ ಸತ್ಯಾನ್ವೇಷಣೆಗೆ ಕರೆ ಕೊಡುತ್ತಿರುವ, ನಿಜವಾಗಿ ಬದುಕಲು ಪ್ರೇರಿಸುತ್ತಿರುವ ಅವರ ಬದುಕು ಅನುಸರಣೀಯ. 

ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು
ಹೇಡಿ ಸಾಯುವನು ವೀರನೂ ಸಾಯುವನು |
ದೇವ ನಿಯಮವಿದು ಎಲ್ಲರೂ ಸಾಯುವರು
ಬದುಕಿ ಸಾಯುವರ ನೆನೆಯೋ ಮೂಢ ||
     ಎಲ್ಲರೂ ಸಾಯುತ್ತಾರೆ, ಆದರೆ ಎಲ್ಲರೂ ಬದುಕುತ್ತಾರೆಯೇ ಎಂಬುದು ಕೇಳಬೇಕಾದ ಪ್ರಶ್ನೆ. ಬದುಕುವ ರೀತಿಯಲ್ಲಿ ಬದುಕಿದವರು ಸತ್ತ ಮೇಲೂ ಬದುಕಿರುತ್ತಾರೆ. ನೂರಾರು ವರ್ಷಗಳ ನಂತರವೂ, ಇಂದಿಗೂ ನಾವು ನೆನಪಿಸಿಕೊಳ್ಳುವ, ಗೌರವಿಸುವ, ದೇವರಂತೆ ಕಾಣುವ ರಾಮ, ಕೃಷ್ಣ, ವ್ಯಾಸ, ವಾಲ್ಮೀಕಿ, ಶಂಕರಾಚಾರ್ಯ, ವಿವೇಕಾನಂದ, ಬುದ್ಧ, ಬಸವ, ಮುಂತಾದ ನೂರಾರು, ಸಾವಿರಾರು ಮಹಾನ್ ವ್ಯಕ್ತಿಗಳು ಈ ಮಾತಿಗೆ ಪುಷ್ಟಿ ಕೊಡುತ್ತಾರೆ. ಹೇಗೋ ಹುಟ್ಟಿ, ಹೇಗೋ ಬದುಕಿ, ಹೇಗೋ ಕಂತೆ ಒಗೆದು ಹೋಗುವ ಸಾಮಾನ್ಯರ ನೆನಪು ಅವರ ಮಕ್ಕಳು, ಮೊಮ್ಮಕ್ಕಳುಗಳಿಗೇ ಇರುವುದಿಲ್ಲ ಅಲ್ಲವೇ? ಮಸುಕಾಗಿ ಮರೆಯಾಗುವುದಕ್ಕಿಂತ ಜ್ಯೋತಿಯಾಗಿ ಉರಿದು ನೆನಪು ಉಳಿಸುವುದು ಉತ್ತಮ. ಯೋಗ್ಯವಾಗಿ ಬದುಕಬೇಕೆಂಬ ಮಾರ್ಗದರ್ಶನ ನೀಡುವುದೇ ಸಾವು ಎಂಬುದನ್ನು ಮರೆಯಬಾರದು. ಭಗತ್ ಸಿಂಗ್, ರಾಜಗುರು, ಸುಖದೇವರಂತೆ, ಚಂದ್ರಶೇಖರ ಆಜಾದರಂತೆ ಇನ್ನೊಬ್ಬರ ಬದುಕಿಗಾಗಿ, ಒಳಿತಿಗಾಗಿ ಸಾಯಲು ಸಿದ್ಧರಿರುವವರ, ಸಾಯುವವರ ಬದುಕುಗಳು ಬದುಕಬೇಕಾದ ರೀತಿಗೆ ಉದಾಹರಣೆಗಳು. ಯಜುರ್ವೇದದ ಈ ಮಂತ್ರ ಮಾನವರು ಬದುಕಬೇಕಾದ ರೀತಿಗೆ ಅದ್ಭುತ ಮಾರ್ಗದರ್ಶಿಯಾಗಿದೆ:
 "ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಗ್ ಂ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಂ ಶತಮದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ ||"
     ಅರ್ಥ: ಶುಭವ ನೋಡುತಲಿ, ಶುಭವ ಕೇಳುತಲಿ, ಶುಭವ ನುಡಿಯುತಲಿ ನೂರ್ಕಾಲ ಬಾಳೋಣ. ದೈನ್ಯತೆಯಿಲ್ಲದೆ ಸ್ವಾಭಿಮಾನದಿಂದ ಸ್ವತಂತ್ರರಾಗಿ ನೂರ್ಕಾಲ ಬಾಳೋಣ. ನೂರು ವರ್ಷಗಳಿಗಿಂತ ಹೆಚ್ಚಾಗಿಯೂ ಬಾಳಿಕೊಂಡಿರೋಣ.
-ಕ.ವೆಂ.ನಾಗರಾಜ್.

ಬುಧವಾರ, ಸೆಪ್ಟೆಂಬರ್ 11, 2013

ಮಂಗಳವಾರ, ಸೆಪ್ಟೆಂಬರ್ 10, 2013

ಅವನಿಲ್ಲದೆ ನಾನಿಲ್ಲ, ನಾನಿಲ್ಲದೆ ಅವನಿಲ್ಲ!

ನಯನ ನೋಡುವುದು ತನಗಾಗಿ ಅಲ್ಲ
ಕಿವಿಯು ಕೇಳುವುದು ತನಗಲ್ಲವೇ ಅಲ್ಲ |
ದೇಹವಿದು ದಣಿಯುವುದು ದೇಹಕೆಂದಲ್ಲ
ಯಾರಿಗಾಗೆಂದು ಗೊತ್ತಿಹುದೆ ಮೂಢ? ||

ತನ್ನಿಷ್ಟ ಬಂದಂತೆ ನಯನ ನೋಡುವುದೆ?
ತನ್ನಿಚ್ಛೆಯಂತೆ ಕೈಕಾಲು ಆಡುವುವೆ? |
ತನುವಿನೊಳಗಿಹ ಅವನಿಚ್ಛೆಯೇ ಪರಮ
ಅವನಿರುವವರೆಗೆ ಆಟವೋ ಮೂಢ ||
    ನನಗೆ ಬಹಳ ಸಂತೋಷವಾಗಿತ್ತು. 'ಆಗಲಾರದು, ಕಷ್ಟ' ಎಂದುಕೊಂಡಿದ್ದ ಕೆಲಸವೊಂದು ಯಶಸ್ವಿಯಾಗಿ ಪೂರ್ಣವಾಗಿಬಿಟ್ಟಿತ್ತು. ನನಗೇ ನಂಬಲಾಗುತ್ತಿರಲಿಲ್ಲ. "ನೀವು ಇಲ್ಲದಿದ್ದರೆ ಈ ಕೆಲಸ ಆಗುತ್ತಲೇ ಇರಲಿಲ್ಲ. ನೀವು ಗ್ರೇಟ್ ಸಾರ್" ಎಂಬಂತಹ ಮಾತುಗಳು ಕೇಳಿಬಂದಾಗ ಉಬ್ಬಿಹೋಗಿದ್ದೆ. 'ನನ್ನಿಂದಲೇ ಈ ಕೆಲಸ ಆಗಿದ್ದು, ಇಲ್ಲದಿದ್ದರೆ ಆಗುತ್ತಿರಲಿಲ್ಲ'ವೆಂಬ ಭಾವನೆ ನನಗೂ ಬಂದು ಹೆಮ್ಮೆಪಡುತ್ತಿದ್ದಾಗಲೇ ಬಂದಿದ್ದ ಅವನು ನನ್ನನ್ನು ನೋಡಿ ಮುಗುಳ್ನಗುತ್ತಾ ಕರೆದಿದ್ದ: "ಬಾ ಇಲ್ಲಿ."
ನಾನು: (ನಗುತ್ತಲೇ) ಏನು ಸಮಾಚಾರ?
ಅವನು: ಈ ಕೆಲಸ ನೀನೇ ಮಾಡಿದ್ದಾ? ಬಹಳ ಚೆನ್ನಾಗಿದೆ.
ನಾನು: ನಿನಗೂ ಗೊತ್ತಿದೆ, ನಾನೇ ಮಾಡಿದ್ದು ಅಂತ. ತಮಾಷೆ ಮಾಡಬೇಡ. ಎಲ್ಲರೂ ಹೇಳ್ತಾ ಇರೋದನ್ನೂ ಕೇಳ್ತಲೇ ಇದೀಯ.
ಅವನು: ಎಲ್ಲರೂ ಏನಾದರೂ ಹೇಳಲಿ. ನಿನಗೆ ಏನು ಅನ್ನಿಸುತ್ತೆ ಅದನ್ನು ಹೇಳು.
ನಾನು: (ಗಂಭೀರವಾಗಿ) ಅನುಮಾನ ಏಕೆ? ನಾನೇ ಇದನ್ನು ಮಾಡಿದ್ದು.
ಅವನು: ಹಾಗಲ್ಲಪ್ಪಾ. ನಾನು ಕೇಳಿದ್ದು ನೀನು ಅಂದರೆ ಯಾರು ಅಂತ!
ನಾನು: (ಅನುಮಾನದಿಂದ ನೋಡುತ್ತಾ) ನಾನು ಯಾರು ಅಂದರೆ ಏನರ್ಥ? ನಿನ್ನ ಎದುರಿಗೆ ನಿಂತಿರುವ ನನ್ನ ಆರಡಿ ಎತ್ತರದ ಶರೀರವೂ ಕಾಣ್ತಾ ಇಲ್ವಾ?
ಅವನು: ಓ! ಈ ಶರೀರ ನಿನ್ನದಾ?
ನಾನು: ಮತ್ತೇನು ನಿನ್ನದಾ?
ಅವನು: ಹೋಗಲಿ ಬಿಡು. ನಿನ್ನ ಶರೀರ ಅಂದೆಯಲ್ಲಾ, ಅದು ನೀನು ಹೇಳಿದಂತೆ ಕೇಳುತ್ತಾ?
ನಾನು: (ಇವನಿಗೆ ತಲೆ ಕೆಟ್ಟಿರಬೇಕೆಂದುಕೊಂಡು) ನನಗೆ ಸಮಯವಿಲ್ಲ. ಇನ್ನೊಮ್ಮೆ ಮಾತನಾಡೋಣ.
ಅವನು: ನಿನಗೆ ಸಮಯವಿಲ್ಲ. ಆಯಿತು. ನಾನು ಹೇಳುವುದನ್ನು ಬೇಗ ಹೇಳಿಬಿಡುತ್ತೇನೆ. ಈ ಶರೀರ ನಿನ್ನದು. ನೀನು ಹೇಳಿದಂತೆ ಅದು ಕೇಳಿ ಈ ಕೆಲಸ ಮಾಡಿಬಿಟ್ಟಿತು. ಭೇಷ್! ಈಗ ನೀನು ಉಸಿರಾಡ್ತಾ ಇರೋದರಿಂದ ನಿನ್ನ ಶರೀರ ಬದುಕಿದೆ. ಆ ಉಸಿರಾಡೋ ಕೆಲಸದ ಕಂಟ್ರೋಲು ನಿನ್ನ ಕೈಲಿದೆಯಾ? ಹುಟ್ಟಿದ ಕ್ಷಣದಿಂದಲೇ ನಿನಗೆ ಏನೂ ಗೊತ್ತಿಲ್ಲದಿದ್ದಾಗಿನಿಂದಲೇ ಈ ಉಸಿರಾಟ ನಡೀತಿದೆ. ಎಚ್ಚರವಿಲ್ಲದೆ ನೀನು ನಿದ್ದೆ ಮಾಡುತ್ತಿದ್ದಾಗಲೂ ಉಸಿರಾಟ ನಡೀತಾನೇ ಇರುತ್ತೆ. ಈಗ ಹೇಳು, ಈ ಉಸಿರಾಟ ನಿನ್ನಿಂದ ಆಗುತ್ತಿದೆಯಾ ಅಥವ ಬೇರೆ ಯಾರಾದರೂ ಮಾಡಿಸುತ್ತಿದ್ದಾರಾ? ನಿನ್ನಿಂದಲೇ ಉಸಿರಾಟ ಆಗುತ್ತಿದೆ ಅನ್ನವುದಾದರೆ ಈ ಉಸಿರಾಡುವ ಆಟ ನೀನು ನಿಲ್ಲಿಸುವುದೇ ಇಲ್ಲ. ಏಕೆಂದರೆ ನೀನು ಸಾಯಲು ಇಷ್ಟಪಡುವುದೇ ಇಲ್ಲ, ಅಲ್ಲವೇ?
ನಾನು: (ಗೊಂದಲದಿಂದ) ಆಂ?. . . .
ಅವನು: ನಿನ್ನ ಶರೀರದಲ್ಲಿ ರಕ್ತ ಸುತ್ತುತ್ತಲೇ ಇರುತ್ತೆ. ಕೆಟ್ಟ ರಕ್ತ ಹೃದಯಕ್ಕೆ ಹೋಗುತ್ತೆ. ಶುದ್ಧವಾಗಿ ಹೊರಬರುತ್ತೆ. ಕೆಟ್ಟ ರಕ್ತ ಹರಿಯುವ ರಕ್ತನಾಳವೇ ಬೇರೆ, ಒಳ್ಳೆಯ ರಕ್ತ ಹರಿಯುವ ನಾಳಗಳೇ ಬೇರೆ ಇವೆ. ಈ ರಕ್ತ ಹೀಗೇ ಹರಿಯುವಂತೆ ನೀನು ಮಾಡ್ತಾ ಇದೀಯಾ? ಅದನ್ನು ನೀನೇ ಕಂಟ್ರೋಲ್ ಮಾಡ್ತಾಇದೀಯಾ?
ನಾನು: (ತಲೆ ಪರಚಿಕೊಳ್ಳುತ್ತಾ) ಅಯ್ಯೋ!!
ಅವನು: ಸಿಟ್ಟು ಮಾಡಿಕೋಬೇಡ. ನಿನ್ನ ಹೃದಯ ಇದೀಯಲ್ಲಾ, ಅದು ನೀನು ಹುಟ್ಟಿದಾಗಿನಿಂದಲೂ ಲಬ್ ಡಬ್ ಅಂತ ಪುರುಸೊತ್ತಿಲ್ಲದೆ ಹೊಡಕೊಳ್ತಾನೇ ಇದೆ. ಅದಕ್ಕೆ ಯಾವಾಗಲಾದರೂ ಪುರುಸೊತ್ತು ಕೊಡ್ತೀಯಾ? ಕೊಡಕ್ಕೆ ನಿನಗೆ ಆಗುತ್ತಾ? ನಿನ್ನ ಕೈಲಿ ಆಗೋದಿದ್ದರೆ ಅದಕ್ಕೆ ನೀನು ಯಾವತ್ತೂ ವಿಶ್ರಾಂತಿ ಕೊಡೋದೇ ಇಲ್ಲ, ಅಲ್ವಾ? ಏಕೆಂದರೆ ಅದಕ್ಕೆ ವಿಶ್ರಾಂತಿ ಕೊಟ್ಟರೆ ನೀನು ಎಲ್ಲಿ ಇರ್ತೀಯಾ?
ನಾನು: (ಮೆತ್ತಗಾಗಿದ್ದೆ) ನೀನು ಏನು ಹೇಳಬೇಕೆಂದಿದ್ದೀಯಾ? ನೇರವಾಗಿ ಹೇಳು, ಪ್ಲೀಸ್.
ಅವನು: ಪುರುಸೊತ್ತಿಲ್ಲ ಅಂದಿದ್ದೆ? ಹೋಗಲಿ ಬಿಡು. ನಿನ್ನ ತಲೆ ತಿನ್ನುವುದರಿಂದ ನನಗೇನೂ ಲಾಭವಿಲ್ಲ. ನೋಡು, ನೀನು ಉಸಿರಾಡ್ತಾ ಇದೀಯಾ, ನಿನ್ನ ಹೃದಯ ಕೆಲಸ ಮಾಡ್ತಾ ಇದೆ. ಇವೆಲ್ಲದರ ಮೇಲೆ ನಿನ್ನ ಕಂಟ್ರೋಲು ಇಲ್ಲವೇ ಇಲ್ಲ. ಅದನ್ನು ಕಂಟ್ರೋಲು ಮಾಡುತ್ತಿರುವವನೇ ಬೇರೆ ಅಂತ ನಿನಗೆ ಗೊತ್ತಾಯ್ತಲ್ಲಾ, ಅಷ್ಟು ಸಾಕು. ನಿನ್ನ ಕಂಟ್ರೋಲೇ ಇಲ್ಲದೆ, ಬೇರೆಯವರ ಕಂಟ್ರೋಲಿನಿಂದ ಓಡ್ತಾ ಇರೋ ಈ ದೇಹದ ಸಹಾಯದಿಂದ ಮಾಡಿದ ಕೆಲಸ ಮಾತ್ರ ನೀನು ಮಾಡಿದ್ದು ಅಂತ ಹೇಗಾಗುತ್ತೆ?
     ಅವನು ಈ ರೀತಿಯಲ್ಲಿ ಏನೇನೋ ಮಾತನಾಡುತ್ತಿದ್ದಾಗ ಅರಿವಿಲ್ಲದೆ ನಾನು ಕಣ್ಣು ಮುಚ್ಚಿ ಯೋಚಿಸುತ್ತಿದ್ದವನು, ಅವನು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದಾಗ ಫಕ್ಕನೆ ಕಣ್ಣು ಬಿಟ್ಟು ನೋಡಿದೆ. ನೋಡಿದರೆ ಅವನು ಅಲ್ಲಿ ಇರಲೇ ಇಲ್ಲ. "ಏಯ್, ಎಲ್ಲಿದೀಯಾ?" ಎಂದು ಕೂಗಿದೆ. "ಹೇಳು, ನೀನು ಹೇಳಿದ್ದು ನನಗೆ ಕೇಳುತ್ತೆ. ನಾನು ಇಲ್ಲೇ ಇದ್ದೇನೆ" ಎಂಬ ಮಾತು ಕೇಳಿಸಿತು. ಆ ಮಾತುಗಳು ನನ್ನ ಒಳಗಿನಿಂದಲೇ ಬಂದಂತೆ ಅನ್ನಿಸಿತು. 
ನಾನು: ಹಾಂ? ನೀನು ನನ್ನೊಳಗೆ ಇದ್ದೀಯಾ? ಅಲ್ಲಿಗೆ ಹೇಗೆ ಹೋದೆ?
ಅವನು: ನಾನು ಇರುವುದೇ ಇಲ್ಲಿ. ಇಲ್ಲಿ ಬಿಟ್ಟು ಇನ್ನು ಎಲ್ಲಿಗೆ ಹೋಗಲಿ? ನೀನು ಇರುವ ಹೊತ್ತಿಗೇ ನಾನೂ ಇರೋದು. ನೀನಿಲ್ಲದಿದ್ದರೆ ನಾನೆಲ್ಲಿ ಇರ್ತಾ ಇದ್ದೆ? ನನ್ನನ್ನು ಕಂಟ್ರೋಲು ಮಾಡೋನೇ ನೀನು! ನೀನಿಲ್ಲದೆ ನಾನಿಲ್ಲ.
     ನನಗೆ ತಲೆ ಕೆಟ್ಟುಹೋದಂತಾಯಿತು. 'ನಾನಿಲ್ಲದೆ ಅವನಿಲ್ಲವಂತೆ! ನನ್ನ ಮೇಲೆ ನನಗೇ ಕಂಟ್ರೋಲಿಲ್ಲ. ನನ್ನನ್ನು ಕಂಟ್ರೋಲು ಮಾಡೋನೇ ಬೇರೆ ಇರುವಾಗ, ನಾನು ಅವನನ್ನು ಕಂಟ್ರೋಲು ಮಾಡ್ತೀನಂತೆ!' ಎಂದು ನಗುವೂ ಬಂತು. ಹೀಗೇ ಯೋಚಿಸುತ್ತಿದ್ದವನಿಗೆ ಏನೋ ಹೊಳೆಯಿತು. ಹೌದು, ನನ್ನನ್ನು ಕಂಟ್ರೋಲು ಮಾಡುತ್ತಿರುವವನು 'ಅವನೇ' ಇರಬೇಕು! ಕರೆಕ್ಟ್!! ಅವನೇ!! ಈಗ ಸರಿಯಾಯಿತು. ನನ್ನನ್ನು ಅವನು, ಅವನನ್ನು ನಾನು ಕಂಟ್ರೋಲ್ ಮಾಡ್ತಾ ಇದೀವಿ. ನನ್ನನ್ನು ಅವನು ಕಂಟ್ರೋಲ್ ಮಾಡುತ್ತಿರುವುದರಿಂದ ಅವನೇ ಗ್ರೇಟ್! ನಾನು ಇರುವುದರಿಂದಲೇ ಅವನು ಇರೋದು ಗೊತ್ತಾಗೋದು! ಅದಕ್ಕೇ ನಾನೂ ಗ್ರೇಟ್!!
     ನಾನಿಲ್ಲದೆ ಅವನಿಲ್ಲ, ಅವನಿಲ್ಲದೆ ನಾನಿಲ್ಲ! ಹೀಗೆ ನನ್ನಷ್ಟಕ್ಕೇ ನಾನೇ ಜಂಬಪಟ್ಟುಕೊಳ್ಳುತ್ತಿದ್ದಾಗ ಮೂಢನ ಗೊಣಗು ಕೇಳಿಸಿತು:
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನೆನಬೇಡ ನಿನದೆನಬೇಡ
ಜಗವೃಕ್ಷ ರಸ ಹರಿವ ಕೊಂಬೆ ನೀನು ಮೂಢ||

