ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ನವೆಂಬರ್ 14, 2013

ಹಾಸನದ ವೇದಭಾರತಿಯ ಸ್ತುತ್ಯಾರ್ಹ ಕಾರ್ಯ

     ಬೇಸಿಗೆಯ ರಜಾ ಆಗಲಿ, ದಸರಾ ರಜಾ ಆಗಲಿ ಬಂತೆಂದರೆ ಸಾಕು, ನನ್ನ ಮಗಳು ಹಾಸನದ ಅಜ್ಜಿ-ತಾತನ ಮನೆಗೆ ಹಾರಿಬಿಡುತ್ತಾಳೆ. ೨ನೆಯ ತರಗತಿಯಲ್ಲಿ ಓದುತ್ತಿರುವ ಮಗಳು ಅಕ್ಷಯ ಈ ಸಲವೂ ಬೇಸಿಗೆಯ ರಜೆಯಲ್ಲಿ ಹಾಸನಕ್ಕೆ ಹೋಗಿ ವಾಪಸು ಬಂದಾಗ ನಮಗೆ ಆಶ್ಚರ್ಯ ಕಾದಿತ್ತು. ಅವಳು ಸುಮಾರು ಒಂದು-ಒಂದೂವರೆ ಗಂಟೆಗಳ ಕಾಲ  ವೇದ ಮಂತ್ರಗಳನ್ನು ಪುಸ್ತಕ ನೋಡಿಕೊಳ್ಳದೆ ಸ್ವರಸಹಿತವಾಗಿ ಹೇಳಬಲ್ಲವಳಾಗಿದ್ದುದು ನಮಗೆ ಬಹಳ ಸಂತೋಷ ನೀಡಿತ್ತು. ೭-೪-೨೦೧೩ರಿಂದ ೧೭-೪-೨೦೧೩ರವರೆಗೆ ವೇದಭಾರತಿಯ ಆಶ್ರಯದಲ್ಲಿ ನಡೆದ 'ಬಾಲ ಸಂಸ್ಕಾರ ಶಿಬಿರ'ದಲ್ಲಿ ನನ್ನ ಮಗಳೂ ಸೇರಿದಂತೆ ಸುಮಾರು ೮೦ ಮಕ್ಕಳು ಭಾಗವಹಿಸಿದ್ದರು. ಮಕ್ಕಳಲ್ಲಿ ವೇದಮಂತ್ರಗಳ ಕಲಿಕೆಯನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದ್ದ ಆ ಶಿಬಿರದಲ್ಲಿ ವೇದಮಂತ್ರಗಳ ಅಭ್ಯಾಸದ ಜೊತೆಗೆ ದೇಶಭಕ್ತಿಗೀತೆಗಳನ್ನೂ ಹೇಳಿಕೊಡಲಾಗುತ್ತಿತ್ತು. ದೇಶಭಕ್ತರ ಕಥೆಗಳನ್ನು ಹೇಳುತ್ತಿದ್ದರು. ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲೂ ಅವಕಾಶ ಮಾಡಿಕೊಟ್ಟಿದ್ದರು. ವಿವಿಧ ಆಟೋಟಗಳೂ ಮಕ್ಕಳಿಗೆ ಮುದ ನೀಡಿದ್ದವು. ಶಿಬಿರದ ಭಾಗವಾಗಿ ಜೋಡಿಸಿಕೊಂಡಿದ್ದ ಒಂದು ಕಾರ್ಯಕ್ರಮಕ್ಕೆ ಮಕ್ಕಳ ತಾಯಿ-ತಂದೆಯರನ್ನೂ ಆಹ್ವಾನಿಸಿದ್ದು, 'ಮಾತೃವಂದನಾ ಮತ್ತು ಭಾರತ ಮಾತಾಪೂಜನ' ಎಂಬ ಆ ಕಾರ್ಯಕ್ರಮವಂತೂ ಎಲ್ಲರ ಮನಮುಟ್ಟುವಂತಿತ್ತು. ಮಕ್ಕಳು ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರದಲ್ಲಿ ಮಕ್ಕಳ ಪೋಷಕರನ್ನು ಸಾಲಾಗಿ ಕುಳ್ಳಿರಿಸಿ ಅವರ ಮಕ್ಕಳು ವೇದಮಂತ್ರಗಳನ್ನು ಉಚ್ಛರಿಸುತ್ತಾ ನಿರೂಪಕರ ಸೂಚನೆಗಳನ್ನು