-ಕ.ವೆಂ.ನಾಗರಾಜ್.

ಸೋಮವಾರ, ಸೆಪ್ಟೆಂಬರ್ 2, 2013

ಯಜ್ಞೋಪವೀತ - ಒಂದು ಜಿಜ್ಞಾಸೆ

     ಬ್ರಾಹ್ಮಣ್ಯದ ಸಂಕೇತವೆನ್ನಲಾಗುವ ಯಜ್ಞೋಪವೀತ(ಜನಿವಾರ)ದ ಕುರಿತು ಮನಸ್ಸಿನಲ್ಲಿ ಆಗಾಗ ಏಳುವ ವಿಚಾರತರಂಗಗಳು ವಿಮರ್ಶಾರ್ಹವಾಗಿವೆ. ಪ್ರಸ್ತುತ ಆಚರಣೆಯಲ್ಲಿರುವಂತೆ ಹುಟ್ಟಿನಿಂದ ಬ್ರಾಹ್ಮಣರೆನಿಸುತ್ತಿದ್ದು, ತಂದೆ ಬ್ರಾಹ್ಮಣನಾಗಿದ್ದರೆ ಮಗನೂ ಬ್ರಾಹ್ಮಣನೆನಿಸುತ್ತಾನೆ ಮತ್ತು  ಜನಿವಾರವೆನ್ನುವುದು ಬ್ರಾಹ್ಮಣನಾಗಿರುವ ಸೂಚಕವಾಗಿರುತ್ತದೆ. ಆಚರಣೆಯಲ್ಲಿರುವ ಈ  ನಂಬಿಕೆಗೂ ವಾಸ್ತವ ಸತ್ಯಕ್ಕೂ ಇರುವ ಅಜಗಜಾಂತರ ವ್ಯತ್ಯಾಸ ಪೂರ್ವಾಗ್ರಹರಹಿತರಾಗಿ ವಿಚಾರ ವಿಮರ್ಶೆ ಮಾಡುವ ಮನಸ್ಸುಗಳಿಗೆ ಅರ್ಥವಾಗಬಹುದು. ನಾಲ್ಕೂ ವೇದಗಳಲ್ಲಿ ಈಗ ಲಭ್ಯವಿರುವುದೆಂದು ಹೇಳಲಾಗಿರುವ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಮಂತ್ರಗಳ ಪೈಕಿ ಯಾವುದೇ ಒಂದು ಮಂತ್ರದಲ್ಲೂ ಹುಟ್ಟಿನಿಂದ ಬರುವ ಜಾತಿಪದ್ಧತಿಯನ್ನು ಸಮರ್ಥಿಸುವ ಒಂದು ಮಂತ್ರವೂ ಇಲ್ಲವೆಂದು ಹೇಳುತ್ತಾರೆ. ವೇದಗಳಲ್ಲಿ ಬರುವ ಬ್ರಾಹ್ಮಣ, ವೈಶ್ಯ, ಶೂದ್ರ, ಕ್ಷತ್ರಿಯರ ಕುರಿತು ಉಲ್ಲೇಖಗಳು ವರ್ಣಗಳಾಗಿವೆ. ವರ್ಣ ಪದದ ಅರ್ಥ 'ಆರಿಸಿಕೊಳ್ಳುವುದು' ಎಂಬುದಾಗಿದೆ. ಯಾರೇ ಆಗಲಿ, ತಮ್ಮ ತಮ್ಮ ಗುಣ, ಸಾಮರ್ಥ್ಯ, ಕರ್ಮ, ಸ್ವಭಾವ, ಇತ್ಯಾದಿಗಳಿಗೆ ಹೊಂದುವ ವರ್ಣವನ್ನು ಆರಿಸಿಕೊಳ್ಳಲು ಅವಕಾಶವಿದ್ದು, ಅದರಲ್ಲಿ ಮೇಲು-ಕೀಳುಗಳ ಪ್ರಶ್ನೆಯಿಲ್ಲ. ಹುಟ್ಟಿನಿಂದ ಯಾರೂ ಈ ವರ್ಣಗಳಿಗೆ ಸೇರಿದವರೆಂದು ಪರಿಗಣಿಸಲಾಗದು. ಯಾವುದೋ ಗೊತ್ತಿಲ್ಲದ ಬಹಳ ಹಿಂದಿನ ಕಾಲಘಟ್ಟದಲ್ಲಿ ಮೇಲು-ಕೀಳುಗಳ ಭಾವನೆಯನ್ನು ಸಮಾಜದ್ರೋಹಿಗಳು  ಸೃಷ್ಟಿಸಿರಬಹುದಾಗಿದ್ದು, ವೇದಗಳಲ್ಲಿ ಮೇಲು-ಕೀಳುಗಳ ಭಾವನೆ ಎಲ್ಲೂ ಇರುವುದಿಲ್ಲ. ಈ ವಿಚಾರವೇ ದೀರ್ಘವಾಗಿ ಚರ್ಚಿಸಬಹುದಾದ ಸಂಗತಿಯಾಗಿದೆ.
     ಭಗವಂತನ ಸ್ಟೃಷ್ಟಿಯಲ್ಲಿ ಅನೇಕ ಜೀವವೈವಿಧ್ಯಗಳಿವೆ. ವಿವಿಧ ಜೀವಿಗಳ ವರ್ಗಗಳನ್ನೇ ಜಾತಿಗಳೆನ್ನಬಹುದು. ಯಾವುದೇ ನಾಯಿಯನ್ನು ನೋಡಿದಾಕ್ಷಣ ಅದನ್ನು ನಾಯಿ ಎನ್ನಬಹುದು. ಕತ್ತೆಯ ಹೊಟ್ಟೆಯಲ್ಲಿ ಹುಟ್ಟುವುದು ಕತ್ತೆಯೇ ಹೊರತು ಬೆಕ್ಕಲ್ಲ. ಹಾಗೆಯೇ ಮನುಷ್ಯರಿಂದ ಮನುಷ್ಯರು ಹುಟ್ಟುತ್ತಾರೆಯೇ ಹೊರತು ಬೇರೆ ಅಲ್ಲ. ಹಾಗಾಗಿ ಮನುಷ್ಯರನ್ನು ಮನುಷ್ಯರ ಜಾತಿ ಅನ್ನಬಹುದೇ ಹೊರತು ಬೇರೆ ಹೇಳಲಾಗದು. ಭಗವಂತನ ಸೃಷ್ಟಿಯಲ್ಲಿನ ವೈವಿಧ್ಯ ಒಂದಕ್ಕೊಂದು ಪೂರಕವಾಗಿದ್ದರೆ, ಮಾನವನಿರ್ಮಿತ ವೈವಿಧ್ಯ ಹೆಚ್ಚಿನ ಸಂಗತಿಗಳಲ್ಲಿ ವಿನಾಶಕವಾಗಿವೆ. ಹುಟ್ಟಿನ ಜಾತಿ ಅನ್ನುವುದು ಮಾನವರ ಸೃಷ್ಟಿಯೇ ಹೊರತು ಮತ್ತೇನಲ್ಲ. ಅದು ದೇವರ ಸೃಷ್ಟಿ ಆಗಿದ್ದರೆ ನೋಡಿದ ತಕ್ಷಣ ಇಂತಹ ಜಾತಿ ಎಂದು ಹೇಳಲು ಅವಕಾಶವಿರುತ್ತಿತ್ತು.  ತಂದೆ-ತಾಯಿಯರು ಗೊತ್ತಿಲ್ಲದ ಅನಾಥರದ್ದು ಯಾವ ಜಾತಿ? ಆಗ ತಾನೇ ಹುಟ್ಟಿದ ಏಳೆಂಟು ಮಕ್ಕಳನ್ನು ಒಂದೆಡೆಯಿಟ್ಟು ಯಾವ ಮಗು ಯಾವ ಜಾತಿ ಗುರುತಿಸಿ ಎಂದರೆ ಗುರುತಿಸಲು ಸಾಧ್ಯವಿದೆಯೇ? ಸಾಧ್ಯವಿಲ್ಲ. ಮಾನವನಿರ್ಮಿತ ಜಾತಿಯನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. ಒಬ್ಬ ಹಿಂದೂ ಮುಸಲ್ಮಾನನಾಗಬಲ್ಲ, ಒಬ್ಬ ಕ್ರಿಶ್ಚಿಯನ್ ಹಿಂದೂ ಆಗಬಲ್ಲ. ಆದರೆ ದೇವರ ಸೃಷ್ಟಿಯಾದ ಒಂದು ಕುದುರೆ ನಾಯಿಯಾಗಬಹುದೇ? ಬೆಕ್ಕು ಇಲಿಯಾಗಲು ಸಾಧ್ಯವೇ? ಹುಟ್ಟಿನಿಂದ ಜಾತಿ ಬರುವುದಿಲ್ಲ ಎಂಬುದಕ್ಕೆ ಇಷ್ಟು ಸಾಕೆನಿಸುತ್ತದೆ. ಮನುಷ್ಯರಲ್ಲಿ ಇರುವುದು ಒಂದೇ ಜಾತಿ, ಅದು ಮನುಷ್ಯ ಜಾತಿ ಅಷ್ಟೆ. 
     ೧೬ ಸಂಸ್ಕಾರಗಳಲ್ಲಿ ಒಂದಾದ ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಯಜ್ಞೋಪವೀತ (ಜನಿವಾರವನ್ನು) ಹಾಕಿಸಲಾಗುತ್ತದೆ. 'ಉಪ' ಎಂದರೆ ಸಮೀಪಕ್ಕೆ, 'ನಯನ'ವೆಂದರೆ ಕರೆದೊಯ್ಯುವುದು ಎಂಬುದು ಪದಶಃ ಅರ್ಥ. ಹಿಂದೆ ಮಕ್ಕಳಿಗೆ ವೇದಾಭ್ಯಾಸ, ಶಿಕ್ಷಣ ಕೊಡಿಸುವ ಸಲುವಾಗಿ ಸುಯೋಗ್ಯ ಗುರುಕುಲಕ್ಕೆ ಕಳುಹಿಸಿಕೊಡುವಾಗ ಈ ಉಪನಯನ ವಿಧಿಯನ್ನು ಆಚರಿಸಲಾಗುತ್ತಿತ್ತು. ಜಾತಿ ಮತ್ತು ಲಿಂಗ ತಾರತಮ್ಯವಿಲ್ಲದೆ ಗುರುಕುಲಕ್ಕೆ ಹೋಗುವ ಮಕ್ಕಳೆಲ್ಲರೂ ಈ ವಿಧಿಯನ್ನು ಪಾಲಿಸಿ ಯಜ್ಞೋಪವೀತಧಾರಿಗಳಾಗುತ್ತಿದ್ದರು. ಯಜ್ಞೋಪವೀತ ಧರಿಸುವಾಗ 'ನಾನು ಸತ್ಯದ ದಾರಿಯಲ್ಲಿ ನಡೆಯುತ್ತೇನೆ; ವ್ರತಗಳನ್ನು ಪಾಲಿಸುತ್ತೇನೆ; ಶಿಸುಬದ್ದ ಜೀವನ ನಡೆಸುತ್ತೇನೆ' ಎಂದು ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆ ಮಾಡಿಸುವುದಿದೆ. ಆಗಲೇ ಹೇಳಿರುವಂತೆ ಯಾವುದೋ ಹಿಂದಿನ ಕಾಲಘಟ್ಟದಲ್ಲಿ ಕ್ರಮೇಣ ಅದು ಒಂದು ವರ್ಗಕ್ಕೆ ಮತ್ತು ಪುರುಷರಿಗೆ ಮಾತ್ರ ಸೀಮಿತವಾದ ಕ್ರಿಯೆಯಾಗಿ ಪರಿವರ್ತಿತವಾಗಿಬಿಟ್ಟಿದೆ. ವೇದದ ಬೆಳಕಿನಲ್ಲಿ ಸತ್ಯವನ್ನು ಅರಸುವ ಯಾರಿಗೇ ಆಗಲಿ, ಇದು ಒಂದು ವರ್ಗದವರಿಗೆ ಅಥವ ಪುರುಷರಿಗೆ ಮಾತ್ರ ಸೀಮಿತವಾದ ಸಂಸ್ಕಾರವಲ್ಲವೆಂಬುದು ಗೋಚರವಾಗದಿರದು.
     ಯಜ್ಞೋಪವೀತವೆನ್ನುವುದು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಲು ಬದ್ಧತೆಯನ್ನು ಜ್ಞಾಪಿಸುವ ಸಾಧನ ಮತ್ತು ಆ ಮೂರು ಋಣಗಳನ್ನು ತೀರಿಸುವ ಸಂಕಲ್ಪ ಮಾಡುವ ಸಂಕೇತವಾಗಿದೆ. ಈ ಮೂರು ಋಣಗಳು ಕೇವಲ ಒಂದು ನಿರ್ದಿಷ್ಟ ವರ್ಗ ಅಥವ ಲಿಂಗಕ್ಕೆ ಸೀಮಿತ ಎಂದರೆ ಹಾಸ್ಯಾಸ್ಪದವೆನಿಸುತ್ತದೆ. ಋಗ್ವೇದದ ಈ ಎರಡು ಮಂತ್ರಗಳು ಯಜ್ಞೋಪವೀತಧಾರಿಯ ಕರ್ತವ್ಯಗಳನ್ನು ಹೇಳುತ್ತವೆ:
ತ್ರಿವಂಧುರೇಣ ತ್ರಿವ್ರತಾ ರಥೇನ ತ್ರಿಚಕ್ರೇಣ ಸುವೃತಾ ಯಾತಮರ್ವಾತ್ |
ಪಿನ್ವತಂ ಗಾ ಜಿನ್ವತಮರ್ವತೋ ನೋ ವರ್ಧಯತಮಶ್ವಿನಾ ವೀರಮಸ್ಯೇ || (ಋಕ್.೧.೧೧೮.೨.)
     ಮೂರು ಉನ್ನತಶೀಲ, ಪ್ರಗತಿಪಥಕ್ಕೊಯ್ಯುವ, ಸತ್ವ ಮತ್ತು ಒಳ್ಳೆಯತನಗಳಿಂದ ಸುತ್ತುವರೆದ, ಮೂರು ಬಂಧನಗಳನ್ನು ಚಕ್ರವಾಗಿ ಹೊಂದಿರುವ ಜೀವನರಥದಲ್ಲಿ ಮುಂದೆ ಸಾಗಿರಿ. ನಿಮ್ಮ ಇಂದ್ರಿಯಗಳು, ವಾಣಿಯನ್ನು ಶಕ್ತಿಯುತವನ್ನಾಗಿಸಿಕೊಳ್ಳಿ, ಜೀವಾತ್ಮ ಚೇತನವನ್ನು ವಿಕಾಸಗೊಳಿಸಿಕೊಳ್ಳಿ ಮತ್ತು ಆತ್ಮನಿಗಾಗಿ ಪ್ರಾಣಶಕ್ತಿ ಹೆಚ್ಚಿಸಿಕೊಳ್ಳಿ ಎಂಬುದು ಇದರ ಅರ್ಥ.
ತ್ರಿವಂಧುರೇಣ ತ್ರಿವ್ರತಾ ಸುವೇಶಸಾ ರಥೇನ ಯಾತಮಶ್ವಿನಾ |
ಕಣ್ವಾಸೋ ವಾಂ ಬ್ರಹ್ಮ ಕೃಣ್ವಂತ್ಯಧ್ವರೇ ತೇಷಾಂ ಸು ಶೃಣುತಂ ಹವಮ್ || (ಋಕ್.೧.೪೭.೨.)
     ಮೂರು ಬಂಧನಗಳ, ಮೂರು ತತ್ವಗಳಿಂದ ಕೂಡಿದ ಸುಶೋಭಿತ ಜೀವನರಥಯಾನ ಮಾಡಿರಿ. ಧ್ಯಾನಶೀಲ ಜ್ಞಾನಿಗಳು ಅಹಿಂಸಾವೃತ್ತಿಯಲ್ಲಿ ತಿಳಿಸಿಕೊಡುವ ವೇದಜ್ಞಾನವನ್ನು ಪಡೆದುಕೊಳ್ಳಿರಿ ಎನ್ನುವ ಮಂತ್ರದ ಅರ್ಥ ಸುಸ್ಪಷ್ಟವಾಗಿದೆ. ಪ್ರತಿ ಜೀವಿಗೆ ಇರುವ ಮೂರು ಋಣಗಳ -ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ಬಗ್ಗೆ ಅವನ ಬದ್ಧತೆಯನ್ನು ಜ್ಞಾಪಿಸುವುದೇ ಈ ಮಂತ್ರಗಳ ಉದ್ದೇಶವಾಗಿದೆ.
     ದೇವಋಣವನ್ನು ತೀರಿಸುವುದೆಂದರೆ ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿಹಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊರುವುದು. ಪಿತೃಋಣವನ್ನು ತೀರಿಸುವುದೆಂದರೆ ಭೌತಿಕ ಶರೀರ ಬರಲು ಕಾರಣರಾದ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದು  ಆಚಾರ್ಯಋಣವನ್ನು ತೀರಿಸುವ ಉತ್ತಮ ರೀತಿಯಾಗಿದೆ. ಮಾನವಧರ್ಮದ ಮೂರು ಬೇರ್ಪಡಿಸಲಾಗದ ಅಂಗಗಳಾದ ಜ್ಞಾನ, ಕರ್ಮ ಮತ್ತು ಉಪಾಸನೆಗಳನ್ನೂ ಸಹ ಯಜ್ಞೋಪವೀತದ ಮೂರು ಎಳೆಗಳು ಸಂಕೇತಿಸುತ್ತವೆ. ಜೀವನದ ಉದ್ದೇಶವಾದ ಸತ್ಯದ ಅನ್ವೇಷಣೆಗೆ ಜ್ಞಾನ ಅಗತ್ಯ. ಕೇವಲ ಜ್ಞಾನದಿಂದ ಪ್ರಯೋಜನವಿಲ್ಲ, ಅದನ್ನು ಅನುಷ್ಠಾನಗೊಳಿಸುವ ಕರ್ಮದಿಂದ ಜ್ಞಾನಕ್ಕೆ ಅರ್ಥ ಬರುತ್ತದೆ. ಜ್ಞಾನ, ಕರ್ಮಗಳನ್ನು ಭಗವಂತನ ಕೃಪೆಯೆಂದು ತಿಳಿದು ಮಾಡುವುದೇ ಉಪಾಸನೆ.
     ಇನ್ನೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕೆನ್ನಿಸುತ್ತಿದೆ. ಯಜ್ಞೋಪವೀತವೆನ್ನುವುದು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ನೆನಪಿಸುವ ಬಾಹ್ಮಣಿಕೆಯ (ಜಾತಿಯಲ್ಲ), ಸಜ್ಜನಿಕೆಯ, ಸಚ್ಚಾರಿತ್ರ್ಯದ ನಡವಳಿಕೆಯನ್ನು ಹೊಂದುವ ಸಂಕಲ್ಪದ ಸಂಕೇತವೇ ಹೊರತು ಮತ್ತೇನೂ ಅಲ್ಲ. ಸಜ್ಜನಿಕೆಯ, ಸಚ್ಚಾರಿತ್ರ್ಯವನ್ನು ಹೊಂದುವುದು ನಿಜವಾದ ಮಾನವಧರ್ಮವಾಗಿದೆ. ಯಜ್ಞೋಪವೀತ ಧರಿಸಿದವರು ಸಚ್ಚಾರಿತ್ರ್ಯವಂತನಾದರೆ ಯಜ್ಞೋಪವೀತಕ್ಕೆ ಬೆಲೆಯಿರುತ್ತದೆ. ನೇರವಾಗಿ ಹೇಳಬೇಕೆಂದರೆ ಯಜ್ಞೋಪವೀತ ಧರಿಸಿದಾಕ್ಷಣ ಒಬ್ಬ ಸಚ್ಚಾರಿತ್ರ್ಯವಂತನಾಗುವುದಿಲ್ಲ ಅಥವ ಈಗಿನ ಬಳಕೆಯಲ್ಲಿ ತಿಳಿದಿರುವಂತೆ ಬ್ರಾಹ್ಮಣ್ಯ ಬರುವುದಿಲ್ಲ. ಯಜ್ಞೋಪವೀತವು ಅದನ್ನು ಧರಿಸಿದವರು ಬ್ರಾಹ್ಮಣ್ಯವನ್ನು(ಜಾತಿಯಲ್ಲ), ಸಚ್ಚಾರಿತ್ರ್ಯವನ್ನು ಗಳಿಸಬೇಕೆಂದು, ಉಳಿಸಿಕೊಳ್ಳಬೇಕೆಂದು ನೆನಪಿಸುವ ಕೇವಲ ಸಾಧನ ಮಾತ್ರವಾಗಿದೆ.

     ಕೇವಲ ಉತ್ತಮ ವಿಚಾರ ಹೊಂದಿದ್ದರೆ ಸಾಲದು, ಅದು ಆಚರಣೆಗೂ ಬರಬೇಕು. ಹಾಗಾದಾಗ ಮಾತ್ರ ವಿಚಾರಕ್ಕೆ ಬೆಲೆ, ಮನ್ನಣೆ ಸಿಗುತ್ತದೆ. ವಿಚಾರ ಮತ್ತು ಆಚಾರದ ಸಮನ್ವಯತೆ ಕಂಡ ಈ ಪ್ರಸಂಗ ಉಲ್ಲೇಖಾರ್ಹವಾಗಿದೆ. ಹಾಸನದ ವೇದಭಾರತೀ ಸಂಸ್ಥೆಯು ಕಳೆದ ಒಂದು ವರ್ಷದಿಂದಲೂ ಜಾತಿ, ಮತ, ಪಂಥ, ಲಿಂಗ ಮತ್ತು ವಯೋತಾರತಮ್ಯವಿಲ್ಲದೆ ಎಲ್ಲರಿಗೂ ವೇದಾಭ್ಯಾಸ ಮಾಡುವ ಅವಕಾಶ ಕಲ್ಪಿಸಿದೆ. ಹಲವಾರು ಚಿಂತಕರುಗಳಿಂದ ಉಪನ್ಯಾಸಗಳು, ಸಂವಾದಗಳನ್ನು ಏರ್ಪಡಿಸಿದೆ. ಮಕ್ಕಳಲ್ಲೂ ವೇದದ ಕಲಿಕೆ ಪ್ರೋತ್ಸಾಹಿಸಲು ಬಾಲಸಂಸ್ಕಾರ ಶಿಬಿರ ನಡೆಸಿದೆ. ಇತ್ತೀಚೆಗೆ ಮೂರು ದಿನಗಳ ವೇದೋಕ್ತ ಜೀವನ ಶಿಬಿರವನ್ನೂ ಹಾಸನದಲ್ಲಿ ನಡೆಸಿದ್ದು, ಮಹಾರಾಷ್ಟ್ರದ ಪುಣೆ, ಕರ್ನಾಟಕದ ಬೆಂಗಳೂರು, ದೊಡ್ಡಬಳ್ಳಾಪುರ, ತುಮಕೂರು, ಭದ್ರಾವತಿ, ಕನಕಪುರ, ಬೆಳ್ತಂಗಡಿ, ಚನ್ನರಾಯಪಟ್ಟಣ, ಬೇಲೂರು ಮತ್ತು ಹಾಸನಗಳಿಂದ ಬಂದಿದ್ದ ಸುಮಾರು ೬೦ ಆಸಕ್ತರು ಭಾಗವಹಿಸಿದ್ದರು. ಶಿಬಿರದ ಕೊನೆಯ ದಿನದಂದು ಏಳು ಶಿಬಿರಾರ್ಥಿಗಳು -ನಾಲ್ವರು ಮಹಿಳೆಯರೂ ಸೇರಿದಂತೆ- 'ಉಪನಯನ' ಸಂಸ್ಕಾರ ಪಡೆದರು. ಶ್ರೀ ಸುಧಾಕರ ಶರ್ಮರವರು ಉಪನಯನದ ನೈಜ ಅರ್ಥವನ್ನು ಮತ್ತು ಉಪನಯನ ವಿಧಿಯ ಪ್ರತಿ ಮಂತ್ರಾರ್ಥವನ್ನು ವಿವರಿಸುತ್ತಿದ್ದರೆ, ಅಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ತನ್ಮಯತೆಯಿಂದ ಕೇಳಿ ವಿಚಾರಗಳನ್ನು ಸರಿಯೆಂದು ಮನಗಂಡಿದ್ದು ವಿಶೇಷವಾಗಿತ್ತು. ಪತ್ರಿಕಾ ಮತ್ತು ದೃಷ್ಯಮಾಧ್ಯಮಗಳವರೂ ಈ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಹಾಜರಿದ್ದು, ಸುದ್ದಿ ಎಲ್ಲೆಡೆಯೂ ಪ್ರಚುರವಾಯಿತು. ಈಗಿನವರ ದೃಷ್ಟಿಯಲ್ಲಿ ಹುಟ್ಟಿನಿಂದ ಬ್ರಾಹ್ಮಣರೆನಿಸದವರೂ ಸಂಸ್ಕಾರ ಪಡೆದ ಈ ಏಳು ಜನರಲ್ಲಿದ್ದರು. ಶ್ರದ್ಧೆಯಿಂದ ವೇದಾಭ್ಯಾಸ ಮಾಡುತ್ತಿರುವ ಅವರು ಈ ಸಂಸ್ಕಾರ ಪಡೆದುದು ಸ್ತುತ್ಯಾರ್ಹವೇ ಆಗಿದೆ. ಅವರು ಯಜ್ಞೋಪವೀತ ಧರಿಸಿ ಈಗಿನ ರೂಢಿಯ ಬ್ರಾಹ್ಮಣರೆನಿಸುವ ಸಲುವಾಗಿ ಜಾತಿ ಬದಲಾಯಿಸಿಕೊಳ್ಳಬೇಕೆಂದುಕೊಂಡವರಲ್ಲ, ಬದಲಾಯಿಸಿಕೊಂಡವರಲ್ಲ, ಆ ಉದ್ದೇಶವೂ ಅವರದಲ್ಲ ಮತ್ತು ಅದರ ಅಗತ್ಯವೂ ಅವರಿಗಿಲ್ಲ. ಮೊದಲೇ ಹೇಳಿದಂತೆ ಹುಟ್ಟಿನ ಜಾತಿಗೆ ಮತ್ತು ಲಿಂಗಭೇದಕ್ಕೆ ವೇದಗಳಲ್ಲಿ ಯಾವುದೇ ಸ್ಥಾನವಿಲ್ಲ. ವೇದಗಳು ಹೇಳುವ ನೈಜ ವಿಚಾರಗಳಿಗೆ ಮನಸೋತು ಸ್ವ ಇಚ್ಛೆಯಿಂದ ಯಜ್ಞೋಪವೀತ ಧರಿಸಿದ ಅವರು ಅಭಿನಂದನಾರ್ಹರು. ಮಹಿಳೆಯರು ವೇದಾಭ್ಯಾಸ ಮಾಡಬಾರದು, ವೇದಗಳು ಒಂದು ವರ್ಗದ ಸ್ವತ್ತು ಎಂಬ ರೂಢಿಗತ ಅಂಧ ನಂಬಿಕೆಗಳನ್ನು ಅಲುಗಾಡಿಸಿ ವೇದ ತೋರಿದ ಸತ್ಯ ಪಥದಲ್ಲಿ ನಡೆದ, ವೇದಾಧ್ಯಯನದಲ್ಲಿ ಆಸಕ್ತಿ ಹೊಂದಿದ, 'ಆಡದೆ ಮಾಡಿದ ರೂಢಿಯೊಳಗುತ್ತಮರ' ಸಾಲಿಗೆ ಸೇರಿದ ಅವರೇ ಧೈರ್ಯವಂತರು. ಏನಾದರೂ ಬದಲಾವಣೆ ಬರುವುದಿದ್ದರೆ ಇಂತಹವರಿಂದಲೇ ಸರಿ!   
-ಕ.ವೆಂ.ನಾಗರಾಜ್.