ಅನುಸರಿಸಿ ತಾಯಿ-ತಂದೆಯರ ಪಾದಪೂಜೆ ಮಾಡಿದರು. ಆ ದೃಷ್ಯ ಪೋಷಕರ ಮತ್ತು ಅದನ್ನು ಕಂಡವರ ಕಣ್ಣುಗಳಲ್ಲಿ ಆನಂದಭಾಷ್ಪ ಉದುರುವಂತೆ ಮಾಡಿದ್ದು ಕಾರ್ಯಕ್ರಮದ ಸಾರ್ಥಕತೆ ತೋರಿಸಿತ್ತು. ಶಿಬಿರ ಮುಗಿದ ನಂತರವೂ ನನ್ನ ಮಗಳು 'ಈಶಾವಾಸ್ಯಮ್'ನಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ವೇದಾಭ್ಯಾಸದ ಕಲಿಕಾ ಕೇಂದ್ರಕ್ಕೆ ಹೋಗಿ ಕಲಿಕೆ ಮುಂದುವರೆಸಿದಳು. ಹಾಸನದ ಆಕಾಶವಾಣಿಯಲ್ಲಿ ಪ್ರಸಾರವಾಗುವ ಬಾಲನಂದನ ಕಾರ್ಯಕ್ರಮದಲ್ಲಿ ನನ್ನ ಮಗಳ ಸಂದರ್ಶನ ನಡೆದು ಅಲ್ಲಿ ಅವಳು ವೇದಮಂತ್ರಗಳನ್ನು ನಿರರ್ಗಳವಾಗಿ ಹೇಳಿದ್ದು ನಮಗಂತೂ ನಂಬಲಾರದಂತಾಗಿತ್ತು.

     ಹಾಸನದಲ್ಲಿ ವೇದಭಾರತಿ ಅನೇಕ ಸ್ತುತ್ಯಾರ್ಹ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಬಂಧು ಹರಿಹರಪುರ ಶ್ರೀಧರ ಸಂಘಟಕ ಹಾಗೂ ಸಂಯೋಜಕರಾಗಿರುವ ಮತ್ತು ನನ್ನ ತಂದೆ ಅಧ್ಯಕ್ಷರಾಗಿರುವ 'ವೇದಭಾರತಿ' ಸಂಸ್ಥೆ ಹರಿಹರಪುರ ಶ್ರೀಧರರ ಮನೆಯ ಮೇಲ್ಮಹಡಿಯಲ್ಲಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಶ್ರೀಧರ ಅವರು ಈ ಮಹಡಿಯನ್ನು ಸಂಪೂರ್ಣವಾಗಿ ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟಿರುವುದು ಅವರ ಸಾಮಾಜಿಕ ಕಳಕಳಿಗೆ ಸೂಚಕವಾಗಿದೆ. "ಎಲ್ಲರಿಗಾಗಿ ವೇದ" ಎಂಬ ಘೋಷವಾಕ್ಯದೊಂದಿಗೆ ೧೯-೮-೨೦೧೨ರಂದು ವೇದಭಾರತಿಯ ವೇದಾಭ್ಯಾಸ ಕಲಿಕಾ ಕೇಂದ್ರ ಪ್ರಾರಂಭವಾಗಿ, ಅಂದಿನಿಂದ ಜಾತಿ, ಮತ, ಪಂಥ, ಲಿಂಗ ಮತ್ತು ವಯೋಭೇದವಿಲ್ಲದೆ ಆಸಕ್ತ ಎಲ್ಲರಿಗೂ ಇಲ್ಲಿ ವೇದಾಭ್ಯಾಸಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ. ವೇದ ಒಂದು ಜಾತಿಯ ಅಥವ ಒಂದು ವರ್ಗದ ಸ್ವತ್ತಲ್ಲ, ಜ್ಞಾನಾರ್ಜನೆಗೆ ಜಾತಿ, ಮತ, ಲಿಂಗಗಳ ಕಟ್ಟಿಲ್ಲ ಎಂಬುದನ್ನು ಪ್ರತ್ಯಕ್ಷ ಆಚರಣೆಗೆ ತಂದಿದ್ದು ಶ್ಲಾಘನೀಯ.