ಸೋಮವಾರ, ಆಗಸ್ಟ್ 26, 2013

ಚತುರ್ವಿಧ ಪುರುಷಾರ್ಥಗಳು - ೨: ಕಾಮ, ಮೋಕ್ಷ

     ಹಿಂದಿನ ಲೇಖನದಲ್ಲಿ ಧರ್ಮ ಮತ್ತು ಅರ್ಥಗಳ ಕುರಿತು ಚರ್ಚಿಸಲಾಗಿತ್ತು. ಉಳಿದೆರಡು ಪುರುಷಾರ್ಥಗಳಾದ ಕಾಮ ಮತ್ತು ಮೋಕ್ಷಗಳ ಬಗ್ಗೆ ವೇದದ ಬೆಳಕಿನಲ್ಲಿ ವಿಚಾರ ಮಾಡೋಣ.
ಕಾಮ:
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||
     ಕಾಮ - ಇದು ಎರಡು ಅಲಗಿನ ಚೂಪಾದ ಖಡ್ಗ. ಅರಿಷಡ್ವರ್ಗದಲ್ಲಿ ಪ್ರಥಮ ಸ್ಥಾನದಲ್ಲಿರುವ ಇದು ನಾಲ್ಕು ಪುರುಷಾರ್ಥಗಳಲ್ಲೂ ಪ್ರಧಾನವಾದುದು. ಒಂದು ರೀತಿಯಲ್ಲಿ ಮನುಷ್ಯನನ್ನು ಅಧಃಪತನಗೊಳಿಸುವುದು ಮತ್ತು ಉದ್ಧಾರಗೊಳಿಸುವುದು ಎರಡೂ ಸಾಧ್ಯವಿರುವುದು ಈ ಕಾಮಕ್ಕೇ! ಕಾಮ ಎಂದಾಕ್ಷಣ ಸ್ತ್ರೀ-ಪುರುಷರ ಲೈಂಗಿಕತೆಗೆ ಸಂಬಂಧಿಸಿದ್ದು ಎಂಬ ಭಾವನೆ ಮೂಡುವುದು ಸಹಜ. ಆದರೆ ಕಾಮ ಎಂದರೆ ಇಷ್ಟೇ ಅಲ್ಲ, ಇದೂ ಸೇರಿದಂತೆ ಇಚ್ಛೆ, ಬಯಕೆ, ಆಸೆ, ಇತ್ಯಾದಿ ಅರ್ಥಗಳೂ ಇವೆ. ಈ ಇಚ್ಛೆ, ಬಯಕೆ, ಆಸೆಗಳು ಎರಡು ರೀತಿಯಲ್ಲೂ ಇರಬಹುದು. ಉನ್ನತಿ ಬಯಸುವ ಆಸೆಗಳು ಸಮಾಜಕ್ಕೂ, ಸ್ವಂತಕ್ಕೂ ಹಿತಕಾರಿಯಾಗಿರುತ್ತವೆ. ತಾನೂ ಹಾಳಾಗಿ ಪರರರನ್ನೂ ತೊಂದರೆಗೀಡುಮಾಡುವ ಕಾಮನೆಗಳೂ ಇರುತ್ತವೆ. ಆದರೆ ಕಾಮರಾಹಿತ್ಯ ಅಥವ ನಿಷ್ಕಾಮ ಸ್ಥಿತಿ ಎಂಬುದು ಇರಲಾರದು. ಏಕೆಂದರೆ ಉನ್ನತ ಸ್ಥಿತಿಗೆ ಏರಬೇಕು, ನೆಮ್ಮದಿ, ಶಾಂತಿ ಬೇಕು, ಆತ್ಮ/ಪರಮಾತ್ಮನನ್ನು ಅರಿಯಬೇಕು, ಇತ್ಯಾದಿ ಕಾಮನೆಗಳಾದರೂ ಇದ್ದೇ ಇರುತ್ತವೆ. ಮನುಷ್ಯನನ್ನು ನೀಚನನ್ನಾಗಿಸುವ, ಪಾತಾಳಕ್ಕೆ ತಳ್ಳುವ ಕಾಮನೆಗಳು ಮಾನವನ ಶತ್ರುವಾಗುತ್ತದೆ. ಮಾನವಜೀವನದ ಉದ್ದೇಶ ಸಾಧನೆಗೆ ಪೂರಕವಾಗುವ ಪುರುಷಾರ್ಥ ಕಾಮ ಅವನನ್ನು ನಿಜಮಾನವನನ್ನಾಗಿಸುತ್ತದೆ.
     ಕಾಮ ನಮ್ಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ನಾವು ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಇಹ-ಪರಗಳೆರಡರಲ್ಲೂ ನೆಮ್ಮದಿ, ಶಾಂತಿ ಸಿಗಬೇಕಾದರೆ ಕಾಮವನ್ನು ನಮ್ಮ ಉದ್ದೇಶಕ್ಕೆ ತಕ್ಕಂತೆ ಚಾಕಚಕ್ಯತೆಯಿಂದ ಬಳಸಿದರೆ ಮಾತ್ರ ಸಾಧ್ಯ. ಇನ್ನುಳಿದ ಪುರುಷಾರ್ಥಗಳಾದ ಧರ್ಮ. ಅರ್ಥ ಮತ್ತು ಮೋಕ್ಷಗಳ ಸಾಧನೆಗೆ ಈ ಕಾಮವೇ ಪ್ರೇರಕ ಮತ್ತು ಪೂರಕ. ಕಾಮ ಪುರುಷಾರ್ಥ ಸಾಧನೆಯೆಂದರೆ ಆಸೆ, ಬಯಕೆ, ಇಚ್ಛೆಗಳನ್ನು ಯಾರಿಗೂ ನೋವಾಗದಂತೆ, ಹಿಂಸೆಯಾಗದಂತೆ, ಭಾವನೆಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಿಕೊಳ್ಳುವುದು. ಕಾಮನೆಗಳನ್ನು ಹತ್ತಿಕ್ಕುವುದು ಒಳ್ಳೆಯದಲ್ಲ. ಬಲವಂತವಾಗಿ ಹತ್ತಿಕ್ಕಲ್ಪಟ್ಟ ಆ ಶಕ್ತಿ ಅರಿವಿಲ್ಲದಂತೆ ಇದ್ದಕ್ಕಿದ್ದಂತೆ ಪುಟಿದೆದ್ದರೆ ಅನಪೇಕ್ಷಿತ ಪರಿಣಾಗಳುಂಟಾಗುತ್ತವೆ. ಸಮಾಜದಲ್ಲಿ ಗಣ್ಯರೆನಿಸಿಕೊಂಡವರೇ, ಆಧ್ಯಾತ್ಮಿಕ ಸಾಧಕರೆನಿಸಿಕೊಂಡವರೇ ಈ ಸುಳಿಗೆ ಸಿಕ್ಕಿ ಹಾಳಾದವರಿದ್ದಾರೆ. ಕಾಮವನ್ನು ಹತ್ತಿಕ್ಕುವುದಕಿಂತ ಗೆಲ್ಲುವುದು ಹಿತಕಾರಿ. 
ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು|
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ
ದಿವ್ಯ ಕಾಮ ರಮ್ಯ ಕಾಮ ನಿನದಲ್ತೆ ಮೂಢ|| 
     ಅಥರ್ವವೇದದ ಈ ಮಂತ್ರವನ್ನೊಮ್ಮೆ ನೋಡೋಣ:-
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
     "ಓ ಕಾಮವೇ, ಯಾವ ನಿನ್ನ ವಿಸ್ತಾರಗಳು ಅಥವಾ ರೂಪಗಳು ಮಂಗಳಕರವೂ, ಕಲ್ಯಾಣಕಾರಿಯೂ ಆಗಿವೆಯೋ, ಯಾವುದನ್ನು ನೀನು ಬಯಸುತ್ತೀಯೋ, ಯಾವ ಸತ್ಯದ ದರ್ಶನ ನಿನ್ನ ಕಾರಣದಿಂದ ಲಭಿಸುತ್ತದೆಯೋ, ಆ ರೂಪಗಳೊಂದಿಗೆ ನಮ್ಮಲ್ಲಿ ಪ್ರವೇಶ ಮಾಡು. ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು ಬೇರೆಕಡೆಗೆ ಅಟ್ಟಿಬಿಡು" ಎಂದು ಹೇಳುವ ಈ ಮಂತ್ರ ಸಾಧಕರಿಗೆ ಮಾರ್ಗದರ್ಶಿಯಾಗಿದೆ. ಜಗತ್ತು ನಡೆದಿರುವುದೇ ಕಾಮದಿಂದ. ಅದಿಲ್ಲದಿದ್ದರೆ ಜಗತ್ತು ನಿಶ್ಚಲವಾಗಿರುತ್ತಿತ್ತು. ಯಾವುದೇ ಬಯಕೆಗಳು, ಆಕಾಂಕ್ಷೆಗಳಿಲ್ಲದ ಬದುಕು ಬದುಕಾಗಲಾರದು. ಆದರೆ, ಈ ಅಕಾಂಕ್ಷೆಗಳು ಧರ್ಮ ಮಾರ್ಗದಲ್ಲಿರಬೇಕು, ಸಂಪಾದಿಸುವ ಅರ್ಥವನ್ನು ಆತ್ಮಕ್ಕೆ ಸಮ್ಮತವಾದ ರೀತಿಯಲ್ಲಿ, ಇತರರಿಗೆ ನೋವು, ಕಷ್ಟ ನೀಡದಂತೆ ಸರ್ವರ ಹಿತ ಗಮನದಲ್ಲಿರಿಸಿಕೊಂಡು ಕಾಮನೆಗಳ ಈಡೇರಿಕೆಗೆ ಬಳಸಬೇಕು. ಈರೀತಿ ಮಾಡಿದಲ್ಲಿ ಚತುರ್ಥ ಪುರುಷಾರ್ಥ ಮೋಕ್ಷಕ್ಕೆ ಹಾದಿ ಸುಗಮವಾಗುತ್ತದೆ. ಗೃಹಸ್ಥಾಶ್ರಮದಲ್ಲಿ ತಿಳಿಸಿದ ಸ್ತ್ರೀ-ಪುರುಷರ ಲೈಂಗಿಕ ಸಂಬಂಧಗಳೂ ಶಾಸ್ತ್ರೀಯವಾಧ ಮರ್ಯಾದೆಗೆ ಅನುಸಾರವಾಗಿದ್ದಲ್ಲಿ ಅದು ಇಹ-ಪರಗಳ ಸಾಧನೆಗೆ ಅಡ್ಡಿಯಾಗುವುದಿಲ್ಲ. ಈ ವೇದಮಂತ್ರದ ಭಾವ ಸುಸ್ಪಷ್ಟವಾಗಿದ್ದು, ಜೀವನ ಸರಸ ಸುಂದರವಾಗಲು, ಸುಖ, ಶಾಂತಿ, ನೆಮ್ಮದಿಗಳಿಂದ ಕೂಡಿರಲು -ಇಹದಲ್ಲಷ್ಟೇ ಅಲ್ಲ, ಪರದಲ್ಲೂ- ನಿಯಂತ್ರಿತ, ಧರ್ಮಮಾರ್ಗಿ, ಸರ್ವಹಿತದ ಕಾಮನೆಗಳು ಇರಬೇಕು. ಕೀಳು ಕಾಮನೆಗಳಿಗೆ ಈ ತೃತೀಯ ಪುರುಷಾರ್ಥದಲ್ಲಿ ಸ್ಥಾನವಿಲ್ಲ.   
ಮೋಕ್ಷ:
     ಚತುರ್ಥ ಪುರುಷಾರ್ಥವಾದ ಮೋಕ್ಷ ಮಾನವಜೀವಿಗಳ ಅಂತಿಮ ಸಾಧನೆಯ ಹಂತ. ಈ ಮೋಕ್ಷ ಎಂದರೆ ಏನು? ಜನರಲ್ಲಿ ದೇವರ ಬಗ್ಗೆ, ಧರ್ಮದ ಬಗ್ಗೆ ಹಲವಾರು ಜಿಜ್ಞಾಸೆಗಳು, ಕಲ್ಪನೆಗಳು ಇರುವಂತೆಯೇ, ಮೋಕ್ಷದ ಬಗ್ಗೆ ಸಹ ತಮ್ಮದೇ ಆದ ಕಲ್ಪನೆಗಳಿವೆ. ಬೈಬಲ್ಲಿನ ಪ್ರಕಾರ ದೇವರನ್ನು ನಂಬುವವರಿಗಾಗಿ,  ಪ್ರೀತಿಸುವವರಿಗಾಗಿ ಒಂದು ಹೊಸ ಸೃಷ್ಟಿ, ಒಂದು ಹೊಸ ನಗರ, ಒಂದು ಹೊಸ ಸಮುದಾಯವೇ ಒಂದು ಹೊಸ ಸಂವಿಧಾನದಂತೆ ನಿರ್ಮಾಣವಾಗಿರುತ್ತದೆ. ಆ ಸ್ವರ್ಗವು ಕಣ್ಣು ಕಾಣದಿದ್ದ, ಕಿವಿಗೆ ಕೇಳದಿದ್ದ, ಕಲ್ಪನೆಗೆ ಎಟುಕದಿದ್ದ ರೀತಿಯಲ್ಲಿ ಇದ್ದು, ಅದರಲ್ಲೂ ಮೂರು ರೀತಿಯ ಸ್ವರ್ಗಗಳಿರುತ್ತವೆ ಎನ್ನುತ್ತದೆ (ಬೈಬಲ್ಲಿನ Revelation chapter 21). ಕುರಾನಿನ ಪ್ರಕಾರ ಅದರಲ್ಲಿ ಸುಮಾರು ೧೪೦ ಸಲ ಹೇಳಲ್ಪಡುವ ಸ್ವರ್ಗಸದೃಶ ತೋಟದಲ್ಲಿ ದೇವರನ್ನು ನಂಬುವ, ಅವನು ತೋರಿಸಿದ ಮಾರ್ಗದಲ್ಲಿ ನಡೆಯುವವರಿಗೆ ಅವರು ಬಯಸಿದ ಎಲ್ಲಾ ಸುಖ ಸಂಪತ್ತುಗಳೂ ಶಾಶ್ವತವಾಗಿ ಸಿಗುತ್ತವೆ. ಇನ್ನು ದೇವರನ್ನು ನಂಬದವರಿಗೆ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕೊಡುವ ನರಕಗಳ ವರ್ಣನೆಗಳೂ ಬೈಬಲ್ ಮತ್ತು ಕುರಾನುಗಳಲ್ಲಿವೆ. ಹಿಂದೂಗಳಲ್ಲಿಯೂ ಸಹ ತಮ್ಮದೇ ಆದ ಭ್ರಾಂತ ಕಲ್ಪನೆಗಳಿವೆ. ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಸತ್ತ ಮೇಲೆ ಕೈಲಾಸವನ್ನೋ, ವೈಕುಂಠವನ್ನೋ, ಇನ್ನು ಯಾವುದೋ ದೇವರ ಆವಾಸಸ್ಥಾನವನ್ನೋ ಸೇರುತ್ತಾರೆ ಎಂದು ನಂಬುತ್ತಾರೆ. ಅಲ್ಲಿ ಹೋಗಿಬಿಟ್ಟರೆ ಆನಂದದಿಂದ ಇದ್ದುಬಿಡಬಹುದು ಎಂದು ಭಾವಿಸುತ್ತಾರೆ. ನರಕದ ವರ್ಣನೆಗಳೂ ಕಾಣಸಿಗುತ್ತವೆ. ಗರುಡಪುರಾಣದಲ್ಲಂತೂ ಪಾಪಿಗಳಿಗೆ ಕೊಡುವ ಭೀಭತ್ಸ ಶಿಕ್ಷೆಗಳ ವರ್ಣನೆಯ ಸರಮಾಲೆಯೇ ಇದೆ. ಈ ಧರ್ಮಗ್ರಂಥಗಳು, ಪುರಾಣಗಳಲ್ಲಿ ಬರುವ ಸ್ವರ್ಗ-ನರಕಗಳ ವಿವರಣೆಗಳು ಮಾನವರನ್ನು ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ಕಾರಣಗಳಿಗಾಗಿ ಇರಬಹುದೇ ಹೊರತು ಮತ್ತೇನೂ ಅಲ್ಲ.
     ವೇದಗಳು ಮೇಲಿನ ಎಲ್ಲಾ ಕಲ್ಪನೆಗಳನ್ನು ಸಾರಾಸಗಟಾಗಿ ತಳ್ಳಿಹಾಕುತ್ತವೆ. ಸರ್ವವ್ಯಾಪಿಯಾದ ಪರಮಾತ್ಮ ತನಗಾಗಿಯೇ ಒಂದು ಪ್ರತ್ಯೇಕ ವಾಸಸ್ಥಾನವನ್ನು ಹೊಂದಿದ್ದಾನೆಂದರೆ ಅವನ ಸರ್ವವ್ಯಾಪಕತ್ವವನ್ನು ಅಣಕಿಸಿದಂತೆಯೇ ಸರಿ. ಋಗ್ವೇದದ ಈ ಮಂತ್ರ ನೋಡಿ:-
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್|
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ||  (ಋಕ್.೧೦.೮೧.೩.)
     "ವಿಶ್ವದ ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಎಲ್ಲೆಡೆಯೂ ಮುಖವುಳ್ಳ, ಎಲ್ಲೆಡೆಯೂ ಬಾಹುಗಳನ್ನುಳ್ಳ, ಎಲ್ಲೆಡೆಯೂ ಪಾದಗಳನ್ನುಳ್ಳ ಸರ್ವಕರ್ತೃ ಒಬ್ಬ ದೇವ ದ್ಯುಲೋಕ, ಪೃಥಿವಿ ಲೋಕಗಳನ್ನು ರಚಿಸುತ್ತಾ, ಸೃಷ್ಟಿ, ಸ್ಥಿತಿ, ಲಯಕಾರಕನಾಗಿ ಜೀವಾತ್ಮರುಗಳ ಮೂಲಕವೂ ಪ್ರಾಣವನ್ನು ಊದುತ್ತಿದ್ದಾನೆ" ಎನ್ನುವ ಈ ಮಂತ್ರದಲ್ಲಿ ಬರುವ ಒಬ್ಬ ದೇವರಿಗೆ ಅನೇಕ ಕಣ್ಣುಗಳು, ಕೈಕಾಲುಗಳು ಅಂದರೆ ಆತ ಸರ್ವವ್ಯಾಪಿ, ಸರ್ವಕರ್ತೃ ಎಂದು. ಬ್ರಹ್ಮಾಂಡದ ಅಣು ಅಣುವಿನಲ್ಲಿಯೂ ಇರುವ ಇಂತಹ ದೇವನಿಗೆ ಪ್ರತ್ಯೇಕ ವಾಸಸ್ಥಾನವೇ? ಜೀವಾತ್ಮರೂ ಸಹ ಅನಾದಿ ಮತ್ತು ಅನಂತರು ಎನ್ನುತ್ತದೆ ವೇದ. ಕರ್ಮಫಲಕ್ಕನುಸಾರವಾಗಿ ವಿವಿಧ ಜನ್ಮಗಳನ್ನು ತಾಳುತ್ತಾರೆ ಎಂಬುದನ್ನು ಪೂಜ್ಯ ಶಂಕರರು ಮನನೀಯವಾಗಿ ಹೇಳಿರುವುದು ಹೀಗೆ: "ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ. . ." ಮೋಕ್ಷ ಪಡೆಯುವವರೆಗೂ ಈ ಹಾದಿಯನ್ನು ಜೀವರುಗಳು ಸವೆಸುತ್ತಿರುತ್ತಾರೆ. ಹಾಗಾದರೆ ಮೋಕ್ಷವೆಂದರೆ ಹುಟ್ಟು-ಸಾವುಗಳ ಚಕ್ರದಿಂದ ಹೊರಬರುವುದೇ?
     ಈ ಮೋಕ್ಷ ಅನ್ನುವುದು ಸ್ವರ್ಗದಲ್ಲಿದೆ ಅಥವ ಯಾವುದೋ ಲೋಕದಲ್ಲಿದೆ ಎಂಬ ಕಲ್ಪನೆ, ದೇವರ ಆವಾಸಸ್ಥಾನವೇ ಪ್ರತ್ಯೇಕವಾಗಿ ಇದೆ ಎಂಬುದಕ್ಕೆ ಸಮನಾದ ಭ್ರಮೆಯಾಗಿದೆ. ಮೋಕ್ಷ ಅನ್ನುವುದು ಜೀವಾತ್ಮನ ಒಂದು ಸ್ಥಿತಿ ಅಷ್ಟೇ ಆಗಿದೆ. ಹುಟ್ಟು-ಸಾವುಗಳ ಚಕ್ರದಿಂದ ಹೊರಬರುವುದು ಮೋಕ್ಷವೆಂದಾದರೆ, ಮೋಕ್ಷದ ಸ್ಥಿತಿಯಲ್ಲಿ ಜೀವಾತ್ಮಕ್ಕೆ ದೇಹದ ಬಂಧನವಾಗಲೀ, ಇಂದ್ರಿಯ, ಮನಸ್ಸು, ಬುದ್ಧಿಗಳ ಬಂಧನವಾಗಲೀ ಇರದೆ  ಮುಕ್ತ ಸ್ಥಿತಿಯಲ್ಲಿ ಅಶರೀರವಾಗಿರುತ್ತದೆ. ಭೌತಿಕ ಜಗತ್ತಿನ ಸಂಪರ್ಕವಿಲ್ಲದೆ, ಆ ಜಗತ್ತಿನ ತಾಪಗಳಿಂದ ಬಿಡುಗಡೆ ಹೊಂದಿ ಕೇವಲ ಬ್ರಹ್ಮಾನಂದ ಅನುಭವಿಸುತ್ತಿರುತ್ತದೆ ಮತ್ತು ಆ ಸ್ಥಿತಿಯಲ್ಲಿ ಎಲ್ಲಿ ಬೇಕಾದರೂ ಚಲಿಸಬಹುದಾಗಿರುತ್ತದೆ. ದೇಹ, ಇಂದ್ರಿಯಗಳು, ಮನಸ್ಸು, ಬುದ್ಧಿ ಹೊಂದಿದ್ದ ಕಾರಣದಿಂದ ಮೊದಲು ಅನುಭವಿಸುತ್ತಿದ್ದ ಸುಖ-ದುಃಖ, ನೋವು-ನಲಿವುಗಳಿಂದ ದೂರವಾಗಿರುತ್ತದೆ. ಈ ಸ್ಥಿತಿ ತಲುಪಬೇಕಾದರೆ ಜೀವಿಯು ಜ್ಞಾನ, ಕರ್ಮ, ಉಪಾಸನೆಗಳಿಂದ ಕೂಡಿದ ಧಾರ್ಮಿಕ ಜೀವನವನ್ನು ಪೂರ್ಣ ರೀತಿಯಲ್ಲಿ ಅನುಸರಿಸಿರಬೇಕಾಗುತ್ತದೆ. ಸಾಧನಾಪಥದಲ್ಲಿ ಸಾಗಿ, ಪರಮಾತ್ಮನ ಸ್ವರೂಪದ ಜ್ಞಾನಾನುಭೂತಿ ಪಡೆಯದೆ ಮೋಕ್ಷದ ಈ ಸ್ಥಿತಿ ತಲುಪಲಾಗದು. ನಮ್ಮ ಎಲ್ಲಾ ಸತ್ಕರ್ಮಗಳು, ಸಾಧನೆಗಳು ಪರಮಾತ್ಮನನ್ನು ಅರಿಯುವಲ್ಲಿ ಪರ್ಯವಸಾನವಾಗುವವರೆಗೆ ಮೋಕ್ಷ ಸಿಗಲಾರದು. ಯಜುರ್ವೇದದ ಈ ಮಂತ್ರ ಹೇಳುತ್ತದೆ:
ವೇದಾಹಮೇತಂ ಪುರುಷಂ ಮಹಾಂತಮಾದಿತ್ಯವರ್ಣಂ ತಮಸಃ ಪರಸ್ತಾತ್ | 
ತಮೇವ ವಿದಿತ್ಯಾತಿ ಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇsಯನಾಯ || (ಯಜು.೩೧.೧೮.)
     ಇದರ ಅರ್ಥ ಹೀಗಿದೆ: "ನಾನು ಅಜ್ಞಾನಾಂಧಕಾರದಿಂದ ಮೇಲೆದ್ದು, ಈ ಪ್ರಾಮಾಣಿಕರಾದ ಅಖಂಡ ಸತ್ಯವಂತರಾದ ಜನರಿಂದ ವರಿಸಲ್ಪಡುವ, ಸ್ವೀಕರಿಸಲ್ಪಡುವ ಅಥವಾ ಅಖಂಡ ತೇಜಸ್ವಿಯಾದ, ಬ್ರಹ್ಮಾಂಡವೆಂಬ ಪುರದಲ್ಲಿ ವ್ಯಾಪಕನಾಗಿರುವ ಪರಮಾತ್ಮನನ್ನು ತಿಳಿದಿದ್ದೇನೆ. ಅವನನ್ನೇ ತಿಳಿದುಕೊಂಡು ಮಾನವನು, ಸಾವನ್ನು ಅಥವ ಮರ್ತ್ಯ ಲೋಕವನ್ನು ದಾಟಿ ಹೋಗುತ್ತಾನೆ. ಆತ್ಮನ ಸದ್ಗತಿಗೆ ಬೇರೆ ಮಾರ್ಗವು ಇರುವುದೇ ಇಲ್ಲ." ನಮಗೆ ಮುಕ್ತಿ ಸಿಗಲು ನಾವೇ ಪ್ರಯತ್ನಿಸಬೇಕೇ ಹೊರತು, ಇತರರು ನಮ್ಮನ್ನು ಮಧ್ಯಸ್ತಿಕೆದಾರರಾಗಿ ಆ ಸ್ಥಿತಿಗೆ ತಲುಪಿಸಲಾರರು. ಕಾಯಾ, ವಾಚಾ, ಮನಸಾ ಪರಿಶುದ್ಧರಾಗಿ, ಜ್ಞಾನ, ಕರ್ಮ, ಉಪಾಸನೆಗಳಿಂದ ಧರ್ಮಮಾರ್ಗದಲ್ಲಿ ನಿರ್ಮಲಾಂತಃಕರಣದಿಂದ ನಿಜಮಾನವರಾಗಿ ಬಾಳಿದರೆ ಪರಮಾತ್ಮನ ಸ್ವರೂಪದ ಅರಿವಾಗುವುದರೊಂದಿಗೆ, ಜೀವಿ ತಾಪತ್ರಯಗಳಿಂದ ಹೊರತಾಗಿ ಬ್ರಹ್ಮಾನಂದದ ಸ್ಥಿತಿಯಾದ ಮೋಕ್ಷ ಪಡೆಯಲು ಅರ್ಹನಾದಾನು. ಮೋಕ್ಷದ ಸ್ಥಿತಿ ಅಂದರೇನು ಎಂದು ತಿಳಿಸುವ ಈ ಋಗ್ವೇದವಾಣಿ ಆಲಿಸಿ:
ಯತ್ರ ಕಾಮಾ ನಿಕಾಮಾಶ್ಚ ಯತ್ರ ಬ್ರದ್ನಸ್ಯ ವಿಷ್ಟಪಮ್ | 
ಸ್ವಧಾ ಚ ಯತ್ರ ತೃಪ್ತಿಶ್ಚ ತತ್ರ ಮಾಮಮೃತಂ ಕೃಧೀಂದ್ರಾಯೇಂದೋ ಪರಿ ಸ್ರವಃ || (ಋಕ್.೯.೧೧೩.೧೩.)
     "ಯಾವ ಸ್ಥಿತಿಯಲ್ಲಿ, ಕಾಮನೆಗಳೆಲ್ಲಾ ತೀರಿಹೋದ ಕಾಮನೆಗಳಾಗಿವೆಯೋ ಮತ್ತು ಯಾವ ಸ್ಥಿತಿಯಲ್ಲಿ ಜಗದ್ಬಂಧುವಾದ ನಿನ್ನ ತಾಪರಹಿತವಾದ ಇರುವಿಕೆದೆಯೋ ಮತ್ತು ಯಾವ ಸ್ಥಿತಿಯಲ್ಲಿ ಆತ್ಮನನ್ನು ಎತ್ತಿಹಿಡಿಯುವ ಆನಂದ ಮತ್ತು ತೃಪ್ತಿ ಇರುವುವೋ, ಆ ಸ್ಥಿತಿಯಲ್ಲಿ ಅಮರನಾದ ನನ್ನನ್ನು ಇಡು. ಬಾಳನ್ನು ಸರಸಗೊಳಿಸುವ ಸ್ವಾಮಿ, ಇಂದ್ರಿಯವಂತನಾದ ಜೀವನಿಗಾಗಿ ಹರಿದು ಬಾ, ಸುರಿದು ಬಾ." ಭೌತಿಕ ಕಾಮನೆಗಳ ಮತ್ತು ತಾಪಗಳ ಸಮಾಪ್ತಿ, ಆಧ್ಯಾತ್ಮಿಕ ಆನಂದ ಮತ್ತು ತೃಪ್ತಿಯ ಪ್ರಾಪ್ತಿ - ಇದೇ ಮೋಕ್ಷಾವಸ್ಥೆ. 
     ಜೀವಾತ್ಮ ಅನಾದಿ ಮತ್ತು ಅನಂತವೆನ್ನುತ್ತಾರಲ್ಲಾ? ಜೀವಾತ್ಮರು ಹೊಸದಾಗಿ ಹುಟ್ಟುವುದಿಲ್ಲವೆಂದಾದರೆ ಹುಟ್ಟು-ಸಾವಿನ ಚಕ್ರದಿಂದ ಹೊರಬರುವ ಮೋಕ್ಷ ಅಂತ್ಯವಲ್ಲವೇ ಎನ್ನುವ ಸಂಶಯ ಬರುತ್ತದೆ. ಹೊಸದಾಗಿ ಹುಟ್ಟುವುದಿಲ್ಲವೆಂಬುದು ನಿಜವಾದರೆ, ಒಂದಿಲ್ಲೊಂದು ಕಾಲದಲ್ಲಿ ಎಲ್ಲರೂ ಮೋಕ್ಷಾವಸ್ಥೆಯನ್ನು ತಲುಪುತ್ತಾರೆಂದಾದರೆ ಈ ಜಗತ್ತಿಗೆ ಅರ್ಥವೆಲ್ಲಿ ಉಳಿಯುತ್ತದೆ? ವಾಸ್ತವದಲ್ಲಿ ಮೋಕ್ಷ ಎನ್ನುವುದು ಅಂತ್ಯವಲ್ಲ. ಅದು ದೀರ್ಘಾವಧಿಯವರೆಗೆ ಅಂದರೆ ಒಂದು ಪರಾಂತ ಕಾಲದವರೆಗೆ ಇರುವ ಸ್ಥಿತಿಯಾಗಿದ್ದು ನಂತರದಲ್ಲಿ ಪುನಃ ಹುಟ್ಟು-ಸಾವುಗಳ ಚಕ್ರ ಆರಂಭವಾಗುತ್ತದೆ. ಈ ಪರಾಂತಕಾಲ ಅನ್ನುವುದು ನಮ್ಮ ಕಲ್ಪನೆಗೆ ಎಟುಕದ ಬಹಳ ದೀರ್ಘವಾದ ಕಾಲವಾಗಿದೆ ಮತ್ತು ಇದು ಇಷ್ಟೊಂದು ದೀರ್ಘವಾದ ಕಾಲವಾದುದರಿಂದಲೇ ಮೋಕ್ಷವೆಂದರೆ ಹುಟ್ಟು-ಸಾವುಗಳಾಚೆಗಿನ ಸ್ಥಿತಿಯೆನ್ನುತ್ತಾರೆ. ವೈದಿಕ ಸಿದ್ಧಾಂತದ ಪ್ರಕಾರ ನಲವತ್ತನೂರು ಲಕ್ಷ ಇಪ್ಪತ್ತು ಸಾವಿರ ವರ್ಷಗಳಿಗೆ (೪೩,೨೦,೦೦೦) ಒಂದು ಚತುರ್ಯುಗ. ಎರಡು ಸಾವಿರ ಚತುರ್ಯುಗಗಳಿಗೆ ಒಂದು ಅಹೋರಾತ್ರಿ. ಇಂತಹ ಮೂವತ್ತು ಅಹೋರಾತ್ರಿಗಳಿಗೆ ಒಂದು ಮಾಸ. ಇಂತಹ ಹನ್ನೆರಡು ಮಾಸಗಳಿಗೆ ಒಂದು ವರ್ಷ. ಇಂತಹ ನೂರು ವರ್ಷಗಳಿಗೆ ಒಂದು ಪರಾಂತಕಾಲ (೩,೧೧,೦೪೦,೦೦,೦೦,೦೦೦ ವರ್ಷಗಳು). ಇದು ಒಂದು ಪರಾಂತಕಾಲ. ಇಷ್ಟು ದೀರ್ಘವಾದ ಕಾಲ ಮುಕ್ತಸ್ಥಿತಿಯಲ್ಲಿ ಇರುವುದೆಂದರೆ ಸಾಮಾನ್ಯವಾದ ಸಂಗತಿಯಲ್ಲ. ಜಿಜ್ಞಾಸುಗಳು, ಸಾಧಕರುಗಳಿಗೆ ಚತುರ್ಥ ಪುರುಷಾರ್ಥಗಳನ್ನು ಸಾಧಿಸಲು ವೇದಗಳು ಅದ್ಭುತ ಮತ್ತು ವಿಚಾರಸಮ್ಮತ ಮಾರ್ಗದರ್ಶನ ನೀಡುತ್ತಿವೆ. 
(ಆಧಾರ: ಪಂ. ಸುಧಾಕರ ಚತುರ್ವೇದಿಯವರ 'ವೇದೋಕ್ತ ಜೀವನಪಥ')
-ಕ.ವೆಂ.ನಾಗರಾಜ್.