     ವೇದಭಾರತಿ ತನ್ನದೇ ಆದ ವೇದಾಭ್ಯಾಸಿಗಳ ಕಾರ್ಯಕರ್ತರ ತಂಡ ಹೊಂದಿದ್ದು ಪ್ರತಿಯೊಬ್ಬರೂ ಸಂಸ್ಥೆಯ ಚಟುವಟಿಕೆಗಳಿಗೆ ಹೃತ್ಪೂರ್ವಕ ಸಹಕಾರ ನೀಡುತ್ತಿರುವುದನ್ನು ಬಾಲಶಿಬಿರದ ಸಂದರ್ಭದಲ್ಲಿ ಕಂಡಿದ್ದೇನೆ. ಶ್ರೀ ಸಿ.ಎಸ್.ಕೃಷ್ಣಸ್ವಾಮಿ, ಜನಮಿತ್ರ ಪ್ರಧಾನ ಸಂಪಾದಕರಾದ ಶ್ರೀ ಕೆ.ಪಿ.ಎಸ್.ಪ್ರಮೋದ್, ಡಾ. ಗುರುರಾಜ ಹೆಬ್ಬಾರ್ ಮುಂತಾದ ಹಲವಾರು ಗಣ್ಯರುಗಳು ಸಂಸ್ಥೆಯ ಚಟುವಟಿಕೆಗಳಿಗೆ ಪೋಷಕರಾಗಿದ್ದಾರೆ. ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನವಿದೆ. ಶ್ರೀ ವಿಶ್ವನಾಥ ಶರ್ಮ, ಶ್ರೀ ಅನಂತನಾರಾಯಣರವರುಗಳು ವೇದಮಂತ್ರಗಳನ್ನು ಕಲಿಸಿಕೊಡುತ್ತಿದ್ದಾರೆ.
     ಆಗಾಗ್ಗೆ ಸಾಧು-ಸಂತರು, ಚಿಂತಕರುಗಳನ್ನು ಆಹ್ವಾನಿಸಿ ಸತ್ಸಂಗಗಳನ್ನು ಏರ್ಪಡಿಸುತ್ತಾರೆ. ಬಾಲಶಿಬಿರವಲ್ಲದೆ, 'ರೂಢಿಗತ ಸಂಪ್ರದಾಯಗಳು, ಆಚರಣೆಗಳು ಎಷ್ಟರಮಟ್ಟಿಗೆ ವೇದೋಕ್ತವಾಗಿವೆ' ಎಂಬ ಬಗ್ಗೆ ಶ್ರೀ ಸುಧಾಕರ ಶರ್ಮರನ್ನು ಕರೆಸಿ ಒಂದು ಸಾರ್ವಜನಿಕ ಸಂವಾದ ಕಾರ್ಯಕ್ರಮ, ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಂದ ಒಂದು ವಾರ ಕಾಲದ 'ಗೀತಾ ಜ್ಞಾನಯಜ್ಞ' ಕಾರ್ಯಕ್ರಮಗಳು ವೇದಭಾರತಿ ಏರ್ಪಡಿಸಿದ ಉಲ್ಲೇಖಾರ್ಹ ಚಟುವಟಿಕೆಗಳಾಗಿವೆ. ಇತ್ತೀಚೆಗೆ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ'ವನ್ನು ನಡೆಸಿದ್ದು ಪುಣೆಯ ಒಬ್ಬರು ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಬಂದ ೬೦ ಜನರು ವೇದೋಕ್ತ ರೀತಿಯಲ್ಲಿ ಜೀವನ ನಡೆಸುವುದು ಹೇಗೆ ಎಂಬ ಬಗ್ಗೆ ಶ್ರೀ ಸುಧಾಕರ ಶರ್ಮರವರಿಂದ ಮಾರ್ಗದರ್ಶನ ಪಡೆದರು. ಪ್ರತಿ ದಿನ ಸಂಜೆ ಸಾರ್ವಜನಿಕ ಉಪನ್ಯಾಸವನ್ನೂ ಆ ಸಂದರ್ಭದಲ್ಲಿ ಏರ್ಪಡಿಸಿದ್ದರು. ಶಿಬಿರದ ಕೊನೆಯ ದಿನದಂದು ನಾಲ್ವರು ವಿವಾಹಿತ ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದಿದ್ದು ವಿಶೇಷ. ಒಟ್ಟಾರೆಯಾಗಿ ವೇದಭಾರತಿ ಸಂಸ್ಥೆ ವೇದ ಪ್ರಚಾರ ಮತ್ತು ಪ್ರಸಾರದಲ್ಲಿ ಸದ್ದಿಲ್ಲದೆ ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರ. 
-ಬಿಂದು ರಾಘವೇಂದ್ರ, ಬೆಂಗಳೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