ವೇದಸುಧೆ » Vedasudhe

ವೇದಸುಧೆ » Vedasudhe

ಸೋಮವಾರ, ಆಗಸ್ಟ್ 12, 2013

ಚತುರ್ವಿಧ ಪುರುಷಾರ್ಥಗಳು - ೧: ಧರ್ಮ ಮತ್ತು ಅರ್ಥ

     ವೇದ ಎಂಬ ಪದಕ್ಕೆ ಇರುವ ಯೌಗಿಕಾರ್ಥ 'ನಿಷ್ಕಳ ಜ್ಞಾನ' ಎಂಬುದು. ಜೀವರುಗಳ ಪೈಕಿ ವಿವೇಚನಾ ಶಕ್ತಿ ಹೊಂದಿರುವ ಮನುಷ್ಯನಿಗೆ ವಿಶೇಷ ಸ್ಥಾನವಿದೆ. ಪರಮಾತ್ಮನ ಕೊಡುಗೆಯಾದ ಶರೀರ, ಮನಸ್ಸು, ಇಂದ್ರಿಯಗಳನ್ನು ಉಪಯೋಗಿಸಿಕೊಂಡು ಮಾನವ ಮೇಲೇರಲೂ ಬಲ್ಲ, ಕೆಳಕ್ಕೆ ಜಾರಲೂ ಬಲ್ಲ. ಬದುಕು ಸಾರ್ಥಕತೆ ಕಾಣಬೇಕಾದರೆ ನಾಲ್ಕು ಪುರುಷಾರ್ಥಗಳನ್ನು ಸಾಧಿಸಬೇಕೆಂದು ವೇದ ಹೇಳುತ್ತದೆ. ಋಗ್ವೇದದ ಈ ಮಂತ್ರ ಗಮನಿಸಿ:-
ಏಕಂ ಚಮಸಂ ಚತುರಃ ಕೃಣೋತನ ತದ್ ವೋ ದೇವಾ ಅಬ್ರುವನ್ ತದ್ ವ ಆಗಮಮ್ |
ಸೌಧನ್ವನಾ ಯದ್ಯೇವಾ ಕರಿಷ್ಯಥ ಸಾಕಂ ದೇವೈರ್ಯಜ್ಞಿಯಾಸೋ ಭವಿಷ್ಯಥ || (ಋಕ್.೧.೧೬೧.೨.)
     ಆತ್ಮನಿಗೆ ಬಡಿಸುವ ಜೀವನಸಾರವನ್ನು ನಾಲ್ಕಾಗಿ ವಿಂಗಡಿಸಿರಿ. ವಿದ್ವಾಂಸರುಗಳೂ ನಿಮಗೆ ಅದನ್ನೇ ಹೇಳುತ್ತಾರೆ. ಅದನ್ನೇ ತಂದಿದ್ದೇನೆ. ಹೀಗೆ ಮಾಡುವಿರಾದಲ್ಲಿ ದಿವ್ಯಗುಣ ವಿಶಿಷ್ಟರಾದ ವಿದ್ವಾಂಸರೊಂದಿಗೆ, ನೀವೂ ಆದರಣೀಯರಾಗುವಿರಿ ಎನ್ನುವ ಈ ಮಂತ್ರದಲ್ಲಿ ಉಲ್ಲೇಖಿಸಿರುವ ಅನುಸರಿಸಬೇಕಾದ, ಸಾಧಿಸಬೇಕಾದ ನಾಲ್ಕು ಜೀವನಸಾರಗಳೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಧರ್ಮ ಮತ್ತು ಅರ್ಥಗಳ ಕುರಿತು ಈ ಲೇಖನದಲ್ಲಿ ಚರ್ಚಿಸೋಣ.
ಧರ್ಮ:
     'ಧರ್ಮ'ವೆಂದರೆ ಯಾವುದಾದರೂ ಒಂದು ಸಮುದಾಯಕ್ಕೆ, ಒಂದು ಸಂಪ್ರದಾಯಕ್ಕೆ, ಒಂದು ರೀತಿ-ನೀತಿಗೆ ಅನ್ವಯವಾಗುವಂತಿರದೆ, ಸಮಸ್ತ ಮಾನವಕುಲಕ್ಕೆ ಅನ್ವಯವಾಗುವಂತಿರಬೇಕು. ಎಲ್ಲರ ಹಿತ ಕಾಯುವ, ಪಾಲಿಸುವ, ಪೋಷಿಸುವ ಉದಾತ್ತತೆ ಹೊಂದಿರಬೇಕು. ಆಧ್ಯಾತ್ಮಿಕವಾಗಿ ಮುಂದುವರೆಯಲು ಸುಯೋಗ್ಯ ಮಾರ್ಗದರ್ಶನ ನೀಡುವಂತಿರಬೇಕು. ಇವುಗಳಲ್ಲಿ ಯಾವುದಕ್ಕೆ ಲೋಪವಾಗುವುದಾದರೂ ಅದನ್ನು ಧರ್ಮ ಎಂದು ಹೇಳಲು ಬರುವುದಿಲ್ಲ. ಇಂತಹ ಧಾರಕ ಗುಣಗಳನ್ನು ಹೊಂದಿರುವುದೇ ಮಾನವ ಧರ್ಮ. ಇದನ್ನು ಸಾಧಿಸಲು ಆವಶ್ಯಕವಾಗಿರುವ ಜ್ಞಾನ, ಕರ್ಮ ಮತ್ತು ಉಪಾಸನೆಗಳೇ ಧರ್ಮದ ಅಭಿನ್ನ ಮತ್ತು ಅವಿಭಾಜ್ಯ ಅಂಗಗಳಾಗಿವೆ. 
ಪ್ರತ್ಯಾನ್ಮಾನಾದಧ್ಯಾ ಯೇ ಸಮಸ್ವರನ್ಶ್ಲೋಕಯಂತ್ರಾಸೋ ರಭಸಸ್ಯ ಮಂತವಃ |
ಅಪಾನಕ್ಷಾಸೋ ಬಧಿರಾ ಅಹಾಸತ ಋತಸ್ಯ ಪಂಥಾಂ ನ ತರಂತಿ ದುಷ್ಕೃತಃ || (ಋಕ್. ೯.೭೩.೬.)
     ಯಾರು ವೇದಜ್ಞಾನದ ಆಶ್ರಯದಲ್ಲಿ ಎಲ್ಲೆಡೆಯಿಂದಲೂ ಒಳಿತಾಗಿ ಜ್ಞಾನವನ್ನು ಪಡೆದುಕೊಳ್ಳುತ್ತಾರೋ ಅವರು ವೇದಮಂತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರೂ, ಪ್ರಭುವನ್ನು ತಿಳಿದವರೂ ಆಗುತ್ತಾರೆ. ಜ್ಞಾನದೃಷ್ಟಿಯಿಂದ ಕುರುಡರೂ ಕಿವುಡರೂ ಆದವರು ಋತದ (ಧರ್ಮದ) ಮಾರ್ಗವನ್ನು ತ್ಯಜಿಸುತ್ತಾರೆ. ದುಷ್ಕರ್ಮನಿರತರು ಪಾರುಗಾಣುವುದಿಲ್ಲ ಎಂಬುದು ಈ ಮಂತ್ರದ ಸಾರ. ವಿವೇಕಯುತವಾದ, ಧರ್ಮಪಾಲಕ ಜ್ಞಾನಿಗಳ ದೃಷ್ಟಿ ಹೇಗಿರುತ್ತದೆಂಬುದು ಈ ಕೆಳಗಿನ ಮಂತ್ರ ಹೇಳುತ್ತದೆ: 
ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ |
ವಿದ್ವಾನ್ ತ್ಸ ವಿಶ್ವಾ ಭುವನಾಭ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಅವ್ರತಾನ್ || (ಋಕ್. ೯.೭೩.೮.)
     ಋತದ (ಋತ=ಧರ್ಮ) ರಕ್ಷಕನು ಎಂದಿಗೂ ತುಳಿಯಲಡುವುದಿಲ್ಲ. ಉತ್ತಮ ವಿಚಾರಶೀಲನೂ, ಧರ್ಮಶೀಲನೂ ಆದವನು ತನ್ನ ಹೃದಯದಲ್ಲಿ ಮೂರು ಪವಿತ್ರ ತತ್ತ್ವಗಳನ್ನು ಸದಾ ಧರಿಸಿರುತ್ತಾನೆ. ಆ ಜ್ಞಾನಿಯು ಸಮಸ್ತ ಲೋಕಗಳನ್ನೂ ಎಲ್ಲೆಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. ಅಪ್ರಿಯರಾದ ವ್ರತರಹಿತರನ್ನು, ಪತನರೂಪದಲ್ಲಿ ಕೆಳಗೆ ಬಿದ್ದವರನ್ನೂ ಕೂಡ ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ. ಎಂತಹ ಉದಾತ್ತತೆಯಿದು! ಅಥರ್ವವೇದ, 'ಉತ್ಥಾಮಾತಃ ಪುರುಷ ಮಾವ ಪತ್ಥಾ' - ಹೇ ಜೀವನೇ, ಮೇಲಕ್ಕೆದ್ದು ನಡೆ, ಕೆಳಗೆ ಬೀಳಬೇಡವೆನ್ನುತ್ತದೆ. ಉದ್ಯಾನಂ ತೇ ಪುರುಷ ನಾವಯಾನಂ - ನಿನ್ನ ಮಾರ್ಗ ಮೇಲಕ್ಕಿದೆ, ಕೆಳಕ್ಕೆ ಹೋಗುವುದಲ್ಲವೆನ್ನುತ್ತದೆ. ಇಂತಹ ನೂರಾರು ದಿವ್ಯ ಮಾರ್ಗದರ್ಶನಗಳನ್ನು ನೀಡುವ ವೇದಮಂತ್ರಗಳು ನಾಲ್ಕು ವೇದಗಳಲ್ಲಿಯೂ ಕಾಣಸಿಗುತ್ತವೆ. ಒಬ್ಬ ಧಾರ್ಮಿಕ (ಧರ್ಮ ಮಾರ್ಗಿ) ಹೇಗಿರುತ್ತಾನೆಂದರೆ: 
ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ ವ್ರತಾ ರಕ್ಷೇಥೇ ಅಸುರಸ್ಯ ಮಾಯಯಾ | 
ಋತೇನ ವಿಶ್ವಂ ಭುವನಂ ವಿ ರಾಜಥಃ ಸೂರ್ಯಮಾ ಧತ್ಥೋ ದಿವಿ ಚಿತ್ರ್ಯಂ ರಥಮ್ || (ಋಕ್.೫.೬೩.೭.)
     ಹೇ ಮಾನವರೇ, ಧರ್ಮದಿಂದ ಜ್ಞಾನಿಗಳಾಗುತ್ತೀರಿ. ಪರಮಾತ್ಮನ ಪ್ರಜ್ಞೆಯಿಂದ, ವೇದಜ್ಞಾನದಿಂದ (ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ) ವ್ರತಗಳನ್ನು ರಕ್ಷಿಸುತ್ತೀರಿ. ಯಜ್ಞ ಮತ್ತು ನ್ಯಾಯದಿಂದ ಸಮಸ್ತ ಪ್ರಪಂಚವನ್ನೂ, ಸಿಂಗರಿಸುತ್ತೀರಿ. ಜ್ಞಾನಮಯವಾದ ಸ್ಥಿತಿಯಲ್ಲಿ ಭಗವಂತನನ್ನು ಎಲ್ಲಡೆಯಿಂದಲೂ ಜೀವನಗತವಾಗಿ ಮಾಡಿಕೊಳ್ಳುತ್ತೀರಿ. ವಿಪಶ್ಚಿತಾ, ವ್ರತಾ ಮತ್ತು ಸೂರ್ಯ ಆಧತ್ಥಃ ಎಂಬ ಉಲ್ಲೇಖಗಳು ಅನುಕ್ರಮವಾಗಿ, ಜ್ಞಾನ, ಕರ್ಮ ಮತ್ತು ಉಪಾಸನೆಗಳನ್ನು ಸೂಚಿಸುತ್ತವೆ. ಧರ್ಮ ಮಾರ್ಗದಲ್ಲಿ ನಡೆಯುವವರು ಜಗತ್ತಿಗೆ ಭೂಷಣಪ್ರಾಯರಾಗಿರುತ್ತಾರೆ ಮಾತ್ರವಲ್ಲದೆ ಜಗತ್ತನ್ನು ಸುಂದರಗೊಳಿಸುತ್ತಾರೆ. ಜೀವರು ಸಾಧಿಸಬೇಕಾದ ಪ್ರಥಮ ಪುರುಷಾರ್ಥವೆಂದರೆ ಇದೇ ಆಗಿದೆ. 
ಅರ್ಥ:
   ಇನ್ನು ದ್ವಿತೀಯ ಪುರುಷಾರ್ಥವಾದ ಅರ್ಥದ ಕುರಿತು ಅವಲೋಕಿಸೋಣ. ಹಣ ಸಂಪಾದನೆ, ಅದು ಯಾವ ರೀತಿಯಿಂದಲೇ ಆಗಲಿ ಮಾಡಬೇಕು, ಹೆಚ್ಚು ಶ್ರೀಮಂತರಾಗಬೇಕು ಅನ್ನುವ ಹಪಾಹಪಿತನವನ್ನು ಎಲ್ಲೆಡೆ ಕಾಣುತ್ತಿದ್ದೇವೆ. ಇಂದಿನ ಜೀವನರೀತಿಗೆ ಹಣ ಸಂಪಾದನೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ. ಅದರೆ ಅದನ್ನು ಧರ್ಮದ ರೀತಿಯಲ್ಲಿ, ಧರ್ಮದ ಚೌಕಟ್ಟಿನಲ್ಲಿ ಮಾಡಬೇಕು ಅನ್ನುತ್ತದೆ ವೇದ. ಬಡತನ ಕುಕರ್ಮಗಳನ್ನು ಮಾಡಲು ಪ್ರೇರಿಸುವುದರಿಂದ ಅರ್ಥದ ಗಳಿಕೆ ಪುರುಷಾರ್ಥದಲ್ಲಿ ಎರಡನೆಯ ಮಹತ್ವದ ಸ್ಥಾನ ಗಳಿಸಿದೆ. ಅರಾಯಿ ಕಾಣೇ ವಿಕಟೇ ಗಿರಿಂ ಗಚ್ಛ ಸದಾನ್ವೇ || (ಋಕ್.೧೦.೧೫೫.೧.) -ಸದಾ ಪೀಡೆಗಳನ್ನು ಹುಡುಕುತ್ತಿರುವ ಕೆಡುಕಿನ ದರಿದ್ರವೇ, ತೊಲಗು; ವಯಂ ಸ್ಯಾಮ ಪತಯೋ ರುಣಾಮ್ || (ಯಜು.೨೩.೬೫.) -ನಾವು ಸಂಪತ್ತಿನ ಒಡೆಯರಾಗೋಣ, ಇತ್ಯಾದಿ ಉಕ್ತಿಗಳು ಅರ್ಥದ ಮಹತ್ವ ಸಾರುತ್ತಿವೆ.
     ಹಣ ಸಂಪಾದನೆ ಹೇಗೆ ಮಾಡಬೇಕು? ನಮ್ಮ ರಾಜಕಾರಣಿಗಳು ರಾಷ್ಟ್ರದ ಅಭಿವೃದ್ಧಿಗಾಗಿ ಖರ್ಚು ಮಾಡಬೇಕಾದ ಕೋಟಿ, ಕೋಟಿ ಸಾರ್ವಜನಿಕರ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಇವರ ಪಾಪದ ಭಾರವನ್ನು ಜನಸಾಮಾನ್ಯರು ಹೊರಬೇಕಾಗಿದೆ. ಬಡವರ ಉದ್ಧಾರದ ಹೆಸರಿನಲ್ಲಿ ಹಣ ಮಾಡುವ ಇವರುಗಳು ದೇಶವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು, ಭ್ರಷ್ಟಾಚಾರವನ್ನು ವಿರೋಧಿಸುವ ಸಾತ್ವಿಕ ಶಕ್ತಿಗಳನ್ನು ತುಳಿಯುತ್ತಿರುವುದು ನಮ್ಮ ದೌರ್ಭಾಗ್ಯ. ಸಜ್ಜನಶಕ್ತಿ ಜಾಗೃತಗೊಳ್ಳುವವರೆಗೆ, ಜನರು ಎಚ್ಚರಗೊಳ್ಳದಿರುವವರೆಗೆ ಈ ಪರಿಸ್ಥಿತಿಯಿಂದ ನಮಗೆ ಬಿಡುಗಡೆಯಿಲ್ಲ. ಈ ಜಾಗರಣದ ಕೆಲಸವನ್ನು ಪ್ರತಿ ಧಾರ್ಮಿಕ ನಾಗರಿಕ ತನ್ನ ಕರ್ತವ್ಯವೆಂಬಂತೆ ಮಾಡಬೇಕು. ಕನಿಷ್ಟ ಪಕ್ಷ ಅಂತಹ ಕೆಲಸ ಮಾಡುವವರಿಗೆ ಸಹಕಾರಿಯಾಗಿಯಾದರೂ ಇರಬೇಕು. ಅಕ್ರಮ ಹಣ ಸಂಪಾದನೆ ಸಲ್ಲದು, ಹಣ ಸಂಪಾದನೆಯೇ ಗುರಿಯಾಗಬಾರದು ಎನ್ನುತ್ತದೆ ಋಗ್ವೇದದ ಈ ಮಂತ್ರ:
ಅಕ್ಷೈರ್ಮಾ ದೀವ್ಯಃ ಕೃಷಿಮಿತ್ ಕೃಷಸ್ಯ ವಿತ್ತೇ ರಮಸ್ವ ಬಹು ಮನ್ಯಮಾನಃ |
ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿ ಚಷ್ಟೇ ಸವಿತಾಯಮರ್ಯಃ || (ಋಕ್.೧೦.೩೪.೧೩.)
     ದಾಳಗಳಿಂದ ಜೂಜಾಡಬಾರದು, ಕೃಷಿಯನ್ನೇ ಮಾಡು, ಕಷ್ಟಪಟ್ಟು ದುಡಿ. ನಿಜವಾದ ದುಡಿಮೆಯಿಂದ ಲಭಿಸುವ ಹಣದಲ್ಲಿ ಸಂತುಷ್ಟನಾಗಿರು. ಕಷ್ಟದ ದುಡಿಮೆಯಲ್ಲೇ ಗೋಸಂಪತ್ತು,  ದಾಂಪತ್ಯಸುಖವಿದೆ ಎಂದು ಇದರ ಅರ್ಥ. ಇಲ್ಲಿ ದಾಳ ಎಂದರೆ ಪಗಡೆಯಾಟದಲ್ಲಿ ಉಪಯೋಗಿಸುವ ಆಟದ ಸಾಧನವೆಂಬ ಅರ್ಥ ಬರುವುದಾದರೂ, ಅದನ್ನು ಸೂಚ್ಯವಾಗಿ ಬಳಸಲಾಗಿದ್ದು, ಎಲ್ಲಾ ರೀತಿಯ ಜೂಜುಗಳಿಗೂ, ಅಕ್ರಮ ರೀತಿಯಲ್ಲಿ ಹಣ ಸಂಪಾದಿಸುವ ಎಲ್ಲಾ ವಿಧಾನಗಳಿಗೂ (ಉದಾ: ಬೆಟ್ಟಿಂಗ್, ಕಾಳಸಂತೆ, ಲಾಟರಿ, ಲಂಚ, ಇತ್ಯಾದಿ) ಇದು ಅನ್ವಯವಾಗುತ್ತದೆ. 
     ಅಥರ್ವವೇದದ ಈ ಮಂತ್ರ ಅನುಕರಣೀಯ, ಪುರುಷಾರ್ಥದ ನೈಜ ಮೌಲ್ಯ ಇಲ್ಲಿ ಕಾಣಸಿಗುತ್ತದೆ:
ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ | ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ ||  (ಅಥರ್ವ.೩.೨೪.೫.)
     ನೂರು ಕೈಗಳಿಂದ ಚೆನ್ನಾಗಿ ಸಂಪಾದನೆ ಮಾಡು. ಸಾವಿರ ಕೈಗಳಿಂದ ಚೆನ್ನಾಗಿ ಕೊಡು. ನಿನ್ನ ಕಾರ್ಯದ ವಿಸ್ತಾರ ಈ ರೀತಿ ಸಾಧಿತವಾಗಲಿ ಎಂಬ ಆಶಯ ಎಷ್ಟು ಉದಾತ್ತವಾಗಿದೆ! ಎಷ್ಟು ಕಷ್ಟಪಟ್ಟು ದುಡಿಯಲು ಸಾಧ್ಯವೋ ಅಷ್ಟು ದುಡಿದು ಹೇರಳವಾಗಿ ಹಣ ಸಂಪಾದನೆ ಮಾಡಬೇಕು; ಅದನ್ನು ಧಾರಾಳವಾಗಿ ಅವಲಂಬಿತರಿಗೆ, ಅವಶ್ಯಕತೆಯಿರುವವರಿಗೆ ಉಪಯೋಗಿಸು ಎಂಬುದರಲ್ಲಿ ಜೀವನದ ಸಾರ್ಥಕತೆಯಿದೆ ಎನ್ನುವ ಉದಾತ್ತತೆಗೆ ಸಾಟಿಯಿಲ್ಲ. ಹಣ ಮಾಡಬೇಕು, ಆದರೆ ಅಕ್ರಮವಾಗಿಯಲ್ಲ. ಹಾಗಾದರೆ ಹಣವನ್ನು ಸಂಪಾದಿಸುವುದು ಹೇಗೆ? ಈ ಮಂತ್ರ ದಾರಿ ತೋರಿಸುತ್ತಿದೆ:
ಪರಿ ಚಿನ್ಮರ್ತೋ ದ್ರವಿಣಂ ಮಮನ್ಯಾದೃತಸ್ಯ ಪಥಾ ನಮಸಾ ವಿವಾಸೇತ್|
ಉತ ಸ್ವೇನ ಕ್ರತುನಾ ಸಂ ವದೇಶ ಶ್ರೇಯಾಂಸಂ ದಕ್ಷಂ ಮನಸಾ ಜಗೃಬ್ಯಾತ್ || (ಋಕ್.೧೦.೩೧.೨.)
     ಹಣವು ಎಲ್ಲೆಡೆಯೂ ಇದೆ. ಅದಕ್ಕಾಗಿ ನ್ಯಾಯ ಮತ್ತು ಸತ್ಯದ ಹಾದಿಯಲ್ಲಿ ವಿಧೇಯತೆಂದ ಸಾಗಬೇಕು. ಸದ್ವಿಚಾರ, ಸದಾಚಾರಗಳಿಂದ ಕೂಡಿದ ಮಾತುಗಳನ್ನಾಡಬೇಕು. ಮನಸ್ಸಿನಿಂದ ಶ್ರೇಯಸ್ಕರವಾದ ಶಕ್ತಿಯನ್ನು ಗ್ರಹಿಸಬೇಕು. ಈ ದಾರಿಯಲ್ಲಿ ನಡೆದು ಮಾಡುವ ಸಂಪಾದನೆಯೇ ನೈಜ, ಅರ್ಥಪೂರ್ಣ ಅರ್ಥಸಂಪಾದನೆ. ಸದ್ವಿಚಾರಗಳನ್ನು ಮಾಡೋಣ, ಸದ್ರೀತಿಯಲ್ಲಿ ಸಂಪಾದಿಸೋಣ, ಸಮಾಜದಿಂದ ನಾವು ಗಳಿಸುವ ಹಣವನ್ನು ಸಮುಚಿತ ರೀತಿಯಲ್ಲಿ ಸ್ವಂತದ ಉಪಯೋಗಕ್ಕೆ ಅಲ್ಲದೆ ಸಮಾಜದ ಒಳಿತನ್ನೂ ಗಮನದಲ್ಲಿರಿಸಿ ವಿನಿಯೋಗಿಸೋಣ ಎಂಬ ವೇದದ ಕರೆ ಸದಾಕಾಲಕ್ಕೂ ಒಪ್ಪಿಗೆಯಾಗುವಂತಹದು.
[ಆಧಾರ: ಪಂ. ಸುಧಾಕರ ಚತುರ್ವೇದಿಯವರ 'ವೇದೋಕ್ತ ಜೀವನ ಪಥ'.]


ವೇದೋಕ್ತ ಜೀವನ ಶಿಬಿರ



ವೇದಭಾರತೀ, ಹಾಸನ

ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಮಾರ್ಗದರ್ಶನದಲ್ಲಿ

ವೇದೋಕ್ತ ಜೀವನ ಶಿಬಿರ

ಸ್ಥಳ: ಸಹೃದಯ ಮಂದಿರ, ಶ್ರೀಶಂಕರಮಠದ ಆವರಣ,ಹಾಸನ

ದಿನಾಂಕ 23,24 ಮತ್ತು 25 ಆಗಸ್ಟ್ 2013

ಸಮಯ ಸಾರಿಣಿ

ಪ್ರಾತ:ಕಾಲ 
5:00 :ಉತ್ಥಾನ
5:00 ರಿಂದ 6:15 :ಶೌಚ-ಸ್ನಾನ-ಪಾನೀಯ
6:15 ರಿಂದ 7:00 :ಯೋಗ-ಪ್ರಾಣಾಯಾಮ
7:15 ರಿಂದ 8:00 :ಸಂಧ್ಯೋಪಾಸನೆ-ಅಗ್ನಿಹೋತ್ರ
8:00 ರಿಂದ 8.30 :ಉಪಹಾರ
8:45 ರಿಂದ 11:00 :ವೇದೋಕ್ತ ಜೀವನ ಕ್ರಮ,ಅವಧಿ-1 
11:00 ರಿಂದ 12:00 :ವೇದಾಭ್ಯಾಸ

ಮಧ್ಯಾಹ್ನ: 
12:15 ರಿಂದ 2:30 :ಭೋಜನ ವಿಶ್ರಾಂತಿ
2:45 ರಿಂದ 4:00 :ವೇದೋಕ್ತ ಜೀವನ ಕ್ರಮ,ಅವಧಿ-2 
4:00 ರಿಂದ 4:30 :ಪಾನೀಯ
4:30 ರಿಂದ 6:00 :ವೇದೋಕ್ತ ಜೀವನ ಕ್ರಮ ,ಅವಧಿ-3
6:00 ರಿಂದ 6:40 :ಸಂಧ್ಯೋಪಾಸನೆ-ಅಗ್ನಿಹೋತ್ರ

ರಾತ್ರಿ:
7:00 ರಿಂದ 8:00 :ಉಪನ್ಯಾಸ 
8:15 ರಿಂದ 9:00 :ಭೋಜನ 
9:00 ರಿಂದ 10:00 :ಅನೌಪಚಾರಿಕ
10:00-ದೀಪ ವಿಸರ್ಜನೆ

ವೇದೋಕ್ತ ಜೀವನ ಶಿಬಿರ- ಸೂಚನೆಗಳು:
1.ಶಿಬಿರಾರ್ಥಿಗಳು ದಿನಾಂಕ 22.8.2013 ರಾತ್ರಿ 9.00ಕ್ಕೆ ಮುಂಚೆ ಶಿಬಿರಸ್ಥಾನದಲ್ಲಿರಬೇಕು.ರಾತ್ರಿ ಊಟದ ವ್ಯವಸ್ಥೆ ಇರುತ್ತದೆ.
2.ಜಮಖಾನದ ವ್ಯವಸ್ಥೆ ಇರುತ್ತದೆ.ಹೊದಿಕೆಯಣ್ಣೂ ಶಿಬಿರಾರ್ಥಿಗಳೇ ತರಬೇಕು.
3.ಹಾಸನದ ಶಿಬಿರಾರ್ಥಿಗಳು ಶಿಬಿರದಲ್ಲಿ ರಾತ್ರಿಯ ಊಟ ಮುಗಿಸಿ ಮನೆಗೆ ತೆರಳಿ ಬೆಳಿಗ್ಗೆ6.00ಕ್ಕೆ ಶಿಬಿರಸ್ಥಾನದಲ್ಲಿ ಹಾಜರಿರಬೇಕು.
4.ಟಾರ್ಚ್ ಒಂದನ್ನು ಹೊಂದಿದ್ದರೆ ಉತ್ತಮ.
5.ಬರೆಯಲು ಪುಸ್ತಕ ಪೆನ್ ಶಿಬಿರದಲ್ಲಿ ಕೊಡಲಾಗುತ್ತದೆ.
6.ವೇದೋಕ್ತ ಜೀವನ ಪಥ, ನಿತ್ಯ ಸಂಧ್ಯಾಗ್ನಿಹೋತ್ರ, ನಿಜವ ತಿಳಿಯೋಣ ಸಿಡಿ, ಮತ್ತು ಉಪಯುಕ್ತ ಇತರೆ ಪುಸ್ತಕಗಳು ಶಿಬಿರದಲ್ಲಿ ಮಾರಾಟಕ್ಕೆ ಲಭ್ಯ.
7.ಶಿಬಿರದಲ್ಲಿ ಮುಕ್ತ ಸಂವಾದಕ್ಕೆ ಅವಕಾಶವಿರುತ್ತದೆ.
8.ಮಲಗಲು ಸ್ತ್ರೀ ಪುರುಷರಿಗೆ ಪ್ರತ್ಯೇಕ ಹಾಲ್ ವ್ಯವಸ್ಥೆ ಇರುತ್ತದೆ .ಪ್ರತ್ಯೇಕ ಕೊಠಡಿ ಗಳಿರುವುದಿಲ್ಲ
9.ಬೆಲೆಬಾಳುವ ಸಾಮಾನುಗಳನ್ನು ತರದಿರುವುದು ಉತ್ತಮ
10.ಶಿಬಿರದಲ್ಲಿನ ಎಲ್ಲಾ ಕಾರ್ಯಕ್ರಮಗಳೂ ರೆಕಾರ್ಡ್ ಆಗುತ್ತವೆ ಮತ್ತು ಅದರ ಆಡಿಯೋ/ವೀಡಿಯೋ/ ಫೋಟೋಗಳು ಇರುವ ಸಿ.ಡಿ/ಡಿ.ವಿ.ಡಿ ಯನ್ನು ಆಸಕ್ತರಿಗೆ ಶಿಬಿರ ಮುಗಿದ 15 ದಿನಗಳಲ್ಲಿ ಕಳಿಸಿಕೊಡ ಲಾಗುವುದು.ಆದ್ದರಿಂದ ಶಿಬಿರಾರ್ಥಿಗಳು ಬೆಲೆಬಾಳುವ ಕ್ಯಾಮರಾ, ಮೊಬೈಲ್ ಅಥವಾ ರೆಕಾರ್ಡಿಂಗ್ ಸಾಧನ ತರದಿರುವುದು ಉತ್ತಮ.ಒಂದು ವೇಳೆ ತಂದರೆ ಬೆಲೆಬಾಳುವ ಸಾಧಗಳ ಜವಾಬ್ದಾರಿ ಶಿಬಿರಾರ್ಥಿಗಳದ್ದೇ ಆಗಿರುತ್ತದೆ.
11.ವಿಶ್ರಾಂತಿ ಸಮಯದ ಹೊರತಾಗಿ ಶಿಬಿರದ ಸಮಯದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿರಬೇಕು.
12.ವೇದಸುಧೆ ತಾಣದಲ್ಲಿ ಶಿಬಿರಾರ್ಥಿಗಳ ಹೆಸರು ಪ್ರಕಟಿಸಲಾಗಿದೆ.ಒಂದುವೇಳೆ ಶಿಬಿರಶುಲ್ಕ 500.00 ರೂ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಅವರ ಹೆಸರು ಪ್ರಕಟವಾಗಿರದಿದ್ದರೆ vedasudhe@gmail.com ಗೆ ಹಣಪಾವತಿ ವಿವರವನ್ನು ಮೇಲ್ ಮಾಡಿ.
13.ದಿನಾಂಕ 25.8.2013 ಭಾನುವಾರ ಸಂಜೆ 5.00 ಗಂಟೆಗೆ ನಡೆಯುವ ಶಿಬಿರ ಸಮಾರೋಪ ಸಮಾರಂಭವನ್ನು ಮುಗಿಸಿಕೊಂಡು ಶಿರಾರ್ಥಿಗಳು ಹಿಂದಿರುಗಬಹುದು. ಹೊರ ಊರುಗಳಿಗೆ ಅಂದು ತೆರಳಲು ಅವಕಾಶವಿಲ್ಲದಿದ್ದವರಿಗೆ ರಾತ್ರಿ ಉಳಿಯಲು ಅವಕಾಶವಿರುತ್ತದೆ.

14.ಹೆಚ್ಚಿನ ಮಾಹಿತಿಗಾಗಿ ಕವಿನಾಗರಾಜ್: 9448504804,ಹರಿಹರಪುರಶ್ರೀಧರ್:9663572406, ಅಥವಾ ಶ್ರೀ ಚಿನ್ನಪ್ಪ: 9448653727ಇವರನ್ನು ಸಂಪರ್ಕಿಸಿ